ನಾನು ಹುಟ್ಟಿ ಬೆಳೆದದ್ದು ಸಾಂಪ್ರದಾಯಿಕ ಕುಟುಂಬದಲ್ಲಾದರೂ ಅನೇಕ ಸಂಪ್ರದಾಯಗಳನ್ನು ಪ್ರಶ್ನಿಸಿದವನು. ಅದರಲ್ಲೂ ಮುಖ್ಯವಾಗಿ ಜಾತಿಪದ್ಧತಿಯನ್ನು ಬಹುವಾಗಿ ಪ್ರಶ್ನಿಸಿದವನು. ಆದ್ದರಿಂದಲೇ ನನಗೆ ಒಬ್ಬ ಧಾರ್ಮಿಕ ನಾಯಕನ ಅನುಯಾಯಿಯಾಗಿರಲು ಸಾಧ್ಯವಿಲ್ಲ. ನನ್ನ ಅಪ್ಪ-ಅಮ್ಮ ಕಷ್ಟಕಾಲದಲ್ಲಿ ಸಾಯಿಬಾಬಾರ ಮೊರೆ ಹೋಗುತ್ತಿದ್ದರು. ನನಗೆ ಅವರ ಮೇಲಿದ್ದ ಪ್ರೀತಿಯಿಂದಾಗಿ ಸಾಯಿಬಾಬಾ ಭಕ್ತಿಯನ್ನು ನಾನು ಯಾವತ್ತೂ ಕಟುವಾಗಿ ಟೀಕಿಸಿದ್ದಿಲ್ಲ.

ಜನರು ಸಾಯಿಬಾಬಾರಿಂದ ಉಂಗುರ, ವಿಭೂತಿಗಳನ್ನು ಪಡೆಯುವುದು ನನಗೆ ಯಾವತ್ತೂ ಒಂದು ತಮಾಷೆಯಂತೆ ಕಾಣಿಸಿದೆ. ದೇವರಲ್ಲಿ ನಂಬಿಕೆ ಹುಟ್ಟಿಸಲು ಈ ಬಗೆಯ ಅಗ್ಗದ ತಂತ್ರಗಳನ್ನು ಬಳಸುವುದು ನನಗಿಷ್ಟವಾಗುವುದಿಲ್ಲ. ಆದ್ದರಿಂದಲೇ ಸಾಯಿಬಾಬಾರಂಥವರನ್ನು ನಂಬುವುದು ನನ್ನ ಮಟ್ಟಿಗೆ ನಮ್ಮ ಅಧ್ಯಾತ್ಮದ ಅರಿವನ್ನು ಕಳೆದುಕೊಳ್ಳುವ ಕ್ರಿಯೆ. ನನ್ನ ಗೆಳೆಯರೊಬ್ಬರ ಪತ್ನಿ ಕ್ಯಾನ್ಸರ್ ಗುಣವಾಗುತ್ತದೆ ಎಂಬ ಬಾಬಾ ಭರವಸೆಯ ಮೇರೆಗೆ ಶಸ್ತ್ರಚಿಕಿತ್ಸೆಗೆ ಒಪ್ಪಲಿಲ್ಲ. ಪರಿಣಾಮವಾಗಿ ಅವರು ಚಿಕಿತ್ಸೆ ದೊರೆಯದೆ ತೀರಿಕೊಂಡರು. ಈ ಬಗೆಯ ನಂಬಿಕೆಗಳನ್ನು ಹರಡುವುದು ತಪ್ಪು. ಇವು ಜೀವಕ್ಕೆ ಎರವಾಗಬಹುದು ಎಂಬ ಸತ್ಯ ನಮಗೆ ತಿಳಿದಿರಬೇಕು.

ಒಮ್ಮೆ ನಾನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇನ್ನೂ ಹಾರದೆ ಯಾರಿಗೋ ಕಾಯುತ್ತಿದ್ದ ವಿಮಾನದೊಳಗಿದ್ದೆ. ಪ್ರಸಿದ್ಧ ಕನ್ನಡ ಲೇಖಕ ವಿ. ಸೀತಾರಾಮಯ್ಯ ತಮ್ಮ ಸಾಂಪ್ರದಾಯಿಕ ಪೇಟಾವನ್ನು ನೀಟಾಗಿ ಧರಿಸಿ ನನ್ನ ಪಕ್ಕದಲ್ಲೇ ಕುಳಿತಿದ್ದರು. ಲೇಖಕ ವಿ.ಕೃ. ಗೋಕಾಕ್ ಕೂಡಾ ಅಲ್ಲಿದ್ದರು. ಅವರಾಗ ಬಾಬಾ ಜೊತೆಗೇ ಕೆಲಸ ಮಾಡುತ್ತಿದ್ದರು. ನಾನು ವೀಸೀ ಅವರನ್ನು ವಿಚಾರಿಸಿದೆ-‘ಏನಾಗುತ್ತಿದೆ?’

‘ಸಾಯಿಬಾಬಾಗೆ ಕಾಯುತ್ತಿದ್ದಾರಂತೆ. ಅದಕ್ಕೇ ವಿಮಾನ ತಡವಾಗಿ ಹೊರಡುತ್ತಿದೆ’ ಎಂದು ವೀಸೀ ಉತ್ತರಿಸಿದರು.

ಬಾಬಾ ಬಂದರು. ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರೆಲ್ಲಾ-ಇವರಲ್ಲಿ ಬಹುತೇಕರು ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು-ಹೋಗಿ ಸಾಯಿಬಾಬಾರಿಗೆ ನಮಸ್ಕರಿಸಿ ವಿಭೂತಿ ಪಡೆದರು. ನನ್ನ ಪಕ್ಕದಲ್ಲಿದ್ದ ವೀಸೀ ಎದ್ದು ಹೋಗಲಿಲ್ಲ. ‘ನೀವ್ಯಾಕೆ ಹೋಗಲಿಲ್ಲ’ ಎಂದು ಕೇಳಿದೆ. ಅವರದಕ್ಕೆ ‘ನಾನು ಹಳೆಯಕಾಲದವನು’ ಎಂದರು. ನಿಜವಾದ ಹಳೆಯ ಕಾಲದ ಸಂಪ್ರದಾಯಸ್ಥರಿಗೆ ಸಾಯಿಬಾಬಾರಂಥವರು ಬೇಕಿಲ್ಲ.

ಜನರು ಸಾಯಿಬಾಬಾರಂಥವರನ್ನು ಅನುಮಾನಿಸದೇ ಇರಲು ಹೇಗೆ ಸಾಧ್ಯ ಎಂದು ನನಗೆ ಸದಾ ಆಶ್ಚರ್ಯವಾಗುತ್ತಿರುತ್ತದೆ. ಭಾರತೀಯ ಸಂಸ್ಕೃತಿಯ ಮುಖ್ಯ ಗುಣವೇ ಅನುಮಾನ. ಇದಿಲ್ಲದೇ ಇದ್ದಿದ್ದರೆ ಬೌದ್ಧ ಧರ್ಮ, ಜೈನ ಧರ್ಮ, ವೀರಶೈವ ಧರ್ಮಗಳು ಹುಟ್ಟುತ್ತಲೇ ಇರಲಿಲ್ಲ. ಭಾರತದ ನಿಜವಾದ ಅಧ್ಯಾತ್ಮ ಇರುವುದು ಕಬೀರ್, ಬಸವ, ತುಕಾರಾಮ್, ರಾಮಕೃಷ್ಣ ಪರಮಹಂಸ ಮತ್ತು ರಮಣ ಮಹರ್ಷಿಗಳಂತವರಲ್ಲಿ. ಸಾಯಿಬಾಬಾರನ್ನು ಈ ಪಟ್ಟಿಗೆ ಹೇಗೆ ಸೇರಿಸುವುದು ಎಂದು ನನಗೆ ಗೊತ್ತಾಗುತ್ತಿಲ್ಲ. ಶ್ರೀ ರವಿಶಂಕರ್ (ಆರ್ಟ್ ಆಫ್ ಲಿವಿಂಗ್ ಫೌಂಡೇಶನ್) ಮತ್ತು ಸಾಯಿಬಾಬಾರನ್ನು ಹೋಲಿಸಿ ನೋಡುವುದಾದರೆ ಸಾಯಿಬಾಬಾರೇ ಉತ್ತಮ. ಏಕೆಂದರೆ ಅವರು ಸಾಮಾನ್ಯ ಜನರಿಗೂ ಸುಲಭ ಲಭ್ಯರು.

ಇತ್ತೀಚೆಗೆ ನಾನು ಸಾಯಿಬಾಬಾರನ್ನು ಟೀವಿಯಲ್ಲಿ ನೋಡಿದೆ. ವಯಸ್ಸು ಮತ್ತು ಕಾಯಿಲೆಗಳೆರಡೂ ಅವರ ಕಾಯವನ್ನು ಬಾಧಿಸಿದೆ. ಆದರೂ ಅವರ ಕಣ್ಣುಗಳಲ್ಲಿ ಕರುಣೆ ತುಂಬಿತ್ತು. ಬಹಳಷ್ಟು ಜನ ಸಾಯಿಬಾಬಾರನ್ನು ಭೇಟಿಯಾದಾಗ ಭಾವುಕರಾಗಿಬಿಡುತ್ತಾರೆ. ಈ ಆಕರ್ಷಣೆ ಅಧ್ಯಾತ್ಮವಲ್ಲ. ಜನ ಅವರಲ್ಲಿಗೆ ಹೋಗುವುದು ಸಾಂತ್ವನಕ್ಕೆ. ಅಧ್ಯಾತ್ಮ ಎಂಬುದು ಸಾಂತ್ವನವಲ್ಲ. ಅದು ಸತ್ಯದ ಅನ್ವೇಷಣೆ. ಇದು ಕಷ್ಟದ ಹಾದಿ. ಅಧ್ಯಾತ್ಮಕ್ಕೆ ಜಿಡ್ಡು ಕೃಷ್ಣಮೂರ್ತಿಯವರಂಥ ಮನಸ್ಸಿನ ಅಗತ್ಯವಿದೆ. ನನಗವರ ಜೊತೆ ವಾಗ್ವಾದ ಸಾಧ್ಯ. ಆದರೆ ಸಾಯಿಬಾಬ ಜೊತೆಗೆ ಅದು ಸಾಧ್ಯವಿಲ್ಲ. ಒಂದೋ ನಾನವರನ್ನು ನಂಬಬೇಕು ಇಲ್ಲವೇ ನಂಬದೇ ಇರಬೇಕು.

ಇಪ್ಪತ್ತನೆಯ ಶತಮಾನ ಮೂರು ಹಸಿವುಗಳಿಗೆ ಸಾಕ್ಷಿಯಾಗಿತ್ತು. ಮೊದಲನೆಯದ್ದು ಸಾಮಾಜಿಕ ನ್ಯಾಯದ ಹಸಿವು. ಎರಡನೆಯದ್ದು ಅಧ್ಯಾತ್ಮದ ಹಸಿವು. ಮೂರನೆಯದ್ದು ಆಧುನಿಕತೆಯ ಹಸಿವು. ಈ ಮೂರೂ ಹಸಿವುಗಳೂ ಒಟ್ಟೊಟ್ಟಿಗೇ ಸಾಗಿದವು. ಮಹಾತ್ಮಾ ಗಾಂಧಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ಭಾರತೀಯ ಸಮಾಜವನ್ನು ಮತೀಯತೆಯ ಕಪಿಮುಷ್ಟಿಯಿಂದ ಹೊರತರಲು ಪ್ರಯತ್ನಿಸಿದರು. ಅವರು ಅಧ್ಯಾತ್ಮಕ ಔನ್ನತ್ಯ ಕಾಣಿಸಿದ್ದು ಗೋಡ್ಸೆಯ ಗುಂಡು ಎದೆಗೆ ತಗುಲಿದಾಗ ‘ಹೇ ರಾಮ್’ ಎನ್ನುವ ಅವರ ಉದ್ಗಾರದಲ್ಲಿ. ಇಂದು ಅಧ್ಯಾತ್ಮದ ಹಸಿವು ಕಮರ್ಷಿಯಲ್ ಗುರುಗಳ ಪರಂಪರೆಯೊಂದನ್ನು ಹುಟ್ಟುಹಾಕಿದೆ. ಸಮಾನತೆಯ ಹಸಿವು ಅಥವಾ ಸಾಮಾಜಿಕ ನ್ಯಾಯದ ಹಸಿವು ಲಾಲೂ ಪ್ರಸಾದ್‌ರಂಥವರಿಂದ ಭ್ರಷ್ಟಗೊಂಡಿದೆ. ಆಧುನಿಕತೆಯ ಹಸಿವು ಜಾಗತೀಕರಣವಾಗಿ ಪರಿವರ್ತನೆಗೊಂಡಿದೆ. ಈ ಪ್ರಕ್ರಿಯೆ ಇನ್ನೂ ಹೆಚ್ಚುತ್ತದೆ. ಏಕೆಂದರೆ ನಾವು ನಮ್ಮ ಬೇರುಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಸಮುದಾಯವೆಂಬ ಪ್ರಜ್ಞೆ ಇಲ್ಲವಾಗುತ್ತಿದೆ.

ನಾನು ಧಾರ್ಮಿಕ ಆಚರಣೆಗಳ ವಿರೋಧಿಯಲ್ಲ. ಶಬರಿಮಲೆ ಯಾತ್ರೆಯಂಥವುಗಳನ್ನೂ ವಿರೋಧಿಸಲಾರೆ. ಶಬರಿಮಲೆಗೆ ವ್ರತನಿಷ್ಠರಾಗಿ ಯಾತ್ರೆ ಹೊರಡುವ ಅಯ್ಯಪ್ಪ ಭಕ್ತರಲ್ಲಿ ಒಂದು ಬಗೆಯ ಸಮುದಾಯ ಪ್ರಜ್ಞೆ ಮತ್ತು ಸಮಾನತೆಯಿದೆ. ನನ್ನ ಸಮಸ್ಯೆ ಇರುವುದು ಬಾಬಾರಂಥವರಿಗಾಗಿ ತುಡಿಯುವ ಮನಃಸ್ಥಿತಿಯ ಬಗ್ಗೆ.

ಸಾಯಿಬಾಬಾ ನನಗೊಂದು ಚೋದ್ಯ. ಆತ ದೇವರು ಎಂದು ಹೇಳಿಕೊಂಡಾಗ ನನಗೆ ತಮಾಷೆ ಎನಿಸಿ ನಗು ಬರುತ್ತದೆ. ಕೃಷ್ಣ ತಾನು ದೇವರ ಅವತಾರ ಎಂದಾಗ ಜನ ಅವನನ್ನು ನೋಡಿ ನಕ್ಕರು. ಹೀಗೆಯೇ ಸಾಯಿಬಾಬಾ ಕೂಡಾ ದೇವರೇ ಆಗಿದ್ದು ನಾವದನ್ನು ಒಪ್ಪಲು ಸಿದ್ಧರಾಗಿಲ್ಲವೇ ಎನಿಸುತ್ತದೆ.

ಸಾಯಿಬಾಬಾರ ಕೆಲವು ಗುಣಗಳನ್ನು ನಾನೂ ಇಷ್ಟಪಡುತ್ತೇನೆ. ಆಡ್ವಾಣಿ ರಥಯಾತ್ರೆ ಹೊರಟಾಗ ಬಾಬಾ ‘ರಾಮ ಎಲ್ಲೆಲ್ಲೂ ಇರುವಾಗ ಅಯೋಧ್ಯೆಯಲ್ಲೇಕೆ ರಾಮಮಂದಿರ ಕಟ್ಟಬೇಕು’ ಎಂದು ಕೇಳಿದ್ದರಂತೆ. ಸಾಯಿಬಾಬಾ ರೂಪಿಸಿದ ಕುಡಿಯುವ ನೀರಿನ ಯೋಜನೆ ಮತ್ತು ಆರೋಗ್ಯ ಸಂಬಂಧಿ ಯೋಜನೆಗಳನ್ನು ಮೆಚ್ಚುತ್ತೇನೆ. ನನಗೆ ಮೆಚ್ಚುಗೆಯಾಗುವ ಬಾಬಾರ ಮತ್ತೊಂದು ಗುಣವೆಂದರೆ ಅವರು ಇಂಗ್ಲಿಷ್ ಮಾತನಾಡುವ ವ್ಯಕ್ತಿಯಲ್ಲ.

ಗಾಂಧಿ ಮತ್ತು ರಮಣರಿಗೆ ಜನ್ಮ ನೀಡಿದ ಈ ಮಣ್ಣು ಇನ್ನೂ ಹೆಚ್ಚಿನದ್ದಕ್ಕೆ ಅರ್ಹ ಎಂಬುದು ನನ್ನ ಅನಿಸಿಕೆ.

—-
ಟಿಪ್ಪಣಿ
: ಸಾಯಿಬಾಬಾಗೆ ೮೦ ವರ್ಷವಾದ ಹಿನ್ನೆಲೆಯಲ್ಲಿ ವೀಕ್ವಾರಪತ್ರಿಕೆಯ ೨೦೦೫ರ ನವೆಂಬರ್ ೨೭ರ ಸಂಚಿಕೆಗಾಗಿ ಬರೆದ ಲೇಖನ. ಪತ್ರಿಕೆಯ ವರದಿಗಾರ ರಾಜೇಶ್ ಪರೀಶ್ವಾಡ್ ನನ್ನ ಮಾತುಗಳನ್ನು ಧ್ವನಿಮುದ್ರಿಸಿ ಲೇಖನ ರೂಪಿಸಿದ್ದರು. ನನ್ನ ನಿಲುವಿನಲ್ಲಿ ಈಗಲೂ ಯಾವ ಬದಲಾವಣೆಯೂ ಆಗಿಲ್ಲ. ಕೃಪೆ: ಪ್ರಜಾವಾಣಿ, ೨೦೧೧.