ಸುಬ್ಬಣ್ಣನ ಆಯ್ದ ಲೇಖನಗಳ ಆಂಗ್ಲ ಅನುವಾದದ ಕೃತಿಯಾದ ‘ಕಮ್ಯೂನಿಟಿ ಹ್ಯಾಂಡ್ ಕಲ್ಚರ್’ನ ಬಿಡುಗಡೆಯ ಈ ಸಮಾರಂಭದಲ್ಲಿ ಮಾತನಾಡುವುದು ನನಗೆ ಹೃದಯ ತುಂಬಿಬರುವಂತಹ ಸಂಗತಿಯಾಗಿದೆ. ಸುಬ್ಬಣ್ಣ ನನ್ನ ಪರಮಾಪ್ತ ಮಿತ್ರರಲ್ಲೊಬ್ಬನಾಗಿದ್ದವನು; ನಮ್ಮ ಸಖ್ಯ ಸುಮಾರು ಅರವತ್ತು ವರ್ಷಗಳಷ್ಟು ಸುದೀರ್ಘ ಅವಧಿಯದಾಗಿತ್ತು. ಆ ಸ್ನೇಹ ೧೯೪೮ರಲ್ಲಿ, ನನ್ನ ಶಿವಮೊಗ್ಗೆಯ ದಿನಗಳಲ್ಲಿ ಪ್ರಾರಂಭಗೊಂಡದ್ದು, ಮುಂದೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ನಾವಿಬ್ಬರೂ ಸಹಪಾಠಿಗಳಾಗಿದ್ದಾಗ ಇನ್ನಷ್ಟು ಬಲಗೊಂಡಿತು. ಅಲ್ಲಿ ಸುಬ್ಬಣ್ಣ ಕನ್ನಡ ಆನರ್ಸ್ ಓದುತ್ತಿದ್ದ, ನಾನು ಇಂಗ್ಲಿಷ್ ಆನರ್ಸ್ ಓದುತ್ತಿದ್ದೆ. ಪುರೋಹಿತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ನನಗೆ ಹೋಲಿಸಿದರೆ ಅಡಿಕೆ ಬೆಳೆಗಾರರ ಕುಟುಂಬಕ್ಕೆ ಸೇರಿದ್ದ ಆತ ಹೆಚ್ಚು ಅನುಕೂಲಸ್ಥನಾಗಿದ್ದ. ಆದರೆ ಅಂತಸ್ತಿನ ಆ ಅಂತರ ನಮ್ಮ ಸ್ನೇಹಕ್ಕೇನೂ ಅಡ್ಡಿಯಾಗಲಿಲ್ಲ. ಯಾಕೆಂದರೆ ಆಗ ನಾವಿಬ್ಬರೂ ಕಮ್ಯುನಿಸ್ಟರಾಗಿದ್ದೆವು. ಪ್ರತಿಯೊಂದು ವಸ್ತುವನ್ನೂ ಹಂಚಿಕೊಳ್ಳುತ್ತಿದ್ದೆವು. ನಾವು ಒಟ್ಟಿಗೆ ಊಟ ಮಾಡುತ್ತಿದ್ದೆವು, ಒಟ್ಟಿಗೆ ಕಾವ್ಯ ಓದುತ್ತಿದ್ದೆವು, ನಾಟಕ-ಸಿನೆಮಾಗಳಿಗೆ ಒಟ್ಟಿಗೆ ಹೋಗುತ್ತಿದ್ದೆವು. ನನಗೆ ಗೊತ್ತಿರುವ ಹಳಗನ್ನಡ ಹಾಗೂ ನಡುಗನ್ನಡ ಸಾಹಿತ್ಯದ ಬಹಳ ಭಾಗವನ್ನು ನಾನು ಆತನಿಂದಲೇ ಕಲಿತದ್ದು. ಆತ ತನಗೆ ಇಷ್ಟವಾದ ಎಲ್ಲ ಸಾಹಿತ್ಯಕೃತಿಗಳನ್ನೂ ನನ್ನೆದುರು ಓದಿ ಹೇಳುತ್ತಿದ್ದ; ಪಂಪ, ರನ್ನ, ಕುಮಾರವ್ಯಾಸರಾದಿಯಾಗಿ ಅದೆಷ್ಟೋ ಲೇಖಕರನ್ನು ಚರ್ಚಿಸುತ್ತಿದ್ದ. ಅದಕ್ಕೆ ಪ್ರತಿಯಾಗಿ ನಾನು ನನಗಿಷ್ಟವಾದ ಅನೇಕಾನೇಕ ವಿದೇಶಿ ಲೇಖಕರನ್ನು, ಶೇಕ್ಸ್‌ಪಿಯರ್, ಮಿಲ್ಟನ್, ಕೀಟ್ಸ್, ಶೆಲ್ಸಿಯಂಥವರನ್ನು, ಆತನ ಬಳಿ ಚರ್ಚಿಸುತ್ತಿದ್ದೆ. ಮುಂದೆ ಪ್ರಗತಿವಾದಿ ಸಾಹಿತ್ಯ ಚಳವಳಿಯ ಪ್ರಭಾವ ಬೆಳೆಯುತ್ತಿದ್ದಂತೆ ಸುಬ್ಬಣ್ಣ ಮ್ಯಾಕ್ಸಿಂ ಗಾರ್ಕಿಯನ್ನು ತುಂಬಾ ಇಷ್ಟಪಡತೊಡಗಿದ. ಆತನಿಗೆ ಗಾರ್ಕಿ ಇಷ್ಟವೆಂದಾಕ್ಷಣ ನಾನೂ ಗಾರ್ಕಿಯನ್ನು ಓದತೊಡಗಿದೆ. ನಮ್ಮ ಆ ಒಡನಾಟ ಅದೆಷ್ಟು ಗಾಢವಾಗಿತ್ತೆಂದರೆ, ನಾವು ಯೋಚಿಸುತ್ತಿದ್ದುದರಲ್ಲಿ ಮಾತನಾಡುತ್ತಿದ್ದರಲ್ಲಿ ಎಷ್ಟು ಅವನದು ಎಷ್ಟು ನನ್ನದು ಎಂದು ಬೇರ್ಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಎಷ್ಟೋ ಬಾರಿ ನಾನು ಏನೋ ಒಂದನ್ನು ಹೇಳುತ್ತಿದ್ದಂತೆಯೆ ಆತ, ‘ಏಯ್, ಅದು ನಾನು ಮೊದಲು ಹೇಳಿದ್ದು’, ಎಂದು ನಗುತ್ತ ನುಡಿಯುತ್ತಿದ್ದ. ಇನ್ನು ಕೆಲವೊಮ್ಮೆ ನಾನು ಅದೇ ರೀತಿಯಲ್ಲಿ ಆತ ಹೇಳಿದ್ದರ ಮೇಲೆ ನನ್ನ ಸ್ವಾಮ್ಯವನ್ನು ಸಾಧಿಸುವುದಿತ್ತು. ನಿಜ ನುಡಿಯುವುದಾದರೆ, ನಾನಿಂದು ಎಷ್ಟೇ ಹೆಸರು ಗಳಿಸಿರಲಿ, ಸುಬ್ಬಣ್ಣ ನನಗಿಂತ ಅದೆಷ್ಟೊ ಹೆಚ್ಚು ಮಹತ್ವದ ವ್ಯಕ್ತಿ.

ನಾನು ಮೊದಲಿನಿಂದಲೂ ಹೆಚ್ಚಾಗಿ ಪಶ್ಚಿಮ ನಾಗರಿಕತೆಯ ಪ್ರಭಾವಕ್ಕೆ ಒಳಗಾದವನು, ನನ್ನ ಸಂವೇದನೆಯ ಬಹುಭಾಗ ಪಾಶ್ಚಿಮಾತ್ಯ ಸಾಹಿತ್ಯದಿಂದ ಮತ್ತು ತತ್ತ್ವ-ಸಿದ್ಧಾಂತಗಳಿಂದ ರೂಪುಗೊಂಡದ್ದು. ಆದರೆ ಸುಬ್ಬಣ್ಣ ಯಾವಾಗಲೂ ನಾನು ಪಶ್ಚಿಮದಿಂದ ಪಡೆದು ನುಡಿಯುತ್ತಿದ್ದ ಎಲ್ಲದಕ್ಕೂ ಸಮಾನರೂಪಿಯಾದ ಅನುಭವ, ತತ್ತ್ವ ಹಾಗೂ ಸಿದ್ಧಾಂತಗಳನ್ನು ಕನ್ನಡ ಮತ್ತು ಭಾರತೀಯ ಸಂಸ್ಕೃತಿಗಳಲ್ಲಿಯೆ ಗುರುತಿಸಿ ತೋರಿಸುತ್ತಿದ್ದ, ಮಾತ್ರವಲ್ಲ ಅವುಗಳಿಗೆ ಪರ್ಯಾಯರೂಪಗಳನ್ನೂ ಹೆಕ್ಕಿ ಕಾಣಿಸುತ್ತಿದ್ದ. ನಾನು ಕಂಡುಕೊಂಡುದಕ್ಕಿಂತ ತೀರಾ ಭಿನ್ನವಾದ ಆದರೆ ಅಷ್ಟೇ ಯೋಗ್ಯವೂ ಹಲವೊಮ್ಮೆ ಅದಕ್ಕಿಂತ ಹೆಚ್ಚು ಮೌಲಿಕವೂ ಆದ ಸತ್ಯಗಳನ್ನು ನಮಗೆ ಕಾಣಿಸುತ್ತಿದ್ದ. ಹೀಗೆ ಆತ ನನ್ನನ್ನು ಸಮೃದ್ಧಗೊಳಿಸಿದ. ಹಾಗೆ ನಾನು ನನ್ನ ಎಳವೆಯಲ್ಲಿಯೆ ಸುಬ್ಬಣ್ಣನಂತಹ ದೇಸಿ ಪ್ರಜ್ಞೆಯ ಪ್ರಭಾವವಲಯದೊಳಗೆ ಬರದಿದ್ದಲ್ಲಿ ಇಂದು ಪ್ರತಿಷ್ಠಿತ ಶೈಲಿಯ ಆಂಗ್ಲ ಅಧ್ಯಾಪಕನಾಗಿಯಷ್ಟೆ ಉಳಿದುಕೊಂಡಿರುತ್ತಿದ್ದೆ.

ಇಷ್ಟಾಗಿ, ನಾನು ಬರವಣಿಗೆಯನ್ನು ಪ್ರಾರಂಭಿಸಿದ ಹೊಸತರಲ್ಲಿ ಸುಬ್ಬಣ್ಣ ಆಧುನಿಕತೆಗೂ ಹೆಚ್ಚು ಹೆಚ್ಚು ತೆರೆದುಕೊಳ್ಳಲಾರಂಭಿಸಿದ. ಆದಾಗ್ಯೂ, ಪಾರಂಪರಿಕ ಹಾಗೂ ಆಧುನಿಕ ಪ್ರಪಂಚಗಳೆರಡರಲ್ಲೂ ಒಟ್ಟೊಟ್ಟಿಗೆ ಜೀವಿಸುವ ಹಾಗೂ ಭಾವಿಸುವ ಅಸಾಧಾರಣವಾದುದೊಂದು ಸಾಮರ್ಥ್ಯ ಆತನಿಗಿತ್ತು. ಕನ್ನಡದಲ್ಲಿ ಬೇರೂರಿ ನಿಂತಂತೆಯೆ ವಿಶ್ವವ್ಯಾಪಿಯಾಗಿಯೂ ಹಬ್ಬಿಬೆಳೆವ ಶಕ್ತಿ ಆತನಿಗಿತ್ತು. ಆತನಿಗಿದ್ದ ನೆಲೆಗಳಲ್ಲಿ ಕನ್ನಡ ಒಂದಾಗಿದ್ದರೆ ಆತನ ಹಳ್ಳಿ ಹೆಗ್ಗೋಡು ಮತ್ತೊಂದಾಗಿತ್ತು. ಹೆಗ್ಗೋಡು ಆತನಿಗೆ ಬರಿದೆ ಒಂದು ಹಳ್ಳಿಯಾಗದೆ ಕನ್ನಡ ವಿಶ್ವದ ಅಣುರೂಪವೊಂದಾಗಿತ್ತು. ನಮ್ಮ ಪದವಿ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ನಾನು ಉನ್ನತ ವ್ಯಾಸಂಗ ಪೂರೈಸಿ ಅಧ್ಯಾಪನ ವೃತ್ತಿ ಕೈಗೊಂಡು ನಗರಗಳಲ್ಲಿ ತಿರುಗಿಕೊಂಡಿದ್ದರೆ, ಸುಬ್ಬಣ್ಣ ತನ್ನ ಹಳ್ಳಿಗೆ ಮರಳಿದ. ಅಲ್ಲಿದ್ದ ತನ್ನ ಪೂರ್ವಿಕರು ಮತ್ತು ನೆರೆಹೊರೆಯವರಂತೆಯೆ ಅಡಿಕೆ ಕೃಷಿಯಲ್ಲಿ ಮಗ್ನನಾದ. ಅದರಲ್ಲಿ ಪಡೆದ ವ್ಯಾವಹಾರಿಕ ಯಶಸ್ಸಿನ ದೊಡ್ಡ ಪಾಲೊಂದನ್ನು ಮುಂದೆ ಆತ ತನ್ನ ಕಲೆಯ ಹವ್ಯಾಸಕ್ಕೆಂದು ಮೀಸಲಾಗಿಟ್ಟ. ಹಾಗೆ ಹಳ್ಳಿಯ ಹತ್ತು ಜನರೊಟ್ಟಿಗೆ ಸೇರಿ ಕಟ್ಟಿದ ಪುಟ್ಟ ಸಂಸ್ಥೆಯೊಂದನ್ನು ಮುಂದೆ ಮಹತ್ವದ ಚಳಿವಳಿಯಾಗಿ ರೂಪಿಸಿದ. ಆತ ಹಾಗೆ ಮಾಡಿದ್ದರಿಂದ ನನ್ನ ವೈಯಕ್ತಿಕ ಸ್ತರದಲ್ಲಿ ಕಳೆದುಹೋಗಬಹುದಾಗಿದ್ದ ‘ಹಳ್ಳಿ’ ನನಗೆ ಉಳಿಯಿತು.

ಸುಬ್ಬಣ್ಣನ ಇನ್ನೊಂದು ಭಾಗ್ಯವೆಂದರೆ, ಆತನ ಕುಟುಂಬದ ಸದಸ್ಯರೆಲ್ಲ ಆತನ ಆಶಯಗಳಿಗೆ ಆಧಾರವಾಗಿ ನಿಂತರು, ಅವುಗಳನ್ನು ಮುಂದುವರೆಸಿಕೊಂಡು ಬಂದರು. ಇದು ನಮ್ಮ ಪ್ರಸ್ತುತ ಸನ್ನಿವೇಶದಲ್ಲಿ ತುಂಬಾ ಗಮನಾರ್ಹವಾದುದು. ಇಂದು ನಾವು ಬಹಳಷ್ಟು ಜನ ತಾಯಿ-ತಂದೆಯರು ನಮ್ಮ ಮಕ್ಕಳನ್ನು ಅಮೆರಿಕಕ್ಕೊ ಯೂರೋಪಿಗೊ ಕಳೆದುಕೊಳ್ಳುತ್ತಿದ್ದೇವೆ. ಇಂದು ಮಲೆನಾಡಿನಲ್ಲಿ ಒಬ್ಬಾನೊಬ್ಬ ಯುವಕನೂ ಇಲ್ಲದಿರುವಂತಹ ಹಳ್ಳಿಗಳು ಅನೇಕವಿದೆ. ಅಲ್ಲಿ ಹುಟ್ಟಿ ಬೆಳೆದ ಎಲ್ಲ ಯುವಕರೂ ಈಗ ದೇಶ-ವಿದೇಶಗಳ ನಗರಗಳಿಗೆ ವಲಸೆ ಹೋಗಿದ್ದಾರೆ. ಆದರೆ ಸುಬ್ಬಣ್ಣನ ಮಗ ಅಕ್ಷರ ತಂದೆಯ ಮಾದರಿಯನ್ನೇ ಅನುಸರಿಸಿ, ನಗರಗಳಲ್ಲಿ ಉನ್ನತ ವ್ಯಾಸಂಗ ಪಡೆದೂ ಕೊನೆಗೆ ತನ್ನ ಹಳ್ಳಿಗೇ ಮರಳಿದ್ದಾನೆ, ತಂದೆಯ ಚಟುವಟಿಕೆಗಳನ್ನು ತನ್ನದೇ ವೈಶಿಷ್ಟ್ಯಪೂರ್ಣ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ಕುಟುಂಬ-ಊರು-ಸಮುದಾಯಗಳಿಗೆ ಸಂಬಂಧಿಸಿದ ಈ ಅಂಶಗಳೆಲ್ಲ ಸೇರಿ, ಇಂದು ನೀನಾಸಂನನ್ನು ಇಡೀ ಏಶಿಯಾದಲ್ಲೆ ಅತ್ಯಂತ ಅನನ್ಯವಾದ ಸಂಸ್ಥೆಯೊಂದಾಗಿ ಬೆಳೆಸಿ ನಿಲ್ಲಿಸಿವೆ.

ನನಗೂ ಸುಬ್ಬಣ್ಣನಿಗೂ ಹಲವಾರು ಅಭಿಪ್ರಾಯಭೇದಗಳಿದ್ದವು. ನಮ್ಮಿಬ್ಬರ ಸಂಬಂಧವೇ ಹಾಗಿತ್ತು. ನಾನು ಕೆಲವೊಮ್ಮೆ ತೀವ್ರವೂ ಅತಿನಿಷ್ಠುರವೂ ಆದ ನಿಲುವುಗಳನ್ನು ತೆಗೆದುಕೊಳ್ಳುವವನು. ನಾನು ಹಾಗೆ ಮಾಡಿದಾಕ್ಷಣ ಸುಬ್ಬಣ್ಣ ಅಷ್ಟೇ ತೀವ್ರವಾದ ಆದರೆ ನನಗೆ ವಿಧ್ರುವದೂರದ ನಿಲುವುಗಳನ್ನು ತಳೆಯುತ್ತಿದ್ದ. ಹಾಗೆ ನಡೆದಾಗಲೆಲ್ಲ, ಸತ್ಯವೆನ್ನುವುದು ಒಂದು ತುದಿಯಲ್ಲಿ ಇರುವುದಲ್ಲ, ಅದು ಇರುವುದು ಕೊನೆಗೂ ಎರಡು ತುದಿಗಳ ನಡುವೆ ಎಲ್ಲೊ ಒಂದೆಡೆ ಎಂಬುದನ್ನು ಆತ ನನಗೆ ತೋರಿಸಿಕೊಡುತ್ತಿದ್ದ. ನನ್ನ ನಿಲುವುಗಳ ಬಗ್ಗೆ ನನಗೆಯೆ ಸಂದೇಹ ಮೂಡುವಂತೆ ಆತ ನಡೆದುಕೊಳ್ಳುತ್ತಿದ್ದ. ಇದು ತೋರುವಂತೆ, ಆತ ಎಂದೂ ಆತ್ಮಪ್ರತ್ಯಯದ ವ್ಯಕ್ತಿಯಾಗಿರಲಿಲ್ಲ. ಇದೇ ರೀತಿಯಲ್ಲಿ ಆತ ಎಷ್ಟೋ ಬಾರಿ ಭಾವತೀವ್ರತೆಯನ್ನೂ ಉಗ್ರತತ್ತ್ವನಿಷ್ಠೆಯನ್ನೂ ತೋರುವುದಿತ್ತು. ನಾನೇ ಕೆಲವೊಮ್ಮೆ ಕಂಡಂತೆ ಆತ ಸಾತ್ವಿಕಕ್ರೋಧದಲ್ಲಿ ಕೆರಳಿ ಎದುರಾಳಿಗಳಿಗೆ ಎದೆಯೊಡ್ಡಿ ನಿಂತದ್ದೂ ಇತ್ತು. ಉಡುಪಿಯಲ್ಲೊಮ್ಮೆ ರಾಷ್ಟ್ರೀಯಮಟ್ಟದ ನಾಟಕೋತ್ಸವ ಹಾಗೂ ವಿಚಾರ ಸಂಕಿರಣವೊಂದು ನಡೆಯುತ್ತಿದ್ದಾಗ ಅಲ್ಲಿ ಪ್ರದರ್ಶನಗೊಂಡ ನಾಟಕವೊಂದರ ಸಣ್ಣ ವಿವರವೊಂದರ ಬಗ್ಗೆ ಅಲ್ಪಮತೀಯ ಹುಯಿಲೆಬ್ಬಿಸಿದ ಸಂಘ ಪರಿವಾರದವರ ವಿರುದ್ಧ ಆತ ತತ್‌ಕ್ಷಣಸ್ಪಂದಿಯಾಗಿಯೂ ಏಕಾಂಗವೀರನೆಂಬಂತೆಯೂ ಸಿಡಿದೆದ್ದದ್ದು, ಮುಂದೆ ಅಲ್ಲಿ ನೆರೆದಿದ್ದ ಲೇಖಕರು ಮತ್ತು ಕಲಾವಿದರೆಲ್ಲರೂ ಒಟ್ಟುಗೂಡಿ ಪ್ರತಿಭಟಿಸುವಂತೆ ಸ್ಫೂರ್ತಿ ನೀಡಿದ್ದು ಇದಕ್ಕೊಂದು ಜ್ವಲಂತವಾದ ನಿದರ್ಶನವಾಗಿದೆ.

ಸುಬ್ಬಣ್ಣನ ವ್ಯಕ್ತಿತ್ವದಂತೆಯೆ ಆತನ ಬರವಣಿಗೆಯೂ ಅತ್ಯಂತ ಮಹತ್ವದ್ದು. ಅದರಲ್ಲೂ ವಿಶೇಷವಾಗಿ ಒಂದು ಸಾವಿರ ವರ್ಷಗಳ ಹಿಂದಿನ ಕನ್ನಡ ಕೃತಿ ‘ಕವಿರಾಜಮಾರ್ಗ’ದ ಬಗ್ಗೆ ಆತ ಬರೆದ ‘ಕವಿರಾಜಮಾರ್ಗ ಮತ್ತು ಕನ್ನಡಜಗತ್ತು’ ಪುಸ್ತಕವಂತೂ ಒಂದು ಮಹತ್ ಕೃತಿಯೆ ಹೌದು. ನಾನು ಓದಿ ಮತ್ತು ಕೇಳಿ ಬಲ್ಲಂತೆ ‘ಕವಿರಾಜಮಾರ್ಗ’ ಇಡಿಯ ವಿಶ್ವಚರಿತ್ರೆಯಲ್ಲಿಯೆ ಅನನ್ಯವಾದೊಂದು ಕೃತಿ. ಅದನ್ನು ಕೆಲವರು ಇಟಲಿಯ ಮಹಾಕವಿ ಡಾಂಟೆಯ ಕೃತಿಗೆ ಹೋಲಿಸುತ್ತಾರಾದರೂ ಅದು ಡಾಂಟೆಗಿಂತ ಹಲವು ಶತಮಾನಗಳಷ್ಟು ಪೂರ್ವದಲ್ಲಿಯೆ ರಚನೆಯಾದುದೆಂಬುದನ್ನು ಮರೆಯುವಂತಿಲ್ಲ. ಡಾಂಟೆ ತನ್ನ ಕಾಲದ ಕ್ಲಾಸಿಕಲ್ ಭಾಷೆಯಾದ ಲ್ಯಾಟಿನ್ ಅನ್ನು ಬಿಟ್ಟು ತನ್ನ ಸಮಕಾಲೀನ ದೇಸಿ ಭಾಷೆಯಾದ ಇಟಾಲಿಯನ್‌ನಲ್ಲಿ ಬರೆಯಬೇಕೆಂದು ನಿರ್ಧರಿಸಿದ್ದು ಕವಿರಾಜಮಾರ್ಗಕಾರ ಸಂಸ್ಕೃತ ಮತ್ತು ಕನ್ನಡಗಳ ನಡುವೆ ಮಾಡಿಕೊಂಡ ಆಯ್ಕೆಯನ್ನೆ ಹೋಲುವಂಥದ್ದು. ಆದರೆ ಕವಿರಾಜಮಾರ್ಗಕಾರ ಆ ನಿರ್ಧಾರಗೈದದ್ದು ಡಾಂಟೆಗಿಂತ ಎಷ್ಟೋ ಮೊದಲೆ. ಇದೇ ರೀತಿಯ ಉದಾಹರಣೆ ತಮಿಳು ಭಾಷೆಯ ಚರಿತ್ರೆಯಲ್ಲೂ ಕಾಣಸಿಗುತ್ತದೆಂಬುದನ್ನು ನಾವು ಇಲ್ಲಿ ನೆನೆಯಬಹುದು. ಅಭಿವ್ಯಕ್ತಿಯ ಭಾಷೆಯ ಆಯ್ಕೆಯ ಮಟ್ಟಿಗೆ ಹೋಲಿಕೆಯಿದ್ದರೂ ‘ಕವಿರಾಜಮಾರ್ಗ’ ತನಗೆ ಸಮಾಂತರವಾದ ಇಟಾಲಿಯನ್ ಮತ್ತು ತಮಿಳು ಉದಾಹರಣೆಗಳಿಗಿಂತ ಭಿನ್ನವಾದುದು, ಅನನ್ಯವಾದುದು. ‘ಕವಿರಾಜಮಾರ್ಗ’ ತನ್ನ ಸೃಷ್ಟಿಯ ಕಾಲ-ಸಂದರ್ಭಗಳಲ್ಲಿ ಪಡೆದಿದ್ದ ಮಹತ್ವವನ್ನೂ ಹಾಗೆಯೆ ಅದಕ್ಕೆ ನಮ್ಮ ಕಾಲ-ಸಂದರ್ಭಗಳಲ್ಲಿರುವ ಪಡೆದಿದ್ದ ಮಹತ್ವವನ್ನೂ ಆಳವಾಗಿ ಅರಿತಿದ್ದ ಕೆಲವೇ ವ್ಯಕ್ತಿಗಳಲ್ಲಿ ಸುಬ್ಬಣ್ಣ ಒಬ್ಬನಾಗಿದ್ದ. ‘ಕವಿರಾಜಮಾರ್ಗ’ದ ಒಂದು ವೈಶಿಷ್ಟ್ಯವೆಂದರೆ ಅದು ಕನ್ನಡದ ಬಗ್ಗೆ ಅಗಾಧವಾದ ಆತ್ಮವಿಶ್ವಾಸದಲ್ಲಿ ಮಾತನಾಡುತ್ತಿರುವಾಗಲೂ ಲವಲೇಶದಷ್ಟೂ ಅಂಧಶ್ರದ್ಧೆಯನ್ನು ತೋರುವುದಿಲ್ಲ. ಬದಲಿಗೆ, ವ್ಯಕ್ತಿಗಳು ಮತ್ತು ಸಮುದಾಯಗಳು ತಮ್ಮ ತಮ್ಮ ಭಾಷೆಯನ್ನು ಪ್ರೀತಿಸುವಷ್ಟೆ ಆಳವಾಗಿ ಅನ್ಯಭಾಷೆಗಳನ್ನೂ ಪ್ರೀತಿಸಬಹುದೆಂಬುದನ್ನು ಅದು ತೋರಿಸಿಕೊಡುತ್ತದೆ. ಅಂತಹ ಆತ್ಮಗೌರವ ಮತ್ತು ಅನ್ಯಪ್ರೇಮಗಳೆರಡೂ ಬೆಸೆದುಕೊಂಡ ಮಾರ್ಗದ ಮುಖಾಂತರವಷ್ಟೆ ನಾವು ನಮ್ಮ ನಮ್ಮ ಭಾಷೆಗಳನ್ನು ಸಮೃದ್ಧಗೊಳಿಸಿಕೊಳ್ಳುವುದು ಸಾಧ್ಯವೆಂಬುದನ್ನು ಅದು ಸೂಚಿಸುತ್ತದೆ. ಶಿವಸೇನೆ ಮಾದರಿಯ ಭಾಷಾದುರಭಿಮಾನದ ಚಳವಳಿಗಳು ಎಲ್ಲೆಡೆಯೂ ಬೆಳೆಯುತ್ತಿರುವ ನಮ್ಮ ಪ್ರಸ್ತುತ ಸನ್ನಿವೇಶದಲ್ಲಿ ಸುಬ್ಬಣ್ಣ ‘ಕವಿರಾಜಮಾರ್ಗ’ದ ಈ ಸತ್ವಸತ್ಯವನ್ನು ಮರುಕಾಣಿಸಿಕೊಟ್ಟದ್ದು ಆತ ಕನ್ನಡ ಸಂಸ್ಕೃತಿಗೆ ನೀಡಿದ ಅಮೂಲ್ಯ ಕೊಡುಗೆಯೆ ಹೌದು.

ಹೀಗೆ ಒಂದೆಡೆ ತನ್ನ ಸ್ವಂತದ ನೆಲೆದಲ್ಲಿ ನೆಲೆಯೂರಿ ನಿಂತಿದ್ದು ಇನ್ನೊಂದೆಡೆ ಅನ್ಯರಲ್ಲಿನ ಶ್ರೇಷ್ಠ ಅಂಶಗಳನ್ನು ಗುರುತಿಸುವ ಹಾಗೂ ಸ್ವೀಕರಿಸುವ ಸುಬ್ಬಣ್ಣನ ವಿಶಿಷ್ಟ ಗುಣ ಆತನ ಎಳೆಯ ವಯಸ್ಸಿನಲ್ಲಿಯೆ ಪ್ರಕಟಗೊಂಡಿತ್ತು. ಆತನಿಗೆ ಕನ್ನಡದ ಎಲ್ಲ ಕಾಲಘಟ್ಟಗಳ ಸಾಹಿತ್ಯ ಕೃತಿಗಳ ಪರಿಚಯವಿತ್ತು. ಇಂಗ್ಲಿಷಿನ ಮೂಲಕ ಪಶ್ಚಿಮದ ಮುಖ್ಯಕೃತಿಗಳ ಪರಿಚಯವಿತ್ತು. ಹಾಗೆಯೇ ಸಂಸ್ಕೃತದ ಮೂಲಕ ಭಾರತೀಯ ಅಭಿಜಾತ ಸಾಹಿತ್ಯದ ಪರಿಚಯವೂ ಇತ್ತು. (ಆತನಿಗಿದ್ದ ಸಂಸ್ಕೃತ ಪ್ರೀತಿಯ ಬಗ್ಗೆ ನನ್ನಲ್ಲಿ ಕೆಲವು ಪ್ರಶ್ನೆಗಳಿದ್ದವು, ಆದರೆ ಅದರಿಂದ ಮುಂದೆ ನಾನು ಎಷ್ಟೊ ಮಹತ್ವದ ಸಂಗತಿಗಳನ್ನು ಕಲಿತೆನೆಂಬುದನ್ನೂ ಇಲ್ಲಿ ಒಪ್ಪಿಕೊಳ್ಳಲೇಬೇಕು) ಆತ ಇನ್ನೂ ಕನ್ನಡ ಆನರ್ಸ್ ವಿದ್ಯಾರ್ಥಿಯಾಗಿದ್ದಾಗಲೆ ಸಂಸ್ಕೃತ ಭಾಷೆಯ ಅಭಿಜಾತ ಕೃತಿಯಾದ ಧನಂಜಯನ ‘ದಶರೂಪಕ’ವನ್ನು ಕನ್ನಡಕ್ಕೆ ಅನುವಾದಿಸಿದ್ದ. ಆ ಅನುವಾದ ಆತನ ಗುರುಗಳಾಗಿದ್ದ ಕುವೆಂಪುರವರಿಗೆ ಎಷ್ಟು ಇಷ್ಟವಾಗಿತ್ತೆಂದರೆ ಅವರು ಆ ಕೃತಿಯನ್ನು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೊಂದಕ್ಕೆ ಶಿಫಾರಸು ಮಾಡಿದ್ದರು. ವಿದ್ಯಾರ್ಥಿ ದೆಸೆಯಿಂದಲೆ ಹೀಗೆ ಬರವಣಿಗೆಯಲ್ಲಿ ತೊಡಗಿದ ಸುಬ್ಬಣ್ಣ ಮುಂದೆ ಗದ್ಯ, ಪದ್ಯ, ನಾಟಕ ಇತ್ಯಾದಿಗಳ ರಚನೆಯನ್ನೂ ಅನುವಾದ ಕಾರ್ಯಗಳನ್ನೂ ಕೈಗೊಂಡ. ಜ್ಞಾನಜಗತ್ತು ಮತ್ತು ಕಲಾಜಗತ್ತುಗಳಲ್ಲಿ ತನಗೆ ಅತ್ಯುತ್ಕೃಷ್ಟವೆಂದು ಕಂಡದ್ದನ್ನು ತಾನಷ್ಟೆ ಆಸ್ವಾದಿಸುವುದರಲ್ಲಿ ತೃಪ್ತಿಪಡದೆ ಆತ ಅವುಗಳನ್ನು ತನ್ನ ಪರಿಸರದ ಸಂಗಾತಿಗಳೊಂದಿಗೆ ಹಂಚಿಕೊಳ್ಳತೊಡಗಿದ. ಆತ ಏನು ಕೆಲಸ ಮಾಡಿದರೂ ಅದು ಮೂಲತಃ ಆತನ ಹಳ್ಳಿಗರಿಗಾಗಿ ಆಗಿತ್ತು. ಆ ಹಳ್ಳಿಗರೊಡನೆ ಕೂಡಿ ಮಾಡಿದುದಾಗಿತ್ತು ಹಾಗೂ ಆ ಹಳ್ಳಿಗರ ಮೂಲಕವೇ ಆಗಿತ್ತು. ಆತ ತಾನು ತಿಳಿದುದೆಲ್ಲವನ್ನೂ ಪ್ರೀತಿಸಿದೆಲ್ಲವನ್ನೂ ಒಂದು ಕೇಂದ್ರದಲ್ಲಿ ಸಂಗಮಗೊಳ್ಳುವಂತೆ ಮಾಡಿದ; ಆ ಮೂಲಕ ಯಾವುದೇ ಸರ್ಕಾರಿ ವ್ಯವಸ್ಥೆಗಳಾಗಲಿ, ಸಾಂಪ್ರದಾಯಿಕ ಶೈಕ್ಷಣಿಕ ಸಂಸ್ಥೆಗಳಾಗಲಿ ಎಷ್ಟು ಹಣ ಖರ್ಚು ಮಾಡಿಯೂ ಸಾಧಿಸದಂತಹ ವಿಶಿಷ್ಟವಾದ ಸಾಂಸ್ಕೃತಿಕ ವಿಶ್ವವೊಂದನ್ನು ತನ್ನ ಪುಟ್ಟ ಹಳ್ಳಿಯಲ್ಲಿ ಸೃಷ್ಟಿಸಿದ. ಆಶೀಶ್ ನಂದಿ, ರಾಮಚಂದ್ರ ಗುಹಾ, ಚಂದ್ರಶೇಖರ ಕಂಬಾರ ಅಂಥವರೆಲ್ಲ ಆ ವಿಶ್ವದ ಭಾಗವಾಗಿ ಸೇರಿಕೊಂಡರು, ಅದನ್ನು ಇನ್ನಷ್ಟು ಶ್ರೀಮಂತಗೊಳಿಸುವತ್ತ ತಮ್ಮ ಕೊಡುಗೆಗಳನ್ನು ನೀಡಿದರು. ಹಾಗೆ ನೋಡಿದರೆ, ಇಂದು ನನಗೆ ಗೊತ್ತಿರುವ ಬಹುಮುಖ್ಯ ಭಾರತೀಯ ಬರಹಗಾರರು, ಕಲಾವಿದರು ಹಾಗೂ ಚಿಂತಕರಲ್ಲಿ ಬಹಳಷ್ಟು ಜನ ಸುಬ್ಬಣ್ಣನ ಪ್ರಭಾವವಲಯದಿಂದ ಪಡೆದುಕೊಂಡಿದ್ದಾರೆ. ಅದಕ್ಕೆ ಒಂದಿಷ್ಟು ನೀಡಿದ್ದಾರೆ.

ಇಷ್ಟಾಗಿಯೂ ಸುಬ್ಬಣ್ಣನಿಗೆ ಅನ್ಯಮೂಲಗಳಿಂದ ಬಂದದ್ದು ತಂದದ್ದು ಎಲ್ಲವೂ ಎಲ್ಲಕ್ಕಿಂತ ಮೊದಲಾಗಿ ಮತ್ತು ಮಿಗಿಲಾಗಿ ತನ್ನ ಸ್ವಂತ ಪರಿಸರಕ್ಕೆ ಪ್ರಸ್ತುತವಾಗಿರಬೇಕು ಹಾಗೂ ಆ ಪರಿಸರದಲ್ಲಿ ನಿಜವಾಗಬೇಕು ಎಂಬ ಹಠವೂ ಬಲವಾಗಿತ್ತು. ಆತ ಸರ್ವಪ್ರಥಮವಾಗಿಯೂ ಮತ್ತು ಅಂತಿಮವಾಗಿಯೂ ತನ್ನ ಭವ-ಭಾವದ ಮೂಲನೆಲೆಗಳಿಗೆಯೆ ಬದ್ಧನಾಗಿದ್ದ. ಆತ ಯಾವತ್ತೂ ‘ನಾನು ಬರೆದದ್ದು ಮಾಡಿದ್ದು ನನ್ನ ಪರಿಸರದ ಜನರಿಗೆ ಅರ್ಥವಾದರೆ ಸಾಕು, ಅವರಿಗೆ ಇಷ್ಟವಾದರೆ ಸಾಕು, ಅದು ಇನ್ಯಾರೋ ಪರಭಾಷೆಯವರಿಗೆ ಅರ್ಥವಾಗುವುದೋ ಇಲ್ಲವೋ ಎಂಬುದರ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಬೇಕು?’ ಎನ್ನುತ್ತಿದ್ದವನು; ಹಾಗೆಯೆ, ‘ಇಂಗ್ಲಿಷ್ ಭಾಷಿಕರಿಗೆ ತಿಳಿಯದಿದ್ದರೂ ನಡೆಯುತ್ತದೆ ಎಂಬ ಭಾವದಲ್ಲಿ ನಿನ್ನದೆ ಭಾಷೆಯಲ್ಲಿ ಬರೆದಾಗ ಮಾತ್ರ ನೀನು ಅವರು ತಾವು ತಿಳಿಯಲೇಬೇಕು ಎಂದು ಹಂಬಲಿಸುವಂಥದನ್ನು ಬರೆಯಬಲ್ಲೆ. ಅದೇ, ಅವರಿಗೆ ತಿಳಿಸಲೇಬೇಕು ಎಂಬ ಆಸೆಯಲ್ಲಿ ಬರೆದಾಗ ಅವರು ತಾವಾಗಿಯೆ ತಿಳಿಯಲು ಹಾತೊರೆಯುವಂತಹ ಏನನ್ನೂ ನೀನು ಬರೆಯಲಾರೆ’ ಎಂದೂ ಹೇಳುತ್ತಿದ್ದವನು.

ಇದೆಲ್ಲದರ ಮುಖಾಂತರ ಸುಬ್ಬಣ್ಣ ತನ್ನ ಇನ್ನೊಂದು ಸ್ಫೂರ್ತಿಮೂಲವಾದ ಗಾಂಧಿಗೆ ಹೆಚ್ಚು ಹೆಚ್ಚು ಹತ್ತಿರ ಚಲಿಸಿದ. ಆ ಚಲನೆ ಅಕ್ಷರಶಃ ಅರ್ಥದಕ್ಕಿಂತ ಹೆಚ್ಚಾಗಿ ತಾತ್ತ್ವಿಕ ಅರ್ಥದ ಚಲನೆಯಾಗಿತ್ತು. ಗಾಂಧಿ ಕನಸಿದ ಬಗೆಯ ವಿಕೇಂದ್ರೀಕರಣವೆನ್ನುವುದು ಸುಬ್ಬಣ್ಣನಿಗೆ ಅತ್ಯಂತ ದೊಡ್ಡ ಮೌಲ್ಯವಾಗಿತ್ತು. ಮಾನವರು ತಮ್ಮ ತಮ್ಮ ಪುಟ್ಟ ಊರುಗಳನ್ನೆ ವಿರಾಟ್‌ವಿಶ್ವಗಳನ್ನಾಗಿ ಕಟ್ಟಿಕೊಳ್ಳುವ ಜೀವನಮಾದರಿ ಆತನಿಗೆ ಅತ್ಯಂತ ಪ್ರಿಯವಾದುದಾಗಿತ್ತು. ಇದರ ಜೊತೆಗೆಯೆ, ಊರು-ಸಮುದಾಯಗಳಿಗಿಂತ ವಿಸ್ತಾರವೂ ಬೃಹತ್ತೂ ಆದ ರಾಜ್ಯ ಮತ್ತು ರಾಷ್ಟ್ರ ಪ್ರಭುತ್ವಗಳು ಸಂರಚನೆ ಹಾಗೂ ಅವುಗಳ ಗುಣಲಕ್ಷಣಗಳ ಬಗ್ಗೆಯೂ ಆತನಿಗೆ ಅತೀವವಾದ ಕುತೂಹಲವಿತ್ತು. ಕಾಳಿದಾಸನ ‘ಅಭಿಜ್ಞಾನಶಾಕುಂತಲ’ವನ್ನು ಆತ ‘ಲೋಕಶಾಕುಂತಲ’ವಾಗಿ ರೂಪಾಂತರಿಸಿದ ರೀತಿಯೆ ಆತನಿಗೆ ಕೇಂದ್ರೀಕೃತ ವ್ಯವಸ್ಥೆಯ ಬಗೆಗಿದ್ದ ಕುತೂಹಲವನ್ನೂ ವಿಕೇಂದ್ರೀಕರಣದ ಬಗೆಗಿದ್ದ ಒಲವನ್ನೂ ಒಟ್ಟೊಟ್ಟಿಗೆ ತೋರುತ್ತದೆ. ಸುಬ್ಬಣ್ಣನಿಗೆ ವಿಕೇಂದ್ರೀಕರಣವೆನ್ನುವುದು ಬರಿದೆ ರಾಜಕೀಯ ಚಟುವಟಿಕೆಯಾಗಿರದೆ ಸಂಸ್ಕೃತಿಸ್ತರದ ಕಾರ್ಯಕ್ರಮವೂ ಆಗಿತ್ತು. ಹಾಗೆಂದು ಆತ ತಾನು ಇಷ್ಟಪಟ್ಟ ಜಗತ್ತಿನ ಅನ್ಯಸಂಸ್ಕೃತಿಗಳ ಚಿಂತನೆ ಮತ್ತು ಕೃತಿಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ನಡೆಸಿದ, ಅನುವಾದಗಳ ಮೂಲಕ ಕನ್ನಡದ ಪ್ರಜ್ಞೆಯನ್ನು ಇನ್ನಷ್ಟು ವಿಸ್ತರಿಸಲು ಯತ್ನಿಸಿದ. ಆಶೀತ್ ನಂದಿ, ರಾಮಚಂದ್ರ ಗುಹಾ ಅಂಥವರೆಲ್ಲ ಕನ್ನಡಕ್ಕೆ ಪರಿಚಯವಾದದ್ದೆ ಸುಬ್ಬಣ್ಣನ ಹಾಗೂ ಆತನ ತಂಡದವರ ಇಂತಹ ಭಾಷಾಂತರದ ಕ್ರಿಯೆಯಿಂದ.

ಮನೋಧರ್ಮದ ವಿಷಯದಲ್ಲಿ ಸುಬ್ಬಣ್ಣನನ್ನು ಯಾರೊಡನಾದರೂ ಹೋಲಿಸಬಹುದಾದರೆ ಅದು ಈಶ್ವರಚಂದ್ರ ವಿದ್ಯಾಸಾಗರ ಜೊತೆಗೆ. ಆಶೀಶ್ ನಂದಿ ಒಂದೆಡೆ ವಿದ್ಯಾಸಾಗರರ ಬಗ್ಗೆ ಬರೆಯುತ್ತ ಅವರನ್ನು ‘ವಿಮರ್ಶಾಶೀಲ ಸಂಪ್ರದಾಯವಾದಿ’ ಎಂದು ಕರೆಯುತ್ತಾರೆ. ನಾನು ವಿದ್ಯಾಸಾಗರರಂಥವರನ್ನು ‘ಆಂತರಿಕ ವಿಮರ್ಶಕರು’ (ಕ್ರಿಟಿಕಲ್ ಇನ್‌ಸೈಡರ್ಸ್) ಎಂದು ಕರೆದಿದ್ದೇನೆ. ವಿದ್ಯಾಸಾಗರರು ಭಾರತೀಯ ಸಂಪ್ರದಾಯವನ್ನು ಸಾರಾಸಗಟಾಗಿ ಸ್ತುತಿಸಲಿಲ್ಲ. ಹಾಗೆಯೆ ಆಧುನಿಕ ಪಶ್ಚಿಮವನ್ನು ಇಡಿಯಾಗಿ ತಿರಸ್ಕರಿಸಲಿಲ್ಲ. ಅವರು ಪಶ್ಚಿಮಕ್ಕೆ ಮುಖಾಮುಖಿಯಾದರು. ಅದರಲ್ಲಿನ ಇತ್ಯಾತ್ಮಕ ಅಂಶಗಳನ್ನು ಗುರುತಿಸಿದರು, ಹಾಗೆ ಮಾಡುತ್ತಲೆ ತಮ್ಮ ಮೂಲ ಸಂಸ್ಕೃತಿಯಲ್ಲಿ ಅವುಗಳನ್ನು ಹೋಲುವಂತಿದ್ದ ಅಂಶಗಳನ್ನು ಹೆಕ್ಕಿ ತೆಗೆದರು. ತನ್ಮೂಲಕ ಪೂರ್ವ-ಪಶ್ಚಿಮಗಳ ನಡುವೆ, ಪರಂಪರೆ-ಆಧುನಿಕತೆಗಳ ನಡುವೆ, ಸ್ವ-ಅನ್ಯಗಳ ನಡುವೆ ಸಮನ್ವಯ ಸಾಧಿಸುವ ಅನನ್ಯ ದಾರಿಯೊಂದನ್ನು ಅವರು ಕಾಣಿಸಿಕೊಟ್ಟರು. ನಂದಿ ಉಲ್ಲೇಖಿಸಿರುವ ಪ್ರಖ್ಯಾತ ನಿದರ್ಶನವೊಂದರಲ್ಲಿ ಅವರು ಪುರಾತನ ಸ್ಮೃತಿಗಳನ್ನು ತಮ್ಮ ವಾದದ ಆಧಾರವಾಗಿ ಬಳಸಿಕೊಂಡರು, ಆದರೆ ಅಲ್ಲಿ ಮನುಸ್ಮೃತಿಗಿಂತ ಭಿನ್ನವಾದ ಪರಾಶರಸ್ಮೃತಿಯನ್ನು ಬಳಸಿಕೊಂಡರು. ಪರಂಪರೆಯನ್ನು ಹೀಗೆ ಮುಕ್ತದೃಷ್ಟಿಯಿಂದಲೂ ಉದಾರ ಮಾನವತಾಭಾವದಿಂದಲೂ ಮರುವ್ಯಾಖ್ಯಾನ ಮಾಡಿದುದಕ್ಕೆ ವಿದ್ಯಾಸಾಗರ ತಮ್ಮ ಕಾಲದ ಸಂಪ್ರದಾಯ ಶರಣರಿಂದ ಎಂತಹ ಅಪಾಯವನ್ನು ಎದುರಿಸಬೇಕಾಯಿತೆಂದರೆ ಕೆಲವೊಮ್ಮೆ ಅವರ ಮನೆಯ ಸುತ್ತ ಪೊಲೀಸ್ ಕಾವಲು ಹಾಕಬೇಕಾಗುತ್ತಿತ್ತು. ನಾನು ಒಂದೆಡೆ ಓದಿರುವಂತೆ, ಆತನ ತಾಯಿ ಆತ ಮನುವಿನ ಬಗ್ಗೆ ಟೀಕೆಯನ್ನು ಬರೆಯಬೇಕೆಂದು ಅಪೇಕ್ಷಿಸಿದಳಂತೆ. ಹಾಗೆ ಬರೆದ ವಿಮರ್ಶೆ ತನ್ನ ಕೆಲವು ಹಿರಿಯರಿಗೆ ಅಪ್ರಿಯವಾಗಬಹುದೆಂದೂ ತನ್ನ ಕುಟುಂಬವನ್ನು ತೊಂದರೆಗೆ ಈಡು ಮಾಡಬಹುದೆಂದೂ ಮುಂಚಿತವಾಗಿಯೆ ಕಂಡ ವಿದ್ಯಾಸಾಗರರು ಆ ಬರವಣಿಗೆಗೆ ಸಂಬಂಧಿಸಿ ತನ್ನ ಸಂಪ್ರದಾಯಸ್ಥ ತಂದೆಯ ಅಪ್ಪಣೆಯನ್ನು ಕೇಳಲು ಹೋದರಂತೆ. ತಂದೆ ‘ಒಂದೊಮ್ಮೆ ನಾನು ಒಪ್ಪಿಗೆ ನೀಡದಿದ್ದರೆ ಏನು ಮಾಡುತ್ತಿ?’ ಎಂದು ಕೇಳಿದರಂತೆ. ಅದಕ್ಕೆ ವಿದ್ಯಾಸಾಗರರು ‘ನೀನಿರುವ ತನಕ ಬರೆಯುವುದಿಲ್ಲ. ಯಾಕೆಂದರೆ ಅದರಿಂದ ನಿನಗೆ ನೋವಾಗಬಹುದು. ಆದರೆ ನೀನು ತೀರಿಕೊಂಡ ಅನಂತರ ಬರೆಯುತ್ತೇನೆ. ಯಾಕೆಂದರೆ ನನಗೆ ಸರಿಯೆನಿಸಿದ್ದನ್ನು ನಾನು ಎಂದಾದರೂ ಹೇಳಿಕೊಳ್ಳಲೇಬೇಕು’ ಎಂದು ಉತ್ತರಿಸಿದರಂತೆ. ಮಗನಲ್ಲಿ ಕಂಡ ಸತ್ಯನಿಷ್ಠೆ ಹಾಗೂ ಪರಜೀವಿಪ್ರೇಮಗಳ ವಿಶಿಷ್ಟ ಸಂಲಗ್ನರೂಪವನ್ನು ಮೆಚ್ಚಿಕೊಂಡ ಆ ತಂದೆ ‘ಹಾಗಿದ್ದರೆ ಈಗಲೆ ಬರೆ’ ಎಂದು ಒಪ್ಪಿಗೆ ಕೊಟ್ಟರಂತೆ. ಸುಬ್ಬಣ್ಣ ಇದ್ದದ್ದು ವಿದ್ಯಾಸಾಗರರಂತೆಯೆ; ಆತ ಬಾಳಿದ್ದು ಸಾಧನೆಗೈದದ್ದು ವಿದ್ಯಾಸಾಗರರು ಸಂಪ್ರದಾಯದಲ್ಲಿ ಗಟ್ಟಿ ಬೇರೂರಿ ನಿಂತು ಆಧುನಿಕತೆಗೆ ತೆರೆದುಕೊಂಡಂತೆಯೆ. ಇವರಿಬ್ಬರ ನಡುವಿನ ಇನ್ನೊಂದು ಮುಖ್ಯ ಸಾಮ್ಯವೆಂದರೆ, ವಿದ್ಯಾಸಾಗರರು ಬಂಗಾಲಿಯಲ್ಲಿ ಹೊಸತೊಂದು ಬಗೆಯ ಗದ್ಯವನ್ನು ಕಟ್ಟಿಕೊಟ್ಟಂತೆಯೆ ಸುಬ್ಬಣ್ಣ ಕನ್ನಡದಲ್ಲಿ ಹೊಸತೊಂದು ಗದ್ಯವನ್ನು ಸೃಷ್ಟಿಸಿದ. ಸುಬ್ಬಣ್ಣನ ಗದ್ಯ ಒಂದು ಕ್ಷಣ ಕಥೆ ಹೇಳಬಲ್ಲದು, ಇನ್ನೊಂದು ಕ್ಷಣ ತೀರಾ ಅಮೂರ್ತ ಸಂಗತಿಗಳನ್ನು ಚರ್ಚಿಸಬಲ್ಲದು, ಅಲ್ಲಿ ಒಂದು ಸಾಲು ಕಾವ್ಯತೀವ್ರತೆಯಲ್ಲಿ ಅದ್ದಿದ್ದು, ಇನ್ನೊಂದು ಸಾಲು ಸಾತ್ವಿಕಕ್ರೋಧದಲ್ಲಿ ಹತ್ತಿ ಉರಿಯುವಂಥದಾಗಿರುತ್ತದೆ; ಒಂದು ಭಾಗ ದೇಸಿ ಕನ್ನಡದ ಕಸುವನ್ನು ತೋರುವಂತಿದ್ದರೆ ಇನ್ನೊಂದು ಭಾಗ ಸಂಸ್ಕೃತದಂತಹ ಭಾಷೆಯಿಂದ ದೀಪ್ತಗೊಂಡಿರುತ್ತದೆ. ಹೀಗೆ, ಯಾವುದನ್ನೂ ತಿರಸ್ಕರಿಸದೆ, ಎಲ್ಲವನ್ನೂ ಪ್ರೀತ್ಯಾದರಗಳಲ್ಲಿ ಪರಿಶೀಲಿಸಿ ಅವುಗಳ ಅತ್ಯುತ್ತಮ ಅಂಶಗಳನ್ನು ಸ್ವೀಕರಿಸಿದ, ಹಾಗೆ ತಂದುಕೊಂಡದ್ದನ್ನು ತನ್ನ ಪರಿಸರದಲ್ಲಿ ಕಸಿ ಮಾಡಿ ಬೆಳೆಸಿದ ಸುಬ್ಬಣ್ಣ ನಮ್ಮ ದೇಶಕಾಲಗಳು ಕಂಡ ಅಪರೂಪದ ಅಖಂಡಪ್ರಜ್ಞೆಯ ಚಿಂತಕರಲ್ಲಿ ಓರ್ವನಾದವನು.

ಸುಬ್ಬಣ್ಣನ ಹೆಗ್ಗೋಡು ಇಲ್ಲಿಯವರೆಗೂ ಅನ್ಯಭಾಷೆಗಳಿಂದ ಕನ್ನಡಕ್ಕೆ ಅನುವಾದಿಸುತ್ತ ಬಂದಿದೆ. ಈಗ, ಈ ಪುಸ್ತಕದ ಮೂಲಕ, ಅದು ಮೊತ್ತಮೊದಲ ಬಾರಿಗೆ ತನ್ನನ್ನು ಆಂಗ್ಲಭಾಷೆಗೆ ಅನುವಾದಿಸಿಕೊಂಡಿದೆ. ಸುಬ್ಬಣ್ಣನ ಮಗ ಅಕ್ಷರ, ಮನು ಚಕ್ರವರ್ತಿ ಮತ್ತು ಆತನ ಸಂಗಡಿಗರು ಸೇರಿ ಈ ಅನುವಾದ ಸಂಗ್ರಹವನ್ನು ಹೊರತಂದಿದ್ದು, ವಿವೇಕ ಶಾನಭಾಗ ಮತ್ತು ಗೆಳೆಯರು ಇಲ್ಲಿ ಈ ಕೃತಿಯ ಬಿಡುಗಡೆಯ ಸಮಾರಂಭವನ್ನು ಏರ್ಪಡಿಸಿದ್ದಾರೆ. ಕನ್ನಡ ಹೀಗೆ ಇಂಗ್ಲಿಷ್ ಅನುವಾದವೊಂದರ ಮೂಲಕ ಜಾಗತಿಕಸ್ತರದಲ್ಲಿ ತನ್ನನ್ನು ಅಭಿವ್ಯಕ್ತಿಸಿಕೊಳ್ಳುತ್ತಿರುವುದು, ಅಂಥದೊಂದು ಸಂದರ್ಭದಲ್ಲಿ ಪಾಲುಗೊಳ್ಳುವ ಅವಕಾಶ ಸಿಕ್ಕಿರುವುದು ನನಗೆ ತುಂಬು ಸಂತೋಷದ ವಿಷಯವಾಗಿದೆ. ಅದರಷ್ಟೆ ಸಂತೋಷದ ಇನ್ನೊಂದು ಸಂಗತಿಯೆಂದರೆ ಸುಬ್ಬಣ್ಣನ ಕನ್ನಡಮಿತ್ರರಾದ ನೀವೆಲ್ಲ ಈ ಸಮಾರಂಭಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ನಿಮ್ಮೆಲ್ಲರ ಸಮ್ಮುಖದಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡುವ ಗೌರವ ದೊರಕಿರುವುದು ನನಗೆ ಇನ್ನಷ್ಟು ಸಾರ್ಥಕತೆಯ ಭಾವ ನೀಡುವಂತಹ ವಿಷಯವಾಗಿದೆ. ಧನ್ಯವಾದಗಳು.

—-
ಕೆ
.ವಿ. ಸುಬ್ಬಣ್ಣನವರ ಇಂಗ್ಲಿಷ್ ಕೃತಿ ಬಿಡುಗಡೆ ಮಾಡಿ ಆಡಿದ ಮಾತುಗಳ ಬರಹರೂಪ: ಕನ್ನಡಕ್ಕೆ: ಜಸವಂತ ಜಾಧವ. ಪ್ರಕಟಣೆ: ‘ಮಾತುಕತೆ‘, ೨೦೧೦.