ದುಂದುಮೆಯೆಂದೆಂದು ಪಾಡಿರಿ ಜಾಣ
ದುಂದುಮೆ ಬಸವಂತಹಬ್ಬ | ಪ |

ಶಿವಶಿವ ಗಣನಾಥನಂದನ ತನು
ಭವಹರ ನಿರ್ಜರೊಂದಿತ ಚರಣ | ಗೌರೀ
ಧವಧವಲಾಂಗವರ್ಜಿತ ಮರಣ | ಚಂದ್ರ
ರವಿವಹ್ನಿ ನೇತ್ರ ಪೂರಿತ ಕರುಣ | ಸರ್ವ
ಭುವನ ಜನರ ರತಿ ಮರಿಯಾದೆ ಪಾಲಿಪ
ಭವನೆ ನಂಬಿದೆ ನಿನ್ನ ಒಲಿ‌ದೆನ್ನ ಸಲಹು       ೧

ಈಶ ಮಾಹೇಶ ಗೌರೀಶ ಗಜಾಂತಕ
ನಾಶ ಮುಕ್ತೀಶ ಮಲ್ಲೇಶ್ವರನೆ | ಪುರ
ನಾಶ ಭೂತೇಶ ಸರ್ವೇಶ್ವರನೆ | ಯಮ
ನಾಶ ಗಿರೀಶ ಮದೀಶ್ವರನೆ | ಜಗ
ದೀಶ ಗಂಗಾಂಬೆಯ ತೋಷ ಭೂಷ ಅಘ
ನಾಶ ರಹಿತ ಆಶ ಸಲಹು ಸೋಮೇಶ        ೨

ಆದಿಗಣೇಶನು ಹರನ ನಿರೂಪದಿ
ಮೇದಿನೀಸ್ಥಲದೊಳಗುದ್ಭವಿಸಿ | ಪರ
ವಾದಿ ಜಿನ್ನರನ್ನೆಲ್ಲ ಸಂಹರಿಸಿ | ಸೌ
ರಾಷ್ಟ್ರ ಸೋಮೇಶನ ಸ್ಥಿರಗೊಳಿಸಿ | ಮತ್ತೆ
ಈ ಧರೆಯೊಳು ತೋರಿ ಮೆರೆಸಿದದಯ್ಯನ
ಮೋದದಿಂದಾತನ ಕಥೆಯ ನಿರ್ವಿಪೆನು      ೩

ಕರ್ತುಶಂಕರ ಸಿಂಹಪೀಠವಡರಿ ಮತ್ತೆ
ಮೋರ್ತಮಾಡಿರೆ ಸುತ್ತ ಎಡಬಲದಿ | ಲಕ್ಷ್ಮಿ
ಕರ್ತರು ಅಜರಿರ್ಪ ತರತರದಿ | ಭೃಂಗಿ
ನರ್ತನ ಗಾನವೆತ್ತುವ ಸ್ವರದಿ | ಗಣ
ದರ್ತಿಲೆ ಸಂತೋಷದಿಂದಿರ್ಪ ಸಮಯದಿ
ತುರ್ತದಿಂ ನಾರದ ಮರ್ತ್ಯದಿಂದಿಳಿದ         ೪

ಆ ಕ್ಷಣ ಬಂದು ನಿರೀಕಷಿಸಿ ಇಂದು ಭಾ
ಳಾಕ್ಷ ಸುಮುಕ್ಷವಾಹನ ಜಯತು | ನಿರ
ಪೇಕ್ಷ ನಿರ್ಲಕ್ಷ ನಿರ್ಮಳ ಜಯತು | ಭಕ್ತಾ
ಪೇಕ್ಷ ಮುಮುಕ್ಷ ದಾಯಕ ಜಯತು | ಲೋಕ
ರಕ್ಷಕ ಪಾಲಕ ಪಕ್ಷಿವಾಹನ ನುತ
ದಕ್ಷ ಸಮ್ಮಖಶಿಕ್ಷ ಜಯಯೆಂದ ಮುನಿಪ      ೫

ತಪ್ತನಾಗುತ ಶಿವ ಮುನಿಸ್ತುತಿಗೆ ವಾಣೀ
ವಪ್ತರುಳನೆ ಬಂದ ಕಾರ್ಯವೇನು | ಪೇಳ್ವೆ
ಸಪ್ತಸಾಗರವನು ದಾಂಟಿದೆನು | ದ್ವಿತಿ
ಸಪ್ತಲೋಕವನೆಲ್ಲ ಚರಿಸಿದೆನು | ದೇವ
ಸಪ್ತದ್ವೀಪಾಂತರ ಸುತ್ತಿ ಬರಲು ಎಂಟು
ಸಪ್ತ ದೇಶದೊಳೊಂದು ಕಂಡೆ ಕೌತುಕವ     ೬

ಬಲ್ಲಿದ ಪುಲಿಗೆರೆಯಲ್ಲಿ ನಿಮ್ಮಯ ಸುದ್ದಿ
ಎಲ್ಲೆಲ್ಲಿ ನೋಡೆ ಎಳ್ಳಿನಿತಿಲ್ಲವು | ಕುನ್ನಿ
ಖುಲ್ಲ ಜಿನ್ನವು ಹೆಚ್ಚಿಕೊಂಡಿಹವು | ಪೇಳೆ
ನಲ್ಲಿ ಶ್ರೀ ಗುರುಲಿಂಗಜಂಗಮವು | ಪೇಳ್ವೆ
ನಲ್ಲಮಭಕ್ತರು ಎಲೆಮರೆ ಕಾಯಂತೆ
ಅಲ್ಲಡಗಿಹರಿಭಪುರದೊಳಗೇ         ೭

ಚಿನುಮಯ ಕೇಳ್ನಿಮ್ಮ ಮತವನುದ್ಧರಿಸುವ
ದೆನಲಾದಿಗಣಪನ ನಿಟ್ಟಿಸುತ | ನಮ್ಮ
ಘನ ಶಿವಮತವನು ಹೆಚ್ಚಿಸುತ | ಪೇಳಿ
ದನು ಪೋಗಿ ಜಿನ್ನನ ಶಿಕ್ಷಿಸುತ | ಬಾಯೆಂ
ದೆನಲಾಗ ಹರಹರ ಧರೆಯೊಳು ನರನಾಗಿ
ಜನಿಸಲು ನಾ ನಿಮ್ಮ ಚರಣಗಾಂಬುವೆನೆ     ೮

ಒಳಹೊರಗಿರುವೆನು ಇದಕೇಕೆ ಸಂಶಯ
ಇಳೆಗಿಳಿಯೆಂದು ಅಪ್ಪಣೆಯೀವುತ | ಪೋಗಿ
ಗಳಿಲನೆ ಸೌರಾಷ್ಟ್ರದಲಿ ಪುಟ್ಟುತ | ನಮ್ಮ
ಚಲದಂಕನಾದಯ್ಯನೆಂದೆಂಬುತ | ಘನ
ಮಲಹರ ಭಕ್ತನು ಜಿತಪಾಪ ಮುಕ್ತನು
ನಲವಿಂದೆ ಧರೆಯೊಳಗಿರ್ಪ ಸಂತೋಷದಿ   ೯

ಅವನಿಯೊಳ್ ಶಿವಭಕ್ತರುದರದಿ ಜನಿಸುತ
ತ್ರಿವಿಧ ಲಿಂಗದ ಕಲೆನೆಲೆ ತಿಳಿದು | ಪಂಚ
ತ್ರಿವಿಧ ಮದದ ಮೂಲಗಳನಳಿದು | ಆಗ
ತ್ರಿವಿಧ ಗುಣಂಗಳ ನೆರೆ ಕಳೆದು | ಮತ್ತೆ
ತ್ರಿವಿಧ ಮಲಂಗಳ ಸುಟ್ಟು ಬ್ರಹ್ಮವ ಕಂಡು
ತವೆ ಗುರುಕರುಣದಿಂದಿರ್ಪನಾದಯ್ಯ         ೧೦

ಪೃಥ್ವಿಯೊಳೀತನು ಎಸಗು ವ್ಯವಹಾರವ
ಬಿತ್ತರಿಸುವೆನೀಗ ಭೂಮಿಯೊಳು | ಘನ
ರತ್ನನೀಲವು ಪಚ್ಚಪವಳಗಳು | ಸಲೆ
ಮುತ್ತುಗಳೊಜ್ರವೈಡೂರ್ಯಗಳು | ಕಾಯಿ
ಪತ್ರಿ ಲಾವಂಗವ ಲೆಕ್ಕ ವಿಲ್ಲದೆ ತಾನು
ಎತ್ತುಗಳ್ವೋಡಿಸಿದನಾಗ ದಕ್ಷಿಣದೇಶಕೆ       ೧೧

ಬಂದು ಶ್ರೀ ಪುಲಿಗೆರಿ ಪುರವಳಯದಾಗ
ನಿಂದು ಬೀಡಿಕೆಯನು ಇಳುಹಿಸಿದ | ಸ್ನಾನ
ಇಂದುಧರನ ಪೂಜೆ ತೀರಿಸಿದ | ಪುರ
ವಿಂದು ನೋಡುವೆನೆಂದು ನೇಮಿಸಿದ | ಭರ
ದಿಂದ ಸಿಂಗರವಾಗಿ ತಾ ಹೊರಟನು
ನಂದದಿ ಸೂರ್ಯಚಂದ್ರರ ಬೀದಿಯೊಳಗೆ    ೧೨

ಅನಿತರೊಳೀ ಶಿವಪ್ರೇಮಿ ಬರುತಿರ್ಪ
ನನು ನೋಡಲೆನುತಲಿ ಪೇಳೆ | ಅಂದು
ಇನನಸ್ತನಾದ ಪಶ್ಚಿಮ ಚಲಕೆ | ಪದ್ಮ
ನನೆಯಾಗೆ ತಮ ಮುಸುಕಿತು ಜಗಕೆ | ತಾರೆ
ಮಿನುಗುತ ಗಗನದೋಳಲ್ಲಲ್ಲೆ ಮೂಡಲು
ವಿನಯದಿಂ ನೈದಿಲೆ ನಲಿದವಾಕ್ಷಣದಿ         ೧೩

ಹರಭಕ್ತನಿವನ ಸಂದರುಶನಕೆಂದಾಗ
ತ್ವರಿತದಿ ಬಂದು ಪೂರ್ವದಿಸೆದಿ | ಹಿಮ
ಕಿರಣ ಪ್ರಜ್ವಲಿಸುತ ಸಮ್ಮುದದಿ | ಆಗ
ಸರಸಚಕೋರಗಳ್ ಸಂತೋಷದಿ | ಮುಂದೆ
ಬರುತಿರಲಾದಯ್ಯ ಕಳಸ ಕನ್ನಡಿ ತೋರ್ಪ
ಕರುಮಾಡಗಳ ನೋಡುತೈತರಲಾಗ         ೧೪

ಎಲ್ಲೆಲ್ಲಿ ನೋಡಲು ಅಲ್ಲಿ ಜಿನ್ನಾಲಯ
ವೆಲ್ಲ ಜಿನ್ನರು ತುಂಬಿ ಪುರವೆಲ್ಲವು | ಮತ್ತಿ
ನ್ನೆಲ್ಲೆಲ್ಲಿ ಶಿವನಿಳಯಗಳಿಲ್ಲವು | ಇದ
ರಲ್ಲೆ ಹರನ ಭಕ್ತರಿರ ಸಲ್ಲವು | ಮನ
ದಲ್ಲಿ ಬಾಳತಿ ನೊಂದು ಮಲ್ಲಿಕಾರ್ಜುನ ಉಮೆ
ವಲ್ಲಭ ಹರಹರಯೆಂದು ಮರುಗಿದನು         ೧೫

ಮುಂದಡಿಯಿಡುತ ನಿಟ್ಟಿಸಿ ಎಡಬಲದೊಳು
ಮಂದಿರ ಮೇಲುಮಂಟಪಗಳನು | ನಯ
ದಿಂದ ತೋರ್ಪ ಶೃಂಗಾರವನು | ಗಜ
ಮಂದಗಮನೆಯರ ವೃಂದವನು | ಭರ
ದಿಂದ ಕಂದರ್ಪನ ಮಾರ್ಬಲವೊಂದಾಗಿ
ಬಂದತ್ತ ನಯನಕೆ ರಂಜಿಸುತಿ‌ಹುದು          ೧೬

ತಂಗಾಳಿ ತೀಡಿ ತಿಂಗಳ ಮೂಡಿ ಮನಸಿಜ
ಸಿಂಗಾಡಿವಿಡಿದನು ಕೋಪದಲಿ | ತಾಳ
ದಂಗಾನೆ ಉಡುಪನನು ಬೈವುತಲಿ | ರಾಹು
ನುಂಗಿಬಿಟ್ಟನು ಪಾಪಿಯೆಂಬುತಲಿ | ಅವ
ನಂಗುಳವ ಸುಟ್ಟಳುಪಿದ ಶಿವನೋರ್ವಳು
ಭೃಂಗವೇಣಿಯಳು ತಾಪದಿ ಬಳಲುವಳು     ೧೭

ಇಂದುಮುಖದಿ ಬೆಮರ್ದುಂಬಿ ನಾಸಿಕದೊಳು
ಮಂದಮಾರುತ ತೀಡೆ ಬಹುಭರದಿ | ಗಂಧ
ಚಂದನ ತಲೆಗೂಡಿ ತನ್ನುರದಿ | ಕಂಚು
ಕಿಂದು ಬಿಚ್ಚಿರೆ ಜಾರಿದಂಬರದಿ | ಅರ
ವಿಂದ ಬಾಣನ ಸಮರಂಗ ತೀರಿಸಿ ಶ್ರಮ
ದಿಂದಲಿ ಮಂದಾನಿಲನ ಬಯಸುವಳು        ೧೮

ಕುಟಿಲಕುಂತಳೆ ತೀಡಿ ಕಟಿಗೆ ನಿರಿಗೆ ಬಿಗಿ
ದುಟಗೊಂಬುತವಳತಿ ಶೀಘ್ರದಲಿ | ದ್ವಯ
ಪಟುತರ ಕುಚಗಂಧ ಕೊಡಹುತಲಿ | ತನ್ನ
ತುಟಿಯ ಪಿಡಿದು ಜಗ್ಗಿ ನೋಡುತಲಿ | ನಾರಿ
ವಿಟನುರೆ ಬೈದು ಚಿಟಕ ಮುರಿವುತಲಿ ಸಂ
ಗಟದಿಂದ ತನ್ನ ಸದನಕೈದುತಿರಲು           ೧೯

ಅರವಿಂದಮುಖಿಯೆ ಬಾ ಅರುಣ ಚಂದುಟಿಯೆ ಬಾ
ಗುರುಕುಚ ತಳಿರಡಿ ಸುಗುಣೆ ಬಾರೆ | ಚಲ್ವ
ಕರಿನಡೆ  ಹರಿಮಧ್ಯೆ ಜಾಣೆ ಬಾರೆ | ಚಲ್ವ
ಮರಿದುಂಬಿಗುರುಳೆ ಪ್ರವೀಣೆ ಬಾರೆ | ನಿನ್ನ
ಸರಿಯ ನಾರಿಯುರಂಟೆ ಭುವನದೊಳೆಂದೋರ್ವ
ತರುಣಿಯ ಮುನಿಸು ಸಂಬಿಸುತಿರ್ದನವನು ೨೦

ಬಲ್ಲೆನು ನಾ ನಿನ್ನ ಬಣ್ಣದ ಮಾತುಗ
ಳೆಲ್ಲ ಸಕ್ಕರೆದುಟಿ ಸವಿಯುವುದು | ಕುಚ
ದಲ್ಲಿ ನಖದ ರೇಖೆಯೂರುವುದು | ದ್ವಯ
ಗಲ್ಲವ ಪಿಡಿದು ಮುದ್ದಾಡುವುದು | ಅವ
ಳಲ್ಲೆ ಮನಸನಿಟ್ಟು ಇಲ್ಲೆ ಬಹಿರಂಗದ
ಸೊಲ್ಲಿಲೆ ಸಾಕುಸಾಕೆಂದಳು ಮುನಿದು        ೨೧

ಚಿಕ್ಕಂದು ಮೊದಲಾಗಿ ಇವಗೆ ಮೆಚ್ಚಿಕೊಂಡು
ಸಿಕ್ಕರೆ ಬಿಡು ನೀ ತಿರಸ್ಕರಿಸಿ | ಬಹು
ರೊಕ್ಕವನೀವನ ನೀನೊಲಿಸಿ | ಈಗ
ದಕ್ಕಿಸಿಕೋ ದ್ರವ್ಯ ಸತ್ಕರಿಸಿ | ಪ್ರಾಯ
ಮಿಕ್ಕಿದ ಬಳಿಕಿನ್ನು ಗಳಿಸಿಯೆ ಮುಂದಿನ್ನು
ಮಕ್ಕಳಿಗೆ ಬುದ್ಧಿ ಹೇಳುವಳ್ಮುದಿಕಿ    ೨೨

ನಾರಿ ನಿನ್ನಯನದಿ ಕೆಂಪೇನೆ ಮೂಗಿನೋಳ್
ಮೇರೆ ಮೀರುತ ಗಾಳಿ ತೀಡ್ವುದೇನೆ | ನಿನ್ನ
ತೋರ ಕುಚವು ಬಿದಿಗಿ ಚಂದ್ರನೇನೆ | ಫಣಿ
ಸಾರಕುಂತಳೆ ತುಟಿಯಸಿತವೇನೆ | ಯತಿ
ಸಾರೆನ್ನೇಕಾಂತದಿ ನೆರೆದು ಬಂದುದು ದಿಟ
ಭೂರಿಕೋಪದಿ ನೀರೆ ಒದೆದಳಾಳಿಯನು     ೨೩

ಇಂತಪ್ಪ ವೈಭವಂತಕಾಂತಕ ಭಕ್ತ
ಸಂತಸದಿ ನೋಡುತೈತರುತಾ | ತೋರ್ಪ
ಮುಂತೊಂದು ಮಂಟಪ ರಂಜಿಸಿತು ತಾ | ಭೂಮಿ
ಕಾಂತನ ಸುತೆ ಪದ್ಮವತಿ ಕಾಣುತಾ | ಮದ
ದಂತಿಗಮನೆಯಳ ಕಾಂತಿ ವರ್ಣಿಸುವಡೆ
ಅಂತಪ್ಪ ಬ್ರಹ್ಮಗಸಾಧ್ಯವಾಗಿಹುದು ೨೪

ಅಳಿಗಿಳಿ ಕಳಹಂಸ ತಳಿರುನಳಿನ ಸುಳಿ
ಕಳಸಕನ್ನಡಿ ಸಲೆ ಕುಂತಳವು | ನುಡಿ
ಗಳು ಕಾಮಿನಿಯ ಚಲ್ವಪದಯುಗವು | ವರ
ಕಳೆಮುಖ ನಾಭಿ ಕುಚದ್ವಯವು | ನೆರೆ
ಹೊಳೆವ ಕದಪಿನಿಂದ ಕೆಳದಿಯರೊಪ್ಪಿರ್ದ
ಎಳೆ ಚಂದ್ರಧರಭಕ್ತ ಕಂಡನಾ ಕ್ಷಣದಿ          ೨೫

ದ್ವಿತಿಸುತನುದರದಿ ಖತಿಯಿಂದೆ ಬಿಗಿದು ಶ್ರೀ
ಪತಿ ತನ್ನ ಅವತಾರ ಇಡಲಿಕೆಂದು | ವಸು
ಮತಿಯೊಳಗೆ ತಾವಿಲ್ಲೆಂದು | ಸ್ವರ್ಣ
ಲತೆದೇಹಿ ಇವಳಲ್ಲಿ ಇಟ್ಟನೆಂದು | ಮಂದ
ಗತಿ ಅತಿಜ್ಞಾನ ಸೂಮತಿ ಭೂಪಸುತೆ ಪದ್ಮ
ವತಿ ಸಣ್ಣನಡುವು ಈ ತೆರದಿ ಶೋಭಿಸಿತು    ೨೬

ವರ ಪದ್ಮವತಿಯಳ ಪರಮ ಸುಲಕ್ಷಣ
ಪರಕಸಲಾರೆ ಈ ಧರೆಯೊಳಗೆ | ಮತ್ತೆ
ಹರಭಕ್ತ ಭ್ರಾಂತದ ಮನದೊಳಗೆ | ಸ್ಮರ
ಸರಳು ನಡಲು ಗಾಯ ಉರದೊಳಗೆ | ಮನ
ಕರಗಿ ಅವಳ ಮುಖವೀಕ್ಷಿಸುತಿರಲಾಗ
ತರುಣಿಯಾಳಿವನ ಸಮ್ಮುಖವ ನೋಡಿದಳು ೨೭

ಚದುರೆ ಕಾಂತನ ಕಂಡು ನದರಿಕ್ಕಿ ಅ ಸಖಿ
ಬೆದರಿದೆರಳೆಯಂತೆ ಕಂಪಿಸುತ | ಆಗ
ಮದಮೋಹದ ಕಲೆನೆಲೆಗುಬ್ಬುತ | ಬಹು
ಹದ ಮೀರಿ ತಾಪ ರೋಮಗಳೇಳುತ | ತನ
ಗಿದಗಿದ ವಿರಹಭ್ರಾಂತಿಗಳಿಂದ ತನ್ನಯ
ಸದನದೊಳಗೆ ನಿಂತು ಪೊಗಳುತಲಿಹಳು     ೨೮

ಹರನುರಿಗಣ್ಣಿಂದ ಮಡಿದ ಮನ್ಮಥನೆಂಬ
ಬರಿಯ ವಚನ ತನ್ನ ರತಿಯಳನು | ಬಿಟ್ಟು
ಧರೆಯೊಳಗಿರ್ಪಂಥ ಸತಿಯರನು | ಸುಖ
ಸುರತಗೊಂಬುವೆನೆಂದು ಮನ್ಮಥನು | ಬಂದ
ಪರಿಯಿಂದಲ್ಲದೆ ಬೇರೆ ಹೊರತಿಲ್ಲವೆಂಬುತ
ಸರಸಿಜನೇತ್ರೆ ಈ ಪರಿಯೊಳಾಡಿದಳು       ೨೯

ಉರ್ವಿಯೊಳೀತನು ಒಲಿಯಬೇಕಾದರೆ
ಪೂರ್ವದ ಪುಣ್ಯವಿಲ್ಲದೆ ಸಿಗನು | ಇವ
ನೋರ್ವನೆ ಸಾಕು ಸೌಭಾಗ್ಯವೇನು | ಅಳೆ
ಉರ್ವಿಸನ್ನಿಭ ಕಾಂತ ಪೇಳಲೇನು | ಈಗ
ಸರ್ವಪಾಲಿಗೆ ಬಿಟ್ಟು ಬಾರದೆ ಕರತಾರೆಂ
ದೊರ್ವಳ ಕಳುಹಿದಳವನ ಸನ್ನಿಧಿಗೆ           ೩೦

ಬಂದು ಆದಯ್ಯನಿಗೊಂದಿಸಿ ಕರತಂದು
ಚಂದದಿಂದೀರ್ವರ ಹೊಂದಿರಿಸಿ | ಅಷ್ಟ
ಗಂಧದರವ್ಯಗಳನೆಲ್ಲ ತಂದಿರಿಸಿ | ನಾರಿ
ಸುಂದರ ದೇಹದೊಳುಲೇಪಿಸಿ | ಮಕ
ರಂದ ಸೂಸುವ ಪೂಮಲೆಗಳ್ಮುಡಿವುತ
ಕಂದರ್ಪ ಆಹವಕುನುವಾದರಾಕ್ಷಣದಿ         ೩೧

ಒಬ್ಬರೊಬ್ಬರ ಮುಖವ ಒಬ್ಬರೊಬ್ಬರು ನೋಡಿ
ಒಬ್ಬರೊಬ್ಬರು ತೆಕ್ಕಿಯೊಳಗವಚಿ | ಬೇಗ
ಒಬ್ಬರೊಬ್ಬರಿಗೆ ಆತುರವು ಹೆಚ್ಚಿ | ಆಗ
ಒಬ್ಬರೊಬ್ಬು ತಾಂ ಚಂದುಟಿಯ ಕಚ್ಚಿ | ಹೀಂಗ
ಅಬ್ಜಲೋಚನೆ ಶ್ರಮದಿಂದೊರಗಿದಳು         ೩೨

ಇವಳಿಗೆ ಇಷ್ಟಲಿಂಗವು ಉಂಟೊಯಿಲ್ಲವೊ
ವಿವರಿಸಿ ನೋಳ್ಪೆನೆಂದ್ಯೋಚಿಸಿದ | ಆಗ
ಯುವತಿಯ ಎದೆಮುಟ್ಟಿ ಈಕ್ಷಸಿದ | ಇಷ್ಟ
ತವೆ ಲಿಂಗವಿಲ್ಲೆಂದು ಮನ ಹೇಸಿದ | ಎದ್ದು
ಭವಿಯಿವಳ ಸಂಗ ಭವಕಾದೆನಯ್ಯಯ್ಯೊ
ಶಿವಶಿವಯೆಂಬುತ ನಡೆದ ಬೀಡಿಕೆಗೆ           ೩೩

ಮಚ್ಚಗಂಗಳೆಗಾಗ ಎಚ್ಚರವಾಗುತ
ಸ್ವಚ್ಛ ಪರ್ಯಂಕದೊಳಿಲ್ಲವಾತ | ಕೂನ
ಹಚ್ಚದೆ ಪೋದನು ಎನ್ನೊಳೀತ | ಇಂಥ
ನೆಚ್ಚಿದ ಕಾಂತೆಯೊಳತ್ತ ಘಾತ | ಮಾಡಿ
ಮೆಚ್ಚಿಸಿ ಅಗಲಿ ತಾ ಪೋಗುವರೆ ವಿರಹದ
ಕಿಚ್ಚಿಗೆ ಗುರಿಮಾಡಿ ಇಟ್ಟ ನೆಲ್ಲಕ್ಕೆ     ೩೪

ಹಾಯೆನ್ನ ವಲ್ಲಭ ಹಾಯೆನ್ನ ಕಾಂತನೆ
ಹಾಯೆನ್ನ ಮನದ ಭಾಗ್ಯದ ಸಿರಿಯೆ | ಹಾ
ಹಾಯೆನ್ನ ಜೀವದ ಸಕ್ಕರೆಯೆ | ಹಾ
ಹಾಯೆನ್ನ ಒಲಿಸಬಲ್ಲಂಥ ದೊರೆಯೆ | ಹಾ
ಹಾಯೆಂದು ಹಂಬಲಿಸುತ ಹಳಹಳಿಸುತ
ತೋಯಜಗಂಧಿ ತಾ ಬಿದ್ದುರುಳಿದಳು         ೩೫

ಆ ಕಾಂತನಿಲ್ಲದೆ ಈ ಕಾಯ ಉಳಿಯದು
ಏಕಾಂತ ತಾಪಕೆ ಮಾಡಲೇನು | ಅಯ್ಯೊ
ಈ ಕಷ್ಟ ಪೂರ್ವದ ಬರಹವೇನು | ಉರ
ಲೀ ಕೊರಳಿಗೆ ಮಾಲೆ ಹಾಕಲೇನು | ಈಕೆ
ಶೋಕವ ಸಂಬಿಸಬೇಕೆಂದು ಬಂದು ದಿ
ವಾಕರ ಮೂಡಿದ ಪೂರ್ವಪರ್ವತಕೆ ೩೬

ತಾವರೆ ನಗಲು ತಾರೆಗಳೆಲ್ಲಪೋಗಲು
ಕಾವಳ ಬಿಟ್ಟೋಡೆ ಕುಮುದಗಳು | ದುಗು
ಡಾವಿಲಾಸದಿ ಚಕ್ರವಾಕಗಳು | ನಲಿ
ದಾವಾಗ ಖಗ ಮೃಗ ಭೃಂಗಗಳು | ಭಾವೆ
ಭಾವರೂಪನ ಬಯಸಿ ಕಾಂಬುವೆನೆಂದು
ಕೋವಿದ ಕಾಂತನ ಬಳಿಗೆ ಸಾಗಿದಳು         ೩೭

ಆ ತರುಣಿಯೇಳು ಸಂತಾಪದಿ ಬಳಲುತ
ಆತನ ಪಾದದಿ ಹಣೆಯನಿಟ್ಟು | ಇದು
ನೀತಿಯೆ ನಿನಗೆ ನಾ ಮನಸುಗೊಟ್ಟು | ಅತಿ
ಸೋತು ಬಂದವಳ ಕೂಡ್ಯಾತಕಿಷ್ಟು | ಎನ್ನ
ದಾತ ಮನ್ಮಥ ಪ್ರಖ್ಯಾತ ಭೂಮಿಯೊಳಿರ್ಪು
ದ್ಯಾತರದಯ್ಯಯ್ಯೊ ಘಾತಕವಿಧಿಯೆ         ೩೮

ನಿನ್ನ ನಂಬಿದ್ದೆನು ಗನ್ನ ಘಾತಕ ಮಾಡಿ
ಇನ್ನಗಲುವರೆ ಎನ್ನೊಳನ್ಯೆ ಹೇಳು | ಕಾಂತ
ಭಿನ್ನ ಭೇದಗಳೆನಗಿಲ್ಲ ಕೇಳು | ಉಂಡ
ಅನ್ನವು ವಿಷವಾಯಿತಿನ್ನು ಏಳು | ಗುಣ
ರನ್ನ ಮೋಹನ್ನ ಸಂಪನ್ನನೆನುತಲಾಗ
ಕನ್ನೆ ಶಿರೋಮಣಿ ಕಳವಳಿಸಿದಳು   ೩೯

ಕುವಲಯ ನೇತ್ರೆ ಕೇಳ್ ಭವಿ ಸಂಗಡ ನುಡಿ
ಭವಿಯ ಸಂಗಡ ಕೂಟ ಪವಡಿಸವು | ಮತ್ತೆ
ಭವಿಯ ಸಂಗಡ ಬಟ್ಟೆ ಗಮನಿಸವು | ಮೇಣ್
ಭವಿಯ ಸಂಗಡದಿ ಸಂಭೋಗಿಸವು | ಮುಂದೆ
ರವರವ ನರ್ಕವು ತಪ್ಪದು ಭವಿ ನೀನು
ಶಿವಭಕ್ತಜನ ನಮಗುಚಿತವಲ್ಲೆಂದ   ೪೦

ಕಮಲಜ ಗಂಧಿ ಕೇಳ್ ಕಾರಣವೇನಿದು
ಗಮನಿಸಿ ಬಿಟ್ಟು ಹಲವು ಭ್ರಾಂತಿಯ | ಈಗ
ಮಮಕಾಂತನೆಂಬುದ ಬಿಡು ಚಿಂತಿಯ | ನಾವು
ಗಮಕಾದಿ ಪೋಪೆವೆಂಬುವ ಗ್ರಂಥಿಯ | ಉಂಟು
ನಮಗೀಗ ದಿವಸ ಸಂದಿದವೆಂಬ ವಾಕ್ಯವ
ರಮಣಿ ಶಿರೋಮಣಿ ಕೇಳಿದಳಾಗ   ೪೧

ಏಕಾಂತ ಎನಗೆ ಬೇಕಿತ್ತು ನಿನ್ನೊಳು ಪ್ರಾಣ
ನಾ ಕೊಡುವೆನು ಸಟೆಯಲ್ಲ ಕೇಳು | ಎನ
ಗೆ ಕಟ್ಟು ಲಿಂಗವ ಹೃದಯದೊಳು | ಇಬ್ಬ
ರೇಕಾಗಿ ಇರುವುದು ಭೂಮಿಯೊಳು | ಎಲೆ
ಭೂಕಾಂತಸುತೆ ನಿಮ್ಮ ಕುಲಜರು ಕೂಡ್ವರೆ
ಏಕಾಂತ ಶಿವಭಕ್ತಿ ಸುಲಬಲ್ಲ ಕೇಳು ೪೨

ವದನದ ಕುರುಡಿಕುಠಾರ ಕೀಡಿಯೆಂದು ಬಿ
ಡದೆ ತನ್ನಂತೊಡಗೂಡಿದರೆ ತ | ನ್ನ ಪ
ಡೆದವರ್ಹಂಗಿಲ್ಲ ಕೂಡಿದರೆ ನೀ | ನು ಹಿ
ಡಿದುದ ಹಿಡಿವೆನು ಹೊರತಿಲ್ಲ ನಿನ್ನೊಳು
ಮೃಡ ಮೂರ್ತಿಯಾದಿಷ್ಟಲಿಂಗವ ಧರಿಸು      ೪೩

ಮಂದಗಮನೆಗಾಗ ಪರಮಶ್ರೀಗುರು ಹಸ್ತ
ದಿಂದಲಿ ಇಷ್ಟಲಿಂಗವ ಧರಿಸಿ | ನಯ
ದಿಂದಲಿ ಬೇರೆ ಮಂದಿರ ರಚಿಸಿ | ನಿತ್ಯಾ
ನಂದದಿ ಚರತೀರ್ಥವನು ಸಲಿಸಿ | ಸುಖ
ದಿಂದ ಈರ್ವರ ಮನವೊಂದು ಬೆಚ್ಚಂತೆ
ಚಂದದಿ ಪುರದೊಳಗಿರಲು ಕೇಳಿತ್ತ ೪೪

ವರ ಪುಲಿಗೇರಿಯೊಳ್ಮರೆವ ಜಿನ್ನರ ಗುರು
ಬರಲಾಗ ಬಹು ಬಾಳ ಸಂಭ್ರಮದಿ | ಭೇರಿ
ಬುರುಗು ನಗಾರಿ ವಾದ್ಯದ ರವದಿ | ರಾಜ
ನರಮನೆಯೊಳು ಬಂದು ವೈಭವದಿ | ಬೇಗ
ಪರಮಾನ್ನ ಪಾಯಸ ಪಂಚಾಮೃತ ಸಹ
ಹರುಷದಿಂ ಭೋಜನಕನುವಾದರಾಗ         ೪೫