ಈ ಆಜಾನುಬಾಹು ಸ್ನೇಹಮಯಿ ಕವಿ ಚಿಂತಾಮಣಿ ಕೊಡ್ಲೆಕೆರೆಯವರ ಬಾಯಿಯಿಂದಲೇ ಮತ್ತೆ ಮತ್ತೆ ಕೇಳಿಸಿಕೊಂಡು ನಾನು ವಿಚಿತ್ರವಾದ ಒಂದು ಸಂತೋಷವನ್ನು ಪಡೆದ ಕವನಗಳ ಬಗ್ಗೆ ಬರೆಯಲು ಹೊರಟು ಬರೆಯಲಾರದೆ ಈಗ ಕೂತು ಮತ್ತೆ ಪ್ರಯತ್ನಿಸುತ್ತಿದ್ದೇನೆ. ಇವರನ್ನು ಓದಿದಾಗ ನನಗೆ ಎದುರಾಗುವವರು ಭಕ್ತ ಕವಿಗಳಾದ ಪುರಂದರ ಕನಕರು. ನನ್ನ ಕಾಲದ ಕವಿಯೊಬ್ಬ ಹೀಗೆ ಕೃತಕವೆನಿಸದಂತೆ ಬರೆಯಲು ಹೇಗೆ ಸಾಧ್ಯವೆಂಬುದೇ ನನ್ನ ಬರವಣಿಗೆಗೆ ಕಷ್ಟವನ್ನು ತಂದ ವಿಚಾರ.

‘ತಾಯಿ ಮತ್ತು ಮಗ
ಬಾನಿನಿಂದ ಬರುವರು
ನಾನು ನಿತ್ಯ ನಡೆದಾಡುವ
ಗದ್ಯೆ ಹಾಡಿ ಹಾದಿಯಲ್ಲೇ
ಹೆಜ್ಜೆಯಿಟ್ಟು ಬರುವಳು’
(ಹಸಿರು ತಾಯಿ ಮತ್ತು ಮಗ)

ಹೀಗೆ ಒಂದು ಅಲೌಕಿಕ ದರ್ಶನವನ್ನು ಈ ಲೋಕದಲ್ಲಿ ಇರುವಂತೆಯೇ ಕಾಣುವುದು ಸಾಧ್ಯ ಎಂದು ಬರೆಯುವುದು ಎಷ್ಟು ಅಚ್ಚರಿ ತರುವ ಗುಣವೋ ಅಷ್ಟೇ ಅನುಮಾನ ಹುಟ್ಟಿಸುವ ವಿಚಾರ. ಈ ಅನುಮಾನ ವೈಯಕ್ತಿಕವಾಗಿ ನನ್ನ ಬೆಳವಣಿಗೆಗೆ ಸಂಬಂಧಿಸಿದ್ದು. ಬಾಲ್ಯದಲ್ಲಿ ಚಿಂತಾಮಣಿ ಕೊಡ್ಲೆಕೆರೆಯಂತೆಯೇ ದೈವಸನ್ನಿಧಿಯಲ್ಲಿ ಇರುವಂತೆ ಹಳ್ಳಿಯಲ್ಲಿ ಕಾಲಕಳೆದವನು ನಾನು. ಆದರೆ ಅನಂತರ ಆಧುನಿಕ ತರ್ಕದಿಂದಾಗಿ ಅದನ್ನು ಕಳೆದುಕೊಂಡವನು. ಕಳೆದುಕೊಂಡದ್ದರಿಂದ ಒಂದು ಬಗೆಯ ಮನೋಕ್ಲೇಷೆಗೆ ಒಳಗಾಗಿ ಮತ್ತೆ ಬೇರೆ ಮಾರ್ಗಗಳಲ್ಲಿ ದಿವ್ಯವಾದ್ದೊಂದು ಈ ಬಾಳಿನಲ್ಲೇ ಇದೆ ಎಂಬ ಕಾಣ್ಕೆಯನ್ನು ಸ್ವಪತ್ರಿಷ್ಠೆಯ ಸನಾತನಿಗಳಿಗಿಂತ ಬೇರೆಯಾದ ಮಾರ್ಗಗಳಲ್ಲಿ ಪಡೆಯಲು ಬಯಸಿದವನು. ಹುಟ್ಟಿನಲ್ಲಿ ದ್ವೈತಿಯಾಗಿದ್ದು ನಂಬಿ ಕಂಡದ್ದನ್ನು ಅದ್ವೈತಿಯಾಗಿ ಕಳೆದುಕೊಂಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಅಥವಾ ಪ್ರಾಪಂಚಿಕ ವ್ಯವಹಾರದ ಜಡತ್ವದಲ್ಲಿ ಕಳೆದುಕೊಂಡಿದ್ದರೂ ಅದೊಂದು ಬಾಧೆಯಾಗಿ ತೋರುತ್ತಲೂ ಇರಲಿಲ್ಲ. ಯಾಂತ್ರಿಕ ಆಚರಣೆಗಳಲ್ಲೇ ಮುಗಿಸಿಬಿಡಬಹುದಾದ ಹಲವು ಧಾರ್ಮಿಕ ಕ್ರಿಯೆಗಳಿಗೆ ಯಥಾವಕಾಶ ನಮ್ಮಲ್ಲಿ ಇದ್ದೇ ಇವೆಯಲ್ಲ. ಇದೊಂದು ಎಡಬಿಡಂಗಿಯ ಸ್ಥಿತಿ.

ನಮ್ಮ ಕಾಲದ ಈ ಎಡಬಿಡಂಗಿತನವನ್ನು ನಾವು ಕಾವ್ಯಾಸ್ವಾದದಲ್ಲಿ ಮೀರಲು ಪ್ರಯತ್ನಿಸುವವರು. ಚಿಂತಾಮಣಿ ಕೊಡ್ಲೆಕೆರೆಯವರು ಹೀಗೆಯೇ ಒಂದು ಸೌಂದರ್ಯ ಪ್ರಜ್ಞೆಯ ಕಾವಿನಲ್ಲಿ ದೈವತ್ವವನ್ನು ಇಹದಲ್ಲೇ ಕಾಣಬಲ್ಲವರೋ ಅಥವಾ ಈ ಭಾವನೆ ಅವರ ಯಾವುದೋ ಮುಗ್ಧನೆಲೆಯಲ್ಲಿ ತನ್ನ ತಾಜಾತನವನ್ನು ಉಳಿಸಿಕೊಂಡಿದೆಯೋ-ಹೇಳಲಾರೆ. ಆದ್ದರಿಂದಲೇ ಬರೆಯುವುದು ನಿಧಾನವಾಗಿದೆ. ಇನ್ನೊಂದು ಕಾರಣ-ಹೀಗೆ ಬರೆಯ ಹೊರಟರೆ ನಮ್ಮ ಕಾಲದ ಬಹು ಒಳ್ಳೆಯ ಕವಿಗಳಲ್ಲಿ ಒಬ್ಬರಾದ ಚಿಂತಾಮಣಿ ಕೊಡ್ಲೆಕೆರೆಯವರಿಗೆ ಅನ್ಯಾಯ ಮಾಡಿ ನನ್ನ ಅನುಮಾನಗಳನ್ನೇ ದೊಡ್ಡದಾಗಿ ಮಾಡಿಕೊಂಡಂತೆ ಅನಿಸುತ್ತದೋ ಎಂಬ ಗುಮಾನಿ ಬೇರೆ ನನಗಿದೆ.

ಒಮ್ಮೆ ಅಡಿಗರೂ ನನಗೆ ಸಂದರ್ಶನವೊಂದರಲ್ಲಿ ಹೇಳಿದ್ದರು- ಭಕ್ತಿ ನನಗೆ ಸಾಧ್ಯವಿಲ್ಲ. ಕುವೆಂಪು, ಬೇಂದ್ರೆ, ಪು.ತಿ.ನ., ನರಸಿಂಹಸ್ವಾಮಿ ಈ ಎಲ್ಲರಿಗೂ ಚಿಂತಾಮಣಿ ಕೊಡ್ಲೆಕೆರೆಯವರಂತೆ ಅಲ್ಲಲ್ಲಿಯಾದರೂ ಸಾಧ್ಯವಾದ ಭಕ್ತಿ ಆರ್ಷದೃಷ್ಟಿಯ ಅಡಿಗರಿಗೆ ಸಾಧ್ಯವಿರಲಿಲ್ಲ ಎಂಬುದೊಂದು ಸೋಜಿಗ. ಸು.ರಂ. ಎಕ್ಕುಂಡಿಗೆ ಮಾತ್ರ ನಮ್ಮ ಕಾಲದಲ್ಲಿ ಇದು ಸಾಧ್ಯವಾಗಿತ್ತು. ಅಚ್ಚರಿ ಎಂದರೆ ಅವರು ಏಕಕಾಲದಲ್ಲಿ ಮಾಧ್ವರೂ, ಮಾರ್ಕ್ಸಿಸ್ಟರೂ ಆಗಿದ್ದರು. ಪ್ರೇಮ ಕವಿ ನರಸಿಂಹಸ್ವಾಮಿ ಬರೆದೊಂದು ಸಾಲಿದೆ. ‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ’ ಒಮ್ಮೆ ತಮಾಷೆಯಲ್ಲಿ ಅಡಿಗರು ಈ ಸಾಲನ್ನು ಓದಿ ಹೇಳಿದ್ದರು. ‘ಈ ಕವಿವರ್ಯರನ್ನ ಸಿಂಹಾಸನಕ್ಕೆ ಏರುವಂತೆ ಕರೆಯುವ ದೇವರು ಯಾರೋ ನನಗೆ ತಿಳಿಯದಪ್ಪ.’ ಕಾವ್ಯದಲ್ಲಿ ಕಾವ್ಯಕ್ಕೂ ನಂಬಿಕೆಗೂ ನಡುವೆ ಬಿರುಕು ಹುಟ್ಟಿಕೊಂಡ ಕಾಲದಲ್ಲಿ ಎಕ್ಕುಂಡಿಯಂತೆಯೇ ಚಿಂತಾಮಣಿ ಕೊಡ್ಲೆಕೆರೆಯವರು ನಮ್ಮೆದುರು ಇದ್ದಾರೆ.

ಖ್ಯಾತ ವಿಮರ್ಶಕ ಕೆ.ವಿ. ನಾರಾಯಣ್ ಹೇಳಿರುವ ಮಾತು ನೆನಪಾಗುತ್ತದೆ. ಎಕ್ಕುಂಡಿ ನಮ್ಮನ್ನು ಭಕ್ತರನ್ನಾಗಿಸುವ ಉದ್ದೇಶದಿಂದ ಬರೆಯುವುದಲ್ಲ ತಮಗಾದ ಅನುಭವವನ್ನು ನಿವೇದಿಸಿಕೊಳ್ಳುತ್ತಾರೆ ಅಷ್ಟೆ. ಅಂದರೆ ಇಲ್ಲಿ ಭಕ್ತಿಯ ಪ್ರೊಪಗ್ಯಾಂಡ ಇಲ್ಲ. ಹರಿದಾಸನೊಬ್ಬ ಗೆಜ್ಜೆ ಕಟ್ಟಿ ನಿಂತು ಕುಣಿಯುತ್ತಾ ನಮ್ಮನ್ನು ದೈವಪರವಶರನ್ನಾಗಿ ಮಾಡುವಂತಹ ಕಾವ್ಯ ಎಕ್ಕುಂಡಿಯದೂ ಅಲ್ಲ, ಚಿಂತಾಮಣಿ ಕೊಡ್ಲೆಕೆರೆಯವರದೂ ಅಲ್ಲ. (ಅಂತಹ ಆಸೆ ಅವರಿಗೆ ಇದ್ದರೂ ಇದ್ದೀತು ಎಂಬ ಅನುಮಾನಕ್ಕೆ ಅವಕಾಶವಿದೆ.)

ಭಕ್ತಿಯಿಂದ ಆರ್ದ್ರವಾಗುವ ಮನಸ್ಸಿನ ಈ ಕವಿಗೆ ಭಾವುಕವಾದ ಧಾರಾಳತನವೂ ಇದೆ. ಉದಾಹರಣೆಗೆ ಅವರ ‘ನಿಟ್ಟೂರು’ ಪದ್ಯ. ನೈತಿಕವಾಗಿ ಮಕ್ಕಳಿಗೆ ತಿಳಿಹೇಳುವಂತಹ ಸುಮನಸ್ಕತೆಯೂ ಇದೆ. ಉದಾಹರಣೆಗೆ ‘ಕೋಪಸಮಯ’. ಮಾತಿನ ಜಾಣತನವೂ ಇದೆ. ಉದಾಹರಣೆಗೆ ‘ಸರ್ವ ಋತುಗಳಿಗೆ’. ಇಂತಹ ಪದ್ಯಗಳನ್ನು ಓದಿದಾಗ ದಾಸಪಂಥದ ಕವಿಗಳಂತೆ ಕೇವಲ ಉಕ್ಕುವ ಭಾವದ ಕವಿ ಇವರಲ್ಲ, ನಮ್ಮ ಹಾಗಯೇ ಶಬ್ದಗಳಲ್ಲಿ ಕೆಲಸ ಮಾಡುವ ಇನ್ನೊಬ್ಬ ಕುಶಲಕರ್ಮಿ ಎಂದು ಅನಿಸುತ್ತದೆ. ‘ನಟ’ ಎನ್ನುವಂತ ಪದ್ಯದಲ್ಲಿ ಗೇಲಿ ಮಾಡಲು ಇವರಿಗೆ ಸಾಧ್ಯವಿದೆ. ‘ಹುಡುಗಾಟವಲ್ಲ’ ಎಂಬ ಇನ್ನೊಂದು ಪದ್ಯವನ್ನು ನೋಡಿ. ನಂಬಿಕೆ ಮತ್ತು ದೈವ ಸಂವೇದನೆಯ ಬೆರಗು ಒಂದು ಮಕ್ಕಳಿಗೆ ಹೇಳುವಂತಹ ಕಥೆಯಾಗಿಯೂ ಬರುತ್ತದೆ. ಜೊತೆಗೆ ಈಗಿನ ಕವಿಯ ನಂಬಿಕೆಯ ಪ್ರಶ್ನೆಯಾಗಿಯೂ ಹಾಸ್ಯದ ಧಾಟಿಯಲ್ಲಿ ಮೂಡುತ್ತದೆ. ‘ಅತಿಅತೀತ’ ಎನ್ನುವ ಸೊಗಸಾದ ಕವನವನ್ನು ನೋಡಿ. ಇದೊಂದು ತಾತ್ವಿಕ ಪ್ರಶ್ನೆಯನ್ನು ಎತ್ತುವ ಲಘುಧಾಟಿಯ ಕವನ. ಅತ್ಯಂತ ಸಾಮಾನ್ಯ ಸನ್ನಿವೇಶಗಳ ಮುಖಾಂತರ ಗಂಭೀರವಾದುದ್ದನ್ನು ಮಂಡಿಸುವ ಕವನ.

‘ನವಿಲುಗಣ್ಣಿನ ಗಣಿತ’ ಎನ್ನುವ ಪದ್ಯವಂತೂ ಮಕ್ಕಳಿಗೆ ಬರೆಯುವ ಧಾಟಿಯಲ್ಲಿ ಒಂದು ರೂಪಕವನ್ನೇ ಸೃಷ್ಟಿಸುತ್ತದೆ.

‘ಲೆಕ್ಕವೆಂದರೆ ಅದು ಮುಗಿಯದ ಹಾದಿ ಮಗು
ತಿಳಿದವರು ಹೇಳುವರು ಅದು ಅನಂತ
ಅದು ತಿಳಿಯಲಿ ಎಂದೇ ಲೆಕ್ಕ ಹೇಳಿದೆ
ಈಗಲಾದರೂ ನಿನಗೆ ಬುದ್ಧಿ ಬಂತಾ

ಈ ಲೆಕ್ಕಕ್ಕಿಂತ ಅಸಾಧ್ಯವಾದುದೊಂದಿದೆ
ನಿನ್ನ ಗರಿಗಳ ಕಣ್ಣು ನೀನೇ ಎಣಿಸುವುದು
ಹಾಗೆ ಎಣಿಸಲು ನೀನು ಎಷ್ಟು ಸಲ ಮೈ ತಿರುಗಿಸುವಿ ಸಾವಧಾನವಾಗಿ ಯೋಚಿಸು.

ಬುದ್ಧಿವಂತಿಕೆಯಿಂದ ಪಥಚ್ಛೇಷ್ಟೆಯಲ್ಲಿ ತೊಡಗುವುದು. ಗಾದೆಮಾತಿನಂತಹ ಜನಪ್ರಿಯ ಮಾತುಗಾರಿಕೆ ಕೂಡಾ ಈ ಕವಿಗೆ ಸಾಧ್ಯ. ಮಾತು ಚೇಷ್ಟೆಯದು:

‘ಇಂದು ಜಗವೆಲ್ಲ ಗೊರೆಯುತ್ತಿರೆ
ಕವಿಯು ಎದ್ದಿದ್ದ
ಕಂಡುಕೊಂಡಿದ್ದ
ನಿದ್ದೆಯೇ ಗೊರಕೆಗೆ ಕಾರಣ’

ಬುದ್ಧನನ್ನು ನೆನಪು ಮಾಡುವ ವ್ಯಂಗ್ಯ ಈ ಕವನದಲ್ಲಿದೆ. ಚಿಂತಾಮಣಿ ಕೂಡ್ಲೆಕೆರೆಯವರ ಕವನಗಳನ್ನು ಸೋಮಾರಿಯಾಗಿ ಓದುತ್ತಾ ಹೋಗುವುದು ಸಾಧ್ಯವಿಲ್ಲ. ಪದ್ಯದಿಂದ ಪದ್ಯಕ್ಕೆ ಅವರು ಭಿನ್ನ ಮಾರ್ಗಗಳನ್ನು ಹುಡುಕುತ್ತಾರೆ. ಕವಿ ಏಟ್ಸ್‌ನನ್ನು ನೆನಪು ಮಾಡುವಂತೆ ಇವರದೊಂದು ಹಾಡಿದೆ. ‘ತೆರಬೇಕು ನೀ ನನ್ನ ಬಾಕಿ.’ ಆತ್ಮವಲ್ಲ, ದೇಹ ಹೇಳುವ ಮಾತು ಇದು.

‘ಭಕ್ತ ಮತ್ತು ದೇವರು’ ಎನ್ನುವ ದೀರ್ಘ ಕವನವಂತೂ ಹರಿಕಥಾಶ್ರವಣದಂತೆ ಸರಾಗವಾಗಿ ಬೆಳೆದು ನಮ್ಮ ಮನಸ್ಸಿಗೆ ಅರೆನಿದ್ದೆಯ ಸುಖವನ್ನು ಕೊಡುತ್ತದೆ. ಲೌಕಿಕ, ಸಾಂಸಾರಿಕ ಸಂದರ್ಭಗಳ ಒಳಗೇ ಇವರ ಎಲ್ಲಾ ದೇವರು ಬರುವುದು. ಇದೊಂದು ಪೇಗನ್ ಮಾರ್ಗ; ವಿಶಿಷ್ಟವಾಗಿ ಭಾರತದ್ದು. ‘ರಾಮನ ಮನೆಯಲ್ಲಿ’ ಕೂಡ ಇದಕ್ಕೆ ಉದಾಹರಣೆ. ‘ಧ್ಯಾನ’ ಎನ್ನುವ ಪದ್ಯವೂ ಇದೇ ಬಗೆಯದು. ತಾತ್ವಿಕವಾಗಿಯೇ ನೇರವಾಗಿ ಕವಿ ಬರೆಯಲು ಹೊರಟಾಗ ಭೋಗದಲ್ಲಿ ಇಲ್ಲಿ ಸುಖ ಎನ್ನುವಂತಹ ಕೊಂಚ ಒರಟಾದ ನೈತಿಕತೆಯ ಮಾತುಗಳು ಹುಟ್ಟಿಕೊಳ್ಳುತ್ತವೆ. ಎಲ್ಲೆಲ್ಲಿ ಪರಮಹಂಸರು ಇವರ ಮೇಲೆ ಪ್ರಭಾವ ಬೀರಿದ್ದಾರೋ ಅಂತಹ ಕಡೆಗಳಲ್ಲೆಲ್ಲಾ ಕವಿ ತಮ್ಮಲ್ಲಿ ಮುಗ್ಧವಾಗಿರುವುದನ್ನು ಮಾತಿಗೆ ತರಬಲ್ಲವರಾಗುತ್ತಾರೆ. ಇಂತಹ ಕವಿಗೆ ನೀತಿ ಹೇಳುವ ಪ್ರಲೋಭನೆಯೂ ಇರುವುದು ಸಹಜ. ಆದ್ದರಿಂದಲೇ ಇಲ್ಲಿನ ಹಲವು ಪದ್ಯಗಳು ನಾವು ಕಣ್ಣು ಹಾಯಿಸುತ್ತಾ ಓದಿಬಿಡಬಲ್ಲವಂತೆ ಇವೆ. ಅವು ನಮ್ಮ ಮನಸ್ಸಲ್ಲಿ ನಿಲ್ಲುವುದಿಲ್ಲ. ಆದರೆ ಕವಿಯ ಬುದ್ಧಿಶಕ್ತಿಯೂ, ನೈತಿಕಪ್ರಜ್ಞೆಯೂ ಹಗುರಾಗಿ ಚುರುಕಾಗಿ ಹರಿದಾಡುವಾಗ ‘ಇರುವೆಯಲ್ಲಿ ಪರಮಾತ್ಮ’ ಎನ್ನುವಂತಹ ಪದ್ಯಗಳನ್ನು ಬರೆಯುವುದು ಸಾಧ್ಯವಾಗುತ್ತದೆ.

ಅಡಿಗರದೊಂದು ಸಾಲಿದೆ. ‘ಮಣ್ಣಿನೊಳಗಿನ ಸಹಿಷ್ಣು ಕತ್ತಲಿನಲ್ಲಿ ಇದೆ ಬೀಜ.’ ಇದನ್ನೇ ಚಿಂತಾಮಣಿ ಕೂಡ್ಲೆಕೆರೆಯವರು ‘ಆ ಪುಟ್ಟ ಬೀಜದಲ್ಲಿ’ ಎನ್ನುವಂತಹ ಪದ್ಯದಲ್ಲಿ ನಿರೂಪಿಸಿದ್ದಾರೆ. ಆದರೆ ನನ್ನ ಆಯ್ಕೆ ಇವತ್ತಿಗೂ ಅಡಿಗರ ರೀತಿಯ ಬರವಣಿಗೆಯದು. ನಾನು ಮೊದಲಲ್ಲಿ ಈ ಕವಿತೆಗಳನ್ನು ಓದುವಾಗ ಕೆಲವು ಕಡೆ ಪುರಂದರದಾಸರು ನೆನಪಾಗುತ್ತಾರೆ ಎಂದೆ. (ಪುರಂದರದಾಸರು ಬರೆಯದ ವಿಷಯವಿಲ್ಲ. ಅಮೆರಿಕದ ಮಾತುಗಾರ ವಿಟ್ಮನ್ ಕೂಡ ಬರೆಯದ ವಿಷಯವಿಲ್ಲ.) ದಾಸರಲ್ಲೂ ಲೌಕಿಕದ ಬಗ್ಗೆ ಕಟು ವ್ಯಂಗ್ಯವಿದೆ. ಆದರೆ ಚಿಂತಾಮಣಿ ಕೊಡ್ಲೆಕೆರೆಯಲ್ಲಿ ನಮ್ಮ ಕಾಲದ ಸಹಜವಾದ ವಿನೋದದ ವ್ಯಂಗ್ಯವಿದೆ. ಉದಾಹರಣೆಗೆ ಅವರು ತಮ್ಮೊಂದು ಪದ್ಯದಲ್ಲಿ ಕುಕವಿಗಳಿಗೆ ಕೊಡುವ ಸೂಚನೆಗಳು.

ಪೇಗನ್ ನಾಗರಿಕತೆಯ ಫಲವಾದ ಬರವಣಿಗೆ ಇವರಲ್ಲಿದೆ ಎಂದೆ. ‘ಸೊಂಡಿಲ ದೇವರು’, ‘ಹೂ ದೇವರು’ ಈ ಬಗೆಯ ದೇವವಿಲಾಸಕ್ಕೂ ಉಲ್ಲಾಸಕ್ಕೂ ಉದಾಹರಣೆ.

ಒಟ್ಟಿನಲ್ಲಿ ಚಿಂತಾಮಣಿ ಕೊಡ್ಲೆಕೆರೆ ಕವಿತೆ ಬರೆಯುವುದು ಮನಸ್ಸಿನ ನೆಮ್ಮದಿಗಾಗಿ. ಶೋಧಿಸುವ ಧಗೆಯ ದಿವ್ಯಕ್ಕಲ್ಲ. ಅಂತಹ ದಿವ್ಯವನ್ನು ನಾವು ಕಾಣುವುದು ಅಡಿಗರಲ್ಲಿ. ಆದರೆ ಅಡಿಗರಂಥವರಿಗೆ ಸಾಧ್ಯವಾಗದ (ಅವರ ಅಪೇಕ್ಷೆಯೂ ಆಗಿರದ) ಸಾಂಸಾರಿಕತೆಯಲ್ಲೇ ಅಲೌಕಿಕದ ಸೂಚನೆಗಳನ್ನು ಕಾಣುವ ಕವಿತೆಗಳನ್ನು ಬರೆಯಬಲ್ಲವರು ಚಿಂತಾಮಣಿ ಕೊಡ್ಲೆಕೆರೆ. ಇವರ ಬರವಣಿಗೆಯಲ್ಲಿ ಎಲ್ಲೆಲ್ಲೂ ನಾವು ಪ್ಯಾರಬಲ್ಲುಗಳ ಮುಖಾಂತರ ಪರಮಹಂಸರಂತೆ ಮಾತಾಡುವ ಶಕ್ತಿಯನ್ನು ಕಾಣುತ್ತೇವೆ.

ಇದು ಸಾಮಾನ್ಯರಲ್ಲೂ ಅನಕ್ಷರಸ್ಥರಲ್ಲೂ ಇರುವ ಶಕ್ತಿ; ಖಂಡಿತ ಗೌಣವಲ್ಲ; ಮಹತ್ವದ್ದು. ಈ ಶಕ್ತಿಯನ್ನು ನಮ್ಮ ವಿದ್ಯಾವಂತ ವ್ಯವಹಾರದ ಒಬ್ಬ ಸಮಕಾಲೀನ ಕವಿ ಉಳಿಸಿಕೊಂಡಿದ್ದಾನೆಂಬುದೂ, ಯಥೋಚಿತವಾಗಿ ಬೆಳೆಸಬಲ್ಲನೆಂಬುದೂ ನನಗೆ ಮುಖ್ಯವೆನ್ನಿಸಿದೆ.