೧. ನನ್ನ ‘ಕಸಿವಿಸಿ’ಗೆ ಕಾರಣ ಗೆಳೆಯ ಮೊಗಳ್ಳಿಯವರು ದಲಿತ ಪ್ರಜ್ಞೆಯನ್ನು ಹುಲಿಯ ರೂಪಕದಲ್ಲಿ ಕಂಡರೆಂಬುದು ಅಲ್ಲ. ಈ ‘ಹುಲಿ’ ಮಧ್ಯಮವರ್ಗವಾಗಿ ಪಳಗಬಹುದಲ್ಲವೆ ಎಂಬ ಅನುಮಾನ ನನ್ನನ್ನು ಬಾಧಿಸಿದಂತೆ ಮೊಗಳ್ಳಿಯವರನ್ನೂ ಬಾಧಿಸಿದ್ದಲ್ಲಿ ನಮ್ಮ ನಡುವೆ ಒಂದು ಅರ್ಥಪೂರ್ಣ ಸಂವಾದ ಸಾಧ್ಯವಾಗಬಹುದಿತ್ತು. ಎಲ್ಲರಂತೆ ದಲಿತರೂ ಮಧ್ಯಮವರ್ಗದ ಅವಕಾಶಗಳನ್ನೂ ಸವಲತ್ತುಗಳನ್ನೂ ಯಾಕೆ ಪಡೆಯಬಾರದು, ನಾವೆಲ್ಲರೂ ಪಡೆಯುತ್ತಿರುವಾಗ ಎಂಬ ಭಾವನೆಯೂ ನನ್ನಲ್ಲಿದೆ. ಆದರೆ ಕೆಲವರಿಗೆ ಮಾತ್ರ ಮಧ್ಯಮವರ್ಗವಾಗುವ ಅವಕಾಶವಿರುವ ನಮ್ಮ ವ್ಯವಸ್ಥೆಯಲ್ಲಿ ದಲಿತರು ಎಡ-ಬಲಗಳಾಗಿ ಒಡೆದುಕೊಳ್ಳುತ್ತಿರುವುದು ಇಂದಿನ ದುರಂತವಾಗಿದೆ. ಅಲ್ಲೊಬ್ಬ ಇಲ್ಲೊಬ್ಬ ದಲಿತನಂತೆ ಬಲು ನಿಧಾನವಾಗಿ ದಲಿತರು ಮೇಲೇರುತ್ತಿರುವುದರಿಂದ, ಅವರ ನಡುವೆಯೇ ಪೈಪೋಟಿ ಇರುವುದರಿಂದ, ಹೀಗೆ ಮೇಲೇರಿದವರು ತಾವು ಪುಣ್ಯವಂತರೆಂದು ಬಗೆದು ಎಲ್ಲ ಜಾತಿಯ ಮಧ್ಯಮವರ್ಗಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳಲು ಆಸೆಪಡುವುದು ಅನಿವಾರ್ಯವಿರಬಹುದು.

೨. ಆದರೆ ಈ ಪ್ರಕ್ರಿಯೆ ನಾಡಿನ ಬಹುಜನರಾದ ದಲಿತರ ಮುಖೇನ ಈ ನಾಗರಿಕತೆಗೆ ಪರ್ಯಾಯವಾದ ಇನ್ನೊಂದು ನಾಗರಿಕತೆಯನ್ನು ಬಯಸುವ ನನಗೂ ಮೊಗಳ್ಳಿಯವರಿಗೂ ನಿರಾಶಾದಾಯಕವಾಗಬಹುದೆಂದು ನಾನು ತಿಳಿದು, ‘ಖಾಸಗಿ’ಯಾಗಿ ಬರೆದ ನನ್ನ ಪತ್ರದಲ್ಲಿ ದಲಿತರು ಮಧ್ಯಮವರ್ಗ ಮಾತ್ರವಾಗಿಬಿಡುವ ಇಂದಿನ ಸ್ಥಿತಿಯ ಬಗ್ಗೆ ಅವರಿಗೆ ಹೇಳಿದ್ದೆ. ಆದರೆ ಇದೊಂದು ಸಮಸ್ಯೆಯೇ ಅಲ್ಲವೆಂದು ಅವರು ತಿಳಿಯುವುದಾದರೆ, ನಾನು ವಾದಿಸುವುದಿಲ್ಲ. ನನ್ನ ಆತಂಕವನ್ನು ಹಂಚಿಕೊಳ್ಳುವ ದಲಿತ ಗೆಳೆಯರು ಇದ್ದಾರೆಂದು ನನಗೆ ಗೊತ್ತು. ಆದರೆ ನಮ್ಮ ರಾಷ್ಟ್ರಾಧ್ಯಕ್ಷರನ್ನೂ, ಅಂಬೇಡ್ಕರ್‌ರನ್ನೂ ಉದಾಹರಿಸಿ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳುವುದು ಸರಿಯಲ್ಲವೆಂದು ಗೆಳೆಯ ಮೊಗಳ್ಳಿಗೆ ಸೂಚಿಸುತ್ತೇನೆ. ನನಗೆ ಅನುಮಾನವಿದೆ. ಅಮೆರಿಕದ ಕರಿಯರು ಕ್ರಮೇಣ ಬಿಳಿಯರಂತೆಯೇ ಆಗುತ್ತಿದ್ದಾರೆ. ಹಿಂದಿನ ಹಲವು ‘ಶೂದ್ರ’ರು ಇಂದಿನ ಬ್ರಾಹ್ಮಣರು; ‘ಸತ್ಯನಾರಾಯಣ ವ್ರತ’ ಪ್ರಿಯರು. ಹಿಂದಿನ ಹಲವು ಮಡಿವಂತ ಬ್ರಾಹ್ಮಣ ಕುಟುಂಬದ ಸದಸ್ಯರು ಇಂದಿನ ‘ಎನ್ ಆರ್ ಐ’ ಭಾಗ್ಯವಂತ ಕೂಲಿಗಳು. ಹೀಗಾಗಲು ದಲಿತರೂ ಯಾಕೆ ಹಾತೊರೆಯಬಾರದು? ಇದನ್ನು ತಡೆಯಬೇಕೆಂಬುದು ಇನ್ನೊಂದು ಬಗೆಯ ಕೆಟ್ಟ ಜಾತೀಯವಾದವಾಗಬಹುದು. ಈ ಐತಿಹಾಸಿಕ ಪ್ರಕ್ರಿಯೆಯಲ್ಲಿ ನಮ್ಮಂಥವರ ಕನಸುಗಳು ಮಾತ್ರ ಮುರಿಯುತ್ತಿವೆ ಎಂದು ನಮ್ರವಾಗಿ ಸೂಚಿಸಬಯಸುತ್ತೇನೆ.

೩. ಇನ್ನು ಇಪ್ಪತ್ತು ವರ್ಷಗಳಲ್ಲಿ, ಅಂದರೆ ಬಲು ಶೀಘ್ರವಾಗಿ, ಎಲ್ಲ ದಲಿತರೂ ವಿದ್ಯಾವಂತರಾಗಿ ಮೇಲೇರುವುದು, ಉದ್ಯೋಗಶೀಲರೂ, ಸೃಜನಶೀಲರೂ ಆಗುವುದು ಸಾಧ್ಯವಿದ್ದಲ್ಲಿ ಹೀಗೆ ತುಸುತುಸುವೇ ಮೇಲೇರಿ ಮಧ್ಯಮವರ್ಗದ ಎಲ್ಲ ಸ್ವಾರ್ಥ ಸುಖಗಳಿಗೆ ಮರುಳಾಗುವುದು ತಪ್ಪಬಹುದೇನೋ ಎನ್ನಿಸುವುದರಿಂದಲೇ ನಾನು ನನ್ನ ತುಮಕೂರಿನ ಭಾಷಣದಲ್ಲಿ ಎರಡು ಮುಖ್ಯ ಸಲಹೆಗಳನ್ನು ಜನರ ಎದುರು ಇಟ್ಟಿದ್ದೇನೆ. ಮೊದಲನೆಯದು, ಎಲ್ಲ ಖಾಸಗಿ ಸಂಸ್ಥೆಗಳಲ್ಲೂ, ಬಹುರಾಷ್ಟ್ರೀಯ ಉದ್ಯಮಗಳಲ್ಲೂ ದಲಿತರಿಗೆ ಮೀಸಲಾತಿ ಇರಬೇಕೆಂಬುದು. ಆದಷ್ಟು ಬೇಗ ಮೀಸಲಾತಿಯ ಅಗತ್ಯವೇ ಇಲ್ಲದ ಸಮಾಜ ನಮ್ಮದು ಆಗಬೇಕೆಂಬುದೇ ಇದಕ್ಕೆ ಕಾರಣ. ಎರಡನೆಯದು, ಎಲ್ಲ ಮಕ್ಕಳಿಗೂ ಪ್ರೈಮರಿ ಮುಗಿಯುವ ತನಕವಾದರೂ ಒಂದೇ ರೀತಿಯ ಶಾಲೆಗಳಲ್ಲಿ ಸಮಾನ ಶಿಕ್ಷಣ ಸಿಗಬೇಕೆಂಬುದು. ಎಲ್ಲ ಮಕ್ಕಳು ಒಟ್ಟಾಗಿ ಒಂದೇ ಬಗೆಯ ಶಿಕ್ಷಣ ಪಡೆಯುವುದು ಸ್ಥಿತಿವಂತರ ಮಕ್ಕಳ ದೃಷ್ಟಿಯಿಂದಲೂ ಬಹಳ ಒಳ್ಳೆಯದು; ಯಾಕೆಂದರೆ ಎಲ್ಲರಂತೆ ಮನುಷ್ಯರಾಗಿ ಇವರೂ ಬೆಳೆಯುತ್ತಾರೆ.

೪. ದಲಿತರು ತಮ್ಮ ದೈನ್ಯ ಸ್ಥಿತಿಯಿಂದ ಹೊರಬಂದಮೇಲೆ ಅವರೂ ಉಳಿದವರಂತೆ ಗರ್ವಿಷ್ಠರೂ, ತುಳಿಸಿಕೊಂಡ ದ್ವೇಷವನ್ನು ತಮಗಿಂತ ಕೆಳಗಿರುವವರನ್ನು ತುಳಿಯುವುದರ ಮೂಲಕ ತೀರಿಸಿಕೊಳ್ಳುವವರೂ ಆಗುವುದೇ ಇಲ್ಲವೆಂದು ಮಾನವ ಇತಿಹಾಸ ಬಲ್ಲವರು ಹೇಳಲಾರರು. (ಸ್ಟಾಲಿನ್, ಮಾವೋರವರು ಅಧಿಕಾರದಲ್ಲಿ ಬದಲಾದ ಕ್ರಮ, ಈಚೆಗೆ ಟಿಬೆಟ್ಟನ್ನು ಚೀನೀಯರು ಆಕ್ರಮಿಸಿಕೊಂಡಿರುವ ಕ್ರಮ, ಬ್ರಿಟಿಷರ ಆಡಳಿತದಿಂದ ಹೊರಬಂದ ನಾವು-ಕೆಲವು ದಲಿತ ವರ್ಗಗಳೂ ಸೇರಿದಂತೆ-ಮೈನಾರಿಟಿಗಳನ್ನು ಹಿಂಸಿಸುತ್ತಿರುವ ಕ್ರಮ-ಎಲ್ಲವೂ ಇದಕ್ಕೆ ಉದಾಹರಣೆ) ನಾವೆಲ್ಲರೂ ಕೇವಲ ಮನುಷ್ಯರೇ. ದೇವತೆಗಳೂ ಆಗಬಲ್ಲ, ರಾಕ್ಷಸರೂ ಆಗಬಲ್ಲ ಮನುಷ್ಯರೇ. ಗುಜರಾತಿನ ಭೂಕಂಪದಲ್ಲಿ ತತ್ತರಿಸಿದವರೇ, ಮೃತ್ಯುವನ್ನು ಅಷ್ಟು ಹತ್ತಿರದಿಂದ ಕಂಡವರೇ ಈಗ ಹೇಗೆ ವರ್ತಿಸುತ್ತಿದ್ದಾರೆ. ನೋಡಿ, ಜೀವಂತ ಇರುವವರನ್ನು ಸುಡಬೇಕೆಂದು ಹಿಂದೂಗಳಿಗೂ ಮುಸ್ಲಿಮರಿಗೂ, ಭೂಕಂಪದ ಘೋರ ಅನುದ್ದಿಶ್ಯವಾದ ಕ್ರೌರ್ಯ ಕಂಡವರಿಗೂ ಹೇಗೆ ಸಾಧ್ಯವಾಯಿತು? ತಿಳಿಯದು.

೫. ಬ್ರಾಹ್ಮಣರಂತೆ ಬಿಳಿಯರೂ ಕರಿಯರೂ ಹಿಂದುಳಿದ ಜಾತಿಯವರೂ ಕೇವಲ ಮನುಷ್ಯರೇ. ಆದರೆ ಹೀಗಾಗಲೇಬೇಕೆಂದೂ ಇಲ್ಲ. ತುಳಿಸಿಕೊಂಡವರು ತಾವೇ ತುಳಿಯುವವರು ಆಗದಂತೆ ನಮ್ಮ ಮೌಲ್ಯಗಳಲ್ಲೇ ಆಮೂಲಾಗ್ರ ಬದಲಾವಣೆ ಮಾಡಬಲ್ಲವರೂ ತುಳಿತಕ್ಕೊಳಗಾದ ದಲಿತರೇ ಇರಬಹುದು, ಎಲ್ಲರಿಗಿಂತ ಹೆಚ್ಚಾಗಿ ದಲಿತರೇ ಒಂದು ಜನಸಮೂಹವಾಗಿ ಇರಬಹುದು. ಇಂಥ ಒಂದು ನಂಬಿಕೆಯ ಬಲದಲ್ಲೇ ದಲಿತ ಹೋರಾಟಗಾರರ ಪ್ರಜ್ಞೆ ರೂಪುಗೊಳ್ಳಬೇಕು ಎಂಬ ನಮ್ಮ ಆಸೆಯೇ ಈ ಬಗೆಯ ಸಂವಾದಕ್ಕೆ ನಮ್ಮನ್ನು ಹಚ್ಚುವುದೆಂದು ನಂಬಿ, ಆಸೆಪಟ್ಟು ನಾನು ಈ ಮಾತುಗಳನ್ನು ಬರೆದಿದ್ದೇನೆ. ಜಾಗತೀಕರಣದ ಹಿನ್ನೆಲೆಯಲ್ಲಿ ಎಲ್ಲ ಬಗೆಯ ಅಸಮಾನತೆಯ ಪ್ರಶ್ನೆಗಳೂ ಅಪ್ರಸ್ತುತವಾಗಬಹುದಾದ ಹಿನ್ನೆಲೆಯ ಆತಂಕದಲ್ಲೂ ನಾನು ಮಾತಾಡುತ್ತಿದ್ದೇನೆ.

೬. ನನ್ನ ಪ್ರೀತಿಯ ಲೋಕದಲ್ಲಿ ಇರುವವರು ಬ್ರಾಹ್ಮಣರು ಮಾತ್ರವಲ್ಲ; ಬ್ಲೇಕನ ಮಾತೆತ್ತಿರುವುದು ಮೊಗಳ್ಳಿಯ ಬಾಯಿ ಮುಚ್ಚಿಸಲೂ ಅಲ್ಲ, ಕುವೆಂಪುರನ್ನು ಹಳಿಯಲೂ ಅಲ್ಲ; ಬೇಂದ್ರೆ, ಮಾಸ್ತಿ, ಡಿವಿಜಿ, ನಾನು, ಅಡಿಗ ಇತ್ಯಾದಿಯವರು ಬ್ರಾಹ್ಮಣ್ಯವನ್ನು ಮೀರಿದವರೂ ಅಲ್ಲ…. ಇತ್ಯಾದಿ ಇತ್ಯಾದಿ ವಿಷಯಗಳನ್ನು ಆತ್ಮಸಮರ್ಥನೆಯಲ್ಲಿ ನಾನು ಹೇಳಿಕೊಳ್ಳಬೇಕಾದಂತೆ ಮೊಗಳ್ಳಿಯವರು ನನ್ನನ್ನು ಹಿಂಸಿಸಕೂಡದು. ನಾನು ‘ಅಗ್ನಿ’ಯ ದಿವ್ಯದಲ್ಲಿ ಸೀತೆಯಂತೆ ಪರಿಶುದ್ಧನಾಗಿದ್ದೇನೆಂದು ತೋರಿಕೊಳ್ಳಬೇಕಾಗಿಲ್ಲ. ನನ್ನ ಅಜ್ಜನ ಕಾಲದ ವೈದಿಕ ಬ್ರಾಹ್ಮಣರಾಗಿ ನನ್ನ ಅಪ್ಪನೂ ಉಳಿಯಲಿಲ್ಲ. ನನ್ನ ‘ದಿವ್ಯ’ ಕಾದಂಬರಿ ಗತಿಸಿದ ಒಂದು ವ್ಯವಸ್ಥೆಯನ್ನು ಚಿತ್ರಿಸುವುದೇ ಹೊರತು ಏನನ್ನೂ ‘ಎತ್ತಿ’ ಸ್ಥಾಪಿಸಲು ಬರೆದಿದ್ದಲ್ಲ.

೭. ನಮ್ಮಿಬ್ಬರ ನಡುವಿನ ಪತ್ರವ್ಯವಹಾರ ಮಾತ್ರವಾಗಿ ಈ ಸಂವಾದ ನಡೆದಿದ್ದಲ್ಲಿ ಈ ಬಗೆಯ ಆಕರ್ಷಕವಾದ, ಸುಲಭವಾದ ಬ್ರಾಹ್ಮಣನಿಂದೆಯಲ್ಲಿ ನನ್ನನ್ನು ಒಳಪಡಿಸುವ ಪ್ರಲೋಭನೆಗೆ ಮೊಗಳ್ಳಿ ಒಳಗಾಗುತ್ತಿರಲಿಲ್ಲವೆಂದು ನಮ್ರವಾಗಿಯೇ ನಾನು ಸೂಚಿಸಬಯಸುತ್ತೇನೆ. ಇದು ನಿಜವಲ್ಲದಿದ್ದರೆ ನನಗೆ ಸಂತೋಷವೇ.

೮. ಮೊಗಳ್ಳಿಯಂತೆ ನಾನೂ ಆಸೆಪಡುವುದು ಹುಟ್ಟಿನಿಂದಲೇ ಶ್ರೇಷ್ಠವೆಂದು ಪರಿಗಣಿತವಾಗುವ ವ್ಯವಸ್ಥೆಯ ನಾಶವಾಗಬೇಕೆಂದು; ಎಲ್ಲ ಸಂಸ್ಥೆಗಳಲ್ಲೂ, ಪ್ರಪಂಚದ ಎಲ್ಲೆಲ್ಲೂ ಇರುವ ತರತಮಗಳು, ಎಷ್ಟೇ ಅನಿವಾರ್ಯವಿದ್ದರೂ, ಮನುಷ್ಯನ ಘನತೆಗೆ ಅಡ್ಡಿಯಾಗಬಾರದೆಂದು.

೯. ಮೊಗಳ್ಳಿಯವರು ಹೇಳಬೇಕೆಂದು ಬಯಸುವುದಕ್ಕೆ ‘ಹುಲಿ’ಯ ಸಂಕೇತ ತೊಡಕುಗಳನ್ನು ಸೃಷ್ಟಿಸಬಹುದೆಂಬ ಅನುಮಾನ ನನಗಿದೆ. ‘ಹುಲಿ’ ತನ್ನ ಸ್ವಭಾವವನ್ನೇ ಬಿಟ್ಟುಕೊಡುವಂತೆ ಒತ್ತಾಯಿಸುವ ಕಥೆಯಲ್ಲಿ ಸಮಸ್ಯೆಗಳಿವೆ, ನಿಜ. ಆದರೆ ಸಂಸ್ಕೃತದಲ್ಲಿ ಇರುವ ‘ಗೋವಿನ ಕಥೆ’ಯಲ್ಲಿ ಹುಲಿ ಸನ್ಯಾಸ ದೀಕ್ಷೆಯನ್ನು ತೆಗೆದುಕೊಳ್ಳುತ್ತದೆ ಎಂದು ಓದಿದ ನೆನಪು ನನಗೆ. ಆದರೆ ಸ್ವಭಾವದಲ್ಲಿ ಬದಲಾಗಲಾರದ ಹುಲಿ ಕನ್ನಡದಲ್ಲಿ ಹಾರಿ ಪ್ರಾಣಬಿಡುತ್ತದೆಂಬುದು ಮನೋಜ್ಞವಾದ ಬದಲಾವಣೆಯಾಗಿದೆ. (ಈ ವಿವರಣೆ ಮೊಗಳ್ಳಿ ಜೊತೆಗಿನ ವಾದಕ್ಕೆಂದು ನಾನು ಮಂಡಿಸಿಲ್ಲ.)

—-
ಅಗ್ನಿಪತ್ರಿಕೆಯಲ್ಲಿ ಮೊಗಳ್ಳಿಯವರುಹುಲಿಮತ್ತುಪುಣ್ಯಕೋಟಿಕುರಿತು ಎತ್ತಿದ ವಿಚಾರಗಳಿಗೆ ಬರೆದ ಪ್ರತಿಕ್ರಿಯೆ.