ಚಂದದಿ ಭೋಜನ ಗೈವುತಿರಲು ಜಿನ್ನ
ವೃಂದಕೆ ಸಾಲದೆ ಬರಲನ್ನವು | ಮಗ
ಳಿಂದ ಮಾಡಿದ ಮೀಸಲಡಿಗೆಯನು | ಇನ್ನು
ತಂದು ನೀಡುವೆನೆಂದು ಬಲು | ದುಡುಕಿ
ಲಿಂದಲಿ ಮಗಳ ಮನೆಯ ಪೊಕ್ಕು ಭೂವರ ಭರ
ದಿಂದಲಿ ಒಯ್ಯಲು ಕಡುಕೋಪಿಸಿದಳು        ೪೬

ಅನಿತರೋಳಾದಯ್ಯ ಚರಮೂರ್ತಿಗಳ ಕೂಡಿ
ಮನೆಗಾಗ ಬರೆ ತನ್ನ ವನಿತೆಯಳು | ಕರ
ವನು ಮುಗಿದಾಗ ತಾ ಹೇಳಿದಳು | ಮನೆ
ಸುನಿ ಬಂದು ಹೊಕ್ಕಿತು ಈಗ ಕೇಳು | ಕೆಟ್ಟ
ಬಿನಗುಮಾನವರಿವರಿರಸಲ್ಲದೈ ಸ್ವಾಮಿ
ಎನುತಲಿ ವನಜಾಕ್ಷಿ ಇನಿಯಗೆ ಪೇಳೆ         ೪೭

ಆ ಮಾತು ಕೇಳುತ ರೋಮಾಂಚವುಬ್ಬುತ
ನಾ ಮತ್ತ ಜಿನ್ನನಿಕರವನು | ಕಿತ್ತು
ಗ್ರಾಮದೊಳಿವನೆಲ್ಲ ಒಡೆಸುವೆನು | ಈಗ
ಸೋಮನಾಥನ ತಂದು ನಿಲಿಸುವೆನು | ಅಯ್ಯೊ
ಈ ಮಾತು ಬಿಟ್ಟೆನಾದರೆ ಯಮಲೋಕದ
ಆ ಮಹಾಪಾತಕ ಬರಲಿ ನನಗೆಂದ ೪೮

ಇಂದೆಂಟು ದಿನದೊಳು ಇಂದುಧರನ ಕರೆ
ತಂದು ಉಂಬುವೆನೆಂದು ಶಪಥವನು | ಮಾಡಿ
ಮಿಂದು ಮಡಿಯನುಟ್ಟು ಮೂರ್ತಿಯನು | ಪೂಜೆ
ಚಂದದಿಂದರ್ಚಿಸಿ ಬೇಗವನು | ಕಂದು
ಕಂಧರ ಕಾಮಾರಿ ಹರಹರಯೆನುತ
ಮಂದಿರ ಪೊರಮಡಲಾ ವನಿತೆಯಳು       ೪೯

ಬಣಗು ಜಿನ್ನವ ಕಿತ್ತು ತ್ರಿಣಯನ ನಿಲಿಸುವ
ದಣಿಯಾಗಲೆಂದು ಸೇಸೆಯನಿಟ್ಟಳು | ರತ್ನ
ಮಣಿಮಯದಾರತಿಯೆತ್ತಿದಳು | ಗುಹ
ಗಣಪರ ಜನಕನ ಸ್ತುತಿಸಿದಳು | ಒಂದು
ಕ್ಷಣಮಾತ್ರ ಆಲಸ್ಯ ಬೇಡೆಂದು ಸತಿಶಿರೋ
ಮಣಿ ತನ್ನ ಇನಿಯನ್ನ ಕಳುಹಿದಳಾಗ         ೫೦

ಶ್ರೀ ಪುತ್ರಗರ್ವವಿಲೋಪರಹಿತ ಪಾಪ
ತಾಪತ್ರಹರ ಜಯ ಜಯಯೆನುತ | ಅಹ
‌ಗೋಪಸುತನೆ ಕಮಲಾಕ್ಷೆನುತ | ಗಿರಿ
ಜಾಪತಿ ಷಣ್ಮುಖ ಗಣಪಪಿತ | ಇಂದು
ಕೋಪಾಗ್ನಿನೇತ್ರ ನೀ ಗತಿಯೆಂದು ಪೊರಮಟ್ಟು
ತಾ ಪಥದೊಳಗಿಂತು ಸ್ತುತಿಸುತ ನಡೆದ      ೫೧

ತೊಡೆಗಳದುರಿ ಬೆರಳೊಡೆದಾಗ ರಕ್ತ ಜೋ
ರಿಡುತಲಿ ಬಹು ಶ್ರಮದಿಂ ಸಾಗುತ | ದೇವ
ಕಡುಕಷ್ಟದಿಂ ನೀನೆ ಗತಿಯೆನುತ | ಬಾಳ
ನಡೆಗೆಟ್ಟೆರಡು ಮೊಣಕಾಲೂರುತ | ಅಡಿ
ಗಡಿಗೊಮ್ಮೆ ಮೃಡನೆ ಮೃತ್ಯುಂಜಯ ಹರನೆಂದು
ದೃಢದಿಂದೆ ಪೊಡವಿಯೊಳ್ನಡೆದನಾದಯ್ಯ    ೫೨

ಹೇಳಲಿನ್ನೇನು ನಾ ಬಾಳ ಶ್ರಮದಿ ಮೊಣ
ಕಾಲೊಡೆದು ರಕ್ತ ಸುರಿಯುತಲಿ | ನೋವು
ತಾಳಲಾರದೆ ದೇಹ ಕೆಡೆವುತಲಿ | ಶಂಭು
ಭಾಳಾಕ್ಷನೆಂದು ತಾನುರುಳುತಲಿ | ಹೀಂಗ
ಏಳು ದಿವಸ ಹಗಲಿರುಳು ಪೋಗಲು ಚಂದ್ರ
ಮೌಳಿಯ ಕುರುಹನು ಕಾಣದೆಯಿರಲು        ೫೩

ಘೋರ ಬಿಡುತಲಿ ಕಾಂತಾರದೊಳಗೆ ಮನೋ
ಹಾರ ನೀ ಒಲಿಯೆಂಬೊ ಸಮಯದಲಿ | ಮದ
ನಾರಿ ಬಂದನು ವೃದ್ಧಚರ ರೂಪಿಲಿ | ಎಲೊ
‌ದಾರು ಎಲ್ಲಿಗೆ ಪೋಪೆ ಶ್ರಮದಿಂದಲಿ | ಗಿರಿ
ಜಾರಮಣನ ಕರೆತಹುದು ನಮಗೊಂದು
ಕಾರಣವುಂಟೆಂದೆ ಗಮಕಾದಿ ಪೋಪೆ         ೫೪

ಅಂಬುವ ನುಡಿಗೇಳಿ ಕುಂಭಿನಿಯೊಳು ಮಹಾ
ಶಂಭು ತಾ ನಿನಗೆಲ್ಲಿ ಸಿಲ್ಕುವನೊ | ನಿನ್ನ
ಡಿಂಬವ ಕೆಡಹಿ ನೀ ಬರುವದೇನೊ | ನನ್ನ
ಅಂಬಕದಿಂ ನೋಡಿ ಮರುಗಿದೇನೊ | ತಣ್ಣ
ನಂಬಲಿಯೆನ್ನಲ್ಲೆ ಉಂಟೀಗ ಮನುಜನೆ
ಉಂಬುಣ ಹೋಗೆಂದ ವೃಷಭವಾಹನನು     ೫೫

ಏತರ ಮಾತಿದು ಮಾಡಿದ ಶಪಥಕ್ಕೆ
ನೀ ತವೆ ಆತನ ಚರಣದಲಿ | ಪ್ರಾಣ
ಘಾತವಾದರೆ ಮುಕ್ತಿ ಸ್ವರ್ಗದಲಿ | ಸೋಮ
ನಾಥನ ಬಿಡೆ ನಾನು ತಾರದಲಿ | ಉಂಬು
ವಾತುರ ಎನಗಿಲ್ಲ ಬಿಡು ಪಥಯೆಂಬುತ
ಭೂತೇಶ ಭವನಾಶನೆಂದುರುಳಿದನು         ೫೬

ಮರಳಿ ನೋಡಲು ಚರ ಮಾಯವಾಗಿರಲಾಗ
ಹರನೆಂದರಿದು ಅಕಟೇನಾಯಿತು | ದ್ರವ್ಯ
ಕುರುಡ ಎಡಹಿದಂತೆನಗಾಯಿತು | ಭಾಗ್ಯ
ಕರ ಬಡವಗೆ ಸಿಕ್ಕು ಬಯಲಾಯಿತು | ಎಂಬ
ತೆರನ ತೋರಿದೆಯಯ್ಯ ಮುನಿದ್ಯಾ ಎನ್ನೊಡನೆಂದು
ಪರಿಪರಿ ಶೋಕದಿ ಮರುಗಿದ ಶರಣ           ೫೭

ಕಡು ಪರದೇಸಿಯ ಹಿಡಿದು ಕಾಂತಾರದಿ
ಬಿಡುವರೆ ಶಿವ ನಿಮ್ಮ ಪದಗಳಿಗೆ | ಮನ
ಸಿಡದೆ ನಾ ಪೊರೆದೆನೆಂದು ಈಗ | ತೋರಿ
ಅಡಗಿ ಪೋದೆಯಾ ಎನ್ನ ದೃಗಗಳಿಗೆ | ದುಃಖ
ನುಡಿಗೇಳಿ ಮೃಡ ತನ್ನ ನಿಜರೂಪದಲಿ ಬಂದು
ಬಿಡುಬಿಡು ಶೋಕವೆಂದ್ಹಿಡಿದು ರಂಬಿಸಿದ      ೫೮

ಬಳಲಿದೆ ಬಾರೆಂದು ಸೆಳೆದಪ್ಪಲಾದಯ್ಯ
ಒಳಿತು ಮಾಡಿದೆ ಮುನ್ನ ಕೈಲಾಸದಿ | ವಾಕ್ಯ
ಒಳಹೊರಗಿರುವೆನೆಂಬುತ ತೋರಿದಿ | ಮುಂದೆ
ಸುಳಿದಾಡಕಾಗುದೆ ನಿರ್ದಯದಿ | ಎಲೊ
ತಿಳಿದೆನು ನಾ ನಿನ್ನ ಮನದ ಸಂಕಲ್ಪವ
ಚಲದಂತೆ ಮಾಳ್ಪೆ ನೀ ನಡೆಯೆಂದ ಹರನು ೫೯

ಏಳುದಿವಸ ಹೀಂಗ ಬಾಳ ಶ್ರಮದಿ ಬಂದೆ
ನಾಳೆಗೆ ನಿಲಿಸುವೆ ಶಪಥವನು | ಪಂಥ
ಬೀಳಾಗಿ ಬರುವದು ಕೊರತೆಯೇನು | ಮುಂದೆ
ಹೇಳಯ್ಯ ಬರುವಂಥ ಗುರುತವನು | ಪುರ
ದೋಳಿರು ಅಂಧಕ ಹೆಳವನಿಗೆ ಕಣ್ಣು
ಕಾಲುಗಳ್ಬಂದುದೆ ಕುರುಹು ನೋಡೆಂದ      ೬೦

ಹೀಗೆಂಬು ವಚನವ ಕೇಳಿದಾಕ್ಷಣ ಶಿರ
ಬಾಗಿ ಶಂಕರ ನಮೊ ನಮೊಯೆನುತ | ಅನು
ರಾಗದಿ ತೊಡೆಯ ಮೇಲ್ಪವಡಿಸುತ | ಇಂಥ
ನಾಗಭೂಷಣ ಬಂದ ಸೋಮನಾಥ | ನೀವು
ಬೇಗೇಳಿರೆಂದು ಜನರನು ಎಚ್ಚರಿಸುವೋಲ್
ಕೂಗಿತು ಕುಕ್ಕುಟ ಪುರದ ಮಧ್ಯದಲಿ          ೬೧

ಹರನ ಮಹತ್ವವನರಿವುದಿನ್ನಾರಿಗೇ
ತೆರೆಯಲು ಮುಸುಕ ಕಂಡನು ಪುರವ | ತನ್ನ
ಅರಮನೆಯೊಳು ಬರಲಾ ಬರವ | ಕಂಡು
ತರುಣಿಯಳು ನಮಿಸೆಯೆತ್ತುತ ಶಿರವ | ಪುರ
ಹರನ ತಂದಂಥ ವೃತ್ತಾಂತವನುಸುರಿದ
ಅರಸಿಯೊಳೊಡನೆ ತಾನತಿ ಹರುಷದಲಿ     ೬೨

ಮಲತ್ರಯ ಗೆಲಿದನ ಒಲಿಸಿದುದು ದಿಟ
ನೆಲದೊಳಗೀ ಸುದ್ದಿ ಬಾರಲೆಂದು | ಶಚಿ
ಲಲೆಯೀವಂಥ ಡಂಗುರವುಯೆಂದು | ಪೂರ್ವ
ಚಲದಿ ದಿವಾಕರ ಮೂಡಿನಿಂದು | ಕಣ್ಗೆ
ಚಲುವಾಗಿ ತೋರಲು ಕೇಳಿತ್ತ ಪುಲಿಗೇರಿ
ಯಲಿ ಜಿನ್ನ ಪೂಜಕರತಿ ತವಕದಲಿ ೬೩

ವಾರಣದ ಮೇಲೆ ವಾರಿ ಪುಷ್ಪಾದಿಗ
ಳ್ಹೇರಿ ಬಂದರು ತೋರಬಸ್ತಿಯೊಳು | ಘನ
ದ್ವಾರ ಮುಚ್ಚಿರೆ ಅರೆಕದದೊಳು | ಬಲು
ಘೋರಬಡಲು ಎಲ್ಲಿ ಬರದಾಗಳು | ಪುಲಿ
ಗೇರಿಯನಾಳ್ವ ಪರೇಶನ ಗಳಿಗ್ಹೋಗಿ
ಸಾರಿದರಾಗ ಕೌತುಕದ ಸುದ್ದಿಯನು          ೬೪

ಆಡಿದ ಮಾತನು ಕೇಳಿ ಪರೇಶನು
ಕೂಡಿಸಿ ಚತುರಂಗ ಮಾರ್ಬಲಲಿ | ಬಂದು
ನೋಡಿದ ಜಿ‌ನ್ನನ ಬಾಗಿಲಲಿ | ಮುಂದೆ
ತೋಡು ಮಾಡುವದೇನುಯೆಂಬುತಲಿ | ಆಗ
ಜೋಡು ಆನೆಗಳ್ಹಚ್ಚಿ ನೂಕಲೆಲ್ಲೆಲ್ಲಿ
ಕೇಡಾಗದಿರೆ ಭೂಪನಚ್ಚರಿಯ ತಾಳ್ದ          ೬೫

ಬೆರಳ ಮೂಗಿನಲಿಟ್ಟು ಸಿರವನಲ್ಲಾಡಿಸುತ
ಬೆರಗಾಗಿ ಭೂವರನಾಡಿದನು | ಎಲೋ
ಹರಭಕ್ತನಾದಯ್ಯ ಪೋಗಿರ್ದನು | ಹೋಗಿ
ಅರಿದು ಬನ್ನಿರಿಯೆಂದು ಮನಷ್ಯರನು | ಆಗ
ತ್ವರಿತಾದಿ ಕಳುಹಲು ಚರರಾಗ ಬಂದು ಆ
ತರುಣಿ ಶಿರೋಮಣಿಯಳ ಕೇಳುತಿಹರು       ೬೬

ಏ ದೇವಿ ನಿನ್ನಯ ಮೋಹದ ವಲ್ಲಭನು
ಆದಯ್ಯ ಬಂದ ಹದನವ ಪೇಳು | ನಕ್ಕು
ಮೋದದಿ ಮಾತುಗಳಾಡಿದಳು | ಕಾಂತ
ಹೋದಾತ ಬಾರದೆ ನಿಂತ ಕೇಳು | ಅಂದ
ಆ ದೂತರ ಮಾತ ಕೇಳಿದಾಕ್ಷಣ ಬಂದು
ಮೇದಿನಿಪತಿಗಾಗ ಪೇಳಿದರೊಲಿದು           ೬೭

ಬಾರದೆ ಈ ಪರಿ ತೊರೆದು ವಿಪರೀತ
ಸಾರೆಂದನಾದಯ್ಯ ಅರಮನೆಗೆ | ಪರಿ
ವಾರ ಸಹಿತ ಬಂದು ನೋಡುತಾಗೆ | ಮೃದು
ವಾರಣ ವಚನದಿ ನುತಿಸಲಾಗೆ | ಎದ್ದು
ಆ ರಾಜನೊಡನೆ ಬರಲು ಮುಂದೆ ಹರ ಪೇಳ್ದ
ಕೇರಿಯೋಳ್ಕಂಡನು ಹೆಳವರಂಧಕರ        ೬೮

ಒಡೆಯ ಬಂದುದು ಸತ್ಯವೆಂದರಿಯುತಲವ
ರೊಡಗೂಡಿ ಅಲ್ಲೆ ದೃಢದಿ ಬರಲು | ಬಹು
ಜಡಿದು ಕಾವಟ ಬಂಧನದಿರಲು | ಹಸ್ತ
ಇಡಲಾಗ ದ್ವಾರ ತೆರೆದು ನೋಡಲು | ಜಿನ್ನ
ಒಡೆದು ಬಿದ್ದಿರೆ ಬೆನ್ನೊಳಡಿಯಿಟ್ಟು ಮೃಡನಿರೆ
ಪೊಡವಿಪ ಸಹ ನಡುನಡುಗಿದರೆಲ್ಲ ೬೯

ಆ ಪುಲಿಗೇರಿಯೊಳ್ಸಾಸಿರದೇಳ್ನೂರು
ಆ ಪರಜಿನ್ನವನೆಲ್ಲ ವೀಕ್ಷಿಸುತೆ ಸಹ | ಜಿನ್ನ
ಲೋಪಾಗಿ ಶಿರಬಾಗಿ ಬಿದ್ದಿರಲು | ಲಿಂಗ
ಸ್ಥಾಪನೆ ಸುಸ್ಥಿರವಾಗಿರಲು | ತ್ರಾಹಿ
ಶ್ರೀಪರಮಾತ್ಮ ನಿನ್ನಯ ಸರಿಯೆಂಬುವರ್
ಪಾಪಿಗಳೈ ಹಹಯೆಂದನಾ ರಾಯ ೭೦

ಮನದೊಳು ಮರ್ದವಾಗುತ ರಾಜನು
ಚಿನುಮಯಾತ್ಮದ ಲಿಂಗ ದೇಹದಲಿ | ಧರಿ
ಸೆನುತಲಿಟ್ಟನು ಭಕ್ತಿಭಾವದಲಿ | ಪಾದ
ವನಜವ ಪಿಡಿಯಲು ಕರಣದಲಿ | ಪುರ
ಜನ ಸಹ ರಾಯನೆಲ್ಲರ ಗುರುಕರದಿಂದ
ಮನೋಹರವಾದಿಷ್ಟಲಿಂಗವ ಧರಿಸಿ                    ೭೧

ಧರೆಯೊಳು ಮರೆಯದೆ ಶಿವಮತ ಘನವೆಂದು
ಮೆರೆಸಿದ ಮತ್ತೆ ವೆಗ್ಗಳಿಸಿದನು | ಭೂಮಿ
ಗರಿದೆಂಬ ಮಹಿಮೆ ತೋರಿದನು | ಅಲ್ಲಿಂ
ದಿರದೆ ಕೈಲಾಸವ ಸಾರಿದನು | ಮಾರ
ಹರಗೆ ವಂದಿಸಲಾಗ ಕರುಣದಿಂ ತಕ್ಕೈಸಿ
ಹರುಷದಿಂ ತನ್ನಲ್ಲಿ ಇರಿಸಿದ ಶಿವನು           ೭೨

ಆದಯ್ಯನ ಪುಣ್ಯಚರಿತೆಯ ಭಕ್ತಿ
ಯಿಂದೋದಿ ಬರೆದು ನೆರೆ ಪಠಿಸಿದರೆ | ಜನ
ರಾದವರೊಲಿದಿದ ಕೇಳಿದರೆ | ಮುಕ್ತಿ
ಸಾಧಿಸುವದು ದಿಟ ಭಜಿಸಿದರೆ | ಮತ್ತೆ
ಈ ಧರೆಯೊಳು ಕಾಮನಾಟದ ಪದಗಳ
ಸಾಧುಸಜ್ಜನರು ಸಾರಸದಿಂದೆ ಕೇಳಿ          ೭೩

ಮಿತ್ರನ ಪುತ್ರ ಸಪಾತ್ರ ಹರತ್ರಯ
ನೇತ್ರ ಪರಮಗೋತ್ರ ಮಂದಿರವ | ಶತ
ಪತ್ರಜಸ್ತೋತ್ರ ಅಮೃತಕರವ | ಪುಣ್ಯ
ಕ್ಷೇತ್ರ ಶ್ರೀಕುಂದಗೋಳದಲಿರುವ | ಗುರು
ಪುತ್ರನಡಿಭೃಂಗ ಸುಪುತ್ರ ಬಸವಲಿಂಗ
ಧಾತ್ರಿಯೊಳೊರೆದ ಚರಿತ್ರೆಯ ಕೇಳಿ          ೭೪