ಮೇಲ್ನೋಟಕ್ಕೆ ಮಾತು ಮತ್ತು ಬರಹಗಳ ಸಂಬಂಧ ಅವಿನಾಭಾವ ಎನಿಸುವುದು ಸಹಜ. ಆದರೆ ಇವುಗಳ ಕಾರ್ಯ ಸ್ವರೂಪ ಬೇರೆಬೇರೆ. ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಊಹಿಸಲೂ ಸಾಧ್ಯವಿಲ್ಲದಂತಿದ್ದ ಕಾರ್ಯಗಳನ್ನು ಇಂದು ಎರಡೂ ನಿರ್ವಹಿಸುತ್ತಿವೆ ಎಂದರೆ ಆಶ್ಚರ್ಯವಾಗಬಹುದು. ಉದಾಹರಣೆಗೆ ಮಾಹಿತಿಗಳನ್ನು ದಾಖಲಿಸುವಲ್ಲಿ, ಬರಹದ ಭಾಷೆಗಿರುವ ಶಾಶ್ವತ ಗುಣಗಳನ್ನು ಆಧರಿಸಿ ಅದೇ ಸೂಕ್ತವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಧ್ವನಿ ಸಂಗ್ರಹಾಲಯ, ಕುರುಡರಿಗಾಗಿ ಪುಸ್ತಕಗಳು, ಧ್ವನಿ ಮಾಧ್ಯಮದಲ್ಲಿ ಸಾಹಿತ್ಯ ಇವುಗಳನ್ನು ಗಮನಿಸಿದರೆ ಮಾತು ಬರಹಕ್ಕಿಂತ ಯಾವ ರೀತಿಯಲ್ಲೂ ಹಿಂದೆ ಬಿದ್ದಿಲ್ಲ. ಸಂದೇಶಗಳನ್ನು ಬರಹದ ಭಾಷೆಯಲ್ಲಿ ಕಳಿಸುವುದು ಒಮ್ಮೆ ಸೂಕ್ತವೆನಿಸಿತ್ತು. ಆದರೆ ಇಂದು ಧ್ವನಿ ಸುರಳಿಗಳು, ದೂರವಾಣಿ ಕರೆಗಳನ್ನು ಸ್ವೀಕರಿಸಿ ಉತ್ತರಿಸುವ ಯಂತ್ರಗಳು, ರೇಡಿಯೋ (ಫೋನ್-ಇನ್) ಮುಂತಾದವು ಬರಹದ ಕಾರ್ಯಕ್ಷೇತ್ರವನ್ನು ಕ್ರಮೇಣ ಆವರಿಸುತ್ತಿದೆ. ಆತ್ಮೀಯತೆ, ಸಂಪ್ರದಾಯ ಇತ್ಯಾದಿ ಕಾರಣಗಳಿಂದಾಗಿ ಸಾಮಾಜಿಕ ಸನ್ನಿವೇಶಗಳಲ್ಲಿ ಮಾತು ಬರಹಕ್ಕಿಂತ ಮೇಲುಗೈ ಪಡೆದಿತ್ತು. ಆದರೆ ಕ್ರಮೇಣ ಬರಹದ ಭಾಷೆಯ ಸ್ವರೂಪ ಇಂದು ಬದಲಾಗಿ ಆಹ್ವಾನ ಪತ್ರಿಕೆಗಳು, ಅಭಿನಂದನ ಸಂದೇಶಗಳು ಮುಂತಾದವು ಮಾತಿನಷ್ಟೇ ಆತ್ಮೀಯತೆಯನ್ನು ಹೊಂದಿವೆ. ಆದರೆ ಈಗಲೂ ಕೆಲವು ಸಮುದಾಯಗಳಲ್ಲಿ ಮಾತು ಈ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿದೆ.

ಮಾತು ಮೊದಲೊ ಬರಹ ಮೊದಲೊ : ಈ ಪ್ರಶ್ನೆ ಮೊಟ್ಟೆಯಿಂದ ಕೋಳಿಯೋ, ಕೋಳಿಯಿಂದ ಮೊಟ್ಟೆಯೊ ಎನ್ನುವಷ್ಟು ಸಂದಿಗ್ದವಲ್ಲ. ಇಂದು ಜಗತ್ತಿನಲ್ಲಿ ಸಾವಿರಾರು, ಅಷ್ಟೇ ಏಕೆ ಭಾರತದಲ್ಲಿಯ ನೂರಾರು ಭಾಷೆಗಳು ಕೇವಲ ಮಾತಿನಲ್ಲಿ ಮಾತ್ರ ಬಳಕೆಯಲ್ಲಿವೆ ಎಂದರೆ ಪ್ರಶ್ನೆಗೆ ಉತ್ತರ ಸ್ಪಷ್ಟ. ಮಾತು ಸಹಜಕ್ರಿಯೆ, ಅನೌಪಚಾರಿಕವಾಗಿ ಲಭಿಸುವಂತಹ ಸಾಧನ. ಬರಹ ಹಾಗಲ್ಲ. ಔಪಚಾರಿಕವಾಗಿ ಕಲಿಯುವ ಜ್ಞಾನ. ದೈನಂದಿನ ಭಾಷೆಯ ಚಟುವಟಿಕೆಗಳಿಗೆ ಮಾತು ಅನಿವಾರ್ಯ. ಬರಹ ಪೂರಕವಷ್ಟೆ. ಹೀಗಾಗಿ ಮಾತು ವೊದಲು ಸೃಷ್ಟಿಯಾಯಿತು. ಬಹುಕಾಲದ ನಂತರ ಬರಹ ವಿಕಸನವಾಯಿತು. ಈಗಲೂ ಭಾಷೆಯ ಚರಿತ್ರೆಯನ್ನು ಅಧ್ಯಯನ ಮಾಡುವವರು ಲಿಖಿತ ದಾಖಲೆಗಳನ್ನು ಆಧರಿಸಿ ಆ ಕಾಲಕ್ಕಿಂತ ಬಹು ಮುಂಚೆಯೇ ಭಾಷೆ ಆಡುರೂಪದಲ್ಲಿತ್ತು ಎಂದು ಅಭಿಪ್ರಾಯ ಪಡುವುದು ಈ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತದೆ.

ಮಾತು ಹೆಚ್ಚೋ ಬರಹ ಹೆಚ್ಚೋ : ಭಾಷಾಧ್ಯಯನದ ಚರಿತ್ರೆಯನ್ನು, ಸ್ವರೂಪವನ್ನು ಗಮನಿಸಿದಲ್ಲಿ ಹಲವಾರು ಶತಮಾನಗಳ ಕಾಲ ಬರಹ ಮೇಲುಗೈ ಸಾಧಿಸಿತ್ತು ಎಂಬುದು ಸ್ಪಷ್ಟವಾಗುತ್ತದೆ. ಸಾಹಿತ್ಯದ ಮಾಧ್ಯಮಗಳಾಗಿ, ಭಾಷೆಯ ಪ್ರಮಾಣಿತ ಮಾಧ್ಯಮವಾಗಿ, ಶಾಶ್ವತ, ಅಧಿಕೃತತೆಯ ಗುಣಗಳಿಂದಾಗಿ ಬರಹ ಉತ್ತಮ ಮಾದರಿ ಎನಿಸಿತ್ತು. ವ್ಯಾಕರಣ ಸೂತ್ರಗಳಿಗೆ ನಿಯಮಗಳಿಗೆ ಬರಹದ ಭಾಷೆಯಿಂದಲೇ ಉದಾಹರಣೆಗಳನ್ನು ಆರಿಸಿಕೊಳ್ಳುತ್ತಿದ್ದುದು ಈ ಧೋರಣೆಗೆ ಸಾಕ್ಷಿ. ಈ ದೃಷ್ಟಿಯಿಂದ ಆಡುನುಡಿಯನ್ನು ಅಧ್ಯಯನ ಯೋಗ್ಯ ವಲ್ಲವೆಂದು ಅಶುದ್ಧ, ಸುಸಂಬದ್ಧವಲ್ಲದ ಮಾದರಿಯೆಂದೂ ಕಡೆಗಣಿಸಿದ್ದುಂಟು. ಅಷ್ಟೇ ಏಕೆ, ಮಾತು ಕಲಿಸಲು ಬರಹದ ನಿಯಮಗಳನ್ನು, ವಿಧಿವಿಧಾನಗಳನ್ನು ಅನುಸರಿಸುವುದುಂಟು. ಅಂದರೆ ಭಾಷೆಗೆ ಸಂಬಂಧಿಸಿದಂತೆ ಇದೇ ಸರಿ ಎಂದು ಆಜ್ಞಾಪೂರ‌್ವಕವಾಗಿ ಹೇಳುವ ಕ್ರಿಯೆಗೆ ಬರಹವೇ ಆಧಾರ.

ಈ ನಿಲುವು ಬದಲಾದುದು ಕೇವಲ ಇತ್ತೀಚೆಗೆ. ಅಂದರೆ ಹತ್ತೊಂಬತ್ತನೆಯ ಶತಮಾನದಲ್ಲಿ. ಮಾತು ಬರಹಕ್ಕಿಂತ ಬಹಳ ಶತಮಾನಗಳಷ್ಟು ಹಳೆಯದು, ಅದು ಮನುಷ್ಯನಲ್ಲಿ ಬೆಳೆಯುವ ಸಹಜ ಕ್ರಿಯೆ, ಬರಹ ಮಾತಿನಿಂದ ನಿಷ್ಪನ್ನಗೊಂಡ ರೂಪ ಎಂಬಿತ್ಯಾದಿ ಅಂಶಗಳನ್ನು ಗಮನಿಸಿ ಮಾತೇ ಅಧ್ಯಯನ ಯೋಗ್ಯವೆಂಬ ಅಭಿಪ್ರಾಯ ಭಾಷಾಶಾಸ್ತ್ರಜ್ಞರಿಂದ ವ್ಯಕ್ತವಾಯಿತು. ಬರಹ ಭಾಷೆಯಲ್ಲ. ಅದು ಮಾತನ್ನು ಸಂಕೇತಗಳ ಮೂಲಕ ದಾಖಲಿಸುವ ಸಾಧನವಷ್ಟೆ ಎಂದು ಅಮೇರಿಕದ ಭಾಷಾಶಾಸ್ತ್ರಜ್ಞ ಲಿಯೊನಾರ್ಡ್‌ ಬ್ಲೂಮ್ ಫೀಲ್ಡ್ ಸಾರಿದ ಮೇಲೆ ಭಾಷಾಧ್ಯಯನದ ದಿಸೆಯೇ ಬೇರೆಯಾಯಿತು. ಜಗತ್ತಿನಾದ್ಯಂತ ಮಾತೇ ಪ್ರಾಥಮಿಕ ಸಂಪರ್ಕ ಮಾಧ್ಯಮವಾಗಿದ್ದರಿಂದ ಆಡು ನುಡಿಯ ಅಧ್ಯಯನವೇ ನಿಜವಾದ ಭಾಷಾಧ್ಯಯನವೆಂಬ ಅಭಿಪ್ರಾಯ ಈ ಹಂತದಲ್ಲಿ ರೂಪುಗೊಂಡಿತು. ಆಡುನುಡಿಗೆ ನೀಡಲಾದ ಈ ವಿಶೇಷ ಒತ್ತಿನಿಂದ ಬರಹ ತೆರೆಮರೆಗೆ ಸರಿಯಿತು. ಭಾಷೆಯ ವಿಶ್ಲೇಷಣೆಗೆ, ಅಧ್ಯಯನಕ್ಕೆ ಆಡುನುಡಿಯೇ ಆಧಾರ, ಬರಹವೇನಿದ್ದರೂ ಶಾಸ್ತ್ರ ಗ್ರಂಥಗಳ, ಸಾಹಿತ್ಯದ ಮಾಧ್ಯಮ ಮಾತ್ರ ಎಂಬುದು ಭಾಷಾಶಾಸ್ತ್ರಜ್ಞರ ಅಭಿಮತ. ಹೀಗಾಗಿ ಆಡುನುಡಿಯನ್ನು ಯಥಾವತ್ತಾಗಿ ದಾಖಲಿಸಿ ಅಧ್ಯಯನ ಮಾಡಿ ರೂಪಿಸಿದ ಹಲವಾರು ವ್ಯಾಕರಣಗಳು ಇಂದು ಲಭ್ಯವಿದೆ. (ಈ ಪೈಕಿ ವಿಲಿಯಂ ಬ್ರೈಟ್‌ನ ಎನ್ ಔಟಲೈನ್ ಆಫ್ ಕಾಲೋಕ್ವಿಯಲ್ ಕನ್ನಡ, ಡಾ. ಹಾ.ಮಾ. ನಾಯಕರ ಕನ್ನಡ ಲಿಟರರಿ ಅಂಡ್ ಕಾಲೋಕ್ವಿಯಲ್ ಡಾ. ಎಸ್.ಎನ್. ಶ್ರೀಧರ್‌ರವರ ಮಾಡ್ರನ್ ಕನ್ನಡ, ಹೆರಾಲ್ಡ್ ಶಿಫ್‌ಮೆನ್‌ರವರ ದಿ ರೆಫರೆನ್ಸ್ ಗ್ರಾಮರ್ ಆಫ್ ಕನ್ನಡ ಪ್ರಮುಖ ಗ್ರಂಥಗಳು)

ಹಾಗೆ ನೋಡಿದರೆ ಈ ಎರಡೂ ಮಾಧ್ಯಮಗಳ ಪೈಕಿ ಯಾವುದೂ ಮೇಲಲ್ಲ, ಕೀಳಲ್ಲ.

ಮಾತು ಬರಹಗಳ ನಡುವಿನ ವ್ಯತ್ಯಾಸ : ಮಾತಿನಲ್ಲಿ ಎರಡು ಪ್ರಮುಖ ಭಾಗಗಳನ್ನು ಕಾಣಬಹುದು. ಮೊದಲನೆಯ ಔಪಚಾರಿಕ ಭಾಷೆ ಮತ್ತೊಂದು ಅನೌಪಚಾರಿಕ ಭಾಷೆ. ಸಭೆ ಸಮಾರಂಭಗಳಲ್ಲಿ ಗಣ್ಯರೊಡನೆ ವ್ಯವಹರಿಸುವಾಗ, ಪಠ್ಯಪುಸ್ತಕಗಳಲ್ಲಿ, ಇನ್ನಿತರೆ ಬೋಧನ ಸಾಮಗ್ರಿಗಳಲ್ಲಿ, ದಿನಪತ್ರಿಕೆ, ನಿಯತಕಾಲಿಕೆ, ಶಾಸ್ತ್ರ ಗ್ರಂಥಗಳಲ್ಲಿ, ಸಾಹಿತ್ಯ ಕೃತಿಗಳಲ್ಲಿ ಬಹುಮಟ್ಟಿಗೆ ಔಪಚಾರಿಕ ಭಾಷೆ ಬಳಕೆಯಾಗುತ್ತದೆ. ಇದು ವ್ಯಾಕರಣಬದ್ಧವಾಗಿದ್ದು, ಭಾಷೆಯನ್ನು ಬಳಸುವ ವಿವಿಧ ಪ್ರಾದೇಶಿಕ, ಜಾತಿ, ವರ್ಗ, ಉಪಭಾಷೆ ಮುಂತಾದ ಹಿನ್ನಲೆಯನ್ನುಳ್ಳವರೆಲ್ಲರೂ ಅರ್ಥ ಮಾಡಿಕೊಳ್ಳುವಂತಹ ಪ್ರಮಾಣಿತ ಅಕ್ಷರ ಸಂಯೋಜನೆ, ಪದಗಳು ಮುಂತಾದವುಗಳನ್ನು ಒಳಗೊಂಡಿರುತ್ತದೆ. ಆದರೆ ಅನೌಪಚಾರಿಕ ಭಾಷೆ ಬಹುಮಟ್ಟಿಗೆ ಸಾಂದರ್ಭಿಕವಾಗಿದ್ದು ಆಯಾ ವೃತ್ತಿ, ವರ್ಗ, ಸಂದರ್ಭ ಮುಂತಾದ ಹಿನ್ನೆಲೆಗೆ ಅನುಗುಣವಾಗಿ ಬಳಕೆ ಯಾಗುತ್ತದೆ. ಅನೌಪಚಾರಿಕ ಭಾಷೆ ವ್ಯಾಕರಣಬದ್ಧವಾಗಿರಬೇಕಿಲ್ಲ. ಆದರೆ ಒಟ್ಟಾರೆ ಸಂಕಥನದ ರಚನೆಯ ದೃಷ್ಟಿಯಿಂದ ಚೌಕಟ್ಟನ್ನು ಒಳಗೊಂಡಿರುತ್ತದೆ. ಇಷ್ಟೇ ಅಲ್ಲದೆ ಅನೇಕ ಭಾವಸೂಚಕ ಪದಗಳು ಅಲ್ಲಲ್ಲಿ ಸಂದರ್ಭೋಚಿತವಾಗಿ ಬಳಕೆಯಾಗುತ್ತವೆ. ಈ ಹಿನ್ನೆಲೆಯನ್ನು ಗಮನಿಸಿದಲ್ಲಿ ಔಪಚಾರಿಕ ಭಾಷೆಯೇ ಬರಹದಲ್ಲಿ ಹೆಚ್ಚು ಕಂಡುಬರುತ್ತದೆ. ಕಥೆ, ಕಾದಂಬರಿ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಘಟನೆಯ ಸ್ಥಳ, ಪಾತ್ರ, ಸಂದರ್ಭ ಇವುಗಳನ್ನು ಅನುಸರಿಸಿ ಅಲ್ಲಲ್ಲಿ ಅನೌಪಚಾರಿಕ ಭಾಷೆ ಬಳಕೆಯಾಗುತ್ತದೆ. ಬರಹಕ್ಕೆ ಅಳವಡಿಸುವ ದೃಷ್ಟಿಯಿಂದ ನೋಡಿದಲ್ಲಿ ಎರಡನೆಯ ಬಗೆ ಹೆಚ್ಚು ಸಂಕೀರ್ಣ ಹಾಗೂ ಕಷ್ಟ ಸಾಧ್ಯ ಕೂಡ.

ಈ ಹಿನ್ನೆಲೆಯಲ್ಲಿ ಮೂರು ಪ್ರಮುಖ ವ್ಯತ್ಯಾಸಗಳನ್ನು ಪಟ್ಟಿ ಮಾಡ ಬಹುದು. ಮಾತು ಕಾಲಬದ್ಧ, ಕ್ಷಣಿಕ ಹಾಗೂ ಗತಿಶೀಲ ಆದರೆ ಬರಹ ಭೌಗೋಳಿಕ ಪ್ರದೇಶಕ್ಕೆ ಬದ್ಧವಾದುದು ಶಾಶ್ವತ ಮತ್ತು ಸ್ಥಿರ.

ಈ ಎರಡೂ ಮಾಧ್ಯಮಗಳ ಸಾಧಕ ಬಾಧಕಗಳನ್ನು ಗಮನಿಸಿದಾಗ ಕೆಲವು ಪ್ರಮುಖ ಅಂಶಗಳು ಎದ್ದು ಕಾಣುತ್ತವೆ. ಬರಹದಲ್ಲಿ ಬಳಸಿದ ವಿಷಯವನ್ನು ಪದೇ ಪದೇ ಓದುವ ಅವಕಾಶ ಇರುತ್ತದೆ. ಅಲ್ಲದೆ ಸೂಕ್ಷ್ಮ ರೂಪದ ವಿಶ್ಲೇಷಣೆಯೂ ಸಾಧ್ಯ. ಬರೆದ ಅಂಶವನ್ನು ಪುನರ್ ಸಂಪಾದಿಸಲು ಲೇಖನ ಚಿಹ್ನೆಗಳನ್ನು ಬಳಸಲು ಒಟ್ಟಾರೆ ತಿದ್ದುವಿಕೆಗೆ, ಬರಹದ ಭಾಷೆ ಹೆಚ್ಚು ಅವಕಾಶಗಳನ್ನು ಒದಗಿಸುತ್ತದೆ. ಆದರೆ ಮಾತು ಹೆಚ್ಚು ವೇಗವನ್ನು ಒಳಗೊಂಡಿರುತ್ತದೆ. ಇದರಿಂದಾಗಿ ರಚನೆಯಲ್ಲಿ ಬದ್ಧತೆ ಕಡಿಮೆ. ಪುನರಾವರ್ತನೆ ಹೆಚ್ಚು. ಅಲ್ಲದೆ ಒಟ್ಟಾರೆ ವಾಕ್ಯ ರಚನೆಯ ದೃಷ್ಟಿಯಿಂದ ಕ್ರಮಬದ್ಧತೆ ಕಡಿಮೆ ಇರುತ್ತದೆ. ಮಾತಿನಲ್ಲಿ ಏರಿಳಿತ, ನಿಲುಗಡೆ ಮುಂತಾದವುಗಳು ಹೆಚ್ಚು. ಅಲ್ಲದೆ ಕ್ಲೀಷೆಯಿಂದ ಕೂಡಿದ ಪದ, ಪದಪುಂಜಗಳು ಹೆಚ್ಚು ಬಳಕೆಯಾಗುತ್ತವೆ. ಎರಡನೆಯದಾಗಿ, ಬರೆಯುವವರು, ಓದುವವರು, ಎದುರುಬದುರು ಇಲ್ಲದಿರು ವಾಗ ಬರೆದ ವಸ್ತುವಿನ ಬಗ್ಗೆ ಉಂಟಾಗುವ ಗೊಂದಲಗಳನ್ನು ಪರಿಹರಿಸುವುದು ಸಾಧ್ಯವಿಲ್ಲ. ಸಾಂದರ್ಭಿಕವಾಗಿ ಅರ್ಥೈಸಬಲ್ಲ ಭಾಷಿಕ ಅಂಶಗಳಿಗೆ ವಿವರಣೆ ಸಾಧ್ಯವಿಲ್ಲ. ಅಲ್ಲದೆ ಬರಹವನ್ನು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಅರ್ಥೈಸುವುದು ಸಾಧ್ಯ. ಬಹುಮುಖ್ಯವಾಗಿ ಓದುಗರ ಪ್ರತಿಕ್ರಿಯೆ ತಕ್ಷಣ ಲಭ್ಯವಿರುವುದಿಲ್ಲ. ಮೂರನೆಯದಾಗಿ ಬರಹದ ಭಾಷೆ ವಿಶಿಷ್ಟ ಅಂಶಗಳನ್ನು ಒಳಗೊಂಡು ಓುಗರಲ್ಲಿ ವಿಶೇಷ ಪರಿಣಾಮಗಳನ್ನು ಉಂಟು ಮಾಡುವ  ಸಾಮರ್ಥ್ಯವನ್ನು ಹೊಂದಿದೆ, ಉದಾಹರಣೆಗೆ ಲೇಖನ ಚಿಹ್ನೆಗಳು, ಅಕ್ಷರದ ಗಾತ್ರ, ವಿನ್ಯಾಸ, ಬಣ್ಣ, ಛಾಯೆ ಮುಂತಾದವುಗಳ ಮೂಲಕ ಬರಹವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು. ಮಾತಿನಲ್ಲಿ ಇವು ಇಲ್ಲದಿದ್ದರೂ ಕಾಕು, ಧ್ವನಿಮಟ್ಟ, ಕಾಲ ಪ್ರಮಾಣ, ಲಯ, ಧಾಟಿ, ಭಾವಸೂಚಕ ಅಥವಾ ಉದ್ಗಾರ ಸೂಚಕ ಅಂಶಗಳನ್ನು ಮಾತು ಒಳಗೊಂಡಿರುತ್ತದೆ. ಇದರಿಂದ ಮಾತನ್ನು ಸಂದರ್ಭಕ್ಕೆ ಅನುಗುಣವಾಗಿ ವಿಶೇಷವಾಗಿ ಧ್ವನಿಸುವಂತೆ ಮಾಡ ಬಹುದು.

ಮಾತಿನಿಂದ ಬರಹಕ್ಕೆ : ಮಾತಿನಲ್ಲಿ ಬಳಸುವ ಎಲ್ಲ ಅಂಶಗಳನ್ನೂ ಬರಹದಲ್ಲಿ ಮೂಡಿಸುವುದು ಕಷ್ಟಸಾಧ್ಯ. ಅನೇಕ ಬರಹಗಾರರು ಇಂತಹ ಪ್ರಯತ್ನಗಳನ್ನು ಮಾಡಿ ಯಶಸ್ಸು ಗಳಿಸಿಲ್ಲ. ಉದಾಹರಣೆಗೆ ಕಥೆ, ನಾಟಕ, ಕಾದಂಬರಿ ಮುಂತಾದವುಗಳಲ್ಲಿ ಮಾತಿನ ಜೊತೆಗೆ ಬಳಕೆಯಾಗುವ ಮತ್ತು ಮಾತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ದೇಹದ ಅಂಗಾಂಗಗಳ ಚಲನೆ, ಮುಖಭಾವ, ಕಣ್ಣು ಚಲನೆ ಇತ್ಯಾದಿ ಅಶಾಬ್ದಿಕ ಅಂದರೆ ಶಬ್ದದ ಬಳಕೆ ಇಲ್ಲದೆ ನಡೆಸುವ ಸಂವಹನ ಕ್ರಿಯೆ ಮುಂತಾದವನ್ನು ಯಥಾವತ್ ಬರಹದಲ್ಲಿ ಅಳವಡಿಸುವುದು ಕಷ್ಟ. ಅಲ್ಲದೆ ಹೀಗೆ ಮಾಡುವಾಗ ಬರಹಗಾರರಲ್ಲಿ ಏಕರೂಪತೆ ಸಾಧ್ಯವಿಲ್ಲ. ಉದಾಹರಣೆಗೆ ಅವಧಾರಣೆಯನ್ನು ಸೂಚಿಸಲು ಚೀನಿ ಭಾಷೆಯಲ್ಲಿ ದಪ್ಪ ಅಕ್ಷರಗಳನ್ನು ಬರಹದಲ್ಲಿ ಬಳಸಲಾಗುತ್ತದೆ. ಆದರೆ ಈ ಪದ್ಧತಿ ಬೇರೆ ಭಾಷೆಗಳಲ್ಲಿ ಇಲ್ಲ. ಭಾರತೀಯ ಭಾಷೆಗಳಲ್ಲಿಯೇ ಕಂಡು ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬರಹದ ಭಾಷೆಯೊಡನೆ ಆವರಣದಲ್ಲಿ ಮೆಲ್ಲಗೆ, ಅನುಮಾನದಿಂದ, ಪಿಸುದನಿಯಲ್ಲಿ, ಕೋಪದಿಂದ, ನಗುತ್ತ ಇತ್ಯಾದಿ ಪದಗಳನ್ನು ಬಳಸಿ ಮಾತಿನ ಕೆಲವು ವಿಶಿಷ್ಟ ಅಂಶಗಳನ್ನು ಓದುಗರ ಗಮನಕ್ಕೆ ತರಲು ಮಾಡಿರುವ ಪ್ರಯತ್ನಗಳನ್ನು ಕಾಣಬಹುದು. ಇದೇ ರೀತಿಯಲ್ಲಿ ಲೇಖನ ಚಿಹ್ನೆಗಳ ಬಳಕೆಯಿಂದಲೂ ಮಾತಿನ ಭಾವವನ್ನು ಬರವಣಿಗೆಯಲ್ಲಿ ಸೂಚಿಸುವ ಪ್ರಯತ್ನಗಳನ್ನು ಕಾಣಬಹುದು. ಉದಾಹರಣೆಗೆ !?, ??, !!…… ಇತ್ಯಾದಿಗಳ ಬಳಕೆ ಕಥೆ, ಕಾದಂಬರಿ, ನಾಟಕ, ಲಘು ಪ್ರಬಂಧ ಮುಂತಾದವು ಗಳಲ್ಲಿ ಕಂಡುಬರುತ್ತದೆ. ಇಂಗ್ಲೀಷಿನಲ್ಲಿ ದಪ್ಪ ಅಕ್ಷರಗಳ ಬಳಕೆ ಆಡುನುಡಿಯ ಭಾವನಾತ್ಮಕ ಅಂಶಗಳನ್ನು ಒಳಗೊಳ್ಳುತ್ತದೆ. ಇದೇ ರೀತಿಯಲ್ಲಿ ಅಕ್ಷರಗಳ ಪುನರಾವರ್ತನೆ, ಓರೆ ಅಕ್ಷರಗಳ ಬಳಕೆ (ಇಟ್ಯಾಲಿಕ್ಸ್) ಮಾತಿನ ಪೂರಕ ಅಂಶಗಳನ್ನು ಬರಹದ ಮೂಲಕ ಓದುಗರಿಗೆ ತಿಳಿಸಬಹುದು.

ಜಗತ್ತಿನ ಬಹುತೇಕ ಸಾಹಿತ್ಯ ಸಂಪನ್ನ ಭಾಷೆಗಳಿಗೆ ಲಿಖಿತ ರೂಪವಿದೆ. ಆದರೂ ಕೇವಲ ಆಡುನುಡಿಯಲ್ಲಿಯೇ ಬಳಕೆಯಲ್ಲಿರುವ ಅನೇಕ ಭಾಷೆಗಳಿಗೆ ಲಿಖಿತ ರೂಪಗಳನ್ನು ಒದಗಿಸುವುದು ಸಾಧ್ಯ, ಈ ಕಾರ್ಯ ಹತ್ತೊಂಬತ್ತನೇ ಶತಮಾನದ ಈಚೆಗೆ ಬಹುಮಟ್ಟಿಗೆ ನಡೆದಿದೆ. ಭಾಷೆಯ ಆಡು ರೂಪದ ಮಾತುಗಳನ್ನು ಸಂಗ್ರಹಿಸಿ ಅವುಗಳನ್ನು ಅಂತರರಾಷ್ಟ್ರೀಯ ಧ್ವನಿ ಚಿಹ್ನೆಗಳನ್ನು ಬಳಸಿ ಬರವಣಿಗೆಯಲ್ಲಿ ದಾಖಲಿಸಿ ನಂತರ ಭಾಷೆಯ ಪ್ರಮುಖ ಧ್ವನಿಗಳನ್ನು ಅರ್ಥ ವ್ಯತ್ಯಾಸದಿಂದ ಗುರುತಿಸಿ ಬರವಣಿಗೆಗೆ ಸೂಕ್ತವಾದ ಲಿಪಿ ಸಂಕೇತಗಳನ್ನು ಒದಗಿಸಬಹುದು. ಮಾತಿನಲ್ಲಿ ಬಳಕೆಯಾಗುವ ಎಲ್ಲ ಧ್ವನಿಗಳನ್ನು ಗುರುತಿ ಸುವುದೇ ಧ್ವನಿ ವಿಶ್ಲೇಷಣೆ. ಆ ಭಾಷೆಯಲ್ಲಿ ಬಳಕೆಯಾಗುವ ಪ್ರಮುಖ ಧ್ವನಿಗಳನ್ನು ಅಂದರೆ ಧ್ವನಿಮಾಗಳನ್ನು ಗುರುತಿಸುವ ವಿಜ್ಞಾನವೇ ಧ್ವನಿಮಾ ಶಾಸ್ತ್ರ (ಫೊನಾಲಜಿ). ಈ ಹಂತದಲ್ಲಿ ಧ್ವನಿಮಾಗಳನ್ನು ಅವುಗಳ ಉಪಧ್ವನಿ ಗಳನ್ನು ವಿಶ್ಲೇಷಣೆಯ ಮೂಲಕ ಗುರುತಿಸುವುದು ಭಾಷಾ ವಿಶ್ಲೇಷಣೆಯ ಪ್ರಮುಖ ಹಂತಗಳಲ್ಲೊಂದು. ಧ್ವನಿಮಾಗಳು ಸ್ವಚ್ಛಂದ ಧ್ವನಿಗಳಾದರೆ ಸಾಂದರ್ಭಿಕವಾಗಿ ಬಳಕೆಯಾಗುವ ಅದರ ವಿವಿಧ ರೂಪಗಳನ್ನು ಉಪಧ್ವನಿಗಳು ಎಂದು ಕರೆಯುತ್ತೇವೆ. ಉದಾಹರಣೆಗೆ ಈ ಪದಗಳನ್ನು ಉಚ್ಚರಿಸಿ ನೋಡಿ.

ಅಗಲ, ಅರಸ, ಅಳತೆ

ಅಕ್ಕ, ಅಕ್ಕಿ, ಕಕ್ಕು

ಹಗ್ಗ, ಬಗ್ಗು, ವಸ್ತ್ರ

ಈ ಉದಾಹರಣೆಗಳಲ್ಲಿ ಮೊದಲ ಮೂರು ಪದಗಳಲ್ಲಿ ಬಳಕೆಯಾಗಿರುವ ‘ಅ’ ಧ್ವನಿ ಸ್ವತಂತ್ರ ಧ್ವನಿಮಾ. ಆದರೆ ಅದು ದ್ವಿತ್ವ ಹಾಗೂ ಸಂಯುಕ್ತಾಕ್ಷರಗಳ ಮುಂಚೆ ಬಂದಾಗ ಸಾಧಾರಣಕ್ಕಿಂತಲೂ ಹ್ರಸ್ವಸ್ವರವಾಗಿ ಬಳಕೆಯಾಗುತ್ತದೆ. ಈ ಅಂಶವನ್ನು ಮೇಲೆ ತಿಳಿಸಿದ ಎರಡು ಮತ್ತು ಮೂರನೇ ಸಾಲಿನ ಪದಗಳಲ್ಲಿ ಕಾಣಬಹುದು. ಪರಸ್ಪರ ಸಾಮ್ಯ ಹೊಂದಿರುವ ಧ್ವನಿಗಳ ಇಂತಹ ವ್ಯತ್ಯಾಸವನ್ನು ಪರಸ್ಪರ ವ್ಯಾವರ್ತಕ ಪ್ರಸಾರ ಎಂದೂ ಕರೆಯುತ್ತಾರೆ. ಅಂದರೆ ‘ಅ’ ಧ್ವನಿಮಾ; ‘ಅ’ (ಹ್ರಸ್ವ ಅ) ಅದರ ಉಪಧ್ವನಿ. ಅಂತೆಯೇ ತಮಿಳಿನಲ್ಲಿ ವರ್ಗೀಯ ವ್ಯಂಜನಗಳ ಪೈಕಿ ಘೋಷ ವ್ಯಂಜನಗಳು ಅಂದರೆ ಗ, ಜ, ಡ, ದ, ಬ ಗಳು ಕನ್ನಡದಂತೆ ಸ್ವತಂತ್ರ ಧ್ವನಿಮಾಗಳಲ್ಲ. ಅವು ಕ, ಚ, ಟ, ತ, ಪ, ಗಳ ಉಪಧ್ವನಿಗಳು. ಏಕೆಂದರೆ ಗ, ಜ, ಡ, ದ, ಬ ಗಳು ಪದ ಮಧ್ಯದಲ್ಲಿ ಎರಡು ಸ್ವರಗಳ ನಡುವೆ ಮಾತ್ರ ಬಳಕೆಯಾಗುತ್ತದೆ. ಅಂತೆಯೇ ಙ, ಞ, ಣ, ನ, ಮ ಗಳು ಅದೇ ವರ್ಗದ ಘೋಷ ಹಾಗೂ ಅಘೋಷ ಧ್ವನಿಗಳೊಡನೆ ಬಳಕೆಯಾಗುತ್ತದೆ. ಇವೆರಡೂ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಕ, ಚ, ಟ, ಪ, ಪ ಗಳು ಬಳಕೆಯಾಗುತ್ತವೆ. ಹೀಗಾಗಿ ಕ ಧ್ವನಿಮಾಗೆ ಮೂರು ಉಪಧ್ವನಿಗಳು. ಅಂದರೆ ಕ, ಗ, ಙ ಇವೆ. ಇದೇ ರೀತಿ ಉಳಿದ ವರ್ಗೀಯ ವ್ಯಂಜನಗಳು. ಇದೇ ತತ್ತ್ವವನ್ನು ಆಧರಿಸಿ ದೀರ್ಘತೆ. ತಾನ, ಆಘಾತ ಮುಂತಾದ ಸ್ವರಧ್ವನಿಗಳೊಂದಿಗೆ ಬರುವ ಆದರೆ ಪ್ರತ್ಯೇಕಿಸಲಾಗದ ಮುಂತಾದ ಅರ್ಥಪೂರ್ಣ ಧ್ವನಿಮಾಗಳನ್ನು ವಿಶ್ಲೇಷಿಸಬಹುದು.

ಒಮ್ಮೆ ಬರಹ ಸಾಧ್ಯವಾದ ಮೇಲೆ ಆಡು ರೂಪದಲ್ಲಿ, ಇರುವ ಹಾಡುಗಬ್ಬಗಳನ್ನು, ಕಥೆ ಕವನಗಳನ್ನು ದಾಖಲಿಸಿ ಶಾಶ್ವತವಾಗಿ ಸಂಗ್ರಹಿಸಿಡ ಬಹುದು. ಇದರಿಂದ ಭಾಷೆಯ ಸಾಹಿತ್ಯ ಸಂಪನ್ನಗೊಳ್ಳುವುದಲ್ಲದೆ ಬೆಳವಣಿಗೆಯೂ ಸಾಧ್ಯವಾಗುತ್ತದೆ. ಆದರೆ ಆಡು ರೂಪದಲ್ಲಿರುವ ಭಾಷೆಯನ್ನು ಬರಹಕ್ಕೆ ಪರಿವರ್ತಿಸುವಾಗ ಧ್ವನಿಯ ಮೂಲ ಉಚ್ಚಾರಣೆ, ಏರಿಳಿತ ಮುಂತಾದ ಸೂಕ್ಷ್ಮಾತಿಸೂಕ್ಷ್ಮ ಅಂಶಗಳು ದಾಖಲಾಗುವಂತೆ ನೋಡಿಕೊಳ್ಳುವುದು ಅಲ್ಲದೆ ಭಾಷೆಯ ಎಲ್ಲ ಪ್ರಮುಖ ಧ್ವನಿಗಳಿಗೂ ಸೂಕ್ತವಾದ ಲಿಪಿಯನ್ನು ಅಳವಡಿಸುವುದು ಭಾಷಾ ವಿಜ್ಞಾನಿಗಳ ಜವಾಬ್ದಾರಿಯಾಗಿರುತ್ತದೆ.

ಕೆಲವು ಭಾಷೆಗಳಲ್ಲಿ ಆಡು ಭಾಷೆಗೂ ಅದೇ ಭಾಷೆಯ ಬರಹದ ರೂಪಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಎರಡೂ ಬೇರೆ ಬೇರೆ ಬಗೆಯ ವಾಕ್ಯ ರಚನೆ. ಪದಪ್ರಯೋಗ ಮುಂತಾದುವನ್ನು ಹೊಂದಿರುತ್ತವೆ. ಅನೇಕ ವೇಳೆ ಕಲಿಕೆಯ ದೃಷ್ಟಿಯಿಂದ ಎರಡನ್ನೂ, ಬೇರೆಬೇರೆಯಾಗಿ ಕಲಿಯಬೇಕಾಗುವ ಪರಿಸ್ಥಿತಿ ಒದಗುತ್ತದೆ. ಇಂತಹ ಸ್ಥಿತಿಯನ್ನು ಭಾಷಾದ್ವಿಸ್ತರತೆ (ಡೈಗ್ಲಾಸಿಯಾ) ಎಂದು ಕರೆಯಲಾಗಿದೆ. ಇಲ್ಲಿ ಬರಹದ ಭಾಷೆಯನ್ನು ಉಚ್ಚ ಭಾಷೆಯೆಂದೂ, ಆಡುನುಡಿಯನ್ನು ನಿಮ್ನ ಭಾಷೆಯೆಂದೂ ಭಾಷಾ ವಿಜ್ಞಾನಿಗಳು ಕರೆದಿದ್ದಾರೆ. ಕನ್ನಡದ ಬಳಕೆಯಲ್ಲಿ ಮಾತು ಹಾಗೂ ಬರಹದ ನಡುವೆ ಹೆಚ್ಚಿನ ಪ್ರಮಾಣದ ವ್ಯತ್ಯಾಸವಿಲ್ಲ. ಆದರೆ ತಮಿಳು ಭಾಷಾ ದ್ವಿಸ್ತರತೆಯನ್ನು ಹೊಂದಿದೆ.

ಮಾತು, ಬರಹ ಪರಸ್ಪರ ಪ್ರಭಾವ : ಕಲಿಕೆಯ ಹಂತದಲ್ಲಿ ಮಾತು ಬರಹದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಮಕ್ಕಳು ಆಡುನುಡಿಯಲ್ಲಿ ಬಳಸುವ ರೂಪಗಳನ್ನು ಬರಹದಲ್ಲೂ ಬಳಸುತ್ತಾರೆ. ಉದಾಹರಣೆಗೆ ‘ಮಡಗು’, ‘ತೀಡು’, ‘ಇಕ್ಕು’, ‘ಐತೆ’ – ಮುಂತಾದ ಪದಗಳು ಬರಹದ ಭಾಷೆಯಲ್ಲಿ ಬಳಸುವುದನ್ನು ಕಾಣಬಹುದು. ಆದರೆ ಭಾಷಾ ಕಲಿಕೆ ಮುಂದು ವರಿದಂತೆಲ್ಲ ಬಳಕೆಯ ಔಚಿತ್ಯವನ್ನು ಅರಿಯುತ್ತಾರೆ. ಇದರಿಂದ ಬರಹದ ಭಾಷೆ ಬದಲಾಗುತ್ತದೆ. ಕೆಲವರು ಕೇವಲ ಬರಹದ ಭಾಷೆಗೆ ಪರಿಚಿತರಾಗಿದ್ದರೆ ಅಂತಹ ಭಾಷೆಯನ್ನು ಕಲಿತು ವ್ಯಾವಹಾರಿಕವಾಗಿ ಭಾಷೆಯನ್ನು ಬಳಸುವುದು ಕಷ್ಟವಾಗುತ್ತದೆ.

ಮಾತು : ಅಕ್ಷರ ಸಂಯೋಜನೆ ಮತ್ತು ಬರಹ : ಮಾತಿನ ಮೂಲ ಘಟಕ ಧ್ವನಿಯಾದರೂ ಕೇವಲ ಬಿಡಿಧ್ವನಿಗಳು ಅರ್ಥಕೊಡಲಾರವು. ನಿರ್ದಿಷ್ಟ ಭಾಷೆಯೊಂದರಲ್ಲಿ ನಿರ್ದಿಷ್ಟ ಧ್ವನಿಗಳ ಕ್ರಮಬದ್ಧ ಜೋಡಣೆಯಿಂದ ಪದಗಳು ಉಂಟಾಗುತ್ತವೆ. ಉದಾಹರಣೆಗೆ ನ, ಗ, ರ, ಧ್ವನಿಗಳು ಸೇರಿ ನಗರ ಪದವಾಗುತ್ತದೆ. ಈ ಮೂರು ಧ್ವನಿಗಳು ಇದೇ ಕ್ರಮದಲ್ಲಿ ಸೇರಿದಾಗ ಮಾತ್ರ ಪದಕ್ಕೆ ಅರ್ಥ ಬರುತ್ತದೆ. ಆದರೆ ಗ ನ ರ ಆಗಲಿ, ರ ನ ಗ ಆಗಲಿ ಪದವಾಗುವುದಿಲ್ಲ. ಆದರೆ ಈ ಕ್ರಮ ಕನ್ನಡದಲ್ಲಲ್ಲದೆ ಬೇರೆ ಭಾಷೆಯೊಂದರಲ್ಲಿ ಅರ್ಥಪೂರ್ಣವಾಗಬಹುದು. ಅಂದರೆ ಅಕ್ಷರಗಳ ನಿರ್ದಿಷ್ಟ ಜೋಡಣೆ ಆಯಾ ಭಾಷೆಯ ರೂಢಿಗೆ ಅನುಸಾರವಾಗಿ ಆಗುತ್ತದೆ. ಧ್ವನ್ಯಾತ್ಮಕ ಭಾಷೆಯಲ್ಲಿ ಅಂದರೆ ಧ್ವನಿಗಳೇ ಅಕ್ಷರಗಳಾಗುವ ಭಾಷೆಗಳಲ್ಲಿ ಬಹುತೇಕ ನುಡಿದಂತೆಯೇ ಬರೆಯುತ್ತೇವೆ. ಇಲ್ಲಿ ಅಕ್ಷರ ಸಂಯೋಜನೆಯಲ್ಲಿ ಹೆಚ್ಚಿನ ಜರ್ಮನ್ ಮುಂತಾದ ಭಾಷೆಗಳಲ್ಲಿ ಹಾಗೂ ಹಿಂದಿಯಲ್ಲಿ ಕೆಲವೊಮ್ಮೆ ಉಚ್ಚಾರಣೆಗೂ, ಬರವಣಿಗೆಗೂ ಸಾಕಷ್ಟು ವ್ಯತ್ಯಾಸ ಇದೆ. ಉದಾಹರಣೆಗೆ ಇಂಗ್ಲಿಶಿನಲ್ಲಿ ‘ಕ’ ಧ್ವನಿಯನ್ನು ಕೆಲವೊಮ್ಮೆ ‘ಸಿ’ ಪ್ರತಿಧ್ವನಿಸುತ್ತದೆ. ಕೆಲವೊಮ್ಮೆ ‘ಕೆ’ ಆಗುತ್ತದೆ. ಅಂತೆಯೇ ಜರ್ಮನ್‌ನಲ್ಲಿ ‘ಬಿ’, ‘ಸ’ ಆಗುತ್ತದೆ. ತಮಿಳಿನಲ್ಲಿ ‘ಕಾಂತಿ’ ಎಂದು ಬರೆದು ಓದುವಾಗ ‘ಗಾಂಧಿ’ಯೆಂದೂ ಓದಬಹುದು. ಈ ಉದಾಹರಣೆಗಳಿಂದ ಸ್ಪಷ್ಟವಾಗುವ ಅಂಶವೆಂದರೆ ಅಕ್ಷರ ಸಂಯೋಜನೆ ಭಾಷಾ ರೂಢಿಗೆ ಅನುಗುಣವಾಗಿರುತ್ತದೆ. ಈ ರೂಢಿಯನ್ನು ಭಾಷೆಯನ್ನು ಬಳಸುವವರೆಲ್ಲರೂ ಅನುಸರಿಸಬೇಕಾಗುತ್ತದೆ. ಈ ರೂಢಿಯನ್ನು ಮೀರಿದರೆ ಭಾಷಾದೋಷ ಉಂಟಾಗುತ್ತದೆ.

ವಿವಿಧ ಬಗೆಯ ಬರಹಗಳು : ಭಾಷೆಯ ಆಡುರೂಪವನ್ನು ಬರಹಕ್ಕೆ ಅಳವಡಿಸುವಾಗ ಹಲವು ಕ್ರಮಗಳನ್ನು ಅನುಸರಿಸಬಹುದು. ಭಾಷೆಯನ್ನು ಬಳಸುವ ಸಮುದಾಯಕ್ಕೆ ಪರಿಚಿತವಾಗಿರುವ ಹಲವಾರು ಗಿಡ, ಮರ, ಪ್ರಾಣಿ, ಪಕ್ಷಿ, ಕೆರೆ, ಹಳ್ಳ, ಬೆಟ್ಟ, ಗುಡ್ಡ, ಕಣ್ಣು – ಹೀಗೆ ಹಲವು ಹತ್ತು ವಸ್ತುಗಳನ್ನು ಪ್ರತಿಯೊಂದಕ್ಕೂ ಚಿತ್ರ ರೂಪದಲ್ಲಿ ಸೂಚಿಸಿ ಒಂದೊಂದು ವಸ್ತುವಿಗೆ ಒಂದೊಂದು ಚಿತ್ರದಂತೆ ಸಂಕೇತಗಳನ್ನು ಬರಹದಲ್ಲಿ ಮೂಡಿಸಬಹುದು. ಇದನ್ನು ಚಿತ್ರಲಿಪಿಯೆಂದೂ ಕರೆದಿದ್ದಾರೆ. ಈ ಪದ್ಧತಿ ಈಗಲೂ ಚೀನಿ, ಹಾಗೂ ಜಪಾನಿ ಭಾಷೆಗಳಲ್ಲಿ ಬಳಕೆಯಲ್ಲಿದೆ.

ಒಂದು ನಿರ್ದಿಷ್ಟ ಪದವನ್ನು ಒಂದೇ ಸಂಕೇತ ಸೂಚಿಸುವಂತೆ ಕೆಲವು ಆಡುಭಾಷೆಗಳನ್ನು ಬರಹಕ್ಕೆ ಅಳವಡಿಸಲಾಗಿದೆ. ಇಂತಹ ಬರವಣಿಗೆಯನ್ನು ಲೊಗೊಗ್ರಾಫಿಕ್ ಬರವಣಿಗೆ ಎಂದೂ ಕರೆದಿದೆ. ಭಾಷೆಯಲ್ಲಿ ಬಳಕೆಯಲ್ಲಿರುವ ಧ್ವನಿಗಳಿಗೆ ಸೂಕ್ತವಾದಂತಹ ಲಿಪಿ ಸಂಕೇತಗಳನ್ನು ಅಳವಡಿಸಿ ಉಚ್ಚಾರಣೆಯ ಧಾಟಿಯನ್ನು ಅಕ್ಷರಗಳ ಮೂಲಕ ಬರಹದಲ್ಲಿ ಸೂಚಿಸುವುದು ಅಕ್ಷರಾತ್ಮಕ ಲಿಪಿ ಎನಿಸಿಕೊಳ್ಳುತ್ತದೆ. ದ್ರಾವಿಡ ಭಾಷೆಗಳು, ಇಂಡೋ ಆರ್ಯನ್ ಗುಂಪಿಗೆ ಸೇರಿದ ಅನೇಕ ಭಾಷೆಗಳು ಈ ವಿಧಾನಗಳನ್ನು ಅಳವಡಿಸಿಕೊಂಡಿವೆ. ಬರಹದ ಬಗೆಗಳಲ್ಲಿ ನಾಲ್ಕನೆಯದು ವರ್ಣಮಾಲಾ ಲಿಪಿಪದ್ಧತಿ. ಅಂದರೆ ನಿರ್ದಿಷ್ಟ ಧ್ವನಿಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಅಕ್ಷರಗುಚ್ಛಗಳನ್ನು ಅಳವಡಿಸಿ ಪದವೊಂದಕ್ಕೆ ಸೂಕ್ತ ಅಕ್ಷರ ಜೋಡಣೆಯನ್ನು ಬಳಸಬಹುದು. ಉದಾಹರಣೆಗೆ ‘ಕಲರ್’ ಎಂಬ ಇಂಗ್ಲೀಷ್ ಪದದಲ್ಲಿ ‘ಕ’, ‘ಲ’, ‘ರ’ ಎಂಬ ಮೂರು ವ್ಯಂಜನಗಳು ಎರಡು ಬಾರಿ ಅ ಸ್ವರ ಬಳಕೆಯಾಗಿದೆ. ಮೂಡಿಸುವಾಗ ‘Colour’ ಎಂಬ ಅಕ್ಷರಗಳ ಸಂಯೋಜನೆ ಅಡಕಗೊಂಡಿದೆ.

ಅಂದರೆ ‘ಕಲರ್’ ಪದದಲ್ಲಿ ಬಳಕೆಯಾಗಿರುವ ಧ್ವನಿಗಳಿಗೂ ಅದನ್ನು ಬರಹದಲ್ಲಿ ಮೂಡಿಸಿರುವ ‘Colour’ ಕ್ರಮಕ್ಕೂ ಒಂದಕ್ಕೊಂದರಂತೆ ಸಂವಾದಿಯಾಗಿಲ್ಲ. ಆದರೆ ಅಕ್ಷರ ಗುಚ್ಛಗಳು ಧ್ವನಿಗಳನ್ನು ಪ್ರತಿನಿಧಿಸುತ್ತವೆ. ಇದು ಅಕ್ಷರಾತ್ಮಕ ಲಿಪಿಯ ವೈಶಿಷ್ಟ್ಯ. ಬರಹದ ಪ್ರಕಾರಗಳಲ್ಲಿ ನಾಲ್ಕು ಮುಖ್ಯ ಬಗೆಗಳನ್ನು ಕಾಣಬಹುದು. ಕೈಬರಹ, ಬೆರಳಚ್ಚು, ಮುದ್ರಣ ಹಾಗೂ ಗಣಕಯಂತ್ರಪ್ರತಿ ಇವು ಬಹುಮುಖ್ಯವಾದವುಗಳು. ಯಾವುದನ್ನೆ ಬಳಸಿದರೂ ಮಾತು, ಬರಹ ಇವುಗಳ ನಡುವೆ ಇರುವ ಸಂಕೀರ್ಣತೆಯನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ಮಾಡಿಸುವುದು ಕಷ್ಟ. ಆದರೂ ಕೈಬರಹದಲ್ಲಿ ಕೆಲವೊಂದು ಲೇಖನಚಿಹ್ನೆಗಳನ್ನು ಪರಿಣಾಮಕಾರಿಯಾಗಿ ಬಳಸಿ ಬರಹವನ್ನು ಮಾತಿನ ಹತ್ತಿರಕ್ಕೆ ತರುವುದು ಸಾಧ್ಯ.