ಹಾ ! ನೆಲಕೆ ಬಿದ್ದಳಲ್ಲ ಮೂರ್ಛೆಹೋದ ರಾಧೆಯು
‘ಕೃಷ್ಣ’ – ಎಂಬ ಹೆಸರಿನೊಡನೆ ಮುಗಿದುವವಳ ಕಂಗಳು
ಏನು? ಕತೆಯು ಮುಗಿಯೆತೇನು? ಅಯ್ಯೋ ಕೃಷ್ಣ ಪ್ರ್ರಿಯತಮೆ
ಒಂದೇ ಒಂದು ಚಣದ ಹಿಂದೆ ಮಾತಾಡಿದೆಯಲ್ಲವೆ?
ಬಳಿಗೆ ಬಂದರಲ್ಲಿ ನೋಡು ಅವಳ ಪ್ರಾಣಸಖಿಯರು
ಶಿಶಿರ ಗಂಧವಾರಿಯಿಂದ ಉಪಚಾರವ ಗೈವರು.
ಹಲವರಳುತ ನಿಂದಿರುವರು ರಾಧೆಗಾದ ಪಾಡಿಗೆ,
ತಣ್ಣೀರನು ಚುಮುಕಿಸುವರು ಕೆಲವರವಳ ವದನಕೆ.

ಸಹಿಸಲಾರರೀ ಸಖಿಯರು ರಾಧೆಗಾದ ಗತಿಯನು,
ಬಹುಶಃ ಮೇಲೇಳಬಹುದು ಉಪಚಾರಕೆ ರಾಧೆಯು ;
ಆದರೊಂದೆ ಶಂಕೆ ನನಗೆ ; ಕೃಷ್ಣ ಪ್ರೇಮ ಮೃತಳಿಗೆ
ಹರಣವ ತಂದೀವ ಶಕ್ತಿ ಇರುವುದೆ ತಣ್ಣೀರಿಗೆ?