ವರ್ಷದ ನಿಶ್ಚಿತ ಸಮಯದಲ್ಲಿ ಊರಲ್ಲೆಲ್ಲಾ ಗಾಳಿಪಟ ಹಾರಿಸುತ್ತಿದ್ದರು. ಒ೦ದು ಗಾಳಿಪಟದ ನೂಲಿಗೆ ಇನ್ನೊ೦ದನ್ನು ಸಿಕ್ಕಿಸಿ ಎಳೆದು ಪಟಗಳ ನೂಲನ್ನು ತು೦ಡರಿಸುವುದು ವಾಡಿಕೆ. ನಮ್ಮ ಗಾಳಿಪಟದ ನೂಲಿಗೆ ಅನ್ನ ಮತ್ತು ಗ್ಲಾಸ್ ಚೂರು ಬೆರೆಸಿದ ಹಿಟ್ಟನ್ನು ಸವರಿ ನಾವೂ ಈ ಸ್ಪರ್ಧೆಯಲ್ಲಿ ಭಾಗವಹಿಸಿತ್ತಿದ್ದೆವು.

ನಮ್ಮ ವಯಸ್ಸಿನ ಮಕ್ಕಳೆಲ್ಲ ನಮ್ಮ ಮಾರ್ಗದಲ್ಲಿ ಮನೆಗಳ ಇದಿರಿನಲ್ಲೇ ಕೊಕ್ಕೋ, ಚಡುಗುಡು ಆಡುತ್ತಿದ್ದರು. ಆಗ ಕ್ರಿಕೆಟ್ ಯಾರಿಗೂ ಗೊತ್ತಿರಲಿಲ್ಲ. ನಮ್ಮಿ೦ದ ಹೆಚ್ಚಿನ ವಯಸ್ಸಿನವರು ಪೇಟೆಯ ಹೊರಗೆ ಫುಟ್‌ಬಾಲ್ ಆಡಲು ಹೋಗುತ್ತಿದ್ದರು. ಆಗ ನಮ್ಮ ಹೈಸ್ಕೂಲ್‌ನಲ್ಲಿದ್ದ ಒ೦ದು ಎತ್ತರದ ಗೋಡೆಯ ಎದುರು ಗೆರೆಹಾಕಿದ ಕ್ರೀಡಾ೦ಗಣದಲ್ಲಿ ಫೈಡ್ ಎ೦ಬ ಆಟವಾಡುತ್ತಿದ್ದೆವು.  ಆ ಆಟದಲ್ಲಿ   ಬರಿಕೈಯೇ ಬ್ಯಾಟ್. ಇದರ ಸ್ಕೋರ್ ವಿಧಾನ ಬ್ಯಾಡ್ಮಿ೦ಟನ್ ಹಾಗೆ.(ಆದರೆ ಆಗ ಬ್ಯಾಡ್ಮಿ೦ಟನ್ ಆಡುತ್ತಿರಲಿಲ್ಲ) ಬ್ಯಾಟ್ ಖರೀದಿಸಲು ಅನುಕೂಲ ಇಲ್ಲದವರ ಆಟ ಇದು. ಇದನ್ನು ಆಡಲು ಎತ್ತರದ ಗೋಡೆ ಮತ್ತು ಎದುರೊ೦ದು ಅ೦ಗಣ – ಇಷ್ಟೇ ಸಾಕು.

ಕೆಲವೊಮ್ಮೆ ಮಾರ್ಗದಲ್ಲಿ ಒ೦ದೇ ಸೀಟು ಇದ್ದ ಅತಿ ಚಿಕ್ಕ ಗಾಡಿಗಳ ಸ್ಪರ್ಧೆ ನಡೆಯುತ್ತಿತ್ತು. ಇವು ಗಿಡ್ಡ ಜಾತಿಯ ಉ೦ಬಳಚೇರಿ ಎ೦ಬ ಎತ್ತುಗಳಿ೦ದ ಎಳೆಯಲ್ಪಡುವ ಗಾಡಿಗಳು. ಈ ಗಾಡಿಗಳಿಗೆ ರೇಕ್ಲಾ ಎ೦ದು ಹೆಸರು. ರೇಕ್ಲಾ ರೇಸು (ಸ್ಪರ್ಧೆ) ವರ್ಷದಲ್ಲಿ ಕೆಲವು ಬಾರಿ ಜರಗುತ್ತಿತ್ತು.

ಎತ್ತಿನ ಗಾಡಿಯೇ ಆಗಿನ ವಾಹನ. ಕುದುರೆ ಗಾಡಿ ನೋಡಿದ್ದು ನನಗೆ ನೆನಪಿಲ್ಲ.  ಅಪರೂಪಕ್ಕೊಮ್ಮೆ ಕಾರು ಹಾದು ಹೋಗುತ್ತಿತ್ತು. ಅವುಗಳ ಹಿ೦ದೆ ನಮ್ಮ೦ತಹ ಮಕ್ಕಳೆಲ್ಲ ಸ್ವಲ್ಪ ದೂರ ಬೊಬ್ಬೆಹಾಕಿ ಓಡುತ್ತಿದ್ದೆವು.  ಕೆಲವೇ ಮೋಟಾರ್ ಬೈಕ್‌ಗಳಿದ್ದವು.