ಬುಡಕಟ್ಟು ಅಭಿವೃದ್ಧಿಯಲ್ಲಿ ಸ್ವಯಂಸೇವಾಸಂಸ್ಥೆಗಳ ಪಾತ್ರದ ಅಧ್ಯಯನವೇ ಬಹಳ ಆಸಕ್ತಿದಾಯಕವಾದುದಾಗಿದೆ. ಇದು ಕೇವಲ ಶೈಕ್ಷಣಿಕ ಆಸಕ್ತಿಯ ವಿಷಯವಾಗಿರದೆ ಸ್ವಾತಂತ್ರ್ಯೋತ್ತರ ಭಾರತದ ಇತರ ಸಂಗತಿಗಳ ಬಗೆಗೂ ಬೆಳಕು ಚೆಲ್ಲುತ್ತದೆ. ಈ ಅಧ್ಯಯನವು ಹೊರಗೆಡಹಿರುವ ಕೆಲವು ಮುಖ್ಯ ಅಂಶಗಳು ಯೋಜನೆಗಳ ಸಂಬಂಧ ಬಹಳ ಮಹತ್ವ ಪಡೆಯುವಂತಿದ್ದು ಪ್ರಸಕ್ತ ಸಾಮಾಜಿಕ ಸಾಂಸ್ಕೃತಿಕ ಹಾಗೂ ರಾಜಕೀಯ ಪರಿಸರದಲ್ಲಿ ಪ್ರಭಾವ ಬೀರಬಲ್ಲವಾಗಿವೆ. ಚರಿತ್ರೆ ನಿರ್ಮಾಣದಲ್ಲಿ ತೊಡಗಿರುವವರು ಚರಿತ್ರೆಯ ಪಾಠಗಳನ್ನು ಗಮನಿಸುವುದರಿಂದ ಭಾವೀ ಜನಾಂಗಗಳ ಉಪಯೋಗಕ್ಕಾಗಿ ಅದನ್ನು ಅಭಿವೃದ್ಧಿ ಪಡಿಸಬಹುದಾಗಿದೆ. ಚರಿತ್ರೆಯೆಂದರೆ ಟೊಳ್ಳು ಚರಿತ್ರೆಯಲ್ಲ, ಸಂಗತಿಗಳ ಆಧಾರದ ಮೇಲೆ ನಿರ್ಮಿತವಾದ ಚರಿತ್ರೆ; ಇಂದಿನದನ್ನು ಹೇಳುವ ಚರಿತ್ರೆ, ಭೂತಕಾಲದ ಚರಿತ್ರೆ – ಇವೆರಡೂ ಕೂಡಿ ಒಂದು ದೇಶದ ಜನರ ಭವಿಷ್ಯವನ್ನೂ, ಆ ದೇಶವನ್ನೂ ಮಹತ್ವದ ರೀತಿಯಲ್ಲಿ ಪ್ರಭಾವಿಸಬಲ್ಲವು.

ಭಾರತದಲ್ಲಿ ಬುಡಕಟ್ಟು ಜನರು ಕೆಲವು ಪ್ರದೇಶಗಳಲ್ಲಿ ಸಾಂದ್ರಗೊಂಡಿದ್ದಾರೆ. ಬ್ರಿಟಿಷ್‌ಆಡಳಿತಕಾಲದಿಂದಲೂ ಈ ದೇಶದ ಸಮರ್ಪಕವಾದ ಬುಡಕಟ್ಟು ಅಧ್ಯಯನಗಳು ಲಭ್ಯವಿವೆ. ಭಾರತದಲ್ಲಿ ಸ್ಥಾನಮಾನವನ್ನು ಹೊಂದಿರುವ ಜನರು ಇಲ್ಲಿನ ಎಲ್ಲ ಅನಿಷ್ಟಗಳಿಗೂ ಬ್ರಿಟಿಷರ ಆಳ್ವಿಕೆಯನ್ನೂ ಹಾಗೂ ಕಾಲದಿಂದ ಕಾಲಕ್ಕೆ ಇಲ್ಲಿಗೆ ಬಂದು ಆಳಿದ ಇತರ ವಿದೇಶೀಯರನ್ನೂ ಹೊಣೆಗಾರರನ್ನಾಗಿಸುವ ಪರಿಪಾಠವೊಂದು ರೂಢಿಯಲ್ಲಿದೆ. ಗತಕಾಲದಿಂದ ಭಾರತ ಸಮಾಜ ಹೇಗೆ ನಡೆದು ಬಂದಿದೆ ಎಂಬುದನ್ನು ತಿಳಿಯಲು ಒಂದು ಪ್ರಮಾಣದ ಅಂತರ್ವೀಕ್ಷಣೆಗೆ ನಾನಿಲ್ಲಿ ಕೈಹಾಕುವುದಿಲ್ಲ. ವಸಾಹತು ಆಡಳಿತ ನೋಡಿಕೊಳ್ಳಲು ನೇಮಿಸಲ್ಪಟ್ಟಂಥ ಬಹುತೇಕ ಬ್ರಿಟಿಷ್‌ಅಧಿಕಾರಿಗಳು ಸಾಮಾನ್ಯವಾಗಿ ಆಕ್ಸ್‌ಫರ್ಡ್‌‌ನಲ್ಲಿ ಮಾನವಶಾಸ್ತ್ರವನ್ನು ಅಧ್ಯಯನ ಮಾಡಿದವರೇ ಆಗಿದ್ದರು. ಸರ್‌ಹರ್ಬರ್ಟ್‌ರಿಸ್ಲೆ, ಜೆ. ಎಚ್‌. ಹಟನ್‌, ಎಡ್ಗರ್‌ಥರ್ಸ್‌‌ಟನ್‌, ಡೆಂಜಿಲ್‌ಇಬೆಟ್ಸನ್‌ಹಾಗೂ ಎಂಥೋವನ್‌ಈ ರೀತಿ ಬಂದವರಲ್ಲಿ ಕೆಲವು ಪ್ರಮುಖರು. ಇವರೆಲ್ಲ ಪುನರ್ಮನನ ಶಿಬಿರಗಳಿಗಾಗಿ ಆಕ್ಸ್‌ಫರ್ಡ್‌‌ಗೆ ತೆರಳುತ್ತಿದ್ದರು.

ಈ ಅಭ್ಯಾಸಕ್ಕೆ ಸರಿಸಮನಾದ ಪರಿಪಾಠವನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಮ್ಮ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳಿಗೆ ನೀಡುತ್ತಿರುವ ಉದಾಹರಣೆ ಇಲ್ಲವೆಂದು ನನ್ನ ಭಾವನೆ. ಭಾರತೀಯರು ಹಾಗೂ ಬುಡಕಟ್ಟಿನವರಿಗೆ ಅನುಕೂಲವಾಗದಂಥ ನಿಯಮಗಳನ್ನು ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ತಂದಿದ್ದರೆ, ಆ ನಿಯಮಗಳನ್ನು ತೆಗೆದು ಹಾಕಿ ಬುಡಕಟ್ಟಿನವರ ಹಾಗೂ ಹಿಂದುಳಿದವರ ಹಿತಕಾಯುವ ರೀತಿಯಲ್ಲಿ ಬೇರೆ ನಿಯಮಗಳನ್ನು ತರುವಲ್ಲಿ ಏನು ತೊಂದರೆ? ಅರಣ್ಯ ಕಾನೂನುಗಳನ್ನು ಬಹಳ ಬಿಗಿಗೊಳಿಸಲಾಗಿದೆ; ಬಹುತೇಕ ಬುಡಕಟ್ಟಿನವರನ್ನು ಕಾಡಿನಿಂದ ಎತ್ತಂಗಡಿ ಮಾಡಲಾಗಿದೆ. ತಮ್ಮ ನೆಲದಿಂದ ಉಚ್ಛಾಟಿಸಲ್ಪಟ್ಟಿರುವ ಬುಡಕಟ್ಟಿನವರು ಈವತ್ತು ಬದುಕುವುದಕ್ಕೆ ಬಹಳ ಪ್ರಯಾಸ ಪಡುತ್ತಿದ್ದಾರೆ.

‘ಸಂರಕ್ಷಣಾ ವಿವೇಚನೆ’ಯನ್ವಯ ಪರಿಶಿಷ್ಟ ಜಾತಿ ಪಂಗಡಗಳಿಗೆ ಸಂವಿಧಾನಾತ್ಮಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಇದನ್ನು ಈವತ್ತು ನಿಜವಾಗಿ ಆ ಗುಂಪುಗಳಿಗೆ ಸೇರದವರೇ ಲಪಟಾಯಿಸುವಂಥ ಶೈಥಿಲ್ಯವುಂಟಾಗಿದೆ; ನಿಜವಾಗಿ ದುರ್ಬಲರಾದವರಿಗೆ ಸವಲತ್ತುಗಳು ತಲುಪುತ್ತಲೇ ಇಲ್ಲ. ಈ ವಿಭಾಗಗಳಲ್ಲಿ ತುಂಬಾ ಮುಂದುವರಿದ ಅಲ್ಪಸಂಖ್ಯಾತರು ಎಲ್ಲಾ ಸೌಲಭ್ಯಗಳನ್ನು ತಾವೇ ಕೊಳ್ಳೆ ಹೊಡೆಯುತ್ತಿರುವುದು ನಿಜವಾದರೆ ಆ ಪರಿಸ್ಥಿತಿಯನ್ನು ತಪ್ಪಿಸಿ ನಿಜವಾಗಿಯೂ ನಿರ್ಗತಿಕರಾಗಿರುವವರಿಗೆ ಸವಲತ್ತು ತಲುಪುವ ಹಾಗೆ ಸರ್ಕಾರ ಏಕೆ ಮಾಡುತ್ತಿಲ್ಲ?

ವ್ಯವಸ್ಥೆಯಲ್ಲಿರುವ ಆಲಸ್ಯದ ಜೊತೆಗೆ ಹೊಸ ಹೊಸ ಗುಂಪುಗಳವರು ಸರ್ಕಾರದ ಮೇಲೆ ಒತ್ತಡ ತಂದು ಎಸ್.ಸಿ. / ಎಸ್.ಟಿ. ಗುಂಪಿಗೆ ತಾವು ಸೇರಬೇಕೆಂದೂ, ತಮಗೂ ಸಂವಿಧಾನಾತ್ಮಕ ಸೌಲಭ್ಯಗಳನ್ನು ನೀಡಬೇಕೆಂದೂ ಒತ್ತಾಯ ತರುತ್ತಿದ್ದಾರೆ. ಸರ್ಕಾರ ಈ ಒತ್ತಾಯಕ್ಕೆ ನಿರಂತರವಾಗಿ ಮಣಿಯುತ್ತಿರುವುದರಿಂದ ಈವತ್ತು ಎಸ್‌.ಸಿ./ಎಸ್‌.ಟಿ.ಗಳ ಜನಸಂಖ್ಯೆ ತುಂಬಾ ಆಗಿದೆ. ಇದರ ಪರಿಣಾಮವಾಗಿ, ಸಮಾಜಿಕ-ಆರ್ಥಿಕ ಸಮಸ್ಯೆಗಳು ದ್ವಿಗುಣಗೊಂಡಿವೆ; ಬಡತನ ಹೆಚ್ಚುತ್ತಿದೆ; ಬಡವರು ಇನ್ನೂ ಬಡವರಾಗುತ್ತಿದ್ದಾರೆ; ಅವರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಪ್ರಾಯಶಃ ಇವೆಲ್ಲದರಿಂದ ಇವರ ಇಂದಿನ ಸ್ಥಿತಿ ವಿದೇಶಿಯರ ಆಳ್ವಿಕೆಯ ಕಾಲಕ್ಕಿಂತಲೂ ಹೆಚ್ಚು ಚಿಂತಾಜನಕವಾಗಿದೆ.

ಈ ಪರಿಸ್ಥಿತಿಯನ್ನು ಹತೋಟಿಗೆ ತರುವ ಕಾರಣದಿಂದಲೇ ಭಾರತದಲ್ಲಿ ಸ್ವಯಂ ಸೇವಾಸಂಸ್ಥೆಗಳು ಅಸ್ತಿತ್ವಕ್ಕೆ ಬಂದದ್ದು. ಪಾರಂಪರಿಕವಾಗಿ ಭಾರತ ಸಮಾಜಕ್ಕೆ ಬಡವರು ಹಾಗೂ ನಿರ್ಗತಿಕರ ಸೇವೆ ಮಾಡಿ ರೂಢಿಯಿಲ್ಲ. ಆದರೆ ದುರ್ಬಲ ವರ್ಗಗಳ ಸ್ಥಿತಿಗಳು ತೀರಾ ಹದಗೆಟ್ಟಿದ್ದರಿಂದ ಮಧ್ಯಮವರ್ಗದ ಯುವಕರು-ಸ್ತ್ರೀಯರು ಹಾಗೂ ಪುರುಷರು- ಜಾಗ್ರತರಾಗಿ ೧೯೬೦ ಹಾಗೂ ೭೦ ದಶಕಗಳಲ್ಲಿ ಅವರಲ್ಲಿ ಅನೇಕರು ಗ್ರಾಮಾಂತರ ಪ್ರದೇಶಗಳು ಹಾಗೂ ಬುಡಕಟ್ಟು ಸ್ಥಳಗಳಿಗೆ ಹೋಗಿ ಮಾನವೀಯತೆಯ ದೃಷ್ಠಿಯಿಂದ ತಮ್ಮ ಕೈಲಾದ ಸೇವೆ ಮಾಡಲು ಮುಂದಾದರು. ಆ ವೇಳೆಗಾಗಲೇ ಸರ್ಕಾರಿಯಂತ್ರ ನಿಶ್ಚೇಷ್ಟಿತವಾಗಿ ಹೆಚ್ಚಿನ ಹೊಣೆ ತನ್ನಿಂದಾಗದೆಂದು ಕೈಚೆಲ್ಲಿ ಕುಳಿತಿತ್ತು.

“ಸ್ವಯಂಸೇವೆ”ಯನ್ನು ಸ್ವಾಗತಿಸಿದಂಥ ಸರ್ಕಾರವು ಸ್ಯಯಂಸೇವಾಸಂಸ್ಥೆಗಳ ಒಳ್ಳೆಯ ಪ್ರಯತ್ನಗಳ ಮೂಲಕ ತನ್ನ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಮುಂದಾಯಿತು. ಈ ಪ್ರಕ್ರಿಯೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೇವೆಯನ್ನು ಮುಂದುವರಿಸಲು ಸ್ವಯಂ ಸೇವಾ ಸಂಸ್ಥೆಗಳಿಗೆ ಹಣಕಾಸಿನ ಸಹಾಯವನ್ನು ಮಾಡತೊಡಗಿದ್ದವು. ಅನೇಕ ವಿದೇಶಿ ಏಜೆನ್ಸಿಗಳು ಸಹ ಸ್ವಯಂ ಸೇವಾ ಸಂಸ್ಥೆಗಳಿಗೆ ಧನಸಹಾಯ ಮಾಡಲು ಮುಂದಾದವು.

ಇದರ ಫಲವಾಗಿ ಈವತ್ತು ಎಲ್ಲ ಕಡೆ ಸ್ವಯಂಸೇವಾಸಂಸ್ಥೆಗಳು ಲೆಕ್ಕವಿಲ್ಲದಷ್ಟು ತಲೆಯೆತ್ತಿವೆ. ಆದರೆ ಅವುಗಳೆಲ್ಲ ನಿಜವಾದ ಸಮಾಜ ಸೇವೆಯಲ್ಲಿ ತೊಡಗಿವೆ ಎಂಬ ಭರವಸೆಯಿಲ್ಲ. ಅವುಗಳಲ್ಲಿ ಕೆಲವು ಸಂಸ್ಥೆಗಳಾದರೂ ಸೇವೆಯನ್ನು ಮುಂದಿನ ರಾಜಕೀಯ ವೃತ್ತಿಗಾಗಿ ಬಳಸಿಕೊಳ್ಳುವುದರ ಜೊತೆಗೆ ಸಿಕ್ಕಿದ ಸಹಾಧನದ ದುರ್ಬಳಕೆಗೂ ಮುಂದಾಗಿವೆಯೆಂದು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹೇಳಿರುವುದು ನಮ್ಮ ಅಧ್ಯಯನದಲ್ಲಿ ದಾಖಲಾಗಿದೆ. ಕೆಲವು ಸಂಸ್ಥೆಗಳಂತೂ ಯಜಮಾನರ ಮಕ್ಕಳು ಮರಿಗಳಿಗೆ ಖಾಸಗಿ ಆಸ್ತಿಗಳಾಗಿ ಪರಿವರ್ತನೆಗೊಂಡು ಅವರ ಮುಂದಿನ ತಲೆಮಾರುಗಳಿಗೆ ಅಧಿಕಾರದ ಸ್ಥಾನವನ್ನು ದೊರಕಿಸಿಕೊಡುವಂಥವಾಗಿವೆ.

ಬುಡಕಟ್ಟು ಕಲ್ಯಾಣದ ಹೆಸರಿನಲ್ಲಿ ದುರುಪಯೋಗ ಹಾಗೂ ದುರ್ಬಳಕೆಯಾಗುತ್ತಿರುವ ಹಣದ ಪ್ರಮಾಣ ಅಪಾರ. ಆದಾಗ್ಯೂ ದುರ್ಬಲವರ್ಗಗಳಿಗೆ ಕಲ್ಯಾಣ ಕಾರ್ಯಕ್ರಮಗಳ ಫಲ ದಕ್ಕುತ್ತಿಲ್ಲ. ದಶಕಗಳವರೆಗೆ ಸರ್ಕಾರ ಈ ಕಾರ್ಯಕ್ರಮಗಳನ್ನು ಮುಮದುವರಿಸಲಿ. ಆದರೆ ಕೆಲವು ಕಠಿಣಕ್ರಮಗಳನ್ನು ಜಾರಿಗೊಳಿಸಿ ರಾಜಕೀಯ ಇಚ್ಛಾಶಕ್ತಿಯಿಂದ ಈ ಕಾರ್ಯಕ್ರಮಗಳನ್ನು ಮುನ್ನಡೆಸದಿದ್ದರೆ ಈ ಪ್ರಯತ್ನಗಳಿಗೆ ಯಶಸ್ಸು ಸಿಕ್ಕುವುದಿಲ್ಲ.

ಮೊದಲನೆಯದಾಗಿ ಮೀಸಲಾತಿ ನಿಯಮ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದೆ. ಈ ವಿದಾನವನ್ನು ತಡೆಗಟ್ಟಿ ಸರಿಪಡಿಸದಿದ್ದ ಪಕ್ಷದಲ್ಲಿ ಇಡೀ ಉಪಖಂಡವೇ ಎಸ್‌.ಸಿ./ಎಸ್‌.ಟಿ. ಪಟ್ಟಿಯನ್ನು ಹೆಚ್ಚಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ. ಸಿಕ್ಕಿದವರಿಗೆಲ್ಲ ಈ ಪಟ್ಟಿಯನ್ನು ಸರ್ಕಾರ ಹಂಚುತ್ತಾ ಹೋಗುವುದು ಒಂದು ಕಡೆಯಾದರೆ, ಈ ಗುಂಪುಗಳಲ್ಲಿ ಬಾಯಿ ಇರುವುವವರ ಒಂದು ಅಲ್ಪಸಂಖ್ಯಾತವರ್ಗ ಎಲ್ಲ ಸವಲತ್ತುಗಳನ್ನು ನುಂಗಿ ಹಾಕಿ ಲಾಗಾಯ್ತಿನಿಂದ ಕಷ್ಟಪಡುತ್ತಿರುವವರು ಮೂಗುಬಸವಣ್ಣಗಳ ಹಾಗೆ ಯಥಾಸ್ಥಿತಿಯಲ್ಲಿ ಮುಂದುವರಿಯುವ ಪ್ರಸಂಗ ಢಾಳಾಗಿ ಕಾಣುತ್ತಿದೆ.

ಕರ್ನಾಟಕದಲ್ಲಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೋಲಿಗ ಅಥವಾ ಕಾಡು ಕುರುಬ ಜನಾಂಗಕ್ಕೆ ಸೇರಿದ ಒಬ್ಬ ವಿದ್ಯಾರ್ಥಿಯೂ ಸಹ ವೃತ್ತಿಪರ ಕೋರ್ಸುಗಳಿಗೆ ಸೇರಿದ ಉದಾಹರಣೆ ಇಲ್ಲ. ಹಲವು ವರ್ಷಗಳಿಂದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್‌ಕೋರ್ಸುಗಳ ಸ್ಥಳಗಳನ್ನು ಪರಿವಾರ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಿದ್ದಾರೆ; ತಾವೇ ಪರಿಶಿಷ್ಟ ಪಂಗಡದವರೆಂದು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ತಮಗೆ ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಅವರು ಒಗ್ಗಟ್ಟಾಗಿ ಮುಷ್ಕರ ಹೂಡತೊಡಗಿದ್ದಾರೆ. ಬಿ.ಎ. ಪದವಿಯನ್ನು ಹೊಂದಿದಂಥ ಒಬ್ಬಳೇ ಒಬ್ಬಳು ಬುಡಕಟ್ಟಿನ ಬಾಲಕಿ ಬುಡಕಟ್ಟು ಮೀಸಲಾತಿ ಅಡಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೋರ್ಸ್‌‌ಗೆ ೧೯೯೫-೯೬ನೇ ಸಾಲಿನಲ್ಲಿ ಸೇರಲು ಸಾಧ್ಯವಾಗಲಿಲ್ಲ. ಆಕೆ ವಿ.ಜಿ.ಕೆ.ಕೆ. ಪ್ರದೇಶದಿಂದ ಬಂದವಳಾಗಿದ್ದು ಡಾ. ಸುದರ್ಶನ್‌ಕೂಡ ಅಸಹಾಯಕರಾದರು. ಪರಿಶಿಷ್ಟ ಪಂಗಡದ ಕೋಟಾ ಎಲ್ಲ ಭರ್ತಿಯಾಗಿದ್ದು ಆ ಸೋಲಿಗರ ಹುಡುಗಿಗೆ ಬೇಕಾದ ಶೇಕಡವಾರು ಅಂಕಳಿರಲಿಲ್ಲ! ಅದೇ ಗುಂಪಿಗೆ ಸೇರಿದ ಇತರ ವಿದ್ಯಾರ್ಥಿಗಳು ಹೇಗೋ ಆ ನಿಗದಿತ ಪ್ರಮಾಣದ ಅಂಕಗಳನ್ನು ಪಡೆದಿದ್ದರು.

ಇಂಥ ಅತಾರ್ಕಿಕವಾದ ಪರಿಸ್ಥಿತಿಯನ್ನು ಹೊಂದಿದ್ದು ಬುಡಕಟ್ಟು ಅಭಿವೃದ್ಧಿ ಸಾಧಿಸುವುದು ಹೇಗೆ? ವ್ಯಕ್ತಿಗಳನ್ನು ಮೀಸಲಾತಿ ಗುಂಪಿಗೆ ಸೇರಿಸುವ ಅಥವಾ ಹೊರಗೆ ಹಾಕುವ ವಿಷಯದಲ್ಲಿ ನಿಗದಿತ ನಿಯಮಗಳಿವೆ. ನಮ್ಮ ವಿಧಾನಸೌಧ ಹಾಗೂ ಸದನಗಳಿಗೆ ಲಗ್ಗೆ ಇಡುವಂಥ ರಾಜಕಾರಣಿಗಳ ಗುಂಪಿನಿಂದ ಇದು ಆಗುವುದಿಲ್ಲ, ಆಗಬಾರದು; ಇದನ್ನು ಕೈಗೆತ್ತಿಕೊಳ್ಳಬೇಕಾದವರು ಇದರ ಬಗ್ಗೆ ಸಂಪೂರ್ಣವಾದ ಅರಿವಿರುವ ಸಮಾಜ ವಿಜ್ಞಾನಿಗಳು. ಇಲ್ಲದೇ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಇಡೀ ರಾಷ್ಟ್ರವೇ ಪೈಪೋಟಿಗಿಳಿದು ಮೀಸಲಾತಿ ಸವಲತ್ತನ್ನು ಪಡೆದರೆ ಆಶ್ಚರ್ಯವಲ್ಲ. ಈಗ ಗೋಚರಿಸುತ್ತಿರುವ ವಿಭಜನೆ, ವರ್ಗಭೇದ, ಜಾತಿ ಭೇದ- ಇತ್ಯಾದಿಗಳು ಇನ್ನೂ ಹೆಚ್ಚಿ ನಾವು ಛಿದ್ರವಾಗುವುದರಲ್ಲಿ ಅನುಮಾನವಿಲ್ಲ.

ಈ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಯಾವ ಸರ್ಕಾರಕ್ಕೆ ತಾನೆ ದೇಶವನ್ನು ಉಳಿಸಲು ಸಾಧ್ಯ? ಶಿಸ್ತಿಗೆ ಬದ್ಧವಾಗಿರುವಂಥ ದೃಢನಿರ್ಧಾರದ ಸರ್ಕಾರಕ್ಕೆ ಮಾತ್ರ ಇದು ಸಾಧ್ಯವಾಗುವುದು.

ಅಪ್ಪಟವಲ್ಲದ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಈವತ್ತು ಏಳಿಗೆ ಹೊಂದುತ್ತಾ ಇದ್ದರೆ ಅದು ಸಾಧ್ಯವಾಗಿರುವುದು ಅವು ಗಳಿಸಿರುವ ರಾಜಕಾರಣಿಗಳ ಸಖ್ಯ ಹಾಗೂ ಬೆಂಬಲವೇ ಕಾರಣ. ನಿರುದ್ಯೋಗಿಗಳು ಹಾಗೂ ಉದ್ಯೋಗವನ್ನು ಎಂದೂ ಗಳಿಸಲಾಗದಂಥ ಜನರು ಈವತ್ತು ಸ್ವಯಂಸೇವಾ ಸಂಸ್ಥೆಗಳನ್ನು ನಡೆಸುತ್ತಿದ್ದು ದೇಶದ ಬೇರೆ ಬೇರೆ ಭಾಗಗಳಲ್ಲಿ ಅವರು ‘ಕಾರ್ಯನಿರತ’ರಾಗಿದ್ದಾರೆ. ಸರ್ಕಾರವಾಗಲಿ, ಕಲ್ಯಾಣ ಇಲಾಖೆಯಾಗಲಿ ಸ್ವಯಂ ಸೇವಾ ಸಂಸ್ಥೆಗಳ ಸೇವಾವಿಧಾನ ಹಾಗೂ ಕಾರ್ಯಧಕ್ಷತೆಯನ್ನು ಪರಿಶೀಲಿಸಿ, ಮೌಲ್ಯಮಾಪನ ಮಾಡಿದ ನಂತರವೇ ನೋಂದಣಿ ಮಾಡುವುದೆಂದು ಕಠಿಣವಾದ ನಿಲುವು ತಾಳುವುದಕ್ಕಾಗುತ್ತದೆಯೇ? ಸರ್ಕಾರ ಈ ವಿಧಾನವನ್ನು ಅನುಸರಿಸಲು ಈಗ ತಕ್ಕ ಸಮಯವೆಂದು ಭಾವಿಸಬೇಕು. ಇದರ ಜೊತೆಗೆ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಒಂದೇ ಪ್ರದೇಶದಲ್ಲಿ ಬೀಡು ಬಿಟ್ಟ ಒಂದೇ ಗುಂಪಿನ ಜನರನ್ನು ಆರಿಸಿಕೊಂಡರೆ ಕೆಲಸವು ಪುನರಾವರ್ತನೆಯಾಗಿ ಲಭ್ಯವಿರುವ ಕಡಿಮೆ ಸಂಪನ್ಮೂಲ ದುರುಪಯೋಗವಾಗುತ್ತದೆ, ದುರ್ಬಳಕೆಯಾಗುತ್ತದೆ. ಇದಕ್ಕೆ ಕೊನೆಯಾಗಲೇಬೇಕು. ಪ್ರಾಮಾಣಿಕವಾಗಿ ಸೇವೆ ಮಾಡುವಂಥ ಸ್ವಯಂ ಸೇವಾ ಸಂಸ್ಥೆಯನ್ನು ಗುರ್ತಿಸಿ ವಿವಿಧ ಸೇವೆಯನ್ನು ಅದೇ ಸಂಸ್ಥೆ ಕೈಗೊಳ್ಳುವಂತೆ ಪ್ರೋತ್ಸಾಹಿಸುವುದರಿಂದ ಮಾನವೀಯತೆಯ ಆಧಾರದ ಮೇಲೆ ದುಡಿಯುವ ಸಂಸ್ಥೆಗೆ ಉತ್ತೇಜನ ನೀಡಿದಂತಾಗುತ್ತದೆ; ಕೇವಲ ‘ದಯೆ’, ‘ಕರುಣೆ’ ಎಂದು ಬೂಟಾಟಿಕೆ ತೋರುವ ಸಂಸ್ಥೆಗಳನ್ನು ಬೆಂಬಲಿಸುವುದು ವ್ಯರ್ಥಪ್ರಯತ್ನವಾಗುತ್ತದೆ.

ಕಲ್ಯಾಣ ಕಾರ್ಯಕ್ರಮಗಳು ಚಾಲನೆಯಲ್ಲಿರುವಂಥ ಸಂದರ್ಭದಲ್ಲಿ ಯಾವ ದೇಶದಲ್ಲಿಯೇ ಆಗಲಿ-ಮಹತ್ವಾಕಾಂಕ್ಷಿಗಳು ಸನ್ನಿವೇಶವನ್ನು ದುರುಪಯೋಗಪಡಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಬ್ರಿಟನ್ನಿನಲ್ಲಿ ಕಂಡುಬರುವ ನಿರುದ್ಯೋಗ ವಿಮೆ, ರಾಷ್ಟ್ರೀಯ ಧನಸಹಾಯ ಪಡೆದ ಆರೋಗ್ಯ ಸೇವೆ, ಅಮೇರಿಕಾದಲ್ಲಿ ಕಾಣುವ ರೆಡ್‌ಇಂಡಿಯನ್ನರ ಜನಾಂಗ ಸವಲತ್ತುಗಳು -ಇವುಗಳ ದುರುಪಯೋಗವಾಗುವುದು ನಿಸ್ಸಂಶಯ. ಆರೋಗ್ಯ ಯೋಜನೆಯನ್ನು ಬ್ರಿಟನ್‌ರದ್ದು ಪಡಿಸಿತು. ಭಾರತದಲ್ಲಿ ಸಮಸ್ಯೆಗಳು ಕಗ್ಗಂಟಾಗುತ್ತವೆ. ಇದಕ್ಕೆ ಕಾರಣಗಳು ಹಲವಾರು; ಜನಸಂಖ್ಯಾ ಸ್ಫೋಟ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ, ಭಾಷೆ ಹಾಗೂ ಧರ್ಮದ ಆಧಾರದ ಮೇಲೆ ಜನರ ವಿಭಜನೆ, ಇತ್ಯಾದಿ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಸಾಮಾಜಿಕ ರಚನೆಯಲ್ಲಿಯೇ ಅಂತರ್ಗತವಾಗಿರುವಂಥ ರಾಜಕೀಕರಣ ಇದಕ್ಕೆ ಪ್ರಧಾನ ಕಾರಣ.

ಸ್ವಯಂ ಸೇವಾ ವಲಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳನ್ನು ಮುಂದುವರಿಸುವುದು ಬಹಳ ಅಪೇಕ್ಷಣೀಯವಾದ ವ್ಯವಸ್ಥೆ. ಆದರೆ ಈ ಸಂಸ್ಥೆಗಳನ್ನು ಶಿಸ್ತಾಗಿ ಅಡಕ ಮಾಡಬೇಕು ಹಾಗೂ ಸರ್ಕಾರದ ಜೊತೆಗೂಡಿ ಕೆಲಸ ಮಾಡುವಂತೆ ಪ್ರೇರೇಪಿಸಬೇಕು. ಈ ವಿಷಯದಲ್ಲಿ ಅನಗತ್ಯವಾಗಿ ಸರ್ಕಾರ ಸಂಸ್ಥೆಗಳ ಶೋಷಣೆಯಲ್ಲಿ ತೊಡಗಬಾರದು. ಸ್ಥಾಪಿತ ಹಿತಾಸಕ್ತಿಗಳು ಹಾಗೂ ಕೆಲವು ಫಲಾನುಭವಿಗಳ ವಿಷಯದಲ್ಲೂ ಸ್ವಯಂ ಸೇವಾ ಸಂಸ್ಥೆಗಳು ಎಚ್ಚರಿಕೆಯಿಂದ ಇರಬೇಕು. ಯಾವ ಸಂಸ್ಥೆಯಾದರೂ ಸರಿ ಎಲ್ಲ ಸಮಸ್ಯೆಗಳಿಗೂ ತನ್ನಲ್ಲಿ ಉತ್ತರವಿದೆಯೆಂದು ಹೇಳುವ ಸ್ಥಿತಿಯಲ್ಲಿ ಖಂಡಿತಾ ಇರುವುದಿಲ್ಲ.

ಪ್ರಸ್ತುತ ಅಧ್ಯಯನಕ್ಕೆ ಆಯ್ದುಕೊಂಡಿರುವಂಥ ಮೂರು ಸ್ವಯಂ ಸೇವಾ ಸಂಸ್ಥೆಗಳ ಪೈಕಿ ಎರಡು ಸಂಸ್ಥೆಗಳು ಬುಡಕಟ್ಟಿನವರ ಜೊತೆ ಒಳ್ಳೆಯ ಕೆಲಸ ಮಾಡುತ್ತಿವೆ. ಅವು ಮಾಡುತ್ತಿರುವ ಕೆಲಸಗಳಲ್ಲಿ ಪಾರದರ್ಶಕತೆಯಿದೆ. ಪ್ರಾಮಾಣಿಕತೆ ಇದೆ. ಮೂರನೇ ಸಂಸ್ಥೆ ತನ್ನ ಕೆಲಸದ ಬಗ್ಗೆ ಮಾಹಿತಿಯನ್ನು ನೀಡುವುದಿರಲಿ, ಮನಸ್ಸು ಬಿಚ್ಚಿ ಮಾತನಾಡುವುದೂ ಇಲ್ಲ. ಇಂಥ ನಿಗೂಢ ಪರಿಸ್ಥಿತಿಯಲ್ಲಿ ಸದರಿ ಸಂಸ್ಥೆಯ ಉದ್ದೇಶವಾದರೂ ಏನು ಎಂಬುದರ ಬಗ್ಗೆ ಅನುಮಾನ ಉಂಟಾಗುವುದು ಸಹಜ. ದೇಶದಾದ್ಯಂತ ಇಂತಹ ಹಲವು ಸಂಸ್ಥೆಗಳು ಇರಬಹುದು; ಇವುಗಳನ್ನು ತಪಾಸಣೆ ನಡೆಸಿ ರದ್ದು ಪಡಿಸುವುದು ಅತ್ಯಂತ ಅಗತ್ಯವಾಗಿದೆ. ಸರಿಯಾದ ಕ್ರಮದಲ್ಲಿ ಸ್ವಯಂಸೇವಾ ವಿಧಾನವನ್ನು ಜಾರಿಗೆ ತಂದಿದ್ದೇ ಆದರೆ, ದೀರ್ಘಕಾಲೀನವಾಗಿ ಅನೇಕ ಸಾಮಾಜಿಕ ಅನಿಷ್ಟಗಳನ್ನು ಹದ್ದುಬಸ್ತಿನಲ್ಲಿಡಲು ಅನುಕೂಲವಾಗುವುದು. ಆ ಅನಿಷ್ಟಗಳಲ್ಲಿ ಮುಖ್ಯವಾದವು : ಜಾತೀಯತೆ, ವರ್ಗಭೇದ, ಲಿಂಗತಾರತಮ್ಯ ಹಾಗೂ ದೇಶದ ಪ್ರಗತಿಗೆ ಅಡ್ಡಿಯಾಗಿರುವಂಥ ಅನೇಕ ಪಾರಂಪರಿಕ ತೊಡಕುಗಳು.

* * *