ಅಪ್ಪನ ಬದುಕಿನ ಇಣುಕುನೋಟ

ಅಪ್ಪನ ಬಗ್ಗೆ ಅಂಜಿಕೆ ಮತ್ತು ಗೌರವ: ನನ್ನನ್ನು ಶಾಲೆಗೆ ಸೇರಿಸಿದ್ದ ಆರಂಭದ ದಿನಗಳು. ಶಾಲೆಗೆ ಹೋಗೋದೇ ಇಲ್ಲ ಎಂದೇನೂ ನಾನು ಚಂಡಿ ಹಿಡಿಯುತ್ತಿರಲಿಲ್ಲ. ಆದರೆ ಶಾಲೆಗೆ ಹೋಗುವುದೆಂದರೆ ನನಗೆ ಇಷ್ಟವಿಲ್ಲ. ಶಾಲೆಗೆ ನನ್ನನ್ನು ಕರೆದುಕೊಂಡು ಹೋಗುವುದೆಂದರೆ ಭಾಸ್ಕರಣ್ಣನಿಗೆ ಬಲು ಕಷ್ಟ.ಒಂದು ದಿನ ಬೆಳಿಗ್ಗೆ ಸಾಬೀತಿನಲ್ಲಿ ಶಾಲೆಗೆ ಹೋಗಿ ಬಂದಿದ್ದೆ. ಮಧ್ಯಾಹ್ನ ಮನೆಗೆ ಬಂದು ಊಟ ಮುಗಿಸಿ ಮತ್ತೆ ಶಾಲೆಗೆ ಹೊರಟಿದ್ದೆ. ಸುಮಾರು ಮುಕ್ಕಾಲು ಭಾಗ ಬಂದಿದ್ದಾಗಿತ್ತು. ಎಸ್.ಎ.ಟಿ. ಹೈಸ್ಕೂಲಿನೆದುರು ಬಂದಾಗ ಮಾರ್ಗ ಮಧ್ಯದಲ್ಲಿ ಬಂಡೆಕಲ್ಲು (ಆಗ ಶಾಲೆ ಇದ್ದದ್ದು ವನದಲ್ಲಿ). ಆ ಬಂಡೆ ಮೇಲೆ ನಡೆದೇ ಹೋಗಬೇಕಿತ್ತು. ನನ್ನ ಕಾಲಲ್ಲಿ ಚಪ್ಪಲಿ ಇರಲಿಲ್ಲ. ಬಂಡೆ ಮೇಲೆ ಹೆಜ್ಜೆ ಇಟ್ಟು ನಡೆದೆ. ಚುರುಕ್ಕೆಂದಿತು. ಇನ್ನು ಹೇಗಪ್ಪಾ ಶಾಲೆಗೆ ಹೋಗುವುದು? ಸಾಧ್ಯವೇ ಇಲ್ಲವೆಂದು ತೀರ್ಮಾನಿಸಿದೆ. ಹಿಂದಕ್ಕೇ ತಿರುಗಿ ಅದೇ ಬಂಡೆ ಮೇಲಿನಿಂದಾಗಿ ಮನೆಗೆ ಬಂದೆ. ಇನ್ನು ಸ್ವಲ್ಪವೇ ದೂರ ಅಲ್ಲವಾ? ಶಾಲೆಗೆ ಬಾ ಅಂತ ಭಾಸ್ಕರಣ್ಣ ಎಷ್ಟು ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ವಾಪಾಸು ಬಂದಿದ್ದೆ. ಮನೆ ಹತ್ತಿರ ಬಂದು ನೋಡುತ್ತೇನೆ : ಎದುರಿನ ಬಾಗಿಲು ತೆರೆದಿದೆ. ಮಧ್ಯಾಹ್ನ ೨ ಗಂಟೆಯ ಹೊತ್ತು. ಮನೆ ಹೊರಗಿನಿಂದಲೇ ಮೆಲ್ಲಗೆ ಹೋಗಿ, ಊಟದ ಮನೆಯ ಕಿಟಕಿಯಿಂದ ಇಣುಕಿ ನೋಡಿದೆ. ಅಲ್ಲಿ ಅಪ್ಪ ಊಟಕ್ಕೆ ಕುಳಿತಿದ್ದರು. ಎಲ್ಲಿಯಾದರೂ ನೋಡಿಬಿಟ್ಟರೆ ಕೇಳಿಯೇ ಕೇಳುತ್ತಾರೆ ‘‘ಎಂತ ಮಾಣಿ? ಶಾಲೆಗೆ ಚಕ್ಕರಾ?’’ ಅಂತ ಅಷ್ಟೇ. ಬೇರೇನೂ ಇಲ್ಲ. ಆದರೆ ಸ್ವಲ್ಪ ಜೋರಿನ ಸ್ವರದಲ್ಲಿ ಕೇಳುತ್ತಾರೆ. ತಕ್ಷಣವೇ ಅಲ್ಲಿಂದ ಓಟಕಿತ್ತೆ. ಅದೇ ಬಂಡೆಕಲ್ಲಿನ ಮೇಲಿನಿಂದಾಗಿ ಶಾಲೆಗೆ ಹೋಗಿ ಕ್ಲಾಸೊಳಗೆ ತೂರಿಕೊಂಡೆ. ಅಪ್ಪ ಅಂದರೆ ನಾವು ಮಕ್ಕಳಿಗೆಲ್ಲಾ ಅಷ್ಟು ಅಂಜಿಕೆ! ಅಷ್ಟು ಗೌರವ ಕೂಡಾ! ಆದರೆ ತಂದೆಯವರ ರಾಜಕೀಯ ದೃಷ್ಟಿಕೋನಕ್ಕೆ ನಾವೆಂದೂ ವಿರೋಧವಾಗಿರಲಿಲ್ಲ. ಮಂಜೇಶ್ವರದಲ್ಲಿದ್ದಷ್ಟು ಕಾಲ ಕಮ್ಯೂನಿಸ್ಟ್ ಪಕ್ಷದ ಕೆಲಸ ಕಾರ್ಯಗಳಿಗೆ ಸಹಕಾರ ನೀಡಿ, ಅದರ ಯುವಜನ ಸಂಘಟನೆಯಾದ ಎ.ಐ.ವೈ.ಎಫ್. ಪದಾದಿಕಾರಿಯಾಗಿ ದುಡಿದಿದ್ದೆ.

ಸೊನ್ನೆ ಮಾರ್ಕ್: ನಾನಾಗ ಓದುತ್ತಿದ್ದುದು ೮ನೇ ಕ್ಲಾಸಿನಲ್ಲಿ. ನಮ್ಮ ಹೈಸ್ಕೂಲಿನಲ್ಲಿ ಪ್ರತಿ ವರ್ಷದಂತೆ ಆ ವರ್ಷವೂ ಯುವಜನೋತ್ಸವ ಕಾರ್ಯಕ್ರಮವಿತ್ತು. ನಮ್ಮ ಕ್ಲಾಸ್ ಮಾನಿಟರ್ ವೈಕುಂಠನಿಗೆ ಛಾಂಪಿಯನ್ ಟ್ರೋಪಿ ದಕ್ಕಿಸಿಕೊಳ್ಳಲೇಬೇಕು ಎಂಬ ಹಠ. ಅದಕ್ಕಾಗಿ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸುವ ನಿರ್ಧಾರ. ಆ ಪ್ರಕಾರ ಎಲ್ಲದರಲ್ಲೂ ಭಾಗವಹಿಸಿದ್ದೆವು. ೧೦ನೇ ಕ್ಲಾಸಿನವರಿಗಿಂತ ಕೇವಲ ಒಂದು ಪಾಯಿಂಟಿಗೆ ಹಿಂದೆ ಬಿದ್ದಿದ್ದೆವು. ಆಗ ನಮ್ಮದು ಇನ್ನೂ ಒಂದು ಐಟಂ ಬಾಕಿ ಇತ್ತು. ನಮ್ಮದೇ ಕೊನೇ ಐಟಂ – ಮೂಕ ದೃಶ್ಯ.ಎಷ್ಟೇ ತಲೆ ಕೆರೆದುಕೊಂಡರೂ ಯಾವ ಐಟಂ ಮಾಡುವುದೆಂದು ಹೊಳೆಯಲಿಲ್ಲ. ಕೊನೇ ಗಳಿಗೆಯಲ್ಲಿ ಆರು ಜನ ಹೆಗಲಿಗೆ ಹೆಗಲು ಕೊಟ್ಟು ನಿಂತೆವು. ಅವರ ಮೇಲೆ ನಾಲ್ಕು ಜನ. ಆ ನಾಲ್ವರ ಮೇಲೆ ಮತ್ತಿಬ್ಬರು, ಒಬ್ಬರಿಗೊಬ್ಬರು ಎದುರು ಬದುರಾಗಿ ಚೂರಿ ಹಿಡಿದುಕೊಂಡು ನಿಂತೆವು. ಏನಿದರ ಅರ್ಥ ನಮಗೆ ಗೊತ್ತಿಲ್ಲ. ಆ ದೇವನೇ ಬಲ್ಲ!ಆದರೆ ನಮಗೆಲ್ಲ ಒಂದು ಮೊಂಡು ಧೈರ್ಯ. ಹೇಗೂ ಅಪ್ಪನೇ (ಡಾ. ಸುಬ್ಬ ರಾವ್) ತೀರ್ಪುಗಾರರು. ಎಷ್ಟಾದರೂ ಅಪ್ಪ! ಖಂಡಿತ ನನ್ನನ್ನು ಬಿಟ್ಟು ಹಾಕಲಾರರು. ಅತ್ಯದಿಕ ಮಾರ್ಕನ್ನೇ ಕೊಟ್ಟಾರು. ಇಲ್ಲವಾದರೆ ಐದು ಮಾರ್ಕ್, ಕನಿಷ್ಠ ಪಕ್ಷ ಎರಡೇ ಎರಡು ಮಾರ್ಕ್ ಆದರೂ ಕೊಡದಿರಲಾರರು! ಬಾಲ್ಯಸಹಜ ಮುಗ್ಧತೆಯಿಂದ ನಾನೂ ಸೇರಿದಂತೆ ನಾವೆಲ್ಲ ‘ನಾವೇ ಛಾಂಪಿಯನ್’ ಎಂದೇ ಮೆರೆದಿದ್ದೆವು.ಕೊನೆಗೂ ನಮ್ಮ ಕನಸು ನನಸಾಗಲೇ ಇಲ್ಲ. ಕಾರಣ ನನ್ನ ಪೂಜ್ಯ ತಂದೆಯವರು ಕೊಟ್ಟ ಮಾರ್ಕು ಎಷ್ಟು ಗೊತ್ತಾ? ಬರೇ ಸೊನ್ನೆ! ಅದೂ ಒಂದು ದೊಡ್ಡ ಸೊನ್ನೆ! ಹಾಗೆಂದು ನಿಜವಾದ ಪ್ರತಿಭೆ ಮೆರೆದಾಗ ಕೇವಲ ಮಗನೆಂಬ ಕಾರಣದಿಂದ, ಅದನ್ನು ಗುರುತಿಸುವುದೇ ಇಲ್ಲವೆಂಬಷ್ಟು ಕಠಿಣ ಹೃದಯ ಅವರದಲ್ಲ. ಅಂದೊಮ್ಮೆ ‘ಭಕ್ತ ಪುರಂದರ ದಾಸ’ರ ಪಾತ್ರ ಮಾಡಿದಾಗ ಎಲ್ಲರೂ ಮೆಚ್ಚಿದಾಗ ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ದಂಏಕ್‌ದಂ ತ್ಯಾಗ!: ಅಪ್ಪ ಇದ್ದದ್ದು ಕೊನೇವರೆಗೂ ಬಾಡಿಗೆ ಮನೆಯೊಂದರಲ್ಲಿ- ಶ್ರೀಮತ್ ಅನಂತೇಶ್ವರ ದೇವಸ್ಥಾನಕ್ಕೆ ಸೇರಿದ ಕಲ್ಯಾಣ ಮಂಟಪದ ಎದುರು. ಅದರ ಧಣಿ ಭಕ್ತರ ಮಠದ ಭಕ್ತರು.ಭಕ್ತರ ಮಠದ ಮಾಧವ ಭಕ್ತರು, ವಾಮನ ಭಕ್ತರು ಮತ್ತು ಅನಂತ ಭಕ್ತರು ಇವರೆಲ್ಲಾ ಧಣಿಗಳಾಗಿದ್ದರೇನೂ ನಿಜ. ಅಪ್ಪ ಕಮ್ಯೂನಿಸ್ಟರಾಗಿದ್ದರೂ ಅವರೊಳಗಿನ ಸ್ನೇಹಕ್ಕೇನೂ ಚ್ಯುತಿ ಬಂದಿರಲಿಲ್ಲ. ಅದರಲ್ಲೂ ವಾಮನ ಭಕ್ತರು ಅಪ್ಪನಿಗೆ ಅತೀ ಸನಿಹದ ಸ್ನೇಹಿತರಾಗಿದ್ದರು.ಭಕ್ತರ ಮನೆಯವರಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹಳ ಆಸಕ್ತಿ ಇದ್ದುದರಿಂದ ಅಪ್ಪನಿಗೂ ಅವರಿಗೂ ಸಮಾನ ಅಭಿರುಚಿಗಳಿರುತ್ತಿದ್ದವು. ಇದರಿಂದಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಂಟಿಯಾಗೇ ನಡೆಸಿಕೊಡುತ್ತಿದ್ದರು.ವಾಮನ ಭಕ್ತರು ‘ಚೈನ್ ಸ್ಮೋಕರ್’ ಆಗಿದ್ದರು. ಅಪ್ಪನಿಗೂ ಸಿಗರೇಟು ಸೇದುವುದರಲ್ಲಿ ಸಮಾನಾಬಿರುಚಿ. ಸಿಗರೇಟಿಲ್ಲದೆ ದಿನ ಕಳೆಯುವುದೇ? ಆ ಬಗ್ಗೆ ಊಹಿಸಿಕೊಳ್ಳುವುದು ಸಹ ಅವರಿಗೆ ಅಸಾಧ್ಯವಾಗಿತ್ತು. ಆದರೆ ಒಂದು ದುರ್ದಿನ ವಾಮನ ಭಕ್ತರು ಹೃದಯಾಘಾತದಿಂದ ನಿಧನರಾದರು.ಆತ್ಮೀಯ ಸ್ನೇಹಿತನ ಅಗಲುವಿಕೆಯ ಬಳಿಕ ಒಂಟಿಯಾಗಿ ಸಿಗರೇಟು ಸೇದುವುದು ಅಸಾಧ್ಯವೆಂದು ತೋರಿರಬೇಕು. ವಾಮನ ಭಕ್ತರ ಶರೀರ ಬೆಂಕಿಯಲ್ಲಿ ವಿಲೀನಗೊಳ್ಳುತ್ತಿದ್ದಂತೆ ‘ಚೈನ್ ಸ್ಮೋಕರ್’ ಆಗಿದ್ದ ಅಪ್ಪ ಸಿಗರೇಟ್ ಪ್ಯಾಕನ್ನೇ ದಹನ ಮಾಡಿ ಸಿಗರೇಟ್ ದಂ ಎಳೆಯುವುದನ್ನು ‘ಏಕ್‌ದಂ’ ಬಿಟ್ಟರು; ಮತ್ತೆ ಸಿಗರೇಟು ಸೇದಿದ್ದು ತೀರಾ ಅಪರೂಪಕ್ಕೆ. ಸುದೀರ್ಘ ರೈಲು ಯಾತ್ರೆಗಳಲ್ಲಿ ಮಾತ್ರ (ರಾಜ್ಯಸಭಾ ಸದಸ್ಯರಾದಾಗ, ಸಚಿವರಾದಾಗ).

ತತ್ತ್‌ದ್ ಪಾತೆರ್‌ಡ…!: ನಮ್ಮ ಮನೆ ಎದುರಿನ ಚಾವಡಿಯಲ್ಲಿ ನಾವು ಮಕ್ಕಳೆಲ್ಲಾ ಸೇರಿ ದಿನಾ ಪಟ್ಟಾಂಗ ನಡೆಸುತ್ತಿದ್ದೆವು. ಅಪ್ಪ ಬೆಳಿಗ್ಗೆ ವೈದ್ಯ ವೃತ್ತಿ ಪ್ರಾಕ್ಟೀಸು ಮಾಡಿ ಸಂಜೆ ಹೊತ್ತಲ್ಲಿ ಹೆಚ್ಚಾಗಿ ಯಾವುದಾದರೂ ಪಾರ್ಟಿ ಮೀಟಿಂಗಿಗೆ ಹೋಗಿರುತ್ತಿದ್ದರು. ಹಾಗೆ ಹೋದರೆ ವಾಪಾಸಾಗುವುದು ಹೆಚ್ಚು ಕಮ್ಮಿ ಒಂಬತ್ತು ಗಂಟೆಗೆ; ದಿನಾಲು ಅಷ್ಟರವರೆಗೆ ನಮ್ಮ ಪಟ್ಟಾಂಗ ಅವ್ಯಾಹತವಾಗಿ ಸಾಗುತ್ತಿತ್ತು. ಅವರು ಭಕ್ತರ ಮನೆ ಸಮೀಪಕ್ಕೆ ಬರುತ್ತಿದ್ದಂತೆ ಅವರ ಏರುಧ್ವನಿಯ ಮಾತು ಕೇಳಿ ಬರುತ್ತಿದ್ದುದರಿಂದ ಇದ್ದಕ್ಕಿದ್ದಂತೆ ನಮ್ಮ ಗಲಾಟೆಗೆ ಪೂರ್ಣವಿರಾಮ ಬೀಳುತ್ತಿತ್ತು.ಅದೊಂದು ದಿನ ಎಂದಿನಂತೆ ‘ಪಟ್ಟಾಂಗ’ ನಡೆದಿತ್ತು. ಆ ದಿನ ಅಪ್ಪ ಹೋದದ್ದು ಅಲ್ಲೇ ಮನೆ ಎದುರಿನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ದಿನೇಶ್ ಬೀಡಿ ಸೊಸೈಟಿಯ ಕಚೇರಿಗೆ. ಅಲ್ಲಿ ಮೀಟಿಂಗು ನಡೆಯುತ್ತಿತ್ತು. ಬೀಡಿ ಯೂನಿಯನಿನ ಮುಖಂಡರು ಸೇರಿದ್ದರು. ಹೇಗೂ ೯ ಗಂಟೆಯವರೆಗೆ ಮೀಟಿಂಗ್ ಮುಗಿಯಲಿಕ್ಕೂ ಇಲ್ಲ. ನಮ್ಮ ಪಟ್ಟಾಂಗಕ್ಕೂ ತೊಂದರೆ ಇರಲಿಲ್ಲ.ಇದ್ದಕ್ಕಿದ್ದಂತೆ ದಿನೇಶ್ ಬೀಡಿ ಕಚೇರಿ ಭಾಗದಿಂದ ಜೋರು ಜೋರು ಮಾತು ಕೇಳಿಬಂತು. ಆಲಿಸಿದಾಗ, ನೇರವಾಗಿ ನನ್ನ ಅಪ್ಪನನ್ನೇ ಉದ್ದೇಶಿಸಿ ವಾಗ್ವಾದ ನಡೆಯುತ್ತಿರುವುದು ಕೇಳಿಬಂತು. ತತ್ತ್‌ದ್ ಪಾತೆರ್‌ಡಾ…! ಎಂದು ಯಾರೋ ತಂದೆಯವರನ್ನು ದಬಾಯಿಸುತ್ತಿದ್ದರು. ಇದ್ದಕ್ಕಿದ್ದಂತೆ ಎಲ್ಲಾ ತಣ್ಣಗಾಯಿತು. ಮೀಟಿಂಗೂ ಬರ್ಖಾಸ್ತಾದಂತೆ ತೋರಿತು. ಅಪ್ಪ ಮನೆಗೆ ಬಂದರು. ‘‘ಎಂತ ಅಪ್ಪ? ಯಾಕೆ ಅವರು ಜೋರು ಮಾತಾಡಿದ್ದು?’’ ಎಂದು ಕುತೂಹಲದಿಂದ ಕೇಳಿದೆವು.‘‘ಇಲ್ಲ ಅವರದ್ದೇನೂ ತಪ್ಪಿಲ್ಲ. ನಾನೇ ಸ್ವಲ್ಪ ತಪ್ಪಿ ಮಾತಾಡಿದೆ’’ ಎಂದು ಒಂದಿಷ್ಟು ಅಳುಕಿಲ್ಲದೆ ತಮ್ಮ ತಪ್ಪನ್ನು ಮಕ್ಕಳ ಎದುರೇ ಒಪ್ಪಿಕೊಂಡುಬಿಟ್ಟಿದ್ದರು. ಸಭೆಯಲ್ಲೂ ಕ್ಷಮೆ ಯಾಚಿಸಿದ್ದನ್ನು ತಿಳಿಸಿದರು. ಆಗಲೇ ನಮ್ಮ ನಂಬಿಕೆ ಇನ್ನಷ್ಟು ಬಲವಾಗಿದ್ದು : ತಪ್ಪು ಮಾಡಿದರೆ ಒಂದಿಷ್ಟೂ ಅಳುಕಿಲ್ಲದೆ ದರ್ಪ ಬಿಟ್ಟು ತಕ್ಷಣವೇ ಒಪ್ಪಿಕೊಳ್ಳುವುದೇ ಸಜ್ಜನಿಕೆ ಎಂದು.

ಅಜಿತ್‌ಕುಮಾರ್ ರಾವ್, ಎಡ್ವಕೇಟ್

ಅಜ್ಜನ ನೆನಪು: ಡಾ. ಎ. ಸುಬ್ಬರಾವ್ ಅವರ ಮೊಮ್ಮಗಳು ಎನ್ನಲು ನನಗೆ ಬಹಳ ಹೆಮ್ಮೆ. ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ನಗುವ ಮಗುವನ್ನು ಕಂಡರೆ ಅವರಲ್ಲಿ ಸಂತೋಷ ಚಿಮ್ಮುತ್ತಿತ್ತು. ನಮ್ಮ ಮನೆಗೆ ಮಕ್ಕಳು ಬಂದಾಗೆಲ್ಲ, ಅವರಿಗೆ ಇಷ್ಟವಾದುದನ್ನು ಕೊಡುತ್ತಿದ್ದರು. ತನ್ನ ಜೀವನದ ಅನುಭವಗಳನ್ನು ನನಗೆ ಯಾವಾಗಲೂ ಹೇಳುತ್ತಿದ್ದರು. ನನ್ನ ಮಾರ್ಗದರ್ಶಕ ರಾಗಿದ್ದ ಅವರು ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂದು ತಿಳಿಸುತ್ತಿದ್ದರು.ನನ್ನ ಅಜ್ಜನಾಗಿ ನನ್ನ ತಪ್ಪುಗಳನ್ನು ಯಾವಾಗಲೂ ತಿದ್ದುತ್ತಿದ್ದರು. ಪುನಃ ನಾನು ಅಂತಹ ತಪ್ಪು ಮಾಡಬಾರದೆಂಬುದು ಅವರ ಉದ್ದೇಶ. ನನಗೆ ಆಸಕ್ತಿಯಿದ್ದ ವಿಷಯಗಳಲ್ಲಿ ಮುಂದುವರಿಯಲು ಅವರಿಂದ ಯಾವತ್ತೂ ನನಗೆ ಪ್ರೋತ್ಸಾಹ. ಅತ್ಯುತ್ತಮ ಸಾಧನೆಗಾಗಿ ಸಲಹೆಗಳನ್ನೂ ನೀಡುತ್ತಿದ್ದರು. ನಾನು ಹಾಗೂ ನನ್ನ ತಮ್ಮ ಪರೀೆಗಳಲ್ಲಿ ಉತ್ತಮ ಅಂಕ ಗಳಿಸಿದಾಗ ಅಥವಾ ಸ್ಪರ್ಧೆಗಳಲ್ಲಿ ಗೆದ್ದಾಗ, ಅವರು ಏನಾದರೂ ಬಹುಮಾನ ಕೊಟ್ಟು, ಮುಂದಿನ ಬಾರಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂದು ಬೆನ್ನು ತಟ್ಟುತ್ತಿದ್ದರು. ಅವರ ಜೊತೆ ಕಳೆದ ಸಮಯದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಅದರಿಂದ ನನಗೆ ನನ್ನ ಜೀವನದುದ್ದಕ್ಕೂ ಸಹಾಯವಾಗಿದೆ. ಅವರ ಮಾತುಗಳನ್ನೂ ಅವರೊಂದಿಗೆ ಕಳೆದ ಸಮಯವನ್ನೂ ಸದಾಕಾಲ ನೆನಪಿಟ್ಟುಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವುದೆಂದರೆ ಅವರಿಗೆ ಇಷ್ಟ. ತನ್ನ ಕೆಲಸಗಳನ್ನೆಲ್ಲ ತಾನೇ ಮಾಡಿಕೊಳ್ಳುತ್ತಿದ್ದ ಶಿಸ್ತಿನ ವ್ಯಕ್ತಿ ಅವರು. ಅವರಲ್ಲಿ ಭೇದಭಾವ ಎಂಬುದಿಲ್ಲ. ಜಾತಿ ಅಥವಾ ಸಂಪತ್ತು ನೋಡಿ ಅವರು ವ್ಯಕ್ತಿಯನ್ನು ತೂಕ ಮಾಡುತ್ತಿರಲಿಲ್ಲ. ತನ್ನ ಕರ್ತವ್ಯವನ್ನು ಜೀವನವಿಡೀ ಪ್ರಾಮಾಣಿಕತೆಯಿಂದ ಮಾಡಿದವರು. ರಾಜಕಾರಣಿಯಾಗಿ ಅವರು ಯಾವತ್ತೂ ಭ್ರಷ್ಟಾಚಾರ ವಿರೋದಿ. ನನ್ನ ಅಜ್ಜನನ್ನು ಹತ್ತಿರದಿಂದ ಕಂಡವರು ಯಾರೂ ಅವರನ್ನು ಮರೆಯುವಂತಿಲ್ಲ. ಅವರು ಎಲ್ಲರಿಗೂ ಅಚ್ಚುಮೆಚ್ಚಿನವರು. ನನಗೂ ನನ್ನ ತಮ್ಮನಿಗೂ ಅವರು ಅತ್ಯಂತ ಪ್ರೀತಿಯ ಅಜ್ಜ. ಅವರೀಗ ನಮ್ಮೊಂದಿಗೆ ಇಲ್ಲವಾದರೂ ನಮ್ಮ ಮನಸ್ಸಿನಲ್ಲಿ ಅವರ ನೆನಪು ಸದಾ ಹಸುರು.

ಸೌಮ್ಯ (ಎ. ಪ್ರಭಾಕರ ರಾವ್ ಅವರ ಮಗಳು)

ಡಾ. ಎ. ಸುಬ್ಬರಾಯರ ಕುಟುಂಬಪತ್ನಿ : ದಿ. ಶ್ರೀಮತಿ ಕಾಶಮ್ಮಐವರು ಪುತ್ರರು : ದಿ. ರಾಧಾಕೃಷ್ಣ, ರಮೇಶ, ಭಾಸ್ಕರ, ಅಜಿತ್‌ಕುಮಾರ್, ಪ್ರಭಾಕರಇಬ್ಬರು ಪುತ್ರಿಯರು : ಶೀಲಾ ಮತ್ತು ರೇಣುಕಾ

ಎತ್ತರದ ನಿಲುವಿನ ಡಾಕ್ಟರ್: ಅನೇಕ ವರ್ಷಗಳ ಹಿಂದಿನ ಮಾತು. ನಾನು ಯಾವುದೋ ಕೆಲಸದ ನಿಮಿತ್ತ ಕಾಸರಗೋಡಿಗೆ ಹೋಗಿದ್ದವನು ಮಂಜೇಶ್ವರಕ್ಕೆ ಹಿಂತಿರುಗುತ್ತಿದ್ದೆ. ನಡುರಾತ್ರಿಯ ಹೊತ್ತು. ಹೊಸಂಗಡಿಯ ಬಳಿ ಈಗ ಇರುವ ಚೆಕ್‌ಪೋಸ್ಟಿನ ಸಮೀಪ (ಆಗ ಅಲ್ಲಿ ಶಾಶ್ವತ ಚೆಕ್‌ಪೋಸ್ಟ್ ಇರಲಿಲ್ಲ) ಯಾರೋ ಒಬ್ಬರು ಅಧಿಕಾರಿ ನನ್ನ ವಾಹನವನ್ನು ತಡೆದರು. ಅಲ್ಲೇ ನಿಂತಿದ್ದ ಒಂದು ವಾಹನಕ್ಕಿಂತ ತುಸು ಮುಂದೆ ಹೋಗಿ ಕಾರು ನಿಲ್ಲಿಸಿದಾಗ ಕ್ರುದ್ಧರಾದ ಆ ಅಧಿಕಾರಿ ‘ಕಾರನ್ನು ಹಿಂದಕ್ಕೆ ತೆಗೆ’ ಎಂದು ಅಗೌರವವಾಗಿ ಗದರಿಸಿ ಆಜ್ಞಾಪಿಸಿದರು. ನನ್ನ ಮನಸ್ಸಿಗೆ ತುಂಬ ನೋವಾಯಿತಾದರೂ ನಾನೇನೂ ಮಾಡುವ ಹಾಗಿರಲಿಲ್ಲ. ಅವರೆಂದಂತೆ ಕಾರನ್ನು ಹಿಂದಕ್ಕೆ ತೆಗೆದೆ.ಅಲ್ಲಿಂದ ನಾನು ಮಂಜೇಶ್ವರದ ರಥಬೀದಿಗೆ ಬಂದಾಗ ಡಾ. ಸುಬ್ಬರಾಯರ ಕ್ಲಿನಿಕಿನ ಮಾಳಿಗೆಯಲ್ಲಿ ಇನ್ನೂ ಬೆಳಕು ಆರಿರಲಿಲ್ಲ. ಡಾಕ್ಟ್ರು ಯಾವುದೋ ಪಾರ್ಟಿ ಸಂಬಂಧ ವಾದ ಮೀಟಿಂಗ್‌ನಲ್ಲಿ ಮಗ್ನರಾಗಿದ್ದರು. ನಾನು ನೇರವಾಗಿ ಹೋಗಿ ನನಗಾದ ಅವಮಾನವನ್ನು ತೋಡಿಕೊಂಡೆ. ಡಾ† ಸುಬ್ಬರಾಯರು ಎಷ್ಟು ಶೀಘ್ರವಾಗಿ ಸ್ಪಂದಿಸಿದರೆಂದರೆ ಆ ಕ್ಷಣವೇ ಕಾರ್ಯಕರ್ತರನ್ನು ಕೂಡಿಕೊಂಡು ತಮ್ಮ ಸ್ನೇಹಿತರ ವಾಹನದಲ್ಲಿ ಹೊಸಂಗಡಿಗೆ ಹೊರಟೇಬಿಟ್ಟರು. ಯಾವ ಬೀತಿಯೂ ಇಲ್ಲದೆ ತಾನೇ ಮುಂದಾಗಿ ಹೋಗಿ ಆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಕಾನೂನಿನ ಚೌಕಟ್ಟಿನಲ್ಲಿ ಬದುಕುವ ಸಭ್ಯ ನಾಗರಿಕರನ್ನು ನೀವು ಹೀಗೆ ನಡೆಸಿಕೊಳ್ಳುವುದು ಸರಿಯಲ್ಲ. ಇದು ಹೀಗೆಯೇ ಮುಂದುವರಿದರೆ ಪ್ರತಿಭಟನೆಯನ್ನು ಎದುರಿಸಬೇಕಾದೀತು’ ಎಂದು ಎಚ್ಚರಿಸಿದರು.ಸಾಮಾಜಿಕ ನ್ಯಾಯದ ಕುರಿತಾದ ಕಾಳಜಿ, ಅನ್ಯಾಯವನ್ನು ನಿಷ್ಠುರವಾಗಿ ವಿರೋದಿಸುವ ಧೈರ್ಯ, ಪ್ರತಿಭಟನೆಯ ರೀತಿ, ಸ್ನೇಹಿತರೊಂದಿಗಿನ ಪ್ರೀತಿ, ಈ ಎಲ್ಲವೂ ಮುಪ್ಪರಿಗೊಂಡ ಸುಬ್ಬರಾಯರ ವ್ಯಕ್ತಿತ್ವ ನನ್ನ ಮುಂದೆ ಅನಾವರಣವಾದದ್ದು ಹೀಗೆ.ಇಂತಹ ಅನುಭವ ಅವರ ನಿಕಟ ಸಂಪರ್ಕದಲ್ಲಿದ್ದ ಹಲವರಿಗೆ ಆಗಿರಬಹುದು. ಕಾರಣ ಆ ಮೇಲಿನ ನಮ್ಮ ದೀರ್ಘ ಕಾಲದ ಒಡನಾಟದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಈ ಗುಣವಿಶೇಷಗಳು ಅವರ ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿದ್ದವು ಎನ್ನುವುದನ್ನು ನಾನು ಕಂಡುಕೊಂಡೆ.ಅವರು ಹುಟ್ಟು ಹೋರಾಟಗಾರರು. ಯಾವ ಕ್ಷೇತ್ರದಲ್ಲೇ ಆಗಲಿ, ಯಾರಿಗೇ ಆಗಲಿ ಅನ್ಯಾಯವಾದರೆ ಅವರು ಸಹಿಸುತ್ತಿರಲಿಲ್ಲ. ಶೋಷಣೆಯ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸಿಡಿದೇಳುತ್ತಿದ್ದರು. ಅವರು ತೀರಾ ವಿರಳ ವರ್ಗಕ್ಕೆ ಸೇರುವ ಒಬ್ಬ ಆದರ್ಶ ರಾಜಕಾರಣಿ. ತಮ್ಮ ಪಕ್ಷದ ತತ್ವ ಸಿದ್ಧಾಂತಗಳಿಗೆ ಅವರು ಪೂರ್ಣ ಬದ್ಧರಾಗಿದ್ದರು. ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಕೊನೆಗಾಲದ ತನಕವೂ ಪಕ್ಷದ ಸೇವೆಯನ್ನು ಶ್ರದ್ಧೆಯಿಂದಲೂ ಪ್ರಾಮಾಣಿಕತೆ ಯಿಂದಲೂ ನಡೆಸಿದರು. ಅಷ್ಟೇ ಶ್ರದ್ಧೆ ಹಾಗೂ ಪ್ರಾಮಾಣಿಕತೆಗಳಿಂದ ಸಮಾಜ ಸೇವೆಯನ್ನೂ ಮಾಡಿದರು. ಎರಡನ್ನೂ ಸಮನ್ವಯಿಸುವ ಒಬ್ಬ ರಾಷ್ಟ್ರ ಮಟ್ಟದ ನೇತಾರನ ದೃಷ್ಟಿ ಅವರದ್ದು.ಸ್ವಂತದ ಲಾಭ ಅವರಿಗೆ ಯಾವತ್ತೂ ಮುಖ್ಯವಾಗಿರಲಿಲ್ಲ. ಲೋಕಸಭೆಯಲ್ಲಿ ಸಂಸದರ ಪಿಂಚಣಿಯನ್ನು ಏರಿಸಬೇಕೆನ್ನುವ ನಿರ್ಣಯ ಸರ್ವಾನುಮತದಿಂದ ಅಂಗೀಕೃತ ವಾದಾಗ ‘ಈ ಹಣವನ್ನು ಬಡವರ ಉದ್ಧಾರಕ್ಕಾಗಿ ಯಾವುದಾದರೂ ಯೋಜನೆಗೆ ವ್ಯಯಿಸಬಹುದಾಗಿತ್ತು’ ಎಂದು ಡಾಕ್ಟ್ರು (ಅವರು ಸ್ವತಃ ಎಂ.ಪಿ. ಆಗಿದ್ದವರು) ನನ್ನಲ್ಲಿ ಹೇಳಿದ ಮಾತು ಈಗಲೂ ನೆನಪಾಗುತ್ತಿದೆ. ಇಂಥವರೂ ನಮ್ಮ ರಾಜಕೀಯದಲ್ಲಿ ಇದ್ದಾರಲ್ಲ ಎಂದು ಆ ಕ್ಷಣಕ್ಕೆ ನನ್ನ ಹೃದಯ ತುಂಬಿ ಬಂದಿತ್ತು.ವೈಯಕ್ತಿಕ ಸ್ನೇಹದ ನಡುವೆ, ವೃತ್ತಿ ಸಂಬಂಧಗಳ ನಡುವೆ, ಅವರು ಎಂದೂ ರಾಜಕೀಯವನ್ನು ತಂದವರಲ್ಲ. ವೈದ್ಯಕೀಯ ನೀತಿ ಸಂಹಿತೆಯನ್ನು ಅಕ್ಷರಶಃ ಪಾಲಿಸಿದವರು. ವೃತ್ತಿಯನ್ನು ಹೇಗೋ ವೃತ್ತಿ ಬಾಂಧವರನ್ನೂ ಹಾಗೆ ಅತ್ಯಂತ ಪ್ರೀತಿವಿಶ್ವಾಸದಿಂದ ನಡೆಸಿಕೊಂಡು ಬಂದವರು. ಮಂತ್ರಿಯಾದ ಮೇಲೆ ಎರಡೂ ಸ್ಥಾನಗಳಿಗೆ ನ್ಯಾಯ ದೊರಕಿಸುವುದು ಸಾಧ್ಯವಿಲ್ಲವೆಂದು ಮನವರಿಕೆಯಾದ ಕೂಡಲೇ ಗೌರವಪೂರ್ವಕವಾಗಿ ವೃತ್ತಿಜೀವನಕ್ಕೆ ವಿದಾಯ ಹೇಳಿದವರು.ಎಷ್ಟೋ ಬಾರಿ ವೈದ್ಯಕೀಯ ವಿಷಯಗಳ ಬಗ್ಗೆ ನಾವು ಮುಕ್ತವಾಗಿ ಚರ್ಚಿಸಿದ್ದುಂಟು. ಅವರ ದೊಡ್ಡ ಗುಣವೆಂದರೆ ತನಗೆ ಗೊತ್ತಿಲ್ಲದ ವಿಷಯವನ್ನು ಯಾವುದೇ ಅಹಮಿಕೆಗೂ ಆಸ್ಪದವಿಲ್ಲದೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುವುದು. ವರ್ಷಗಳ ಹಿಂದೆ ಮನೆಗಳಲ್ಲಿ ಹೆರಿಗೆ ನಡೆಸಲು ಡಾಕ್ಟ್ರುಗಳು ಹೋಗಬೇಕಾಗುತ್ತಿದ್ದ ಸಂದರ್ಭಗಳಲ್ಲಿ ಅವರೊಮ್ಮೆ ಹೇಳಿದ್ದರು : ‘ಅಲ್ಲಿ ನಾನು ಮಾಡುವುದೇನು? ನನಗದು ಸಾಧ್ಯವಾಗುವುದಿಲ್ಲ’.ಸ್ವತಃ ಕಲಾವಿದರಾದ ಡಾಕ್ಟ್ರಿಗೆ ಕಲಾವಿದರ, ಸಾಹಿತಿಗಳ ಬಗ್ಗೆ ಅಪಾರ ಗೌರವವಿತ್ತು. ಸಂಶೋಧಕ ಸಾಹಿತಿ ಪುಣಿಂಚಿತ್ತಾಯರ ನಿವೃತ್ತಿ ವೇತನದ ಸಮಸ್ಯೆಯನ್ನು ಬಗೆಹರಿಸಲು ಆಗ ಮಂತ್ರಿಗಳಾಗಿದ್ದ ಸುಬ್ಬರಾಯರು ಶಕ್ತಿ ಮೀರಿ ಶ್ರಮಿಸಿದ್ದರು. ಆದರೆ ಬೇರೆ ಒಬ್ಬಿಬ್ಬರು ತಮ್ಮ ಸ್ವಾರ್ಥಕ್ಕಾಗಿ ಅವರನ್ನು ಸಮೀಪಿಸಿದಾಗ ನಮ್ಮ ಸಾಹಿತಿಗಳಿಗೆ ಇಂತಹ ಸಣ್ಣ  ಮನಸ್ಸಾದರೂ ಯಾಕೆ? ಎಂದು ಅವರು ನನ್ನಲ್ಲಿ ನೊಂದು ನುಡಿದಿದ್ದರು. ಕಾಸರಗೋಡಿನಲ್ಲಿ ಕನ್ನಡಿಗರಿಗೆ ಸಿಗಬೇಕಾದ ಸಂವಿಧಾನದತ್ತವಾದ ಹಕ್ಕುಗಳ ಬಗ್ಗೆ ಸುಬ್ಬರಾಯರಿಗೆ ತೀವ್ರವಾದ ಕಾಳಜಿ ಇತ್ತು. ಅದಕ್ಕಾಗಿಯೂ ಅವರು ತನ್ನ ಪಕ್ಷದ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಹೋರಾಟ ಮಾಡಿದ್ದಾರೆ.ಅವರ ಕರ್ಮಭೂಮಿಯಾಗಿದ್ದ ಮಂಜೇಶ್ವರವನ್ನು ಅವರು ಅತ್ಯಂತ ಹಾರ್ದಿಕವಾಗಿ ಪ್ರೀತಿಸುತ್ತಿದ್ದರು. ಸುಬ್ಬರಾಯರ ಒತ್ತಾಸೆ ಅಲ್ಲದೆ ಹೋಗಿದ್ದರೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು, ಇಂದಿಗೂ ಒಂದು ಕನಸಾಗಿಯೇ ಉಳಿಯುತ್ತಿತ್ತು. ರಾಷ್ಟ್ರಕವಿಯ ಮನೆಗೊದಗಿದ ದುರವಸ್ಥೆಯ ಬಗ್ಗೆ ಅವರು ಕೊನೆಗಾಲದ ತನಕವೂ ಕೊರಗುತ್ತಲೇ ಇದ್ದರು.ಮಂಜೇಶ್ವರಕ್ಕೆ ಜಾಗತಿಕ ಪ್ರಸಿದ್ಧಿಯನ್ನು ತಂದುಕೊಟ್ಟ ಗೋವಿಂದ ಪೈಯವರಂತೆ ಡಾ. ಸುಬ್ಬರಾಯರದ್ದೂ ಒಂದು ಮಹಾನ್ ವ್ಯಕ್ತಿತ್ವ. ಸಾಗರಕ್ಕೆ ಸಾಗರವೇ ಸಮ ಎಂದಾಗಲೆಲ್ಲಾ ನನಗೆ ನೆನಪಾಗುವುದು ಆ ಸಾಗರದಂತೆ ಮೆರೆಯುವ ಮೊರೆಯುವ – ಸುಬ್ಬರಾಯರ ಎತ್ತರದ ನಿಲುವು.

ಡಾ. ಕೆ. ರಮಾನಂದ ಬನಾರಿ

ಡಾ† ಸುಬ್ಬರಾವ್ – ನಾನು ಕಂಡಂತೆ: ಡಾ† ಸುಬ್ಬರಾವ್ ಅವರನ್ನು ನಾನು ಪ್ರಥಮವಾಗಿ ಕಂಡುದು ಮತ್ತು ಪರಿಚಯ ವಾದದ್ದು ೧೯೭೦ರ ನಂತರ. ಆದರೆ ಅವರು ಒಬ್ಬ ಉತ್ತಮ ಡಾಕ್ಟರರು ಎಂದು ಜನರಾಡುವುದನ್ನು ಕೇಳಿದ್ದೆ. ಹೆಚ್ಚು ಆಸ್ಪತ್ರೆಗಳೋ ಡಾಕ್ಟರುಗಳೋ ಇಲ್ಲದ ಕಾಲ ಅದಾಗಿತ್ತು. ಡಾ. ಸುಬ್ಬರಾವ್ ಅವರು ಮಂಜೇಶ್ವರದಲ್ಲಿ ಒಂದು ಕ್ಲಿನಿಕ್ ಆರಂಬಿಸಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ಬಂದ ಅದೆಷ್ಟೋ ಜನರಿಗೆ ಯೋಗ್ಯ ಚಿಕಿತ್ಸೆ ಸಲಹೆಗಳನ್ನು ನೀಡಿ ಜನಪ್ರೀತಿಯನ್ನು ಗಳಿಸಿದರು. ಅವರು ತಮ್ಮ ವೈದ್ಯವೃತ್ತಿಯಲ್ಲಿ ಬಡವ ಬಲ್ಲಿದ ಎಂಬ ಭೇದಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಅಲ್ಲದೆ ತೀರಾ ಬಡವರಿಗೆ ಅವರು ಹಣ ಪಡೆಯದೆಯೇ ಔಷಧ ಕೊಡುತ್ತಿದ್ದರೆಂದು ಹೇಳುವುದು ಕೇಳಿದ್ದೇನೆ. ನಾನು ಡಾ. ಸುಬ್ಬರಾಯರನ್ನು ಪರಿಚಯ ಮಾಡಿಕೊಂಡುದು ಎಂ. ರಾಮಪ್ಪ ಮಾಸ್ಟ್ರ ಮೂಲಕ. ಮಂಜೇಶ್ವರ ಎಸ್.ಎ.ಟಿ. ಹೈಸ್ಕೂಲಿನಲ್ಲಿ ಹೆಡ್ಮಾಸ್ಟ್ರರಾಗಿದ್ದ ರಾಮಪ್ಪ ಮಾಸ್ತರರು ಮಂಜೇಶ್ವರ ೇತ್ರದ ಎಂ.ಎಲ್.ಎ. ಆಗಿದ್ದರು. ನಾನು ಆಗ ಕೇರಳ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕನಾಗಿದ್ದೆ. ಅವರು ತಿರುವನಂತಪುರಕ್ಕೆ ಬಂದಾಗಲೆಲ್ಲ ನಾವು ಭೇಟಿಯಾಗುತ್ತಿದ್ದೆವು. ಊರಿನ ವ್ಯಕ್ತಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಬೇರೆ ಬೇರೆ ಆಪೀಸುಗಳಿಗೆ ಹೋಗಿ ಬರುತ್ತಿದ್ದೆವು. ಒಂದು ದಿನ ನಾನು ಊರಿಗೆ ಬಂದಾಗ ರಾಮಪ್ಪ ಮಾಸ್ಟ್ರನ್ನು ಕಾಣುವುದಕ್ಕಾಗಿ ಮಂಜೇಶ್ವರಕ್ಕೆ ಹೋಗಿದ್ದೆ. ತರುವಾಯ ನಾವಿಬ್ಬರೂ ಸುಬ್ಬರಾಯರ ಆಸ್ಪತ್ರೆಯತ್ತ ನಡೆದೆವು. ನಾವು ಆಸ್ಪತ್ರೆ ತಲುಪಿದಾಗ ‘ಹೋ ಬಂದೆ. ಸ್ವಲ್ಪ ಕುಳಿತುಕೊಳ್ಳಿ’ ಎಂದು ಸ್ವಾಗತಿಸಿದರು. ವೈದ್ಯಕೀಯ ಸಲಹೆಗಾಗಿ ಬಂದವರನ್ನು ಕಳುಹಿಸಿಕೊಟ್ಟು ನಗುಮುಖದಿಂದ ಬಂದು ನಮ್ಮೊಂದಿಗೆ ಕುಳಿತುಕೊಂಡರು. ರಾಮಪ್ಪ ಮಾಸ್ಟ್ರು ನನ್ನ ಪರಿಚಯವನ್ನು ಮಾಡಿಕೊಟ್ಟರು. ‘ನಮ್ಮ ಊರಿನವರೊಬ್ಬರು ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಒಳ್ಳೆಯ ಉದ್ಯೋಗದಲ್ಲಿ ಇರುವುದು ನನಗೆ ತುಂಬ ಅಭಿಮಾನ’ ಎಂದು ತನ್ನ ಸಂತೋಷ ವ್ಯಕ್ತಪಡಿಸಿದರು. ಅರ್ಧ ಗಂಟೆಯವರೆಗೆ ಹಲವಾರು ವಿಚಾರಗಳನ್ನು ಮಾತಾಡಿ ನಾವು ಬೀಳ್ಕೊಂಡೆವು. ಅದು ಡಾ. ಸುಬ್ಬರಾಯ ರೊಂದಿಗೆ ನನ್ನ ಮೊದಲ ಭೇಟಿ. ರಾಜ್ಯಸಭೆಯ ಸದಸ್ಯರೂ ಆಗಿದ್ದ ಡಾ. ಸುಬ್ಬರಾಯರನ್ನು ತರುವಾಯ ಎರಡು ಮೂರು ಬಾರಿ ಭೇಟಿಯಾಗಿದ್ದೆ. ಆಗೆಲ್ಲ ಅವರು ನನ್ನನ್ನು ಹಾರ್ದಿಕ ವಾಗಿ ಬರಮಾಡಿಕೊಂಡು ನಾನು ಒಯ್ದಿದ್ದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಸಲಹೆ ಸಹಕಾರವನ್ನೂ ನೀಡಿದ್ದರು.ಡಾ. ಸುಬ್ಬರಾಯರು ಕೇರಳದ ಎಡಪಕ್ಷೀಯ ಸರಕಾರದಲ್ಲಿ ನೀರಾವರಿ ಮಂತ್ರಿ ಯಾಗಿದ್ದಾಗ ನಾನು ಅವರನ್ನು ಆಗಾಗ ಕಾಣಲು ಹೋಗುತ್ತಿದ್ದೆ. ಮಂತ್ರಿಪದವಿಯಲ್ಲಿದ್ದರೂ ನನ್ನನ್ನು ಬಹು ಹಾರ್ದಿಕವಾಗಿ ಬರಮಾಡಿಕೊಳ್ಳುತ್ತಿದ್ದರು. ಡಾ. ಸುಬ್ಬರಾಯರೊಂದಿಗಿನ ಸಾಮೀಪ್ಯ ಹೆಚ್ಚಿದಂತೆ, ನನಗೆ ಅವರ ಮೇಲಿನ ಅಭಿಮಾನವೂ ಹೆಚ್ಚಾಯಿತು. ಅವರ ನಡೆ ನುಡಿಗಳಲ್ಲಿ ಆದರ್ಶಗಳು ಎದ್ದು ಕಾಣುತ್ತಿದ್ದವು. ಊರವರ ವಿವಿಧ ಕೆಲಸಗಳ ನಿಮಿತ್ತ ನಾನು ಆಗಾಗ ಸೆಕ್ರೆಟರಿಯೇಟಿಗೆ ಹೋಗಿ ಆ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದುದು ಅವರಿಗೆ ತುಂಬಾ ಸಂತೋಷವನ್ನೀಯುತ್ತಿತ್ತು. ‘‘ಊರವರ ಇಂತಹ ಅಗತ್ಯದ ಕೆಲಸಗಳನ್ನು ಮಾಡಿಸಿ ಕೊಡುವವರು ಒಬ್ಬರು ಇಲ್ಲಿ ಇದ್ದಾರಲ್ಲ’’ ಎಂದು ಅಭಿಮಾನದ ನುಡಿಗಳನ್ನು ಆಡುತ್ತಿದ್ದರು. ಸೆಕ್ರೆಟರಿಯೇಟಿನಲ್ಲಿ ಸಚಿವಾಲಯ ಸಮೇತ ವಿವಿಧ ಆಪೀಸುಗಳಿಗೆ ಸಂದರ್ಶನ ವೇಳೆ ಪ್ರತಿದಿನ ಸಂಜೆ ೩ ಗಂಟೆಯ ನಂತರ. ಡಾ. ಸುಬ್ಬರಾಯರು ಸಚಿವರಾಗಿದ್ದಾಗ ನನ್ನ ಕಾರ್ಯ ಬಾಹುಲ್ಯವನ್ನು ಪರಿಗಣಿಸಿ ನಾನು ಅವರನ್ನು ಕಾಣಲು ಯಾವಾಗ ಬೇಕಾದರೂ ಹೋಗಬಹುದು ಎಂಬ ವ್ಯವಸ್ಥೆಯನ್ನು ಮಾಡಿದ್ದರು.ಊರಿನವರ ಸಾಮಾನ್ಯ ಕೆಲಸಗಳನ್ನು ನಾನೇ ವಿವಿಧ ಆಪೀಸುಗಳಲ್ಲಿ ಮಾಡಿಸುತ್ತಿದ್ದೆ. ಕೆಲವನ್ನು ಮಂತ್ರಿಗಳ ಮೂಲಕವೇ ಮಾಡಿಸಬೇಕಾಗಿತ್ತು. ಅವನ್ನು ನಾನು ನಮ್ಮ ಮಂತ್ರಿಗಳ ಮೂಲಕ ಮಾಡಿಸುತ್ತಿದ್ದೆ. ಊರಿಗೆ ಸಂಬಂಧಿಸಿದ ಯಾವುದೇ ಘನ ವಿಷಯವಾದರೂ ಸಂತೋಷದಿಂದ ಮನವಿಪತ್ರ ಸ್ವೀಕರಿಸಿ ಅದನ್ನು ಆಯಾ ಸಚಿವಾಲಯಕ್ಕೆ ಕಳಿಸಿಕೊಟ್ಟು ಕೆಲಸ ಮಾಡಿಸಿಕೊಡುತ್ತಿದ್ದರು. ೇತ್ರದ ಅಭಿವೃದ್ಧಿಗಾಗಿ ಅವರು ಮಾಡಿಕೊಟ್ಟ ಒಂದು ಮಹತ್ವದ ಕೆಲಸ ಪೈವಳಿಕೆ ಪಂಚಾಯತಿನ ಕುರುಡಪದವಿನಲ್ಲಿ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಹೈಸ್ಕೂಲ್ ಸ್ಥಾಪನೆ.ಊರವರ ಯಾವುದೇ ಕೆಲಸವನ್ನು ಮನಃಪೂರ್ವಕ ಮಾಡಿಕೊಡುವುದು ಅವರ ಸ್ವಭಾವವಾಗಿತ್ತು. ಹಾಗೆ ಮಾಡಿಕೊಟ್ಟ ಕೆಲಸಗಳಿಗೆ ಯಾರಿಂದಲೂ ಯಾವುದೇ ಪ್ರತಿಫಲವನ್ನು ಅವರು ಪಡೆಯುವವರಲ್ಲ. ‘ಪ್ರತಿಫಲ…’ ಎಂದು ಪ್ರಸ್ತಾಪ ಎತ್ತುವಾಗಲೇ ಅವರು ರೇಗುತ್ತಿದ್ದರು. ಸಾಮಾನ್ಯವಾಗಿ ಅವರದ್ದು ಸ್ವಲ್ಪ ಮುಂಗೋಪ ಸ್ವಭಾವ. ಇಂತಹ ಸಂದರ್ಭಗಳಲ್ಲಿ ತೀವ್ರ ರೇಗುತ್ತಿದ್ದರು. ಆದರೆ ಅವರದು ನಿಷ್ಕಳಂಕ ಹೃದಯ. ಅವರು ಮಾಡಿಕೊಟ್ಟ ಕೆಲಸಗಳಿಗೆ ಅಭಿನಂದನೆಗಳನ್ನು ಕೂಡ ಅವರು ಬಯಸುವುದಿಲ್ಲ. ಇದಕ್ಕೆ ಒಂದು ಉದಾಹರಣೆ :ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಹೈಸ್ಕೂಲ್ ಮಂಜೂರು ಮಾಡಿಸಿ ಊರವರಿಗೆ ನೀಡಿದರು. ಶಾಲೆ ಪ್ರಾರಂಭವಾಗಿ ಪ್ರಥಮ ವಾರ್ಷಿಕೋತ್ಸವವನ್ನು ಊರಿನವರು ಬಹಳ ಸಂಭ್ರಮದಿಂದ ನಡೆಸಿದರು. ಡಾ. ಸುಬ್ಬರಾಯರೂ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರೂ ಬಂದಿದ್ದರು. ಶಾಲಾ ಮ್ಯಾನೇಜರ್ ಎಲ್ಲರನ್ನೂ ಸ್ವಾಗತಿಸಿ ಹೈಸ್ಕೂಲು ಆರಂಬಿಸಲು ಸರಕಾರದಿಂದ ಅನುಮತಿ ಮಾಡಿಸಿಕೊಟ್ಟದ್ದಕ್ಕಾಗಿ ಡಾ. ಸುಬ್ಬರಾಯರನ್ನು ಮ್ಯಾನೇಜ್‌ಮೆಂಟಿನ ಪರವಾಗಿಯೂ ಊರವರ ಪರವಾಗಿಯೂ ಅಭಿನಂದಿಸಿದರು. ಸುಬ್ಬರಾಯರು ಭಾಷಣ ಮಾಡುತ್ತಾ ‘ಹೈಸ್ಕೂಲು ಪಾಸ್ ಮಾಡಿಸಿದ್ದಕ್ಕೆ ನಿಮ್ಮೆಲ್ಲರ ಅಭಿನಂದನೆಯು ನನಗಲ್ಲ. ಡಾ. ರಾಮನವರಿಗೆ ಸಲ್ಲಬೇಕಾದುದು. ಈ ಶಾಲೆಯನ್ನು ಪಾಸು ಮಾಡಿಸಲು ಅವರು ಮಾಡಿದ ಪರಿಶ್ರಮವು ಸ್ಮರಣಾರ್ಹವಾದುದು’ ಎಂದು ತನ್ನ ಮುಕ್ತ ಮನಸ್ಸಿನ ಮಾತುಗಳನ್ನಾಡಿದರು.ತನ್ನ ಮತದಾರ ಕ್ಷೇತ್ರಕ್ಕೆ ಅವರು ಮಾಡಿದ ಮಹತ್ವದ ಕೆಲಸಗಳು ಹಲವಾರು. ನೀರಾವರಿ ಮಂತ್ರಿಯಾಗಿ ಅವರು ರಾಜ್ಯದಲ್ಲಿ ನಡೆಸಿದ ಅಭಿವೃದ್ಧಿಕಾರ್ಯ ಗಣನೀಯ. ಜನರ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿಯೂ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ.ಮಂತ್ರಿಗಳಾದವರಿಗೆ ಭ್ರಷ್ಟಾಚಾರದ ಆರೋಪ ಬರುವುದು ಸಹಜ. ಯಾವುದೇ ಪಕ್ಷದ ಮಂತ್ರಿಗಳಾದರೂ ಹೆಚ್ಚಿನವರು ಆ ಅಪವಾದಕ್ಕೆ ಒಳಗಾಗುತ್ತಾರೆ. ನಮ್ಮ ಸುಬ್ಬರಾಯರು ಸ್ವಭಾವತಃ ಒಳ್ಳೆಯವರಾದುದರಿಂದ ಯಾವುದೇ ದೋಷಾರೋಪಣೆಗಳಿಗೆ ಬಲಿಯಾಗಿಲ್ಲ. ಆ ಮಂತ್ರಿ ಮಂಡಲದ ಕೆಲವೇ ಕೆಲವು ಉತ್ತಮ ಮಂತ್ರಿಗಳಲ್ಲಿ ಡಾ. ಸುಬ್ಬರಾಯರೂ ಒಬ್ಬರಾಗಿದ್ದರು.ನಾಡಿನ ಕೃಷಿ ಕಾರ್ಮಿಕ ಕ್ಷೇತ್ರಗಳಿಗೆ ಹಾಗೂ ಸಾಮಾಜಿಕ, ರಾಜಕೀಯ ಕ್ಷೇತ್ರಗಳಿಗೆ ಅವರ ಸೇವೆ ಗಣನೀಯ. ನಿಸ್ವಾರ್ಥ ಹಾಗೂ ಶ್ರೇಷ್ಠ ರಾಜಕಾರಣಿಯಾದ ಅವರಲ್ಲಿ ಕಪಟತನ, ವಂಚನೆಗಳಿಲ್ಲ.ಆಧುನಿಕ ಜಗತ್ತಿನಲ್ಲಿ ಡಾ. ಸುಬ್ಬರಾಯರು ಒಬ್ಬ ಆದರ್ಶ ವ್ಯಕ್ತಿ. ಇಂತಹ ಉತ್ತಮ ವ್ಯಕ್ತಿಗಳು ಅವರ ರಾಜಕೀಯ ಪಾರ್ಟಿಗೂ ನಾಡಿಗೂ ಅಭಿಮಾನ.

ಡಾ. ಎಂ. ರಾಮ, ತಿರುವನಂತಪುರ

ಅಸಾಮಾನ್ಯರಾಗಿದ್ದೂ ಸಾಮಾನ್ಯರಂತೆ:

ಡಾ. ಸುಬ್ಬರಾವ್ ನಮ್ಮ ನೆರೆಹೊರೆಯವರು. ಅವರು ನಮ್ಮ ಊರಿನಲ್ಲಿ ನಮ್ಮೊಡನೆ ಸಾಮಾನ್ಯರಂತೆ ಜೀವಿಸಿದರೆಂದು ನೆನೆಯುವಾಗಲೇ ಅವರ ಬಗ್ಗೆ ಹೆಮ್ಮೆ ಮೂಡುತ್ತದೆ. ಯಾಕೆಂದರೆ ಅವರೊಬ್ಬ ಅಸಾಮಾನ್ಯ ವ್ಯಕ್ತಿ. ಆದರೆ ತನ್ನ ಜೀವನದಲ್ಲಿ ಒಮ್ಮೆಯೂ ಅವರು ಆ ರೀತಿಯಲ್ಲಿ ವರ್ತಿಸಲಿಲ್ಲ. ರಾಜ್ಯಸಭಾ ಸದಸ್ಯರಾದಾಗ, ಕೇರಳದ ಶಾಸಕರಾದಾಗ, ಅದಲ್ಲದೆ ಕೇರಳ ಸರಕಾರದ ಮಂತ್ರಿ ಆದಾಗಲೂ ಅವರು ನಮ್ಮೊಂದಿಗೆ ಸಾಮಾನ್ಯರಂತೆ ಬದುಕಿದ ದೀಮಂತ ವ್ಯಕ್ತಿ.ಅವರು ಕೇರಳದ ಸಚಿವ ಸ್ಥಾನ ಅಲಂಕರಿಸಿದಾಗ ಇಡೀ ಊರಿನ ಜನ ಅಭಿಮಾನಪಟ್ಟರು. ಯಾಕೆಂದರೆ ಅವರು ಎಲ್ಲರಿಗೂ ಬೇಕಾದವರಾಗಿದ್ದರು.ನಾನು ಕಂಡ ಕೆಲವೇ ಪರಿಶುದ್ಧ ರಾಜಕಾರಣಿಗಳಲ್ಲಿ ಓರ್ವರಾದ ಡಾಕ್ಟರ್ ಸುಬ್ಬರಾವ್ ತನ್ನ ಅಧಿಕಾರದ ಪ್ರಭಾವವನ್ನು ತನ್ನ ಸ್ವಾರ್ಥಕ್ಕಾಗಿ ಎಂದೂ ಬಳಸಿಕೊಳ್ಳಲಿಲ್ಲ. ತನ್ನ ಕುಟುಂಬದವರಿಗಾಗಿಯೂ ಅವರು ಅದನ್ನು ಎಂದಿಗೂ ದುರುಪಯೋಗ ಪಡಿಸಿಕೊಳ್ಳಲಿಲ್ಲ. ತಾನು ಅನುಸರಿಸುತ್ತಿದ್ದ ತತ್ವ, ಆದರ್ಶಗಳ ಸಂಪೂರ್ಣ ಫಲವನ್ನು ಜನತೆಗಾಗಿ ಹಾಗೂ ನಾಡಿಗಾಗಿ ಅರ್ಪಿಸಿದರು. ಇಂತಹ ರಾಜಕೀಯ ವ್ಯಕ್ತಿಗಳು ಇಂದು ಅಪರೂಪ.

ಲಿಲ್ಲಿ ಬಾ ಟೀಚರ್, ಮಂಜೇಶ್ವರ

ನೇರ ನಡೆನುಡಿಯ ಸುಬ್ಬರಾವ್:

ಕೇರಳ ವಿಧಾನಸಭಾ ಚುನಾವಣೆಗೆ ಡಾಕ್ಟರ್ ಸುಬ್ಬರಾವ್ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಸಮಯ. ಮತದಾನಕ್ಕೆ ಇನ್ನೇನು ಬರೇ ೪೮ ಗಂಟೆಗಳು ಮಾತ್ರ ಬಾಕಿ. ಆಗ ನನ್ನ ಆಪ್ತ ಮಿತ್ರರಾದ ಬಿ.ಯಂ. ಅನಂತನವರು ನನ್ನನ್ನು ಆಕಸ್ಮಾತ್ ಸಂಪರ್ಕಿಸಿದರು. ‘‘ಭಟ್ರೆ, ನಾವು ಸ್ವಲ್ಪ ಕಷ್ಟದಲ್ಲಿದ್ದೇವೆ. ಡಾಕ್ಟರರ ವಿಜಯ ಖಾತರಿ ಆಗಬೇಕಾದರೆ ನಿಮ್ಮ ಸ್ವಲ್ಪ ಪ್ರಯತ್ನ ಬೇಕಿತ್ತು. ನೀವು ಮನಸ್ಸು ಮಾಡಿದರೆ ಒಳ್ಳೆದು’’ ಎಂದರು. ಆಗ ನಾನು ನನ್ನ ತಂದೆಯವರಲ್ಲಿ ವಿಚಾರ ಮಾಡಿ ಬರುವೆನು ಎಂದು ಮಾತ್ರ ಹೇಳಿದೆ.ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನನ್ನ ತಂದೆಯವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇತ್ತು. ಡಾಕ್ಟರರು ನನ್ನ ತಂದೆಯ ಆಪ್ತ ಗೆಳೆಯರು. ನಾನು ಅನಂತ ನವರು ತಿಳಿಸಿದ ವಿಷಯವನ್ನು ತಂದೆಯವರಲ್ಲಿ ಪ್ರಸ್ತಾಪಿಸಿದೆ. ‘‘ಧೈರ್ಯದಲ್ಲಿ ಪ್ರಯತ್ನ ಮಾಡು. ತಡ ಮಾಡಿದರೆ ಸಮಯ ಹಾಳು’’ ಎಂದು ನನ್ನನ್ನು ಹುರಿದುಂಬಿಸಿ ಚುನಾವಣಾ ಪ್ರಚಾರಕ್ಕೆ ಇಳಿಯುವಂತೆ ಪ್ರೇರೇಪಿಸಿದರು. ಅಂದೇ ಸಂಜೆ ಅನಂತರವರೊಂದಿಗೆ ಸೇರಿಕೊಂಡು ನನ್ನ ಕಾರಿನಲ್ಲೇ ಸಂಚರಿಸಿ ನೂರಾರು ಮತದಾರರನ್ನು ಭೇಟಿಯಾದೆ. ನನ್ನ ಹೊಸತಾದ ‘ಓಟು ಹಿಡಿಯುವ ಕೆಲಸ’ದಿಂದಾಗಿ ನಮ್ಮ ಕುಟುಂಬದ ಅನೇಕ ಜನರಿಗೆ ಆಶ್ಚರ್ಯ ಹಾಗೂ ಕುತೂಹಲ. ನಾವು ಭೇಟಿಯಾದವರೆಲ್ಲರೂ ಉತ್ತಮ ಪ್ರತಿಕ್ರಿಯೆ ನೀಡಿದರು. ಅಂತೂ ನಮ್ಮ ಪ್ರಯತ್ನ ಅದ್ಭುತ ಫಲ ಪಡೆಯಿತು. ಡಾಕ್ಟರು ಚುನಾವಣೆಯಲ್ಲಿ ಗೆದ್ದರು. ಅಂದಿನಿಂದ ನನಗೆ ಡಾಕ್ಟರ್ ಸುಬ್ಬರಾಯರ ನಿಕಟ ಪರಿಚಯ.ಅವರು ತುಂಬ ಹೃದಯ ವೈಶಾಲ್ಯ ಉಳ್ಳವರು. ಕಷ್ಟದಲ್ಲಿರುವವನಿಗೆ ತನ್ನ ಕೈಯಿಂದಾದ ಎಲ್ಲಾ ಸಹಾಯವನ್ನೂ ಮಾಡುತ್ತಿದ್ದರು. ಅನಗತ್ಯವಾಗಿ ಸಿಡುಕುವ ಸ್ವಭಾವ ಮತ್ತೆ ಸಮಾಧಾನ ಹೊಂದುವ ಅವರ ವರ್ತನೆ ಜನತೆಗೆ ಒಂದು ಮಾಮೂಲಿ ಸ್ವಭಾವವಾಗಿ ಕಂಡುದರಲ್ಲಿ ಆಶ್ಚರ್ಯವಿಲ್ಲ.ಒಮ್ಮೆ ನಾನು ನನ್ನ ತಂದೆಯವರ ಜೊತೆ ಮಂಗಳೂರಿನ ಕಡೆಯಿಂದ ರಾತ್ರೆ ಹಿಂದಿರುಗುವಾಗ ತಲಪಾಡಿಯ ಹತ್ತಿರ ಕಾರು ಕೆಟ್ಟುಹೋಯಿತು. ಅದೇ ಹೊತ್ತಿನಲ್ಲಿ ಡಾಕ್ಟರರು ಕುಟುಂಬ ಸಮೇತರಾಗಿ ಕಾರಿನಲ್ಲಿ ಹಾದು ಹೋದರು. ಒಂದೇ ನಿಮಿಷದಲ್ಲಿ ಅವರ ಕಾರು ಹಿಂದಕ್ಕೆ ಬಂದು, ನಮ್ಮ ಕಾರಿನ ಬಳಿ ನಿಂತಿತು. ವಿಷಯ ಏನೆಂದು ವಿಚಾರಿಸಿ ಕಾರಿನ ಟಯರ್ ಪಂಕ್ಚರ್ ಆದದ್ದು ತಿಳಿದೊಡನೆ ಅವರು ತಮ್ಮ ಕಾರಿನಲ್ಲಿದ್ದ ಟಯರನ್ನು ನಮ್ಮದಕ್ಕೆ ಹಾಕಿಸಿ ನಮ್ಮನ್ನು ಕಳಿಸಿಕೊಟ್ಟರು.ಅದೇ ಸಮಯದಲ್ಲಿ ನಾನೊಂದು ಸಣ್ಣ ಕೈಗಾರಿಕಾ ಘಟಕ ಸ್ಥಾಪಿಸಿದ್ದೆ. ಡಾಕ್ಟರೇ ಅದನ್ನು ಉದ್ಘಾಟನೆ ಮಾಡಿದ್ದು. ಪ್ರತೀ ಸಲ ಕಾಣಸಿಕ್ಕಿದಾಗ ಅದರ ಬಗ್ಗೆ ವಿಚಾರಿಸಿ ಪ್ರೋತ್ಸಾಹಿಸುತ್ತಿದ್ದರು. ವಿಷಯ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಸಹಕರಿಸಿ ಪ್ರೋತ್ಸಾಹಿಸುವ ಸ್ವಭಾವ ಅವರದ್ದು.ಕೆಲವೊಮ್ಮೆ ಮನಸ್ಸಿಗೆ ನೋವಾದರೆ ಅವರಿಗೆ ಜೋರು ಸಿಟ್ಟು ಬರುತ್ತಿತ್ತು. ಆದರೆ ಅದು ಕೆಲವೇ ಕ್ಷಣಗಳು. ಅನಂತರ ಪುನಃ ಕರೆದು ಮಾತಾಡಿಸುವ ಸ್ವಭಾವ ಅವರದ್ದು. ಡಾಕ್ಟರ್ ಒಂದು ಕಾರ್ಯ ಒಪ್ಪಿಕೊಂಡರೆ ಹಿಂದೆ ಸರಿಯುವವರಲ್ಲ. ಹಠವಾದಿಗಳು. ಅವರ ಕಳಂಕರಹಿತ, ನೇರ ನಡೆನುಡಿ ಎಲ್ಲರಿಗೂ ಆದರ್ಶ.

ಎ. ಶಂಕರನಾರಾಯಣ ಭಟ್, ಮಧೂರು

ಮರೆಯಲಾಗದ ಚೇತನ:

ಪುತ್ತಿಗೆ ಪಂಚಾಯತಿನ ಸಿದ್ಧಿಬೈಲಿನಲ್ಲಿ ಚಿತ್ತಾರಿಕೆರೆ ಎಂಬ ಒಂದೂವರೆ ಎಕ್ರೆಯ ಕೆರೆ ಇದೆ. ಅದು ಪಂಚಾಯತ್ ಸೊತ್ತು. ಕಣ್ಣೂರಿನ ನಾವೂರು ಭಾಗದ ಬೆಟ್ಟ ಗದ್ದೆಗಳಿಗೆ ಏಣಿಲು ಬೆಳೆಗೆ ಏಕಮಾತ್ರ ನೀರಿನ ಆಶ್ರಯವಿದು. ಅದರ ಸುತ್ತಲಿನ ಜಮೀನನ್ನು ಪುಕ್ಕಟೆ ಕ್ರಯಕ್ಕೆ ಖರೀದಿಸಿದ ಶ್ರೀಮಂತರೊಬ್ಬರು ನೀರನ್ನು ಬಿಡೆನೆಂಬ ತರ್ಕ ಹೂಡಿದರು. ಆಗಲೇ ನಾನು ಮೊತ್ತಮೊದಲು ಸಿ.ಪಿ.ಐ.ಯ ಪ್ರಯೋಜನ ಪಡೆದದ್ದು. ಆಗ ಪೆಗ್ಗು ಅಜ್ಜಿ ಘೋಷಿಸಿದ ಮಾತು ಯಾವತ್ತೂ ಗುಣುಗುಣಿಸುತ್ತದೆ. ‘ಹೋಗು ಮಗಾ, ನನ್ನ ಆಶೀರ್ವಾದವಿದೆ. ನನ್ನ ಒಬ್ಬ ಮಗನನ್ನು ನಿನಗೆ ಕೊಡುತ್ತೇನೆ. ಅಗತ್ಯ ಬಿದ್ದರೆ ಮೊದಲ ಬಲಿ ಕೊಡು’ ಎಂದರು! ಸೀದಾ ಡಾಕ್ಟರರಲ್ಲಿಗೆ ಹೋದೆ. ಮರುದಿನವೇ ಬಂದರು. ಕೆರೆ, ಗದ್ದೆ ಎಲ್ಲಾ ನೋಡಿದರು. ಅದೇ ದಿನ ಮೆಮೊರಾಂಡಮ್ ತಯಾರಾಯಿತು. ಮರುದಿನ ಒಂದೇ ದಿನದಲ್ಲಿ – ಪಂಚಾಯತಿನಿಂದ ಹಿಡಿದು ಕಲೆಕ್ಟರರ ತನಕ ೫-೬ ಆಪೀಸುಗಳಿಗೆ ದೂರು ಕೊಡಲಾಯಿತು. ಆಗ ಕಲೆಕ್ಟರೇಟ್ ಈಗಿನ ಎಸ್.ಪಿ. ಆಪೀಸಿನಲ್ಲಿತ್ತು. ಅಲ್ಲಿಂದ ಈ ‘ಯುವಕ’ ಡಾಕ್ಟರ್ ರೈಲ್ವೇ ಸ್ಟೇಶನ್ ಬಳಿ ಇದ್ದ ಸಣ್ಣ ನೀರಾವರಿ ಆಪೀಸು ತನಕ ನಡೆದೇ ಹೋಗುವ ಹಠ ತೋರಿದುದು ನಮಗೆಲ್ಲಾ ಖುಷಿಯ ವಿಷಯವಾಗಿತ್ತು. ನೀರಿನ ಫಲಾನುಭವಿಗಳಾದ ೧೨-೧೪ ಜನ ಅವರ ಹಿಂದೆ ಇದ್ದೆವು. ಆ ದಿನ ಸರಳವಾದ ಊಟದ ಹೋಟೆಲನ್ನು ಹುಡುಕಿದ ಬಗ್ಗೆ ನನ್ನ ಜೊತೆಗಾರ ಮಮ್ಮುಚ್ಚ ಈಗಲೂ ನೆನಪಿಸಿಕೊಳ್ಳುವರು. ‘‘ಪಾರ್ಟಿ ಎಂದರೆ ಸಿ.ಪಿ.ಐ.; ಲೀಡರ್ ಅಂದರೆ ಸುಬ್ರಾವ್’’ ಎನ್ನುವುದು ಅವರ ಮಾತು.

ನಾ. ಕೃಷ್ಣ ಆಳ್ವ

ಸರಳ, ಸಜ್ಜನ ಡಾ. ಸುಬ್ಬರಾವ್:

ಮಂಜೇಶ್ವರ ಪುಣ್ಯಭೂಮಿಯಲ್ಲಿ ಹಲವು ರಂಗಗಳಲ್ಲಿ ಪ್ರಖ್ಯಾತಿ ಪಡೆದ ಮಹಾನ್ ವ್ಯಕ್ತಿಗಳಲ್ಲಿ ಡಾ. ಸುಬ್ಬರಾವ್ ಒಬ್ಬರು. ನನ್ನ ಹಾಗೂ ಸುಬ್ಬರಾಯರ ಆತ್ಮೀಯತೆ ಎರಡು ದಶಕಗಳದ್ದು ಮಾತ್ರ. ಆದರೂ ಅವರು ನನ್ನಲ್ಲಿ ತೋರಿಸಿದ ಪ್ರೀತಿ ಅಪಾರವಾದುದು.ವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ಜನಸೇವೆ ರೂಡಿಸಿಕೊಂಡ ಒಬ್ಬ ಅಪರೂಪದ ವ್ಯಕ್ತಿ ಅವರು. ವೈದ್ಯರಾಗಿ ರೋಗಿಗಳೊಂದಿಗೆ ನಿಷ್ಠುರವಾಗಿ ಇದ್ದರೂ, ನಿಜ ಜೀವನದಲ್ಲಿ ಮೃದು ಸ್ವಭಾವದವರಾಗಿದ್ದರು. ರಾಜ್ಯಸಭೆಯ ಸದಸ್ಯರಾಗಿ, ಕೇರಳ ವಿಧಾನ ಸಭೆಯ ಸದಸ್ಯರಾಗಿ ಹಾಗೂ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಡಾ. ಸುಬ್ಬರಾಯರು ಯಾವುದೇ ಆರೋಪಗಳಿಗೆ ಸಿಲುಕದ ಒಬ್ಬ ಅಪ್ಪಟ ದೇಶಪ್ರೇಮಿ. ತನ್ನ ಜೀವದ ಉಸಿರಿನಂತೆ ಸರಳತೆಯನ್ನು ಕಾಯ್ದುಕೊಂಡ ಒಬ್ಬ ದೀಮಂತ ವ್ಯಕ್ತಿ. ತನ್ನ ಇಳಿವಯಸ್ಸಿನಲ್ಲಿಯೇ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಿ ಜೀವಮಾನವಿಡೀ ಬಾಡಿಗೆ ಮನೆಯಲ್ಲಿಯೇ ವಾಸಿಸಿ, ‘ಬಡವರ ಬಂಧು’ ಎಂದು ಕೃತಿಯಲ್ಲಿ ತೋರಿಸಿಕೊಟ್ಟ ಮಹಾನ್ ಚೇತನ. ನಾನು ಬೇರೆ ರಾಷ್ಟ್ರೀಯ ಪಕ್ಷದ ಕಾರ್ಯಕರ್ತನಾಗಿದ್ದರೂ ನನ್ನನ್ನು ಅತ್ಯಂತ ಪ್ರೀತಿಯಿಂದ ಕರೆದು ಮಾತನಾಡಿಸುತ್ತಿದ್ದರು. ಅದು ಅವರ ದೊಡ್ಡತನ!ಅವರು ವಯೋವೃದ್ಧರಾಗಿದ್ದಾಗ ಒಮ್ಮೆ ಮಂಜೇಶ್ವರದ ಬಳಿ ರೈಲು ಅಪಘಾತ ನಡೆಯಿತು. ಆಗ ಮಧ್ಯರಾತ್ರಿಯ ಸಮಯ. ಆ ಹೊತ್ತಿನಲ್ಲಿ ಅಲ್ಲಿ ಗಾಯಾಳುಗಳ ಶುಶ್ರೂಷೆಗೆ ನಿಂತ ಡಾ. ಸುಬ್ಬರಾಯರನ್ನು ಕಂಡು ನಾನು ದಂಗಾದೆ. ಅವರು ತೋರಿಸಿಕೊಟ್ಟ ದಾರಿ, ಅನುಸರಿಸಿದ ಸರಳತೆ, ಈಗಿನ ಯುವ ಸಮುದಾಯಕ್ಕೆ ದಾರಿದೀಪ.

ಸಂಕಬೈಲು ಸತೀಶ ಅಡಪ್ಪ