‘ಎಂ.ಎಸ್. ಮೂರ್ತಿ, ದೃಶ್ಯ, ಒಂದು ವಿನೂತನ ದೃಶ್ಯ ಕಾದಂಬರಿ, ಪುಸ್ತಕ ಪ್ರಪಂಚದ ಪ್ರಥಮ ದೃಶ್ಯ ಕಾದಂಬರಿ’-ಇಷ್ಟು ಮುಖಪುಟದ ಮೇಲೆ ನಮಗೆ ಕಾಣುವ ಪುಸ್ತಕದ ವಿವರಣೆಗಳು. ಹಿನ್ನೆಲೆಯಲ್ಲಿ ಇರುವುದೊಂದು ಎಲೆಗಳಿಲ್ಲದ ತೋರ, ಸಪೂರ ಕಾಂಡದ ಮರವೇ? ಅದಕ್ಕೂ ಹಿಂದಿರುವುದು ಕೇವಲ ಕಾಣುವ ಬಣ್ಣವೇ? ಮರಳುಗಾಡೇ? ಅಥವಾ ಈ ಬಣ್ಣ ಏನನ್ನಾದರೂ ಸೂಚಿಸುತ್ತಿದೆಯೇ?

ಹೀಗೆ ಈ ಕಾದಂಬರಿಯ ವಿಮರ್ಶೆ ಪ್ರಾರಂಭಿಸುವುದೂ ಯುಕ್ತವಾದದ್ದೇ? ಅಥವಾ ಚಿತ್ರ ನೋಡುತ್ತಿರುವಾಗಲೂ ಅನಿವಾರ್ಯವಾಗಿ ಓದಲಾರದೇ ಇರುವ ಮನುಷ್ಯನ ಅರಿವಿನ ಪಾಡೇ?

ಇದನ್ನೊಂದು ಪುಸ್ತಕವೆಂದು ನೋಡುತ್ತಿರುವಾಗಲೇ, ಇಲ್ಲೊಂದು ಬಾಗಿಲಿಗಿರುವಂತೆ ಒಂದು ಕಿಂಡಿಯೂ ಇದೆ. ಈ ಕಿಂಡಿಯಲ್ಲಿ ನೀರಿನ ಮೇಲೊಂದು ತೆಪ್ಪ, ತೆಪ್ಪದಲ್ಲಿ ನಿಂತವನೊಬ್ಬ, ಹುಟ್ಟುಹಾಕುತ್ತ ಕೂತವಳು ಒಬ್ಬ ಹೆಣ್ಣು. ಇಡೀ ಹೊದಿಕೆಯ ಬಣ್ಣದ ಯೋಜನೆಯಲ್ಲಿ ಈ ಕಿಟಕಿಯಿಂದ ಈ ಚಿತ್ರ ಎದ್ದು ಕಾಣುವುದೇಕೆ ಎಂದು ಹಲವು ಪುಟಗಳನ್ನು ಮಗುಚಿ ಮೊದಲು ಆಳ ಪಡೆದ ಈ ಚಿತ್ರವನ್ನು ತೆರೆದು ನೋಡಿದಾಗ ಏಕಾಂಗಿಯಾಗಿ ಮೊದಲು ಕಾಣುವ ಈ ಚಿತ್ರವನ್ನು ಆವರಿಸಿ ಇರುವುದು ಒಂದು ಕೊಳವೋ, ಹೊಳೆಯೊ? ನೀರಿನ ಒಳಗೂ ಬಂಡೆಗಳಿವೆ. ದಡದ ಮೇಲೂ ಬಂಡೆಗಳಿವೆ. ಅದರ ಪಕ್ಕದ ಚಿತ್ರದಲ್ಲಿ ಒಂದು ಕೈ ಕಲೆಸುತ್ತಿರುವುದು ಕಲೆಸಬಹುದಾದ ಮಣ್ಣಿನಂತಹ ಒಂದು ವಸ್ತುವನ್ನೋ ಅಥವಾ ಸುಮ್ಮನೇ ಸ್ಪರ್ಶಿಸಬಹುದಾದ ಒಂದು ವಸ್ತುವನ್ನೋ? ಈ ಪುಟದ ನಡುವಿನಲ್ಲಿ ಅದೇ ವಸ್ತುವಿದೆ. ಆದರೆ ಅದೇನು ಎಂಬುದನ್ನು ನೋಡಿದರೆ ಸಾಕೋ? ಅಥವಾ ಮಾತಿನಲ್ಲೂ ತಿಳಿದುಕೊಳ್ಳಬೇಕೋ ತಿಳಿದು ಹೇಳಬೇಕೋ? ಮಾತಿನಲ್ಲಿ ಹೇಳಿಕೊಳ್ಳದೆಯೆ ನಮಗೇನೋ ಭಾಸವಾಗುತ್ತದೆ; ಆದರೆ ಭಾಸವಾದ್ದನ್ನು ಮಾತಿನಲ್ಲಿ ತಿಳಿದುಕೊಳ್ಳಲಾರದೇ ಸುಮ್ಮನಿರಲು ಸಾಧ್ಯವೇ? ಉಳಿದಂತೆ ಖಾಲಿಯಾಗಿರುವ ಜಾಗದಲ್ಲೊಂದು ಸುಂದರವೆನ್ನಿಸುವ ಗಿಡದ ಟೊಂಗೆಯಿದೆ. ಯಾಕೆ? ಚಿತ್ರದ ನಡುವೆ ಖಾದ್ಯವಾಗಬಹುದಾದ ಏನೇನನ್ನೋ ಕಲೆಸಿ ಒಂದು ಬಟ್ಟಲಿನಂತಹ ವೃತ್ತದೊಳಗೆ ಇಟ್ಟಂತಿದೆ.

ಇನ್ನೊಂದು ಕಿಂಡಿಯಲ್ಲಿ ನಮ್ಮನ್ನು ಕಾಯಿಯಾಗಿಸಿ ಅಥವಾ ಮಗುವಾಗಿಸಿ ಕಾಣಿಸುವ ಮೊಲೆತೊಟ್ಟು ಇದೆ. ಬಿಚ್ಚಿ ನೋಡಿದಾಗ ಇದು ಈರುಳ್ಳಿಯ ಮೊಗ್ಗಾಗುವ ಕುಡಿಯಂತೆ ಕಾಣುವುದೇ? ಇಡೀ ಚಿತ್ರದಲ್ಲಿ ಅಪೂರ್ಣ ಚಂದ್ರನೂ ಇದ್ದಾನೆ. ಕೆಳಗೆ ಸ್ಪಷ್ಟ ತಿಳಿಯದ ಏನೇನೋ ಇದೆ ಅನ್ನಿಸುವಾಗ ಒಂದು ಹೆಣ್ಣು ಮೊಲೆಯನ್ನು ಬಿಟ್ಟುಕೊಂಡಲ್ಲ, ಎದೆಯ ಮೇಲೆ ಇಟ್ಟುಕೊಂಡು ಮಲಗಿದ್ದಾಳೆ.

ಏನನ್ನಾದರೂ ಓದದೇ ನಾವು ಬರಿದೇ ನೋಡುವುದು ಉಂಟೇ? ರಸ್ತೆಯಲ್ಲಿ ಡ್ರೈವ್ ಮಾಡುವಾಗ ದೊಡ್ಡ ದೊಡ್ಡ ಬ್ಯಾನರ್‌ಗಳಲ್ಲಿ ಕಾಣುವ ಸ್ತಬ್ಧ ಚಿತ್ರಗಳು. ಇವರು ಯಾರು ಎನ್ನುವ ಪ್ರಶ್ನೆಗಳನ್ನು ಒಡ್ಡಿ ಉತ್ತರ ಪಡೆಯುತ್ತವೆ. ಅದೇ ಪ್ರಸಿದ್ಧವಾದ ಸ್ತಬ್ಧವರ್ಣಚಿತ್ರವೊಂದರಲ್ಲಿ ಇದೇನು ಎಂದು ಕೇಳಿ ಮಾತಿನಲ್ಲಿ ಉತ್ತರ ಹುಡುಕುವುದು ಸಾಲದೇ ಸಾಲದು ಎಂಬ ಅತೃಪ್ತಿಯ ನಂತರ ಮತ್ತದನ್ನು ನೋಡಲು ನಾವು ಪ್ರಯತ್ನಿಸುತ್ತೇವೆ. ನಮ್ಮ ಮನಸ್ಸಿನಲ್ಲಿ ದಾರಿಯ ಮೇಲಿನ ಬ್ಯಾನರ್‌ಗಳಂತೆ ಅದು ಮಿಂಚಿ ಮಾಯವಾಗುವುದಿಲ್ಲ, ಉಳಿದೇ ಬಿಡುತ್ತವೆ.

ಕಾಣುವುದು ಚಲನಚಿತ್ರವಾದರೆ, ಪ್ರತಿ ಚಿತ್ರವೂ ಕ್ಷಣಾರ್ಧದಲ್ಲಿ ಮುಂದಿನ ಚಿತ್ರವಾಗುತ್ತ ಜೀವನವನ್ನು ಕುರಿತ ನಮ್ಮ ಅನುಭವದ ಲೋಕದಲ್ಲಿ ಕಲಾವಿದನಿಂದ ನಿರ್ಮಿತವಾದ ಒಂದು ವಸ್ತು ಚಲಿಸುತ್ತ ಹೋಗುವುದನ್ನು ನಾವು ಸಿನೆಮಾ ಎಂದು ಕರೆಯುತ್ತೇವೆ.

ಇವೆಲ್ಲದರ ಮೂಲಕ ನಾನು ಏನು ಹೇಳಲು ಪ್ರಯತ್ನಿಸುತ್ತಿರುವುದು? ನೋಡಿದ್ದನ್ನು ಆಡಿ ತಿಳಿಯದಂತೆ ನೋಡುವುದು ನನ್ನ ಸ್ವಭಾವಕ್ಕಂತೂ ವಿರೋಧವಾದ್ದು. ಆದರೆ ನಮಗೆ ಚಿರಪರಿಚಿತವಾದ್ದನ್ನು ಮತ್ತೆ ತಿಳಿಸುವ ಭರವಸೆಯನ್ನ ಮೂಡಿಸಿ ಆ ಭರವಸೆಯನ್ನು ಮುರಿಯುವುದೂ ಕೆಲವು ಚಿತ್ರಗಳು ಮಾತ್ರ ಒಡ್ಡುವ ಸವಾಲಾಗಿರುತ್ತದೆ ಅಲ್ಲವೆ? ಕಾವ್ಯದ ಮಾತಿಗೂ ಇದು ನಿಜವಲ್ಲವೆ?

ಈ ಪುಸ್ತಕವನ್ನು ಕಣ್ಣಿಗೆ ಹಿಡಿದು ಬೆರಳಿನಿಂದ ನಾವು ಹಾಳೆಯನ್ನು ತಿರುವಿದಂತೆಲ್ಲಾ ಕಾಣುತ್ತ ಹೋಗುವ ಒಂದೊಂದು ಚಿತ್ರವೂ ಸ್ವಪರಿಪೂರ್ಣವೂ ಹೌದು. ಕಾದಂಬರಿಯಲ್ಲಿ ಒಂದು ವರ್ಣನೆ ಸ್ವತಂತ್ರವಾಗಿ ಹೀಗಿರುವುದು ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ. ಆದರೆ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾರ್ಟೂನ್‌ಗಳಲ್ಲಾದರೋ ಅಲ್ಲವೇ ಅಲ್ಲ; ಒಂದು ಇನ್ನೊಂದಕ್ಕೆ ಪೂರಕ. ಪುಸ್ತಕವಾಗಿ ನಾವು ಹಾಳೆಯನ್ನು ತಿರುವುದರಿಂದ ಈ ಚಿತ್ರಗಳು ತಮ್ಮ ಅನುಕ್ರಮದಲ್ಲಿ ಏನನ್ನೋ ನಮಗೆ ನಿರೂಪಿಸುತ್ತವೆ ಎಂಬುದು ಲೇಖಕರು ಕೊಟ್ಟಿರುವ ‘ಒಂದು ವಿನೂತನ ದೃಶ್ಯ ಕಾದಂಬರಿ’ ಎಂಬ ತಲೆಬರಹದಿಂದಾಗಿಯೂ ನಾವು ಉದ್ದೇಶಪೂರ್ವಕವಾಗಿ ಓದುವಂತಾಗುತ್ತದೆ. ಇಲ್ಲಿ ‘ವಿನೂತನ’ ಎನ್ನುವ ಶಬ್ದ ಎಲ್ಲ ಜಾಹೀರಾತುಗಳನ್ನೂ ನೆನಪು ಮಾಡಿ ಸದ್ಯದ ಕಮರ್ಷಿಯಲ್‌ ಪ್ರಪಂಚದಲ್ಲಿ, ಈ ಪುಸ್ತಕವೂ ಇನ್ನೊಂದು ಮಾರುವ ವಸ್ತುವೇನೋ ಎಂಬ ಸಂಶಯ ನಮ್ಮಲ್ಲಿ ಮೂಡುತ್ತದೆ. ಇಲ್ಲಿ ಹಲವು ಬಣ್ಣಗಳಿದ್ದಾವೆ. ಬಣ್ಣಗಳನ್ನು ನಾವು ನೋಡುತ್ತೇವೆ ಮಾತ್ರವಲ್ಲ ನಮ್ಮದೇ ರೀತಿಯಲ್ಲಿ ಓದುತ್ತೇವೆ. ನಮ್ಮ ಲೋಕದ ಹೆಂಗಸರೆಲ್ಲರೂ ತಮ್ಮ ಸೀರೆಗಳ ಬಣ್ಣವನ್ನು ಯಾವುದಾದರೂ ತರಕಾರಿಯ ಮೂಲಕ ಗುರುತಿಸುತ್ತಾರೆ. ಕಾಣುವುದೂ ಖಾದ್ಯ ಪದಾರ್ಥದ ನೆನಪನ್ನು ತರುತ್ತದೆ ಮಾವು, ನೇರಳೆ, ಕಿತ್ತಳೆ, ದಾಳಿಂಬೆ, ಹೀಗೆ ಈಚೆಗೆ ಮಾರ್ಕೆಟ್ಟಲ್ಲಿ ದುಬಾರಿಯಾಗಿರುವ ಹಲವು ಖಾದ್ಯ ಪದಾರ್ಥಗಳ ಬಣ್ಣಗಳ ಮೂಲಕವೇ ನಾವು ಚಿತ್ರಗಳ ಬಣ್ಣಗಳನ್ನೂ ತಿಳಿಯುತ್ತೇವೆ. ಮನಸ್ಸಿಗೆ ಬಂದದ್ದೆಲ್ಲವಕ್ಕೂ ಮಾತಿನ ಅಗತ್ಯ ಬೇಕೆ? ಮತ್ತು ಈ ಲೋಕದ ಪ್ರಕೃತಿಯಲ್ಲಿ ನಾವು ನಿತ್ಯ ತಿಳಿಯುತ್ತಲೇ ವ್ಯವಹರಿಸುವ ಸಂಗತಿಗಳು ಅತೀತಕ್ಕೂ ರೂಪಕೊಡಲು ಒದಗಬೇಕೆ? ದೇವರಿಗಿರುವ ಸೊಂಡಿಲು, ನಾಲ್ಕು ಕೈ, ಮೂರು ಕಣ್ಣು, ಕೋರೆಹಲ್ಲು ಇವೂ ಕೂಡ ತಿಳಿಯಲಾರದ್ದು ಯಾವುದೂ ಇಲ್ಲ ಎನ್ನಿಸುವ ಸಮಾಧಾನ ನಮಗೆ ಒದಗುವಂತೆ ಈಗಾಗಲೇ ಮನದಟ್ಟಾಗಿರುವ ದೃಶ್ಯಗಳಲ್ಲಿ ದೇವರನ್ನು ಕಾಣುವ ಅನಿವಾರ್ಯವೇ?

ನಮಗೆ ಪರಿಚಿತವಾದ್ದನ್ನು ಅಪರಿಚಿತಗೊಳಿಸುವುದು ಹಾಗೂ ಹೀಗೆ ಅಪರಿಚಿತಗೊಳಿಸಿ ಮತ್ತೆ ಆ ವಸ್ತು ನಮಗೆ ಹೊಸದೆಂಬಂತೆ ದೊರಕಿಸಿಕೊಡುವುದು ಕಲೆಯ ಕೆಲಸ ಎಂದು ನಾವು ತಿಳಿದಿದ್ದೇವೆ. ಈ ಪುಸ್ತಕದ ಒಂದು ಪುಟದ ಮೂಲೆಯಲ್ಲಿ ಅಂಬೇಡ್ಕರ್ ಇದ್ದಾರೆ. ಅವರು ಗಾಂಧಿ ಹಿಡಿಯುವಂಥ ಬಿದಿರಿನ ಕೋಲೊಂದನ್ನು ತಮ್ಮ ಬಲಗೈಯಲ್ಲಿ ಹಿಡಿದು ಕನ್ನಡಕ ಹಾಕಿದ ಕಣ್ಣನ್ನು ಮುಚ್ಚಿದಂತಿದೆ. ಮುಚ್ಚಿದ ಕಣ್ಣಿಗೆ ಯಾಕೆ ಕನ್ನಡಕ? ಅವರು ನಡೆಯುವ ಭಂಗಿಯಲ್ಲಿದ್ದರೂ ಧ್ಯಾನಸ್ಥರಾಗಿದ್ದಾರೆ. ಇದು ವಿಧಾನಸೌಧದ ಮುಂದಿರುವ ಟೈ ಕಟ್ಟಿ ಕೋಟ್ ಹಾಕಿದ ಆಂಗ್ಲ ಉಡುಪಿನ ಅಂಬೇಡ್ಕರ್ ಅಲ್ಲ: ಬೌದ್ಧರಾದ ಅಂಬೇಡ್ಕರ್. ಅಂದರೆ ಇದನ್ನ ಕಾಣಿಸುವಾಗ ಮೂರ್ತಿಯವರು ಇನ್ನೇನನ್ನೋ ಮಾತಿನಲ್ಲಿ ಹೇಳಲು ಪ್ರಯತ್ನಿಸುತ್ತಿರಬಹುದೆ? ಲೌಕಿಕ ಯಶಸ್ಸನ್ನು ಪಡೆಯುವ ಬಯಕೆಯ ದಲಿತರಿಗೆ ಆಂಗ್ಲ ಉಡುಪಿನ ಅಂಬೇಡ್ಕರ್ ಆದರ್ಶವಾಗಿದ್ದ ಕಾಲ ಇತ್ತು. ಆದರೆ ಆ ಕಾಲ ಮುಗಿಯದಿದ್ದರೂ ಮುಗಿದಂತೆ ಅನ್ನಿಸುವ ನಮ್ಮ ಕೆಲವು ದಲಿತ ಸ್ನೇಹಿತರಿಗೆ ಬೌದ್ಧರಾದ ಅಂಬೇಡ್ಕರ್ ಬಿಡುಗಡೆಯ ಹಾದಿಯನ್ನು ಸೂಚಿಸುತ್ತಿರಬಹುದು. ನನಗಂತೂ ಅಪ್ರಯತ್ನವಾಗಿ ಈ ಮಾತುಗಳನ್ನು ನನಗೇ ಹೇಳಿಕೊಳ್ಳುತ್ತಲೇ ಈ ಚಿತ್ರವನ್ನು ಓದುವ ಪ್ರೇರಣೆ ಬಂತು. ಕೆಲವು ಕಡೆ ನೋಡುವುದು ಮಾತಿನ ಓದೂ ಆಗುವುದು ಸ್ಪಷ್ಟವಾಗಿಯೇ ಇದೆ. ಹಿಟ್ಲರ್‌ನ ಕಾಲದ ನಮ್ಮ ಸ್ವಸ್ತಿಕದ ಚಿಹ್ನೆಯಿರುವ ಪಾರ್ಲಿಮೆಂಟ್ ಭವನದ ಪಕ್ಕದಲ್ಲೇ ಬಿಲ್ಲುಬಾಣ ಹಿಡಿದ ಮೀಸೆಯಿರುವ ಒಂದು ಚಿತ್ರ, ಇಲ್ಲದ ಇನ್ನೊಂದು ಚಿತ್ರ ಇದೆ. ಇವು ರಾಮಲಕ್ಷ್ಮಣರೇ? ಕತ್ತಿಯ ಚಿತ್ರ ಇರುವ ಒಂದು ಪುಟದ ನಂತರ ಈ ಪುಟ ಇದೆ. ಗಾಂಧಿಯ ಚಿತ್ರವು ಇದೆ. ಊಟದ ಬಟ್ಟಲುಗಳು, ಜೋಡು ಮೆಟ್ಟುಗಳು, ಪುಟದ ತುಂಬೆಲ್ಲ ಇರುವಲ್ಲಿ ಗಾಂಧಿ ಕೂತು ಏನೋ ಬರೆಯುತ್ತಿದ್ದಾರೆ. ಸರಳವಾದ ಜೀವನದ ಕೆಲವೇ ಪದಾರ್ಥಗಳನ್ನು ಪಡೆದ ಕಾಯಕದ ಗಾಂಧಿಯಿದು. ಇನ್ನೊಂದು ಗಾಂಧಿಯ ಚಿತ್ರದಲ್ಲಂತೂ ಅವರ ಬೆನ್ನು ಮಾತ್ರ ನಮಗೆ ಕಾಣಿಸುತ್ತಿದೆ; ನಡೆಯುತ್ತಿರುವ ಅವರ ಕಾಲಿನಲ್ಲಿ ಪಾದರಕ್ಷೆಯಿಲ್ಲ. ಅದೊಂದು ಮೂಲೆಯಲ್ಲಿದೆ. ಆ ಮೂಲೆಯಲ್ಲೆ ಅವರ ಕನ್ನಡಕ, ಅವರ ಊಟದ ಬಟ್ಟಲು, ಮೆಟ್ಟನ್ನೂ ಬಿಟ್ಟು ಎಲ್ಲೋ ಹೋಗುತ್ತಿದ್ದಾರೆ. ಅವರು ಬರಿಗಾಲಲ್ಲಿ ತುಳಿದ ಹೆಜ್ಜೆಗುರುತುಗಳು ನಮಗೆ ಸತತವಾಗಿ ಒದಗುವಂತೆ ಚಿತ್ರದಲ್ಲಿ ಕಾಣುತ್ತವೆ. ಈ ಪುಟದ ನಂತರದ ಪುಟದಲ್ಲಿ ಯಾವನೋ ಒಬ್ಬ ಕೂಲಿ ಅಥವಾ ಊರುಬಿಡಬೇಕಾದ ಸಂಸಾರಿ ಹೆಗಲ ಮೇಲೂ ತಲೆಯ ಮೇಲೂ ಏನೋ ಹೊತ್ತು ಬೆಳಕಿಗಿದುರಾಗಿ ಹೋಗುತ್ತಿದ್ದಾನೆ. ಹೀಗೆ ಓದುತ್ತ ಹೋಗುವ ನಮಗೆ ಒಂದು ಪುಟದಲ್ಲಿ ಬೀಗ ಇದೆ. ತೆರೆದ ಬೀಗ, ಇನ್ನೊಂದು ಪುಟದಲ್ಲಿ ಈ ಬೀಗದ ಕೈ ಇದೆ. ಕೆಲವು ಪುಟಗಳಂತೂ ಖಾಲಿಯಾಗಿಯೇ ಇವೆ.

ಮಾತಿನ ಅಗತ್ಯವಿಲ್ಲದೇ ಏನೋ ಹೇಳಬೇಕೆಂದು ಹೊರಟ ಮೂರ್ತಿ ಮುನ್ನುಡಿ ಬರೆಸುವ ಮಾತಿನ ಗೀಳಿನಿಂದ ಬಿಡುಗಡೆ ಪಡೆಯಲಾರದೇ ಪುಸ್ತಕದ ಮೊದಲಿಗೆ ತಾವೂ ಬರೆದಿದ್ದಾರೆ; ವೃಕ್ಷಗಳ ಮುಖೇನ ಮಾತಾಡುತ್ತಿದ್ದ ಎಸ್.ಜಿ. ವಾಸುದೇವ್‌ರಿಂದಲೂ ಬರೆಸಿದ್ದಾರೆ. ಸರೋದ್‌ನಲ್ಲಿ ತಾವು ಹೇಳಬೇಕೆಂಬುದನ್ನ ಹೇಳುವ ರಾಜೀವ್ ತಾರಾನಾಥ್‌ರಿಂದಲೂ ಬರೆಸಿದ್ದಾರೆ. ಶಬ್ದಕ್ಕೆ ನನ್ನಂತೆ ಗಂಟುಬಿದ್ದ ಪ್ರಸಿದ್ಧ ವಿಮರ್ಶಕರಾದ ಎಚ್.ಎಸ್. ರಾಘವೇಂದ್ರರಾವ್‌ರಿಂದಲೂ ಬರೆಸಿದ್ದಾರೆ. ‘ನೋಡುವ ಕಾದಂಬರಿಗೆ ಮಾತಿನ ಮುನ್ನುಡಿ ಬೇಕೆ’ ಎಂಬ ಶೀರ್ಷಿಕೆಯಲ್ಲಿ-ಚಲಿಸುವ ಚಿತ್ರದ ಮುಖೇನ ಈ ಲೋಕಕ್ಕೆ ಪರಲೋಕವೊಂದನ್ನು ಕಟ್ಟುವ ಹುಚ್ಚಿಲ್ಲದೇ; ಹಂಬಲವೂ ಇಲ್ಲದೇ ಪ್ರತಿಲೋಕವನ್ನು ಮಾತ್ರ ಕಟ್ಟುತ್ತ ಹೋದ-ಗಿರೀಶ್ ಕಾಸರವಳ್ಳಿಯವರೂ ಬರೆದಿದ್ದಾರೆ. ಇಡೀ ಪುಸ್ತಕ ಒಂದು ಯಾತ್ರೆಯಾಗುವ ಪಯಣವೋ, ಟೂರಿಸಂ ಕುತೂಹಲದ ಪ್ರಯಾಣವೋ ಎಂಬುದೂ ನಮಗೆ ಎದುರಾಗುತ್ತದೆ.

ಮಾತಿನಲ್ಲಿ ಹೇಳಬಹುದಾದಷ್ಟು ಮಾತ್ರ ನಮ್ಮ ನೈಜ ತಿಳಿವಳಿಕೆ ಎಂಬರ್ಥ ಬರುವ ವಿಟ್‌ಗೆನ್‌ಸ್ಟೈನ್‌ನ ಮಾತು ನನ್ನೆಲ್ಲ ಮಾತುಗಳ ಹಿನ್ನೆಲೆಯಲ್ಲಿದೆ.

ಮಾತು ಕೂಡ ಜ್ಯೋತಿರ್ಲಿಂಗ ಎನ್ನುವ ವಚನಕಾರರು ಮಾತನ್ನು ಆಡಿದರೆ ಲಿಂಗ ಮೆಚ್ಚಿ ‘ಅಹುದು’ ‘ಅಹುದು’ ಎನ್ನುವಂತಿರಬೇಕು ಎನ್ನುತ್ತಾರೆ. ಮಾತಿನ ನಿರಾಕರಣೆಯೂ ಮಾತಿನಲ್ಲೇ ನಡೆಯುವುದು ಅಲ್ಲವೇ?

—-
ಎಂ
.ಎಸ್. ಮೂರ್ತಿ ಅವರದೃಶ್ಯ‘ (ಒಂದು ವಿನೂತನ ದೃಶ್ಯ ಕಾದಂಬರಿ) ಬಿಡುಗಡೆ ಮಾಡಿ ಆಡಿದ ಮಾತುಗಳ ಬರಹರೂಪ. ಕೃಪೆ: ಪ್ರಜಾವಾಣಿ, ಮಾರ್ಚ್, ೨೦೧೧.