ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಯೊಬ್ಬನ ವಿಜ್ಞಾಪನೆ,

ಶ್ರೀ ರಾಮಾಯಣದಲ್ಲಿ ಒಂದು ಮಹದರ್ಥದ ಸನ್ನಿವೇಶವನ್ನು ಚಿತ್ರಿಸಿದ್ದಾನೆ ಕವಿಋಷಿ ವಾಲ್ಮೀಕಿ:

ಚಿತ್ರಕೂಟದ ಶಿಖರಾರಣ್ಯದ ಮುನಿವಸತಿಯಲ್ಲಿ ವನವಾಸದ ಪ್ರಾರಂಭ ಸಮಯನ್ನು ಕಳೆಯುತ್ತಿದ್ದ ಶ್ರೀ ರಾಮಚಂದ್ರನಲ್ಲಿಗೆ ಭರತದೇವನು ಯಾತ್ರೆ ಹೋಗುತ್ತಾನೆ, ಅಣ್ಣನನ್ನು ಅಯೋಧ್ಯೆಗೆ ಕರೆತರಲೆಂದು. ಆದರೆ ಆತನ ಆಶಾವಿಫಲತೆ ಅನಿವಾರ್ಯವಾಗುತ್ತದೆ. ಅಣ್ಣನಿಗೆ ಬದಲಾಗಿ ಅಣ್ಣನ ಪಾದುಕೆಗಳನ್ನು ತಲೆಯಲ್ಲಿ ಹೊತ್ತು ಅಯೋಧ್ಯಾಭಿಮುಖನಾಗಿ ಹಿಂತಿರುಗುತ್ತಾನೆ. ಆದರೆ ಅಯೋಧ್ಯೆಯ ಬಳಿಸಾರಿದ ಭರತನಿಗೆ ಆ ರಾಮಶೂನ್ಯ ರಾಜಧಾನಿಯನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅಲ್ಲಿಗೆ ಸ್ವಲ್ಪ ದೂರದಲ್ಲಿದ್ದ ನಂದಿಗ್ರಾಮಕ್ಕೆ ನಡೆದು, ಅಲ್ಲಿ ರಾಮಪಾದುಕೆಗಳನ್ನು  ಸಿಂಹಾಸನದಲ್ಲಿಟ್ಟು ಪೂಜಿಸುತ್ತಾ ಸೀತಾನಾಥನ ಪುನರಾಗಮನದ ನಿರಂತರ ನಿರೀಕ್ಷಣೆಯ ತಪಸ್ಸಿನಲ್ಲಿ ನಿರತನಾಗುತ್ತಾನೆ.

ಮನು ರಚಿಸಿದ ಅಯೋಧ್ಯೆ. ಇಕ್ಷ್ವಾಕು ರಘು ದಿಲೀಪಾದಿ ಲೋಕವಿಖ್ಯಾತರಾದ ರವಿವಂಶದ ಚಕ್ರೇಶ್ವರರು ಆಳಿಬಾಳಿದ ಮಹಾನಗರ. ಅದರ ಐಶ್ಚರ್ಯ ಅಚ್ಚಳಿಯದಿದೆ. ಅರಮನೆಗಳೇನು, ಸೌಧಗಳೇನು, ರಾಜವೀಧಿಗಳೇನು, ಉದ್ಯಾನಗಳೇನು, ರತ್ನಗೋಪುರಗಳೇನು, ಹೊಂಗಳಸಗಳೇನು ― ಎಲ್ಲವೂ ಇದ್ದವು, ಎಲ್ಲ ಸುಖಗಳಿಗೂ  ನೆಲೆವೀಡಾದ ಆ ನಗರದಲ್ಲಿ. ಹೀಗಿದ್ದರೂ ಭರತನೇಕೆ ಅದನ್ನು ಪ್ರವೇಶಿಸಲಿಲ್ಲ? ಆ ಮಹಾನಗರದ ವಿಚಾರವಾಗಿ ಅವನ ಮನಸ್ಸಿನಲ್ಲಿ ಏನು ಜುಗುಪ್ಸೆ ಉಂಟಾಯಿತು? ಏಕೆ?

ಹಾ ಭಾಗ್ಯಹೀನ ದೀನ ಅಯೋಧ್ಯೆ,
ನಿನಗುಂ ಅರಣ್ಯಗತಿಯಾಯ್ತಲಾ ರಾಮನಾ
ವನವಾಸದಿಂ, ದಶರಥನ ನಿಧನದಿಂದಂತೆ
ಭರತನ ಪರಿತ್ಯಾಗದಿಂ! ಶ್ರೇಷ್ಠರಿಲ್ಲದಿರೆ,
ಏನಿರ್ದರೇನಂತೆ, ಮಸಣಮಾ ಪತ್ತನಂ
ತತ್ತ್ವ ವಿದ್ಯಾ ಕಲಾ ಸಂಗೀತ ಸಾಹಿತ್ಯ
ಸಕಲ ಸಂಸ್ಕೃತಿಗೆ. ಬಿತ್ತರದ ಬೀದಿಗಳೆರಡು
ಕೆಲದಿ ಮುಗಿಲಂ ಮುಟ್ಟಿ ಮೆರೆದೊಡೇಂ ಸ್ಪರ್ಧೆಯಾ
ಪ್ರಾಸಾದ ಪಂಕ್ತಿ? ರಂಜಿಸಿದೊಡೇಂ ರಂಜನಿಯಂ
ಪಗಲುಗೈದಾಗಸದ ಚುಕ್ಕಿಗಳನೇಳಿಸುತೆ
ಕಿಕ್ಕಿರಿದು, ಕಣ್ಬೆರಗುಗೊಳಿಸಿ, ಗೊಂಚಲ್ಗೊಂಡು
ಉರಿವ ವಿದ್ಯದ್ದೀಪರಾಜಿ? ಬಣ್ಣದ ಬುಗ್ಗೆ,
ಕಣ್ಗೆ ಕಾಮನಬಿಲ್ಗಳಂಗನೆಯರಾಟೆವೆನೆ
ಸಾಲ್ಗೊಂಡು ವಿವಿಧಗತಿಯಾ ಕಲಾಕೃತಿಯಿಂದೆ,
ರಂಗುರಂಗಿನ ತೋಂಟ ರಂಗದಿ ಮನಂಗೊಳಿಸಿ
ಕುಣಿದೊಡೇಂ? ಪ್ರಾಸಛಂದಃಪೂರ್ಣಮಪ್ಪುದೇಂ
ಪುರುಷಾರ್ಥ ಶಾಶ್ವತದ ರಾಸಲೀಲಾ ಬೃಂದೆ?
ಮನಮನೋಮಂದಿರದ ಸುಸ್ವಪ್ನಗೋಪುರದ
ಕಲಶಂ ನಭಶ್ಚುಂಬಿಯಾಗದಿರೆ, ಋಷಿಹೃದಯ
ಮಂಗಳರತಿ ಬಾಳಿನಂಧತೆಯನಳಿಸದಿರೆ,
ಕವಿಕೃತಿಯ ವರ್ಣಗಾನಂ ಮಹನ್ ನಿತ್ಯತಾ
ಸ್ವರ್ಣಸುಂದರ ಇಂದ್ರಿಯಾತೀತ ನಂದನದಿ
ನವರಸಾಪ್ಸರಿಯರಂ ನರ್ತನಂಗೈಸದಿರೆ,
ಏನಿರ್ದುಮೇನ್ ಅನಾಗರಿಕತಾಶ್ರೀ, ದಿಟಂ
ಮಸಣಮಾ ಪತ್ತನಮಯೋಧ್ಯೆ ತಾನಾದೊಡಂ |
ಪ್ರೇತವನಮಂ ಪುಗುವನೇಂ ಪೂಜ್ಯಪಾದುಕಾ
ಚೇತನಂ? ಪಾಳ್ ಮಸಗಿದಾ ದುಸ್ಕೃತಿಯ ನಿಧಿಗೆ
ಬೆಂದಿರುಹಿ, ಬಳಿಯ ನಂದಿಗ್ರಾಮಕೈತಂದು,
ಪಾದುಕಾ ಪಟ್ಟಾಭೀಷೇಕಮಂ ಗೈದದಂ
ಪೂಜ್ಯಾಗ್ರಜಂಗೆತ್ತು, ರಾಜ್ಯಭಾರವ್ರತದಿ
ನಿಂದನೈ ಭರತನನಿಶಂ ರಾಮ ಸುಕ್ಷೇಮ
ಚಿಂತನಾ ಪ್ರಾರ್ಥನೆಗೆ ತೆತ್ತು ತನ್ಮಾತ್ಮಮಂ.

ಶ್ರೀರಾಮ ಶೂನ್ಯವಾದ ಅಯೋಧ್ಯೆ ಭರತನಿಗೆ ಪ್ರೇತವನದಂತೆ ಕಾಣಿಸಿತು. ಏನಿದ್ದರೇನು ಅನಾಗರಿಕತಾಶ್ರೀ? ನಗರ ಅಯೋಧ್ಯೆಯೆ ಆದರೂ ರಾಮನಿಲ್ಲದ ಮೇಲೆ ಭರತನಿಗೆ ಅದು ಮಸಣಕೆಣೆಯಾಯ್ತು.

ಈ ಕಥೆ ಎಂದೋ ನಡೆದುದಾಗಿದ್ದರೆ ನಾನಿಲ್ಲಿ ಇಂದು ಅದನ್ನು ಪ್ರಸ್ತಾಪಿಸುತ್ತಿರಲಿಲ್ಲ. ಅದು ಇಂದಿಗೂ ನಡೆಯುತ್ತಿದೆ, ಬೇರೆ ರೀತಿಯಲ್ಲಿ. ಈವೊತ್ತಿಗೂ ನಮ್ಮಲ್ಲಿ ಕೆಲವು ಹಿರಿಯ ಜನರು ನವೀನನಾಗರಿಕತೆ ಕಾಡಿಗಟ್ಟಿರುವ ಆತ್ಮಶ್ರೀ ಶ್ರೀರಾಮನನ್ನು ಏಕಾಂತದಲ್ಲಿ, ಧ್ಯಾನದಲ್ಲಿ, ಗಿರಿವನಗಳಲ್ಲಿ ಸಂಧಿಸಿ, ಅವನನ್ನು ಮರಳಿಸುವುದಕ್ಕಾಗದಿದ್ದರೂ ಅವನ ಪಾದುಕೆಗಳನ್ನಾದರೂ ಹೊತ್ತು ತರುವ ಪುಣ್ಯ ಸಾಹಸಮಾಡಿ ನಗರಗಳಿಗೆ ಹಿಂತಿರುಗುತ್ತಾರೆ. ಆದರೆ ಆತ್ಮಶ್ರೀ ಶೂನ್ಯವಾದ ನಗರನಾಗರಿಕಾ ಪ್ರವೇಶ ಅವರಿಗೆ ಸಾಧ್ಯವಾಗದೆ, ಅಂದು ಭರತದೇವನು ನಂದಿಗ್ರಾಮದಲ್ಲಿ ನಿಂತಂತೆ ಇಂದು ಒಂದು ಸೇವಾಗ್ರಾಮದಲ್ಲಿಯೊ, ಒಂದು ಶಾಂತಿನಿಕೇತನದಲ್ಲಿಯೋ, ಒಂದು ಪಾಂಡಿಚರಿಯಲ್ಲಿಯೋ ಅಥವಾ ಒಂದು ಅರುಣಾಚಲದಲ್ಲಿಯೊ ತಂಗುತ್ತಾರೆ. ಮತ್ತೆ ಕೆಲವರು ಜೀವನಸಂಪಾದನೆಯ ಅನಿವಾರ್ಯಲೌಕಿಕಕ್ಕೊಳಗಾಗಿ ದೇಹದಲ್ಲಿ ನಗರಪ್ರವೇಶ ಮಾಡಿದರೂ ಆತ್ಮದಲ್ಲಿ ತಮ್ಮದೇ ಪ್ರತ್ಯೇಕವಾದ ನಂದಿಗ್ರಾಮಗಳನ್ನು ನಿರ್ಮಿಸಿಕೊಂಡು ಯಂತ್ರನಾಗರಿಕತೆಗೆ ಆತ್ಮಸಂಸ್ಕೃತಿ ಪುನರಾಗಮಿಸುವ ಮಂಗಳಮುಹೂರ್ತವನ್ನೆ ಎದುರು ನೋಡುತ್ತಾ ಹಂಬಲಿಸುತ್ತಾ ಹಾರೈಕೆಯಲ್ಲಿಯೆ ಬದುಕಿ ತೀರುತ್ತಾರೆ. ಈ ನಗಗರಗಳ ಗಡಿಬಿಡಿಯಲ್ಲಿ  ಈ ಯಂತ್ರಗಳ ಕೋಲಾಹಲದಲ್ಲಿ, ಈ ನಾಗರಿಕತೆಯ ಅನಾಗರಿಕತೆಯ ಅನಾಗರಿಕ ರಜೋಮಯತೆಯಲ್ಲಿ ಅಂತಹವರ ಇರವು ಅಲಕ್ಷಿತವಾಗಿ ಅವರ ಅವುಭವವೂ ನಿರ್ಲಕ್ಷಿತವಾಗುತ್ತದೆ. ಒಂದು ವೇಳೆ ಅವರಲ್ಲಿ ಯಾರಾದರೊಬ್ಬಿಬ್ಬರು ಸುಮ್ಮನಿರಲಾರದ ಸಂಕಟದಿಂದಲೊ ಅಥವಾ ಭೂತದಯೆಯಿಂದಲೊ ಏನಾದರೂ ಎಚ್ಚರಿಕೆ ಹೇಳುವ ಅಥವಾ ಹಿತೋಪದೇಶ ಮಾಡುವ ಅನುಚಿತ ಸಾಹಸಕ್ಕೆ ಕೈಹಾಕಿದರೆ ― ‘ ಮಹಾಜನಃ ಸ್ಮೇರಮುಖೋ ಭವಿಷ್ಯತಿ’ ― ನಗರ ನಿವಾಸಿಗಳ ಮುಗುಳುನಗೆಯ ತಿರಸ್ಕೃತಿಗೆ ಪಕ್ಕಾಗಬೇಕಾಗುತ್ತದೆ. ನವೀನ ನಾಗರಿಕತೆಯ ಕೆಚ್ಚಲ ಕಳ್ಳನ್ನು ಅಮೃತವೆಂದು ಭ್ರಮಿಸಿ ಹೀರುತ್ತಾ ಮೈಮರೆತಿರುವ ಅಪರಿಣತ ವತ್ಸರರಂತೂ ಅವರ ಕಾಮಧೇನು ವ್ಯಾಘ್ರಮುಖಿ ಎಂಬ ಸತ್ಯವನ್ನು ಕೇಳಿದರೆ, ಹೇಳಿದಾತನ ಮೇಲೆ ಹುಲಿವೋಗುವ ಸಂಭವವೂ ಉಂಟು. ಪರಿಸ್ಥಿತಿ ಹೀಗಿರುವಾಗ ನಾವಿಂದು ನಿಮ್ಮ ಮುಂದೆ ಹೇಳಿರುವ ವಿಷಯ ನಿಮಗೆಷ್ಟರಮಟ್ಟಿಗೆ ರುಚಿಸುತ್ತದೆಯೊ ನಾನರಿಯೆ.

ಭಾಷಣದ ವಿಷಯವೇನೆಂದು ತಿಳಿಯಲು ನಿಮಗೆ ಕುತೂಹಲವಿರಬಹುದು. ನಾನೂ ಕುತೂಹಲಿ, ನನಗು ತಿಳಿದಿಲ್ಲ. ಆದರೆ ವಿಷಯದ ಹೆಸರನ್ನಲ್ಲದಿದ್ದರೂ ಅದರ ಉಸಿರನ್ನಾದರೂ ಸೂಚಿಸಬೇಕಾದ್ದು ನನ್ನ  ಕರ್ತವ್ಯ.

ಯಾವುದು ಇಲ್ಲದಿದ್ದರೆ ಯಾರೂ ಉಸಿರಾಡುವುದೂ ಸಾಧ್ಯವಿಲ್ಲವೊ, ಯಾವುದು ಇರುವುದರಿಂದ ಯಾರೂ ಅದು ಇದೆ ಎಂದು ನೆನೆಯುವುದಿಲ್ಲವೊ ಅದು ಈ ದಿನದ ಭಾಷಣದ ವಿಷಯ. ಗಾಳಿ ಎಂದು ಯಾರದರೂ ಸೂಚಿಸಬಹುದು. ಆದರೆ ನಾನು ಮಾತಾಡುವುದು ವಾಯುವನ್ನು ಕುರಿತಲ್ಲ. ವಾಯುವಿಗೆ ಉಪಮೇಯ ವಾಗಬಹುದಾದುದನ್ನು ಕುರಿತು. ಗಾಳಿ ಇಲ್ಲದೆಹೋದಾಗಲೆ ಅದರ ಅಸ್ತಿತ್ವದ ಮಹತ್ತು ನಮಗೆ ಪ್ರತ್ಯಕ್ಷವಾಗುತ್ತದೆ, ಉಸಿರುಕಟ್ಟಿ ಗೋಳಾಡುವಾಗ. ಅದು ಇರುವಾಗ ನಿರಂತರವಾಗಿ ಉಸಿರೆಳೆದುಕೊಂಡು ಬದುಕುತ್ತೇವೆಯಾದರೂ ಅದನ್ನು ಸದಾ ನಮ್ಮ ಪ್ರಜ್ಞೆಯಲ್ಲಿಟ್ಟಿಕೊಂಡು ನೆನೆಯುತ್ತಿರುವುದಿಲ್ಲ. ಊಟ, ತಿಂಡಿ, ಉಡುಗೆ, ತೊಡುಗೆ ಮೊದಲಾದವು ನಮ್ಮ ಬದುಕಿಗೆ ಎಷ್ಟು ಅವಶ್ಯಕ ಎಂದು ಭಾವಿಸಿ ಅದಕ್ಕಾಗಿ ಹೇಗೆ ಹೋರಾಡಿ ದುಡಿಯುತ್ತೇವೆಯೊ ಹಾಗೆ, ಸಾಧಾರಣವಾಗಿ, ನಾವು ಗಾಳಿಗಾಗಿ ದುಡಿದು ಹೋರಾಡುವುದಿಲ್ಲ. ಅದಕ್ಕಾಗಿ ಅಂಗಡಿ ತೆರೆಯುವುದಿಲ್ಲ ರೇರ್ಷ ಕಾರ್ಡಿನಲ್ಲಿ ಅದಕ್ಕೆ ಸ್ಥಾನವಿಲ್ಲ. ಆದರೂ ಅದು ನಮ್ಮ ಬದುಕಿಗೆ ಅತ್ಯಂತಾವಶ್ಯಕ ಎಂಬುದನ್ನು ಬಲ್ಲವರು ಬಲ್ಲರು. ಅದು ಇಲ್ಲದಾಗುವ ಮಾತಿರಲಿ, ಕೊಂಚ ಕಲುಷಿತವಾದರೂ ಆರೋಗ್ಯ ಕೆಟ್ಟು ಬದುಕು ದುಃಖಮಯವಾಗುತ್ತದೆ.

ಪ್ರಾಚೀನರು ವಾಯುವನ್ನು ಬ್ರಹ್ಮ ಎಂದು ಆರಾಧಿಸಿದ್ದಾರೆ. “ನಮಸ್ತೇ ವಾಯೋ, ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ. ತ್ವಾಮೇವ ಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ.” ವಾಯು ನಮ್ಮ ಒಡಲ ಬಾಳಿಗೆ ಹೇಗೆ ಆವಶ್ಯಕವೊ ಹಾಗೆಯೆ ನಮ್ಮ ಅಂತರ್ಜೀವನಕ್ಕೆ ಆಧಾರವೂ ಆವಶ್ಯಕವೂ ಆದ ಒಂದು ತತ್ವವಿದೆ. ಆ ಚೈತನ್ಯವನ್ನು ಆತ್ಮ, ಅಂತರಾತ್ಮ , ಪರಮಾತ್ಮ , ದೇವರು, ಬ್ರಹ್ಮ ಎಂದು ನಾನಾ ವಿಧವಾಗಿ ಕರೆದಿದ್ದಾರೆ. ಆದರ ಅನುಸಂಧಾನದಲ್ಲಿ  ಬದುಕಿನ ಪರಮ ಪುರುಷಾರ್ಥವಿದೆಂದೂ ಆದರ ಸಾಕ್ಷಾತ್ಕಾರವೆ ಪರಮ ಸುಖಶಾಂತಿದಾಯಕವೆಂದೂ ಸರ್ವಜೀವಿತದ ಸರ್ವೋತ್ಕೃಷ್ಟವಾದ ಚರಮ ಸಿದ್ಧಿಯೆಂದೂ  ಸಾರಿದ್ದಾರೆ.

ಯಾವ ಪುರುಷಾರ್ಥದ ಅನುಸಂಧಾನದ ಜೀವನದ ಸಕಲ ಕರ್ಮಗಳೂ, ಇದು ಸಣ್ಣದು ಇದು ದೊಡ್ಡದು, ಇದು ಕೀಳು ಇದು ಮೇಲು ಎಂಬ ಭೇದವಿಲ್ಲದೆ ಎಲ್ಲವೂ ಉತ್ತಮ ಪುರುಷಾರ್ಥಗಳಾಗಿ ಪರಿಣಮಿಸುತ್ತವೆಯೊ ಆ ಪುರುಷಾರ್ಥದ ಅನುಸಂಧಾನಕ್ಕೆ ಇಂದಿನ ವಿದ್ಯಾರ್ಥಿ ಜೀವನದಲ್ಲಿ ಯಾವ ಸ್ಥಾನ ದೊರೆತಿದೆ? ವಿದ್ಯಾರ್ಥಿ ಜೀವನವನ್ನು ರೂಪುಗೊಳಿಸುತ್ತಿರುವ ಇಂದಿನ ವಿದ್ಯಾಸಂಸ್ಥೆಗಳಲ್ಲಿ ಅದಕ್ಕೇನಾದರೂ ಗೌರವಸ್ಥಾನವಿದೆಯೆ? ಆ ವಿದ್ಯಾಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಸಂಕುಲದ ಹೃದಯಪಥಕ್ಕೆ ಮಾರ್ಗದರ್ಶಿಗಳಾಗಿ, ಮನೋರಥಕ್ಕೆ ಸಾರಥಿಗಳಾಗಿ ಶ್ರಮಿಸುತ್ತಿರುವವರ ಬದುಕಿನಲ್ಲಿ ಅದಕ್ಕೆ ಯಾವ ಪುರಸ್ಕಾರವಿದೆ?

ಆತ್ಮಾನುಸಂಧಾನದ ಪ್ರಶ್ನೆ ಮತಸಂಸ್ಥೆಗಳಿಗೆ ಸಂಬಂಧಪಟ್ಟುದೆಂದೂ, ನಾಗರಿಕ ಜೀವನಕ್ಕೆ ಬೇಕಾಗುವ ಬುದ್ಧಿಪರಿಷ್ಕರಣ ಮತ್ತು ಭವ ಸಂಸ್ಕರಣ ಇವು ಮಾತ್ರವೆ ಸೇರಿದುವೆಂದೂ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಧರ್ಮಸಾಧನೆಯ ಗೋಜಿಗೆ ಹೋಗುವುದಿಲ್ಲ. ಹೆಚ್ಚೆಂದರೆ ನೀತಿಶಾಸ್ತ್ರ, ತತ್ವಶಾಸ್ತ್ರ, ಮತಶಾಸ್ತ್ರ, ಮನಃಶಾಸ್ತ್ರ, ಸಮಾಜಶಾಸ್ತ್ರ ಎಂದು ಮೊದಲಾಗಿ ಅವುಗಳನ್ನು ಶಾಸ್ತ್ರೀಯ ದೃಷ್ಟಿಯಿಂದಲೂ ವೈಜ್ಞಾನಿಕವಾಗಿಯೂ ಅಧ್ಯಯನಮಾಡಲು ಅವಕಾಶ ಕಲ್ಪಿಸಿಕೊಡಬಹುದು. ಹಾಗೆಯೆ ಕಲ್ಪಿಸಿಯೂ ಕೊಟ್ಟಿವೆ. ನಮ್ಮ ದೇಶದ ಇಂದಿನ ರಾಜಕೀಯ ಸ್ಥಿತಿಯನ್ನೂ ಮತವೈಷಮ್ಯದ ಗೊಂದಲವನ್ನೂ ಗಮನಿಸಿದರೆ ವಿದ್ಯಾಸಂಸ್ಥೆಗಳು ಅದಕ್ಕಿಂತಲೂ ಹೆಚ್ಚು ಮುಂದುವರಿಯುವುದು ಸಾಧ್ಯವಿಲ್ಲವೆಂದೆ ತೋರುತ್ತದೆ. ಅಂತಹ ಉದಾತ್ತ ಧ್ಯೇಯಕ್ಕೆ ಔಪಚಾರಿಕವಾಗಿಯಾದರೂ ಸೇವೆ ಸಲ್ಲಿಸುತ್ತೇವೆ ಎಂದು ವಿದ್ಯಾಸಂಸ್ಥೆಯ ಅಧಿಕಾರಿಗಳು ಮಾಡಿದ ಪ್ರಯತ್ನ ವಿವಿಧ ಪಂಗಡ ವಿದ್ಯಾರ್ಥಿಗಳಲ್ಲಿ ಸಮರಸವನ್ನುಂಟುಮಾಡುವ ಬದಲು ವಿರಸವನ್ನೆ ಉದ್ರೇಕಿಸಿರುವ ಎಷ್ಟೋ ಪ್ರಸಂಗಗಳು ಈಗಾಗಲೆ ಅನೇಕರ ಅನುಭವಕ್ಕೆ ಬಂದಿವೆ.

ಇಷ್ಟವಿದ್ದರೂ ವಿದ್ಯಾಸಂಸ್ಥೆಗಳಿಗೆ ಕಷ್ಟಸಾಧ್ಯವಾಗಿ ತೋರುತ್ತಿರುವ ಆ ಕಾರ್ಯವನ್ನು ಮತಸಂಸ್ಥೆಗಳಾದರೂ ಕೈಕೊಂಡು ವಿದ್ಯಾರ್ಥಿಜೀವನವನ್ನು ತೋಜೋಮಯವನ್ನಾಗಿ ಮಾಡುತ್ತಿವೆ? ದೇವಸ್ಥಾನಗಳಿವೆ, ಮಸೀದಿಗಳಿವೆ, ಚರ್ಷುಗಳಿವೆ, ಮಠಗಳಿವೆ. ವಿದ್ಯಾರ್ಥಿಗಳು ತಮ್ಮ ಆತ್ಮಾನುಸಂಧಾನಕ್ಕೂ ಧರ್ಮಸಾಧನೆಗೂ ಅದಕ್ಕೇ ಮೀಸಲಾಗಿರುವ ಆ ಮತಸಂಸ್ಥೆಗಳಿಗೇಕೆ ಹೋಗಬಾರದು, ರೋಗ ಬಂದರೆ ಆಸ್ಪತ್ರೆಗೆ ಹೋಗುವಂತೆ? ಆಸ್ಪತ್ರೆಯನ್ನು ಕಾಲೇಜಿನ ಅಂಗವನ್ನಾಗಿ ಮಾಡಲು ಹೇಗೆ ಸಾಧ್ಯವಿಲ್ಲವೊ ಹಾಗೆಯೆ ಚರ್ಚು, ಮಸೀದಿ, ದೇವಾಲಯಗಳನ್ನೂ ಕಾಲೇಜಿನ ಅಂಗಳದಲ್ಲಿ ಕಟ್ಟಲು ಸಾಧ್ಯವಿಲ್ಲ. ಆಸ್ಪತ್ರೆಯನ್ನಾದರೂ ಕಾಲೇಜಿನ ಅಂಗವನ್ನಾಗಿ ಮಾಡಲು ಸಾಧ್ಯವಾಗಬಹುದೋ ಏನೊ, ಮತಸಂಸ್ಥೆಗಳನ್ನು ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಮಲೇರಿಯಾ ಕಾಯಿಲೆ ಮುಸಲ್ಮಾನನಿಗೆ ಬೇರೆ, ಹಿಂದುವಿಗೆ ಬೇರೆ ಅಲ್ಲ. ನಿಜವಾಗಿ ನೋಡಿದರೆ ದೇವರೂ ಹಾಗೆಯೆ. ಆದರೂ ಆ ವಿಚಾರದಲ್ಲಿ ಅಜ್ಞಾನವೂ ವೈರಭಾವವೂ ಇರುವ ತನಕ ಪ್ರತ್ಯೇಕತೆ ತೊಲಗುವುದಿಲ್ಲ. ಜ್ಞಾನದ ವಿಚಾರದಲ್ಲಿ ಐಕ್ಯಭಾವವನ್ನೆ ಪ್ರಮುಖ ಲಕ್ಷ್ಯವನ್ನಾಗಿ ಇಟ್ಟುಕೊಂಡಿರುವ ವಿದ್ಯಾಸಂಸ್ಥೆಗಳಿಗೆ ಮತಸಂಸ್ಥೆಗಳಲ್ಲಿರುವ ಪ್ರತ್ಯೇಕತೆಯ ಮನೋಧರ್ಮ ಹೊಂದುವುದಿಲ್ಲ.

ಹಾಗಾದರೆ ಈಗಿರುವ ಬೇರೆಬೇರೆ ಮತಸಂಸ್ಥೆಗಳಿಗೇ ಆ ಕಾರ್ಯವನ್ನು ಬಿಟ್ಟುಬಿಡುವದೇ ಹೇಗೆ?

ವಿದ್ಯಾರ್ಥಿಗಳು ಆ ಮತಸಂಸ್ಥೆಗಳ ಪ್ರಯೋಜನವನ್ನು ಎಷ್ಟರಮಟ್ಟಿಗೆ ಪಡೆಯುತ್ತಿದ್ದಾರೆ? ಪಡೆಯದಿದ್ದರೆ ಏಕೆ ಪಡೆಯುತ್ತಿಲ್ಲ? ಯಾವ ಕಾರಣಗಳಿಂದ ಅವರು ಆ ಸಂಸ್ಥಗಳಿಗೆ ವಿಮುಖರಾಗಿದ್ದಾರೆ? ಎಂಬ ಗಾಢಪ್ರಶ್ನೆಗಳು ಸದ್ಯಕ್ಕೆ ಒತ್ತಟ್ಟಿಗಿರಲಿ, ಅವರೆಲ್ಲರೂ ಆ ಸಂಸ್ಥೆಗಳಿಗೆ ಹೋಗುತ್ತಿದ್ದಾರೆಂದೇ ಇಟ್ಟುಕೊಂಡರೂ ಅಲ್ಲಿ ಅವರಿಗೆ ದೊರೆಯುವ ಅರಿವಿಗೂ ವಿದ್ಯಾಸಂಸ್ಥೆಗಳಲ್ಲಿ ಲಭಿಸುವ ಸಕ್ರಮ ಮತ್ತು ಪ್ರಾಯೋಗಿಕ ಜ್ಞಾನಕ್ಕೂ ಏನಾದರೂ ಸಮನ್ವಯವಿರುತ್ತದೆಯೆ? ಒಂದು, ಬುದ್ಧಿಯ ವೈಶಾಲ್ಯವನ್ನು ಬೋಧಿಸಿದರೆ ಇನ್ನೊಂದು, ಹೃದಯದ ಸಂಕುಚಿತ ಭಾವವನ್ನೆ ಬೆಳೆಸುತ್ತದೆ. ಈ ಹಿಗ್ಗಲು ಕುಗ್ಗಲಾಟಕ್ಕೆ ಸಿಕ್ಕಿ ವಿದ್ಯಾರ್ಥಿಯ ಮನಸ್ಸು ಏನಾಗಬೇಕು? ತನ್ನ ವ್ಯಕ್ತಿತ್ವ ಬಿರಿಯದಂತೆ ನೋಡಿಕೊಳ್ಳಬೇಕಾದರೆ ಅವನು ಅದನ್ನು ತಿರಸ್ಕರಿಸಬೇಕು ಇಲ್ಲವೆ, ಬಹುಜನರು ಮಾಡುತ್ತಿರುವಂತೆ, ಒಂದಕ್ಕೊಂದು ಹೊಂದದ ಎರಡನ್ನೂ ಹೇಗೋ ಹೊತ್ತುಕೊಂಡು ಸೀಳುಬಾಳು ಬಾಳಬೇಕು.

ಆದರೆ ಸಮನ್ವಯದೃಷ್ಟಿಯ ದರ್ಶನ ಜ್ಯೋತಿಯಿಂದ ದೀಪ್ತವಾದ ವ್ಯಕ್ತಿತ್ವದ ಪರಿಪೂರ್ಣತೆ ಯಾರ ಅಪೇಕ್ಷೆಯೂ ಆದರ್ಶವೂ ಆಗಿರುತ್ತದೆಯೋ ಅಂತಹವರಿಗೆ ಸೀಳುಬಾಳು ಸಂಕಟಕರವಾಗುತ್ತದೆ. ಒಂದು ವೇಳೆ ತಾರುಣ್ಯದ ನವೋಲ್ಲಾಸಭರದಲ್ಲಿಯೂ ಯೌವನದ ಬಹಿರ್ಮುಖ ಆವೇಗದಲ್ಲಿಯೂ ಆ ಅತೃಪ್ತಿ ಚಿತ್ತದ ತಳಾತಳಕ್ಕೆ ಮುಳುಗಿ ಗುಪ್ತವಾಗಿದ್ದರೂ ತರುವಾಯವಾದರೂ ಅದರ ಸುಪ್ತಿಗೆ ಭಂಗಬರದಿರವುದಿಲ್ಲ. ಆಗ ಜೀವನದಲ್ಲಿ ತಲೆದೋರುವ ಜುಗುಪ್ಸೆ, ಅಶಾಂತಿ, ನಿರಾಶೆ, ಅಸಾರ್ಥಕತೆ ಇವು ಅಸಹನೀಯವಾಗುತ್ತವೆ. ಅದರಿಂದ ಪಾರಾಗುವುದಕ್ಕಾಗಿ ಮನುಷ್ಯ ಎಂತಹ ಮೌಢ್ಯವನ್ನಾದರೂ ಒಪ್ಪಿ ಅಪ್ಪಿಕೊಳ್ಳುತ್ತಾನೆ. ವಿವೇಚನೆಗೆ ಆಗ ಅವಕಾಶವಿರುವುದಿಲ್ಲ. ಅಂತಹ ಸ್ಥಿತಿ ಅತ್ಯಂತ ಶೋಚನೀಯ. ಅದರಿಂದ ಪಾರಾದವರು ಇತರರನ್ನೂ ಆ ಮುಕ್ತಿಯ ಶಾಂತಿಗೆ ಒಯ್ಯಬೇಕೆಂದು ಹಂಬಲಿಸುತ್ತಾರೆ:

ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಮಾಪ್ನುಯಾತ್
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಶ್ಚಾನ್ಯಾನ್ ವಿಮೋಚಯೇತ್ ||

ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ಲಭಿಸಲಿ, ಶಾಂತರು ಬಂಧಮುಕ್ತರಾಗಲಿ, ಮುಕ್ತರು ಇತರರನ್ನೂ ಮುಕ್ತರನ್ನಾಗಿ ಮಾಡಲಿ.

ವಿದ್ಯಾರ್ಥಿಗಳಿಗೇಕೆ ಈ ಆತ್ಮಾನುಸಂಧಾನದ ಕೋಟಲೆ ಎಂದು ಯಾರಾದರೂ ಪ್ರಶ್ನಿಸಬಹುದು. ಆತ್ಮಶ್ರೀಯ ಪ್ರಶ್ನೆ ಬಾಳಿನ ತುದಿಗೆ ಸೇರಿದುದೆಂದು ಕೆಲವರ ಅಭಿಪ್ರಾಯ. ಅದನ್ನು ಬಾಳಿನ ಮೊದಲಿಗೆ ವರ್ಗಾಯಿಸಿದರೆ ಅನರ್ಥಕರವಾಗಿ ಅನಾವಶ್ಯಕವಾದ ಕ್ಲೇಶಕ್ಕೆ ಕಾರಣವಾಗಬಹುದೆಂದು ಹಲವರ ಭಯ. ಅಂಗ ವ್ಯಾಯಾಮ ಸಾಧನೆಯನ್ನು ಎಲ್ಲರಿಗೂ ಬೋಧಿಸಿದರೆ ಎಲ್ಲರೂ ಪೈಲ್ವಾನರಾಗಿ ಉಳಿದ ಜೀವನ ವ್ಯಾಪಾರಗಳಿಗೆ ಜನರಿಲ್ಲದೆ ಹೋಗಬಹುದೆಂಬ ಭಯದಂತೆ ಈ ಭಯವೂ ನಗೆಗೆ ಈಡಾಗುತ್ತದೆ. ಎಲ್ಲರ ವಿಷಯದಲ್ಲಿಯೂ ಅಂಗಸಾಧನೆಯ ಗುರಿ ಅಂಗಸಾಧನೆಯೇ ಹೇಗೆ ಆಗುವುದಿಲ್ಲವೋ ಹಾಗೆಯೆ ಅಂಗಸಾಧನೆಯೇ ಪರಮ ಗುರಿಯಾಗತಕ್ಕವರು ಎಲ್ಲಿಯೋ ಅತಿಸ್ವಲ್ಪ ಮಂದಿ. ಎಲ್ಲರೂ ಪರಮಹಂಸರಾಗಿ ಎಲ್ಲರೂ ಅರವಿಂದ ಯೋಗಿಗಳಾಗಿ, ಎಲ್ಲರೂ ರಮಣಮಹರ್ಷಿಗಳಾಗಿ, ಎಲ್ಲರೂ ಮಹಾತ್ಮರಾಗಿ ಎಂದು ಬೋಧಿಸುವುದಲ್ಲ ಇಂದಿನ ಉಪನ್ಯಾಸದ ಉದ್ದೇಶ; ಅಂತಹ ಬೋಧನೆ ಇಲ್ಲಿ ಸಂಪೂರ್ಣವಾಗಿ. ನಿಷ್ಪ್ರಯೋಜಕ ಎಂಬುದನ್ನೂ ನಾನು ಬಲ್ಲೆ. ಯಾರ ಬೋಧನೆಯಿಂದಲೂ ಅಂತಹ ಮಹದ್ವ್ಯಕ್ತಿಗಳ ನಿರ್ಮಾಣವಾಗಲಾರದೆಂಬುದೂ ಸ್ವವಿದಿತ. ಅಂಗಸಾಧನೆ ಮಾಡಿದವರೆಲ್ಲ. ಗರಡಿಗಳನ್ನು ತೆರೆದು ಗರುಡಿಯಾಚಾರ್ಯ ರಾಗಬೇಕೆಂಬುದಲ್ಲ. ಅಂಗಸಾಧನೆಯನ್ನು ಬೋಧಿಸುವುದರ ಉದ್ದೇಶ. ಅಂಗಸಾಧನೆಯಿಂದ ಉಂಟಾಗುವ ದೇಹದಾರ್ಢ್ಯ ಅದನ್ನು ಸಂಪಾದಿಸಿದ ವ್ಯಕ್ತಿಗೆ ಜೀವನದ ಸರ್ವ ವ್ಯಾಪಾರಗಳಲ್ಲಿಯೂ ಸಹಾಯವಾಗುತ್ತದೆ. ಸತ್ಯಾಗ್ರದಲ್ಲಾಗಲಿ ಧನಸಂಗ್ರದಲ್ಲಾಗಲಿ ಅಂಗಸಾಧನೆಯಿಲ್ಲದ ದೃಢಕಾಯನಿಗಿಂತ ಅಂಗಸಾಧನೆಯಿಂದ ದೃಢಕಾಯನಾದವನು ಯಾವಾಗಲೂ ಮೇಲುಗೈಯಾಗುತ್ತಾನೆ. ಆತ್ಮಸಾಧನೆಯ ವಿಚಾರವೂ ಅಂಥಾದ್ದೆ. ಯಾವಾತನು ಅಂತಸ್ಸಾಧನೆಯಿಂದ ಆತ್ಮಶ್ರೀ ಸಮನ್ವಿತನಾಗಿರುತ್ತಾನೆಯೋ ಅಂಥವನು ಬುದ್ಧಿಯಲ್ಲಿ, ಭಾವದಲ್ಲಿ ದೇಹದಲ್ಲಿ, ಜೀವನ ಸಂಗ್ರಾಮದಲ್ಲಿ ಆತ್ಮಶ್ರೀ ವಿಹೀನನಿಗಿಂತಲೂ ನಿಸ್ಸಂದೇಹವಾಗಿ ಮೇಲುಗೈಯಾಗುತ್ತಾನೆ. ಸೋಲು, ನಿರಾಶೆ, ಅವಮಾನ ಮೊದಲಾದ ದುರಂತ ಸನ್ನಿವೇಶಗಳು ಒದಗಿದಾಗಲೂ ಅವನ ಶಾಂತಿ, ಅವನ ಧೈರ್ಯ, ಅವನ ನಿರ್ಭರತೆ ಇವು ಅಂತಹವನನ್ನು ಕೈಬಿಡದೆ ಉದ್ದಾರವಾಡುತ್ತವೆ. ಇತರರಂತೆ ಅವನು ನಿರ್ವಿಣ್ಣತೆಗೆ ತುತ್ತಾಗುವುದಿಲ್ಲ, ಮೋಘಕರ್ಮನಾಗುವುದಿಲ್ಲ, ನಷ್ಟಾತ್ಮನಾಗುವುದಿಲ್ಲ. ಆದ್ದರಿಂದಲೆ ದೇಹಶ್ರೀ ಭಾವಶ್ರೀ ಬುದ್ಧಿಶ್ರೀಗಳನ್ನು ಈಗಿರುವುದಕ್ಕಿಂತಲೂ ನೂರುಮಡಿ ಸಾವಿರಮಡಿ ತೋಜೋಮಯವಾಗಿಯೂ ಆಶಾಪೂರ್ಣವಾಗಿಯೂ ಮಾಡಿ ಅವೆಲ್ಲವುಗಳ ಸರ್ವತೋಮುಖವಾದ ಏಳಿಗೆಗೆ ಪ್ರಚೋದಕಶಕ್ತಿಯಾಗುವ ಆತ್ಮಶ್ರೀಯ ಅನುಸಂಧಾನವು ಉದ್ದಾರಾಕಾಂಕ್ಷಿಗಳಾದ ವಿದ್ಯಾರ್ಥಿಗಳೆಲ್ಲರಿಗೂ ಅಮೃತಪಥ್ಯ. ವಿದ್ಯೆ ಆತ್ಮಶ್ರೀಯಿಂದ ಪ್ರದೀಪ್ತವಾದರೆ ಅದು ನಿಜವಾಗಿಯೂ ವಿದ್ಯೆಯಾಗುತ್ತದೆ; ಇಲ್ಲದಿದ್ದರೆ, ಅದು ಎಷ್ಟು ಅಕ್ಷರಗಳ ಪದವಿಗೆ ಬೇಕಾದರೂ ಏರಿರಲಿ, ‘ಅವಿದ್ಯೆ’ ಎನಿಸಿಕೊಳ್ಳತ್ತದೆ.

ನಾವೀಗ ವಿದ್ಯೆ ಎಂದು ವ್ಯವಹರಿಸುತ್ತಿರುವ ವೈಷಯಿಕವಾದ ಜ್ಞಾನ ಭಾಗಗಳನ್ನೆಲ್ಲ ಉಪನಿಷತ್ತಿನ ದರ್ಶನ ‘ಅವಿದ್ಯೆ’ ಎಂದು ಪರಿಗಣಿಸುತ್ತದೆ. ಈ ವಿದ್ಯೆ ಎಷ್ಟಿದ್ದರೂ ತಮಸ್ಸಿನ ಚಮತ್ಕಾರವೆ ಹೊರತು ಜ್ಯೋತಿಯ ಆವಿಷ್ಕಾರವಲ್ಲ ಎಂಬುದು ಆ ಋಷಿದೃಷ್ಟಿ. ‘ವಿದ್ಯೆ’ ಎಂದು ಹೆಸರು ಪಡೆದಿರುವ ‘ಅವಿದ್ಯೆ’ಯಲ್ಲಿ ಪಾರಂಗತರಾದ ವಿದ್ವಾಂಸರುಗಳಿಂದ ವಿದ್ಯಾರ್ಥಿಗೆ ಆತ್ಮ ಜ್ಯೋತಿಯ ಆವಿಷ್ಕಾರವಾಗಲು ಸಾಧ್ಯವಿಲ್ಲ. ಅಂತಹ ವಿದ್ವಾಂಸರು ವಿಪುಲ ಧನಾರ್ಜನಾ ಸಾಮರ್ಥ್ಯದಿಂದ ಜನಸಾಮಾನ್ಯ ಮಾನ್ಯರಾಗಿದ್ದರೂ ಅವರು ಉಪನಿಷತ್ಕಾರರ ದೃಷ್ಟಿಯಲ್ಲಿ, ಅವಿದ್ಯಾ ವಿದ್ವಾಂಸರೇ ಹೊರತು ವಿದ್ಯಾಗುರುಗಳಾಗಲಾರರು. ಆತ್ಮ ಜ್ಞಾನದ ದೃಷ್ಟಿಯಿಂದ ಅವರೂ ಕುರುಡರು. ಬೆಳಕಿನ ಅವಶ್ಯಕತೆ ಅವರಿಗೇ ಇರುವಾಗ ಅವರು ವಿದ್ಯಾರ್ಥಿಗಳಿಗೆ ಜ್ಯೋತಿರ್ದಾನ ಮಾಡುತ್ತಾರೆಂದರೆ, ಉಪನಿಷತ್ತು ಹೇಳುತ್ತದೆ:

ಅವಿದ್ಯಾಯಾಮಂತರೇ ವರ್ತಮಾನಾಃ
ಸ್ವಯಂ ಧೀರಾಃ ಪಂಡಿತಂ ಮನ್ಯಮನಾಃ |
ಜಂಘನ್ಯ ಮಾನಾಃ ಪರಿಯಂತಿ ಮೂಢಾ
ಆಂಧೇನೈವ ನೀಯಮಾನಾ ಯಥಾಂಧಾಃ ||

ಅವಿದ್ಯೆಯೊಳಗಿದ್ದೂ ತಾವು ಬದ್ಧಿವಂತರೆಂದೂ ಪಂಡಿತರೆಂದೂ ಭ್ರಮಿಸಿ, ಕುರುಡರನ್ನು ನಡೆಸುವ ಕುರುಡರಂತೆ, ಮೂಢರು ತೊಳಲುತ್ತಾರೆ.

ಆದರೂ ಉಪನಿಷತ್ತಿನ ದರ್ಶನದಲ್ಲಿ ‘ಅವಿದ್ಯೆ’ಯ ಅವಹೇಳನವಿಲ್ಲ. ಆತ್ಮಜ್ಞಾದಂತೆ ಉಳಿದ ಎಲ್ಲ ಲೌಕಿಕ ವಿದ್ಯಾಸಮೂಹಗಳೂ ಲೋಕದ ಬದುಕಿಗೆ ಅಗತ್ಯ. ಆಧ್ಯಾತ್ಮ ವಿದ್ಯೆಯಂತೆಯೇ ಲೌಕಿಕ ವಿದ್ಯೆಗಳೂ ಬೇಕು.

ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾsಮೃತಮಶ್ನುತೇ ||

ವಿದ್ಯೆ ಅವಿದ್ಯೆಗಳೆರಡನ್ನೂ ತಿಳಿಯುವಾತನು ಅವಿದ್ಯೆಯಿಂದ ಮೃತ್ಯುವನ್ನು ಉತ್ತರಿಸಿ ವಿದ್ಯಯಿಂದ ಅಮೃತವನ್ನು ಪಡೆಯುತ್ತಾನೆ.

ಅಮೃತವನ್ನು ಪಡೆಯುವುದಕ್ಕೆ ‘ವಿದ್ಯೆ’ ಬೇಕಾಗುವಂತೆ ಮೃತ್ಯುವನ್ನು ದಾಡುವುದಕ್ಕೆ ‘ಅವಿದ್ಯೆ’ ಬೇಕು. ಇನ್ನೂ ಒಂದು ಹೆಜ್ಜೆ ಮುಂದುವರಿದು ಉಪನಿಷತ್ತು ಎಚ್ಚರಿಕೆ ಹೇಳುತ್ತದೆ.

ಅಂಧಂತಮಃ ಪ್ರವಿಶನ್ತಿ ಯೇsವಿದ್ಯಾಮುಪಾಸತೇ ||
ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ ||

ಅವಿದ್ಯೆಯನ್ನೆ ಉಪಾಸಿಸುವವರು ಕುರುಡುಗತ್ತಲೆಗಿಳಿದರೆ ವಿದ್ಯೆಯಲ್ಲಿಯೆ ಮಾತ್ರ ರತರಾದವರು ಅದಕ್ಕಿಂತಲೂ ಹೆಚ್ಚು ಎಂಬಂತಹ ಕಗ್ಗತ್ತಲೆಗಿಳಿಯುತ್ತಾರೆ. ಆದ್ದರಿಂದ ಅವಿದ್ಯಾ ವಿದ್ವಾಂಸರುಗಳೂ ಪೃಥಿವಿಯ ಒಳ್‌ಬಾಳಿಗೆ ಆವಶ್ಯಕ. ಅವರ ವಿಚಾರದಲ್ಲಿ ಅಲ್ಲಿ ಒಂದಿನಿತೂ ಅಸಡ್ಡೆಯಿಲ್ಲ, ಎಳ್ಳನಿತೂ ಅವಜ್ಞೆಯಿಲ್ಲ. ಆದರೆ ಆತ್ಮಶ್ರೀ ಯಾರ ಬಯಕೆಯೋ ಅವರಿಗೆ ಆ ದಿಕ್ಕಿನಿಂದ ಬೆಳಕು ಲಭಿಸುವುದಿಲ್ಲ.

ಇತ್ತ ವಿದ್ಯಾಸಂಸ್ಥೆಗಳಲ್ಲಿಯೂ ಆತ್ಮಶ್ರೀ ಸಾಧನೆಗೆ ಅವಕಾಶವಿಲ್ಲ. ಅತ್ತ ಮತ ಸಂಸ್ಥೆಗಳಲ್ಲಿಯೂ ಅದರ ಅವಿಕೃತ ಮಾರ್ಗವಿಲ್ಲ. ಹೀಗಿರುವಾಗ ಆತ್ಮಶ್ರೀ ಸಾಧನಾಕಾಂಕ್ಷಿಯಾದ ವಿದ್ಯಾರ್ಥಿ ಏನು ಮಾಡಬೇಕು? ಎತ್ತ ತಿರುಗಬೇಕು?

ತಾನೆಯೆ ಪ್ರಯತ್ನಿಸಬೇಕು. ತನ್ನೊಳಗೆಯೆ ತಿರುಗಬೇಕು. ಅನ್ಯರಿಂದಾಗಲಿ ಅನ್ಯವಿಧಾನಗಳಿಂದಾಗಲಿ ದೊರಕೊಳ್ಳದು ಆತ್ಮದ ಅಂತಃಶ್ರೀ.

ತಾರುಣ್ಯಕ್ಕೆ ಬಹಿರ್ಮುಖತೆಯೆ ಸಹಜ ಪ್ರಕೃತಿ; ಅಂತರ್ಮುಖತೆ ಪ್ರಯತ್ನದಿಂದ ಮಾತ್ರ ಸಾಧ್ಯ. ಅಂಗಾಂಗಗಳನ್ನು ಚಲಿಸಿ ಬೆವರು ಸುರಿಸಿ ಚೆಂಡಾಡುವುದು ಅದಕ್ಕೆ ಸುಲಭ ಮತ್ತು ಸಂತೋಷಕರ; ನಿಶ್ಚಲವಾಗಿ ಕುಳಿತು ಧ್ಯಾನ ಮಾಡುವುದು ಕಠಿನ ಮತ್ತು ಕ್ಲೇಶಕರ, ಮೊದಲನೆಯದು ರಜಸ್ಸು, ಎರಡನೆಯದು ತಪಸ್ಸು. ತಮಸ್ಸಿಗಿಂತ ರಜಸ್ಸು ಮೇಲು; ಆದರೆ ತಪಸ್ಸು ಸರ್ವೋತ್ತಮ. ತಪಸ್ಸಿಲ್ಲದೆ ಆತ್ಮಶ್ರೀ ಅಲಭ್ಯ. ಯಾವ ವಿದ್ಯಾರ್ಥಿ ದೇಹಶ್ರೀ ಭಾವಶ್ರೀ ಬುದ್ಧಿಶ್ರೀಗಳನ್ನು ಅತ್ಯುಜ್ವಲವಾಗಿ ಪಡೆಯಬೇಕೆಂದು ಹಾರೈಸುತ್ತಾನೆಯೊ ಆತನು ಇತರ ಎಲ್ಲ ಶ್ರೀಗಳಿಗೂ ಶ್ರೀಯಾಗಿರುವ ಆತ್ಮಶ್ರೀಯನ್ನು ಸಾಧಿಸಲೇಬೇಕು. ಎಂದರೆ ಆತನೂ ತಪಸ್ವಿಯಾಗಬೇಕು.

ಆತ್ಮಶ್ರೀ ಸಾಧಕನಾದ ವಿದ್ಯಾರ್ಥಿಯೂ ತಪಸ್ವಿ. ಆತನ ತಪಸ್ಸು ತಲೆ ಕೆಳಗಾಗಿ ನಿಲ್ಲುವುದರಲ್ಲಿಲ್ಲ; ಬರಿಯ ದೇಹದಂಡನೆಯಲ್ಲಿಲ್ಲ; ಜೀವನದ ಮುಗ್ಧ ಸುಖಗಳ ತ್ಯಾಗದಲ್ಲಾಗಲಿ ಸರಳ ಸೌಂದರ್ಯಗಳ ವಿಸರ್ಜನೆಯಲ್ಲಾಗಲಿ ಇಲ್ಲ. ಆತನ ತಪಸ್ಸು ದೇಹಶ್ರೀ ಭಾವಶ್ರೀ ಬುದ್ಧಿಶ್ರೀಗಳ ತಿರಸ್ಕಾರದ ರೂಪ ತಾಳುವ ಬಣಗು ಚಿತ್ತವೃತ್ತಿಯಲ್ಲ. ಆತನ ತಪಸ್ಸು ಇರುವುದು ಅಧ್ಯಯನದಲ್ಲಿ, ಏಕಾಗ್ರತೆಯಲ್ಲಿ, ಸಂಯಮದಲ್ಲಿ, ದ್ಯಾನದಲ್ಲಿ, ಆತ್ಮಾನುಸಂಧಾನದಲ್ಲಿ.

ಮನುಷ್ಯ ಸಂಗವೂ ಶಬ್ದಮಯ ಸಾಮಾಜಿಕ ಜೀವನವೂ ಓಕರಿಕೆ ಹಿಡಿಸುವಷ್ಟು ಯಥೇಚ್ಚವಾಗಿರುವ ಈ ಕೋಲಾಹಲಪೂರ್ಣವಾದ ನಗರಕ್ಕೆ ವಿದ್ಯಾರ್ಜನೆಗಾಗಿ ಬಂದಿರುವ ಎಳೆಯ ಗೆಳೆಯರ ಮುಮದೆ ಏಕಾಂತವನ್ನೂ ಮೌನವನ್ನೂ ಕುರಿತು ಒಂದೆರಡು ಪ್ರಶಂಸೆಯ ಮಾತುಗಳನ್ನಾಡಿದರೆ ಅವರನ್ನೆಲ್ಲ ಕೆಲಸಕ್ಕೆ ಬಾರದ ಕನಸುಗಾರರನ್ನಾಗಿ ಮಾಡುವ ಭಯ ನನಗಿನಿತೂ ಇಲ್ಲ. ತುಂಬುಬಾಳಿಗೆ ಬಹಿರ್ಮುಖತೆಯಷ್ಟೇ ಆವಶ್ಯಕ ಅಂತರ್ಮುಖತೆ. ಬದುಕನ್ನು ಕುರಿತು ಜಾನಿಸುವುದೂ ಚೆನ್ನಾಗಿ ಬದುಕುವುದಕ್ಕೆ ನೆರವಾಗುತ್ತದೆ. ಕೊನೆಗೂ ನಮ್ಮ ಒಟ್ಟು ಬದುಕಿನ ಉತ್ತಮಾಂಶ ಆ ಬದುಕನ್ನು ಕುರಿತು ಧ್ಯಾನದ ಬದುಕಿನಿಂದಲೇ ಸಿದ್ಧವಾಗುತ್ತದೆ, ಮೊಸರಿನ ಸತ್ವಾಂಶ ಬೆಣ್ಣೆಯಲ್ಲಿ ಸಿದ್ಧಿಸುವಂತೆ. ಪಶುವೂ ಕೂಡ ತಾನು ಹಗಲೆಲ್ಲ ಅಲೆಹಲೆದು ಮೇದುದನ್ನು ಮೈಹಿಡಿಸಿಕೊಳ್ಳುವುದಕ್ಕಾಗಿ ಇರುಳು ಕೊಟ್ಟಿಗೆಯಲ್ಲಿ ವಿರಾಮವಾಗಿ ಮಲಗಿ ಮೆಲಕು ಹಾಕುತ್ತದೆ. ಇಲ್ಲದಿದ್ದರೆ ತಿಂದ ಮೇವು ತನ್ನದಾಗುವುದಿಲ್ಲ. ಅಂತೆಯೆ ಪುಸ್ತಗಳಿಂದಲೂ ವ್ಯಕ್ತಿಗಳಿಂದಲೂ ಸಂಸ್ಥೆಗಳಿಂದಲೂ ಜೀವನ ವ್ಯಾಪಾರಗಳಿಂದಲೂ ನಾವು ಪಡೆಯುವ ತಿಳಿವು ನಮ್ಮ ಅನುಭವಕ್ಕೆ ಹಿಡಿಯಬೇಕಾದರೆ, ಅದರಿಂದ ನಮ್ಮ ಆತ್ಮಶ್ರೀ ಅರ್ವಿರ್ಭವುಸಬೇಕಾದರೆ, ಏಕಾಂತವೂ ಮೌನವೂ ಧ್ಯಾನವೂ ಅತ್ಯಗತ್ಯ. ದಿನದ ದೀರ್ಘಜೀವನದಲ್ಲಿ ಸ್ವಲ್ಪ ಕಾಲವನ್ನಾದರೂ ಅದಕ್ಕೆ ಮೀಸಲಾಗಿಸುವುದರಿಂದಲೇ ಬಾಳು ಪರಿಪೂರ್ಣವೂ ಸುಂದರವೂ ಆಗಲು ಸಾಧ್ಯ.

ಕವನವೊಂದು ನನ್ನ ನೆನಪಿಗೆ ಬರುತ್ತದೆ. ಅದು ಒಬ್ಬ ಸಂನಾಸಿ ರಚಿಸಿದ್ದು. ತನ್ನ ಕರ್ಮಮಯ ಜೀವನವನ್ನೆಲ್ಲ ಧ್ಯಾನಕ್ಕೆ ಮೀಸಲಾಗಿ ಇರಿಸಿದ ಆತನು ಶ್ರೀ ರಾಮಕೃಷ್ಣ ಮಹಾಸಂಸ್ಥೆಯ ಪ್ರತಿನಿಧಿಗಳಲ್ಲೊಬ್ಬನಾಗಿ, ಅಮೆರಿಕಾಕ್ಕೆ ಹೋಗಿ ಸುಮಾರು ಕಾಲು ಶತಮಾನ ಅಲ್ಲಿ ಧರ್ಮಪ್ರಚಾರ ಮಾಡಿ, ಅನೇಕ ಲೌಕಿಕ ಸಂಸ್ಥೆಗಳನ್ನೂ ನಿರ್ಮಿಸಿ, ಲೋಕಸೇವೆ ಮಾಡಿದ ಹಿರಿಯ ವ್ಯಕ್ತಿ:

Silence is the heart of all things: sound the fluttring of its impulse
Which the fever and spasm of the Universe convulse.
Each sound that breaks the silence only makes it more profound,
Like a crash of deafening thunder in the sweet, blue stillness drowned.
Let the soul walk softly in thee, as a saint in heaven unshod,
For to be alone with silence is to be alone with God.
― Swami Paramananda.

ಮೌನಮಂದಿರದಲ್ಲಿ ಧ್ಯಾನದೇಕಾಂತದಲ್ಲಿ ಭಗವಂತನ ದಿವ್ಯಸಾನ್ನಿಧ್ಯ ಗೋಚರಿಸುತ್ತದೆ ಎಂಬುದು ಆತ್ಮಶ್ರೀ ಸಾಧಕರೆಲ್ಲರ ಅನುಭವವಾಗಿದೆ. ಆತ್ಮಶೀಯನ್ನು ಬಯಸುವ ವಿದ್ಯಾರ್ಥಿ ಆ ಮೌನ, ಆ ಧ್ಯಾನ, ಆ ಏಕಾಂತತೆಗಳನ್ನು ತಕ್ಕಮಟ್ಟಿಗಾದರೂ ಆಶ್ರಯಿಸಲೇ ಬೇಕು, ವಿಜ್ಞಾನಿ ಪ್ರಯೋಗಶಾಲೆಯನ್ನು ಆಸ್ರಯಿಸುವಂತೆ.

ಪ್ರಾಚೀನಕಾಲದ ಅರಣ್ಯಾಶ್ರಮಗಳ ವಿದ್ಯಾರ್ಥಿಗೆ ಋಷಿಗುರುಗಳ ಸನ್ನಿಧಿಯಲ್ಲಿ  ಯಾವುದು ತನಗೆ ತಾನೆ ಲಭಿಸುತ್ತಿತ್ತೊ ಆ ಸನ್ನಿವೇಶ ಪ್ರಶಾಂತಿ ಈ ಯಂತ್ರ ನಾಗರಿಕತೆಯಲ್ಲಿ ದುರ್ಲಭ. ಆದರೂ ಕಷ್ಟಸಾಧ್ಯ. ಆ ಪುಣ್ಯಾಶ್ರಮಗಳ ವಿದ್ಯಾರ್ಥಿಯೆ, ಆ ಪ್ರಾಚೀನ ಕಾಲದ ನಮ್ಮ ಪುಣ್ಯ ಸ್ನೆಹಿತನೆ ಆಧುನಿಕ ವಿದ್ಯಾರ್ಥಿಗಳಾದ ನಮಗೂ ಆದರ್ಶವಾಗಿದ್ದಾನೆ. ಆತ್ಮಶ್ರೀ ಸಾಧನೆಯ ಪಥದಲ್ಲಿ ನಮಗೆ ಮಾರ್ಗದರ್ಶಿಯಾಗಲೂ ಆತನೆ ಆರ್ಹ.

ಆತನ ವಿದ್ಯಾತಪಸ್ಸು ‘ಸಹನಾವವತು’ ವಿನಿಂದ ಮೊನೆಗೊಂಡು ‘ಓಂ ಶಾಂತಿಃ ಶಾಂತಿಃ ಶಾಂತಿಃ’ ಯಲ್ಲಿ ಕೊನೆಗೊಳ್ಳುತ್ತಿತ್ತು. ಆತನಿಗೆ ಶಾಂತಿಯೆ ಜೀವನದ ಸರ್ವೋಚ್ಚ ಲಕ್ಷ್ಯವಾಗಿತ್ತು. ತನ್ನೊಬ್ಬನ ಶಾಂತಿ ಮಾತ್ರವಲ್ಲ, ವಿಶ್ವ ಜೀವರಾಶಿಗಳೆಲ್ಲರ ಶಾಂತಿಯೂ ಅವನ ಧ್ಯಾನದ ಆಕಾಂಕ್ಷೆ.

ಓಂ ದ್ಯೌಃ ಶಾಂತಿರಂತರಿಕ್ಷಂ ಶಾಂತಿಃ
ಪೃಥಿವೀ ಶಾಂತಿರಾಪಃ ಶಾಂತಿರೋಷಧಯಃ ಶಾಂತಿಃ
ವನಸ್ಪತಯಃ ಶಾಂತಿರ್ವಿಶ್ವೇದೇವಾಃ ಶಾಂತಿರ್ಬ್ರಹ್ಮ ಶಾಂತಿಃ
ಸರ್ವಂ ಶಾಂತಿಃ ಶಾಂತಿರೇವ ಶಾಂತಿಃ

ಸ್ವರ್ಗಜೀವಿಗಳಿಗೆ ಶಾಂತಿ. ಆಕಾಶದ ಆತ್ಮರಿಗೆ ಶಾಂತಿ. ಭೂಮಿಯ, ನೀರಿನ, ಗಿಡಮರಗಳ ಚೇತನಗಳಿಗೆ ಶಾಂತಿ. ಸರ್ವ ದೇವತೆಗಳಿಗೆ ಶಾಂತಿ. ಬ್ರಹ್ಮಕ್ಕೆ ಶಾಂತಿ. ಆ ನಿಜವಾದ ಶಾಂತಿ, ಆ ಎಲ್ಲರ ಶಾಂತಿ ತನ್ನದಾಗಲಿ ಎಂಬುದು ಆತನ ಧ್ಯಾನವಾಗಿತ್ತು. ಧ್ಯಾನದ ಸಮಯದಲ್ಲಿ ಶುದ್ಧಬುದ್ಧಿಯ ಸೊಡರಕುಡಿ ಲೋಕಾಲೋಕ ಚೇತನವನ್ನು ಸೋಂಕಿ ಆ ಚೈತನ್ಯದ ತೇಜಸ್ಸು ತನ್ನನ್ನು ತುಂಬಲಿ ಎಂದು ಹಂಬಲಿಸುತ್ತಿತ್ತು.

ತೇಜೋsಸಿ ತೇಜೋ ಮಯಿ ಧೇಹಿ| ವೀರ್ಯಮಸಿ ವೀರ್ಯಂ ಮಯಿ ಧೇಹಿ||
ಬಲಮಸಿ ಬಲಂ ಮಯಿ ಧೇಹಿ| ಓಜೋsಸಿ ಓಜೋ ಮಯಿ ಧೇಹಿ||
ಮನ್ಯುರಸಿ ಮನ್ಯುಂ ಮಯಿ ಧೇಹಿ| ಸಹೋಢಸಿ ಸಹೋ ಮಯಿ ಧೇಹಿ||

ತೇಜಸ್ಸಿಗೆ ತೇಜಸ್ಸಾದ ನೀನು ನನ್ನನ್ನು ತೇಜಸ್ಸಿನಿಂದ ತುಂಬು.  ಶಕ್ತಿಗೆ ಶಕ್ತಿಯಾದ ನೀನು ನನ್ನನ್ನು ಬಲದಿಂದ ತುಂಬು. ಎಲ್ಲ ಓಜಸ್ಸಿಗೂ ನೀನು ಓಜಸ್ಸು, ನನ್ನಲ್ಲಿ ಓಜಸ್ಸಾಗಿ ಆವಿರ್ಭವಿಸು: ಸರ್ವಸಹನೆಗೂ ಶಾಂತಿ ನೀನು, ಆ ಸಹಾನಾಶಾಂತಿಯಾಗಿ ನನ್ನ ಆತ್ಮದಲ್ಲಿ ಸಂಭವಿಸು.

ಆ ವಿದ್ಯಾರ್ಥಿಯ ತಪಸ್ಸು ಶಾಂತಿಯನ್ನು ಹೇಗೆಕೋರುತ್ತಿತ್ತೊ ಹಾಗೆಯೆ ಸುಖವನ್ನೂ ಕೋರುತ್ತಿತ್ತು. ಸತ್ಯದ ಜೋತೆಗೆ ಸೌಂದರ್ಯವನ್ನೂ ಶಿವದ ಜೊತೆಗೆ ಅನಂದವನ್ನೂ ಬಯಸುತ್ತಿತ್ತು.

ಬ್ರಹ್ಮಮೇತು ಮಾಮ್ ಮಧುಮೆತು ಮಾಮ್ ||
ಬ್ರಹ್ಮಮೇವ ಮಧುಮೇತು ಮಾಮ್ |

ನಮಗೆ ಬ್ರಹ್ಮಸಿದ್ದಿಯಾಗಲಿ; ಮಧುಸಿದ್ಧಿಯೂ ಆಗಲಿ; ಯಾವ ಮಧು ಬ್ರಹ್ಮದಿಂದ ಬೇರೆಯಲ್ಲವೊ ಅದು ಸಿದ್ಧಿಯಾಗಲಿ.

ಬ್ರಹ್ಮ ಮೇಧಯಾ ಮಧು ಮೇಧಯಾ |
ಬ್ರಹ್ಮಮೇವ ಮಧು ಮೇಧಯಾ ||

ಬ್ರಹ್ಮ ಜಿಜ್ಞಾಸೆ, ಮಧುಜಿಜ್ಞಾಸೆ, ಬ್ರಹ್ಮಮೇವ ಮಧುವಿನ ಜಿಜ್ಞಾಸೆ ಇವುಗಳನ್ನು ಚಿಂತಿಸುವಾಗ ಆ ವಿದ್ಯಾರ್ಥಿಯ ಮನಸ್ಸು ಧ್ಯಾನಯಾನದಲ್ಲಿ ತ್ರಿಲೋಕಯಾತ್ರಿಯಾಗಿ ಜಗದ್ವ್ಯಾಪಿಯಾಗುತ್ತಿತ್ತು; ವಿಶ್ವಸಂಚಾರಿಯಾಗುತ್ತಿತ್ತು; ಬ್ರಹ್ಮಚಾರಿಯಾಗುತ್ತಿತ್ತು. ಆತನ  ಆತ್ಮ ನನ್ನ ಭಾವಬಾಹುಗಳನ್ನು ಪ್ರಸರಿಸಿ ಸೃಷ್ಟಿಯ ಪ್ರಕೃತಿ ಸೌಂದರ್ಯಗಳನ್ನೆಲ್ಲ ತನ್ನ ವಿಶಾಲವೃಕ್ಷದಲ್ಲಿ ಆಲಿಂಗಿಸಿ, ಅದರ ರಸಸುಖವನ್ನೆಲ್ಲ ಹೀರಿ ಪುಷ್ಟಿಗೊಳ್ಳುತ್ತಿತ್ತು. ಆತನು ಎಷ್ಟುಸಾರಿ ಆ ದಟ್ಟವಾದ ಕಾಡುಗಳಲ್ಲಿ ಗೋವು ಕಾಯುತ್ತಾ ಅಲೆದಿರಬಹುದು! ಮತ್ತೆಷ್ಟು ತೊರೆಗಳಲ್ಲಿ ಈಜಾಡಿ ಮಿಂದಿರಬಹುದು! ಮತ್ತೆಷ್ಟು ಕೆರೆಗಳಲ್ಲಿ ತಾವರೆ ನೈದಿಲೆಗಳನ್ನು ತಿಳಿದಿರಬುದು! ಎಂತೆಂತಹ ಗಿಡ ಹೂವು ಕೊಯ್ದಿರಬಹುದು! ಯಾವ  ಯಾವ ಜಾತಿಯ ಮರಗಳಲ್ಲಿ ಏನೇನು ಸಾಹಸಮಾಡಿ ಹಣ್ಣು ಉದುರಿಸಿರಬಹುದು! ಎಷ್ಟು ಸೂರ್ಯೋದಯಾಸ್ತಗಳನ್ನು ಮಲೆನೆತ್ತಿಗಳಿಂದ ರಸಾವಿಷ್ಟನಾಗಿ ಈಕ್ಷಿಸಿರಬಹುದು! ಆತನ ಕಾಲಿಗೆ ಹೊಳೆಯ ನುಣ್ಣನೆಯ ಬಿಳಿಮಳಲಿನ ಸ್ಪರ್ಶವೂ ತಾಯಿಯ ಮುತ್ತಿನಂತೆ ಕಣ್ಮುಚ್ಚುವ ಸುಖವನ್ನು ಕೊಡುತ್ತಿತ್ತೆಂದು ತೋರುತ್ತದೆ. ಇಲ್ಲದಿದ್ದರೆ “ಮಧುಮತ್ ಪಾರ್ಥಿವಂ ರಜ:” (ನೆಲದ ಧೂಳು ನಮಗೆ ಮಧುವೀಯಲಿ) ಎಂಬ ಪ್ರಾರ್ಥನೆ ಅಸಾದ್ಯವಾಗುತ್ತಿತ್ತು. ಆತನು ಧ್ಯಾನ ಸಮಯದಲ್ಲಿ ಆ ಎಲ್ಲ ಮಧುರಾನುಭವಗಳನ್ನೂ ರೋಮಂಥಿಸಿ ರಸನಂದಕ್ಕೇರಿ ಬ್ರಹ್ಮಸ್ಪರ್ಶಿಯಾಗಿ ಪ್ರಜ್ವಲಿಸುತ್ತಿದ್ದನೆಂದು ತೋರುತ್ತದೆ. ಹಾಗಿದೆ ಆತನು ಘೋಷಿಸುತ್ತಿದ್ದ ಆ ಮಂತ್ರಧ್ವನಿ:

ಮಧು ವಾತಾ ಋತಾಯತೇ| ಮಧು ಕ್ಷರನ್ತಿ ಸಿಂಧವಃ||
ಮಾಧ್ವೀರ್ನಃ ಸನ್ತ್ವೋಷಧೀಃ||
ಮಧು ನಕ್ತಮುತೋಷಸೋ| ಮಧುಮತ್ ಪಾರ್ಥಿವಂ ರಜಃ|
ಮಧು ದ್ಯೌರಸ್ತು ನಃ ಪಿತಾ ||
ಮಧುಮಾನ್ನೋ ವನಸ್ಪತಿಃ| ಮಧುಮಾನಸ್ತು ಸೂರ್ಯಃ|
ಮಾಧ್ವೀರ್ಗಾವೋ ಭವಂತು ನಃ||

ಅಲೆವ ಗಾಳಿಯೆಮಗೆ ಮಧುವೀಯಲಿ, ಹರಿವ ಹೊಳೆಗಳೆಮಗೆ ಮಧುವೀಯಲಿ,
ಬಳ್ಳಿಗಿಡಗಳೆಮಗೆ ಮಧುವೀಯಲಿ.
ಬೆಳಗು ಬೈಗುಗಳೆಮಗೆ ಮಧುವೀಯಲಿ, ಪೊಡವಿ ಪುಡಿ ನಮಗೆ
ಮಧುವೀಯಲಿ, ತಿಳಿಯ ಬಾನೆಮಗೆ ಮಧುವೀಯಲಿ.
ಪಿರಿಯ ಮರಗಳೆಮಗೆ ಮಧುವೀಯಲಿ, ಪೊಳೆವ ನೇಸರೆಮಗೆ ಮಧುವೀಯಲಿ,
ವೃಂದಗೋವುಗಳೆಮಗೆ ಮಧುವೀಯಲಿ.

ಮಹದ್ಭಾವಗಳನ್ನೂ ಮಹದಾಲೋಚನೆಗಳನ್ನೂ ಮಹದನುಭವಗಳನ್ನಾಗಿ ಪರಿವರ್ತಿಸಿ ಆತ್ಮಶ್ರೀಯನ್ನು ಪ್ರೋಜ್ವಲವಾಗಿ ಮಾಡುವ ಸಾಧನ ವಿಧಾನವೆ ಧ್ಯಾನ. ಹೇರಾನೆಯ ಹಿಂಡು ನುಗ್ಗಿ ತೊತ್ತಳದುಳಿದರೆ ಕಾಡಿನ ಹಳು ಬಟ್ಟಬಯಾಲಾಗಿ, ಮರಗತ್ತಲೆ ಅಳಿದು, ಬೆಳಕಿಗೆಡೆಗೊಡುವಂತೆ ಮಹಾದ್ಭಾವಗಳೂ ಮಹಾದಾಲೋಚನೆಗಳೂ ಚಿತ್ತದಲ್ಲಿ ಸದಾ ಸಂಚರಿಸುವಂತೆ ಮಾಡಿದರೆ ಕೀಳುಬಗೆ ತನಗೆ ತಾನಾಗಿ ಹಿಂಗಿ ಆತ್ಮಕ್ಕೆ ಕಾಂತಿ ಅವತರಿಸುತ್ತದೆ. ಸಾಹಿತ್ಯ ಪ್ರಪಂಚದಲ್ಲಿ, ಮಹಾಕವಿಗಳ ಅನುಭವ ಸಾರಸರ್ವಸ್ವವಾದ ಅವರ ಕೃತಿಗಳಲ್ಲಿ ಮಹದ್ಭಾವಗಳೂ ಮಹದಾಲೋಚನೆಗಳೂ ನಮಗೆ ಯಥೇಚ್ಛವಾಗಿ ದೊರೆಯುತ್ತವೆ. ಆದರೆ ಅವು ಬೆನ್ನ ಮೇಲಣ ಹೇರಿನಂತಾಗದೆ ಮೈಯೊಳಗಣ ನೆತ್ತ ರಂತಾಗಿ ನಮಗೆ ಆಯಾಸಕರ ಮಾತ್ರವಾಗದೆ ಶಕ್ತಿದಾಯಕವಾಗಬೇಕಾದರೆ, ನಮ್ಮ  ಆತ್ಮದ ಪುಷ್ಟಿಗೆ ಅಮೃತಾಹಾರವಾಗಬೇಕಾದರೆ, ರೋಮಂಥನ ಕ್ರಿಯಾಸ್ವರೂಪದವಾದ ಧ್ಯಾನ ಅತ್ಯಂತ ಆವಶ್ಯಕ. ಮಹದ್ಭಾವಗಳಿಲ್ಲದಿದ್ದರೆ, ಮಹದಾಲೋಚನೆಗಳಿಲ್ಲದಿದ್ದರೆ ನಮ್ಮ ಧ್ಯಾನ ಕಬ್ಬು ಕೊಡದೆ ಗಾಣ ತಿರುಗಿಸಿದಂತೆ ವ್ಯರ್ಥವಾಗುತ್ತದೆ; ಮೇವು ಮೇಯದೆ ಮೆಲುಕುಹಾಕುವಂತೆ ನಿಷ್ಫಲವಾಗುತ್ತದೆ. ಧ್ಯಾನವಿಲ್ಲದೆ ಆತ್ಮಶ್ರೀಯ ಆವಿರ್ಭಾವವಿಲ್ಲ. ಆತ್ಮಶ್ರೀಯಿಲ್ಲದ ಇತರ ಶ್ರೀಗಳು ಅಶಾಶ್ವತ, ಅಶಾಂತಿಕರ; ಬಹುಬೇಗನೆ ಅರ್ಥಹೀನಾವಾಗಿ ನೀರಸವಾಗುತ್ತವೆ.

ತಪಸ್ವಿ ಪರಮೇಶ್ವರನನ್ನು ತಪಸ್ಸಿಲ್ಲದ ತನ್ನ ― ಸೌಂದರ್ಯದಿಂದ ಗೆಲ್ಲುವ ಪ್ರಯತ್ನದಲ್ಲಿ ಭಗ್ಮಮನೋರಥಳಾದ ಗಿರಿರಾಜನಂದನೆ ಪಾರ್ವತಿಯ ಮನಸ್ಸನ್ನು ‘ಕುಮಾರ ಸಂಭವದ’ ಕವಿ “ನಿನಿಂದ ರೂಪಂ ಹೃದಯೇನ ಪಾರ್ವತೀ” ಎಂದು ವರ್ಣಿಸಿದ್ದಾನೆ. ಯಾವ ದೇಹಶ್ರೀಯನ್ನು ತಾನು ಹೆಮ್ಮೆಯಿಂದ ಪೋಷಿಸಿದ್ದಳೊ, ಅಭಿಮಾನದಿಂದ ಅಲಂಕರಿಸಿದ್ದಳೊ, ಯಾವ ದೇಹಶ್ರೀಯಲ್ಲಿ ತನಗೆ ಅಗಾಧವಾದ ಶ್ರದ್ಧೆಯಿದ್ದಿತೊ ಆ ತನ್ನ ರೂಪರಾಶಿಯನ್ನು ದೇವಿ ಹೃತ್ಪೂರ್ವಕವಾಗಿ ಹಳಿದುಕೊಳ್ಳುತ್ತಾಳೆ. ಆತ್ಮಶ್ರೀಯನ್ನು ಸಾಧಿಸಲಾರದ ದೇಹಶ್ರೀ, ಅದು ಎಷ್ಟೇ ಮೋಹಕವಾಗಿದ್ದರೂ, ತನ್ನನ್ನು ತಾನೆ ನಿಂದಿಸಿಕೊಳ್ಳಬೇಕಾಗುತ್ತದೆ. ಅದು ಕೊನೆಗೆ ತನಗೆ ತಾನೆ ಜುಗುಪ್ಸಾರ್ಹವಾಗುತ್ತದೆ. ಆತ್ಮಶ್ರೀ ಇದ್ದರೆ ಇತರ ಶ್ರೀಗಳೆಲ್ಲ ಇಮ್ಮಡಿ  ಮುಮ್ಮಡಿಯಾಗಿ ವರ್ಧಿಸಿ ಶೋಭಿಸುತ್ತವೆ. ಅದಿಲ್ಲದಿದ್ದರೆ ಬಹುಬೇಗನೆ ನೀರಸವೂ ನಿಂದಾರ್ಹವೂ ಆಗುತ್ತವೆ. ಅಷ್ಟೇ ಅಲ್ಲ, ಲೋಕ ಸಂಕಟಕರವೂ ಪ್ರಾಣವಿಪತ್ಕಾರವೂ ಅಗುತ್ತವೆ ಎಂಬುದಕ್ಕೆ ರಣೋನ್ಮಾದಗ್ರಸ್ತವಾದ ಇಂದಿನ ಪ್ರಪಂಚ ಸ್ಥಿತಿಯೆ ಸಾಕ್ಷಿ.

ಯಾವ ಶ್ರೀ ಇತರ ಎಲ್ಲ ಶ್ರೀಗಳಿಗೂ ಆತ್ಮಪ್ರಾಯವೋ ಆದರ ಅನುಸಂಧಾನವನ್ನು ವಿದ್ಯಾರ್ಥಿ ಅಲಕ್ಷಿಸಲಾಗದು ಯೋಗಕ್ಷೇಮ ಕಾತರನಾದ ಯಾವನೂ ಅದನ್ನು ತಿರಸ್ಕರಿಸುವುದಿಲ್ಲ. ಆತ್ಮಶ್ರೀ ಸಾಧಕನಿಗೆ ಇತರ ಶ್ರೀಗಳು ಮೊದಮೊದಲು ಕೈಸೇರದಿದ್ದರೂ ಆತನು ಹತಾಶನಾಗುವುದಿಲ್ಲ. ಆತ್ಮಶ್ರೀಗಾಗಿ ಇತರ ಶ್ರೀಗಳನ್ನು ತ್ಯಾಗಮಾಡಲು ಸಿದ್ಧನಾಗುತ್ತಾನೆ, ತನ್ನ ಅತುಲ ಸೌಂದರ್ಯವನ್ನೂ ತೃಣೀಕರಿಸಿ ‘ಅಸಹ್ಯಹೂಂಕಾರ ನಿವರ್ತಿತ’ ನಾದ ಪಿನಾಕಿಯನ್ನು ಒಲಿಸಲೋಸುಗ ಶೈಲರಾಜಕುಮಾರಿ ದೇಹಶ್ರೀಯನ್ನು ವಿಸರ್ಜಿಸಿ ತಾನೂ ತಪಸ್ವಿನಿಯಾದಂತೆ.

ಆತ್ಮಶ್ರೀಯನ್ನು ಇಲ್ಲಗಳೆಯುವ ಅಥವಾ ಅಲ್ಲಗಳೆಯುವ ಜಡಮತಿಗಳಾಗಲಿ ಅಥವಾ ನಮ್ಮ ಸ್ವಂತ ಸಂಶಯಬುದ್ಧಿಯಾಗಲಿ ನಮ್ಮೆದುರು ನಿಂತು, ಆತ್ಮ ಶ್ರೀಯನ್ನೇ ತಮ್ಮ ಜೀವನದ ಏಕಮಾತ್ರ ಧ್ಯೇಯವನ್ನಾಗಿ ಮಾಡಿಕೊಂಡವರ ಕಡೆಗೆ ಕೈತೋರಿಸಿ, ವಟುವೇಷಧಾರಿಯಾದ ಮಹೇಶ್ವರನು ತಪಸ್ಸು ಮಾಡುತ್ತಿದ್ದ ಪಾರ್ವತಿಯ ಬಳಿಗೆ ಬಂದು ಅವಳನ್ನು ಪರೀಕ್ಷಿಸಲೆಂದು ಹೇಳಿದಂತೆ “ನೀನು ಯಾರಿಗಾಗಿ ತಪಸ್ಸು ಮಾಡುತ್ತಿದ್ದೀಯೋ ಅವನು ಬರಿ ಬೀಕಾರಿ. ‘ದಿಗಂಬರತ್ವೇನ ನಿವೇದಿತಂ ವಸು!’ ಬತ್ತಲೆಯಿಂದಲೆ ಬಹಿರಂಗ ವಾಗಿದೆ ಅವನ ಸಂಪತ್ತು” ಎಂದು ಮೊದಲಾಗಿ ಪ್ರತಿಕೂಲ ವಾದ ಹೂಡಬಹುದು, ಆಗ ನಾವೂ ದೇವಿ ಕೋಟ್ಟ ಉತ್ತರವನ್ನೆ ಕೊಡಬಾಕಾಗುತ್ತದೆ:

ಅಲೋಕ ಸಾಮಾನ್ಯಮಚಿಂತ್ಯ ಹೇತುಕಂ
ದ್ವಿಷಂತಿ ಮಂದಾಶ್ಚರಿತಂ ಮಹಾತ್ಮನಾಮ್ |

ಮಹಾತ್ಮರ ನಡೆವಳಿ ಲೋಕಸಾಮಾನ್ಯವಾದುದಲ್ಲ. ಅದು ಈ ರೀತಿಯಲ್ಲಿಯೆ ವ್ಯಕ್ತವಾಗುತ್ತದೆ ಎಂದು ಊಹಿಸುವುದಕ್ಕೂ ಸಾಧ್ಯವಲ್ಲ. ತಮ್ಮ ಸಂಪ್ರದಾಯದ ಪ್ರಕಾರ ಅದು ವ್ಯಕ್ತವಾಗದಿದ್ದ ಮಾತ್ರಕ್ಕೆ ಮಂದಮತಿಗಳು ಅವರನ್ನು ದೂರುತ್ತಾರೆ.
ಆತ್ಮಶ್ರೀ ಇತರ ಶ್ರೀಗಳಂತಲ್ಲ. ಅದು ಇತರ ಶ್ರೀಗಳಲ್ಲಿ ಒಂದು ಮಾತ್ರವಲ್ಲ. ಅದು ಎಲ್ಲ ಶ್ರೀಗಳ ಶ್ರೀ. ಇತರೆ ಶ್ರೀಭೂಮಿಕೆಗಳಲ್ಲಿ ವ್ಯಕ್ತವಾಗಿ ಅವುಗಳ ಉಚ್ರ್ಛಾಯವನ್ನು ಸಾಧಿಸಬಲ್ಲುದಾದರೂ ಅದು ಎಲ್ಲ ಭೂಮಿಕೆಗಳನ್ನೂ ಒಳಕೊಂಡು ಎಲ್ಲವನ್ನೂ ಮೀರಿರುವ ಸಾರ್ವಭೌಮಿಕಶ್ರೀ.

ಆತ್ಮಶ್ರೀ ಸಹಿತವಾದರೆ ಎಲ್ಲ ಶ್ರೀಗಳೂ ಶೋಭಿಸುತ್ತವೆ. ಶ್ರೀ ಮಾತ್ರವಲ್ಲ, ಅಶ್ರೀಯೂ ಪೂಜ್ಯವಾಗುತ್ತದೆ. ವಟುವೇಶಿ ಮಹೇಶ್ವರನಿಗೆ ಗೌರಿಯ ಸಖಿ ಶೈಲಾಧಿರಾಜತನಯೆಯ ತಪಸ್ಸಿನ ಉದ್ದೇಶವನ್ನು ತಿಳಿದಾಗ ಅವನು ‘ಅವ್ಯಂಜಿತ ಹರ್ಷ ಲಕ್ಷಣ’ ನಾಗಿ ಶಿವನ ವಿರೂಪವನ್ನು ದಾರಿದ್ರ್ಯವನ್ನೂ ಅಸಹ್ಯ ಸ್ಥಿತಿಯನ್ನೂ ವರ್ಣಿಸಿ ಆಕೆಯ ಮನಸ್ಸನ್ನು ವಿಮುಖ ಮಾಡಲು ಯತ್ನಿಸುತ್ತಾನೆ. “ಅವಸ್ತುವಿನಲ್ಲಿ ಅನುರಕ್ತೆಯಾಗಿದ್ದೀಯೆ. ಹಾವು ಸುತ್ತಿಕೊಂಡಿರುವ ಅವನನ್ನು ನೀನು ಕೈಹಿಡಿಯುವುದಾದರೂ ಹೇಗೆ? ನಿನ್ನದು ― ವಧುದುಕೂಲಂ ಕಲಹಂಸ ಲಕ್ಷಣಂ; ಅವನದೋ ― ಗಜಾಜಿನಂ ಶೋಣಿತ ಬಿಂದುವರ್ಷಿ. ನಿನ್ನ ಬಿಳಿಯ ರೇಸಿಮೆಯ ಸೀರೆ ಅವನುಟ್ಟಿರುವ  ಆನೆಯ ತೊಗಲಿನಿಂದ ಬಸಿಯುವ ಬಿಸುನೆತ್ತರಿಗೆ ತೊಯ್ದು ಹೋಗುವುದಿಲ್ಲವೆ? ನಿನ್ನದು ― ಅಲಕ್ತಕಾಂಕಾನಿ ಪದಾನಿ ಪಾದಯೋಃ; ಅವನದು ― ವಿಕೀರ್ಣಕೇಶಾಸು ಪರೇತ ಭೂಮಿಷು.  ಅಲಕ್ತರಸಲೇಪನದಿಂದ ಅರುಣ ಮನೋಹರವಾದ ಪಾದಗಳುಳ್ಳವಳು  ನೀನು; ಪ್ರೇತಭೂಮಿಯ ಶವಭಸ್ಮದಿಂದ ಕೇಶಸಂಸ್ಕಾರ ಮಾಡಿಕೊಂಡಿರುವವನು ಅವನು  ಪಟ್ಟದಾನೆಯನ್ನೇರಿ ಮೆರವಣಿಗೆ ಹೋಗಬೇಕಾದ ನೀನು ಅವನೊಡನೆ ಮುದಿಬಸವನನ್ನೇರಿ ಹೋಗುವುದನ್ನು ಕಂಡು ‘ಮಹಾಜನಃ ಸ್ಮೇರಮುಖೋ ಭವಿಷ್ಯತಿ’ ― ಮಂದಿ ಬಾಯ್ಗೆ ಕೈಮುಚ್ಚಿಕೊಂಡು ನಗುತ್ತಾರೆ. ನೀನೆಲ್ಲಿ? ಅವನೆಲ್ಲಿ? ‘ನಿವರ್ತಯಾಸ್ಮಾದಸ ದೀಪ್ಸಿತಾನ್ಮನಃ’ ― ‘ಬಯಸಬಾರದ್ದನ್ನು ಬಯಸುತ್ತಿದ್ದೀಯೆ’ ಅವಸ್ತುವಿನಿಂದ, ಅಸತ್ತಿನಿಂದ, ಮನಸ್ಸನ್ನು  ಹಿಂತಿರುಗಿಸು”.

ಆತ್ಮಶ್ರೀಸಾಧಕರನ್ನು ಅವರ ಪ್ರಯತ್ನದಿಂದ ಪರಾಙ್ಮಖರನ್ನಾಗಿ ಮಾಡುವುದಕ್ಕೆ ಸ್ಮೇರಮುಖಿಗಳಾದ ಮಹಾಜನರು ನಾನಾ ಪ್ರತಿಕೂಲ ವಾದಗಳನ್ನು ತಂದೊಡ್ದಬಹುದು. “ಅಸತ್ಯ ಕಂಠಾರ್ಪಿತ ಬಾಹುಬಂಧನಾ” ಎಂದು ಗಿರಿಜೆಯ ಸ್ಥಿಯನ್ನು ವರ್ಣಿಸಿದಂತೆ  “ಇಲ್ಲದ ಕನಸಿಗೆ ಕೈಯೊಡ್ಡಬೇಡಿ” ಎಂದು ಬೋಧಿಸಬಹುದು. ಒಂದು ವೇಳೆ ಅದು ಇದ್ದರೂ ನಮಗೆ ನಿಲುಕದ್ದಕ್ಕೆ ನಿಕ್ಕುಳಿಸಿ ಪ್ರಯೋಜನವೇನು? ಎಂದು ಕೇಳಬಹುದು. ಅಂಥವರಿಗೆ ದೇವಿ “ಮನೋರಥಾನಾಮಗತಿರ್ನವಿದ್ಯತೇ” ಎಂದು ಉಪದೇಶಿಸುತ್ತಾಳೆ. ಮನುಷ್ಯನ ಆತ್ಮಪಿಪಾಸೆಗೆ ಅಮೇಯವೆಂಬುದಿಲ್ಲ.

ಆತ್ಮಶ್ರೀ ಅರಮನೆಯಲ್ಲಿ ಸಿಂಹಾಸನವೇರಿ ಶ್ರೀರಾಮನಾಗಿರಬಹುದು. ಅಥವಾ ಅರಣ್ಯದಲ್ಲಿ ಮೃಗಾಜಿನವೇರಿ ಅಗಸ್ತ್ಯನಾಗಿರಬಹುದು. ಸಿಂಹಾಸನ ಮೃಗಾಜಿನಗಳೆರಡೂ ಅದಕ್ಕೆ ಒಂದೆ. ಆದರ ಯೋಗ್ಯತೆಯನ್ನು ಸಿಂಹಾಸನದಿಂದಾಗಲಿ ಮೃಗಾಜಿನದಿಂದಾಗಲಿ ನಿರ್ಣಯಿಸಲಾಗುವುದಿಲ್ಲ:

ವಿಭೂಷಣೋದ್ಭಾಸಿ ಪಿನದ್ಧಬೊಗಿ ವಾ
ಗಜಾಜಿನಾಲಂಬಿ ದುಕೂಲಧಾರಿ ವಾ|
ಕಪಾಲಿ ವಾ ಸ್ಯಾದಥವೇನ್ದು ಶೇಖರಂ
ನ ವಿಶ್ವಮೂರ್ತೇರವಧಾರ್ಯತೇ ವಪುಃ||

ಆತಶ್ರೀ ಯಾವ ರೀತಿಯಿಂದಲೂ ಅಭಿವ್ಯಕ್ತವಾಗಬಹುದು. ಅದು ಹೀಗೆ ಆಗಬೇಕು; ಹೀಗಾದರೆ ಆತ್ಮಶ್ರೀ, ಇಲ್ಲದಿದ್ದರೆ ಅಲ್ಲ ಎನ್ನುವುದು ತಪ್ಪು. ಅದು ಕಿರೀಟಧಾರಿಯಾದರೆ ಹೇಗೆ ಗೌರವಾಸ್ಪದವೊ ಹಾಗೆಯೆ ಜಟಾಧಾರಿಯಾಗಿ ಹೆಣಬೂದಿ ಬಳಿದುಕೊಂಡರೂ ಜಗದ್ವಂದ್ಯವಾಗುತ್ತದೆ:

ತದಂಗ ಸಂಸರ್ಗಮವಾಪ್ಯ ಕಲ್ಪತೇ
ಧ್ರುವಂ ಚಿತಾ ಭಸ್ಮರಜೋ ವಿಶುದ್ಧಯೇ|
ತಥಾ ಹಿ ನೃತ್ಯಾಭಿನಯಕ್ರಿಯಾ ಚ್ಯುತಂ
ವಿಲಿಪ್ಯತೇ ಮೌಲಿಭಿರಂಬರೌಕಸಾಂ||
ಅಸಂಪದಸ್ತಸ್ಯ ವೃಷೇಣ ಗಚ್ಛತಃ
ಪ್ರಭಿನ್ನ ದಿಗ್ವಾರಣ ವಾಹನೋ ವೃಷಾ|
ಕರೋತಿ ಪಾದಾವುಪಗಮ್ಯ ಮೌಲಿನಾ
ವಿನಿದ್ರ ಮಂದಾರ ರಜೋರುಣಾಂಗುಲೀ||

ವಿಶ್ವಮೂರ್ತಿಯ ಅಂಗಸರ್ಗ ತಮಗೆ ಅಪ್ರಾಪ್ಯ ಎಂದು ದೇವತೆಗಳೂ ಕೂಡ ಶಿವನು ತಾಂಡವವಾಡುವಾಗ ಉದುರಿ ಬೀಳುವ ಜಟಾಭಸ್ಮವನ್ನು ತಲೆಗಿಟ್ಟುಕೊಂಡು ಕೃತಕೃತರಾಗುತ್ತಾರೆ. ಅಮರ ಸಂಪತ್ತಿಗೆ ಒಡೆಯನಾದ ದೇವೇಂದ್ರನೂ ಬಡ ಬಸವನನ್ನೇರಿದಾತನ ಪದತಲಕ್ಕೆ, ಐರಾವತದಿಂದ ಇಳಿದು, ನಮಸ್ಕರಿಸಿ, ಅದನ್ನು ನಂದನವನದ ಮಂದಾರದ ಹೂಧೂಳಿಯಿಂದ ಕೆಂಪಾಗಿ ಮಾಡುತ್ತಾನೆ. ಆತ್ಮಶ್ರೀಗೆ ಮೀರಿದ ಶ್ರೀ ಇನ್ನಿಲ್ಲ. ರಾಜ ಮಹಾರಾಜರುಗಳೂ ಚಕ್ರವರ್ತಿಗಳೂ ಅದಕ್ಕೆ ತಲೆಬಾಗುತ್ತಾರೆ. ಪರಿಜ್ಞಾನವೂ ಸಾಧನೇಚ್ಛೆಯೂ ತಿಲಮಾತ್ರವೂ ಇಲ್ಲದೆ ಸುಮ್ಮನೆ ವಾದಕ್ಕಾಗಿವಾದಿಸುವ ಪ್ರತಿವಾದಿಗಳ ವಿಚಾರದಲ್ಲಿ ಸಾಧಕನಾದವನು ಹೇಗೆ ವರ್ತಿಸಬೇಕೆಂದು ಕಾಳಿದಾಸನ ಗೌರಿದೇವಿಯೆ ತೋರಿಸಿಕೊಟ್ಟಿದ್ದಾಳೆ:

ನಿವಾರ್ಯತಾಮಾಲಿ ಕಿಮಪ್ಯಯಂ ವಟುಃ
ಪುನರ್ವವಕ್ಷುಃ ಸ್ಫುರಿತೋತ್ತರಾಧರಃ|
ನ ಕೇವಲಂ ಯೋ ಮಹತೋsಪಭಾಷತೇ
ಶ್ರುಣೋತಿ ತಸ್ಮಾದಪಿ ಯಃ ಸ ಪಾಪಬಾಕ್||

“ಸಖೀ, ತೊಲಗಿಸಿಲ್ಲಿಂದೀ ವಟುವನೆಂತಾದೊಡಂ, ಮತ್ತೇನನೋ ನುಡಿಯಲೆಂದಿರ್ಪಿ ನಡುಗು ತುಟಿಯನಂ. ಪಿರಿದಾದುದರ ನಿಂದೆ ಕಿರಿದಲ್ತು; ದುರಿತಭಾಗಿಗಳಪ್ಪರದಕೆ ಕಿವಿಗೊಟ್ತೊಡಂ”.

ಭರತನೇಕೆ ಅಯೋಧ್ಯೆಗೆ ವಿಮುಖನಾದನೆಂದು ಈಗ ನಮಗೆ ಅರ್ಥವಾಗುತ್ತದೆ. ಶ್ರೀರಾಮರೂಪಿ ಆತ್ಮಶ್ರೀ ಅಲ್ಲಿರಲಿಲ್ಲ.

ಜನಮನೋಮಂದಿರದ ಸುಸ್ವಪ್ನ ಗೋಪುರದ
ಕಲಶಂ ನಭಶ್ಚುಂಬಿಯಾಗದಿರೆ, ಋಷಿಹೃದಯ
ಮಂಗಳಾರತಿ ಬಾಳಿನಂಧತೆಯನಳಿಸದಿರೆ,
ಕವಿಕೃತಿಯ ವರ್ಣಗಾನಂ ಮಹನ್ ನಿತ್ಯತಾ
ಸ್ವರ್ಣಸುಂದರ ಇಂದ್ರಿಯಾತೀತ ನಂದನದಿ
ನವರಸಾಪ್ಸರಿಯರಂ ನರ್ತನಂಗೈಸದಿರೆ,
ಏನಿರ್ದುಮೇನ್ ಅನಾಗರಿಕತಾ ಶ್ರೀ?

ವಿದ್ಯಾರ್ಥಿಗಳಿಗೇಕೆ ಆತ್ಮಶ್ರೀ? ಎಂಬ ಪ್ರಶ್ನೆಗೆ ಉತ್ತರ: ಆತ್ಮಶ್ರೀ ಇಲ್ಲದ ವಿದ್ಯೆ ಶ್ರೀರಾಮನಿಲ್ಲದ ಅಯೋಧ್ಯೆ!