ನಾವೆಲ್ಲರೂ ಒಂದಲ್ಲಾ ಒಂದು ಸಲ ಆತಂಕ ಮತ್ತು ಭಯವನ್ನು ಅನುಭವಿಸಿರುತ್ತೇವೆ. ಯಾವುದೇ ಅಪಾಯಕಾರಿ ವ್ಯಕ್ತಿ, ವಸ್ತು, ಸನ್ನಿವೇಶ ಆತಂಕ ಮತ್ತು ಭಯವನ್ನುಂಟುಮಾಡಬಲ್ಲವು. ಹಾಗೆಯೇ, ದೊಡ್ಡ ಜವಾಬ್ದಾರಿಯನ್ನು, ದೊಡ್ಡ ಕೆಲಸ ಅಥವಾ ಗುರಿಯನ್ನು ಇಂತಿಷ್ಟೇ ಸಮಯದಲ್ಲಿ ಮಾಡಬೇಕಾಗಿ ಬಂದಾಗ, ಪರೀಕ್ಷೆ, ಸಂದರ್ಶನಗಳನ್ನು ಎದುರಿಸುವಾಗ, ವಿಪರೀತ ಸ್ಪರ್ಧೆ, ಅನಿಶ್ಚಿತತೆಯನ್ನು ಎದುರಿಸಬೇಕಾದಾಗ ಭಯವಾಗುವುದು ಸಹಜ.

ವೇದಿಕೆಗೆ ಹೋಗಿ ಪ್ರತಿಭೆಯನ್ನು ಪ್ರಕಟಮಾಡಬೇಕಾದಾಗ, ಅತಿಗಣ್ಯ ವ್ಯಕ್ತಿಗಳು ಅಥವಾ ದೊಡ್ಡ ಅಧಿಕಾರಿಗಳನ್ನು ಕಾಣಬೇಕಾದಾಗ, ದೊಡ್ಡ ಸ್ಥಾನ- ಮಾನಗಳಿರುವ ವ್ಯಕ್ತಿಯನ್ನು ಭೇಟಿಮಾಡಬೇಕಾಗಿ ಬಂದಾಗ, ಪೊಲೀಸರು, ನ್ಯಾಯಾಧೀಶರನ್ನು ಕಂಡಾಗ ಕೂಡ ಭಯಪೀಡಿತರಾಗುತ್ತೇವೆ.

ಆತಂಕ ಮತ್ತು ಭಯವಾದಾಗ ಈ ಕೆಳಗಿನ ತೊಂದರೆಗಳನ್ನು ಅನುಭವಿಸುತ್ತೇವೆ:

 • ಎದೆಯಲ್ಲಿ, ಹೊಟ್ಟೆಯಲ್ಲಿ ಏನೋ ಒಂದು ರೀತಿಯ ತಳಮಳ, ಅಹಿತಕರ ಅನುಭವ.
 • ಹೃದಯದ ಬಡಿತ ಹೆಚ್ಚುತ್ತದೆ, ಹೃದಯದ ಬಡಿತ ನಮಗೆ ಅರಿವಾಗುತ್ತದೆ.
 • ಬೆವರು ಸುರಿಯುತ್ತದೆ.
 • ದೇಹದಲ್ಲಿ ಬಿಸಿ- ಶಾಖದ ಅನುಭವ, ಬಾಯಿ ಒಣಗುತ್ತದೆ.
 • ಕೈಗಳು ಅಥವಾ ಇಡೀ ದೇಹವೇ ನಡುಗುತ್ತದೆ.
 • ಉಸಿರಾಟದ ವೇಗ ಹೆಚ್ಚುತ್ತದೆ ಮತ್ತು ಉಸಿರು ಸಿಕ್ಕಿಹಾಕಿಕೊಂಡಂತಾಗುತ್ತದೆ.
 • ಮೂತ್ರ ವಿಸರ್ಜನೆ ಪದೇ- ಪದೇ ಆಗುವುದು ಮತ್ತು ಅವಸರವಾಗುವುದು.
 • ಸುಸ್ತು, ಆಯಾಸ, ನಿಲ್ಲಲು, ನಡೆದಾಡಲು ಆಗದಿರುವುದು.
 • ತಲೆ ಹಗುರವಾದಂತೆ ಅಥವಾ ಭಾರವಾದಂತೆ ಅನಿಸುವುದು.
 • ಗಮನ ಮತ್ತು ಏಕಾಗ್ರತೆ ಕಡಿಮೆಯಾಗುವುದು.
 • ನೆನೆಪಿನ ಶಕ್ತಿ ಕುಗ್ಗುವುದು.
 • ಆಲೋಚನೆಯ ವ್ಯತ್ಯಯ, ತಲೆ ಖಾಲಿಯಾದಂತೆ ಅನುಭವ, ಯಾವುದೇ ವಿಷಯ, ಸಮಸ್ಯೆಯ ವಿಶ್ಲೇಷಣೆ ಕಷ್ಟವಾಗುತ್ತದೆ, ನಿರ್ಧಾರ ಕೈಗೊಳ್ಳುವ ಶಕ್ತಿ ಕುಗ್ಗುತ್ತದೆ. ಬೌದ್ಧಿಕ ಸಾಮರ್ಥ್ಯ ತಗ್ಗುತ್ತದೆ.
 • ಮಾತನಾಡಲು ಕಷ್ಟ, ತೊದಲುವಿಕೆ.
 • ನೋಡಿದ್ದನ್ನು, ಕೇಳಿದ್ದನ್ನು , ಅನುಭವಿಸಿದ್ದನ್ನು ಅರ್ಥಮಾಡಿಕೊಳ್ಳಲಾರದೆ ಗೊಂದಲ, ಬೆಚ್ಚಿಬೀಳುವುದು.
 • ಹಸಿವು ಕಡಿಮೆಯಾಗುತ್ತದೆ, ಬಾಯಿ ರುಚಿ ಇರುವುದಿಲ್ಲ, ಅಜೀರ್ಣ, ಬೇಧಿ.
 • ನಿದ್ರೆ ಬಾರದಿರುವುದು, ಕೆಟ್ಟ ಕನಸು, ನಿದ್ರಾಭಂಗ.
 • ಲೈಂಗಿಕ ಆಸೆ ಕುಗ್ಗುತ್ತದೆ, ಜನನಾಂಗದ ಉದ್ರೇಕವಿಲ್ಲ, ಸಂಭೋಗ ಕ್ರಿಯೆ ಸಾಧ್ಯವಾಗದಿರಬಹುದು.

ತೀವ್ರವಾದ ಆತಂಕ ಸ್ಥಿತಿಯಲ್ಲಿ ವ್ಯಕ್ತಿ ಪೂರ್ಣವಾಗಿ ನಿಷ್ಕ್ರಿಯನಾಗಿ ಅಸಹಾಯಕನಾಗಬಹುದು. ಆತ ತನ್ನ ಬೇಕು- ಬೇಡಗಳನ್ನು, ಅಗತ್ಯಗಳನ್ನು ಗಮನಿಸಲಾರ. ಸಾಮಾನ್ಯ ಅಪಾಯದಿಂದ ದೂರ ಹೋಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲಾರ. ಆತನ ಕ್ರಿಯೆ- ಪ್ರತಿಕ್ರಿಯೆಗಳು ಅಸಹಜ ಮತ್ತು ಅಸಂಬದ್ಧವಾಗಿರುತ್ತವೆ. ಆಕ್ಸಿಡೆಂಟ್ ಅಥವಾ ದುರಂತಗಳು ಜರುಗಿದಾಗ ಅವನ್ನು ಕಂಡ ಅಥವಾ ಅವುಗಳ ದುಷ್ಪರಿಣಾಮಗಳಿಗೆ ಈಡಾದ ವ್ಯಕ್ತಿಗಳಲ್ಲಿ ಈ ಬಗೆಯ ನಡವಳಿಕೆಗಳು ಕಂಡುಬರುವುದು ವಿಶೇಷ.

ಆತಂಕ ಮತ್ತು ಭಯದ ಲಕ್ಷಣಗಳು ತೀವ್ರವಾಗಿದ್ದರೆ ಅಥವಾ ಬಹುಕಾಲ ಮುಂದುವರಿದರೆ (2 ವಾರಗಳಿಗಿಂತ ಹೆಚ್ಚು ಕಾಲ), ಅವು ವ್ಯಕ್ತಿಗೆ ಸಾಕಷ್ಟು ತೊಂದರೆಯನ್ನುಂಟುಮಾಡಿ ಆತನ ನಿತ್ಯದ ಚಟುವಟಿಕೆಗಳಿಗೆ ಅಡ್ಡಿಯನ್ನುಂಟುಮಾಡುತ್ತವೆ. ಆಗ ಈ ಮಟ್ಟದ ಆತಂಕವನ್ನು ‘ಆತಂಕದ ಕಾಯಿಲೆ’ ಎಂದು ಗುರುತಿಸಲಾಗುತ್ತದೆ.

ಜನಸಂಖ್ಯೆಯ ಶೇ.10ರಷ್ಟು ಜನ ಆತಂಕದ ಕಾಯಿಲೆಯಿಂದ ಬಳಲುತ್ತಾರೆಂದು ಅಂದಾಜಿದೆ. ಮಕ್ಕಳು, ಹದಿಹರೆಯದವರು, ಸ್ತ್ರೀಯರು, ವಯಸ್ಸಾದವರು, ಗುಳೇ ಹೋಗುವ, ತಮ್ಮ ಸ್ವಂತ ಸ್ಥಳ, ದೇಶವನ್ನು ಬಿಟ್ಟು ಹೊಸ ಸ್ಥಳ, ದೇಶದಲ್ಲಿ ವಾಸಿಸುವವರು, ಜೈಲಿನಲ್ಲಿರುವವರು, ಪೊಲೀಸರು, ಯುದ್ಧ ಎದುರಿಸುವ ಸೈನಿಕರು, ಹಿಂಸಾಚಾರ, ಆಕ್ರಮಣಕ್ಕೆ ಒಳಗಾಗುವ ಜನ, ದೊಡ್ಡ- ದೊಡ್ಡ ಸಂಸ್ಥೆಗಳ ನಿರ್ವಾಹಕರು, ಉದ್ಯೋಗ ಭದ್ರತೆ, ಆರ್ಥಿಕ ಭದ್ರತೆ ಇಲ್ಲದವರು, ಪ್ರಮುಖ ಪರೀಕ್ಷೆಗಳನ್ನು ಎದುರಿಸುವವರು, ಸರ್ಜನ್ ಗಳು, ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವವರು, ವಿಪರೀತ ಸ್ಪರ್ಧೆ ಎದುರಿಸುವವರು, ಆರ್ಥಿಕ ಸಂಕಷ್ಟದಲ್ಲಿರುವವರು ಆತಂಕ ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚು.

ಮೂರು ಬಗೆಯ ಆತಂಕ ಮನೋರೋಗಗಳಿವೆ:
1) ಸಾರ್ವತ್ರಿಕ ಆತಂಕ ಮನೋರೋಗ
2) ಫೋಬಿಯಾ ಅಥವಾ ನಿರ್ದಿಷ್ಟ ಭಯ
ಹಾಗೂ
3) ಪ್ಯಾನಿಕ್ ಅಥವಾ ಹಠಾತ್ ಭಯ

ಸಾರ್ವತ್ರಿಕ ಆತಂಕ ಮನೋರೋಗದಲ್ಲಿ, ಆತಂಕ ಮತ್ತು ಭಯದ ಲಕ್ಷಣಗಳು ಹೆಚ್ಚೂ ಕಡಿಮೆ ಸದಾ ಕಾಲ ಮತ್ತು ಬಹುತೇಕ ಸನ್ನಿವೇಶಗಳಲ್ಲಿ ಕಂಡುಬರುತ್ತವೆ.
ನಿರ್ದಿಷ್ಟ ಭಯದ ರೋಗದಲ್ಲಿ, ಅತಿ ತೀವ್ರವಾದ ಭಯವು ನಿರ್ದಿಷ್ಟ ವಸ್ತು ಅಥವಾ ಸನ್ನಿವೇಶದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ವ್ಯಕ್ತಿ ಆ ವಸ್ತು ಅಥವಾ ಸನ್ನಿವೇಶದಿಂದ ದೂರವಿರಲು ಬಯಸುತ್ತಾನೆ. ಉದಾ: ಕೀಟಗಳು, ಹುಳುಗಳು ಮತ್ತು ಪ್ರಾಣಿಗಳು ಭಯವನ್ನುಂಟು ಮಾಡುವುದು. ಎತ್ತರದ ಸ್ಥಳಗಳು, ಮುಚ್ಚಿದ ಚಿಕ್ಕ ಆವರಣಗಳು (ಲಿಫ್ಟ್, ಟೆಲಿಫೋನ್ ಬೂತ್, ಗುಹೆ, ಸುರಂಗ, ಸೇತುವೆ ಇತ್ಯಾದಿ), ರಕ್ತ, ಗಾಯ, ಸೂಜಿ, ಸಿರಿಂಜ್, ಆಪರೇಷನ್ ಕೊಠಡಿ, ದಂತ ಚಿಕಿತ್ಸೆ ಕುರ್ಚಿ, ಬಯಲು ಪ್ರದೇಶ.

ಹಠಾತ್ ಭಯದಲ್ಲಿ, ಆತಂಕ ಮತ್ತು ಭಯದ ತೀವ್ರ ಲಕ್ಷಣಗಳು ಥಟ್ಟನೆ ಕಾಣಿಸಿಕೊಂಡು, ಉತ್ತುಂಗಕ್ಕೇರಿ ವ್ಯಕ್ತಿಗೆ ಅತೀವ ನೋವು- ಹಿಂಸೆಯನ್ನು ಉಂಟುಮಾಡುವವು. ತಾನು ಸತ್ತೇ ಹೋಗುತ್ತೇನೆ, ತನಗೆ ಹೃದಯಾಘಾತವಾಗಿಬಿಟ್ಟಿದೆ, ಲಕ್ವ ಹೊಡೆಯಬಹುದು, ತಾನು ಹುಚ್ಚನಾಗಬಹುದು ಇತ್ಯಾದಿ ಆಲೋಚನೆಗಳಿಂದ ವ್ಯಕ್ತಿ ಜರ್ಝರಿತನಾಗುತ್ತಾನೆ. ಸಹಾಯಕ್ಕಾಗಿ ಮೊರೆ ಇಡುತ್ತಾನೆ. ನೋಡುಗರಿಗೆ ಇದು ತುರ್ತು ಸ್ಥಿತಿಯಂತೆ ಕಾಣುತ್ತದೆ. ಆಗಿಂದಾಗ್ಗೆ ವ್ಯಕ್ತಿ ಈ ಭಯದ ದಾಳಿಗೆ ಒಳಗಾಗುತ್ತಿರುತ್ತಾನೆ.

ಚಿಕಿತ್ಸೆ
1) ಔಷಧಗಳು: ಶಮನಕಾರಿ ಮಾತ್ರೆಗಳು, ಖಿನ್ನತೆ ನಿವಾರಕಗಳು ಬಳಕೆಯಲ್ಲಿವೆ. ಔಷಧವನ್ನು ಎರಡರಿಂದ ಮೂರು ತಿಂಗಳ ಕಾಲ ಸೇವಿಸಬೇಕು. ಸಾಮಾನ್ಯವಾಗಿ ಸುರಕ್ಷಿತವಾದ ಮಾತ್ರೆಗಳು ಲಭ್ಯವಿದ್ದು, ವೈದ್ಯರ ಮಾರ್ಗದರ್ಶನದಲ್ಲಿ ತೆಗೆದುಕೊಳ್ಳುವುದು ಸೂಕ್ತ.
2) ವಿರಮಿಸುವಿಕೆ, ಯೋಗ, ಧ್ಯಾನ, ಪ್ರಾಣಾಯಾಮ, ಸಂಗೀತ, ಕ್ರೀಡೆ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.
3) ಆಪ್ತ ಸಲಹೆ ಮತ್ತು ಸಮಾಧಾನ: ಕಷ್ಟ- ಸಮಸ್ಯೆಗಳ ವಿಶ್ಲೇಷಣೆ, ಅವುಗಳನ್ನು ಸರಿಯಾಗಿ ನಿಭಾಯಿಸುವ ಕೌಶಲವನ್ನು ಹೇಳಿಕೊಡಲಾಗುತ್ತದೆ.
4) ವ್ಯಕ್ತಿಯ ಸಾಮಾಜಿಕ ಆಸರೆಯನ್ನು ಉತ್ತಮಪಡಿಸುವುದು, ನಿನ್ನ ಜೊತೆ ನಾವಿದ್ದೇವೆ ಎಂದು ಹೇಳುವ ಬಂಧು-ಮಿತ್ರರ ನೆರವನ್ನು ಪಡೆಯುವುದು.
5) ವಾತಾವರಣದಲ್ಲಿ ಸೂಕ್ತ ಬದಲಾವಣೆಗಳನ್ನು ತಂದು ವ್ಯಕ್ತಿ ನೆಮ್ಮದಿಯಿಂದ ಇರುವಂತೆ ಮಾಡುವುದು.