ಮನು ಬಳಿಗಾರ್ ನನಗಿನ್ನೂ ಮುಖತಃ ಪರಿಚಯವಾಗಿಲ್ಲ. ಅವರು ಕನ್ನಡದಲ್ಲಿ ಆರು ಪುಸ್ತಕಗಳನ್ನು ಪ್ರಕಟಿಸಿದ್ದರೂ ಅವನ್ನು ನಾನಿನ್ನೂ ಓದಿಲ್ಲ. ಈಗ ಪ್ರಕಟವಾಗುತ್ತಿರುವ ಸಂಕಲನದ ಕಥೆಗಳನ್ನು ಓದುತ್ತಿದ್ದಂತೆ ನಾನೇನೊ ಕಳೆದುಕೊಂಡಂತೆ ಭಾಸವಾಗಿದೆ. ಮನು ಬಳಿಗಾರ್ ನಮ್ಮ ನಡುವಿನ ಒಬ್ಬ ಸಮರ್ಥ ಲೇಖಕ; ಇನ್ನೂ ಬೆಳೆಯಬಲ್ಲ ಮುಕ್ತ ಮನಸ್ಸಿನ ಲೇಖಕ; ಹದವಾದ ದೃಷ್ಟಿಯ ಲೇಖಕ ಎಂದು ನನಗೆ ಅನ್ನಿಸಿದೆ.

ಇವರ ಬರವಣಿಗೆಯ ಹದ, ಭಾವನೆಯ ಆರ್ದ್ರತೆಯನ್ನು ಕಳೆದುಕೊಳ್ಳದ ಹದ ನನಗೆ ತುಂಬ ಇಷ್ಟವಾಗಿದೆ. ಆರ್ದ್ರ ಸ್ವಭಾವದವನು ವಿವೇಕಿಯಲ್ಲದೇ ಇರಬಹುದು; ಹಾಗೆಯೇ ವಿವೇಕಿಯಾದವನ ಭಾವನಾಲೋಕ ಒಣಗಿಹೋಗಿರಬಹುದು. ಆದರೆ ಮನು ಬಳಿಗಾರ್ ವಿವೇಕ ಕಳೆದುಕೊಳ್ಳದಂತೆ ಆರ್ದ್ರವಾಗಿ ಸ್ಪಂದಿಸುತ್ತಾರೆ. ‘ವಂಚಿತ’ ಕಥೆಯ ಮಡ್ಡೆಪ್ಪ ದುರಗಪ್ಪ ಕೊಂಪಿಯನ್ನು ನೋಡಿ. ಅವನ ದಾರುಣ ಬಡತನ ಸಾಲದಲ್ಲವೆಂಬಂತೆ ಅವನ ಹೆಸರೂ ಅವನಿಗೆ ಶಾಪವಾಗಿದೆ. ಇಡೀ ಕಥೆಯನ್ನು ಅತಿರೇಕಕ್ಕೆ ಹೋಗದಂತೆ ಬಳಿಗಾರ್ ಬರೆಯುತ್ತಾರೆ. ಈತನಿಗೆ ನೌಕರಿಯಿಲ್ಲ; ಮದುವೆಯಾಗಲು ಹುಡುಗಿ ಕಡೆಯವರು ಒಪ್ಪುವುದಿಲ್ಲ. ಮಡ್ಡೆಪ್ಪ ಯಾವುದೋ ಭರವಸೆಯಿಂದ ದಸರಾ ಉತ್ಸವ ನಡೆಸುವ ಒಬ್ಬ ಮೇಲಧಿಕಾರಿ ಹಿಂದೊಮ್ಮೆ ಗೆಳೆಯನಾಗಿದ್ದನೆಂದು ನೆನಸಿ ಮೈಸೂರಿಗೆ ಹೋಗುತ್ತಾನೆ; ಕುಚೇಲ ಕೃಷ್ಣನನ್ನು ನೋಡಲು ಹೋದಂತೆ. ಓದುಗನೂ ಅನುಕಂಪಿತನಾಗಿ ಈತನ ಬಗ್ಗೆ ಭರವಸೆ ತಾಳುತ್ತಾನೆ. ಒಂದೋ ಆಸೆ ಕೈಗೂಡಬೇಕು ಅಥವಾ ನಿರಾಸೆಯಾಗಬೇಕು; ಸಾಮಾನ್ಯವಾಗಿ ಈ ಕಥೆ ಅಪೇಕ್ಷಿಸುವ ಮುಕ್ತಾಯ ಹಾಗಿರಬೇಕು. ಆದರೆ ಬಳಿಗಾರರ ವಿಶೇಷ ಕಲೆಗಾರಿಕೆಯಿಂದಾಗಿ ಮಡ್ಡೆಪ್ಪನ ಒಂದು ಭವ್ಯ ಹಗಲುಗನಸಿನಲ್ಲಿ ಕಥೆ ಮುಕ್ತಾಯವಾಗುತ್ತದೆ. ಇದು ಕನಸೂ ಹೌದು; ಅವನು ತನ್ನಲ್ಲಿರುವ ಹಣವನ್ನೆಲ್ಲ ಖರ್ಚು ಮಾಡಿ ನಿರುಪಯುಕ್ತವಾದ ಒಂದು ಆನೆಯನ್ನು ಕೊಂಡು ತರುವ ಕಥೆಯೂ ಹೌದು. ಮಡ್ಡೆಪ್ಪನ ಈ ಮೂರ್ಖತನದಲ್ಲಿಯೇ ಅವನ ಹಲವು ಸಾಧ್ಯತೆಗಳ ಆತ್ಮ ನಮಗೆ ಗೋಚರಿಸುತ್ತದೆ.

‘ಒಂದು ಚಪ್ಪಲಿ ಪ್ರಕರಣ’ ಕಥೆಯ ಬಸವಣ್ಣಿಯ ಭಯಂಕರ ಕೋಪವನ್ನೂ ಇದೇ ಹದದಲ್ಲಿ ಬಳಿಗಾರ್ ಚಿತ್ರಿಸಿದ್ದಾರೆ. ಕಥೆಯಲ್ಲಿ ಅನುಕಂಪವಿದೆ. ನವಿರಾದ ಹಾಸ್ಯವಿದೆ. ಬಸವಣ್ಣಿ ವಂಚಿತನಾಗುತ್ತಾನೆ. ಆದರೆ ಅವನ ಒಳಗಿನ ಸಿಟ್ಟು ಅವನಿಗೆ ಘನತೆಯನ್ನು ತರುತ್ತದೆ. ಅವನು ಬಡವ; ಆದರೆ ಬಡಪಾಯಿಯಲ್ಲ. ಬಂಡಾಯ ಸಾಹಿತ್ಯದ ‘ರೋಷ’ದ ಬರವಣಿಗೆಯಲ್ಲಿ ದಕ್ಕಲಾರದೇ ಹೋಗುವ ಕೋಪಾಗ್ನಿ ಬಸವಣ್ಣಿಗೆ ಘನತೆ ತರುತ್ತದೆ. ಬಸವಣ್ಣಿ ನಮ್ಮ ಕರುಣೆಗೆ ಪಾತ್ರವಾಗದೇ ನಮ್ಮ ಮೆಚ್ಚುಗೆ ಗಳಿಸುವುದು ಕಥೆಯಲ್ಲಿ ಚೆನ್ನಾಗಿ ಮೂಡಿದೆ. ಬಳಿಗಾರ್‌ಗೆ ಶೈಲಿಯ ಹದ ದಕ್ಕಿದೆ ಎಂದು ಅನ್ನಿಸುತ್ತದೆ. ‘ಜೋಳದ ಬುಟ್ಟಿಯೊಳಗಿಂದ’ ಕಥೆಯಲ್ಲಿಯೂ ಭದ್ರವ್ವ ತನ್ನ ಹೆಣ್ಣುತನದ ಅಳುಕನ್ನು ಗೆದ್ದು ನಿಲ್ಲುವುದು ಹದವಾಗಿ ಮೂಡಿದೆ.

ಬಳಿಗಾರ್‌ರ ಕಥೆಗಳಲ್ಲಿನ ಹದವಾದ ನಿರ್ವಹಣೆಯಂತೆಯೇ ಅವರ ಭಾವನಾಲೋಕ ಜೀವನದ ಹಲವು ಮಗ್ಗಲುಗಳನ್ನು ಒಳಗೊಳ್ಳುವ ಕ್ರಮ ಚೆನ್ನಾಗಿದೆ. ‘ಅಳು’ ಕಥೆಯ ಮಂಜು ನಾವು ಯಾರಾದರೂ ಆಗಿರಬಹುದು. ಒಬ್ಬ ಹುಡುಗ ಓದಿ ಮುಂದೆ ಬರುವುದು; ಅದಕ್ಕಾಗಿ ತಾಯಿ-ತಂದೆಗಳು ಹಾತೊರೆದು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುವುದು; ಓದಿ ಮುಂದೆ ಬಂದ ಹುಡುಗ ಕ್ರಮೇಣ ತನ್ನ ಮುಗ್ಧತೆ ಕಳೆದುಕೊಂಡು ಬರಡಾಗುವುದು; ಹೀಗೆ ಬರಡಾದೆನೆಂದು ನರಳುವುದು-ನಮಗೆ ಪರಿಚಿತವಾದ ಥೀಮು. ಆದರೆ ಬಳಿಗಾರ್‌ರ ಸಮರ್ಥ ನಿರ್ವಹಣೆಯಲ್ಲಿ ಮಂಜು ಕಳೆದುಕೊಂಡ ಬದುಕು ವಿಶಿಷ್ಟ ವಿವರಗಳಲ್ಲಿ ಮೂಡುವುದಷ್ಟೇ ಅಲ್ಲ-ಮಂಜು ಒಳ್ಳೆಯವನಾಗಿದ್ದೂ ಬರಡಾಗುತ್ತಾನೆ ಮತ್ತು ಹೀಗಾದನೆಂದು ನರಳುತ್ತಾನೆ. ಆದರೆ ಹೀಗೆ ನರಳುವುದು ಪ್ರಯೋಜನವಿಲ್ಲ…. ಇತ್ಯಾದಿ ಭಾವನೆಗಳು ಪ್ರೌಢವಾಗಿ ನಮ್ಮ ಮನಸ್ಸಿನಲ್ಲಿ ಮೂಡಿಸುವಂತೆ ಬಳಿಗಾರ್ ಬರೆಯುತ್ತಾರೆ.

‘ಗಂಗಮ್ಮನ ಜೀವನ ದೃಷ್ಟಿ’ ಕತೆ ಭಾವಾತಿರೇಕದ ಆದರ್ಶವಾದೀ ನಿರೂಪಣೆಯಿಂದ ಕೃತಕವಾಗಬಹುದಿತ್ತು, ಆದರೆ ನಿರೂಪಕನ ಪಕ್ವತೆಯಿಂದಾಗಿ ಹಾಗಾಗದೇ ಗಂಗಮ್ಮ ನೈಜವಾಗಿದ್ದೇ ಆದರ್ಶಪ್ರಾಯಳಾಗುತ್ತಾಳೆ. ‘ಋಣ’ದ ರಮೇಶ ಒಳ್ಳೆಯವನು. ಆದರೆ ಅವನ ಒಳ್ಳೆಯತನ ಮತ್ತು ಭಾವುಕತೆಗಳು ಸಮಸ್ಯಾತ್ಮಕವಾಗಿ ಮೂಡುವುದು ಬಳಿಗಾರರ ಸಂಕೀರ್ಣವಾದ ದೃಷ್ಟಿಯಿಂದ ಸಾಧ್ಯವಾಗಿದೆ. ‘ಎರಡು ದಾರಿ’ ಕಥೆಯ ವಿರಸ ದಾಂಪತ್ಯವೂ ಇಬ್ಬರನ್ನೂ ಸಂಬಂಧಪಟ್ಟವರಲ್ಲಿ ಯಾರೊಬ್ಬರನ್ನು ಅತಿ ಹಳಿಯದೆ, ಅತಿ ಎತ್ತದೆ ಮನುಷ್ಯ ಸ್ವಭಾವದಲ್ಲೇ ಇರುವ ಸಣ್ಣತನದ ದರ್ಶನವಾಗಿ ಮೂಡುತ್ತದೆ. ಇಲ್ಲಿ ಹೆಣ್ಣು ಸಣ್ಣವಳಾಗುತ್ತಾಳೆ; ಆದರೆ ಇನ್ನೊಂದು ಇಂಥ ಕಥೆಯಲ್ಲಿ ಗಂಡು ಅಲ್ಪನಾಗಿರಬಹುದು ಎನ್ನಿಸುವಂತಿದೆ ಪ್ರಸ್ತುತ ಕಥೆ. ‘ಅನುಭೋಗ’ ಕಥೆಯ ಕುಷ್ಟರೋಗಗ್ರಸ್ತನಾದ ಶಿವು ಒಮ್ಮೆ ಸುಂದರನೂ, ಸರಸಿಯೂ, ಭೋಗಿಯೂ, ವಿಲಾಸಿಯೂ ಆಗಿ ಗೆಳೆಯರ ಹೊಟ್ಟೆ ಉರಿಸುವಂತೆ ಇದ್ದವನು. ಈಗ ಅವನು ಕರುಣಾಜನಕವಾಗಿ ಕಾಣುತ್ತಾನೆ. ಆದರೆ ಹಾಗೆ ಅವನ ನಡತೆಯಿಲ್ಲ. ನಿರೂಪಕನಾದ ಅವನ ಗೆಳೆಯ ಶಿವೂನ ಸ್ವಸ್ಥವಾದ ದೃಷ್ಟಿಯಿಂದ ಬೆರಗಾಗುತ್ತಾನೆ. ಇಂಥ ಒಂದು ಕಥೆಯನ್ನು ಯಾರಾದರೂ ಕರುಣೆ ಹುಟ್ಟಿಸಲು ಬರೆಯಬಹುದಿತ್ತು. ಆದರೆ ಬಳಿಗಾರ್ ಹಾಗೆ ಬರೆಯುವುದಿಲ್ಲವೆಂಬುದು ಕನ್ನಡದ ಇನ್ನೊಬ್ಬ ಕಥೆಗಾರನಾಗಿ ನನಗೆ ತುಂಬ ಇಷ್ಟವಾಗಿದೆ.

ಈ ಸಂಕಲನದ ಕಥೆಗಳನ್ನು ನಾನು ಓದುವಂತೆ ಮಾಡಿ ನನ್ನ ಒಳಮನಸ್ಸನ್ನು ಹಿಗ್ಗಿಸಿದ ಬಳಿಗಾರ್‌ರನ್ನು ನಾನು ಅಭಿನಂದಿಸುತ್ತೇನೆ. ನನ್ನಂತೆಯೇ ಇವರು ಹಳ್ಳಿಯಲ್ಲಿ ಹುಟ್ಟಿಬಂದು ವಿದ್ಯಾವಂತರಾದವರು. ಜೀವನವನ್ನು ಪ್ರತಿನಿತ್ಯ ಅದರ ಕ್ಷುಲ್ಲಕತೆಯಲ್ಲೂ, ಭವ್ಯತೆಯಲ್ಲೂ ಕಾಣಬಲ್ಲ ಸರ್ಕಾರಿ ಇಲಾಖೆಯಲ್ಲಿ ಇರುವ ಬಳಿಗಾರ ತಮ್ಮ ಸೂಕ್ಷ್ಮಜ್ಞತೆ ಮತ್ತು ಭಾವನಾ ಪ್ರಾಮಾಣಿಕತೆಯಿಂದಾಗಿ ಇಂಥ ಕಥೆಗಳ ಜೊತೆಯೇ ನವರತ್ನ ರಾಮರಾಯರಂತೆ ಈ ಕಾಲದ ದಾಖಲಾಗಬಲ್ಲ ಬರವಣಿಗೆಯನ್ನೂ ಬರೆಯಬಲ್ಲಷ್ಟು ಇವರ ವೃತ್ತಿಜೀವನ ಹಿಗ್ಗಲಿ ಎಂದು ಹಾರೈಸಿ ಈ ಕೆಲವು ಮಾತುಗಳನ್ನು ಅಭಿಮಾನದಿಂದ ಬರೆದಿದ್ದೇನೆ.

—-
ಮನು
ಬಳಿಗಾರ್ ಅವರ ಕಥಾಸಂಕಲನಋಣಕ್ಕೆ ಬರೆದ ಮುನ್ನುಡಿ
೨೫೧೯೯೯