ಶಿವಮೊಗ್ಗದ ಸುಬ್ಬಣ್ಣ ಡಾಕ್ಟರ್ ಸುಬ್ಬಣ್ಣನಾದದ್ದು ಅವರ ದೂರದ ಬಂಧುವಾದ ನನಗೆ ಹರ್ಷದ ವಿಷಯ. ಅವರಿಗೆ ೭೦ ವರ್ಷಗಳಾಗುತ್ತ ಇದೆಯೆ? ಆಶ್ಚರ್ಯ! ಅವರು ಸ್ವತಃ ಕಾವ್ಯವನ್ನು ಅನುಭವಿಸಿ, ತನ್ಮಯವಾಗುವ ರೀತಿ. ಅದನ್ನು ಕೇಳುಗರಿಗೆ ದೊರಕುವಂತೆ ಹಾಡುವ ಉತ್ಸಾಹ-ಇವುಗಳಿಂದ ಸುಬ್ಬಣ್ಣ ಎಲ್ಲರಿಗೂ ಬೇಕಾದವರಾಗಿದ್ದಾರೆ. ಶಿವಮೊಗ್ಗ ಸುಬ್ಬಣ್ಣ, ಆಲನಹಳ್ಳಿ ಕೃಷ್ಣ ಇವರೆಲ್ಲರೂ ತಮ್ಮ ತಮ್ಮ ಊರುಗಳಿಗೂ, ಊರಿನ ಸಮುದಾಯ ಪ್ರಜ್ಞೆಗೂ ಸಲ್ಲುವವರು. ಶಿವಮೊಗ್ಗ ಸುಬ್ಬಣ್ಣನವರಿಗೆ ತಾನು ಭೀಮಸೇನ ಜೋಷಿಯಂತಹ ಕ್ಲಾಸಿಕಲ್ ಸಂಗೀತಗಾರರಾಗಬೇಕೆಂಬ ಆಸೆಯಿತ್ತು. ಈ ಆಸೆಯೇನೂ ವಿಫಲವಾಗಿಲ್ಲ. ಕೆಲವು ಸಾರಿ ಪಕ್ಕವಾದ್ಯಗಳ ಆರ್ಭಟವಿಲ್ಲದೆ ಅವರು ಸುಮ್ಮನೆ ನಿಂತು ಕಣ್ಣುಮುಚ್ಚಿ ಹಾಡುವಾಗ ನಾನು ಅವರಲ್ಲಿ ಅಡಗಿರುವ ‘ಶಕ್ತಿ’ಯನ್ನು ಪ್ರತ್ಯಕ್ಷವಾಗಿ ನೋಡುವುದಕ್ಕಿಂತಲೂ ಹೆಚ್ಚಾಗಿ ಇರುವ ಶಕ್ತಿಯನ್ನು ಗಮನಿಸಿ ಹೆಮ್ಮೆಪಟ್ಟಿದ್ದೇನೆ. ಅವರಿಗೆ ವಯಸ್ಸಾದರೂ, ಅವರ ನಾದೋತ್ಸಾಹ ಯೌವನದ್ದೇ.

—-
ಗೌರವಾನ್ವಿತ
ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಪುಸ್ತಕದಿಂದ.
ಸುಂದರ ಪ್ರಕಾಶನ, ಬೆಂಗಳೂರು ೨೦೧೧.