ನಿಮ್ಮ ಕಾದಂಬರಿಯಲ್ಲಿ ರಾಜಗೋಪಾಲ್ ನೀವೇ ತಿಳಿಸಿರುವಂತೆ ಸ್ವಪ್ರತಿಷ್ಠೆಯ ಸಾಹಿತಿ, ಆದರ್ಶವಾದಿ. ಉತ್ತಮ ಸಾಹಿತಿ ಎಂದು ನನಗನ್ನಿಸುವುದಿಲ್ಲ. ಆತನ ಸ್ವಪ್ರತಿಷ್ಠೆ ಎಷ್ಟು ಗಾಢವಾದದ್ದೆಂದರೆ, ಆತನು ತನ್ನನ್ನು ಮಾತ್ರ ಪ್ರೀತಿಸಿಕೊಳ್ಳಬಲ್ಲ, ಇಂತಹವನಿಗೆ ಸಲ್ಲದ ಬಹುವಚನದಲ್ಲೇ ಆತನ ಬಗ್ಗೆ ನೀವು ಬರೆದಿದ್ದೀರಿ. ಇದು ಸಲ್ಲದು.

ಈ ಗೋಪಾಲ್‌ನನ್ನು ಪ್ರೀತಿಸಿದ ದಲಿತ ಹೆಣ್ಣು ಉಷೆ ಉತ್ಕಟಳಾದವಳು, ಪ್ರೀತಿಸಬಲ್ಲವಳು. ಅವಳ ಬಗ್ಗೆ ಲೇಖಕಿಯಾಗಿ ತುಂಬಾ ಆಕರ್ಷಕವಾಗಿ ಬರೆದಿದ್ದೀರಿ. ಅವಳಲ್ಲಿರುವ ಅಸೂಯೆ, ಪ್ರೀತಿಯ ಅಹಂಮಿಕೆ ಎಲ್ಲವೂ ಜೀವನ ಶಕ್ತಿಯಾಗಿದೆ. ಇಡೀ ಕಾದಂಬರಿಯನ್ನು ನಾನು ಸಂತೋಷದಿಂದ ಓದಲು ಕಾರಣ ಉಷೆಯ ಪಾತ್ರ. ಈ ಕಾದಂಬರಿಯ ಮೂಲ ದ್ರವ್ಯ ಅವಳ ಭಾವನೆಗಳು, ಅಪ್ಪಟತನ, ನಿಜಾಕಾಂಕ್ಷೆ. ಅವಳು ಆದರ್ಶಳಲ್ಲ. ಆದರೆ ಮನುಷ್ಯಳು. ಅವಳೇ ನಿಜವಾದ ನಾಯಕಿ.

ಗೋಪಾಲ್ ಸ್ವಪ್ರತಿಷ್ಠೆ ಬಿಟ್ಟುಕೊಡದವನು. ಸಾಹಿತ್ಯಲೋಕದ ಆದರ್ಶವಾದಿಯೂ ಹೌದು. ಆದರೆ ಯಾವ ಆತ್ಮಮರುಕವೂ ಇಲ್ಲದ ಸಾಕ್ಷಿಯಾಗಿ ತನ್ನನ್ನೇ ಶೋಧಿಸಿಕೊಳ್ಳಬೇಕಾದ ಸಾಹಿತಿಯೊಬ್ಬ ಅವನ ಸ್ವಪ್ರತಿಷ್ಠೆಯಿಂದಾಗಿ ಹಲವರ ನೋವಿಗೆ ಕಾರಣನಾಗುತ್ತಾನೆ. ಇಂಥವನೊಬ್ಬ ಸಾಹಿತಿಯೆಂದು ನಾನು ತಿಳಿಯಲಾರೆ. ಇದು ನಿಮಗೂ ಗೊತ್ತಿದೆ. ಆದರೆ ಅತ್ಯಾನುರಕ್ತನಿಗೆ ಸಲ್ಲದ ಬಹುವಚನದಲ್ಲಿ ಅವನ ಬಗ್ಗೆ ಬರೆಯುವುದು, ಇದು ಸರಿಯಲ್ಲ.

ಕಥನ ಕಲೆ ನಿಮಗೆ ದಕ್ಕಿದ್ದರೂ ನೀವೇ ನೇರವಾಗಿ ಕಥೆಯಲ್ಲಿ ಪ್ರವೇಶಿಸುವುದುಂಟು. ಇದರಿಂದಾಗಿ ಓದುಗನಿಗಿರಬೇಕಾದ ನಿರ್ಣಯಶಕ್ತಿಯನ್ನು ಮೊಟಕುಗೊಳಿಸುವುದುಂಟು. ಜಾತಿ, ಪ್ರೀತಿ ವಿಷಯಗಳ ಬಗ್ಗೆ, ಎಲ್ಲರಿಗೂ ತಮ್ಮದೇ ಆದ ಅಭಿಪ್ರಾಯವಿರುತ್ತದೆ. ಓದುಗನ ಆತ್ಮಾನುಸಂಧಾನದಿಂದ ದಕ್ಕಬಹುದಾದ ಸತ್ಯವನ್ನು ಮೊಟಕುಗೊಳಿಸಬಾರದು. ನಿಮ್ಮ ಅಭಿಪ್ರಾಯ, ಧ್ವನಿ ಏನಿದ್ದರೂ ಅವರ ಅಂದರೆ ಪಾತ್ರದ ಕ್ರಿಯೆಯ ಮೂಲಕ ಮೂಡಬೇಕು.

ಹಾಗೆ ಬರೆಯಬಲ್ಲ ಕಲೆ ನಿಮ್ಮಲ್ಲಿದೆ ಎಂದು ತಿಳಿದುದ್ದರಿಂದಲೇ ಈ ರೀತಿ ಟೀಕಿಸುತ್ತಿದ್ದೇನೆ. ಆದರೆ ಇದು ನಿಮ್ಮ ಎರಡನೆಯ ಕಾದಂಬರಿ. ಸತ್ಯಗಳೆಂದು ನಾವು ತಿಳಿಯುವ ಅಭಿಪ್ರಾಯಗಳು ಕೂಡ ಒಳಗೊಂದು ಹೊರಗೊಂದು ಎಂಬಂತೆ ಒಡೆದುಕೊಂಡಿರುತ್ತವೆ. ನಾವು ಸಾಂಕೇತಿಕವಾಗಿ ಸತ್ಯವನ್ನು ನೋಡುವುದಿಲ್ಲ. ನೋಡಿದರೂ ಅದನ್ನು ತೋರಿಕೊಳ್ಳುವುದಿಲ್ಲ. ಇಂತಹ ವಿಷಯಗಳ ಬಗ್ಗೆ ಬರೆಯಲು ಹೊರಟ ಧೀರ ಲೇಖಕಿ ನೀವು. ದಿಟ್ಟ ಲೇಖಕಿ ತನ್ನ ಅಭಿಪ್ರಾಯಗಳನ್ನು ಎಲ್ಲೂ ಹೇರದಂತೆ ಬರೆಯಬೇಕು. ನಿಮ್ಮಿಂದ ಅದು ಸಾಧ್ಯ. ನಿಮ್ಮಿಂದ ಇನ್ನಷ್ಟು ಉತ್ತಮ ಕೃತಿಗಳು ಹೊರಬರುವುದೆಂಬ ಭರವಸೆ ಮತ್ತು ನಿರೀಕ್ಷೆಯಿದೆ. ಆದುದರಿಂದ ನಾನು ವಿಮರ್ಶಿಸುತ್ತಿದ್ದೇನೆ.

ಆದರೆ ಇಡೀ ಕಾದಂಬರಿಯಲ್ಲಿ ಉಷೆ ಮತ್ತು ಹಲವು ಸ್ತ್ರೀ ಪಾತ್ರ ಚಿತ್ರಣ ದಟ್ಟವಾಗಿದೆ. ಗಾಢವಾಗಿದೆ. ಪ್ರೇಮ, ಕಾಮದ ಬದುಕಿನ ಬಗ್ಗೆ ಪ್ರಾಮಾಣಿಕವಾಗಿ ಬರೆಯಬಲ್ಲ ನಿಮ್ಮನ್ನು ಅಭಿನಂದಿಸುತ್ತೇನೆ.

—-
ಕಮಲಾನರಸಿಂಹ
ಅವರಆಪೋಷನಕೃತಿಗೆ ಪತ್ರರೂಪದಲ್ಲಿ ಬರೆದ ಮುನ್ನುಡಿ ೨೦೦೯.
ಪ್ರ: ಸುಮುಖ ಪ್ರಕಾಶನ, ಬೆಂಗಳೂರು.