ನಮ್ಮವರು ನಮಗಿಲ್ಲ
ನಮಗೆ ನಾವೇ ಎಲ್ಲ
ಕಟ್ಟ ಕಡೆಗೆ.
ನಂಬಿದವರೇ ನಮಗೆ
ಕಾರುವರು ವಿಷದ ಹೊಗೆ
ಆಂತರ್ಯದೊಳಗೆ.

ಹೂವೆಂದು ಅಪ್ಪಿದೆನು ;
ಹಾವಾಗಿ ಬುಸುಗುಟ್ಟಿ
ಹೆಡೆಯೆತ್ತಿತು.
ಒಲವೆಂದು ನಂಬಿದೆನು
ಹಗೆತನದ ಹೊಗೆಯೆದ್ದು
ಪ್ರಜ್ವಲಿಸಿತು.

ಹೊಳೆಯಲ್ಲಿ ಮುಳು ಮುಳುಗಿ
ಸಾಯುತಿರೆ, ದಡದಲ್ಲಿ
ನಿಂತು ನಕ್ಕವರು
ಈಜಿ ದಡಕೈತರಲು
ನಮ್ಮವನು ನೀನೆಂದು
ಬೆನ್ನ ತಟ್ಟುವರು.

ಇದು ಲೋಕ, ಇದು ಬಾಳು ;
ಇಂತಿರುವುದೀ ಒಂದು
ದೈವದಾಟ.
ಇದು ಪೂರ್ಣವೇನಲ್ಲ ;
ತಿಳಿದವಗೆ ಜಗವೆಲ್ಲ
ರಸದ ಊಟ.