ನಾನು ಕೊಟ್ಟಾಯಂನಲ್ಲಿ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ ಆಗಿದ್ದಾಗ ನನಗೆ ಬಹಳ ಹತ್ತಿರವಾದವರಲ್ಲಿ ಓ.ಎನ್.ವಿ. ಕುರುಪ್‌ರು ಒಬ್ಬರು. ನಾನು ಅವರನ್ನು ಹುಡುಕಿಕೊಂಡು ಹೋದದ್ದುಂಟು. ಅವರು ಹಲವು ಬಾರಿ ನಮ್ಮ ವಿಶ್ವವಿದ್ಯಾಲಯಕ್ಕೆ ಬಂದದ್ದುಂಟು. ಹಲವು ಸೆಮಿನಾರ್‌ಗಳಲ್ಲಿ ಮತ್ತು ವಿದ್ವತ್ ಸಭೆಗಳಲ್ಲಿ ಅವರನ್ನು ನೋಡಿದ್ದೇನೆ. ಈ ಕಾಲದ ಮಲಯಾಳಿ ಸಾಹಿತ್ಯ ವಲಯದಲ್ಲಿ ಎಲ್ಲರೂ ಇಷ್ಟಪಡುವ ಕವಿಯೆಂದರೆ ಓ.ಎನ್.ವಿ.ಯವರು.

ನನಗೆ ಅವರಲ್ಲಿ ಬಹಳ ಇಷ್ಟವಾದ ಪದ್ಯವೊಂದಿದೆ. ಆಶ್ಚರ್ಯವೆಂದರೆ ಅಡಿಗರ ಭೂಮಿಗೀತದಂತೆಯೇ ಭೂಮಿಯ ಬಗ್ಗೆ ಬರೆದ ದೀರ್ಘವಾದ ಪದ್ಯ ಇದು. ಈ ಎರಡು ಪದ್ಯಗಳ ನಡುವಿನ ವ್ಯತ್ಯಾಸವೂ ನನಗೆ ಕುರುಪ್‌ರ ಕಾವ್ಯಮಾರ್ಗವನ್ನು ಅರಿಯಲು ಸಹಾಯಕವಾಗಿತ್ತು. ಅಡಿಗರಲ್ಲಿ ಭೂತಾಯಿಯ ನಿಜವಾದ ಮಕ್ಕಳು ಹುಲಿ, ಚಿರತೆ, ಆನೆ ಕೋಡಗ ಕತ್ತೆ ಇಂತಹ ಪ್ರಾಣಿಗಳು. ಡಿ.ಎಚ್. ಲಾರೆನ್ಸ್ ಅವನದೊಂದು ಸ್ನೇಕ್ ಎನ್ನುವ ಪದ್ಯದಲ್ಲಿ ಹಾವನ್ನು ‘ಲಾರ್ಡ್ ಆಫ್ ಲೈಫ್’ (Lord of Life) ಎನ್ನುತ್ತಾರೆ. ಮನುಷ್ಯ Lord of Life ಅಲ್ಲ. ಲಾರೆನ್ಸ್‌ನಿಂದ ಪ್ರೇರಿತರಾದ ಅಡಿಗರು ಮನುಷ್ಯ-ಭೂಮಿ ಮತ್ತು ಆಕಾಶದ ಸಂಗಮದಿಂದಾಗಿ ಎಡಬಿಡಂಗಿಯಾಗಿ ಕಾಣಿಸುತ್ತಾನೆ ಎಂದು ಭೂಮಿಗೀತದಲ್ಲಿ ನಿರೂಪಿಸುತ್ತಾರೆ. ಮಲಯಾಳಂ ಓದಲು ಬಾರದ ನನ್ನ ಸುಮಾರು ಎರಡು ದಶಕಗಳ ಹಿಂದಿನ ನೆನಪಿನಿಂದ ಹೇಳುವುದಾದರೆ ಮಾರ್ಕ್ಸ್‌ವಾದದಿಂದ ಪ್ರಭಾವಿತರಾದ ಓ.ಎನ್.ವಿ.ಯವರಿಗೆ ಈ ಭೂಮಿ ತಾಯಿಯಿದ್ದಂತೆ. ಅಡಿಗರಿಗೆ ಮಲತಾಯಿಯಿದ್ದಂತೆ. ಈ ದೃಷ್ಟಿಯಿಂದ ಓ.ಎನ್.ವಿ.ಯವರು ನಮ್ಮ ನವೋದಯದ ಜೀವನವನ್ನು ಕೀರ್ತಿಸುವ ಕವಿಗಳ ಸಾಲಿನವರು.

ಮಲಯಾಳದಲ್ಲಿ ಎಲ್ಲ ಬಗೆಯ ಕಾವ್ಯವೂ ಇದೆ. ನವೋದಯ, ಬಂಡಾಯ, ನವ್ಯ- ಎಲ್ಲವೂ ಪ್ರಸ್ತುತವಾಗಿಯೇ ಉಳಿದಿವೆ. ಗತಿಸಿದ ಅಯ್ಯಪ್ಪ ಫಣಿಕ್ಕರ್‌ರಲ್ಲಿ ಹಾಗೂ ಗತಿಸಿದ ಕಡಮನಾಟ್ ರಾಮಕೃಷ್ಣನ್ ಕವಿಯಲ್ಲಿ ಎರಡು ಬಗೆಯಾಗಿ ಕಾವ್ಯ ಹರಿಯುತ್ತದೆ. ಅಯ್ಯಪ್ಪ ಫಣಿಕ್ಕರ್‌ರಲ್ಲಿ ಮತ್ತು ಸಚ್ಚಿದಾನಂದನ್ ಅವರಲ್ಲಿ ಕಾವ್ಯ ಹಲವು ಪ್ರಯೋಗಗಳ ನವ್ಯವಾಗಿದೆ. ಆದರೆ ಕಡಮನಾಟ್ ರಾಮಕೃಷ್ಣರಲ್ಲಿ ಕವಿತಾರಚನೆ ಆದಿಮ ಶಕ್ತಿಯ ಪುರಾಣಗಳನ್ನು ಸೃಷ್ಟಿಸುವ ಕಾವ್ಯವಾಗಿದೆ. ಇಂಥವರ ನಡುವೆ ಓ.ಎನ್.ವಿ. ತಮ್ಮದೇ ಜೀವಪರವಾದ ನಿಲುವುಗಳನ್ನು ಹಾಡುವಂತೆ ಪಠಿಸಬಲ್ಲ ಘನೋದ್ದೇಶದ ಕವಿಗಳಾಗಿ ಉಳಿದಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ನಾನು ಇವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬಹುದೆಂದು ನಿರೀಕ್ಷಿಸಿದ್ದೆ.

ಎಂಬತ್ತೇಳರಲ್ಲಿ ನಾನು ಕೇರಳ ತಲುಪಿದಾಗ ಮೊದಲು ನನ್ನನ್ನು ಭೇಟಿಯಾದವರಲ್ಲಿ ಓ.ಎನ್.ವಿ. ಮುಖ್ಯರು. ಮೇಲೆ ಹೆಸರು ಹೇಳಿದ ಕವಿಗಳ ಪರಿಚಯ ಮಾತ್ರ ನನಗಿತ್ತು. ಓ.ಎನ್.ವಿ. ನನ್ನನ್ನು ಕಂಡೊಡನೆಯೇ ಮಲಯಾಳಂ ಲಿಪಿಯನ್ನು ಕಲಿವ ಸುಲಭವಾದ ಮಾರ್ಗವೊಂದನ್ನು ಹೇಳಿಕೊಟ್ಟರು. ನಿನಗೆ ಗೊತ್ತಿರುವ ಕನ್ನಡ ಲಿಪಿಯನ್ನು ಕೊಂಚ ಬಲಕ್ಕೋ ಎಡಕ್ಕೋ ವಾಲಿಸಿ ಅದರಲ್ಲಿ ಕನ್ನಡ ಲಿಪಿಯ ಛಾಯೆಯನ್ನು ಗುರುತಿಸುವುದನ್ನು ಕಲಿ; ನಿನಗೆ ಆಗ ಕ್ರಮೇಣ ಮಲಯಾಳಂ ಲಿಪಿಯನ್ನು ಗುರುತಿಸುವುದು ಸಾಧ್ಯವಾಗುತ್ತದೆ ಎಂದು. ಓ.ಎನ್.ವಿ. ಹೇಳಿದ್ದನ್ನು ಸತತವಾಗಿ ನಾಲ್ಕು ವರ್ಷಗಳ ಕಾಲವೂ ನಾನು ಗಮನಿಸುತ್ತಲೇ ಹೋಗಿ ಅಷ್ಟಿಷ್ಟು ಓದಲು ಕಲಿತಿದ್ದೆ. ಬಹಳ ಹಿಂದೆ ಕೇರಳದಲ್ಲಿ ಬದುಕಿದ ನನ್ನ ಅಜ್ಜ ನಾಮಫಲಕಗಳನ್ನು ಗಮನಿಸುತ್ತ ನನಗಿಂತ ಚೆನ್ನಾಗಿ ಮಲಯಾಳಂನ್ನು ಓದಬಲ್ಲವರಾಗಿದ್ದರು. ಕೇರಳದಲ್ಲಿ ಗೆಳೆಯ ರಷೀದ್ ಬಗ್ಗೆ ನಾನು ಹೇಳಿದ್ದನ್ನು ಈಗಲೂ ನೆನೆಯುವವರಿದ್ದಾರೆ. ಅನಕ್ಷರಸ್ಥನಾದ ಮಲಯಾಳಿ ಇವನೊಬ್ಬನೇ ಎಂದು ಸೆಮಿನಾರ್ ಸಂದರ್ಭದಲ್ಲಿ ನಾನು ಹೇಳಿದ್ದೆ.

ಲಿಪಿಯನ್ನು ಮಾತ್ರವಲ್ಲದೇ ಕೆಲವು ವಾಕ್ಯಗಳನ್ನೂ ಮಾತಾಡಲು ಓ.ಎನ್.ವಿ. ನನಗೆ ಕಲಿಸಿದ್ದರು. ನಾನು ಸೆನೆಟ್ ಸಭೆಯಲ್ಲಿ ಮಲಯಾಳಂ ಭಾಷೆ ವಿದ್ಯಾಭ್ಯಾಸದ ಮೊದಲ ಭಾಷೆಯಾಗಬೇಕು ಎಂದು ತೀರ್ಮಾನಿಸಿದ್ದೆ. ಇದರಿಂದ ಓ.ಎನ್.ವಿ. ಪುಳಕಿತರಾಗಿ ಅವರು ಮಾತಾಡಿದ ಅನೇಕ ಸಭೆಗಳಲ್ಲಿ ಕನ್ನಡಿಗನೊಬ್ಬ ಮಲಯಾಳಂ ಭಾಷೆಯ ಪ್ರಾಧಾನ್ಯಕ್ಕೆ ಶ್ರಮಿಸಿದ್ದನ್ನು ಪ್ರೀತಿಯಿಂದ ನೆನೆಯುತ್ತಿದ್ದರು. ಹಾಗೆಯೇ ಕೆಲವು ವರ್ಷಗಳ ಹಿಂದೆ ಶ್ರೀ ಆಂಟೋನಿ ಮುಖ್ಯಮಂತ್ರಿಯಾಗಿದ್ದಾಗ ಪ್ರೈಮರಿ ಶಾಲೆಯ ಅಧ್ಯಯನದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ಎನ್ನುವ ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷನನ್ನಾಗಿ ನನ್ನನ್ನು ಮಾಡಿದ್ದರು. ವಿದ್ಯಾರ್ಥಿಗಳು ಕ್ರಮೇಣ ಕಡಿಮೆಯಾಗುತ್ತಿರುವ, ಆದರೆ ನಿಜವಾದ ಒಳ್ಳೆಯ ಅಧ್ಯಾಪಕರಿರುವ ಸರಕಾರಿ ಶಾಲೆಗಳಿಗೆ ಮತ್ತೆ ವಿದ್ಯಾರ್ಥಿಗಳು ಸೇರುವಂತೆ ಮಾಡಲು ನಾನೊಂದು ಉಪಾಯ ಸೂಚಿಸಿದ್ದೆ. ‘ಮೊದಲ ಮೂರು ವರ್ಷ ಇಂಗ್ಲಿಷನ್ನು ಓದಲು ಬರೆಯಲು ಕಲಿಸುವುದು ಬೇಡ. ಆದರೆ ಸಾಧ್ಯವಿದ್ದಷ್ಟು ಮಾತಾಡುವುದನ್ನು ಮಕ್ಕಳಿಗೆ ಕಲಿಸೋಣ; ಆದರೆ ಅವರು ಕಲಿಯಬೇಕಾದ ಎಲ್ಲ ವಿಷಯವನ್ನೂ ಮಲಯಾಳಿ ಮಾಧ್ಯಮದಲ್ಲಿ ಮಾತ್ರ ಕಲಿಸೋಣ’ ಎಂದು. ಈ ನನ್ನ ಸಲಹೆಗೆ ಕಾರಣ ಇಂಗ್ಲಿಷ್ ಮಾಧ್ಯಮದ, ಇಂಗ್ಲಿಷ್ ವ್ಯಾಮೋಹದ, ಕೆಟ್ಟ ರೀತಿಯ ಶಿಕ್ಷಣದ, ಖಾಸಗೀ ಶಾಲೆಗಳು ಮಕ್ಕಳ ತಂದೆ-ತಾಯಿಗಳಿಗೆ ಆಕರ್ಷಕವಾಗದಂತೆ ಮಾಡುವುದಾಗಿತ್ತು. ಅಲ್ಲದೇ ಎಲ್ಲಾದರೂ ಹೋಗಿ ಬದುಕಬೇಕಾದ ಮಲಯಾಳಿಗಳನ್ನು ಎರಡು ಭಾಷೆಗಳಲ್ಲೂ ಸಲ್ಲುವವರಂತೆ ಮಾಡುವುದೂ ಆಗಿತ್ತು. ವ್ಯಾಪಾರೀ ಮನೋವೃತ್ತಿಯ ಇಂಗ್ಲಿಷ್ ಮಾಧ್ಯಮದ ಖಾಸಗೀ ಶಾಲೆಗಳ ಹಾವಳಿಯಿಂದ ಪಾರು ಮಾಡುವ ಈ ಕ್ರಮಕ್ಕೆ ಖಾಸಗೀ ವಲಯದಿಂದ ತುಂಬ ವಿರೋಧ ಬಂದಿತ್ತು. ಈ ವಿರೋಧದ ನಡುವೆಯೂ ನನ್ನ ವಿಚಾರದ ಪರವಾಗಿ ದನಿಯೆತ್ತಿ ಮಾತಾಡಿದವರು ನನಗೆ ಹಿರಿಯರಾದ ಓ.ಎನ್.ವಿ.ಯವರು. ಇವರು ಕವಿ ಮಾತ್ರರಾಗಿ ಉಳಿಯಲಿಲ್ಲ. ಒಬ್ಬ ನಾಗರಿಕ ಪ್ರಜೆ ಆಡಬೇಕಾದ್ದನ್ನು ಅಂಜದಂತೆ ಆಡಬಲ್ಲವರಾಗಿದ್ದರು.

ಓ.ಎನ್.ವಿ. ಜನಪರ ಕವಿ ಮಾತ್ರವಲ್ಲ. ಜನಪ್ರಿಯ ಕವಿಯೂ, ಘನಪಂಡಿತರೂ ಎನ್ನಬಹುದು. ಒಟ್ಟಾಗಿ ಈ ಮೂರು ಶಬ್ದಗಳನ್ನು ಹಲವರ ಬಗ್ಗೆ ಹೇಳುವುದು ಸಾಧ್ಯವಿಲ್ಲ.