ಕಪ್ಪು ಹಣ ಕೂಡಿಟ್ಟ ಉಳ್ಳವರಿಂದ ದೇಣಿಗೆ ಪಡೆಯದೆ ರಾಜಕೀಯ ಪಕ್ಷವೊಂದನ್ನು ಸಮರ್ಥವಾಗಿ ನಡೆಸುವುದು ಸಾಧ್ಯವೆ? ಚುನಾವಣೆ ಸಾಧ್ಯವೆ? ಬಡವರ ಬಗ್ಗೆ ಅನುಕಂಪ ಹುಟ್ಟಿಸುವಂತಹ ಸಿನಿಮಾ ಮಾಡುವುದು ಸಾಧ್ಯವೆ? ತಿರುಪತಿಯ ಬೊಕ್ಕಸ ತುಂಬುವುದು ಸಾಧ್ಯವೆ? ಸ್ವಂತ ಜೀವನದಲ್ಲಿ ಕಾಂಚನಮುಕ್ತನಾಗಿ ಬದುಕಿದ ಗಾಂಧೀಜಿಗೆ ಅವರ ಬೃಹತ್ ಚಳವಳಿಗೆ ಬಡಪಾಯಿಗಳ ಬೆಂಬಲದ ಜೊತೆಗೇ ಬಿರ್ಲಾರ ದೇಣಿಗೆಯೂ ಅಗತ್ಯವಿತ್ತಲ್ಲವೆ? ಬ್ರಿಟಿಷ್ ಆಡಳಿತದಲ್ಲಿ ಫಲಾಪೇಕ್ಷೆಯಿಲ್ಲದ ಕರ್ಮದಂತೆ ಕಂಡ ಬಿರ್ಲಾರ ಔದಾರ್ಯ ಭಾರತ ಸ್ವತಂತ್ರವಾದ ನಂತರ ಬಿರ್ಲಾರ ಏಳಿಗೆಗೆ ಸಹಾಯಕವಾಗಿ ಯಥೇಚ್ಛವಾದ ಫಲಕೊಟ್ಟಿತಲ್ಲವೆ? ನಮ್ಮ ಪ್ರೀತಿಯ ಸರಳ ವ್ಯಕ್ತಿ ಅಣ್ಣಾ ಹಜಾರೆ ಅವರ ಹೋರಾಟ ಈ ಎಲ್ಲ ಪ್ರಶ್ನೆಗಳಿಗೆ ಮತ್ತೆ ಜೀವ ತಂದಿದೆ. ಸಾರ್ವಜನಿಕ ಬದುಕಿನಲ್ಲಿ ನೈತಿಕತೆಯನ್ನು ಹುಡುಕುವವರು ಆತ್ಮವಂಚನೆಯಿಲ್ಲದಂತೆ ಮಾಡಿಕೊಳ್ಳಬೇಕಾದ ಸ್ವಗತಕ್ಕಿದು ಆಹ್ವಾನ.

ಈ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕಲು ಒಂದು ದೃಷ್ಟಾಂತ ಕತೆಯನ್ನು ವೇದವ್ಯಾಸರ ಮಹಾಭಾರತದಿಂದ ಎತ್ತಿಕೊಂಡಿದ್ದೇನೆ. ತಮ್ಮ ಅಧಿಕಾರವನ್ನು ಕಳೆದುಕೊಂಡ ಪಾಂಡವರ ಧಾರ್ಮಿಕ ಪ್ರಜ್ಞೆಯನ್ನೂ, ಸಹನೆಯನ್ನೂ ಬೆಳೆಸಲು ಲೋಮಶನೆಂಬ ಋಷಿ ಹೇಳಿದ ಕತೆಯಿದು. ಮರೆಯಬಾರದು-ಮಹಾಸಂಪನ್ನನಾದ ಧರ್ಮರಾಜ ಮೋಸ ಅರಿಯಲಾರದಷ್ಟು ಕುರುಡಾದ ತನ್ನ ದ್ಯೂತ ವ್ಯಸನದಿಂದಾಗಿಯೇ ರಾಜ್ಯ ಕಳೆದುಕೊಂಡದ್ದು, ದ್ಯೂತದಲ್ಲಿ ಅವನು ಗೆದ್ದಿದ್ದರೆ-ಅದೇ ಎಲ್ಲ ದ್ಯೂತದ ಆಕರ್ಷಣೆಯಲ್ಲವೆ?-ಅವನ ವೈರಿ ದುರ್ಯೋಧನ ವನವಾಸ ಮಾಡಬೇಕಾಗಿ ಬರುತ್ತಿತ್ತು. ಈ ಕತೆಯನ್ನು ಅವನು ಕೇಳಿಸಿಕೊಳ್ಳಬೇಕಾಗಿರುತ್ತಿತ್ತು.

ಎಲ್ಲ ಶುರುವಾಗುವುದು ಹೀಗೆ-ಜೀವಸಂಕುಲದ ಉಳಿವಿಗೆ ಸಂತಾನವೇ ಮುಖ್ಯವಲ್ಲವೆ? ಇದನ್ನು ಲೆಕ್ಕಿಸದ ಅಗಸ್ತ್ಯ ಮುನಿ ಒಂದಾನೊಂದು ದೊಡ್ಡ ಹಳ್ಳದಲ್ಲಿ ತನ್ನ ಪಿತೃಗಳಲ್ಲಿ ಕೆಲವರು ತಲೆಕೆಳಗಾಗಿ ನೇತಾಡುತ್ತಿರುವುದನ್ನು ಕಂಡನು. ಹೀಗೆ ಪ್ರೇತಗಳಾಗಿಬಿಟ್ಟ ತನ್ನ ಪಿತೃಗಳು ನಿನಗೆ ಸಂತಾನವಿಲ್ಲದ್ದರಿಂದ ನಮಗೆ ಈ ಪ್ರಾರಬ್ಧ ಒದಗಿದೆ ಎನ್ನುತ್ತಾರೆ. ಸರ್ವತ್ಯಾಗಿಯಾದ ಅಗಸ್ತ್ಯ ತನ್ನ ಪಿತೃಗಳ ಶಾಂತಿಗಾಗಿ ಮದುವೆಯಾಗಲು ನಿಶ್ಚಯಿಸುತ್ತಾನೆ. ಅವನ ತಪೋಬಲದಿಂದ ವಿದರ್ಭ ರಾಜನಿಗೆ ಅತಿಶಯ ರೂಪವತಿಯಾದ ಲೋಪಾಮುದ್ರೆಯೆಂಬ ಮಗು ಹುಟ್ಟುತ್ತದೆ. ಇವಳು ದೊಡ್ಡವಳಾದ ಮೇಲೆ ಜಟಾಧಾರಿಯಾದ ಅಗಸ್ತ್ಯ, ರಾಜನ ಬಳಿ ಹೋಗಿ ಲೋಪಾಮುದ್ರೆಯನ್ನು ತನಗೆ ಮದುವೆ ಮಾಡಿಕೊಡಬೇಕೆಂದು ಕೇಳುತ್ತಾನೆ. ವಿದರ್ಭ ರಾಜ ಕಳವಳಗೊಳ್ಳುತ್ತಾನೆ. ಆದರೆ ಋಷಿಯ ಅಪ್ಪಣೆಯನ್ನು ಮೀರುವಂತಿಲ್ಲ. ಲೋಪಾಮುದ್ರೆ ಅಗಸ್ತ್ಯನನ್ನು ಮದುವೆಯಾಗಿ ತನ್ನೆಲ್ಲ ವಸ್ತ್ರಾಭರಣಗಳನ್ನು ತವರಿನಲ್ಲೇ ಬಿಟ್ಟು ಋಷಿಯ ಆಶ್ರಮದಲ್ಲಿ ಬದುಕಲು ಶುರು ಮಾಡುತ್ತಾಳೆ. ಸರ್ವ ಸುಖ ತ್ಯಾಗದ ಈ ಕಠೋರ ಸಾಂಸಾರಿಕ ಜೀವನ ಹಾಗೇ ಮುಂದುವರಿಯಲಾರದು. ಒಮ್ಮೆ ಋತುಮತಿಯಾಗಿ ಸ್ನಾನ ಮಾಡಿ ಹೆಗಲ ಮೇಲೆ ಕೇಶರಾಶಿ ಚೆಲ್ಲಿಕೊಂಡ ಅವಳ ಮುಖವನ್ನು ನೋಡಿ ಘೋರ ತಪಸ್ಸಿನ ಅಗಸ್ತ್ಯನಿಗೂ ಅವಳ ಮೇಲೆ ಆಸೆ ಹುಟ್ಟುತ್ತದೆ. ಆದರೆ ಲೋಪಾಮುದ್ರೆ-ತಾಪಸರ ವೇಷದಲ್ಲಿರುವ ತಾವು ಕೂಡುವುದು ಸಮರ್ಪಕವಲ್ಲವೆಂದು, ತಾವು ತೊಟ್ಟ ವೇಷಕ್ಕೆ ಅಸಂಗತವೆಂದು ವಿನಯದಲ್ಲೇ ಹೇಳುತ್ತಾಳೆ. ತನ್ನ ಗಂಡ ಐಶ್ವರ್ಯಸಂಪನ್ನನಾಗಿ ತನ್ನ ಅಪ್ಪನ ಮನೆಯಲ್ಲಿದ್ದ ಹಾಸಿಗೆಯಷ್ಟು ಸುಖವಾದ ಮೆತ್ತಗಿನ ಶಯ್ಯೆಯಲ್ಲಿ ಯಥೋಚಿತವಾಗಿ ತನ್ನನ್ನು ಕೂಡಬೇಕೆಂದು ಕೇಳುತ್ತಾಳೆ. ಕಾಮಾತುರನಾದ ಅಗಸ್ತ್ಯ ಒಪ್ಪುತ್ತಾನೆ.

ಅಗಸ್ತ್ಯನಿಗೆ ಈಗ ಬಯಸಿದ್ದನ್ನೆಲ್ಲ ಪಡೆಯಬಲ್ಲ ಹಣ ಬೇಕು. ಶ್ರುತವರ್ಮವೆಂಬ ರಾಜನ ಬಳಿ ಬಂದು ಹಣ ಯಾಚಿಸುತ್ತಾನೆ. ತನ್ನ ನೈತಿಕಪ್ರಜ್ಞೆ ಕಳೆದುಕೊಳ್ಳದಂತೆ ‘ಬೇರೊಬ್ಬರಿಗೆ ಹಿಂಸೆ ಮಾಡದಂತೆ ನಿನಗೆ ಶಕ್ತಿಯಿದ್ದಷ್ಟು ಹಣವನ್ನು ನನಗೆ ಕೊಡು’ ಎಂದು…. ಆಗ ರಾಜ ತನ್ನ ರಾಜ್ಯದ ಆಯವ್ಯಯವನ್ನೆಲ್ಲಾ ಅವನ ಮುಂದೆ ಪೂರ್ಣವಾಗಿ ಒಪ್ಪಿಸಿ ಇದರಲ್ಲಿ ಉಳಿದುದೇನಿದ್ದರೂ ನೀನೇ ತೆಗೆದುಕೊಂಡು ಹೋಗು ಎನ್ನುತ್ತಾನೆ. ಏನೂ ಉಳಿಯದ ಬಡತನದ ನಿರ್ವಹಣೆಯ ಬಜೆಟ್ ಅವನದು. ಅಗಸ್ತ್ಯ ಬೇಡವೆನ್ನುತ್ತಾನೆ. ಏಕೆಂದರೆ ರಾಜ ತನಗೆ ದೇಣಿಗೆಯನ್ನು ಕೊಟ್ಟರೆ ತೆರಿಗೆಯನ್ನು ಏರಿಸಬೇಕಾಗುತ್ತದೆ. ಅದರಿಂದ ಜನರಿಗೆ ಬಾಧೆಯಾಗುತ್ತದೆ.

ಇನ್ನೊಬ್ಬ ರಾಜ ಬ್ರಜ್ಞಶ್ವ ಎಂಬುವವನ ಬಳಿಗೆ ಹೀಗೇ ಯಾಚಿಸಲು ಅಗಸ್ತ್ಯ ಹೋಗುತ್ತಾನೆ. ಅಲ್ಲೂ ಆಯವ್ಯಯದಲ್ಲಿ ಏನೂ ಉಳಿಯದಿರುವುದನ್ನು ಕಂಡು ಜನರಿಗೆ ತೆರಿಗೆ ಹೆಚ್ಚಾಗಬಾರದೆಂದು ಮತ್ತೊಬ್ಬ ರಾಜನ ಬಳಿಗೆ ಹೋಗುತ್ತಾನೆ. ಅವನ ಹೆಸರು ತ್ರಸದಸ್ಯು. ಇವನ ಆಯವ್ಯಯವೂ ಉಳಿದವರಂತೆಯೇ ಕ್ಷೀಣವಾಗಿರುತ್ತದೆ. ಆಗ ಈ ಎಲ್ಲರೂ ಸೇರಿ ತಮ್ಮೆಲ್ಲರನ್ನೂ ಮೀರಿಸುವ ಆಯವ್ಯಯದ (ಅಮೆರಿಕ ನೆನಪಾಗುತ್ತದೆ) ಕೋಟ್ಯಧೀಶನಾಗಿದ್ದ ಇನ್ನೊಬ್ಬ ರಾಜನ ಬಳಿ ಅಗಸ್ತ್ಯನನ್ನು ಮುಂದಿಟ್ಟುಕೊಂಡು ಹಣ ಕೇಳಲು ಹೋಗುತ್ತಾರೆ.

ಅಧಿಕವಾದ ಧನವುಳ್ಳ ಈತ ಒಬ್ಬ ದಾನವ. ಇವನಿಗೆ ಪ್ರಹ್ಲಾದನ ಕುಟುಂಬದಲ್ಲೇ ಹುಟ್ಟಿದ ವಾತಾಪಿಯೆಂಬ ದುಷ್ಟ ಜೊತೆಗಾರ. ಇಲ್ವಲ ಮನೆಗೆ ಸಜ್ಜನರು ಯಾರು ಬಂದರೂ ವಾತಾಪಿಯನ್ನು ಒಂದು ಆಡನ್ನಾಗಿ ಪರಿವರ್ತಿಸಿ ಕೊಂದು ಅವನ ಮಾಂಸವನ್ನು ಬೇಯಿಸಿ ಅಶನಾರ್ಥಿಗಳಿಗೆ ತಿನ್ನಿಸುವುದು. ಆನಂತರ ‘ವಾತಾಪಿ ಬಾ’ ಎಂದು ಕರೆಯುವುದು. ಹೊಟ್ಟೆಯಲ್ಲಿ ಮಾಂಸವಾಗಿದ್ದ ವಾತಾಪಿ ಪುನರ್ಜನ್ಮ ಪಡೆದು ತನ್ನನ್ನು ತಿಂದವರನ್ನು ಕೊಂದು ಹೊಟ್ಟೆಯಿಂದ ಸೀಳಿ ಹೊರಬರುವುದು. ಅಗಸ್ತ್ಯ ಬಂದಾಗಲೂ ಇಲ್ವಲ ಇದನ್ನೇ ಮಾಡುತ್ತಾನೆ. ಆದರೆ ಉಳಿದ ರಾಜರಿಗೆ ವಾತಾಪಿಯ ಮಾಂಸವನ್ನು ತಿನ್ನಲು ಬಿಡದೆ ಅಗ್ನಿಸಮಾನ ಹಸಿವಿನ ಅಗಸ್ತ್ಯನೊಬ್ಬನೇ ಅಷ್ಟನ್ನೂ ತಿಂದು, ‘ವಾತಾಪಿ ಜೀರ್ಣೋಭವ’ ಎಂದು ಹೇಳಿ ರಾಕ್ಷಸನನ್ನು ಜೀರ್ಣಿಸಿಕೊಂಡುಬಿಡುತ್ತಾನೆ.

ಇಲ್ವಲನಿಗೆ ಏನು ಮಾಡುವುದು ಎಂದು ತೋಚುವುದಿಲ್ಲ. ಅಗಸ್ತ್ಯ ಕೇಳಿದ್ದನ್ನೆಲ್ಲಾ ಅವನು ಕೊಡಬೇಕಾಗುತ್ತದೆ. ಒಬ್ಬೊಬ್ಬ ರಾಜನಿಗೂ ಹತ್ತು ಸಹಸ್ರ ಗೋವುಗಳು, ಅಗಸ್ತ್ಯನಿಗೆ ಅದರ ಎರಡರಷ್ಟು. ಜೊತೆಗೆ ಮನೋವೇಗವುಳ್ಳ ಎರಡು ಕುದುರೆಗಳು. ಇವೆಲ್ಲವನ್ನೂ ಕೊಟ್ಟಿದ್ದಲ್ಲದೆ ತನ್ನಲ್ಲಿ ಗುಪ್ತವಾಗಿ ಇದ್ದ ಒಂದು ಸುವರ್ಣಮಯವಾದ ರಥವನ್ನೂ (ಸ್ವಿಸ್ ಬ್ಯಾಂಕ್ ಡಿಪಾಸಿಟ್) ಇಲ್ವಲ ಕೊಡಬೇಕಾಗುತ್ತದೆ. ಅಗಸ್ತ್ಯ ಅಷ್ಟನ್ನೂ ತನ್ನ ರಥದ ಮೇಲಿಟ್ಟುಕೊಂಡು ಹೋಗುವಾಗ ಇಲ್ವಲ ಬೆನ್ನಟ್ಟಿ ಬರುತ್ತಿರುವುದು ಕಾಣುತ್ತದೆ. ಯಾವ ಧನಿಕನಾದರೂ ತನಗೆ ಗೊತ್ತಿರುವ ಧನಸಂಗ್ರಹದ ಉಪಾಯಗಳನ್ನು ಕೈಬಿಡುವುದು ಸಾಧ್ಯವೆ?

ಅಗಸ್ತ್ಯ ಅವನನ್ನು ಸಂಹರಿಸಿ ಮನೆಗೆ ಹಿಂಬಂದು ತನ್ನ ರಾಜಕುಮಾರಿ ಲೋಪಾಮುದ್ರೆಯ ಆಸೆಗಳನ್ನೆಲ್ಲ ಪೂರೈಸಿ, ತಾನೂ ತೃಪ್ತನಾಗಿ ‘ನಿನಗೆ ಸಾವಿರ ಮಕ್ಕಳು ಬೇಕೋ ಅಥವಾ ಅತ್ಯಂತ ಜ್ಞಾನಿಯಾದ ಒಬ್ಬ ಮಗನೇ ಸಾಕೋ’ ಎಂದು ಕೇಳುತ್ತಾನೆ. ಪ್ರಸನ್ನಳಾದ ರಾಜಕುಮಾರಿ, ಋಷಿ ಪತ್ನಿ, ಒಬ್ಬ ಮಗನೇ ಸಾಕು ಎನ್ನುತ್ತಾಳೆ.

*

ಈ ಕತೆಯ ನೀತಿಯನ್ನು ವಿವರಿಸಬೇಕಿಲ್ಲ. ದಾಂಪತ್ಯ, ಸಂಸಾರದ ಒತ್ತಡದಲ್ಲೂ, ಸಂತಾನಾಭಿವೃದ್ಧಿಯ ಆಶಯಗಳಲ್ಲೂ ಅಡಗಿರುವ ಜನಪರ ನೈತಿಕತೆಯನ್ನೂ, ಈ ಅನಿವಾರ್ಯಗಳ ಹುನ್ನಾರದಲ್ಲೇ ಲಕ್ಷ್ಮೀಕಟಾಕ್ಷಕ್ಕಾಗಿ ಬಯಸಿದಾಗ ಮುಂದಾಗುವ ಪ್ರಲೋಭನೆಗಳನ್ನೂ ಇಹಕ್ಕೂ ಪರಕ್ಕೂ ಸಲ್ಲುವಂತೆ ಋಷಿಕವಿ ವೇದವ್ಯಾಸರು ಕಾಣುವುದೆಲ್ಲ ಕತೆಯಲ್ಲಿ ಅಡಗಿದೆ. ಈ ಉದ್ದೇಶಗಳು ಇಣುಕುವಂತೆ ನಮ್ಮ ಅಣ್ಣಾ ಹಜಾರೆ ಕಥನಕ್ಕೆ ಈ ಕತೆಯನ್ನು ನೆವ ಮಾಡಿಕೊಂಡು ನನ್ನ ಅಧಿಕಪ್ರಸಂಗವನ್ನು ಕೊಂಚ ಬೆಳೆಸುತ್ತೇನೆ.

ಒಂದು ರಾಜ್ಯವನ್ನು ಪ್ರಜಾತಂತ್ರದಲ್ಲಿ ನಡೆಸಲು ರಾಜಕೀಯ ಕಾರ್ಯಕರ್ತರು ಬೇಕು. ಅವರಿಗೆ ಬದುಕಲು ಹಣ ಬೇಕು. ಪಕ್ಷದ ಪ್ರಚಾರಕ್ಕೆ ಹಣ ಬೇಕು. ಇದನ್ನು ಯಾರಿಂದಾದರೂ ಪಡೆಯಬೇಕು. ಹಣ ಕೊಟ್ಟವರು ಅಧಿಕಾರಕ್ಕೆ ಬಂದವರಿಂದ ತಮ್ಮ ಹಣವನ್ನು ಗಳಿಸಿಕೊಳ್ಳಲು ‘೨ಜಿ’ ಲೈಸನ್ಸ್‌ಗಳನ್ನು ಪಡೆದೇಪಡೆಯುತ್ತಾರೆ. ಗಣಿಗಳನ್ನು ನಡೆಸಲು ಹೊಸ ಗಣಿಗಳನ್ನು ತೆಗೆಯಲು ಅವಕಾಶ ಬೇಡುತ್ತಾರೆ. ಒಬ್ಬ ಮನಮೋಹನಸಿಂಗ್‌ನಂಥ ಕಾಂಚನ ಕಾಮಿಯಲ್ಲದವನು ಅಧಿಕಾರದಲ್ಲಿದ್ದಾಗಲೂ ಇವೆಲ್ಲಾ ಯಥಾಪ್ರಕಾರ ನಡೆಯುತ್ತಲೇ ಇರುತ್ತದೆ.

ವಾತಾಪಿಯನ್ನು ತಿಂದು ಜೀರ್ಣಿಸಿಕೊಳ್ಳಬಲ್ಲ ಪ್ರಜಾತಂತ್ರಕ್ಕೆ ಅದರದೇ ಆದ ಯಾವ ಹಂಗಿಗೂ ಒಳಗಾಗದ ವ್ಯವಸ್ಥೆ ಇರಬೇಕು. ಚುನಾವಣಾ ಸಂಹಿತೆಯಲ್ಲಿ ಬದಲಾವಣೆಗಳಾಗಬೇಕು. ರಾಜಕಾರಣ ಮಾಡುವವರು ತಮ್ಮ ಜೀವನ ನಡೆಸಲು ನಮ್ಮೆಲ್ಲರಿಂದಲೂ ಆದಾಯ ತೆರಿಗೆ ಮುಕ್ತವಾದ ದೇಣಿಗೆಯನ್ನು ಪಡೆಯಬೇಕು. ಹೀಗೆ ಎಲ್ಲ ಸಮಾಜದಲ್ಲೂ ಇರುವ ತಿನ್ನುವಾಗ ರುಚಿಸುವ ವಾತಾಪಿಯನ್ನು ಜೀರ್ಣಿಸಿಕೊಳ್ಳಬಲ್ಲ ಜಠರ ನಮ್ಮ ಪ್ರಜಾತಂತ್ರಕ್ಕೆ ಪ್ರಾಪ್ತವಾಗಬೇಕು.

ಸರಳರೂ ಸಜ್ಜರನೂ ಆದ ಅಣ್ಣಾ ಹಜಾರೆ ಈ ಎಲ್ಲ ಕ್ರಿಯೆಗೆ ಪ್ರೇರಕವಾಗುವಂತೆ ಅಲ್ಪಸ್ವಲ್ಪ ಭ್ರಷ್ಟಾಚಾರಿಗಳಲ್ಲೂ ಭ್ರಷ್ಟಾಚಾರ ತಪ್ಪು ಎನ್ನುವ ಭಾವನೆ ಹುಟ್ಟಿಸಿದ್ದಾರೆ. ಭ್ರಷ್ಟ ಹಣವನ್ನು ಎಲ್ಲೆಲ್ಲೋ ಮುಚ್ಚಿಟ್ಟ ಸಿನಿಮಾ ತಾರೆಯರಲ್ಲೂ ಈ ಆಸೆ ಹುಟ್ಟಿಸಿದ್ದಾರೆ. ಬೃಹತ್ ಸಂಪತ್ತನ್ನು ಸೃಷ್ಟಿಸಿಕೊಂಡ ಗುರು ರಾಮ್‌ದೇವ್‌ನಲ್ಲೂ ಹುಟ್ಟಿಸಿದ್ದಾರೆ. ಭ್ರಷ್ಟಾಚಾರ ಅನಿವಾರ್ಯವಲ್ಲದ ಜಗತ್ತಿನಲ್ಲಿ ಬದುಕಬೇಕೆಂಬ ಇಚ್ಛೆ ಸಂತಾನಾಪೇಕ್ಷಿಗಳಾದ ಎಲ್ಲ ಗೃಹಸ್ಥರಲ್ಲೂ ಸದ್ಯ ಹುಟ್ಟಿರುವಂತೆ ತೋರುತ್ತದೆ. ಇದರ ಹಿಂದಿರುವ ಮುಗ್ಧ ಸರಳತೆಯ ಧೀರೋದಾತ್ತ ಅಣ್ಣಾ ಹಜಾರೆಯವರ ವರ್ಚಸ್ಸನ್ನು ಗುರುತಿಸಬಲ್ಲ ಕಣ್ಣು ಭಾರತದ ಜನತೆಗೆ ಇನ್ನೂ ಉಳಿದಿದೆ. ಜಾಣರು ಅಣ್ಣಾ ಹಜಾರೆ ಹೇಳಿದ್ದನ್ನೇ ಎಷ್ಟು ಆರ್ಥಿಕ ಸಾಮಾಜಿಕ ವಿಶ್ಲೇಷಣೆಯಲ್ಲಿ ಹೇಳಿದಾಗಲೂ ಅದು ಹೀಗೆ ಜನತೆಯನ್ನು ತಟ್ಟಿರಲಿಲ್ಲ. ಇದು ನಮ್ಮ ದೇಶದ ಸೋಜಿಗ. ಜಯಪ್ರಕಾಶರಿಗೂ ಜನ ಹೀಗೇ ಮಿಡಿದಿದ್ದರು. ಅವರ ಅನುಯಾಯಿಗಳಾಗಿ ಗದ್ದುಗೆ ಏರಿದ ಲಾಲು, ಮುಲಾಯಂ ಏನಾದರು ಎಂಬುದು ಈಗ ಚರಿತ್ರೆ.

ಪ್ರಜಾತಂತ್ರದ ಪಾಡು ಇದು. ಅದು ನಡೆಯಲು ಪುಢಾರಿಗಳೂ ಅನಿವಾರ್ಯವೇನೊ? ರಾಜಕಾರಣಿಗಳೇ ದುರ್ಲಭವಾದ ಪಾಕಿಸ್ತಾನದಲ್ಲಿ ನಡೆಯುವುದು ಮಿಲಿಟರಿ ಮಾತು ಅಥವಾ ಅಲ್ಪಸಂಖ್ಯಾತರಾದ ಭಯೋತ್ಪಾದಕರ ಮಾತು. ಭಾರತದಲ್ಲಿ ಪುಢಾರಿಗಳ ಕೊರತೆಯಿಲ್ಲ ಎನ್ನುವುದೇ ಸಮಸ್ಯೆಯೂ ಹೌದು. ಆದ್ದರಿಂದ ಅನಿವಾರ್ಯವಾಗಿ ರಾಜಕಾರಣಕ್ಕೆ ಅಗತ್ಯವಾದ ಹಣವನ್ನು ಗಳಿಸುವ ಬಳಸುವ ನೈತಿಕತೆ ನಮ್ಮ ಸಾಮಾಜಿಕ ಜೀವನದಲ್ಲಿ ಊರಿ ಅದೊಂದು ಉಸಿರಾಟದಷ್ಟು ಸಹಜ ಸ್ಥಿತಿ ಎನ್ನಿಸುವಂತಿರಬೇಕು.

ಸತತ ಎಚ್ಚರದಲ್ಲಿ ನಾವು ವಾತಾಪಿಯನ್ನು ಜೀರ್ಣಿಸಿಕೊಳ್ಳುತ್ತಲೇ ಇರಬೇಕು. ನಮ್ಮ ಡೆವಲಪ್ ಮಾಡೆಲ್ಲೇ ಇಂತ ವಾತಾಪಿಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ವಾತಾಪಿಯೂ ಭಕ್ತನಾಗಿದ್ದ ಪ್ರಹ್ಲಾದ ಕುಲದಲ್ಲಿ ಹುಟ್ಟಿದವನಿರಬಹುದೇನೊ ಎಂಬುದು ಕೂಡಾ ಗಮನಾರ್ಹವಾದದ್ದು. ಪ್ರೇಮದಂತೆ ಸಾರ್ವಜನಿಕ ನೈತಿಕತೆಯೂ ಪ್ರತಿನಿತ್ಯ ಹೊಸ ಹುಟ್ಟು ಪಡೆಯುತ್ತಲೇ ಇರಬೇಕಾಗುತ್ತದೆ.

—-
ಪ್ರಜಾವಾಣಿ
: ೧೭೧೧