ವಿಶ್ವವಿದ್ಯಾಲಯಗಳ ಉದ್ದೇಶ ಮತ್ತು ಗುರಿಯ ಬಗ್ಗೆ ಬಹಳ ಚಿಂತನಾರ್ಹ ಮಾತುಗಳನ್ನಾಡಿದ್ದು ಕಾರ್ಡಿನಲ್ ನ್ಯೂಮನ್ (೧೮೦೧-೧೮೯೦). ಅವನ ದೃಷ್ಟಿಯಲ್ಲಿ ವಿಶ್ವವಿದ್ಯಾಲಯಗಳು ಮುಖ್ಯವಾಗಿ ಮಾಡಬೇಕಾಗಿರುವುದು ಜ್ಞಾನದ ಪ್ರಸರಣ. ಅವು ‘ಸಾಕ್ಷರ ಸದ್ಗೃಹಸ್ಥ’ರನ್ನು ಸೃಷ್ಟಿಸಬೇಕು ಎಂದ ಅವನ ಮಾತಿನ ಬಗ್ಗೆ ಬಹಳ ಚರ್ಚೆಗಳು ಆ ಕಾಲದಲ್ಲೇ ನಡೆದವು. ಸಂಶೋಧನೆಯ ಕೆಲಸ ಯಾರದ್ದೆಂಬ ಪ್ರಶ್ನೆಯನ್ನು ಆ ಕಾಲದಲ್ಲಿಯೇ ಹಲವರು ಕೇಳಿದರು. ಆಗ ಅವನು ‘ಇದು ವಿಶ್ವವಿದ್ಯಾಲಯದ ಎಲ್ಲಾ ಶಿಕ್ಷಕರ ಕೆಲಸವಾಗಬೇಕಾಗಿಲ್ಲ. ಅವರು ಮುಖ್ಯವಾಗಿ ಮಾಡಬೇಕಿರುವುದು ಒಳ್ಳೆಯ ಜ್ಞಾನ ಪ್ರಸರಣೆ’ ಎಂದ. ವಿಶ್ವವಿದ್ಯಾಲಯವೊಂದು ಜ್ಞಾನವನ್ನು ಹಂಚುವ ಕೆಲಸ ಮಾಡಬೇಕಿದ್ದರೆ ಅದು ಜ್ಞಾನದ ಕೇಂದ್ರವಾಗಬೇಕೇ ಹೊರತು ಒಂದು ವಿಷಯಕ್ಕೆ ಸೀಮಿತಗೊಳ್ಳಬಾರದು. ಆದ್ದರಿಂದ ಕಲೆ, ವಿಜ್ಞಾನ, ಮಾನವಿಕಗಳೆಲ್ಲದರ ಬೋಧನೆ ಮತ್ತು ಸಂಶೋಧನೆಗಳನ್ನು ನಡೆಸುವ ಅವಕಾಶವಿರುವ ಸಂಸ್ಥೆಯೊಂದಷ್ಟೇ ವಿಶ್ವವಿದ್ಯಾಲಯವಾಗಬಲ್ಲದು. ಕೇವಲ ಒಂದು ವಿಷಯಕ್ಕೆ ಸೀಮಿತಗೊಂಡಿರುವುದನ್ನು ವಿಶ್ವವಿದ್ಯಾಲಯ ಎನ್ನುವುದೇ ತಪ್ಪು.

ನ್ಯೂಮನ್‌ನ ಮಾತನ್ನೇ ನೆನಪಿಸಿಕೊಳ್ಳುವುದಾದರೆ ವಿಶ್ವವಿದ್ಯಾಲಯ ಸಾಧ್ಯವಿರುವ ಎಲ್ಲಾ ವಿಷಯಗಳಲ್ಲೂ ಯುವ ವಿದ್ಯಾರ್ಥಿಗಳನ್ನು ತರಬೇತುಗೊಳಿಸಬೇಕು. ಆ ಮೂಲಕ ಅವನು ಸರಿಯಾದ ಸದ್ಗೃಹಸ್ಥನಾಗಲು ಸಾಧ್ಯ. ಆ ಕಾಲದ ‘ಸದ್ಗೃಹಸ್ಥ’ ಪರಿಕಲ್ಪನೆಯನ್ನು ಈ ಕಾಲಕ್ಕೆ ಪ್ರಸ್ತುತವಲ್ಲ ಎಂದುಕೊಂಡರೂ ವಿಶ್ವವಿದ್ಯಾಲಯ ಎಲ್ಲಾ ಜ್ಞಾನ ಶಾಖೆಗಳಲ್ಲೂ ವಿದ್ಯಾರ್ಥಿಯನ್ನು ತರಬೇತುಗೊಳಿಸಬೇಕು ಎಂಬುದಕ್ಕೆ ಯಾರ ಆಕ್ಷೇಪವೂ ಇರಲಾರದು. ಆದ್ದರಿಂದ ವಿಶ್ವವಿದ್ಯಾಲಯವೊಂದು ಯಾವತ್ತೂ ಎಲ್ಲಾ ಜ್ಞಾನ ಶಾಖೆಗಳ ಕೇಂದ್ರವಾಗಿರಬೇಕು. ಹಾಗೆಂದು ವಿವಿಧ ವಿಷಯಗಳಲ್ಲಿ ತಜ್ಞತೆ ಬೇಡವೇ ಎಂಬ ಪ್ರಶ್ನೆ ಬರುತ್ತದೆ. ಇದನ್ನು ವಿಶ್ವವಿದ್ಯಾಲಯ ನಿರಾಕರಿಸುವುದಿಲ್ಲ. ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ಸಂಸ್ಥೆಗಳನ್ನು, ಕೇಂದ್ರಗಳನ್ನು ಹುಟ್ಟು ಹಾಕಬಹುದು. ಇವೂ ವಿಶ್ವವಿದ್ಯಾಲಯವೆಂಬ ದೊಡ್ಡ ಪರಿಕಲ್ಪನೆಯೊಳಗೇ ಇರಬೇಕು. ಅದರಿಂದ ಭಿನ್ನ ಜ್ಞಾನಶಾಖೆಗಳ ನಡುವಣ ಸಂವಹನ ಮತ್ತು ಕೊಡುಕೊಳ್ಳುವಿಕೆ ಸಾಧ್ಯವಾಗುತ್ತದೆ. ಈಗ ಹುಟ್ಟಿಕೊಳ್ಳುತ್ತಿರುವ ಅಥವಾ ಸರ್ಕಾರ ಜನ್ಮ ನೀಡುತ್ತಿರುವ ಒಂದೇ ವಿಷಯಕ್ಕೆ ಸೀಮಿತಗೊಂಡಿರುವ ವಿಶ್ವವಿದ್ಯಾಲಯಗಳು ನಿಜ ಅರ್ಥದಲ್ಲಿ ವಿಶ್ವವಿದ್ಯಾಲಯಗಳೇ ಅಲ್ಲ. ಇವುಗಳು ಒಂದಷ್ಟು ಜನಕ್ಕೆ ಕೆಲಸ ಕೊಡಬಹುದೇ ಹೊರತು ಬೇರೇನೂ ಸಾಧಿಸಲಾರವು. ಈ ವಿಶ್ವವಿದ್ಯಾಲಯಗಳೂ ಅದರ ಒಂದು ಭಾಗ ಎನಿಸುತ್ತಿದೆ. ಆದರ್ಶ ಸ್ಥಿತಿಯೊಂದನ್ನು ಕಲ್ಪಿಸಿಕೊಳ್ಳಬಹುದಾದರೆ ಸಂಸ್ಕೃತ, ಭಾರತದ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಇರಬೇಕಾದ ಒಂದು ವಿಷಯ. ಆದರೆ ಅದನ್ನು ಸರ್ಕಾರ ಒಂದು ವಿಶ್ವವಿದ್ಯಾಲಯಕ್ಕೆ ಸೀಮಿತಗೊಳಿಸಿಬಿಟ್ಟಿದೆ. ಹಾಗೆಯೇ ತತ್ವಶಾಸ್ತ್ರವೂ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿರಬೇಕು.

ಈಗ ಸರ್ಕಾರ ಸ್ಥಾಪಿಸುತ್ತಿರುವ ಒಂದೊಂದೇ ವಿಷಯದ ವಿಶ್ವವಿದ್ಯಾಲಯಗಳು ಕುಲಪತಿ, ಕುಲಸಚಿವ, ಪ್ರಾಧ್ಯಾಪಕರ ಹುದ್ದೆಗಳನ್ನು ಸೃಷ್ಟಿಸಬಹುದೇ ಹೊರತು ಯಾವುದೇ ಉತ್ತಮ ಸಂಶೋಧನೆಗೆ ಕಾರಣವಾಗುವುದಿಲ್ಲ. ಜ್ಞಾನದ ಪ್ರಸರಣಕ್ಕೂ ಸಹಾಯ ಮಾಡುವುದಿಲ್ಲ. ಜಾನಪದ ವಿಶ್ವವಿದ್ಯಾಲಯವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಅದು ಕೇವಲ ಒಂದು ಜಾನಪದ ಸಂಶೋಧನಾ ಕೇಂದ್ರದಂತೆ ಕೆಲಸ ಮಾಡಬಹುದೇ ಹೊರತು ಒಂದು ವಿಶ್ವವಿದ್ಯಾಲಯದಂತಲ್ಲ. ಅಲ್ಲಿ ಕೆಲವು ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಜಾನಪದ ವಿಷಯದಲ್ಲಿ ರೂಪಿಸಬಹುದು. ಇಂಥದ್ದನ್ನು ವಿವಿಗಳು ಎಂದು ಕರೆಯುವ ಬದಲಿಗೆ ‘ಸಂಶೋಧನಾ ಸಂಸ್ಥೆಗಳು’ ಎನ್ನಬಹುದು. ಇವುಗಳನ್ನು ಸಾಧ್ಯವಾದರೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಇರುವಂತೆ ನೋಡಿಕೊಳ್ಳಬೇಕು. ಜಾನಪದದ ವಿದ್ಯಾರ್ಥಿಯೊಬ್ಬನಿಗೆ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಉತ್ತಮ ಪರಿಚಯವಿರಬೇಕು. ಅದನ್ನು ನೀಡದ ‘ಜಾನಪದ ವಿಶ್ವವಿದ್ಯಾಲಯ’ದಲ್ಲಿ ಅಧ್ಯಯನ ಮಾಡುವ ಯಾವ ವಿದ್ಯಾರ್ಥಿಯೂ ಏ.ಕೆ. ರಾಮಾನುಜನ್ ಅವರ ಮಟ್ಟದ ಜಾನಪದ ತಜ್ಞನಾಗಲಾರ. ಜಾನಪದ ಅಧ್ಯಯನವೆಂದರೆ ಅದೊಂದರ ಅಧ್ಯಯನವಷ್ಟೇ ಅಲ್ಲ. ಅದು ಭಾಷೆಯ ಅಧ್ಯಯನ, ಒಂದು ಸಮಾಜದ, ಸಂಸ್ಕೃತಿಯ ಅಧ್ಯಯನ. ಇನ್ನೂ ವಿಸ್ತರಿಸಿ ನೋಡುವುದಾದರೆ ಜಾನಪದ ಮದ್ದು, ಆಚರಣೆ ಇತ್ಯಾದಿಗಳನ್ನು ಅರಿಯಲು ಮನಃಶಾಸ್ತ್ರ, ವೈದ್ಯವಿಜ್ಞಾನಗಳ ಅರಿವೂ ಬೇಕಾಗುತ್ತದೆ. ಕೇವಲ ಜಾನಪದಕ್ಕೆ ಸೀಮಿತವಾದ ವಿಶ್ವವಿದ್ಯಾಲಯವೊಂದರಲ್ಲಿ ಇದು ಸಾಧ್ಯವಾಗುವುದಿಲ್ಲ. ಈಗ ಒಂದರ ಮೇಲೊಂದರಂತೆ ಸರ್ಕಾರ ಸ್ಥಾಪಿಸಲು ಹೊರಟಿರುವ ಒಂದೊಂದು ವಿಷಯದ ವಿಶ್ವವಿದ್ಯಾಲಯಗಳು ವಿಶ್ವದ ಎಲ್ಲ ಜ್ಞಾನವನ್ನು ನೀಡುವ ಸಂಸ್ಥೆ ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಗೇ ವಿರುದ್ಧವಾಗಿದೆ. ಸರ್ಕಾರ ಈ ಹುಂಬತನದಿಂದ ದೂರವಿರುವುದು ಜ್ಞಾನದ ಸೃಷ್ಟಿ ಮತ್ತು ಪ್ರಸರಣದ ದೃಷ್ಟಿಯಿಂದ ಒಳಿತು.

—-
ವಿಜಯ
ಕರ್ನಾಟಕ, ೩೧೧೧