ಎರಡನೇ ಅಧ್ಯಾಯ ಸ್ವಯಂ ಸೇವಾ ಸಂಸ್ಥೆಗಳ ಉಗಮವನ್ನು ಚರ್ಚಿಸುತ್ತದೆ; ವಿಶೇಷವಾಗಿ ಮೈಸೂರು ಜಿಲ್ಲೆಯನ್ನು ಗಮನಿಸಿ (ಪ್ರಸ್ತುತ ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಿ ಹೊರಹೊಮ್ಮಿದೆ). ಸದರಿ ಜಿಲ್ಲೆಯಲ್ಲಿ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಆದರೆ ಪ್ರಸ್ತುತ ಅಧ್ಯಯನವು ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿ.ಜಿ.ಕೆ.ಕೆ), ಎನ್‌. ಬೇಗೂರು ವಲಯದಲ್ಲಿರುವ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌(ಎಸ್‌.ವಿ.ವೈ.ಎಂ.) ಹಾಗೂ ಹುಣಸೂರು ತಾಲೂಕಿನಲ್ಲಿರುವ ಡೀಡ್‌(ಡೆವಲಪ್‌ಮೆಂಟ್‌ಥ್ರೂ ಎಜುಕೇಶನ್‌) ಸಂಸ್ಥೆಗಳನ್ನು ಕುರಿತದ್ದಾಗಿದೆ.

ಈ ಮೂರು ಸಂಘಟನೆಗಳು ವೈದ್ಯರಿಂದ ಪ್ರಾರಂಬಿಸಲ್ಪಟ್ಟಿದ್ದು ಬೇರೆ ಬೇರೆ ದಿಕ್ಕುಗಳಲ್ಲಿ ಕೆಲಸ ಮಾಡತೊಡಗಿವೆ. ವಿ.ಜಿ.ಕೆ.ಕೆ. ಮತ್ತು ಡೀಡ್‌ಸಂಸ್ಥೆಗಳು ಸ್ಪಲ್ಪ ಕೆಲಸ ಮಾಡಿವೆಯಾದರೂ ಈ ಅಧ್ಯಯನವನ್ನು ಕೈಗೊಳ್ಳುವ ಕಾಲಕ್ಕೆ ಎಸ್.ವಿ.ವೈ.ಎಂ.. ಅಷ್ಟು ಕೆಲಸ ಮಾಡಿರುವುದು ಕಂಡು ಬರುವುದಿಲ್ಲ. ವಿ.ಜಿ.ಕೆ.ಕೆ. ಸಂಸ್ಥೆಯು ಸೋಲಿಗರ ಹಾಡಿಯಲ್ಲಿ ಅವರಿಗೆ ವೈದ್ಯಕೀಯ ಸೌಲಭ್ಯ ಒದಗಿಸಿಕೊಂಡಲು ಪ್ರವೇಶ ಪಡೆಯಿತಾದರೂ ಈವತ್ತು ಬೇರೆ ದಿಕ್ಕಿನಲ್ಲಿ, ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಬುಡಕಟ್ಟು ಜನರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ಸು ಗಳಿಸಿದೆ ಎನ್ನಬಹುದು.

ಆರಂಭದಿಂದಲೂ ಡೀಡ್‌ಸಂಸ್ಥೆ ಆರೋಗ್ಯ ಸೇವೆಯಿಂದ ದೂರವೇ ಉಳಿಯಿತು. ಅದರ ಗಮನವೇನಿದ್ದರೂ ಶಿಕ್ಷಣ ಸಮುದಾಯ ಸಂಘಟನೆಯ ಕಡೆ. ಹಾಗಾಗಿ ಇಂದು ಎರಡು ಬುಡಕಟ್ಟು ಸಂಘಟನೆಗಳು ಹೊರಹೊರಮ್ಮಿವೆ. ಬುಡಕಟ್ಟು ಕೃಷಿಕರ ಸಂಘ ಮತ್ತು ವನವಾಸಿ ಮಹಿಳಾ ಸಂಘ ಬುಡಕಟ್ಟು ಜನರ ಸಮಸ್ಯೆಯನ್ನು ಚರ್ಚಿಸುವ ಮುಖವಾಣಿಯಾಗಿವೆ. ಈ ಕೇತ್ರದಲ್ಲಿ ಜೇನುಕುರುಬರು ಅಧಿಕ ಸಂಖ್ಯೆಯಲ್ಲಿದ್ದಾರೆ.

ಎಸ್‌.ವಿ.ವೈ.ಎಂ. ಮೊದಲು ಆರೋಗ್ಯ / ವೈದ್ಯಕೀಯ ಸೇವೆಯಲ್ಲಿದ್ದು ತರುವಾಯ ಶಿಕ್ಷಣವನ್ನು ಸೇರಿಕೊಂಡಿದೆ. ಸಾಕಷ್ಟು ಕಟ್ಟಡ ಇತ್ಯಾದಿಗಳಿದ್ದರೂ ಆರೋಗ್ಯ ಸೇವೆ ಗಣನೀಯ ಪ್ರಮಾಣದಲ್ಲಿ ಆಗಿಲ್ಲ. ಈ ಅಧ್ಯಯನ ಕೈಗೊಳ್ಳುವ ಕಾಲಕ್ಕೆ ಬುಡಕಟ್ಟು ಜನರನ್ನೊಳಗೊಂಡ ಸಮಿತಿಗಳು ಕ್ರೀಯಾಶೀಲವಾಗಿದ್ದವು.

ಮೂರನೇ ಅಧ್ಯಾಯವು ವಿ.ಜಿ.ಕೆ.ಕೆ. ಸಲ್ಲಿಸಿರುವ ವಿವಿಧ ಸೇವೆಗಳ ಮೌಲ್ಯಮಾಪನ ಮಾಡುತ್ತದೆ. ಸಂಘಟನೆಯ ಅಭಿಪ್ರಾಯಗಳನ್ನು ಈ ಅಧ್ಯಾಯ ಗಣನೆಗೆ ತೆಗೆದುಕೊಳ್ಳುತ್ತದೆ; ಹಾಗೆಯೇ ಸಂಸ್ಥೆಯಿಂದ ಫಲವನ್ನು ಅನುಭವಿಸಿರುವ ಬುಡಕಟ್ಟು ಜನರ ಅಭಿಪ್ರಾಯ ಮತ್ತು ಇದರ ಸಂಪರ್ಕಕ್ಕೆ ಬರುವ ಸರ್ಕಾರಿ ಅಧಿಕಾರಿಗಳ ಅಭಿಪ್ರಾಯವನ್ನು ತೆಗೆದುಕೊಳ್ಳುವುದರ ಜೊತೆಗೆ ಸುತ್ತಮುತ್ತಲ ಗ್ರಾಮಸ್ಥರ (ಬುಡಕಟ್ಟೇತರ) ಅನಿಸಿಕೆಗಳನ್ನು ಪರಿಗಣಿಸುತ್ತದೆ. ಇದೆಲ್ಲದರಿಂದ ಸಂಘಟನೆ ಹಾಗೂ ಅದರ ಚಟುವಟಿಕೆಗಳನ್ನು ವಸ್ತು ನಿಷ್ಠವಾಗಿ ನೋಡಲು ಸಹಾಯಕವಾಗಿದೆ.

ಅದೇ ತರಹ ನಾಲ್ಕನೇ ಅಧ್ಯಾಯದಲ್ಲಿ ಎಸ್.ವಿ.ವೈ.ಎಂ.. ಸಂಸ್ಥೆಯು ಯಾವ ರೀತಿ ಬುಡಕಟ್ಟು ಜನರ ಅಭಿವೃದ್ಧಿಯನ್ನು ಕೈಕೊಂಡಿದೆ ಎಂಬುದರ ಅಧ್ಯಯನವಿದೆ. ಬುಡಕಟ್ಟು ಫಲಾನುಭವಿಗಳ ಅಭಿಪ್ರಾಯ, ಸರ್ಕಾರಿ ಅಧಿಕಾರಿಗಳೂ ಹಾಗೂ ಬುಡಕಟ್ಟೇತರ ನೆರೆಹೊರೆಯ ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮೌಲ್ಯಮಾಪನ ಮಾಡಲಾಗಿದ್ದು ಸೇವೆಯನ್ನು ವಿಶ್ಲೇಷಿಸಲಾಗಿದೆ.

ಒಂದನೇ ಅಧ್ಯಾಯದಲ್ಲಿ ಡೀಡ್‌ಸಂಸ್ಥೆಯ ಸೇವೆಯನ್ನು ವಿಶದಪಡಿಸಲಾಗಿದೆ. ಕಾಡುಕುರಬ ಫಲಾನುಭವಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸುತ್ತಮುತ್ತಲ ಬುಡಕಟ್ಟೇತರ ಗ್ರಾಮಸ್ಥರ ಗ್ರಾಮಸ್ಥರ ಅಭಿಪ್ರಾಯಗಳನ್ನು ಪಡೆದು ಬುಡಕಟ್ಟು ಅಭಿವೃದ್ಧಿಯಲ್ಲಿ ಸದರಿ ಸಂಸ್ಥೆಯು ಯಾವ ಪಾತ್ರ ವಹಿಸಿದೆ ಎಂಬುದರ ಅಧ್ಯಯನ ಮಾಡಲಾಗಿದೆ.

ಆರನೇ ಅಧ್ಯಾಯ ಈ ಮೂರು ಸ್ವಯಂ ಸೇವಾ ಸಂಸ್ಥೆಗಳ ತೌಲನಿಕ ಅಧ್ಯಾಯನವಾಗಿದೆ. ವಿ.ಜಿ.ಕೆ.ಕೆ. ಹಾಗೂ ಡೀಡ್‌ಸಂಸ್ಥೆಗಳು ತಮ್ಮ ಕಾರ್ಯವಲಯವನ್ನು ಕ್ರಮೇಣ ವಿಸ್ತರಿಕೊಂಡಿವೆಯಾದರೆ ಅದೆ ಸಂಗತಿಯನ್ನು ಎಸ್.ವಿ.ವೈ.ಎಂ.. ಬಗ್ಗೆ ಹೇಳಲು ಬರುವುದಿಲ್ಲ. ವಾಸ್ತವಾಗಿ ಎಸ್.ವಿ.ವೈ.ಎಂ.. ಬೆಂಗಳೂರು, ಮೈಸೂರು ನಗರಗಳಿಂದ ಉನ್ನತ ವಲಯದ ಜನರನ್ನು ಸಲಹೆಗಾರರನ್ನಾಗಿ ಆರಿಸಿಕೊಂಡಿದ್ದು ಅಲ್ಲಿನ ಸ್ಥಳೀಕರ ಸಂಕಷ್ಟಗಳನ್ನು ಅರಿತು ಪರಿಹಾರ ಹುಡಕಬಲ್ಲ ಸ್ಥಳೀಯ ಜನರನ್ನು ಸೇರಿಸಿಕೊಂಡಿಲ್ಲ. ಈ ಸಂಘಟನೆಗಳ ರಚನೆಯಲ್ಲಿ ಇದೊಂದು ಗಂಭೀರವಾದ ಲೋಪವಾಗಿದೆ. ಕಾಲಾನಂತರದಲ್ಲಿ ಅಲ್ಲಿನ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುವಂಥ ಬುಡಕಟ್ಟು ನಾಯಕತ್ವದ ಕೊರತೆಯುಂಟಾಗುವುದರಲ್ಲಿ ಸಂಶಯವಿಲ್ಲ.

ಏಳನೆಯ ಅಧ್ಯಾಯವು ಬುಡಕಟ್ಟು ಅಭಿವೃದ್ಧಿಯ ವ್ಯಾಪ್ತಿ ಹಾಗೂ ಮಿತಿಯನ್ನು ಚರ್ಚಿಸುತ್ತದೆ. ಏನ್‌. ಜಿ. ಓ. ಗಳು, ಸರ್ಕಾರಿ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನೆರೆಹೊರೆಯ ಗ್ರಾಮಸ್ಥರ ಅಭಿಪ್ರಾಯವನ್ನು ಪ್ರಮುಖವಾಗಿ ಕಾಣಿಸಲಾಗಿದೆ. ಇದರಲ್ಲಿ ವ್ಯಕ್ತವಾಗಿರುವಂಥ ಅಭಿಪ್ರಾಯಗಳು ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತವೆ; ಹಾಗೆಯೇ ಅರಣ್ಯ ಇಲಾಖೆಯ ಸಿಬ್ಬಂದಿಯ ಬಗೆಗಿನ ಗುಮಾನಿ ಹಾಗೂ ಅವಿಶ್ವಾಸವನ್ನು ಶೃತಪಡಿಸುತ್ತವೆ.

ಆರನೇ ಅಧ್ಯಾಯವು ಸರ್ಕಾರ ಆರಂಭಿಸಿರುವ ಹಲವು ಯೋಜನೆಗಳ ಕುರಿತು ಬುಡಕಟ್ಟು ಜನರು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಒಳಗೊಂಡಿದೆ. ಎನ್.ಜಿ.ಓ. ಸಂಸ್ಥೆಗಳು ಸರ್ಕಾರದ ಯೋಜನೆಗಳ ಬಗ್ಗೆ ಬುಡಕಟ್ಟು ಜನರ ಗಮನವನ್ನು ಸೆಳೆಯುವಲ್ಲಿ ಅತ್ಯಂತ ಗಣನೀಯ ಪಾತ್ರವನ್ನು ವಹಿಸಿವೆ; ಇಲ್ಲದಿದ್ದರೆ ಆ ಕಾರ್ಯಕ್ರಮಗಳೆಲ್ಲ ಕಾಗದದ ಮೇಲೆ ಉಳಿದುಬಿಡುತ್ತಿದ್ದುದರಲ್ಲಿ ಸಂಶಯವಿಲ್ಲ. ಕಲ್ಯಾಣ ಯೋಜನೆಗಳ ಬಗ್ಗೆ ಬುಡಕಟ್ಟು ಜನರ ಗಮನ ಸೆಳೆಯುವಲ್ಲಿ ಏನ್‌. ಜಿ. ಓ. ಗಳು ಪರಿಣಾಮಕಾರಿಯಾದ ಪಾತ್ರ ವಹಿಸಿವೆ.

ಬುಡಕಟ್ಟು ಜನರು ಅರಣ್ಯ ಇಲಾಖೆಯ ಕಾನೂನು ಕಟ್ಟಳೆಯ ಬಗೆಗೂ ಕೂಡ ಬಹಳ ನಿಷ್ಠುರವಾಗಿದ್ದಾರೆ. ಕಠಿಣವಾದ ಸರ್ಕಾರಿ ಕಾನೂನುಗಳು ಬುಡಕಟ್ಟು ಜನರನ್ನು ಅವರ ಜಾಗದಿಂದ ಒಕ್ಕಲೆಬ್ಬಿಸಿವೆಯಲ್ಲದೆ ಅವರ ಜೀವನ ನಿರ್ವಹಣೆಗೆ ಯಾವ ಪರ್ಯಾಯ ವ್ಯವಸ್ಥೆಯೂ ಮಾಡಿಲ್ಲ. ಅರಣ್ಯ ಇಲಾಖೆಯವರು ಕೂತರೆ ನಿಂತರೆ ತಮ್ಮನ್ನು ಚಿತ್ರಹಿಂಸೆಗೆ ಒಳಪಡಿಸುತ್ತಿರುವುದಾಗಿ ಬುಡಕಟ್ಟು ಜನರು ತಮ್ಮ ಅಳನ್ನು ವ್ಯಕ್ತಪಡಿಸಿದ್ದಾರೆ.

ಕೊನೆಯ ಅಧ್ಯಾಯದಲ್ಲಿ ಬುಡಕಟ್ಟು ಜನರ ಸ್ಥಿತಿ, ಮೀಸಲಾತಿ, ರಾಜಕೀಯ ಇಚ್ಛಾಶಕ್ತಿಯ ಕೊತರೆ, ಬಹುಸಂಖ್ಯೆಯಲ್ಲಿ ಬುಡಕಟ್ಟು ಜನರಲ್ಲದವರು ಆ ಗುಂಪಿಗೆ ಸೇರ್ಪಡೆಯಾಗಿರುವುದು – ಇದನ್ನು ಕುರಿತು ಚರ್ಚಿಸಲಾಗಿದೆ, ಮೀಸಲಾತಿ ಸೌಲಭ್ಯವನ್ನು ಪಡೆಯಲು ಬುಡಕಟ್ಟೇತರರು ಬುಡಕಟ್ಟು ಪಟ್ಟಿಗೆ ಸೇರಿಕೊಳ್ಳಲು ನಾನಾ ತರಹದ ಒತ್ತಡವನ್ನು ಹೇರುವುದು ಗಮನಕ್ಕೆ ಬಂದಿದೆ. ನಿಜವಾಗಿ ಬುಡಕಟ್ಟು ಜನಾಂಗಕ್ಕೆ ಸೇರಿದವರಿಗೆ ಇದರಿಂದ ತೊಂದರೆಯಾಗುತ್ತದೆ

ಎನ್.ಜಿ.ಓ.ಗಳು ಸ್ವಯಂ ಸೇವ ಸಂಘಟನೆಗಾಳಾಗಿರುವುದರಿಂದ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯವಾಗುವಂಥ ‘ಆಚಾರ ಸಂಹಿತೆ’ ಅವರಿಗೆ ಅನ್ವಯವಾಗುವುದಿಲ್ಲ. ಆದರೆ ಯಾವುದೇ ಸ್ವಯಂ ಸೇವಾ ಸಂಸ್ಥೆಯ ಚಟುವಟಿಕೆಗಳನ್ನು ಕಾಲದಿಂದ ಕಾಲಕ್ಕೆ ಮೌಲ್ಯಮಾಪನ ಮಾಡಬೇಕಾದ ಆಗತ್ಯವಿರುತ್ತದೆ. ದಾನಿಗಳಿಂದ ಸಹಾಯ ಪಡೆಯುವುದರ ಜೊತೆಗೆ ವಿದೇಶೀ ಮೂಲಗಳಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಹಾಯ ಪಡೆಯುವಂಥ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರ ಹಾಗೂ ಸಾರ್ವಜನಿಕರಿಗೆ ಲೆಕ್ಕ ನೀಡುವಂತಿರಬೇಕು. ಪ್ರಸ್ತುತ ಅನೇಕ ತರಹದ ಎನ್.ಜಿ.ಓ.ಗಳು ಕಾರ್ಯಪ್ರವೃತ್ತವಾಗಿವೆ. ಕೆಲವು ತಾವು ಆಯ್ಕೆಮಾಡಿಕೊಂಡಿರುವ ಕ್ಷೇತ್ರದಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತಿವೆ, ಇನ್ನು ಕೆಲವು ಸಂಸ್ಥೆಗಳು ಎತ್ತರದಲ್ಲಿ ಕುಳಿತು ಜನರಿಗೆ ನಿಲುಕದಂತೆ ದೂರವಾಗಿವೆ. ಇಂಥ ಸಂಸ್ಥೆಗಳನ್ನು ಕಠಿಣ ಪರೀಕ್ಷೆಗೆ ಗುರಿಪಡಿಸಬೇಕು ಹಾಗೂ ರದ್ದುಪಡಿಸಬೇಕು.

* * *