ಭವಭೂತಿ ಹೇಳುವ ಎರಡು ಸಾಲುಗಳೊಂದಿಗೆ ನನ್ನ ಮಾತನ್ನು ಆರಂಭಿಸುತ್ತೇನೆ. ಕೆ.ವಿ. ಅಕ್ಷರ ಅವರು ‘ಮಾತುಕತೆ’ ಪತ್ರಿಕೆಯಲ್ಲಿ (ಸಂಖ್ಯೆ ೯೭) ಬರೆದಿರುವ ಭಾಷೆಯ ಕುರಿತಾದ ಲೇಖನವೊಂದರಲ್ಲಿ ಇದು ನನಗೆ ದೊರೆತಿತು.

‘ಲೌಕಿಕಾನಾಂ ಹಿ ಸಾಧೂನಾಂ ಅರ್ಥಂ ವಾಗ್ ಅನುವರ್ತತೇ
ಋಷೀನಾಂ ಪುನರಾದ್ಯಾನಾಂ ವಾಚಂ ಅರ್ಥೋ ಅನುಧಾವತಿ’
(ಭವಭೂತಿ -ಉತ್ತರರಾಮ ಚರಿತ)

(ನಿತ್ಯದ ಬಳಕೆಯ ಸಜ್ಜನರ ನುಡಿಗಳಲ್ಲಿ ಅರ್ಥವನ್ನು ಅನುಸರಿಸಿ ಪದಗಳು ಹೊರಬರುತ್ತವೆ; ಆದರೆ ಹಿರಿಯರಾದ ಮಹಿಮರ ಮಾತುಗಳಲ್ಲಿ ಮಾತನ್ನೇ ಅರ್ಥವು ಹಿಂಬಾಲಿಸುತ್ತದೆ.)

ಶ್ರೀ ಗು.ಸು. ಭಟ್ಟ ಬೆತ್ತಗೇರಿ ಎಂಬ ಹವ್ಯಕ ಭಾಷೆಯ ಕವಿಯ ಬಗ್ಗೆ ಅಕ್ಷರ ಬರೆದ ಮಹತ್ವದ ಲೇಖನವಿದು.

ನಾನಿನ್ನೂ ಈ ಕವಿಯನ್ನು ಓದಬೇಕಾದ ಎಚ್ಚರದಲ್ಲಿ ಓದಿಲ್ಲ. ನನಗೆ ಮುಖ್ಯವೆನಿಸಿದ್ದು ಭಾಷೆ ಮತ್ತು ಅರ್ಥಗಳನ್ನು ಕುರಿತು ಭವಭೂತಿ ಮಾಡುವ ನಿರ್ವಚನ. ಅಕ್ಷರ ಅವರು ಭಾಷೆ ಮತ್ತು ಅರ್ಥಗಳು ಕಾವ್ಯದಲ್ಲಿ ಒಟ್ಟಿಗೇ ಹುಟ್ಟಿ ಒಕ್ಕಲಾಗಿ ಕೂಡಿಕೊಂಡಿರುವುದರ ಕುರಿತು ಹೇಳುವ ಮಾತುಗಳು ನನಗೆ ಮುಖ್ಯವೆನ್ನಿಸಿವೆ.

ಜಗತ್ತಿನ ಕೆಲವು ಶ್ರೇಷ್ಠ ತತ್ತ್ವಜ್ಞಾನಿಗಳು ಈ ವಿಷಯದ ಬಗ್ಗೆ ಮಾತನಾಡಿದ್ದರೂ ಭವಭೂತಿಯಷ್ಟು ಒಪ್ಪುವಂತೆ ಯಾರೂ ಹೇಳಿಲ್ಲವೆಂದು ನಾನು ಭಾವಿಸುತ್ತೇನೆ. ರವೀಂದ್ರನಾಥ ಠಾಕೂರರು ಮೇಲಿನ ಮಾತಿನಲ್ಲಿ ಎರಡನೆಯ ಸಾಲಿಗೆ ಸೇರುತ್ತಾರೆಂಬ ಬಂಗಾಳಿ ಗೊತ್ತಿಲ್ಲದ ನನ್ನ ಊಹೆ ತಪ್ಪಿರಲಾರದು. ಅವರ ಕಾವ್ಯದಲ್ಲಿ ನಿಜವಾದ್ದು ಅವರ ವೈಚಾರಿಕ ಗದ್ಯದಲ್ಲಿ ಇರಲಾರದು. ಅಲ್ಲಿ ಭಾಷೆ ಚಿಂತನೆಯನ್ನು ಅನುಸರಿಸುತ್ತದೆ ಎಂದು ನನ್ನ ಅಭಿಪ್ರಾಯ. ಠಾಕೂರರಲ್ಲಿ ಇದು ಎಲ್ಲ ಕಡೆಯೂ ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಪ್ರಬಂಧಗಳಲ್ಲಿ ಭಾಷೆಯು ಚಿಂತನೆಯನ್ನನುಸರಿಸುತ್ತದೆ. ಆದರೆ ಅವರ ಬಹುಪಾಲು ಸೃಜನಶೀಲ ಕೃತಿಗಳು ಲಯ, ನುಡಿಗಟ್ಟು, ಲಾಲಿತ್ಯದ ಬಂಧದ ಹಿಂದೆಯೇ ಹೋಗಿ, ಹೀಗೆ ಹೋದದ್ದೇ ಮಾತಾಗಿ ಅವರೊಳಗೆ ಅಡಗಿದ್ದ ಚಿಂತನೆಯನ್ನು ಕಂಡುಕೊಳ್ಳುತ್ತವೆ. ಅಂದರೆ ಅವು ಅಭಿವ್ಯಕ್ತಗೊಳ್ಳುವವರೆಗೆ ಅವರಿಗೇ ತಾನು ಹೇಳುತ್ತಿರುವುದರ ಬಗ್ಗೆ ಪ್ರಜ್ಞಾಪೂರ್ವಕ ಅರಿವು ಇರಲಿಲ್ಲವೇನೋ. ಜನಾಂಗೀಯ ಅಪ್ರಜ್ಞಾಪೂರ್ವಕಕತೆಯೆಡೆಗೆ ಇಂತಹ ಆಪ್ತ ವೈಯಕ್ತಿಕತೆ ಮಾತ್ರ ಯಾವ ಲೇಖಕನನ್ನಾಗಲೀ ಜಗತ್ತಿನ ಶ್ರೇಷ್ಠ ಲೇಖಕನನ್ನಾಗಿ ಮಾಡುವುದು. ನಮ್ಮಲ್ಲಿ ಅಡಗಿದ್ದನ್ನು ನಾವು ಅರಿಯುವ ಕ್ರಮ ಇದು.

ಮೇಲಿನ ಮಾತುಗಳನ್ನು ನಾನು ನನ್ನ ಮುಂದಿನ ಚಿಂತನೆಯ ಮುನ್ನುಡಿಯಾಗಿ ಬಳಸುತ್ತಿದ್ದೇನೆ-ಎಲ್ಲಾ ಭಾರತೀಯ ಭಾಷೆಗಳೂ ಪ್ರಭುತ್ವ ಪಡೆಯಬೇಕೆಂಬುದು ನನ್ನ ಇಚ್ಛೆ. ಇದು ನನ್ನ ರಾಜಕೀಯ ಹಂಬಲವೂ ಹೌದು; ನಮ್ಮ ಸಂವಿಧಾನದಲ್ಲಿ ಸೂಚಿತವಾದ ಭಾಷೆಗಳು ಮಾತ್ರವಲ್ಲದೇ ಈ ಭಾಷೆಗಳ ಎಲ್ಲ ಪ್ರಾದೇಶಿಕ ಮತ್ತು ಪ್ರಾಂತೀಯ ವಿಭಿನ್ನತೆಗಳು ಕೂಡ ಪ್ರಭುತ್ವದ ಘನತೆ ಹೊಂದಿರಬೇಕು. ನಾವೊಂದು ಯೂರೋಪ್ ಮಾದರಿಯ ‘ನೇಷನ್’ ಆಗಬೇಕೆಂಬ ಅಪೇಕ್ಷೆಯಿಂದ ಒಂದೇ ಭಾಷೆ, ಒಂದೇ ಮತ. ಒಂದೇ ವರ್ಣದ ಜನಾಂಗದ ನಿರ್ಮಾಣ ನನ್ನ ಇಡೀ ಆಲೋಚನಾಕ್ರಮಕ್ಕೆ ವಿರುದ್ಧವಾದ್ದು. ಇದನ್ನು ನಾನು ಪಡೆದದ್ದು ನನ್ನ ಗುರುಗಳಾದ ಮಹಾತ್ಮಾಗಾಂಧಿ ಮತ್ತು ರವೀಂದ್ರನಾಥ ಠಾಕೂರರಿಂದ.

ಠಾಕೂರರು ಎರಡನೆಯ ಮಹಾಯುದ್ಧಕ್ಕೆ ಮುನ್ನ ಜರ್ಮನಿ, ಜಪಾನ್ ಮತ್ತು ಇಟಲಿ ಇತ್ಯಾದಿ ದೇಶಗಳಲ್ಲಿ ಹುಟ್ಟಿಕೊಂಡಿದ್ದ ಅಧಿಕಾರದಾಹದ ಪ್ರೇರಣೆ ಮಾತ್ರ ಪಡೆದಿದ್ದ ‘ನ್ಯಾಷನಲಿಸಮ್ಮು’ಗಳನ್ನು ದ್ವೇಷಿಸಿದರು. ಪ್ಯಾಲೆಸ್ತೇನ್ ದೇಶದಲ್ಲಿ ಭೂತಕಾಲದ ಇಸ್ರೇಲನ್ನು ಸೃಷ್ಟಿಸಬೇಕೆಂಬ ಜ್ಯೂಯಿಶ್ ನ್ಯಾಷನಲಿಸಂನ್ನು ಮಹಾತ್ಮಾಗಾಂಧಿ ವಿರೋಧಿಸಿದ್ದರು. ಎಲ್ಲ ಭಾಷೆಗಳ ಸ್ವಾಯತ್ತತೆಯ ಜೊತೆಗೇ, ಈ ಎಲ್ಲ ಭಾಷೆಗಳ ಕೊಡುಗೆಯಿಂದ ಸೃಷ್ಟಿಯಾದ ಹಿಂದೂಸ್ಥಾನಿಯನ್ನು ಸಂಪರ್ಕ ಭಾಷೆಯಾಗಿ ಬಯಸಿದ್ದ ಮಹಾತ್ಮಗಾಂಧಿ ಹಿಂದುತ್ವದ ಆಧಾರ ಮೇಲೆ ಕಟ್ಟುವ ಬಲಿಷ್ಠ ರಾಷ್ಟ್ರ ಕಲ್ಪನೆಗೆ ವಿರೋಧಿಗಳಾಗಿದ್ದರು. ನಾವು ಒಂದು ನೇಷನ್ ಎಂದು ತಿಳಿಯುವುದರ ಬದಲು ನಾವೊಂದು ಸಮುದಾಯಗಳ ಒಕ್ಕೂಟವಾದ ನಾಗರಿಕತೆ ಎಂದು ತಿಳಿದಾಗ ಮಾತ್ರ ‘ನೇಷನ್’ ಎನ್ನುವ ಶಬ್ದದಿಂದ ಹುಟ್ಟುವ ಏಕತಾನತೆ ಮರೆಯಾಗುತ್ತದೆ. ಠಾಕೂರರಿಗೆ ಈ ಇಡೀ ಭಾರತೀಯ ಸಮುದಾಯ ತನ್ನ ಎಲ್ಲ ವಿಭಿನ್ನತೆಗಳಲ್ಲೂ ಒಂದು ನಾಗರಿಕತೆ ಎನ್ನಿಸಿತ್ತು. ನ್ಯಾಷನಲಿಸಂಗೆ ಅವರು ಪರ್ಯಾಯವಾಗಿ ದೇಶಪ್ರೇಮ ಎನ್ನುವ ಶಬ್ದವನ್ನು ಬಳಸುವುದಿಲ್ಲ. ಆದರೆ ಕುಟುಂಬ ಪ್ರೇಮವೊಂದು ಇರುವಂತೆ ದೇಶಪ್ರೇಮ ಎಂಬುದೂ ಒಂದು ನೈಜವಾಗಿ ನಮ್ಮ ಮನಸ್ಸಿಗೆ ಮಾತ್ರವಲ್ಲದೇ ನಮ್ಮ ದೇಹದ ನಡೆನುಡಿಗೂ ಅಂಟಿಕೊಂಡಿರುತ್ತದೆ ಎಂದು ಅವರು ಭಾವಿಸಿದ್ದರು. ಕರ್ನಾಟಕದಲ್ಲಿ ಅವರು ಕೆಲವು ದಿನಗಳ ಕಾಲ ಇದ್ದಾಗ ತ್ಯಾಗರಾಜ ಮತ್ತು ದೀಕ್ಷಿತರ ಕೀರ್ತನೆಯ ಧಾಟಿಗಳನ್ನು ತಮ್ಮ ಬಂಗಾಳಿ ಸಂಗೀತದ ಒಳಗೆ ಅಳವಡಿಸಿಕೊಂಡಿದ್ದರು. ಭಾರತದ ಪ್ರತಿ ಪ್ರಾಂತ್ಯವೂ ಉಳಿದೆಲ್ಲ ಪ್ರಾಂತ್ಯಗಳನ್ನೂ ತನ್ನಲ್ಲೇ ಒಳಗೊಂಡಿರುವುದು ಸಾಧ್ಯವೆಂದು ಠಾಕೂರರು ತಿಳಿದಿದ್ದರು. ಐರ್ಲೆಂಡ್ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡೇ ಐರೋಪ್ಯ ನಾಗರಿಕತೆಯ ಭಾಗವಾಗುವ ಏಟ್ಸ್‌ನ ಕನಸು ಠಾಕೂರರ ಬಗೆಯದೇ.

ಕಾಳಿದಾಸನ ನಂತರ ಇಡೀ ಭಾರತದ ಸಾಹಿತ್ಯ ಪುರುಷರಾದ ಠಾಕೂರರು ಸಂಸ್ಕೃತ ಅಥವಾ ಇಂಗ್ಲಿಷ್‌ನಂತಹ ಕಾಸ್ಮೋಪಾಲಿಟನ್ (ಸಕಲ ಪ್ರಪಂಚದ) ವಿದ್ವತ್ ಭಾಷೆಯಲ್ಲಿ ಬರೆಯಲಿಲ್ಲ. ಅವರು ಬರೆದು ವಿಶ್ವಕವಿಯಾದದ್ದು ಕನ್ನಡದಂತೆಯೇ ಭೌಗೋಳಿಕವಾಗಿ ಮಿತಿಯುಳ್ಳ ಬಂಗಾಳಿಯಲ್ಲಿ. ಅತಿ ಪ್ರಾಚೀನವಾದ ತಮಿಳಿನಲ್ಲೂ ಬರೆಯದೇ ಸಂಖ್ಯಾಬಲವುಳ್ಳ ಹಿಂದಿಯಲ್ಲೂ ಬರೆಯದೇ ಒಂದು ಪ್ರಾಂತೀಯ ಭಾಷೆಯನ್ನು ಜಗತ್ತಿಗೆ ಮಾನ್ಯವಾದ ಭಾಷೆಯನ್ನಾಗಿ ಮಾಡಬಹುದೆಂದು ತೋರಿದ ಠಾಕೂರರು ಇಟಾಲಿಯನ್ನಿನಲ್ಲಿ ಬರೆದ ಡ್ಯಾಂಟೆ, ಇಂಗ್ಲಿಷಿನಲ್ಲಿ ಬರೆದ ಷೇಕ್ಸ್‌ಪಿಯರ್‌ನಂಥವರು. ಈ ಎರಡು ಭಾಷೆಗಳೂ ಕೂಡಾ ತಮ್ಮ ದೊಡ್ಡ ಲೇಖಕರನ್ನು ಪಡೆದ ಸಂದರ್ಭದಲ್ಲಿ ಕೇವಲ ಪ್ರಾಂತೀಯ ಭಾಷೆಗಳು.

ಭಾರತದ ಯಾವ ಭಾಷೆಯಾದರೂ ಠಾಕೂರರಂತಹ ಲೇಖಕನೊಬ್ಬನನ್ನು ಮತ್ತೆ ಪಡೆಯಬಲ್ಲದೇ ಎಂದು ನಾನು ಕೇಳಿಕೊಳ್ಳಲು ಇಚ್ಛಿಸುತ್ತೇನೆ. ಕೂಡಲೇ ನನ್ನ ತಪ್ಪನ್ನೂ ಅರಿಯುತ್ತೇನೆ. ಈಗಾಗಲೇ ನಮಗೆ ಗೊತ್ತಿಲ್ಲದಂತೆ ಅಂಥಹ ಲೇಖಕರು ಇರಬಹುದು. ಜಗತ್ತಿನ ಮಾರ್ಕೆಟಿನ ದೃಷ್ಟಿಯಿಂದ ಅರಿಯಬಹುದಾದ ಸಂಗತಿ ಇದಲ್ಲ.

ಅಕ್ಷರರನ್ನು ಓದುತ್ತಿದ್ದಾಗ ನನಗಾದ ಸಂತೋಷ ಕನ್ನಡದ ಉಪಭಾಷೆ ಎನ್ನಬಹುದಾದ ಹವ್ಯಕ ನುಡಿ ಕೂಡ ಕನ್ನಡದ ರಾಜಮಾರ್ಗ ಹೇಳಲಾಗದ್ದನ್ನು ಹೇಳಬಲ್ಲದು ಎಂಬ ಒಳನೋಟ. ಹೀಗೆ ಅಪ್ಪಟ ದೇಸಿಯಲ್ಲಿ ಬರೆದು ಪ್ರಸಿದ್ಧರಾದ ಚಂದ್ರಶೇಖರ ಕಂಬಾರರೂ ಇದ್ದಾರೆ. ದೇವನೂರ ಮಹಾದೇವರೂ ಇದ್ದಾರೆ.

ಇಡೀ ಭಾರತಕ್ಕೆ ಒಂದು ಭಾಷೆ ಇರಬೇಕೆನ್ನುವ ಹಂಬಲ ಸರ್ವನಾಶಿಯಾದ್ದು. ಎಲ್ಲರೂ ಒಪ್ಪುವ ಕನ್ನಡವೊಂದು ಇರಬೇಕೆಂಬುದು ಸರ್ವನಾಶಿಯಲ್ಲ. ಕನ್ನಡದ ಪ್ರಭುತ್ವಕ್ಕೆ ಅಗತ್ಯವಾದ್ದು. ಇದರ ನಡುವೆ ಕನ್ನಡದ ಬಹುತ್ವವನ್ನೂ ಕಾಯುವ ಕಾಯಕ ನಮ್ಮ ಲೇಖಕರದು. ಇಂಗ್ಲಿಷ್ ಭಾಷೆಯಲ್ಲಿ ಇದನ್ನು ಈ ಕಾಲದವರೆಗೂ ಹಾಪ್ಕಿನ್ಸ್, ಹೆಮ್ಮಿಂಗ್ವೆ, ವಿಲಿಯಂ ಫಾಕ್ನರ್ ಮಾಡಿದ್ದಾರೆ. ಆದರೆ ಬಿ.ಬಿ.ಸಿ. ಇಂಗ್ಲಿಷ್‌ನಲ್ಲಾಗಲೀ, ಸಿ.ಎನ್.ಎನ್. ಇಂಗ್ಲಿಷ್‌ನಲ್ಲಾಗಲೀ ಒಂದು ಸಣ್ಣ ಪದ್ಯವನ್ನಾದರೂ ಬರೆದವರಿಲ್ಲ ಎಂಬ ಅತಿಗೂ ನಾನು ಹೋಗಲು ತಯಾರಿದ್ದೇನೆ.

ಭಾಷೆಯ ಬೆನ್ನಟ್ಟಿ ಹೋಗುವಿಕೆಯ ಕುರಿತು ಮಾರ್ಗದ ಬಗ್ಗೆ ನಾವು ಗುರುತಿಸಲು ಹಿಂಜರಿಯುವ ಕೆಲವು ಮಾತುಗಳನ್ನಿಲ್ಲಿ ಹೇಳಲಿದ್ದೇನೆ. ಹಳೆಯ ಕವಿಗಳನ್ನು ಮನಃಪೂರ್ಣವಾಗಿ ಹೊಗಳುವಂತೆ ಕಾಣುವವನು ಕಾಳಿದಾಸ ಮಾತ್ರ ಎನ್ನಬಹುದೇನೋ. ಹೀಗೆ ಹೊಗಳುವುದೊಂದು ಪದ್ಧತಿಯಾಗಿಬಿಟ್ಟ ಕಾವ್ಯಸಭ್ಯತೆ. ‘ಮಣೌವಜ್ರ ಸಮುತ್ಕೀರ್ಣೇ ಸೂತ್ರಸ್ಯೇವಾಸ್ತಿ ಮೇಗತಿಃ’ ಪೂರ್ವಸೂರಿಗಳು ಸೃಷ್ಟಿಸಿದ ಮುತ್ತುಗಳ ತೂತಿನಲ್ಲಿ ನಾನೊಂದು ದಾರದೋಪಾದಿಯಲ್ಲಿ ಇದ್ದೇನೆ ಎಂದು ಕಾಳಿದಾಸ ಹೇಳಿಕೊಳ್ಳುತ್ತಾನೆ. ಆದರೆ ನಾವು ಸಾಮಾನ್ಯವಾಗಿ ಕಾಣುವುದು ಹೊಸ ಕಾವ್ಯ ಹುಟ್ಟುವಾಗ ನಡೆಯುವ ‘ಪಿತೃಹತ್ಯೆ.’

ಹಿಂದಣ ಕವಿಗಳೆನ್ನ ತೊತ್ತಿನ ಮಕ್ಕಳು
ಮುಂದಿನ ಕವಿಗಳೆನ್ನ ಕರುಣದ ಕಂದಗಳು
ಆಕಾಶದ ಕವಿಗಳೆನ್ನ ತೊಟ್ಟಿಲ ಕೂಸು
ಹರಿಬ್ರಹ್ಮರೆನ್ನ ಕಕ್ಷಕುಳ
ನೀ ಮಾವ ನಾನಳಿಯ ಗುಹೇಶ್ವರ (ಅಲ್ಲಮ)

ಅಲ್ಲಮನಿರಲಿ ನಮ್ಮ ಕಾಲದಲ್ಲೇ ಕಾವ್ಯಪಿತೃಗಳ ಆಜ್ಞೆಯನ್ನು ಮೀರಿ ಹೊಸಕಾವ್ಯಕ್ಕೆ ಅಣಿಯಾದವರೊಬ್ಬರ ಕಥೆಯನ್ನು ಹೇಳುತ್ತೇನೆ. ಇದನ್ನು ನಾನು ಓದಿದ್ದು ಗತಿಸಿದ ಹಿರಿಯರಾದ ಶ್ರೀ ಎಸ್. ಅನಂತನಾರಾಯಣ ಎನ್ನುವವರ ಒಂದು ಅನನ್ಯ ಕೃತಿಯಲ್ಲಿ.

ಕನ್ನಡದ ಆಧುನಿಕ ಪ್ರಥಮ ಶ್ರೇಷ್ಠ ಕವಿ ಮಂಜೇಶ್ವರ ಗೋವಿಂದ ಪೈ, ಅವರು ಬದುಕಿದ್ದು ಈಗಿನ ಕೇರಳದಲ್ಲಿರುವ ಕರ್ನಾಟಕದ ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ. ಆಂಗ್ಲ ಸಾಹಿತ್ಯದ ಪ್ರಭಾವಕ್ಕೆ ಬಿದ್ದ ಮೊದಲಿಗರಲ್ಲಿ ಪೈಗಳೂ ಒಬ್ಬರು. ಅವರಿಗಿಂತ ಮೊದಲು ಆಂಗ್ಲ ಸಾಹಿತ್ಯದ ಪ್ರಭಾವಕ್ಕೆ ಸಿಲುಕಿದವರು ಕನ್ನಡದಲ್ಲಿದ್ದರು. ಹೀಗೆ ಪ್ರಭಾವಕ್ಕೆ ಸಿಲುಕಿದವರೆಲ್ಲ ಇಂಗ್ಲಿಷ್ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸುವ ಪ್ರಯತ್ನ ಮಾಡಿದರು. ಈ ಭಾಷಾಂತರಗಳು ಓದುಗರ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ. ವೃತ್ತದ ಬಗೆಯಲ್ಲಿ ಧ್ವನಿಸುವುದೆಲ್ಲ ಪಂಪನ ಅನುಕರಣೆಯಂತೆ ಕಾಣತೊಡಗಿತಲ್ಲ. ಹಾಗೇ ಇದು ತನ್ನ ನಾಟಕಗಳಲ್ಲಿ ಎಲಿಯಟ್ ಭಿನ್ನ ಬಗೆಯ ಲಯವನ್ನೇ ಕಂಡುಕೊಳ್ಳಬೇಕಾಯಿತು. ಕುವೆಂಪು ಕೂಡ ಭಿನ್ನ ಲಯವನ್ನು ಹಿಡಿಯಬೇಕಾಯಿತು, ಅದನ್ನವರು ‘ಮಹಾಛಂದಸ್ಸು’ ಎನ್ನುತ್ತಾರೆ.

ಯಾಕೆ? ಕನ್ನಡದ ಬೆನ್ನಿಗೆ ‘ಹೊರೆ’ಯಿದೆ. ಅದಕ್ಕೆ ಪರಂಪರೆಯ ಹೊರೆಯಿದೆ; ಅದು ಭಾರದ ಹೊರೆ. ಅಲ್ಲಿ ವೃತ್ತವಿದೆ, ಕಂದವಿದೆ, ಸಂಸ್ಕೃತದ ಛಂದಸ್ಸಿದೆ. ತಮಿಳಿಗೂ ಇಂತಹದ್ದೇ ದೊಡ್ಡ ‘ಹೊರೆ’ಯ ಇತಿಹಾಸವಿದೆ; ಇದು ಎರಡು ಸಾವಿರ ವರ್ಷಗಳ ಅಥವಾ ಅದಕ್ಕೂ ಹಿಂದಿನ ‘ಹೊರೆ’. ಈ ಸ್ವಂತ ಭಾಷೆಯ ‘ಹೊರೆ’ಯು ಸಂಸ್ಕೃತದ ‘ಹೊರೆ’ಯನ್ನೂ ಹೊರಬೇಕಾಗಿ ಬರುತ್ತಿತ್ತು. ಆದರೆ ಪಂಪನಂಥವನು ಪಿತೃಹತ್ಯೆಗೈದು ದೇಸಿಯ ಆಶ್ರಯದಲ್ಲಿ ಮಾರ್ಗವನ್ನು ಜೀರ್ಣಿಸಿಕೊಳ್ಳುತ್ತಾನೆ. ಯಾವ ಕವಿಯಾಗಲೀ ತನ್ನ ಒಳಗಿನ ಪಿಸುಮಾತನ್ನು ಕೇಳಬೇಕಾದರೆ ಆ ಕ್ಲಾಸಿಕಲ್ ಹೊರೆಯಿಂದ ಕಳಚಿಕೊಳ್ಳಬೇಕಾದ್ದು ಬಹುಮುಖ್ಯ.

ನಾನು ಹೇಳಲು ಹೊರಟಿದ್ದ ಎಸ್. ಅನಂತನಾರಾಯಣರು ಹೇಳುವ ಕಥೆ ಇದು. ಒಂದು ದಿನ ಮಂಜೇಶ್ವರ ಗೋವಿಂದ ಪೈಗಳು ತಮ್ಮ ಮನೆಯ ದೊಡ್ಡ ಕಾಂಪೌಂಡ್‌ನಲ್ಲಿ ಶತಪಥ ತಿರುಗುತ್ತಿದ್ದರು. ಹಾಗವರು ತಿರುಗುತ್ತಿದ್ದಾಗ ಅವರ ಮನಸ್ಸನ್ನೆಲ್ಲ ಒಂದು ವಿಚಾರ ತುಂಬಿಬಿಟ್ಟಿತ್ತು. ಅದು ಆದಿಪ್ರಾಸ ಮತ್ತು ಅಂತ್ಯಪ್ರಾಸದ ಬಳಕೆಯನ್ನು ಬಿಟ್ಟುಬಿಡಲೆ ಎಂಬ ಸಂಕಟವಾಗಿತ್ತು. ಈ ಸಂಕಟದಲ್ಲಿ ಅವರು ಆದಿಪ್ರಾಸ ಮತ್ತು ಅಂತ್ಯಪ್ರಾಸವನ್ನು ಬಿಟ್ಟುಬಿಡುತ್ತೇನೆಂದು ನಿರ್ಧರಿಸಿದರು. ಹೀಗೆ ನಿರ್ಧಾರ ಮಾಡಿ ಇದನ್ನು ತಿಳಿಸಿ ತಮ್ಮ ಒಬ್ಬ ಆಪ್ತಮಿತ್ರನಿಗೆ ಕಾಗದ ಬರೆದರು. ಆ ಮಿತ್ರರು ಇವರಿಗೆ ವಾಪಸ್ಸು ಪತ್ರ ಬರೆದು ‘ನಿನಗೇನು ನಾಚಿಕೆ ಇಲ್ಲವೆ? ಹಾಗೆ ಮಾಡುವುದು ಆತ್ಮಹತ್ಯೆ ಮಾಡಿಕೊಂಡಂತೆ, ಇದೇನು ಮಾಡಿಬಿಟ್ಟೆ?’ ಎಂದು ಕೇಳಿದರಂತೆ.

ಆಧುನಿಕ ಕನ್ನಡ ಸಾಹಿತ್ಯ ಈ ಪಿತೃಹತ್ಯೆಯಿಂದ ಆರಂಭವಾಯಿತು. ಮತ್ತೂ ಮುಂದುವರೆದು ಬಿ.ಎಂ. ಶ್ರೀಕಂಠಯ್ಯನವರಿಂದ ಮುಕ್ತವಾಯಿತು. ಇದು ಅವರಲ್ಲಿ ಹೊಸಬಗೆಯ ಕನ್ನಡಪ್ರೇಮವನ್ನು ಹುಟ್ಟಿಸಿದ ಇಂಗ್ಲೀಷ್ ಪ್ರೇಮ. ಆದರೆ ಶ್ರೀಕಂಠಯ್ಯನವರೂ ತಮ್ಮ ನಾಟಕಗಳನ್ನು ಬರೆಯುವಾಗ, ಹಳಗನ್ನಡದ ಆಶ್ರಯವನ್ನು (ನಡುಗನ್ನಡದಾಶ್ರಯವನ್ನೋ?) ಪಡೆಯಬೇಕಾಯಿತು. ಆದರೆ ನಮ್ಮಂತವರ ಪಾಲಿಗೆ ಕನ್ನಡ ಬಿಡುಗಡೆಯಾದ್ದು ‘ಹಿಡಿದು ಮಂಜು ಬೀಳುತ್ತಿತ್ತು, ಚುಕ್ಕೆ ಕಣ್ಣು ಮಿಟುಕುತ್ತಿತ್ತು’ ಎಂಬ ಅವರ ಸಾಲುಗಳು. ಇವು ನಮ್ಮ ಕಿವಿಗಳಿಗೆ ಅದ್ಭುತವಾಗಿ ಕೇಳುತ್ತವೆ. ‘ಹಿಡಿದು’ ಪದವನ್ನು ಹಿಡಿದು ಸ್ವಲ್ಪ ಕಾಲ ಆಲೋಚಿಸಿ ನಿಮಗದು ಅರಿವಾಗುತ್ತದೆ. ಬಂಗಾಳಿ ಭಾಷೆಗೆ ಅಂತಹ ಎದೆಗುಂದಿಸುವ ‘ಹೊರೆ’ ಇದೆಯೆಂದು ನನಗನ್ನಿಸುವುದಿಲ್ಲ. ಠಾಕೂರರಂಥ ಒಬ್ಬ ಲೇಖಕನಿಗೆ ಇದು ಅನುಕೂಲಕರ. ಅವರಿಗೆ ಇದ್ದುದು ಬಂಗಾಳಿ ಜಾನಪದ ಮತ್ತು ಇಂಗ್ಲಿಷ್ ಕಾವ್ಯ.

ಇದನ್ನು ನಾನು ಉತ್ಸಾಹದಲ್ಲಿ ಹೊಗಳಿ ಮಾತಾಡುವಂತೆ ಕಂಡರೂ ನನಗೊಂದು ಅಳುಕಿದೆ. ಕನ್ನಡಕ್ಕಿರುವಂತಹ ಪಂಪ, ಕುಮಾರವ್ಯಾಸ, ಜನ್ನ-ರನ್ನರ ಇತಿಹಾಸವಿಲ್ಲದಿದ್ದರೆ ಅದೊಂದು ಒಣಕಲಾದ ಬೇರುಗಳಿಲ್ಲದ ಸ್ಥಿತಿಯೂ ಅಲ್ಲದೇ ಎಂಬುದು. ಈ ಅಳುಕಿನಲ್ಲೇ ಕನ್ನಡ ತನ್ನ ಮಹತ್ವವನ್ನು ಸಾಧಿಸುತ್ತದೆ. ಆದರೆ ಅಳುಕೇ ಇಲ್ಲದಿದ್ದಾಗ ಓದಲಾರದ್ದನ್ನು ಕವಿಗಳು ಬರೆಯುತ್ತಾರೆ. ಅದು ಬಿಗಿಯೂ ಇಲ್ಲದ ಅರ್ಥಪೂರ್ಣ ಸಡಿಲವೂ ಅಲ್ಲದ ಭಾಷಾಪ್ರಯೋಗ. ಯಾವ ಅರ್ಥಕ್ಕೆ ಯಾವ ಮಾತಾದರೂ ಆಗಬಹುದು ಎನ್ನುವ ಸ್ಥಿತಿ. ಲಂಕೇಶರ ಬಿಚ್ಚು ಕವನಸಂಕಲನ ಬಂದಾಗ ಸಡಿಲವಾದ ಬಂಧಕ್ಕೆ ಪರಮವಿರೋಧಿಯಾಗಿದ್ದ ಅಡಿಗರೂ ಸಹ ಎಲ್ಲ ಕಾಲಕ್ಕೂ ಕಟ್ಟುವುದೂ ಇದೆ, ಬಿಚ್ಚುವುದೂ ಇದೆ; ಇಂಗ್ಲಿಷನ್ನು ಹೀಗೆ ಬಿಚ್ಚಿದವನು ವ್ಹಿಟ್ಮನ್ ಎಂದಿದ್ದರು. ಲಂಕೇಶ್ ಬಿಚ್ಚಿದ್ದನ್ನು ಇನ್ನಷ್ಟು ಬಿಚ್ಚಿ ಕಾವ್ಯದ ಬಗ್ಗೆಯೇ ಹೊಸ ರೀತಿಯಲ್ಲಿ ಆಲೋಚನೆ ಮಾಡುವಂತೆ ಮಾಡಿದವರು ಎ.ಕೆ. ರಾಮಾನುಜನ್. ನಾವು ಬಹುವಾಗಿ ಆಸೆಪಡುವ ಆದರೆ ಮಾಡಲು ಅಂಜುವ ಪಿತೃಹತ್ಯೆ ಹೊಕ್ಕುಳಲ್ಲಿ ಹೂವಿಲ್ಲದ ಈ ರಾಮಾನುಜನ್ನರಿಂದ ಸಾಧ್ಯವಾಯಿತು.

*

ಹಲವು ಭಾರತೀಯ ಭಾಷೆಗಳಿಗೆ ಇಂತಹ ಹೊರೆಯಿಲ್ಲ. ತುಳಸಿದಾಸ, ಕಬೀರ, ತುಕಾರಾಮ, ಜ್ಞಾನದೇವರಿಗೆ ಕ್ಲಾಸಿಕಲ್ ‘ಹೊರೆ’ಯಿಲ್ಲ. ದೇಸಿಯ ಜಾನಪದ ಮತ್ತು ಸಂಸ್ಕೃತ-ಎರಡೇ ಇರುವುದು ಅವರಿಗೆ. ಆದ್ದರಿಂದ ಆಧುನಿಕ ಸಂವೇದನೆಗಳಿಗೆ ತೆರೆದುಕೊಳ್ಳುವುದು ಇವರಿಗೆ ಸುಲಭವಾಯಿತು. ಭಕ್ತಿಮಾರ್ಗದ ಸಾಮುದಾಯಿಕತೆ ಇದನ್ನು ಇನ್ನಷ್ಟು ಸುಲಭ ಮಾಡಿತು. ಎಂಟುನೂರು ವರ್ಷದ ಹಿಂದೆ ನಮ್ಮ ವಚನಕಾರರು ಮಾಡಿದ್ದೂ ಇದನ್ನೇ. ನಮಗೆ ಈಗಲೂ ಗೊತ್ತಾಗುವ ಭಾಷೆಯಲ್ಲೇ ಅವರು ಬರೆದಿದ್ದಾರೆ. ಒಮ್ಮೊಮ್ಮೆ ಅನುಮಾನವಾಗುತ್ತದೆ, ಯಾವ ಕಾಲದಲ್ಲಾದರೂ ಪಂಪ ಬಳಸುವ ಹಳಗನ್ನಡ ಎಂಬುದಿತ್ತೇ ಅಥವಾ ಸಂಸ್ಕೃತದ ಅತ್ಯಂತ ಸುಂದರವಾದ ಬಂಧಗಳಿಗೆ ಕನ್ನಡವನ್ನು ಒಗ್ಗಿಸಿಕೊಳ್ಳುವ ತಂತ್ರ ಅದಾಗಿತ್ತೆ? ವಚನಕಾರರ ಕಾಲದಲ್ಲೂ ಕಾವ್ಯ ಬರೆಯುವುದೇ ತನ್ನ ಕರ್ತವ್ಯವೆಂದು ತಿಳಿದವರು ವೃತ್ತಗಳನ್ನೂ ಬಳಸಬಹುದಿತ್ತು. ಇವತ್ತಿಗೂ ಒಂದು ಸುಂದರವಾದ ಸಾಲನ್ನು ಬರೆಯಬೇಕೆಂಬ ಅಪೇಕ್ಷೆ ‘ದೇವಾಲಯವೀ ಹೂವಿನ ತೋಟಂ’ ಎನ್ನುವ ಸಾಲು ನಮಗೆ ಹಿತವಾಗುವಂತೆ ಮಾಡುತ್ತದೆ. ಮಹಾತುಂಟ ಸ್ವಭಾವದ ವೈ.ಎನ್.ಕೆ. ಈ ‘ಅಂ’ಗಳ ಬಗ್ಗೆ ಹಲವು ಜೋಕುಗಳನ್ನು ಮಾಡುತ್ತಿದ್ದರು.

ಆಲ್ಬರ್ಟ್ ಕಾಮು ಅಥವಾ ಯೇಟ್ಸ್ ಅಥವಾ ಎಲಿಯಟ್ ಅಥವಾ ಆಡೆನ್‌ನನ್ನು ಈ ವೃತ್ತದ ಮಾದರಿಯೊಳಗಿಟ್ಟು ನೋಡಿದರೆ ಅವರು ಪ್ರಾಚೀನ ಕವಿಯಂತೆ ಕಾಣುತ್ತಾರೆಯೇ ಹೊರತು ಆಧುನಿಕ ಕವಿಗಳಂತೆ ಕಾಣುವುದಿಲ್ಲ. ಹಾಗಾಗಿ ಕಾವ್ಯದಲ್ಲಿ ಏನಾದರೂ ಹೊಸತು ಆಗಬೇಕಾದರೆ ನಿತ್ಯದ ಮಾತಿನ ಪದಗಳು ಒದಗುತ್ತ ಹೋಗುವ ಅಚ್ಚರಿಯಲ್ಲಿ ವಿಶೇಷವಾದ ಅರ್ಥಗಳು ಕಾವ್ಯದಲ್ಲಿ ಮೂಡುವಂತಿರಬೇಕು. ನಮಗೆಷ್ಟು ತೊಡಕೋ ಅಷ್ಟೇ ಪುಣ್ಯವೂ ಆಗಿ ಲಭಿಸಿರುವ ಪಂಪ-ರನ್ನರಂಥವರ ಕಾವ್ಯಸೂರಿಗಳಿಂದಾಗಿ ಈ ಸಾಮಾನ್ಯರಲ್ಲಿ ಅಸಾಮಾನ್ಯರದೊಂದು ಶಬ್ದ ಥಟ್ಟನೆ ನಮಗೆ ಖುಷಿ ಕೊಡಬಲ್ಲದು. ಇಂಗ್ಲಿಷಿನಲ್ಲಿ ಷೇಕ್ಸ್‌ಪಿಯರ್ ಬರೆಯುವ ‘the multitudinous seas incamadine/Making the green one red’ ಮೊದಲ ಸಾಲಿನ ಹಲವು ದೀರ್ಘಾಕ್ಷರಗಳ ಲ್ಯಾಟಿನ್ ಸಾಲಿನ ನಂತರ ಬರುವ ಸಣ್ಣಸಣ್ಣ ಆಂಗ್ಲೋ-ಸಾಕ್ಸನ್ ಪದಗಳು ಇಡೀ ಮಾತನ್ನು ಮರೆಯದಂತೆ ಶಬ್ದಸಂಗೀತವಾಗಿ ಮಾಡುತ್ತವೆ. ನಮ್ಮೆಲ್ಲರ ಭಾಷೆಗಳ ಗದ್ಯ ಕ್ಲಾಸಿಕಲ್‌ನ ಹೊರೆಯನ್ನು ಕಳೆದುಕೊಳ್ಳುವಷ್ಟು ಸುಲಭವಾಗಿ ನಮ್ಮ ಕಾವ್ಯ ಕಳೆದುಕೊಳ್ಳಲಾರದು. ಈ ಸಾತತ್ಯದಿಂದಾಗಿ ನಮ್ಮ ಮನಸ್ಸು ನಮ್ಮ ಭಾಷೆಯ ಗಣಿಯಾಗಿ ಉಳಿದಿರುತ್ತದೆ. ಎಲ್ಲ ಪಿತೃಹತ್ಯೆಯ ನಡುವೆಯೂ ಪಂಪನಿಂದ ಈತನಕದ ಒಬ್ಬ ಕವಿ ಪರಸ್ಪರ ಜೇಬಿನಲ್ಲಿ ಕೈಹಾಕಿಕೊಂಡವರಂತೆ ನಮ್ಮೆದುರು ನಿಲ್ಲುತ್ತಾರೆ.

ಅಪ್ರಯತ್ನವಾಗಿ ಆಧುನಿಕವಾಗಬಲ್ಲ ಠಾಕೂರರ ಪುಣ್ಯವನ್ನು ನೋಡಿ. ಅವರ ಹಿಂದಿದ್ದವನು ಅಷ್ಟು ಹಳಬನಲ್ಲದ ಬಿಹಾರಿಲಾಲ್ ಎಂಬ ಕವಿ ಮಾತ್ರ. ಯಥೇಚ್ಛವಾಗಿ ಇದ್ದದ್ದು ಜಾನಪದ ಕಾವ್ಯ. ಜೊತೆಗೇ ಪ್ರಾಯಶಃ ರವೀಂದ್ರರು ಓದದ ಆದರೆ ಈಗ ಅದ್ಭುತವೆನ್ನಿಸುವ ಭಗವತ್‌ಸ್ಫೂರ್ತಿಯ ಪರಮಹಂಸರ ಬೀದಿಯಲ್ಲಿ ಮಾತಾಡುವ ಕಚ್ಚಾಭಾಷೆ.

ಕನ್ನಡದಲ್ಲಿ ಪಂಪನಿಂದ ಹಿಡಿದು ಈತನಕದ ಭಾಷೆಗೂ ಹಾಗೆಯೇ ಇಂಗ್ಲಿಷ್‌ಗೂ ತಾನು ಋಣಿ ಎಂಬಂತೆ ಹಲವು ರೀತಿಯ ಪ್ರಯೋಗಗಳನ್ನು ಮಾಡಿದವರು ಕುವೆಂಪುರವರು. ದೇಸಿಯನ್ನು ಅವಲಂಬಿಸಿದವರು ಬೇಂದ್ರೆಯವರು. ಆದರೆ ಅಡಿಗರು ಹೇಳುವುದಿತ್ತು. ‘ಬೇಂದ್ರೆಯವರ ಅದ್ಭುತವಾದ ಸಾನೆಟ್ಟುಗಳನ್ನು ನೋಡಿ. ಅದು ಆಧುನಿಕ ಕನ್ನಡದಲ್ಲಿ ಇಲ್ಲವೇ?’

ಠಾಕೂರರಿಗೆ ಸಂಬಂಧಪಟ್ಟಂತೆ ಮತ್ತೊಂದು ವಿಷಯವಿದೆ. ಇಂಗ್ಲೆಂಡಿನ ಹತ್ತೊಂಬತ್ತನೆಯ ಶತಮಾನದ ರೊಮ್ಯಾಂಟಿಕ್ ಕಾವ್ಯ ಠಾಕೂರರಲ್ಲಿ ಮುಂದುವರೆಯಿತು. ಆದರೆ ಇಂಗ್ಲೆಂಡಿನಲ್ಲಿ ಅದು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಜನಪ್ರಿಯವಾಗದೆ ಹೋಯ್ತು. ರೊಮ್ಯಾಂಟಿಕ್ ಕವಿಗಳ ಮುಖ್ಯಪಟ್ಟಿಯಲ್ಲಿ ಒಬ್ಬನಾದ ಷೆಲ್ಲಿ ಒಬ್ಬ ಪರಮ ಅದ್ವೈತಿ. ‘Life like a dome of many colored glass/Stains the white radiance of eternity.’ ಇಲ್ಲಿ ಬರುವ Stains ಅನ್ನುವ ಶಬ್ದ ಅನಂತ ಕಾಲದ ಶುಭ್ರ ಬೆಳಕನ್ನು ಅದರ ಪ್ರಖರತೆಯಿಂದ ವಂಚಿಸುವುದೂ ಹೌದು. ಸುಂದರಗೊಳಿಸುವುದೂ ಹೌದು. ಮಾಯೆ ಎಂದರೆ ಇದೇ ಅಲ್ಲವೇ? ಇದೇ ಅರ್ಥ ಬರುವಂತೆ ಈಶಾವಾಸ್ಯೋಪನಿಷತ್ತಿನಲ್ಲಿ ಈ ಮಾತುಗಳಿವೆ:

‘ಹಿರಣ್ಮಯೇನ ಪಾತ್ರೇಣ
ಸತ್ಯಸ್ಯಾಪಿಹಿತಂ ಮುಖಂ
ತತ್ತ್ವಂ ಪೂಷನ್ನಪಾವೃಣು
ಸತ್ಯಧರ್ಮಾಯ ದೃಷ್ಟಯೇ’

ಅರ್ಥಾತ್, ಓ ಸೂರ್ಯನೇ, ಬಂಗಾರದ ಮುಚ್ಚಳದಿಂದ ಸತ್ಯದ ಮುಖವು ಮುಚ್ಚಲ್ಪಟ್ಟಿದೆ, ನೀನು ಅದನ್ನು ತೆರೆದು ತೋರಿಸು-ಸತ್ಯಧರ್ಮವನ್ನು ಕಾಣಲಿಕ್ಕಾಗಿ. ಆಶ್ಚರ್ಯವೆಂದರೆ ಶೆಲ್ಲಿ ಇದನ್ನು ಓದಿರಲು ಸಾಧ್ಯವಿಲ್ಲ. ಠಾಕೂರರಂಥವರಿಗೆ ಅವರು ಉಪನಿಷತ್ತನ್ನು ನಂಬುವ ಬ್ರಹ್ಮಸಮಾಜಿಯಾದ್ದರಿಂದ ಷೆಲ್ಲಿ ಅವರಿಗೆ ಬಹಳ ಪ್ರಿಯಕವಿಯಾಗಿರಬೇಕು. ಮುಗ್ಗರಿಸಿಬಿಟ್ಟೇನೆಂಬ ಆತುರದಲ್ಲಿ ತುದಿಗಾಲಲ್ಲಿ ಓಡುವ ಷೆಲ್ಲಿ ವ್ಯವಹಾರಸ್ಥ ಆಂಗ್ಲೋ-ಸ್ಯಾಕ್ಸನ್ನರಿಗೆ ಒಬ್ಬ ತೆಳುವಾದ ಮಾತಿನ ಕನಸುಗಾರ. ಭಾರತೀಯರಾದ ಠಾಕೂರರಿಗೆ ಅಲ್ಲ. ವರ್ಡ್ಸ್‌ವರ್ತ್ ಕೂಡಾ ಕ್ರಮೇಣ ಮತೀಯವಾದ ಕ್ರಿಶ್ಚಿಯನ್‌ ಆಗುತ್ತ ಹೋದಂತೆ ಪ್ರಕೃತಿಯನ್ನು ತಾಯಿ ಎಂದು ಕರೆಯುವುದಿಲ್ಲ. ಫಾಸ್ಟರ್ ಮದರ್ ಎನ್ನುತ್ತಾನೆ. ಆದರೆ ಈ ಕಾಲದ ಕಮೂ, ಕಾಫ್ಕಾ, ಸಾರ್ತ್ರ್‌ನಂಥವರು ಮಾತ್ರ ಕ್ರೈಸ್ತ ಮತದ ಆಶಾದಾಯಕವಾದ ಔದಾರ್ಯವನ್ನು ಪ್ರಶ್ನಿಸುತ್ತಾರೆ. ಅವರ ಹಿಂದೆ ಜರ್ಮನ್ನರು ನಡೆಸಿದ ಹಾಲೋಕಾಸ್ಟ್ ಇದೆ.

ಷೆಲ್ಲಿ ತನ್ನ ಸಂಸ್ಕೃತಿಗೆ ವಿರೋಧಿಯಾಗಿ ಕಾವ್ಯ ರಚಿಸುವಾಗ ಅವನು ಹೆಚ್ಚು ಲ್ಯಾಟಿನ್ ಪದಗಳನ್ನು ಬಳಸಬೇಕಾಯಿತು. ಸ್ಕೈಲಾರ್ಕ್ ಬಗ್ಗೆ ಬರೆಯುತ್ತ ಅವನು:

Bird thou never wert-
That from heaven or near it
Pourest thy full heart
In profuse strains of unpremeditated art.

ಇದು ಇಂಗ್ಲಿಷ್ ಕವಿಗೆ ಕೃತಕವೇ. ಮಿಲ್ಟನ್ನನಿಗೆ ಜೀವವಾದದ್ದು ನನ್ನ ಪಾಲಿಗೆ ಸಾವು ಎಂದು ತಿಳಿದಿದ್ದ ಹೆಚ್ಚು ದೇಸೀ ಪ್ರತಿಭೆಯ ಕೀಟ್ಸ್ ಈ ಹಕ್ಕಿಹಾಡನ್ನೇ ‘in full throated ease’ (ತುಂಬು ಗಂಟಲಿನ ಸಲಿಲ)ದಲ್ಲಿ ಹಾಡುತ್ತದೆ ಎನ್ನುತ್ತಾರೆ. ಠಾಕೂರರು ಭಾರತೀಯರಾದ್ದರಿಂದ ವರ್ಡ್ಸ್‌ವರ್ತ್‌ನಂತೆ ಪ್ರಕೃತಿ ಕೇವಲ ಕಲ್ಯಾಣಕಾರಿ ಎಂದು ಹೇಳುವ ಅನಿವಾರ್ಯ ಅವರಿಗಿರಲಿಲ್ಲ. ನಮ್ಮಲ್ಲಿ ಹುಟ್ಟಿಸುವ ಬ್ರಹ್ಮ, ಕಾಪಾಡುವ ವಿಷ್ಣು ಇರುವಂತೆಯೇ ಸರ್ವನಾಶ ಮಾಡಬಲ್ಲ ರುದ್ರನೂ ಇದ್ದಾನೆ. ಠಾಕೂರರದೊಂದು ‘ಟು ದ ಓಶನ್’ ಎನ್ನುವ ಶ್ರೇಷ್ಠ ಪದ್ಯವಿದೆ. ಇಲ್ಲಿ ರುದ್ರನ ಮುಖವನ್ನು ಅವರು ದೈವಿಕವೆನ್ನಿಸುವಂತೆಯೇ ಮಾನವ ಸಂಕಟವನ್ನು ಬಿಟ್ಟುಕೊಡದಂತೆ ಚಿತ್ರಿಸುತ್ತಾರೆ.

*

ಈಗ ನಾನು ಎರಡು ಪದ್ಯಗಳಿಗೆ ಬರುತ್ತೇನೆ. ನಾನು ಚರ್ಚಿಸಲಿರುವ ಪದ್ಯಗಳಲ್ಲಿ ಮೊದಲನೆಯದ್ದು ಹುಟ್ಟಿದ್ದು ೧೯೨೪ರಲ್ಲಿ. ಇಂಗ್ಲಿಷ್‌ನಲ್ಲಿ. ಅದನ್ನು ಬರೆದವರು ಕನ್ನಡದ ಶ್ರೀ ಕೆ.ವಿ. ಪುಟ್ಟಪ್ಪ (ಕುವೆಂಪು). ಕುವೆಂಪುರವರು ಏಕಕಾಲದಲ್ಲಿ ಸಂಸ್ಕೃತಕ್ಕೂ, ಕನ್ನಡದ ಕ್ಲಾಸಿಕಲ್ ಕಾವ್ಯಕ್ಕೂ, ಅವರ ಕಾಲ ಐರೋಪ್ಯ ಕಾವ್ಯಕ್ಕೂ ಸಂದಂತಹ ಸಂವೇದನೆ ಉಳ್ಳವರಾದ್ದರಿಂದ ಠಾಕೂರರನ್ನು ಒಪ್ಪಿಕೊಳ್ಳುವಲ್ಲಿ ಅವರಿಗೊಂದು ಸಮಸ್ಯೆ ಇದೆ. ಠಾಕೂರರಿಗೆ ಪಿತೃಹತ್ಯೆಯಿಂದಲೇ ಆಧುನಿಕವಾಗಬೇಕಾದ ಭಾಷಾಸಮಸ್ಯೆ ಇರಲಿಲ್ಲ. ಆದರೆ ಕುವೆಂಪು ಯಾವುದನ್ನೂ ಬಿಟ್ಟುಕೊಡದೇ ಮೀರುವ ಮನಸ್ಸಿನ ಕವಿಯಾದ್ದರಿಂದ ಪಿತೃಹತ್ಯೆಯನ್ನೂ ಮಾಡದೇ ಕಣ್ಣುಮುಚ್ಚಿ ಅವರನ್ನು ಆರಾಧಿಸದೇ ಇರುವವರಾದ್ದರಿಂದ ಠಾಕೂರರನ್ನು ಅವರ ಮೆಚ್ಚಿಕೆಯಲ್ಲೇ ವಿಮರ್ಶಿಸುತ್ತಾರೆ. ಕುವೆಂಪು ಪಾಲಿಗೆ ಠಾಕೂರರು ‘ಶ್ರೇಷ್ಠಕವಿ’ಯೇ ಹೊರತು ‘ಮಹಾಕವಿ’ಯಲ್ಲ. ಅದಕ್ಕೆ ಅವರು ಕೊಡುವ ಕಾರಣ ಠಾಕೂರರು ಒಪ್ಪಿಕೊಂಡ ಬ್ರಹ್ಮಸಮಾಜದ ದಾಕ್ಷಿಣ್ಯಗಳು. ಮೂರ್ತಿಪೂಜೆಯನ್ನಾಗಲೀ, ಶಾಸ್ತ್ರೀಯ ನಡವಳಿಕೆಗಳನ್ನಾಗಲೀ ಒಪ್ಪಿಕೊಳ್ಳದಂತೆ ಆಂಗ್ಲ ಸಂಸ್ಕೃತಿಯ ಸುಧಾರಣೆಗೆ ತೆರೆದುಕೊಂಡ ಬ್ರಹ್ಮಸಮಾಜದ ಹಿಂಜರಿಕೆಯಿಂದಾಗಿ ಠಾಕೂರರು ಪುರಾಣಗಳನ್ನು ಬಳಸಿ ‘ಮಹಾಕವಿ’ಯಾಗಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ.

ಇಲ್ಲೊಂದು ಬಹಳ ವಿಶೇಷವಾದ ವೈರುಧ್ಯವಿದೆ. ಠಾಕೂರರು ಕುವೆಂಪುರವರಷ್ಟೇ ವಿಚಾರವಾದಿಯಾಗಿದ್ದರು. ಆದರೆ ತಮ್ಮ ಸಮಕಾಲೀನರಾಗಿದ್ದ ಯಾವ ಪಂಡಿತನೂ ಕಾಣಲಾರದ ಸತ್ಯಗಳನ್ನು ಕಂಡಿದ್ದ ರಾಮಕೃಷ್ಣ ಪರಮಹಂಸರನ್ನು ಭೇಟಿ ಮಾಡಲಿಲ್ಲವೆಂದು ಕೇಳಿದ್ದೇನೆ. ಪರಮಹಂಸರು ತಮ್ಮ ಜೀವನಕ್ಕಾಗಿಯೇ ಕಾಳಿಯ ದೇವಸ್ಥಾನದಲ್ಲಿ ಉಪಾಸಕರಾಗಿದ್ದರು. ಠಾಕೂರರು ಕಾಳಿಯ ಆರಾಧನೆಗೆ ಪರಮವಿರೋಧಿಗಳಾಗಿದ್ದವರು. ಹೀಗಾಗಿ ಎಲ್ಲ ವಿಚಾರವಾದವನ್ನೂ ಗೇಲಿ ಮಾಡುತ್ತಿದ್ದ, ದೈವಭಕ್ತಿಯಲ್ಲಿ ಸಮಾಧಿಸ್ಥಿತಿಯನ್ನು ತಲುಪಿ ಎಚ್ಚರವೇ ಇಲ್ಲದೇ ಇರುತ್ತಿದ್ದ, ಕಾಳಿಯ ಪೂಜಕರಾಗಿದ್ದ ಪರಮಹಂಸರು ಎಷ್ಟೇ ಪ್ರಸಿದ್ಧರಾದರೂ ಠಾಕೂರರು ಅವರನ್ನು ಭೇಟಿಯಾಗಲಿಲ್ಲ. ಇದನ್ನೊಂದು ನ್ಯೂನ್ಯತೆ ಎಂಬಂತೆ ನನ್ನ ಗೆಳೆಯರಾಗಿದ್ದ ರಮಣರ ಭಕ್ತರೂ ಆಗಿದ್ದ ಶ್ರೀ ರಾಮಚಂದ್ರ ಗಾಂಧಿ ಹೇಳುತ್ತಿದ್ದರು. ನಾವು ಮುಖ್ಯವಾಗಿ ಗಮನಿಸಬೇಕಾದ್ದೇನೆಂದರೆ ಕುವೆಂಪು ಅವರಿಗೆ ತಮ್ಮ ಎಲ್ಲಾ ವೈಚಾರಿಕತೆಯೊಂದಿಗೆ ಪರಮಹಂಸರು ‘ಅವತಾರಪುರುಷ’ರಾಗಿದ್ದರು, ಇದಕ್ಕೆ ವಿರುದ್ಧವಾಗಿ ಠಾಕೂರರು ಕಾಳಿ ಉಪಾಸನೆಯ ಕಾರಣದಿಂದಲೇ ಪರಮಹಂಸರಿಂದ ದೂರ ಉಳಿದಂತೆ ಕಾಣುತ್ತದೆ. ಆದರೆ ಕಂದಾಚಾರದ ವಿಷಯದಲ್ಲಿ ಠಾಕೂರರಂತೆಯೇ ವಿಚಾರವಾದಿಗಳಾಗಿದ್ದ ಕುವೆಂಪುರವರು ಮಾತ್ರ ಕಾಳೀಭಕ್ತರಾದ ಪರಮಹಂಸರನ್ನು ದೇವರವತಾರವೆಂದೇ ನಂಬಿದ್ದರು. ಇದನ್ನು ಕುವೆಂಪುರವರ ಪ್ರಗತಿಶೀಲ ಕುರುಡು ಅಭಿಮಾನಿಗಳು ಅರಿಯಬೇಕು.

ಹಳ್ಳಿಯ ಹಿನ್ನೆಲೆಯಿಂದ ಬಂದ, ಕನ್ನಡವನ್ನು ಮಾತ್ರ ಮಾತನಾಡುವ, ಒಕ್ಕಲಿಗ ಜಾತಿಯ ನಮ್ಮ ಶ್ರೇಷ್ಠ ಕನ್ನಡ ಕವಿ ತಾನು ಟೀಕಿಸುವ ಠಾಕೂರರ ಬಗ್ಗೆ, ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ, ಇಂಗ್ಲಿಷ್‌ನಲ್ಲಿ ಯಾಕೊಂದು ಪದ್ಯವನ್ನು ಬರೆದರು? (ಅವರ ಪದ್ಯದ ಇಂಗ್ಲಿಷ್‌ನ ಗುಣಮಟ್ಟ ಸಾಧಾರಣ ಇಂಗ್ಲಿಷ್ ಮಾತನಾಡುವ ಇಂಗ್ಲೆಂಡ್‌ನ ಬುದ್ಧಿವಂತ ತರುಣನಿಗಿಂತ ಎಷ್ಟೋ ಉತ್ತಮವಾದ್ದು ಎಂದು ನನ್ನ ಅಭಿಪ್ರಾಯ). ಆ ಕಾಲದ ಬಹುಪಾಲು ಕನ್ನಡ ಕವಿಗಳು (ಬೇಂದ್ರೆ ಕೂಡ) ಇಂಗ್ಲಿಷ್‌ನಲ್ಲಿ ಬರೆಯಲು ತೊಡಗಿದ್ದರು. ಇದು ಎಲ್ಲ ಹೊರೆಗಳನ್ನೂ ಕಳಚಿಕೊಂಡು, ಪಿತೃಹತ್ಯೆಯ ಅಪರಾಧವೆಸಗದಂತೆ, ಆದರೆ ಪಿತೃಗಳ ಹಂಗನ್ನೇ ಬಿಟ್ಟುಬಿಡುವಂತೆ ಆಧುನಿಕವಾಗುವ ಮತ್ತು ಜಾತಿಯ ಎಲ್ಲೆಗಳನ್ನು ಮೀರಿ ಹೋಗುವ ಸುಲಭದ ಮಾರ್ಗವಾಗಿತ್ತೆ? ಠಾಕೂರರನ್ನು ಬಲ್ಲ ಕಸಿನ್ಸ್ ಎಂಬ ಆಂಗ್ಲ ಮೈಸೂರಿಗೆ ಬಂದಾಗ ಕೆ.ವಿ. ಪುಟ್ಟಪ್ಪನವರು ಅವರಲ್ಲಿಗೆ ಹೋಗಿ ತಾವು ಬರೆದ ಎಲ್ಲ ಇಂಗ್ಲಿಷ್ ಪದ್ಯಗಳನ್ನು ತೋರಿಸುತ್ತಾರೆ. ಕಸಿನ್ಸ್‌ರು ಪುಟ್ಟಪ್ಪನವರಿಗೆ ನೀನು ನಿನ್ನ ಮಾತೃಭಾಷೆಯಲ್ಲೆ ಬರಿ, ಇದು ನಿನ್ನ ಭಾಷೆಯಲ್ಲ ಎಂದು ಬುದ್ಧಿ ಹೇಳುತ್ತಾರೆ. ಕುವೆಂಪುರವರ ಠಾಕೂರರ ಕುರಿತ ಪದ್ಯ ಹೀಗಿದೆ:

TAGORE
The tide of battle swells and the grim cries
Of ‘Victory!’ come blending with the clash
Of delirious arms; and drunken soldiers dash
With cries of ‘Conquer!’, while Peace bleeding lies!
But midst the drunken din of war thy songs,
Sweet messengers of peace and harmony,
Shower joy and quell the flames of agony
And draw love’s veil on homicidal wrongs!
Thou movest midst the field proclaiming ‘Cease,
Children if God, these weapons are for play;
Behold, our Mother waits with streaming tears!’

With hight of Life and harmony of Peace
Move on, great Poet, for thine is His way:
Thy music sweet has rung in drunken cars! (೧೯೨೪)

ತಮ್ಮ ಇಪ್ಪತ್ತನೆಯ ವಯಸ್ಸಿನ ಆರಂಭದಲ್ಲಿ ಕುವೆಂಪುರವರು ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮದಲ್ಲೂ, ಕಾಲೇಜಿನಲ್ಲಿ ಇಂಗ್ಲಿಷ್ ಮೂಲಕವೂ ಉದಯಿಸಿದರು. ಮೂವತ್ತರ ಕೊನೆಯಲ್ಲಿ ಮತ್ತು ನಲವತ್ತರ ದಶಕದ ಆರಂಭದಲ್ಲಿ ನಾನೂ ತೀರ್ಥಹಳ್ಳಿ ಎಂಬ ಹಳ್ಳಿಯಲ್ಲಿದ್ದವನು, ಪುಟ್ಟಪ್ಪನವರು ಕಲಿತ ಶಾಲೆಯಲ್ಲೇ ಕಲಿತವನು, ಆದರೆ ಠಾಕೂರರನ್ನು ವಿಶ್ವಮಟ್ಟದಲ್ಲಿಟ್ಟು ಮತ್ತೊಂದು ಯುದ್ಧಕ್ಕೆ ಸಿದ್ಧಗೊಳ್ಳುವ ತೀವ್ರ ಉತ್ಕಟಾಂಕ್ಷೆಯ ಕುವೆಂಪು ಅವರ ಈ ಪದ್ಯದ ಬಗೆಗೆ ನಾನು ವಿಸ್ಮಿತನಾಗಿದ್ದೇನೆ. ಬಿಡುಗಡೆ ಪಡೆಯುವುದಕ್ಕಾಗಿಯೇ ಕುವೆಂಪು ಇಂಗ್ಲಿಷ್ ಭಾಷೆಯನ್ನು ತಮ್ಮದಾಗಿಸಿಕೊಂಡರು, ಬಹುಶಃ ಏಕೆಂದರೆ ಇಂಗ್ಲಿಷ್ ಬಿಡುಗಡೆಯ ಭಾಷೆಯಾಗಿತ್ತು. ನಿನ್ನ ಜಾತಿಯಿಂದ ದೊರಕುವ ಬಿಡುಗಡೆ ಅದು, ಉದಾಹರಣೆಗೆ, ಒಮ್ಮೆ ನೀನು ಇಂಗ್ಲಿಷ್‌ನಲ್ಲಿ ಬರೆಯಲಾರಂಭಿಸಿದೆಯೆಂದರೆ ನೀನೊಬ್ಬ ಕುರುಬನಾಗಿಯೋ, ಗೌಡನಾಗಿಯೋ ಅಥವಾ ಬ್ರಾಹ್ಮಣನಾಗಿಯೋ, ಅಥವಾ ದಲಿತನಾಗಿಯೋ ಉಳಿದಿರುವುದಿಲ್ಲ. ನಿನ್ನ ಮಾತಿನ ಕನ್ನಡ ನಿನ್ನ ಜಾತಿಯನ್ನು ಹೇಳುತ್ತದೆಯೇ ಹೊರತು ಅಪರಿಚಿತ ಇಂಗ್ಲಿಷ್ ನಿನ್ನ ಜಾತಿಯನ್ನು ತೋರ್ಪಡಿಸುವುದಿಲ್ಲ. (ಸಂಸ್ಕೃತ ಕೂಡ ನಿನ್ನ ಮೂಲವನ್ನು ಎತ್ತಿ ತೋರುವುದಿಲ್ಲ, ನಾರಾಯಣ ಗುರು ಎಂಬ ಈಡವ ಜಾತಿಯ ಸಂತ ಕೆಲವು ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಸಂಸ್ಕೃತವನ್ನು ಕಲಿಯುವಂತೆ ಗಾಂಧೀಜಿಗೆ ಸಲಹೆ ನೀಡಿದವರೂ ಅವರೆ.) ಈ ಕವನ ಬರೆದಾಗ ಕುವೆಂಪುಗೆ ಕೇವಲ ೨೦ ವರ್ಷ ವಯಸ್ಸು. ಅವರು ಠಾಕೂರರನ್ನು ಯಾವ ಸಂದರ್ಭದಲ್ಲಿಟ್ಟು ನೋಡುತ್ತಿದ್ದಾರೆ, ಗಮನಿಸಿ. ಅವರ ಪ್ರಕೃತಿಯ ಆರಾಧನೆಯ ದೃಷ್ಟಿಯಿಂದಲ್ಲ, ಅವರ ಹಾಡಿನ ದೃಷ್ಟಿಯಿಂದಲೂ ಅಲ್ಲ; ಬೇಂದ್ರೆ ಠಾಕೂರರನ್ನು ಕಾಣುವ ಬಗೆಯೇ ಬೇರೆ;


ನುಡಿದು ಬೇಸತ್ತಾಗ | ದುಡಿದುಡಿದು ಸತ್ತಾಗ
ಜನಕಹಿಗ್ಗಿನ ಹಾಡು ನೀಡಾಂವಾ
ನಿನ್ನ್ಹಾಂಗ ಆಡಾಕ | ನಿನ್ನ್ಹಾಂಗ ಹಾಡಾಕ
ಪಡೆದು ಬಂದವ ಬೇಕೊ ಗುರುದೇವಾ!


ಮಕ್ಕಳಾಗ್ಯಾಡೀದಿ | ಹಕ್ಕ್ಯಾಗಿ ಹಾಡೀದಿ
ಚಿಕ್ಕ್ಯಾಗಿ ನೋಡಿದಿ ಗುರುದೇವಾ
ಬಳ್ಳ್ಯಾಗ ಕುಣಿದೀದಿ | ಬೆಳಕಿನ್ಯಾಗ ತಣಿದೀದಿ
ಹೂವಾಗಿ ಅರಳೀದಿ ಗುರುದೇವಾ!


ಬೆಳಿಯಾಗೀಸಾಡೀದಿ | ಗಾಳ್ಯಾಗ ಬೀಸಾಡೀದಿ
ಮಳಿಯಾಗ ಕೂಸಾಡೀದಿ ಗುರುದೇವಾ!
ಬಿಸಿಲ್ಹಣ್ಣು ಉಂಡೀದಿ | ಬೆಳದಿಂಗಳ ಕಂಡೀದಿ
ಚಳಿಮುದ್ದು ಕೊಂಡೀದಿ ಗುರುದೇವಾ!


ಮೂಡಲಕ ಮೂಡೀದಿ | ಪಡುವಲಕ ಓಡೀದಿ
ದಿಕ್ಕೆಲ್ಲ ಕೂಡೀದಿ ಗುರುದೇವಾ |

ಕುವೆಂಪು ಮೊದಲಿನಿಂದ ರಾಜಕೀಯವಾಗಿಯೂ, ರಸದೃಷ್ಟಿಯಿಂದಲೂ ಒಟ್ಟಾಗಿ ಗ್ರಹಿಸುತ್ತಿದ್ದ ಕವಿ. ಅವರು ತಮ್ಮ ಕವನ ಬರೆದ ಕಾಲಕ್ಕೆ ಮೊದಲನೆಯ ಮಹಾಯುದ್ಧ ಮುಗಿದಿತ್ತು, ಎಲ್ಲರೂ ಎರಡನೆಯ ಮಹಾಯುದ್ಧಕ್ಕೆ ಸಿದ್ಧವಾಗಿದ್ದರು.

ನನ್ನ ಮುಂದೆ ಮತ್ತೊಂದು ಪದ್ಯವಿದೆ, (ಇದನ್ನು ಠಾಕೂರ್ ಕೀರ್ತನೆಯ ಈ ಸಭೆಯಲ್ಲಿ ಓದಲು ನನಗೆ ಧೈರ್ಯವಿಲ್ಲವಾದರೂ ಓದಲೇಬೇಕು.) ನಮ್ಮ ಕಾಲದ ಬಹುಮುಖ್ಯ ಕವಿ ಗೋಪಾಲಕೃಷ್ಣ ಅಡಿಗರು ೧೯೬೧ರಲ್ಲಿ, ತನ್ನನ್ನೇ ತಾನು ನಿರಾಕರಿಸಿಕೊಂಡು ಹೊಸಹುಟ್ಟು ಪಡೆಯುತ್ತಿದ್ದಾಗ ಬರೆದ ಪದ್ಯವಿದು. ಹೊಸಹುಟ್ಟಿಗೆ ಪಿತೃಹತ್ಯೆ ಅಗತ್ಯವೇನೋ. ಯಾಕೆಂದರೆ ಆ ಕಾಲದಲ್ಲಿ ನಮ್ಮ ಮಹಾಪಿತೃ ಪಂಪನಲ್ಲ, ಕಾಳಿದಾಸನಲ್ಲ, ನೊಬೆಲ್ ಪಾರಿತೋಷಕ ಪಡೆದ, ಅವರಂತೆ ಮಾತ್ರ ಕಾಣಬಲ್ಲ ಠಾಕೂರರು.

To Tagore
I hugged you once as an thin, pallied cloud,
content to expend the seed
in right pollutions of misty drops
that burden the leaves and grass;
Frigid as old maids in spotless white,
ashamed to undress in light;
Too pure to pestle with rodlike showers
earth-holes itching in heat.

Adolescent on stilts, parader in public,
in brocade and lace and beard,
seeking a stave from gossamered horizons,
and ripples that lap lick,
and the wind that sighs in bamboo-copse,
and shades in noontide rings;
Wrapped in skin-tight silken sounds
bestrode the mystic broom.

I salute you, a solemn ghost,
haunting my childish corners;
Breeder of a host of ghosts miniature
flaunting a dozen tongues;
Worn-out dreams have a knack to reappear
and restore the morning snare.
(1961)

ಮಂಜೇಶ್ವರ ಗೋವಿಂದ ಪೈಗಳಂತೆಯೆ ಇವರೂ ಮತ್ತೊಂದು ಪಿತೃಹತ್ಯೆಗೈದ ಕವಿ. ಆದರೆ ಮಂಜೇಶ್ವರ ಗೋವಿಂದ ಪೈಗಳಿಗೆ ಇರುವ ಪಾಪಭಾವ ಈ ಕವಿಯ ಒಳಸಂಕಟವಾಗಿ ಇಲ್ಲ. ಅದಾಗಲೆ ಠಾಕೂರರು ಆರಾಧನಾ ವ್ಯಕ್ತಿಯಾಗಿದ್ದರು. ಅವರನ್ನು ಅನುಕರಣೆ ಮಾಡುತ್ತಿದ್ದವರಲ್ಲಿ ರೊಮ್ಯಾಂಟಿಕ್ ಕಾಲದ ಸಂಕಟವನ್ನು ಪೂರ್ವಾಪರ ಆಲೋಚನೆಯಿಲ್ಲದೆ ಮುಂದುವರೆಸಿದ್ದರು. ಅಸ್ತಿತ್ವದ ಪ್ರಶ್ನೆಗಳಿಗೆ ನಮ್ಮ ಕನ್ನಡ ಲೇಖಕರು ಉತ್ತರ ಕಂಡುಕೊಂಡಿದ್ದ ಶ್ರೇಷ್ಠ ಋಷಿ ಅರಬಿಂದೋ ಠಾಕೂರರ ಬೆನ್ನಿಗಿದ್ದರು. ಠಾಕೂರರು ಒಬ್ಬ ‘ಸಿಹಿ’ ಲೇಖಕನಾಗಿಬಿಟ್ಟಿದ್ದರು. ಅವರ ಚಿತ್ರಕಲೆ ಮತ್ತು ಕಾದಂಬರಿಗಳಲ್ಲಿ ವಿದಿತವಾಗಿರುವ ನಿಜವಾದ ಯಾತನಾಮಯ ಆತ್ಮದ ಒಳಗು ಎಲ್ಲರಿಗೂ ಮರೆತುಹೋಗಿತ್ತು. ಅದು ಎಲ್ಲರೂ ಸಂದೇಶಕ್ಕಾಗಿ ಕಾವ್ಯವನ್ನು ಓದುತ್ತಿದ್ದ ಕಾಲ.

ಅಡಿಗರ ಕವನದಲ್ಲಿ ಮುಖ್ಯವಾದ ಸಂಗತಿಯೆಂದರೆ ಸ್ವ-ವಿಸರ್ಜನೆ. ಇಲ್ಲಿ ಅವರು ತಮ್ಮನ್ನು ತಾವು ವಿಮರ್ಶಿಸಿಕೊಳ್ಳುತ್ತಿದ್ದಾರೆ ಹಾಗೂ ಪ್ರಶ್ನಿಸಿಕೊಳ್ಳದೆಯೆ ಒಪ್ಪಿಕೊಂಡ ಬದುಕಿನ ಅಭಿಪ್ರಾಯಗಳನ್ನು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ತಮ್ಮೊಳಗಿನ ಠಾಕೂರರನ್ನು ಅವರು ಇಲ್ಲಿ ಹತ್ಯೆಗಯ್ಯುತ್ತಿದ್ದಾರೆ. ಹೊಸ ಪದಗಳ ಹೊರತಾಗಿ, ಹೊಸ ಲಯದ ಹೊರತಾಗಿ ಹೊಸ ಅರ್ಥ ಸಾಧ್ಯವಿಲ್ಲ.

ನಮಗೆ ಈಗ ಅರ್ಥವಾಗುತ್ತಿರುವ-ಪ್ರಾಯಶಃ ಆರಾಧನಾ ಭಾವದ ಬಂಗಾಳಿಗಳಿಗೂ ಇನ್ನೂ ಅರ್ಥವಾಗದ-ಠಾಕೂರರ ವ್ಯಕ್ತಿತ್ವದ ಕಪ್ಪುಮುಖದ ಅರಿವು ಅಡಿಗರಿಗೆ ಇರಲಿಲ್ಲ. ನಮ್ಮ ಈ ಕಾಲಕ್ಕೆ ಠಾಕೂರರು ಗಾಂಧಿಯಂತೆ ಒಬ್ಬ ದಾರ್ಶನಿಕ. ಪ್ರಸಿದ್ಧರಾಗಿಬಿಟ್ಟ ಠಾಕೂರರಿಗೂ, ಯಾರಿಗೂ ಹೇಳಿಕೊಳ್ಳಲಾಗದ ಒಂಟಿತನವಿತ್ತು. ಏಕೆಂದರೆ ಒಬ್ಬ ಲೇಖಕ ಹೆಸರುವಾಸಿಯಾಗಿಬಿಟ್ಟರೆ ಇಂತಹ ಕಷ್ಟ ಅವನಿಗೆ ತಪ್ಪಿದ್ದಲ್ಲ; ಜನರು ಅವನನ್ನು ಗೌರವಿಸುತ್ತಾರೆ. ಆಗ ಅವನು ಸನ್ನಡತೆಯಲ್ಲೆ ಎಲ್ಲವನ್ನು ನಿಭಾಯಿಸಬೇಕಾಗುತ್ತದೆ ಹಾಗೂ ಜನರಿಗೆ ದಿಗ್ಬ್ರಮೆ ಹುಟ್ಟಿಸಬಹುದಾದ ಸಂಗತಿಗಳನ್ನು ಅವನು ಮಾತನಾಡುವುದು ಕಷ್ಟವಾಗುತ್ತದೆ, ಅವನ ವ್ಯಕ್ತಿತ್ವದ ಈ ಕರಾಳ ಒಳಪದರಗಳನ್ನು ಹೊರಗೆಡಹುವುದೆ ತಪ್ಪಾಗಿ ಕಾಣುತ್ತದೆ. ಆದರೆ ತಮ್ಮ ಒಂಟಿತನದ ಕಪ್ಪು ಮೂಲೆಗಳನ್ನು ತೋರಿಸುವ ಧೈರ್ಯ ಠಾಕೂರರಿಗಿತ್ತು. ಆದರೆ ತಮ್ಮ ಹೆಂಡತಿಯ ಮರಣಾನಂತರ ತಾವು ಪ್ರೀತಿಸಿದ ಪಾಶ್ಚಾತ್ಯ ಹೆಂಗಸೊಬ್ಬಳಿದ್ದಳು. ತಮ್ಮ ಅಣ್ಣನ ಹೆಂಡತಿಗೆ ಅವರಿಗೆ ಆಳವಾದ ಸಂಬಂಧವಿತ್ತು. ಆಕೆ ಆತ್ಮಹತ್ಯೆ ಮಾಡಿಕೊಂಡಳು. ಈ ನಡುವೆ ಠಾಕೂರರು ‘ಶಾಂತಿನಿಕೇತನ’ದ ಜೊತೆ ರೈತ ಜನಾಂಗಕ್ಕಾಗಿ ‘ಶ್ರೀನಿಕೇತನ’ವನ್ನೂ ಸ್ಥಾಪಿಸಿದರು. ಗಾಂಧಿಯಿಂದ ಬೆಳೆದರು. ಗಾಂಧಿಯನ್ನು ಬೆಳೆಸಿದರು. ಠಾಕೂರರು ಹೀಗೆ ಬದುಕನ್ನು ಎದುರಿಸಿದರು. ಆದರೆ ಜನರು ಠಾಕೂರರ ಅಂತರಂಗದ ಮಾತುಗಳನ್ನು ಕೇಳಿಸಿಕೊಳ್ಳದೆಯೇ.

ನಮ್ಮ ಪುಣ್ಯವೆಂದರೆ ಪಂಪನನ್ನೂ ಆಧುನಿಕತೆಯನ್ನೂ ಬಿಡಲಾರದ ಮಹಾಕವಿ ಕುವೆಂಪು ಇದ್ದಾರೆ. ಹಾಗೆಯೇ ಪಂಪನನ್ನೂ ಆಧುನಿಕತೆಯನ್ನೂ ಬಿಟ್ಟುಕೊಡಲಾರದ, ಕಟ್ಟುವುದು ಮತ್ತು ಬಿಚ್ಚುವುದು ಎರಡೂ ಅಗತ್ಯವೆಂದು ತಿಳಿದಿದ್ದ, ಅತಿರೇಕಕ್ಕೆ ಅಂಜದಂತೆ ತನ್ನನ್ನೇ ತಾನು ಸುಟ್ಟುಕೊಳ್ಳುವ ಅಡಿಗರೂ ಇದ್ದಾರೆ.

ಹುಟ್ಟಿನಲ್ಲಿ ‘ಪಿತೃಹತ್ಯೆ’ಯಂತೆ ತೋರುವ ಕಾವ್ಯ ತನ್ನ ಬೆಳವಣಿಗೆಯಲ್ಲಿ ‘ಪಿತೃಶ್ರಾದ್ಧ’ವಾಗಿ ಮಾರ್ಪಡುವುದು ಕಾವ್ಯಕ್ರಿಯೆಯ ಸೋಜಿಗ.

*

ರವೀಂದ್ರನಾಥ ಠಾಕೂರರ ‘To the ocean’ ಕವನದ ಭಾಷಾಂತರ

ಕಡಲಿಗೆ
(ಪುರಿಯ ಕಡಲನ್ನು ನೋಡಿದಾಗ ಬರೆದದ್ದು)

ಕಡಲು, ಮೊದಲ ತಾಯಿ, ಭೂಮಿ ನಿನ್ನ ಮಗು,
ನಿನ್ನೊಡಲಿನ ಒಂದೇ ಕೂಸು ಅದು. ಹಾಗಾಗಿ
ನಿದ್ರೆಯೆಂದು ನೀನು ಕಣ್ಣುಮಿಟುಕಿಸುವಂತಿಲ್ಲ:
ಎದೆ ತುಂಬಿದ ಭಯ, ಅಂತೆ ಭರವಸೆ, ಕ್ಷೋಭೆಯೂ.
ಹಾಗಾಗಿ, ಆಗಸದಲ್ಲಿ ಕೊನೆಮೊದಲಿಲ್ಲದ ಶಾಂತ ನಿನ್ನ
ಮಾತು ವೇದಮಂತ್ರಗಳಂತೆ ತೇಲುತ್ತದೆ-
ದೇವರ ಮಕುಟಕ್ಕೆ ಹೃದಯದ ಅನಂತ ಪ್ರಾರ್ಥನೆ:
ದಿಗಂತದ ಅಂಚಿನ ಸುತ್ತ, ಅನಂತ ಕ್ಷೇಮದ
ಸ್ತೋತ್ರ ಪ್ರತಿರಿಂಗಣಿಸುತ್ತದೆ. ಹಾಗಾಗೆ ನೀನು
ಮಲಗಿ ನಿದ್ರಿಸಿದ ಭೂಮಿಯ ತಬ್ಬುತ್ತೀಯ,
ಅಲೆಗಳಿಂದ ಅದ ಬಳಸಿ, ಲೆಕ್ಕವಿಲ್ಲದಷ್ಟು ಮುತ್ತಿನ ಮಳೆಗರೆಯುತ್ತೀಯ,
ನಿನ್ನ ಆಕಾಶ-ನೀಲಿ ಬಣ್ಣದ ಬಟ್ಟೆ ಅದರ ದೇಹವನ್ನು
ಜೋಕೆಯಾಗಿ ಪೋಷಿಸಿ, ಮೃದುವಾಗಿ ನಿಪುಣತೆಯಿಂದ ಸುತ್ತುತ್ತದೆ.
ಅದೆಂಥಾ ನಿಷ್ಠುರ ಬಗೆಯ ಪ್ರೀತಿ ನಿನ್ನದು,
ಓ ಬಲಿಷ್ಟ ಕಡಲೆ! ಈಗ ನೀನು ಅಸಡ್ಡೆಯ ಕತೆಕಟ್ಟಿ
ಆಸೆ ಬಿಟ್ಟುಬಿಟ್ಟೆಯೇನೋ ಎಂಬಂತೆ
ಮೆಟ್ಟಂಗಾಲಲ್ಲಿ ನಿಧಾನಕ್ಕೆ ಹಿಂದೆಸರಿದು, ಮತ್ತಷ್ಟು ಹಿಂದೆ ಹೋದೆ;
ಆಮೇಲೆ, ಸಂತಸದ ಕೈಸನ್ನೆಯಲಿ ಕರೆಯುತ್ತ
ಮದಿಸಿ ಉಬ್ಬುತ್ತ ಅದರ ಎದೆಮೇಲೆ
ನೊರೆಯ ನಗು ಕಣ್ಣೀರು ಪ್ರೀತಿಯಲ್ಲಿನ ಹೆಮ್ಮೆಯ ಸಂತೋಷವ
ಹಿಂದೆಳೆದು ಮುನ್ನೂಕುತ್ತ, ಭೂಮಿಯ ಅಕಳಂಕ ಹುಬ್ಬನ್ನು
ಆಶೀರ್ವದಿಸುತ್ತ ಮೀಯಿಸಿದೆ.
ಎಂದೂ-ಕರಗದ ನಿನ್ನ ಅಗಾಧ ಹೃದಯದ
ಪ್ರೀತಿ ಹುಟ್ಟುವ ಮತ್ತು ಕೊನೆಯಾಗುವ ತಾಣ-ಎಲ್ಲಿ ತುದಿ, ಎಲ್ಲಿ ಕೊನೆಯು,
ಅದರ ದಡವೆಲ್ಲಿದೆ, ಅದೆಲ್ಲಿದೆ ಅದರ ತಳ?
ಅರ್ಥಕ್ಕೆ ನಿಲುಕದ ಅದರ ಶಾಂತಿಗೆ ಮಾತು ನೀಡಬಲ್ಲವರ್ಯಾರು?
ಅದರ ಮೇರೆಗಳಿಲ್ಲದ ತುಮುಲಕ್ಕೆ,
ಗಂಭೀರ ಮೌನಕ್ಕೆ, ಚೀರುವ ಗದ್ದಲಕ್ಕೆ
ಅದರ ನಗುವಿಗೆ, ಮತ್ತದರ ಕಣ್ಣೀರಿಗೆ ಮಾತು ನೀಡಬಲ್ಲವರ್ಯಾರು?
ಕೆಲವೊಮ್ಮೆ ನಿನ್ನನ್ನೇ ನೀನು ಹಿಡಿದಿಟ್ಟುಕೊಳ್ಳಲಾರೆಯೇನೋ ಎನಿಸುತ್ತದೆ:
ಕ್ರೂರ ಹುರುಪಿಂದ ನೀನು ಹುಚ್ಚುಚ್ಚಾಗಿ ನುಗ್ಗುತ್ತೀಯ
ಪ್ರೀತಿಯ ಭರದಿಂದ ಉಬ್ಬಿದ ನಿನ್ನ ಎದೆಗೆ
ಭೂಮಿಯನ್ನು ಒತ್ತಿಕೊಳ್ಳುತ್ತೀಯ; ಹೀಗೆ ಅದುಮಿ ಹೋದ ಭೂಮಿ
ಕಂಪಿಸುತ್ತದೆ, ಬಿಗಿದ ದನಿಯಿಂದ ಅಳು ಹಾತೊರೆಯುತ್ತದೆ,
ಆಗ ನೀನು ರಾಕ್ಷಸಿಯಂತೆ ಭೂಮಿಯನ್ನು ಪ್ರೀತಿಯ ಹುಚ್ಚು ಹಸಿವಿನಿಂದ
ಬಿಗಿಯುತ್ತೀಯ, ಅವಳನ್ನು ಅಲುಗಿಸಿ, ನುರಿದು, ಚೂರುಚೂರಾಗಿ
ಒಡೆದು, ಧೂಳಿನ ಕಣವಾಗಿಸಿ ಎಡೆಬಿಡದ ಅಸಂತುಷ್ಟಿಯಲ್ಲಿ ನುಂಗಿ ನೊಣೆಯುತ್ತೀಯ:
ಪ್ರಚಂಡ ಕಾಲಜ್ಞಾನಿ!
ನಂತರ ಆಳದ ಪಾಪಪ್ರಜ್ಞೆಯಲ್ಲಿ-ಅಲುಗದೆ, ಮೂಕನಾಗಿ, ಅಂಗಾತವಾಗಿ, ದುಃಖದ ನೋವಿನಲ್ಲಿ-

ತಡಿಯ ಮೇಲೆ ಮಲಗುತ್ತೀಯ.
ನಿಧಾನವಾಗಿ ಬೆಳಗು ಹರಿಯುತ್ತದೆ,
ಶಾಂತ ಕಣ್ಣಿನಿಂದ ಅದು ನಿನ್ನನ್ನೇ ನೋಡುತ್ತದೆ; ಇಳಿಬೆಳಗಿನ ಸಂಗಾತಿ
ಅವಳ ಪ್ರೀತಿ ಸ್ಪರ್ಶದಿಂದ ನಿನ್ನ ಸಮಾಧಾನ ಮಾಡುತ್ತದೆ,
ನಂತರ ಕತ್ತಲ ಗುಡಿಗೆ ನಿನ್ನ ಕದ್ದೊಯ್ಯುತ್ತದೆ;
ರಾತ್ರಿ ವೇಳೆ ಗೆಳೆಯನಂತೆ ನಿನ್ನ ಬಗಲಲ್ಲಿ ಕುಳಿತು ನಿನ್ನನ್ನೇ ಆಲಿಸುತ್ತದೆ
ನೀನಾಗ ನೋವಿನಿಂದ ಮುಲುಕುತ್ತೀಯ, ಅದುಮಿಟ್ಟ ಪಶ್ಚಾತ್ತಾಪದ ಚಿತ್ರಹಿಂಸೆಯಲ್ಲಿ ಒರಲಿ ಅಳುತ್ತೀಯ.

ನಿನ್ನ ಸದ್ದನ್ನಾಲಿಸುತ್ತ, ನಿನ್ನ ದಡದಲ್ಲಿ ಕುಳಿತ
ನಾನು ಭೂಮಿಯಮಗು: ನನಗನ್ನಿಸುತ್ತದೆ
ನಿನ್ನ ಕೆಲವು ಅಂಶಗಳನ್ನು ಮಾತ್ರ ಅರ್ಥೈಸಿಕೊಳ್ಳಬಹುದೆಂದು,
ಮೂಕನ ಸಂಜ್ಞೆಗಳನ್ನು ಅವನ ಹತ್ತಿರದವರು ಅರ್ಥಮಾಡಿಕೊಳ್ಳುವರಲ್ಲ ಹಾಗೆ ಇದು.
ನನ್ನ ನರಗಳಲ್ಲಿ ಹರಿವ ರಕ್ತ ಮತ್ತು ನನ್ನ ಆಳದ ಅಸ್ತಿತ್ವಕ್ಕೆ ಗೊತ್ತು
ಮಾತು ಮತ್ತು ಶೂನ್ಯ ಬೇರೆ ಬೇರೆಯೆಂದು.
ಇನ್ನೂ ಹುಟ್ಟದ ವಿಶ್ವಭ್ರೂಣ ಆ ಅಗಾಧ ಗರ್ಭದೊಳಗೆ ಬೆಸೆದು ಮಲಗಿದಾಗ
ನನ್ನ ಹೃದಯದ ಅನಂತಕಾಲದಿಂದ ಹೊರಟ ಆ ಎಡೆಬಿಡದ ಕರೆ
ಅದರ ಹೆಜ್ಜೆಗುರುತನ್ನುಳಿಸಿದೆಯೆಂದು ನನಗೆ ನೆನಪಾಗುತ್ತದೆ.
ಹುಟ್ಟಿಗೂ ಮೊದಲಿನ ನೆನಪು ಗರ್ಭ ತಳೆದು ಭೂಮಿಗಿದಿರಾಗಿ
ನಿನ್ನ ತಾಯಿಯ ಹೃದಯದ ನಿರಂತರ ನಾಡಿಮಿಡಿತ,
ನಿನ್ನ ನರಗಳೊಳಗೆ ಕ್ಷೀಣ ಚಿಹ್ನೆಯಾಗಿ ಏಳುತ್ತದೆ:
ಶೂನ್ಯ ದಡದ ಮೇಲೆ ಕುಳಿತು ನಾನು ನನ್ನ ದೃಷ್ಟಿಯನ್ನು ಕೆಳಕ್ಕಿಳಿಸುತ್ತೇನೆ
ಆಗ ಆ ಪುರಾತನ ಅಸ್ಪಷ್ಟಧ್ವನಿ ಕೇಳುತ್ತದೆ.
ಕಾಲದಿಂದ ಕಾಲಕ್ಕೆ, ಈ ತುದಿಯಿಂದ ದಿಗಂತದ ಆ ಅಂಚಿನವರೆಗೆ,
ನೀನಾಗ ಒಬ್ಬಂಟಿಯಾಗಿದ್ದೆ, ಏಕವಾಗಿದ್ದೆ, ಮೇರೆತೀರಗಳಿಲ್ಲವಾಗಿದ್ದೆ,
ನಿನ್ನೊಳಗೆ ನೀನು ಕಳೆದುಹೋಗಿದ್ದೆ, ನಿನ್ನ ಮೊದಲ ಹೆರಿಗೆಯ
ಗೂಢತೆಯೆಡೆಗೆ ಮಂಕಾಗಿದ್ದೆ.
ಹಗಲೂರಾತ್ರಿ ಕೂಸಿಲ್ಲದ ನಿನ್ನ ಖಾಲಿ ಎದೆ
ತೀವ್ರ ಮಮತೆಯೆಡೆಗೆ ಎಡೆಬಿಡದೆ ಹಾತೊರೆಯುತ್ತಿತ್ತು-
ನಿನ್ನೊಳಗೆ ಮಗುವಿನ ಮೊದಲ ಮಿಸುಕು, ಅಜ್ಞಾತದ ಅಪೂರ್ವ ಮೃದುತ್ವ,
ಅ-ಪರಿಚಿತ ಬಯಕೆಗಳ ತಿರುಳು.
ಆ ದಿವ್ಯ ಮಗುವಿನ ಹುಟ್ಟಿಗೆ
ಕಾಲವನ್ನು ಎಣಿಸಿಗುಣಿಸಲು ಬೆಳಗು ಪ್ರತಿದಿನ ಬಂತು:
ಮಗುವಿಲ್ಲದ ನಿನ್ನ ಹಾಸಿಗೆಯನ್ನು ನಕ್ಷತ್ರಗಳು
ನೆಟ್ಟಕಣ್ಣು ನೆಟ್ಟಂತೆ ನೋಡಿದವು. ಮತ್ತೆ
ಮತ್ತೆ ಮತ್ತೆ, ಯಾವುದೋ ದೂರದ ಹೊಸಶಕೆಯ
ನೆನಪಿನಂತೆ-ತೀವ್ರ, ಏಕಾಂತದ, ಅಚೇತನ-ಪ್ರೀತಿಮಿಡಿತ ನನ್ನೆದೆಯೊಳಗೇಳುತ್ತದೆ-
ಆ ಆದ್ಯ ತಾಯಿ: ನಿನ್ನ ಎಚ್ಚೆತ್ತ ಆತ್ಮದ ಹಪಾಹಪಿ
ನಿನ್ನ ಹೃದಯದಾಳದಲ್ಲಿ ನಾಳಿಗಾಗಿ ಏಳುವ
ಅದ್ಯಾವುದೋ ಕಾಣದನೋವು-
ಅಗಾಧ, ಇನ್ನೂ ಹುಟ್ಟಿಲ್ಲದ್ದು.
ನನ್ನಾತ್ಮದಲ್ಲೂ ಕಾಣದ ಯಾವುದೋ ದೂರದ್ದಕ್ಕೆ ನಿಟ್ಟುಸಿರ ಅಸ್ಪಷ್ಟ ಧ್ವನಿ ಏಳುತ್ತದೆ-
ಅದು ಈವರೆಗೆ ಅನುಭವಿಸಿರದ ನೋವು, ಪರಿಚಿತವಲ್ಲದ ನಂಬಿಕೆ.
ಮನುಷ್ಯ ಹೃದಯದ ಕಡಲಿನಾಳದಲ್ಲಿ, ಗಳಿಗೆ ಗಳಿಗೆಯೂ
ಅದಕ್ಕೇ ಅಪರಿಚಿತವೆಂಬಂತ ಹೊಸ ಭೂಭಾಗವೊಂದು ಬೆಳೆಯುತ್ತದೆ:
ಅರ್ಧಂಬರ್ಧವಷ್ಟೇ ಅನುಭವಕ್ಕೆ ಬಂದ ಅದರ ಪುಳಕ
ಆತ್ಮವನ್ನು ಹಾತೊರೆಯುವಂತೆ ಮಾಡುತ್ತದೆ,
ಮಹತ್ತಾದ ನಂಬಿಕೆಯೊಂದಿಗೆ ಮನಸ್ಸನ್ನು ಕಲಕುತ್ತದೆ-
ಆಕಾರರಹಿತ, ಅಸಂತೃಪ್ತಿ, ಅರಿವಿಗೆಟುಕದ ಸಾಕ್ಷ್ಯ,
ಅರ್ಥೈಕೆಯ ಮೇರೆದಾಟಿದ ಆವಾಸ.

ತರ್ಕ ಅದನ್ನು ಅಪಹಾಸ್ಯ ಮಾಡುತ್ತದೆ; ಹೃದಯಕ್ಕೆ ಅದು ಸತ್ಯವೆಂದು ಗೊತ್ತು,
ಸಾವಿರ ಅರೆಕೊರೆಗಳಾಚೆಗೂ ಅನುಮಾನಿಸದೆ ಹೃದಯ ಅದನ್ನು ಒಪ್ಪುತ್ತದೆ,
ತನ್ನೊಡಲಲ್ಲಿ ಜೀವವನ್ನ ಹುದುಗಿಸಿಕೊಂಡ ತಾಯಿಗೆ ಮಾತ್ರ ಗೊತ್ತು
ಯಾವಾಗ ಪ್ರೀತಿ ಎದೆಗೆ ನುಗ್ಗುತ್ತದೆ, ಹಾಲು ಮೊಲೆಗಳಿಗೆ ಹರಿಯುತ್ತದೆಂದು
-ಹಾಗೆ ಇದು.
ಆತ್ಮದುಂಬಿದ ಮಾತಿಲ್ಲದ ಆ ಅಲೆಮಾರಿ ನಂಬಿಕೆಯೊಂದಿಗೆ
ನಾನು ನಿನ್ನ ನೋಡುತ್ತೇನೆ; ನೀನು, ಕಡಲು, ದೊಡ್ಡ ನಗೆಯೊಂದಿಗೆ
ರಕ್ತದ ಅದ್ಯಾವ ಸೆಳೆತದಿಂದಲೋ
ನಿನ್ನಲೆಗಳ ಒಳಗೆ ನನ್ನಸ್ತಿತ್ವದ ಎಳೆದುಕೊಳ್ಳುತ್ತೀಯ
ಮಗುವ ನಿನ್ನೆದೆಗೆಳೆದುಕೊಳ್ಳುತ್ತೀಯ.

ಓ ನೀರೆ,
ಮನುಷ್ಯ ಭಾಷೆ ನಿನಗೆ ತಿಳಿಯುವುದೆ? ನಿನಗೆ ಗೊತ್ತ
ನಿನ್ನ ಭೂಮಿ ಅಸ್ವಸ್ಥವಾಗಿದ್ದಾಳೆ, ಅತ್ತ ಕಡೆಗೊಮ್ಮೆ ಇತ್ತ ಕಡೆಗೊಮ್ಮೆ ತುಯ್ಯುತ್ತ,
ನೀರ ಸುರಿವ ಕಣ್ಣುಗಳಿಂದ, ಬಿಸಿ ಏದುಸಿರಬಿಡುತ್ತಾಳೆ,
ತನಗೇನುಬೇಕೆಂದು ಅವಳಿಗೆ ತಿಳಿಯದು, ಅವಳ ದಾಹವನ್ನು ಅದೇನು
ಇಂಗಿಸಬಲ್ಲದು ಗೊತ್ತಿಲ್ಲ ಅವಳಿಗೆ:
ಅವಳ ಮನಸ್ಸಿನೊಳಗೆ ಅವಳೇ ದಿಕ್ಕುತಪ್ಪಿದ್ದಾಳೆ-
ಉನ್ಮತ್ತ ಬಿಸಿಲ್ಗುದುರೆ! ಅರ್ಥಕ್ಕೆ ನಿಲುಕದ ಗಂಭೀರ ಹೃದಯಿ ನೀನು
ಮಳೆಮೋಡದ ಗುಡುಗಿನಂತೆ ಅವಳಿಗೆ
ಸಮಾಧಾನದ ಹೊಸ ಮಾತುಗಳನ್ನಾಡು:
ನಿನ್ನಲೆಗಳ ಉಬ್ಬು ಮತ್ತೆ ಇಳಿತ
ತಾಯಿಯ ಮೃದು ಕೈ ಸ್ಪರ್ಶದಿಂದ ಭೂಮಿಯ ಆಲೋಚನೆದುಂಬಿದ ಹುಬ್ಬನೇವರಿಸಲಿ,
ಅದು ಅವಳ ಜೀವರಾಶಿಗೆ ಸಾವಿರ ಸಾವಿರ ಮೃದುಮಧುರ ಮುತ್ತುಗಳಾಗಲಿ.
ಅವಳಿಗೆ ಹೇಳು, ‘ಶಾಂತಿ, ಸಮಾಧಾನ,’
ಹೇಳು ಅವಳಿಗೆ ‘ಮಲಗು ಮಲಗು ಮಲಗು’ ಎಂದು.

—-
ಇಂಗ್ಲಿಷ್
ಅನುವಾದ: ಸುಕಾಂತ ಚೌಧರಿ ಕನ್ನಡಕ್ಕೆ: .ನಾ. ತೇಜಶ್ರೀ
ದೇಶಕಾಲ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ, ೨೦೧೧