ತರುಣ ಮಿತ್ರರಲ್ಲಿ ವಿಜ್ಞಾಪನೆ,

ಈ ವಿದ್ಯಾರ್ಥಿನಿಲಯದ ಇಂದಿನ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆವಹಿಸಿ ತಮಗೆ  ಒಂದೆರಡು ಹಿತದ ಮಾತು ಹೇಳಬೇಕೆಂದು ನನ್ನ ತರುಣ ಮಿತ್ರರು ನನ್ನನ್ನು ಕೇಳಿಕೊಂಡರು. ವಾರ್ಷಿಕೋತ್ಸವಗಳೂ ಅಧ್ಯಕ್ಷತೆಗಳೂ ನವೀನ ಸಂಪ್ರದಾಯದ ನೀರಸ ಪದ್ಧತಿಗಳಾಗಿ ಹೋಗಿವೆ ಎಂದು ನನಗೆ ಗೊತ್ತಿದ್ದರೂ ನಾನು ಹೇಳಿದೆ:

“ಹಿತೋಪದೇಶಕ್ಕೆ ಏನು ಬರಗಾಲ? ಉಪನ್ಯಾಸಗಳಿಗೇನು ಕಡಿಮೆ? ಎಷ್ಟೊಂದು ಸಂಘಗಳಿವೆ? ಎಷ್ಟೊಂದು ಭಾಷಣಗಳಾಗುತ್ತವೆ? ಅದರಲ್ಲಿಯೂ ನಾನು ಹೊಸದಾಗಿ ಹೇಳುವುದೇನಿದೆ? ಹಾಗೆ ನೋಡಿದರೆ, ನಾನು ಹೇಳುವುದನ್ನೆಲ್ಲ ನಿಮ್ಮಲ್ಲಿಯೆ ಅನೇಕರು ಚೆನ್ನಾಗಿ ಹೇಳಬಲ್ಲವರಿದ್ದಾರೆ”.

ನಾನು ಏನು ತತ್ತ್ವ ಹೇಳಿದರೂ ಅವರ ವಿನಯಪೂರ್ವಕವಾದ ಬಲತ್ಕಾರದ ಮುಷ್ಟಿ ಸಡಿಲಲಿಲ್ಲ. ನನಗೂ ಕವಿಸಹಜವಾದ ಸವಿಯ ಭ್ರಾಂತಿ, ಒಪ್ಪಿಕೊಂಡೆ.

ನನ್ನ ಸಮ್ಮತಿಗೆ ಮತ್ತೊಂದು ರಹಸ್ಯದ ಕಾರಣವಿತ್ತು. ಕೆಲವು ದಿನಗಳಿಂದ ನನ್ನ ಮನಸ್ಸಿನಲ್ಲಿ ಒಂದು ಚಿಂತೆ ಸೇರಿಕೊಂಡು ಕೊರೆಯುತ್ತಿತ್ತು; ಅದನ್ನು ಹೊರಗೆಡಹಿ ಮನಃಶಾಂತಿ ಮಾಡಿಕೊಳ್ಳಲು ಅವಕಾಶ ಸಿಕ್ಕಿತೆಂದು ಈ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಕೊಂಡೆ.

ಬಹುಶಃ ನನ್ನ ಮಿತ್ರರು ತಮ್ಮ ದಿಗ್ವಿಜಯಕ್ಕೆ ತಾವೆ ಆಶ್ಚರ್ಯಪಟ್ಟು ಬೆನ್ನು ತಟ್ಟಿಕೊಂಡು ಹೋದರೆಂದು ತೋರುತ್ತದೆ. ಆದರೆ ಅವರಿಗೆ ಎಚ್ಚರಿಕೆ ಹೇಳುತ್ತೇನೆ! ನನ್ನ ಮೆದುಳಿನ ಚಿಂತೆಯನ್ನು ಅವರ ಮೆದುಳಿಗೆ ಅಂಟಿಸಲು ಬದ್ಧಕಂಕಣನಾಗಿ ಬಂದಿದ್ದೇನೆ. ಸಾಧ್ಯಾವಾದರೆ ತಪ್ಪಿಸಿಕೊಳ್ಳಲಿ!

ಇಂದಿನ ಉಪನ್ಯಾಸದ ವಿಷಯಕ್ಕೆ ‘ವಿದ್ಯಾರ್ಥಿಗಳಲ್ಲಿ ಮತಿಗೌರವದ ಆವಶ್ಯಕತೆ’ ಎಂದು ಹಣೆಹೆಸರಿಟ್ಟಿದ್ದೇನೆ. ಆ ಹಣೆಹೆಸರಿನ ಭಾವ ನಿಮಗೆ ವೇದ್ಯವಾಗುತ್ತದಾದರೂ ಅದನ್ನು ಸ್ವಲ್ಪ ವಿವರಿಸಿದರೆ ನನ್ನ ಉದ್ದೇಶ ನಿಮಗೆ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ.

‘ಗುರು’ ಲಘು’ ಎಂಬ ಪದಗಳ ಪರಿಚಯ ನಿಮಗೆ ಈಗಾಗಲೆ ಆಗಿರಬೇಕು. ಛಂದಸ್ಸಿನ ಪಾಠ ಹೇಳುವಾಗ. ‘ಗುರು’ ಎಂದರೆ ಎರಡು ಮಾತ್ರೆಯ ಅಕ್ಷರವಾಗುತ್ತದೆ; ‘ಲಘು’ ಎಂದರೆ ಒಂದು ಮಾತ್ರೆಯ ಅಕ್ಷರ. ಹಾಗೆಯೆ, ಹಗುರ, ಚಟುವಟಿಕೆ, ಶೀಘ್ರಚಲನೆ, ನಿಸ್ಸಾರತೆ, ಟೊಳ್ಳು, ಗಾಂಭೀರ್ಯರಾಹಿತ್ಯ ಮೊದಲಾದ ಅರ್ಥಗಳಲ್ಲಿ ‘ಲಘು’ ಎಂಬ ಪದ ಪ್ರಯೋಗವಾಗುತ್ತದೆ. ಪದಾರ್ಥ ಲಘುವಾಗಿದೆ ಎಂದರೆ ಹಗರುವಾಗಿದೆ; ಲಗುಬಗೆಯಿಂದ ನಡೆದನು, ಎಂದರೆ ಚಟುವಟಿಕೆಯಿಂದ ನಡೆದನು; ಅವನದು ತುಂಬಾ ಲಘು ಬುದ್ಧಿ, ಎಂದರೆ ಅವನ ಬುದ್ಧಿಯಲ್ಲಿ ಸಾರವಿಲ್ಲ, ಗಾಂಭೀರ್ಯವಿಲ್ಲ; ಟೊಳ್ಳು ಎಂದರ್ಥವಾದರೂ ಆಗಬಹುದು; ಅಥವಾ ಅವನು ಯಾವಗಲೂ ಗಂಭೀರ ವಿಷಯಗಳಲ್ಲಿ ಪ್ರವೃತ್ತನಾಗದೆ ಹಗುರ ಹಾಸ್ಯ ಶೀಲತೆಯಲ್ಲಿಯೆ ಕಾಲ ಕಳೆಯುತ್ತಾನೆ ಎಂದಾದರೂ ಅರ್ಥವಾಗಬಹುದು. ‘ಲಘು’ ವಿನಿಂದ ಲಾಘವ, ‘ಗುರು’ ವಿನಿಂದ ‘ಗೌರವ’ ಹುಟ್ಟುತ್ತವೆ. ‘ಲಾಘವ’ ಎಂದರೆ ಪೊಳ್ಳು, ತೂಕವಿಲ್ಲದಿರುವಿಕೆ! ‘ಗೌರವ’ ಎಂದರೆ ದೊಡ್ಡತನ, ಗಾಂಭೀರ್ಯ, ಗಟ್ಟಿ, ತೂಕ, ಪವಿತ್ರತೆ, ಪೂಜ್ಯತೆ. ಸಾವಾನ್ಯವಾಗಿ ಬಳಕೆಯಲ್ಲಿರುವ ‘ಹಸ್ತಲಾಘವ’ ಮತ್ತು ‘ಆತ್ಮಗೌರವ’ ಎಂಬ ಮಾತುಗಳಲ್ಲಿ ಮೊದಲನೆಯದು ಸಂತೋಷ ಪ್ರಕಾಶನಕ್ಕಾಗಿ ಕೈ ಕುಲಕಿಸುವುದನ್ನೂ, ಎರಡನೆಯದು ತನ್ನ ಆತ್ಮದ ಸ್ಥಾನಕ್ಕೂ ಮಾನಕ್ಕೂ ನ್ಯೂನತೆಯುಂಟಾಗದ ರೀತಿಯಲ್ಲಿ ವರ್ತಿಸುವುದು ಎಂಬರ್ಥದಲ್ಲಿಯೂ ಬರುತ್ತವೆ. ನಾಟಕದ ವಿದೂಷಕನ ದೇಹದ ಗಾತ್ರ ಮತ್ತು ಭಾರಗಳಲ್ಲಿ ಗೌರವ ಎಂದರೆ ಗುರುತ್ವ ಕಂಡು ಬಂದರೂ ಅದನ್ನು “ಡೊಳ್ಳು” ಎಂದು ಕರೆಯುತ್ತಾರೆ; ಅದು ನಗೆಗೀಡಾಗುತ್ತದೆ. ಅವನು ಲಘುವ್ಯಕ್ತಿ; ಅವನಲ್ಲಿರುವುದು ಆತ್ಮಲಾಘವ. ಪೂಜ್ಯರಾದ ಮಹಾತ್ಮ  ಗಾಂಧಿಯವರ ಶರೀರದ ಗಾತ್ರ ಮತ್ತು ತೂಕಗಳಲ್ಲಿ ಲಘುತ್ವ ಕಂಡುಬಂದರೂ ಅವರು ಗುರು ವ್ಯಕ್ತಿ; ಅವರಲ್ಲಿರುವುದು ಆತ್ಮ ಗೌರವ.

ಗುರಿಯ ಹಿರಿಮೆ, ಉದ್ದೇಶದ ಶ್ರೇಷ್ಠತೆ, ಪ್ರಯತ್ನದ ಪರಿಶುದ್ಧತೆ, ಸಾಧನದ ಸಾಹಸ, ಇಷ್ಟಸಿದ್ಧಿಗಾಗಿ ಮಾಡುವ ತ್ಯಾಗ ಮತ್ತು ಕೈಕೊಳ್ಳುವ ತಪಸ್ಸು, ಶ್ರೇಯಃಪೂರ್ಣವಾದ ಚಿರಕಾಲಿಕ್ಕಾಗಿ ರುಚಿಕರವಾದ ತಾತ್ಕಾಲಿಕವನ್ನು ವಿಸರ್ಜಿಸುವ ವಿಚಾರಶಕ್ತಿ ಮತ್ತು ವಜ್ರದೃಢತೆ ಇತ್ಯಾದಿ ಗುಣಗಳೆಲ್ಲ ಧ್ವನಿತವಾಗುವಂತೆ ‘ಮತಿಗೌರವ’ ಎಂಬ ಪದವನ್ನು ಪ್ರಯೋಗಿಸಿದ್ದೇನೆ. ವಿದ್ಯಾರ್ಥಿಯಾದವನಿಗೆ ಅಂತಹ ‘ಮತಿಗೌರವ’ ಅವಶ್ಯಕ ಎಂಬುದನ್ನು ಸಮರ್ಥಿಸುವುದೆ ನನ್ನ ಇಂದಿನ ಉಪನ್ಯಾಸದ ಗುರೂದ್ದೇಶ.

“ವಿಷಯವನ್ನು ಎಲ್ಲರೂ ಒಪ್ಪವಾಗ ಸಮರ್ಥನೆಯ ಸಾಹಸವೇಕೆ?” ಎಂದು ಯಾರಾದರೂ ಕೇಳಬಹುದು. ಆದರೆ ವಿಷಯಕ್ಕೆ ಎಲ್ಲರ ಒಪ್ಪುಗೆಯೂ ಉಂಟೆಂಬುದು ಸಂದೇಹಾಸ್ಪದವಾಗಿದೆ. ಬಾಯೊಪ್ಪಿಗೆ ಕೊಟ್ಟರೂ ಅನೇಕರಲ್ಲಿ ಮನಸೊಪ್ಪಿಗೆ ಇಲ್ಲದಿರಬಹುದು. ವಿದ್ಯಾರ್ಥಿಗಳಲ್ಲಿ ಅನೇಕರ ನಿತ್ಯಜೀವನವನ್ನೂ, ಅವರು ಪ್ರದರ್ಶಿಸುವ ಅಭಿರುಚಿಗಳನ್ನೂ, ಅವರಲ್ಲಿ ಹೆಚ್ಚು ಹೆಚ್ಚಾಗಿ ಉಕ್ಕಿ ಕಾಣುತ್ತಿರುವ ಕೋಲಾಹಲ ಪ್ರಿಯತೆಯನ್ನೂ ಮತ್ತು ಸುಲಭ ಯಶೋಭಿಲಾಷೆಯಿಂದ ಅವರು ಕೈಗೊಳ್ಳುವ ವಿಕಾರ ವಿಧಾನಗಳನ್ನೂ ವಿಚಾರಪೂರ್ವಕಾಗಿ ಗನಿಸಿದರೆ ಅವರಲ್ಲಿ, ― ಎಲ್ಲರಿಗಲ್ಲದಿದ್ದ ಪಕ್ಷದಲ್ಲಿ ಬಹುಮಂದಿಗಾದರೂ ― ‘ಮತಿಗೌರವ’ವುಂಟೆಂದು ಸಾಧಿಸುವುದು ಕಷ್ಟವಾಗುತ್ತದೆ. ಹೊಟ್ಟೆ ಬಟ್ಟೆಗಳಿಗೆ ಕಷ್ಟವಿಲ್ಲದಿರುವ ಶ್ರೀಮಂತ ಕುಮಾರರನೇಕರಿಗೆ ವಿದ್ಯಾನಿಕೇತನಗಳೆಂದರೆ ಲಘುಜೀವನದ ಕ್ರೀಡಾ ಶಾಲೆಗಳಾಗಿವೆ; ಒಂದು ತರಹದ  ‘ಕ್ಲಬ್ಬು’ಗಳಾಗಿವೆ. ಒಂದೇ ತರಗತಿಯಲ್ಲಿ ಅವರು ನಾಲ್ಕಾರು ವರ್ಷಗಳಾದರೂ ನೆಮ್ಮದಿಯಿಂದಿರುತ್ತಾರೆ. ಅಂತಹವರ ಭಾಗಕ್ಕೆ ವಿದ್ಯಾನಿಲಯ ಆಟದ ಮೈದಾನಕ್ಕೊ ಅಥವಾ ತಿಂಡಿಯ ಹೋಟಲಿಗೂ ತಗಲಿಕೊಂಡಿರುವ ಒಂದು ಕಟ್ಟಡ ಮಾತ್ರ. ಎಷ್ಟೋ ಆಲಸಮನಸ್ಕರು ಬರಿಯ ಪೊಳ್ಳಾಗಿರುವ ತಮ್ಮ ಲಘುಪ್ರಕೃತಿಗೆ ಲೀಲಾಶೀಲತೆ ಎಂಬ ಅಭಿಧಾನದ ಸೋಗು ತೊಡಿಸಿ ಮೆರೆಯುತ್ತಾ. ತಮ್ಮ ಸಹಾಧ್ಯಾಯಿಗಳಾದ ಗುರುಪ್ರಕೃತಿಯ ವಿದ್ಯಾರ್ಧಿಗಳನ್ನು ಮಂದಹಾಸ್ಯದಿಂದ ಹೀಯಾಳಿಸುತ್ತಾರೆ. ಟೀಕುಟಾಕಾದ ಪೋಷಾಕಿಗೂ ಕೋಲಾಹಲ ಕಂಠಕ್ಕೂ ಮನ್ನಣೆ ದೊರೆಯುವುದನ್ನು ನೋಡಿ ಗೌರವಮತಿಯ, ಮೌನಪ್ರಕೃತಿಯ ಗಂಭೀರ ವಿದ್ಯಾರ್ಥಿಯೂ ತನ್ನ ಮತಿಯ ಗೌರವದ ವಿಚಾರದಲ್ಲಿ ಸಂಶಯಪಟ್ಟುಕೊಳ್ಳುವಂತಾಗುತ್ತದೆ. ಅಂತಹ ಗುರುಪ್ರಕೃತಿಯ ವಿದ್ಯಾರ್ಥಿಯನ್ನು ಸಮರ್ಥಿಸಿ, ಆತನ ಬೆನ್ನುತಟ್ಟಿ ಧೈರ್ಯ ಹೇಳದೆ ಹೋದರೆ ಆತನೂ ಬಹುಸಂಖ್ಯಯ ಆಶ್ರಯದಲ್ಲಿ ರಕ್ಷಣೆ ಹೊಂದುವ ಅನರ್ಥಕ್ಕೆ ಗುರಿಯಾಗುವ ಸಂಭವವಿದೆ.

ಆದ್ದರಿಂದ ಗುರುಪ್ರಕೃತಿಯ ಮತ್ತು ಗೌರವಮತಿಯ ವಿದ್ಯಾರ್ಥಿ ವರ್ಗಕ್ಕೆ ಮಾತ್ರ ಈ ಉಪನ್ಯಾಸದಲ್ಲಿ ನನ್ನ ಸಂಬೋಧನೆ.

ವಿದ್ಯಾರ್ಥಿಯ ಜೀವನವೂ ಒಂದು ತಪಸ್ಸಾಧನೆ; ಪ್ರತಿಯೊಬ್ಬ ದಿಟವಾದ ವಿದ್ಯಾರ್ಥಿಯೂ ಒಬ್ಬ ಗೌರವತಪಸ್ವಿ. ವಿದ್ಯಾರ್ಜನೆಯ ಸಮಯವೆಂದರೆ ಆತ್ಮಶಕ್ತಿ ಸಂಗ್ರಹದ ಕಾಲ. ಬುದ್ಧಿಯನ್ನು ಮಸೆದು, ಭಾವವನ್ನು ಕಡೆದು, ಕವಿಗಳ ಕಾವ್ಯಗಳಲ್ಲಿಯೂ ತತ್ತ್ವಜ್ಞರ ದರ್ಶನಗಳಲ್ಲಿಯೂ ವೈಜ್ಞಾನಿಕರ ಸಂಶೋಧನೆಗಳಲ್ಲಿಯೂ ರಾಷ್ಟ್ರರಚನಾ ಸಮರ್ಥರ ರಾಜಕೀಯ ಶಾಸ್ತ್ರಗಳಲ್ಲಿಯೂ ಮನಸ್ಸನ್ನು ಹದಗೊಳಿಸಿ, ಚಿರಕಾಲವೂ ಶ್ರೇಯಸ್ಕರವಾದ ಸಂಸ್ಕೃತಿಯ ದೇವತೆಯನ್ನು ರಚಿಸಿ, ಆಕೆಯನ್ನು ಮನೋಮಂದಿರದಲ್ಲಿ ಸ್ಥಾಪಿಸಲು ಬದ್ಧಕಂಕಣರಾಗಿ ಬಂದಿರುವ ನೀವು, ಅಂತಹ ಇಚ್ಛೆಯಾಗಲಿ ಶಕ್ತಿಯಾಗಲಿ ಇಲ್ಲದ ಇತರರಂತೆ, ಬಣ್ಣಗುಳ್ಳೆಯ ಹವ್ಯಾಸಗಳಲ್ಲಿ ಕಾಲಹರಣ ಮಾಡಬೇಡಿ. ನಾಡಿನ ಮುಂದಣ ಏಳ್ಗೆಗೂ ಕಲ್ಲುಹಾಕಿ, ನಿಮ್ಮ ಅಭ್ಯುದಯದ ಭೇರಿಗೂ ಬಿಸಿನೀರು ಹೊಯ್ದುಕೊಳ್ಳಬೇಡಿ. ವೆಂಕನ ಹೆಸರು ಮುಂದಕ್ಕೆ ಬಂದಿದೆ; ಸೀನನ ಹೆಸರು ಪತ್ರಿಕೆಗಳಲ್ಲಿ ಅಚ್ಚಾಗಿದೆ; ಎಲ್ಲರ ಬಾಯಲ್ಲಿಯೂ ನಾಣಿಯ ನಾಮಸಂಕೀರ್ತನೆಯಾಗುತ್ತಿದೆ; ನಾನು ಮಾತ್ರ ಹಿಂದುಳಿದುಬಿಟ್ಟೆ, ಅಪ್ರಸಿದ್ಧನಾದೆ, ಆದ್ದರಿಂದ ಕೆಲಸಕ್ಕೆ ಬಾರದವನಾದೆ ಎಂದು ಕೈ ಹಿಸುಕಿಕೊಳ್ಳವುದು ಬೇಡ. ಹೆಸರು, ಹೊರತಿಲ್ಲದೆ, ಎಲ್ಲಾ ಕಾಲದಲ್ಲಿಯೂ ಯೋಗ್ಯತೆಗೆ ಅಳತೆಯಾಗುವುದಿಲ್ಲ. ಅಲ್ಲದೆ ಒಮ್ಮೊಮ್ಮೆ ಅಯೋಗ್ಯತೆಗೆ ಅಳತೆಯಾಗುವುದೂ ಉಂಟು. ನಿಮಗೆ ನಿಜವಾದ ಸಿಂಹಾಸನ ಬೇಕಾದರೆ ಈ ನಾಟಕದ ಸಿಂಹಾಸನಗಳಿಗಾಗಿ ಪರದಾಡಬೇಡಿ. ಅನಾಮಧೇಯದ ಆಜ್ಞಾತದ ಅಖ್ಯಾತಿಯ ನೀರವ ಪರ್ಣಶಾಲೆಯಲ್ಲಿ ನಿರಾಲಸ್ಯದಿಂದ ತಪೋಜೀವನದಲ್ಲಿ ನಿರತರಾದರೆ ಮುಂದೆ ನಿಮಗೆ ರಸಸಿದ್ಧಿ ಕಟ್ಟಿಟ್ಟ ಬುತ್ತಿಯಂತೆ ಕೈಗೂಡುತ್ತದೆ. ಹೀಗೆಂದು ಮಹಾಪುರಷರೆಲ್ಲರ ಜೀವನ ಚರಿತ್ರೆಗಳೂ ಸಾರುತ್ತಿವೆ.

ಅಲಂಕಾರದ ಮಾತಿನಲ್ಲಿ ಹೇಳಿದರೆ ನಿಮ್ಮೆಲ್ಲನೇಕರಿಗೆ ಭಾವವಾಗದಿರಬಹುದು; ಅಥವಾ ತಪ್ಪುಭಾವನೆಯುಂಟಾದರೂ ಆಗಬಹುದು. ಏನೋ ಪರ್ಣ ಶಾಲೆಯಂತೆ! ನೀರವ ತಪಸ್ಸಂತೆ! ಸಿಂಹಾಸನವಂತೆ! ― ನಾನಿರುವುದು ಸಂತೆ ಪೇಟೆಯಲ್ಲಿ; ಪರ್ಣಶಾಲೆಗೆ ಎಲ್ಲಿ ಹೋಗಲಿ? ಆ ದವಸ ಧಾನ್ಯದ ಮಾರಾಟದ ಹೋರಾಟದ ಗಲಿಬಿಲಿಯಲ್ಲಿ, ತಪಸ್ಸಿನ ಮಾತಂತಿರಲಿ, ನೀರವತೆಯನ್ನು ಎಲ್ಲಿಂದ ತರಲಿ? ನಾನು ತಿಂಗಳಿಗೆ ಒಂದು ರೂಪಾಯಿ ಬಾಡಿಗೆಗಿರುವ ಆ ಚಟ್ಟದಷ್ಟಗಲದ ಕತ್ತಲೆಯ ಕೊಠಡಿಯಲ್ಲಿ ಹಾಸಿಕೊಳ್ಳುವುದಕ್ಕೆ ಹರಕಲು ಮುರುಕಲು ಚಾಪೆಗೂ ಗತಿಯಿಲ್ಲದಿರುವಾಗ ಸಿಂಹಾಸನದ ಮಾತು ನನಗೇಕೆ? ಎಂದು ಮೊದಲಾಗಿ ಆಲೋಚಿಸಿ ಯಾರೂ ನಿರಾಶೆಯಿಂದ ನಗದಿರಲಿ. ಏಕೆಂದರೆ ಸಂತೆ ಪೇಟೆಯಲ್ಲಿಯೆ ಪರ್ಣಶಾಲೆಯನ್ನೂ, ವ್ಯಾಪಾರದ ಗಲಾಟೆಯಲ್ಲಿಯೆ ತಪೋನೀರವತೆಯನ್ನೂ, ಹರಿದ ಮಂದಲಿಗೆಯಲ್ಲಿಯೆ ಸಿಂಹಾಸನವನ್ನು ಮೀರುವ ದಿವ್ಯ ವೇದಿಕೆಯನ್ನೂ ಪಡೆಯಲು ಸಾಧ್ಯ.

ಕಾದಂಬರೀ ಕಾವ್ಯದಲ್ಲಿ ಮಹಾಶ್ವೇತೆಯ ಸಂದರ್ಶನದ ಭಾಗವನ್ನಾಗಲಿ, ವರ್ಡ್ಸ್‌ವರ್ತ್ ಕವಿಯ ‘ಟೆಂಡರ್ನ್ ಅಬೆ’ ಯಂತಹ ಕವನಗಳನ್ನಾಗಲಿ ತಲ್ಲೀನತೆಯಿಂದ ಓದುವಾತನು ಎಲ್ಲಿದ್ದರೇನು? ಕಾನನ ಸರೋವರ ಮುದ್ರಿತವಾದ ಪರ್ಣಶಾಲೆಯಲ್ಲಿ ಋಷಿಯಾಗಿರುತ್ತಾನೆ. ಒಡಲು ಸಂತೆಪೇಟೆಯಲ್ಲಿದ್ದರೂ ಅವನ ಕಲ್ಪನೆ ಅಚ್ಛೋದ ಸರಸ್ತೀರಗಾಮಿ. ಅಲ್ಲಿ “ಕುಮುದ ರಜಂಗಳೊಳ್ ಪೊರೆದು ವಾಃಕಣಜಾಲಮನಾಂತು, ಕೂಡೆ ವಿಶ್ರಮಿಸಿ ತರಂಗಮಾಲಿಕೆಗಳೊಳ್, ಕಲಹಂಸನಿನಾದ ಬಂಭ್ರದ್ ಭ್ರಮರ ರವಂರಗಳೊಳ್ ಬೆರಸಿ” ಮನುಜೇಂದ್ರ ಚಂದ್ರಾಪೀಡನನ್ನು “ಅಮರ್ದೊಸೆದಪ್ಪಿಕೊಂಡು ಕರೆವಂತೆವೋಲ್ ತೀಡಿದ” ಆ ಪುಣ್ಯ ಸಮೀರಣನು ಒಯ್ಯೊಯ್ಯನೆ ಬಂದು ಈತನನ್ನೂ ಅಪ್ಪಿ ಕೊಂಡುಹೈಮಾಚಲೋನ್ನತಿಗೆ ಕರೆದೊಯ್ಯುತ್ತಾನೆ. ಪಟ್ಟಣದ ಗಡಿಬಿಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಹೇಗೆ ತನ್ನ ಕಲ್ಪನೆ ಸಂತೆಯ ನಡುವೆಯೆ ಪರ್ಣಶಾಲೆಯನ್ನು ರಚಿಸಿತೆಂಬುದನ್ನು ವರ್ಡ್ಸ್‌ವರ್ತ್ ಕವಿ ಹೀಗೆ ವರ್ಣಿಸಿದ್ದಾನೆ:

These beauteous forms,
Through a long absence, have not been to me
As is a landscape to a blind man’s eye:
But oft, in lonely rooms, and’mid the din
Of towns and cities, I have owed to them,
In hours of weariness, sensations sweet,
Felt in the blood, and felt along the heart:
And passing even into my purer mind,
With tranquil restoration: ―

ಆ ಅಮರಲೋಕಕ್ಕೆ ದಿನಸಿಯ ಮಾರಾಟದ ಗಡಿಬಿಡಿ ತಟ್ಟುವುದಿಲ್ಲ. ಕಾವ್ಯಧ್ಯಾನ ನಿರತನಾದವನು ಕೂತಿರುವ ಹರಕಲು ಚಾಪೆ ಕ್ರವರ್ತಿಯ ಸಿಂಹಾಸನಕ್ಕಿಂತಲೂ ದಿವ್ಯ. ರಾಮಾಯಣ ಮಹಾಕಾವ್ಯ ರಚನೆಯ ಕಾಲದಲ್ಲಿ ಋಷಿಕವಿ ವಾಲ್ಮೀಕೆ ಉಪಯೋಗಿಸುತ್ತಿದ್ದ ಕುಶಾಸನದ ಬೆಲೆ ಯಾವ ಸಿಂಹಾಸನಕ್ಕಿದೆ? ― ಗೌರವಮತಿಯ ವಿದ್ಯಾರ್ಥಿಗೆ ಅಸಾಧ್ಯವಾಗುವುದಿಲ್ಲ, ನಾನು ಸೂಚಿಸಿದ ರಸತಪಸ್ಸು.

ಹಾಗಾದರೆ ವಿದ್ಯಾರ್ಥಿಯಾದವನು ಸದಾ ಅಂತರ್ಮುಖಿಯಾಗಿ ಕೊಠಡಿಯಲ್ಲಿ ಕುಳಿತು ಕನಸುಣಿಯಾಗಬೇಕೆ? ಅವನಿಗೆ ಆಟ ಬೇಡವೆ? ವ್ಯಾಯಾಮ ಬೇಡವೆ? ವಿನೋದ ಬೇಡವೆ? ಎಂದು ಯಾರೂ ಪ್ರಶ್ನಿಸದಿರಲಿ. ಏಕೆಂದರೆ ಅವು ಬೇಡವೆಂದು ನಾನು ಹೇಳಿಯೂ ಇಲ್ಲ; ನನ್ನ ಮಾತಿನಲ್ಲಿ ಸೂಚನೆಯೂ ಆಗಿಲ್ಲ.

ಬಹಿರ್ಮುಖತೆಯಿಲ್ಲದ ಅಂತರ್ಮುಖತೆ ಭ್ರಾಂತಿವಿಲಾಸವಾಗುತ್ತದೆ. ವ್ಯಾಯಾಮ ಜನ್ಯವಾದ ದೃಢಾರೋಗ್ಯವಿಲ್ಲದವನ ಓದು ಮನೋವಿಕೃತಿಯಾಗಿ ಪರಿಣಮಿಸುತ್ತದೆ. ಪ್ರಕೃತಿಸಂಪರ್ಕವಿಲ್ಲದವನ ಕಾವ್ಯರಸಾಸ್ವಾದನ ಅಸ್ವಾಭಾವಿಕವಾದ ಅಸಹ್ಯಕರ್ಮ ವಾಗುತ್ತದೆ. ಅದರಿಂದ ತಾತ್ಕಾಲಿಕವಾಗಿ ಉಂಟಾಗುವ ಸುಖ ತನ್ನನ್ನು ಕೊಲ್ಲುವ ಕ್ಷಯಕ್ರಿಮಿಗಳಿಗೆ ತಾನೆ ಜನಕನಾಗುತ್ತದೆ. ಗಾಳಿ, ಬೆಳಕು, ಅರಣ್ಯ, ಆಕಾಶ, ಸೂರ್ಯ, ಚಂದ್ರ, ಹಕ್ಕಿ, ಚುಕ್ಕಿ ಮೊದಲಾದವುಗಳ ಸಂಗ ಸಹಾವಾಸವಿಲ್ಲದವನ ಓದಿನ ಮೊಟ್ಟೆಯಿಂದ ಗೂಬೆ ಮೂಡಬಹುದು; ಕೋಗಿಲೆ ಎಂದಿಗೂ ಹಾಡಲಾರದು. ಉತ್ತಮ ಸಾಹಿತ್ಯ ನಮ್ಮನ್ನು ಎಷ್ಟು ಅಂತರ್ಮುಖಿಗಳನ್ನಾಗಿ ಮಾಡುತ್ತದೆಯೊ ಆಷ್ಟೆ ಬಹಿರ್ಮುಖಿಗಳ ನ್ನಾಗಿಯೂ ಮಾಡುತ್ತದೆ. ಅವುಗಳೆರಡರ ಸಮತೂಕ ಮತ್ತು ಸುಮನ್ವಯದಿಂದಲೆ ‘ಮತಿಗೌರವ’ ಸಾಧ್ಯ. ಪುಸ್ತಕಕೀಟವನ್ನು ಆದರ್ಶದೇವತೆಯೆಂದು ನಿಮಗೆಂದಿಗೂ ನಾನೊಡ್ಡುವುದಿಲ್ಲ.

ಅನುಭವವಲಯವನ್ನು ಅಗಲಗೊಳಿಸಿ, ಆಳಗೊಳಿಸಿ, ಅದಕ್ಕೆ ಅರ್ಥಗಾಂಭೀರ್ಯವನ್ನು ದಯಾಪಾಲಿಸುವ ಬಹಿರ್ಮುಖಕರ್ಮಗಳೂ ವಿದ್ಯಾರ್ಥಿಯ ಮತಿಗೌರವವನ್ನು ಹೆಚ್ಚಿಸುತ್ತವೆ. ವಾಸ್ತವದ ದವಡೆಯಲ್ಲಿ ಚೆನ್ನಾಗಿ ಕಡಿದು ಮೆಲಕು ಹಾಕುವುದರಿಂದ ಕಲ್ಪನೆಯಲ್ಲಿ ಮೇದ ಮೇವು ಮೈಗೆ ಹಿಡಿಯುತ್ತದೆ. ಗ್ರಾಮ ಸೇವೆ, ಭಾಷಾಸೇವೆ, ಜ್ಞಾನಪ್ರಸಾರ, ಸಾಹಿತ್ಯಪ್ರಚಾರ, ವೈದ್ಯ ಸಹಾಯ, ರೋಗಶುಶ್ರೂಷೆ ಇತ್ಯಾದಿ ಅಲಘು ಕಾರ್ಯಗಳಲ್ಲಿ ಪಾಲುಗೊಳ್ಳುವ ವಿದ್ಯಾರ್ಥಿಯ ಮತಿ ಸಜೀವವೂ ಸುಪುಷ್ಟವೂ ಆಗುತ್ತದೆ; ಮುಂದಿನ ಜೀವನ ಸಂಗ್ರಾಮದಲ್ಲಿ ಕೆಚ್ಚಿನಿಂದ ಭಾಗವಹಿಸಲು ಅವನು ಹೆಚ್ಚು ಹೆಚ್ಚು ಸಜ್ಜುಗೊಳ್ಳುವಂತಾಗುತ್ತದೆ.

ಅಂತಹ ಸತ್ಕಾರ್ಯಗಳ ವಿಚಾರದಲ್ಲಿಯೂ, ಅವುಗಳಲ್ಲಿ ಆಸಕ್ತಿ ವಹಿಸುವ ವಿದ್ಯಾರ್ಥಿಗಳ ವಿಷಯದಲ್ಲಿಯೂ ಶ್ಲಾಘನೆಯಲ್ಲದೆ ಅನ್ಯಭಾವಕ್ಕೆ ನನ್ನಲ್ಲಿ ಒಂದಿನಿತೂ ಎಡೆಯಿಲ್ಲ. ವಿದ್ಯಾರ್ಜನೆಗಾಗಿ ಬಂದವನು ಲೋಕಸೇವೆ ಪರೋಪಕಾರಗಳನ್ನು ಕಲಿಯಾಬಾರದೆಂದಲ್ಲ; ವಿದೆಯನ್ನೂ ಚೆನ್ನಾಗಿ ಸಂಪೂರ್ಣವಾಗಿ ಆರ್ಝಿಸಬೇಕು, ಎಂಬುದು ನನ್ನ ಆಕಾಂಕ್ಷೆ.

ಅದೂ ಅಲ್ಲದೆ ಲೋಕಸೇವೆ ಪರೋಪಕಾರಗಳೂ ಕೂಡ ಒಂದು ವಿಧವಾದ ಅಡ್ಡಕಸುಬಿನ ಷೋಕಿಗಳಾಗುವ ಸಂಭವವೂ ಇರುತ್ತದೆ. ನಾಲ್ಕು ಮಂದಿಯ ಕಣ್ಣಿಗೆ ಬೀಳಬೇಕೆಂಬ ಚಪಲತೆಗಾಗಿಯೊ, ತಾನು ಕೈಕೊಂಡ ವಿದ್ಯಾರ್ಜನೆಯಲ್ಲಿ ಆಸಕ್ತಿ ಇಲ್ಲದುದರಿಂದ ಉಂಟಾಗುವ ಬೇಜಾರಿನ ಪರಿಹಾರಕ್ಕಾಗಿಯೊ ಅಥವಾ ಯಾವುದೋ ಸಂಘಕ್ಕೆ ಕಾರ್ಯದರ್ಶಿಯಾಗಬೇಕು, ಆಧ್ಯಕ್ಷನಾಗಬೇಕು, ಚುನಾವಣೆಯಲ್ಲಿ ಗೆಲ್ಲಬೇಕು ಎಂಬಿವೆ ಮೊದಲಾದ ಚಪಲ ಪ್ರಕೃತಿಯ ಅಭಿಸಂಧಿಗಾಗಿಯೊ, ಸೇವಾಕಾರ್ಯಗಳಲ್ಲಿ ತನ್ನನ್ನು ತಾನೆ ಮೆರೆಯುವ ಹವ್ಯಾಸಕ್ಕೆ ಗೌರವಮತಿಗಳಾದ ವಿದ್ಯಾರ್ಥಿಗಳು ಹೋಗದಿರುವುದು ಲೇಸೆಂದು ನನಗೆ ತೋರುತ್ತದೆ. ಏಕೆಂದರೆ ವಿದ್ಯೆ ಭೂಮವಾಗಿದೆ; ಸಮಯ ಸ್ವಲ್ಪವಾಗಿದೆ.

ನಾನು ಹೇಳುತ್ತಿರುವುದು ಎಲ್ಲವಿದ್ಯಾರ್ಥಿಗಳಿಗೂ ಅನ್ವಯಿಸುವುದಿಲ್ಲ ಎಂಬುದನ್ನು  ಈ ಮೊದಲೆ ಸೂಚಿಸಿದ್ದೇನೆ. ಅದನ್ನೆ ಈಗ ಸ್ಪಷ್ಟಪಡಿಸುತ್ತೇನೆ. ವಿದ್ಯಾರ್ಜನೆಗಾಗಿ ಬಂದ ವಿದ್ಯಾರ್ಥಿಗೆ ಅದರಲ್ಲಿ ಪೂರ್ಣಾಸಕ್ತಿ ತೋರದಿದ್ದರೆ ಬೀದಿ ಬೀದಿ ಅಲೆಯುವುದಕ್ಕಿಂತಲೂ ಯಾವುದಾದರೂ ಸಂಘಸೇವಾಕಾರ್ಯದಲ್ಲಿ ತೊಡಗುವುದು ಪರಮಲೇಸು. ಕಡೆಗೆ ಅಧ್ಯಕ್ಷತೆ, ಕಾರ್ಯದರ್ಶಿತ್ವ, ಕ್ರೀಡಾಸ್ವರ್ಧೆ, ಚರ್ಚಾಕೋಲಾಹಲ ಗಳಲ್ಲಿಯಾದರೂ ― ಚಿಂತೆಯಿಲ್ಲ, ಮನಸ್ಸೋಡಿಸುವುದು ಶ್ರೇಯಸ್ಕರ. ಆದರೆ ನನ್ನ ಗಮನದಲ್ಲಿರುವ ಗಂಭೀರಪ್ರಕೃತಿಯ ಗೌರವಮತಿಯ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸ್ವಲ್ಪ ಬಿಗಿಹಿಡಿಯಬೇಕಾಗುತ್ತದೆ. ಗಾಜನ್ನೆ ಮಾಣಿಕ್ಯವೆಂದು ಕೊಂಡಾಡುವ ಅಭಿರುಚಿಯ ಸಂತೆಗೆ ನಿಜವಾದ ಮಾಣಿಕ್ಯವೆ ಹೋಗುವ ಪಕ್ಷದಲ್ಲಿ ಅದು ಜನಸ್ತುತಿಯನ್ನು ಸೂರೆಗೊಳ್ಳಬಹುದಾದರೂ ಮುಂದೆ ರತ್ನ ಪರೀಕ್ಷಕರ ಗೋಷ್ಠಿಯಲ್ಲಿ ತನಗೊದಗುವ ಅನರ್ಘ್ಯ ಬೆಲೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಅದು ಅಗ್ಗದ ಸಂತೆಯಿಂದ ದೂರವಾಗಬೇಕು. ಗೋಪ್ಯವಾಗಿ ತನ್ನ ಉಜ್ವಲತೆಯನ್ನು ಹೆಚ್ಚಿಸಿ ಕೊಳ್ಳುತ್ತಿರಬೇಕು; ಮಂದಿ ಕಿಕ್ಕಿರಿದು ಚಪ್ಪಾಳೆ ಹೊಡೆಯುತ್ತಾ ನೋಡುತ್ತಿರುವ ಗಣೆಡೊಂಬನ ಕೊರಳ ಕವಡೆಯಾಗಲಿಕ್ಕಲ್ಲ; ರಾಜರಾಜೇಶ್ವರಿಯ ಕೀರಿಟದಲ್ಲಿ ದೇವ ಮಣಿಯಾಗುವುದಕ್ಕೆ.

ನಾನು ನಿರ್ದೇಶಿಸಿ ಮಾತನಾಡುತ್ತಿರುವ ಗೌರವಮತಿಯ ವಿದ್ಯಾರ್ಥಿಗೆ ಪರೀಕ್ಷೇಗಳಲ್ಲಿ ತೇರ್ಗಡೆ ಹೊಂದುವುದು ಕಷ್ಟವಲ್ಲ. ಆತನು ಸಹಜವಾಗಿ ಇತರರಿಗಿಂತಲೂ ಪ್ರತಿಭಾಶಾಲಿಯೂ ಮೇಧಾವಿಯೂ ಆಗಿರುವುದರಿಂದ ಸಾಮಾನ್ಯ ವಿದ್ಯಾರ್ಥಿಗಳಿಗಾಗಿ ವಿದ್ಯಾಸಂಸ್ಥೆಗಳು ಒಡ್ಡುವ ಒರೆಗಲ್ಲಿನಲ್ಲಿ ಆತನ ಸತ್ತ್ವದ ಗೆರೆ ಉಜ್ವಲತರವಾಗಿ ಮಿಂಚುತ್ತದೆ. ಆದರ ಪರಿಣಾಮವಾಗಿ ಅವನಿಗೆ ಶಹಭಾಸುಗಳೂ ಕರಗತವಾಗಬಹುದು. ತಾನು ಲೋಕವಂದ್ಯವಾದ ಉತ್ತಮಾದರ್ಶದ ಗಿರಿ ಶಿಖರಕ್ಕೇರಿದೆನೆಂದು ಭಾವಿಸಿ ಹಿಗ್ಗಬಹುದು. ಹಾಗೇನಾದರೂ ಆದರೆ ಅದು ಶೋಚನೀಯವೆ ಸರಿ. ರತ್ನದ ಗಣಿಗೆ ಇಳಿಯುವವನು ದಾರಿಯಲ್ಲಿ ಕಂಡುಬಂದ ಕಾಗೆ ಬಂಗಾರದ ಹಳುಕುಗಳಿಗೆ ಮೋಹಿತನಾಗಿ, ಅವುಗಳನ್ನು ಮೂಟೆ ಕಟ್ಟಿ ಹೊತ್ತು ಹಿಂತಿರುಗಿದಂತಾಗುತ್ತದೆ.

ಆದ್ದರಿಂದ ಪ್ರತಿಭಾಶಾಲಿಯಾದ ವಿದ್ಯಾರ್ಥಿಯ ಲಕ್ಷ್ಯ ಅಂತರಿಕ್ಷೋನ್ನತ ವಾಗಿರಬೇಕು; ವಿಶ್ವವ್ಯಾಪಿಯಾಗುವ ಅನಂತ ಸಾಹಸದಲಿ  ನಿರಂತರ ನಿರತವಾಗಿರಬೇಕು. ಅವನ ಮತಿ ಪರೀಕ್ಷೇಗಳಲ್ಲಿ ತೇರ್ಗಡೆ ಹೊಂದುವ ಮತ್ತು ಪಾರಿತೋಷಕಗಳನ್ನು ಪಡೆಯುವ ಅಲ್ಪತೃಪ್ತಿಯ ಉಸುಬಿನಲ್ಲಿ ಹೂತು ನಡೆಗೆಡಬಾರದು. ಪಠ್ಯ ಪುಸ್ತಕಗಳ ಮಿತವಲಯದಲ್ಲಿ ಸೆರೆಯಾಗಿರದೆ ವಾಙ್ಮಯ ಜಗತ್ತಿನ ವಿಶ್ವವಿಶಾಲತೆಯಲ್ಲಿ ರಸಯಾತ್ರಿಯಾಗಬೇಕು. ಅಲ್ಲಿಯ ಮಹದ್ ವ್ಯಕ್ತಿಗಳೊಡನೆ ಸ್ನೇಹ ಬೆಳಸಬೇಕು; ಅವರೊಡನೆ ಹೋರಾಡಬೇಕು; ಅವರಿಗೆ ಶರಣು  ಹೋಗಬೇಕು; ಪೂಜೆ ನಮಸ್ಕಾರಗಳಿಂದಲೆ ಅವರನ್ನು ಗೆದ್ದು,, ಅವರ ಐಶ್ವರ್ಯವನ್ನು ದೋಚಬೇಕು; ಅವರ ಗರಡಿಯಲ್ಲಿ ಅವರೊಡನೆಯೆ ಸಾಧನೆಮಾಡಿ ಜಗಜಟ್ಟಿಗಳಾಗಬೇಕು; ಅಲ್ಲಿಯ ಗರಡಿಯಾಚಾರ್ಯರಲ್ಲಿ ಕೃಪಣತೆಯಿಲ್ಲ, ಕರುಬಿಲ್ಲ. ತೆರೆದ ಮನೆಯಂತೆ, ಬಿಚ್ಚಿದ ಕೈಯಂತೆ, ಅಕ್ಷಯ ಪಾತ್ರೆಯಂತೆ ಅವರು ಉದಾರಿಗಳು. ಅಂತಹ ಮಹಾಮಹಿಮರೊಡನೆ ವಿಹರಿಸಲು ಶಕ್ತಿಯನ್ನು ಅಸಕ್ತಿಯನ್ನೂ ಪಡೆದ ವಿದ್ಯಾರ್ದಿ ಅಗಸ್ತ್ಯಭ್ರಾತನ ಉಪನ್ಯಾಸಕ್ಕೆಂದು , ದೇವದತ್ತನ ಕ್ರೀಡಾ ಕಸರತ್ತಿಗೆಂದು, ಸಿನಿಮಾತಾರೆಗಳ ಕೋಲಾಹಲಪೂಜೆಗೆಂದು ಹೊತ್ತು ಕಳೆದರೆ ಮುಖ ಮುಚಿಕೊಳ್ಳವಂತಾಗುತ್ತದೆ, ಕಣ್ನೀರಿಡುವಂತಾಗುತ್ತದೆ.

ಉಳದೆ, ಬಿತ್ತದೆ, ಬೆಳೆಯದೆ ಪೈರು ಕೊಯ್ಲಿಗೆ ಬರುವುದಿಲ್ಲ. ಬೆವರು ಸುರಿಸದೆ ಸಿರಿ ಕೈ ಸೇರುವುದಿಲ್ಲ. ವಿದೇಯ ಲೋಕದಲ್ಲಿ ಧನಿಕರಾಗಲು ಸುಲಭೋಪಾಯಗಳಿಲ್ಲ. ಅಲ್ಲಿ ಯಾರೂ ವಂಚನೆಯಿಂದ ಸಂಪತ್ತು ಗಳಿಸಲಾರರು. ಅಲ್ಲಿ ದುಡಿಮೆಯಂತೆ ಪಡಿ. ಅಲ್ಲಿ ಕಳ್ಳರುಜುಗಳಿಗೂ ಸುಳ್ಳುಪತ್ರಗಳಿಗೂ ಚಿರಂಜೀವವಿಲ್ಲ. ಅಲ್ಲಿ ಯಾವನೂ ಬರಿಯ ದಳ್ಳಾಳಿತನ ಮಾಡಿ ಶ್ರೀಮಂತನಾಗಲಾರನು. ಅದು, ವಿರೋಧಾಭಾಸವಾಗಿ ಕಂಡು ಬಂದರೂ , ಸಮತವಾದ ಚಕ್ರಾಧಿಪತ್ಯ! ದುಡಿಯುವವರಿಗೆ ಮಾತ್ರ ಅಲ್ಲಿಗೆ ಪ್ರವೇಶ. ಆದರೆ ಯಾರೂ ಬೇಕಾದರೂ ಅಲ್ಲಿಗೆ ಹೋಗಿ ದುಡಿಯಬಹುದು. ಕೂಲಿಯಾಳಾಗದೆ ಅಲ್ಲಿಗೆ ಹೋಗಲಿಲ್ಲ; ಹೊಕ್ಕ ಮೇಲೆ ಅಲ್ಲಿ ಎಲ್ಲರೂ ಚಕ್ರವರ್ತಿಗಳೆ! ಅಷ್ಟೆ ಅಲ್ಲ; ಚಕ್ರವರ್ತಿಯಲ್ಲದವನಿಗೆ ಅಲ್ಲಿ ಕೂತುಕೊಳ್ಳಲೂ ಸ್ಥಳವಿಲ್ಲ; ಏಕೆಂದರೆ ಅಲ್ಲಿ ಸಿಂಹಾಸನಗಳಲ್ಲದೆ ಬೇರೆ ಪೀಠಗಳಿಲ್ಲ.

ಸಿಂಹಾಸನದ ವರ್ಣನೆಯನ್ನು ಕೇಳಿದರೆ ಯಾರು ತಾನೆ ಅದನ್ನೇರಲು ಕಾತರರಾಗುವುದಿಲ್ಲ? ಆ ಆನಂದಸಾಮ್ರಾಜ್ಯದ ಸಾಮ್ರಾಟನಾಗಲು ಯಾರು ತಾನೆ ಬಯಸುವುದಿಲ್ಲ? ಆದರೆ ಆ ಸಿಂಹಾಸನ ದುರ್ಗಮಪರ್ವತಾಗ್ರದಲ್ಲಿರುವ ದುರ್ಗದ ಒಳಗಡೆ ಭದ್ರವಾಗಿದೆ. ಇಷ್ಟ, ಧೈರ್ಯ, ಶ್ರಮ, ಸಾಹಸ ಮತ್ತು ತ್ಯಾಗಗಳಿಲ್ಲದೆ ಕೋಟೆಯ ಬಾಗಿಲು ತೆರೆಯುವುದಿಲ್ಲ; ಗೊಡೆ ಬಿರಿಯುವುದಿಲ್ಲ; ಸಿಂಹಾಸನಕ್ಕೆ ಕೈವಶವಾಗುವುದಿಲ್ಲ. ಉದ್ದಾಮ ಕಾವ್ಯಗಳ ರಸರಾಷ್ಟ್ರಗಳನ್ನು ಸ್ವಾಧೀನ ಮಾಡಿಕೊಳ್ಳುವುದು ದುರ್ಗಜಯಕ್ಕಿಂತಲೂ ಹೆಚ್ಚೇನೂ ಸುಲಭತರವಲ್ಲ.

ಪ್ರೀತಿಯ ಪುಸ್ತಕಗಳನ್ನು ಕೊಂಡುಕೊಳ್ಳುವುದಕ್ಕಾಗಿ ಹಸಿದಿರಬೇಕಾಗುತ್ತದೆ; ಅವುಗಳನ್ನೋದಿ ಜಯಿಸುವುದಕ್ಕಾಗಿ ನಿದ್ದೆಗೆಡಬೇಕಾಗುತ್ತದೆ; ಬೆವರು ಸುರಿಸಬೇಕಾಗುತ್ತದೆ; ಎಣ್ಣೆ ಉರಿಸಬೇಕಾಗುತ್ತದೆ; ಎಷ್ಟೋ ಮನೋರಂಜನೆಗಳನ್ನೂ ತ್ಯಾಗಮಾಡಿ ಅಧ್ಯಯನ ತಪಸ್ಸಿನಲ್ಲಿ ಮಗ್ನವಾಗಬೇಕಾಗುತ್ತದೆ. ವ್ಯಾಕರಣದ ನೀರಸತೆಯನ್ನು ಸಹಿಸಿ, ನಿಘಂಟುವಿನ ಹೇರಡವಿಯಲ್ಲಿ ಬೇಸರಗೊಳ್ಳದೆ ತೊಳಲಿ, ಟೀಕೆ ಟಿಪ್ಪಣಿ ವಿಮರ್ಶೆ ವ್ಯಾಕ್ಯಾನಗಳನ್ನು ತಡಕಿ ಹುಡುಕಿ ಸಂಗ್ರಹಿಸಬೇಕಾಗುತ್ತದೆ. ಇಷ್ಟನ್ನೂ ಹಲ್ಲು ಕಚ್ಚಿಕೊಂಡು ದೃಢಮನಸ್ಸಿನಿಂದ ಸಾಧಿಸುವ ಮತಿಗೌರವವಿಲ್ಲದಿದ್ದರೆ, ಸಾಮಾನ್ಯ ಬುದ್ಧಿಯ ಮಾತಂತಿರಲಿ, ಪ್ರತಿಭೆಯೂ ಕೂಡ, ಮರಳುಗಾಡಿನಲ್ಲಿ ಅರತು ಹೋಗುವ ಮಹಾನದಿಯಂತೆ, ಕೃಷಿಯಿಲ್ಲದೆ ಕೃಶವಾಗಿ ವ್ಯರ್ಥವಾಗುತ್ತದೆ.

ಇದುವರೆಗೆ ನಾನುನೀರಸವಾದ ಗದ್ಯದಲ್ಲಿ ಹೇಳಲು ಪ್ರಯತ್ನಿಸುತ್ತಿದ್ದುದನ್ನೆ ರಸಪೂರ್ಣವಾದ ಕಾವ್ಯವಾಣಿಯಲ್ಲಿ ಸಂಗ್ರಹವಾಗಿ ಹೇಳಿದ್ದಾನೆ ಇಂಗ್ಲಿಷ್ ಕವಿ ಮ್ಯಾತ್ಯೂ ಆರ್ನಾಲ್ಡ್. ‘ರಗ್ಬಿ ಚಾಪೆಲ್ ‘ ಎಂಬ ತನ್ನ ಭವ್ಯ ಕವನದಲ್ಲಿ ಗೌರವಮತಿಯ ಭೀಷಣತಪಸ್ಸಾಧನೆಯನ್ನು ಅನನುಕರಣೀಯ ಶೈಲಿಯಲ್ಲಿ ವರ್ಣಿಸಿದ್ದಾನೆ. ಜಗತ್ತಿನ ಸಾಹಿತ್ಯದ ಅಪಾರವಾದ ಚಿತ್ರಶಾಲೆಯಲ್ಲಿ ಇಂತಹ ಭೀಷ್ಮಾದ್ಭುತ ಚಿತ್ರಗಳು ಅಪೂರ್ವ:

What is the course of the life
Of mortal men on the earth?
Most men eddy about
Here and there ― eat and drink,
Chatter and love and hate,
Gather and squander, are raised
Aloft, are hurled in the dust,
Striving blindly, achieving
Nothing: and then they die ―
Perish! and no one asks
Who or what they have been,
More than he asks what waves,
In the moonlit solitudes mild
Of the midmost Ocean, have swell’d,
Foam’d for a moment, and gone,
And there are some, whom a thirst
Ardent, undquenchable, fires,
Not with the crowd to be spent ―
Not without aim to go round
In an eddy of purposeless dust,
Effort unmeaning and vain.
Ah yes, some of us strive
Not without action to die
Fruitless, but something to snatch
From dull oblivion, nor all
Glut the devouring grave!
We, we have chosen our path ―
Path to a clear-purposed goal,
Path of advance! ― but it lcads
A long, steep journey, through sunk
Gorges, o’er mountains in snow!
Cheerful, with friends, we set forth ―
Then, on the height, comes the storm!
Thunder crashes from rock
To rock, the cataracts reply;
Lightnings dazzle our eyes:
Roaring torrents have breach’d
The track ― the stream-bed descends
In the place where the wayfarer once
planted his footstep ― the spray
Boils o’er its borders! aloft,
The unseen snow-beds dislodge
Their hanging ruin; ― alas,
Havoc is made in our train!
Friends who set forth at our side
Falter, are lost in the storm!
We, we only, are left.
With frowning foreheads, with lips
Sternly compress’d, we strain on,
On ― and at nightfall, at last,
Come to the end of our way,
To the lonely inn’mid the rocks;
Where the gaunt and taciturn host
Stands on the threshold, the wind
Shaking his thin white hairs ―
Holds his lantern to scan
Our storm-beat figures, and asks:
Whom in our party we bring?
Whom we have left in the snow?
Sadly we answer: we bring
Only ourselves! we lost
Sight of the rest in the storm!
Hardly ourselves we fought through,
Stripp’d without friends, as we are!
Friends, companions, and train
The avalanche swept from out side.

ಗಿರಿನೆತ್ತಿಯ ಮಂದಿರಕ್ಕೆ, ಆ ನರೆಗೂದಲಿನ ಮಹರ್ಷಿಯ ಬಳಿಗೆ, ಎಲ್ಲರೂ ಬರುವುದಿಲ್ಲ. ಸಾಹಸಿಗಳಲ್ಲಿ ಅನೇಕರು ಮಳೆಗಾಳಿಗೆ ಸಿಕ್ಕಿ ಬಟ್ಟೆಗೆಡುತ್ತಾರೆ. ಹೊರಡುವ ಗೆಳೆಯರೆಲ್ಲರೂ ಜೋತೆಗೆ ಬಂದರೆ ಸಂತೋಷ. ಅವರು ಬರದಿದ್ದರೆ, ಬರಲೊಲ್ಲದಿದ್ದರೆ, ಬರಲಾರದಿದ್ದರೆ ನೀವಾದರೂ ಮುಂದುವರಿಯಬೇಕಾಗುತ್ತದೆ. ಭಯಂಕರವಾದರೂ ಚಿಂತೆಯಿಲ್ಲ. ಏಕಾಂಗಿಯಾದರೂ ಹೆದರದೆ ಹಿಂಜರಿಯದೆ ಗಿರಿಶಿಖರಕ್ಕೇರಿ ಗುರಿಮುಟ್ಟಿದರೆ ನಿಮಗೂ ಗುರುದರ್ಶನವಾಗುತ್ತದೆ. ಇತರರಿಗೂ ಮಾರ್ಗದರ್ಶನ ಕಾರಿಯಾದರೂ ಆಗಬಹುದು, ನಿಮ್ಮ ಜೀವನಯಾತ್ರೆ.