‘ಅಲ್ಲಿ ಎಲ್ಲರಿಗು ನಾಲ್ಕು ಕೈಗಳೋ’

.ರಾ.ಬೇಂದ್ರೆ

Datta
The awful daring of a momement’s surrender
Which an age of prudence can never retract
By this, this only, we have existed
T.S. Eliot

ನನಗೆ ಬಲು ಪ್ರಿಯವಾದ ಲೋಹಿಯಾರ ಒಂದು ಮಾತು ಹೀಗಿದೆ: ‘ಪ್ರಾಯಶಃ ದೇವರು ಮತ್ತು ಹೆಣ್ಣು ಈ ಎರಡೇ ಮಾನವ ಜನ್ಮದ ಮಹೋದ್ದೇಶಗಳು. ದೇವರನ್ನು ನಾನು ಕಂಡಿಲ್ಲ, ಹೆಣ್ಣು ನನ್ನ ಪಾಲಿಗೆ ಮಿಂಚಿ ಮಾಯವಾಗುವವಳು, ಸಿಗದವಳು. ಆದರೆ ಈ ಎರಡರ ಹೊಳಹುಗಳೂ ನನಗೆ ಒಬ್ಬ ಮನುಷ್ಯನಲ್ಲಿ ಕಂಡದ್ದಿದೆ.’

ಈ ಮನುಷ್ಯ ಲೋಹಿಯಾರ ಪಾಲಿಗೆ ಗಾಂಧಿಯಾಗಿದ್ದ.

ಗಂಡು ಹೆಣ್ಣಿನ ಪ್ರೇಮದ ಕಥನವನ್ನು ಆದಿಮಕಾಲದಿಂದ ಕವಿಗಳು ಮಾಡುತ್ತ ಬಂದಿದ್ದಾರೆ-ಹಲವು ಬಗೆಗಳಲ್ಲಿ. ಟ್ರಾಯ್ ನಗರವನ್ನು ಭಸ್ಮಗೊಳಿಸುವ ಹೆಲೆನ್ನಳ ಪ್ರೀತಿ, ಮಧ್ಯಮವರ್ಗದ ಅನುಭವ ದಾರಿದ್ರ್ಯದಿಂದ ಬೇಸತ್ತು ತನ್ನನ್ನೇ ನಾಶಮಾಡಿಕೊಳ್ಳುವ ಮದಾಂ ಬಾವರಿಯ ಪ್ರೇಮ ಕಾಮದ ಹುಡುಕಾಟ, ಗೌರವಾನ್ವಿತ ವ್ಯಕ್ತಿಯೊಬ್ಬನನ್ನು ಗಂಡನನ್ನಾಗಿ ಪಡೆದು ಒಂದು ದಿವ್ಯ ಕ್ಷಣದ ದೈಹಿಕ ಕೂಡುವ ಹೇಸಿಗೆಯಲ್ಲಿ ಅವನನ್ನು ತೊರೆದು ಯುವಕನೊಬ್ಬನನ್ನು ಉತ್ಕಟವಾಗಿ ಪ್ರೀತಿಸಿ, ಈ ಪ್ರೀತಿಗೆ ಸಾಂಸಾರಿಕ ವಲಯದ ರಕ್ಷೆಯಿಲ್ಲದೆ ಹತಾಶಳಾಗಿ ಸಾಯುವ ಅನ್ನಾ ಕರೇನಿನಾಳ ಅದ್ಭುತವಾದ ಪ್ರೀತಿ, ಆತ್ಮಘಾತುಕ ಕುಡುಕುತನದಿಂದ ಸಾಯುವ ದೇವದಾಸನ ಪ್ರೀತಿ, ಕನ್ನಡದಲ್ಲಿ ಹೂವಯ್ಯ ಸೀತೆಯರ ನುಣುಚಿಹೋಗುವ ಪ್ರೀತಿ, ತನ್ನ ಜೀವನದ ಸಾರ್ಥಕ್ಯವನ್ನು ಹೇಗೋ ಪಡೆದುಕೊಳ್ಳುವ ಕಾರಂತರ ‘ಮೈ ಮನಗಳ ಸುಳಿಯಲ್ಲಿ’ ಕಾದಂಬರಿಯಲ್ಲಿ ದೇವದಾಸಿಯೊಬ್ಬಳ ಪ್ರೀತಿ, ‘ಕರುಳಿನ ತೊಡರನ್ನು ಕುಸುರಾಗಿ ಬಿಡಿಸಿಟ್ಟು/ತಿರುಗೊಮ್ಮೆ ತೊಡವಾಗಿ ನಾ ಧರಿಸುವೆ’ ಎಂದು ಸಾರುವ, ಸಾಂಸಾರಿಕತೆಯಲ್ಲೇ ಫಲಕಾಣುವ ಪಯಣದ ಬೇಂದ್ರೆಯವರ ‘ಸಖಿಗೀತ’ದ ಪ್ರೀತಿ- ಹೀಗೆ ಈ ಪ್ರೀತಿಗೆ ಹಲವಾರು ವಿಭಿನ್ನ ಅವತಾರಗಳಿವೆ. ಕಾಡುವ, ಕೊಲ್ಲುವ, ಬದುಕಿನ ಅರ್ಥ ಹುಡುಕುವ, ಪಡೆಯುವ, ಪಡೆಯಲಾರದ ಪ್ರೀತಿಯ ನಿರ್ವಚನಗಳು ಇವು.

ಇವುಗಳೆಲ್ಲದರ ಆಚೆ ಭಾರತೀಯ ನಾಗರಿಕತೆ ತನ್ನ ಅಪೂರ್ವವಾದ ಕಥನಗಳಲ್ಲಿ ಇನ್ನೊಂದು ಬಗೆಯ ಪ್ರೀತಿಯನ್ನೂ ಸೃಷ್ಟಿಸಿಕೊಂಡಿದೆ. ಕಾಳಿದಾಸನ ‘ಕುಮಾರಸಂಭವ’ ಕಾವ್ಯದಲ್ಲಿ ಪಾರ್ವತಿ ಪರಮೇಶ್ವರರ ನಿರಂತರವೆನ್ನಿಸುವ ಮೈಥುನ, ಜಯದೇವನ ಗೀತಗೋವಿಂದದಲ್ಲಿ ರಾಧಾ-ಕೃಷ್ಣರ ಲೀಲಾತ್ಮಕವಾದ ಮೈಥುನ, ಜಗತ್ತಿನ ಸಾಹಿತ್ಯದಲ್ಲೆ ಅಪರೂಪದ ಕಥನಗಳು. ಕೃಷ್ಣ ರಾಧೆಯರದಂತೂ-ಇದು ಉತ್ಕಟ ಪ್ರೀತಿಯೂ ಹೌದು, ಹಾದರವೂ ಹೌದು. ಕೃಷ್ಣ ತನ್ನ ಯೌವನದಲ್ಲಿ ಬಯಸುವುದು ಬಿಳಿಚೆಲುವಿನ ರಾಧೆಯನ್ನು ಆದರೆ ಅವನ ಪ್ರಬುದ್ಧತೆಯ ಕಾಲದ ಸ್ನೇಹ ಕಪ್ಪುಬಣ್ಣದ ದ್ರೌಪದಿಯ ಜೊತೆ. (ಇದನ್ನು ಗಮನಿಸುವವರು ಲೋಹಿಯಾರೇ). ಕೃಷ್ಣನ ಎರಡನೇ ಬಗೆಯ ಪ್ರೀತಿಯನ್ನು ನಾವು ಗ್ರೀಕರ ಕಲ್ಪನೆಯ ಪ್ಲೆಟಾನಿಕ್ ಪ್ರೀತಿ ಎನ್ನಬಹುದು. ಡಾಂಟೆ ಕವಿಗೆ ಬೀಟ್ರಿಕ್ಸ್ ಜೊತೆ ಈ ಬಗೆಯ ಪ್ರೀತಿಯೇ- ದೈಹಿಕ ಸಫಲತೆ ಕಾಣದ ಪ್ರೀತಿಯೇ- ಕವಿಯನ್ನು ಸ್ವರ್ಗಮುಖಿ ಪಯಣಕ್ಕೆ ಸಂಗಾತಿಯನ್ನು ದೊರಕಿಸಿಕೊಡುತ್ತದೆ.

ಪ್ಲೆಟಾನಿಕ್ ಪ್ರೀತಿ ನಾವು ಕಟ್ಟಿಕೊಂಡ ಸಾಂಸಾರಿಕ ಕ್ಷೇಮ ವಲಯದಿಂದ ಹೊರಗಿದ್ದು ನಮ್ಮನ್ನು ಲೌಕಿಕದಲ್ಲಿ ಬಾಧಿಸದಂತೆ, ನೈತಿಕ ಪ್ರಶ್ನೆಗಳನ್ನು ಎತ್ತದಂತೆ, ಮಾನವನ ಯಾವುದೋ ಗುಪ್ತ ಆಸೆಗೆ ನೆರವಾಗಿ ಕೆಲವೊಮ್ಮೆ ಅನಧಿಕೃತ ಎನ್ನಿಸುತ್ತದೆ. ಆದರೆ ಭಾರತೀಯ ಪ್ರಜ್ಞೆ ಸೃಷ್ಟಿಸಿಕೊಂಡ ರಾಧಾ-ಕೃಷ್ಣರ ಪ್ರೀತಿ ವಿಸ್ಮಯಕಾರಿಯಾದ ಲೀಲೆಯಂತೆ ಕಂಡು ಭಾರತೀಯ ಮನಸ್ಸು ನೈತಿಕ ಪ್ರಶ್ನೆಗಳನ್ನು ದೂರವಿಟ್ಟು ಏಕಕಾಲದಲ್ಲಿ ದೈಹಿಕತೆಯನ್ನೂ, ದೈವಿಕತೆಯನ್ನೂ ಕೂಡುವಂತೆ ಮಾಡಿ ನಮ್ಮನ್ನು ತಣಿಸುತ್ತದೆ. ಇದೊಂದು ಅಪರೂಪದ ದರ್ಶನ. ಕಾಳಿದಾಸನ ಕಾವ್ಯದಲ್ಲಿ ರಾಕ್ಷಸನೊಬ್ಬನ ಪೀಡೆಯನ್ನು ಕೊನೆಮಾಡಿ ಲೋಕಕಲ್ಯಾಣಕ್ಕಾಗಿ ಪುತ್ರನೊಬ್ಬನನ್ನು ಪಡೆಯುವ ಉದ್ದೇಶದ ಮೈಥುನವಾಗಿ ನಮಗೆ ದೇವರುಗಳ ಪ್ರೇಮ ಕಾಣುತ್ತದೆ. ಇದೊಂದು ನೆವ ಇರಬಹುದು ಎಂಬ ಅನುಮಾನವೂ ಬರುತ್ತದೆ. ಇಂಥ ಯಾವ ಕ್ಷಮೆಯೂ ರಾಧಾ-ಕೃಷ್ಣರ ಪ್ರೇಮಕ್ಕೆ ಅವಶ್ಯವಿಲ್ಲ. ಗಂಡ ಇದ್ದೇ ಕೃಷ್ಣನಿಗೆ ಒಲಿದವಳು ರಾಧೆ.

ರಾಧೆಯಲ್ಲಿ ಎಲಿಯಟ್‌ನ ಉಪನಿಷದ್ ದರ್ಶನದ ದಿಗಿಲು ಮೀರುವ ಧೈರ್ಯದ ಆತ್ಮಾರ್ಪಣೆಯೂ ಇದೆ (ದತ್ತ), ರತಿಯಲ್ಲಿ ಮಾನವರೂ ಚತುರ್ಭುಜರಾಗುವ ಕವಿ ಬೇಂದ್ರೆಯ ವಿಸ್ಮಯವೂ ಇದೆ. ತೇಜಶ್ರೀ ಕವನದಲ್ಲಿ, ಕವಿ ತಿಳಿದೋ ತಿಳಿಯದೆಯೋ, ಈ ಎರಡೂ ಭಾವನೆಗಳು ಕವಿತೆಯ ಉದ್ದಕ್ಕೂ ನಮಗೆ ಎದುರಾಗುತ್ತವೆ? ಉತ್ಕಟ ಪ್ರೀತಿಯಲ್ಲೂ, ಅಹಮಿನ ವಿಸರ್ಜನೆಯಲ್ಲೂ, ವಿರಹದಲ್ಲೂ, ತಾವೇ ಜಗವಾಗುವ ಬೆರಗಿನಲ್ಲೂ.

ಆತ್ಮ ಸಫಲತೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಹೆಣ್ಣು ಪ್ರಣಯಿಯಾಗಿಯೂ, ಹೆಂಡತಿಯಾಗಿಯೂ, ಮಗಳಾಗಿಯೂ, ತಾಯಿಯಾಗಿಯೂ, ‘ಬಜಾರಿ’ಯಾಗಿಯೂ ಅವನಿಗೆ ಒದಗುತ್ತಾಳೆ. ಇದನ್ನು ನಟಿಸಿ ತೋರಲು ತೇಜಶ್ರೀ ಕವನದಲ್ಲಿ ಒಂದು ಅಪರೂಪದ ಕಾವ್ಯ ಪ್ರಯೋಗವಿದೆ. ಇಲ್ಲಿ ಬರುವ ಅವನು ಪುರಾಣದ ಕೃಷ್ಣನೂ ಹೌದು. ನಿಜದ ಅವನೂ ಹೌದು. ಹಾಗೆಯೆ ರಾಧೆ ಪುರಾಣದ ರಾಧೆಯೂ ಹೌದು. ನಿಜದ ಅವಳೂ ಹೌದು. ಈ ಎರಡು ಸತ್ಯಗಳೂ ಒಟ್ಟಾಗಿ ನಮಗೆ ಭಾಸವಾಗುವುದರಿಂದ ಸಾಮಾಜಿಕ ಸಾಂಸಾರಿಕ ನೀತಿ ಅನೀತಿಗಳನ್ನು ಈ ಕವನ ಮೀರುತ್ತದೆ. ನಮ್ಮನ್ನು ಈ ಲೋಕದ ಎಲ್ಲ ಮಿತಿಗಳಲ್ಲೂ ಫಲಿಸುವಂತೆ ಮಾಡುವ ಕಾವ್ಯದ ಶಕ್ತಿಯೇ ಈ ಸೋಜಿಗಕ್ಕೆ ಕಾರಣ.

ಈ ಶಕ್ತಿಗೊಂದು ನಿದರ್ಶನವಾಗಿ ನನಗೊಂದು ಮೆಟಫರ್ ನೆನಪಾಗುತ್ತದೆ. ಎಲ್ಲೋ ಓದಿದ್ದು ಇದು. ಪಿಕಾಸೋನ ಚಿತ್ರ ಇದೆಂದು ನನ್ನ ನೆನಪು. ನಾವು ಕಾಣುವ ಒಂದು ವಸ್ತು ಈ ಚಿತ್ರದಲ್ಲಿ ಬೆಂಕಿಪೊಟ್ಟಣದ ಸೂಚನೆಯನ್ನೂ ಕೊಡುತ್ತದೆ. ಅದೊಂದು ಆಮೆಯಂತೆಯೂ ಕಾಣುತ್ತದೆ. ಎರಡೂ ಒಟ್ಟಾಗಿ. ಒಂದನ್ನೊಂದು ನಿರಾಕರಿಸದಂತೆ. ತೇಜಶ್ರೀಯವರ ಕವನದಲ್ಲೂ ಹೀಗೆಯೇ ಇವರು ಕೃಷ್ಣ-ರಾಧೆಯರಂತೆ ತಮ್ಮ ಸಂಸಾರದಾಚೆಗಿನ ದಿವ್ಯಾನುಭವದ ಅಪೇಕ್ಷೆಯನ್ನು ಫಲಿಸಿಕೊಳ್ಳುವವರು. ಜೊತೆಗೆ ಅವನು/ಇವಳು ಜೀವಿಗಳು ಆಗಿಯೂ ಇದ್ದು ತಮ್ಮ ನಶ್ವರದೇಹದಲ್ಲೇ ದಿವ್ಯವನ್ನೂ ಇಹದ ಭೋಗವಾಗಿಯೂ ಪಡೆದವರು. ಕಾವ್ಯದಲ್ಲಿ ಮಾತ್ರ ಇದು ಸಾಧ್ಯವಷ್ಟೇ ಅಲ್ಲ; ನಮ್ಮ ನಿತ್ಯಜೀವನದ ನಿರಂತರ ಕ್ಷಣಿಕ ವ್ಯವಹಾರ ವ್ಯಾಪಾರಗಳಲ್ಲಿ ಇಣುಕುವ ಒಂದು ಸತ್ಯವೂ ಹೌದು.

ನಿಷ್ಕಾರಣವೆಂಬಂತೆ, ಅನಿರೀಕ್ಷಿತವೂ ಎಂಬಂತೆ ಪ್ರೇಮ ಹೊಮ್ಮುವುದರಿಂದಲೇ ಕವನ ಪ್ರಾರಂಭವಾಗುತ್ತದೆ.

‘ಯಮುನೆಯ ಅಲೆಯಾಗಿತ್ತು
ನನ್ನೆದೆ ನಿನ್ನೆ ರಾತ್ರಿ, ಹಾಗೆ
ಹಿಂದೆಂದೂ ಅದು
ಢವಢವ ಆಡಿರಲಿಲ್ಲ,
ನಿನ್ನೆದೆಯ ಮೆಲ್ಲೆಲರು ತೀಡಿ

ಸುಳಿದ ರಾಗ ಚಂದ್ರ-
ಕಾಂತಾ…. ಉಸುರಿತು ನನ್ನುಸಿರು
ತಲೆ ತುಂಬ ಹೊದ್ದ ಚಾದರದೊಳಗೆ
ಬೆವರಿತು, ರಕ್ತ ದಿಕ್ಕೆಟ್ಟು ಹರಿಯಿತು
‘ನನ್ನವಳು ನೀನು, ನನ್ನ ಹೆಣ್ಣು, ನನ್ನ ಪ್ರೇಯಸಿ,
ನನ್ನ ಮಡದಿ….ಬೆಳಕೇ….’
ನಿನ್ನ ಗಂಟಲಿಂದ ಒಸರಿದ ಜೀವರಸಕ್ಕೆ
ಬಾಯೊಡ್ಡಿದೆ ನಾನು, ಸುರಿಯಿತು
ಧಾರಾಕಾರ ಮಳೆ, ಧನ್ಯಳಾದೆ ದುಂಬಿ
ಧುಮುಗುಡುವ ಜೇನುರಸವಾದೆ
ಮತ್ತ ತುಟಿಗಳಿಂದ ಮುತ್ತಿ ಮುತ್ತಿ
ಹೀರಿದವು ನದಿ-ದಡ ಒಂದನ್ನೊಂದು.

ಆ ಕ್ಷಣವೆ ಬಲಿತ ಮೊಟ್ಟೆಗಳೆಲ್ಲ
ಒಡೆದು ಮೈತುಂಬ ದುಂಬಿಗಳ
ಮೈ ರಾಗ…. ಸಾವಿರ ಸಾವಿರ
ಜೇನುಹುಳುಗಳ ಮತ್ತು ಹೊತ್ತ
ಒಂದು ದುಂಬಿ ಎದುರಿಗೆ
ಜಗದ ಎಲ್ಲ ಹೂವುಗಳ
ಮಕರಂದ ಹೊತ್ತ ಹುಚ್ಚ,
ಅವನು, ನನ್ನವನು’

ಗಮನಿಸಿ: ನಮ್ಮ ಪುರಾಣದ ದೇವತೆಗಳು ಬೆವರುವುದಿಲ್ಲ. ಆದರೆ ತೇಜಶ್ರೀಯವರ ಜನಪದ ಜೀವಿಗಳು ಬೆವರುತ್ತಾರೆ. ಇಲ್ಲಿ ಬರುವ ಪ್ರಾಣಿ ಕೀಟ ವಿವರಗಳು ಸಮೃದ್ಧವಾದ ಯಮುನೆಯ ದಡದಿಂದ ಬಂದವು. ದುಂಭಿ, ಜೇನುರಸ, ಬಲಿತಮೊಟ್ಟೆ- ಹೀಗೆ.

ಇಲ್ಲಿ ಪ್ರೇಮಿಗಳು ನಿಜದ ಪ್ರೇಮಿಗಳಂತೆ ಬೆತ್ತಲಾಗುತ್ತಾರೆ. ವಾತ್ಸ್ಯಾಯನ ಲೋಕದ ರತಿಯಲ್ಲೂ ತೊಡಗುತ್ತಾರೆ.

‘ಏನೇನು ಮುಚ್ಚಬಲ್ಲದು ಬಟ್ಟೆ?
ಪ್ರತಿರೋಧಕ್ಕೆ ಗೀರಿದ ಹೊಕ್ಕುಳ ಗೆರೆ
ಕಣ್ಮುಚ್ಚಿ ಒಡ್ಡಿದ ತುಟಿಯ ಒಡಕು
ಒಡೆದ ಮೊಲೆತೊಟ್ಟಿನ ಸುತ್ತ ಜುಮುಗುಡುವ ಹಲ್ಲು
ಅಂಗಾಲಿನ ಕಚಗುಳಿ
ಬೆನ್ನಿಗೆ ಹಬ್ಬಿದ ಕೈ ಬಳ್ಳಿಗಳು
‘ಮುಟ್ಟಿಕೋ ಕೊರಳು…. ಅಲ್ಲಿದೆ ನನ್ನ ಜೀವ’
ಎಂದು ನಡುರಾತ್ರಿ ಜಾರಿದ ಹೊತ್ತಲ್ಲೆಲ್ಲೋ
ಕಿವಿಯಲ್ಲುಸುರಿ ಕುತ್ತಿಗೆಯ
ಅರಿಶಿನ ದಾರ ಜಗ್ಗಿದ ಬೆರಳುಗಳ ಹಿತ….
ಏನೇನ ಮುಚ್ಚೀತು ಬಟ್ಟೆ?’

ಶೃಂಗಾರ ರಸ ಎಲ್ಲೆಲ್ಲೂ ಒಸರುವ ಈ ಪದ್ಯದಲ್ಲಿ ‘ಹಿಂದೆಂದೂ ಅಕ್ಕಸಾಲಿಗನ ಕಡೆ ಕಣ್ಣೆತ್ತಿಯೂ ನೋಡದವ, ನೀರಿನಲಿ ಇಳಿಬಿಟ್ಟ ಕಾಲುಗಳ ಕನಸನ್ನು ಪೂರೈಸಲು’ ಗೆಜ್ಜೆ ಕೊಳ್ಳಲು ಹೋಗುತ್ತಾನೆ. ಈ ಪದ್ಯದ ವಿಶೇಷವೆಂದರೆ ಉತ್ಕಟವಾದ ಕಾಮಕ್ಕೂ, ಮೈನವಿರೇಳುವ ಖುಷಿಗೂ, ಸಾವಿಗೂ ಸತತವಾದ ಸಂಬಂಧವನ್ನು ಸೂಚಿಸುತ್ತಲೇ ಕವನ ಬೆಳೆಯುವುದು.

‘ಒಲವಿನ ಅಪ್ಪುಗೆಯಲಿ ಆಕಾಶಕ್ಕೆ ಹಾರಿ
ನಾನು ಅವನ, ಅವನು ನನ್ನ ಸಾವನ್ನು
ಪರಸ್ಪರ ಮುಂದೂಡಿದೆವು
ಪ್ರತಿ ರಾತ್ರಿ ಅನಂತ ಅನಂತದವರೆಗೆ’

ಇದನ್ನು ಓದುವ ನಮಗೆ ಏನೇನೊ ನೆನಪಾಗುತ್ತವೆ. ಪರಮಪ್ರೇಮಿಯಾಗಿದ್ದ ಯುವ ಕೀಟ್ಸ್ ಬಳಸುವ ಒಂದು ಮಾತು ‘Dying into life’. ರೋಮಿಯೋ ಜೂಲಿಯೆಟ್ ನಾಟಕದಲ್ಲಿ ಬದುಕಿನಲ್ಲಿ ಸಫಲವಾಗುವ ಪ್ರೇಮ ಪ್ರೇಮಿಗಳ ಕೊನೆಯ ಸಾವಿನಲ್ಲಿ ಸಫಲ ಆಗುತ್ತದೆ: ‘Thus we die’-ರೋಮಿಯೋ ತನ್ನನ್ನು ಇರಿದುಕೊಂಡು ಜೂಲಿಯೆಟ್ಟಳ ಮೇಲೆ ಮಲಗಿ ಹೇಳುವ ಮಾತು ಇದು. ಈ ಎಲ್ಲ ಕಥೆಗಳಿಗೆ ಸಾರರೂಪಿಯಾಗಿ ಪಾಂಡುಮಹಾರಾಜ ಉತ್ಕಟ ಕಾಮದಲ್ಲಿ ಮಾದ್ರಿಯ ಸಂಗ ಮಾಡಿದಾಗ ಪಾಂಡು ಸಾಯುತ್ತಾನೆ; ಮಾದ್ರಿ ಸಹಗಮನ ಮಾಡಿ ಸಾಯುತ್ತಾಳೆ.

ತೇಜಶ್ರೀ ಕವನದ ರಾಧೆ (ಹಾಗೂ ಇವಳು) ಪ್ರೇಮದಿಂದ ಸತ್ತು ಹುಟ್ಟುವ ಗಳಿಗೆಯಲ್ಲಿ ಅಂದುಕೊಳ್ಳುವುದು ಹೀಗೆ:

‘ನನ್ನನ್ನು ಹೆಣ್ಣಾಗಿಸಿದವನೆ
ಲೋಕದ ಎಲ್ಲ ಹೆಣ್ಣುಗಳ ಎದೆಯಲ್ಲೂ
ಹೊಸ ಬಯಕೆಯ ತೇರನ್ನೆಳೆವವನೆ
ಕೇವಲ ನನ್ನೆದೆಯ ಗರ್ಭಗುಡಿಗೆ ಮೀಸಲಾದವನೆ
ನನ್ನನ್ನು ತನ್ನ ತುಟಿಯ ಕೊಳಲಾಗಿಸಿದವನೆ
….ಅವನೆ ಅವನೆ ತುಂಟ ನಗೆಯವನೆ
ಕೆಂಪು ತುಟಿಯವನೆ, ಕಳ್ಳ ಕಣ್ಣುಗಳಿಂದ
ನನ್ನ ಬಾಗುಬಳುಕುಗಳ ಮೆದ್ದವನೆ,
ಗಂಡು ಗಲ್ಲದವನೆ, ಒರಟು ಬೆರಳುಗಳವನೆ
ಹೆಣ್ಣೊಡಲಿನವನೆ…. ನನ್ನವನೆ…. ಮಾಧವನೆ….’

ನವೋದಯ ಕಾಲದ ಭಾಷೆಯನ್ನೂ, ಧಾಟಿಯನ್ನೂ ಬಳಸುತ್ತಲೇ ಅನನ್ಯಳೂ ಆಗುವ ಕವಿ ತೇಜಶ್ರೀ. ಕೊಳಲನೂದುವ ಕೃಷ್ಣ ಕೊಳಲನ್ನು ಹಿಡಿಯುವುದು ‘ಒರಟು ಬೆರಳುಗಳಲ್ಲಿ.’ ಇವಳನ್ನು ಹೆಣ್ಣಾಗಿಸಿದವನು ‘ಗಂಡು ಗಲ್ಲದವನು’. ಇವಳು ಬದುಕತೊಡಗುವುದು ಕೂಡಾ ಅವನಿಂದಾಗಿಯೇ. ಜೀವೋನ್ಮುಖವಾದ ಪ್ರೇಮದಷ್ಟೇ ಸಾವು ಕೂಡ ಎಲ್ಲ ಜೀವಿಗಳ ಇನ್ನೊಂದು ಕತ್ತಲಿನ ಬಯಕೆ.

‘ಇಷ್ಟು ಕಾಲ ಸಾವಿಗೆ ಹಪಹಪಿಸಿ
ಆವಾಹಿಸಿಕೊಂಡಿದ್ದ ನನ್ನ ಹುಚ್ಚಿಗೆ
ಏನು ಹೇಳಲಿ?
ಕಳ್ಳ ಹುಚ್ಚು ಕೊಚ್ಚಿ ಹೋಯಿತಲ್ಲ
ನಿನ್ನ ಮಾಯಾವಿ ಕಣ್ಣ ಸೆಳೆತದಲ್ಲಿ!
ಈಗ ನಿಜವಾದ ಹುಚ್ಚು ಆವರಿಸಿಕೊಂಡಿದೆ
ಪ್ರತಿ ರಾತ್ರಿಯೂ ನನ್ನನ್ನು
ನಿನ್ನೆದುರು ಬೆತ್ತಲಾಗಿಸಿ ನಿನಗೆ
ಒತ್ತಿಕೊಳ್ಳುವ ಹುಚ್ಚು!’

ಅದೊಂದು ತಿರುವು. ಕೊಳೆಯುವ ದೇಹ ಕಾಲದಲ್ಲಿ ಹೇಗೂ ಕೊಳೆಯುತ್ತದೆ. ಸುರಂಗದ ನಡುಮಧ್ಯೆ ಇವಳು ನಿಂತಿದ್ದಾಳೆ. ಆ ತುದಿ ಈ ತುದಿ ಎರಡೂ ಒಂದೇ ಅವಳಿಗೆ:

‘ಸುರಂಗದ ನಡು ಮಧ್ಯೆ ನಿಂತಿದ್ದೇನೆ ನಾನು
ಆ ತುದಿ ಈ ತುದಿ ಎರಡೂ ಒಂದೇ ನನಗೆ
ಆ-ಈ ನಡುವೆ ಹುಟ್ಟು-ಸಾವಿನ ಅಂತರ ಅಷ್ಟೆ,
ಆ ತುದಿಯೆ ಹೆಚ್ಚು ಸುಖವೆನಿಸುತ್ತಿದೆ
ಅಲ್ಲಿ
ನೀನು ನಿಂತಿದ್ದೀಯ;
ಈ ಕಾಲುಗಳ ಖಂಡದಲ್ಲಿ
ನಿನ್ನ ಪಾಲು ಅಖಂಡ,
ಹೆಜ್ಜೆಗಳಿಗೆ ಕಾಲ ಬೇಕಿಲ್ಲ’

ಈ ಪದ್ಯದ ನಡುವೆ ವಿಲಕ್ಷಣ ಕಾಂತಿಯ ಒಂದು ಪ್ರಸಂಗ-ಶೃಂಗಾರ ಕಾವ್ಯಗಳಲ್ಲಿ ಕಾಣುವಂಥದೊಂದು ಪ್ರಸಂಗ-ಬರುತ್ತದೆ. ಇವಳ ಅಂಗೈ ಮೇಲೆ ಅವನೊಂದು ನವಿಲುಗರಿಯನ್ನು ಇಡುತ್ತಾನೆ. ಇಲ್ಲಿಂದ ಇಬ್ಬರು ವ್ಯಕ್ತಿಗಳ ಪ್ರೇಮ ಪಂಚಭೂತಗಳ, ಈ ಭೂಮಿ ಆ ಆಕಾಶಗಳ, ಸಂಗಮದ ನಾಟ್ಯವೂ ಆಗುತ್ತದೆ. ಹೆಣ್ಣು ಹೇಳುತ್ತಾಳೆ. ‘ಓ ಹುಡುಗಾ. ಮೊದಲ ಮಳೆಗೆ ಹುಡಿಯೆದ್ದ ಭೂಮಿ ಕಣೋ ನಿನ್ನ ಪ್ರೀತಿ.’ ಒಬ್ಬಳೇ ಇರುವಾಗಲೂ ಅವಳು ಒಬ್ಬಳಲ್ಲ. ಕೂಡಿದಾಗ ಇಬ್ಬರಲ್ಲ.

ನವಿಲು ಕುಣಿಯುತ್ತದೆ. ಮೋಡ ನಗುತ್ತದೆ. ಭೂಮಿ ಸೊಕ್ಕುತ್ತದೆ. ಶೂನ್ಯ ತುಂಬುತ್ತದೆ. ಇಡೀ ಭೂಮಿಯನ್ನು ನವಿಲು ಸವರಿ ರೆಕ್ಕೆ ಪಟಗುಟ್ಟುತ್ತ ತೆರೆಯುವ ಅವಳ ಸಾವಿಕ ಕಣ್ಣುಗಳ ಒಳಗೆ ಇವನ ಬೇಟ ನಡೆಯುತ್ತದೆ. ಕನ್ನಡದ ಪ್ರೇಮಕಾವ್ಯಗಳಲ್ಲಿ ಇದೊಂದು ವಿಲಕ್ಷಣವಾದ ನಾಟ್ಯದ ರಚನೆ. ಅಂಗಾತ ಮಗುಚಿ ಬಿದ್ದ ನವಿಲು ಭೂಮಿಯಾಗಿಬಿಡುತ್ತದೆ. ಭೂಮಿಯಾಗಿದ್ದ ಅವನು ನವಿಲಾಗಿ ಕೊಕ್ಕಲ್ಲಿ ಅವಳ ನೀಳ ಕುತ್ತಿಗೆಯನ್ನು ಕಚ್ಚಿ ಎತ್ತುತ್ತಾನೆ. ವಸಂತ ಪ್ರಾಪ್ತಿಯಾಗುತ್ತದೆ. ಅವಳೇ ನವಿಲಾಗಿಬಿಡುತ್ತಾಳೆ.

‘ಅವಳ ಸರ್ವಾಂಗಗಳಲ್ಲಿ
ಹರಿದಾಡಿದ, ಅವಳ
ತೋಳು ಎದೆ ತೊಡೆಗಳ
ಮೇಲೆಲ್ಲ ಮೂಡಿದವು ನವಿಲುಗರಿಗಳು,
ಹಚ್ಚೆಯೊತ್ತಿದ ನೀಲಿಗಾಯಗಳ
ಆಳದಲ್ಲಿ ಮಿನುಗಿದವು ಅವರ
ಕನಸಿನ ಮೊಟ್ಟೆಗಳು.’

ಇದೊಂದು ಕನ್ನಡ ಕಾವ್ಯದಲ್ಲಿ ಅಪೂರ್ವವಾದ ಅತಾರ್ಕಿಕ ಸ್ವಪ್ನ ಪ್ರತಿಮೆ, Surreal ವರ್ಣನೆ ಎನ್ನಬಹುದು. ಜಗತ್ತು ಅನಾವರಣಗೊಳ್ಳುವ ಬೆಡಗು ಇದು.

ವಿಸ್ಮೃತಿಯಿಂದ ಸ್ಮೃತಿ ಸೃಜಿಸುವ ಬೆಳಕಾಗಿ, ಲೋಕದ ರೂಢಿಯ ಎಚ್ಚರದ ನೈತಿಕತೆಯನ್ನು ಮೀರಿ ಹುಟ್ಟಿಬಿಡುವ ಸಂಬಂಧ ಇವರದು:

‘ರಾತ್ರಿಗೇ ಕಾಯಬೇಕು ಈ ಗೋಪಿಕೆ
ಹಗಲ ಕಣ್ಣುಗಳಿಗಿದು ಹಾದರ
ಹೋದರ ಹೋಗಲಿ ಲೋಕಕ್ಕೆ ಲೋಕ
ನೀನೊಬ್ಬ ನನ್ನೊಡನಿರುವವರೆಗೆ
ಪ್ರತಿ ರಾತ್ರಿಯೂ ಅಧರ ಹೊದರ ಹೊದರ’

ಈ ಪದ್ಯದ ರಾಧೆ ಸಾಂಸಾರಿಕ ಲೋಕದ ಮಾತಿನಲ್ಲೇ ಧೀರಳಾಗಿ ಹೇಳಿಕೊಳ್ಳುತ್ತಾಳೆ. ‘ನಾನು ನಿನ್ನ ಹೆಂಡತಿ’. ಹೆಂಡತಿಯಾಗಿದ್ದೇ ಆಕಾಶದಲ್ಲಿ ಅವನ ಸೆಳೆತಕ್ಕೆ ಸುತ್ತುವ ಭೂಮಿಯೂ ಇವಳು. ಅವನನ್ನೇ ಇವಳು ಹೆರುತ್ತಾಳೆ ಕೂಡ.

ಪ್ರತಿಕ್ಷಣ ಹೆಣ್ಣಾಗುತ್ತಾಳೆ. ನಕ್ಷತ್ರವಾಗುತ್ತಾಳೆ. ಜಗತ್ತಿನ ಮೂಲಾಧಾರವಾದ ಧಾತುಗಳೆಲ್ಲವೂ ಇವಳ ಪ್ರೇಮದ ಬೆಸುಗೆಯಲ್ಲಿವೆ. ಯಮುನೆ ಹರಿಯುವ ಈ ಪ್ರಪಂಚದಲ್ಲಿ ಅವರಿಬ್ಬರು ಇರುವಂತೆಯೇ, ಪ್ರಪಂಚವೂ ಹಾಗೇ ಅವರಿಬ್ಬರಲ್ಲೂ ಮೂಲಧಾತು ರೂಪದಲ್ಲಿ, elemental ಎನ್ನಿಸುವಂತೆ, ಇದೆ. ಹೊರಲೋಕ ಒಳಲೋಕವೇ ಆಗುತ್ತದೆ. ಕನ್ನಡ ಕಾವ್ಯದಲ್ಲಿ ಸಾಮಾನ್ಯವಾಗಿ ಈ ಎರಡನ್ನೂ ಬೇರೆ ಬೇರೆಯಾಗಿ ನೋಡುವ ಅಥವಾ ಒಂದಕ್ಕೆ ಇನ್ನೊಂದನ್ನು ಅಲಿಗರಿಯಾಗಿ ನೋಡಿ ನಮ್ಮ ವಿಶ್ಲೇಷಣೆಗೆ ಆಹ್ವಾನ ನೀಡುವ ಕವನ ಇದಲ್ಲ. ಅನಿಸಿದ್ದೆಲ್ಲ ಆಗುತ್ತಿರುವಂತೆ ಕಾಣುವ ಕವನದ ಮಾಂತ್ರಿಕತೆ ಇಲ್ಲಿದೆ. ಇಬ್ಬಗೆಯಲ್ಲಿ ಪದ ಬೆದರಿ ಹುಟ್ಟುವ ಮಾಂತ್ರಿಕತೆ ಇದು.

ನವೋದಯದ ಭಾವನಾತ್ಮಕತೆಯ ಮಗ್ನತೆಯಲ್ಲಿ ಈ ಕವನ ತೆಳುವಾಗಿ ಕೊನೆಯಾಗುವುದಿಲ್ಲ. ಈ ನಿರಂತರವಾದ ಪ್ರೀತಿಯ ಒಳಗೂ ವಿಘ್ನಗಳಿವೆ. ಕೃಷ್ಣ ಪ್ರಬುದ್ಧವಾಗುತ್ತ ಹೋದಂತೆ ಬದಲಾಗುತ್ತಾನೆ. ಕನ್ನಡದಲ್ಲಿ ಪುತಿನರ ‘ಗೋಕುಲ ನಿರ್ಗಮನ’ ಒಂದು ಮಹತ್ವದ ರಾಜಕೀಯ ರೂಪಕವೂ ಹೌದು. ಗೋಕುಲದಲ್ಲಿ ಕೊಳಲನೂದುವ ಗೋಪಿಯರ ಸಖ ಕೃಷ್ಣನೇ ತನ್ನ ಕಾಲದ ಸವಾಲುಗಳಿಗೆ ಎದುರಾಗಲು ಕೊಳಲನ್ನು ಬಿಸಾಡಿ ಚಕ್ರವನ್ನು ಕೈಯ್ಯಲ್ಲಿ ಹಿಡಿದು ಮಹಾಭಾರತದ ಲೋಕಪರಿವರ್ತನೆಯ ಕೃಷ್ಣನಾಗುತ್ತಾನೆ. ಈ ಪದ್ಯದಲ್ಲೂ ಅಂಥ ಒಂದು ಘಟನೆ ನಡೆಯುತ್ತದೆ. ಪ್ರೇಮ ಕಾಮಗಳ ಇನ್ನೊಬ್ಬ ದೊಡ್ಡ ಲೇಖಕ ಲಾರೆನ್ಸ್ ಹೇಳುವುದು ನೆನಪಾಗುತ್ತದೆ: ಪ್ರೇಮಿಗಳು ಒಬ್ಬರಲ್ಲೊಬ್ಬರು ಕಳೆದು ಹೋಗಿ ಏಕಗೊಳ್ಳಲಾರರು. ಎರಡು ನಕ್ಷತ್ರಗಳಂತೆ ತಮ್ಮ ವಿಶಿಷ್ಟತೆ ಕಳೆದುಕೊಳ್ಳದೇ ಅವರು ಪರಸ್ಪರ ಸತತವಾಗಿ ಆಕರ್ಷಿತರಾಗಿ ಇರುವುದು ಹೇಗೆಂಬುದೇ ಗಂಡು ಹೆಣ್ಣಿನ ಸಂಬಂಧದ ಸಮಸ್ಯೆ. ತೇಜಶ್ರೀ ಪದ್ಯದಲ್ಲಿ ಅವನು ಹೇಳುತ್ತಾನೆ:

‘ನಿನ್ನ ಬೇಜವಾಬ್ದಾರಿ ನನ್ನ
ಲೋಕಕಾರ್ಯಕ್ಕೆ ಭಂಗ ತಂದಿತು,
ನಿನ್ನ ಎಳೆ ಮಗುವಿನಂತ ಚೆಲ್ಲಾಟ
ನನ್ನ ಬಿಡುವಿನ ಸಮಯಕ್ಕೆ
ಕುತ್ತು ತಂತು,
ನಿನ್ನೊಡನೆ ಮೈ ಮರೆತು ಕಳೆದ
ಕಾಲಕ್ಕಾಗಿ ನಾನು ಲೋಕಕ್ಕೆ ಉತ್ತರಿಸಬೇಕಿದೆ!’ ನೀನೆಂದೆ
ದೀರ್ಘ ನಿಟ್ಟುಸಿರು ನನ್ನನ್ನು ಮೌನದ
ಗುಹೆಯೊಳಗೆ ತಳ್ಳಿ ಅಗುಳಿ ಹಾಕಿತು,
ನನ್ನ ಮೌನವನ್ನು ಭೇದಿಸಿಕೊಂಡು
ನಿನ್ನ ಮಾತು ಕಿವಿಯ ಪದರುಪದರುಗಳನ್ನು ಅಪ್ಪಳಿಸುತ್ತಿತ್ತು,
‘ನೀನು ಹೀಗೆ ನಡೆದುಕೊಳ್ಳಬಾರದಿತ್ತು….?
ಮಾತಿಗೆ ನನ್ನ ತುಟಿಗಳು ಹಾತೊರೆದು
ತೆರೆದ ಕ್ಷಣವೆ ಭೂಮಿ ಬಾಯ್ಬಿಟ್ಟು
ನನ್ನ ಸಮೇತ ಗುಹೆಗೆ ಗುಹೆಯೆ
ಮುಳುಗಿ ಮೌನ ಒಡೆಯಿತು.’

ಈ ಪದ್ಯದಲ್ಲಿ ಪ್ರೇಮಾಂಕುರವಾಗುವುದು, ಹಾಗೆಯೇ ರಾಗದ ಆಲಾಪದಂತೆ ಈ ದಿವ್ಯ ಮೈಥುನದ ರಾಧಾ-ಕೃಷ್ಣ ಲೀಲೆಯೂ ಸಾವನ್ನೂ ಜಗತ್ತನ್ನೂ ಒಳಗೊಳ್ಳುತ್ತ ಪೂರ್ಣವಾಗುವುದು, (ಅಂದರೆ ಪೂರ್ಣದ ಇನ್ನೊಂದರ್ಥದಲ್ಲಿ ಶೂನ್ಯವೂ ಆಗುವುದು)- ಕಾವ್ಯದ ಮಾಂತ್ರಿಕತೆಯಲ್ಲಿ ವರ್ಣಿತವಾಗಿದೆ. ಈ ದಿವ್ಯಾನುಭವ ಮಾಸಿಹೋಗದಂತೆ, ಅವಸಾನವಾಗದಂತೆ ಕವನ ಪ್ರಬುದ್ಧವಾಗುತ್ತದೆ.

‘ನೀನು ಬಾಯಿಕ್ಕುವವರೆಗೆ ಈ ಮೊಲೆಗಳಿಗೆ
ನಾನು ನಿನ್ನ ಪ್ರೇಯಸಿ, ನಿನ್ನ ಹೊಟ್ಟೆ ಅರ್ಧ
ತುಂಬಿದಾಗ ಮಡದಿ, ಪೂರ್ಣದಲ್ಲಿ ತಾಯಿ’

ಈ ಭಾಗ ಮುಂದುವರೆದು ರವೀಂದ್ರನಾಥ ಟಾಗೂರರ ಒಂದು ಪದ್ಯವನ್ನು ನೆನಪು ಮಾಡುವಂತೆ ಈ ಸಾಲುಗಳು ಬರುತ್ತವೆ:

‘ಬಾ ಎಡ ಮೊಲೆಗೆ, ಅಳಬೇಡವೋ
ಬಲಗಡೆಯ ಜೀವ ಕುಡಿದ ಮೇಲೆ
ಎಡಗಡೆಯ ಸಾವು ಕುಡಿಯದಿದ್ದರೇನು
ಪ್ರಯೋಜನ ಹೇಳು?
ತಗೋ, ಹಾಗೇ ಕಣ್ಮುಚ್ಚಿ ಹೀರು
ಸಾವನ್ನೊಂದಿಷ್ಟು, ಮೊಲೆಯ ಬಿಗಿ
ಹಗುರಾಗಲಿ, ನಿನ್ನಿಂದ
ಸಾವು ಬದುಕಾಗಲಿ’

ಹೀಗೆ ಸಾವು ಮತ್ತು ಬದುಕು, ಜೀವ ಮತ್ತು ದೇವ, ರಾಧಾ ಮತ್ತು ಕೃಷ್ಣ, ಅವನು ಮತ್ತು ಇವಳು, ಬೆಸೆಯುತ್ತ ಹೋಗುವಂತೆ ಈ ಪದ್ಯದ ಕೊನೆಯ ಸಾಲುಗಳು ಇವೆ. ಈ ಎರಡು ಸಾಲುಗಳು ಇಡೀ ಪದ್ಯದ ಅನುಭವವನ್ನು ನಮಗೆ ಒದಗಿಸುವಂತೆ ಇವೆ:

‘ನಾನು ಇಲ್ಲವಾಗುತ್ತದೆ.
ನೀನೇ ಎಲ್ಲವಾಗುತ್ತದೆ’.

ಕನ್ನಡ ಕಾವ್ಯಪ್ರಪಂಚಕ್ಕೆ ಈ ದಿನಗಳಲ್ಲಿ ಪ್ರವೇಶ ಮಾಡಿರುವ ಈ ಪದ್ಯ ಘನವಾದ ಒಂದು ಅನುಭವವನ್ನು ಸರಳವಾಗಿಯೇ ಅಭಿವ್ಯಕ್ತಗೊಳಿಸುತ್ತದೆ. ಬೇಂದ್ರೆಯವರು ಹೇಳುತ್ತಾರಂತೆ: ‘ಭಾಷೆ ಬೆದರಿ ಕಾವ್ಯವಾಗುತ್ತದೆ.’ ತೇಜಶ್ರೀ ಕವನದಲ್ಲಿ ಭಾಷೆ ಬೆದರಿ, ಬೆವರಿ, ಮಿಂಚಿ, ಮಳೆಗರೆದು ಸುಖದ ಅನುಭವವನ್ನೂ, ಸಾವಿನ ಅನುಭವವನ್ನೂ, ಮರುಹುಟ್ಟಿನ ವಿಸ್ಮಯವನ್ನೂ ಕೊಡುತ್ತ ಕಾವ್ಯವಾಗುತ್ತದೆ.

—-
ಪ್ರಕಟವಾಗಲಿರುವ
.ನಾ. ತೇಜಶ್ರೀಯವವ ದೀರ್ಘ ಕವಿತೆಗೆ ಪ್ರತಿಕ್ರಿಯೆ.