ನಾನು ಕನ್ನಡ ಮೀಡಿಯಂನಲ್ಲಿ ತೀರ್ಥಹಳ್ಳಿಯ ಸ್ಕೂಲುಗಳಲ್ಲಿ ಎಸ್ಸೆಸ್ಸೆಲ್ಸಿ ತನಕ ಓದಿದವನು. ನನ್ನ ಕೆಲವು ಪ್ರತಿಭಾವಂತ ಉಪಾಧ್ಯಾಯರಿಂದಾಗಿ ವಿಜ್ಞಾನದಲ್ಲಿ ರೀಸರ್ಚ್ ಮಾಡಬೇಕೆಂಬ ಹಂಬಲವನ್ನೂ ಹೈಸ್ಕೂಲಿನಲ್ಲೇ ಪಡೆದವನು. ಜೀವಶಾಸ್ತ್ರವನ್ನೂ ರಸಾಯನ ಶಾಸ್ತ್ರವನ್ನೂ ಮನದಟ್ಟಾಗುವಂತೆ ಕಲಿಸುತ್ತಿದ್ದ ದೊರೆರಾಜ್ ಎಂಬ ಉಪಾಧ್ಯಾಯರನ್ನು ಕೃತಜ್ಞತೆಯಿಂದ ಸ್ಮರಿಸಿ ಈ ಲೇಖನವನ್ನು ಬರೆಯುತ್ತಿದ್ದೇನೆ.

ತೀರ್ಥಹಳ್ಳಿಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ನಂತರ ಶಿವಮೊಗ್ಗದಲ್ಲಿ ದೊಡ್ಡಕಲ್ಲು ಕಟ್ಟಡದ ಆಗಿನ ಕಾಲದ ಇಂಟರ್‌ಮೀಡಿಯೇಟ್ ಕಾಲೇಜಿಗೆ ಬಂದವನೇ ನಾನು ಎಷ್ಟು ತಬ್ಬಿಬ್ಬಾಗಿ ನರಳಿದೆ ಎನ್ನುವುದನ್ನು ಈಗಲೂ ಮರೆಯಲಾರೆ. ನನಗೆ ಅತ್ಯಂತ ಪ್ರಿಯವಾಗಿದ್ದ ಭೌತಶಾಸ್ತ್ರ ಮತ್ತು ಗಣಿತ ಏನೇನೂ ಅರ್ಥವಾಗುವಂತೆ ತೋರಲೇ ಇಲ್ಲ. ಯಾಕೆಂದರೆ, ನಮ್ಮ ಅಧ್ಯಾಪಕರು ನಮಗೆ ಇಂಗ್ಲಿಷ್ ಮೀಡಿಯಂನಲ್ಲಿ ಈ ವಿಷಯಗಳನ್ನು ಕಲಿಸುತ್ತಿದ್ದರು. ನನಗೆ ಆ ದಿನಗಳಲ್ಲಿ ಇದ್ದ ಗುಮಾನಿಯನ್ನು ಇಲ್ಲಿ ಹೇಳಿಬಿಡುತ್ತೇನೆ. ಇಂಗ್ಲಿಷಿನಲ್ಲಿ ವಿಜ್ಞಾನವನ್ನು ಬೋಧಿಸುವ ಅಧ್ಯಾಪಕರಿಗೆ ಆ ವಿಷಯದ ಜ್ಞಾನವೇ ಇಲ್ಲ ಎಂದು ನನಗೆ ಅನಿಸಿತ್ತು. ಯಾಕೆಂದರೆ, ಅವರು ತಮ್ಮ ನೋಟ್ಸನ್ನು ನೋಡಿಕೊಳ್ಳುತ್ತ, ಒಂದೇ ರಾಗದಲ್ಲಿ ಪಾಠವನ್ನು ಮಾಡುತ್ತಿದ್ದರು. ನನ್ನಂತೆ ತಬ್ಬಿಬ್ಬಾಗದ ಕೆಲವು ವಿದ್ಯಾರ್ಥಿಗಳು-ಇಂಗ್ಲಿಷ್ ಮಾಧ್ಯಮದಿಂದಲೇ ಬಂದವರು-ಅವರು ಹೇಳಿದ್ದನ್ನು ನೋಟ್‌ಬುಕ್ಕಿನಲ್ಲಿ ಬರೆದುಕೊಳ್ಳುತ್ತಿದ್ದರು. ನ್ಯೂಟನ್‌ನ ಥರ್ಡ್ ಲಾ ಆಫ್ ಮೋಶನ್ ಎಂದರೇನು ಎಂದು ಕೇಳಿದರೆ, ಎಲ್ಲ ಹುಡುಗರೂ ಎದ್ದುನಿಂತು ತಾವು ಬಾಯಿಪಾಠ ಮಾಡಿದ್ದನ್ನು ಒಪ್ಪಿಸುತ್ತಿದ್ದರು.

ಜಗತ್ತಿನ ಖ್ಯಾತ ವಿಜ್ಞಾನಿ ಜಿ.ಬಿ.ಎಸ್. ಹಾಲ್ಡೇನ್ ತನ್ನ ಇಂಗ್ಲೆಂಡಿನ ಪೌರತ್ವವನ್ನು ಎರಡನೆಯ ಮಹಾಯುದ್ಧದ ನಂತರ ತ್ಯಜಿಸಿ, ಕೋಲ್ಕತ್ತಾಕ್ಕೆ ಬಂದು ನೆಲೆಸಿ, ಎಲ್ಲ ಬಂಗಾಳಿಗಳಂತೆ ಕಚ್ಚೆಪಂಚೆ ಉಟ್ಟು ಜುಬ್ಬಾಧರಿಸಿ ಓಡಾಡಿಕೊಂಡಿದ್ದ ಮಹಾವಿಜ್ಞಾನಿಯವನು. ತನಗೆ ಗೊತ್ತಿರುವ ಜೀವವಿಜ್ಞಾನ ಧಾರ್ಮಿಕರಿಗೂ ಗೊತ್ತಾಗಬೇಕೆಂದು ಅವನು ಇಂಗ್ಲೆಂಡಿನ ಕಮ್ಯುನಿಸ್ಟ್ ಪಕ್ಷದ ‘ಡೈಲಿ ವರ್ಕರ್’ ಪತ್ರಿಕೆಯಲ್ಲಿ ಕಾಲಂ ಬರೆಯುತ್ತಿದ್ದ ಮಹಾನುಭಾವನೀತ. ಅವನು ಒಮ್ಮೆ ಬರೆದ ಲೇಖನ ನೆನಪಾಗುತ್ತದೆ. ಕೋಲ್ಕತ್ತಾದ ಬೀದಿಯ ಸಂದಿಗೊಂದಿಗಳಲ್ಲಿ ಸಂಜೆ ಹೊತ್ತು ಅವನು ಓಡಾಡುವಾಗ ಹಲವು ಮನೆಗಳಲ್ಲಿ ಮಕ್ಕಳು-ಮಂತ್ರಪಾಠ ಮಾಡುತ್ತಿದ್ದಾರೆ ಎಂದು ಅವನು ತಿಳಿಯುವಂತೆ-ರಾಗವಾಗಿ ಕೆಲವು ವಾಕ್ಯಗಳನ್ನು ಮತ್ತೆ ಮತ್ತೆ ಪಠಿಸುತ್ತಿದ್ದರಂತೆ. ಇಂಗ್ಲಿಷಿನಂತೆ ಕಾಣುವ ಈ ವಿಚಿತ್ರ ಭಾಷೆಯಲ್ಲಿ ಅವರು ಯಾವ ದೈವಸ್ತುತಿಯನ್ನು ಮಾಡುತ್ತಿರಬಹುದು ಎಂದು ಇಣುಕಿ ನೋಡಿದಾಗ ಈ ಮಕ್ಕಳು ನ್ಯೂಟನ್ನನ ಚಲನೆಯ ನಿಯಮಗಳನ್ನು ಬಾಯಿಪಾಠ ಮಾಡುತ್ತಿರುವುದು ಅವನಿಗೆ ಅರಿವಾಯಿತಂತೆ.

ತೀವ್ರ ವಿಷಾದಗೊಂಡ ಹಾಲ್ಡೇನ್ ಬರೆದಿದ್ದ-ಹೀಗೆ ವಿಜ್ಞಾನವನ್ನು ಕಲಿತರೆ ಯಾರೂ ವಿಜ್ಞಾನಿಗಳಾಗುವುದಿಲ್ಲ! ತಾನು ಬಾಲಕನಾಗಿದ್ದಾಗ ಆಟವಾಡುತ್ತ ವಿಜ್ಞಾನವನ್ನು ಕಲಿತ ಬಗೆಯನ್ನು ಅವನು ಹೀಗೆ ವಿವರಿಸುತ್ತಾನೆ-ಯಾವುದಾದರೂ ಒಂದು ಪ್ರಾಣಿಯ ಎಲುಬಿನ ಚೂರನ್ನು ಕೈಯಲ್ಲಿ ಮುಚ್ಚಿ ಮೇಜಿನ ಒಳಗೆ ತಂದು ಎದುರುಕೂತಿದ್ದ ಹುಡುಗನಿಗೆ ಅದನ್ನು ಒಡ್ಡಬೇಕು. ಆ ಹುಡುಗನ ಕಣ್ಣಿಗೆ ಅದು ಕಾಣಬಾರದು. ಆದರೆ ಬೆರಳಿನಲ್ಲಿ ಮುಟ್ಟಿ ಇದು ಯಾವ ಪ್ರಾಣಿಯ ಯಾವ ಮೂಳೆ ಇರಬಹುದು ಎಂಬುದನ್ನು ಅವನು ಹೇಳಬೇಕು.

ಅಂದರೆ ವಿಜ್ಞಾನವೆನ್ನುವುದು ಒಳಮನಸ್ಸಿನಲ್ಲಿ ಸ್ಫೋಟಗೊಂಡು ಬೆಳೆಯುತ್ತಾ ಹೋಗುವ ವಿಚಾರ. ಒಂದು ಸೇಬಿನ ಹಣ್ಣು ಮರದಿಂದ ಕೆಳಗೆ ಬಿದ್ದಾಗ ನಿತ್ಯದ ಇಂಥ ಒಂದು ಘಟನೆ ನ್ಯೂಟನ್‌ನನ್ನು ಚಕಿತಗೊಳಿಸಿತು. ಈ ಬೆರಗಿನಿಂದ ಭೂಮಿಗಿರುವ ಆಕರ್ಷಣ ಶಕ್ತಿಯ ವಿಚಾರ ಅವನ ತಲೆಯಲ್ಲಿ ಮೊಳೆಯಿತು; ಮೊಳೆದಿದ್ದು ಬೆಳೆಯಿತು. ಇಂದಿನ ಆಧುನಿಕ ವಿಜ್ಞಾನಕ್ಕೆ ಅದು ನಾಂದಿಯಾಯಿತು. ನಮ್ಮಲ್ಲೂ ವಿಜ್ಞಾನ ಹಾಗೆಯೇ ಬೆಳೆದಿತ್ತು. ಗಣಿತದ ‘ಪೈ’ ಎಂದರೆ ಏನೆಂಬುದು ನ್ಯೂಟನ್ನನಿಗೆ ಗೊತ್ತಾಗುವುದಕ್ಕೆ ಮೊದಲೇ ನಮಗೆ ಗೊತ್ತಿತ್ತು. ಪ್ರಪಂಚದ ಮಹಾಸಂಶೋಧನೆಯಲ್ಲಿ ‘ಸೊನ್ನೆ’ (೦) ಭಾರತೀಯರಿಗೆ ಹೊಳೆದಿದ್ದು ಬಹಳ ಮುಖ್ಯವಾಯಿತು. ವಿಜ್ಞಾನಕ್ಕೂ ಇಂಗ್ಲಿಷಿಗೂ ಮಾತ್ರ ಸಂಬಂಧವಿದೆಯೆಂದು ಈಗಿನ ಮೂರ್ಖರು ವಾದಿಸತೊಡಗಿದ್ದಾರೆ.

ಮುಖ್ಯವಾಗಿ ಹೇಳಬೇಕಾದ್ದು ಇದು-ಮಾತಾಡುವ ಹಲವು ಭಾಷೆಗಳಿವೆ. ಆದರೆ ಪ್ರತಿ ವಿಜ್ಞಾನದ ಶಿಸ್ತಿಗೂ ಅದರದೇ ಆದ ಭಾಷೆ ಇದೆ. ಭೌತಶಾಸ್ತ್ರಕ್ಕೆ ಭೌತಶಾಸ್ತ್ರದ ಭಾಷೆ ಇದೆ; ರಸಾಯನಶಾಸ್ತ್ರಕ್ಕೆ ರಸಾಯನಶಾಸ್ತ್ರದ ಭಾಷೆ ಇದೆ. ಇದು ಭಾಷೆಯ ಒಳಗಿರುವ ಇನ್ನೊಂದು ಭಾಷೆ. ಈ ಭಾಷೆಯ ವ್ಯಾಕರಣವನ್ನು ತಿಳಿಯುವುದೇ ಆಯಾ ವಿಜ್ಞಾನದ ಶಿಸ್ತುಗಳನ್ನು ಅರಿಯುವ ಕ್ರಮ. ಈ ಅರಿಯುವ ಪ್ರಕ್ರಿಯೆಯಲ್ಲಿ ನಾವು ಮನೆಯಲ್ಲೂ ಬೀದಿಯಲ್ಲೂ ಆಡುವ ಭಾಷೆಯಲ್ಲಿ ಅರಿತದ್ದೇ ಆದರೆ ನಮಗೆ ಆದ ಅರಿವು ಆಪ್ತವಾದ ಅರಿವಾಗಿರುತ್ತದೆ. ಅದು ಸ್ಮರಣ ಶಕ್ತಿಗೆ ಸವಾಲನ್ನೊಡ್ಡುವ ಬಾಯಿಪಾಠದ ವಾಕ್ಯಗಳಾಗಿರುವುದಿಲ್ಲ. ನ್ಯೂಟನ್ನನ ಚಲನೆಯ ನಿಯಮಗಳು ಅರ್ಥವಾಗಬೇಕಾದರೆ ಅವು ಆಪ್ತವಾಗಿ ಅರ್ಥವಾಗಿರಬೇಕು; ನನ್ನದೇ ಎಂಬಂತೆ ಅರಿವಾಗಿರಬೇಕು, ವಿಜ್ಞಾನಿಯಾಗಬಲ್ಲ ಒಬ್ಬ ಹುಡುಗ ಭೌತಶಾಸ್ತ್ರದ ಭಾಷೆಯನ್ನು ತನಗೆ ಗೊತ್ತಿರುವ ಭಾಷೆಯಲ್ಲಿ ಕಲಿಯುತ್ತಿದ್ದರೆ ಮರದಿಂದ ಕೆಳಗೆ ಉದುರುವ ಒಂದು ಸೇಬು ಪ್ರಪ್ರಥಮ ಬಾರಿಗೆ ಎನ್ನುವಂತೆ ಆ ಮಗುವಿನಲ್ಲಿ ಭೂಮಿಯ ಆಕರ್ಷಣೆ ಶಕ್ತಿಯ ಜ್ಞಾನ ಒಂದು ಬೆರಗಾಗಿ ಪುನರ್ಜನ್ಮ ತಾಳುತ್ತದೆ. ಹಿಂದಿನ ವಿಜ್ಞಾನಿಗಳು ಹೇಳಿದ್ದೆಲ್ಲವೂ ಹೀಗೆ ನಮ್ಮ ನಮ್ಮ ಜೀವನದಲ್ಲಿ ಮರುಕಳಿಸಿ, ಮರುಹುಟ್ಟು ಪಡೆದು ನಾವು ವಿಜ್ಞಾನಿಗಳಾಗುವುದು.

ಭುವನೇಶ್ವರದಲ್ಲಿ ಭೌತಶಾಸ್ತ್ರ ಅಧ್ಯಯನಕ್ಕಾಗಿ ಒಂದು ದೊಡ್ಡ ಸಂಸ್ಥೆ ಇದೆ. ಅಲ್ಲಿಗೆ ಒಮ್ಮೆ ನನ್ನನ್ನು ವಿಶೇಷ ಉಪನ್ಯಾಸ ಕೊಡಲು ಕರೆದಿದ್ದರು. ಆಗ ನಾನು ಒಂದು ಭಂಡ ಧೈರ್ಯದಿಂದ ಆ ಮಹಾವಿಜ್ಞಾನಿಗಳ ಎದುರು ಒಂದು ಮಾತನ್ನು ಹೇಳಿದೆ- ನಮ್ಮಲ್ಲಿ ‘ಒರಿಜಿನಲ್’ ಆಗಿ ಚಿಂತಿಸುವ ವಿಜ್ಞಾನಿಗಳು ಬಹಳ ಕಡಿಮೆ ಇದ್ದಾರೆ ಎಂದು.

ತಂತ್ರಜ್ಞಾನಿಗಳೆಲ್ಲ ವಿಜ್ಞಾನಿಗಳಲ್ಲ. ನಮ್ಮಲ್ಲಿ ಹಲವು ವಿಜ್ಞಾನಿಗಳು ತಾವು ಬಾಯಿಪಾಠ ಮಾಡಿದ್ದನ್ನು ಕ್ರಮೇಣ ದಕ್ಕಿಸಿಕೊಳ್ಳುತ್ತ ಪಕ್ವವಾಗುವುದಿಲ್ಲ ಎಂದೇನೂ ನಾನು ಹೇಳಲಿಲ್ಲ. ಆದರೆ ಒಂದು ಭಾಷೆಯನ್ನು ಮಹಾದಿಗಿಲಿನಲ್ಲಿ ಕಲಿತು, ಅದನ್ನು ಕೈವಶ ಮಾಡಿಕೊಂಡು, ಅದರಲ್ಲಿ ಉರು ಹಚ್ಚಿದ್ದನ್ನು ಕ್ರಮೇಣ ಅರಿಯುತ್ತ ಬೆಳೆಯುವ ಈ ಸಂಕಟ ಅನಿವಾರ್ಯವೆಂದು ತಿಳಿದ ಮೂರ್ಖ ದೇಶ ನಾವಲ್ಲವೇ? ಅಲ್ಲಿದ್ದ ಒಬ್ಬ ಮಹಾವಿಜ್ಞಾನಿ ನನ್ನೊಡನೆ ಊಟ ಮಾಡಲು ಕೂತಾಗ, ‘ನೀವು ಹೇಳಿದ್ದು ನಿಜ’ ಎಂದ. ನಮ್ಮಲ್ಲಿ ಬಹಳಷ್ಟು ವಿಜ್ಞಾನಿಗಳು ಎರಡನೆಯ ದರ್ಜೆಯವರು. ಅವರ ಶಕ್ತಿಯೆಲ್ಲ ತಮಗೆ ಗೊತ್ತಿಲ್ಲದ ಒಂದು ಭಾಷೆಯಲ್ಲಿ ಕಲಿತು, ಅದನ್ನು ದಕ್ಕಿಸಿಕೊಳ್ಳುವುದರಲ್ಲೇ ವ್ಯಯವಾಗಿಬಿಟ್ಟಿದೆ.

ಮನೆಯಲ್ಲೇ ಇಂಗ್ಲಿಷ್ ಮಾತನಾಡುವ ಭಾಗ್ಯವಂತರ ಬಗ್ಗೆ ನಾನಿದನ್ನು ಹೇಳುತ್ತಿಲ್ಲ. ಅವರ ಮಕ್ಕಳು ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ದೇಶದ ಐಐಟಿಗಳಲ್ಲೋ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲೋ ಕಲಿತು ಅಮೆರಿಕಕ್ಕೆ ರಫ್ತಾಗುವ ವಸ್ತುಗಳಾಗಿಬಿಡುತ್ತಾರೆ. ಎಲ್ಲೋ ಕೆಲವು ಜನ ಮಾತ್ರ ಇಲ್ಲಿ ಉಳಿಯುತ್ತಾರೆ. ಅದು ಭಾರತದ ಭಾಗ್ಯ. ಆದರೆ ಮಹಾವಿಜ್ಞಾನಿಗಳಾಗಬಲ್ಲ ನಮ್ಮ ದೇಶದ, ನಮ್ಮ ಭಾಷೆಗಳನ್ನು ಮಾತಾಡುವ ಬಡಜನರ ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ಇಂಗ್ಲಿಷ್‌ನಲ್ಲೇ ಫೇಲಾಗುತ್ತಾರೆ. ಅವರಿಗೆ ವಿಜ್ಞಾನಿಗಳಾಗಿ ಬೆಳೆಯುವ ಅವಕಾಶವೇ ಇರುವುದಿಲ್ಲ.

ನನ್ನದೊಂದು ಉಪಮೆ ಇದು. ನೀವು ಒಂದು ಕೊಳದಲ್ಲಿ ಗಾಳ ಹಾಕಿ ಮೀನನ್ನು ಹಿಡಿಯಬಹುದು ಅಥವಾ ಬಲೆ ಬೀಸಿ ಸಮುದ್ರದಲ್ಲಿ ಮೀನನ್ನು ಹಿಡಿಯಬಹುದು. ಇಂಗ್ಲಿಷ್ ಬಲ್ಲವರ ಮಕ್ಕಳಾಗಿ ಇಂಗ್ಲಿಷ್‌ನಲ್ಲೇ ವಿಜ್ಞಾನ ಕಲಿಸುವುದು ತಿಳಿದವರ ಕೊಳದಲ್ಲಿ ಮೀನು ಹಿಡಿದಂತೆ. ಆದರೆ ಸಮುದ್ರಕ್ಕೆ ಬಲೆ ಬೀಸುವುದು ಎಲ್ಲ ಭಾರತೀಯ ಭಾಷೆಗಳನ್ನೂ ಬಳಸಿ ದೊಡ್ಡ ದೊಡ್ಡ ಮೀನುಗಳನ್ನು ಹಿಡಿದಂತೆ. ನೀವು ಕೈಗಾರಿಕೀಕರಣದ ಇತಿಹಾಸವನ್ನು ನೋಡಿದಾಗ ಅತ್ಯದ್ಭುತವಾದ, ಹೊಸತಾದ ಎಷ್ಟೋ ಸಾಮಗ್ರಿಗಳನ್ನು ತಯಾರಿಸಿದವರು ಕೆಳ ಮಧ್ಯಮ ವರ್ಗದ ಕುಶಲಕರ್ಮಿಗಳು. ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ಕಬ್ಬಿಣ ಕೆಲಸ ಮಾಡುವವರಲ್ಲಿ ಹೊಸತನ್ನು ಸೃಷ್ಟಿಸುವ ಶಕ್ತಿ ಇದೆ. ಆದರೆ ಇಂಗ್ಲಿಷ್ ಮಾಧ್ಯಮದಿಂದಾಗಿ ಅವರು ತಾವು ಕಲಿಯಬೇಕಾದ್ದನ್ನು ಕಲಿಯಲಾರದೆ ಹೋದವರು.

ನ್ಯೂಟನ್ ವಿಜ್ಞಾನದ ಬಗ್ಗೆ ಬರೆಯುವಾಗ ವಿಜ್ಞಾನದ ಭಾಷೆ ಲ್ಯಾಟಿನ್ ಆಗಿತ್ತು. ಯಾಕೆಂದರೆ ಅವನು ಉಳಿದ ಐರೋಪ್ಯ ವಿಜ್ಞಾನಿಗಳ ಜತೆ ಸಂವಾದ ಮಾಡಲು ಬೇಕಾದ ಭಾಷೆ ಲ್ಯಾಟಿನ್ ಆಗಿತ್ತು. ಆದರೆ ವಿಜ್ಞಾನದ ಮಹಾಕ್ರಾಂತಿ ನಡೆದಿದ್ದು ಡಾರ್ವಿನ್‌ನಿಂದ. ಡಾರ್ವಿನ್ ಅವನ ‘ಥಿಯರಿ ಆಫ್ ಎವಲೂಶನ್’ ಬರೆದಿದ್ದು ಜನಸಾಮಾನ್ಯರ ಭಾಷೆಯಾಗಿದ್ದ ಇಂಗ್ಲಿಷಿನಲ್ಲಿ.

ಜ್ಞಾನದ ಭಾಷೆಯಾಗಿ ನಮಗೆ ಇಂಗ್ಲಿಷ್ ಬೇಡವೆ? ಎಂದು ಕೇಳಿದರೆ ಅದಕ್ಕೆ ಉತ್ತರ-ಬೇಕೇಬೇಕು; ಆದರೆ ಅದು ಅರ್ಥಮಾಡಿಕೊಳ್ಳುವ ಒಂದು ಭಾಷೆಯಾಗಿ. ಸಿ.ವಿ. ರಾಮನ್ ಕಾಲದಲ್ಲಿ ಎಲ್ಲ ಭೌತಶಾಸ್ತ್ರಜ್ಞರಿಗೂ ಜರ್ಮನ್ ಭಾಷೆ ಅಗತ್ಯವಾದ ಭಾಷೆಯಾಗಿತ್ತು. ಇದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಕನ್ನಡದಲ್ಲೋ, ತಮಿಳಿನಲ್ಲೋ, ತೆಲುಗಿನಲ್ಲೋ ತನ್ನ ಚಿಕ್ಕ ವಯಸ್ಸಿನಿಂದ ವಿಜ್ಞಾನದ ಬಗ್ಗೆ ಚಿಂತಿಸಲು, ವಿಚಾರಿಸಲು ಕಲಿತ ಒಬ್ಬ ವಿದ್ಯಾರ್ಥಿ ತಾನು ಕಲಿತಿದ್ದನ್ನು ಮೈಗೂಡಿಸಿಕೊಂಡಿರುತ್ತಾನೆ; ತನ್ನದನ್ನಾಗಿ ಮಾಡಿಕೊಂಡಿರುತ್ತಾನೆ. ಇಂಥ ಒಬ್ಬ ವಿದ್ಯಾರ್ಥಿ ಇಂಗ್ಲಿಷನ್ನೂ ಒಂದು ಭಾಷೆಯಾಗಿ ಕಲಿತಿರಬೇಕು. ಅಂದರೆ ಕನ್ನಡಿಗನಿಗೆ ಜ್ಞಾನದ ಸೃಷ್ಟಿಯ ಭಾಷೆ ಕನ್ನಡವಾಗಿರಬೇಕು. ಅನಿವಾರ್ಯವಾಗಿ ಈ ಕಾಲದಲ್ಲಿ ಅದರ ಅಭಿವೃದ್ಧಿಯ ಭಾಷೆ ಇಂಗ್ಲಿಷ್ ಆಗಿರಬೇಕು. ಆಗ ಪ್ರಾಯಶಃ ಬುದ್ಧಿವಂತನಾದವನು ಕೇವಲ ಬುದ್ಧಿವಂತನಾಗಿರುವುದಿಲ್ಲ. ಜ್ಞಾನವನ್ನೂ ಸೃಷ್ಟಿಸಬಲ್ಲವನಾಗಿರುತ್ತಾನೆ. ಐನ್‌ಸ್ಟೀನ್ ಕೂಡ ಜ್ಞಾನವನ್ನು ಸೃಷ್ಟಿಸಿದ್ದು ಜರ್ಮನ್‌ನಲ್ಲಿ; ಆದರೆ ಸಂವಹನಕ್ಕೆ ಆತ ಬಳಸಿದ್ದು ಇಂಗ್ಲಿಷನ್ನು. ಆದ್ದರಿಂದ ನಮ್ಮ ಎಲ್ಲಾ ವಿಜ್ಞಾನಿಗಳೂ ಕನ್ನಡದಲ್ಲಿ ಕಲಿತರೂ ಇಂಗ್ಲಿಷಿನಲ್ಲಿ ಸಂವಹನ ಮಾಡುವ ಶಕ್ತಿಯನ್ನು ಪಡೆದಿರಬೇಕು. ನಮಗೆಲ್ಲರಿಗೂ ಪೂಜ್ಯರಾದ ರಾಜಾಜಿ, ಇಂಗ್ಲಿಷ್ ಪರವಾಗಿ ವಾದಿಸುವ ರಾಜಕಾರಣಿಯಾಗಿದ್ದರು. ಆಗ ಅವರಿಗೆ ಇದ್ದಿದ್ದು ಜ್ಞಾನದ ಅಭಿವೃದ್ಧಿ ಮತ್ತು ಸಂವಹನಕ್ಕಾಗಿ ಇಂಗ್ಲಿಷ್ ಬೇಕೆಂಬುದು. ಆದರೆ ಜ್ಞಾನದ ಸೃಷ್ಟಿಯಾಗುವುದು ಮಾತೃಭಾಷೆಯಲ್ಲೇ ಎಂಬುದು ಟ್ಯಾಗೋರರಿಗೂ, ಗಾಂಧೀಜಿಗೂ ಅತ್ಯಂತ ಸ್ಪಷ್ಟವಾಗಿ ಗೊತ್ತಿತ್ತು. ಕೊನೆಯದಾಗಿ ಒಂದು ಗುಟ್ಟಿದೆ. ಅದನ್ನು ನಾವು ತಿಳಿಯಬೇಕು – ನಮ್ಮ ಮಾರುಕಟ್ಟೆಯ ವಿಸ್ತರಣೆಗೆ ಮಾತ್ರ ನಾವು ಇಂಗ್ಲಿಷು ಬೇಕು ಎಂದು ಕೇಳುತ್ತಿರುವುದು. ಈಗ ಇಡೀ ಜಗತ್ತೆ ಅಭಿವೃದ್ಧಿಯ ಪಥದಲ್ಲಿ ಕೂಲಿಗಾರರನ್ನಾಗಿ ಮಾಡಲು ಹಳ್ಳಿಗಳಲ್ಲೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಈ ನಮ್ಮ ಸರಕಾರ ಹುಟ್ಟು ಹಾಕುತ್ತಿದೆ. ಇವರನ್ನೇ ನಾನು ‘ಐಟಿ ಕೂಲಿಗಳು’ ಎಂದು ಕರೆಯುವುದು. ನಮ್ಮ ಐಟಿ ಮಾಲೀಕರನ್ನಲ್ಲ ನಾನು ‘ಸರೇಗಾರರು’ ಎಂದು ಕರೆಯುವುದು. ಹಿಂದೆ ಕಾಫಿ ತೋಟದಲ್ಲಿ ಕೂಲಿ ಮಾಡಲು ಈ ಸೇರೆಗಾರರು ಜನರನ್ನು ಬೇರೆ ಬೇರೆ ದೇಶಗಳಿಗೆ ಕರೆದೊಯ್ಯುತ್ತಿದ್ದರು. ಅವರು ಸೂರ್ಯನ ಬಿಸಿಲಿನಲ್ಲಿ ಕೆಲಸ ಮಾಡಿ, ಆರೋಗ್ಯವಂತ ಮಕ್ಕಳನ್ನಾದರೂ ಹುಟ್ಟಿಸುತ್ತಿದ್ದರು. ನಮ್ಮ ಕಾಲದ ದೊಡ್ಡ ಲೇಖಕ ವಿ.ಎಸ್. ನೈಪಾಲ್ ಹುಟ್ಟಿದ್ದು ಹೀಗೆ. ಈಗ ನಲವತ್ತನೆಯ ವರ್ಷಕ್ಕೇ ಮುಪ್ಪು ಅಡರುವಂತೆ ಮಾಡುವ ಯಾಂತ್ರಿಕ ಕೆಲಸಕ್ಕೆ ಇಂಗ್ಲಿಷ್ ಬೇಕೆಂದು ನಮ್ಮ ಮಂತ್ರಿಗಳು ಹಳ್ಳಿಹಳ್ಳಿಯಲ್ಲೂ ಆಂಗ್ಲ ಮಾಧ್ಯಮದ ಶಾಲೆಗಳನ್ನು ಮಾಡಿ, ‘ಜನೋಪಕಾರ’ ಎಸಗುತ್ತಿದ್ದಾರೆ!

—-
ಪ್ರ
: ವಿಜಯ ಕರ್ನಾಟಕ, ೨೬೧೧
ನಿರೂಪಣೆ: ಬಿ.ಎಸ್. ಜಯಪ್ರಕಾಶ ನಾರಾಯಣ