ಡಾ. ಮೊಗಸಾಲೆಯವರ ‘ಕಾಮನೆಯ ಬೆಡಗು’ ಸಂಕಲನದ ಕೆಲವು ಮುಖ್ಯ ಕವನಗಳನ್ನು ಕುರಿತಾದ ನಮ್ಮ ವಿಚಾರಗಳನ್ನು ಬದಲಿಸುವ ಶಕ್ತಿಯನ್ನು ಪಡೆದಿವೆ. ಇದೊಂದು ಗಮನಿಸಬೇಕಾದ ಅಪರೂಪದ ಘಟನೆ. ಆರ್ದ್ರವಾದ ತನ್ನ ಮನಸ್ಸನ್ನು ಸಹೃದಯನಿಗೆ ಬಿಚ್ಚಿ ತೋರುವುದು, ಆರ್ದ್ರಗೊಳ್ಳುವಂತೆ ಓದುಗನನ್ನು ಪ್ರೇರೇಪಿಸುವುದು-ಎರಡೂ ನಮಗೆ ಪರಿಚಿತವಾದ್ದೆ. ಇಂತಹ ಪದ್ಯಗಳಿಗೆ ನಾವು ಬರೆಯುವ ವಿಶ್ಲೇಷಣಾತ್ಮಕ ವಿಮರ್ಶೆ ‘ಕನ್ನಿಂಗ್ ಕಾಮೆಂಟರಿ’ಯಂತೆ ಸುಖದಾಯಕವಾಗಿರುತ್ತದೆ. ಆದರೆ ಓದುತ್ತ ಇರುವುದು ನಮಗೆ ಗೊತ್ತಿರುವ ಪ್ರಪಂಚದ ಉದ್ದೀಪ್ತ ಚಿತ್ರಣ ಮಾತ್ರವಲ್ಲ; ಪದ್ಯವೇ ನಮ್ಮೆಲರನ್ನು ಮರು ಓದಿಗೆ ಪ್ರೇರೇಪಿಸುತ್ತಿದೆ. ಅಥವಾ ಪದ್ಯವೇ ನಮ್ಮನ್ನು ಓದುತ್ತ ಇದೆ ಎನ್ನಿಸಿದಾಗ ನಾವು ಓದುವ ಕ್ರಮ ಅರಿಯುವ ಕ್ರಮವೂ ಆಗಿರುತ್ತದೆ. ಕವನದ ಪದ ಮತ್ತು ಅರ್ಥದ ಶರೀರ ನಾಮ ಎದುರಾಗುವ ‘ಪದಾರ್ಥ’ ಲೋಕವನ್ನು ಹೊಸ ಜ್ಞಾನದಲ್ಲಿ ಬೆರಗುವಂತೆ ಮಾಡುತ್ತದೆ. ಮೊಗಸಾಲೆ ನಿತ್ಯದ ಸಾಮಾನ್ಯನಲ್ಲಿ ಸದಾ ತೊಡಗಿದ್ದೇ ಕಾವ್ಯ ರಚಿಸುತ್ತಾರೆ. ಹಲವು ಬಾರಿ ಇದು ನಡೆಯುವುದು. ಉದ್ದೀಪನಗೊಂಡ ‘ಊಹೆಯಲ್ಲಿ’ ಇದೊಂದು ಶಬ್ದದಲ್ಲಿ ನಡೆಯುವ ಲೀಲೆ. ಈ ಲೀಲೆಯಲ್ಲಿ ಮುದವಿದೆ, ಮನೋರಂಜನೆಯಿದೆ. ಆದರೆ ಕೆಲವೊಮ್ಮೆ ಈ ಊಹೆಯ ಲೀಲೆಯೇ ಗಾಢವಾದ ಕಲ್ಪಕ ಶಕ್ತಿಯಾಗಿ ಕವಿಯಲ್ಲಿ ಮೂಡಿದಾಗ ನಮಗೆ ಗೊತ್ತಿರುವುದು ಎಂದು ನಾವು ತಿಳಿದಿದ್ದನ್ನು ಕಣ್ಮುಚ್ಚಿ ಮತ್ತೆ ನೋಡುವಂತೆ ಮಾಡುತ್ತಾರೆ. ನಿತ್ಯದ ವ್ಯವಹಾರದಲ್ಲಿ ಸಾಧಾರಣಗೊಂಡು ಜಡ್ಡಾದ್ದನ್ನು ಹೊಸ ಅರಿವಿನಲ್ಲಿ ಹೊಳೆಯಿಸಿಕೊಳ್ಳುವ ಈ ಬಗೆಯ ಕಾವ್ಯದ ವ್ಯಾಪಾರಕ್ಕೂ ನಮ್ಮನ್ನು ತೆರೆದಿರುವ ಈ ಸಂಕಲನದ ಕೆಲವು ಕವಿತೆಗಳು ಕನ್ನಡ ಲೋಕದ ಮುಖ್ಯ ಕವಿತೆಗಳು ಎಂದು ತಿಳಿದಿದ್ದೇನೆ.

—-
ಕಾಮನೆಯ
ಬೆಡಗು ಸಂಕಲನಕ್ಕೆ ಬರೆದ ಹಿನ್ನುಡಿ. ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು, ೨೦೧೦