ಅಹಿಯ ಬಾಧೆಯ ಬಲೆಗೆ ಸಿಲುಕಿದ
ಮಿಹಿರ ಬಿಂಬದವೋಲು ಮಾಯಾ
ವಿಹರಣದ ವೀಥಿಯಲಿ ಸಿಕ್ಕಿದ ಜೀವರುಗಳಂತೆ
ಅಹಿತರುಪಟಳದೊಳಗೆ ಸಿಲುಕದೆ
ಕುಹಕರವದಿರ ಹರಿವ ನೆನೆ ಲೇ
ಸಹುದು ಕಾಲಕ್ಷೇಪವಿದಕೇನೆಂದನಾ ಶಕುನಿ  ೪೧

ನಂಬುವರ ನೆರೆ ನಂಬು ನಂಬದ
ಡಂಬಕರ ನಂಬದಿರು ಸಂಗರ
ವೆಂಬ ಮಾತಿಗೆ ಹಂಬಲಿಸಿ ಬೆಂಬೀಳ್ವ ಬಾಹಿರರ
ನಂಬಿರದಿರರಿರಾಯ ಹನನ ವಿ
ಳಂಬನವ ಮಾಡದಿರು ರೋಷಾ
ಡಂಬರವ ರಚಿಸದಿರು ಬಹಿರಂಗದಲಿ ನೀನೆಂದ  ೪೨

ಖೂಳನಹ ದಾತಾರನನು ದು
ರ್ಮೇಳನಹ ಮಿತ್ರನನು ತನಗನು
ಕೂಲೆಯಲ್ಲದ ಸತಿಯನಂತರ್ದಾಯಿಯಹ ನರನ
ವ್ಯಾಳಯುತವಹ ನಿಳಯವಿನಿತುವ
ಕಾಲದಲಿ ವರ್ಜಿಸುವುದಲ್ಲದೊ
ಡೂಳಿಗವು ಹಿರಿದಹುದು ಚಿತ್ತೆಸೆಂದನಾ ಶಕುನಿ ೪೩

ಎಲ್ಲರಿಂ ಬಹುಧನವ ಕೊಳು ನಿ
ನ್ನಲ್ಲಿ ಕಾಣಿಯ ಬರಿದೆ ಸೋಲದಿ
ರಿಲ್ಲವೆನ್ನದೆ ನುಡಿದು ಕಾಲಕ್ಷೇಪವನು ಮಾಡು
ಒಳ್ಳಿದನು ನಮಗೆಂಬ ನಯ ನುಡಿ
ಯೆಲ್ಲರಲಿ ಬೆಚ್ಚಂತೆ ರಿಪುಗಳ
ಗೆಲ್ಲಗೆಡಹುವ ಮಂತ್ರವಿದು ಕೇಳೆಂದನಾ ಶಕುನಿ ೪೪

ಧನವಿತ್ತಾದೊಡೆಯು ಸಹಭೋ
ಜನವನುಂಡಾದೊಡೆಯು ಮೇಣ್ ನಿಜ
ತನುಜೆಯರನಿತ್ತಾದೊಡೆಯು ಬಳಿಸಂದು ಬೇಸರದೆ
ತನುವ ಬೆರಸಿದ್ದಾದೊಡೆಯು ನೂ
ತನ ಗುಣವ ನುಡಿದಾದೊಡೆಯು ರಿಪು
ಜನಪತಿಯ ವಶ ಮಾಳ್ಪುದುಚಿತವಿದೆಂದನಾ ಶಕುನಿ ೪೫

ಕೋಶ ಪಾನಾದಿಗಳ ಮಾಡಿ ಮ
ಹೀಸುರರ ಮೇಲಾಯುಧಂಗಳ
ಸೂಸಿ ದೈವವ ಮುಟ್ಟಿ ದಿವ್ಯಾಜ್ಞೆಗಳಲೊಡಬಡಿಸಿ
ಹೇಸದರಿ ಭೂಪಾಲರನು ನಿ
ಶ್ಶೇಷವೆನಿಸುವುದಲ್ಲದಿರ್ದೊಡೆ
ಪೈಸರಿಸುವುದು ರಾಜಕಾರ್ಯವಿದೆಂದನಾ ಶಕುನಿ ೪೬

ನರಕವಿಲ್ಲದ ನರರು ನಾರಿಯ
ರುರುಬೆಯಿಲ್ಲದ ಯತಿಗಳಸುರರ
ವಿರಸವಿಲ್ಲದ ಸುರರು ಮಾಯಾಪಾಶವನು ಹರಿದ
ಪರಮ ತತ್ವಜ್ಞಾನಿಯವೋಲೀ
ಧರೆಯ ನರಪಾಲಕರುಗಳು ಹಗೆ
ಹರಿದು ಹೋಗಲಸಾಧ್ಯವಹುದೇನೆಂದನಾ ಶಕುನಿ  ೪೭

ಮಸಗೆ ಮೂಡಿದ ಹೊಲನು ದುಷ್ಟ
ಪ್ರಸರದೇಳಿಗೆ ಪಾಪಿಯೋಲಗ
ಹುಸಿಯ ಬಾಳುವೆ ಹುದುವಿನಾರಂಭದ ಫಲೋದಯವು
ನಸಿದು ಹೋಗದೆ ಲೋಕದೊಳಗವು
ಹೆಸರುವಡೆವವೆ ಹಗೆಯ ಹೆಚ್ಚುಗೆ
ಹಸನ ಕೊಡುವುದೆ ರಾಯ ಚಿತ್ತೈಸೆಂದನಾ ಶಕುನಿ  ೪೮

ಜಾತಿ ಬಾವನ್ನದಲಿ ಸರ್ಪದ
ಭೀತಿ ಸತ್ಪುರುಷರಿಗೆ ದುರ್ಜನ
ಭೀತಿ ದೇವಾದ್ಯರಿಗೆ ದನುಜಾದಿಗಳ ಬಲು ಭೀತಿ
ಜಾತ ಮಾತ್ರಕೆ ಜನನ ಮರಣದ
ಭೀತಿ ಬೆಂಬಿಡದಂತೆ ಗೋತ್ರಜ
ಭೀತಿಭೂಪಾಲರಿಗೆ ಹಿರಿದಹುದೆಂದನಾ ಶಕುನಿ  ೪೯

ಕರಣಿಕರು ಕರಣಿಕರೊಡನೆ ಸಹ
ಚರರು ಸಹಚರರೊಡನೆ ಸಾವಂ
ತರಲಿ ಸಾವಂತರುಗಳಾ ಮಂತ್ರಿಯಲಿ ಮಂತ್ರಿಗಳು
ತರುಣಿಯರು ತರುಣಿಯರೊಡನೆ ಪರಿ
ಕರರು ಪರಿಕರರೊಡನೆಯಿರಲೊರ
ಸೊರಸುಮಿಗೆ ಮಸೆವುದು ಕಣಾ ಭೂಭುಜನೆ ಕೇಳೆಂದ ೫೦

ವ್ಯಾಕುಲಿತ ವಿಪ್ರರ ವಿಸತಿಯ ದಿ
ವಾಕರನ ಲೋಕಾಯತರ ರ
ತ್ನಾಕರನ ಲಾವಕರ ಹಿಸುಳರ ದಾಯಭಾಗಿಗಳ
ಶೋಕಿಗರ ಮಾಯಾವಿಗಳ ದ
ರ್ವೀಕರನ ವಿನಿಯೋಗಿಗಳ ಸ
ರ್ವೈಕ ಮತ್ಸರದೊಳಗೆ ಬದುಕುವನಾವ ಪೇಳೆಂದ  ೫೧

ಮಂಜು ಮಹಿಯನು ಮುಸುಕುವಂತೆ ಧ
ನಂಜಯನು ಕಾನನವ ಸುಡುವಂ
ತಂಜಿಕೆಗಳುಮ್ಮಾಹವನು ಹೊಯ್ದೊರಸುವಂದದಲಿ
ರಂಜಕರು ಪಾಂಡವರು ನಿನ್ನನು
ಭಂಜಿಸುವರಾವಂಗದಲಿ ನವ
ಕುಂಜರನ ಕಾಲಾಟ ಸಿಂಹಕೆ ಸೇರುವುದೆಯೆಂದ  ೫೨

ದನಿಗೆ ನಡೆದೊಳಪೊಕ್ಕು ಮರ ಗೂ
ಡಿನಲಿ ಸಿಲುಕಿದ ಹುಲಿಯವೋಲ್ ಕಾ
ನನದಿ ಬೀಸಿದ ಬಲೆಯೊಳಗೆ ಗಾನಕ್ಕೆ ಮನ ಸೋಲ್ದು
ಹನನವರಿಯದ ಮೃಗದವೋಲಿರು
ಬಿನಲಿ ಕೆಡಹಿದ ಕರಿಯವೋಲ್ ರಿಪು
ಜನಪರಭ್ಯುದಯದ ವಿನಾಶವನೆಸಗೆ ಬೇಕೆಂದ  ೫೩

ಎಂದು ದುರ್ಬೋಧೆಗಳ ನಾನಾ
ಚಂದದಲಿ ಬೋಧಿಸಿ ಸುನೀತಿಯ
ನಂದಗೆಡಿಸಿ ತದೀಯ ವಂಶಚ್ಛೇದ ಮಾರ್ಗವನು
ಒಂದುಗೂಡಿ ಸುಯೋಧನಂಗಾ
ನಂದವೆನಿಸಿ ಕಳಿಂಗ ಲೋಕವ
ಕೊಂದನೈ ಜನಮೇಜಯ ಕ್ಷಿತಿಪಾಲ ಕೇಳೆಂದ  ೫೪

ಎಮ್ಮ ಬಹುಮಾನಾವಮಾನವು
ನಿಮ್ಮದಲ್ಲದೆ ಬೇರೆ ನಮ್ಮಯ
ಸೊಮ್ಮು ಸಂಬಂಧದಲಿ ಹಿತವರ ಕಾಣೆ ನಾನಿನ್ನು
ಸಮ್ಮತದಿ ಪಾಂಡವರಿಗಗ್ನಿಯ
ಲೊಮ್ಮೆ ಹರಿವನು ನೆನೆವೆನೊದವಿದ
ಡೆಮ್ಮ ಸುಕೃತೋದಯದ ಫಲವೆಂದನು ಸುಯೋಧನನು  ೫೫

ಎನೆ ಕಳಿಂಗಾದಿಗಳು ತಂತ
ಮ್ಮನುಮತವ ಹೆಳಿದರು ಕೌರವ
ಜನಪನವರಿಗೆ ಕೇಡ ನಿಶ್ಬೈಸಿದನು ಮನದೊಳಗೆ
ಜನಕನಲ್ಲಿಗೆ ನಡುವಿರುಳು ಬಂ
ದನುನಯದೊಳೀ ಮಾತ ತೆಗೆದೆಂ
ದನು ವೃಕೋದರನೂಳಿಗವನರ್ಜುನನ ಸಾಹಸವ  ೫೬

ಅರಿಗಳುದ್ಭವವಿನ್ನು ಗಂಟಲ
ನರಿವುದೆಮ್ಮನು ನೂರು ಮಕ್ಕಳ
ನರಸ ಬರಿದೇ ಹಡೆದು ಕೆಡಿಸಿದೆ ತಾಯ ಜವ್ವನವ
ಇರಲಿ ಭೀಮಾರ್ಜುನರು ಹಸ್ತಿನ
ಪುರದೊಳೆಮ್ಮಿನಿಬರನು ದೇಶಾಂ
ತರಕೆ ನೇಮಿಸು ಜೀಯ ನೂಕದು ಭೀಮನೊಡನೆಂದ  ೫೭

ಅಕಟ ಮಗನೇ ಧರ್ಮಸುತ ಬಾ
ಧಕನೆ ಭೀಮಾರ್ಜುನರ ಮತಿ ಕಂ
ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ
ಸಕಲ ರಾಜ್ಯಕೆ ಪಾಂಡುವೇ ಪಾ
ಲಕನು ತನ್ನೊಳು ತಪ್ಪಿದನೆ ಬಿಡು
ವಿಕಳ ಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ  ೫೮

ಬೊಪ್ಪ ಬಿನ್ನಹವವರ ಜನಕನು
ತಪ್ಪಿ ನಡೆಯನು ನಿಮಗೆ ನೀವಿ
ನ್ನೊಪ್ಪಿಸುವುದಾ ಪಾಂಡುಸುತರಿಗೆ ರಾಜ್ಯ ವೈಭವವ
ಅಪ್ಪುದಿಳೆ ಧರ್ಮಜನ ತರುವಾ
ಯಪ್ಪುದಾ ವಿಧಿಯಲ್ಲಿ ಸಂತತಿ
ತಪ್ಪದವರಿಗೆ ಸಲಲಿ ನೆಲವಿದು ಹೊಲ್ಲೆಹೇನೆಂದ  ೫೯

ಜನಪ ಸುಖದಲಿ ನಿಮ್ಮ ತಮ್ಮನ
ತನುಜರೊಡನೆಯು ರಾಜ್ಯ ಮಾಡುವು
ದನುನಯವಲಾ ಬೀಳುಕೊಡುವುದು ನಮ್ಮ ನೂರ್ವರನು
ಜನಪರುಂಟೋಲೈಸಿ ಕೊಂಬರೆ
ತನಗಿರದೆ ಖಂಡೆಯದ ಸಿರಿ ಕರೆ
ಜನನಿಯನು ಬೀಳ್ಕೊಂಬೆವಿನ್ನೇನೆಂದು ನಿಂದಿರ್ದ  ೬೦

ಎಲೆ ಮಗನೆ ಎನ್ನಾಣೆ ಬಾ ಕುರು
ಕುಲತಿಲಕ ನೀ ಹೋಗಲೆನ್ನೊಡ
ಲುಳಿವುದೇ ಮರಿಯಾನೆ ಬಾರೈ ಕಂದ ಬಾಯೆಂದು
ಸೆಳೆದು ಬಿಗಿಯಪ್ಪಿದನು ಕಂಬನಿ
ದುಳುಕಿದನು ಹೇಳಿನ್ನು ಮೇಲಣ
ಬಳಕೆಯನು ರಿಪುರಾಜ ಕಾರ್ಯಕೆ ಬುದ್ಧಿಯೇನೆಂದ  ೬೧

ನೀರವಿಷವಿಕ್ಕಿದೆವು ಕಿಚ್ಚಿನ
ಭಾರವಣೆಯೇನಹುದೊ ಪುಣ್ಯವ
ಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು
ಓರಣಿಸಿತೈ ವೈರಿಗಳ ವಿ
ಸ್ತಾರ ಮೆರೆಯಲಿ ಜೀಯ ಜೂಜಿನ
ಬಾರುಗುತ್ತಿದು ನಿಮ್ಮ ಚಿತ್ತಕೆ ಬಹಡೆ ಮಾಡುವೆವು  ೬೨

ಆವ ತೆರದಲಿ ವೈರಿ ಭಟಕುಲ
ಹಾವಿಗೆಯನಿಡಿಸುವಿರಿ ನಿಮ್ಮೊಳ
ಗಾವು ಹೊರಗೇ ಮಗನೆ ಸೊಗಸೆನೆ ನಿಮ್ಮ ವೈಭವಕೆ
ಸಾವರಾವಂದದಲಿ ಮಿಗೆ ಸಂ
ಭಾವಿಸುವುದಾ ತೆರನ ನೀ ಹೇ
ಳಾವು ಸೊಗಸುವೆವೆಂದು ನುಡಿದನು ಮಗಗೆ ಧೃತರಾಷ್ಟ್ರ ೬೩

ಕರೆಸಿ ಪಾಂಡು ಕುಮಾರಕರ ನೀ
ಧರೆಯ ಹಸುಗೆಯ ಮಾಡಿಕೊಡು ಕರಿ
ತುರಗ ಭಂಡಾರವನು ಸಹ ದಾಯಾದ ವಿಷಯದಲಿ
ಇರವನವರಿಗೆ ವಾರಣಾವತಿ
ಪುದೊಳಗೆ ಪರುಠವಿಸಿ ಕೊಡು ತಾ
ನುರುಹಿ ಸುಡುವೆನು ಬಳಿಕ ಲಾಕ್ಷಾಭವನ ರಚನೆಯಲಿ ೬೪

ಅಹುದು ಮಗನೇ ಮಂತ್ರವಿದು ಮತ
ವಹುದು ನಮಗೀ ಭೀಷ್ಮ ವಿದುರರು
ಕುಹಕಿಗಳು ಕೃತಭಿನ್ನವಾದರೆ ಭಾರವದು ಮೇಲೆ
ಗಹನ ಗತಿಯಲಿ ಗೂಢತರ ಸ
ನ್ನಿಹಿತ ಕರ್ಮ ಕಲಾಪದಲಿ ರಿಪು
ದಹನ ಸಿದ್ಧಿಯ ನೆನೆವುದೆಂದನು ಮಗಗೆ ಧೃತರಾಷ್ಟ್ರ  ೬೫

ಜನಕನನು ಬೀಳ್ಕೊಂಡು ಕೌರವ
ಜನಪ ತನ್ನರಮನೆಯ ಸಚಿವರೊ
ಳನುಪಮಿತ ವಿಶ್ವಾಸ ಸೂಚಕನನು ಪುರೋಚನನ
ನೆನೆದ ರೌರವ ರಾಜಕಾರ್ಯದ
ಘನವನರುಹಿ ಸಮಗ್ರ ಧನ ಸಾ
ಧನವ ಜೋಡಿಸಿ ಕೊಟ್ಟು ಕಳುಹಿದನವನ ಗುಪ್ತದಲಿ  ೬೬

ಆ ಪುರೋಚನನೆಂಬುವನು ಬಲು
ಪಾಪಕರ್ಮನು ಕುರುಪತಿಗೆ ಬಳಿ
ಕಾ ಪುರಾಂತರದಿಂದ ಬಂದನು ವಾರಣಾವತಿಗೆ
ಆ ಪುರದ ಜನವರಿಯದಂತಿರೆ
ಕಾಪುರುಷನಳವಡಿಸಿದನು ನಸು
ದೀಪ ತಾಗಿದೊಡೇಕರೂಪಹ ರಾಜಭವನವನು  ೬೭

ನಿಗಮ ಸಂಸ್ಥಿತ ವಾಸ್ತು ರಚನಾ
ದಿಗಳನಾಯವ್ಯಯದ ತಾರಾ
ದಿಗಳ ರಾಶಿಗ್ರಹ ಬಲದ ವಿಪರೀತ ಯೋಗದಲಿ
ಹಗಲು ತೀರಲು ತಳಿತ ಕೈದೀ
ವಿಗೆಯ ಹಂತಿಯ ಬೆಡಗಿನಲಿ ಕೇ
ಡಿಗನು ಕೃತ್ರಿಮ ರಚನೆಯಲಿ ಮಾಡಿಸಿದನರಮನೆಯ  ೬೮

ಅರಗಿನಲಿ ಭಿತ್ತಿಗಳ ನವ ಸ
ಜ್ಜರಸ ಗುಡ ಮಿಶ್ರದಲಿ ನೆಲೆಯು
ಪ್ಪರಿಗೆಗಳನವರಲಿ ಕವಾಟಸ್ತಂಭವೇದಿಗಳ
ವಿರಚಿಸಿದ ನವಸೌಧಭದ್ರಾ
ಸ್ತರಣ ನಂದ್ಯಾವರ್ತದಲಿ ಪರಿ
ಪರಿಯ ಬಿನ್ನಾಣದೊಳಗರಗಿನ ಮನೆಯ ಮಾಡಿಸಿದ  ೬೯

ಹಿರಿಯ ಭವನದ ಸುತ್ತುವಳಯದ
ಮುರುಹಿನಲಿ ಮನೆ ಮನೆಗಳಾ ಮಂ
ದಿರ ನಿಕಾಯಕೆ ಬಾಗಿಲೊಂದಾ ದ್ವಾರದೇಶದಲಿ
ಇರವು ತನ್ನದು ಬಾಗಿಲಿಕ್ಕಿದು
ಹೊರಗೆ ಮುದ್ರಿಸಿ ಕಿಚ್ಚಚುಚ್ಚುವ
ಪರುಠವಣೆಯಲಿ ಖಳ ಪುರೋಚನನಂದು ನಿರ್ಮಿಸಿದ ೭೦

ಧರಣಿಪತಿ ಕೇಳಿತ್ತ ಹಸ್ತಿನ
ಪುರದೊಳಗೆ ಕುಂತೀಕುಮಾರರ
ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ
ಬೆರಗು ಬಿನ್ನಾಣದಲಿ ಮಕ್ಕಳ
ಮರುಳು ಮಾಡಿದನೇನ ಹೇಳುವೆ
ನುರಿವನೆಯ ಬೀಡಾರದಲಿ ಬಿಡಿಸಲ್ಕೆ ಮನದಂದ  ೭೧

ದುರುಳರೀ ಕೌರವರು ನೀವತಿ
ಗರುವರವದಿರು ಪಾಪಕರ್ಮರು
ಪರಮಪುಣ್ಯರು ನೀವು ತನ್ನವದಿರು ಕುಮಂತ್ರಿಗಳು
ಎರಳೆ ತೋಳನ ಸಾದು ಸುಣ್ಣದ
ನೆರವಿಗದುವಾವಗೆಯ ಸೇರುವೆ
ಯರಸ ನಿನ್ನೊಡನೆನ್ನ ಕುನ್ನಿಗಳೆನುತ ಬಿಸುಸುಯ್ದ  ೭೨

ತಂದೆಯಿಲ್ಲದ ನಿಮಗೆ ಹಿತರಾ
ರೆಂದು ಮರುಗುವೆನೆನ್ನ ಮಕ್ಕಳು
ಕೊಂದು ಹಿಂಡೆಯ ಕೂಳನುಂಬರೆ ಹೇಸುವವರಲ್ಲ
ಇಂದು ನಿಮಗವರಿಂದಲುಪಹತಿ
ಬಂದುದಾದರೆ ತನ್ನ ತಲೆಯಲಿ
ನಿಂದು ಹೊರೆವುದಕೀರ್ತಿಕಿಲ್ಬಿಷ ಮಗನೆ ಕೇಳೆಂದ  ೭೩

ತಾತ ಕೆಡುವಿರಿ ನೀವು ತನಗ
ಖ್ಯಾತಿ ಕೌರವರೆಂಬುವರು ದು
ರ್ನೀತಿಕಾರರು ಭೀಷ್ಮ ವಿದುರರು ಭೀತರವದಿರಿಗೆ
ನೀತಿ ಸಮ್ಮತವಾಗಿ ಚಿತ್ತದೊ
ಳಾತ ಮತವನು ಹೇಳಿ ನಮ್ಮೊಳು
ಭೀತಿ ಬೇಡೆಂದರಸ ಹಿಡಿದನು ಧರ್ಮಜನ ಕರವ  ೭೪

ಬೇರೆ ಮತವೆಮಗೇನು ಬೊಪ್ಪನ
ಚಾರಿ ನಿಮ್ಮದು ನೀವು ಬೊಪ್ಪನ
ನೂರು ಮಡಿಯೆಮಗೊಳ್ಳಿದರು ಬೇರಿನ್ನು ಹಿತರುಂಟೆ
ಬೇರಿರಿಸಿ ಕೊಡಿಸಿರಿ ನಿಮಗೆಯು
ತೋರಿದುದೆ ಮತ ನಿಮ್ಮ ನೇಮವ
ಮೀರ ಬಲ್ಲೆನೆಯೆಂದು ಧರ್ಮಜ ನುಡಿದನರಸಂಗೆ  ೭೫

ಎರೆಯ ವಂಕಿಯೊ ಕಳಿತ ಮೆಕ್ಕೆಯೊ
ಹುರಿಯ ಬಲೆಯೋ ರಾಗ ಸನ್ನೆಯೊ
ಸರಿಯ ಗೊರೆಯೋ ಠಕ್ಕಿನುಂಡೆಯೊ ಸವಿಯ ಚಿತ್ರಕವೊ
ಅರಸನಂಕೆಯ ಮನದ ಬಯಕೆಯ
ಹೊರೆಯ ಬಳಕೆಯನೀ ಸಮಂಜಸ
ತರದ ಸಾತ್ವಕರೆತ್ತ ಬಲ್ಲರು ಭೂಪ ಕೇಳೆಂದ  ೭೬

ಕಂದ ಮನ ಮುನಿಸಿಲ್ಲಲೇ ನಾ
ವೆಂದ ನುಡಿಗೊಡಬಡುವಿರಾದೊಡೆ
ಮುಂದೆ ಪುರವಿದೆ ವಾರಣಾವತವಿಲ್ಲಿಗರುವತ್ತು
ಸಂದ ನಾಡು ಸಮಸ್ತ ವಸ್ತುಗ
ಳಿಂದ ಪೂರಿತ ಹಸ್ತಿನಾಪುರ
ದಿಂದ ಮಿಗಿಲದು ರಾಜಧಾನಿ ಸ್ಥಾನ ನಿಮಗೆಂದ  ೭೭

ಹೈ ಹಸಾದ ಭವತ್ ಕೃಪಾ ಸ
ನ್ನಾಹವೇ ಸಾಮ್ರಾಜ್ಯವಾವುದ
ನೂಹಿಸಿದೊಡಾ ಸ್ಥಿತಿಯೊಳಡಗಿಹೆವೆಂದು ವಿನಯದಲಿ
ಗಾಹುಗತಕವನರಿಯದಿವರು
ತ್ಸಾಹದಲಿ ಕೈಕೊಂಡು ಭೀಷ್ಮಗೆ
ಬೇಹ ವಿದುರ ದ್ರೋಣಮುಖ್ಯರಿಗರುಹಿದರು ಹದನ  ೭೮

ಧಾರುಣೀಪತಿ ರತ್ನಮಯ ಭಂ
ಡಾರಸಹಿತ ಗಜಾಶ್ವ ರಥ ಪರಿ
ವಾರವನು ಮಾಡಿದನು ಹಸಿಗೆಯನೆರಡು ಭಾಗವನು
ಕೌರವರಿಗೊಂದಿವರಿಗೊಂದೆನ
ಲೋರಣದಲಳವಡಿಸಿ ಬಹು ವಿ
ಸ್ತಾರದಲಿ ಭೀಷ್ಮಾದ್ಯರಹುದೆನಲಿವರ ಮನ್ನಿಸಿದ  ೭೯

ಇವರು ಶುಭದಿನ ಶುಭಮುಹೂರ್ತ
ಪ್ರವರದಲಿ ಹೊರವಂಟರಾ ಜನ
ನಿವಹ ಮರುಗಿತರಣ್ಯವೇ ಗತಿಯರಸ ನಮಗೆಂದು
ಅವರ ಕಳುಹುತ ಬಂದರಾ ಕೌ
ರವರು ನಿಂದರು ಭೀಷ್ಮ ಕಲಶೋ
ದ್ಭವರು ಸುತರಿಗೆ ಬುದ್ಧಿ ಹೇಳಿದು ಮರಳಿದರು ಪುರಕೆ  ೮೦

ವಿದುರನೊಡನೈತರುತ ಸಂಕೇ
ತದಲಿ ಸೂಚಿಸಿ ಮರಳಿದನು ನೃಪ
ಸುದತಿ ವರಗಾಂಧಾರಿ ಮೊದಲಾದಖಿಳ ರಾಣಿಯರು
ಮುದದ ಮುರುವಿನಲಿವರ ತೆಗೆದ
ಪ್ಪಿದರು ಭೂಪತಿ ಸಹಿತ ಕಡುಶೋ
ಕದಲಿ ಕಳುಹಿಸಿ ಕೊಂಡು ಬಂದರು ಹಸ್ತಿನಾಪುರಕೆ  ೮೧

ಅರಸ ಕೇಳೈ ಹಸ್ತಿನಾಪುರ
ವರವ ಹೊರವಡುವಾ ಮುಹೂರ್ತಕೆ
ವರುಷವಿಪ್ಪತ್ತೊಂಬತಾದುದು ಧರ್ಮನಂದನಗೆ
ವರುಷ ಹದಿಮೂರರಲಿ ಹಸ್ತಿನ
ಪುರದೊಳಿದ್ದರು ಹಿಂದೆ ಷೋಡಶ
ವರುಷ ವನದೊಳಗಿಂತು ಲೆಕ್ಕವ ನೋಡಿಕೋಯೆಂದ  ೮೨

ಬಂದರೈವರು ಕುಂತಿ ಸಹಿತಾ
ನಂದದಲಿ ವರವಾರಣಾವತ
ಕಂದು ಪುರಜನ ಕೂಡಿ ಕನ್ನಡಿ ಕಲಶ ವಿಭವದಲಿ
ಬಂದು ತಾವಿದಿರಾಗಿ ಕುಂತೀ
ನಂದನರ ಹೊಗಿಸಿದರು ಪಟ್ಟಣ ೮೩

ವಂದು ಮರೆದುದು ಕೂಡೆ ಗುಡಿತೋರಣದ  ರಚನೆಯಲಿ
ಬೀಡು ಕಾಣಿಕೆಯಿತ್ತು ಕಂಡುದು
ನಾಡೆ ಕಾಣಿಸಿದನು ಪುರೋಚನ
ಕೂಡೆ ಸಂದನು ಹಾಸು ಹೊಕ್ಕಾಗವರ ಮನವರಿದು
ನೋಡಿದನು ಯಮನಂದನನು ಮನೆ
ಮಾಡಿದಂದವನರಗಿನರಮನೆ
ಗೂಡುರಿವ ಬೇಳುವೆಯ ನೆನೆದರೆ ಬೊಪ್ಪನವರೆಂದ  ೮೪

ಸಮಿಧೆಗಳು ನಾವ್ ನಾಲ್ವರಯ್ಯನ
ರಮಣಿಯಾಹುತಿ ಭೀಮನೇ ಪಶು
ಕುಮತಿ ಕಟ್ಟಿಸಿದರಮನೆಯಗ್ನಿ ಕುಂಡವಿದು
ಎಮಗೆ ಸಂಶಯವಿಲ್ಲ ರಾಜೋ
ತ್ತಮನೊ ದುರ್ಯೋಧನನೊ ದೀಕ್ಷಾ
ಕ್ರಮವ ಧರಿಸಿದನಾವನೆಂದನು ನಗುತ ಯಮಸೂನು  ೮೫

ಜನಪ ಕೇಳೈ ವಿದುರನಟ್ಟಿದ
ಖನಕ ಬಂದನುಯಿವರ ಸಜ್ಜೆಯ
ಮನೆಯಲತಿ ಗುಪ್ತದಲಿ ನೆಲದೊಳು ಸವೆಸಿದನು ಪಥವ
ಅನುದಿನದೊಳಾ ಬಾಹಿರನು ಕಿ
ಚ್ಚಿನಲಿ ಚುಚ್ಚುವ ಸಂದುಗಟ್ಟನು
ನೆನೆವುತಿರ್ದನು ಖಳ ಪುರೋಚನನೊಡೆಯನಾಜ್ಞೆಯಲಿ  ೮೬

ಒಂದು ದಿನ ಹಬ್ಬದಲಿ ಭೂಸುರ
ವೃಂದವುಂಡುದು ಪಂಚಪುತ್ರಿಕೆ
ಯೆಂದು ಬೇಡತಿಯೊಬ್ಬಳಿದ್ದಳು ಸುತರು ಸಹಿತಲ್ಲಿ
ಅಂದಿನಿರಳು ಪುರೋಚನನು ತಾ
ನೊಂದ ನೆನೆದರೆ ದೈವಗತಿ ಬೇ
ರೊಂದ ನೆನೆದನು ಕೇಳು ಜನಮೇಜಯ ಮಹೀಪಾಲ  ೮೭

ಅವನು ನಿದ್ರೆಯೊಳರಿಯದಿರಲಾ
ಭವನ ಮುಖದಲಿ ಕಿಚ್ಚನೊಟ್ಟಿಸಿ
ಪವನಸುತ ಸಹಿತಿವರು ಹಾಯ್ದರು ಬಿಲದ ಮಾರ್ಗದಲಿ
ಅವರು ಬೆಂದರು ಮುನ್ನ ಬಳಿಕಾ
ಭವನ ಪಂಕ್ತಿಗಳುರಿದು ಕರಗಿದ
ವವನಿಯಲಿ ಹೊನಲಾಯ್ತು ಪುರಜನವೈದೆ ಬೆರಗಾಗೆ  ೮೮

ಅಕಟ ಪಾಂಡವರಳಿದರೇ ಕೌ
ಳಿಕದಿ ಕೌರವರಿರಿದರೇ ಮತಿ
ವಿಕಳರವದಿರು ಬೆಂದು ಹೋದರು ಧರ್ಮದಲಿ ನಡೆದು
ಪ್ರಕಟ ಪಾಪರಿಗಹುದು ಸಾಮ್ರಾ
ಜ್ಯಕವು ಧರ್ಮಾತ್ಮರಿಗೆಯೀ ಪರಿ
ವಿಕಟತೆಯಸುರ ರಾಜ್ಯವೆಂದುದು ಪೌರಜನ ಮರುಗಿ  ೮೯

ಮುನ್ನ ಬೆಂದನಲಾ ಪುರೋಚನ
ಕುನ್ನಿಯದು ಲೇಸಾಯ್ತು ಹದನಾ
ಪನ್ನರಾದರೆ ಅವ್ವೆಯರು ಸಹಿತಕಟ ಪಾಂಡವರು
ಇನ್ನು ಸುಡು ಸುಡು ಧರ್ಮ ಸಂಪ್ರತಿ
ಪನ್ನ ಗುಣದಾಚಾರಗಳ ಸಂ
ಪನ್ನತೆಯನೆಂದೊರಲಿ ಮರುಗಿತು ನಿಖಿಳಪರಿವಾರ  ೯೦

ಒಗೆದುದೀ ಬೇಳಂಬ ಹಸ್ತಿನ
ನಗರಿಯಲಿ ತತ್ಪೌರಜನ ಮನ
ವುಗಿದು ಬಿದ್ದುದು ಶೋಕಮಯಸಾಗರದ ಮಧ್ಯದಲಿ
ಹೊಗೆದುದಾನನ ವಿದುರ ಭೀಷ್ಮಾ
ದಿಗಳಿಗಾ ಧೃತರಾಷ್ಟ್ರ ಸುತರಿಗೆ  ೯೧
ದುಗುಡ ದಡ್ಡಿಯ ಹರುಷ ಸಿರಿ ಹೊಕ್ಕಳು ಮುಖಾಂಬುಜವ

ಬಂದುದಾ ಸುರನದಿಗೆ ಕೌರವ
ವೃಂದ ಪರಿಜನವೈದೆ ಶೋಕಿಸಿ
ಮಿಂದು ಗಂಗಾತೀರದಲಿ ಬಳಿಕೂರ್ಧ್ವದೇಹಿಕವ
ಸಂದ ವಿಧಿಯಲಿ ಮಾಡಿ ಪರಮಾ
ನಂದ ಮಿಗಲವರಿರ್ದರಿತ್ತಲು
ಇಂದುಕುಲ ಸಂಭವರ ವಿಧಿಯನು ಮತ್ತೆ ಕೇಳೆಂದ  ೯೨

ಬಿಲಮುಖದೊಳುತ್ತರಿಸಿ ಬಲುಗ
ತ್ತಲೆಯೊಳಡವಿಯ ಮಾರ್ಗದಲಿ ಕಲು
ಮುಳುಗಳೊಳು ಕಾಪಥಕೆ ಕೋಮಲ ಚರಣಗಳ ಕೊಡುತ
ತೊಳಲಿದರು ಬೆಳಗಾಗೆ ಹಳ್ಳಿಯ
ಬಳಿಯ ಹೊದ್ದದೆ ಹಾಯ್ದು ಹೊಕ್ಕರು
ಹಳುವವನು ಬೆಳಗಡಗೆ ನಡೆದರು ಹಲವು ಯೋಜನವ  ೯೩

ದಾಟಿದರು ಗಂಗೆಯನು ರಾಯನ
ಮಾಟದಲಿ ಹಲು ಮುರಿದುದೇ ನ
ಮ್ಮಾಟಕಿದು ಹಿರದಲ್ಲಲಾಯೆನುತೈವರಡಿಗಡಿಗೆ
ಕೋಟಲೆಯ ಕೊಲ್ಲಣಿಗೆಯಲಿ ಮೈ
ನೋಟಕಲಸದೆ ಬಿಸಿಲಲಿವರು ಮ
ಹಾಟವಿಯ ಮಧ್ಯವನು ಹೊಕ್ಕರು ನೃಪತಿ ಕೇಳೆಂದ  ೯೪