ನನ್ನ ಈ ವಯಸ್ಸಿನಲ್ಲಿ ನನಗೆ ಸಾಧ್ಯವಿರುವುದು ಕೆಲವೊಂದು ‘ಐಡಿಯಾ’ಗಳನ್ನು ಬಿತ್ತಲು ಪ್ರಯತ್ನಿಸುವುದು ಮಾತ್ರ. ಇದೊಂದು ರೀತಿಯ ಬೀಜಗಳನ್ನು ಉದುರಿಸುತ್ತಾ ಹೋಗುವ ಕೆಲಸ. ಮುಂದೆಂದೋ ಮರವಾಗಬಹುದು ಎಂಬ ನಿರೀಕ್ಷೆಯಲ್ಲಿ ಬೀಜಗಳನ್ನು ಉದುರಿಸುತ್ತಾ ಹೋಗುವ ಕೆಲಸ ಮಾಡುವುದೂ ಸುಲಭವೇನಲ್ಲ. ಬಹಳ ಟೀಕೆಗಳನ್ನು ಎದುರಿಸಬೇಕಾಗುತ್ತದೆ.

ಸುಳ್ಳುಸುಳ್ಳಾಗಿ ಅರ್ಥ ಮಾಡಿಕೊಂಡು ನನ್ನನ್ನು ಬೈಯ್ಯುವವರ ಒಂದು ದೊಡ್ಡ ವರ್ಗವೇ ಇದೆ. ಇದರಿಂದ ನನಗೂ ಒಂದು ಅನುಕೂಲ ಆಗಿದೆ. ನನಗೀಗ ಬೈಸಿಕೊಳ್ಳುವುದು ಮಾಮೂಲಾಗಿಬಿಟ್ಟಿದೆ! ನನ್ನ ಉಳಿದ ಆಯಸ್ಸನ್ನು ಚೆನ್ನಾಗಿ ಮತ್ತು ಅರ್ಥಪೂರ್ಣವಾಗಿ ಕಳೆಯುವುದಕ್ಕೆ ನನಗಿರುವ ಏಕೈಕ ಮಾರ್ಗ ನನಗೆ ಗೊತ್ತಿರುವ ಸತ್ಯಗಳನ್ನು ನಿರ್ಭಿಡೆಯಿಂದ ಹೇಳುವುದು. ಸತ್ಯವನ್ನು ಹೇಳುವ ಕ್ರಿಯೆ ಯಾವಾಗಲೂ ಸುಲಭದ್ದಲ್ಲ. ಆದರೆ ಅದು ಕೊಡುವ ಸಮಾಧಾನ ಮಾತ್ರ ದೊಡ್ಡದು. ಈ ಕಾಲದ ಸವಾಲುಗಳಿಂದ ಸೃಷ್ಟಿಯಾಗಿರುವ ನನ್ನ ಬೌದ್ಧಿಕ ಸಂಕಟ ಈ ಕೆಲಸ ಮಾಡಿಸುತ್ತಿದೆ ಎಂದುಕೊಂಡಿದ್ದೇನೆ.

ಜಾತಿಯೆಂಬ ಪರಿಕಲ್ಪನೆಯನ್ನು ಅದರ ಸಮಗ್ರ ಸ್ವರೂಪದಲ್ಲಿ ಕಾಣಲು ಹೊರಟರೆ ನಮಗೆ ಕೇವಲ ಶೋಷಣೆಯನ್ನು ಸಾಂಸ್ಥಿಕವಾಗಿಸುವ ಕ್ರಿಯೆಯಷ್ಟೇ ಕಾಣಿಸುವುದಿಲ್ಲ. ನಮ್ಮಲ್ಲಿರುವ ಊಟದ ವೈವಿಧ್ಯ, ಖಾದ್ಯಗಳ ವೈವಿಧ್ಯ, ಹಾಡು, ಹಸೆ, ಕೃಷಿ, ಕುಶಲಕರ್ಮಿಗಳ ಕೆಲಸಗಳಲ್ಲಿರುವ ಸೃಜನಶೀಲತೆಯ ಹಿಂದೆಯೂ ಜಾತಿ ಇದೆ. ಒಂದರ್ಥದಲ್ಲಿ ನಮ್ಮ ಸಾಂಸ್ಕೃತಿಕ ಬಹುತ್ವದ ಸಂಕೇತಗಳ ಹಿಂದೆಲ್ಲಾ ಜಾತಿಯ ಕೈವಾಡವಿದೆ. ಜಾತಿ ಹೋಗಿಯೇ ಬಿಟ್ಟರೆ ಈ ಬಹುತ್ವವೂ ನಾಶವಾಗಿಬಿಡುತ್ತದೆಯಲ್ಲವೇ? ಈ ಪ್ರಶ್ನೆ ಸಹಜವಾದುದು. ಇದಕ್ಕೆ ಉತ್ತರ ಕಂಡುಕೊಳ್ಳುವುದಕ್ಕೆ ನಮ್ಮ ಸಾಹಿತ್ಯ ಕಲೆಗಳ ಇತಿಹಾಸವನ್ನೂ ಒಮ್ಮೆ ನೋಡಬೇಕು. ಇಂಗ್ಲಿಷ್‌ನಲ್ಲಿ ಬರೆಯುವ ಹತ್ತು ಅತ್ಯುತ್ತಮ ಕವಿಗಳನ್ನು ಆರಿಸಿಕೊಂಡು ನೋಡಿದರೆ ಆ ಹತ್ತು ಮಂದಿಯೂ ಇಂಗ್ಲಿಷ್‌ನಲ್ಲಿಯೇ ಕಾವ್ಯ ರಚನೆ ಮಾಡಿದ್ದಾರಾದರೂ ಪ್ರತಿಯೊಬ್ಬರ ‘ಭಾಷೆ’ಯೂ ಬೇರೆಯೇ. ಅವರ ಕಾವ್ಯದ ಸ್ರೋತಸ್ಸು ಭಿನ್ನ. ಚಿತ್ರಕಾರರ ವಿಷಯಕ್ಕೆ ಬಂದರಂತೂ ಇದು ಇನ್ನೂ ಸಂಕೀರ್ಣ. ಸಾಹಿತ್ಯವಾದರೆ ಅದನ್ನು ಅಭಿವ್ಯಕ್ತಿಸುವ ಭಾಷೆಯೇ ಅದಕ್ಕೊಂದು ಮಟ್ಟದ ಅನನ್ಯತೆಯನ್ನು ತಂದುಕೊಟ್ಟುಬಿಡುತ್ತದೆ. ಚಿತ್ರಕಲೆ ಭಾಷೆಯ ಗಡಿಗಳನ್ನು ಮೀರಿದ ಮಾಧ್ಯಮ. ಇದರಲ್ಲಿ ವಿಶಿಷ್ಟನಾಗುವುದೆಂದರೆ ಇಡೀ ಪ್ರಪಂಚದ ಕಲೆಯೊಳಗೆ ತನ್ನ ವಿಶಿಷ್ಟತೆಯನ್ನು ತೋರಿಸಿಕೊಳ್ಳುವುದು ಎಂದರ್ಥ. ಆದರೆ ಕಲಾವಿದರು ಈ ಮಿತಿಯನ್ನೂ ಮೀರುತ್ತಾರಲ್ಲವೇ….?

ಜಾತಿ ಸೃಷ್ಟಿಸಿರುವ ಬಹುತ್ವವನ್ನು ಜಾತಿಯ ಹೊರತಾಗಿ ಉಳಿಸಿಕೊಳ್ಳುವ ಕ್ರಿಯೆಗೆ ಬಹುಮುಖ್ಯವಾಗಿ ಬೇಕಿರುವುದು ಸೃಜನಶೀಲತೆ. ಇದೊಂದು ಬಗೆಯ ಹುಡುಕಾಟ. ಇದು ಮನುಷ್ಯನಿಗೆ ಆದಿಯಿಂದಲೇ ಲಭ್ಯವಾದ ಸಹಜ ಗುಣ. ಆದ್ದರಿಂದ ಬಹುತ್ವವನ್ನು ಜಾತಿಯೇತರವಾಗಿ ಉಳಿಸಿಕೊಳ್ಳುವ ಹುಡುಕಾಟವೊಂದು ಈಗಾಗಲೇ ಚಾಲನೆಯಲ್ಲಿದೆ. ಅದನ್ನು ಹೆಚ್ಚು ಸ್ಪಷ್ಟಗೊಳಿಸುವ ಕೆಲಸವಷ್ಟೇ ನಮಗಿರುವುದು. ಜಾತಿಯಿಂದ ಸುಲಭವಾಗಿ ಬಂದಿರುವ ಬಹುತ್ವವನ್ನು ಜಾತಿಯನ್ನು ಬಿಟ್ಟು ಉಳಿಸಿಕೊಳ್ಳುವ ಕ್ರಿಯೆಯಲ್ಲಿ ನಮ್ಮ ಕಾಲದಲ್ಲಿ ತೊಡಗಿಸಿಕೊಂಡವರಲ್ಲಿ ರಾಮಮನೋಹರ ಲೋಹಿಯಾ ಮುಖ್ಯರು. ಇದಕ್ಕಿಂತ ಬಹಳ ಮೊದಲೇ ಬಸವಣ್ಣ ಕೂಡಾ ಜಾತಿಯನ್ನು ಮೀರಿದ ಎಲ್ಲ ಬಹುತ್ವವನ್ನೂ ಉಳಿಸಿಕೊಳ್ಳುವ ಒಂದು ವಿಧಾನವನ್ನು ಕಂಡುಕೊಂಡ. ಅಂಬೇಡ್ಕರ್ ದಲಿತ ವಿಮೋಚನೆಯ ನೆಲೆಯಲ್ಲಿ ಇದನ್ನು ಪ್ರತಿಪಾದಿಸಿದರು. ಗಾಂಧೀಜಿ ಬೇರೊಂದು ಬಗೆಯಲ್ಲಿ ಈ ಹುಡುಕಾಟ ನಡೆಸಿದರು.

ನಮ್ಮ ಅಸ್ಮಿತೆಗಳನ್ನು ಉಳಿಸಿಕೊಂಡು ಬೇರೆ ಅಸ್ಮಿತೆಗಳನ್ನು ಹುಡುಕುವ ಈ ಕ್ರಿಯೆ ನಮ್ಮ ಕಾಲದಲ್ಲಿ ಮತ್ತಷ್ಟು ಪಕ್ವವಾಗಬೇಕಾಗಿದೆ. ಹುಟ್ಟಿನಿಂದ ಬಂದಿರುವ ಜಾತೀಯ ಅಸ್ಮಿತೆಯನ್ನು ಬಿಟ್ಟರೂ ನನಗೊಂದು ಜಾತಿಯಿದೆ. ಅದನ್ನು ‘ಲೇಖಕ’ ಎಂದು ಕರೆಯಬಹುದು. ಇದರ ಮೂಲಕ ನಾನು ಸಾಮಾಜಿಕ ಅಸಮಾನತೆಗಳಿಲ್ಲದ ಒಂದು ಅಸ್ಮಿತೆಯನ್ನು ಪಡೆದುಕೊಂಡಿದ್ದೇನೆ. ಲೇಖಕರಾದವರು ಹುಟ್ಟಿನಿಂದ ದಲಿತರೋ, ಒಕ್ಕಲಿಗರೋ, ಬ್ರಾಹ್ಮಣರೋ ಅಥವಾ ಮತ್ಯಾವುದೋ ಜಾತಿಯವರಾಗಿರಬಹುದು. ಆದರೆ ಲೇಖಕ ಎಂಬ ಅಸ್ಮಿತೆಯಡಿಯಲ್ಲಿ ಇವರೆಲ್ಲರೂ ಒಂದೇ. ಇದು ಹಿಂದೆಯೂ ಸಂಭವಿಸುತ್ತಿತ್ತು. ಒಬ್ಬ ಒಳ್ಳೆಯ ಮಡಕೆ ಮಾಡುವವನು ಕುಂಬಾರ. ಇದೇ ಕುಂಬಾರಿಕೆಯನ್ನು ಆ ಜಾತಿಯವನಲ್ಲದ ಮತ್ತೊಬ್ಬ ಕಲಿತುಕೊಂಡರೆ ಅವನೂ ಕುಂಬಾರನೇ ಆಗುತ್ತಿದ್ದ. ಜಾತಿಯೆಂಬುದು ಆರಂಭದಲ್ಲಿ ಕೇವಲ ಒಂದು ಕಸಬುದಾರಿಕೆಯ ಅನನ್ಯತೆಯನ್ನು ಹೇಳುವ ಪರಿಕಲ್ಪನೆಯಾಗಿತ್ತು. ಆದರೆ ಕ್ರಮೇಣ ಅದು ಈ ಸಾಧ್ಯತೆಯನ್ನು ಕಳೆದುಕೊಂಡು ಶೋಷಣೆಗೊಂದು ಸಾಂಸ್ಥಿಕ ರೂಪ ಕೊಟ್ಟಿತು.

ಈಗ ನಾನು ಸೂಚಿಸಿದ ‘ಲೇಖಕ’ನೆಂಬ ಅಸ್ಮಿತೆಗೆ ಒಳಗೊಳ್ಳುವ ಗುಣವಿದೆ. ಲೇಖಕನೆಂಬ ಅಸ್ಮಿತೆಯಡಿಯಲ್ಲಿ ವಿವಿಧ ಜಾತಿಯ ಲೇಖಕರೆಲ್ಲರೂ ಸಮಾನರು. ಆದರೆ ಬರೆಯುವಾಗ ಎಲ್ಲರೂ ಅವರವರ ಸಾಮಾಜಿಕ ಹಿನ್ನೆಲೆಯಿಂದಲೇ ಬರೆಯುತ್ತಿರುತ್ತಾರೆ. ಅವರೆಲ್ಲರೂ ತಮ್ಮ ಸಾಮಾಜಿಕ ಹಿನ್ನೆಲೆಯಿಂದ ಸೃಜನಶೀಲತೆಗೆ ಅಗತ್ಯವಾಗಿರುವುದನ್ನು ಪಡೆಯುತ್ತಲೇ ‘ಲೇಖಕ’ರಾಗಿ ಬರೆಯುತ್ತಾರೆ. ಇದೇ ಸಂದರ್ಭದಲ್ಲಿ ನಮ್ಮ ನೈತಿಕತೆಗಳ ಕುರಿತೂ ಹೇಳಬೇಕು. ಜಾರಿಣಿಯೊಬ್ಬಳ ಬಗ್ಗೆ ಇಡೀ ಕೇರಿ ಅಥವಾ ಊರು ಮಾತನಾಡುತ್ತಿರುತ್ತದೆ. ಇದೊಂದು ಅಸಹ್ಯವೆನಿಸುವಂಥ ಗಾಸಿಪ್ ಆಗಿರುತ್ತದೆ. ಆದರೆ ಒಬ್ಬ ನಿಜವಾದ ಬರಹಗಾರ ತನ್ನ ಬರಹದ ಮೂಲಕ ಇಂಥವಳ ಕಥೆಯನ್ನು ಹೇಳಲು ಹೊರಟರೆ ಅದೊಂದು ಅದ್ಭುತ ಕಾದಂಬರಿಯಾಗಬಹುದು. ‘ಮದಾಂ ಬವೇರಿ’ ಇದಕ್ಕೆ ಒಳ್ಳೆಯ ಉದಾಹರಣೆ. ಆಕೆ ನೂರು ಜನರ ಜೊತೆ ಹಾದರ ಮಾಡುತ್ತಾಳೆ. ಆದರೆ ಅವಳ ಪಾತ್ರವನ್ನು ಎಲ್ಲಾ ಸಂಕೀರ್ಣತೆಯ ಜೊತೆಗೆ ಕಾದಂಬರಿಕಾರ ಮಂಡಿಸಿದ ಬಗೆಯಲ್ಲಿ ಅವಳು ನಮ್ಮ ಅನುಕಂಪವನ್ನು ಪಡೆಯುವ ಪಾತ್ರವಾಗುತ್ತಾಳೆ. ಅಂದರೆ ನಮ್ಮ ಧರ್ಮದಿಂದ, ಲೋಕದಿಂದ ಮತ್ತು ವ್ಯವಹಾರದಿಂದ ಪಡೆದ ನೈತಿಕತೆಯನ್ನು ಮೀರಲು ಸಾಧ್ಯವಾಗುವುದು ಸಾಹಿತ್ಯದ ಕಲ್ಪನಾಶಕ್ತಿಯಲ್ಲಿ. ಆದ್ದರಿಂದಲೇ ಲೇಖಕನಿಗೆ ಬಹಳ ದೊಡ್ಡ ಜವಾಬ್ದಾರಿ ಇದೆ. ಅವನ ಕಲ್ಪನಾಶಕ್ತಿಯನ್ನು ಸರಿಯಾಗಿ ದುಡಿಸಿಕೊಳ್ಳದೇ ಹೋದರೆ ‘ಮದಾಂ ಬವೇರಿ’ ನಮ್ಮ ಎಲ್ಲ ಅನುಕಂಪವನ್ನು ಪಡೆಯುವ ಪಾತ್ರವಾಗದೆ ಕೇವಲ ಅಶ್ಲೀಲ ಕಥನವಾಗಿಬಿಡಬಹುದು.

ಷೇಕ್ಸ್‌ಪಿಯರ್‌ಗೆ ಮ್ಯಾಕ್ಬೆತ್ ಕೂಡಾ ಬಹಳ ದೊಡ್ಡ ಕವಿಯಂತೆ ಕಾಣಿಸುತ್ತಾನೆ. ನಿಜಜೀವನದಲ್ಲಿ ಮ್ಯಾಕ್ಬೆತ್‌ನಂಥ ಪಾತ್ರವೊಂದು ಕವಿಯಂತೆ ಕಂಡುಬಿಟ್ಟರೆ ಅದೂ ಅಪಾಯವೇ. ಅವನಂಥವನನ್ನು ಬಂಧಿಸಿ ಜೈಲಿನಲ್ಲಿಡುವುದೇ ಸರಿ. ಅಂದರೆ ನಮಗೆ ಎರಡು ಬಗೆಯ ಜವಾಬ್ದಾರಿಗಳಿರುತ್ತವೆ. ಒಬ್ಬ ಪೌರನಾಗಿ ಲೇಖಕ ಮ್ಯಾಕ್ಬೆತ್‌ನನ್ನು ಸಹಿಸಬಾರದು ಅಥವಾ ಈ ಕಾಲಕ್ಕೆ ಇದನ್ನು ಅನ್ವಯಿಸಿದರೆ ಗಣಿದೊರೆಗಳನ್ನು ಸಹಿಸದೇ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಜವಾಬ್ದಾರಿ ಇದೆ. ಕೇವಲ ಅಧಿಕಾರದಿಂದ ಕೆಳಗಿಳಿಸುವುದಷ್ಟೇ ಅಲ್ಲ. ಅವರ ಸಂಪತ್ತೆಲ್ಲವನ್ನೂ ಮುಟ್ಟುಗೋಲು ಹಾಕಿಕೊಂಡು ಅವರಿಗೆ ಜೀವನಾಂಶ ಕೊಟ್ಟು ಸಾಕುವುದೂ ಒಂದು ರೀತಿಯಲ್ಲಿ ಅವರಿಗೆ ನೀಡುವ ಶಿಕ್ಷೆಯೇ. ಆದರೆ ಕಥೆಯನ್ನೋ ಕಾದಂಬರಿಯನ್ನೋ ಬರೆಯುವ ಹೊತ್ತಿನಲ್ಲಿ ಗಣಿ ದೊರೆಯೊಬ್ಬ ಅದರಲ್ಲೊಂದು ಪಾತ್ರವಾದರೆ ಆ ಪಾತ್ರವನ್ನು ಅರ್ಥಮಾಡಿಕೊಳ್ಳುವ ಸೃಜನಶೀಲ ಜವಾಬ್ದಾರಿ ಕೂಡಾ ಲೇಖಕನ ಮೇಲಿರುತ್ತದೆ. ಅಂದರೆ ಸೃಜನಶೀಲ ಕ್ರಿಯೆಯಲ್ಲಿ ಅವನ ನಿಜಬದುಕಿನ ನೈತಿಕತೆಯ ಎಲ್ಲೆಗಳನ್ನು ಮೀರುವ ಕ್ರಿಯೆ ನಡೆಯುತ್ತದೆ. ಈ ಸಮಾಜ ಅಥವಾ ಪ್ರಭುತ್ವ ರೂಪಿಸುವ ನೈತಿಕ ಮೌಲ್ಯಗಳಾಚೆಗೆ ನೋಡುವ ಗುಣ ಎಷ್ಟೋ ಸಾರಿ ಲೇಖಕರನ್ನು ಜೈಲಿಗೆ ಹೋಗುವಂತೆ ಮಾಡಿದೆ. ಸೋವಿಯತ್ ರಷ್ಯಾದ ಪ್ರಭುತ್ವಕ್ಕೆ ತಾನು ಪ್ರತಿಪಾದಿಸುವ ‘ಮೌಲ್ಯ’ಗಳನ್ನು ವಿರೋಧಿಸುವ ಲೇಖಕರೆಲ್ಲಾ ದೊಡ್ಡ ತಲೆನೋವಾಗಿದ್ದರು. ಮಯಕೋವಸ್ಕಿಯಂಥ ಮಹಾನ್ ಕವಿಗೆ ಪ್ಯಾರಿಸ್‌ಗೆ ಹೋಗಿ ಐಫೆಲ್ ಟವರ್ ನೋಡಿದರೆ ಎಷ್ಟು ಸಿಟ್ಟು ಬರುತ್ತಿತ್ತೆಂದರೆ ಅದನ್ನು ಅಭಿವ್ಯಕ್ತಿಸುವುದಕ್ಕೆ ಅವನು ಸರಣಿ ಪದ್ಯಗಳನ್ನು ಬರೆದುಬಿಡುತ್ತಿದ್ದ. ರಷ್ಯಾದಲ್ಲಿ ಅದೇ ನಿರ್ಮಾಣವಾಗುತ್ತಿದ್ದ ಬೃಹತ್ ಕಾರ್ಖಾನೆಗಳ ಬಗ್ಗೆ ಚೆಂದದ ಪದ್ಯ ಬರೆ ಎಂದರೆ ಮಯಕೋವಸ್ಕಿಯಿಂದ ಒಂದು ಅಕ್ಷರವನ್ನೂ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಕವಿಗಳಿಗೆ ಈ ಬಗೆಯ ಸಮಸ್ಯೆಗಳಿರುತ್ತವೆ. ಏನೂ ಇಲ್ಲದಿದ್ದರೆ ಏನನ್ನಾದರೂ ತಾವೇ ಸೃಷ್ಟಿಸಿಕೊಂಡು ಅದನ್ನು ವಿರೋಧಿಸಿಯಾದರೂ ತಮ್ಮ ಅಭಿವ್ಯಕ್ತಿಯ ಹಾದಿಯನ್ನು ಕಂಡುಕೊಳ್ಳುತ್ತಾರೆ.

ಕಾವ್ಯದ ನೈತಿಕತೆಗೂ, ನಾಗರಿಕತೆಯ ನೈತಿಕತೆಗೂ ಇರುವ ವ್ಯತ್ಯಾಸಗಳನ್ನು ಸರಿ-ತಪ್ಪುಗಳಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಒಬ್ಬ ಲೇಖಕ ಲೇಖಕನಾಗಲು ಕೇವಲ ತನ್ನ ಕೋಪ ಮಾತ್ರ ಸಾಲದು ಎಂಬುದನ್ನು ಅರಿತಿರಬೇಕು. ಅವನ ಆ ಕ್ಷಣದ ಕೋಪ ಅವನಿಗೊಂದು ಅಭಿವ್ಯಕ್ತಿಯ ಮಾರ್ಗವನ್ನು ಸೂಚಿಸಿರುತ್ತದೆ. ಅಭಿವ್ಯಕ್ತಿ ಸಾಕಾರಗೊಳ್ಳುವ ಕ್ರಿಯೆಯಲ್ಲಿ ಕೋಪ ಕೃತಿಯ ಒಳಗೆ ಸುಪ್ತವಾಗಿ ಉಳಿದು ಅದರ ಹೃದಯದಿಂದ ಮತ್ತೇನೋ ಹುಟ್ಟಿರುತ್ತದೆ.

ಇಂಗ್ಲೆಂಡ್‌ನಲ್ಲಿ ನನ್ನ ಸಂಶೋಧನೆ ಮುಗಿಸಿ ಹಿಂದಕ್ಕೆ ಬಂದಾಗ ಆಲನಹಳ್ಳಿ ಕೃಷ್ಣ ನನಗೆ ಅವನ ಪುಸ್ತಕ ಕೊಟ್ಟ. ಅವನ ಬೆಳಗು ಪದ್ಯ ಓದಿ ನನಗೆ ಅದ್ಭುತ ಅನಿಸಿತು. ಆಮೇಲೆ ನಾನು ‘ರುಜುವಾತು’ ಶುರು ಮಾಡಿದೆ. ಗೋವಿಂದಯ್ಯ ಬರೆದ ಎರಡು ಪದ್ಯಗಳು ಅದ್ಭುತ ಕೃತಿಗಳು ಅನಿಸಿದವು. ಆಮೇಲೆ ಶಿವಪ್ರಕಾಶ್ ‘ಸಮಗಾರ ಭೀಮವ್ವ’ ಪದ್ಯ ಕಳುಹಿಸಿದರು. ಅದರಲ್ಲಿ ಅತ್ಯಂತ ಹೊಸತಾದ ಏನೋ ಒಂದಿದೆ ಅನ್ನಿಸಿತು. ಆ ಪದ್ಯವನ್ನು ಬಹಳ ಸೂಕ್ಷ್ಮವಾಗಿ ಓದಿ ನೋಡಿ ಅದನ್ನು ಮತ್ತೆ ಶಿವಪ್ರಕಾಶ್‌ಗೆ ಕಳುಹಿಸಿ ಅದರ ಒಂದೊಂದು ಸಾಲನ್ನೂ ಅರ್ಥಮಾಡಿಕೊಂಡು ಪ್ರಕಟಿಸಿದೆ. ಅದೂ ಕೂಡಾ ಬಹಳ ಮಹತ್ವದ ಪದ್ಯ. ಈ ಪದ್ಯಗಳ ಮಹತ್ವವನ್ನು ನಾನು ಗುರುತಿಸಿದೆ ಎಂಬುದು ದೊಡ್ಡ ವಿಷಯವೇನಲ್ಲ. ನಾನಲ್ಲದಿದ್ದರೆ ಮತ್ಯಾರೋ ಅದನ್ನು ಗುರುತಿಸುತ್ತಿದ್ದರು. ಆದರೆ ಹೀಗೆ ಪರಸ್ಪರ ಗುರುತಿಸಲು ಸಾಧ್ಯವಿದ್ದ ಒಂದು ಬಳಗವಿತ್ತು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ನಾವೆಲ್ಲಾ ಬರೆಯುವುದಕ್ಕೆ ಶುರು ಮಾಡಿದಾಗ ನಮ್ಮ ದೃಷ್ಟಿಯಿದ್ದದ್ದೆಲ್ಲಾ ಅದನ್ನು ಓದಬಲ್ಲ ನಮಗೂ ಗೊತ್ತಿದ್ದ ನಾಲ್ಕೋ ಐದು ಮಂದಿಯ ಮೇಲೆ ಮಾತ್ರ. ನನ್ನ ಉದಾಹರಣೆಯನ್ನೇ ಹೇಳುವುದಾದರೆ ರಾಜೀವ ತಾರಾನಾಥ್, ವಿಶ್ವನಾಥ ಮಿರ್ಲೆ, ಶ್ರೀನಿವಾಸರಾವ್, ಅಡಿಗರು, ಸದಾಶಿವ ಇವರೆಲ್ಲಾ ಒಪ್ಪಿದರೆ ನನ್ನ ಕೃತಿ ಸಾರ್ಥಕವಾಯಿತು ಎಂದುಕೊಳ್ಳುತ್ತಿದ್ದೆ. ಇವರು ಒಪ್ಪಿದರೆ ಅದು ಪ್ರಕಟವಾಗಬೇಕೆಂಬ ಆಸೆಯೂ ಇರುತ್ತಿರಲಿಲ್ಲ. ಇದಕ್ಕೆ ಮತ್ತೊಂದು ತಾಂತ್ರಿಕ ಕಾರಣವೂ ಇದೆ. ಏಕೆಂದರೆ ಯಾವ ಪತ್ರಿಕೆಯೂ ಪ್ರಕಟಿಸಲಾರದಷ್ಟು ಉದ್ದ ಕಥೆಗಳನ್ನು ನಾನು ಬರೆಯುತ್ತಿದ್ದೆ. ನನ್ನ ‘ಪ್ರಶ್ನೆ’ ಸಂಕಲನದ ಬಹುತೇಕ ಕಥೆಗಳು ಇಂಥವೇ. ಇವುಗಳನ್ನು ಯಾವ ಪತ್ರಿಕೆಯೂ ತನ್ನ ಪುಟ ಮಿತಿಯೊಳಗೆ ಪ್ರಕಟಿಸಲು ಸಾಧ್ಯವಿಲ್ಲ. ಅಂದರೆ ಆಗ ಮಾರುಕಟ್ಟೆಯ ಯಾವ ಅಗತ್ಯಗಳೂ ನಮ್ಮನ್ನು ಕಾಡುತ್ತಿರಲಿಲ್ಲ.

ಕವಿಗೆ ಬೇಕಾದದ್ದು ಈ ರೀತಿಯ ಆತ್ಮೀಯವಾದ ಓದುಗರು. ಈ ಆತ್ಮೀಯ ಓದುಗ ವರ್ಗದಲ್ಲಿ ಮುಖಸ್ತುತಿಯಂಥವುಗಳು ಇರುವುದಿಲ್ಲ. ಕೃತಿಯ ಶಕ್ತಿ ಅಥವಾ ದೌರ್ಬಲ್ಯವನ್ನು ಗುರುತಿಸುವುದಕ್ಕೆ ಯಾರೂ ಅಂಜುವುದಿಲ್ಲ. ಲೇಖಕನಿಗೆ ಸಂತೋಷವಾಗಲಿ ಎಂಬ ಕಾರಣಕ್ಕೆ ಅವನೆದುರು ಹೊಗಳಲು ಆರಂಭಿಸಿದರೆ ಮೊದಲಿಗೆ ಲೇಖಕನೂ ಮೆಚ್ಚಿಕೊಳ್ಳಬಹುದು. ಆದರೆ ಕ್ರಮೇಣ ಹೊಗಳಿಕೆಯ ಮಾತುಗಳು ಅರ್ಥ ಕಳೆದುಕೊಂಡುಬಿಡುತ್ತವೆ. ಇದರಿಂದ ವಿಮರ್ಶೆ ಬೆಳೆಯುವುದೇ ಇಲ್ಲ. ವಿಮರ್ಶೆಗೆ ಬಹಳ ಪ್ರೀತಿ ಮತ್ತು ನಿಷ್ಠುರತೆ ಬೇಕಾಗುತ್ತದೆ. ಪ್ರಸಿದ್ಧರಾದಂತೆ, ಮುನ್ನುಡಿಗಳನ್ನು ಹೆಚ್ಚು ಹೆಚ್ಚು ಬರೆಯುತ್ತಾ ಹೋದಂತೆ ಪ್ರೀತಿ ಮತ್ತು ನಿಷ್ಠುರತೆಗಳೆರಡೂ ಕಡಿಮೆಯಾಗುತ್ತಾ ಹೋಗುತ್ತವೆ. ವೇದಿಕೆಗೆ ಬೇಕಾದ ಒಳ್ಳೆಯ ಮಾತುಗಳನ್ನು ಆಡುತ್ತಾ, ಮುನ್ನುಡಿಗೆ ಬೇಕಾದ ಒಳ್ಳೆಯ ಮಾತುಗಳನ್ನಷ್ಟೇ ಬರೆಯುತ್ತಾ ವಿಮರ್ಶೆಯನ್ನು ಮರೆತೇಬಿಡುತ್ತೇವೆ. ಇಂಥ ಬರಹಗಳನ್ನು ಓದಿದಾಗ ಇವರು ‘ಒಳ್ಳೆಯ ಮಾತು’ಗಳನ್ನಷ್ಟೇ ಬರೆದಿದ್ದಾರೆ ಎನ್ನುವುದು ಓದುಗರಿಗೂ ಅರ್ಥವಾಗುತ್ತದೆ. ಅಂದರೆ ಆ ಬರಹವೇ ಅಪ್ರಯೋಜಕವಾಗಿಬಿಡುತ್ತದೆ. ಹೊಸತಾಗಿ ಬರೆಯುವ ಯಾರೂ ಈ ಬಗೆಯ ವಿಮರ್ಶೆಯೇ ಅರ್ಥಹೀನವಾಗುವ ಸ್ಥಿತಿಗೆ ತಲುಪಬಾರದು.

ಈ ಕಾಲದ ದೊಡ್ಡ ದುರಂತವೆಂದರೆ ನಮ್ಮೆದುರು ನಡೆಯುತ್ತಿರುವುದನ್ನು ನಡೆಯುತ್ತಿರುವ ಹಾಗೆಯೇ ಬರೆಯಬೇಕಾದ ಒಂದು ವಿಚಿತ್ರ ಅನಿವಾರ್ಯತೆ ಲೇಖಕರಿಗಿರುವುದು. ಈ ಘಟನೆಗಳನ್ನು ರೂಪಕಗಳನ್ನಾಗಿಸುವ ಅವಕಾಶ ಕೂಡ ಅವರಿಗಿಲ್ಲ. ಮೂವತ್ತರ ದಶಕದ ಯೂರೋಪಿನಲ್ಲೂ ಇದು ಸಂಭವಿಸಿತ್ತು. ಸ್ಟಾಲಿನ್ ರಷ್ಯಾದಲ್ಲಿ ಅಧಿಕಾರಕ್ಕೆ ಬಂದ. ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದ, ಇಟಲಿಯಲ್ಲಿ ಮುಸೋಲಿನಿ ಅಧಿಕಾರಕ್ಕೇರಿದ. ಇದರ ಜೊತೆಗೆ ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್ ಎಲ್ಲಾ ಕಡೆಗಳಲ್ಲೂ ಈ ಸರ್ವಾಧಿಕಾರಿಗಳ ಭಾಷೆಯಲ್ಲಿ ಮಾತನಾಡುವಂಥವರೇ ಅಧಿಕಾರಕ್ಕೆ ಬಂದರು. ಇವತ್ತು ‘ಹಿಂದುತ್ವ’ ಎಂಬುದು ಭಾರತದಲ್ಲಿ ಫ್ಯಾಸಿಸ್ಟ್ ಆಗಿ ಬಳಕೆಯಾಗುತ್ತಿರುವಂತೆಯೇ ಆ ಕಾಲದ ಯೂರೋಪಿನಲ್ಲಿ ಯಹೂದ್ಯರಿಂದಾಗಿ ಪ್ರಪಂಚ ನಾಶವಾಗಿದೆ ಎಂಬ ಕಲ್ಪನೆಯೊಂದು ವ್ಯಾಪಕವಾಯಿತು. ಯೂರೋಪಿನ ಎಲ್ಲಾ ದೇಶಗಳಿಗೂ ಬೇರೆ ಬೇರೆ ಭಾಷೆಗಳು. ಆದರೆ ಎಲ್ಲಾ ದೇಶಗಳಲ್ಲೂ ಯಹೂದ್ಯರಿದ್ದರು. ಬ್ಯಾಂಕುಗಳಿಲ್ಲದ ಆ ಕಾಲದಲ್ಲಿ ಹಣಕಾಸು, ಲೇವಾದೇವಿ ವ್ಯವಹಾರವೂ ಅವರದ್ದೇ. ಎಲ್ಲ ದೇಶಗಳಲ್ಲೂ ಇದೇ ಸಮುದಾಯದವರು ಹಣಕಾಸು ವ್ಯವಹಾರವನ್ನು ನಡೆಸುತ್ತಾ ಇದ್ದದ್ದು ಒಂದು ರೀತಿಯ ನೆಟ್‌ವರ್ಕ್‌ಗೆ ಕಾರಣವಾಗಿತ್ತು. ಇದರ ಎಲ್ಲಾ ಅನುಕೂಲವನ್ನು ಪಡೆದುಕೊಂಡ ಯೂರೋಪಿಯನ್ನರು-ಯಹೂದ್ಯರಿಗೆ ಹಣವೆಂದರೆ ಮೋಹ, ಅವರು ದುರಾಸೆಯುಳ್ಳವರು ಮೊದಲಾದ ಸ್ಟೀರಿಯೋಟೈಪ್‌ಗಳನ್ನೂ ಸೃಷ್ಟಿಸಿದರು. ಇಲ್ಲೊಂದು ವಿಷಯವನ್ನು ಗಮನಿಸಬೇಕು. ಯಹೂದ್ಯರು ಇಲ್ಲದೇ ಇದ್ದರೆ ಇಡೀ ಯೂರೋಪಿನ ಹಣಕಾಸಿನ ವ್ಯವಹಾರವೇ ಸರಿಯಾಗಿ ನಡೆಯುತ್ತಿರಲಿಲ್ಲ. ಆದರೆ ಇದನ್ನೇ ಇಟ್ಟುಕೊಂಡು ಯಹೂದ್ಯರನ್ನು ತಮ್ಮ ಶತ್ರುಗಳನ್ನಾಗಿ ಚಿತ್ರಿಸಿದರು. ನಾವು ಈಗ ಅಂಥದ್ದನ್ನು ಮಾಡುತ್ತೇವೆ. ಕೆಲವೊಮ್ಮೆ ಬ್ರಾಹ್ಮಣರನ್ನು ಬೈಯ್ಯುವ ಕ್ರಿಯೆ ಕೂಡ ಹೀಗೆಯೇ ಇರುತ್ತದೆ. ಅವರನ್ನು ಚೆನ್ನಾಗಿ ಬಳಸಿಕೊಂಡು ಅವರನ್ನು ಬೈಯ್ಯುತ್ತಿರುವಂತೆ ಕಾಣಿಸುತ್ತದೆ. ಯಾಕೆಂದರೆ ನೀವೆಲ್ಲಾ ಬೈಯ್ಯುತ್ತಿರುವಾಗ ನಿಮ್ಮ ಕಲ್ಪನೆಯಲ್ಲಿರುವ ಬ್ರಾಹ್ಮಣರಿದ್ದಾರಲ್ಲಾ ಅವರು ಸೈಕಲ್ ಮೇಲೆ ಪುರೋಹಿತಿಕೆ ಮಾಡಿ ಪುಡಿಗಾಸು ಸಂಪಾದಿಸುವವರು. ಅವರೀಗ ಯಾವ ರೀತಿಯಲ್ಲೂ ಅಪಾಯಕಾರಿಗಳಾಗಿ ಉಳಿದಿಲ್ಲ. ಈಗ ನಿಜವಾಗಿ ಅಪಾಯಕಾರಿಗಳಾಗಿರುವುದು ಲೌಕಿಕರಾಗಿರುವ ಬ್ರಾಹ್ಮಣರು. ಈ ‘ಬ್ರಾಹ್ಮಣ’ರು ಕೇವಲ ಬ್ರಾಹ್ಮಣ ಜಾತಿಯಲ್ಲಷ್ಟೇ ಇಲ್ಲ. ಬೇರೆ ಬೇರೆ ಜಾತಿಯಲ್ಲೂ ಇದ್ದಾರೆ. ಇವರೆಷ್ಟು ಚತುರರು ಎಂದರೆ ಯಾರ ಬೈಗುಳಕ್ಕೂ ಸಿಕ್ಕಿಬೀಳುವುದೇ ಇಲ್ಲ. ಯಾಕೆಂದರೆ ಇವರು ಬ್ರಾಹ್ಮಣರೇ ಆಗಿದ್ದಾಗಲೂ ಅವರನ್ನು ಬ್ರಾಹ್ಮಣರೆಂದು ಗುರುತಿಸುವ ಬದಲಿಗೆ ಮಧ್ಯಮವರ್ಗ ಎಂದು ಕರೆಯುತ್ತೇವೆ!

ಯೂರೋಪಿನಲ್ಲಿ ಫ್ಯಾಸಿಸ್ಟ್ ಮನೋಭಾವ ವ್ಯಾಪಕವಾಗಿದ್ದಾಗ ಬರೆಯುವುದೇ ಸಾಧ್ಯವಿಲ್ಲ ಎಂಬಂಥ ಸ್ಥಿತಿ ಉದ್ಭವಿಸಿತು. ನಾನು ಇಂಗ್ಲೆಂಡ್‌ಗೆ ಸಂಶೋಧನಾ ವಿದ್ಯಾರ್ಥಿಯಾಗಿ ಹೋದಾಗ ಈ ಕಾಲದ ಬಗ್ಗೆ ಅರಿಯಲು ಸಾಧ್ಯವಾಯಿತು. ನನ್ನ ಗೆಳೆಯ ಮತ್ತು ಮಾರ್ಗದರ್ಶಕ ಮಾಲ್ಕಂ ಬ್ರಾಡ್ಬರಿ, ಅಪ್ವರ್ಡ್ ಎಂಬ ಲೇಖಕನ ಬಗ್ಗೆ ಹೇಳಿ ಅವನ ಬಗ್ಗೆಯೇ ಬರೆಯುವಂತೆ ಸೂಚಿಸಿದ್ದರು. ಮೂವತ್ತರ ದಶಕದ ಯೂರೋಪಿನ ತಲ್ಲಣವನ್ನು ಅನುಭವಿಸಿ ಇನ್ನು ಮುಂದೆ ನನಗೆ ಬರೆಯಲು ಸಾಧ್ಯವಿಲ್ಲ, ಬರೆಯಬಾರದು ಎಂಬ ತನ್ನ ನಿಲುವನ್ನೇ ಅತ್ಯುತ್ತಮ ಬರಹವನ್ನಾಗಿ ರೂಪಿಸಿದ ಮಹಾ ಪ್ರತಿಭೆ ಅಪ್ವರ್ಡ್. ಅವನು ಹೇಗೆ ಬರೆಯುತ್ತಿದ್ದ ಎಂದರೆ ಕಾಫ್ಕಾನನ್ನು ಓದದೆಯೇ ಬರೆದ ಅವನ ಬರಹಗಳಲ್ಲಿ ಕಾಫ್ಕಯಿಸ್ಕ್ ಅಂಶಗಳಿದ್ದವು. ರಾಜಕೀಯವಾಗಿ ಸಮಾಜವಾದಿಯಾಗಿದ್ದ ಅವನು ಜನ ಇಷ್ಟೆಲ್ಲಾ ತೊಂದರೆಗಳನ್ನು ಅನುಭವಿಸುತ್ತಿರುವ ಕಾಲದಲ್ಲಿ ನನ್ನ ವೈಯಕ್ತಿಕ ತೆವಲುಗಳ ಬಗ್ಗೆ ಬರೆಯಬಾರದು ಎಂದು ತೀರ್ಮಾನಿಸಿದ.

ಹಿಂಸೆ ವಿಪರೀತವಾಗಿಬಿಟ್ಟಾಗ ಬರವಣಿಗೆ ಒಂದು ತೆವಲಿನಂತೆ ಕಾಣಿಸತೊಡಗುತ್ತದೆ. ಅಪ್ವರ್ಡ್‌ಗೆ ಆದದ್ದೂ ಇದೇ. ಈ ಕಾಲದಲ್ಲಿ ಬರವಣಿಗೆ ಎಂಬುದು ಕೇವಲ ತೆವಲು ಎಂದುಕೊಂಡ ಅನೇಕ ಲೇಖಕರು ತಮ್ಮ ಅಲ್ಲಿಯತನಕದ ಬರವಣಿಗೆಯನ್ನು ಬಿಟ್ಟು ತಮ್ಮ ಮಧ್ಯವರ್ಗೀಯ ಆರ್ಥಿಕ ಸ್ಥಿತಿಯಿಂದಾಗಿ ತಮಗೆ ಗೊತ್ತೇ ಇಲ್ಲದ ಜಗತ್ತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಕೆಲವರು ನೋಟ್‌ಬುಕ್ ಹಿಡಿದುಕೊಂಡು ಹೋಗಿ ಅಂಗಡಿಗಳ ಎದುರು ಕುಳಿತು ಅಲ್ಲಿಗೆ ಬರುವವರನ್ನು ನೋಡಿ, ನೋಟ್ಸ್ ಮಾಡಿಕೊಂಡು ಬಡವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೂ ಇದೆ. ಅಪ್ವರ್ಡ್ ಕೂಡಾ ಹೀಗೆ ಜನರನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯ ಭಾಗವಾಗಿ ಕೊಳಗೇರಿಗಳಲ್ಲಿ ಬದುಕಿ ಒಬ್ಬ ಸಾಮಾನ್ಯ ಶಾಲಾ ಶಿಕ್ಷಕನಾಗಿ ದುಡಿಯುತ್ತಿದ್ದ. ಈಗ ಒಂದು ಕಾಲದಲ್ಲಿ ತನ್ನ ಬರಹದ ಮೂಲಕ ಆಡೆನ್ ಮತ್ತು ಇಶರ್‌ವುಡ್‌ರಂಥ ದೊಡ್ಡ ಬರಹಗಾರರ ಮೇಲೆ ಪ್ರಭಾವ ಬೀರಿದ್ದ ವ್ಯಕ್ತಿ.

ಮ್ಯಾಲ್ಕಂ ಬ್ರಾಡ್ಬರಿಯ ಸಲಹೆಯ ಮೇರೆಗೆ ಇವನ ಕುರಿತು ಮಾಹಿತಿ ಸಂಗ್ರಹಿಸಲು ಹೊರಟಾಗ ಅವನು ಎಲ್ಲಿದ್ದಾನೆಂದೇ ಯಾರಿಗೂ ಗೊತ್ತಿರಲಿಲ್ಲ. ನಾನು ಆಡೆನ್‌ನ ಹಳೆಯ ಪ್ರಕಾಶಕರಿಗೊಂದು ಕಾಗದ ಬರೆದು ಅಪ್ವರ್ಡ್‌ನನ್ನು ಭೇಟಿ ಮಾಡಲು ಸಹಾಯ ಮಾಡಬೇಕೆಂದು ವಿನಂತಿಸಿದೆ. ಕೊನೆಗೆ ಈ ಅಪ್ವರ್ಡ್ ಸಂಪರ್ಕಕ್ಕೆ ಸಿಕ್ಕು ಒಂದು ಪತ್ರ ಬರೆದ. ‘ನಾನು ವೂಲ್ವರ್ ಹ್ಯಾಂಪ್ಟನ್‌ಗೆ ಬರುತ್ತಿದ್ದೇನೆ. ಅಲ್ಲಿ ನನ್ನ ಅಳಿಯನಿದ್ದಾನೆ. ನೀನು ಅಲ್ಲಿಗೆ ಬಂದರೆ ಭೇಟಿಯಾಗಬಹುದು’ ಎಂಬುದು ಪತ್ರದ ಸಾರ. ನಾವಿಬ್ಬರೂ ಪರಸ್ಪರ ನೋಡದೇ ಇದ್ದುದರಿಂದ ಗುರುತಿಸುವುದಕ್ಕಾಗಿ ಅವನೇ ಒಂದು ಉಪಾಯ ಸೂಚಿಸಿದ್ದ. ‘ವೂಲ್ವರ್ ಹ್ಯಾಂಪ್ಟನ್ ರೈಲುನಿಲ್ದಾಣದಲ್ಲಿ ವರ್ಕಿಂಗ್‌ಕ್ಲಾಸ್‌ನವರು ಧರಿಸುವ ಒಂದು ಟೊಪ್ಪಿ ಹಾಕಿಕೊಂಡು ಕೈಯಲ್ಲೊಂದು ‘ಎನ್‌ಕೌಂಟರ್’ ಪತ್ರಿಕೆ ಹಿಡಿದುಕೊಂಡು ನಿಂತಿರುತ್ತೇನೆ. ನೀನೂ ಒಂದು ಎನ್‌ಕೌಂಟರ್ ಪತ್ರಿಕೆ ಹಿಡಿದುಕೊಂಡು ಬಂದರೆ ನನಗೂ ಗುರುತಿಸಲು ಸುಲಭವಾಗುತ್ತದೆ’. ವೂಲ್ವರ್ ಹ್ಯಾಂಪ್ಟನ್ ರೈಲು ನಿಲ್ದಾಣದಲ್ಲಿ ನಾನು ಅವನನ್ನು ಭೇಟಿಯಾದೆ. ಆ ಹೊತ್ತಿಗಾಗಲೇ ರಷ್ಯನ್ನರು ಹಂಗೇರಿ ಮೇಲೆ ದಾಳಿ ಮಾಡಿಬಿಟ್ಟಿದ್ದರು. ಇದರಿಂದಾಗಿ ಅನೇಕ ಯೂರೋಪಿನ ಕಮ್ಯುನಿಸ್ಟರು ಪಾರ್ಟಿ ತೊರೆದುಬಿಟ್ಟಿದ್ದರು.

ಈ ಸಂದರ್ಭದ್ದೇ ಮತ್ತೊಂದು ಕಥೆಯನ್ನು ಇಲ್ಲೇ ಹೇಳಿಬಿಡುತ್ತೇನೆ. ಹಂಗೇರಿಯ ಮೇಲಿನ ರಷ್ಯನ್ ದಾಳಿಯಿಂದಾಗಿ ಎರಡೇ ದಿನಗಳ ಕಾಲ ಮಂತ್ರಿಯಾಗಿದ್ದ ವಿಮರ್ಶಕ ಲುಕಾಕ್ಸ್ ಕೂಡಾ ದೇಶ ಬಿಡಬೇಕಾದ ಸಂದರ್ಭ ಎದುರಾಗಿತ್ತು. ಲುಕಾಕ್ಸ್ ಕೂಡಾ ಒಂದು ಕಾಲದಲ್ಲಿ ಕಾಫ್ಕಾನ ಬರಹದ ಮಾದರಿಯನ್ನು ಕಟುವಾಗಿ ವಿಮರ್ಶಿಸಿದವನು. ಕಾಫ್ಕಾನ ಬರವಣಿಗೆಯನ್ನು ಒಂದು ತೆವಲು, ವಾಸ್ತವವಾದಿಯಾಗಿ ಬರೆಯುವುದೇ ಸರಿ ಎಂದು ವಾದಿಸುತ್ತಿದ್ದವನು. ಇಂಥ ಲುಕಾಕ್ಸ್ ಒಮ್ಮೆ ರಾತ್ರಿ ಯಾವುದೋ ಒಂದು ಕೋಟೆಯಲ್ಲಿ ಉಳಿದುಕೊಳ್ಳಬೇಕಾಗಿ ಬಂದಾಗ ತನ್ನ ಸ್ನೇಹಿತರಿಗೆ ಹೇಳಿದ್ದನಂತೆ ‘ಕಾಫ್ಕಾನೂ ಒಬ್ಬ ರಿಯಲಿಸ್ಟ್’. ಇದನ್ನು ಲುಕಾಕ್ಸ್ ಮ್ಯೂಸಿಯಂಗೆ ಹೋಗಿದ್ದಾಗ ನನ್ನ ಜೊತೆ ಬಂದಿದ್ದ ಕಮ್ಯುನಿಸ್ಟ್ ದುಬಾಷಿಯೊಬ್ಬಳು ಹೇಳಿದ್ದಳು. ಈ ಕಥೆ ಹೇಳಿದ ಮೇಲೆ ಅವಳು ‘ಇದು ಕೌಂಟರ್ ರೆವಲ್ಯೂಷನರಿ ಪ್ರೊಪಗ್ಯಾಂಡಾ. ನೀನು ನಂಬಬೇಡ’ ಎಂದಿದ್ದಳು. ನಾನು ನಂಬಿದ್ದು ಕೌಂಟರ್ ರೆವಲ್ಯೂಷನರಿ ಆದದ್ದನ್ನೇ.

ಒಂದು ಹಂತದಲ್ಲಿ ಬರೆಯುವುದು ತೆವಲು ಅನ್ನಿಸುತ್ತದೆ. ಬರೆಯಬಾರದು ಅನ್ನಿಸುತ್ತದೆ. ಈ ಬೌದ್ಧಿಕ ಸಂಕಟದಲ್ಲಿ ತೊಳಲುತ್ತಲೇ ಮತ್ತೆ ಬರೆಯಲು ಸಾಧ್ಯವಾಗುತ್ತದೆ. ಹೀಗೆ ಬರೆದದ್ದು ಬಹಳ ಬೆಲೆಯುಳ್ಳ ಬರಹವಾಗುತ್ತದೆ. ನಿಸ್ಸಹಾಯಕತೆ ನಮ್ಮನ್ನು ಕಾಫ್ಕಯಿಸ್ಕ್ ಬರಹಗಳಿಗೆ ಪ್ರೇರೇಪಿಸಬಹುದು ಅಥವಾ ಅದಕ್ಕಿಂತ ಭಿನ್ನವಾದ ಮತ್ತೊಂದೇನನ್ನೋ ಸೃಷ್ಟಿಸಬಹುದು.

ಇವತ್ತು ಕೋಮುವಾದ ಎಂಬುದು ನಮ್ಮ ಬರಹಗಾರರಿಗೆ ಆಳವಾದ ಸಂಕಟವೊಂದನ್ನು ಸೃಷ್ಟಿಸದೇ ಇದ್ದರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಎಷ್ಟರಮಟ್ಟಿಗೆಂದರೆ ಒಬ್ಬ ಮುಸ್ಲಿಮನನ್ನು ಕೊಲ್ಲುವುದು ನನ್ನನ್ನೇ ಕೊಂದಂತೆ ಎಂದು ಹಿಂದೂವಿಗೂ ಹಿಂದೂವನ್ನು ಕೊಲ್ಲುವುದು ನನ್ನನ್ನೇ ಕೊಂದಂತೆ ಎಂದು ಮುಸ್ಲಿಮನಿಗೂ ಅನ್ನಿಸಬೇಕು. ಹೀಗಾಗದೇ ಇದ್ದರೆ ನಮ್ಮದೊಂದು ನಾಗರಿಕತೆಯಾಗಿ ಉಳಿಯುವುದಿಲ್ಲ. ಮತ್ತೊಬ್ಬನ ಕಷ್ಟವೂ ತನ್ನದೇ ಕಷ್ಟ ಎನಿಸುವಂಥ ಒಂದು ಸಾಧ್ಯತೆ ಇದ್ದಾಗ ಒಂದು ನಾಗರಿಕತೆ ಇರುತ್ತದೆ. ಸದ್ಯ ನಡೆಯುತ್ತಿರುವ ಕೋಮುವಾದಿಗಳ ಪ್ರಚಾರಾಂದೋಲನದಲ್ಲಿ ನಾಗರಿಕತೆ ಕೊಚ್ಚಿ ಹೋಗದಂತೆ ನೋಡಿಕೊಳ್ಳುವ ಶಕ್ತಿ ಇರುವುದು ಸಾಹಿತ್ಯಕ್ಕೆ. ಯೂರೋಪ್, ಫ್ಯಾಸಿಸಂನ ಸುಳಿಯಲ್ಲಿ ಸಿಕ್ಕಿದ್ದಾಗ ಅಲ್ಲಿನ ನಾಗರಿಕತೆಯನ್ನು ರಕ್ಷಿಸಿದ್ದು ಸಾಹಿತ್ಯ. ಸಾಹಿತ್ಯಕ್ಕೆ ಈ ಶಕ್ತಿ ಇದೆ. ಏಕೆಂದರೆ ಅದಕ್ಕೆ ತಾನಲ್ಲದ್ದರ ಒಳಹೊಕ್ಕು ಅದನ್ನು ಅರ್ಥ ಮಾಡಿಸುವ ಪರಕಾಯ ಪ್ರವೇಶದ ಶಕ್ತಿ ಇದೆ. ಈ ಪರಕಾಯ ಪ್ರವೇಶದ ಶಕ್ತಿ ಇದ್ದಕ್ಕಿದ್ದ ಹಾಗೇ ಒದಗಿ ಬರುವುದಿಲ್ಲ. ಅದಕ್ಕೆ ಒಂದಷ್ಟು ಕಾಲ ಇದ್ದದ್ದನ್ನು ಇದ್ದ ಹಾಗೆಯೇ ಬರೆಯುವ ಅಗತ್ಯವೂ ಇದೆ. ಈ ಪ್ರಕ್ರಿಯೆ ಹೊಸ ಸಾಧ್ಯತೆಗಳನ್ನು ಶೋಧಿಸುವ ಕ್ರಿಯೆಯೂ ಆಗಿರುತ್ತದೆ. ನಮ್ಮ ಹೊಸ ಕಾಲದ ಲೇಖಕರಲ್ಲಿ ಆಗಬೇಕಾದದ್ದು ಇದುವೇ.

ಇವತ್ತಿನ ಕಾಲಕ್ಕೆ ಸ್ಪಂದಿಸುತ್ತಿರುವಂತೆಯೇ ಚರಿತ್ರೆಯಲ್ಲಿ ಅವರು ತಮ್ಮ ಬೇರುಗಳನ್ನು ಗಟ್ಟಿಯಾಗಿ ಊರಿರಬೇಕು. ಇವತ್ತಿನ ಕಾಲಕ್ಕೆ ಸ್ಪಂದಿಸುವ ಕ್ರಿಯೆಯಲ್ಲಿ ನಾವು ನಮ್ಮ ಸಂಕಟಕ್ಕೆ ಕಾರಣವಾಗಿರುವ ಅಂಶಗಳಲ್ಲಿ ನಮ್ಮ ಪಾಲೆಷ್ಟಿದೆ ಎಂಬುದನ್ನೂ ಅರಿತಿರಬೇಕು. ಷೇಕ್ಸ್‌ಪಿಯರ್‌ಗೆ ತಾನೂ ಒಬ್ಬ ಕೊಲೆಗಡುಕ ಆಗಬಹುದು ಎಂಬ ಅರಿವಿಲ್ಲದೇ ಹೋಗಿದ್ದರೆ ಅವನು ಮ್ಯಾಕ್ಬೆತ್ ಅನ್ನು ಸೃಷ್ಟಿಸಲು ಸಾಧ್ಯವಾಗುತ್ತಿರಲಿಲ್ಲ. ಕೋಮುವಾದಿಗಳೆಂದರೆ ಯಾರು ಎಂಬುದು ನಿಮಗೆ ನಿಮ್ಮ ಒಳಗಿಂದ ಅರ್ಥವಾಗಬೇಕು. ನಮಗೆ ಗೊತ್ತಿಲ್ಲದೆಯೇ ಕೋಮುವಾದಿ ಎಂದು ಕರೆಯಬಹುದಾದಂಥ ಮಾತುಗಳನ್ನು ಆಡಿಬಿಟ್ಟಿರುತ್ತೇವೆ. ಮೊನ್ನೆ ಯಾರೋ ಗೆಳೆಯರೊಬ್ಬರು ಒಂದು ಏರಿಯಾದಲ್ಲಿ ಮನೆ ಮಾಡಿ ಮತ್ತೆ ಬಿಟ್ಟಿದ್ದರ ಬಗ್ಗೆ ಹೇಳಿದರು. ‘ಯಾಕೆ ಬಿಟ್ಟಿರಿ’ ಎಂದು ನಾನು ಕೇಳಿದೆ. ಅದಕ್ಕವರು ‘ಅಲ್ಲಿ ಬರೇ ಮುಸ್ಲಿಮರಿದ್ದರು ಅದಕ್ಕೇ ಬಿಟ್ಟೆ’ ಎಂದರು. ಬಹಳ ಸಹಜವಾದ ಆದರೆ ಏನೂ ಅಪಾಯಕಾರಿಯಲ್ಲದ ಮಾತಿನಂತೆ ಕಾಣುವ ಈ ಮಾತು ಅಂತರಂಗದಲ್ಲಿ ಮುಸ್ಲಿಮರ ಬಗ್ಗೆ ಇರುವ ತಿರಸ್ಕಾರವನ್ನು ಹುದುಗಿಸಿಕೊಂಡಿದೆ. ಇಂಥ ಅನೇಕ ಮಾತುಗಳು ಬಹಳ ಸಹಜ ಎನ್ನುವಂತೆ ನಮ್ಮ ಮಧ್ಯೆ ಹರಿದಾಡುತ್ತಿರುತ್ತವೆ. ‘ದಲಿತರಷ್ಟೇ ಇರುವ ಜಾಗ’ ಎಂಬ ಮಾತಿನಲ್ಲೇ ಒಂದು ತಿರಸ್ಕಾರ ಇದೆ. ಸಮಾಜವನ್ನು ಈ ಮಟ್ಟದ ಸೂಕ್ಷ್ಮದಲ್ಲಿ ಗಮನಿಸಿ ಬರೆಯಬೇಕಾಗುತ್ತದೆ. ಅಂದರೆ ಇದರ ವಿರುದ್ಧ ದೊಡ್ಡದಾಗಿ ಆರ್ಭಟಿಸಬೇಕು ಎಂಬುದು ನನ್ನ ಮಾತಿನ ಅರ್ಥವಲ್ಲ.

ಗೆಳೆಯರೊಬ್ಬರು ಮಾತನಾಡುತ್ತಾ ಈಗಿನ ಯುವಕರಿಗೆ ಇರುವ ಅವಕಾಶಗಳ ಅನುಕೂಲತೆಯ ಬಗ್ಗೆ ಹೇಳುತ್ತಿದ್ದರು. ಹೌದು ಅನುಕೂಲಗಳು ಬಂದಿವೆ. ಒಂದು ಕಾಲದಲ್ಲಿ ಬ್ರಾಹ್ಮಣರಿಗೆ ಸರ್ಕಾರಿ ಕೆಲಸಗಳು ಸಿಗದೇ ಇರುವಂಥ ಸ್ಥಿತಿ ಉದ್ಭವಿಸಿತ್ತು. ಈ ಸಂದರ್ಭದಲ್ಲಿ ಸಾಫ್ಟ್‌ವೇರ್ ಉದ್ದಿಮೆ ಬಂತು. ಇಂದು ಬೆಂಗಳೂರಿನಿಂದ ಅಮೆರಿಕದತನಕ ಎಲ್ಲಾ ಕಂಪೆನಿಗಳಲ್ಲೂ ಸರ್ಕಾರಿ ಕೆಲಸ ಸಿಗದೇ ಇದ್ದ ಬ್ರಾಹ್ಮಣರಿಗೆ ಭಾರೀ ಸಂಬಳದ ನೌಕರಿ ದೊರೆಯಿತು. ಅಮೆರಿಕದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನವೊಂದಕ್ಕೆ ಹೋಗಿದ್ದೆ. ಅಲ್ಲೆಲ್ಲಾ ಈ ಸಾಫ್ಟ್‌ವೇರ್‌ನವರೇ. ನಾನದನ್ನು ಒಂದು ರೂಪಕವಾಗಿ ಹೇಳಿದೆ. ‘ನೀವೆಲ್ಲಾ ಮಾಡುತ್ತಿರುವುದು ಸಾಫ್ಟ್‌ವೇರ್. ನೀವು ಹಾಕಿಕೊಂಡಿರುವುದೂ ಸಾಫ್ಟ್‌ವೇರ್.’ ಹೌದು ಜನಿವಾರ ಬಹಳ ಹಗುರವಾಗಿರುತ್ತದೆ. ಲಿಂಗ ಕಟ್ಟಿದರೆ ಅದು ಸ್ವಲ್ಪ ಭಾರವಾಗುತ್ತದೆ. ಇದನ್ನು ತಮಾಷೆಯಾಗಿ ಹೇಳಬಹುದಾದರೂ ಇದು ಒಂದು ಲೌಕಿಕ ಸತ್ಯವೂ ಹೌದು. ಇವೆಲ್ಲವನ್ನೂ ಗ್ರಹಿಸುವ ಒಂದು ಶಕ್ತಿ ಮತ್ತು ಇದೆಲ್ಲವನ್ನೂ ಮೀರಿ ಕುವೆಂಪು ಹೇಳುವ ವಿಶ್ವ ಮಾನವತ್ವಕ್ಕೆ ಹಪಹಪಿಸುವ ಮನಸ್ಸು ನಮಗೆ ಈಗ ಬೇಕಾಗಿದೆ.

ನಮ್ಮ ಕಾಲದ ಎಲ್ಲ ಸತ್ಯಗಳಿಗೂ ಎದುರಾಗುತ್ತಲೇ ಆದರೆ ಆಚೆಗೆ ನೋಡುವುದು ಹೇಗೆ? ಹೊಸ ತಲೆಮಾರಿನ ಬಹಳಷ್ಟು ಲೇಖಕರು ತಮ್ಮೆದುರು ನಡೆಯುತ್ತಿರುವುದನ್ನು ಹಾಗೇ ದಾಖಲಿಸುತ್ತಿದ್ದಾರೆ. ಅವರು ತಾವು ದಾಖಲಿಸುತ್ತಿರುವುದರ ಆಚೆಗಿನ ಒಂದನ್ನು ಭಾಷಣವಾಗದಂತೆ ಸೂಚಿಸುವುದು ಹೇಗೆ ಎಂಬುದರ ಹುಡುಕಾಟಕ್ಕೆ ತೊಡಗಬೇಕು. ಅರವಿಂದರಿಗೆ ಹೊಸತೊಂದು ಕಲ್ಪನೆಯನ್ನೇ ಕೊಡಬೇಕು ಎಂಬ ಆಸೆ ಇತ್ತು. ಇದೇ ಕಾರಣಕ್ಕೆ ಕುವೆಂಪುಗೂ ಅರವಿಂದರು ಬಹಳ ಇಷ್ಟವಾಗಿದ್ದರು. ಆತ್ಮವಿಕಾಸವಾಗುತ್ತಾ ಒಂದು ದೊಡ್ಡ ಸ್ಥಿತಿಗೆ ಹೋಗುವುದರ ಬಗ್ಗೆ ಅರವಿಂದರು ಹೇಳುತ್ತಾರೆ. ಸ್ವತಃ ಕವಿಯೂ ಆಗಿದ್ದ ಅರವಿಂದರು ಈ ಕಲ್ಪನೆಗಳ ಕವಿತ್ವದಲ್ಲಿ ನಮ್ಮ ಭಾಷೆ pompous ಆಗಿಬಿಡುವ ಅಪಾಯವಿದೆ ಎಂದಿದ್ದರು. ಅಂದರೆ ದೊಡ್ಡ ದೊಡ್ಡ ಕಿರಿಕಿರಿಯಾಗುವಷ್ಟು ಡೌಲಿನ ಪರಿಭಾಷೆಯೊಂದು ಕವಿತೆಯಲ್ಲೂ ಕಾಣಿಸಿಕೊಳ್ಳುತ್ತದೆ.

ನಮ್ಮೆದುರು ನಡೆಯುತ್ತಿರುವುದರಾಚೆಗೆ ನಾವು ನೋಡುವ ಹೊತ್ತಿನಲ್ಲಿ ಭಾಷೆ ಪಾಂಪಸ್ ಆಗದಂತೆ ಕನ್ನಡವೇ ಆಗಿ ಆತ್ಮೀಯವಾಗಿ ಉಳಿಯುವಂತೆ ನೋಡಿಕೊಳ್ಳಬೇಕು. ಕವಿ ಎದುರಿಸುವ ಅತಿ ದೊಡ್ಡ ಸವಾಲು ಎಂದರೆ ಅಲೌಕಿಕವಾದುದನ್ನು ಹೇಳುವಾಗಲೂ ಅದು ಅನ್ಯೋನ್ಯದ ಕನ್ನಡದಲ್ಲೇ ಉಳಿಯುವಂತೆ ನೋಡಿಕೊಳ್ಳುವುದು. ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಬಹಳ ತಾರ್ಕಿಕವಾದ ಮನಸ್ಸು ಅವತ್ತಿನ ಮಾರುಕಟ್ಟೆಗೆ ಬೇಕಾದುದನ್ನು ಮಾತ್ರ ಸೃಷ್ಟಿಸುತ್ತದೆ. ಹಾಗೆಂದು ಅತಾರ್ಕಿಕವಾದ ಮನಸ್ಸೊಂದಕ್ಕೆ ಚರಿತ್ರೆಯಲ್ಲಿ ಗಟ್ಟಿಯಾಗಿ ಕಾಲೂರಿ ಸದ್ಯಕ್ಕೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಕವಿ ಅಥವಾ ಬರಹಗಾರ ಬೌದ್ಧಿಕ ಸಂಕಟದಲ್ಲಿ ಬರೆಯತೊಡಗಿದಾಗ ಅವನು ಚರಿತ್ರೆಯಲ್ಲಿ ಗಟ್ಟಿಯಗಿ ಕಾಲೂರಿ ನಿಂತು ಸದ್ಯಕ್ಕೆ ಸ್ಪಂದಿಸುತ್ತಾ ಶಾಶ್ವತದ ಕಡೆಗೆ ತುಡಿಯುವಂಥ ಬರಹವನ್ನು ಕೊಡುತ್ತಾನೆ. ಅದು ಸಾಧ್ಯವಾದಾಗ ಬರೆಯುವುದು ಕೇವಲ ತೆವಲು ಅನ್ನಿಸುವುದಿಲ್ಲ. ಈ ನಿಸ್ಸಹಾಯಕತೆಯ ಕಾಲಘಟ್ಟದಲ್ಲಿ ಬರೆಯುವುದು ತೆವಲು ಎಂದು ನಿಮಗೆ ಅನ್ನಿಸದೇ ಇರಲಿ ಎಂದು ಹಾರೈಸುತ್ತೇನೆ.

—-
ಕೊಟ್ಟೂರಿನ
ಬಯಲು ಸಾಹಿತ್ಯ ವೇದಿಕೆ ಮೈಸೂರಿನ ರಂಗಾಯಣ ಆವರಣದಲ್ಲಿ ಆಯೋಜಿಸಿದ್ದನಾವು ನಮ್ಮಲ್ಲಿಕಾರ್ಯಕ್ರಮದ ಸಮಾರೋಪ ಭಾಷಣದ ಎರಡನೆಯ ಭಾಗ. ಕೃಪೆ: ಮಯೂರ, ಡಿಸೆಂಬರ್ ೨೦೧೦. ಬರಹರೂಪ: ಇಸ್ಮಾಯಿಲ್.