ನನ್ನ ಮಾತುಗಳನ್ನು ಅನುಭವವೊಂದರಿಂದಲೇ ಆರಂಭಿಸುತ್ತೇನೆ. ಹೆಗ್ಗಡದೇವನ ಕೋಟೆಗೆ ಹೋಗಿ ಜೇನುಕುರುಬರ ಕುಟುಂಬಗಳನ್ನು ಭೇಟಿಯಾದೆ. ಆ ಸಮುದಾಯಕ್ಕೆ ಸೇರಿದ ಒಬ್ಬರ ಹತ್ತಿರ ತುಂಬಾ ಹೊತ್ತು ಮಾತಾಡಿದೆ. ಅವರ ಕಷ್ಟಗಳನ್ನು ಕೇಳಿದಾಗ ಸಾಹಿತ್ಯ ಬರೆದು ಪ್ರಯೋಜನವೇ ಇಲ್ಲವೇನೋ ಅನ್ನಿಸಿತು. ಸಾಹಿತ್ಯದಿಂದ ಬಹಳ ಪ್ರಯೋಜನವಿದೆ ಎಂದು ತಿಳಿದು ಬರೆದಾಗ ಅಂತಹ ದೊಡ್ಡ ಸಾಹಿತ್ಯ ಸೃಷ್ಟಿಯಾಗುವುದಿಲ್ಲ. ಹಾಗೆ ನೋಡಿದರೆ ಬೌದ್ಧಿಕ ಸಂಕಟ ಎನ್ನುವುದು ಇಲ್ಲವಾದರೆ ಸಾಹಿತ್ಯ ಹುಟ್ಟುವುದಿಲ್ಲ. ಈ ಸಂಕಟ ಇಲ್ಲದೇ ಬರೆದಾಗ ನಾವು ಬಹು ಮನರಂಜಕವಾಗಿ ಬರೆಯಬಹುದೇ ಹೊರತು ಶಾಶ್ವತವಾಗಿ ಉಳಿಯುವಂಥ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಪ್ರಪಂಚದ ಎಲ್ಲಾ ಮಹಾಕೃತಿಗಳೂ ಅತೀವ ಬೌದ್ಧಿಕ ಸಂಕಟದಲ್ಲಿಯೇ ಹುಟ್ಟಿವೆ.

ಭಾರತದ ಮೀಸಲಾತಿಯ ಪರಿಭಾಷೆಯಲ್ಲಿ ಪರಿಶಿಷ್ಟ ಬುಡಕಟ್ಟುಗಳು ಅಥವಾ ಷೆಡ್ಯೂಲ್ಡ್ ಟ್ರೈಬ್ ಎನ್ನುವ ವಿಭಾಗವೊಂದಿದೆ. ಈ ವಿಭಾಗದ ದುರಂತವನ್ನು ಅರ್ಥಮಾಡಿಕೊಳ್ಳಬೇಕಾದರೆ ನಿಜವಾದ ಬುಡಕಟ್ಟು ಜನರನ್ನು ನೋಡಬೇಕು. ನಮ್ಮ ಮೀಸಲಾತಿಯ ಪರಿಭಾಷೆಯಲ್ಲಿರುವ ಈ ಬುಡಕಟ್ಟುಗಳ ವಿಭಾಗ ಎಷ್ಟು ವ್ಯಾಪಕವಾಗಿದೆ ಅಂದರೆ ನಿಜವಾದ ಬುಡಕಟ್ಟು ಜನರಿಗೆ ಏನೂ ಸಿಗುವುದೇ ಇಲ್ಲ. ಕಾಡು ಬಿಟ್ಟು ಬಂದಿರುವ ಬುಡಕಟ್ಟುಗಳಿಗೆ ಕಾಡು ಬಿಟ್ಟಿದ್ದೇ ತಪ್ಪು ಅನ್ನಿಸುತ್ತಿದೆ. ಊರಿನಲ್ಲಿ ಅವರಿಗೆ ಬದುಕೇ ಇಲ್ಲ. ವಾಪಸು ಕಾಡಿಗೆ ಹೋಗೋಣ ಎಂದರೆ ಇವತ್ತಿನ ಡೆವಲಪ್‌ಮೆಂಟ್‌ನ ರಾಜಕಾರಣದಲ್ಲಿ ಬುಡಕಟ್ಟುಗಳಿಗೆ ಕಾಡಿನೊಳಗೂ ಇರಲು ಬಿಡುತ್ತಿಲ್ಲ. ಇದನ್ನು ಹೇಗೆ ವಿವರಿಸಬೇಕು ಅಂತ ನನಗೆ ಗೊತ್ತಾಗುತ್ತಿಲ್ಲ. ಬಹುಶಃ ನಮ್ಮ ಡೆವಲಪ್‌ಮೆಂಟಲಿಸಂಗೆ ಮಾದರಿಯಾಗಿರುವ ಅಮೆರಿಕದ ಉದಾಹರಣೆ ನನ್ನ ಮಾತುಗಳಿಗೆ ಸ್ವಲ್ಪ ಸ್ಪಷ್ಟತೆಯನ್ನು ತಂದುಕೊಡಬಹುದು.

ನೀಗ್ರೋಗಳು ಅಮೆರಿಕಕ್ಕೆ ಕಾಲಿಟ್ಟಿದ್ದು ಗುಲಾಮರಾಗಿ. ಅವರು ಇಂದು ಅಮೆರಿಕದ ಮುಖ್ಯವಾಹಿನಿಯಲ್ಲಿದ್ದಾರೆ. ಅಮೆರಿಕದ ಈಗಿನ ಅಧ್ಯಕ್ಷರೂ ಈ ಕರಿಯ ಸಮುದಾಯಕ್ಕೆ ಸೇರಿದವರು. ಆದರೆ ಇದೇ ಅಮೆರಿಕದಲ್ಲಿ ತಮ್ಮದೇ ಆದ ಒಂದು ನಾಗರಿಕತೆಯನ್ನು ಹೊಂದಿದ್ದ ಅಲ್ಲಿನ ಮೂಲ ನಿವಾಸಿಗಳು ಸಂಪೂರ್ಣ ನಾಶವಾಗಿ ಹೋಗಿದ್ದಾರೆ. ಅಮೆರಿಕದ ಡೆವಲಪ್‌ಮೆಂಟ್‌ನ ಆತುರದಲ್ಲಿ ಅವರೆಷ್ಟು ನಾಶವಾಗಿದ್ದಾರೆಂದರೆ ‘ರಿಸರ್ವ್’ಗಳನ್ನು ಸೃಷ್ಟಿಸಿ ಅವರನ್ನು ಉಳಿಸಿಕೊಳ್ಳಲಾಗಿದೆ. ಯಾರಾದರೂ ಪ್ರವಾಸಿಗಳು ಹೋದರೆ ಅವರನ್ನು ಆ ರಿಸರ್ವ್‌ಗಳಿಗೆ ಕರೆದುಕೊಂಡು ಹೋಗಿ ಮ್ಯೂಸಿಯಂನಲ್ಲಿರುವ ವಸ್ತುಗಳನ್ನು ತೋರಿಸಿದಂತೆ ಅಥವಾ ಮೃಗಾಲಯದಲ್ಲಿ ಪ್ರಾಣಿಗಳನ್ನು ತೋರಿಸುವಂತೆ ಮೂಲನಿವಾಸಿಗಳನ್ನು ತೋರಿಸುತ್ತಾರೆ. ಈ ಮೂಲನಿವಾಸಿಗಳು ತಮ್ಮ ಮೂಲ ನೆಲೆಯಾದ ಕಾಡಿನ ಸಂಪರ್ಕ ಕಳೆದುಕೊಂಡು ನಾಗರಿಕ ಆಹಾರಕ್ಕೆ ಹೊಂದಿಕೊಂಡು ಕಾಲಕಾಲಕ್ಕೆ ತಿಂದುಂಡು ಕುಡುಕರಾಗಿ ಹೋಗಿದ್ದಾರೆ. ನಾನು ಒಬ್ಬ ಶಿಕ್ಷಕನಾಗಿ ಅಮೆರಿಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಿದ್ದೀನಿ. ನನ್ನ ವಿದ್ಯಾರ್ಥಿಗಳಲ್ಲಿ ಕರಿಯ ಜನಾಂಗಕ್ಕೆ ಸೇರಿದ ಹಲವು ವಿದ್ಯಾರ್ಥಿಗಳಿದ್ದಾರೆ. ಆದರೆ ಈತನಕ ಮೂಲ ನಿವಾಸಿಗಳ ಪ್ರಪಂಚದಿಂದ ಬಂದ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ನನಗೆ ಕಾಣಸಿಕ್ಕಿಲ್ಲ. ಅವರೂ ಅಲ್ಲಿ ಇಲ್ಲಿ ಇದ್ದಾರಂತೆ. ಆದರೆ ನನಗಂತೂ ಸಿಕ್ಕಿಲ್ಲ. ಬಹುಶಃ ನಮ್ಮ ಆದಿವಾಸಿಗಳನ್ನೂ ಹೀಗೇ ‘ಉಳಿಸಿಕೊಳ್ಳಬೇಕಾದ’ ಪರಿಸ್ಥಿತಿಯೊಂದರ ಕಡೆಗೆ ನಾವು ಸಾಗುತ್ತಿದ್ದೇವೆ.

ಇವತ್ತು ಅಮೆರಿಕದವರು ತಿನ್ನುವ ಅನೇಕ ಆಹಾರ ಪದಾರ್ಥಗಳನ್ನು ‘ಇವು ತಿನ್ನುವ ಪದಾರ್ಥಗಳು’ ಎಂದು ಗುರುತಿಸಿದವರು ಈಗ ರಿಸರ್ವ್‌ಗಳಲ್ಲಿ ‘ನಾಗರಿಕ ಆಹಾರ’ ತಿಂದು ಬದುಕಿರುವ ಮೂಲನಿವಾಸಿಗಳು! ನನಗೆ ಯಾವಾಗಲೂ ಆಶ್ಚರ್ಯ ಹುಟ್ಟಿಸುವ ಸಂಗತಿ ಅಂದರೆ ನಾವು ತಿನ್ನುವ ಅನೇಕ ಧಾನ್ಯಗಳನ್ನು ‘ಇವನ್ನು ತಿನ್ನಲು ಸಾಧ್ಯ’ ಎಂದು ಕಂಡುಹಿಡಿದದ್ದು ಹೇಗೆ ಎಂಬುದು. ಉದಾಹರಣೆಎಗ ನಾವೀಗ ರಾಗಿಯನ್ನು ಆಹಾರವಾಗಿ ಬಳಸುತ್ತೇವೆ. ರಾಗಿಯನ್ನು ತೆನೆಯಲ್ಲಿ ನೋಡಿದರೆ ಅದೊಂದು ತಿನ್ನಬಹುದಾದ ಪದಾರ್ಥ ಎಂದು ಅನ್ನಿಸುವುದೇ ಇಲ್ಲ. ತೆನೆ ಒಣಗಿ ಧಾನ್ಯವಾದಾಗಲೂ ರಾಗಿಯ ಬಣ್ಣ ಮತ್ತು ಗಾತ್ರಗಳು ಅದನ್ನೊಂದು ತಿನ್ನುವ ಪದಾರ್ಥ ಎಂದು ಗುರುತಿಸಲು ಅಗತ್ಯವಿರುವ ಯಾವ ಲಕ್ಷಣವನ್ನೂ ಹೊಂದಿಲ್ಲ. ಮೊಟ್ಟ ಮೊದಲ ಬಾರಿಗೆ ಇದೊಂದು ಆಹಾರವಾಗಬಹುದಾದ ಧಾನ್ಯ ಎಂದು ಗುರುತಿಸಿದವನು ಮಹಾ ಜೀನಿಯಸ್. ಇಂತ ಜೀನಿಯಸ್‌ಗಳೆಲ್ಲಾ ಇದ್ದದ್ದು ಬುಡಕಟ್ಟು ಜನಾಂಗಗಳಲ್ಲಿ. ಅಮೆರಿಕದಲ್ಲಿ ನಾಶವಾದದ್ದು ಇಂಥದ್ದೊಂದು ಜೀನಿಯಸ್ ಜನಾಂಗ. ನಾವೀಗ ನಮ್ಮ ಡೆವಲಪ್‌ಮೆಂಟ್‌ನ ಮೂಲಕ ನಾಶ ಮಾಡಲು ಹೊರಟಿರುವುದೂ ಇಂಥ ಜೀನಿಯಸ್‌ಗಳನ್ನೇ.

ಅಮೆರಿಕದ ನೀಗ್ರೋಗಳ ಸ್ಥಿತಿಗೆ ಸಂವಾದಿಯಾಗಿರುವ ಒಂದು ಬೆಳವಣಿಗೆಯನ್ನು ಭಾರತದಲ್ಲೂ ಗುರುತಿಸಬಹುದು. ಭಾರತದ ದಲಿತರು ಬಹಳ ಸುಲಭವಾಗಿ ಮುಖ್ಯವಾಹಿನಿಗೆ ಬಂದುಬಿಡುತ್ತಾರೆ. ಇದರ ಅರ್ಥ ದಲಿತರಿಗೆ ಕಷ್ಟಗಳಿಲ್ಲ ಎಂದಲ್ಲ. ಅವರಿಗೆ ಊರಿನ ಸಂಸ್ಕೃತಿ ಗೊತ್ತಿದೆ. ಬುಡಕಟ್ಟು ಜನಾಂಗಗಳು ಹೀಗಲ್ಲ, ಅವರು ಮುಖ್ಯವಾಹಿನಿಗೆ ಬರುವುದಿಲ್ಲ. ಅವರನ್ನು ಕರೆತರುವುದೂ ಸುಲಭವಲ್ಲ. ಏಕೆಂದರೆ ಅವರದ್ದು ‘ಕಾಡಿನ ಸಂಸ್ಕೃತಿ’. ಈ ಶಬ್ದವನ್ನು ನಾನು ಊರಿನ ಸಂಸ್ಕೃತಿ ಶ್ರೇಷ್ಠ ಎಂಬ ಅರ್ಥದಲ್ಲಿ ಬಳಸುತ್ತಿಲ್ಲ. ಇದು ಪರ್ಯಾಯವಾದ ಮತ್ತೊಂದು ಸಂಸ್ಕೃತಿ ಎಂಬ ಅರ್ಥದಲ್ಲಿ ಬಳಸುತ್ತಿದ್ದೇನೆ. ಊರಿನ ಸಂಸ್ಕೃತಿ ಆಹಾರವನ್ನು ಬೆಳೆಯುವ ಸಂಸ್ಕೃತಿ. ಕಾಡಿನ ಸಂಸ್ಕೃತಿಯಲ್ಲಿ ಆಹಾರವನ್ನು ಬೆಳೆಯುವುದಿಲ್ಲ. ನಿಸರ್ಗ ಸೃಷ್ಟಿಸಿರುವ ಆಹಾರವನ್ನು ಸಂಗ್ರಹಿಸುತ್ತದೆ. ಬುಡಕಟ್ಟುಗಳವರೆಲ್ಲಾ ಹೀಗೇ ಆಹಾರವನ್ನು ಸಂಗ್ರಹಿಸುವವರು. ಅವರಿಗೆ ನೇಗಿಲು ಕೊಟ್ಟರೆ ಉಳುವುದಕ್ಕೆ ಗೊತ್ತಿಲ್ಲ. ಅವರು ಕಾಡಿನಲ್ಲಿ ಆಹಾರವನ್ನು ಸಂಗ್ರಹಿಸಿ ತಿನ್ನುವವರು. ಈ ವ್ಯತ್ಯಾಸವನ್ನು ಅರಿಯದೇ ‘ಊರಿನ ಸಂಸ್ಕೃತಿ’ಯನ್ನು ಶ್ರೇಷ್ಠ ಎಂದು ನಮ್ಮ ಆಡಳಿತಗಾರರು ಭಾವಿಸುತ್ತಿರುವುದು ನಮ್ಮ ದೇಶದ ಅತಿ ದೊಡ್ಡ ಸಮಸ್ಯೆಗೆ ಕಾರಣವಾಗಿದೆ.

ಬುಡಕಟ್ಟು ಜನರ ಬದುಕಿನ ಸಮಸ್ಯೆಯೇ ಇಂದು ನಕ್ಸಲ್‌ವಾದಿಗಳ ಚಟುವಟಿಕೆಗಳಿಗೆ ಆಧಾರವಾಗಿದೆ. ದುರಂತವೆಂದರೆ ಈಗ ಬುಡಕಟ್ಟು ಜನಾಂಗಗಳು ಬೆಂಬಲಿಸುತ್ತಿರುವ ಮಾವೋವಾದಿಗಳು ಅಧಿಕಾರಕ್ಕೆ ಬಂದರೆ ಅವರು ಸೃಷ್ಟಿಸುವುದೂ ಏಕರೂಪಿಯಾದ ಊರಿನ ಸಂಸ್ಕೃತಿಯನ್ನೇ. ಚೀನಾದಲ್ಲಿ ಅವರು ಮಾಡಿದ್ದು ಮತ್ತು ಮಾಡುತ್ತಾ ಇರುವುದು ಅದನ್ನೇ. ಬುಡಕಟ್ಟುಗಳು ತಾವು ಹೇಗೆ ಬದುಕಿದರೆ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು ಎಂದು ಭಾವಿಸಿದ್ದಾರೋ ಹಾಗೆ ಇರುವುದಕ್ಕೆ ಮಾವೋವಾದಿಗಳು ಬಿಡುವುದಿಲ್ಲ. ದೊಡ್ಡ ಕಾರ್ಖಾನೆಗಳಾಗುತ್ತವೆ. ಅಲ್ಲಿ ಈ ಬುಡಕಟ್ಟು ಜನರು ಕೂಲಿಗಳಾಗಿರುತ್ತಾರೆ.

ಹಳ್ಳಿಯಿಂದ ಬಂದು ಪಟ್ಟಣದಲ್ಲಿ ಬದುಕು ಕಂಡುಕೊಂಡ ನಮ್ಮಂಥವರಿಗೆ ಪಟ್ಟಣಕ್ಕೆ ಬಂದದ್ದರ ಬಗ್ಗೆ ಬೌದ್ಧಿಕ ಸಂಕಟಗಳಿಲ್ಲ. ನನ್ನನ್ನು ನಾನೇ ಪ್ರಶ್ನಿಸಿಕೊಂಡು ನೋಡಿದಾಗ ನನಗೆ ಪಟ್ಟಣಕ್ಕೆ ಬಂದಿರುವುದರ ಬಗ್ಗೆ ಬೌದ್ಧಿಕ ಸಂಕಟವಿಲ್ಲ. ನನಗಿರುವುದು ಹಳ್ಳಿಯ ಕುರಿತ ಕೆಲವು ಹಳಹಳಿಕೆಗಳು. ಈ ಹಳಹಳಿಕೆಯನ್ನು ನಾನು ಕಾವ್ಯದಲ್ಲಿ ಬಳಸಬಹುದು. ಆದರೆ ಬುಡಕಟ್ಟುಗಳಮಟ್ಟಿಗೆ ಕಾಡನ್ನು ತ್ಯಜಿಸುವುದು ಒಂದು ಬೌದ್ಧಿಕ ಸಂಕಟದ ಪ್ರಶ್ನೆ. ಈ ಸಂಕಟಕ್ಕೆ ಕಾರಣವಾಗುತ್ತಿರುವ ನಾಗರಿಕತೆಯನ್ನು ನಿರ್ಮಿಸುತ್ತಿರುವ ನಮಗೂ ಇದೊಂದು ಸಂಕಟದ ಪ್ರಶ್ನೆಯಾಗಬೇಕಿತ್ತು. ಆದರೆ ನಮಗೆ ಅದೀಗ ‘ಅಭಿವೃದ್ಧಿ’ಯಂತೆ ಕಾಣಿಸುತ್ತಿದೆ. ಅದರಿಂದಾಗಿ ನಾವು ಬುಡಕಟ್ಟು ಜನರನ್ನು ಕಾಡುಗಳಲ್ಲಿ ಬಿಡುವುದಕ್ಕೂ ಸಿದ್ಧರಿಲ್ಲ. ಏಕೆಂದರೆ ಅವರಿಗೂ ನಮ್ಮಂತೆ ‘ನಾಗರಿಕ’ರಾಗುವ ಆಸೆ ಇರಬಹುದಲ್ಲಾ ಎಂಬ ಸಂಶಯ ನಮ್ಮದು.

ನಾನು ಉದಾಹರಣೆಯಾಗಿ ಹೇಳಿದ ಜೇನುಕುರುಬರ ಸಮಸ್ಯೆ ಎಷ್ಟು ಸಂಕೀರ್ಣವಾಗಿವೆ ಅಂದರೆ ಒಂದು ಕಡೆಯಿಂದ ಅವರನ್ನು ಕಾಡಿನಿಂದ ಹೊರಗೆ ಹಾಕುವ ಡೆವಲಪ್‌ಮೆಂಟ್, ಮತ್ತೊಂದು ಕಡೆಯಿಂದ ಅವರ ಅನನ್ಯತೆಯನ್ನೇ ಕಿತ್ತುಕೊಳ್ಳುವ ನಾಗರಿಕ ಸಮಾಜದ ಪ್ರಯತ್ನಗಳು ಅವರನ್ನು ಕಾಡುತ್ತಿವೆ. ಗಿರಿಜನರಿರುವ ಪ್ರದೇಶಗಳ ಶಾಲೆಗಳಿಗೆ ಬರುವ ‘ನಾಗರಿಕ’ ಶಿಕ್ಷಕರು ಬುಡಕಟ್ಟು ಜನಾಂಗದ ಮಕ್ಕಳ ಹೆಸರುಗಳನ್ನು ಬದಲಾಯಿಸಿ ಅವರನ್ನು ನಾಗರಿಕರಾಗಿಸುತ್ತಿದ್ದಾರೆ. ಜೇನು ಕುರುಬರ ಮಕ್ಕಳ ಹೆಸರುಗಳೆಲ್ಲಾ ಸಂಸ್ಕೃತ ಹೆಸರುಗಳಾಗುತ್ತಿವೆ. ಈ ಹೆಸರುಗಳು ಶಾಲೆಯ ರಿಜಿಸ್ಟರ್‌ಗಳಲ್ಲಿ ಮಾತ್ರ ಇರುತ್ತವೆ. ಮನೆಗೆ ಬಂದರೆ ಅವರ ನಿಜ ಹೆಸರುಗಳೇ. ಅಂದರೆ ಅಧಿಕೃತವಾದ ದಾಖಲೆಗಳಲ್ಲಿ ಅವರ ನಿಜ ಹೆಸರೇ ಇಲ್ಲ! ಒಂದು ರೀತಿಯಲ್ಲಿ ಅವರ ಐಡೆಂಟಿಟಿಯೇ ಇಲ್ಲವಾಗುತ್ತಿದೆ. ಹೀಗೆ ಹೆಸರು ಬದಲಾವಣೆ ಆದಮೇಲೆ ಭಾಷೆಯೂ ಬದಲಾಗುತ್ತದೆ ಅಥವಾ ಭಾಷೆಯ ಬದಲಾವಣೆ ಅಗತ್ಯವೂ ಆಗಿಬಿಡುತ್ತದೆ. ಈ ಬದಲಾವಣೆಯಲ್ಲಿ ಮತ್ತೇನೇನೋ ಹೊರಟುಹೋಗಿ ಬುಡಕಟ್ಟುಗಳು ತಮ್ಮ ಐಡೆಂಟಿಟಿಯ ಕುರಿತೇ ಗೊಂದಲದಲ್ಲಿ ಬದುಕಬೇಕಾಗುತ್ತದೆ. ಅದು ಕೊನೆಗೆ ಅವರಿಗಾಗಿಯೇ ಮೀಸಲಾಗಿರುವ ‘ಮೀಸಲಾತಿ’ ಕೂಡಾ ಅವರಿಗೆ ದೊರೆಯದಂಥ ಪರಿಸ್ಥಿತಿಯನ್ನು ಸೃಷ್ಟಿಸಿಬಿಡುತ್ತದೆ.

ನಾವು ಬಹಳ ಸುಲಭವಾಗಿ ‘ನಮ್ಮದು ಬಹುತ್ವದ ರಾಷ್ಟ್ರ’ ಎನ್ನುತ್ತೇವೆ. ಆದರೆ ಬಹುತ್ವವನ್ನು ಉಳಿಸಿಕೊಳ್ಳಬೇಕು ಎನ್ನುವುದು ಅಷ್ಟು ಸುಲಭದ ವಿಷಯ ಅಲ್ಲ. ನಾವು ಮಾಡುವ ಅನೇಕ ಕ್ರಿಯೆಗಳು ಈ ಬಹುತ್ವವನ್ನು ನಾಶ ಮಾಡುತ್ತಿರುತ್ತವೆ. ಎಲ್ಲ ಬಹುತ್ವಗಳನ್ನೂ ಮೀರಿ ಆತ್ಯಂತಿಕವಾದ ಒಂದರತ್ತ ಸಾಗುವುದು ಮನುಷ್ಯನ ಬೌದ್ಧಿಕ ತುಡಿತಗಳಲ್ಲಿ ಒಂದು. ಭೌತಶಾಸ್ತ್ರದಲ್ಲಿ ಮೂಲವಾದ ಒಂದು ಸತ್ಯಕ್ಕೆ ಹೋಗಬೇಕು ಎನ್ನುವ ತುಡಿತ ಐನ್‌ಸ್ಟೈನ್‌ಗೆ ಇತ್ತು. ವೇದಾಂತದಲ್ಲಿ ಮೂಲ ಸತ್ಯಕ್ಕೆ ತಲುಪಬೇಕು ಎನ್ನುವ ತುಡಿತ ಶಂಕರಾಚಾರ್ಯರಿಗೂ ಇತ್ತು. ನೂರಾರು ದೇವರುಗಳ ನಡುವೆ ಬದುಕಿದ್ದ ಮಹಮ್ಮದ್ ಪೈಗಂಬರ್‌ಗೆ ಒಂದು ದೇವರ ಉಪಾಸನೆ ಮಾಡಬೇಕು ಎನ್ನುವ ಹಠ ಇತ್ತು. ಏಸುಕ್ರಿಸ್ತನ ಹಠವೂ ಇಂಥದ್ದೇ. ಆತ್ಯಂತಿಕವಾದ ಒಂದನ್ನು ಕಂಡುಕೊಳ್ಳುವ, ಒಂದು ದಿಕ್ಕಿಗೆ ಹೋಗುವ ನಮ್ಮ ನಾಗರಿಕತೆಯ ಹಠ ಕೆಲವು ಸಂದರ್ಭಗಳಲ್ಲಿ ಅದ್ಭುತವಾದುದನ್ನು ಸೃಷ್ಟಿಸಿದೆ. ಹಾಗೆಯೇ ಬಹಳ ಬೆಲೆಯುಳ್ಳದ್ದನ್ನೂ ನಾಶ ಮಾಡಿದೆ. ಈಗಿನ ಸಂದರ್ಭದಲ್ಲಿ ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ‘ಬಹುತ್ವ’ವನ್ನು ನಾಶ ಮಾಡುವ ಕ್ರಿಯೆಗೆ ಲಾಭಕ್ಕಾಗಿ ಎಲ್ಲವನ್ನೂ ಒಂದು ಮಾಡಬೇಕೆನ್ನುವ ಮಾರುಕಟ್ಟೆಯ ತುಡಿತಕ್ಕೆ ಕಾರಣವಾಗುತ್ತಿದೆ. ಲೇಖಕನಾದವನು ಈ ಎಲ್ಲವನ್ನೂ ಒಟ್ಟಿಗೇ ಇಟ್ಟುಕೊಂಡು ಯೋಚನೆ ಮಾಡಬೇಕು. ಒಂದುಮಾಡುವ ಕೆಲಸ ಕೇವಲ ನಾಶವನ್ನಷ್ಟೇ ಮಾಡುತ್ತದೆ ಎನ್ನುವುದೂ ಹೇಗೆ ಏಕಮುಖಿ ರಾಜಕಾರಣವೋ ಹಾಗೆಯೇ ಅದು ಅದ್ಭುತವಾದ ಹೊಸತೊಂದನ್ನು ಸೃಷ್ಟಿಸುತ್ತದೆ ಎಂದು ಮಾತ್ರ ವಾದಿಸುವುದೂ ಇನ್ನೊಂದು ಬಗೆಯ ಏಕಮುಖೀ ರಾಜಕಾರಣ.

ಪೇಗನ್ ದೇವತೆಗಳೆಲ್ಲಾ ಕ್ರಿಶ್ಚಿಯಾನಿಟಿಯಿಂದ ನಾಶವಾಗಿ ಹೋದವು. ರೋಮ್‌ನಲ್ಲಿ ಪೇಗನ್ ದೇವರುಗಳಿಗೆಲ್ಲಾ ಒಂದೊಂದು ದೇವಸ್ಥಾನವಿತ್ತು. ಇವುಗಳ ಜೊತೆಗೆ ಮತ್ತೊಂದು ದೇವಸ್ಥಾನವೂ ಇತ್ತು. ಅದು ಗೊತ್ತಿಲ್ಲದ ದೇವರಿಗಾಗಿ ಇದ್ದ ದೇವಸ್ಥಾನ. ಇದು ಪೇಗನ್ ನಾಗರಿಕತೆಯ ಸಾಧ್ಯತೆ. ಕ್ರೈಸ್ತ ನಾಗರಿಕತೆ ಬಂದದ್ದೇ ಈ ದೇವರುಗಳೆಲ್ಲಾ ನಾಶವಾದವು. ಮುಂದೆ ಈ ದೇವರುಗಳೆಲ್ಲಾ ಆಶ್ರಯ ಪಡೆದದ್ದು ಕವಿತೆಗಳಲ್ಲಿ. ಇವತ್ತಿಗೂ ಪೇಗನ್ ದೇವತೆಗಳು ಸಿಗುವುದು ಕೀಟ್ಸ್ ಮತ್ತು ವರ್ಡ್ಸ್‌‌ವರ್ತ್‌ನಂಥ ಕವಿಗಳಲ್ಲಿ. ಈ ದೇವರುಗಳ ಗುಡಿಗಳು ಭೌತಿಕವಾಗಿ ನಾಶವಾದವು. ಆದರೆ ಈ ದೇವಸ್ಥಾನಗಳು ಕವಿಗಳ ಸಾಲುಗಳಲ್ಲಿ, ಸೈದ್ಧಾಂತಿಕರ ನುಡಿಗಳಲ್ಲಿ ಪುನರ್ ನಿರ್ಮಾಣಗೊಂಡವು. ಯೂರೋಪ್‌ನಲ್ಲಿ ನಡೆದ ಈ ಬಹುತ್ವ ನಾಶದ ಪ್ರಕ್ರಿಯೆ ಬಲವಾದ ರಾಷ್ಟ್ರಪ್ರಭುತ್ವಗಳನ್ನು ಸೃಷ್ಟಿಸಿತು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಬೆಳೆದವು. ಊಳಿಗಮಾನ್ಯ ವ್ಯವಸ್ಥೆ ಸ್ಥಳದಲ್ಲಿ ಧನಸಂಚಯ ಮಾಡುವ ಬಂಡವಾಳಶಾಹಿತ್ವವೂ ಹುಟ್ಟಿತು. ಕೇಂದ್ರೀಕೃತ ವ್ಯವಸ್ಥೆಯೊಂದು ಏನೇನು ಮಾಡಬಹುದೋ ಅದನ್ನೆಲ್ಲಾ ನಾವು ನೋಡಿದೆವು. ಆದರೆ ವಿಕೇಂದ್ರಿಕೃತವಾದಾಗ ಯಾವೆಲ್ಲಾ ಸೌಂದರ್ಯ ಉಳಿದಿರಬಹುದಿತ್ತೋ ಅದನ್ನು ಕಳೆದುಕೊಂಡೆವು. ಇದು ಮನುಷ್ಯನ ಚರಿತ್ರೆಯಲ್ಲೇ ನಾವು ಕಾಣುತ್ತಿರುವ ಸತ್ಯ. ಭಾರತ ಈಗ ಅಂಥದ್ದೊಂದು ನಾಶದ ಚರಿತ್ರೆಯನ್ನು ಸೃಷ್ಟಿಸುವ ಹಂತಕ್ಕೆ ‘ಡೆವಲಪ್’ ಆಗಿದೆ.

ನಾವೆಲ್ಲರೂ ಜಾತಿ ಹೋಗಬೇಕು ಎನ್ನುತ್ತೇವೆ. ಇದು ಬಹಳ ಸುಲಭದ ಮಾತು. ಆದರೆ ಜಾತಿಗಳೆಲ್ಲಾ ಹೋಗಿಬಿಟ್ಟರೆ ಅದೂ ಒಂದು ರೀತಿಯಲ್ಲಿ ಬಹುತ್ವವನ್ನು ನಾಶ ಮಾಡುತ್ತದೆ. (ಹಿಂದೊಮ್ಮೆ ಇದೇ ಮಾತನ್ನು ಹೇಳಿ ಲಂಕೇಶ್, ತೇಜಸ್ವಿ, ಚಂಪಾ ಮುಂತಾದ ಎಲ್ಲರ ಟೀಕೆಯನ್ನು ನಾನೇ ಆಹ್ವಾನಿಸಿಕೊಂಡಿದ್ದೆ.) ನನ್ನ ಮಾತಿನ ಅರ್ಥ ಜಾತಿಯನ್ನು ನಾವು ಉಳಿಸಿಕೊಳ್ಳಬೇಕು ಎಂದಲ್ಲ. ಜಾತಿಯ ಸಮಸ್ಯೆಯನ್ನು ಅದರ ಸಾಂಸ್ಕೃತಿಕ ಸಂದರ್ಭದಲ್ಲಿಟ್ಟು ನೋಡಬೇಕು ಎಂಬುದು. ನಾವು ಏನು ಮಾಡಿದರೂ ಜಾತಿ ನಾಶ ಆಗುವುದಿಲ್ಲ. ಇದೊಂದು ಸೂಕ್ಷ್ಮಮಟ್ಟದಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಸಮಸ್ಯೆ. ಹಾಗೆ ಅರ್ಥ ಮಾಡಿಕೊಂಡಾಗಲೇ ಅದಕ್ಕೊಂದು ಪರಿಹಾರವನ್ನೂ ಕಂಡುಕೊಳ್ಳಲು ಸಾಧ್ಯ.

ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದೆವು. ದಾರಿಯಲ್ಲಿ ತಿಂಡಿ ತಿನ್ನಲು ಒಂದು ಹೊಟೇಲಿಗೆ ಹೋದೆವು. ಅದೊಂದು ಶಿವಳ್ಳಿ ಬ್ರಾಹ್ಮಣರ ಮಾಲೀಕತ್ವದ ಹೊಟೇಲು. ನಾವು ತಿಂಡಿಗೆ ಆರ್ಡರ್ ಮಾಡಿದ ನಂತರ ಒಂದು ತಟ್ಟೆ ತುಂಬಾ ಜಿಲೇಬಿ ತಂದಿಟ್ಟರು. ನಾನು, ‘ನಾವಿದನ್ನು ಆರ್ಡರ್ ಮಾಡಲೇ ಇಲ್ಲವಲ್ಲ’ ಅಂದೆ. ಅದಕ್ಕೆ ಹೊಟೇಲಿನವರು ‘ನೀವು ನಮ್ಮಲ್ಲಿಗೆ ಬಂದಿದ್ದು ಪುಣ್ಯ ಅಲ್ವಾ’ ಅಂದರು. ನಾನು ಬಹಳ ದೊಡ್ಡ ಲೇಖಕ ಅದಕ್ಕೇ ಅವರು ಹೀಗೆ ಸತ್ಕರಿಸುತ್ತಿದ್ದಾರೆ ಅಂದುಕೊಂಡರೆ ಅದು ಗರ್ವದ ಮಾತಾಗಿಬಿಡುತ್ತದೆ. ನಿಜವಾಗಲೂ ನನಗೆ ಅನ್ನಿಸಬೇಕಾದದ್ದು ನಾನೂ ಶಿವಳ್ಳಿ ಬ್ರಾಹ್ಮಣ ಎನ್ನುವುದು ಅವರಿಗೆ ಗೊತ್ತು ಅದಕ್ಕೇ ಈ ಜಿಲೇಬಿ ತಂದಿಬಿಟ್ಟಿದ್ದಾರೆ ಎಂಬುದು. ಆಗ ನಾನು ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ‘ಏನ್ರೀ…. ನಾನು ಜಾತಿಗೀತಿ ಎಲ್ಲಾ ಬಿಟ್ಟವನು. ನನ್ನನ್ನು ಜಾತಿಯವನು ಅಂದ್ಕೊಳ್ತಿದ್ದೀರಾ’ ಎಂದು ಬೈಯ್ಯುವುದು ಒಂದು ವಿಧಾನ. ಹಾಗೆ ಮಾಡಿದರೆ ಅದು ಅಮಾನವೀಯವಾಗಿಬಿಡುತ್ತದೆ. ನಾನಂತೂ ಜಿಲೇಬಿಗಾಗಿ ಥ್ಯಾಂಕ್ಸ್ ಹೇಳಿದೆ! ನಮ್ಮ ಜಾತಿಯವರಿಗೆ ನಾವು ಇಷ್ಟವಾಗಬಹುದು ಎಂಬುದು ನಮ್ಮ ಸ್ವಮನಸ್ಕತೆಯಲ್ಲಿ ಗೊತ್ತಿರಬೇಕು. ಒಬ್ಬ ಲೇಖಕನಾಗಿ ನಮ್ಮ ಒಳಗೆ ಯಾವುದು ಕೆಲಸ ಮಾಡುತ್ತಿದೆ ಎಂಬುದು ಗೊತ್ತಿದ್ದೂ ಅದನ್ನು ಮೀರುವುದಕ್ಕೆ ಅಗತ್ಯವಿರುವ ಎಲ್ಲಾ ಕಷ್ಟಗಳನ್ನೂ ಅನುಭವಿಸಿ ಆ ಸಂಕಟದಲ್ಲಿ ನಮಗಾಗಿಯೇ ನಾವು ಬರೆದುಕೊಳ್ಳದೇ ಕೇವಲ ಬೇರೆಯವರಿಗಾಗಿಯಷ್ಟೇ ಬರೆಯುತ್ತಾ ಹೋದರೆ ನಾವು ಕೇವಲ ಭಾಷಣಕಾರರಾಗಿಬಿಡುತ್ತೇವೆ.

ಯೇಟ್ಸ್ ಒಂದು ಕಡೆ ‘ಬೇರೆಯವರ ಜೊತೆ ಜಗಳವಾಡುವವನು ರಾಜಕಾರಣಿ ಆಗುತ್ತಾನೆ. ತನ್ನ ಜೊತೆಗೇ ಜಗಳವಾಡಿಕೊಳ್ಳುವವನು ಕವಿಯಾಗುತ್ತಾನೆ’ ಎಂದಿದ್ದ. ತನ್ನ ಜೊತೆಗೇ ಜಗಳವಾಡಿಕೊಳ್ಳುವವರೇ ಕವಿಯಾಗುವುದು. ಅನೇಕ ಸಾರಿ ಈ ತನ್ನ ಜೊತೆಗಿನ ಜಗಳಕ್ಕೂ ಒಂದು ಸಾಮಾಜಿಕ ಆಯಾಮ ಇರುತ್ತೆ. ಈ ರೀತಿಯ ಜಗಳ ಕೆಲವು ಸಾರಿ ಕೇವಲ ವಿವಾದವಾಗುತ್ತದೆ. ಆದರೂ ಇದೊಂದು ವಾಗ್ವಾದವಾಗುವ ಸಾಧ್ಯತೆಯನ್ನೂ ನಾವು ಮರೆಯಬಾರದು. ನಮ್ಮ ಜಗಳಗಳನ್ನು ವಾಗ್ವಾದವಾಗಿ ಬದಲಾಯಿಸುವ ಒಂದು ಪ್ರಜ್ಞೆ ನಮಗಿರಬೇಕು. ಇದನ್ನೇ ನಾನು ಬೌದ್ಧಿಕ ಸಂಕಟದಿಂದ ಹುಟ್ಟುವ ಸೃಜನಶೀಲತೆ ಎನ್ನುವುದು.

ಜಾತಿಯ ಬಗ್ಗೆ ಬೌದ್ಧಿಕ ಸಂಕಟವಾದಾಗ ಅದರ ಸಂಕೀರ್ಣತೆ ಅರ್ಥವಾಗುತ್ತದೆ. ಜಾತಿ ಎಂಬ ದರಿದ್ರ ವ್ಯವಸ್ಥೆಯನ್ನು ಯಾವ ಕಾರಣ ಕೊಟ್ಟೂ ಸಮರ್ಥಿಸಲು ಸಾಧ್ಯವಿಲ್ಲ. ಆದರೂ ಜಾತಿ ಎನ್ನುವುದೊಂದು ಇದೆ. ನಮ್ಮಲ್ಲಿ ಹೆಚ್ಚಿನವರು ಮದುವೆಯಾಗಿರುವುದು ಅವರವರದೇ ಜಾತಿಯಲ್ಲಿ. ನಾವು ಸತ್ತಾಗ, ನಾವು ಕಷ್ಟದಲ್ಲಿದ್ದಾಗ, ನಮಗೆ ವಿದ್ಯಾರ್ಥಿ ವೇತನ ಬೇಕಾದಾಗ ಜಾತಿ ಸಂಘಟನೆಗಳೇ ಸಹಾಯಕ್ಕೆ ಬರುವುದು. ಈ ಒಳ್ಳೆಯ ಕೆಲಸಗಳೂ ಒಂದು ಬಗೆಯಲ್ಲಿ ಜಾತಿಯನ್ನು ಪೋಷಿಸುತ್ತಿರುತ್ತವೆ. ಈ ಕ್ರಿಯೆಗಳನ್ನು ಭಾಷಣದಲ್ಲಿ ನಿರಾಕರಿಸುತ್ತಿರುವ ನಾವೇ ಒಳಮನಸ್ಸಿನಲ್ಲಿ ಅದಕ್ಕೆ ಒಪ್ಪಿಗೆಯನ್ನೂ ಸೂಚಿಸುತ್ತಾ ಕಳ್ಳತನ ಮಾಡುತ್ತಿರುತ್ತೇವೆ. ನಮ್ಮ ಅನೇಕ ಜನ ಲೇಖಕರಲ್ಲಿ ಈ ರೀತಿಯ ತಮ್ಮನ್ನು ತಾವು ನೋಡಿಕೊಂಡು ಅದನ್ನು ನಿರ್ದಾಕ್ಷಿಣ್ಯವಾಗಿ ಹೇಳುವ ಧೈರ್ಯ ಇಲ್ಲ. ಏಕೆಂದರೆ ಅವರು ಪೊಲಿಟಿಕಲಿ ಕರೆಕ್ಟ್ ಆಗಿರಲು ಪ್ರಯತ್ನಿಸುತ್ತಿರುತ್ತಾರೆ. ಇದಾಗಬಾರದು ಎನ್ನುವುದು ನನ್ನ ಆಶಯ.

ಇವತ್ತು ಲೇಖಕನ ಮೇಲೆ ಇರುವ ಅತಿ ದೊಡ್ಡ ಹೊಣೆಗಾರಿಕೆ ಅಂದರೆ ಅವನು ಪಾರದರ್ಶಕವಾಗಿ ಇರಬೇಕಾದದ್ದು. ಆದರೆ ಲೇಖಕ ಸಂಪೂರ್ಣ ಪಾರದರ್ಶಕ ಆಗಿರಲಾರ. ಎಷ್ಟೋ ಸಾರಿ ಅವನ ಅರಿವಿಗೆ ಬಾರದೆಯೇ ಅವನೊಳಗೇ ಕೆಲವು ವಿಚಾರಗಳು ಅಡಗಿರುವ ಸಾಧ್ಯತೆಗಳಿವೆ. ಬಹಳ ದೊಡ್ಡ ಲೇಖಕನಾದರೆ ಒಂದು ಅಪೂರ್ವವಾದ ಘಳಿಗೆಯಲ್ಲಿ ತನಗೆ ಅಲ್ಲಿಯತನಕ ಗೊತ್ತಿಲ್ಲದೇ ಇರುವ ತನ್ನೊಳಗೇ ಇರುವ ಆಸ್ತಿಯೊಂದಕ್ಕೆ ಕೈ ಹಾಕುತ್ತಾನೆ. ಹೀಗೆ ತನ್ನೊಳಗಿನ ಆಸ್ತಿಗೆ ಕೈ ಹಾಕಲು ಗೊತ್ತಿಲ್ಲದೇ ಇರುವವನಿಗೆ ನನ್ನ ವಯಸ್ಸಿನಲ್ಲಿ ಏನೂ ಬರೆಯಲು ಸಾಧ್ಯವಾಗುವುದಿಲ್ಲ. ಈ ಎಪ್ಪತ್ತೆಂಟನೆಯ ವಯಸ್ಸಿನಲ್ಲಿ ನಾನೇನಾದರೂ ಬರೆಯಬೇಕು ಅಂದರೆ ಇಷ್ಟರತನಕ ನನ್ನೊಳಗಿದ್ದು ನನಗೆ ಗೊತ್ತಿಲ್ಲದೇ ಇರುವ ಏನಾದರೂ ಇದೆಯೇ ಎಂದು ನೋಡುವ ಧೈರ್ಯ ಮತ್ತು ಪ್ರಾಮಾಣಿಕತೆ ಇರಬೇಕು. ಅದು ಇಲ್ಲದೇ ಇದ್ದಾಗ ಬರಹ ಕೇವಲ ಸಂದೇಶ ಅಥವಾ ಉಪದೇಶವಾಗಿಬಿಡುತ್ತದೆ. ಇದು ರವೀಂದ್ರನಾಥ ಟ್ಯಾಗೋರ್‌ರಂಥ ಮಹಾ ಲೇಖಕರೂ ತಮ್ಮ ಇಳಿಗಾಲದಲ್ಲಿ ಅನುಭವಿಸಿದ ಸಂಕಟ.

ಟ್ಯಾಗೋರ್ ಮಹಾಪುರುಷರಾದ ನಂತರ ಅವರ ಕವಿತೆಯಲ್ಲಿ ಸತ್ಯವನ್ನು ಹೇಳುವ ಸಾಧ್ಯತೆಯೇ ಇಲ್ಲವಾಗಿಬಿಟ್ಟಿತು. ಅವರ ಕಾವ್ಯ ಕೇವಲ ಸಂದೇಶಗಳನ್ನು ಕೊಡುವ ಮಾಧ್ಯಮವಾಗಿಬಿಟ್ಟಿತು-ಸಂದೇಶ್ ಎಂಬುದು ಒಂದು ಬಂಗಾಳಿ ಸಿಹಿತಿಂಡಿಯ ಹೆಸರೂ ಹೌದು! ಆದರೆ ಟ್ಯಾಗೋರ್ ಬಹಳ ದೊಡ್ಡ ಮನುಷ್ಯ. ಅವರು ಚಿತ್ರ ಬರೆಯಲು ಆರಂಭಿಸಿದರು. ಟ್ಯಾಗೋರ್ ಚಿತ್ರಗಳನ್ನು ಈಗ ನೋಡಿದರೂ ಅವರು ಇಳಿವಯಸ್ಸಿನಲ್ಲಿ ತಮಗೆ ಹೇಳಲು ಅಸಾಧ್ಯವಾದುದೆಲ್ಲವನ್ನೂ ಚಿತ್ರಗಳಲ್ಲಿ ಅನಾವರಣಗೊಳಿಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಸತ್ಯದ ದಾರಿಗಳನ್ನು ನಾವು ಹೀಗೆ ಹುಡುಕುತ್ತಲೇ ಇರಬೇಕು. ಹೀಗೆ ಹುಡುಕಿ ಕಂಡುಕೊಂಡ ಸತ್ಯದ ದಾರಿಗಳನ್ನು ಹೇಳುವುದಕ್ಕೆ ಬೇಕಿರುವ ಭಾಷೆಯನ್ನೂ ಲೇಖಕ ಪಡೆದುಕೊಂಡಾಗ ಅವನ ಅಭಿವ್ಯಕ್ತಿ ಸಾರ್ಥಕವಾಗುತ್ತದೆ.

*

ಹಲ ಬಗೆಯ ಯಜಮಾನಿಕೆಗಳಿರುವ ಭಾರತದಲ್ಲಿ ಹಲವು ಭಾಷೆಗಳು ಇನ್ನೂ ಜೀವಂತವಾಗಿವೆ ಎಂಬುದೇ ಒಂದು ಅದ್ಭುತ. ಇದು ಸಾಧ್ಯವಾದುದರ ಹಿಂದೆ ಒಂದು ಗುಟ್ಟಿದೆ. ಯಾರಿಗೆ ಒಂದು ಭಾಷೆ ಮಾತ್ರ ಗೊತ್ತಿರುತ್ತದೋ ಅವರಿಂದಾಗಿ ಭಾಷೆ ಉಳಿಯುತ್ತದೆ. ಇವತ್ತಿಗೂ ಅನೇಕ ಭಾರತೀಯ ಭಾಷೆಗಳು ಉಳಿದುಕೊಂಡಿರುವುದು ಆ ಭಾಷೆ ಮಾತ್ರ ಗೊತ್ತಿರುವ ದೊಡ್ಡ ಸಮುದಾಯ ಇರುವುದರಿಂದ. ಆ ಭಾಷೆಯ ಜೊತೆಗೆ ಮತ್ತೊಂದು ಭಾಷೆಯೂ ಗೊತ್ತಿರುವವರು ಭಾಷೆಯನ್ನು ಬೆಳೆಸುತ್ತಾರೆ. ಪಂಪನಾದಿಯಾಗಿ ನಮ್ಮ ಎಲ್ಲಾ ಮಹಾ ಲೇಖಕರೂ ಭಾಷೆಯನ್ನು ಬೆಳೆಸಿದ್ದಾರೆ. ಯಾಕೆಂದರೆ ಅವರಿಗೆ ತಮ್ಮದಲ್ಲದ ಭಾಷೆಯೊಂದು ಗೊತ್ತಿತ್ತು. ಹಿಂದಿನವರಿಗೆ ಸಂಸ್ಕೃತ ಗೊತ್ತಿತ್ತು. ಆಧುನಿಕರಿಗೆ ಇಂಗ್ಲಿಷ್ ಗೊತ್ತಿತ್ತು. ತಮ್ಮದಲ್ಲದ ಮತ್ತೊಂದು ಭಾಷೆಯನ್ನು ಅರಿತವರು ಸಾಮಾಜಿಕ ಸಂದರ್ಭದಲ್ಲಿ ಆ ಇನ್ನೊಂದು ಭಾಷೆಗೆ ಯಜಮಾನನ ಸ್ಥಾನ ಇದ್ದರೆ ಅವರು ತಮಗೆ ಗೊತ್ತಿಲ್ಲದೆಯೇ ಯಜಮಾನನ ಸ್ಥಾನದಲ್ಲಿರುವ ಭಾಷೆಗೆ ಅಮೂಲ್ಯವಾದ ವಿಚಾರಗಳನ್ನು ಕೊಟ್ಟುಬಿಡುತ್ತಾರೆ. ಅವರ ಮೂಲ ಭಾಷೆಯಲ್ಲಿ ಅರ್ಥಪೂರ್ಣವಾಗಿ ಹೇಳಬಹುದಾದುದನ್ನೆಲ್ಲಾ ಅವರೇ ಯಜಮಾನಿಕೆಯ ಸ್ಥಾನವನ್ನು ಕೊಟ್ಟಿರುವ ಭಾಷೆಯಲ್ಲಿ ಹೇಳತೊಡಗುತ್ತಾರೆ. ಇದು ಕೆಲವೊಮ್ಮೆ ಅಪಹಾಸ್ಯವೆನಿಸುವಷ್ಟು ಕೆಳಮಟ್ಟದಲ್ಲಿಯೂ ಇರುತ್ತದೆ. ಈ ಯಜಮಾನಿಕೆಯನ್ನು ಕಳಚಿಕೊಳ್ಳುವುದರ ಮೂಲಕ ಲೇಖಕ ತನ್ನ ಭಾಷೆಯನ್ನು ಪಡೆದುಕೊಳ್ಳುತ್ತಾನೆ.

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ಯಜಮಾನ ಭಾಷೆಯೊಂದರ ಪ್ರಭಾವ ನಮ್ಮ ಲೇಖಕರ ಮೇಲೆ ಹೇಗಿರುತ್ತದೆ ಎಂಬುದು ನನಗೆ ಬಹಳ ಚೆನ್ನಾಗಿ ತಿಳಿಯಿತು. ಒಂದು ಪದ್ಯ ಬರೆದಿರುವ ಕವಿ ಕೂಡಾ ತಾನು ಇಂಗ್ಲಿಷ್‌ಗೆ ಅನುವಾದಗೊಳ್ಳಬೇಕೆಂದು ಬಯಸುತ್ತಾನೆ. ಹೀಗೆ ಅನುವಾದವಾದ ಕೂಡಲೇ ತಾನು ಜಗತ್ತಿನ ಕವಿ ಎಂದುಕೊಳ್ಳುತ್ತಾನೆ. ಕನ್ನಡದಲ್ಲಿ ಅವನನ್ನು ಕನಿಷ್ಠ ಹತ್ತು ಜನರಾದರೂ ಓದಿರುತ್ತಾರೆ. ಅನುವಾದಗೊಂಡ ಕವಿತೆಯನ್ನು ಇಂಗ್ಲಿಷ್‌ನಲ್ಲಿ ಒಬ್ಬನೂ ಓದಿರುವುದಿಲ್ಲ ಎಂಬ ಸತ್ಯವನ್ನು ‘ಜಾಗತೀಕರಣಗೊಳ್ಳುವ’ ಆತುರದಲ್ಲಿ ಕವಿ ಮರೆತಿರುತ್ತಾನೆ. ಇನ್ನೊಂದು ಭಾಷೆ ತಿಳಿದಿದ್ದಾಗ ನಮ್ಮ ಭಾಷೆಯನ್ನು ಬೆಳೆಸುವ ಸಾಧ್ಯತೆ ಇರುವಂತೆಯೇ ಈ ಇನ್ನೊಂದು ಭಾಷೆಗೆ ಈ ಬಗೆಯ ಯಜಮಾನಿಕೆಯ ಗುಣವಿದ್ದರೆ ನಮ್ಮ ಭಾಷೆಯನ್ನು ಕಳೆದುಕೊಳ್ಳುವ ಅಪಾಯವೂ ಇದೆ. ಹಳ್ಳಿಯಿಂದ ಬಂದಿರುವ, ಕನ್ನಡದ ಜೊತೆಗೆ ಸಾವಯವ ಸಂಪರ್ಕವಿರುವ ನಮ್ಮ ಮಹತ್ವದ ಲೇಖಕರ ಮೇಲೆ ಇಂಗ್ಲಿಷ್‌ಗೆ ತಮ್ಮ ಯಜಮಾನಿಕೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಈ ಕಾಲದಲ್ಲಿಯೂ ಕನ್ನಡದ ಜೊತೆ ಸಾವಯವ ಸಂಬಂಧವಿರುವ ಸಾಮಾನ್ಯರ ಮೇಲೂ ಇದು ಯಜಮಾನಿಕೆಯನ್ನು ಸಾಧಿಸಿಲ್ಲ. ಈ ಸಾಮಾನ್ಯರ ಮಕ್ಕಳು ಆಂಗ್ಲ ಮಾಧ್ಯಮದಲ್ಲೇ ಕಲಿತು ಬೆಳೆಯುತ್ತಾ ಬಂದಾಗ ಇಂಗ್ಲಿಷ್ ಅವರ ಮೇಲೆ ಯಜಮಾನಿಕೆ ಸಾಧಿಸಿಬಿಡುತ್ತದೆ. ಒಂದು ವೇಳೆ ಅವರೂ ಇದರಿಂದ ಪಾರಾದರೂ ಅವರ ಮಕ್ಕಳ ಹೊತ್ತಿಗೆ ಇಂಗ್ಲಿಷ್ ತನ್ನ ಯಜಮಾನ್ಯವನ್ನು ಸಾಧಿಸಿಬಿಡುತ್ತದೆ.

ಇವತ್ತು ಕನ್ನಡ ಯಾಕೆ ಉಳಿದಿದೆ ಅಂದರೆ ಇನ್ನೂ ಹಿಂದುಳಿದವರು ಇದ್ದಾರೆ ಎಂದೇ. ಹಾಗಾದರೆ ಕನ್ನಡವನ್ನು ಉಳಿಸುವುದಕ್ಕಾಗಿ ಹಿಂದುಳಿದವರು ಹಿಂದೆಯೇ ಉಳಿದಿರಬೇಕೆ? ಖಂಡಿತವಾಗಿಯೂ ಅದು ಹಾಗಾಗಬೇಕಿಲ್ಲ. ಹಾಗಿಲ್ಲದೆಯೇ ಅನೇಕ ಭಾಷೆಗಳು ಉಳಿದಿವೆ. ಕೊಂಕಣಿ ಮತ್ತು ತುಳು ಭಾಷೆಗಳು ಇದಕ್ಕೆ ಉತ್ತಮ ಉದಾಹರಣೆ. ಕೊಂಕಣಿ ಏಕೆ ಉಳಿದಿದೆ ಎಂದರೆ ಒಬ್ಬ ಕೊಂಕಣಿ ಮತ್ತೊಬ್ಬ ಕೊಂಕಣಿಯನ್ನು ಕಂಡಾಗ ತನ್ನ ಭಾಷೆಯನ್ನು ಬಳಸದೇ ಹೋದರೆ ಇವನು ಗರ್ವಿಷ್ಟ ಎಂದು ಅವನು ತಿಳಿಯುತ್ತಾನೆ. ಈ ಬಗೆಯ ಸಾಮಾಜಿಕ ಅನಿವಾರ್ಯತೆಗಳಿಂದ ಮನೆ ಮಾತುಗಳು ಉಳಿದುಬಿಡುತ್ತವೆ. ತುಳು ಭಾಷೆ ಉಳಿದಿರುವುದೂ ಹೀಗೆಯೇ. ದಕ್ಷಿಣ ಕನ್ನಡದಿಂದ ಮುಂಬೈಗೆ ವಲಸೆ ಹೋದ ಕುಟುಂಬದಲ್ಲಿ ಹುಟ್ಟಿ ಬೆಳೆದ ಶಿಲ್ಪಾಶೆಟ್ಟಿಯಂಥವರಿಗೆ ಕನ್ನಡ ಬರುವುದಿಲ್ಲ ಆದರೆ ತುಳು ಬರುತ್ತದೆ. ಯಾಕೆಂದರೆ ಅದು ಅವರ ಮನೆ ಮಾತು. ಹೀಗೆ ದೇಶ ಭಾಷೆ ಅದು ಮನೆ ಮಾತಾದವರಲ್ಲಿ ಉಳಿದುಕೊಳ್ಳುತ್ತದೆ. ಆದರೆ ಅದೂ ಕ್ರಮೇಣ ಇಲ್ಲವಾಗುವ ಸಾಧ್ಯತೆ ಇದೆ. ರಷ್ಯಾದಲ್ಲಿ ಇದು ಸಂಭವಿಸಿತ್ತು. ಟಾಲ್‌ಸ್ಟಾಯ್‌ನ ‘ಅನ್ನಾಕರೇನಿನ’ ಓದಿದರೆ ಆ ಕಾಲದ ರಷ್ಯಾದಲ್ಲಿ ಏನು ಸಂಭವಿಸುತ್ತಿತ್ತು ಎಂಬುದು ಅರ್ಥವಾಗುತ್ತದೆ. ಅಲ್ಲಿ ಗಂಡಹೆಂಡತಿ ಜಗಳವಾಡುವಾಗ ಫ್ರೆಂಚ್ ಬಳಸುತ್ತಾರೆ. ಏಕೆಂದರೆ ಮನೆಯಲ್ಲಿರುವ ಕೆಲಸದವರಿಗೆ ಇವರ ಜಗಳ ತಿಳಿಯಬಾರದಲ್ಲ. ನಾವೂ ಹಾಗೇ ಇಂಗ್ಲಿಷ್ ಬಳಸುತ್ತಿದ್ದೇವೆ. ಕೋರ್ಟ್‌ನಲ್ಲಂತೂ ಲಾಯರ್‌ಗಳು ಇಂಗ್ಲಿಷ್‌ನಲ್ಲೇ ಮಾತನಾಡುತ್ತಿರುತ್ತಾರೆ. ಏಕೆಂದರೆ ಕಕ್ಷಿದಾರನಿಗೆ ಸತ್ಯ ತಿಳಿಯಬಾರದಲ್ಲ.

ಇಂಥದ್ದೊಂದು ವಾತಾವರಣದಲ್ಲಿ ನಮ್ಮ ಭಾಷೆಗಳು ಉಳಿಯಬೇಕಾದರೆ ಏನು ಮಾಡಬೇಕು. ನಾನು ಬಹಳಷ್ಟು ಸಾರಿ ಹೇಳಿರುವ ವಿಚಾರವೇ ಆಗಿದ್ದರೂ ಅದನ್ನು ಮತ್ತೊಮ್ಮೆ ಹೇಳಬೇಕು ಎನಿಸುತ್ತಿದೆ. ನಮ್ಮ ಭಾಷೆಗಳು ಉಳಿಯಲು ಸಾಮಾನ್ಯ ಶಾಲೆಗಳು ಬೇಕು. ನನ್ನ ಅಜ್ಜ ಪುರೋಹಿತರು-ಈ ಪುರೋಹಿತರು ಹೊಸ ಕಾಲದ ಜಾತಿವಾದಿಗಳಿಗಿಂತ ಒಳ್ಳೆಯವರು. ಏಕೆಂದರೆ ಅವರು ಬಹಳ ಸರಳವಾದ ಜನರು. ಬಡವರೂ ಹೌದು-‘ಭವತಿ ಭಿಕ್ಷಾಂದೇಹಿ’ ಎಂದು ಎಲ್ಲಾ ಕಡೆ ಭಿಕ್ಷೆ ಎತ್ತಿಕೊಂಡೂ ಬರುತ್ತಿದ್ದರು. ಅವರಿಗೆ ಕನ್ನಡ ಗೊತ್ತಿತ್ತು. ಸಂಸ್ಕೃತ ಬಾಯಿಪಾಠವಾಗಿತ್ತು. ಪುರೋಹಿತರ ಮನೆಯಲ್ಲಿ ಹುಟ್ಟಿದ ಎಲ್ಲ ಮಕ್ಕಳಂತೆ ನಾನು ಮನೆಯಲ್ಲಿ ಅಂಗವಸ್ತ್ರ ಧರಿಸುತ್ತಿದ್ದೆ. ಶಾಲೆಗೆ ಹೋಗುವಾಗಲಷ್ಟೇ ಅಂಗಿ ಹಾಕಿಕೊಳ್ಳುತ್ತಿದ್ದೆ. ನಾನು ಲೇಖಕನಾದದ್ದು ಈ ಅಂಗಿಯಿಂದಲೇ ಹೊರತು ಮನೆಯಲ್ಲಿ ಧರಿಸುತ್ತಿದ್ದ ಅಂಗವಸ್ತ್ರದಿಂದಲ್ಲ. ನನಗೆ ಬ್ರಾಹ್ಮಣೇತರ ಜಗತ್ತಿನ ಜೊತೆಗೆ ಸಂಪರ್ಕ ಕಲ್ಪಿಸಿದ್ದು ಶಾಲೆ. ನನಗೆ ಅಲ್ಲಿ ಎಲ್ಲಾ ಜಾತಿ-ವರ್ಗದವರ ಸಂಪರ್ಕ ಸಿಕ್ಕಿತ್ತು. ಅಂದರೆ ನಾನು ಮೈಲಿಗೆಗೊಂಡು ಲೇಖಕನಾದವನೇ ಹೊರತು ಮಡಿಯಲ್ಲಿ ಲೇಖಕನಾದವನಲ್ಲ. ಆದರೆ ಈಗ ಮೈಲಿಗೆಗೊಳ್ಳುವ ಸಾಧ್ಯತೆಯನ್ನೇ ನಾವು ನಮ್ಮ ಮಕ್ಕಳಿಂದ ಕಿತ್ತುಕೊಳ್ಳುತ್ತಿದ್ದೇವೆ. ಆದರೆ ನನಗೆ ಈ ಸಾಧ್ಯತೆ ಇತ್ತು. ಕಾರಣ ನಾನು ಪುರೋಹಿತರ ಕುಟುಂಬದಲ್ಲಿ ಹುಟ್ಟಿದ್ದರೂ ಸಾಮಾನ್ಯ ಶಾಲೆಯಲ್ಲಿ ಕಲಿತೆ. ನನ್ನ ಸುತ್ತಲಿನ ಎಲ್ಲವುಗಳ ಅನುಭವ ಪಡೆದೆ. ಆದರೆ ಈ ಅವಕಾಶ ನನ್ನ ಮೊಮ್ಮಕ್ಕಳಿಗೆ ಇಲ್ಲ. ಅವರು ಅವರ ವರ್ಗದ ಮಕ್ಕಳ ಜೊತೆಗಷ್ಟೇ ಓದುತ್ತಾರೆ. ನಾವೆಲ್ಲ ಇವತ್ತು ನಮ್ಮ ಮಕ್ಕಳನ್ನು ನಮ್ಮ ವರ್ಗದವರ ಮಕ್ಕಳೇ ಇರುವಂಥ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ. ಅವರಿಗೆ ಕನ್ನಡ ಒಂದು ಮನೆ ಮಾತಾಗಿ ಉಳಿದಿರುತ್ತದೆ. ಆದರೆ ನನ್ನ ಹಾಗೆ ಅವರಿಗೆ ಕನ್ನಡ ಬಳಸಲು ಅಂದರೆ ಇಲ್ಲಿ ಬೌದ್ಧಿಕ ವಿಚಾರಗಳಿಗೆ ಕನ್ನಡ ಬಳಸುತ್ತಿದ್ದೇನಲ್ಲ ಹಾಗೆ ಅವರಿಗೆ ಕನ್ನಡವನ್ನು ಬಳಸಲು ಆಗುವುದಿಲ್ಲ. ನನ್ನ ವಿಚಾರಗಳನ್ನು ಓದುತ್ತಿರುವ ನೀವೂ ಬೌದ್ಧಿಕ ವಿಚಾರಗಳಿಗೆ ಕನ್ನಡವನ್ನು ಬಳಸಲು ಗೊತ್ತಿರುವವರು. ಆದರೆ ಈಗಿನ ಪ್ರತಿಷ್ಠಿತ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು ಮನೆಯಲ್ಲಿ ಕನ್ನಡ ಮಾತನಾಡಿದರೂ ನಮ್ಮಂತೆ ಕನ್ನಡ ಬಳಸಲು ಸಾಧ್ಯವಿಲ್ಲ. ನಮಗೇಕೆ ಸಾಧ್ಯವಾಗಿದೆ ಎಂದರೆ ನಾವು ಚಿಂತಿಸುವ ಭಾಷೆಯೇ ಕನ್ನಡ.

ಇದು ಕೇವಲ ಕನ್ನಡದ ಸಮಸ್ಯೆ ಅಲ್ಲ. ಪ್ರಪಂಚದ ಅನೇಕ ಭಾಷೆಗಳು ಎದುರಿಸುತ್ತಿರುವ ಸಮಸ್ಯೆ. ಯೂರೋಪಿನ ದೇಶಗಳಲ್ಲಿ ಅವರ ಭಾಷೆಗಳ ಪುಸ್ತಕಗಳೇ ಮಾರಾಟವಾಗುವುದಿಲ್ಲ. ಏಕೆಂದರೆ ಅಮೆರಿಕದ ಥ್ರಿಲ್ಲರ‍್ಗಳು ಯೂರೋಪಿನ ಭಾಷೆಗಳಿಗೆ ಒಂದೇ ವಾರದಲ್ಲಿ ಅನುವಾದಗೊಂಡು ಮಾರುಕಟ್ಟೆಗೆ ಬರುತ್ತಿವೆ. ಈ ಪುಸ್ತಕಗಳಾದರೂ ಎಂಥವು. ಅವುಗಳನ್ನು ಓದಿ ರೈಲು ನಿಲ್ದಾಣದಲ್ಲೋ ಬಸ್ ನಿಲ್ದಾಣದಲ್ಲೋ ಬಿಟ್ಟು ಹೋಗಬಹುದಷ್ಟೇ. ನಾನು ಕೊರಿಯಾಕ್ಕೆ ಹೋದಾಗಲೂ ಇಂಥದ್ದೇ ಸ್ಥಿತಿಯನ್ನು ಗಮನಿಸಿದೆ. ಅಲ್ಲಿಯೂ ಅಷ್ಟೇ. ಅಮೆರಿಕದ ಬೃಹತ್ ಪ್ರಕಾಶನ ಸಂಸ್ಥೆಗಳು ಹೊರತರುವ ಥ್ರಿಲ್ಲರ್‌ಗಳು ಕೊರಿಯನ್ ಭಾಷೆಯಲ್ಲಿ ದೊರೆಯುತ್ತವೆ. ಇವತ್ತು ಕೊರಿಯನ್ ಪುಸ್ತಕದ ಅಂಗಡಿಗಳಲ್ಲಿ ದೊರೆಯುವುದು ಇಂಗ್ಲಿಷ್‌ನಿಂದ ಕೊರಿಯನ್‌ಗೆ ಅನುವಾದಗೊಂಡ ಪುಸ್ತಕಗಳು. ಅಪರೂಪಕ್ಕೆ ಕೊರಿಯನ್‌ನಿಂದ ಇಂಗ್ಲಿಷ್‌ಗೆ ಅನುವಾದವಾಗುತ್ತವೆ. ಇದು ಒಂದು ಬಗೆಯ ಅಪಾಯ. ಇದನ್ನು ಮುಂದಿಟ್ಟುಕೊಂಡು ಯಾವ ಭಾಷೆಯಿಂದಲೂ ನಮಗೇನೂ ಬರುವುದು ಬೇಡ ಎಂದು ಎಲ್ಲಾ ಬಾಗಿಲುಗಳನ್ನು ಮುಚ್ಚಿಕೊಂಡು ಕುಳಿತುಕೊಂಡರೆ ನಾವು ಕೂಪ ಮಂಡೂಕಗಳಾಗಿಬಿಡುತ್ತೇವೆ. ಬಿಎಂಶ್ರೀ ಅವರ ಕಾಲದಿಂದ ನನ್ನ ಕಾಲದವರೆಗೂ ನಾವೆಲ್ಲರೂ ಕನ್ನಡ ಬೆಳೆದದ್ದಕ್ಕೆ ಕಾರಣ ನಾವು ಷೇಕ್ಸ್‌ಪಿಯರ್, ದಾಸ್ತೋವಸ್ಕಿ, ಬೋದಿಲೇರ್ ಹೀಗೆ ಅನೇಕ ಪಶ್ಚಿಮದ ಲೇಖಕರನ್ನು ಓದಿದೆವು. ಆ ಸಂವೇದನೆಗಳನ್ನು ಕನ್ನಡಕ್ಕೆ ತಂದೆವು. ಅನುವಾದ ಎಂಬುದು ಒಂದು ಸೃಜನಶೀಲ ಕ್ರಿಯೆಯಾಗಿ ಬಂದಾಗ ಅದು ಭಾಷೆಯನ್ನು ಬೆಳೆಸುತ್ತದೆ. ಅದೊಂದು ಮಾರುಕಟ್ಟೆಯ ತಂತ್ರವಾಗಿ ಬಂದಾಗ ಭಾಷೆಯ ಅಸ್ಮಿತೆಯನ್ನು ಅಪಹರಿಸುತ್ತದೆ.

ಹೀಗೆ ಭಾಷೆಯನ್ನು ಬೆಳೆಸುವುದಕ್ಕೆ ನಮ್ಮ ಭಾಷೆಗೆ ಹೊರತಾದ ಭಾಷೆಯನ್ನು ತಿಳಿದವರೂ ಬೇಕಾಗುತ್ತದೆ. ಇದಕ್ಕಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ನಾನೊಂದು ಸಲಹೆ ಕೊಟ್ಟಿದ್ದೇನೆ. ಕನ್ನಡ ವಿಶ್ವವಿದ್ಯಾಲಯ ಐಐಟಿ, ಐಐಎಂಗಳು ನಡೆಸುವಂತೆ ಅಖಿಲ ಕರ್ನಾಟಕ ವ್ಯಾಪಿಯ ಒಂದು ಪರೀಕ್ಷೆಯನ್ನು ನಡೆಸಬೇಕು. ಅದರಲ್ಲಿ ಉತ್ತೀರ್ಣರಾಗುವ ಐವತ್ತು ವಿದ್ಯಾರ್ಥಿಗಳಿಗೆ ಐದು ವರ್ಷಗಳ ಕಾಲ ಮೂರು ಸಾವಿರ ರೂಪಾಯಿಗಳ ಶಿಷ್ಯವೇತನ ನೀಡಬೇಕು. ಈ ವಿದ್ಯಾರ್ಥಿಗಳು ಮೂರು ವರ್ಷಗಳ ಕಾಲ ತಮಗಿಷ್ಟವಾಗುವ ವಿಷಯಗಳನ್ನು ಆರಿಸಿಕೊಂಡು ಕನ್ನಡದಲ್ಲೇ ಕಲಿಯಬೇಕು. ಇದರ ಜೊತೆಗೆ ಇಂಗ್ಲಿಷನ್ನೂ ಕಲಿಯಬೇಕು. ಹೀಗೆ ಎರಡು ಭಾಷೆಗಳಿಲ್ಲದಿದ್ದರೆ ಈ ಬೌದ್ಧಿಕ ಸಂಕಟದ ಕಾಲದಲ್ಲಿ ನಾವು ಬದುಕುವುದಕ್ಕೆ, ಹೇಳುವುದನ್ನು ಎಲ್ಲರಿಗೂ ಮುಟ್ಟಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಕೊನೆಯ ಎರಡು ವರ್ಷಗಳಲ್ಲಿ ಅವರು ಯಾವುದಾದರೊಂದು ವಿಷಯವನ್ನು ಅಧ್ಯಯನ ಮಾಡಿ ಅದರಲ್ಲಿ ಪರಿಣಿತರಾಗಬೇಕು. ಆಗ ಮಾನವಿಕಶಾಸ್ತ್ರವನ್ನು ಅಧ್ಯಯನ ಮಾಡಿದ ಐವತ್ತು ಮಂದಿ ಪ್ರತಿಭಾವಂತರು ಪ್ರತೀ ವರ್ಷ ಸೃಷ್ಟಿಯಾಗುತ್ತಾರೆ.

ನಾವು ಓದುತ್ತಿದ್ದ ಕಾಲದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ಸಮಾಜಶಾಸ್ತ್ರದಂಥ ಮಾನವಿಕ ಶಾಸ್ತ್ರಗಳನ್ನು ಕಲಿಸುವ ಅತ್ಯುತ್ತಮ ಕಾಲೇಜಾಗಿತ್ತು. ಈಗ ಇಡೀ ಕರ್ನಾಟಕವನ್ನು ಜಾಲಾಡಿದರೂ ಮಾನವಿಕ ಶಾಸ್ತ್ರಗಳನ್ನು ಚೆನ್ನಾಗಿ ಕಲಿಸುವ ಒಂದು ಸಂಸ್ಥೆಯೂ ಸಿಗುವುದಿಲ್ಲ. ಮಾನವಿಕ ಶಾಸ್ತ್ರಗಳ ಅಧ್ಯಯನ ನಿಂತುಹೋದರೆ ನಮ್ಮಲ್ಲಿ ವಿದ್ವತ್ತೇ ಇಲ್ಲವಾಗುತ್ತದೆ. ಹಿಂದೆಯೂ ವಿದ್ವತ್ತು ದೊರೆತದ್ದು ಮಾನವಿಕಗಳ ಅಧ್ಯಯನದಲ್ಲೇ. ಪ್ರಾಚೀನ ಕಾಲದಲ್ಲಿ ಸಂಸ್ಕೃತ ವಿದ್ವತ್ತಿಗೆ ಅಗತ್ಯವಾದ ಭಾಷೆಯಾಗಿತ್ತು. ಇವತ್ತು ಆ ಸ್ಥಾನದಲ್ಲಿ ಇಂಗ್ಲಿಷ್ ಇದೆ ಎಂಬುದನ್ನು ನಾವು ಮರೆಯಬಾರದು. ಕೇವಲ ಇಂಗ್ಲಿಷ್ ಮಾತ್ರ ಗೊತ್ತಿದ್ದರೆ ಮಾನವಿಕ ಶಾಸ್ತ್ರಗಳ ಅರಿವು ಪೂರ್ಣಗೊಳ್ಳುವುದಿಲ್ಲ. ಪ್ರಖ್ಯಾತ ಸಮಾಜಶಾಸ್ತ್ರಜ್ಞ, ಸಂಸ್ಕೃತೀಕರಣದ ಪರಿಕಲ್ಪನೆಯನ್ನು ಕೊಟ್ಟ ಎಂ.ಎನ್. ಶ್ರೀನಿವಾಸ್ ಅವರಿಗೆ ನಾನೊಮ್ಮೆ ‘ನೀವು ಕುವೆಂಪು ಅವರ ಕಾದಂಬರಿಯನ್ನು ಓದದೇ ಇರುವುದರಿಂದ ನಿಮಗೆ ಒಕ್ಕಲಿಗರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದೆ. ಎಂ.ಎನ್. ಶ್ರೀನಿವಾಸ್‌ಗಿಂತ ಚೆನ್ನಾಗಿ ಒಕ್ಕಲಿಗರನ್ನು ಕುವೆಂಪು ಅರ್ಥ ಮಾಡಿಕೊಂಡಿದ್ದರು ಎಂಬುದು ಸಮಾಜಶಾಸ್ತ್ರದ ವಿದ್ಯಾರ್ಥಿಯೊಬ್ಬನಿಗೆ ಅರ್ಥವಾಗಬೇಕಾದರೆ ಅವನಿಗೆ ಕನ್ನಡ ಗೊತ್ತಿರಬೇಕಾಗುತ್ತದೆ.

ಕನ್ನಡ ವಿಶ್ವವಿದ್ಯಾಲಯ ಅತ್ಯುತ್ತಮ ಮಾನವಿಕ ಶಾಸ್ತ್ರದ ವಿದ್ವಾಂಸರನ್ನು ತಯಾರಿಸಲು ಮನಸ್ಸು ಮಾಡದೇ ಹೋದರೆ ಆ ಕೆಲಸವನ್ನು ಮತ್ತೆ ಯಾರು ಮಾಡಬೇಕು? ನನ್ನ ಈ ವಯಸ್ಸಿನಲ್ಲಿ ನನಗೆ ಸಾಧ್ಯವಿರುವುದು ಈ ಬಗೆಯ ‘ಐಡಿಯಾ’ಗಳನ್ನು ಬಿತ್ತಲು ಪ್ರಯತ್ನಿಸುವುದು ಮಾತ್ರ. ಇದೊಂದು ರೀತಿಯ ಬೀಜಗಳನ್ನು ಉದುರಿಸುತ್ತಾ ಹೋಗುವ ಕೆಲಸ. ಇದರಲ್ಲಿ ಕೆಲವು ಹುಟ್ಟಿ ಮರವಾಗಬಹುದು ಎಂಬ ಭರವಸೆ ನನಗಿದೆ.

—-
ಕೊಟ್ಟೂರಿನ
ಬಯಲು ಸಾಹಿತ್ಯ ವೇದಿಕೆ ಮೈಸೂರಿನ ರಂಗಾಯಣ ಆವರಣದಲ್ಲಿ ಆಯೋಜಿಸಿದ್ದನಾವು ನಮ್ಮಲ್ಲಿಕಾರ್ಯಕ್ರಮದ ಸಮಾರೋಪ ಭಾಷಣದ ಸಂಗ್ರಹ ರೂಪಇಸ್ಮಾಯಿಲ್.
ಪ್ರ: ‘ಮಯೂರ‘, ನವೆಂಬರ್೨೦೧೦.