ಕೆಲವು ವರ್ಷಗಳ ಹಿಂದೆ ದೆಹಲಿಗೆ ಕನ್ನಡ ಮಾತನಾಡುವ ದಿಗಂಬರ ಮುನಿಗಳೊಬ್ಬರು ಬಂದಿದ್ದರು. ದೆಹಲಿಯ ಶ್ರೀಮಂತ ಕುಟುಂಬವೊಂದರಲ್ಲಿ ಆಶ್ರಯ ಪಡೆದಿದ್ದರು. ಅವರು ಹಲವು ತಿಂಗಳುಗಳ ಕಾಲ ದಣಿದಲ್ಲಿ ತಂಗುತ್ತಾ ಕಾಲ್ನಡಿಗೆಯಲ್ಲೇ ಬಂದಿದ್ದರೆಂದು ಕೇಳಿದ್ದೆ. ದಿನಕ್ಕೊಮ್ಮೆ ಮಾತ್ರ ಅವರು ಆಹಾರವನ್ನು ಒಡ್ಡಿದ ಕೈಯಲ್ಲಿ ಭಿಕ್ಷೆಯಾಗಿ ಸ್ವೀಕರಿಸುತ್ತಿದ್ದರು. ನೀರೂ ಸೇರಿದಂತೆ ಅದೆಷ್ಟೋ ನಿಯಮಿತವಾಗಿ ಬೊಗಸೆ ಅವರ ಊಟ. ಈ ಬೆತ್ತಲೆ ಸಂತರ ಕೈಯಲ್ಲಿ ಸೆಖೆಯಾದಾಗ ಬೀಸಿಕೊಳ್ಳಲು ಅಥವಾ ಮಾನ ಮುಚ್ಚಿಕೊಳ್ಳಲು ಬಳಸಬಹುದಾದ ಬೀಸಣಿಗೆಯೊಂದೂ ಇತ್ತು. ನೋಡುವವರಿಗೆ ಮುಜುಗರವಾಗದಿರಲಿ ಎಂದೋ ಬೆತ್ತಲೆಯ ಪ್ರದರ್ಶನವೇ ಹೆಮ್ಮೆಯಾಗದಿರಲಿ ಎಂದೋ ಈ ಬೀಸಣಿಗೆ ಇದ್ದಿರಬಹುದು. ಅವರದು ಒಂದೊಂದೇ ಕೂದಲನ್ನು ಕಿತ್ತು ಕಿತ್ತು ಬೋಳಾದ ತಲೆ.

ದೆಹಲಿಯ ಸೆಂಟರ್ ಫಾರ್ ಸ್ಟಡೀಸ್ ಆಫ್ ಡೆವಲಪ್‌ಮೆಂಟ್‌ನ ನನ್ನ ಧೀಮಂತ ಮಿತ್ರರಿಗೆ ಈ ಯತಿ ಬಂದದ್ದು ತಿಳಿಯಿತು. ಈ ಯತಿಯ ಜೊತೆ ಸಂವಾದ ಮಾಡಬೇಕೆಂಬ ಆಸೆ ಹುಟ್ಟಿತು. ಆ ಗೆಳೆಯ ನನ್ನನ್ನು ಒಬ್ಬ ದುಬಾಷಿಯಾಗಿ ಅವರ ಬಳಿಗೆ ಕರೆದುಕೊಂಡು ಹೋದರು.

ನಾವು ಚಾಪೆಗಳನ್ನು ಹಾಸಿದ ಒಂದು ವಿಶಾಲವಾದ ನಿರ್ಮಲವಾದ ಹಾಲ್‌ನಲ್ಲಿ ಕೂತು ಕಾದೆವು. ವಿಶ್ರಾಂತಿಯಲ್ಲಿದ್ದ ಯತಿಗಳು ನಮ್ಮನ್ನು ಕಾಯಿಸದಂತೆ ಎದ್ದು ನಾವು ಕೂತಲ್ಲಿಗೆ ನೇರ ನಡೆದುಬಂದರು. ಇದು ನಮಗೆ ವಿಚಿತ್ರವಾದ ಅನುಭವ. ಬೋಳು ತಲೆ ಬೋಳು ಮೈಯ ಕೃಶರಾದ ಈ ಯತಿಯನ್ನು ಕಣ್ಣೆತ್ತಿ ನೋಡಲಾರದೆ ಎಲ್ಲರೂ ನಾಚಿ ಕೂತಿದ್ದವರು ಗೌರವದಲ್ಲಿ ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದಂತೆಯೇ ಅದಕ್ಕೆ ಅವಕಾಶ ಕೊಡದಂತೆ ಯತಿಗಳು ಎಲ್ಲರಿಗೂ ಕೈಮುಗಿದು ಅತ್ಯಂತ ಸಹಜವೆಂಬಂತೆ ನಸುನಗುತ್ತಾ ಕುಳಿತರು.

ಏನು ಪ್ರಶ್ನೆ ಕೇಳುವುದು ಎಂಬುದೇ ನಮ್ಮ ನಡುವಿನ ಸಮಸ್ಯೆಯಾಯಿತು. ಪದ್ಮಾಸನವೇ ಸುಖಾಸನವಾದ ಯತಿಯನ್ನು ಉದ್ದೇಶಿಸಿ ನಮ್ಮಲ್ಲಿ ಒಬ್ಬರು ಒಂದು ಪ್ರಶ್ನೆಯನ್ನು ಕೇಳಿದರು. ಅದೊಂದು ಸಾದಾ ಸೀದಾ ಎನಿಸುವಂಥ ಸಾಮಾನ್ಯ ಪ್ರಶ್ನೆ. ‘ಈ ಕಾಲದಲ್ಲಿ ಅಪರಾಧಗಳು ಹೆಚ್ಚುತ್ತ ಇವೆಯಲ್ಲವೇ ಸ್ವಾಮೀಜಿ? ಇದನ್ನು ನಿವಾರಿಸುವ ಉಪಾಯವೇನೆಂದು ನಿಮ್ಮನ್ನು ಕೇಳಬಹುದೇ?’

ಯತಿಗಳು ಒಂದು ಕ್ಷಣವೂ ಯೋಚಿಸಲಿಲ್ಲ. ಮುಗುಳ್ನಗುತ್ತಲೇ ಉತ್ತರಿಸಿದರು. ‘ನಾವು ಈಚೆಗೆ ಅಪರಾಧಿಗಳು ಹೆಚ್ಚಾಗುವಂಥ ಕಾನೂನುಗಳನ್ನು ಸರ್ಕಾರದ ಬಲ ಪ್ರದರ್ಶನಕ್ಕೆಂದು ಸೃಷ್ಟಿಸುತ್ತಿದ್ದೇವೆ. ಆದ್ದರಿಂದ ಅಪರಾಧಿಗಳು ಹೆಚ್ಚಾಗಿರುವಂತೆ ನಮಗೆ ಕಾಣತೊಡಗುತ್ತದೆ. ಈ ಅನವಶ್ಯಕ ಕಾನೂನುಗಳನ್ನು ಮಾಡದಿದ್ದರೆ ಸಾಮಾನ್ಯ ಜನರು ಶಿಕ್ಷಾರ್ಹ ಅಪರಾಧಿಗಳೆಂದು ನಮಗೆ ತೋರುತ್ತಲೇ ಇರುತ್ತಿರಲಿಲ್ಲ.’

ಪ್ರಶ್ನೆ ಕೇಳಿದವರು ಸುಮ್ಮನಿದ್ದುದನ್ನು ಗಮನಿಸಿ ಯತಿಗಳು ಹೇಳಿದರು. ಉದಾಹರಣೆಗೆ ನೀವು ಕಾರನ್ನು ರಸ್ತೆಯ ಎಡಕ್ಕೇ ಚಲಿಸಬೇಕೆಂಬ ನಿಯಮ ಇದೆ ಅಲ್ಲವೇ….? ಇದು ಅಪರಾಧ ಸೃಷ್ಟಿಸುವ ಕಾನೂನು ಅಲ್ಲ. ಸರ್ವಜನ ಹಿತಕ್ಕಾಗಿ ಅನಾಹುತವಾಗದಂತೆ ಮಾಡಿಕೊಂಡ ಒಪ್ಪಂದ.

*

ನಮ್ಮ ಕರ್ನಾಟಕ ಸರ್ಕಾರ ತರುತ್ತಿರುವ ಜಾನುವಾರು ಹತ್ಯೆ ನಿಷೇಧಿಸುವ ಕಾನೂನು ಅಪರಾಧಿಗಳಲ್ಲದವರನ್ನು ಅಪರಾಧಿಗಳನ್ನಾಗಿಸುವ ಕಾನೂನು. ಇಡೀ ದೇಶದಲ್ಲಿ ವ್ಯವಸಾಯಕ್ಕೆ ಹಾಗು ಹಾಲಿಗೆ ಅಗತ್ಯವಾದ ಜಾನುವಾರುಗಳು, ಜನರ ತೆವಲಿನ ಮಾಂಸವಾಗಿ ನಶಿಸಿ ಹೋಗುತ್ತಿರುವ ಅಪಾಯವೇನಾದರೂ ಇದ್ದಿದ್ದರೆ ಸಹಜವಾಗಿಯೇ ಅದಕ್ಕೆ ರೈತರಿಂದಲೇ ವಿರೋಧ ಬಂದು ಜಾನುವಾರುಗಳನ್ನು ಕೊಂದು ತಿನ್ನುವುದು ಎಲ್ಲರಿಗೂ ತಪ್ಪಾಗಿ ಕಾಣುತ್ತಾ ಇತ್ತು…. ಅಥವಾ ಈ ಅಗತ್ಯವನ್ನು ಮನಗಾಣದೆ ಅವುಗಳನ್ನು ಕೊಂದವರನ್ನು ಜನಹಿತಕ್ಕೆ ವಿರೋಧಿಗಳೆಂದು ಕಾಣಬಹುದಿತ್ತು. ಕಾನೂನು ಮಾಡದೆಯೇ ಅದನ್ನು ತಡೆಗಟ್ಟುವ ಉಪಾಯಗಳನ್ನು ಹುಡುಕಬಹುದಿತ್ತು. ಸಾಯಲಿರುವ ಜಾನುವಾರು ಸತ್ತ ಜಾನುವಾರು-ಇವುಗಳ ಮಾಂಸ ಕಡಿಮೆ ಬೆಲೆಯಲ್ಲಿ ಸಿಗಬಹುದಾದ್ದರಿಂದ ಅದನ್ನು ತಿನ್ನುವವರು ಇದ್ದೇ ಇರುತ್ತಾರೆ. ಆರೋಗ್ಯವಂತ ಜಾನುವಾರನ್ನು ಕೊಲ್ಲುವುದು ಅನವಶ್ಯಕವೆಂಬುದು ಎಲ್ಲರಿಗೂ ಈತನಕವೂ ಮನದಟ್ಟಾಗಿಯೇ ಉಳಿದಿದೆ. ನಾವೇನೂ ಭಾರತದಲ್ಲಿ ಬೇರೆ ದೇಶದವರಂತೆ ಮಾಂಸಕ್ಕಾಗಿಯೇ ಜಾನುವಾರುಗಳನ್ನು ಸಾಕುವುದು ಪದ್ಧತಿಯಲ್ಲಿ ಇಲ್ಲ.

ಒಬ್ಬ ರೈತ ಯಾವ ಮತದವನೇ ಆಗಿರಲಿ ಜಾನುವಾರನ್ನು ಸಾಕಿಕೊಂಡಿದ್ದಾನೆ ಎಂದುಕೊಳ್ಳೋಣ. ಈ ಜಾನುವಾರು ಕೇವಲ ಹಾಲನ್ನು ಪಡೆಯುವ ಉದ್ದೇಶದಿಂದ ಸಾಕಿಕೊಂಡದ್ದಾದರೆ ಅದು ಹಾಲು ಕೊಡುವ ಸಾಮರ್ಥ್ಯ ಬತ್ತುತ್ತ ಹೋದಂತೆ, ಮತ್ತೆ ಗರ್ಭ ನಿಲ್ಲುವುದು ಕಷ್ಟವಾದಂತೆ ರೈತನಿಗೆ ಅದು ಹೊರೆಯಾಗುತ್ತದೆ. ಅದನ್ನು ಮಾರಿಯೇ ಅವನು ಬೇರೆ ಜಾನುವಾರನ್ನು ಕೊಳ್ಳಬೇಕಾಗುತ್ತದೆ. ಈ ಜಾನುವಾರಿನಿಂದ ಈ ಸಗಣಿಯಾದರೂ ಸಿಗುತ್ತದೆ ಎಂದುಕೊಳ್ಳೋಣ. ಆದರೆ ನಮ್ಮ ವ್ಯವಸಾಯ ಪದ್ಧತಿ ರಾಸಾಯನಿಕ ಗೊಬ್ಬರಗಳಿಂದಲೂ ಕ್ರಿಮಿನಾಶಕಗಳಿಂದಲೂ ನಡೆಯತೊಡಗಿರುವುದರಿಂದ ಸಗಣಿಗೆ ಅಂಥ ಮಹತ್ವ ಉಳಿದುಕೊಂಡಿಲ್ಲ. ಗೊಬ್ಬರದ ದೃಷ್ಟಿಯಿಂದ ಕಂಡಾಗ ಒಂದು ದನ ಉಪಯೋಗದ ವಸ್ತುವಾಗಿಯೇ ಉಳಿದಿರುತ್ತದೆ. ಗೊಬ್ಬರದ ಬಳಕೆ ಕಡಿಮೆಯಾಗುತ್ತಾ ಹೋದಂತೆ ಅದು ಮಾಂಸವಾಗುವುದು ಜಾನುವಾರನ್ನು ಸಾಕುವ ದೃಷ್ಟಿಯಿಂದಲೇ ಅನಿವಾರ್ಯವಾಗುತ್ತದೆ.

ನಾವು ವ್ಯವಸಾಯವನ್ನು ಆಧುನಿಕಗೊಳಿಸುತ್ತಾ ಈಚೆಗೆ ಟ್ರಾಕ್ಟರ್ ಅನ್ನೇ ಹೆಚ್ಚು ಬಳಸುತ್ತಿದ್ದೇವೆ. ಜಾನುವಾರಿನ ಅಗತ್ಯ ವ್ಯವಸಾಯಕ್ಕೆ ಮುಖ್ಯವೆನಿಸಬೇಕಾದರೆ ನಾವು ಟ್ರಾಕ್ಟರ್ ಅನ್ನು ಬಳಸಕೂಡದು. ಎತ್ತನ್ನು ಕಟ್ಟಿ ಉಳುವುದು ಕಡಿಮೆಯಾಗುತ್ತಾ ಹೋದಂತೆ ಹೆಚ್ಚು ಜನರು ಟ್ರಾಕ್ಟರುಗಳನ್ನು ಕೊಂಡು ಬ್ಯಾಂಕಿನ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸರ್ವವಿಧಿತವಾಗಿದೆ. ಈಗ ಮೊದಲಿನಂತೆ ಎಲ್ಲ ರೈತರೂ ಜಾನುವಾರು ಸಾಕುವುದನ್ನು ನಿಲ್ಲಿಸಿದ್ದಾರೆ ಕೂಡಾ. ಹಿಂದೊಂದು ಕಾಲದಲ್ಲಿ ಮಾನವನ ಜೀವನಕ್ಕೆ ಸಸ್ಯ ಲೋಕದ ಜೊತೆಗೂ ಪ್ರಾಣಲೋಕದ ಜೊತೆಗೂ ಸಂಬಂಧಗಳು ಅನಿವಾರ್ಯವೆನಿಸಿತ್ತು. ಹಳ್ಳಿಯಲ್ಲಿ ಯಾರ ಮನೆಯಲ್ಲಾದರೂ ಕೊಟ್ಟಿಗೆಯಲ್ಲಿ ಒಂದಿಷ್ಟು ದನ, ಅಂಗಳದಲ್ಲೊಂದು ತುಳಸಿ ಕಟ್ಟೆ ಸಾಂಕೇತಿಕವಾಗಿ ಪ್ರತಿಬಿಂಬಿಸುತ್ತಿತ್ತು. ಇಂಥ ಸಂಬಂಧಗಳು ಪವಿತ್ರವೆನಿಸುವುದಕ್ಕೆ ಆರ್ಥಿಕ ಕಾರಣಗಳೂ ಇದ್ದವು. ಈಗ ದನಗಳು, ಎಮ್ಮೆಗಳು ಮುದಿಯಾದರೆ ಅವಕ್ಕೆ ಮೇಯಲು ಹುಲ್ಲಿಲ್ಲ…. ಗೋಮಾಳಗಳೂ ಇಲ್ಲ. ಇದನ್ನು ಖರೀದಿಸಿ ಜಾನುವಾರು ಹೊಟ್ಟೆ ತುಂಬಲು ರೈತನಿಗೆ ಕೈಯಲ್ಲಿ ಕಾಸಿಲ್ಲ. ಅವನಿಗೆ ಹೊರೆಯಾಗದೆಯೇ ಜಾನುವಾರುಗಳಿಗೆ ಆಹಾರ ಒದಗಿಸುತ್ತಿದ್ದ ಗೋಮಾಳಗಳು ಅಭಿವೃದ್ಧಿಯ ಆರ್ಭಟದಲ್ಲಿ ಇಲ್ಲದಂತಾಗಿವೆ.

ಈ ಸಮಸ್ಯೆಯನ್ನು ಕೇವಲ ಆಹಾರದ ಸಮಸ್ಯೆಯೆಂದು ನೋಡಿ ಒಂದೋ ಮುಸ್ಲಿಮರನ್ನೋ ಕ್ರೈಸ್ತರನ್ನೋ ದಲಿತರನ್ನೋ ಪೇಚಿಗೆ ಸಿಕ್ಕಿಸುವ ಹುನ್ನಾರ ಮಾಡುತ್ತಾರೆ. ನನ್ನ ದೃಷ್ಟಿಯಲ್ಲಿ ಈ ಸಮಸ್ಯೆಯನ್ನು ಎತ್ತಿಕೊಳ್ಳುವವರು ಮುಸ್ಲಿಮರನ್ನೂ ಕ್ರೈಸ್ತರನ್ನೂ ದಲಿತರನ್ನೂ ಮುಂದಿಟ್ಟುಕೊಂಡು ಚರ್ಚಿಸುವುದು ಅಪಾಯ. ಈಗಾಗಲೇ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಎನ್ನುವ ಒಂದು ದುಷ್ಟ ಶಬ್ದ ಚಾಲ್ತಿಯಲ್ಲಿ ಬಂದುಬಿಟ್ಟಿದೆ. ಇದು ಕೇವಲ ಹಿಂದೂಗಳ ದೇಶವಲ್ಲ. ಮುಸ್ಲಿಮರೂ ಕ್ರೈಸ್ತರೂ ದಲಿತರೂ ಎಲ್ಲರೂ ದೇಶೀಯರೇ. ಆದ್ದರಿಂದ ಇವರ ನಡುವೆ ಅನಗತ್ಯವಾದ ಬಿರುಕನ್ನು ಉಂಟುಮಾಡುವಂಥ ಆರ್ಥಿಕ ಪ್ರಶ್ನೆಗಳನ್ನು ನೈತಿಕ ಪ್ರಶ್ನೆಗಳನ್ನಾಗಿ ಮಾಡುವ ಕ್ರಮ ಅತ್ಯಂತ ಅಪಾಯಕಾರಿಯಾದುದು.

*

ನಮ್ಮೆಲ್ಲರಿಗೂ ಗೊತ್ತಿರುವ ಕೆಲವು ವಿಷಯಗಳನ್ನು ಗಮನಕ್ಕೆ ತರಲು ಇಚ್ಛಿಸುತ್ತೇನೆ. ಮನೆಯಲ್ಲಿ ಎಲ್ಲರೂ ಮಾಂಸಾಹಾರಿಗಳಾಗಿದ್ದರೂ ಇದ್ದಕ್ಕಿದ್ದಂತೆ ಕೆಲವು ಮಕ್ಕಳು ಮಾಂಸಾಹಾರವನ್ನು ಬಿಟ್ಟು ಶಾಖಾಹಾರಿಗಳಾಗುತ್ತಾರೆ. ಶಾಖಾಹಾರಿಗಳಾಗಿ ಬೆಳೆದವರು ಆಧುನಿಕ ಪರಿಸರದಲ್ಲಿ ಮಾಂಸಾಹಾರಿಗಳಾಗುತ್ತಾರೆ. ಕುರಿ ಮತ್ತು ಕೋಳಿಯ ಮಾಂಸದ ಬೆಲೆ ಹೆಚ್ಚಿದಂತೆಲ್ಲಾ ದೇಹಕ್ಕೆ ಅಗತ್ಯವಾದ ಪ್ರೊಟೀನ್‌ಗಾಗಿ ಹಲವು ಬಡವರು ಕೇರಳದಲ್ಲಿ ಯಾವ ಮತದವರೇ ಆಗಿರಲಿ, ಗೋವಿನ ಮಾಂಸವನ್ನು ತಿನ್ನುವುದನ್ನು ನಾನು ಕಂಡಿದ್ದೇನೆ. ಹಾಗೆಯೇ ಮಾಂಸಾಹಾರಿಗಳಾದವರು ರೆಡ್‌ಮೀಟ್ ತಿನ್ನುವುದು ಹೃದಯಕ್ಕೆ ಅಪಾಯವೆಂದು ಕೇವಲ ಕೋಳಿಗಳನ್ನು ತಿನ್ನುವುದನ್ನೂ ನೋಡಿದ್ದೇನೆ.

ಪ್ರಾಣಿ ಹಿಂಸೆಯ ಪ್ರಶ್ನೆಯೇ ಹಲವರಿಗೆ ಮುಖ್ಯವಾಗಬಹುದು. ಆಗ ಅವರು ಕೋಳಿಯನ್ನೊ, ಕುರಿಯನ್ನೊ ಕಡಿಯುವುದನ್ನು ಇಷ್ಟಪಡುವುದಿಲ್ಲ. ತಿನ್ನುವವರು ಕೂಡಾ ಕಡಿಯುವುದನ್ನು ನೋಡಲು ಇಷ್ಟಪಡುವುದಿಲ್ಲ. ಎಲ್ಲ ಮಾಂಸವೂ ಅಂಗಡಿಯಲ್ಲಿ ಸಿಕ್ಕುವ ಇನ್ನೊಂದು ಪದಾರ್ಥವೆಂಬಂತೆ ಮಾಂಸಾಹಾರಿಗಳು ಅದನ್ನು ಕೊಳ್ಳುತ್ತಾರೆ. ಇದನ್ನು ಸಹಿಸದವರು ತಮ್ಮ ತಮ್ಮ ಜೀವನದಲ್ಲಿ ಸಸ್ಯಹಾರಿಗಳಾಗುತ್ತಾರೆ.

ಬುದ್ಧನದ್ದೊಂದು ಕಥೆ ಇದೆ. ಭಿಕ್ಷುವೊಬ್ಬ ಭಿಕ್ಷೆಗೆ ಹೋದಾಗ ಯಾವುದೋ ಮನೆಯವರು ಅವನಿಗೆ ಮಾಂಸದ ಅಡುಗೆಯನ್ನು ಬಡಿಸುತ್ತಾರೆ. ಅದನ್ನು ಅವನು ಇಷ್ಟಪಟ್ಟೇ ತಿಂದು ಆಮೇಲೆ ತಾನೇನಾದರೂ ಪಾಪ ಮಾಡಿದ್ದೇನೆಯೇ ಎಂಬ ಅಳುಕಿನಿಂದ ಬುದ್ಧನನ್ನು ಕೇಳುತ್ತಾನೆ. ‘ಇವತ್ತು ನನಗೆ ಮಾಂಸ ಭಿಕ್ಷೆಯಾಗಿ ಸಿಕ್ಕಿತು. ಅದನ್ನು ತಿಂದು ಹಸಿವನ್ನು ನೀಗಿಕೊಂಡೆ. ನನ್ನಿಂದ ತಪ್ಪಾಯಿತೇ ತಥಾಗಥ?’ ಬುದ್ಧ ಹೇಳುತ್ತಾನೆ ‘ನೀನು ಭಿಕ್ಷೆಯೆತ್ತುವ ಮನೆಯಲ್ಲಿ ಅವರು ಕೊಟ್ಟದ್ದನ್ನು ತಿಂದದ್ದರಲ್ಲಿ ತಪ್ಪೇನೂ ಇಲ್ಲ. ನಾಳೆ ನೀನು ಭಿಕ್ಷೆಗೆ ಹೋಗುವಾಗ ಆ ಮನೆಯಲ್ಲಿ ಮಾಂಸ ಸಿಕ್ಕೀತೆಂದು ಬಯಸಿ ಹೋಗುವುದ ಭಿಕ್ಷುವಿನ ಧರ್ಮವಲ್ಲ.’

ಪ್ರಾಣಿಗಳನ್ನು ಮಾಂಸಕ್ಕಾಗಿ ಕೊಲ್ಲುವಾಗ ಆ ಪ್ರಾಣಿಗೆ ಹೆಚ್ಚಿನ ನೋವಾಗಬಾರದೆಂದು ದಯಾಳುವಾದ ಎಲ್ಲರೂ ಅಪೇಕ್ಷಿಸುತ್ತಾರೆ. ಇದಕ್ಕೊಂದು ದೊಡ್ಡ ಉದಾಹರಣೆಯೆಂದರೆ ಪ್ರವಾದಿ ಮಹಮ್ಮದರು ಖುರಾನ್‌ನಲ್ಲಿ ಪ್ರಾಣಿಯನ್ನು ಹೇಗೆ ಅತಿ ಕಡಿಮೆ ನೋವಾಗುವಂತೆ ಕೊಲ್ಲಬೇಕೆಂದು ಚಿಂತಿಸಿ ಹೇಳಿರುವುದು. ತಾನು ಕೇಳಿದಂತೆ ಸಾಯಲಿರುವ ಪ್ರಾಣಿಗೆ ಕತ್ತಿ ಹರಿತ ಮಾಡುವುದು ಕಾಣಿಸಕೂಡದು. ಇನ್ನೊಂದು ಪ್ರಾಣಿಯನ್ನು ಕೊಲ್ಲುವುದನ್ನು ಅದು ನೋಡಕೂಡದು.

ಮನುಷ್ಯ ತಾನು ಬದುಕಿ ಉಳಿಯಲು ಯಾವ ಆಹಾರವನ್ನು ಸ್ವೀಕರಿಸಬೇಕೆಂದೂ ಯೋಚಿಸುತ್ತಾನೆ. ಅದರಲ್ಲಿ ರುಚಿಯನ್ನೂ ಬೆಳೆಸಿಕೊಳ್ಳುತ್ತಾನೆ. ಅಂಥ ರುಚಿಯನ್ನು ಬಿಡುವುದಕ್ಕೂ ಕೆಲವರು ತಯಾರಾಗುತ್ತಾರೆ. ಇದು ಒಟ್ಟಿನಲ್ಲಿ ಮಾನವ ವರ್ತನೆಗೆ ಸೇರಿದ ಮನೋಧರ್ಮ. ಇದರ ಮಧ್ಯೆ ಪ್ರವೇಶಿಸಿ, ರೈತರು ಹಾಲು ಮಾರುವುದನ್ನು ಜೀವನೋಪಾಯವಾಗಿ ಮಾಡಿಕೊಂಡಾಗ ಅವರಿಗೆ ಹಾಲು ಕರೆಯದ ದನವನ್ನು ಮಾರಲು ಹೊಸ ದನವನ್ನು ಕೊಳ್ಳಲು ಅವಕಾಶವೇ ಇಲ್ಲದಂತೆ ಮಾಡುವುದು ನಮ್ಮ ವ್ಯವಸಾಯ ಪದ್ಧತಿಯಲ್ಲೇ ದೊಡ್ಡ ಆತಂಕವನ್ನು ಉಂಟು ಮಾಡುವ ಸಂಗತಿ.

ನಮ್ಮ ಸರ್ಕಾರ ಜಾನುವಾರುಗಳು ನಮ್ಮ ವ್ಯವಸಾಯಕ್ಕೆ ಅತ್ಯಗತ್ಯ. ಕೇವಲ ಎರಡು ಎಕರೆಯನ್ನು ಇಟ್ಟುಕೊಂಡಿರುವ ರೈತನೂ ಹಸಿವಿಲ್ಲದ ಬಡತನದಲ್ಲಿ ಬಾಳಲು ಸಾಧ್ಯ ಎಂದು ಬಯಸುವುದಾದರೆ ರಸಗೊಬ್ಬರಗಳನ್ನು, ಟ್ರ್ಯಾಕ್ಟರನ್ನು ನಿಷೇಧಿಸಬೇಕೇ ವಿನಃ ಜಾನುವಾರು ಹತ್ಯಾ ನಿಷೇಧದ ಕಾನೂನನ್ನು ತಂದು ಅಲ್ಲದ ಅಪರಾಧಿಗಳನ್ನು ಶಿಕ್ಷಾರ್ಹ ಅಪರಾಧಿಗಳನ್ನಾಗಿ ಮಾಡುವುದು ಅತ್ಯಂತ ಕ್ರೂರವಾದ ಮಸೂದೆಯೆಂಬುದು ಕುರಿಯನ್ನಾಗಲೀ ದನವನ್ನಾಗಲೀ ತಿನ್ನದ, ಅದರ ರುಚಿಯನ್ನು ಬೆಳೆಸಿಕೊಳ್ಳದ ನನ್ನ ಅಭಿಪ್ರಾಯ. ಈ ನಮ್ಮ ವಾದದಲ್ಲಿ ನಾವು ಮುಸ್ಲಿಮರನ್ನಾಗಲೀ ಕ್ರಿಶ್ಚಿಯನ್ನರನ್ನಾಗಲೀ ಮುಂದಿಟ್ಟುಕೊಂಡು ವಾದಿಸುವುದು ಈ ನಮ್ಮ ಘೋರ ಕೋಮುವಾದೀ ವಾತಾವರಣದಲ್ಲಿ ಅಕ್ಷಮ್ಯವೆಂದು ತಿಳಿದಿದ್ದೇನೆ. ಯಾಕೆಂದರೆ ಈ ಮಸೂದೆ ಉದ್ದೇಶದಲ್ಲಿ ಕೋಮುವಾದಿ; ಪರಿಣಾಮದಲ್ಲಿ ರೈತ ವಿರೋಧಿ.

ಈ ನಮ್ಮ ಕಾಲದಲ್ಲಿ ಅತ್ಯಂತ ಕ್ರೂರವಾದ ದೃಶ್ಯವೊಂದಿದೆ. ಯಾರೂ ಇದನ್ನು ಗಮನಿಸಲಾರದಷ್ಟು ನಮಗಿದು ಒಗ್ಗಿಹೋಗಿದೆ. ಪೌಲ್ಟ್ರಿ ಫಾರ್ಮ್ ಎಂದು ನಾವು ಕರೆಯುವ ಸಹಸ್ರಾರು ಗೂಡುಗಳಲ್ಲಿ ಬದುಕಿ ಮೊಟ್ಟೆ ಇಟ್ಟು ಇಟ್ಟು ಸಾಯುವ ಕೋಳಿಗಳು ಇವು. ಈ ಕೋಳಿಗಳು ಚಲಿಸುವಂತಿಲ್ಲ. ಆಕಾಶ ನೋಡುವಂತಿಲ್ಲ. ಇಡುವ ಮೊಟ್ಟೆ ಕಡಿಮೆಯಾದದ್ದೇ ನಾವು ತಿನ್ನುವ ಕೋಳಿಗಳಾಗುತ್ತವೆ. ಹಿಟ್ಲರನು ಯಹೂದ್ಯರನ್ನು ಕಾನ್ಸಂಟ್ರೇಷನ್ ಕ್ಯಾಂಪುಗಳಲ್ಲಿ ಸಾಕಿ ಕೊಂದಂತೆ ನಾವು ಕೋಳಿಗಳನ್ನು ಒಂದಷ್ಟು ಕಾಲವೂ ಸಹಜವಾಗಿ ಜೀವಿಸಲು ಬಿಡದೆ ಮೊಟ್ಟೆ ಇಡುವ ಯಂತ್ರಗಳಂತೆ ಒಳಗೆ ಕೊಲ್ಲುತ್ತೇವೆ. ನೆಲದ ಮೇಲೆ ಹಿಂದಿನಂತೆ ಓಡಾಡಿಕೊಂಡು ಬದುಕಿ, ಕೊಡಬಲ್ಲಷ್ಟು ಮೊಟ್ಟೆ ಕೊಟ್ಟು, ಆಮೇಲೆ ಮಾಂಸವಾಗಿ ಜಾರಿಗೆ ತರುವುದು ಸಾಧ್ಯವೇ ಎಂದು ಪ್ರಾಣಿದಯೆ ಉಳ್ಳವರು ಯೋಚಿಸಬೇಕು. ಜಾನುವಾರು ಹತ್ಯಾ ನಿಷೇಧದ ಹಿಂದಿರುವ ತೋರುಗಾಣಿಕೆಯ ಪ್ರಾಣಿದಯೆಯನ್ನಲ್ಲ, ಈ ಮತೀಯ ಕ್ರೌರ್ಯವನ್ನೂ ರೈತ ವಿರೋಧೀ ನೀತಿಯನ್ನು ಖಂಡಿಸಿ ಅದೊಂದು ಕಾನೂನು ಆಗದಂತೆ ಒಗ್ಗೂಡಿ ಶ್ರಮಿಸಬೇಕು.

—-
ಪ್ರಜಾವಾಣಿ‘: ೨೪ ಮೇ, ೨೦೧೦