ಈ ನಾಲ್ಕು ವಿಚಾರೋಪನ್ಯಾಸಗಳೂ ಸುಮಾರು ಇಪ್ಪತ್ತೈದು ಮುವತ್ತು ವರ್ಷಗಳ ಹಿಂದೆ ಸ್ವಾತಂತ್ರ್ಯ ಪೂರ್ವದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನೂ ಮತ್ತು ಯುವಜನರನ್ನೂ ನಿರ್ದೇಶಿಸಿ ಮಾಡಿದವಾಗಿವೆ. ತರುಣರಲ್ಲಿ ವೈಜ್ಞಾನಿಕ ದೃಷ್ಟಿ ಮತ್ತು ವಿಚಾರ ಬುದ್ಧಿಗಳನ್ನು ಪ್ರಚೋದಿಸುವುದೇ ಅವುಗಳ ಮುಖ್ಯೋದ್ದೇಶವಾಗಿತ್ತು. ಮತೀಯ ಮತ್ತು ಸಾಮಾಜಿಕ ಅಂಧಶ್ರದ್ಧೆ ಮತ್ತು ಅಂಧಾಚಾರಗಳಿಂದ ನಾವು ಪಾರಾಗದಿದ್ದರೆ ನಮಗೆ ಉದ್ದಾರವಿಲ್ಲ ಎಂಬ ನಂಬುಗೆಯ ಹಿನ್ನಲೆಯಲ್ಲಿ ಅವು ಮೂಡಿವೆ.

ಆಗ ಭಾರತ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಯ ನೇತೃತ್ವದಲ್ಲಿ ಸತ್ಯಾಗ್ರಹ ರೂಪದ ಸಂಗ್ರಾಮ ಸಮಗ್ರ ಭರತಖಂಡ ವ್ಯಾಪಿಯಾಗಿ ನಡೆಯುತ್ತಿದ್ದ ಕಾಲ. ಬದುಕು ಕುದಿಯುತ್ತಿದ್ದ ಕಾಲ. ದಿನದಿನವೂ ಪತ್ರಿಕೆಗಳು ತ್ಯಾಗದ, ಸಂಕಟದ, ದುಃಖದ, ವೀರದ, ಆವೇಶದ, ಜಯದ, ಶಿಕ್ಷೆಯ, ಪ್ರತೀಕಾರದ ನಾನಾ ರೀತಿಯ ಉದ್ವೇಗದ ವಾರ್ತೆಗಳನ್ನು ಹೊತ್ತು ತರುತ್ತಿದ್ದ ಕಾಲ. ನಮ್ಮ ಸಾಮಾಜಿಕ ಮತ್ತು ಮತೀಯವಾದ ದೋಷ ದೌರ್ಬಲ್ಯಗಳನ್ನು ಆರ್ಶಯಿಸಿ, ನಮ್ಮ್ಮ ನಮ್ಮೊಳಗೇ ಒಡಕು ಬಿರುಕುಗಳನ್ನು ಹುಟ್ಟಿಸಿ, ನಮ್ಮನ್ನು ಸೆದೆಬಡಿದು, ಬ್ರಿಟಿಷರ ರಾಜತಂತ್ರ ನಿಪುಣತೆ ಅಟ್ಟಹಾಸದಿಂದ ವಿಜೃಂಭಿಸುತ್ತಿದ್ದ ಕಾಲ. ತರುಣರೂ ಯುವಜನರೂ ದೇಶವನ್ನು ಮುಕ್ತಗೊಳಿಸಲೆಂದು ಆದರ್ಶಾಗ್ನಿಯಿಂದ ದೀಪ್ತರಾಗಿ ಸರ್ವ ತ್ಯಾಗಕ್ಕೂ ಸಿದ್ಧರಾಗಿ ಮುನ್ನುಗ್ಗುತ್ತಿದ್ದ ಕಾಲ. ತಮ್ಮ ಪ್ರಾಚೀನ ಮತ್ತು ಆರ್ಷೇಯ ಮತಧರ್ಮಗಳ ಮತ್ತುಸಾಮಾಜಿಕ ಕಟ್ಟು ಕಟ್ಟಳೆಗಳ ಹೀನ ಬುದ್ಧಿಯನ್ನೂ ನಿಷ್ಠುರತೆಯನ್ನೂ ಕಿತ್ತೊಗೆದು ಸಮಗ್ರ ಭಾರತದ ರಾಜಕೀಯ ಐಕಮತ್ಯವನ್ನೂ ಭಾವೈಕ್ಯತೆಯನ್ನೂ ಸಾಧಿಸಲೆಂದು  ಹೃದಯವನ್ನೂ ಮನಸ್ಸನ್ನೂ ಸುವಿಶಾಲಗೊಳಿಸುತ್ತಿದ್ದ ಕಾಲ. ಶ್ರೀರಾಮಕೃಷ್ಣ ― ವಿವೇಕಾನಂದರು, ರವೀಂದ್ರರು, ಗಾಂಧೀಜಿ, ಶ್ರೀ ಅರವಿಂದರಾದಿಯಾಗಿ ಆಧಾತ್ಮ ಜೀವಿಗಳ, ದೇಶಭಕ್ತರ ಮತ್ತು ಕವಿಗಳ ಮಹಾವಾಣಿ ಕೋಟ್ಯನುಕೋಟಿ ಕರ್ಣಗಳಲ್ಲಿ ಅನುದಿನವೂ ಅನುರಣಿಸುತ್ತಿದ್ದ ಕಾಲ, ಉದಾರವೂ, ವಿಶಾಲವೂ ಆದ ಒಂದು ಧ್ಯೇಯೋತ್ಸಾಹ ತಾರುಣ್ಯದ ಧಮನಿಗಳಲ್ಲಿ ಸ್ವರ್ಣೋಜ್ವಲವಾಗಿ ಮಿಂಚಿ ಪ್ರವಹಿಸುತ್ತಿದ್ದ ಸಾಹಸೋಲ್ಲಾಸದ ಕಾಲ.

ಆಗ ನಾವು ರಾಜಕೀಯ ಕಾರಣಗಳಿಗಾಗಿ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರನ್ನು ಹೊರಗಟ್ಟಲು ಪ್ರಯತ್ನಿಸುತ್ತಿದ್ದರೂ ಇಂಗ್ಲಿಷ್ ಭಾಷೆ, ಸಾಹಿತ್ಯ, ಸಂಸ್ಕ್ರತಿ ಮತ್ತು ಇಂಗ್ಲಿಷಿನ ಮುಖಾಂತರವಾಗಿಯೇ ನಮಗೆ ಕರಗತವಾಗುತ್ತಿದ್ದ ಯಂತ್ರವಿದ್ಯೆ ಮತ್ತು ವಿಜ್ಞಾನ ಇವುಗಳನ್ನು ಗೌರವಿಸುತ್ತಿದ್ದುದು ಮಾತ್ರವಲ್ಲದೆ ಅವುಗಳ ಪ್ರಯೋಜನವನ್ನೂ ಪರಮಾಧಿಕವಾಗಿ ಪಡೆಯಲು ದುಡಿಯುತ್ತಿದ್ದೆವು. ಅದಕ್ಕಿಂತಲೂ ಮುಖ್ಯವಾಗಿ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೆಯ ಶತಮಾನಗಳ ಆದಿಭಾಗದಲ್ಲಿ ಕ್ರೈಸ್ತಮತ ಪ್ರಚುರವಾಗಿದ್ದ ಐರೋಪ್ಯ ನಾಗರೀಕತೆಯಲ್ಲಿ ಪರಿವರ್ತನೆಗೊಳಿಸಿದ ‘ವಿಚಾರದ’ ಮತ್ತು ‘ವೈಜ್ಞಾನಿಕ ದೃಷ್ಟಿ’ ಇವುಗಳಿಂದ ಅಂಧಶ್ರದ್ಧೆ, ಮತ್ತು ಅನುದಾರತ್ವ, ಸಂಕುಚಿತ ಮನೋಭಾವ ಮತ್ತು ಸ್ವಾರ್ಥತೆ, ಜಾತೀಯತಾ ದ್ವೇಷ ಇತ್ಯಾದಿ ರೋಗಗಳಿಂದ ಪೀಡಿತವಾಗಿ ಕಲುಷಿತವಾಗಿದ್ದ ನಮ್ಮ ಮತೀಯ ಮನೋಮಂಡಲವನ್ನು ನಿರ್ಮಲಗೊಳಿಸುವ ಒಂದು ಮಹದಾಶೆ ಭಾರತೀಯ ಯುವಜನರ ಹೃದಯದಲ್ಲಿ ಬೆಳಗುತ್ತಿತ್ತು. ‘ವಿಚಾರವಾದ’ ಮತ್ತು ‘ವೈಜ್ಞಾನಿಕ ದೃಷ್ಟಿ’ಯ ಅನುಯಾಯಿಗಳಾಗುವ ಹಂಬಲವಿದ್ದ ಬರ್ಟ್ರಂಡ್ ರಡೆಲ್ ಮತ್ತು ಆಲ್ಡಸ್ ಹಕ್ಷಿಯಂತಹರಿಂದ ಪ್ರಾತಿನಿಧ್ಯ ಪಡೆದ ಲೇಖಕರ ಗುಂಪು ಆದರ್ಶ ಪ್ರಾಯವಾದುದಾಗಿತ್ತು. ಜೊತೆಗೆ ಹಿಂದೂ ಧರ್ಮದಲ್ಲಿ ಬಹು ಪೂರ್ವಕಾಲದಿಂದಲೂ ಅಂಗೀಭೂತವಾಗಿದ್ದ ವರ್ಣಾಶ್ರಮ, ಜಾತಿಪದ್ಧತಿ, ಅಸ್ಪೃಷ್ಯತೆ ಮೊದಲಾದ ಸಮಾಜಿಕ ಅನ್ಯಾಯಗಳನ್ನು ಭಾರತೀಯ ಮುಂದಾಳುಗಳೇ ತೀವ್ರವಾಗಿ ಖಂಡಿಸಿ, ಕ್ರಾಂತಿ ನವತರುಣರ ಮಾನಸ ದಿಗಂತದಲ್ಲಿ ವಿಚಾರ ಕಾಂತಿಯ ಅರುಣೋದಯವಾಗುವಂತೆ ಮಾಡಿದ್ದರು. ಪರಿಸ್ಥಿತಿ ಹೇಗಿತ್ತು ಎಂದರೆ ನಮ್ಮ ದೇಶ ನಮ್ಮದಾಗುವುದೆ ತಡ, ಎಲ್ಲ ಶುದ್ಧೀಕರಣವೂ ಸಿದ್ಧಿಸುವುದೆಂದು ನಂಬಿದ್ದೆವು. ಬಾರತಕ್ಕೆ ಸ್ವಾತಂತ್ರ್ಯ ಬಂದ ಮರುದಿನವೆ ವಿಚಾರವಾದ ಮತ್ತು ವೈಜ್ಞಾನಿಕ ದೃಷ್ಟಿಯ ನವವಿಧಾನವು ಸಂಪೂರ್ಣವಾಗಿ ಸರ್ವತೋಮುಖವಾಗಿ ಪ್ರಯೋಗವಾಗತೊಡಗುವುದೆಂದೂ, ಭಾರತವು ತನ್ನೆಲ್ಲ ಆರ್ಥಿಕ ರಾಜಕೀಯ ಸಮಾಜಿಕ ಮತೀಯ ದೋಷ ದೌರ್ಬಲ್ಯಗಳಿಂದ ಬಹುಬೇಗನೆ ಪಾರಾಗುವುದೆಂದೂ ಅನೇಕರ ದೃಢ ನಂಬುಗೆಯಾಗಿತ್ತು.

ಆದರೆ?

ಪ್ರಗತಿ, ಉದ್ಧಾರ, ಧ್ಯೇಯ ಸಿದ್ಧಿ ನಾವು ಕಲ್ಪಿಸಿದಂತೆ ವಾಸ್ತವವಾಗುವುದೂ ಇಲ್ಲ; ನಾವು ಸಂಕಲ್ಪಸಿದ ರೀತಿಯಲ್ಲಿ ಕೈಗೂಡುವುದೂ ಇಲ್ಲ. ಪ್ರಪಂಚದ ಮಾನಸ ಶಕ್ತಿ ಸಮೂಹಗಳ ಸಂಘರ್ಷಣೆಯ ಫಲರೂಪವಾಗಿ ಅನಿರೀಕ್ಷಿತಗಳು ಬಂದೊದಗುತ್ತವೆ; ಅನಿವಾರ್ಯಗಳು ಅಡ್ಡಗಟ್ಟುತ್ತವೆ. ನಮ್ಮ ಪಯಣದ ದಾರಿ ಮಾತ್ರವಲ್ಲದೆ ದಿಕ್ಕೂ ಬದಲಾಯಿಸುವ ಸಂಭವವೂ ಉಂಟು.

ಸ್ವಾತಂತ್ರೋದಯದ ಹೊಸ್ತಿಲಲ್ಲಿಯೆ, ಆ ಉದಯಕ್ಕೆ ಮುಖ್ಯ ಕಾರಣವಾದ ಮಹಾ ಜ್ಯೋತಿ ನಮ್ಮ ಮಧ್ಯೆ ಇನ್ನೂ ಪ್ರಜ್ವಲಿಸುತ್ತಿದ್ದಾಗಲೆ ಮತಾಂಧತೆಯ ಶೋಣಿತ ಹಸ್ತ ಭಾರತವನ್ನು ರುಧಿರ ಪ್ಲಾವಿತವನ್ನಾಗಿ ಮಾಡಿತು. ವಿವೇಕ ಮತ್ತು ವಿಚಾರದ ಹನನ ಯಜ್ಞವೆ ನಡೆಯಲು ಮೊದಲಾದಾಗ ‘ವಿಚಾರವಾದ’ ಮತ್ತು ‘ವೈಜ್ಞಾನಿಕ ದೃಷ್ಟಿ’ಗಳನ್ನು ಕೇಳುವವರು ಯಾರು?

ಅಂತೂ ಕೊನೆಗೆ ಮಹಾತ್ಮನ ರಕ್ತಗಂಗಾ ವಾರಿಯಿಂದ ಅವಿವೇಕದ ಆ ಯಜ್ಞಾಗ್ನಿ ನಂದಿ, ಭಾರತಿಗೆ ಶಾಂತಿಯ ಅವಭೃತ ಸ್ನಾನವಾಯಿತು. ಆದರೆ ಮತಾಂಧತೆ, ಮತಭ್ರಾಂತಿ, ಮತದ್ವೇಷ ಮತ್ತು ಮತಸ್ವಾರ್ಥತೆ ಇವು ‘ವಿಚಾರವಾದ’ ಮತ್ತು ‘ವೈಜ್ಞಾನಿಕ ದೃಷ್ಟಿ’ಗಳಿಗೆ ಕೊಟ್ಟ ಪೆಟ್ಟಿನಿಂದ ಅವಕ್ಕೆ ಸೊಂಟ ಮುರಿದಂತಾಗಿ ತೆವಳಿಕೊಂಡು ಮುನ್ನಡೆಯುವಂತಾಗಿದೆ. ಮೇರುದಂಡ ನೆಟ್ಟಗಾಗಿ ಅವು ಎಂದು ಎದ್ದು ನಿಂತು ನಡೆಯತೊಡಗುತ್ತವೆಯೋ ದೇವರೇ ಬಲ್ಲ.

ಸ್ವಾತಂತ್ರೋತ್ತರ ಭಾರತ ತನ್ನನ್ನು ತಾನು ‘ಲೌಕಿಕ ಕ್ಷೇಮರಾಜ್ಯ’ ಎಂದು ಘೋಷಿಸಿಕೊಂಡಿತು. ರಾಜ್ಯಾಂಗದಲ್ಲಿ ಸರ್ವಮತಗಳೂ ಸಮಾನವಾಗಿ ಮಾನ್ಯವಾಗಿ ಮತಧರ್ಮದಲ್ಲಿ ಸಮನ್ಯಯ ದೃಷ್ಟಿಗೆ ಕಾನೂನಿನ ಸ್ಥಾನ ಸಿಕ್ಕಿತು. ವರ್ಣ ಮತ ಜಾತಿ ಭೇದಗಳಿಲ್ಲದೆ ಸರ್ವರೂ ಸಮಾನರು ಎಂದು ಘೋಷಿಸಿ, ಸರ್ವರ ಏಳಿಗೆಗೂ ಸಾಧನವಾಗುವ ಸರ್ವೋದಯ ತತ್ವಕ್ಕೆ ಒಂದು ಅಧಿಕಾರ ಮುದ್ರೆ ಬಿದ್ದಂತಾಯ್ತು. ಪಾಂಚವಾರ್ಷಿಕ ಯೋಜನೆಗಳು ಆರ್ಥಿಕ ಮತ್ತು ಪರಮಾರ್ಥಿಕವಾದ ಅಭ್ಯುದಯ ಶ್ರೇಯಸ್ಸುಗಳನ್ನು ಸಾಧಿಸುವ ವ್ಯೂಹ ರಚನೆ ಮಾಡಿ ತಕ್ಕಮಟ್ಟಿಗೆ ಯಶಸ್ವಿಯಾಗಿ ಮುಂಬರುತ್ತಿವೆ.

ಆಧುನಿಕವಾದ ಈ ಪ್ರಗತಿ ಸಾಧನೆಗೆ ವಿಜ್ಞಾನದ ಸಹಾಯವನ್ನು ನಾವು ಒಂದಿನಿತೂ ಹಿಂಜರಿಯದೆ ಸ್ವೀಕರಿಸಿದ್ದೇವೆ. ಇನ್ನೂ ಹೆಚ್ಚು ಹೆಚ್ಚು ಸ್ವೀಕರಿಸುತ್ತಲೂ ಇದ್ದೇವೆ. ಏಕೆಂದರೆ ಕಾರ್ಯ ಭೂಮಿಕೆಯಲ್ಲಿ ಬರಿಯ ಭಾವ ಭ್ರಾಂತಿಯ ಬೆಡಗಿನ ವೈಖರಿ ನಡೆಯುವುದಿಲ್ಲ. ಹಳೆಯ ನಂಬುಗೆಗಳ ಬೇಳೆ ಅಲ್ಲಿ ಬೇಯುವುದಿಲ್ಲ. ಭಾವ ಭ್ರಾಂತಿಗೆ ವಶರಾಗಿ ವಿಜ್ಞಾನ ದೃಷ್ಟಿಗೆ ವಿರುದ್ಧವಾದುದನ್ನು ಏನಾದರೂ ಮಾಡಿದೆವೋ ಒಡನೆಯೆ ದುಷ್ಫಲ ನಮ್ಮನ್ನು ಬಡಿದೆಚ್ಚೆರಿಸುತ್ತದೆ. ಏಕೆಂದರೆ ಯಂತ್ರ ಸರಿಯಾಗಿ ನಡೆಯುವುದು ಅಥವಾ ನಡೆಯದಿರುವುದು ರಾಹುಕಾಲ ಗುಲಿಕಾಲದಿಂದಲ್ಲವಷ್ಟೆ? ವಿದ್ಯುದಾಗರದ ಕೆಲಸ ಸುಸೂತ್ರವಾಗಿ ಜರುಗದಿದ್ದರೆ ಅಷ್ಟಗ್ರಹಯಾಗವನ್ನಾಗಲೀ ಚಂಡೀಯಾಗವನ್ನಾಗಲೀ ವಿಜೃಂಭಣೆಯಿಂದ ಜರುಗಿಸುವ ಮೂರ್ಖತೆ ಅದನ್ನು ಸರಿಪಡಿಸುವುದಿಲ್ಲವಷ್ಟೆ?

ಆದರೂ ನಮ್ಮಲ್ಲಿ ಸಂಸ್ಕೃತಿ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುರುಡು ನೆವದಲ್ಲಿ, ಅವಿವೇಕ ಮೌಢ್ಯಗಳಿಗೆ ವೈಜ್ಞಾನಿಕತೆಯ ಮತ್ತು ವಿಚಾರದ ಚಿನ್ನದ ಮುಲಾಮು ಹಚ್ಚಿ ಜನರನ್ನು ದಿಕ್ಕು ತಪ್ಪಿಸಿ, ವಂಚಿಸುವ ಮಹೋದ್ಯೋಗ ನಿರ್ಲಜ್ಚೆಯಿಂದ ಸಾಗುತ್ತಿರುವುದನ್ನು ದಿನದಿನವೂ ನೋಡುತ್ತಿದ್ದೇವೆ. ಅಂತಹ ಆತ್ಮವಂಚನ ಮತ್ತು ಪರವಂಚನಕರವಾದ ಉದ್ಯೋಗಪ್ರಸಿದ್ಧರೂ ಪ್ರತಿಷ್ಠಿತರೂ ಆದ ಸ್ವಾರ್ಥಸಾಧಕ ವ್ಯಕ್ತಿಗಳಿಂದಲೆ ಪರಿಪೋಷಿತವಾಗುತ್ತಿರುವುದನ್ನು ನೋಡಿದರೆ ಈ ದೇಶದಲ್ಲಿ ವಿಜ್ಞಾನದ ಯಂತ್ರವಿದ್ಯೆಯಿಂದ ಪಂಚವಾರ್ಷಿಕ ಯೋಜನೆಗಳು ಮುಂದುವರಿದರೂ ವೈಜ್ಞಾನಿಕ ದೃಷ್ಟಿಯಾಗಲಿ ವಿಚಾರವಾದವಾಗಲಿ ವಿಜಯ ಪಡೆಯುವ ಕಾಲ ಹತ್ತಿರದಲ್ಲಿ ಎಲ್ಲಿಯೂ ಗೋಚರವಾಗುತ್ತಿಲ್ಲ.

ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಗಳನ್ನು ಬೋಧಿಸಿ, ಪ್ರಚೋದಿಸಿ ಸಾಧಿಸುವ ಕಾರ್ಯ ಯಾವ ಸಂಸ್ಥೆಗಳಿಗೆ ಮೀಸಲಾಗಬೇಕೋ ಆ ಸಂಸ್ಥೆಗಳಲ್ಲಿಯೆ ಅದು ಅವಮಾನಿತವಾಗುತ್ತಿರವುದು ಅತ್ಯಂತ ನಿರಾಶಾಜನಕವಾಗಿದೆ. ವಿಜ್ಞಾನದ ಪಾಠ ಹೇಳಿಕೊಡುವ ಅಧ್ಯಾಪಕನೆ ತನ್ನ ಸ್ವಂತ ಬದುಕಿನಲ್ಲಿ ರಾಹುಕಾಲ ಪಂಚಾಂಗ ವಾರಭವಿಷ್ಯ ಇತ್ಯಾದಿ ಮೂಢ ನಂಬಿಕೆಗಳಿಂದ ಮೂರುಹೊತ್ತೂ ಮತ ಮೂರ್ಖನಾಗಿದ್ದರೆ ವಿದ್ಯಾರ್ಥಿಗಳಿಗೆ ಹೇಗೆತಾನೆ ಸಿದ್ಧಿಸೀತು ವಿಚಾರದೃಷ್ಟಿ, ನಮ್ಮ ರಾಜಕೀಯವಲಯದಲ್ಲಿಯೋ ಭವಿಷ್ಯನಿರ್ಣಯ ಮಾಡುವ ಜ್ಯೋತಿಷಿಗಳಿಗೆ ಪರಮಾಧಿಕಾರ ಲಭಿಸಿದಂತಾಗಿದೆ. ಅಧಿಕಾರಿ ತನ್ನ ಮೇಲ್ಮೆಯನ್ನು ಸಾಧಿಸಲು ಸೇವಾನಿಷ್ಠೆಯನ್ನು ಅನುಸರಿಸುವ ಕ್ಷೇಷಕ್ಕೆ ಹೋಗುವುದಿಲ್ಲ; ಜ್ಯೋತಿಷಿಯನ್ನೋ ಮಾತ್ರಿಕನನ್ನೋ ಆಶ್ರಯಿಸುತ್ತಾನೆ. ಮಂತ್ರಿ ತನ್ನ ರಾಜಕೀಯ ಭದ್ರತೆಯನ್ನು ಪ್ರಜಾಸತ್ತೆಯ ಋಜುನಿಯಮಗಳಿಂದ ಸ್ಥಾಪಿಸಿಕೊಳ್ಳುವ ‘ಅಭದ್ರ ವಿಜ್ಞಾನ’ಕ್ಕೆ ಬಿಟ್ಟುಕೊಡದೆ ಜ್ಯೋತಿಷಿಯ ‘ಸುಭದ್ರ ಅಜ್ಞಾನ’ಕ್ಕೇ ಶರಣು ಹೋಗುತ್ತಾನೆ.

ಮಂತ್ರಿತ್ವ ವಹಿಸಿಕೊಳ್ಳುವ ಕಾಲನಿರ್ಣಯ ಮಾಡುವವನು ಜ್ಯೋತಿಷಿ. ಕೊನೆಗೆ ವಿಮಾನ ಏರುವ ಮಹೂರ್ತ ಇಟ್ಟುಕೊಡುವವನೂ ಜ್ಯೋತಿಷಿ; ಕೊನೆಗೆ ವಿಮಾನ ಹಾರುವ ಸಮಯ ಗೊತ್ತು ಮಾಡುವುದೂ ಇವನ ಕೈಲಿರದಿದ್ದರೆ, ಜೋಯಿಸನ ‘ನಿಮಿತ್ತ’ಕ್ಕೆ ಶರಣಾಗಿ, ತನ್ನ ನಿವಾಸದಿಂದಾದರೂ ಆ ಸುಮುಹೂರ್ತಕ್ಕೆ ಹೊರಡದಿದ್ದರೆ ಆತನ ಮನಸ್ಸಿಗೆ ನೆಮ್ಮದೆ ಇಲ್ಲ; ತನ್ನ ಅವಿವೇಕದಿಂದ ಏನಾದರೂ ಕೆಟ್ಟುದಾದರೆ, ಸರಿ, ಹೊರಟ ಗಳಿಗೆಯ ಮೇಲೆ ಹೊರೆ ಹೇರುತ್ತಾರೆ. ಅಧ್ಯಾಪಕ, ಅಧಿಕಾರಿ, ಮಂತ್ರಿ, ವ್ಯಾಪಾರಿ, ಪಠಾಧಿಪತಿ, ಶ್ರಮಜೀವಿ, ಕೂಲಿ, ಕೊನೆಗೆ ಕಳ್ಳ―ಎಲ್ಲರಲ್ಲಿಯೂ ಎಲ್ಲೆಲ್ಲಿಯೂ ಇಂತಹ ಅವೈಜ್ಞಾನಿಕತೆ ಮತ್ತು ಅವಿಚಾರತೆ ವ್ಯಾಪಿಸಿ ವರ್ಧಿಸುತ್ತಿರುವುದನ್ನು ಸಂಕಟದಿಂದ ನೋಡುತ್ತಿರಬೇಕಾಗಿದೆ.

ಆದರೆ ಆತ್ಮಶ್ರೀಗಾಗಿ ನಿರಂಕುಶಮತಿಯಾಗುವ ಧೀರ ವಿದ್ಯಾರ್ಥಿ ಹತಾಶನಾಗುವುದಿಲ್ಲ. ವಿಜ್ಞಾನ ಮತ್ತು ಅಧ್ಯಾತ್ಮ ― (ಮತವನ್ನಲ್ಲ, ಮೌಢ್ಯವನ್ನಲ್ಲ, ಅಂಧಶ್ರದ್ಧೆಯನ್ನಲ್ಲ ಅಂಧಾಚಾರವನ್ನಲ್ಲ) ― ವಿಜ್ಞಾನ ಮತ್ತು ಅಧ್ಯಾತ್ಮ ಇವೆರಡನ್ನೂ ಕೆಚ್ಚಿನಿಂದ, ನಿಷ್ಠೆಯಿಂದ ದೃಶಬುದ್ಧಿಯಿಂದ ಆಶ್ರಯಿಸಿ, ವಿಚಾರಧಿಯಾಗಿ ವೈಜ್ಞಾನಿಕ ದೃಷ್ಟಿಸಂಪನ್ನನಾಗಿ ಮುಂಬರಿದು ತನಗೂ ಲೋಕಕ್ಕೂ ಕಲ್ಯಾಣವಾಗುವಂತೆ ಬಾಳುತ್ತಾನೆ. ದಾರಿಯ ಮುಳ್ಳನ್ನೆಲ್ಲ ತೆಗೆಯಲಾಗದಿದ್ದರೂ ತನ್ನ ಕಾಲಿಗಾದರೂ ಮೆಟ್ಟು ಹಾಕಿಕೊಂಡು ಮುನ್ನಡೆದು ಗುರಿಗೆ ಸೇರುತ್ತಾನೆ.

ಕುವೆಂಪು
ಮೈಸೂರು
೫.೫.೧೯೬೩