ಸೂ. ವಾಯುಸುತನುರಿಮನೆಯ ಕೌರವ
ರಾಯ ಕೃತಕವ ಕಳೆದು ಹೊಕ್ಕನು
ತಾಯಿವೊಡಹುಟ್ಟಿದರು ಸಹಿತ ಮಹಾವನಾಂತರವ

ಕೇಳು ಜನಮೇಜಯ ಧರಿತ್ರೀ
ಪಾಲ ಗಜನಗರಿಯಲಿ ಕೌರವ
ರಾಳ ಪಾಂಡವರಾಳ ಸೆಣಸಿನ ಕಾಲು ಮೆಟ್ಟುಗಳ
ಸೂಳು ಮತ್ಸರ ಬಿರುದು ಪಾಡಿನ
ಚೂಳಿಗಲಹದ ಕದಡು ಜೂಜಿನ
ತೋಳುವಲರೊಳತೋಟಿ ಮಸಗಿತು ದಿವಸದಿವಸದಲಿ  ೧

ಬೀದಿಗಲಹದ ಕದಡು ಬೀಡಿನ
ಲೈದೆ ಹಬ್ಬಿತು ಬೀಡುಗಲಹದ
ಕೈದೊಳಸು ಕೊಂಡೆಸಗಿ ನಟಿಸಿತು ನಾಡು ನಾಡಿನಲಿ
ಆದುದೆರಡರಸಿಭಪುರಿಗೆ ಕಾ
ಳಾದುದಿನ್ನೇನೆಂದು ಪುರಜನ
ವೈದೆ ಹೆದರಿತು ಭೀಮ ದುರ್ಯೋಧನರ ಹೋರಟೆಗೆ  ೨

ಬೇರೆ ಪಾಂಡವರಿರಲಿ ರಾಯನ
ನೂರು ಮಕ್ಕಳು ಪುರವನಾಳಲಿ
ಬೇರೆ ಕೌರವರಿರಲಿ ಪಾಂಡವರಾಳಲಿಭ ಪುರಿಯ
ನೂರರೊಡನೈವರನು ಧರಿಸಿರ
ಲಾರದೀ ಪುರಿಯೆನುತ ದುಗುಡವ
ಹೇರಿ ಹೊದಕುಳಿಗೊಳುತಲಿರ್ದುದು ಹಸ್ತಿನಾನಗರ  ೩

ಒಂದು ದಿವಸ ಸುಯೋಧನನು ನಿಜ
ಮಂದಿರದೊಳೇಕಾಂತದಲಿ ಮನ
ನೊಂದು ನುಡಿದನು ಶಕುನಿ ಕರ್ಣ ಜಯದ್ರಥಾದ್ಯರಿಗೆ
ಅಂದು ಭೀಮಾರ್ಜುನರು ದ್ರುಪದನ
ತಂದು ದಕ್ಷಿಣೆಯಿತ್ತು ಗುರುವಿಗೆ
ಸಂದರೈ ಸಮರದಲಿ ಪರಿಭವವಾಯ್ತು ತಮಗೆಂದ  ೪

ವನಜ ವನದಲಿ ತುರುಚೆ ಕಬ್ಬಿನ
ಬನದಿ ಕಡಸಿಗೆ ಚೂತಮಯ ಕಾ
ನನದಿ ಬೊಬ್ಬುಲಿ ಭೀಮಸೇನನಯಿರವು ತಮ್ಮೊಳಗೆ
ಇನಿತು ಪಾರ್ಥನ ಮೇಲೆ ಯಮಳರ
ಜಿನುಗಿನಲಿ ಜಾರೆನು ಯುಧಿಷ್ಠಿರ
ಜನಪನಾಗಲಿ ಮೇಣು ಮಾಣಲಿ ಭೀತಿಯಿಲ್ಲೆಂದ  ೫

ಹುದು ನಡೆಯದಿವರೊಡನೆ ನಮ್ಮಲಿ
ಕದನವೇ ಕೈಗಟ್ಟುವುದು ಕಾ
ದಿದೊಡೆ ಹೆಬ್ಬಲವಹುದು ದುರ್ಬಲ ದೈವಗತಿ ಬೇರೆ
ನದಿಗಳರಳೆಯ ಹಾಸು ನವ ವಿಷ
ವುದರ ದೀಪನ ಚೂರ್ಣವಾವಂ
ಗದಲಿ ಸಾಪತ್ನರಲಿ ಸದರವ ಕಾಣೆ ತಾನೆಂದ  ೬

ದುಗುಡವೇತಕೆ ಜೀಯ ಡೊಂಬಿನ
ಜಗಳವನು ತೆಗೆದರಿನೃಪರ ಸುಂ
ಟಗೆಯ ನಾಯ್ಸುವೆನವರ ತನುವನು ಯುದ್ಧ ರಂಗದಲಿ
ದಿಗು ಬಲಿಯ ಕೊಡಿಸುವೆನು ಸಾಕಿ
ನ್ನೊಗುಮಿಗೆಯ ಚಿಂತಾಂಗನೆಯನೋ
ಲಗಿಸದಿರು ಕುರುರಾಯ ಚಿತ್ತೈಸೆಂದನಾ ಕರ್ಣ  ೭

ಹೊಡೆದು ಹೊಡೆಚೆಂಡಾಡಿ ರಿಪುಗಳ
ಗಡಣವನು ಯಮರಾಜಧಾನಿಗೆ
ನಡೆಸುವೆನು ನೀ ನೋಡುತಿರು ಸಾಕೊಂದು ನಿಮಿಷದಲಿ
ಕೊಡು ತನಗೆ ನೇಮವನು ದುಗುಡವ
ಬಿಡು ಮನಸ್ಸಿನ ಕಂದು ಕುಂದನು
ಹಿಡಿಯದಿರು ಕುರುರಾಯ ಚಿತ್ತೈಸೆಂದನಾ ಕರ್ಣ  ೮

ಹಬ್ಬುಗೆಯ ಹದಿನಾಲ್ಕು ಲೋಕದ
ಮೊಬ್ಬುಗಳನೀಡಾಡಿ ನಭದೊಳ
ಗೊಬ್ಬನೇ ರವಿ ತೊಳಗಿ ಬೆಳಗುವವೋಲು ಪಾಂಡವರ
ಕೊಬ್ಬುಗಳ ನಿಲಿಸುವೆನು ಧರೆಯೊಳ
ಗೊಬ್ಬನೇ ದುರ್ಯೋಧನನು ಮ
ತ್ತೊಬ್ಬರಿಲ್ಲೆಂದೆನಿಸಿ ತೋರುವೆನೆಂದನಾ ಕರ್ಣ  ೯

ವಿದುರ ಭೀಷ್ಮಾದಿಗಳು ನಿನ್ನಯ
ಸದನದೊಳಗುಂಡುಟ್ಟು ಪರರ
ಭ್ಯುದಯವನೆ ಬಯಸುವರು ದೂರುವರೆಮ್ಮನವರುಗಳ
ಹದನ ನೀನೇ ಬಲ್ಲೆ ಸಾಕಿ
ನ್ನದರ ಮಾತೇಕರಸ ತನ್ನಯ
ಕದನವನು ಚಿತ್ತೈಸು ಸಾಕಿನ್ನೆಂದನಾ ಕರ್ಣ  ೧೦

ಸಹಜವೀ ನುಡಿ ಕರ್ಣನಾಡಿದ
ನಹುದು ಪಾಂಡವರೆಂಬವರು ಕಡು
ಸಹಸಿಗಳು ಗೆಲಲರಿದು ಕುಹಕೋಪಾಯ ಮಾರ್ಗದಲಿ
ಅಹಿತರನು ಗೆಲಬಹುದು ಪರಿಕರ
ಸಹಿತವರುಗಳ ನಿಮ್ಮ ಚಿತ್ತಕೆ
ಬಹರೆ ತನ್ನಭಿಮತವನವಧರಿಸೆಂದನಾ ಶಕುನಿ  ೧೧

ಐದು ಮುಖವೀರೈದು ಭುಜ ಹದಿ
ನೈದು ಕಂಗಳ ವಿಗಡ ರುದ್ರನು
ಮೇದಿನಿಯ ಮೇಲೊಂದು ಶಿರಭುಜವೆರಡನಳವಡಿಸಿ
ಆದಿಪುರುಷನು ಭೀಮ ಪೆಸರಿನ
ಲೈದೆ ಜನಿಸಿದನಾತನಿದಿರಲಿ
ಕೈದುಕಾರನದಾವನೈ ಹೇಳೆಂದನಾ ಶಕುನಿ  ೧೨

ಅರಸ ಕೇಳ್ಬಿಲು ವಿದ್ಯದಲಿ ಮೂ
ವರು ಕಣಾ ಸಾಮರ್ಥ್ಯ ಪುರುಷರು
ಧರೆಯೊಳೊಬ್ಬರಿಗೊಂದು ಗುಣ ಪಾರ್ಥಂಗೆ ಮೂರು ಗುಣ ಭರಿತವಾಗಿಹುದಾತನೊಬ್ಬನ
ಸರಿಸದಲಿ ಮಾರಾಂತು ಜೀವಿಸಿ
ಮರಳ ಬಲ್ಲವನಾವನೈ ಹೇಳೆಂದನಾ ಶಕುನಿ  ೧೩

ರಾಮಚಂದ್ರನ ಚರಣಯುಗ ನಿ
ಸ್ಸೀಮ ಭೀಷ್ಮಾಚಾರಿಯರ ಶಿರ
ವಾ ಮಹಾರಥ ದ್ರೋಣನೆದೆ ನಡುಗುವುದು ಸಮರದಲಿ
ಸೌಮನಸ್ಯನು ನಿಷ್ಪ್ರಕಂಪ ಸ
ನಾಮನರ್ಜುನ ದೇವನಿದಿರಲಿ
ಭೂಮಿಯಲಿ ಬಿಲ್ಲಾಳದಾವವನೆಂದನಾ ಶಕುನಿ  ೧೪

ಶತ್ರುಗಳ ಸಂಹರಿಸಿ ರಾಜ್ಯವ
ನೊತ್ತಿಯಾಳುವೆನೆಂಬ ಸಾಹಸ
ಸತ್ವಗುಣ ನಿನಗಿಲ್ಲ ಪಾಂಡವರತುಲ ಭುಜಬಲರು
ಕೃತ್ರಿಮದ ಮುಖದಿಂದ ರಿಪುಗಳ
ಕಿತ್ತುಹಾಯಿಕಿ ನೆಲನನೇಕ
ಚ್ಛತ್ರದಲಿ ಸಲಹುವುದು ಮತ ಕೇಳೆಂದನಾ ಶಕುನಿ  ೧೫

ಸೋದರರುಗಳು ನೀವು ನಿಮ್ಮೊಳು
ಭೇದ ಮಂತ್ರವ ಮಾಡುವುದು ಮ
ರ್ಯಾದೆಯೇ ನಾವ್ ನಿಮ್ಮಡಿಯಲರಮನೆಯ ಸೇವಕರು
ವಾದಿಸುವರಿತ್ತಂಡ ಸರಿ ನಮ
ಗಾದರೆಯು ಕಂಡುದ ನುಡಿಯ ಬೇ
ಕಾದರಿಸು ಮೇಣ್ ಮಾಣು ಬಿನ್ನಹವೆಂದನಾ ಶಕುನಿ  ೧೬

ಪಕ್ಷವೆರಡೇ ಲೋಕದೊಳ್ ಪಿತೃ
ಪಕ್ಷ ಮೇಣಾ ಮಾತೃಪಕ್ಷ ವಿ
ಪಕ್ಷ ತಂದೆಯ ದೆಸೆ ಸಪಕ್ಷವು ತಾಯ ದೆಸೆಯವರು
ತಕ್ಷಕನ ತೆರನಂತೆ ನಿಮ್ಮನು
ಭಕ್ಷಿಸುವರಾವಂಗದಲಿ ನೀ
ನೀಕ್ಷಿಸುವುದೈ ಪಾಂಡು ಪುತ್ರರನೆಂದನಾ ಶಕುನಿ  ೧೭

ಮೊಳೆಯಲೇ ಮುರುಡಿಸಲು ಬೇಹುದು
ಬಲಿದ ಬಳಿಕದು ನಿನ್ನ ಹವಣೇ
ಇಳೆಯೊಳರ್ಧವನಿತ್ತು ರಿಪುಗಳ ಹೆಚ್ಚಿಸಿದ ಬಳಿಕ
ಗೆಲುವನಾವನು ದೇವ ದಾನವ
ರೊಳಗೆ ಭೀಮಾರ್ಜುನರ ಕೈ ಮನ
ದಳವನರಿಯಾ ಭಾರವೈ ಮೇಲೆಂದನಾ ಶಕುನಿ  ೧೮

ಧಾರುಣಿಯೊಳು ಪಿಪೀಲಿಕೆಯು ವಿ
ಸ್ತಾರದಲಿ ಮಾಡಿದ ಮನೆಯ ಕಾ
ಳೋರಗನು ಹೊಗುವಂತೆ ರಿಪು ಕುಂತೀಕುಮಾರಕರು
ವೈರದಲಿ ಸಪ್ತಾಂಗವನು ಕೈ
ಸೂರೆಗೊಂಬರು ತಪ್ಪದಿದಕೆ ವಿ
ಚಾರವನು ಕಾಲದಲಿ ಮಾಡುವುದೆಂದನಾ ಶಕುನಿ  ೧೯

ಹಿಂದೆ ನೀನವರುಗಳ ನಾನಾ
ಚಂದದಲಿ ನೋಯಿಸಿದೆ ಮನದಲಿ
ಕಂದು ಕುಂದದು ಕಷ್ಟ ವೃತ್ತಿಯನಾಚರಿಸುತಿಹರು
ಇಂದು ನೀನಾ ಪಾಂಡುಪುತ್ರರ
ನಂದಗೆಡಿಸದೆ ಬಿಟ್ಟೆಯಾದೊಡೆ
ಮುಂದೆ ಬೆಟ್ಟಿತು ರಾಜಕಾರಿಯವೆಂದನಾ ಶಕುನಿ  ೨೦

ಇರುಬಿನಲಿ ಸಿಕ್ಕಿರ್ದ ಹುಲಿಯನು
ಮುರಿದು ಕಳೆಯದೆ ತಳಪಟಕೆ ಬಿ
ಟ್ಟಿರಿಯ ಬಹುದೇ ಕೊಂದು ಕೂಗದೆ ಬಿಡುವುದೇ ಬಳಿಕ
ಕರುಬರಹ ಪಾಂಡವರಿಗೀಗಲೆ
ಹರುವ ನೆನೆ ಹೊರಬಿದ್ದ ರಾದೊಡೆ
ತರಿದು ಬಿಸುಡದೆ ಮಾಣ್ವರೇ ಹೇಳೆಂದನಾ ಶಕುನಿ  ೨೧

ಹರಿಹಯನು ವೃತ್ರಾಸುರನ ಸಂ
ಹರಿಸಲರಿಯದೆ ಗರುವದಿಂದಿರು
ತಿರಲವನು ದಿನದಿನದೊಳಣುವಣು ಮಾತ್ರವನು ಬೆಳೆದು
ಧರೆಯ ತುಂಬಲು ತನ್ನ ಸತ್ವದ
ನೆರವಣಿಗೆಗೈದಿಸದೆ ನಾನಾ
ತೆರದೊಳಾಯಸಗೊಳ್ಳನೇ ಹೇಳೆಂದನಾ ಶಕುನಿ  ೨೨

ಅಡವಿಯಲಿ ಜನಿಸಿದರು ಬೆಳವಿಗೆ
ಯಡವಿಯೊಳಗಿನ್ನವರ ಬಾಳಿಕೆ
ಗಡವಿಯೇ ನೆಲಮನೆಯದಲ್ಲದೆ ಪಾಂಡುಪುತ್ರರಿಗೆ
ಪೊಡವಿಯೊಡೆತನ ಸಲ್ಲದವರನು
ನಡೆಸುವುದು ಕಾಲದಲಿ ರಾಜ್ಯವ
ಕೊಡುವುದಾವಂಗದಲಿ ಮತವಲ್ಲೆಂದನಾ ಶಕುನಿ  ೨೩

ತಿಮಿರವಡಗಿದ ಲೋಕ ಶಿಕ್ಷಾ
ಕ್ರಮಣವಡಗಿದ ದಂತಿ ಕರ್ಮ
ಭ್ರಮೆಗಳಡಗಿದ ಯೋಗಿ ರುಜೆಯಡಗಿದ ನರೋತ್ತಮನು
ಹಿಮವಡಗಿದ ಸರೋಜದಂತಿಹು
ದಮಲ ಮತ ಕೇಳ್ಪಗೆಗಳಡಗಿದ
ಡಮರ ಪದವೆನಿಸುವುದು ಚಿತ್ತೈಸೆಂದನಾ ಶಕುನಿ  ೨೪

ಬಿಡದೆ ಸುಖ ದುಃಖಗಳೊಳೊಂದನು
ಹಿಡಿದು ಸದ್ವ್ಯವಹಾರ ಮುಖದಲಿ
ನಡೆಯಲೊಂದರ ತುಷ್ಟಿಯೊಂದರ ನಷ್ಟ ತನಗಹುದು
ಹಿಡಿವುದಿಹಪರವೆರಡರೊಳಗಳ
ವಡಿಕೆ ತನಗಹುದೊಂದನೊಂದನು
ಬಿಡುವುದಲ್ಲದೆ ಬೇರೆ ಮತವಿಲ್ಲೆಂದನಾ ಶಕುನಿ  ೨೫

ಭಾವ ಮೈದುನನಣ್ಣ ತಮ್ಮನು
ಮಾವನಳಿಯನು ಪುತ್ರಮಿತ್ರರು
ಸೇವಕರು ಸಜ್ಜನರು ಸುಜನರು ಸತ್ಯಯುತರೆಂದು
ಭಾವಿಸದಿರಾರುವನು ನಿನ್ನಯ
ಜೀವವುಳ್ಳನ್ನೆಬರ ನಿನ್ನಯ
ದೈವಗತಿಯೆಂದು ನಂಬಿಹುದೆಂದನಾ ಶಕುನಿ  ೨೬

ಶತ್ರು ಶೇಷವಿದಲ್ಪವೆಂದುಳು
ಹುತ್ತ ಬರಲಾಗದು ಕಣಾ ಭೂ
ಪೋತ್ತಮರುಗಳು ವೈರಿ ರಾಯರ ವಂಶ ಬೀಜವನು
ಬಿತ್ತು ವರೆ ನೇತ್ರಾವಳಿಯ ಮೀ
ಟೆತ್ತಿ ಕಾರಾಗಾರದೊಳಗೆ ಕ
ಳತ್ರ ಸಹಿತನಶನದಲಧಿಕ ವ್ರತವ ಮಾಡೆಂದ  ೨೭

ವಿಷವನಣುವೆಂದಳುಕದುಪಭೋ
ಗಿಸಲು ಕೊಲ್ಲದೆ ಬಿಡುವುದೇ ಕರ
ಗಸದ ನಡು ಬಡವಾದರೆಯು ಕುಯ್ದಿಕ್ಕದೇ ತರುವ
ಶಿಶುವಿವನು ಸಾಮರ್ಥ್ಯ ಪುರುಷನೆ
ಪುಸಿ ಕಣಾಯೆಂದುಳುಹಿದೊಡೆ ರ
ಕ್ಕಸನಹನು ಮುಂದಕ್ಕೆ ತನಗವನೆಂದನಾ ಶಕುನಿ  ೨೮

ಕಾಲವನು ಗೂಗೆಗಳು ನಿರ್ಜರ
ರೇಳಿಗೆಯನಾ ದೈತ್ಯರುಗಳು ತ
ಮಾಳಿ ರವಿರಶ್ಮಿಗಳನಾ ಬಲು ನಿದ್ರೆಯನು ಚೋರ
ಕಾಲ ಭುಜಗನು ಗರುಡನುಳಿವನು
ತಾಳದಂದದಿ ಪಾಂಡವರು ನಿ
ನ್ನೇಳಿಗೆಯ ಸೈರಿಸರು ಚಿತ್ತೈಸೆಂದನಾ ಶಕುನಿ  ೨೯

ವಿಗಡ ರುದ್ರನು ಲೋಚನಾಗ್ನಿಯೊ
ಳೊಗುಮಿಗೆಯ ಕೋಪದಲಿ ಕಾಮನ
ಮಿಗೆ ದಹಿಸಿದಂದದಲಿ ರಿಪು ಕುಂತೀಕುಮಾರಕರ
ಹೊಗೆದು ಕಳೆ ಲಾಕ್ಷಾಭವನದಲಿ
ಹಗೆಗೆ ಹರಿವಹುದಲ್ಲದಿರ್ದೊಡೆ
ವಿಗಡಿಸುವುದೈ ರಾಜಕಾರ್ಯವಿದೆಂದನಾ ಶಕುನಿ  ೩೦

ಹಿಡಿವ ಫಣಿಯನು ಹೊಡೆವ ಸಿಡಿಲನು
ಜಡಿವ ಮಾರಿಯ ನಲಿವ ರುಜೆಯನು
ಮಡಿವ ದಿನವನು ಹಾನಿವೃದ್ಧಿಯ ಹೆಚ್ಚು ಕುಂದುಗಳ
ಕಡಿವ ಹಗೆಯನು ಕಾಲಕರ್ಮದ
ಗಡಣವನು ಸುಖದುಃಖದುದಯದ
ಕಡೆ ಮೊದಲ ಕಾಣಿಸುವನಾವವನೆಂದನಾ ಶಕುನಿ  ೩೧

ಇನಿತು ಚಿಂತಿಸಲೇಕೆ ಕೌರವ
ಎನಪ ನಿಮ್ಮಡಿಗಳಿಗೆ ತಾನೊಂ
ದನುವ ಬಿನ್ನಹ ಮಾಡುವೆನು ಪಾಂಡವರ ನೆಳಲಿರಲು
ನಿನಗೆ ರಾಜ್ಯವನಾಳ್ವ ಫಲ ಸಂ
ಜನಿಸಲರಿಯದು ಕಾಲದಲಿ ನೀ
ನೆನೆ ಉಪಾಯವನೊಂದನೆಂದು ಕಳಿಂಗ ಕೈಮುಗಿದ ೩೨

ದೇವ ದಾನವರಂತೆ ಹದ್ದಿನ
ಹಾವಿನೋಲತಿ ವೈರ ಬಂಧದ
ಠಾವು ಠವಣೆಯ ನೀರು ಭೇದಿಸುವಂತೆ ಭೇದಿಸುತ
ಕಾವವರ ಕಾವುತ್ತ  ಕಂಟಕ
ಜೀವಿಗಳನಪಹರಿಸುತಂತ
ರ್ಭಾವ ಶುದ್ಧಿಯೊಳಿಳೆಯನಾಳುವುದೆಂದನಾ ಶಕುನಿ  ೩೩

ಮೃತ್ಯುವಿನ ತಾಳಿಗೆಯೊಳಗ್ಗದ
ಶತ್ರುಗಳ ಸಾಮೀಪ್ಯದಲಿ ದು
ರ್ವೃತ್ರರೋಲಗದೊಳಗೆ ಸಿಂಹದ ಗುಹೆಯೊಳಹಿಪತಿಯ
ಹುತ್ತಿನೊಳಗಿಹವೋಲು ಸಲೆ ಬಾ
ಳುತ್ತ ಲಂತಃಪುರದೊಳರಸಿರ
ಲತ್ಯಧಿಕದೆಚ್ಚರಿಕೆಯಿರ ಬೇಕೆಂದನಾ ಶಕುನಿ  ೩೪

ಹಗೆಯ ಹೆಂಗಳನರಮನೆಗಳೊಳು
ಪೊಗಿಸಲಾಗದು ತನಗವರು ಹೇ
ಳಿಗೆಯ ಹಾವಿನವೋಲು ಸುಖತರವಲ್ಲವರಿ ನೃಪರ
ಮಗಳ ಮಕ್ಕಳ ದೆಸೆಯವರನೋ
ಲಗಿಸುವರ ಬಾಹತ್ತರ ನಿಯೋ
ಗಿಗಳ ನಂಬುವುದುಚಿತವೇ ಹೇಳೆಂದನಾ ಶಕುನಿ  ೩೫

ದೈವ ಹೊಡೆದಂದದಲಿ ಬೆರತು ಸ
ಭಾ ವಲಯದಲಿ ಗರ್ವ ವಿಭ್ರಮ
ಭಾವ ಭೂಷಿತನಾಗಿ ವೈಹಾಯಸವನೀಕ್ಷಿಸುತ
ಹಾವಿನಂದದೊಳಿರದೆ ಹಾಸ್ಯ ರ
ಸಾವಲಂಬನನಾಗದೆಯು ಸುಖ
ಜೀವಿಯಾಗಿಹುದುತ್ತಮವು ಕೇಳೆಂದನಾ ಶಕುನಿ  ೩೬

ಹೀನಮುಖ ಬಹುಮುಖ ಪರಾಙ್ಮುಖ
ದೀನಮುಖ ವಾಚಾಲಮುಖವ
ಜ್ಞಾನಮುಖವಂತರ್ಮುಖ ಬಹಿರ್ಮುಖದ ಕಾರ್ಯದಲಿ
ಆ ನರೇಂದ್ರನ ವರ್ತನಕೆ ದು
ಸ್ಥಾನವಾಗದೆ ಬಿಡದು ಸಂಶಯ
ವೇನಿದಕೆ ಕುರುರಾಯ ಚಿತ್ತೈಸೆಂದನಾ ಶಕುನಿ  ೩೭

ಶಯನದಲಿ ವಹ್ನಿಯಲಿ ವೈಹಾ
ಳಿಯಲಿ ಬೇಟೆಯಲೂಟದಲಿ ಕೇ
ಳಿಯಲಿ ಸುರತ ಕ್ರೀಡೆಯಲಿ ಮಜ್ಜನದ ಸಮಯದಲಿ
ಜಯದ ಜೋಕೆಯಲೋಲಗದ ಮರ
ವೆಯಲಿ ವಾರಸ್ತ್ರೀಯರುಗಳಲಿ
ಲಯವನೈದಿಸಬಹುದು ಚಿತ್ತೈಸೆಂದನಾ ಶಕುನಿ  ೩೮

ರುಜೆಯನಲುಗುವ ರದನವ ದ್ರುಗು
ರಜವನನುಚಿತಜಾತ ಧೂಮ
ಧ್ವಜವ ರುಣವನವಿದ್ಯೆಯನು ಗೃಹವಾಸ ಕುಂಡಲಿಯ
ವೃಜಿನವನು ಕಂಪಿತವ ವೈರಿ
ವ್ರಜವನುಳುಹುವನೆಗ್ಗನೆಂಬಿದು
ಸುಜನರಭಿಮತ ನಿನ್ನ ಮತವೇನೆಂದನಾ ಶಕುನಿ  ೩೯

ಮಣಿದು ಕೂಪದ ಜೀವನವ ಕಡೆ
ಗಣಿಸದೇ ಘಟಯಂತ್ರ ಮೃಗರಿಪು
ಹಣಿಗಿದರೆ ಹರಿಣಂಗೆ ಗೆಲವೇ ಕಾರ್ಯಗತಿಯರಿದು
ಮಣಿವುದಳುಕುವುದಾವ ಪರಿಯಿಂ
ದೆಣಿಸಿ ಮನದಲಿ ವೈರಿ ರಾಯರ
ಹಣಿದವಾಡುವುಪಾಯವಿದು ಕೇಳೆಂದನಾ ಶಕುನಿ  ೪೦