ಮೃಗ ನನ್ನಿಂದ ಓದಿಸಿಕೊಳ್ಳುವಾಗ ನನಗಾದ ಅನುಭವವನ್ನು ಮೊದಲು ಒಟ್ಟಾರೆಯಾಗಿ ಹೇಳುವೆ. ಪ್ರಾರಂಭದಲ್ಲಿ ಓದುವುದು ತೊಡಕಾಯಿತು. ತೊಡಕೆನ್ನಿಸಿದರೂ ಶ್ರೀ ವೆಂಕಟಸುಬ್ಬರಾಯರು ತಮ್ಮ ಪಾತ್ರಗಳಿಗೆ ಒದಗಿಸುವ ವೈವಿಧ್ಯಮಯವಾದ ಭಾಷೆ ಇಷ್ಟವಾಯಿತು. ಮುಂದೆ ಓದುತ್ತಾ ಹೋದಂತೆ ಕಥೆ ಪಡೆದುಕೊಳ್ಳುವ ಅನಿರೀಕ್ಷಿತವಾದ ವಿಸ್ತಾರ ಕುತೂಹಲ ಹುಟ್ಟಿಸಿತು. ಕಥೆಯ ನೇಯ್ಗೆಯಲ್ಲಿ ಕಾಲಗಳೂ, ಹಳ್ಳಿಗಳೂ, ಪಟ್ಟಣಗಳೂ ಹೆಣೆದುಕೊಂಡವು. ಕಥೆ ಮುಂದುವರೆದಂತೆ ಕಥೆಗಾರನ ವೈಚಾರಿಕತೆಗೆ ಎದುರಾಗುವಂತೆ ನನ್ನ ವೈಚಾರಿಕತೆಯನ್ನು ಪ್ರತ್ಯೇಕವಾಗಿ ಕಥೆ ಕೆರಳಿಸಿತು. ಕಥೆ ಮುಗಿದಂತೆ ಈ ವೈಚಾರಿಕತೆ ಒಂದು ವಾಗ್ವಾದದ ಆಹ್ವಾನವಾಗಿ ಮನಸ್ಸಿನಲ್ಲಿ ಉಳಿಯಿತು.

ಕೆಲವು ಉದಾಹರಣೆಗಳ ಮೂಲಕ ಮೇಲಿನ ಅನ್ನಿಸಿಕೆಗಳಿಗೆ ಸ್ಪಷ್ಟತೆ ನೀಡಲು ಪ್ರಯತ್ನಿಸುವೆ. ಹಳ್ಳಿಯ ಕನ್ನಡದೊಳಗೆ ಪಟ್ಟಣದ ನೀಲಾಂಬ ಗತಿಗೆಟ್ಟವಳಾಗಿದ್ದರೂ ಧಿಮಾಕಿನ ತೋರಿಕೆಯ ಸೊಸೆಯಾಗಿ ಬರುತ್ತಾಳೆ. ಅವಳ ಇಂಗ್ಲಿಷ್ ಬೆರೆತ ಕನ್ನಡ ಅವಳ ಸೊಗಸುಗಾರಿಕೆಯಾಗಿ, ಕೆಲವೊಮ್ಮೆ ತನ್ನನ್ನು ಸ್ಥಾಪಿಸಿಕೊಳ್ಳುವ ಸೊಕ್ಕಾಗಿ ಹಲವೊಮ್ಮೆ ಅವಳಿಗೆ ಗೋಚರವಾಗದ ಕಾಮಿಕ್ ವರ್ತನೆಯಾಗಿ ಮೂಡುತ್ತದೆ. ಪಾತ್ರದ ಒಂದು ಗುಣವಾಗಿ ಕಾಣುವ ಈ ಭಾಷಾ ಪ್ರಯೋಗ ಓದುಗನನ್ನು ಸೆಳೆಯುವ ರಂಜನೆಯ ಉದ್ದೇಶವಾಗಿ ಕಂಡಾಗ ಮಾತ್ರ ಅತಿಯೆನ್ನಿಸುತ್ತದೆ. ಇಂತಹ ಜನಪ್ರಿಯ ಕಾದಂಬರಿಯ ಆಶಯಗಳು ಉದ್ದಕ್ಕೂ ಕೆಲಸ ಮಾಡಿವೆ.

ಆದರೆ ಮುಂದೆ ತಾಯಿಯಾಗಲು ಬಯಸುವ ಸಾಮಾನ್ಯ ಜಾಣ ಹೆಣ್ಣಾಗಿಯೂ ಇದೇ ಕಾಮಿಕ್ ನೀಲಾಂಬ ಬೆಳೆಯುತ್ತಾಳೆ. ಹೀಗೆ ಅವಳನ್ನು ಬೆಳೆಯಲು ಲೇಖಕ ಬಿಡುವುದು ಕಾದಂಬರಿಯ ಒಂದು ಗುಣವೂ ಹೌದು. ಈ ಬಗೆಯ ಗುಣದೋಷಗಳು ಹಲವು ಪಾತ್ರ ರಚನೆಯಲ್ಲಿ ಬೆರೆತುಕೊಂಡಿವೆ. ಇದಕ್ಕೆ ಪ್ರಾಯಶಃ ಕಾರಣ ಲೇಖಕನಿಗಿರುವ ಜನಪ್ರಿಯವಾಗಬಲ್ಲ ನಿವೇದನಾ ಶೈಲಿ ಮತ್ತು ಕಥನರಸಿಕತೆ; ಜೊತೆಯಲ್ಲೇ ಇದಕ್ಕೆ ವಿರುದ್ಧವಾದ ಶೋಧಕ ಪ್ರಜ್ಞೆ.

ಇನ್ನೊಂದು ಉದಾಹರಣೆ: ಕಾದಂಬರಿಯ ಎಲ್ಲ ಹೆಣ್ಣುಗಳಲ್ಲೂ ಒಂದು ಸುಪ್ತವಾದ ಶಕ್ತಿ ಇದೆ ಎನ್ನಿಸುತ್ತದೆ. ಪಟೇಲ್ ಸಿದ್ದಬಸಪ್ಪನ ಕಣ್ಣಿಗೆ ಬಿದ್ದ ನಾಗರತ್ನಮ್ಮನ ಕಡುಕೋಪ ಹಾಗೂ ಅವಳಲ್ಲಿ ಗುಪ್ತವಾಗಿ ಇರುವ ಪಟೇಲನ ಪೌರುಷತ್ವದ ಆಕರ್ಷಣೆಗಳನ್ನು, ಮಳೆಯಲ್ಲೂ, ಯಾರೂ ಕಾಣದ ರಾತ್ರಿಯಲ್ಲೂ, ಅವಳು ಉಟ್ಟುಕೊಳ್ಳುವ ರೇಷ್ಮೆ ಸೀರೆಯಲ್ಲಿ, ಅವಳು ಶೃಂಗರಿಸಿಕೊಂಡು ಪಡೆಯುವ ಹೊಸ ನೋಟದಲ್ಲಿ ಲೇಖಕ ಗುರುತಿಸುತ್ತಾರೆ. ಹೀಗೆ ಗುರುತಿಸುವ ಸಂದರ್ಭ ಕೂಡ ಮನೋಜ್ಞವಾಗಿದೆ.

ತನ್ನನ್ನು ಕಾಮಿಸಿದ ಪಟೇಲ್ ಸಿದ್ಧಬಸಪ್ಪ ಲಕ್ವ ಹೊಡೆದು ಮಲಗಿದ್ದಾನೆ. ಮನೆಯಲ್ಲಿ ವೈದ್ಯರೂ ಆದ ನಾಗರತ್ನಮ್ಮನ ಗಂಡ ಜೋಯಿಸರು ಇಲ್ಲ. ಈಗ ನಾಗರತ್ನಮ್ಮನೇ ಸುಡುವ ಒಗ್ಗರಣೆಯನ್ನು ಎರಚಿ ಅವಮಾನಿಸಿ ಅಟ್ಟಿದ ಪಟೇಲನಿಗೆ ಔಷಧಿ ಕೊಡಬೇಕು. ಜೊತೆಗೇ ಜಗುಲಿ ಹತ್ತಿ ಕುಳಿತಿರುವ ದರವೇಸಿ ಯುವಕ ಯಾರಿರಬಹುದು ಎಂದು ಅವಳಲ್ಲಿರುವ ತಾಯಿ ಚಿಂತಿಸುತ್ತಿದ್ದಾಳೆ.

ಮೇಲಿನದನ್ನು ತನ್ಮಯವಾಗಿ ಓದುತ್ತಿದ್ದಂತೆ ನನಗೆ ಒದಗಿದ ವಿಘ್ನವನ್ನೂ ಹೇಳಲೇಬೇಕು. ನಾಗರತ್ನಮ್ಮ ತನ್ನೊಳಗೆ ತೋಡಿಕೊಳ್ಳುವ ವಿಚಾರಗಳು-ಮುಂದೆ ಹಲವು ಪಾತ್ರಗಳ ವಿಚಾರಗಳೂ ಕೂಡ-ಆ ಪಾತ್ರದವು ಎನ್ನಿಸುವುದಿಲ್ಲ; ಲೇಖಕರವು ಎನ್ನಿಸುತ್ತದೆ. ಹೀಗೊಂದು ಅಡ್ಡ ಮಾತನ್ನು ಆಡಬೇಕೆನ್ನಿಸಿದರೂ, ಓದುಗರಿಗೆ ಪ್ರಿಯವಾಗಲೆಂದೇ ಬರೆದಂತಿರುವ, ನನಗೆ ಮೆಚ್ಚುಗೆಯಾದ ಇಲ್ಲಿನ ಕೆಲವು ಮಾತುಗಳನ್ನು ಎತ್ತಿ ತೋರಿಸಬೇಕು. ನಾಗರತ್ನಮ್ಮ ಮಾಡಿಕೊಳ್ಳುವ ಶೃಂಗಾರದ ವರ್ಣನೆ ನೋಡಿ. ಇದೊಂದು ಕವಿತೆಯಂತಿದೆ.

‘ನಾಗರತ್ನಮ್ಮ ಕಬ್ಬಿಣದ ಪೆಟ್ಟಿಗೆ ತೆರೆದರು. ನುಸಿ ಗುಳಿಗೆ ವಾಸನೆ ಬಡಿಯಿತು. ಅಂಗೈ ಅಗಲ ಜರಿ ಅಂಚಿನ ಕೆಂಪು ರೇಷ್ಮೆ ಸೀರೆ ಕಣ್ಣು ಕುಕ್ಕಿತು. ಸೀರೆ, ಸೀರೆಯ ಜೊತೆಯಲ್ಲೇ ಇದ್ದ ರವಿಕೆ ತೆಗೆದರು. ಲಾಟೀನು ಹಿಡಿದು ಬಚ್ಚಲಮನೆಗೆ ಹೋದರು. ಗಂಡನೇ ಖುದ್ದಾಗಿ ಆಸ್ಥೆಯಿಂದ ಕಡ್ಲೆಬೇಳೆ, ಹೆಸರುಬೇಳೆ, ಜೀರಿಗೆಯನ್ನು ಹಾಲಿನಲ್ಲಿ ನೆನೆಸಿ, ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿ ಚಿಂತಾಮಣಿ ಡಬ್ಬಿಯಲ್ಲಿ ತುಂಬಿಕೊಟ್ಟಿದ್ದ ಪುಡಯನ್ನು ಹದವಾಗಿ ಮುಖಕ್ಕೆ ಲೇಪಿಸಿದರು. ಲೇಪನ ಒಣಗಿ ಮುಖದ ಚರ್ಮ ಬಿಗಿದುಕೊಳ್ಳುವವರೆಗೂ, ತಾವು ಕಲಿತಿದ್ದ ದೇವರನಾಮಗಳನ್ನು ಗುನುಗಿದರು. ಮುಖ ತೊಳೆದು ಹಣೆಯ ಮೇಲೆ ದುಂಡಗೆ ಕಾಸಿನಗಲದ ಕುಂಕುಮ ಇಟ್ಟರು. ನಂಜಬಟ್ಟಲ ಹೂವಿನಿಂದ ತಾವೇ ತಯಾರಿಸಿ ಬೆಳ್ಳಿಯ ಪುಟ್ಟ ಭರಣಿಯಲ್ಲಿ ತುಂಬಿದ್ದ ಕಾಡಿಗೆಯ ಮೇಲೆ ತೆಳುವಾದ ಹಂಚಿಕಡ್ಡಿಯ ಮೊನಚು ತುದಿಯನ್ನು ಹದವಾಗಿ ಹೊರಳಿಸಿ ಕೆಳದುಟಿ, ಮೇಲ್ದುಟಿಗಳನ್ನು ಒತ್ತಿ ಹಿಡಿದು ಮುಖ ಉಬ್ಬಿಸಿ ರೆಪ್ಪೆಗಳ ಮೇಲೆ ಹಂಚಿಕಡ್ಡಿಯನ್ನು ನವಿರಾಗಿ ಆಡಿಸಿದರು. ಕೆಂಪು ರೇಷ್ಮೆ ಸೀರೆ ಉಟ್ಟು, ಕೆಂಪು ರವಿಕೆ ತೊಟ್ಟು, ಲಾಟೀನನ್ನು ಹಿಡಿದು ಕನ್ನಡಿಯ ಮುಂದೆ ನಿಂತರು.’

*

ಮೂರನೆಯ ಅಧ್ಯಾಯದಲ್ಲಿ ನಮಗೆ ಹಲವು ವಿವರಗಳಲ್ಲಿ ಎದುರಾಗುವುದು ಪಟೇಲನ ದಟ್ಟವಾದ ಪಾತ್ರ. ಕಥೆಯ ಕೇಂದ್ರ ಅವನು. ಲೇಖಕನ ವೈಚಾರಿಕತೆಗೆ ಎದುರಾಗುವ ಪಾತ್ರ ಅವನದು. ತಾನುಂಟೋ ಪ್ರಪಂಚ ಉಂಟೋ ಎನ್ನುವಂತೆ ವರ್ತಿಸುವ ಈ ಪಟೇಲನನ್ನು ಸುಲಭವಾದ ನೈತಿಕ ಅಳತೆಗೋಲಿನಿಂದ ಅಳೆಯಲಾಗದು ಎಂದು ಲೇಖಕ ತಿಳಿಯುವುದರಿಂದಲೇ ಪಟೇಲ ನಾವು ಕಾಣುವುದಕ್ಕಿಂತಲೂ ಮಿಗಿಲಾಗಿ ಬೆಳೆಯುತ್ತಾನೆ. ಅವನನ್ನು ನಾವು ಅವನ ಮೃಗೀಯ ಕಾಮುಕತೆಯಲ್ಲೂ, ಅವನ ದಾರುಣವಾದ ನೋವಿನಲ್ಲೂ, ಅವನ ದರ್ಪದಲ್ಲೂ, ಅವನ ಸಣ್ಣತನದಲ್ಲೂ, ಇವನ್ನೆಲ್ಲ ಮೀರಿದ ಅವನ ಅಂತಿಮ ಕಾಣ್ಕೆಯಲ್ಲೂ ನೋಡುತ್ತೇವೆ. ಅಂದರೆ ಕಾಣುವಷ್ಟೆ ಅವನು-ಎಂದು ಹೇಳಲಾರದಂತೆ ಲೇಖಕ ಪಟೇಲನಿಗೆ ಎದುರಾಗುತ್ತಾರೆ. ಹೀಗೆ ಎದುರಾಗುವುದರಲ್ಲಿ ವೆಂಕಟಸುಬ್ಬರಾವ್ ಕಥನಕಾರ ಮಾತ್ರವಲ್ಲ ಕವಿಯೂ ಹೌದು ಎಂದು ನಮಗನ್ನಿಸುತ್ತದೆ. ಪಟೇಲ ಮತ್ತು ಅವನ ಸೊಸೆ ಸಂಬಂಧದ ಬಗ್ಗೆ ಗಾಢವಾದ ನೈತಿಕ ಭಾವನೆಯನ್ನು ನಮ್ಮಲ್ಲಿ ಹುಟ್ಟಿಸಿ, ಕೇವಲ ಸಾಮಾಜಿಕವಾದ ನಮ್ಮ ತೀರ್ಪುಗಳಿಂದ ನಮ್ಮನ್ನು ಮುಕ್ತಗೊಳಿಸುವುದು ಕಥೆ ಹೇಳುವ ಕೌಶಲ ಮಾತ್ರವಲ್ಲ; ಹೇಳುವುದರ ಜೊತೆಗೇ ತಿಳಿಯುವ ಹೊಂಚಿನ ಲೇಖಕನ ಕಾವ್ಯ ಶಕ್ತಿ ಕೂಡ.

ಹೆಸರಿಗೆ ಮಹಾದೇವಿಯ ಗಂಡನಾದ ಶಿವಯೋಗಿ, ಮಹಾದೇವಿ ಬಯಸುವ ಜಗನ್ನಾಥ, ಅವನ ಸಹೋದರ ವಿಶ್ವೇಶ್ವರ ಈ ಮೂವರೂ ಪ್ರಜ್ಞಾವಂತ ಪಾತ್ರಗಳು. ಜಗನ್ನಾಥನನ್ನು ಹೊರತಾಗಿ ಉಳಿದ ಇಬ್ಬರೂ ಜೀವ ಹೇಡಿಗಳು. ಹೀಗೆ ಅವರನ್ನು ಕಾಣುವ ಲೇಖಕ ಜಗನ್ನಾಥನನ್ನು ಅರ್ಥಪೂರ್ಣವಾದ ಆಧುನಿಕನೆಂದು ತಿಳಿಯಲು ಬಯಸುತ್ತಾರೆ. ಆ ಬಗ್ಗೆ ನನಗೆ ಅನುಮಾನವಿದೆ.

ಕಾದಂಬರಿಯಲ್ಲಿ ಮುಖ್ಯವಾದದ್ದು ಎರಡು:

ಒಂದು, ಪಟೇಲರಿಗೂ ಜೋಯಿಸರಿಗೂ ನಡುವಿನ ಸಂಬಂಧ. ಪರಮ ಜೀವನ ಪ್ರೇಮಿಯೂ, ಪರಮ ಕಾಮುಕನೂ ಆದ ಪಟೇಲನ ತುಡಿಯುವ ಚೈತನ್ಯದ ದೇಹ ಲಕ್ವ ಹೊಡೆದದ್ದೇ ಕ್ರಮೇಣ ನಾರತೊಡಗುತ್ತದೆ. ಆದರೆ ಜೋಯಿಸರು ಎಂದೂ ಸನ್ನಡತೆಯ ನೀತಿಯನ್ನಾಗಲೀ ರತಿ ವಿವೇಕವನ್ನಾಗಲೀ ಉಲ್ಲಂಘಿಸಿದವರಲ್ಲ.

ಎರಡು, ಮಕ್ಕಳು ಮನೆ ಬಿಟ್ಟು ಹೋದರೂ ಗೃಹಸ್ಥ ಧರ್ಮದಲ್ಲಿ ಬದುಕುವ ಜೋಯಿಸರು ಪಟೇಲನಿಗೆ ಹೋಲಿಸಿದರೆ ಮಾತ್ರ ಸಪ್ಪೆಯಾಗುವ ಪಾತ್ರ. ಜೊತೆಗೇ ಲೇಖಕರು ಇಷ್ಟಪಡುವ ಪಾತ್ರವೂ ಹೌದು. ಆದರೆ ಪಟೇಲ ಕಾಯಿಲೆಯಲ್ಲಿ ನಾರುವಾಗ ತಮ್ಮ ವೈರವನ್ನು ಮರೆತು ಪಟೇಲರಿಗೆ ಕಾಯಕಲ್ಪ ಮಾಡುವುದು ಪಟೇಲರ ಹೊಳಪಿಲ್ಲದ ಜೋಯಿಸರು ಎಂಬುದು ಗಮನಾರ್ಹ. ಈ ಭಾಗದ ವಿವರಗಳು ಕಾವ್ಯದಲ್ಲಿ ನುಡಿಯುವ ವಿವರಗಳಂತಿವೆ. ಪಟೇಲರು ಸಾಯುತ್ತ, ಹಳಸುತ್ತ, ಮಲಗಿರುವ ವರ್ಣನೆ ನೋಡಿ:

‘….ಸಗಣಿ ನೆಲದ ಮೇಲೆ ಹರಿಯುತ್ತಿದ್ದ ಎಮ್ಮೆ ಹುಳು, ಕೆಂಪಿರುವೆ, ಮೈಮುತ್ತುತ್ತಿದ್ದ ವಾಷ್ಣೆ ನೊಣ, ಗುಂಯ್‌ಗುಟ್ಟುವ ಸೊಳ್ಳೆ, ಜೀರುಂಡೆ, ಮಂದವಾಗಿ ಉರಿಯುತ್ತಿದ್ದ ಲಾಟೀನಿನೊಳಗೆ ಪ್ರಯಾಸದಿಂದ ಪ್ರವೇಶಿಸಿ, ಅಲ್ಲೇ ಕರುಕಲಾಗುತ್ತಿದ್ದ, ಚಿಮಣಿಗೆ ಅಂಟಿ ದ್ರವವಾಗುತ್ತಿದ್ದ ರೆಕ್ಕೆ ಇರುವೆ. ಕ್ಷಣ ಕ್ಷಣಕ್ಕೂ ಒಡೆಯುತ್ತಾ, ಕೀವು ಕಾರುತ್ತಾ, ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಿದ್ದ ಬೆನ್ನ ಮೇಲಿನ ಬಾವುಗಳು, ಸೊಂಟ, ರುಂಡಿ, ತೊಡೆಸಂಧಿಗಳಲ್ಲಿ ನವೆಯೊಂದಿಗೆ ಅರಳುತ್ತಿದ್ದ ಗುಳ್ಳೆಗಳು, ಬಿಲದಿಂದ ಬಿಲಕ್ಕೆ, ದರಿಯಿಂದ ದರಿಗೆ ವೇಗವಾಗಿ ಸಾಗುತ್ತಿದ್ದ ಇಲಿ, ಹೆಗ್ಗಣಗಳು, ಮಾಡಿನ ಮೂಲೆಯಲ್ಲಿ ನಿರ್ಲಿಪ್ತವಾಗಿ ಬಲೆ ನೇಯುತ್ತಾ, ತಾವೇ ಅದರಲ್ಲಿ ಸಿಕ್ಕಿ ಚಡಪಡಿಸುತ್ತಿದ್ದ ಜೇಡಗಳು ಪಟೇಲರ ಮನಸ್ಸನ್ನು ತುಂಬುತ್ತಿದ್ದವು….’

ಹೀಗೆ ಹಳಸುತ್ತಿರುವಾಗಲೂ ಪಟೇಲರ ಪ್ರಾಣಶಕ್ತಿ ಹಿಮ್ಮೆಟ್ಟುವುದಿಲ್ಲ. ಮಗ ಶಿವಯೋಗಿಯ ಜೀವನ ವೈರಾಗ್ಯಕ್ಕೆ ಅಥವಾ ಹ್ಯಾಪತನಕ್ಕೆ ವಿರೋಧವಾದ ಶಕ್ತಿ ಇದು:

‘…. ಬಡ್ಡಿ ಮಗಂದು ಈ ಸಾವು ಅನ್ನಾದು ಕೋಳಿಕಾಲ್ನಲ್ಲಿ ನೆಲ ಕೆದ್ದೀ ಕೆದ್ದೀ ಕಾಳು ಉಡಕ್ದಂಗೆ, ಕರ್ಡಿ ಕಚ್ಗುಳಿ ಇಟ್ಟಂಗೆ, ಮರ್ಕುಟ್ಗ ಮರ ಕುಟಕ್ದಂಗೆ ಜೀವನವುಡುಕ್ತದಂತೆ. ಆದ್ರೆ ಜೀವ ಅನ್ನಾದು ಪ್ರಾಣಿಗಳು ಮೂಸಿ ಮೂಸಿ ಮಾಂಸ ಉಡುಕ್ದಂಗೆ ಗಂಡು ಎಣ್ಣಿನ ಮೈ ತಡಕ್ದಂಗೆ ನೆಲ ನೀರ್ನ ಈರ್ಕಂಡಂಗೆ, ಈರ್ಕತಾ ಈರ್ಕತಾ ಬಾವಿಯಾದಂಗೆ, ಸಮುದ್ರವಾದಂಗೆ, ಆಕಾಸವಾದಂಗೆ ಆಗಿ ಸಾವ್ನೇ ಜೀವನದಲ್ಲಿ ಲಂಗರಾಕ್ಸದಂತೆ…. ನಮ್ಮಪ್ಪ್ನೂ ನನ್ನಂಗೆ ಬಿದ್ಗಂಡಿದ್ನಲ್ಲ ಆಗ ಏಳ್ತಿದ್ದ….’

ಜೋಯಿಸರು ಮಾಡುವ ಔಷಧೋಪಚಾರದ ವರ್ಣನೆ ಆಕರ್ಷಕವಾಗಿದೆ. ಮೊದಲಲ್ಲಿ ಜನಪ್ರಿಯ ಕಾದಂಬರಿಕಾರರ ನಿವೇದನಾಕ್ರಮದಲ್ಲೇ ಕೊಂಚಕೊಂಚವಾಗಿ ಅರ್ಥ ತುಂಬಿಕೊಳ್ಳುತ್ತಾ ಕಥನ ಪ್ರಿಯನಲ್ಲದ ನನ್ನಂತಹ ಓದುಗನನ್ನು ದಣಿಸುತ್ತಾ ಕಥೆ ಬೆಳೆಯುತ್ತದೆ. ಆದರೆ ಕಾದಂಬರಿಯ ಕೊನೆಕೊನೆಯಲ್ಲಿ ಇದೇ ಕಥನ ಕವಿತೆಯ ಶಕ್ತಿ ಪಡೆದುಕೊಳ್ಳುತ್ತದೆ.

ಜಗನ್ನಾಥನು ಎದುರಾಗುವ ಈಶಾನ್ಯ ಪ್ರದೇಶದ ಎಂ.ಎಂ.ಎಲ್.ಎಫ್.ಎಂ.ಎಂ.ಸಿ.ಯು.ಗಳು ಪತ್ರಿಕಾ ವರದಿಗಳಂತೆ ತೆಳುವಾಗಿವೆ. ಆದರೆ ಅವನು ಸಂಧಿಸುವ ಭೃಗು, ಮನಾಮಿ ನಮಗೆ ನಿಜ ಪಾತ್ರಗಳಾಗುತ್ತಾರೆ. ಜಗನ್ನಾಥ ಮದುವೆಯಾಗುವ, ಆಮೇಲೆ ಬಿಡುವ ಮಾಯ ಬರಿ ಹೆಸರಾಗಿ ನಮ್ಮ ಪಾಲಿಗೆ ಉಳಿದುಬಿಡುತ್ತಾಳೆ. ಇವೆಲ್ಲವೂ ವೈಚಾರಿಕ ಅವಸರದಲ್ಲಿ ಲೇಖಕರು ಬಾಚಿಕೊಂಡ ಘಟನಾ ವಿಶೇಷಗಳಾಗಿ ಮಾತ್ರ ಉಳಿಯುತ್ತವೆ. ಕಾದಂಬರಿಯಲ್ಲಿ ಖುದ್ದಾಗಿ ಕಂಡಂತಿರುವ ವಿವರಗಳೆಲ್ಲವೂ ಸಾಂಸಾರಿಕ ಲೋಕದವು; ಕೃಷಿ ಜೀವನದವು. ಹಳ್ಳಿಯ ಬ್ರಾಹ್ಮಣ-ಶೂದ್ರ ಲೋಕದವು ಮತ್ತು ಈ ಎರಡು ಜಾತಿಗಳೂ ಫ್ಯೂಡಲ್ ವ್ಯವಸ್ಥೆಗೆ ಸೇರಿದವು. ಆದ್ದರಿಂದ ಹಳ್ಳಿಯನ್ನು ಆಳುವುದು ಇಲ್ಲಿ ಪಟೇಲನೇ-ಜೋಯಿಸನಲ್ಲ.

ಸಾಯದೆ ಉಳಿದ, ಪ್ರೇತ ಸದೃಶವಾಗಿ ನಮಗೆ ಎದುರಾಗುವ ಯೋಗಿಯನ್ನು ಜಗನ್ನಾಥ ಅಕಸ್ಮಾತ್ ಭೇಟಿಯಾಗಿ ತನ್ನ ಪಾಪಪ್ರಜ್ಞೆಯಿಂದ ಮುಕ್ತನಾದ ಮೇಲೆ ಗುಣಮುಖನಾಗುತ್ತಿರುವ ಪಟೇಲನನ್ನು ಹೋಗಿ ನೋಡುತ್ತಾನೆ. ಈ ಮುಖಾಮುಖಿಯಲ್ಲಿ ಎರಡು ಪಾತ್ರಗಳೂ ಬದಲಾದವರು. ಆದ್ದರಿಂದ ಈ ಭೇಟಿ ಗಾಢವಾದ ಅನುಭವದ ಅಪೇಕ್ಷೆಯನ್ನು ಓದುಗರಲ್ಲಿ ಉಂಟುಮಾಡುತ್ತದೆ. ಆದರೆ ನಮಗೆ ಗಟ್ಟಿಯಾಗಿ ದೊರಕುವುದು ಪಟೇಲನ ಹದಗೊಂಡ ಜೀವನದೃಷ್ಟಿಯ ಈ ಮಾತುಗಳು ಮಾತ್ರ.

‘….ನಿಜ್ವೇ…. ಆದ್ರೂ…. ಜೀವ್ಣದ ಸತ್ಯ ವಂದೇ ಅಲ್ವಾ?…. ಈರುಳ್ಳಿ ಸಿಪ್ಪೆ ಸುಲ್ದಂಗೆ…. ಗೆಡ್ಡೆ ಸುಲೀತಾ ಸುಲಿತಾ ಸಿಪ್ಪೆಯಾಯ್ದೆ. ಸಿಪ್ಪೆ ಬಳಸಿದ್ರೆ ರಸವಾಯ್ತದೆ. ಎಸೆದ್ರೆ ಕಸವಾಯ್ತದೆ. ಸುಲಿದ ಸಿಪ್ಪೆ ಮತ್ತೆ ಗೆಡ್ಡೆಯಾಯ್ತದಾ? ಜೀವ್ಣಾನೂ ಅಂಗೇ ಅಲ್ವ?…. ಇರ್ತದೆ ಆಯ್ದೆ, ಆಯ್ತಾ ಆಯ್ತಾ ವೋಯ್ತದೆ. ಅಂಗಂತ, ಸಿಪ್ಪೆ ಸುಲಿದ್ರೆ ಗೆಡ್ಡೆಕರಗೋಯ್ತದೆ ಅಂತ ಗೆಡ್ಡೇನೇ ಎಸೆಯಕ್ಕಾಯ್ತದಾ?…. ನೀ ಯಾಕೆ ಲಗ್ನವಾಗ್ಲಿಲ್ಲಾ?-ಪಟೇಲರು ಪಟ್ಟುಬಿಡದೆ ಪ್ರಶ್ನಿಸಿದರು….’

*

ಕನ್ನಡದಲ್ಲಿ ಈ ಕಾದಂಬರಿ ಇನ್ನೊಂದು ಯಯಾತಿ ಧೀಮಿನ ಕಥೆಯಾಗಿದೆ. ಅತಿ ಪ್ರಜ್ಞೆಯಿಂದ ದುರ್ಬಲರಾದ ಯುವಕರು, ಯುವಕರ ಜೀವಶಕ್ತಿಯನ್ನು ಹೀರಿ ಅವರ ಯೌವನವನ್ನು ದೋಚಿ ಸಬಲರಾಗುವ ಘಾಟಿ ವೃದ್ಧರು-ಇವರ ಮುಖಾಮುಖಿ ಸಾಂಸ್ಕೃತಿಕವಾಗಿಯೂ, ಮನಃಶಾಸ್ತ್ರೀಯವಾಗಿಯೂ ಮುಖ್ಯವಾದ ಅಚ್ಚ ಭಾರತೀಯ ಥೀಮು. ವೆಂಕಟಸುಬ್ಬರಾವ್ ಈ ಥೀಮಿನ ಸುತ್ತ ಫ್ಯೂಡಲ್ ಮನಸ್ಸಿನ ಪಟೇಲರಿಂದ ಹಿಡಿದು ಆಧುನಿಕ ಪ್ರಜ್ಞೆಯ ಜಗನ್ನಾಥನತನಕ ಕಥೆಯನ್ನು ನೇಯ್ದಿದ್ದಾರೆ. ಆದರೆ ಇಂತಹ ಮಹತ್ವಾಕಾಂಕ್ಷೆ ಬೀಸಿನ ಒಂದು ಕಾದಂಬರಿ ಸದೃಢವಾದ ಅಂಗಾಂಗ ಸಾಮರಸ್ಯದ ಕೃತಿಯಾಗಿರಬೇಕೆಂದು ನಾವು ಬಯಸುವುದು ಸಹಜ. ಆದರೆ ಕೃತಿ ಹೀಗಾಗಲಾರದೆ ಸೋಲುತ್ತದೆ.

ಸಾಹಿತ್ಯದ ಕೃತಿ ಪರೀಕ್ಷೆಯಲ್ಲಿ ಈ ಮುಂದಿನ ಪ್ರಶ್ನೆಗಳನ್ನು ಕೇಳುವುದು ಸಮರ್ಪಕವಲ್ಲ ಎನ್ನಿಸಿದರೂ, ಕೃತಿಯ ವಾಸ್ತವ ಶೈಲಿಯಿಂದಾಗಿ, ಕೆಲವು ಪ್ರಶ್ನೆಗಳನ್ನು ಉತ್ತರ ಬಯಸದೆ ಕೇಳಬೇಕೆನಿಸುತ್ತದೆ. ಯಾಕೆ ಯೋಗಿ ಮತ್ತು ವಿಶ್ವೇಶ್ವರರನ್ನು ಲೇಖಕರು ಸಾಯದಂತೆ ಉಳಿಸಿದರು? ಮಹಾದೇವಿ ತನ್ನ ಗಂಡನ ಅಪ್ಪನಿಗೇ ವಶವಾಗಲು ಕಾರಣ ಅವಳನ್ನು ಒತ್ತಾಯಕ್ಕೆ ಮದುವೆಯಾದ ತನ್ನ ಗಂಡ ಯೋಗಿ ಕಾಮಾತೀತನಾದ ವಿರಾಗಿಯಾಗಿರುವುದು. ಮುಂದೆ ಅವನು ಕಾಮವೆಂದರೆ ಹೇಸುವುದು ತನ್ನ ಅಪ್ಪನ ಕಾಮುಕತೆಯಿಂದಾಗಿ ಮತ್ತು ಮಹಾದೇವಿ ಅಪ್ಪನಿಗೆ ವಶವಾಗುವುದರಿಂದಾಗಿ. ಇದೊಂದು ವಿಶೇಷವಾದ, ರೋಗಗ್ರಸ್ತವಾದ ಮಾನಸಿಕ ಸ್ಥಿತಿಯೆಂದು ಲೇಖಕರು ಬರೆಯುವುದೋ? ಅಥವಾ ಅಂತಹ ಒಂದು ಮನೋಸ್ಥಿತಿಯನ್ನು ತಾತ್ವಿಕ ಮಹತ್ವದ ಪ್ರಶ್ನೆಯಾಗಿ ಗ್ರಹಿಸಬೇಕೆಂಬ ಕಾರಣಕ್ಕಾಗಿಯೋ? ನಮಗಿದು ಸ್ಪಷ್ಟವಾಗುವುದಿಲ್ಲ. ಜಗನ್ನಾಥನ ಜೀವನ ವಿಮುಖತೆಯೂ ಅತಿಸ್ಪಂದನದಿಂದ ಎನ್ನಿಸುತ್ತದೆಯೇ ಹೊರತು ಸಹಜವೆಂದು ಅನ್ನಿಸದು. ಕಾದಂಬರಿಯ ಯುವ ಪಾತ್ರಗಳು ಕೊಂಚ ಹ್ಯಾಪ ಎನ್ನಿಸದಿದ್ದರೆ ಈ ಪ್ರಶ್ನೆಗಳಿಗೆ ಗಾಢವಾದ ನೆಲೆ ಸಿಗಬಹುದಾಗಿತ್ತು. ಯುವಕರ ಹ್ಯಾಪತನದಿಂದಾಗಿ ಪಟೇಲನ ಜೀವನಪ್ರೀತಿ ಮತ್ತು ಗರ್ವದ ಹಿಂದಿರುವ ಹುಂಬತನಕ್ಕೆ ಎದುರಾಗುವ ಶಕ್ತಿಯೇ ಇಲ್ಲವೆನಿಸುತ್ತದೆ. ಎದುರಾಗುವುದು ಜೋಯಿಸ ಮಾತ್ರ, ಜೊತೆಗೆ ಇನ್ನೊಬ್ಬ ಹರಿಜನ. ಸಾವಯವ ಸಮಗ್ರೀಕರಣದ ಕೃತಿ ರಚನೆಯಲ್ಲಿ ನಮ್ಮನ್ನು ಎದುರಾಗುವ ಪ್ರಪಂಚ ಮೇಲಿನ ಬಗೆಯ ಪ್ರಶ್ನೆಗಳಿಗೆ ಅಥವಾ ಅನುಮಾನಗಳಿಗೆ ಅಷ್ಟು ಸುಲಭವಾಗಿ ಎಡೆಮಾಡಿಕೊಡುವುದಿಲ್ಲ.

ಎಲ್ಲ ಮುಗಿದ ಮೇಲೂ ನಮಗೆ ಮನದಟ್ಟಾಗದೆ ಉಳಿಯುವುದೆಂದರೆ ಜಗನ್ನಾಥ ಯಾಕೆ ಅವನ ತಾಯಿ-ತಂದೆಯಿಂದ ದೂರವಾಗುತ್ತಾನೆಂಬುದು, ಜಗನ್ನಾಥ ಮಾತ್ರವಲ್ಲ, ಅವನ ಸೋದರ ಕೂಡ?

ಇನ್ನೊಂದು ಮಾತು ಯಯಾತಿ ಥೀಮಿನ ಮುಖಾಮುಖಿಯಲ್ಲಿ ಒಂದೋ ಪಿತೃ ಹತ್ಯೆಯಾಗಬೇಕು; ಅಥವಾ ಯುವ ಬಲಿಯಾಗಬೇಕು. ಇಲ್ಲಿ ಆಗುವುದು ಯುವ ಬಲಿ. ಬಲಿಯಾಗುವ ಯುವಕರು ನಮ್ಮನ್ನು ಕಾಡಬಲ್ಲಷ್ಟು ಗಟ್ಟಿಯಾಗಿಲ್ಲ. ಪಿತೃಹತ್ಯೆ ಮತ್ತು ಯುವ ಬಲಿಗೂ ಆಚಿನ ನೆಲೆಗಳು ನಮಗೆ ಸಿಗುವುದು ಆಧ್ಯಾತ್ಮಿಕ ಆಯಾಮ ಪಡೆದ ಕಾವ್ಯ ಶಕ್ತಿಯಲ್ಲಿ. ಈ ಶಕ್ತಿ ಇನ್ನೂ ಹೆಚ್ಚಾಗಿ ಮೂಡುವಂತೆ ಇಲ್ಲಿನ ಕಥನ ಬೆಳೆಯುವುದಿಲ್ಲ. ತಿಳಿದಷ್ಟನ್ನು ಮಾತ್ರ ತಿಳಿಸುವ ಜನಪ್ರಿಯ ಕಥನ ಶೈಲಿಯಿಂದ ಲೇಖಕರು ಪೂರ್ಣ ಬಿಡುಗಡೆ ಪಡೆದಿಲ್ಲ. ಆದರೂ ಲೇಖಕನ ವರ್ಣನಾಶಕ್ತಿಯಿಂದಾಗಿಯೂ, ರೂಪಕ ಪ್ರೀತಿಯಿಂದಾಗಿಯೂ, ಕೃತಿಯ ಉದ್ದಕ್ಕೂ ಚೈತನ್ಯ ಹರಿದಾಡಿದೆ. ನಾವು ಲೇಖಕರಿಂದ ಇನ್ನೂ ಅಪೇಕ್ಷಿಸುವಂತೆ, ನಿರೀಕ್ಷಿಸುವಂತೆ ಹರಿದಾಡಿದೆ. ಓದುಗನನ್ನು ಅವನ ಸಿದ್ಧವಾದ ನೈತಿಕ ವೈಚಾರಿಕತೆಯಿಂದ ಬದಲಿಸುವಂತೆ ನಿಗೂಢವಾಗಿ ಕಥೆ ಏರುತ್ತಾ ಬೆಳೆಯದಿದ್ದರೂ ಓದುಗನನ್ನು ಕದಲಿಸಿ ಆತ್ಮಗತ ವಾಗ್ವಾದದಲ್ಲಿ ತೊಡಗುವಂತೆ ಮಾಡುತ್ತದೆ.

ನನ್ನ ಪ್ರಿಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ ವೆಂಕಟಸುಬ್ಬರಾವ್‌ರ ಈ ಕಾದಂಬರಿ ನನ್ನ ಅಡ್ಡಮಾತುಗಳನ್ನು ಮೀರಿ ಓದುಗರಿಗೆ ಪ್ರಿಯವಾಗಲೆಂದು ಹಾರೈಸುತ್ತೇನೆ.

—-
ವೆಂಕಟಸುಬ್ಬರಾವ್
ಅವರಮೃಗಕಾದಂಬರಿಗೆ ಬರೆದ ಮುನ್ನುಡಿ. (೨೦೦೩)