ಗೆಳೆಯ ನಾಗತಿಹಳ್ಳಿ ರಮೇಶ್ ಜೊತೆಗೆ ಕೆ.ಎಚ್. ರಂಗನಾಥ್ ಅವರ ಬಗೆಗೆ ಮಾತನಾಡುತ್ತಿದ್ದೆ. ಆಗ ಒಂದು ವಿಷಯ ಹೊಳೆಯಿತು. ಅದು ಮಾರ್ಕ್ಸ್ ಹೇಳುವ ಮಾತಿರಬೇಕು. ಅದನ್ನು ಹೀಗೂ ಹೇಳಬಹುದೇನೋ- ‘ನಾವು ಒಳ್ಳೆಯದರ ಬಗ್ಗೆ ಮಾತನಾಡದಿದ್ದರೆ ಕೆಟ್ಟದ್ದು (ಈವಿಲ್) ತಲೆ ಎತ್ತುತ್ತದೆ.’ ಯಾಕೆ ನಮ್ಮ ಹಿಂದಿನ ತಲೆಮಾರಿನವರು ಕೆ.ಎಚ್. ರಂಗನಾಥ್, ಎಚ್.ಜಿ. ಗೋವಿಂದೇಗೌಡ, ಎಂ.ವೈ. ಘೋರ್ಪಡೆಯಂಥವರ ಬಗೆಗೆ ಮಾತನಾಡಿಲ್ಲ? ಬರೆದಿಲ್ಲ? ನಮ್ಮ ವಿದ್ಯಾರ್ಥಿಗಳು ಓದುವಂತೆ ಮಾಡಿಲ್ಲ? ಹಾಗೆ ಮಾಡಿದ ಕಾರಣಕ್ಕೆ ಬದಲಾವಣೆಗಳಾಗಿಬಿಡುತ್ತವೆ, ಕ್ರಾಂತಿಯಾಗಿಬಿಡುತ್ತದೆ ಎಂದಲ್ಲ. ಇಂದು ನಾವು ರಾಜಕೀಯದಲ್ಲಿ ಕಾಣುತ್ತಿರುವ ಈವಿಲ್‌ನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನೋಡುತ್ತಿರಲಿಲ್ಲವೇನೋ. ನಮ್ಮ ಬರಹಗಾರರಿಗೆ/ ಲೇಖಕರಿಗೆ, ಮಾಧ್ಯಮ ಮಿತ್ರರಿಗೆ, ಅಧ್ಯಾಪಕರಿಗೆ ಇಂಥವರು ಹೀರೋಗಳಾಗಬೇಕಿತ್ತು. ಆದರೆ….

ಒಂದು ವೇಳೆ ಇಂಥವರು ಹೀರೋಗಳಾಗಿದ್ದರೆ ಒಂದಷ್ಟು ಜನರಾದರೂ ರಾಜಕೀಯದಲ್ಲಿ ಇಂಥವರ ಆದರ್ಶವನ್ನು, ಇಚ್ಛಾಶಕ್ತಿಯನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಿದ್ದರೇನೋ. (ಈಗಲೂ ಎಲ್ಲೋ ಬೆರಳಣಿಕೆಯಷ್ಟು ಮಂದಿ ಇರಬಹುದು) ಇಂಥ ಸರಳ, ಸಜ್ಜನ, ಪ್ರಾಮಾಣಿಕ ವ್ಯಕ್ತ್ರಿತ್ವಗಳು ಮೂಲೆಗೆ ಸರಿದು ಕಳ್ಳ ಸುಳ್ಳರ ದಂಡೇ ಇವತ್ತು ರಾಜಕೀಯದಲ್ಲಿ ಕಾಣತೊಡಗಿದೆ. ಮತ್ತೆ ನಾವು ಕೆ.ಎಚ್. ರಂಗನಾಥ್, ಗೋವಿಂದೇಗೌಡ, ಘೊರ್ಪಡೆ, ಶಾಂತವೇರಿ ಗೋಪಾಲಗೌಡರಂಥವರ ವಿಚಾರಗಳನ್ನು ಮುನ್ನೆಲೆಗೆ ತರಬೇಕಾದ ತುರ್ತು ಇವತ್ತು ತುಂಬಾ ಇದೆ. ತಮ್ಮ ಬರಹಗಳ ಮೂಲಕ ನೈತಿಕ ಎಚ್ಚರ ಮೂಡಿಸಿದ ಲಂಕೇಶ್ ನೆನಪಾಗುತ್ತಾರೆ.

ಬಹಳ ಹಿಂದೆಯೇ ತೇಜಸ್ವಿಯವರು ಗೋವಿಂದೇಗೌಡರ ಬಗೆಗೆ ಬರೆಯುತ್ತಾ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಯಾವ ಅಧಿಕಾರಿ, ರಾಜಕಾರಣಿ, ಮಠಾಧೀಶರ ಮುಲಾಜಿಗೂ ಬಗ್ಗದೆ, ಒಂದೇ ಒಂದು ಪೈಸೆ ಮುಟ್ಟದೆ ಸುಮಾರು ಐವತ್ತು ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿದ್ದರ ಬಗೆಗೆ ವಿಶ್ಲೇಷಿಸುತ್ತಾರೆ. ಅನಂತಮೂರ್ತಿಯವರಂಥೂ ಮೊದಲಿನಿಂದಲೂ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ಮೇಲಿಂದ ಮೇಲೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. (ಅವರ ‘ಕಾಲಮಾನ’ ಪುಸ್ತಕದಲ್ಲಿ ‘ಭ್ರಷ್ಟಾಚಾರ ಒಂದು ಸ್ವಗತ’ ಎಂಬ ಲೇಖನವೂ ಇದೆ) ಅವರ ಚಿಂತನೆಗಳು ಈ ಪುಸ್ತಕದಲ್ಲಿನ ಅಣ್ಣ ಹಜಾರೆಯವರನ್ನು ಕುರಿತ ಲೇಖನಗಳಲ್ಲಿ ಮತ್ತಷ್ಟು ವಿಸ್ತಾರಗೊಂಡಿವೆ.

ನಮ್ಮೆಲ್ಲರನ್ನು ಕಾಡುವ ಸಂಗತಿಗಳ ಕುರಿತು, ಸದ್ಯದ ಸಂಕಟ-ತಲ್ಲಣಗಳಗಳ ಕುರಿತು ಬರೆಯುತ್ತಲೇ ಅನಂತಮೂರ್ತಿ ಅವರು ನಮ್ಮ ಕಾಲದ ಹಲವು ಲೇಖಕರ ಕೃತಿಗಳ ಕುರಿತೂ ಚಿಂತಿಸುತ್ತಾರೆ. ಈ ಹೊತ್ತಿನಲ್ಲಿ ತಮ್ಮ ಬಿಡುವಿಲ್ಲದ ಕೆಲಸ, ಓಡಾಟ, ಅನಾರೋಗ್ಯದ ನಡುವೆಯೂ ಅವರು ಹೀಗೆ ಆರೋಗ್ಯಪೂರ್ಣವಾಗಿ, ದಾರ್ಶನಿಕವಾಗಿ, ಕವಿಯಾಗಿ ಮಾತನಾಡಬಲ್ಲರು ಎಂಬುದು ಅವರ ಬಗೆಗಿನ ಗೌರವವನ್ನು ಹೆಚ್ಚಿಸುವ ಸಂಗತಿಯಾಗಿದೆ.

ಅಭಿನವದ ಪ್ರಕಟಣೆಗಳಲ್ಲಿ ಶ್ರೀ ಯು. ಆರ್. ಅನಂತಮೂರ್ತಿ ಅವರ ಪುಸ್ತಕಗಳೇ ಹೆಚ್ಚು ಪ್ರಕಟವಾಗಿರುವುದು. ಈ ಪುಸ್ತಕ ಸೇರಿದಂತೆ (ಕೆಲ ಪುನರ್ ಮುದ್ರಿತ ಕೃತಿಗಳು ಸೇರಿ) ಈವರೆವಿಗೆ ಹನ್ನೆರಡು ಪುಸ್ತಕಗಳು ಅಭಿನವದಿಂದ ಹೊರಬಂದಿವೆ. ಇದು ಒಂದು ಪ್ರಕಾಶನ ಸಂಸ್ಥೆಗೆ ಹೆಮ್ಮೆಯ ಸಂಗತಿ. ೨೦೦೯ರಲ್ಲಿ ಅಭಿನವ ಹೊರತಂದ ಅವರ ಲೇಖನಗಳ ಸಂಕಲನ ‘ಕಾಲಮಾನ’ದ ನಂತರ ‘ಆಚೀಚೆ’ ಪ್ರಕಟವಾಗುತ್ತಿದೆ. ಈ ಮಧ್ಯೆ ‘ಶತಮಾನದ ಕವಿ’ ಮಾಲಿಕೆಯಲ್ಲಿ ಮೂರು ಪುಸ್ತಕಗಳು ಅಭಿನವದಿಂದಲೇ ಪ್ರಕಟಗೊಂಡಿವೆ.

ಈ ಸಂಕಲನವನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀ ಯು.ಆರ್. ಅನಂತಮೂರ್ತಿ ಅವರಿಗೆ ಮತ್ತು ಶ್ರೀಮತಿ ಎಸ್ತರ್ ಹಾಗು ಶ್ರೀ ಶರತ್ ಅನಂತಮೂರ್ತಿ ಅವರಿಗೆ ತುಂಬು ಪ್ರೀತಿಯ ವಂದನೆಗಳು.

ಇಲ್ಲಿಯ ಲೇಖನಗಳನ್ನು ಪ್ರಕಟಿಸಿದ ಮಾತುಕತೆ, ಪ್ರಜಾವಾಣಿ, ಮಯೂರ, ವಿಜಯ ಕರ್ನಾಟಕ, ಹಿಂದೂಸ್ಥಾನ್ ಟೈಮ್ಸ್, ದೇಶಕಾಲ ಮತ್ತು ಆಯಾ ಪತ್ರಿಕೆಗಳ ಸಂಪಾದಕರಿಗೆ, ಪುಸ್ತಕಗಳ ಲೇಖಕರು ಮತ್ತು ಪ್ರಕಾಶಕರಿಗೆ, ಭಾಷಣಗಳನ್ನು, ಸಂವಾದಗಳನ್ನೇರ್ಪಡಿಸಿದ ಸಂಘಟಕರು ಮತ್ತು ಸಂಸ್ಥೆಯವರಿಗೆ ಧನ್ಯವಾದಗಳು.

ಕರಡು ತಿದ್ದಿದ ಶ್ರೀಮತಿ ಜ. ನಾ. ತೇಜಶ್ರೀ, ಶ್ರೀಮತಿ ಪುಷ್ಪಾ ಪಶುಪತಿ, ದ್ವಾರಕಾನಾಥ್ ಅವರಿಗೆ, ಅಕ್ಷರ ವಿನ್ಯಾಸ ಮಾಡಿದ ಶ್ರೀ ಶ್ರೀಧರ್ ಅವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ ದೇವರಾಜ್‌ಗೆ, ಛಾಯಾಗ್ರಾಹಕರಿಗೆ, ಮುದ್ರಿಸಿದ ಲಕ್ಷ್ಮೀ ಪ್ರಿಂಟರ್ಸ್‌ನ ಮಾಲೀಕರು ಮತ್ತು ಬಂಧುಗಳಿಗೆ-

ಮತ್ತು

ನಮ್ಮ ಕೆಲಸವನ್ನು ಬೆಂಬಲಿಸುತ್ತಿರುವ ಶ್ರೀ ಚಿ. ಶ್ರೀನಿವಾಸರಾಜು ಕುಟುಂಬ, ಶ್ರೀ ಎಚ್. ಎಸ್. ರಾಘವೇಂದ್ರರಾವ್, ಶ್ರೀ ಷ. ಶೆಟ್ಟರ್, ಶ್ರೀ ದೇವನೂರ ಮಹಾದೇವ, ಶ್ರೀಮತಿ ವಿಜಯಮ್ಮ, ಶ್ರೀ ಜಿ. ಎನ್. ಮೋಹನ್, ಶ್ರೀ ಕೆ. ಜಿ. ನಾಗರಾಜಪ್ಪ, ಶ್ರೀ ಜಿ. ಎಸ್. ಶಿವರುದ್ರಪ್ಪ, ಶ್ರೀ ಪ್ರಭುಶಂಕರ್, ಶ್ರೀಚಂದ್ರಶೇಖರ ಕಂಬಾರ, ಶ್ರೀ ಕಡಿದಾಳ್ ಶಾಮಣ್ಣ, ಶ್ರೀ ಕೆ. ಟಿ. ಶಿವಪ್ರಸಾದ್, ಕೆ. ಸತ್ಯನಾರಾಯಣ, ಶ್ರೀ ಸಿದ್ಧಲಿಂಗಯ್ಯ, ಶ್ರೀ ಎಂ. ಬಸವಣ್ಣ, ಶ್ರೀ ನಾ. ಸೋಮೇಶ್ವರ, ಶ್ರೀ ಡಿ. ಆರ್. ಚಂದ್ರ ಮಾಗಡಿ, ಶ್ರೀ ಕೇಶವ ಮಳಗಿ, ಶ್ರೀ ಸಿ. ಎನ್. ರಾಮಚಂದ್ರನ್, ಶ್ರೀ ಶೂದ್ರ ಶ್ರೀನಿವಾಸ್, ಶ್ರೀ ನಾಗರಾಜಮೂರ್ತಿ, ಸ. ಉಷಾ, ಶ್ರೀ ಕೆಂದೋಳೆ ಸುಬ್ರಹ್ಮಣ್ಯ, ಶ್ರೀಮತಿ ಎಂ. ಎಸ್. ಆಶಾದೇವಿ, ಶ್ರೀ ರಹಮತ್ ತರಿಕೆರೆ, ಶ್ರೀ ಬಸವರಾಜ ಕಲ್ಗುಡಿ, ಶ್ರೀ ಎಚ್. ಎಸ್. ಗೋಪಾಲರಾವ್, ಶ್ರೀ ಎಂ. ವೈ. ಘೋರ್ಪಡೆ, ಶ್ರೀ ವಿವೇಕ್ ಶಾನ್‌ಭಾಗ್, ಶ್ರೀ ಕೆ. ವಿ. ಅಕ್ಷರ, ಶ್ರೀ ಕೆ. ಪುಟ್ಟಸ್ವಾಮಿ, ಎಚ್. ಎಸ್. ವೆಂಕಟೇಶಮೂರ್ತಿ, ಜಿ. ಪಿ. ಬಸವರಾಜು, ಶ್ರೀಮತಿ ಶಾಂತಾ ನಾಗರಾಜ್, ಶ್ರೀ ರವಿ ಬೆಳಗೆರೆ, ಶ್ರೀ ಕೆ. ವೆಂಕಟರಾಜು, ಶ್ರೀ ಎಸ್. ಜಿ. ಸಿದ್ಧರಾಮಯ್ಯ, ಶ್ರೀ ಕೆ. ವಿ. ತಿರುಮಲೇಶ್, ಶ್ರೀ ಬಿ. ಸುರೇಶ್, ಬಾಲಕೃಷ್ಣ ಕಾಕತ್ಕರ್, ಶ್ರೀ ವೈ. ಜಿ. ಮುರಳೀಧರ, ಓ ಎಲ್. ನಾಗಭೂಷಣ ಸ್ವಾಮಿ, ಶ್ರೀ ಕೆ. ವಿ. ನಾರಾಯಣ, ಶ್ರೀ ಬರಗೂರು ರಾಮಚಂದ್ರಪ್ಪ, ಶ್ರೀ ಅಗ್ರಹಾರ ಕೃಷ್ಣಮೂರ್ತಿ, ಶ್ರೀ ಚೆನ್ನಕೇಶವ, ಶ್ರೀ ಕೆ. ಫಣಿರಾಜ್, ಶ್ರೀ ಜಿ. ರಾಜಶೇಖರ, ಶ್ರೀ ಜಿ. ರಾಮಕೃಷ್ಣ, ಶ್ರೀ ಸಿದ್ಧಲಿಂಗ ಪಟ್ಟಣಶೆಟ್ಟಿ ಮುಂತಾದವರಿಗೆ-

ಗೆಳೆಯರಾದ ಅಕ್ಷತಾ, ಅವಿನಾಶ್, ಎಚ್. ಆರ್. ರಮೇಶ್, ಜ. ನಾ. ತೇಜಶ್ರೀ, ರೂಪ ಹಾಸನ, ನಾಗತಿಹಳ್ಳಿ ರಮೇಶ್, ಚ. ಹ. ರಘುನಾಥ್, ಜಯಪ್ರಕಾಶ ನಾರಾಯಣ, ಇಸ್ಮಾಯಿಲ್, ದೀಪಾ ಗಣೇಶ್, ಎಸ್. ಬಾಗೇಶ್ರೀ ಮುಂತಾದ ಗೆಳೆಯರಿಗೆ-

ಅಭಿನವದ ಪರವಾಗಿ ಧನ್ಯವಾದಗಳು.

. ರವಿಕುಮಾರ