ಪೆದ್ದು ಸರಕಾರ, ಸಾಚಾ ಅಣ್ಣ ಮತ್ತು ಕುಟಿಲ ಬಾಬಾ

ಸಮಾಜಜೀವಿಯಾದ ಮನುಷ್ಯನಲ್ಲಿ ಮಾತ್ರ ಭ್ರಷ್ಟತೆ ಸಾಧ್ಯ. ಗಾಂಧಿಯವರಿಗೆ ಇದು ಎಷ್ಟು ಅವರ ಕರುಳಿನ ಬೇನೆಯಂತೆ ಗೊತ್ತಿತ್ತೆಂದರೆ ಅವರನ್ನು ಇಡೀ ಜಗತ್ತು ಮಹಾತ್ಮನೆಂದು ಕರೆವಾಗಲೂ ತನ್ನಲ್ಲಿನ್ನೂ ಭ್ರಷ್ಟತೆ ಉಳಿದಿದೆಯೇ ಎಂದು ಅನುಮಾನಿಸುತ್ತಿದ್ದರು. ನವಾಖಲಿಯಲ್ಲಿ ಮುಳ್ಳು, ಮಲವನ್ನು ಬರಿಗಾಲದಲ್ಲಿ ತುಳಿದು ತಮ್ಮ ಅಹಿಂಸಾ ಯಾತ್ರೆಯನ್ನು ಕೈಗೊಂಡ ಸಂದರ್ಭದಲ್ಲಿ ಹೊರಜಗತ್ತಿನಲ್ಲಿ ಕಾಣುತ್ತಿರುವ ಹಿಂಸೆ ತನ್ನಲ್ಲಿನ್ನೂ ಉಳಿದಿದೆಯೇ ಎಂದು ಸಂದೇಹಪಟ್ಟು ಅವರು ತಮ್ಮನ್ನು ತಾವೇ ಹಿಂಸೆಗೆ ಗುರಿ ಮಾಡಿಕೊಂಡರು. ಹೀಗೆ ಭ್ರಷ್ಟತೆಯಿಂದ ಪಾರಾಗಿ ತ್ರಿಕರಣಶುದ್ಧಿ ಬಯಸುವುದು ಮನುಷ್ಯನಿಗೆ ಮಾತ್ರ ಅಗತ್ಯ, ಪ್ರಾಣಿಗಳಿಗಲ್ಲ.

ಈಗ ಬಾಬಾ ರಾಮ್‌ದೇವ್ ಅವರನ್ನೂ ಅಣ್ಣಾ ಹಜಾರೆಯವರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಇಬ್ಬರೂ ಭ್ರಷ್ಟತೆಯ ವಿರುದ್ಧ ಹೋರಾಡುವವರೆಂಬ ಚಿತ್ರಣವನ್ನು ಎಲ್ಲಾ ಮಾಧ್ಯಮಗಳೂ ಬಿತ್ತರಿಸುತ್ತಿವೆ. ಮಾತಿನಲ್ಲಿದು ಸಾಚಾ, ಇದು ಮೋಸ ಎಂದು ಹೇಳುವುದು ಬಡಪಾಯಿ ಕಿವಿಗಲ್ಲ ಸುಲಭ-ಇದು ಅಡಿಗರ ಮಾತು. ನಾವಿಂದು ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರವನ್ನು ನಮ್ಮೊಳಗಿನ ಆತಂಕದಿಂದಲೇ ಮೊದಲು ನೋಡಿಕೊಳ್ಳಬೇಕು. ನಿಮಗೊಂದು ಮನೆಯಿದೆ. ಅದನ್ನು ಮಾರಿ, ನೀವು ಇನ್ನೊಂದು ಮನೆಯನ್ನು ಕೊಳ್ಳಲು ಬಯಸುವಿರಿ. ಇದು ಕೇವಲ ನಿಮ್ಮ ನೆಮ್ಮದಿಗಾಗಿ, ಆದರೆ ಮಾರುವಾಗ ಅದನ್ನು ಕೊಳ್ಳುವವನು ಒಂದಿಷ್ಟು ಸಾಚಾ ಹಣವನ್ನು ಕೊಟ್ಟರೆ, ಇನ್ನೊಂದಿಷ್ಟು ಕಪ್ಪು ಹಣವನ್ನು ಕೊಡುತ್ತಾನೆ. ಅದನ್ನು ನೀವೂ ತೆಗೆದುಕೊಳ್ಳುತ್ತೀರಿ. ಯಾಕೆಂದರೆ, ನಮಗೇ ನಾವು ಹೇಳಿಕೊಳ್ಳುತ್ತೇವೆ-ಇನ್ನೊಂದು ಮನೆಯನ್ನು ಕೊಳ್ಳುವಾಗ ನಾವೂ ಕಪ್ಪುಹಣ ಕೊಡಬೇಕಲ್ಲ, ಅಲ್ಲಿ ಅದನ್ನು ಬಳಸಿಕೊಳ್ಳಬಹುದೆಂದು. ಅಂದರೆ ಇದು ದಾಸರ ಪದದಂತೆ ಕೆರೆಯ ನೀರನು ಕೆರೆಗೆ ಚೆಲ್ಲಿ. ಈ ಚೆಲ್ಲುವ ಕ್ರಿಯೆಯಲ್ಲಿ ಕೊಂಚ ಕೊಂಚ ಹಣ ಉಳಿಸಿಕೊಳ್ಳುವ ಸದ್ಗೃಹಸ್ಥರೂ ಇರುತ್ತಾರೆ. ನಾವು ಮಧ್ಯಮ ವರ್ಗದವರು ಈ ಬಗೆಯ ಜನರು. ಬಹಳ ಕಪ್ಪುಹಣ ಹುಟ್ಟಿಕೊಳ್ಳುವುದೇ ಹಾಗೆ. ನಮ್ಮ ಮೌನದಲ್ಲೇ, ನಮ್ಮ ಅಂತರಂಗದಲ್ಲೇ ಇದರಿಂದ ಪಾರಾಗುವುದು ಹೇಗೆ?

ಗಾಂಧೀಜಿಗೆ ಬಹಳ ಪ್ರಿಯವಾಗಿದ್ದ ಉಪನಿಷತ್ತೊಂದು ಈ ಮಾತಿನಿಂದಲೇ ಶುರುವಾಗುತ್ತದೆ.

ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತಾಮೃಹತ್
ತೇನ ತ್ಯಕ್ತೇನ ಭುಂಜೀತಾಃ ಮಾಗೃಧ ಕಸ್ಯಸಿದ್ಧನಮ್

-ಇಡೀ ವಿಶ್ವ ಈಶ್ವರನಿಗೆ ಸೇರಿದ್ದು. ಅವನ ದಯೆಯಿಂದ ನಾವಿದನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಯಾರ ಹಣಕ್ಕೂ ಆಸೆ ಪಡಬೇಡ. ಇದನ್ನು ಹೇಳುತ್ತಿರುವಾಗಲೇ ಇದು ಹಾಸ್ಯಸ್ಪದ ಎಂದು ತಿಳಿಯುವ ಕಾಲದಲ್ಲಿ ನಾವಿದ್ದೇವೆ. ಇಡೀ ಪ್ರಪಂಚ ಏಕರೂಪಿಯಾದ್ದು. ಸರ್ವರನ್ನೂ ಸರ್ವರೂ ಪ್ರೀತಿಸುವುದರಿಂದ, ಅದಾಗದಿದ್ದರೆ ಸರ್ವರ ಹಿತವನ್ನಾದರೂ ಬಯಸುವುದರಿಂದ, ಕೊನೆಯ ಪಕ್ಷ ಅಹಿತಕಾರಿಯಾಗಿಯಾದರೂ ನಡೆದುಕೊಳ್ಳದ್ದರಿಂದ ಈ ಉಪನಿಷತ್ತಿಗೆ ಹತ್ತಿರವಾಗಿ ನಾವು ಬದುಕಬಹುದೆನ್ನುವುದು ಗಾಂಧೀಜಿಯವರ ಚಿಂತನೆಯಾಗಿತ್ತು. ಟ್ಯಾಗೋರರು ಇದನ್ನು Unity of Man ಎನ್ನುತ್ತಾರೆ.

ಅಣ್ಣಾ ಹಜಾರೆ, ಬಾಬಾ ರಾಮ್‌ದೇವ್ ಇಬ್ಬರೂ ಭ್ರಷ್ಟತೆಯ ವಿರುದ್ಧ ಮಾತಾಡುತ್ತಿದ್ದಾರೆ. ಅಣ್ಣಾ ಅವರು ಮೈತುಂಬಾ ಹೊದ್ದ ಖಾದಿಯಲ್ಲಿ; ಆದರೆ ರಾಮದೇವ್ ಅವರು ಅರೆಬೆತ್ತಲೆಯಾದ ಕಾವಿಯಲ್ಲಿ. ಹಜಾರೆಯವರಲ್ಲಿ ಸರಳತೆ ಇದೆ. ತಾನೇ ಭ್ರಷ್ಟತೆಯಿಂದ ಮುಕ್ತನಾಗಬೇಕೆಂಬ ಹಂಬಲವಿದ್ದಂತೆ ತೋರುತ್ತದೆ. ಕಿಂಚಿತ್ ಸುಖದಲ್ಲಿ ಕಾಲ ಕಳೆಯುವ ದೃಢತೆಯನ್ನೂ ಅವರು ಸಂಪಾದಿಸಿದ್ದಾರೆ. ಅವರ ಅಂತಃಕರಣ ನಿರ್ಮಲವೆನಿಸಿದರೂ ವಿಚಾರಶಕ್ತಿ ಗಾಂಧಿಯವರದಷ್ಟು ಆಳವೆಂದು ಅನ್ನಿಸುವುದಿಲ್ಲ. ಬಾಬಾ ರಾಮ್‌ದೇವ್ ಮಾತ್ರ ಮೀಡಿಯಾಗಳೇ ಸೃಷ್ಟಿಸಿದ ಮನುಷ್ಯ ಎನ್ನಿಸುತ್ತದೆ. ಅವರ ಮಾತು, ಅವರ ಧ್ವನಿ, ಅವರ ಚೀತ್ಕಾರ, ಅವರ ಅಹಂಕಾರ, ಅವರು ತಮ್ಮ ಗುಂಪನ್ನು ಬೆಳೆಸಿಕೊಳ್ಳುತ್ತಾ ಹೋಗುವ ಉಪಾಯಗಳು ಯಾವುದರಲ್ಲೂ ಮಾತು ಸಾಚಾ ಎಂದು ನಮಗನ್ನಿಸುವುದಿಲ್ಲ.

ಇನ್ನೊಂದು ದಿಗಿಲು ನನಗಿದೆ. ನಾವು ಈ ಹೊಸ ಕಾಲದಲ್ಲಿ ಕ್ರಮೇಣ ರೂಢಿಸಿಕೊಂಡ ವೈಜ್ಞಾನಿಕವಾದ ವೈಚಾರಿಕತೆಯನ್ನು ಸಂಪೂರ್ಣ ಅಲ್ಲಗಳೆಯುವ ಕಂದಾಚಾರವನ್ನು ನಮ್ಮಲ್ಲಿ ಹಲವರಿಗೆ ಬಲುಹಿತ ಎನಿಸುವಂತೆ ಅವರು ಬಿತ್ತರಿಸುತ್ತಾರೆ. ಹೀಗೆ ನಾವು ದಾಟಲೇಬೇಕಾಗಿ ದಾಟಿ ಬಂದ ಅಂಧಶ್ರದ್ಧೆಗಳ ಸಹಾಯವಿಲ್ಲದೆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಇಡೀ ಕಾಲದ ಚಲನೆಯನ್ನೇ ಗಾಂಧಿಯಿಂದ, ಬಸವನಿಂದ, ಬುದ್ಧನಿಂದ, ಅಲ್ಲಮನಿಂದ ನಾವು ಕಲಿತಿದ್ದನ್ನು ಬಾಬಾ ರಾಮ್‌ದೇವ್ ಅವರು ಹಿಮ್ಮೆಟ್ಟಿಸುವ ಮನುಷ್ಯನಂತೆ ಕಾಣುತ್ತಾರೆ. ಇದನ್ನೂ ಕೂಡ ಅವರು ಲಾಭದ ದೃಷ್ಟಿಯಿಲ್ಲದೆ ಮಾಡುತ್ತಿಲ್ಲ.

ಇಂಥ ಒಬ್ಬ ಮನುಷ್ಯನನ್ನು ನಮ್ಮ ಘನ ಸರಕಾರ ಮರ್ಯಾದೆಯಿಂದ ಬರಮಾಡಿಕೊಂಡು, ಖಾಸಗಿಯಾದ ಒಳ ಒಪ್ಪಂದವನ್ನು ಮಾಡಿಕೊಂಡಿತು. ಅಣ್ಣಾ ಹಜಾರೆಯವರು ತಮ್ಮ ಸಾತ್ವಿಕತೆಯಲ್ಲಿ ಹುಟ್ಟಿಸಿದ್ದ ಒಂದು ಹೊಸ ಕನಸನ್ನು ಭಂಗಗೊಳಿಸಲೆಂದೇ ಯುಪಿಎ ಸರಕಾರ ಹೀಗೆ ಮಾಡಿದೆ ಎನ್ನುವುದು ನನ್ನ ಅನುಮಾನ. ಇದು ಒಡೆದು ಆಳುವ ನೀತಿ. ಈಗ ನಮ್ಮ ಪಾಡು ನೋಡಿ. ಇದ್ದಕ್ಕಿದ್ದಂತೆ ನಡುರಾತ್ರಿಯಲ್ಲಿ, ಶಾಂತರಾಗಿದ್ದ ಬಾಬಾ ಬೆಂಬಲಿಗರ ಮೇಲೆ ದಾಳಿ ಮಾಡಿ, ಅನಗತ್ಯ ಹಿಂಸೆಯನ್ನು ಸೃಷ್ಟಿಸಿ ಎಮರ್ಜೆನ್ಸಿ ಕಾಲವನ್ನು ನೆನಪು ಮಾಡುವಂತಹ ಯುಪಿಎ ಕ್ರಮ ಬಾಬಾ ರಾಮ್‌ದೇವ್ ಅವರನ್ನು ಟೀಕಿಸುವುದಕ್ಕೆ ಇದು ಸರಿಯಾದ ಕಾಲವಲ್ಲವೇನೋ ಎಂಬ ಆತಂಕವನ್ನು ನಮ್ಮಲ್ಲಿ ಹುಟ್ಟಿಸುತ್ತದೆ. ಆದರೆ ಮಾತಿನಲ್ಲಿದು ಸಾಚಾ, ಇದು ಮೋಸ ಎಂದು ತಿಳಿಯದೆ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಲಾರೆವು.

ಇನ್ನೂ ಮುಖ್ಯವಾದ ಸಂಗತಿಯೊಂದಿದೆ. ನಾವು ಅಭಿವೃದ್ಧಿಯ ದೃಷ್ಟಿಯಿಂದ ಸ್ಲಮ್ಮಿನಲ್ಲಿರುವ ಜನರನ್ನು ಅಟ್ಟಿ, ಅನಾಥರನ್ನಾಗಿ ಮಾಡುತ್ತಿದ್ದೇವೆ. ಮೂಲ ನಿವಾಸಿಗಳನ್ನೂ ಅವರಿರುವ ಪರ್ವತ ಪ್ರದೇಶಗಳಿಂದ ಅಟ್ಟಿ ಅಲ್ಲಿ ಗಣಿಗಾರಿಕೆ ಶುರು ಮಾಡುತ್ತಿದ್ದೇವೆ. ಈ ಕಾರ್ಪೊರೇಟ್ ದೌರ್ಜನ್ಯದ ವಿರುದ್ಧ ಹೋರಾಡುವ ಮೇಧಾ ಪಾಟ್ಕರ್ ನಮ್ಮ ಯಾವ ಟಿ.ವಿ. ಚಾನೆಲ್‌ಗಳಿಗೂ ಒಂದು ದೃಶ್ಯವಲ್ಲ. ಆದರೆ ಇಡೀ ಮೈಗೆ ಖಾದಿಯನ್ನು ತೊಟ್ಟ ಸಾತ್ವಿಕ ಅಣ್ಣಾ ಹಜಾರೆಗಿಂತ ತಾಮಸಿಕವಾದ ಒಳ ಒಪ್ಪಂದಗಳನ್ನು ಮಾಡಿಕೊಳ್ಳುವ ಈ ಅರೆಬೆತ್ತಲೆ ಕಾವಿಧಾರಿ ನಮ್ಮ ಮಾಧ್ಯಮಗಳಿಗೆ ಹೆಚ್ಚು ಆಕರ್ಷಕ. ನಾನು ಹಿಂದೆ ಉಪಯೋಗಿಸಿದ ಒಂದು ಮಾತಿನಂತೆ ನಾವಿರುವುದು ಮಾತು ಸೋತ ಭಾರತದಲ್ಲಿ.

ನಿಜದ ಮಾತನ್ನು ಹುಡುಕಲು ತಮ್ಮ ಪಾಡಿಗೆ ತಾವು ಬದುಕುತ್ತಿದ್ದ ಅರಣ್ಯವಾಸಿಗಳಾದ ಗಿರಿಜನರು, ಸ್ಲಮ್ಮಿನಲ್ಲಿ ಬದುಕುವ ಅನಾಥರು, ಎಷ್ಟೋ ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರನ್ನು ಈಗಲೂ ತುಚ್ಛವಾಗಿ ನೋಡುತ್ತಿರುವ ವಿದ್ಯಮಾನಗಳೂ ಭ್ರಷ್ಟಾಚಾರವೂ ಒಂದಕ್ಕೊಂದು ಸಂಬಂಧವಿರುವ ಸಂಗತಿಗಳಂತೆ ನಮಗೆ ತೋರಿದಾಗ ಮಾತ್ರ ಭ್ರಷ್ಟಾಚಾರದ ವಿರುದ್ಧದ ಹೋರಾಟ ಸಾರ್ಥಕವಾದೀತು. ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ತಯಾರಾಗಬಹುದಾದ ಜನ ಲೋಕಪಾಲ ವಿಧೇಯಕ ಇದಕ್ಕೊಂದು ಸೂಚನಾ ಪಠ್ಯವೇ ಹೊರತು ಅದು ಮಂಜೂರಾದಾಗ ಭ್ರಷ್ಟಾಚಾರ ನಿಲ್ಲುತ್ತದೆ ಎಂಬ ಹಜಾರೆ ಅವರ ಕನಸನ್ನೂ ನಾವು ಪ್ರಶ್ನಿಸಬೇಕು. ಆದರೆ ಮೊದಲು ವಿಧೇಯಕ ಆಗಬೇಕು. ಸತತವಾಗಿ ಉಳಿಯುವ ಕೆಲಸವೆಂದರೆ ನಮ್ಮ ಮನಸ್ಸಿನಲ್ಲೇ ಭ್ರಷ್ಟತೆಯಿಂದ ಮುಕ್ತವಾಗುವುದು ಹೇಗೆ ಎಂಬ ಗಾಂಧಿಯಂಥವರ ಒಳನೋಟಗಳು ನಮಗೆ ಅಗತ್ಯವಾಗಬೇಕು.

ಎಮರ್ಜೆನ್ಸಿಯನ್ನು ಜಯಪ್ರಕಾಶ ನಾರಾಯಣರು ತಮ್ಮ ಸಾತ್ವಿಕ ಹಿಂಬಾಲಕರ ಮುಖಾಂತರ ವಿರೋಧಿಸಲು ಆಗಲಿಲ್ಲ. ಅವರು ಸಂಘ ಪರಿವಾರವನ್ನು ಬೆನ್ನಿಗೆ ಇಟ್ಟುಕೊಂಡು ಹೋರಾಡಬೇಕಾಯಿತು. ಅಣ್ಣಾ ಹಜಾರೆ ಬಳಗವೂ ಹೀಗೆಯೇ ಬಾಬಾ ರಾಮ್‌ದೇವ್‌ರನ್ನು ಬೆನ್ನಿಗೆ ಇಟ್ಟುಕೊಂಡರೆ ಅದು ಅಪಾಯವಾದೀತು. ಹಾಗೇನಾದರೂ ಆದರೆ ಅದು ಇಡೀ ನಾಗರಿಕತೆಗೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಜನರಿಂದ ಚುನಾಯಿತವಾದ ಒಂದು ಸರಕಾರವು ತಾನೇ ಮಾಡಬೇಕಾದ ಒಂದು ಕೆಲಸವನ್ನು ಜನಾಂದೋಲನಕ್ಕೆ ಬಾಡಿಗೆ ಕೊಡುವ ಸ್ಥಿತಿಗೆ ಬಂದಿರುವುದು ಒಂದು ದುರಂತ.

—-
ಪ್ರ
: ವಿಜಯ ಕರ್ನಾಟಕ, ೧೧.
ನಿರೂಪಣೆ: ಬಿ.ಎಸ್. ಜಯಪ್ರಕಾಶ ನಾರಾಯಣ