ಹಿರಿಯರಾದ ಡಾ. ಎಚ್.ಕೆ. ಚಂದ್ರಶೇಖರರ ‘ಭಾರತದ ಬೃಹತ್ ಬೇಲಿ’ಯನ್ನು ಓದಿ ನನಗೆ ಆದ ಆಶ್ಚರ್ಯಕ್ಕೆ ಎರಡು ಕಾರಣಗಳು. ಮೊದಲನೆಯದು, ವೃತ್ತಿಯಲ್ಲಿ ಸರ್ಜನ್ ಆಗಿ, ಅದೆಷ್ಟೋ ವರ್ಷಗಳ ಕಾಲ ಅಮೆರಿಕದಲ್ಲಿದ್ದು ಇವರು ಎಷ್ಟು ಚೆನ್ನಾಗಿ ಕನ್ನಡವನ್ನು ಬರೆಯಬಲ್ಲರು ಎಂಬುದು; ಇನ್ನೂ ಮುಖ್ಯವಾಗಿ ಇಡೀ ವೃತ್ತಾಂತವನ್ನು ಒಂದು ಪತ್ತೇದಾರಿ ಕಥೆಯಂತೆಯೂ, ಜೊತೆಗೆ ಒಂದು ವೈಚಾರಿಕ ಪ್ರಬಂಧವಾಗಿಯೂ ಡಾ. ಚಂದ್ರಶೇಖರ್ ಇಲ್ಲಿ ಮಂಡಿಸಿದ್ದಾರೆ ಎಂಬುದು.

ಆಶ್ಚರ್ಯಕ್ಕೆ ಎರಡನೆಯ ಕಾರಣ-ಬ್ರಿಟಿಷರ ಕಾಲೋನಿಯಲ್ ಆಡಳಿತದ ಬಗ್ಗೆ ಎಷ್ಟೆಲ್ಲ ಕೇಳಿಸಿಕೊಂಡು ಓದಿಕೊಂಡಿದ್ದ ನನಗೆ ಈ ಸಾವಿರಾರು ಮೈಲಿಗಳ ಬೃಹತ್ ಬೇಲಿಯ ಬಗ್ಗೆ ತಿಳಿದೇ ಇರಲಿಲ್ಲ. ಡಾ. ಚಂದ್ರಶೇಖರರನ್ನು ಓದಿಯಾದ ಮೇಲೆ ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ‘ಪರ್ಮಟ್ ಲಾಯಿನ್’ ಎಂಬ ಭಾರತೀಯ ಹೆಸರಿನ ಈ ಬೇಲಿಯೊಂದು ಎಲ್ಲ ವಸಾಹತುಶಾಹಿಯ ರೂಪಕವಾಗಿ ಕಾಣುತ್ತಿದೆ; ವೈರಕ್ಕಾಗಿ ಎಬ್ಬಿಸಿದ ಬರ್ಲಿನ್ ವಾಲ್‌ ಅಲ್ಲ, ಲಾಭಕ್ಕಾಗಿ ಕಟ್ಟಿಕೊಂಡ ಬೇಲಿ ಇದು.

ಯಾರು ಯಾರನ್ನೂ ಎಲ್ಲ ಕಾಲಕ್ಕೂ ಸಂಪೂರ್ಣ ದಮನಗೊಳಿಸುವುದು ಸಾಧ್ಯವಿಲ್ಲವೆಂಬುದಕ್ಕೆ ಹುಂಬರಲ್ಲದ ಬ್ರಿಟಿಷರು ಕೂಡ ಕಟ್ಟಿದ ಈ ಮುಳ್ಳಿನ ಬೇಲಿ ಒಂದು ರೂಪಕ. ಆಳುವ ಸರ್ಕಾರಕ್ಕೆ ಸುಂಕವನ್ನು ಕೊಡದಂತೆ ಯಾವ ಭಾರತೀಯನೂ ಉಪ್ಪನ್ನು ಬಳಸಬಾರದೆಂಬುದು ಈ ಬೃಹತ್ ಮುಳ್ಳುಬೇಲಿಯ ಉದ್ದೇಶ. ಆದರೆ ಕಾನೂನು ಕಟ್ಟಳೆಗಳು ಎಷ್ಟು ಬಿಗಿಯಾಗಿದ್ದರೂ ಈ ಬಿಗಿಯನ್ನು ಮೀರುವ ಉಪಾಯಗಳನ್ನು ಹುಡುಕುತ್ತಲೇ ಇರುತ್ತಾರೆ. ಕಳ್ಳದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ. ಈ ದಾರಿಗಳು ರಾಜಮಾರ್ಗಗಳಲ್ಲ, ಒಳದಾರಿಗಳು. ಹಣ್ಣಿನ ಬುಟ್ಟಿಯ ಒಳಗೆ ಉಪ್ಪನ್ನು ಮುಚ್ಚಿಟ್ಟು ತರಬಹುದು. ಈ ಕಾಲದಲ್ಲೂ ಈ ಬಗೆಯ ತೆರಿಗೆ ವಂಚನೆಯ ಒಳದಾರಿಗಳನ್ನು ಜನ ಕಂಡುಕೊಳ್ಳುತ್ತಿಲ್ಲವೆ? ಜೈಲಿನಲ್ಲಿರುವ ಅಪರಾಧಿ ತನ್ನ ಹಗಲುಗನಸಿನಲ್ಲಾದರೂ ತನ್ನನ್ನು ಜೈಲಿಗೆ ಹಾಕಿದವನನ್ನು ಅಪಹಾಸ್ಯದಲ್ಲಿ ತಗ್ಗಿಸಬಲ್ಲಂತೆ ಬಿಡುಗಡೆಯನ್ನು ಊಹಿಸಿ ಸುಖಿಸಬಲ್ಲಂತೆ-ಬಿಡುಗಡೆಗೆ ಹಲವು ಒಳದಾರಿಗಳು.

ಎಲ್ಲ ಕಾಲದಲ್ಲೂ ಕುಂತಿಯರು, ದ್ರೌಪದಿಯರು ಇದ್ದೇ ಇರುತ್ತಾರೆ. ಭಾರತದಲ್ಲಂತೂ ದೇವ ದೇವತೆಯರೂ ಈ ನಿಯಮೋಲ್ಲಂಘನೆಯಲ್ಲಿ ಪಾಲುದಾರರಾಗಿರುತ್ತಾರೆ. ಉಲ್ಲಂಘನೆ ಸಾಧ್ಯವೇ ಇಲ್ಲದ ವ್ಯವಸ್ಥೆ ಮಾನವನಿಗೆ ಅಸಹನೀಯ. ಒಳದಾರಿಗಳನ್ನು ತೊರೆದು, ಹೊರದಾರಿಗಳ ಮುಖೇನ ವ್ಯವಸ್ಥೆಯನ್ನು ದಾಟುವುದು ಚರಿತ್ರೆಯಲ್ಲಿ ವ್ಯಾಖ್ಯಾನಿತವಾಗುತ್ತದೆ. ಆದರೆ ಮೀರುವ ಒಳದಾರಿಗಳನ್ನು ಜನಸಾಮಾನ್ಯರು ತಮ್ಮ ದೈನಿಕದಲ್ಲೇ ಹುಡುಕುತ್ತ ಇರುತ್ತಾರೆ. ಆದರೆ ಇದು ದಾಖಲಾಗದ ಚರಿತ್ರೆ.

ಆದರೂ ಕಟ್ಟುಪಾಡುಗಳನ್ನು ಅಭೇದ್ಯವೆನ್ನುವಂತೆ ಕಟ್ಟಬೇಕೆಂಬ ಪ್ರಭುತ್ವದ ಆಸೆಯೂ ಸಾರ್ವಕಾಲಿಕವಾದದ್ದು. ಕಟ್ಟುಪಾಡುಗಳನ್ನು ಉಲ್ಲಂಘಿಸಿ ಬಿಡುಗಡೆ ಪಡೆದ ಇಂದಿನ ಗುಲಾಮ, ನಾಳೆಯ ಪ್ರಭುವಾಗಿ ಬೇಲಿಗಳನ್ನು ಕಟ್ಟತೊಡಗುತ್ತಾನೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯೆನ್ನಬಹುದು. ಕಟ್ಟುವುದೆಷ್ಟೋ ಕೆಡವಿ ಬೀಳಿಸುವುದೂ ಅಷ್ಟೇ ವ್ಯವಸ್ಥೆಯ ಆರೋಗ್ಯಕ್ಕೆ ಅಗತ್ಯವಾದದ್ದು.

ಪರಾಧೀನತೆಯಲ್ಲಿ ನರಳುವವನೂ, ನರಳುವ ಸಂದರ್ಭದಲ್ಲೇ ಬಿಡುಗಡೆಗಾಗಿ ಕನಸು ಕಾಣುವುದು ಮಾನವನ ಮೂಲದಲ್ಲಿರುವ ಘನತೆಯನ್ನು ತೋರುತ್ತದೆ. ಹಾಗೆಯೇ ಅಧಿಕಾರಸ್ಥರು ತಮ್ಮ ಕೆಳಗಿರುವವರನ್ನು ಪರಾಧೀನಗೊಳಿಸಬೇಕೆಂದು ಹೊಂಚುವುದೂ ಮಾನವನ ಸ್ವಭಾವದಲ್ಲೇ ಇರುವ ರಾಕ್ಷಸೀಯತೆ ಅನ್ನಬಹುದೇನೊ. ಅಡಿಗರು ಅನ್ನುವಂತೆ ‘ಕೋದಂಡ ದಂಡವೂ ಹೀಗೆ ದಂಡ’. ರಾವಣನ ಕತ್ತರಿಸಿದ ತಲೆ ಮತ್ತೆ ಹುಟ್ಟಿಕೊಳ್ಳುತ್ತದೆ. ರಾಮನ ಕೈಯಲ್ಲಿ ಕೋದಂಡ ಇರದೇ ವಿಧಿಯಿಲ್ಲ. ಆದ್ದರಿಂದ ಕೋದಂಡ ಎರಡು ಅರ್ಥದಲ್ಲೂ ವ್ಯರ್ಥ ಎನ್ನುವ ಅರ್ಥದಲ್ಲೂ, ಶಿಕ್ಷೆ ಎನ್ನುವ ಅರ್ಥದಲ್ಲೂ ನಿಜ ಮತ್ತು ಅಗತ್ಯ.

ಯಾರಾದರೂ ಸಂಪೂರ್ಣ ಪರಾಧೀನರಾಗಿ ತಮ್ಮ ಬಂಡಾಯದ ಶಕ್ತಿಯನ್ನು ಕಳೆದುಕೊಂಡುಬಿಟ್ಟರೆ ಅವರು ನಿಸ್ಸತ್ವರೂ, ನಿರುಪಯೋಗಿಗಳೂ ಜಡರೂ ಆಗಿಹೋಗುತ್ತಾರಂತೆ. ಇಂಥ ಪರಿಶೂನ್ಯವಾಗಿಬಿಟ್ಟ ಗುಲಾಮನಿಂದ ಆಗ ಯಜಮಾನನಿಗೆ ಯಾವ ಪ್ರಯೋಜನವೂ ಇರದೇ ಹೋಗುತ್ತದೆ. ಆದ್ದರಿಂದಲೇ ಜಾಣರಾದ ಆಳರಸರು ತಮ್ಮ ಅಧೀನದಲ್ಲಿರುವವರ ಬಂಡಾಯ ಪ್ರವೃತ್ತಿ ಪೂರ್ಣ ಬತ್ತಿ ಹೋಗದಂತೆ ಎಚ್ಚರ ವಹಿಸುತ್ತಾರೆ ಎಂದು ಕೇಳಿದ್ದೇನೆ. ಬ್ರಿಟಿಷರು ಅಂಥ ಜಾಣರೂ ಇರಬಹುದು. ಅಡ್ಡ ಮಾತಿಗೆ ಅವಕಾಶವಿರುವಂತೆಯೇ ಇರುವ ತಮ್ಮ ಮಾತುಗಳನ್ನು ಸ್ಥಾಪಿಸಿರುತ್ತಾರೆ-ಬಂಡಾಯಕ್ಕೆ ಅವಕಾಶವಿದ್ದೂ ವ್ಯವಸ್ಥೆ ಸಲೀಸಾಗಿ ನಡೆದುಕೊಂಡು ಹೋಗುವುದು ಪ್ರಭುತ್ವಕ್ಕೆ ಇರುವ ಸಮರ್ಥನೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ಇಂತಹ ಉಪಾಯಗಳಿಗೆ ಇತಿಹಾಸದಲ್ಲಿ ಪ್ರಸಿದ್ಧವಾದದ್ದು.

ಉಪ್ಪಿನ ಸುಂಕಕ್ಕಾಗಿ ಕಟ್ಟಿದ ಈ ಬೃಹತ್ ಬೇಲಿಯ ಬಗ್ಗೆ ಡಾ. ಚಂದ್ರಶೇಖರ್‌ರನ್ನು ಓದುತ್ತಿದ್ದಂತೆ ನನ್ನ ಮನಸ್ಸು ಪ್ರಚೋದಿತವಾಯಿತು. ಬೇಲಿ ಎಷ್ಟು ಅಭೇದ್ಯವಾಗಿತ್ತೋ ಅಷ್ಟೇ ನಿಷ್ಪ್ರಯೋಜಕವಾಗುವ ಭವಿಷ್ಯವನ್ನ ಹೊತ್ತುಕೊಂಡೇ ಅದು ಹುಟ್ಟಿತ್ತು. ಈ ಬೇಲಿಯನ್ನು ಯಶಸ್ವಿಗೊಳಿಸಲು ಬಹು ದಕ್ಷತೆಯಿಂದ ಕೆಲಸ ಮಾಡಿದ ಅಲನ್ ಆಕ್ಟೇವಿಯನ್ ಹ್ಯೂಮ್ ೧೮೮೫ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷನಾದ. ಅಂದರೆ ಈ ಬೇಲಿಯ ಹುಟ್ಟಿನಲ್ಲೇ ಅದರ ನಾಶದ ಸಾಧ್ಯತೆಯೂ ಹುಟ್ಟಿಕೊಂಡಿತು. ಬಿಳಿಯನ್ನೇ ಆದ ಹ್ಯೂಮ್ ಆಗಿ, ಮುಂದೆ ಮಹಾತ್ಮನಾದ ಗಾಂಧಿಯಾಗಿ. ಪ್ರಹ್ಲಾದ ಯಾರು? ಹಿರಣ್ಯಕಶಿಪುವಿನ ಮಗನೇ ಅಲ್ಲವೆ? ಅಂದರೆ, ಈ ಬೇಲಿ ಸಂಕೇತಿಸುವ ಆಸೆಬುರುಕ ಪ್ರಭುತ್ವದ ಹೊಟ್ಟೆಯಲ್ಲೇ ಹ್ಯೂಮ್ ಮಾತ್ರವಲ್ಲದೆ ಗಾಂಧೀಜಿಯೂ ಹುಟ್ಟಿಕೊಂಡರು. ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾದದ್ದು ೧೯೪೭ರಲ್ಲಿ ಎಂದು ಎಲ್ಲರೂ ತಿಳಿದಿರುವುದು. ಆದರೆ ನಾವು ನಿಜವಾಗಿ ಸ್ವತಂತ್ರರಾದ್ದು ದಂಡೀ ಮಾರ್ಚಿನ ಅಂತ್ಯದಲ್ಲಿ, ಗಾಂಧೀಜಿಯವರು ಒಂದು ಮುಷ್ಟಿ ಉಪ್ಪನ್ನು ದಂಡೆಯಿಂದ ಎತ್ತಿ ಜನಸ್ತೋಮಕ್ಕೆ ತೋರಿದಾಗ, ಕಾನೂನುಭಂಗದ ದಂಡನೆಯೆಂದು ಎಷ್ಟು ಜನರನ್ನು ಬ್ರಿಟಿಷ್ ಸರ್ಕಾರ ಜೈಲಿನಲ್ಲಿ ತುಂಬುವುದು ಸಾಧ್ಯ. ಇರುವ ಉಪ್ಪನ್ನು ಕೈಯಲ್ಲಿ ಚಾಚಿ ಎತ್ತುವುದು, ನೀರನ್ನು ಕುದಿಸಿ ಉಪ್ಪು ಮಾಡುವುದು-ಇಂತಹ ಅಹಿಂಸಾತ್ಮಕವಾದ ಕ್ರಿಯೆಯೇ ಇಡೀ ಪ್ರಭುತ್ವವನ್ನು ಅಪಹಾಸ್ಯ ಮಾಡುವ ಘಟನೆಯಾಯಿತು. ಬ್ರಿಟಿಷ್ ಸರ್ಕಾರ ಹೀಗೆ ತತ್ತರಿಸಿದ ೧೯೩೦ನೆಯ ಇಸವಿಯೇ ನಮ್ಮ ಬಿಡುಗಡೆಯ ದಿನವೆನ್ನಬಹುದು.

ಚರಿತ್ರೆಯಲ್ಲಿ ಕೆಲವು ಘಟನೆಗಳು ನಮಗೆ ನೆನಪಿರುತ್ತವೆ; ಹಲವು ಮರೆತು ಹೋಗುತ್ತವೆ. ನೆನಪು ಎಷ್ಟೋ ಅಷ್ಟೇ, ಮರೆವು ಕೂಡ ಜೀವ ಸಹಾಯಕವಾದದ್ದು. ಬ್ರಿಟಿಷರು ಕಟ್ಟಿದ ಬೃಹತ್ ಬೇಲಿ ಈಗ ಮರೆತುಹೋಗಿದೆ. ಅದನ್ನು ಹುಡುಕುತ್ತ ಅಲೆಮಾರಿಯಾದ (ಚರಿತ್ರೆಯ ವಿಲಕ್ಷಣ ಹುಚ್ಚನಂತೆ ಕಾಣುವ) ಮಾಕ್ಸ್ ಹ್ಯಾಮ್ ಹಲವು ಪ್ರಯತ್ನಗಳ ನಂತರ ಈ ಬೇಲಿಯ ಪಳೆಯುಳಿಕೆಗಳನ್ನು ಪತ್ತೆ ಮಾಡುವುದು, ಆಶ್ಚರ್ಯವೆಂದರೆ ಕೆಲವು ಸಾಮಾನ್ಯ ಹಳ್ಳಿಗರ ಮೂಲಕ. ಇವರಿಗೆ ಈ ಬೇಲಿ ಮಾಕ್ಸ್ ಹ್ಯಾಮ್‌ಗೆ ತೋರುವಂತೆ ವಿಶೇಷ ಸಂಗತಿಯಲ್ಲ, ಅದೊಂದು ಕ್ಷುಲ್ಲಕ ನೆನಪು. ಹಿರಿಯರಿಂದ ದಾಟಿ ಬಂದ ನೆನಪು. ಇವರಲ್ಲಿ ಒಬ್ಬಾತ ಹಿಂದೆ ಡಕಾಯಿತನಾಗಿದ್ದು, ಕತ್ತಲಲ್ಲಿ ಅಲೆದು, ಹಗಲಿನಲ್ಲಿ ಈತ ಅರ್ಚಕನಾದವ.

ಡಾ. ಚಂದ್ರಶೇಖರ್ ಒಂದು ಅಸಾಮಾನ್ಯವಾದ, ಅದ್ಭುತವಾದ ಕಥೆಯನ್ನು ಅದರ ಎಲ್ಲ ವಿವರಗಳಲ್ಲೂ ಗ್ರಹಿಸಿ, ಕನ್ನಡದಲ್ಲಿ ನಿರೂಪಿಸಿದ್ದಾರೆ. ಚಂದ್ರಶೇಖರ್ ವೈದ್ಯರಾದ್ದರಿಂದ ಉಪ್ಪಿನ ಜೀವೋಪಯೋಗಿ ಗುಣದ ಬಗ್ಗೆಯೂ ಬರೆದಿದ್ದಾರೆ. ಮ್ಯಾಕ್ಸ್ ಹ್ಯಾಮ್ ತಾನು ಹುಡುಕಿ ಕಂಡದ್ದನ್ನು ಬರೆದರೆ, ಡಾ. ಚಂದ್ರಶೇಖರ್ ಮಾಕ್ಸ್ ಹ್ಯಾಮ್‌ನನ್ನು ನಮಗೆ ಕಾಣುವಂತೆ ಮಾಡುತ್ತಾರೆ. ಕನ್ನಡ ಓದುಗರು ಡಾ. ಚಂದ್ರಶೇಖರ್‌ರಿಗೆ ಕೃತಜ್ಞರಾಗುವಂತೆ ಈ ಪುಸ್ತಕ ಪ್ರಭುತ್ವದ ಬಗ್ಗೆ ಯೋಚನೆಗೆ ಹಚ್ಚುತ್ತದೆ. ಪ್ರಭುತ್ವ ಕ್ರೂರ ಮಾತ್ರವಲ್ಲ, ಅದರ ಅತಿಯಲ್ಲಿ ಅದು ಐಲಾಗುತ್ತದೆ ಎಂಬ ಸೋಜಿಗವನ್ನೂ ಇಲ್ಲಿನ ದಕ್ಷ ಬರವಣಿಗೆ ತೋರಿಸುತ್ತದೆ.

—-
ಭಾರತದ ಬೃಹತ್ ಬೇಲಿಕೃತಿಗೆ ಬರೆದ ಮುನ್ನುಡಿ.
ಪ್ರ: ಸುಧಾ ಎಂಟರ್ಪ್ರೈಸಸ್, ಬೆಂಗಳೂರು೨೦೦೨