ಸ್ವಾತಂತ್ರ್ಯೋತ್ತರ ಕಾಲದಲ್ಲಿ ಭಾರತ ಉಪಖಂಡದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಹೊರಹೊಮ್ಮಿರುವುದು ಒಂದು ಚಾರಿತ್ರಿಕ ಬೆಳವಣಿಗೆ ಎನ್ನಬೇಕು. ಕ್ರಿಶ್ಚಿಯನ್‌ ಮಿಷನರಿಗಳನ್ನು ಹೊರತುಪಡಿಸಿದರೆ ಹಿಂದೂಗಳಿಗೆ ಸ್ವಯಂ ಸೇವೆ ಎಂಬುದು ಹೊಸ ಅನುಭವ. ನಮ್ಮಂಥ ಅತ್ಯಂತ ಶ್ರೇಣಿಕೃತವಾದ ಸಮಾಜದಲ್ಲಿ ಮೇಲು- ಕೀಳು, ಸ್ಪೃಶ್ಯ-ಅಸ್ಪೃಶ್ಯ, ಈ ತರಹದ ಹಲವು ಭಿನ್ನ ಭೇದಗಳು, ತಾರತಮ್ಯಗಳಿರುವುದರಿಂದ ಹಿಂದುಗಳ ಪೈಕಿ ಯಾವುದೇ ಸಮುದಾಯದವರು ಸಮಾಜ ಸೇವೆಯಲ್ಲಿ ತೊಡಗುವುದು ಕಷ್ಟವೆನಿಸುತ್ತದೆ. ಹೆಚ್ಚೆಂದರೆ ಯಾವುದೇ ಒಂದು ಜಾತಿಯವರು ತಮ್ಮ ಜಾತಿಯವರ ಸಂಕಟ ಪರಿಹಾರಕ್ಕೆ ತೊಡಗಿಸಿಕೊಂಡರು.

ಸಾಮ್ರಾಜ್ಯಶಾಹಿ ಅಧಿಕಾರದಲ್ಲಿ ಕ್ರಿಶ್ಚಿಯನ್‌ಮಿಷನರಿಗಳ ಸಮಾಜ ಸೇವಾ ಚಟುವಟಿಕೆಗಳನ್ನು ಅನಿವಾರ್ಯ ಅನಿಷ್ಟವೆಂದು ಒಪ್ಪಿಕೊಳ್ಳಲಾಗಿತ್ತು. ಕೆಳಜಾತಿಗಳು ಹಾಗೂ ಬುಡಕಟ್ಟು ಜನಾಂಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಕ್ರೈಸ್ತಮತಕ್ಕೆ ಮಂದಿ ಮತಾಂತರಗೊಂಡಿರುವುದುಂಟು. ಮೇಲ್ಜಾತಿಯವರ ಅವಮಾನದಿಂದ ತಪ್ಪಿಸಕೊಳ್ಳಲು ಮತಾಂತರವು ಈ ಜನ ಸಮುದಾಯಗಳಿಗೆ ಒಂದು ಹೊಸ ದಾರಿಯನ್ನು ನಿರ್ಮಿಸಿಕೊಟ್ಟಿತೆಂಬುದು ನಿರ್ವಿವಾದ. ದೇಶ ಸ್ವತಂತ್ರ್ಯವಾಗುತ್ತಿದ್ದ ಹಾಗೆಯೇ ಮತಾಂತರವನ್ನು ಕಠಿಣವಾದ ಶಬ್ದಗಳಿಂದ ಹೀಗಳೆಯಲಾಯಿತು. ಮಿಷನರಿಗಳ ಚಟುವಟಿಕೆ ಸ್ಥಗಿತಗೊಂಡಿತು.

ಅಸಂಖ್ಯಾತವಾದಂಥ ಧಾರ್ಮಿಕ ಸಂಘಟನೆಗಳು ಸಮಾಜಿಕ ಸಂಗತಿಗಳಿಗಿಂತ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದವು. ದೇಶದಲ್ಲಿ ಸಹ ಮಾನವರ ಸಮಾಜಿಕ ಸೇವೆಗೆ ನಿಲ್ಲಬೇಕೆಂಬ ಪ್ರೇರಣೆ ಅವರಿಗುಂಟಾಗಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಹೊರಹೊಮ್ಮಲು ಸಾದ್ಯವಾಗಿರುವುದು ಒಂದು ಜಾತ್ಯಾತೀತ ಸಂದರ್ಭದಲ್ಲೇ ಹೊರತು ಧರ್ಮ ಅಥವಾ ಜಾತಿಯ ಆಧಾರದ ಮೇಲಲ್ಲ. ಈ ಸಂಬಂಧ ವಾಲ್ಟರ್‌ಫೆರ್ನಾಂಡೀಸ್‌ರ ಮಾತುಗಳ ಗಮನಾರ್ಹವಾಗಿವೆ. ಫೆರ್ನಾಂಡೀಸ್‌ಹೇಳುತ್ತಾರೆ: “ರಾಜಕೀಯ ಪಕ್ಷಗಳ ಮತಪೆಟ್ಟಿಗೆ ಲೆಕ್ಕಾಚಾರ ಹಾಗೂ ಆರ್ಥಿಕ ಬೆಳವಣಿಗೆ ಮಾದರಿಯ ಅಭಿವೃದ್ಧಿಯಿಂದ ಬೇಸತ್ತ ಸಹಸ್ರ ಸಂಖ್ಯೆಯ ಯುವಕ-ಯುವತಿಯರು ಗ್ರಾಮೀಣ ಪ್ರದೇಶಗಳಿಗೆ ನಡೆದಿದ್ದಾರೆ…. ಇಲ್ಲಿಯ ತನಕ ಎಲ್ಲರಿಂದ ತಿರಸ್ಕೃತರಾಗಿ – ರಾಜಕೀಯ ಪಕ್ಷಗಳಿಂದಲೂ – ಇರುವಂಥ ಗ್ರಾಮೀಣ ಜನರು (ಬುಡಕಟ್ಟು ಜನರು) ಬದ್ಧತೆ ಹೊಂದಿದ ನಗರಪ್ರದೇಶದ ಸುಶಿಕ್ಷಿತ ಯುವಕರು ತಮ್ಮ ಕ್ರಿಯಾಶೀಲತೆಯಿಂದ ಗ್ರಾಮೀಣ ಪರಿವರ್ತನೆಯ ಹರಿಕಾರರಾಗುವರೆಂದು ಆಶಿಸಲಾಗಿದೆ”. (ಸೋಷಿಯಲ್‌ಆಕ್ಟಿಮಿಸ್ಟ್‌ಸ್‌ಅಂಡ್‌ದ ಸರ್ಚ್ ಫಾರ್‌ಆಲ್ಟರ್ನೇಟಿವ್ಸ್‌, ವಾಲ್ಟ್‌ರ್‌ ಫೆರ್ನಾಂಡೀಸ್‌, ೧೯೮೫).

ಪ್ರಸ್ತುತ ಸ್ವಯಂ ಸೇವಾ ಸಂಸ್ಥೆಗಳೆಂದೇ ಪ್ರಚಲಿತವಾಗಿರುವ ಈ ಸರ್ಕಾರೇತರ ಸಂಘಟನೆಗಳ ಕಥೆಯು ಆಕರ್ಷಕವೂ, ಶೈಕ್ಷಣಿಕವೂ ಆಗಿದೆ. ಮೊದಲು ಬಡಜನರ ದುಃಖದುಮ್ಮಾನಗಳ ಶಮನಕ್ಕೆ ಬಂದವರು ಬೇರಾರು ಅಲ್ಲ, ಅವರು ಮಧ್ಯಮ ವರ್ಗದ, ನಗರದ ಪುರುಷರು ಹಾಗೂ ಮಹಿಳೆಯರು. ೧೯೬೦ ಹಾಗೂ ೭೦ರ ದಶಕಗಳಲ್ಲಾದಂಥ ಘಟನೆಗಳು, ಆರ್ಥಿಕ ಬಿಕ್ಕಟ್ಟು, ರಾಜಕೀಯ ಧೃವೀಕರಣ ಹಾಗೂ ಕೈವಾಡಗಳು ‘ತುರ್ತು ಪರಿಸ್ಥಿತಿ’ಯ ಹೇರಿಕೆಯಲ್ಲಿ ಪರ್ಯವಸಾನವಾದಾಗ, ಅನೇಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿ ದೂರದ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಬುಡಕಟ್ಟು ಜನರುಗಳಿಗೆ ಒದಗಿರಬಹುದಾದ ವಿಪತ್ತುಗಳ ಚಹರೆಯನ್ನು ಅರಿತುಕೊಂಡರು. ಅನೇಕ ವಿದ್ಯಾರ್ಥಿಗಳು ಸೇರಿಕೊಂಡಿದ್ದ ಎನ್‌.ಸಿ.ಸಿ. ಹಾಗೂ ಎನ್‌.ಎಸ್‌.ಎಸ್‌. ಸೇವಾ ವಲಯಗಳಾಗಿದ್ದು ಶೈಕ್ಷಣಿಕ ಕಾರ್ಯಕ್ರಮವನ್ನೂ ಒಳಗೊಂಡಿದ್ದವು. ಪ್ರಾಯೋಗಿಕ ಅನುಭವವೂ ಕೂಡ ಅವರಿಗೆ ಈ ಮೂಲಕ ದೊರಕಿತು. ಪಂಚಾಯಿತಿ ರಾಜ್ಯ ಕಾರ್ಯಕ್ರಮ ಅಥವಾ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ – ಹೀಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮವಾದರೂ ಆಗಲೇ ಕೆಲವು ಸವಲತ್ತುಗಳನ್ನು ಪಡೆದಿದ್ದ ಜನಸಮುದಾಯಕ್ಕೆ ಸಲ್ಲುವಂತಾಗಿ, ಲಾಗಾಯ್ತಿನಿಂದ ಅಂಚಿನಲ್ಲಿದ್ದ ಜನರಿಗೆ ಏನೂ ದಕ್ಕದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೀಗೆ ಎಲ್ಲಾ ರಂಗಗಳಲ್ಲಿ ಶಿಥಿಲವಾಗಿದ್ದಂಥ ಸನ್ನಿವೇಶವನ್ನು ಸರಿಪಡಿಸಲು ಅನೇಕ ಯುವಕರು “ಕ್ರಿಯಾ ಗುಂಪುಗಳನ್ನು” ರಚಿಸಿಕೊಂಡು ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಕೆಲಸಮಾಡಲು ಪ್ರೇರಿತರಾದರು. ಅವರಲ್ಲಿ ಕೆಲವರಿಗೆ ಇದು ಕೇವಲ ತಾತ್ಕಾಲಿಕ ಏರ್ಪಾಟಾಗಿತ್ತು; ಏಕೆಂದರೆ ಬೇರೆ ಉದ್ಯೋಗ ಸಿಕ್ಕಿದ ಕೂಡಲೇ ಅವರು ಸಂಘಟನೆಯನ್ನು ಬಿಟ್ಟುಬಿಟ್ಟರು. ಉಳಿದವರಿಗೆ ಇದೊಂದು ‘ವೃತ್ತಿ’ಯಾದ್ದರಿಂದ ಅದಕ್ಕೆ ಅವರಿಗೆ ದೀಕ್ಷೆಯಾಯಿತು. ಹಾಗಾಗಿ ತಾವು ಆರಿಸಿಕೊಂಡಿದ್ದ ಕ್ಷೇತ್ರದಲ್ಲಿ ನಿಷ್ಕಾಮ ಕರ್ಮದಿಂದ ದುಡಿಯಲು ಅವರು ಬದ್ಧರಾಗಿದ್ದರು. ಈ ತರಹದ ನಿಸ್ವಾರ್ಥ ದುಡಿಮೆಗಾರರಾದ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಅನೇಕ ಅಡ್ಡಿ ಆತಂಕಗಳನ್ನು ಎದುರಿಸಬೇಕಾಯಿತು. ಅವರಲ್ಲನೇಕರು ಪರಿಸ್ಥಿತಿಯನ್ನು ಎದರಿಸಲು ಸಿದ್ಧರಾದರು. ತಾವು ಕೆಲಸ ಮಾಡುತ್ತಿದ್ದ ಪ್ರದೇಶದ ಜನರ ಮನವೊಲಿಸಿಕೊಂಡರು. ಈ ಪ್ರಕಿಯೆಯಲ್ಲಿ ಸರ್ಕಾರಿ ಅಧಿಕಾರಿಗಳು, ಅರಣ್ಯ ಇಲಾಖೆ, ರಾಜಕೀಯ ನಾಯಕರು, ಸುತ್ತಮುತ್ತಲ ಗ್ರಾಮಸ್ಥರು, ವ್ಯಾಪಾರಸ್ಥರು, ಗುತ್ತಿಗೆದಾರರು, ಇತರ ಸ್ವಹಿತಾಸಕ್ತಿ ಬೆಳೆಸಿಕೊಂಡಿದ್ದ ಜನರು ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರನ್ನು ‘ಉಪಟಳಕಾರರು’ ಎಂದು ಬಗೆದಿದ್ದರಿಂದ ಅವರೊಡನೆ ‘ಕಾದಾಡ’ ಬೇಕಾದಂಥ ಪರಿಸ್ಥಿತಿ ಒದಗಿತು. “ಪರಿಸ್ಥಿತಿ ಇದ್ದ ಹಾಗೆ ಇರಲಿ” ಎಂಬ ಸ್ವಹಿತಾಸಕ್ತಿ ಗುಂಪಿನ ಜನರ ಮನೋಧರ್ಮಕ್ಕೆ ಭಿನ್ನವಾದ ರೀತಿಯಲ್ಲಿ ಸ್ವಯಂ ಸೇವಾ ಕಾರ್ಯಕರ್ತರು ಧ್ಯೇಯ ಹೊಂದಿದ್ದರು.

ಈ ದೃಷ್ಟಿಕೋನದಿಂದ ಅಭಿವೃದ್ಧಿ ಕಾರ್ಯಗಳು ಹಾಗೂ ಬುಡಕಟ್ಟು ಕಲ್ಯಾಣದ ವಿಷಯದಲ್ಲಿ ಎನ್‌.ಜಿ.ಓ. ಗಳು ಹಾಗೂ ಸರ್ಕಾರಿ ಅಧಿಕಾರಿಗಳ ಸಂಬಂಧವನ್ನು ವಿಶ್ಲೇಷಿಸುವುದು ಆಸಕ್ತಿದಾಯಕವಾಗಿ ತೋರುತ್ತದೆ. ಎನ್‌.ಜಿ.ಓ.ಗಳು ಬುಡಕಟ್ಟು ಜನರ ಅಭಿವೃದ್ಧಿಗೆ ಕೆಲಸ ಮಾಡಲು ಬದ್ಧರಾಗಿರುವುದರಿಂದ ಬುಡಕಟ್ಟು ಅಭಿವೃದ್ಧಿಯ ವಿಷಯದಲ್ಲಿ ಸರ್ಕಾರ ಕಾಲದಿಂದ ಕಾಲಕ್ಕೆ ಯಾವ ರೀತಿ-ನಿಯಮಾವಳಿಯನ್ನು ರೂಪಿಸುತ್ತಿದೆ ಎಂಬುದನ್ನು ಸರ್ಕಾರಿ ಅಧಿಕಾರಿಗಳಿಂದ ತಿಳಿಯುವುದು ಸೂಕ್ತವಾಗಿದೆ.

ನಮ್ಮ ಪ್ರಶ್ನೆಗೆ ಉತ್ತರವಾಗಿ ರಾಜ್ಯದಲ್ಲಿ ಬುಡಕಟ್ಟು ಅಭಿವೃದ್ಧಿ ಸಂಬಂಧ ಲಭ್ಯವಿರುವ ನೀತಿ ಹಾಗೂ ಕಾರ್ಯಕ್ರಮಗಳನ್ನು ಸರ್ಕಾರಿ ಅಧಿಕಾರಿಗಳು ಈ ಕೆಳಕಂಡಂತೆ ನೀಡಿದ್ದಾರ:

೦೧. ಪೂರಕ ಪೌಷ್ಠಿಕ ಆಹಾರದ ಪೂರೈಕೆ, ಮಧ್ಯಾಹ್ನದ ಊಟ; ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಉಪಾಹಾರ ಹಾಗೂ ಊಟದ ಪೂರೈಕೆ.

೦೨. ಅನಧಿಕೃತ ಕೃಷಿಯನ್ನು ಸರ್ವೇಕ್ಷಣ ನಡೆಸಿ ಭೂಮಿರಹಿತರಿಗೆ ಆ ಭೂಮಿಯನ್ನು ನೀಡಿ ಅಧಿಕೃತಗೊಳಿಸುವ ಕ್ರಮ.

೦೩. ಐಅರ್ಡಿಪಿ, ಆಶ್ರಯ ಯೋಜನೆಗಳಡಿಯಲ್ಲಿ ಮನೆಯಿಲ್ಲದವರಿಗೆ ಮನೆ ನೀಡುವುದು; ಭಾಗ್ಯಜ್ಯೋತಿ (ವಿದ್ಯುದ್ದೀಕರಣ), ಹಸು, ಹಂದಿ, ಕುರಿ ಹಾಗೂ ಮೇಕೆಗಳನ್ನು ಸಾಕಣೆಗೆ ಒದಗಿಸುವುದು.

೦೪. ತೋಟಗಾರಿಕೆ ಇಲಾಖೆಯ ಮೂಲಕ ತೆಂಗಿನ ಸಸಿಗಳನ್ನು ವಿತರಿಸುವುದು. ರೇಷ್ಮೆ ಬೆಳೆಯಲ್ಲಿ ತರಬೇತು; ಕೃಷಿ ಸಲಕರಣೆಗಳ ಪೂರೈಕೆ; ಎತ್ತುಗಳನ್ನು ಕೊಡುವುದು.

೦೫. ಕೊಳವೆ ಬಾವಿ, ಪಂಪ್‌ಸೆಟ್‌, ಬೀಜ ಹಾಗೂ ಕೀಟನಾಶಕಗಳಿಗಾಗಿ ಬ್ಯಾಂಕುಗಳಿಂದ ಸಾಲ ಪಡೆಯುವಂಥ ಸಹಾಯ ಮಾಡುವುದು.

೦೬. ಜೇನುಸಾಕಣೆಯಲ್ಲಿ ತರಬೇತು, ಅರಣ್ಯ ಉತ್ಪನ್ನಗಳ ಸಂಗ್ರಹಣೆ ಹಾಗೂ ಬುಟ್ಟಿ ನೇಯುವುದರಲ್ಲಿ ತರಬೇತು ನೀಡುವುದು.

೦೭. ವೃದ್ದಾಪ್ಯ ವೇತನದಂಥ ಸಮಾಜ ಕಲ್ಯಾಣ ಯೋಜನೆಗಳು ಲಭ್ಯವಾಗುತ್ತಿವೆ.

೦೮. ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳನ್ನು ತೆರದು ಪಠ್ಯಪುಸ್ತಕ, ಸಮವಸ್ತ್ರ ಇತ್ಯಾದಿಗಳನ್ನು ಪುಕ್ಕಟೆಯಾಗಿ ನೀಡುವುದು.

೦೯. ಮೀನುಗಾರಿಕೆಯಲ್ಲಿ ಬುಡಕಟ್ಟಿನವರಿಗೆ ತರಬೇತು ನೀಡಿ ಮೀನು ಹಿಡಿಯಲು ಕೊಳ ಹಾಗೂ ಕೆರೆಗಳನ್ನು ಅವರಿಗೆ ಹಂಚಿಕೊಟ್ಟು ಸಹಾಯ ಮಾಡುವುದು.

೧೦. ತಮಗೆ ಲಭ್ಯವಿರುವ ಅನುಕೂಲತೆಗಳ ಬಗ್ಗೆ ಬುಡಕಟ್ಟಿನವರಿಗೆ ಮನವರಿಕೆಯಾಗದ ಕಾರಣ ಅಧಿಕಾರಿಗಳು ಅದನ್ನು ಅವರ ಗಮನಕ್ಕೆ ತರುತ್ತಿದ್ದಾರೆ.

೧೧. ಅವರನ್ನು ‘ನಾಗರಿಕ’ಗೊಳಿಸಿ ಅವರಿಗೆ ಆಧುನಿಕ ವಸ್ತು ಸಂಸ್ಕೃತಿಯನ್ನು ದಕ್ಕಿಸಬೇಕಾಗಿದೆ.

೧೨. ಅಭಿವೃದ್ಧಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿಲ್ಲವೆಂದು ಕೆಲವು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬುಡಕಟ್ಟು ಅಭಿವೃದ್ಧಿ ಕೆಲಸದಲ್ಲಿ ನಿರತವಾಗಿರುವಂಥ ಸ್ವಯಂಸೇವಾ ಸಂಸ್ಥೆಗಳ ವಿಧಾನವನ್ನು ಸರ್ಕಾರ ಮಾದರಿಯಾಗಿ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಅಧಿಕಾರಿಗಳು ಪಟ್ಟಿಯಲ್ಲಿರುವ ಈ ಮೇಲೆ ಸೂಚಿಸಿರುವ ಅನೇಕ ಕಾರ್ಯಕ್ರಮಗಳು ಕೇವಲ ಕಾಗದದ ಮೇಲಿವೆ. ಸ್ವಯಂ ಸೇವಾ ಸಂಸ್ಥೆಗಳ ಪ್ರಜ್ಞೀಕರಣವನ್ನು ಉಂಟುಮಾಡಿರುವ ಕಾರಣದಿಂದ ಮಾತ್ರ ಗೃಹ ನಿರ್ಮಾಣ, ಆಶ್ರಮ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳಂಥ ಯೋಜನೆಗಳು ಅಲ್ಲೊಂದು ಇಲ್ಲೊಂದು ಕಾರ್ಯರೂಪಕ್ಕೆ ಬಂದಿವೆ.

ಹೆಚ್.ಡಿ. ಕೋಟೆ ತಾಲ್ಲೂಕಿಗೆ ಸಂಬಂಧಿಸಿದ ತಮ್ಮ ಅಧ್ಯಯನದಲ್ಲಿ ದಿವಂಗತ ನಂಜುಂಡರಾವ್‌ಅವರ ಹೆಚ್‌.ಡಿ. ಕೋಟೆ ತಾಲ್ಲೂಕಿನ ಬುಡಕಟ್ಟಿನವರ ಬಗೆಗೆ ಹೇಳಿರುವ ಸಂಗತಿಗಳು ಇತರ ಪ್ರದೇಶಗಳವರಿಗೂ ಅನ್ವಯವಾಗುತ್ತದೆ. ಅನೇಕ ಹಾಡಿಗಳು ದೂರದಲ್ಲಿರುವುದರಿಂದ ಯಾವ ಅಧಿಕಾರಿಯೂ ಅಲ್ಲಿಗೆ ಭೇಟಿ ನೀಡುತ್ತಿರಲಿಲ್ಲ. ಬುಡಕಟ್ಟು ಜನರಿಗೆ ಖಾಸಗಿ ಆಸ್ತಿಯ ಬಗೆಗೆ ಯಾವುದೇ ಕಲ್ಪನೆ ಇರುವುದಿಲ್ಲ. ಎಲ್ಲಿಯಾದರೂ ಅವನಿಗೆ ಭೂಮಿಯನ್ನು ನೀಡಿದರೆ, ಅದೆಲ್ಲಿದೆ ಎಂದು ತಿಳಿಯುವ ಗೋಜಿಗೂ ಆತ ಹೋಗುವುದಿಲ್ಲ. ಬಿ.ಡಿ.ಓ, ರೆವೆನ್ಯೂ ಇನ್ಸ್‌ಪೆಕ್ಟರ್‌ಹೀಗೆ ಯಾವ ಅಧಿಕಾರಿಯೂ ಸಹ ಆ ವ್ಯಕ್ತಿಗೆ ಸೇರಬೇಕಾದ ಜಮೀನನ್ನು ಗುರುತಿಸಿಕೊಡುವುದಿಲ್ಲ. ಇದರ ಪರಿಣಾಮವಾಗಿ, ಅನೇಕ ಬುಡಕಟ್ಟು ಜನರು ಕಾಗದದ ಮೇಲೆ ಭೂಮಿಯ ಒಡೆಯರಾಗಿರುತ್ತಾರೆ, ಆದರೆ ವಾಸ್ತವದಲ್ಲಿ ಅವರಿಗೆ ಏನೂ ತಿಳಿದಿರುವುದಿಲ್ಲ.

ರಾಜ್ಯ ಸರ್ಕಾರ ಸ್ವಯಂ ಸೇವಾ ಸಂಸ್ಥೆಗಳಿಂದ ಮಾದರಿ ಪಡೆಯಬೇಕಾದದ್ದು ಅನಿವಾರ್ಯ. ಈ ಸ್ವಯಂಸೇವಾ ಸಂಸ್ಥೆಗಳ ದಣಿವರಿಯದ ಪ್ರಯತ್ನದಿಂದಾಗಿ ಪ್ರಸ್ತುತ ಅಧ್ಯಯನ ಒಳಗೊಂಡಿರುವ ಈ ಬುಡಕಟ್ಟು ಪ್ರದೇಶದಲ್ಲಿ ಕೆಲವು ಅಭಿವೃದ್ಧಿ ಚಟುವಟಿಕೆಗಳು ಪ್ರಾರಂಭವಾಗಿವೆಯೆನ್ನಬೇಕು.

ವಿಶೇಷ ಸಂಯೋಜಿತ ಬುಡಕಟ್ಟು ಉಪಯೋಜನೆಯ ಗುರಿಯೇನು ಎಂದು ಕೇಳಲಾದ ಪ್ರಶ್ನೆಗೆ ಬುಡಕಟ್ಟು ಜನರ ಸರ್ವಾಂಗೀಣ ಅಭಿವೃದ್ಧಿಯನ್ನು ಈ ಯೋಜನೆ ಒಳಗೊಂಡಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸುತ್ತಾರೆ. ಅವರ ಪ್ರಕಾರ ಪರಿಶಿಷ್ಟ ಪಂಗಡದವರಿಗೆ ಒಂದು ದಶಲಕ್ಷ ಬಾವಿಗಳು, ಅಭಿವೃದ್ಧಿಗಾಗಿ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವುದು, ಅರಣ್ಯ ಆಧಾರಿತ ಪದಾರ್ಥಗಳ ಉತ್ಪತ್ತಿ ಹಾಗೂ ಮಾರಾಟಗಳು ಹಮ್ಮಿಕೊಂಡಿರುವ ಕೆಲವು ಮುಖ್ಯ ಕಾರ್ಯಕ್ರಮಗಳಾಗಿವೆ. ಈ ಉಪಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲವೆಂದೂ ಸಹ ಹೇಳಲಾಗುತ್ತಿದೆ. ಮುಂದುವರಿದು ಅವರು ಹೇಳುವುದೇನೆಂದರೆ, ಸರ್ಕಾರ ಬೇರೆ ಬೇರೆ ತರಹದ ಅನುಕೂಲತೆಗಳನ್ನು ಕಲ್ಪಿಸುತ್ತಿದೆಯಾದರೂ ಬುಡಕಟ್ಟಿನವರು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ಆದರೆ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಸ್ಥಳೀಯ ಅಧಿಕಾರಿಕಗಳ ಪಾತ್ರ ಮುಖ್ಯವೆಂದು ಒತ್ತಿ ಹೇಳುತ್ತಾರೆ. ಸುಮಾರು ೮೩ ಮಂದಿ ಅಧಿಕಾರಿಗಳು ವಿಶೇಷ ಸಂಯೋಜಿತ ಉಪಯೋಜನೆ ಉದ್ದೇಶಗಳು ಈಡೇರಿವೆಯೆಂದು ಅಭಿಪ್ರಾಯಪಡುತ್ತಾರೆ.

ಕೆಲವು ಅಧಿಕಾರಿಗಳು ಈ ಉಪಯೋಜನೆ ಕಾರ್ಯಕ್ರಮಗಳ ಅಗತ್ಯವೇ ಇಲ್ಲವೆಂದೂ ಈ ಮುಂದೆ ಸೂಚಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಸಾಕೆಂದು ಹೇಳುತ್ತಾರೆ. ಗೃಹನಿರ್ಮಾಣ, ಆರೋಗ್ಯ, ಶಿಕ್ಷಣ, ಹಸಿರು ಕಾರ್ಡು, ಗ್ರಾಮೀಣ ಉದ್ಯೋಗ, ಅರಣ್ಯ ಉತ್ಪನ್ನದ ಸಂಗ್ರಹಣೆಗೆ ಏರ್ಪಾಟು – ಇಷ್ಟು ಮಾಡಿದರೆ ಬಹಳ ಸಾಧಿತವಾಗುವುದೆಂಬುದು ಅಭಿಪ್ರಾಯ. ಇಂಥ ಮೂಲಭೂತ ಕಲ್ಯಾಣ ಯೋಜನೆಗಳು ಅನುಷ್ಠಾನಗೊಳ್ಳುವುದರಿಂದ ಬುಡಕಟ್ಟು ಗುಂಪುಗಳ ಸಮಸ್ಯೆಗಳನ್ನು ಬಹುಮಟ್ಟಿಗೆ ನಿವಾರಿಸಬಹುದೆಂದು ತಿಳಿಯಲಾಗಿದೆ.

ರಾಷ್ಟ್ರೀಯ ಬದುಕಿನ ಮುಖ್ಯವಾಹಿನಿಗೆ ಬುಡಕಟ್ಟು ಜನರನ್ನು ಒಳಗೊಳ್ಳಲು ಈ ಮುಂದಿನ ಕ್ರಮಗಳನ್ನು ಸೂಚಿಸಲಾಗಿದೆ. ಒಂದು ಮುಖ್ಯವಾದ ಹೆಜ್ಜೆ ಎಂದರೆ ಬುಡಕಟ್ಟಿನವರಲ್ಲಿ ಸಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಅರಿವನ್ನು ಮೂಡಿಸುವುದು. ಆರೋಗ್ಯ ಸೇವೆ ಹಾಗೂ ಉದ್ಯೋಗಾವಕಾಶವನ್ನು ಕಲ್ಪಿಸುವುದರ ಜೊತೆಗೆ ಇತರ ಸಮಾಜಿಕ ಸವಲತ್ತುಗಳನ್ನು ನೀಡುವುದರಿಂದ ಇದಕ್ಕೆ ಹೆಚ್ಚಿನ ಒತ್ತಾಸೆ ನೀಡಿದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗಿನ ಅಲೆಮಾರಿ ಅಥವಾ ಅರೆ-ಅಲೆಮಾರಿ ಜೀವನ ನಡೆಸುವುದಕ್ಕಿಂತ ಅವರು ಒಂದು ಕಡೆ ನೆಲೆ ನಿಲ್ಲುವಂತಾಗಬೇಕು. ತನ್ನ ಯೋಜನೆಗಳು ಅವರನ್ನು ತಲುಪಿ ಅವರಲ್ಲಿರುವ ಕೀಳರಿಮೆಯನ್ನು ತೊಡದುಹಾಕುವ ದಿಶೆಯಲ್ಲಿ ಸರ್ಕಾರ ಕೆಲಸ ಮಾಡಬೇಕು. ಬುಡಕಟ್ಟಿನವರನ್ನು ಕಾಡಿನಿಂದ ಹೊರಗೆ ತರಬೇಕೆಂದು ಅಧಿಕಾರಿಗಳು ಹೇಳುವಾಗ ಅವರ ನಿಜವಾದ ಬಣ್ಣ ಬಯಲಾಗುತ್ತದೆ. ಅನೇಕ ದಶಕಗಳಿಂದ ಇದು ಸರ್ಕಾರ, ಬುಡಕಟ್ಟುಗಳು ಹಾಗೂ ಅವರ ನಡುವೆ ಕೆಲಸ ಮಾಡುತ್ತಿರುವಂಥ ಸ್ವಯಂ ಸೇವಾ ಸಂಸ್ಥೆಗಳ ನಡುವೆ ಬಗೆಹರಿಯಲಾಗದ ಸಮಸ್ಯೆಯಾಗಿದೆ.

ಅಧಿಕಾರಿಗಳು ಮುಂದುವರಿದು ಹೇಗೆ ಬುಡಕಟ್ಟು ಅಭಿವೃದ್ಧಿ ಪರಿಸರ ಸಮತೋಲನದ ಜೊತೆ ಜೊತೆಗೆ ಹೋಗಬೇಕೆಂದು ತಿಳಿಸುತ್ತಾರೆ. ಇದನ್ನು ಸಾಧುಗೊಳಿಸಬೇಕಾದರೆ ಬುಡಕಟ್ಟು ಜನ ಹೆಚ್ಚು ಹೆಚ್ಚು ಮರ ಬೆಳೆಸುವಲ್ಲಿ ಅದರಲ್ಲೂ ಸಾಮಾಜಿಕ ಅರಣ್ಯ ಬೆಳೆಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇಳಲಾಗುತ್ತದೆ. ವನಮಹೋತ್ಸವ ಕಾರ್ಯಕ್ರಮದಲ್ಲಿ ಬುಡಕಟ್ಟಿನವರನ್ನು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಗಿಡಗಳನ್ನು ಪುಕ್ಕಟೆಯಾಗಿ ಕೊಡಬೇಕು. ಇಲಾಖೆಯಲ್ಲಿ ಇರುವ ಉದ್ಯೋಗಗಳಿಗೆ ಆದಷ್ಟೂ ಬುಡಕಟ್ಟಿನವರನ್ನು ಅರಣ್ಯ ಇಲಾಖೆಯವರು ಸೇರಿಸಿಕೊಳ್ಳಬೇಕು.

ಕಾಡಿನಲ್ಲಿ ಮನಸೋಯಿಚ್ಛೆ ಮರ ಕಡಿಯುವ ಹಾಗೂ ಅನಿರ್ಬಂಧಿತವಾಗಿ ಗಣಿಗಾರಿಕೆಯನ್ನು ನಡೆಸುವುದನ್ನು ತಡೆಯಬೇಕಾಗಿದೆ. ಅರಣ್ಯ ಹಾಗೂ ರಾಷ್ಟ್ರೀಯ ಆರ್ಥಿಕತೆಯ ನಡುವಿನ ಸಂಬಂಧದ ಬಗ್ಗೆ ಬುಡಕಟ್ಟಿನವರಿಗೆ ಮನವರಿಕೆ ಮಾಡಿಕೊಡಬೇಕು.

ಕಲ್ಲು ಗಣಿಗಾರಿಕೆಯು ತುಂಬಾ ಪ್ರಭಾವಿ ಜನರಿಂದ ನಡೆಯುವುದಲ್ಲದೆ ಹೆಚ್ಚೆಂದರೆ ಅವರು ಬುಡಕಟ್ಟು ಜನರಿಂದ ಅಗ್ಗದ ಕೂಲಿ ಕೆಲಸ ಮಾಡಿಸಬಹುದು. ಅರಣ್ಯ ಗುತ್ತಿಗೆದಾರರು ಬುಡಕಟ್ಟಿನವರಲ್ಲ ಆದರೆ ಹೊರಗಿನಿಂದ ಬರುವವರು. ಇಲ್ಲಿಯೂ ಸಹ ತುಂಬಾ ಅಗ್ಗದ ಶ್ರಮ ಸಿಕ್ಕುತ್ತಿದ್ದು ಬುಡಕಟ್ಟಿನವರು ಶೋಷಣೆಗೆ ಒಳಗಾಗುತ್ತಾರೆ. ಹಾಗಾಗಿ ಅರಣ್ಯಗಳಿಗೂ ರಾಷ್ಟ್ರೀಯ ಆರ್ಥಿಕತೆಗೂ ಇರುವ ಸಂಬಂಧದ ಬಗ್ಗೆ ಬುಡಕಟ್ಟಿನವರಿಗೆ ಪಾಠ ಹೇಳುವುದು ನಿರರ್ಥಕವಾದುದೆಂದು ಹೇಳಬೇಕು. ಕಾಡಿನ ಸಂಪತ್ತನ್ನು ಕೊಳ್ಳೆ ಹೊಡೆದು ಪರಿಸರ ಅಸಮತೋಲನಕ್ಕೆ ಕಾರಣಕರ್ತರಾಗಿರುವವರು ಬುಡಕಟ್ಟು ಜನರಲ್ಲ, ಬದಲಾಗಿ, ರಾಜಕೀಯ ಸಂಪರ್ಕ ಹೊಂದಿರುವಂಥ ಶ್ರೀಮಂತರು ಕಾಡಿನ ಸಂಪತ್ತನ್ನು ಲೂಟಿ ಮಾಡಿ ಪರಿಸರ ಅಸಮತೋಲನಕ್ಕೆ ಕಾರಣರಾಗಿರುವವರು; ಬಡವರು ಶ್ರೀಮಂತರ ನಡುವೆ ದೊಡ್ಡ ಕಂದರವನ್ನೇರ್ಪಡಿಸಿ ರಾಷ್ಟ್ರೀಯ ಆರ್ಥಿಕತೆಯನ್ನು ಬುಡಮೇಲು ಮಾಡಿರುವವರು. ಪ್ರಭಾವಿಗಳ ಒಂದು ಸಣ್ಣ ಗುಂಪು ವಿಶಾಲವಾದ ಜನಸ್ತೋಮವನ್ನು ದಿನೇ ದಿನೇ ಹೆಚ್ಚು ಹೆಚ್ಚು ಬಡವನ್ನಾಗಿಸುತ್ತಿದೆ. ಇದರಲ್ಲಿ ಬುಡಕಟ್ಟಿನವರಿಗೇ ಹೊಡೆತ ಹೆಚ್ಚು.

ಅಧಿಕಾರಿಗಳು ಹೆಚ್ಚು ಹೆಚ್ಚು ಬಡಕಟ್ಟು ಜನರ ಸಹಾಯ ಪಡೆದು ಅರಣ್ಯ ಇಲಾಖೆ ವಿಶೇವಾಗಿ ಕಾಡಿನ ಬೆಂಕಿಯನ್ನು ತಡೆಗಟ್ಟಲು ಪ್ರಯತ್ನಿಸಬೇಕೆಂದು ಸಲಹೆ ನೀಡುತ್ತಾರೆ.

ನಿಜಸಂಗತಿಯೆಂದರೆ, ಅರಣ್ಯಾಧಿಕಾರಿಗಳು ಹಾಗೂ ಬುಡಕಟ್ಟು ಜನರ ನಡುವೆ ವಿಶ್ವಾಸಾರ್ಹತೆ ದಿನೇದಿನೇ ಕಡಿಮೆಯಾಗುತ್ತಿದೆ. ಎಲ್ಲದಕ್ಕೂ ಬುಡಕಟ್ಟಿನವರನ್ನು ಆಪಾದಿಸಲಾಗುತ್ತಿದೆ. ವಾಸ್ತವವಾಗಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕೆಲವು ವರ್ಷಗಳ ಹಿಂದೆ ಕಾಣಿಸಿಕೊಂಡ ಬೆಂಕಿ ಬೇರೆಯ ಕಥೆಯನ್ನೇ ಹೇಳುತ್ತದೆ.

ಬಿಳಿಗಿರಿ ರಂಗನ ಬೆಟ್ಟದ ಪ್ರದೇಶದಲ್ಲಿ ಸೋಲಿಗರು ಎರಡು ತರಹದ ಕಷ್ಟವನ್ನು ಎದುರಿಸಬೇಕಾಗಿದೆ. ಸಣ್ಣ ಪುಟ್ಟ ಅರಣ್ಯ ಉತ್ಪನ್ನಗಳನ್ನು ತರಲು ಹೋಗಿದ್ದಂಥ ೪-೫ ಮಂದಿ ಸೋಲಿಗರನ್ನು ನಿರ್ದಯಿ ಕಾಡುಗಳ್ಳ ವೀರಪ್ಪನ್ನ್‌ಕೊಚ್ಚಿಹಾಕಿದ. ಅವರು ಪೋಲೀಸಿನವರಿಗೆ ತನ್ನ ಚಲನವಲನ ಹೇಳಿಬಿಡುತ್ತಾರೆ ಎಂಬ ಲೆಕ್ಕಾಚಾರದಿಂದ ವೀರಪ್ಪನ್‌ಗೆ ರಕ್ಷಣೆ ಕೊಡುತ್ತಾರೆ ಎಂಬ ಗುಮಾನಿಯಿಂದ ಭದ್ರತಾ ಸಿಂಬ್ಬಂದಿಯವರು ಬುಡಕಟ್ಟು ಜನರಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಹಾಗಾಗಿ ಬುಡಕಟ್ಟು ಜನರ ಪಾಲಿಗೆ ‘ಅತ್ತ ದರಿ, ಇತ್ತ ಪುಲಿ’ ಎಂಬಂತಾಗಿದೆ. ಮುಗ್ಧ ಸೋಲಿಗರನ್ನು ವೀರಪ್ಪನ್ನ್‌ಕೊಂದಾಗ ವಿ.ಜಿ.ಕೆ.ಕೆ.ಯ ಪ್ರಧಾನ ಕಾರ್ಯದರ್ಶಿ ತನ್ನನ್ನೇ ಅರ್ಪಿಸಿಕೊಳ್ಳಲು ಮುಂದಾಗಿದ್ದರು.

ಅಧಿಕಾರಿಗಳು ಅಂತಿಮವಾಗಿ ಬುಡಕಟ್ಟಿನವರನ್ನು ಕುಡಿತ ಮತ್ತು ಜೂಜಿನಿಂದ ತಪ್ಪಿಸಬೇಕೆಂದು ಸಲಹೆ ಕೊಟ್ಟರು. ಈ ಅನಿಷ್ಟ ಚಟಗಳನ್ನು ಬುಡಕಟ್ಟಿನವರು ಹೊರಗಿನ ‘ನಾಗರಿಕ’ ಸಂಪರ್ಕದಿಂದ ಕಲಿತುಕೊಂಡಿದ್ದಾರೆ. ಸಣ್ಣ ವ್ಯಾಪಾರಿಗಳು, ಗುತ್ತಿಗೆದಾರರು ಹಾಗೂ ಬುಡಕಟ್ಟು ಪ್ರದೇಶದಲ್ಲಿ ವ್ಯವಹರಿಸುವ ಇತರರು ಈ ಚಟಗಳನ್ನು ಅವರಿಗೆ ಅಂಟಿಸುತ್ತಾರೆ. ಅವಶ್ಯಕತೆಯ ಕಾರಣದಿಂದ ಬುಡಕಟ್ಟು ಜನ ಉದ್ಯೋಗ ಹುಡುಕಿಕೊಂಡು ಕೊಡಗು ಇತ್ಯಾದಿ ಸ್ಥಳಗಳಿಗೆ ಹೋಗುವುದುಂಟು. ತಮ್ಮ ಮನೆ ಮಠಗಳನ್ನು ಬಿಟ್ಟು ದೂರಕ್ಕೆ ಅವರು ಹೋಗುವಾಗ ಈ ದುರಭ್ಯಾಸಗಳಿಗೆ ಒಳಗಾಗುತ್ತಾರೆ.

ಎಲ್ಲಕ್ಕಿಂತ ಮಿಗಿಲಾಗಿ ಪರವಾನಗಿ ಪಡೆದಿರುವ ಕಂತ್ರಾಟುದಾರರೇ ಬುಡಕಟ್ಟು ಜನರ ಹಾಡಿಗಳಲ್ಲಿ ಶೇಂದಿ-ಸಾರಾಯಿ ಅಂಗಡಿಗಳನ್ನು ತೆರೆಯುತ್ತಾರೆ. ಹಾಗಾಗಿ ಬುಡಕಟ್ಟು ಜನ ಕುಡಿತದ ಚಟಕ್ಕೆ ಬಲಿಯಾಗುವುದಕ್ಕೆ ಸರ್ಕಾರವೂ ಭಾಗಿಯಾಗಿದೆ. ಬುಡಕಟ್ಟಿನವರು ಗಳಿಸುವ ಅಲ್ಪಸ್ವಲ್ಪ ಹಣವೂ ಕುಡಿತಕ್ಕೆ ಖರ್ಚಾಗಿ ಹೆಂಡತಿ ಮಕ್ಕಳನ್ನು ಬೀದಿಪಾಲು ಮಾಡಲಾಗುತ್ತಿದೆ. ೧೯೯೫ನೇ ಇಸವಿಯಲ್ಲಿ ಡೀಡ್‌ಪ್ರದೇಶದಲ್ಲಿ ಬುಡಕಟ್ಟು ಮಹಿಳೆಯರು ಹಾಗೂ ಮಕ್ಕಳು ಸಾರಾಯಿ ಗುತ್ತಿಗೆದಾರರ ವಿರುದ್ಧ ಮುಷ್ಕರ ಹೂಡಿದ್ದರು. ಸ್ಥಳೀಯ ಅಬಕಾರಿ ಇಲಾಖೆಯವರು ಬೆಂಬಲದಿಂದ ಬುಡಕಟ್ಟಿನವರ ಮೇಲೆ ಹಲ್ಲೆ ಕೂಡ ಮಾಡಲಾಯಿತು. ಸರ್ಕಾರ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸದಿದ್ದರೆ ಜನರು ಮತ್ತೆ ಮುಷ್ಕರ ಹೂಡುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಬುಡಕಟ್ಟು ಅಭಿವೃದ್ಧಿಯ ವಿಷಯದಲ್ಲಿ ಸ್ವಯಂ ಸೇವಾ ಸಂಸ್ಥೆಯವರ ಪಾತ್ರದ ಬಗ್ಗೆ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬುಡಕಟ್ಟು ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಬುಡಕಟ್ಟಿನವರಿಗೆ ತರಬೇತು ನೀಡುವ ದಿಶೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿರುವುದಾಗಿ ಹೇಳಲಾಗಿದೆ. ಕೆಲವು ಸ್ವಯಂ ಸೇವಾ ಸಂಸ್ಥೆಗಳು ಆರೋಗ್ಯ/ವೈದ್ಯಕೀಯ ಸೇವೆಗಳನ್ನು ನೀಡುತ್ತಿವೆ. ಬಹಳ ಮುಖ್ಯವಾದ ಸಂಗತಿಯೆಂದರೆ ಬುಡಕಟ್ಟಿನವರಲ್ಲಿ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಜೊತೆಗೆ ಸರ್ಕಾರದಿಂದ ಲಭ್ಯವಿರುವಂಥ ಆಶ್ರಯ, ಕೃಷಿ ಉಪಕರಣಗಳು, ಭೂಮಿ – ಇತ್ಯಾದಿ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿಯೂ ಕೂಡ ಸಹಾಯ ಮಾಡಲಾಗುತ್ತಿದೆ. ಬೇರೆ ಬೇರೆ ಸ್ವಯಂ ಸೇವಾ ಸಂಸ್ಥೆಗಳು ಬುಡಕಟ್ಟು ಅಭಿವೃದ್ಧಿಯಲ್ಲಿ ಒಟ್ಟಾಗಿ ದುಡಿಯುವುದು ಮುಖ್ಯವೆಂದು ಸಲಹೆ ಮಾಡಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರಿ ಇಲಾಖೆಗಳೊಡನೆ ಕೆಲಸ ಮಾಡಲು ಸಾಧ್ಯವಾದರೆ ಬುಡಕಟ್ಟಿನವರಿಗೆ ಬಹಳ ಸಹಾಯವಾಗುವುದೆಂದು ಹಲವು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಇದರ ಜೊತೆ ಜೊತೆಗೆ ಅವರ ಮನಸ್ಸಿನಲ್ಲಿ ಸಂಶಯ ಹಾಗೂ ಅನುಮಾನ ಕೂಡ ಇದೆ. ಕೆಲವು ಸ್ವಯಂ ಸೇವಾ ಸಂಸ್ಧೆಗಳು ಬಹಳ ಸೇವಾ ಮನೋಭಾವದಿಂದ ದುಡಿಯುವುದಾಗಿ ಹೇಳಿದರೆ ಇನ್ನಿತರ ಸಂಸ್ಥೆಗಳು ಸಹಾಯ ಧನವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಹಾಗೂ ಬುಡಕಟ್ಟಿನವರ ಏಳಿಗೆಗಾಗಿ ದುಡಿಯುತ್ತಿಲ್ಲವೆಂಬ ಮಾತು ಕೂಡ ಕೇಳಿಬರುತ್ತಿದೆ.

ಒಟ್ಟು ೧೦೩ ಅಧಿಕಾರಿಗಳನ್ನು ಸಂದರ್ಶಿಸಲಾಯಿತು. ಅವರು ಬೇರೆ ಬೇರೆ ಪ್ರದೇಶಗಳಲ್ಲಿ ಈ ರೀತಿ ಹಂಚಿಹೋಗಿದ್ದಾರೆ : ಚಾಮರಾಜನಗರ ತಾಲ್ಲೂಕಿನಿಂದ ೧೬ ಮಂದಿ, ಕೊಳ್ಳೇಗಾಲದಿಂದ ೧೫, ಯಳಂದೂರಿನಿಂದ ೧೯ (ವಿ.ಜಿ.ಕೆ.ಕೆ. ಪ್ರದೇಶ), ಹೆಚ್‌.ಡಿ. ಕೋಟೆಯಿಂದ ೨೭ (ಎಸ್.ವಿ.ವೈ.ಎಂ.), ಹುಣಸೂರು ಪ್ರದೇಶದಿಂದ ೨೬ (ಡೀಡ್‌ಪ್ರದೇಶ) ಬುಡಕಟ್ಟು ಅಭಿವೃದ್ಧಿಗಾಗಿ ನಿಗದಿಯಾದಂಥ ಬೇರೆ ಬೇರೆ ಆರ್ಥಿಕ ಯೋಜನೆಗಳ ಬಗ್ಗೆ ಅಧಿಕಾರಿಗಳ ಪ್ರತಿಸ್ಪಂದನೆ ಈ ರೀತಿ ಇದೆ :

ಪಟ್ಟಿ : ಬುಡಕಟ್ಟು ಕಲ್ಯಾಣ ಯೋಜನೆಗಳ ಬಗ್ಗೆ ಅಧಿಕಾರಿಗಳ ಪ್ರತಿಸ್ಪಂದನೆ

ಬುಡಕಟ್ಟು ಕಲ್ಯಾಣ ಯೋಜನೆಗಳ ಸೌಲಭ್ಯಗಳು ಚಾಮರಾಜ ನಗರ ಕೊಳ್ಳೇಗಾಲ ಯಳಂದೂರು ಹೆಚ್‌.ಡಿ. ಕೋಟೆ ಹುಣಸೂರು
. ಕೃಷಿ ಉಪಕರಣಗಳು ೦೮ ೦೪ ೧೨ ೧೮ ೧೩
. ಆಶ್ರಯ ೦೫ ೦೫ ೧೦ ೧೬ ೧೪
. ಉದ್ಯೋಗ ಅರೆಕಾಲಿಕವೂ ಸೇರಿದಂತೆ ೦೨ ೦೧ ೦೬ ೦೯ ೦೬
. ಅರಣ್ಯ ಉತ್ಪಾದನೆಯನ್ನು ಸಂಗ್ರಹಿಸಲು ಅವಕಾಶ ನೀಡಲಾಗಿತ್ತು ೦೨ ೦೨ ೦೬ ೦೯ ೦೮
. ಆರೋಗ್ಯ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳು / ಪ್ರಾಥಮಿಕ ಆರೋಗ್ಯ ಕೇಂದ್ರಗಳು ೦೩ ೦೩ ೧೦ ೧೫ ೦೦
. ಶಾಲೆಗಳ ಲಭ್ಯ ೦೫ ೦೩ ೧೦ ೧೬ ೧೨
. ಆಶ್ರಮ ಶಾಲೆಗಳು ೦೨ ೦೫ ೦೬ ೦೮ ೦೭
. ವಿದ್ಯಾರ್ಥಿ ನಿಲಯಗಳು ೦೨ ೦೬ ೦೭ ೧೪ ೦೫

ಅಧಿಕಾರಿಗಳು ಈ ಮೇಲಿನ ಪ್ರತಿಸ್ಪಂದನೆಯನ್ನು ಗಮನಿಸಿದರೆ ಹೆಚ್.ಡಿ. ಕೋಟೆ ತಾಲ್ಲೂಕನ್ನು ಬಿಟ್ಟು ಉಳಿದೆಲ್ಲಾ ತಾಲ್ಲೂಕುಗಳಲ್ಲಿ ಸೌಲಭ್ಯಗಳು ಬಹಳ ನಿಧಾನವಾಗಿವೆ. ಹಾಗೂ ಕಡಿಮೆಯಾಗಿವೆ. ವಿಶೇಷವಾಗಿ, ಕಳೆದ ೪ ದಶಕಗಳ ಅವಧಿಯ ವಿದ್ಯಮಾನವನ್ನು ಗಮನಿಸಿ ಹೇಳುವುದಾದರೆ, ಈ ಪ್ರದೇಶದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡದಿದ್ದರೆ ಪರಿಸ್ಥಿತಿ ಇನ್ನೂ ಚಿಂತಾಜನಕವಾಗುತ್ತಿತ್ತು. ಅಧಿಕಸಂಖ್ಯೆಯಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿಯೇ ಪ್ರತಿಸ್ಪಂದಿಸುವುದರಿಂದ ಅನೇಕ ಸ್ವಯಂ ಸೇವಾ ಸಂಸ್ಥೆಗಳ ಸಹಾಯವನ್ನು ಪಡೆಯುತ್ತಿರುವ ಹೆಚ್.ಡಿ. ಕೋಟೆ ಪ್ರದೇಶ ಹೆಚ್ಚಿನ ಸೌಲಭ್ಯ ಗಳಿಸಿದೆ ಎನ್ನಬಹುದು.

ಆದಾಗ್ಯೂ ಅರಣ್ಯ ಉತ್ಪಾದನೆಗಳ ಸಂಗ್ರಹಣೆಗೆ ಬುಡಕಟ್ಟಿನವರಿಗೆ ಅವಕಾಶ ನೀಡುವ ವಿಷಯದಲ್ಲಿ ಎಲ್ಲ ಅಧಿಕಾರಿಗಳೂ ನಕಾರಾತ್ಮಕವಾದ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಿದ್ದಾರೆ. ಕಾಡಿನ ಸಣ್ಣ ಪುಟ್ಟ ಉತ್ಪನ್ನಗಳನ್ನು ಸಂಗ್ರಹಿಸುವುದಕ್ಕೆ ಬದಲಾಗಿ ಬುಡಕಟ್ಟಿನವರು ಕಳ್ಳಸಾಗಣೆ, ಮರ ಕಡಿಯುವುದು, ಬೇಟೆ ಇತ್ಯಾದಿ ಕೆಲಸಗಳಲ್ಲಿ ತೊಡಗಬಹುದೆಂಬ ಶಂಕೆಯಿಂದ ಬುಡಕಟ್ಟಿನವರನ್ನು ಕಾಡಿನ ಒಳಗೆ ಬಿಡಲು ಅವಕಾಶ ನೀಡಲಾಗುತ್ತಿಲ್ಲ. ಚಾಮರಾಜನಗರದ ೧೪ ಮಂದಿ, ಕೊಳ್ಳೇಗಾಲದಿಂದ ೧೨, ಯಳಂದೂರಿನಿಂದ ೧೩, ಹೆಚ್‌.ಡಿ. ಕೋಟೆ ಹಾಗೂ ಹುಣಸೂರು ತಾಲ್ಲೂಕುಗಳಿಂದ ತಲಾ ೧೮ ಮಂದಿ ಹಾಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುಮಂದಿ ಅಧಿಕಾರಿಗಳು ಪ್ರಚಲಿತವಿರುವ ಅರಣ್ಯ ಕಾನೂನುಗಳು ಬುಡಕಟ್ಟಿನವರಿಗೆ ಅನುಕೂಲಕರವಾಗಿರುವುದಾಗಿ ತಿಳಿಸಿದ್ದಾರೆ. ಚಾಮರಾಜನಗರದ ೧೪ ಮಂದಿ, ಕೊಳ್ಳೇಗಾಲದಿಂದ ೧೨, ಯಳಂದೂರಿನಿಂದ ೧೩, ಹೆಚ್‌.ಡಿ. ಕೋಟೆಯಿಂದ ೧೭ ಹಾಗೂ ಹುಣಸೂರಿನಿಂದ ೧೧ ಮಂದಿ ಹಾಗೆ ತಿಳಿಸಿದ್ದಾರೆ. ಅರಣ್ಯ ಇಲಾಖೆ ಹಾಗೂ ಬುಡಕಟ್ಟಿನವರ ಸಂಬಂಧದ ಬಗ್ಗೆ ತಿಳಿಸುತ್ತ ಹೆಚ್‌.ಡಿ. ಕೋಟೆ ಹಾಗೂ ಹುಣಸೂರು ಪ್ರದೇಶಗಳ ಸುಮಾರು ೧/೩ ಭಾಗದ ಬುಡಕಟ್ಟು ಫಲಾನುಭವಿಗಳು ತಮ್ಮ ನಡುವೆ ಅಂಥ ಉತ್ತಮವಾದ ಬಾಂಧವ್ಯವಿಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಮೀಸಲಾತಿ ನಿಯಮದಿಂದ ಬುಡಕಟ್ಟಿನವರ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯವಾಗಿದೆಯೇ ಎಂಬ ಪ್ರಶ್ನೆಗೆ ಎಲ್ಲ ಅಧಿಕಾರಿಗಳೂ ಸಕಾರಾತ್ಮಕವಾದ ಉತ್ತರ ನೀಡಿದ್ದಾರೆ. ಮೀಸಲಾತಿಯಿಂದ ಬುಡಕಟ್ಟಿನ ಜನರಲ್ಲಿ ಸೋಮಾರಿತನ, ಭ್ರಷ್ಟಾಚಾರ, ಸ್ವಜನಪಕ್ಷಪಾತ ತಲೆದೋರುವುದೆಂದು ಸ್ವಲ್ಪ ಮಂದಿ ಅಧಿಕಾರಿಗಳು ಅಭಿಪ್ರಾಯಪಟ್ಟರೆ ಐದು ತಾಲೂಕಗಳ ೭, ೧೧, ೮, ೧೬ ಹಾಗೂ ೧೫ ಮಂದಿ ಅಧಿಕಾರಿಗಳು ಈ ಅಭಿಪ್ರಾಯವನ್ನು ತಳ್ಳಿ ಹಾಕಿದ್ದಾರೆ. ಅದೇ ತರಹ ೧೦೩ರಲ್ಲಿ ೯೯ ಮಂದಿ ಅಧಿಕಾರಿಗಳು ಬುಡಕಟ್ಟು ಕಲ್ಯಾಣದಿಂದ ಬುಡಕಟ್ಟು ಅಭಿವೃದ್ಧಿಯ ಕಡೆಗೆ ಅಭಿಮುಖಿಯಾಗಬೇಕೆಂಬ ಪ್ರಸ್ತಾವನೆಯ ಪರವಾಗಿದ್ದಾರೆ. ಯಾವುದೇ ತರಹದ ಮೌಲ್ಯಮಾಪನವಿಲ್ಲದೆ ಇರುವುದರಿಂದ ಸರ್ಕಾರ ನಿಶ್ಚಿಂತವಾಗಿದೆ. ಅಭಿವೃದ್ಧಿ ಚಟುವಟಿಕೆಗಳು ಪಾರದರ್ಶಕವಾಗಿದ್ದು ಅಂದಾಜು ಮಾಡಲು ಅನುಕೂಲವಾಗುವುದು. ಬುಡಕಟ್ಟು ಜನರು ಬೇರೆ ಬೇರೆ ಬುಡಕಟ್ಟು ಗುಂಪುಗಳು ಹಾಗೂ ಗ್ರಾಮೀಣ ಜನರೊಡನೆ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬುದು ಎಲ್ಲ ಅಧಿಕಾರಿಗಳ ಒಟ್ಟು ಅಭಿಪ್ರಾಯವಾಗಿದೆ. ಮರಕಡಿಯುವುದು, ಬೇಟೆಯಾಡುವುದು, ಕಮರಿ ಬೇಸಾಯ ತರಹದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬುಡಕಟ್ಟಿನವರು ತೊಡಗಿರುವ ಕಾರಣದಿಂದ ಪರಿಸರ ನಾಶವಾಗಿದೆ ಎಂಬ ಅಭಿಪ್ರಾಯ ಸುಮಾರು ೭೪ ಅಧಿಕಾರಿಗಳದ್ದಾಗಿದೆ. ಕಳ್ಳಸಾಗಣೆ, ಕಾಡುನಾಶ ಇತ್ಯಾದಿ ಅಪರಾಧಗಳನ್ನು ತಡೆಯುತ್ತಾ ಪರಿಸರ ಸಂರಕ್ಷಣೆ ಮಾಡುವುದರ ಜೊತೆಗೆ ಎಲ್ಲ ತರಹ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯವಲ್ಲಿ ಅರಣ್ಯ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ೯೦ ಜನ ಅಧಿಕಾರಿಗಳು ಅಭಿಪ್ರಾಯ ನೀಡಿದ್ದಾರೆ. ಅದೇ ಉಸಿರನಲ್ಲಿ ಅವರು ಬುಡಕಟ್ಟಿನವರು ಹಿಂದುಳಿದವರು, ಅನಾಗರೀಕರು ಹಾಗೂ ಆಧುನಿಕ ಧೋರಣೆ ಮತ್ತು ಜೀವನ ಕ್ರಮಕ್ಕೆ ಅವರು ವಿರುದ್ಧವಾಗಿದ್ದು ಅವರಿಗೆ ಶಿಕ್ಷಣ ನೀಡಲು ಸಾಧ್ಯವಿಲ್ಲವೆಂದು ಕೂಡ ಹೇಳುತ್ತಾರೆ. ಇದೇ ಅಭಿಪ್ರಾಯವನ್ನು ೧೦೩ರಲ್ಲಿ ೮೦ ಮಂದಿ ವ್ಯಕ್ತಪಡಿಸಿದ್ದಾರೆ. ಇಷ್ಟೇ ಸಂಖ್ಯೆಯ ಅಧಿಕಾರಿಗಳು ಬುಡಕಟ್ಟು ಜನರು ಮೊದಲಿಗಿಂತ ಈಗ ಹೆಚ್ಚು ರಾಜಕೀಯ ಪ್ರಜ್ಞೆಯುಳ್ಳವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಬುಡಕಟ್ಟಿನವರ ಬಗ್ಗೆ ಗ್ರಾಮಸ್ಥರ ಅಭಿಪ್ರಾಯ

ನರೆಹೊರೆಯ ಬುಡಕಟ್ಟೇತರ ಜನರು ಬುಡಕಟ್ಟಿನವರ ಸಂಪರ್ಕಕ್ಕೆ ಅಗಾಗ್ಗೆ ಬರುವ ಸಾಧ್ಯತೆ ಇದೆ. ಇದು ಸರ್ಕಾರಿ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯವರ ಸಂಪರ್ಕದ ರೀತಿಯಂತಲ್ಲ. ಕೆಲವು ಗ್ರಾಮಗಳ ಜನ ಹೆಚ್ಚು ಆಳವಾದ ಸಂಬಂಧ ಬೆಳೆಸಿಕೊಂಡರೆ ಇನ್ನು ಕೆಲವು ಗ್ರಾಮದವರು ಮೇಲುಮೇಲಿನ ಸಂಬಂಧ ಹೊಂದಿದವರಾಗಬಹುದು. ಗಂಡಸು ಗಂಡಸರು ಬೇಟಿಯಾಗುವ ಸಂಭವ ಹೆಚ್ಚು, ಆದರೆ ಬುಡಕಟ್ಟು ಹೆಂಗಸರು ಹಾಗೂ ಗ್ರಾಮದ ಗಂಡಸರು ಸಂಪರ್ಕಕ್ಕೆ ಬರುವುದು ಕಡಿಮೆ. ಹೆಂಗಸರಿಗೆ ಹೆಚ್ಚು ಸ್ವಾತಂತ್ರ್ಯವಿರುವುದಾದರೂ ಗ್ರಾಮದ ಗಂಡಸರು ದೂರ ಉಳಿಯುತ್ತಾರೆ. ಹಿಂದೂಗಳಲ್ಲಿ ಸಾಮಾನ್ಯವಾಗಿ ಹೆಂಗಸರಿಗೆ ಹೆಚ್ಚಿನ ಸ್ವಾತಂತ್ರ್ಯವಿರುವುದಿಲ್ಲ; ಹಾಗಾಗಿ ಗಂಡಸರೊಡನೆ ಅವರು ಸುಲಭವಾಗಿ ಬೆರೆಯುವುದಿಲ್ಲ.

ಸಾಮಾನ್ಯವಾಗಿ ಈಗ ಸೂಚಿಸುವ ಅಭಿಪ್ರಾಯವನ್ನು ಗ್ರಾಮದವರು ಬುಡಕಟ್ಟಿನವರ ಬಗೆಗೆ ಹೊಂದಿರುತ್ತಾರೆ. ಸ್ವಲ್ಪ ನಾಗರಿಕರಾದ ಬುಡಕಟ್ಟಿನವರು ಮೋಸಮಾಡುತ್ತಾರೆ. ಅದರಲ್ಲೂ ಹಣಕಾಸಿನ ವಿಷಯದಲ್ಲಿ ಅವರು ವಿಶ್ವಾಸರ್ಹರಲ್ಲವೆಂಬ ಅಭಿಪ್ರಾಯ ಗ್ರಾಮದವರದು. ಅರಣ್ಯದ ಉತ್ಪಾದನೆಯನ್ನು ಕದಿಯುತ್ತಾ ಅರಣ್ಯ ಇಲಾಖೆಗೆ ಮೋಸ ಮಾಡುವುದರಲ್ಲಿ ಅವರು ನಿಷ್ಣಾತರೆಂಬುದು ತಿಳಿವಳಿಕೆ. ಬಡತನದಿಂದಾಗಿ ಅವರು ಕೆಲವು ಸಣ್ಣಪುಟ್ಟ ಕಳ್ಳತನಗಳನ್ನು ಮಾಡಬಹುದು.

ಬುಡಕಟ್ಟು ಜನಾಂಗದವರಲ್ಲಿ ಮೇಲು – ಕೀಳು ಅಥವಾ ಬಡವ-ಶ್ರೀಮಂತ ಎಂಬ ಭೇದ ಭಾವ ಇರುವುದಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲ ಬುಡಕಟ್ಟಿನವರಲ್ಲೂ ಸಮಾನತೆ ಇರುತ್ತದೆ. ಭೇದ ಭಾವ ಎಂಬುದು ‘ನಾಗರಿಕ’ರೆನಿಸಿಕೊಂಡವರ ನಡುವೆ ತಾಂಡವವಾಡುವಂಥ ಜಾತಿಪದ್ಧತಿಯಲ್ಲಿ ಇರುವಂಥದು.

ಬುಡಕಟ್ಟಿನವರು ಸ್ವಲ್ಪ ಜಮೀನು ಹೊಂದಿದವರಾಗಿದ್ದಾರೆ. ಆದಾಗ್ಯೂ ಅನೇಕ ವೇಳೆ ಅದು ಹಸ್ತಾಂತರವಾಗಿರುತ್ತದೆ ಮತ್ತು ಆ ಭೂಮಿಯನ್ನು ಇತರರು ಕೊಳ್ಳಬಾರದೆಂದು ಸರ್ಕಾರ ಆಜ್ಞೆ ಹೊರಡಿಸಿರುತ್ತದೆ ಏಕೆಂದರೆ ಇತರರ ಹೆಸರಿಗೆ ಅದನ್ನು ವರ್ಗಾಯಿಸಿ ನೋಂದಾವಣಿ ಮಾಡುವಂತಿಲ್ಲ. ಭೂಮಿ ವ್ಯಾಜ್ಯ ಬರುವುದು ಬುಡಕಟ್ಟಿನವರು ಇತರರಿಗೆ ಜಮೀನನ್ನು ಭೋಗ್ಯ ಮಾಡಿದಾಗ. ಸಾಮಾನ್ಯವಾಗಿ ಬುಡಕಟ್ಟಿನವರು ತಮ್ಮ ಜಮೀನಿನ ದಾಕಲೆಗಳನ್ನು ಹೊಂದದಿರುವುದರಿಂದ ಇತರರು ಆ ಭೂಮಿಯನ್ನು ಹೊಡೆದುಕೊಳ್ಳುವುದು ಕಷ್ಟವಾಗುವುದಿಲ್ಲ. ಬುಡಕಟ್ಟಿನವರಿಗೆ ಅಷ್ಟು ಇಷ್ಟು ಜಮೀನು ಇದ್ದರೂ ಸಹ ಅವರ ಬಳಿ ಜಮೀನು ಮಾಡಲು ಬೇಕಾದಂಥ ಉಪಕರಣವಾಗಲಿ, ಸಂಪನ್ಮೂಲವಾಗಲಿ ಇಲ್ಲದಿರುವುದರಿಂದ ಜಮೀನು ಹಸ್ತಾಂತರ ಆಗುತ್ತದೆ. ಸಾಮಾನ್ಯವಾಗಿ ಬುಡಕಟ್ಟೇತರರೇ ಬುಡಕಟ್ಟಿನವರ ಭೂಮಿಯನ್ನು ಹೊಡೆದುಕೊಳ್ಳುವವರು.

ಕೆಲವು ವಿಷಯಗಳಲ್ಲಿ ಗ್ರಾಮದವರು ಬುಡಕಟ್ಟಿನವರ ಜೀವನಕ್ರಮವನ್ನು ಅನುಸರಿಸಲು ಮುಂದಾಗುತ್ತಾರೆ; ಮುಖ್ಯವಾಗಿ ಗಿಡಮೂಲಿಕಾ ಔಷಧಿ ವಿಷಯದಲ್ಲಿ, ಕಡಿಮೆ ಖರ್ಚಿನಲ್ಲಿ ಈ ಔಷಧಿಗಳನ್ನು ತಯಾರಿಸಬಹುದಾಗಿರುವುದರಿಂದ ಗ್ರಾಮದವರು ಆ ಮಾರ್ಗವನ್ನು ಹಿಡಿಯುತ್ತಾರೆ. ಸಂಗ್ರಹಿಸಿಟ್ಟುಕೊಳ್ಳದೆ ಹಂಚಿಕೊಳ್ಳುವ ಬುಡಕಟ್ಟಿನವರ ಗುಣವು ಕೂಡ ಇತರರಿಗೆ ಅನುಕರಣೀಯವಾಗಿರುತ್ತದೆ.

ಸ್ವಯಂ ಸೇವಾಸಂಸ್ಥೆಗಳು ಬುಡಕಟ್ಟಿನವರಿಗೆ ಶಿಕ್ಷಣ, ವೈದ್ಯಕೀಯ ಆರೋಗ್ಯ, ಅರಿವು ಮೂಡಿಸುವುದು, ಉದ್ಯೋಗ ತರಬೇತಿ, ಕೃಷಿ ಸೌಲಭ್ಯ ಹಾಗೂ ಅವರ ಅಭಿವೃದ್ಧಿಗಾಗಿ ಆರ್ಥಿಕ ಸಹಾಯದಂಥ ಕ್ಷೇತ್ರದಲ್ಲಿ ಉಪಯುಕ್ತ ಕೆಲಸಗಳನ್ನು ಮಾಡಿವೆಯೆಂದು ಗ್ರಾಮಸ್ಥರು ತಿಳಿಯುತ್ತಾರೆ. ಈ ಪ್ರಕ್ರಿಯೆಯಲ್ಲಿ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಸಮಸಮವಾಗಿರುತ್ತದೆ.

ಸಾಕಷ್ಟು ಸಂಖ್ಯೆಯಲ್ಲಿ ಬುಡಕಟ್ಟಿನವರನ್ನು ಬುಡಕಟ್ಟೇತರರೊಡನೆ ಮುಖ್ಯವಾಹಿನಿಯೊಡನೆ ಸೇರಿಸುವಲ್ಲಿ ಶಿಕ್ಷಣ ಅತ್ಯಂತ ಗಮನಾರ್ಹವಾದ ಪಾತ್ರ ವಹಿಸುವುದೆಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಆದರೆ ಬುಡಕಟ್ಟಿನವರು ಹಿಂದುಳಿದವರು ಹಾಗೂ ಅನಾಗರಿಕರು ಎಂಬ ಅಭಿಪ್ರಾಯವನ್ನು ಬಹಳ ಮಂದಿ ಗ್ರಾಮದವರು ಹೊಂದಿರುವುದೂ ಕೂಡ ವಾಸ್ತವ. ಹಾಗಾಗಿ, ಸುಲಭವಾಗುವುದೆಂದು ಗ್ರಾಮದವರು ಹೇಳುತ್ತಾರೆ. ನಗರಗಳಿಗೆ ಅವರನ್ನು ಸ್ಥಳಾಂತರಗೊಳಿಸುವುದು ಪರಿಣಾಮಕಾರಿಯೆಂಬುದು ಅವರ ನಂಬಿಕೆ. ಉಭಯಸಾಮಾನ್ಯವಾದ ಮೌಲ್ಯ ಹಾಗೂ ಪರಂಪರೆಯನ್ನು ವಿಸ್ತರಿಸಿ ಅಂತಿಮವಾಗಿ ಬುಡಕಟ್ಟಿನವರು ಹಾಗೂ ಇತರರ ನಡುವೆ ಹೆಚ್ಚು ಸಂಪರ್ಕವನ್ನು ಸಾಧಿಸಲು ಅನುಕೂಲವಾಗುವುದು.

ಗ್ರಾಮದ ಜನರು ಈ ಬಗೆಯಾಗಿ ವಿವಿಧ ಪ್ರತಿಸ್ಪಂದನೆಯನ್ನು ನೀಡಿರುವುದರಿಂದ ನಿಖರವಾದ ನಿರ್ಣಯಕ್ಕೆ ಬರುವುದು ಕಷ್ಟವಾಗುತ್ತದೆ. ಬುಡಕಟ್ಟಿನವರು ಅನಾಗರಿಕರು ಹಾಗೂ ಹಿಂದುಳಿದವರು ಎಂಬ ಅಭಿಪ್ರಾಯವನ್ನು ಗ್ರಾಮದವರು ಹೊಂದಿರುವುದರಿಂದ ಉಭಯ-ಸಾಮಾನ್ಯವಾದ ಪರಂಪರೆ ಹಾಗೂ ಮೌಲ್ಯವನ್ನು ವಿಸ್ತರಿಸುವುದು ಕಷ್ಟವಾಗುತ್ತದೆ. ಯಾರ ಮೌಲ್ಯ ಹಾಗೂ ಪರಂಪರೆ? ಭಾರತ ಇತಿಹಾಸದ ಉದ್ದಕ್ಕೂ ನಮಗೆ ಕಾಣುವುದು ಜಾತಿವ್ಯವಸ್ಥೆ ಇತರ ವ್ಯವಸ್ಥೆಯನ್ನು ಅರಗಿಸಿಕೊಂಡ ಉದಾಹರಣೆಯೇ. ಇದರಿಂದ ಬುಡಕಟ್ಟಿನವರನ್ನು ಹಿಂದೂಮತಕ್ಕೆ ತಿರುಗಿಸುವ ಪ್ರಯತ್ನವಾಗುತ್ತದೆ; ಗ್ರಾಮದವರು ಬುಡಕಟ್ಟಿನವರವರ ಔಷಧಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ; ಹಾಗೆಯೇ ಅವರಲ್ಲಿರುವಂಥ ಸಮಾನತೆ, ಔದಾರ್ಯದಂಥ ಉತ್ತಮ ಗುಣಗಳ ಬಗ್ಗೆ ಕೂಡ. ಪರಸ್ಪರ ವಿರೋಧವಾದಂಥ ಭಾವನೆಗಳಿವು. ಈ ವಿರೋಧಾಭಾಸವನ್ನು ನಿವಾರಿಸಬಹುದಾದರೂ ಸಾಮಾಜಿಕವಾದ ಬದಲಾವಣೆಯಾಗದೆ ಯಥಾ ಸ್ಥಿತಿಯನ್ನೇ ಕಾಪಾಡಿದಂತಾಗುತ್ತದೆ. ಹಾಗಾಗಿ ಗ್ರಾಮದವರು ಒಗ್ಗಟ್ಟನ್ನು ಪ್ರೋತ್ಸಾಹಿಸಬೇಕು, ಸಂಘರ್ಷವನ್ನು ನಿವಾರಿಸಬೇಕು, ತನ್ಮೂಲಕ ಅಭಿವೃದ್ಧಿಯನ್ನು ಸಾಧಿಸಬಹುದೆಂದು ಹೇಳುವುದು ಗಮನಾರ್ಹವಾಗುತ್ತದೆ. ದೇಶದಲ್ಲಿ ಕಂಡುಬರುತ್ತಿರುವ ಒಡೆಯುವ ಶಕ್ತಿಗಳನ್ನು ನೆನೆದಾಗ ಈ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವೇ ಎಂಬಂತಾಗುತ್ತದೆ.

ಸುಮಾರು ಶೇಕಡ ೫೦ ಭಾಗದ ಗ್ರಾಮಸ್ಥರು ಯಳಂದೂರು ತಾಲ್ಲೂಕಿನಲ್ಲಿ ಸೋಲಿಗರನ್ನೂ, ಹುಣಸೂರು ಮತ್ತು ಹೆಚ್.ಡಿ. ಕೋಟೆ ಪ್ರದೇಶದಲ್ಲಿ ಜೇನುಕುರಬರನ್ನೂ ಲೋಕಾಭಿರಾಮವಾಗಿ ಭೇಟಿಯಾಗಿರುವುದಾಗಿ ತಿಳಿಸುತ್ತಾರೆ. ಕೇವಲ ೧/೩ ಭಾಗದ ಜನರು ತಮ್ಮ ನಡುವೆ ಹಣಕಾಸಿನ ವ್ಯವಹಾರವೂ ಇದೆ. ಎಂದು ತಿಳಿಸಿದ್ದಾರೆ. ಸುಮಾರು ೩/೪ ಭಾಗದ ಗ್ರಾಮದವರು ಹಬ್ಬದ ಸಂದರ್ಭಗಳು ಹೆಚ್ಚು ಪ್ರಶಸ್ತವಾಗಿದ್ದು ಆ ಸಂಧರ್ಭಗಳಲ್ಲಿ ತಾವು ಬುಡಕಟ್ಟಿನವರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ಮಾಟಮಂತ್ರಕ್ಕಾಗಲಿ ತಾವು ಭೇಟಿಯಾಗಿಲ್ಲವೆಂದು ಗ್ರಾಮದವರು ಸ್ಪಷ್ಟವಾಗಿ ಹೇಳಿದ್ದಾರೆ. ಸೋಲಿಗರು ಪ್ರೇಮವನ್ನು ಕುರಿತಾದ ಮಾಟಮಂತ್ರಕ್ಕೆ ಪ್ರಸಿದ್ಧರು; ಹಾಗಾಗಿ ದೂರದ ಬೆಂಗಳೂರಿನಿಂದಲೂ ಅವರಿಗೆ ಗಿರಾಕಿಗಳು ಬರುತ್ತಾರೆ, ತಮ್ಮ ಪ್ರೇಮಪ್ರಕರಣಗಳಲ್ಲಿ ಆಸೆ ಫಲಿಸದೆಂಬ ಶಂಕೆ ಬಂದಾಗ ಅದನ್ನು ನಿವಾರಿಸಿಕೊಳ್ಳಲು.

೧೪೮ ಮಂದಿಯ ಪೈಕಿ ಸುಮಾರು ೧೪೦ ಜನ ವಾರದ ಸಂತೆಯ ಸಂದರ್ಭದಲ್ಲಿ ತಾವು ಬುಡಕಟ್ಟಿನವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಗುತ್ತಿಗೆದಾರರೂ, ಸರ್ಕಾರಿ ಅಥವಾ ಅರಣ್ಯ ಅಧಿಕಾರಿಗಳು ಅಥವಾ ಸ್ವಯಂ ಸೇವಾಸಂಸ್ಥೆಗಳೊಟ್ಟಿಗೆ ಅವರನ್ನು ತಾವು ನೋಡಿಯೇ ಇಲ್ಲವೆಂದು ಹೇಳಿದ್ದಾರೆ. ಕುತೂಹಲದಿಂದ ತಾವು ಬುಡಕಟ್ಟಿನವರನ್ನು ನೋಡಿಲ್ಲವೆಂದು ಹೇಳಿದ್ದಾರೆ. ಬರೇ ೨೧ ಜನರು ಮಾತ್ರ ತಾವು ಅವರನ್ನು ಅರಣ್ಯ ಇಲಾಖೆಯವರೊಡನೆ ನೋಡಿರುವುದಾಗಿ ಹೇಳಿದರೆ ಉಳಿದವರು ಅಧಿಕಾರಿಗಳೊಡನೆ ನೋಡಿಲ್ಲವೆಂದು ಹೇಳಿದ್ದಾರೆ.

ಬುಡಕಟ್ಟಿನ ಜನ ಅಜ್ಞಾನಿಗಳು, ಹಿಂದುಳಿದವರು ಹಾಗೂ ಅನಾಗರಿಕ ಎಂದು ತಿಳಿಯುತ್ತೀರಾ ಎಂಬ ಪ್ರಶ್ನೆಗೆ ೭೧ ಮಂದಿ ಗ್ರಾಮಸ್ಥರು ‘ಹೌದು’ ಎಂದು ಉತ್ತರ ನೀಡಿದ್ದಾರೆ. ಈ ೭೧ ಮಂದಿಯ ಪೈಕಿ ಹುಣಸೂರಿನ ತಾಲ್ಲೂಕಿಗೆ ಸೇರಿದವರ ಸಂಖ್ಯೆಯೇ ಜಾಸ್ತಿ. ಅಂದರೆ ೨೯; ಇವರು ಹೇಳಿರುವುದು ಕಾಡುಕುರಬರ ಬಗ್ಗೆ. ೧೭ ಮಂದಿ ಗ್ರಾಮಸ್ಥರು ವಿ.ಜಿ.ಕೆ.ಕೆ. ಪ್ರದೇಶದವರು. ಅದೇ ತರಹ ಈ ಹೇಳಿಕೆಯನ್ನು ನಿರಾಕರಿಸಿರುವ ೫೦ ಮಂದಿಯ ಪೈಕಿ ೩೩ ಜನ ವಿ.ಜಿ.ಕೆ.ಕೆ ಪ್ರದೇಶದವರಾದರೆ, ಡೀಡ್‌ಪ್ರದೇಶದ ಜನರ ಸಂಖ್ಯೆ ೧೮, ಇದು ಅತ್ಯಂತ ಕಡಿಮೆ. ಆದರೆ ಎಸ್.ವಿ.ವೈ.ಎಂ. ಪ್ರದೇಶದ ಜನರು ಹೇಳಿಕೆಯ ಪರ ಹಾಗೂ ವಿರುದ್ಧವಾಗಿ ಸಮಸಮನಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬುಡಕಟ್ಟು ಅಭಿವೃದ್ಧಿಯಲ್ಲಿ ಸರ್ಕಾರದ ಪಾತ್ರವೇನು ಎಂದು ಕೇಳಲಾದ ಪ್ರಶ್ನೆಗೆ ಗ್ರಾಮಸ್ಥರು ಸರ್ವಾನುಮತದಿಂದ ಸಕಾರಾತ್ಮಕ ಉತ್ತರವನ್ನೇ ನೀಡಿದ್ದಾರೆ. ಬುಡಕಟ್ಟಿನವರನ್ನು ಅವರಷ್ಟಕ್ಕೇ ಬಿಟ್ಟುಬಿಟ್ಟರೆ ಅವರ ಅಭಿವೃದ್ಧಿಕಾರ್ಯ ಕುಂಠಿತವಾಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದೇ ತರಹ ಬುಡಕಟ್ಟಿನವರ ಅಭಿವೃದ್ಧಿಗೆ ಮೀಸಲಾದ ಸಂಪನ್ಮೂಲಗಳನ್ನು ಉಪಯೋಗಿಸದೆಯೇ ಹಾಳಾಗಲು ಬಿಡಬಾರದೆಂಬುದು ಅವರ ಇನ್ನೊಂದು ಪ್ರಮುಖವಾದ ಸಲಹೆಯಾಗಿದೆ. ಬುಡಕಟ್ಟು ಹಾಗೂ ಬುಡಕಟ್ಟೇತರ ಗ್ರಾಮದವರ ನಡುವಿನ ಸಂಬಂಧ ಸಾಮಾನ್ಯವಾಗಿ ಸೌಹಾರ್ದಯುತವಾಗಿಯೇ ಇದೆ. ಸುಮಾರು ೧೪೧ ಗ್ರಾಮಸ್ಥರು ಈ ಆಬಿಪ್ರಾಯವನ್ನು ಹೊಂದಿದ್ದಾರೆ. ಗ್ರಾಮಸ್ಥರು ಬುಡಕಟ್ಟಿನವರು ಮಾಟ-ಮಂತ್ರ ಮಾಡುತ್ತಾರೆ ಎಂಬ ತಿಳಿವಳಿಕೆಯನ್ನು ಹೊಂದಿದವರಾಗಿದ್ದಾರೆ. ಸುಮಾರು ೯೮ ಗ್ರಾಮಸ್ಥರಲ್ಲಿ ಈ ಅಭಿಪ್ರಾಯವಿದೆ. ಬಹುತೇಕ ಗ್ರಾಮಸ್ಥರು, ಅಂದರೆ ೧೩೭ ಮಂದಿ ಬುಡಕಟ್ಟಿನವರು ಕುಡಿತದ ಚಟಕ್ಕೆ ಬಿದ್ದಿದ್ದಾರೆ ಎನ್ನುತ್ತಾರೆ. ಡೀಡ್‌ಮತ್ತು ವಿ.ಜಿ.ಕೆ.ಕೆ. ಪ್ರದೇಶಗಳಲ್ಲಿ ತಲಾ ೪೫ ಮಂದಿ, ಎಸ್‌.ವಿ.ವೈ.ಎಂ. ಪ್ರದೇಶದ ೪೭ ಮಂದಿ ಈ ಅಭಿಪ್ರಾಯ ಹೊಂದಿದ್ದಾರೆ. ಜಾತಿಪದ್ಧತಿಯಲ್ಲಿ ನಾವು ಸಾಮಾನ್ಯವಾಗಿ ಕಾಣುವಂತೆ ಬುಡಕಟ್ಟಿನವರಲ್ಲೂ ಮೇಲು-ಕೀಳು, ಬಡವ-ಶ್ರೀಮಂತ ಎಂಬಿತ್ಯಾದಿ ತಾರತಮ್ಯವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಹೆಚ್ಚು ಕಡಿಮೆ ಸಮಸಮನಾಗಿಯೇ ‘ಹೌದು’ ಮತ್ತು ‘ಇಲ್ಲ’ ಎನ್ನುವ ಉತ್ತರ ಬಂದಿದೆ.

ಬುಡಕಟ್ಟಿನವರು ಜಮೀನು ಹೊಂದಿರುವ ಉದಾಹರಣೆ ತೀರಾ ಕಡಿಮೆ. ೧೨೬ ಮಂದಿ ಗ್ರಾಮಸ್ಥರು ಈ ಅಭಿಪ್ರಾಯದವರು. ಅಲ್ಲೊಬ್ಬ ಇಲ್ಲೊಬ್ಬ ಬುಡಕಟ್ಟಿನವರ ಬಳಿ ಜಮೀನಿದ್ದರೂ ಕಾನೂನು ಕ್ರಮ ಬಿಗಿಯಾಗಿದರುವುದರಿಂದ ಅವನ್ನು ಹಸ್ತಾಂತರಿಸಲು ಬರುವುದಿಲ್ಲ. ೯೬ ಮಂದಿ ಈ ಅಭಿಪ್ರಾಯ ಹೊಂದಿದ್ದಾರೆ. ಅದು ಹಸ್ತಾಂತರವಾಗಿರುವೆಡೆಯಲ್ಲೆಲ್ಲಾ ಸುತ್ತ-ಮುತ್ತಲ ಗ್ರಾಮದವರೇ ಅದನ್ನು ಲಪಟಾಯಸಿಬಿಡುತ್ತಾರೆ.

ಬುಡಕಟ್ಟು ಮಹಿಳೆಯರು ಹೆಚ್ಚಿನ ಸ್ತಾನಮಾನ ಹೊಂದಿದ್ದಾರೆ; ಅವರಲ್ಲಿ ಲಿಂಗಸಮಾನತೆ ಇದೆ, ಪುರುಷನೇ ಮನೆಯ ಮುಖಂಡನಾಗಿದ್ದರೂ ಸಹ. ವಿ.ಜಿ.ಕೆ.ಕೆ.ಯ ೪೯, ಎಸ್‌.ವಿ.ವ.ವೈ.ಎಂ. ನ ೪೮ ಮಂದಿ ಹಾಗೂ ಡೀಡ್‌ಪ್ರದೇಶದ ೪೮ ಮಂದಿ ಈ ಅಭಿಪ್ರಾಯದಲ್ಲಿ ಸಹಮತ ಹೊಂದಿದ್ದಾರೆ. ೫ ಮಂದಿಯನ್ನು ಹೊರತು ಪಡಿಸಿ ೧೪೩ ಮಂದಿ ಗ್ರಾಮಸ್ಥರು ಆದಷ್ಟು ಜಾಗ್ರತೆ ಬುಡಕಟ್ಟಿನ ಜನಗಳನ್ನು ಆಧುನಿಕಗೊಳಿಸಬೇಕಾದ ಜರೂರು ಇದೆಯೆಂದು ತಿಳಿಸುತ್ತಾರೆ.

ಇದರೊಂದಿಗೆ ನಾನು ಕಡೆಯ ಅಧ್ಯಾಯಕ್ಕೆ ನಡೆಯುತ್ತೇನೆ – ಬುಡಕಟ್ಟು ಜನರ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರವೇನು ಎಂಬುದರ ಬಗ್ಗೆ ನನ್ನ ಅಧ್ಯಯನದ ಉಪಸಂಹಾರವಿದು. ಬುಡಕಟ್ಟು ಅಭಿವೃದ್ಧಿ ಸಂಬಂಧ ಕೆಲವು ಸಲಹೆಗಳನ್ನು ನೀಡುವುದೂ ಸಹ ಉಚಿತವೆಂದು ತೋರುತ್ತದೆ. ಯೋಜನೆಗಳು, ಅವುಗಳ ಅನುಷ್ಠಾನ – ಇದರಲ್ಲಿ ಸರ್ಕಾರದ ಪಾತ್ರ, ಸ್ವಯಂ ಸೇವಾ ಸಂಸ್ಥೆಗಳ ಪಾತ್ರ, ಇವು ಪರಸ್ಪರರ ಪ್ರಯತ್ನಗಳಿಗೆ ಪುರಕವಾಗಿ ದುಡಿಯುತ್ತಾ ವಿರುದ್ಧ ದಿಕ್ಕಿಗೆ ಎಳೆಯಬಾರದೆಂಬುದು ಒಂದು ಮುಖ್ಯ ತೀರ್ಮಾನವಾಗಿದೆ.

* * *