ಯುವಕರಲ್ಲಿಯೂ ಮಹನೀಯರಲ್ಲಿಯೂ ವಿಜ್ಞಾಪನೆ,

ನಾನಿಂದು ಈ ಗೌರವ ಸ್ಥಾನದಲ್ಲಿ ನಿಂತಿರುವುದ ತಮ್ಮೆಲ್ಲರ ವಿಶ್ವಾಸದಿಂದಲೆ ಹೊರತು ನನ್ನ ಅರ್ಹತೆಯಿಂದಲ್ಲ. ಏಕೆಂದರೆ, ನನ್ನ ಜೀವನದಲ್ಲಿ ನಾನು ಕೈಕೊಂಡಿರುವ ವೃತ್ತಿಯ ವಲಯ ಅಷ್ಟೇನೂ ಹೆಚ್ಚು ವಿಸ್ತಾರವಾದುದಲ್ಲ; ಅದರಲ್ಲಿ ಲಭಿಸುವ ಅನುಭವಗಳೂ ಹೇಳಿಕೊಳ್ಳುವಷ್ಟು ಬಹುಮುಖವಾಗಿಲ್ಲ. ಸಾಹಿತ್ಯದ ವಿಚಾರವಾಗಿದ್ದರೆ, ಕವಿಗಳ ಮತ್ತು ಅವರ ಗ್ರಂಥಗಳ ವಿಚರವಾಗಿದ್ದರೆ, ಹೇಳಿಕೇಳಿದ ಎರಡು ಸಂಗತಿಗಳನ್ನು ಕುರುಡು ಕುರುಡಾಗಿ ಹೇಳಿ, ನಿಮ್ಮೆಲ್ಲರ ಪ್ರೀತಿ ದಾನಮಾಡುವ ಪ್ರಶಂಸೆಯಿಂದ ಸಮಾಧಾನ ಪಡೆಯಬಹುದಾಗಿತ್ತು. ಆದರೆ ನಾನಿಂದು ಶ್ರಮಜೀವಿಗಳೂ ನೇಗಿಲ ಯೋಗಿಗಳೂ ಆಗಿ, ಸಂಸಾರದ ನೂರು ಕೋಟಲೆಗಳನ್ನು ಸಹಿಸಿಕೊಂಡು, ಜೀವನಪರ್ವತವನ್ನು ಏದುತ್ತ ಏರುವ ಕಷ್ಟ ಜೀವಿಗಳಾಗಿರುವ ನಿಮ್ಮಗಳ ಮುಂದೆ ನಿಂತು ಉಪನ್ಯಾಸ ಮಾಡುವ ಸಾಹಸಕ್ಕೆ ಕೈಹಾಕಿದ್ದೇನೆ. ಇದು ಜೀವನದ ನಾನಾ ಮಾರ್ಗಗಳಲ್ಲಿ ನಡೆದು ಕಷ್ಟಸುಖಗಳನ್ನು ಅನುಭವಿಸಿ ಪರಿಪಕ್ವವಾಗಿರುವ ಅನುಭವಶಾಲಿಗಳಿಂದಲೆ ಹೊರತು ನನ್ನಂತಹ ಕೇವಲ ಬಿಸಿರಕ್ತದ ಭಾವಜೀವಿಯಾದ ಯುವಕನಿಂದ ಸಾಧ್ಯವಲ್ಲ. ಆದರೆ “ಯುವಕರ ಸಂಘ” ಎಂಬ ಹೆಸರನ್ನೂ, ನಿಮ್ಮೆಲ್ಲರ ವಿಶ್ವಾಸವನ್ನೂ ಆಶ್ರಯಿಸಿ, ನನಗೆ ಸೂಕ್ತವೆಮದು ತೋರಿಬರುವ ನಾಲ್ಕು ಮಾತುಗಳನ್ನು ಹೇಳಿಬಿಡುತ್ತೇನೆ. ಅವುಗಳೆಲ್ಲವೂ ಸೂಚನೆಗಳೆ ಹೊರತು ಅಪ್ಪಣೆಗಳೂ ಅಲ್ಲ, ಉಪದೇಶಗಳೂ ಅಲ್ಲ. ಚೆನ್ನಾಗಿ ವಿಮರ್ಶೆ ಮಾಡಿ ನಿಮಗೆ ತೋರಿದಂತೆ ಆಚರಿಸಬೇಕೆಂದು ಪ್ರಾರ್ಥನೆ.

ಮಲೆನಾಡೆಂದರೆ ಕರ್ಣಾಟಕದ ಕಾಶ್ಮೀರ; ಪ್ರಕೃತಿಯ ಪರ್ಣಶಾಲೆ; ಅರಣ್ಯರಮಣಿಯ ವಿಲಾಸಕ್ಷೇತ್ರ. ದಿಗಂತದ ಮಹಾಸ್ವಪ್ನಗಳಂತೆ ಧೀರವಾಗಿ ಹಬ್ಬಿರುವ ಪರ್ವತ ಶ್ರೇಣಿಗಳು; ಆ ಪರ್ವತಗಳನ್ನು ಸರ್ವದಾ ಆಲಿಂಗಿಸಿರುವ ಚಿರಶ್ಯಾಮಲ ಕಾನನರಾಜಿ; ನಿಬಿಡ ನಿರಂತರ ತರುಚ್ಛಾಯಮಯವಾದ ಗಿರಿ ಶಿಖರಗಳಲ್ಲಿ ಆವಿರ್ಭವಿಸಿ ಅರೆಬಂಡೆಗಳ ವಕ್ರಪಥಗಳಲ್ಲಿ ಎಡೆಬಿಡದೆ ಪ್ರವಹಿಸುವ ಹೊಳೆತೊರೆಗಳು; ಗಿರಿಕಂದರಗಳಲ್ಲಿ ಕಂಗೊಳಿಸುವ ಅಡಕೆ ತೋಟಗಳು, ಬತ್ತದ ಗದ್ದೆಗಳು; ಗಿಳಿ, ಕಾಮಳ್ಳಿ, ಕಾಜಾಣ, ಪಿಕಳಾರ, ತೇನೆ, ಚೋರೆ, ಕೋಗಿಲೆ ಮೊದಲಾದ ಅಸಂಖ್ಯ ಜಾತಿಯ ಪಕ್ಷಿಗಳ ಕಲಗಾನ; ವಿಧವಿಧ ಜಾತಿಯ ಕಾಡಿನ ಮತ್ತು ನಾಡಿನ ಜಂತುಗಳು; ಪ್ರೇಮಲ ಸ್ವಭಾವದವರೂ ಶಾಂತಜೀವಿಗಳೂ ಉದಾರಿಗಳೂ ಆಗಿರುವ ಸರಳ ಹೃದಯದ ಒಕ್ಕಲು ಮಕ್ಕಳು; ಇವೆಲ್ಲದರ ಸಾನ್ನಿಧ್ಯದಿಂದ ಮಲೆನಾಡು ಅತ್ಯಂತ ರಮಣೀಯವೂ ಕಮನೀಯವೂ ಆಗಿದೆ.

ಹೀಗೆ ಕಾವ್ಯವಾಣಿಯಿಂದ ಮಲೆನಾಡನ್ನು ವರ್ಣಿಸಿ ವರ್ಣಿಸಿ ನಾನು ಮನಬಂದಂತೆ ಬಣ್ಣದ ಕನಸುಗಳನ್ನು ಕಟ್ಟುತ್ತಾ ಹೋಗಬಹುದು. ಆದರೆ ಇಂದು ನಾನು ಹೇಳಬೇಕೆಂದಿರುವ ವಿಷಯ ಬೇರೆಯದು. ಮಲೆನಾಡಿನ ಸೌಂದರ್ಯದ, ಮಾಧುರ್ಯದ, ಔದಾರ್ಯದ ವರ್ಣನೆಯನ್ನು ನಾವಾಗಲೆ ಕವನಗಳಲ್ಲಿ ಮಾಡಿದ್ದೇನೆ; ಮುಂದಯೂ ಮಾಡುವವನಿದ್ದೇನೆ. ಪ್ರಕೃತದಲ್ಲಿ ಜೀವನದ ಶುಕ್ಲಪಕ್ಷವೊಂದನ್ನೇ ನೊಡುತ್ತ ಹಾಡುತ್ತ ಹೊದರೆ ಸಾಲದು ಎಂದು ಭಾವಿಸಿ, ಅದರ ಕೃಷ್ಣಪಕ್ಷವನ್ನೂ ಗಮನಕ್ಕೆ ತಂದುಕೊಂಡು, ಅದರಿಂದುಂಟಾಗುವ ಪಾಪ ದುಃಖಗಳನ್ನು ಆದಷ್ಟು ಮಟ್ಟಿಗಾದರೂ ಕಡಿಮೆ ಮಾಡಲು ಯತ್ನಶೀಲರಾಗುವುದು ನಮ್ಮ ಕರ್ತವ್ಯ.

ಮಲೆನಾಡು ಮನೋಹರವಾಗಿದೆ: ಆದರೆ ಮಲೇರಿಯ ಪ್ರಾಣಹಾರಿಯಾಗಿದೆ! ಮಲೆನಾಡಿನಲ್ಲಿ ಮನುಷ್ಯರ ಹೊರತು ಉಳಿದುವೆಲ್ಲವೂ ಮಹತ್ತು ಬೃಹತ್ತುಗಳ ಪ್ರತಿನಿಧಿಗಳೆಂದು ನನಗೆ ಅನೇಕ ಸಾರಿ ತೊರಿಬಂದಿದೆ. ಹಾಗೆ ತೊರಿ ಬಂದಾಗಲೆಲ್ಲಾ ನಾನು ಮರುಗಿದ್ದೇನೆ. ನಾವು ಆರೋಗ್ಯಕ್ಕೆ ಹೆಚ್ಚು ಗಮನ ಕೊಡುತ್ತಿಲ್ಲ. ಆರೋಗ್ಯಭಾಗ್ಯ ನಮಗೆ ಬೇಡವಾಗಿದೆ ಎಂದು ನನ್ನ ಆಭಿಪ್ರಾಯವಲ್ಲ. ಎರಡನೆಯ ಸ್ವರ್ಗ ಎಂದೆನ್ನಬಹುದಾದ ಆರೋಗ್ಯ ಯಾರಿಗೆ ತಾನೆ ಬೇಡ! ಆದರೆ ಮೂರ್ಖತೆಯೂ ಅಜ್ಞಾನವೂ ಹಲಕೆಲವು ಗೊಡ್ಡು ಆಚಾರ ಮತ್ತು ಕುರುಡುನಂಬುಗೆಗಳೂ ನಮಗೂ ನಮ್ಮ ಆರೋಗ್ಯಕ್ಕೂ ಅಡ್ಡಬಂದುಬಿಟ್ಟಿವೆ. ಧರ್ಮ, ದೇವರು ಮತ್ತು ದೆವ್ವದ ಪೂಜೆ ಇವುಗಲ ಹೆಸರಿನಲ್ಲಿ ನಾವು ಅನಾಹುತಗಳನ್ನು ಮಾಡುತ್ತಿದ್ದೇವೆ. ಇವೆಲ್ಲದರ ಕೂಲಂಕಷವಾದ ವಿಮರ್ಶೆಯನ್ನು ಅನಂತರ ಮಾಡುವವನಿದ್ದೇನೆ. ಇಲ್ಲಿ ಸಂಕ್ಷೇಪವಾಗಿ ಒಂದೆರಡು ವಿಷಯಗಳನ್ನು ತಿಳಿಸಿ ಮುಂದುವರೆಯುತ್ತೇನೆ. ನಾನು ಹೇಳಲಿರುವ ವಿಷಯಗಳು ನಿಮಗೇನೂ ಹೊಸದಲ್ಲ. ಸ್ವಲ್ಪ ಆಲೋಚನೆಮಾಡಿದರೆ ಅವುಗಳನ್ನೆಲ್ಲ ನನಗಿಂತಲೂ ನೀವೇ ವಿಶದವಾಗಿ ತಿಳಿಸಿಬಿಡಲು ಸಮರ್ಥರಾಗಿದ್ದೀರಿ. ಏಕೆಂದರೆ ನಿಮ್ಮ ಅನುಭವದಲ್ಲಿ ಸಾವಿರಾರು ಉದಾಹರಣೆಗಳು ಸಿಕ್ಕುತ್ತವೆ. ರೋಗ ಬಂದರೆ ಅದನ್ನು ಪರಿಹರಿಸಿಕೊಳ್ಳಲು ಔಷಧಿ ತೆಗೆದುಕೊಳ್ಳುವುದು ವೈಜ್ಞಾನಿಕ ವಿಧಾನ. ಅದನ್ನು ಬಿಟ್ಟು ನಾವು ಭೂತಗಳಿಗೂ ಪಿಶಾಚಿಗಳಿಗೂ ಮೊರೆಯಿಡಲು ಹೊಗುತ್ತೇವೆ. ಕೋಳಿ ಕುರಿಗಳನ್ನು ಬಲಿ ಕೊಟ್ಟು ಲಂಚದಿಂದ ಅವುಗಳ ಮನಸ್ಸನ್ನು ಶಮನಮಾಡಲು ಪ್ರಯತ್ನಿಸುತ್ತೇವೆ. ಭೌತಿಕ ಕಾರಣಗಳಿಂದ ಬಂದ ರೋಗ ದೈವಿಕ ಉಪಾಯಗಳಿಂದ ಇಳಿಮುಖವಾಗದೆ ಮತ್ತೂ ಹೆಚ್ಚಾದರೆ ಭಟ್ಟರು ಜೋಯಿಸರು ಇವರಲ್ಲಿಗೆ ಹೋಗಿ ನಿಮಿತ್ತ ಕೇಳಿಸುತ್ತೇವೆ. ಅವರು ಕೊಟ್ಟ ಚೀಟಿ ವಿಭೂತಿ ಮುಂತಾದವುಗಳನ್ನು ತಂದು ರೋಗಿಗೆ ಕಟ್ಟಿದ ಮೇಲೆ ರೋಗ ವಿಷಮಾವಸ್ಥೆಗೇರಿದರೆ ಆಗ ಆಸ್ಪತ್ರೆಗೆ ಹೋಗಿ ರೋಗಿಗೆ ಮುಂದೆ ಒದಗುವ ಅಪಾಯವನ್ನು ಡಾಕ್ಟರುಗಳ ಮೇಲೆ ಹೊರಿಸಿ, ಔಷಧಗಳಿಂದ ಏನೂ ಪ್ರಯೋಜನ ವಿಲ್ಲವೆಂದು ಸಾರುತ್ತೇವೆ. ಇದರಿಂದ ಧನ ಪ್ರಾಣ ಎರಡೂ ನಷ್ಟ. ಮಹನೀಯರೇ, ಇದನ್ನು ಚೆನ್ನಾಗಿ ವಿಚಾರಿಸಿ ನೋಡಿದರೆ, ನಾನು ಇಲ್ಲಿ ಸೂಚಿಸುವುದಕ್ಕಿಂತಲೂ ವಿಷಯ ಸಾವಿರ ಪಾಲು ಭಯಾನಕವಾಗಿರುತ್ತದೆಂದು ನಿಮಗೆ ಮನದಟ್ಟಾಗದೆ ಇರಲಾರದು. ಈ ಮೌಢ್ಯ ಪಿಶಾಚಿಗೆ ಎಷ್ಟು ಮಂದಿ ಸಹೋದರಿಯರನ್ನು ಬಲಿಕೊಡುತ್ತಿದ್ದೇವೆ ಎಂಬುದನ್ನು ಯೋಚಿಸಿದರೆ ಮೈ ನಡುಗದಿರುವುದಿಲ್ಲ!

ಆರೊಗ್ಯವುಳ್ಳವನು ಸದಾ ಸುಖಿ. ಅವನಿಗೆ ಬಾಳಿನಲ್ಲಿ ಬೇಸರವಿಲ್ಲ. ಎಷ್ಟು ಧನವಿದ್ದರೇನು? ಎಷ್ಟು ಗದ್ದೆ ತೊಡಗಳಿದ್ದರೇನು? ಆರೋಗ್ಯವಿಲ್ಲದಿದ್ದರೆ ಅವೆಲ್ಲವೂ ನೀರಿನಲ್ಲಿ ಮಾಡಿದ ಹೋಮ. ನಾವು ಆರೋಗ್ಯವಾಗಿದ್ದಾಗ ಕೃಪಣತೆಯಿಂದ ಸ್ವಲ್ಪ ವೆಚ್ಚಮಾಡಲು ಹಿಂಜರಿದರೆ, ಪುಷ್ಟಿಕರವೂ ಆರೋಗ್ಯಕಾರಿಯೂ ಆದ ಪದಾರ್ಥ ಗಳನ್ನುಳಿದು ಅಶುಚಿ ಜೀವನವನ್ನು ಬಾಳಿದರೆ, ರೋಗಬಂದಾಗ ನೂರಾರು ರೂಪಾಯಿಗಳನ್ನು ಖರ್ಚುಮಾಡಿದರೂ ಸಫಲವಾಗದೆ ಇರಬಹುದು. ಅಂತಹ ಘಟನೆಗಳನ್ನು ನಾನೆ ಕಣ್ಣಾರ ಕಂಡಿದ್ದೇನೆ. ನೀವೂ ಕಂಡಿರಲೇಬೇಕು. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡಿಯಲ್ಲಿ ಈಶ್ವರನು ಪ್ರಕಾಶವಾಗನು; ದೆವ್ವ ದೇವರುಗಳಿಗೆ ಕಟ್ಟುವ ಕಾಣಿಕೆಯ ಹಣವನ್ನು ಎಣ್ಣೆ, ಸೀಗೆ, ಸಾಬೂನುಗಳಿಗೆ ಉಪಯೋಗಿಸಿದರೆ ಆತನು ನಮ್ಮನ್ನು ಇನ್ನೂ ಹೆಚ್ಚಾಗಿ ಒಲಿಯುತ್ತಾನೆ; ಏಕೆಂದರೆ, ಆತನಿಗೆ ಬೇಕಾದುದು ನಮ್ಮ ಹೃದಯದ ಸರಳ ಭಕ್ತಿ; ನಮ್ಮ ಕಬ್ಬಿಣದ ಪಿಠಾರಿಯ ದುಡ್ಡಲ್ಲ.

ಆರೋಗ್ಯಕ್ಕೆ ಹಾನಿತರುವ ಇನ್ನೆರಡು ವಿಷಯಗಳು ನಮ್ಮಲ್ಲಿವೆ. ಒಂದನೆಯದು ಮದ್ಯಪಾನ; ಎರಡನೆಯದು ಬಾಲ್ಯವಿವಾಹ. ಮದ್ಯಪಾನದಿಂದ ಮನುಷ್ಯನಿಗೆ ತಾತ್ಕಾಲಿಕ ಉತ್ಸಾಹ ಉಲ್ಲಾಸಗಳು ತೋರಿಬಂದರೂ ಪರಿಣಾಮದಲ್ಲಿ ಅದು ಅನರ್ಥಕಾರಿ. ದೇಹವನ್ನು ನಿರ್ವೀರ್ಯವನ್ನಾಗಿಯೂ ಮನಸ್ಸನ್ನು ನಿಸ್ತೇಜವನ್ನಾಗಿಯೂ ಮಾಡಿ ಆತ್ಮನಾಶಗೈಯುತ್ತದೆ. ಮದ್ಯಪಾನದಿಂದಾಗುತ್ತಿರುವ ಮಹಾ ಕಷ್ಟನಷ್ಟಗಳು ಪರಂಪರೆಗಳನ್ನು ಅರಿತು, ಮಹಾತ್ಮಾ ಗಾಂಧಿಯವರೇ ಮೊದಲಾದ ಮಹನೀಯರು ಅದನ್ನು ತೊಲಗಿಸಲು ಸರ್ವಪ್ರಯತ್ನ ಮಾಡುತ್ತಿದ್ದಾರೆ. ಸೆಕೆದೇಶದವರ ಮಾತಂತಿರಲಿ; ಚಳಿದೇಶದವರೂ ಕೂಡ ಮದ್ಯಪಾನದ ಪಿಶಾಚಿಯಿಂದ ಪಾರಾಗಲು ಹಾತೊರೆಯುತ್ತಿದ್ದಾರೆ. ಮದ್ಯಪಾನದಿಂದ ಮಾನ, ಪ್ರಾಣ, ಧನ ಎಲ್ಲವೂ ನಷ್ಟ. ಮದ್ಯಪಾಯಿಯ ಮನದಲ್ಲಿಯೂ ಶಾಂತಿಯಿರುವುದಿಲ್ಲ. ಆತನು ದಿನದಿನವೂ ಅಧೋಗತಿಗಿಳಿಯುತ್ತಾನೆ. ಆತನಿಗೆ ಸಂಭವಿಸುವ ಮಕ್ಕಳು ಕೂಡ ಮಂದ ಅಥವಾ ವಕ್ರಬುದ್ಧಿಗಳಾಗಿಯೂ ಅಬಲರಾಗಿಯೂ ಇರುತ್ತಾರೆ. ಆದ್ದರಿಂದ ಮದ್ಯಪಾಯಿಯ ಪಾಪ ಅವನೊಂದಿಗೇ ನಶಿಸುವುದಿಲ್ಲ; ಅದು ಆತನ ಸಂತಾನಕ್ಕೂ, ಅಲ್ಲಿಂದ ಸಮಾಜಕ್ಕೂ ಹಬ್ಬಿ ಕೇಡು ಮಾಡುತ್ತದೆ. ಆದ್ದರಿಂದ ತಮ್ಮ ಮತ್ತು ತಮ್ಮ ಜನಾಂಗದ ಶ್ರೇಯಸ್ಸನ್ನು ಬಯಸುವರೆಲ್ಲರೂ ಮದ್ಯಪಾನವೆಂಬ ಪಿಶಾಚಿಯನ್ನು ಸರ್ವಪ್ರಕಾರದಿಂದಲೂ ಸಂಹರಿಸುವುದಕ್ಕೆ ಪ್ರಯತ್ನಿಸಬೇಕು.

ಇನ್ನು ಬಾಲ್ಯ ವಿವಾಹ. ಇದರ ವಿಚಾರವಾಗಿ ಎಷ್ಟು ಹೇಳಿದರೂ ಸ್ವಲ್ಪವೇ ಸರಿ. ಇದರಿಂದ ನಮ್ಮ ಭಾರತವರ್ಷವೇ ದುರ್ಬಲವಾಗಿದೆ; ಇನ್ನೂ ಆಗುತ್ತಿದೆ. ಅಸಂಖ್ಯ ಬಾಲಬಾಲಿಕೆಯರು ಈ ಭೂತಕ್ಕೆ ವರ್ಷ ವರ್ಷವೂ ಬಲಿಯಾಗುತ್ತಿದ್ದಾರೆ. ಆಶಾಪೂರ್ಣವಾಗುರುವ ಜೀವಕುಸುಮಗಳು ಜೀವನ ಪ್ರಾರಂಭದಲ್ಲಿಯೇ ಬಾಲ್ಯವಿವಾಹ ಎಂಬ ವಿಷಕೀಟ ಗ್ರಸ್ತರಾಗಿ ಬಾಡಿ ಬಿದ್ದು ಹೋಗುವುದನ್ನು ಕಂಡರೆ ಯಾವನು ತಾನೆ ಮರುಗುವುದಿಲ್ಲ? ನನ್ನೊಡನೆ ಹುಟ್ಟಿ ಬೆಲೆದವರು, ನನ್ನ ತರುವಾಯ ಹುಟ್ಟಿ ಬಂದ ಕಿರಿಯರು, ಆಶಾಪೂರ್ಣ ಜೀವಿಗಳು ಬಾಲ್ಯ ವಿವಾಹಕ್ಕೆ ತುತ್ತಾಗಿ ಹತಚೇತಸರಾಗಿಯೋ ಅಥವಾ ಗತಪ್ರಾಣರಾಗಿಯೋ ಆಗಿರುವುದನ್ನು ನಾನು ನೋಡಿ ನೆನೆದು ಎದೆ ನೋಯುತ್ತಿದ್ದೇನೆ. ಕಣ್ಣಿನ ಕಾಂತಿ, ಮನಸ್ಸಿನ ಶಾಂತಿ, ಮುಖದ ತೇಜಸ್ಸು, ಓಜಸ್ಸು, ದೇಹದ ಉಲ್ಲಾಸ, ಹೃದಯದ ಉತ್ಸಾಹ ಎಲ್ಲವನ್ನೂ ಕಾಳೆದುಕೊಂಡು ಜೀವಶವಗಳಂತೆ ಇರುವವರಿಂದ ನಾಡಿಗಾದರೂ ಜನರಿಗಾದರೂ ಏನು ಉಪಯೋಗವಾದೀತು? ಆದ್ದರಿಂದ ಪ್ರಾಪ್ತ ವಯಸ್ಕರಾದ ಮೇಲೆಯೇ ಮಕ್ಕಳಿಗೆ ವಿವಾಹ ಮಾಡುತ್ತೇವೆ ಎಂಬುದು ನಿಮ್ಮೆಲ್ಲರ ಪ್ರತಿಜ್ಞೆಯಾದರೆ ಮಲೆನಾಡಿನ ಜೀವನ ಇನ್ನೂ ಹೆಚ್ಚು ಚೈತನ್ಯಮಯವಾಗುವುದರಲ್ಲಿ  ಸಂದೇಹವಿಲ್ಲ.

ಮಲೆನಾಡಿನಲ್ಲಿ ಮಳೆಯಿಂದೆ, ಬೆಳೆಯಿದೆ. ಆದರೆ ಅನೇಕ ಮನೆತನಗಳ  ಜೀವನ ನೆಮ್ಮದಿಯಾಗಿಲ್ಲ. ಯೋಗ್ಯ ವಸ್ತುಗಳಿಗಾಗಿ ಧನವ್ಯಯಮಾಡಲು ಹಿಂಜರಿದು, ಅಯೋಗ್ಯವೂ ಅಪ್ರಯೋಜಕವೂ ಆದವುಗಳಿಗಾಗಿ ಬಹಳ ವೆಚ್ಚ ಮಾಡುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಕೋರ್ಟು ವ್ಯವಹಾರ, ವಿವಾಹ, ಭೂತಾರಾಧನೆ ಮೊದಲಾದ ಕರಾಳ ಪೂಜಾ ಪದ್ಧತಿಗಳು ― ಇವು ಮೂವರನ್ನು ಹೆಚ್ಚಾಗಿ ಗಮನಿಸಬೇಕು. ನಮ್ಮ ಸಂಪಾದನೆಯಲ್ಲಿ ಎಷ್ಟು ಭಾಗ ಕೋರ್ಟು ವ್ಯವಹಾರಕ್ಕಾಗಿ ಖರ್ಚು ಆಗುತ್ತಿದೆ? ನಮ್ಮ ಸಾಲದಲ್ಲಿ ಎಷ್ಟು ಭಾಗ ಕೋರ್ಟು ವ್ಯವಹಾರಕ್ಕಾಗಿಯೇ ಆಗಿದೆ? ಚೆನ್ನಾಗಿ ವಿಚಾರಿಸಿ ನೋಡಿ. ನ್ಯಾಯಪಡೆಯುವುದಕ್ಕಾಗಿ ಎಷ್ಟು ಖರ್ಚಾಗುತ್ತಿದೆ? ಅನ್ಯಾಯ ಸಾಧನೆಗಾಗಿ ಎಷ್ಟು ಖರ್ಚಾಗುತ್ತಿದೆ? ಮಾತ್ಸರ್ಯಕ್ಕಾಗಿಯೋ, ಛಲಕ್ಕಾಗಿಯೋ ಪ್ರತಿಹಿಂಸೆಯ ಸಲುವಾಗಿಯೋ ಜನರು “ಕೋರ್ಟುಮನೆ ಹತ್ತಿ” ತಮ್ಮ ಮನೆ ಹಾಳಾದುದನ್ನು ಲೆಕ್ಕಿಸದೆ ದಿಗ್ವಿಜಯಲೋಲುಪರಾಗಿರುವುದನ್ನು ನೀವೆಲ್ಲರೂ ನೋಡಿರಬಹುದು. ನಮ್ಮಲ್ಲಿ ಸದ್ಭುದ್ಧಿ, ಸ್ನೇಹ, ಔದಾರ್ಯಗಳು ಹೆಚ್ಚಾಗುವಂತೆ ಮಾಡಿಕೊಂಡಿರೆ ಈ ದುಂದುವೆಚ್ಚವನ್ನು ನಿಲ್ಲಿಸಿಬಿಟ್ಟು  ಮನಃಕಷಾಯಗಳಿಂದಲೂ ವಿಮುಖರಾಗಿ ಧನ್ಯರಾಗಬಹುದೆಂಬುದು ನನ್ನ ದೃಢವಾದ  ನಂಬುಗೆ. ದೇವರ ದಯೆಯಿಂದ ನಮ್ಮ ಸಂಘ ಒಂದಲ್ಲ ಒಂದು ದಿನ ನ್ಯಾಯಾಧೀಶರೂ ವಕೀಲರೂ ಮಾಡುವ ಕಲಸವನ್ನು ವೆಚ್ಚವಿಲ್ಲದೆ ಮಾಡಿ, ನಮ್ಮ ನಮ್ಮಲ್ಲಿ ತಲೆದೋರುವ ಭಿನ್ನಾಭಿಪ್ರಾಯಗಳಿಗೆ ಸ್ನೇಹಪೂರ್ವಕವಾಗಿ ತೀರ್ಪು ಕೊಡಲು ಸಮರ್ಥವಾಗಲಿ ಎಂಬುದು ನನ್ನ ಹಾರೈಕೆ.

ಹುಟ್ಟುವುದು ಸಾಯುವುದರಂತೆಯೆ ವಿವಾಹವೂ ಜೀವನದ ಮಹಾ ಘಟನೆಗಳಲ್ಲಿ ಒಂದಾಗಿದೆ. ಪ್ರೇಮಸೂತ್ರದಲ್ಲಿ ಬಂಧಿತರಾದ ತರುಣ ತರುಣಿಯರಲ್ಲಿ ಜೀವನದೃಷ್ಟಿಯೆ ಬದಲಾಯಿಸುತ್ತದೆ. ಆ ಬದಲಾವಣೆ ದುಷ್ಟುವಾಗಬಹುದು, ಶಿಷ್ಟವಾಗಬಹುದು. ಉದಾರಿಗಳಾಗಿಯೂ ಅಕೃಪಣರಾಗಿಯೂ ಅನುಕಂಪ ಶೀಲರಾಗಿಯೂ ಇರುವವರು ತಮ್ಮಲ್ಲಿರುವ ತಾರುಣ್ಯ ಸಹಜವಾದ ದಿವ್ಯ ಗುಣಗಳನ್ನು ಕಳೆದುಕೊಂಡು ಅನುದಾರವೂ ಕೃಪಣವೂ ಕ್ರೂರವೂ ಆದ ಭಾವಗಾಳಿಗೆ ತಮ್ಮೆದೆಯಲ್ಲಿ ಎಡೆಗೊಟ್ಟು ಸಂಕುಚಿತ  ಜೀವಿಗಳಾಗಬಹುದು ಅಥವಾ ಮೊದಲಿದ್ದ ಗುಣಗಳೇ ವಿಕಾಸಹೊಂದಿ ಸಮಾಜಕಲ್ಯಾಣ ಸಾಧಕಗಳಾಗಬಹುದು. ಇಲ್ಲಿ ವಿವಾಹದ ಗುಣಾವಗುಣಗಳನ್ನು ವರ್ಣಿಸುವುದಲ್ಲ ನನ್ನ ಉದ್ದೇಶ; ವಿವಾಹವು ಜೀವನದಲ್ಲಿ ಒದಗುವ ಒಂದು ಮುಖ್ಯ ಸಂಧಿಯ ಕಾಲವೇಂದು ತಿಳಿಸುವುದೇ ನನ್ನ ಆಶಯ. ಆದ್ದರಿಂದಲೆ ಅಂದೊಂದು ಸಂಭ್ರಮದ ಸಮಯಾವಾಗಿದೆ. ಅಂತಹ ಸಮಯಗಳಲ್ಲಿ ಎಂದಿಗಿಂತಲೂ ಸ್ವಲ್ಪ ಹೆಚ್ಚಾಗಿ ಮೆರೆದರೆ, ಹಣ ವೆಚ್ಚಮಾಡಿದರೆ ಅದನ್ನೊಂದು ಮಹಾಪಾಪವೆಂದು ಯಾರೂ ಪರಿಗಣಿಸುವುದಿಲ್ಲ. ಆದರೆ ಸಂಭ್ರಮ ಭ್ರಮವಾಗಬಹುದು; ಪ್ರಮಾದಕ್ಕೆ ಈಡಾಗಬಾರದು, ಮದುವೆಮಾಡಿಕೊಳ್ಳವವರು ಮುಂದೆ  ತಮಗೆ ಸುಖವಾಗುತ್ತದೆ ಎಂದೇ ಹಾಗೆ ಮಾಡುವರು. ಬರಿಯ ದುಃಖವಾಗುತ್ತದೆ ಎಂದು ತಿಳಿದಿದ್ದರೆ ಯಾರೂ ಅಂತಹ ಅವಿವೇಕಕ್ಕೆ ಕೈ ಹಾಕುತ್ತಿರಲಿಲ್ಲ. ಆದರೆ ವಿವಾಹಕಾಲದಲ್ಲಿ  ಅತಿವ್ಯಯಮಾಡಿ ಸಂಸಾರ ಸರೋವರದಲ್ಲಿ ಜಲಿಕ್ರೀಡೆಯಾಡಲೆಂದು ಉಲ್ಲಾಸದಿಂದ ಧುಮುಕುವ ಅನುಭವ ಸಾಲದ ನವ ದಂಪತಿಗಳ ಕೊರಳಿನಲ್ಲಿ ಸಾಲವೆಂಬ ದೊಡ್ಡ ಅರೆಬಂಡೆಯನ್ನು ಕಟ್ಟಿಬಿಟ್ಟರೆ ಏನು ಗತಿ? ಮುಂದಿನ ಭಯಂಕರ ಚಿತ್ರಗಳ ಪರಂಪರೆಯನ್ನು ಊಹಿಸಿಕೊಳ್ಳಿ. ಅತ್ಯಂತ ಭಯಾನಕವೂ ಕರುಣಾಪೂರ್ಣವೂ ಶೋಕಮಯವೂ ರುದ್ರವೂ  ಆದ ಹಲವು ಕೊಟಲೆಗಳ ಚಿತ್ರವನ್ನು ಒಂದು ಉಪಮಾನದಲ್ಲಿ ಹೇಳಿದ್ದೇನೆ. ಆ ಉಪಮಾನದ  ಪರದೆಯ ಹಿಂದೆ ನೀವೇ ನರಕದರ್ಶನಮಾಡಿ. ನನಗೆ ಆ ನರಕವರ್ಣನೆ ಮಾಡಲು ಇಷ್ಟವೂ ಇಲ್ಲ, ಸಮಯವೂ ಇಲ್ಲ. ಈ ಎಲ್ಲ ಕಾರಣಗಳಿಗಾಗಿ ಮದುವೆ ಮಾಡಿಕೊಳ್ಳುವವರೂ, ಮಾಡಿಸುವವೆರೂ,  ಮುಂದಿನ ದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಜಾಗರೂಕತೆಯಿಂದ  ವರ್ತಿಸುವುದು ಒಳ್ಳೆಯದು. ಮದುವೆಗೆ ಮದುವೆಯ ಸಂಭ್ರಮವೇ ಗುರಿಯಲ್ಲ; ಮುಂದಿನ  ಸುಖ, ಸಮಾಜಸೇವೆ ಇತ್ಯಾದಿಗಳು ಆದರ ಗುರಿ. ವಿವಾಹವು ನಡೆಯುವ ಹಾದಿಯೆ ಹೊರತು, ಸೇರುವ ಮನೆಯಲ್ಲ. ಆದ್ದರಿಂದ ಜನರು ವಿವಾಹ ಕಾಲದಲ್ಲಿ ಅಗುವ ದುಂದನ್ನು ಕಡಿಮೆ ಮಾಡಿ, ದಂಪತಿಗಳ ಜೀವನ ಮುಂದೆ ಋಣಭಾರದಿಂದ ಕುಗ್ಗಿ ಪಾತಾಳಗತವಾಗದಂತೆ ನೋಡಿಕೊಳ್ಳಬೇಕು.

ನಮ್ಮಲ್ಲಿ ಇನ್ನೊಂದು “ಶೂನ್ಯದ ಖಾತೆಯ ಖರ್ಚಿ”ದೆ. ಎಂದರೆ ಕೆಲಸಕ್ಕೆ ಬಾರದ ವೆಚ್ಚ ಇದೆ. ಅದರಿಂದ ನಷ್ಟವೊಂದಲ್ಲದೆ ಅಪಾಯವೂ ಸಂಭವಿಸುತ್ತದೆ. ಅಪಾಯವನ್ನು ಕುರಿತು ಹಿಂದೆಯೆ ಪ್ರಸ್ತಾಪಿಸಿದ್ದೇನೆ. ಭೂತ ಪಿಶಾಚಿಗಳ ಆರಾಧನೆಗೆ ಆಗುವ ವೆಚ್ಚ ಅಷ್ಟಿಷ್ಟಲ್ಲ. ದುಡ್ಡಿರುವ ದೊಡ್ಡವರಿಗಿಂತೂ ಅದೊಂದು ಮಹಾಭೋಗದ ವಿಷಯವಾಗಿಹೋಗಿದೆ. ಆದರೆ ದೊಡ್ಡವರನ್ನು ಅನುಸರಿಸುವ ಬಡವರ ಗತಿಯೇನು? ನೂರಾರು ರೂಪಾಯಿ ಸಾಲವಿರುವ ಬಡವರು ಭೂತ, ಪಂಜ್ರೋಳ್ಳಿ, ಜಕ್ಕಿಣಿ, ರಣ ಮುಂತಾದ ಅಸಂಖ್ಯ ಅಂತರ ಬೆಂತರಗಳ  ಪೂಜೆಗಾಗಿ, ಸಾಲವನ್ನೂ ಮನೆಯ ದುರವಸ್ಥೆಯನ್ನು ಗಣನೆಗೆ ತಾರದೆ, ಸುಳ್ಳು ಭಯದಿಂದ ಪ್ರೇರಿತರಾಗಿ, ವರ್ಷ ವರ್ಷವೂ ಮರಗಳ ಬುಡದಲ್ಲಿರುವ ಕಲ್ಲುಗಳಿಗೆ ಕುರಿ ಕೋಳಿಗಳನ್ನು ಬಲಿ ಇತ್ತು ಸರ್ವನಾಶವಾಗುತ್ತಿದ್ದಾರೆ. ಈ ಮಾತನ್ನು ಕೇಳಿ ಹಣವಿರುವವರು “ಬಡವರು ಬಿಟ್ಟರೆ ಬಿಡಲಿ! ನಾವೇಕೆ ಬಿಡುವುದು? ನಮ್ಮಲ್ಲಿ ಧನವಿದೆ” ಎಂದು ಯೋಚಿಸಬಹುದು  ಆದರೆ ಭೂತಾರಾಧನೆಯಿಂದ ಧನನಷ್ಟವೊಂದೇ ಅಲ್ಲದೆ ಆತ್ಮನಾಶವೂ ಅಗುತ್ತದೆ ಎಂಬುದನ್ನು ಮರೆಯದಿರಿ.

ಆದರ್ಶವಿರುವುದು ಅದರಂತಾಗುವುದಕ್ಕೆ; ಅದಾಗುವುದಕ್ಕೆ. ನಾವು ಯಾರನ್ನು ಗೌರವಿಸುತ್ತೇವೆಯೋ ಅವರ ಗುಣಗಳೆ ನಮ್ಮಲ್ಲಿ ಮೂಡುತ್ತವೆ. ನಾವು ಯಾರನ್ನು ಆರಾಧಿಸುತ್ತೇವೆಯೊ ಅವರಂತೆಯೆ ಆಗುತ್ತೇವೆ. ದೇವರನ್ನು ಪೂಜಿಸಿದರೆ ದೇವರಾಗುತ್ತೇವೆ. ದ್ವೆವಗಳನ್ನು ಪೂಜಿಸಿದರೆ ದೆವ್ವಗಳಾಗುತ್ತೇವೆ. ಇದನ್ನೇ ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನು ಹೀಗೆಂದು ಹೇಳಿದ್ದಾನೆ.:

ಯಾಂತಿ ದೇವವ್ರತಾ ದೇರ್ವಾ ಪಿತೃನ್ ಯಾಂತಿ ಪಿತೃವ್ರತಾಃ
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಮ್ ||

“ದೇವತೆಗಳನ್ನು ಪೂಜಿಸುವವರಿಗೆ ದೇವಲೋಕ ಲಭಿಸುತ್ತದೆ. ಪಿತೃ ಪೂಜಕರು ಪಿತೃಲೋಕವನ್ನೈದುತ್ತಾರೆ. ಭೂತಪ್ರೇತ ಪೂಜಕರು ಆ ಭೂತ ಪ್ರೇತಗಳ ಲೋಕವನ್ನೆ ಸೇರುತ್ತಾರೆ. ನನ್ನ ಪೂಜಕರು ನನ್ನಲ್ಲಿಗೆ ಬರುತ್ತಾರೆ.”

ನಿಮಗೆ ಯಾರನ್ನು ಸೇರಲು ಇಷ್ಟವಿದೆ? ಜಗದೀಶ್ವರನೂ ಪರಮ ಕಲ್ಯಾಣಕರನೂ ಸರ್ವಶಕ್ತನೂ ಸಕಲೈಶ್ವರ್ಯ ಸಂಪನ್ನನೂ ಭಕ್ತವತ್ಸಲನೂ ಅಂತರ್ಯಾಮಿಯೂ ಅತೀತನೂ ಪುರುಷೋತ್ತಮನೂ ಆಗಿರುವ ಭಗವಾನ್‌ ಶ್ರೀಕೃಷ್ಣನನ್ನೆ? ಅಥವಾ ಕಾಡಿನ  ಮರದಡಿಯಲ್ಲಿರುವ ಕಲ್ಲಿನ ಪಿಶಾಚವಾದ ಪಂಜ್ರೋಳ್ಳಿಯನ್ನೆ? ಬುದ್ಧಿವಂತರ ಉತ್ತರ ಎಲ್ಲರಿಗೂ ಗೊತ್ತೇ ಇದೆ. ನಾನು ವಿವರಿಸಿ ಹೇಳಬೇಕಾಗಿಲ್ಲ. ಸಗಣಿಯವನೊಡನೆ ಸರಸವಾಡುವುದಕ್ಕಿಂತ ಗಂಧದವನೊಡನೆ ಗುದ್ದಾಡುವುದು ಲೇಸು. ಸರಸವಾಡಿದರೂ ಸಗಣಿಯಿಂದ ನಮಗೆ ದೊರಕುವುದು ದುರ್ವಾಸನೆ; ಗುದ್ದಾಡಿದರೂ ಗಂಧದವನಿಂದ ಪರಿಮಳ ಲಭಿಸುತ್ತದೆ. ಆದ್ದರಿಂದ ದೆವ್ವಗಳೊಡನೆ ಸರಸವಾಡುವುದಕ್ಕಿಂತ ದೇವರೊಡನೆ ಗುದ್ದಾಡುವುದೇ ಲೇಸು. ಹಿರಣ್ಯಕಶಿಪು ನೃಸಿಂಹನೊಡನೆ ಗುದ್ದಾಡಿ ಮೋಕ್ಷ ಹೊಂದಲಿಲ್ಲವೇ? ಗುದ್ದಾಟವೆ ಮೋಕ್ಷದಾಯಕ ಎಂದ ಮೇಲೆ ಆರಾಧನೆ ಎಂತಹ ಸುಗತಿದಾಯಕವೊ ಅದನ್ನು  ವರ್ಣಿಸಲಸಾಧ್ಯ. ನಿಮ್ಮಲ್ಲಿ ಕೆಲವರು ಹೇಳಿಕೊಳ್ಳುತ್ತಿರಬಹುದು, “ನಾವು ದೆವ್ವಗಳ ಜೊತೆಗೆ ದೇವರನ್ನೂ ಪೂಜಿಸುತ್ತೇವೆ” ಎಂದು. ಅಂತಹವರಿಗೆ ತ್ರಿಶಂಕು ಗತಿ! ಮಹಾತ್ಮಾ ಯೇಸುಕ್ರಿಸ್ತನು “ನೀವು ದೇವರನ್ನೂ ದೆವ್ವವನ್ನೂ ಒಟ್ಟಿಗೆ ಪೂಜಿಸಲಾರಿರಿ” ಎಂದುಸಾರಿಹೇಳಿದ್ದಾನೆ. ಆದು ಪರಮ ಸತ್ಯ ಮನುಷ್ಯರನ್ನು ವಂಚಿಸಬಹುದು. ಆದರೆ ಅಂತರ್ಯಾಮಿಯನ್ನು ವಂಚಿಸಲಾರಿರಿ. ಆದ್ದರಿಂದ ದೆವ್ವಗಳ ಆರಾಧನೆಯನ್ನು ಬಿಡಿ; ದೇವರನ್ನು ಮಾತ್ರ ಪೂಜಿಸಿ. ನಿಮಗೆ ಭಯ ಬೇಡ. ಏಕೆಂದರೆ, ನಿಮ್ಮ ಆರಾಧನೆಯ ಮಹೇಶ್ವರನು ಸರ್ವಶಕ್ತನು. ಆತನ ಇಚ್ಛೆಯಿಲ್ಲದೆ ಒಂದು ತೃಣವೂ ಅಲ್ಲಾಡದು. ಆತನ ಭಕ್ತಿ ನಮಗೆ ವಜ್ರಕವಚದಂತೆ. ಅದಕ್ಕಿಂತಲೂ ಅತಿಶಯವಾದ ರಕ್ಷಕವಚ ಬೇರೊಂದಿಲ್ಲ. ಇದನ್ನು ದೃಢವಾಗಿ ನಂಬಿದರೆ ಶ್ರೇಯಸ್ಸು ತಪ್ಪದು. ದೇವರಿಗೆ ಕೋಳಿ ಕುರಿಗಳ ಬಲಿಯೂ ಬೇಡ; ವಜ್ರದ ಕಿರೀಟಗಳೂ ಬೇಡ. ಆತನಿಗೆ ಬೇಕಾದುದು ಭಕ್ತಿ. ಭಕ್ತಿಯಿಂದ ತೃಣವನ್ನು ನಿವೇದಿಸಿದರೂ ಆತನು ಸಂತೃಪ್ತನು; ಅದಕ್ಕೆ ಭಗವಾನ್ ಶ್ರೀಕೃಷ್ಣನ ಈ ಗೀತಾವಾಕ್ಯವೆ ಮಹಾಸಾಕ್ಷಿ ―

ಪತ್ರಂ ಪುಷ್ಟಂ ಫಲಂ ತೋಯಂ ಯೋ ಮೇ ಭಕ್ತ್ಯಾಪ್ರಯಚ್ಛತಿ
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ||

“ಒಂದು ಎಲೆಯನ್ನಾಗಲಿ ಒಂದು ಹೂವನ್ನಾಗಲಿ ಒಂದು ಹಣ್ಣನ್ನಾಗಲಿ ನನಗೆ ಯಾವನಾದರೂ ಭಕ್ತಿಪೂರ್ವಕವಾಗಿ ನಿವೇದಿಸಿದ್ದಾದರೆ ಆ ಭಕ್ತಿಯ ಕಾಣಿಕೆಯನ್ನು ನಾನು ಆನಂದದಿಂದ ಸ್ವೀಕರಿಸುತ್ತೇನೆ.”

ಕೈಯಲ್ಲಿ ಕಾಸಿಲ್ಲದ ಬಡವನೂ ಈಶ್ವರನಲ್ಲಿ ಮಹಾಭಕ್ತಿಯನ್ನಿಡುವುದು ಸಾಧ್ಯವಾಗಿರುವಾಗ ಸಾಲಮಾಡಿ, ತಾಮಸ ಧನದಿಂದ ಕೊಂಡು ತಂದ ತಾಮಸ ನೈವೇದ್ಯಗಳನ್ನು ಭೂತಗಳಿಗರ್ಪಿಸಿ ಅಧೋಗತಿಗಿಳಿಯುವುದೇಕೆ? ಮೇಲೆ ಹೇಳಿದ ವಿಷಯಗಳನ್ನು ಚೆನ್ನಾಗಿ ಮನನಮಾಡಬೇಕೆಂದು ನಿಮ್ಮಲ್ಲಿ ನನ್ನದೊಂದು ಪ್ರಾರ್ಥನೆ.

“ದೇವರೊಬ್ಬನೆ ಜಗದ್ಗುರು” ಎಂದು ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. ಮನುಷ್ಯರು ನಿಮಿತ್ತ ಮಾತ್ರ ಗುರುಗಳಾಗಬಹುದು. ಅವರನ್ನು ಚೆನ್ನಾಗಿ ಪರೀಕ್ಷಿಸಿ, ಒರೆಹಚ್ಚಿ  ನೋಡಿ, ಅವರು ನಿಜವಾಗಿಯೂ ಈಶ್ವರನ ಮಹಾ ವಿಭೂತಿಯ ಪ್ರತಿನಿಧಿಗಳೆಂದಾಗಲಿ ಪ್ರತಿಬಿಂಬಗಳೆಂದಾಗಲಿ ತಿಳಿದರೆ ಆಗ ಸ್ವೀಕರಿಸಬೇಕು. ಹತ್ತುರೂಪಾಯಿಗಳನ್ನು ಮತ್ತೊಂದು ಸ್ಥಳಕ್ಕೆ ಕೊಟ್ಟು ಕಳುಹಿಸಬೇಕಾದರೆ ನಂಬಿಕೆಯಾದ ಆಳನ್ನು ಹುಡುಕುತ್ತೇವೆ. ಗುರುವಿನ ಕೈಗೆ ಅತ್ಯಮೂಲ್ಯವಾದ ನಮ್ಮ ಆತ್ಮವನ್ನೇ ಕೊಡತ್ತೇವೆ. ಆದ್ದರಿಂದ ನಾವು ಇನ್ನೆಷ್ಟು  ಎಚ್ಚರಿಕೆಯಿಂದರಬೇಕೆಂದು ನೀವೇ ಊಹಿಸಿ. ಬುದ್ಧಿಗೆಟ್ಟು ಕೆಲಸಮಾಡಿದರೆ ಆತ್ಮನಾಶಕ್ಕೆ ಕಾರಣವಾಗುತ್ತದೆ. ಗುರುವನ್ನಾದರೂ ಪರೀಕ್ಷಿಸಲು ಹಿಂತೆಗೆಯಬಾರದು. ಹೊಳೆಯಲ್ಲಿ ಪ್ರಯಾಣಮಾಡುವ ಮೊದಲು ದೋಣಿ ಸರಿಯಾಗಿದೆಯೆ ಬಿರುಕು ಬಿಟ್ಟಿದೆಯೆ ನೋಡಿಕೊಳ್ಳಬೇಕು. ನಡುಹೊಳೆಯಲ್ಲಿ ನೀರುತುಂಬಿ ದೋಣಿ ಮುಳುಗುವಾಗ ಗೋಳಾಡಿದರೆ ಪ್ರಯೋಜನವಿಲ್ಲ. ಶ್ರೀ ಸ್ವಾಮಿ ವಿವೇಕಾನಂದರು ಶ್ರೀ ರಾಮಕೃಷ್ಣ ಪರಮಹಂಸರನ್ನೂ ಚೆನ್ನಾಗಿ ಪರೀಕ್ಷಿಸಿಯೆ ಗುರುವೆಂದು ಸ್ವೀಕರಿಸಿದರು. ಶ್ರೀರಾಮಕೃಷ್ಣ ಪರಮಹಂಸರು ಕೂಡ ಹಾಗೆಯೇ ಮಾಡಬೇಕೆಂದು ಹೇಳಿದ್ದಾರೆ. ಪರೀಕ್ಷೆ, ವಿಮರ್ಶೆ, ವಿಚಾರ ― ಇವೆಲ್ಲವೂ ನಮ್ಮ  ಹುಟ್ಟು ಹಕ್ಕುಗಳು. ಇವುಗಳನ್ನು ಬಿಟ್ಟುಕೊಡಬಾರದು. ಅವುಗಳನ್ನು ಬಿಟ್ಟರೆ ಕಾರ್ಗಾಲದ  ಅಮಾವಾಸ್ಯೆಯ ರಾತ್ರಿಯಲ್ಲಿ ಕೊರಕಲು ದಾರಿಯಲ್ಲಿ ಹಾದು ನಡೆಯುವರು ಕೈಯಲ್ಲಿರುವ ದೀಪವನ್ನು ಬಿಸಾಡಿದಂತಾಗುತ್ತದೆ. ಆ ದೀಪದಂತಿರುವ ನಮ್ಮ ಮತಿಯೂ ಈಶ್ವರಜ್ಯೋತಿಯ ಅಂಶವಾದುದರಿಂದ ಅದು ನಮಗೆ ಪೂಜ್ಯಗುರು. ‘ನನಗೆ ನಮಸ್ಕಾರಮಾಡು. ನನ್ನನ್ನು ಮರೆಹೋಗು’ ಎಂದು ಉತ್ತಮ ಪುರುಷ ಏಕವಚನದಲ್ಲಿ ಭಗವದ್ಗೀತೆಯನ್ನೆಲ್ಲಾ ಆಧಿಕಾರವಾಣಿಯಿಂದ ಬೋಧಿಸಿದ ತರುವಾಯ ಶ್ರೀ ಕೃಷ್ಣನು ಅರ್ಜುನನನ್ನು ಕುರಿತು:

ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ
ವಿಮೃಷ್ಚೈತದಶೇಷೇಣ ಯಥೇಚ್ಛಸಿ ತಥಾ ಕುರು ||

“ಗುಟ್ಟಿಗಿಂತಲೂ ದೊಡ್ಡ ಗುಟ್ಟಾಗುರುವ ಈ ಜ್ಞಾನವನ್ನು ನಾನು ನಿನಗೆ ಹೇಳಿದ್ದೇನೆ. ಅದನ್ನೆಲ್ಲಾ ಚೆನ್ನಾಗಿ ವಿಚಾರಮಾಡಿ ನಿನಗೆ ವಿಹಿತ ತೋರಿದಂತೆ ಮಾಡು” ಎಂದು ಬೋಧಿಸಿದ್ದಾನೆ. ಭಗವಂತನು ಕೂಡ ನರನಿಗೆ ವಿಮರ್ಶೆ ಮಾಡುವ ಸ್ವಾತಂತ್ರ್ಯವನ್ನು ವಹಿಸಿದ್ದಾನೆ. ಹಾಗೆಂದಮೇಲೆ ಯಾವ ಗುರುವಾದರೇನು? ಯಾವ ಮತಾಚಾರ್ಯನಾದರೇನು? ನಾವು ವಿಮರ್ಶೆಮಾಡಲೇಬೇಕು. ವಿಮರ್ಶಿಸಲು ಹಿಂಜರಿಯಬಾರದು. ಯಾವನೋ ಒಬ್ಬ ಸಂದೇಹಾಸ್ಪದವಾದ ಗುರುಲಕ್ಷಣಗಳುಳ್ಳ ನಮ್ಮಂತಹ ಮನುಷ್ಯ ಪ್ರಾಣಿಯನ್ನೇ ಸಂಪ್ರದಾಯದಿಂದ ಗುರುವೆಂದು ಭಾವಿಸಿ ನಮ್ಮ ಖಾಲಿ ಖಜಾನೆಯ ದಾರಿದ್ರ್ಯದಿಂದ ಸಾಲತಂದ ಹಣವನ್ನು ಕಾಣಿಕೆ ತೆತ್ತು ಅಪಾತ್ರ ದಾನವೆಂಬ ಪಾಪಕ್ಕೆ ಭಾಜನರಾಗುವುದಕ್ಕಿಂತ ದರಿದ್ರ ನಾರಾಯಣನ ಸೇವೆಗಾಗಲಿ ಅಜ್ಞಾನಿ ನಾರಾಯಣನ  ಪೂಜೆಗಾಗಲಿ, ಎಂದರೆ ಬಡವರ ಉದ್ಧಾರಕ್ಕಾಗಲಿ, ವಿದ್ಯಾಪ್ರಚಾರಕ್ಕಾಗಲಿ ಆ ಹಣವನ್ನು ಅರ್ಪಿಸುವುದು ಶ್ರೇಯಸ್ಕರವೆಂದು ಮತ್ತೆ ಮತ್ತೆ ಒತ್ತಿಯೊತ್ತಿ ಹೇಳಬೇಕಾಗಿಲ್ಲ. ಮಹನೀಯರೆ. ನನ್ನ ಭಾವ ನನ್ನ ಭಾಷೆಗಿಂತಲೂ ಆಳವಾಗಿದೆ. ವಿಸ್ತಾರವಾಗಿದೆ. ನೀವೆಲ್ಲರೂ ಅರಿತು ನಡೆಯಬೇಕೆಂದು ಬೇಡುತ್ತೇನೆ.

ಈಶ್ವರ ಮನುಷ್ಯನ ಆಮುಷ್ಮಿಕವಾದ ಗುರಿ; ಸಂಸ್ಕೃತಿ ಐಹಿಕವಾದ ಗುರಿ. ಇವೆರಡಕ್ಕೂ ವಿರುದ್ಧಭಾವವಿಲ್ಲ. ಒಂದಕ್ಕೊಂದು ಸೋಪಾನವಾಗಿದೆ, ಪೂರಕವಾಗಿದೆ. ಒಂದರಲ್ಲಿ ಇನ್ನೊಂದಿದೆ. ಎರಡೂ ಒಂದೇ ಎಂದರೂ ತಪ್ಪಾಗದು. ಸುಸಂಸ್ಕೃತಿಗೆ ಸದ್ವಿದ್ಯೆಯೆ ಸಾಧನ. ನಮ್ಮಲ್ಲಿ ಆಕ್ಷರ ವಿದ್ಯೆಯ ಆಭಾವವಾಗಿದೆ; ಕ್ಷಾಮವಾಗಿದೆ ಎಂದರೂ ಸುಳ್ಳಾಗದು. ಸರಕಾರದವರು ಕೊಡುವ ನೌಕರಿ ಚಾಕರಿಗಳಿಗಾಗಿ ಓದುವ ಕಾಲ ಹಿಂದಾಯಿತು. ಸಂಸ್ಕೃತಿಗೋಸ್ಕರವಾದರೂ ನಮ್ಮ ಬಾಲಕರು ಓದಬೇಕು, ಬಿ.ಎ., ಎಂ.ಎ., ಡಿಗ್ರಿಗಳನ್ನೇ ಪಡೆಯಬೇಕು ಎಂದು ನನ್ನ ಭಾವವಲ್ಲ. ಪಡೆದರೇನೊ ಸಂತೋಷವೆ. ಆದರೆ ನೆಮ್ಮದಿಯಾಗಿ ಮೌನವಾಗಿ ಚೋಕ್ಕಟವಾಗಿ ಇತರರಿಗೆ ಹಾನಿಕರವಾಗದಂತೆ ಸಣ್ಣ ಮನಸ್ಸನ್ನು ಆಚೆ ನೂಕಿ ಬದುಕನ್ನು ಸಾಗಿಸಲು ಎಷ್ಟು ವಿದ್ಯೆ ಬೇಕೊ ಅಷ್ಟನ್ನಾದರೂ ನಮ್ಮ ಬಾಲಕರಿಗೆ ನಾವು ನೀಡದಿದ್ದರೆ ಮಲೆನಾಡಿನಲ್ಲಿ ಮಲೆಗಳೇ ತಲೆಗಳಾಗುವ ಸಂಭವವುಂಟೆದು ನಾನು ಮನಸ್ಸಿಲ್ಲದ ಮನಸ್ಸಿನಿಂದ, ಆದರೂ ಸತ್ಯದೃಷ್ಟಿಯಿಂದ ತಮ್ಮ ಮುಂದೆ ಹೇಳಬೇಕಾಗಿದೆ. ಈ ವಿಚಾರದಲ್ಲಿ ಸ್ತ್ರೀಪುರುಷ ಭೇದವಿಲ್ಲದೆ ಕೆಲಸ ಸಾಗಬೇಕು. ಹಾಳು ಹವ್ಯಾಸಗಳಿಗಾಗಿ ವೆಚ್ಚವಾಗಿ ಸೂರೆಹೋಗುವ ಹಣದ ಹೊಳೆಯನ್ನು ಇತ್ತಕಡೆಗೆ ಸಾಗಿಸುವುದು ಯುವಕರೆಲ್ಲರ ಕರ್ತವ್ಯವಾಗಿರಬೇಕು; ವೃದ್ಧರೆಲ್ಲರ ವ್ರತವಾಗಿರಬೇಕು. ನಿಮ್ಮ ಕನ್ಯೆಯರಿಗೆ ಸೇರು ಬಂಗಾರದ ಕೊರಳ ಹಾರಕ್ಕಿಂತಲೂ ಮುದ್ದಾದ ಕನ್ನಡದ ಅಕ್ಷರಮಾಲೆಯೆ ರಮಣೀಯತರವಾದ ಅಲಂಕಾರವೆಂದೂ ನಾನು ಧೈರ್ಯವಾಗಿ ಹೇಳಬಲ್ಲೆ. ವಿದ್ಯೆಯ ಸೌಂದರ್ಯ ಸಜೀವ ಸೌಂದರ್ಯ; ಚಿನ್ನದ ಚೆಲುವು ಹೆಣದಂತೆ! ಬಣ್ಣಬಣ್ಣದ ಮಾರಂಚಿನ ಜರತಾರಿ ಸೀರೆಗಳು, ಸೇರು ಸೇರು ಚಿನ್ನ ಹೇರಿರುವ ನಯ ನಾಜೋಕುಗಳಿಲ್ಲದ ತೊಡಕಾದ ತೊಡವುಗಳು! ಇವುಗಳೆಲ್ಲಾ ಏಕೆ? ಯಾವ ಮೋಹಕ್ಕೆ? ಯಾವ ಶ್ರೇಯಸ್ಸಿಗೆ? ಯಾವ ದೇವರ ಪ್ರೀತಿಗೆ? ಅವುಗಳನ್ನು ನಿತ್ಯವೂ ಉಟ್ಟು ತೊಡುತ್ತಾರೆಯೆ? ವರ್ಷಕ್ಕೊಂದು ಸಾರಿ ಎಲ್ಲಿಗಾದರೂ ಮದುವೆ ಮನೆಗಳಿಗೆ ಹೋಗುವಾಗ ಕತ್ತಲೆ ಕೋಣೆಗಳಲ್ಲಿ ಬಚ್ಚಿಟ್ಟಿರುವ ಸಂದುಕಗಳಿಂದ  ಹೊರಗೆ ತೆಗೆಯುತ್ತಾರೆ. ಗರ್ವ ಪೋಷಕವೇ ಹೊರತು ಉಟ್ಟುಕೊಂಡರೆ ಆದಾದರೂ ಸುಖ ವಾಗಿರುತ್ತದೆಯೆ? ಮರ್ಮರ ನಾದಮಾಡುವ ದೆವ್ವ ದೆವ್ವ ಬಣ್ಣದ ಮಾರಂಚಿನ ಸರಿಗೆ ಸೀರೆ ಲಲನೆಯರಿಗೆ ಸಹಜವಾದ ಕೋಮಲ ಚಲನ ಗಮನಗಳನ್ನು ರುದ್ಧಮಾಡಿ ಅವರಿಗೆ ತೊಂದರೆ ಕೊಡುವುದಲ್ಲದೆ ನೋಡುವವರಿಗೆ ಅವರನ್ನು ಮಾರ್ಕೆಟ್ಟಿನ ಸ್ಥೂಲ ವರ್ಣದ ಕುರುಚಿ ಸುಂದರವಾದ ಚಿತ್ರಗಳಂತೆ ಮೂಡಿಬಿಡುತ್ತದೆ. ನಮ್ಮ ಸಹೋದರಿಯರಿಗೆ ಇದನ್ನು ಚೆನ್ನಾಗಿ ತಿಳಿಸಬೇಕು. ಸೌಂದರ್ಯ ಈ ವಿಧವಾದ “ರಾಣಾರಂಪ”ದಿಂದ ಎಂದಿಗೂ ಹೆಚ್ಚಾಗುವುದಿಲ್ಲ. ಈ ವಿಚಾರದಲ್ಲಿಯೂ ಮಿತವೇ ವಿಹಿತವಾಗಿರುತ್ತದೆ. ಆಕಾಶಬಣ್ಣದ ಒಂದು ಖಾದಿ ಸೀರೆಯ ನಮ್ರ ಗಂಭೀರ ಸಂಯಮಪೂರ್ಣವಾದ ಸೌಂದರ್ಯ ಜರತಾರಿ ಸೀರೆಗಳ ಕೆಂಗೂಳು ಬಣ್ಣದ ರೌದ್ರದಿಂದ ಎಂದಿಗೂ ಸಾಧ್ಯವಲ್ಲ. ಅಗ್ಗದಿಂದಲೆ ಸೊಬಗಿನ ಸುಗ್ಗಿ ಸಾಧ್ಯವಾಗಿರುವಾಗ ಭಯಾನಕವರ್ಣ ಪ್ರದರ್ಶನದ ಹವ್ಯಾಸವೇಕೆ? ಶ್ರೀಮಂತರ ಮನೆಯ ಸ್ತ್ರೀಯರು ಹಾಕಿಕೊಟ್ಟ ಹಾದಿಯಲ್ಲಿ ಬಡವರ ಮನೆಯ ಹೆಂಗಸರೂ ಹೋಗುವುದರಿಂದ ಶ್ರೀಮಂತರು ಮೇಲೆ ಹೇಳಿದ ಮಾತುಗಳನ್ನು ಮುನಿಯದೆ ಮನನಮಾಡಿ ಸನ್ಮಾರ್ಗದರ್ಶಿಗಳಾಗಬೇಕೆಂದು ಪ್ರಾರ್ಥನೆ.

ಈಗೀರುವ ನಮ್ಮ ಭರತಖಂಡದ ದುಃಸ್ಥಿತಿಯಲ್ಲಿ ನಿಮ್ಮೆದರು ದೇಶಭಕ್ತಿಯ ವಿಚಾರವಾಗಿ ಒಂದೆರಡು ಮಾತುಗಳನ್ನಾದರೂ ಆಡದಿದ್ದರೆ ನನ್ನ ಭಾಷಣ ಮಂಗಳಸೂತ್ರವಿಲ್ಲದ ವಧುವಿನಂತೆ ಅವಲಕ್ಷಣವಾಗುತ್ತದೆ. ನಾವಿಂದು ನೋಡುತ್ತಿರುವುದು ಭಾರತ ವರ್ಷದ ಇತಿಹಾಸದಲ್ಲಿ ಒಂದು ಮಹಾ ಸಂಧಿಸಮಯವಾಗಿರುತ್ತದೆ. ಪ್ರತಿಯೊಬ್ಬ ಭಾರತೀಯನ ನಾಡಿಯಲ್ಲಿಯೂ ಒಂದು ಹೊಸ ಚೈತನ್ಯದ, ಹೊಸ ಆಸೆಯ, ಹೊಸ ದರ್ಶನದ ಸ್ಫೂರ್ತಿ ಪ್ರವಹಿಸುತ್ತಿದೆ. ಆ ಸ್ಫೂರ್ತಿಯನ್ನು ಅನುಭವಿಸದ ಪಾಪಿ “ಚಲಮಾನ ಶ್ಮಶಾನ” ಎಂದೇ ಹೇಳಬೇಕು. ನಮ್ಮೀ ಪೃಥ್ವಿಯ ಈ ಮಹಾ ಘಟನೆ ಸಫಲವಾಗುವಂತೆ ನಾವೆಲ್ಲರೂ ತಪಸ್ಸುಮಾಡಬೇಕು. ನಮ್ಮಲ್ಲಿ ಅತ್ಯಂತ ಕ್ಷುದ್ರತಮವಾದ ವ್ಯಕ್ತಿಯೂ ಕೂಡ ಈ ಮಹಾ ರಾಮಸೇತು ಬಂಧನದ ಕಾರ್ಯಕ್ಕೆ ‘ಅಳಿಲ ಸೇವೆ’ ಮಾಡಬಹುದು. ನಮ್ಮ ಸಂಪತ್ತು ನಮಲ್ಲಿಯೆ ಉಳಿದು, ಅರೆಹೊಟ್ಟೆ ಉಂಡು ಸಾಯುವ ಸಾವಿರಾರ ಜನರು ಬದುಕಿಕೊಳ್ಳುತ್ತಾರೆ. ಈ ವಿಷಯಗಳನ್ನೆಲ್ಲಾ ಓದುಬಲ್ಲವರು ಪತ್ತಿಕೆಗಳ ಮೂಲಕ ತಿಳಿದುಕೊಂಡು ಓದು ಬರದವರಿಗೆ ಹೇಳಬೇಕು. ಮಲೆನಾಡಿನಲ್ಲಿ ಬೆಟ್ಟ ಕಣಿವೆ ಕಾಡುಗಳಲ್ಲಿ ಎಲ್ಲಿಯೋ ದೂರ ದೂರದಲ್ಲಿ ಒಂದೊಂದು ಮನೆಯಿರುವುದರಿಂದ, ಆ ಒಮ್ಮನೆಯ ಹಳ್ಳಿಗಳಿಗೆ ಹೊರಗಿನವರು ಬರದಿರುವುದರಿಂದ, ಹಳ್ಳಿಯವರು ಹೊರಗಿನ ಜಗತ್ತಿನ ವಿಚಾರವನ್ನು ತಿಲಮಾತ್ರವೂ ತಿಳಿಯದೆ ಹೋಗುವ ಸಂಭವವುಂಟು. ಆದ್ದರಿಂದ ಓದುಬಲ್ಲ ಮನೆತನದವರೆಲ್ಲರೂ ಪತ್ರಿಕೆಗಳನ್ನೂ ತರಿಸಲೇಬೇಕು. ತಮ್ಮ ಸಂಕುಚಿತ ಜೀವನದ ಬಿಂದುಗಳನ್ನು ಬಾಹ್ಯ ಜಗಜ್ಜೀವನದ ಮಹಾ ಸಿಂಧುವಿನಲ್ಲಿ ಲಗ್ನಮಾಡಬೇಕು. ನಾನೆಷ್ಟೋ ಮನೆಗಳನ್ನು ನೋಡಿದ್ದೇನೆ. ಅವರಿಗೆ ಓದುವಷ್ಟು ಮಟ್ಟಿನ ವಿದ್ಯೆವಿದ್ದರೂ ಪತ್ರಿಕೆಗಳ ಮುಖವನ್ನೇ ಕಾಣದೆ, ಹೊರಗಿನ ಪ್ರಪಂಚದ ವಿಚಾರದಲ್ಲಿ ಸಂಪೂರ್ಣವಾಗಿ ಅಜ್ಞರಾಗಿರುತ್ತಾರೆ. ಅವರ ಗೊಬ್ಬರದ ಗುಂಡಿಯಲ್ಲಿ ಇರುವ ಹುಳುವಿಗೆ ಮಹಾತ್ಮಾ ಗಾಂಧಿಯವರ ವಿಚಾರ ಎಷ್ಟು ಗೊತ್ತೋ ಅವರಿಗೂ ಅಷ್ಟೇ ಗೊತ್ತಿರುತ್ತದೆ. ಅಡಕೆಯ ಧಾರಣೆಯನ್ನು ಎಷ್ಟು ಮುತುವರ್ಜಿ ವಹಿಸಿ ಕೂತೂಹಲದಿಂದ ತಿಳಿಯುತ್ತೀರಿ? ಆ ಕುತೂಹಲದಲ್ಲಿ ವೀಸ ಪಾಲನ್ನಾದರೂ ರಾಷ್ಟ್ರಜೀವನದ ಕಡೆಗೆ ತಿರುಗಿಸಬಾರದೆ? ತಿರುಗಿಸಿ ನೋಡಿ. ಅದರಲ್ಲೂ ಆನಂದವಿದೆ. ಜೀವನದ ಅನುಭವವಲಯ ವಿಶಾಲವಾಗಿ, ಕೆಟ್ಟುಸಿರು ತುಂಬಿರುವ ಕೋಣೆಯ ಕಿಟಕಿ ಬಾಗಿಲು ತೆರೆದು ಹೊಸದಾದ ತಂಗಾಳಿ ಬೀಸಿದಂತಾಗುತ್ತದೆ.

ಇದೇ ಸಮಯದಲ್ಲಿ ಇನ್ನೊಂದು ಬಹು ಮುಖ್ಯ ವಿಚಾರವನ್ನು ಪ್ರಸ್ತಾಪಿಸಬೇಕೆಂದು ಇದ್ದೇನೆ. ಇದನ್ನು ಚೆನ್ನಾಗಿ ಗಮನಿಸಬೇಕೆಂದು ಕೈಮುಗಿದು ಪ್ರಾರ್ಥಿಸುತ್ತೇನೆ. ಅದು ಪುಸ್ತಕಗಳ ವಿಚಾರ. ಇತರ ಪುಸ್ತಕಗಳ ಮಾತಂತಿರಲಿ, ಕಡೆಗೆ ನಮ್ಮ ಜನಪ್ರಿಯ ಕಾವ್ಯಗಳಾದ ಭಾರತ, ರಾಮಾಯಣ, ಭಾಗವತ, ಜೈಮುನಿ ಭಾರತ ಇವುಗಳಾದರೂ ಮನೆಮನೆಯಲ್ಲಿರಬೇಡವೆ? ಆತ್ಮಕಲ್ಯಾಣಕ್ಕಾದರೂ ಅವುಗಳನ್ನು ಓದಬೇಡವೆ? ಯಾವ ಮನೆಯಲ್ಲಿ ಪ್ರತಿದಿನವೂ ಅರ್ಧಗಂಟೆಯ ಮಟ್ಟಿಗಾದರೂ ಕಾವ್ಯ ವಾಚನವಾಗುವುದಿಲ್ಲವೊ, ಯಾವ ಮನೆಯ ಮಂದಿ ಸ್ವಲ್ಪಕಾಲವಾದರೂ ತಮ್ಮ ಮನಸ್ಸನ್ನು ಗದ್ದೆ, ಗೊಬ್ಬರ, ಹಣ, ತೋಟ ಇವುಗಳಿಂದ ಬೇರೆಮಾಡಿ, ರಾಮ, ಕೃಷ್ಣ, ಧರ್ಮರಾಯ, ನಳ, ಹರಿಶ್ಚಂದ್ರ, ವ್ಯಾಸ, ವಾಲ್ಮೀಕಿ ಇತ್ಯಾದಿ ಮಹಾವ್ಯಕ್ತಿಗಳಿರುವ ಭಾವನಾ ಪ್ರಪಂಚಕ್ಕೆ ಕೊಂಡೊಯ್ಯದಿರುವರೊ, ಯಾವ ಮನೆಯಲ್ಲಿ ಜನರ ಆತ್ಮಗಳು ಪರಮಾತ್ಮನ ಪರವಾದ ಭಕ್ತಿಯನ್ನು ತುಸುವಾದರೂ ಸವಿಯದಿರುವುವೋ ಅಂತಹ ಮನೆ ಸುಡುಗಾಡಿಗಿಂತಲೂ ಕೀಳು; ಅಲ್ಲಿರುವವರು ಪ್ರೇತಗಳಿಗಿಂತಲೂ ಮೇಲಲ್ಲ. ಆ ಮಹಾಕಾವ್ಯಗಳನ್ನಾಗಲಿ ಅಥವಾ ಇತ್ತೀಚೆಗೆ ಉತ್ಪನ್ನವಾಗಿರುವ ಗ್ರಂಥಗಳನ್ನಗಲಿ ಕೊಂಡುಕೊಳ್ಳಲು ಹೆಚ್ಚು ಹಣ ವೆಚ್ಚ ಮಾಡಬೇಕಾಗಿಲ್ಲ. ಪ್ರತಿ ವರ್ಷವು ಐದು ಅಥವಾ ಹತ್ತು ರೂಪಾಯಿಗಳನ್ನು ವೆಚ್ಚಮಾಡಿದರೆ ಹತ್ತು ಹದಿನೈದು ವರ್ಷಗಳಲ್ಲಿ ಮನೆಯಲ್ಲೊಂದು ದೊಡ್ಡದಾದ ಪುಸ್ತಕ ಭಂಡಾರವೆ ಆಗಿಬಿಡುತ್ತದೆ. ಮನೆಯಲ್ಲಿರುವ ಮಕ್ಕಳಿಗೂ ಅದರಿಂದ ಉಪಕಾರವಾಗುತ್ತದೆ.ದುರ್ವಿಷಯಗಳ ಕಡೆ ತಿರುಗುವ ಮನಸ್ಸು ಕಾವ್ಯಗಳಲ್ಲಿ ವಿಹರಿಸುವುದರಿಂದ ಸಾತ್ವಿಕವಾಗುತ್ತದೆ. ಒಂದು ಒಳ್ಳೆಯ ಗ್ರಂಥವನ್ನು ಓದಿದರೆ ಒಬ್ಬ ಮಹಾತ್ಮನ ಸ್ನೇಹಲಾಭದಿಂದ ಉಂಟಾಗುವ ಪರಿಣಾಮವಾಗುತ್ತದೆ, ಏಕೆಂದರೆ ಕಾವ್ಯ ಕವಿಯ ಜೀವನಸಾರದ ಸರ್ವಸ್ವ. ಆದು ನಮ್ಮದಾಗುವುದರಿಂದ ನಮ್ಮ ದೃಷ್ಟಿ ವಿಶಾಲವೂ ಶಾಂತಿಪೂಣವೂ ಆಗುತ್ತದೆ. ಬಾಳಿನ ಚೇಳಿನ ಬಾಲದ ಕೊಂಡಿ ಮುರಿದು ಬೀಳುತ್ತದೆ. ಜೀವನ ಸುಖ ಸುವರ್ಣಕ್ಕೆ ಪುಟವಿಟ್ಟಂತಾಗಿ ಆತ್ಮ ಓಜಸ್ವಿಯಾಗುತ್ತದೆ; ಆದ್ದರಿಂದ ಮನೆಯಲ್ಲಿ ಒಂದು ಒಳ್ಳೆಯ ಪತ್ರಿಕೆ, ಕೆಲವು ಒಳ್ಳೆಯ ಗ್ರಂಥಗಳು ಇರಬೇಕಾದುದು ಸದ್ಗೃಹದ ಸಲ್ಲಕ್ಷಣ.

ದೇವರು, ಧರ್ಮ, ಭಕ್ತಿ, ಪೂಜೆ, ಇಹ, ಪರ ಮೊದಲಾದ ವಿಚಾರಗಳನ್ನು ತಿಳಿದುಕೊಳ್ಳಲು ಎಲ್ಲರಿಗೂ ಸಾಧ್ಯ. ದೆವ್ವದ ಪೂಜೆ, ಒಣಕಲು ಆಚಾರ ಇವುಗಳನ್ನು ತ್ಯಜಿಸಬೇಕಾದರೆ, ಸುಳ್ಳು ಭಯದಿಂದ ಪಾರಾಗಬೇಕಾದರೆ ಅವುಗಳ ಜ್ಞಾನ ಎಲ್ಲರಿಗೂ ಬೇಕು. ಈ ವಿಚಾರಗಳನ್ನು ಬುಹು ಸುಲಭವಾಗಿ ಲೋಕಕ್ಕೆ ತಿಳಿಸಿದವರು ಒಬ್ಬರು ಮಹಾತ್ಮಾರಿದ್ದಾರೆ. ಭಗವಾನ್ ಶ್ರೀರಾಮಕೃಷ್ಣಪರಮಹಂಸರು ಓದು ಬರೆಹ ಚನ್ನಾಗಿ ತಿಳಿದವರಲ್ಲ, ಆದರೂ ಪಾಶ್ಚಾತ್ಯ ದೇಶಗಳಿಂದ ಪಂಡಿತವರ್ಯರಾಗಿ ಬಂದವರೂ ಕೂಡ, ಅವರ ಪದತಲದಲ್ಲಿ, ನಿರಕ್ಷರಕುಕ್ಷಿಗಳಾದ ಸಾಮಾನ್ಯರೊಡನೆ ಕುಳಿತು, ಅವರ ಉಪದೇಶಾಮೃತವನ್ನು ಸವಿದರು. ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಯೂರೋಪು ಅಮೆರಿಕಾಗಳಿಗೆ ಹೋಗಿ ವೇದಾಂತ ಬೋಧೆಮಾಡಿ ಜಗದ್ವಿಖ್ಯಾತರಾದುದಲ್ಲದೆ, ನಮ್ಮ ದೇಶ ಮತ್ತು ಧರ್ಮಗಳಿಗೆ ಕೀರ್ತಿಯ ಕಲಶವನ್ನಿಟ್ಟರು. ಆ ಮಹಾ ಶಿಷ್ಯರ ಉಪದೇಶಗಳು ವಿಶಾಲವಾಗಿವೆ; ಸರ್ವಜನಾದರಣೀಯವಾಗಿವೆ; ಸರ್ವಮತ ಗ್ರಾಸಿಯಾಗಿವೆ. ಪರಮಹಂಸರ ಉಪದೇಶ ‘ಶ್ರೀ ರಾಮಕೃಷ್ಣ ವಚನವೇದ’ ಎಂಬ ಪುಸ್ತಕದಲ್ಲಿ ಅಡಕವಾಗಿದೆ. ಆಕ್ಷರಸ್ಥರೆಲ್ಲರೂ ಅದನ್ನು ಓದಬೇಕು. ಅದನ್ನು ಓದಿದಮೇಲೆ ನೀವು ಬೇರೆಯ ವ್ಯಕ್ತಿಗಳಾಗುತ್ತೀರಿ ಎಂದು ನಾನು ಶಪಥಮಾಡಿ ಹೇಳುತ್ತೇನೆ. ಎಂದರೆ, ನೀವೆಲ್ಲರೂ ಸಂನ್ಯಾಸಿಗಳಾಗಿತ್ತೀರಿ ಎಂದರ್ಥವಲ್ಲ. ನಿಮಗೆ ಆ ಭಯ ಬೇಡ. ಶ್ರೀ ರಾಮಕೃಷ್ಣಪರಮಹಂಸರೂ ಮದುವೆಯಾಗಿದ್ದರು. ನಿಮ್ಮ ಜೀವನದಲ್ಲಿ ಶಾಂತಿ, ಶಕ್ತಿ, ಭಕ್ತಿ, ವಿವೇಕ, ಸುಖ ಎಲ್ಲವೂ ಅದರಿಂದ ಹೆಚ್ಚಾಗುತ್ತವೆ. ಆ ಮಹಾಪುರುಷರ ಅನುಗ್ರಹದಿಂದ ನಿಮ್ಮಲ್ಲರಲ್ಲಿಯೂಬೆಳಕು ಉದಯಿಸಲಿ, ನಿಮ್ಮ ಬದುಕು ಸುಖ ಶಾಂತಿ ಮಯವಾಗಲಿ!