ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರತವಾಗಿರುವ ಸ್ವಯಂ ಸೇವಾ ಸಂಸ್ಥೆಗಳು ಎಷ್ಟಿವೆ ಎಂಬುದರ ಬಗೆಗೆ ನಿಖರವಾದ ಮಾಹಿತಿ ಇಲ್ಲ. ಇವುಗಳಲ್ಲಿ ಅನೇಕ ನೋಂದಾಯಿತ ಸಂಸ್ಥೆಗಳಾಗಿದ್ದರೂ ಸಹ ಪರಸ್ಪರ ಅನುಕೂಲಕ್ಕಾಗಿ ಇವು ಮಾಹಿತಿಯಿಂದ ಅನೌಪಚಾರಿಕ ಕೇಂದ್ರದಲ್ಲಿ ಕ್ರೋಢಿಕರಿಸುತ್ತವೆಯೆಂಬ ಗ್ಯಾರಂಟಿಯಿಲ್ಲ. ಯವಾಗಲೋ ಒಮ್ಮೆ ಸಂಪರ್ಕಾ ಮತ್ತು ಸಂವಾದಲ್ಲಿ ತೊಡಗುತ್ತವೆಯಾದರೂ ಸ್ವಯಂ ಸೇವಾ ಸಂಘಟನೆಗಳು ತಮ್ಮಷ್ಟಕ್ಕೆ ತಾವು ಕೆಲಸ ಮಾಡುವ ಸಂದರ್ಭಗಳೇ ಹೆಚ್ಚು.

ಸ್ವಯಂ ಸೇವಾ ಸಂಸ್ಥೆಗಳು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಅಥವಾ ಸಮಾನಮನಸ್ಕರಾದ ಒಂದು ಸಣ್ಣ ಗುಂಪಿನಿಂದ ಪ್ರಾರಂಭವಾಗುತ್ತವೆ. ಸ್ಥಳ ಹಾಗೂ ಸಮಸ್ಯೆಯ ಚಹರೆಯು ಅವರದೇ ಆಯ್ಕೆಯಾಗಿರುತ್ತದೆ. ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಸಂಘಟನೆಗಳು ಸಾಮಾನ್ಯವಾಗಿ ನಗರ ಪ್ರದೇಶ ಬಡವರು, ಕೊಳೆಗೇರಿಗಳು, ಮನೆಗೆಲಸದವರು, ಕುಡಿತ, ಲೈಂಗಿಕ ಅಪರಾಧಗಳು, ಅಪರಾಧ, ಪರಿಸರ ಮುಂತಾದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಿತ್ತವೆ. ಅವುಗಳಲ್ಲಿ ಕೆಲವು ಗ್ರಾಹಕರ ಸಮಸ್ಯೆಗಳು, ಮಾನವ ಹಕ್ಕುಗಳ ಉಲ್ಲಂಘನೆ, ನಾಗರಿಕ ಹಕ್ಕುಗಳು ಹಾಗೂ ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸುತ್ತವೆ.

ಗ್ರಾಮಾಂತರ ಪ್ರದೇಶಗಳಲ್ಲಿ ಸಂಘಟನೆಗಳು ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಇತ್ತೀಚೆಗೆ ಪರಿಸರದ ಅಂಶಗಳು, ದುರ್ಬಲವರ್ಗಗಳ ಶೋಷಣೆ, ಭೂಮಿಗೆ ಸಂಬಂಧಿಸಿದ ಪ್ರಕರಣಗಳು, ಜಾತಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಸಮಸ್ಯೆಗಳು, ಮಹಿಳೆಯರ ಸ್ಥಾನಮಾನ ಹಾಗೂ ಪಾತ್ರದ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತವೆ. ಕುಡಿತ ಸರ್ವೇಸಾಮಾನ್ಯವಾದ ಸಮಸ್ಯೆಯಾಗಿದ್ದು ದಕ್ಕುವ ಅಲ್ಲ ವರಮಾನವು ಪೋಲಾಗುವುದರಿಂದ ಇದು ಗಂಡ -ಹೆಂಡತಿಯ ಜಗಳ ಹಾಗೂ ಬಾಲಕಾರ್ಮಿಕರಿಗೆ ಎಡೆಮಾಡಿಕೊಡುವ ಸಂಭವವೇ ಹೆಚ್ಚು, ಹಾಗಾಗಿ ಬಾಲ ಕಾರ್ಮಿಕರ ಬಗ್ಗೆಯೂ ಕೆಲಸ ಮಾಡುತ್ತಿವೆ.

ನಗರ ಹಾಗೂ ಗ್ರಾಮಾಂತರದ ಸಮಸ್ಯೆಗಳಲ್ಲಿರುವ ಭಿನ್ನತೆಯಿಂದಾಗಿ ಸಂಘಟನೆಗಳು ಎಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎಂಬ ಆಯ್ಕೆಗೆ ಅನುಕೂಲವಾಗುವುದು. ನಗರ ಪ್ರದೇಶಗಳಲ್ಲಿ ಪರಿಹಾರಾರ್ಥಿಗಳನ್ನು ಅತ್ಯಲ್ಪ ಸಮಯದಲ್ಲಿ ಒಂದು ಕಡೆ ಸೇರಿಸಲು ಅನುಕೂಲವಾಗುವುದು. ಹಾಗೆಯೇ ಪರಿಹಾರಕ್ಕಾಗಿ ಸರ್ಕಾರಿ ಮತ್ತು ಅರೆ ಸರ್ಕಾರಿ ಅಧಿಕಾರಿಗಳಿಗೆ ಅಹವಾಲು ನೀಡಲು ಸಹಾಯವಾಗುವುದು ಹಾಗೂ ಸಂಪರ್ಕ, ಸಾರಿಗೆಗೂ ಸುಲಭವಾಗುವುದು. ಅಪರೂಪಕ್ಕೆ ಯಾವುದಾದರೂ ಒಂದು ಉದ್ದೇಶಕ್ಕೆ ಸಹಾಯ ಹಣ ಎತ್ತುವುದಕ್ಕೂ ಅನುಕೂಲ.

ಇದಕ್ಕೆ ವ್ಯತಿರಿಕ್ತವಾಗಿ, ಆರಂಭದಲ್ಲಿ ಗ್ರಾಮಾಂತರದಲ್ಲಿ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಬಹಳ ಕಾಲ ವ್ಯಯವಾಗುವುದು. ಸಂಘಟಕರು ಜನರಿಂದ ಸ್ವೀಕಾರ ಪಡೆಯುವ ಮೊದಲು ಅವರ ವಿಶ್ವಾಸ ಗಳಿಸಬೇಕಾಗುತ್ತದೆ. ಒಮ್ಮೆ ಅವರು ಒಪ್ಪಿದರೆ ಅದೇ ಸದ್ಭಾವನೆ ಮುಂದುವರಿದು ಸಂಬಂಧ ಹೆಚ್ಚು ಅನೌಪಚಾರಿಕವಾಗಿರುತ್ತದೆ ಮತ್ತು ನಗರ ಪ್ರದೇಶದ ಸಂಬಂಧಕ್ಕಿಂತ ಭಿನ್ನವಾಗಿರುತ್ತದೆ. ಜೊತೆಗೆ ಸಂಪರ್ಕ ಮತ್ತು ಸಾರಿಗೆಗೆ ಕಷ್ಟವಾಗುತ್ತದೆ; ಸರ್ಕಾರಿ ಹಾಗೂ ಅರೆ ಸರ್ಕಾರಿ ಅಧಿಕಾರಿಗಳೊಡನೆ ಸಂಪರ್ಕ ಹೊಂದುವುದೂ ಕಠಿಣತರವಾದ ಕೆಲಸವಾಗುತ್ತದೆ. ಕೆಲವು ವೇಳೇ ಗ್ರಾಮೀಣ ಜನರು ಶ್ರಮದಾನದಲ್ಲಿ ತೊಡಗಬಹುದು ಹಾಗೂ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು/ ಸಹಕಾರ ನೀಡಬಹುದು. ಆದರೆ ಜಾತಿ ಮತ್ತು ಕೋಮಿನ ಸಂಗತಿಗಳು ನಿರ್ಬಂಧ ಒಡ್ಡುತ್ತವೆ. ಹಣ ಸಹಾಯ ಕೇಳಿದರೆ ಕೋರಿಕೆ ಈಡೇರದಿರುವ ಸಂಭವವೇ ಹೆಚ್ಚು. ಏಕೆಂದರೆ ಶ್ರೀಮಂತನೂ ಸಹ ಬಿಚ್ಚು ಮನಸಿನಿಂದ ದಾನ ಮಾಡುವುದಿಲ್ಲ.

ಆರಂಭದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಯಾವ ತರಹ ಸಮಸ್ಯೆಗಳನ್ನು ಎದುರಿಸುತ್ತವೆ ಎಂಬುದರ ಒಂದು ಮಾದರಿ ಮಾತ್ರ ಇದು. ಹೆಚ್ಚೂ ಕಡಿಮೆ ಎಲ್ಲ ಸ್ವಯಂ ಸೇವಾ ಸಂಸ್ಥೆಗಳೂ ಭಾರತ ಹಾಗೂ ವಿದೇಶೀ ಏಜೆನ್ಸಿಗಳಿಂದ ಹಣ ಸಹಾಯ ಪಡೆಯುತ್ತವೆ. ಅವರ ಚಟುವಟಿಕೆಗಳನ್ನು ನಡೆಸುವುದಕ್ಕೆ ಹಾಗೂ ವಿಭಿನ್ನ ವಲಯಗಳಲ್ಲಿ ವಿಸ್ತರಿಸುವುದಕ್ಕೆ ಬೇಕಾಗುವ ಖರ್ಚನ್ನು ಸರಿದೂಗಿಸುವುದಕ್ಕೆ ಇದರಿಂದ ಸಾಧ್ಯವಾಗುತ್ತದೆ.

ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳಿಗಿಂತ ಬೇರೆ ತರಹದ ಸಮಸ್ಯೆಗಳು ಬುಡಕಟ್ಟು ಜನರ ಪಾಲಿಗೆ ಇರುತ್ತವೆ. ಕರ್ನಾಟಕದಲ್ಲಿ ೪-೫ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿರುವಂಥ ಕೆಲವು ಬುಡಕಟ್ಟುಗಳಿವೆ. ಮೈಸೂರು ಜಿಲ್ಲೆಯಲ್ಲಿ ಕೆಲವು ಬುಡಕಟ್ಟುಗಳು ಸಾಂದ್ರವಾಗಿವೆ. ಹಾಗೆಯೇ ಅವುಗಳ ನಡುವೆ ಕೆಲಸ ಮಾಡುತ್ತಿರುವಂಥ ಸ್ವಯಂ ಸೇವಾ ಸಂಸ್ಥೆಗಳೂ ಸಹ ಇವೆ. ಬಹುತೇಕ ಬುಡಕಟ್ಟು ಜನರು ದಟ್ಟಕಾಡುಗಳು ಹಾಗೂ ಗುಡ್ಡಗಾಡಿನಿಂದ ದೂರ ಜೀವಿಸತೊಡಗಿದ್ದಾರೆ. ಕಾಡಿನ ಪ್ರದೇಶಕ್ಕೆ ಸಂಬಂಧಿಸಿದಂತೆ ಸರ್ಕಾರದ ಕಾನೂನು ಕಟ್ಟಳೆಗಳು ಬಿಗಿಯಾಗಿರುವುದು ಬುಡಕಟ್ಟು ಜನರು ಬಯಲು ಪ್ರದೇಶಗಳಿಗೆ ವಲಸೆ ಹೋಗಲು ಕಾರಣವಾಗಿರಬೇಕು. ಕೆಲವು ಗುಂಪುಗಳು ಕಾಡಂಚಿನಲ್ಲಿ ಮತ್ತು ಗುಡ್ಡಗಾಡಿನ ಪ್ರದೇಶಗಳಲ್ಲಿ ವಾಸಮಾಡುತ್ತಿವೆಯಾದರೂ ದಟ್ಟ ಕಾಡಿನ ಮಧ್ಯೆ ವಾಸಿಸುವ ಬುಡಕಟ್ಟುಗಳು ಇಲ್ಲವೇ ಇಲ್ಲ ಎನ್ನಬಹುದು.

ಮೈಸೂರು ಜಿಲ್ಲೆಯ ಬುಡಕಟ್ಟು ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಎನ್.ಜಿ.ಓ. ಗಳೆಂದರೆ ವಿವೇಕಾನಂದ ಗಿರಿಜನರ ಕಲ್ಯಾಣ ಕೇಂದ್ರ, ಪೆಡೀನಾ ವಿಕಾಸ, ಮೈರಾಡಾ, ಡೀಡ್‌, ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ಇತ್ಯಾದಿ. ಬಡತನ, ಅನಕ್ಷರತೆ, ರೋಗ ಇತ್ಯಾದಿಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಸಾಮಾನ್ಯವಾದರೆ, ಬುಡಕಟ್ಟು ಜನರಿಗೆ ವಿಶೇಷವಾದಂಥ ಕೆಲವು ಸಮಸ್ಯೆಗಳಿವೆ. ಇಲ್ಲಿಯ ತನಕ ಅವರ ಅರ್ಥಿಕ ಚಟುವಟಿಕೆಗಳು ಆಹಾರ ಸಂಗ್ರಹಣೆ, ಬೇಟೆ, ಮೀನು ಹಿಡಿಯುವುದು, ಜೇನು ಸಂಗ್ರಹಣೆ ಇತ್ಯಾದಿ ಕಸುಬುಗಳಿಗೆ ಸೀಮಿತವಾಗಿದ್ದವು. ಸರ್ಕಾರದ ಬಿಗಿ ಕಾನೂನು ಕ್ರಮದಿಂದಾಗಿ ಈ ಕಸುಬು ಹಿಡಿಯುವಲ್ಲಿಯೂ ಕೂಡ ಅವರು ತುಂಬಾ ತೊಂದರೆ ಅನುಭವಿಸಬೇಕಾದಂಥ ಪರಿಸ್ಥಿತಿಯಿತ್ತು.

ಕಳೆದ ಎರಡು ದಶಕಗಳಲ್ಲಿ ಕರ್ನಾಟಕದಾದ್ಯಂತ ಅಸ್ತಿತ್ವಕ್ಕೆ ಬಂದ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಅನೇಕ ಜಿಲ್ಲೆಗಳಲ್ಲಿ ಕಾರ್ಯಪ್ರವೃತ್ತವಾಗಿವೆ. ಈ ಸ್ವಯಂ ಸೇವಾ ಸಂಸ್ಥೆಗಳು ಶಿಕ್ಷಣ, ವೈದ್ಯಕೀಯ/ ಅರೋಗ್ಯ ಸೇವೆ, ಗ್ರಾಮೀಣಾಭಿವೃದ್ಧಿ, ಪರಿಸರ ವಿಜ್ಞಾನ ಹಾಗೂ ಪರಿಸರ, ಭೂ- ಆಧಾರಿತ ಸಮಸ್ಯೆಗಳು, ಜನರ ಜೀವನ ಕ್ರಮದಲ್ಲಿ ಅಭಿವೃದ್ಧಿ ಉಂಟುಮಾಡುವ ದಿಶೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ. ಅನೇಕ ಸ್ಥಳಗಳಲ್ಲಿ ಸ್ಥಳೀಯ ಜನರು ಕ್ರಮೇಣ ಸಕ್ರಿಯವಾಗಿ ಭಾಗವಹಿಸತೊಡಗಿದ್ದಾರೆ. ಇಂಥ ಕಡೆ ಸಂಘಟನೆಗಳು ಮಾರ್ಗದರ್ಶನ ವಿಶೇಷ ಕೌಶಲ್ಯ ಹಾಗೂ ಮೇಲ್ವಿಚಾರಣೆಯನ್ನು ಒದಗಿಸಿವೆ.

ಸರ್ಕಾರವು ಸ್ವಯಂ ಸೇವಾ ಸಂಸ್ಥೆಗಳನ್ನು ಸರ್ಕಾರರೇತರ ಸಂಘಟನೆಗಳಾಗಿ ಕಾಣುತ್ತಿದ್ದು ಸದರಿ ಸಂಸ್ಥೆಗಳು ಜನರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಸರ್ಕಾರದ ಸೇವೆಗೆ ಪೂರಕವಾಗಿ ದುಡಿಯುತ್ತಿವೆ. ಸರ್ಕಾರಿ ಆಡಳಿತಶಾಹಿ ಬಡವರ ಸ್ಥಿತಿಗತಿಗಳ ಉತ್ತಮಿಕೆಗಾಗಿ ಪರಿಣಾಮಾಕಾರಿಯಾಗಿ ಪ್ರಯತ್ನ ನಡೆಸಲಿಲ್ಲ; ಲಾಗಾಯ್ತಿನ ಸಮಸ್ಯೆಗಳಿಗಾಗಲಿ, ಹೊಸದಾಗಿ ತಲೆಯೆತ್ತಿರುವ ಸಮಸ್ಯೆಗಳಿಗಾಗಲೀ ಪರಿಹಾರ ಹುಡುಕುವ ಬದಲು ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮುಳ್ಳಾಗಿ ಸರ್ಕಾರಿ ಕಾರ್ಯಕ್ರಮಗಳನ್ನು ಕುಂಠಿತಗೊಳಿಸಿರುವುದು ಸುಸ್ಪಷ್ಟ. ಈಗ ಸರ್ಕಾರಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಒಂದು ಪರ್ಯಾಯ ನಿಯೋಗಿಯಾಗಿ ಕಾಣಿಸಿಕೊಂಡಿವೆ. ಸ್ವಯಂ ಸೇವಾ ಸಂಸ್ಥೆಗಳ ಬೇರೆ ಬೇರೆ ಚಟುವಟಿಕೆಗಳಿಗೆ ಹಣಕಾಸಿನ ಸಹಾಯವೂ ದೊರಕುತ್ತಿದೆ. ಫ್ರಾನ್ಸ್, ಜರ್ಮನಿ, ಯು. ಎಸ್‌. ಕೆ. ಯು. ಎಸ್‌. ಎ., ವಿಶ್ವಬ್ಯಾಂಕ್‌ಮುಂತಾದವು ವಿಶೇಷವಾದ ಕಾರ್ಯಕ್ರಮಗಳಿಗೆ ಪ್ರಮುಖವಾದ ಮೂಲಗಳಾಗಿವೆ. ಹಣ ಸಹಾಯ ಪಡೆಯುತ್ತಿರುವ ಎನ್.ಜಿ.ಓ.ಗಳು ಲೆಕಪತ್ರಗಳನ್ನು ಒಪ್ಪಿಸುತ್ತಾ ಪ್ರಗತಿ ಪರೀಶೀಲನೆಗೆ ಒಳಗಾಗಬೇಕಾಗುತ್ತದೆ.

ಈಗಾಗಲೇ ತಿಳಿಸಿರುವಂತೆ ಪ್ರಸ್ತುತ ಅಧ್ಯಯನವು ಮೈಸೂರು ಜಿಲ್ಲೆಯಲ್ಲಿ ಕಾರ್ಯನಿರತವಾಗಿರುವ ಮೂರು ಸ್ವಯಂ ಸೇವಾ ಸಂಸ್ಥೆಗಳ ಕುರಿತದ್ದಾಗಿದೆ. ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವು ಯಳಂದೂರು ತಾಲೂಕು ಬಿಳಿಗಿರಿರಂಗನ ಬೆಟ್ಟದಲ್ಲಿ ಸ್ಥಾಪನೆಗೊಂಡಿದೆ. ಈ ಭಾಗದಲ್ಲಿ ಸೋಲಿಗ ಬುಡಕಟ್ಟಿನ ಜನರು ವಾಸವಾಗಿದ್ದಾರೆ. ಈ ಸಂಸ್ಥೆಯನ್ನು ಸ್ಥಾಪಿಸಿರುವವರು ಡಾ. ಎಚ್‌, ಸುದರ್ಶನ್‌. ಇವರು ವೈದ್ಯರು ಮತ್ತು ಬೆಂಗಳೂರು ನಗರಕ್ಕೆ ಸೇರಿದವರು. ಈ ಸಂಸ್ಥೆಯ ಹೆಸರೇ ಸೂಚಿಸುವಂತೆ ಮೈಸೂರಿನ ರಾಮಕೃಷ್ಣ ಆಶ್ರಮದೊಡನೆ ಇದರ ಸಂಬಂಧವಿದೆ. ಡಾ. ಎಚ್‌. ಸುದರ್ಶನ್‌. ಆಗಿಂದಾಗ್ಗೆ ಆಶ್ರಮಕ್ಕೆ ಹೋಗಿಬರುತ್ತಾರೆ.

ತಮ್ಮ ೧೨ನೆಯ ವರ್ಷದ ಬಾಲ್ಯದಲ್ಲಿ ಅನುಭವಿಸಿದ ದುರಂತವು ಸುದರ್ಶನ್‌ಜೀವನಕ್ಕೆ ಹೊಸ ತಿರುವನ್ನು ನೀಡಿತು. ಹೃದಯಾಘಾತದಿಂದ ಅವರ ತಂದೆ ಹನುಪ್ಪ ರೆಡ್ಡಿಯವರು ಹಠಾತ್ತನೆ ಅಸುನೀಗಿದಾಗ ಸುದರ್ಶನ್‌ತಾನು ಮುಂದೆ ಒಬ್ಬ ವೈದ್ಯನಾಗಿ ರೋಗಿಗಳ ದುಃಖ ನಿವಾರಣೆ ಮಾಡಬೇಕೆಂದು ಸಂಕಲ್ಪ ಮಾಡಿದರು. ಮುಂದೆ ವೈದ್ಯಕೀಯ ವಿದ್ಯಾರ್ಥಿಯಾದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳ ಪ್ರಭಾವಕ್ಕೆ ಒಳಗಾದರು. ಆರಂಭದಲ್ಲಿ ಮಠದ ಸನ್ಯಾಸಿಯಾಗಬೇಕೆಂಬ ಹಂಬಲವಿತ್ತು; ಆದರೆ ಕನಸು ನನಸಾಗಲಿಲ್ಲ. ವಿವೇಕಾನಂದರ ಸಿದ್ಧಾಂತಕ್ಕೆ ಅವರು ಒಲಿದ ಕಾರಣದಿಂದ ದೇಶದ ನಾನಾ ಭಾಗಗಳಿಗೆ ಅವರು ಹೋಗುವಂತಾಯಿತು. ಅವರ ತಿರುಗಾಟ ಬಿಳಿಗಿರಿರಂಗನ ಬೆಟ್ಟದಲ್ಲಿ ನಿಂತಿತು. ಸೋಲಿಗರ ಸೇವೆಯನ್ನು ತ್ರಿಕರಣಪೂರ್ವಕವಾಗಿ ಮಾಡಲು ಸುದರ್ಶನ್‌ನಿರ್ಧರಿಸಿದರು.

ಸುದರ್ಶನ್‌ಛಲ ಬಿಡದ ವಿಕ್ರಮನಂತೆ ಆ ಜನರ ಸೇವೆಗೆ ಬದ್ಧರಾದ್ದರಿಂದ ಅವರ ಮನವೊಲಿಸಿ ಅವರ ನಡುವೆ ನೆಲೆ ನಿಲ್ಲುವಂತಾಯಿತು. ಆರಂಭದಲ್ಲಿ ಸೋಲಿಗರೊಡನೆ ಸಂಪರ್ಕ ಸಾಧಿಸುವುದು ಸುಲಭವಾಗಿರಲಿಲ್ಲ. ಅದಕ್ಕೆ ಕಾರಣಗಳು ಹಲವಿವೆ. ಆರೋಗ್ಯ ಚಿಕಿತ್ಸೆಯ ಕೆಲಸವು ತರುಣ ವೈದ್ಯರನ್ನು ೧೯೭೯ ನೇ ಇಸವಿಯಲ್ಲಿ ಬಿಳಿಗಿರಿರಂಗನ ಬೆಟ್ಟಕ್ಕೆ ಕರೆದು ತಂದಿತು. ರೋಗಿಗಳನ್ನು ಪತ್ತೆ ಹಚ್ಚುವುದೇ ಒಂದು ಸಾಹಸ ಕಾರ್ಯವಾಯಿತು. ಅರಣ್ಯ ಇಲಾಖೆಯವರು ಪೋಡುಗಳ ಮತ್ತು ಅವುಗಳ ನೆಲೆಗಳ ಬಗ್ಗೆ ನೀಡಿರುವ ಮಾಹಿತಿಯು ಕನಿಷ್ಠ ಪಕ್ಷ ಎರಡು ದಶಕಗಳಷ್ಟು ಹಳೆಯದು. ಪ್ರತಿ ಕೆಲವು ವರ್ಷಳಿಗೊಮ್ಮೆ ಸೋಲಿಗರು ತಾವು ಬೀಡುಬಿಟ್ಟ ಜಾಗದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವ ಪರಿಪಾಠವಿರುವುದರಿಂದ ಪೋಡುಗಳನ್ನಾಗಲಿ, ಸೋಲಿಗರನ್ನಾಗಲಿ ಹುಡುಕುವುದು ಕಷ್ಟ.

ಹಾಗಾಗಿ ಡಾಕ್ಟರರು ಹೊಸ ಮಾರ್ಗವನ್ನು ಅನ್ವೇಷಿಸಿ ಅದರ ಆಧಾರದ ಮೇಲೆ ಬುಡಕಟ್ಟಿನವರ ಪೋಡುಗಳನ್ನು ಹುಡುಕುವ ಒತ್ತಡಕ್ಕೊಳಗಾದರು. ಬಿಳಿಗಿರಿರಂಗನ ಬೆಟ್ಟದಲ್ಲಿ ಅಲ್ಲಲ್ಲಿ ಚೆದುರಿ ಹೋಗಿರುವ ಪೋಡುಗಳನ್ನು ಹುಡುಕಲು ಸ್ಥಳೀಯ ಬುಡಕಟ್ಟಿನ ಜನರೇ ಸಹಾಯ ಮಾಡಿದರು. ಆದರೆ ಕಾಲ್ನಡಿಗೆಯಲ್ಲಿ ಆ ಸ್ಥಳಗಳನ್ನು ತಲುಪುವ ಕ್ರಿಯೆ ಅಸಾಧ್ಯವೂ, ಅಪಾಯಕಾರಿಯೂ ಆಗಿತ್ತು. ಪಕ್ಕಾ ರಸ್ತೆಯಿಲ್ಲದ ಬೆಟ್ಟದಲ್ಲಿ ಪೋಡುಗಳನ್ನು ತಲುಪಲು ಇದ್ದ ಏಕೈಕ ಮಾರ್ಗಗಳೆಂದರೆ ಕಾಲುದಾರಿಗಳು ಮಾತ್ರ. ಆನೆ, ಚಿರತೆ, ಹಾವುಗಳಿಂದ ತುಂಬಿದ್ದ ಕಾಡು ಒಂದು ತರಹದಲ್ಲಿ ಅಭೇದ್ಯವಾಗಿತ್ತು. ಆದರೂ ತಾನು ಕೈಕೊಂಡ ಕಾರ್ಯವನ್ನು ನೆರವೇರಿಸುವ ಕೆಚ್ಚೆದೆಯಿಂದ ಸುದರ್ಶನ್‌ ಅಚಲವಾಗಿದ್ದರು.

ಡಾ. ಸುದರ್ಶನ್‌ ಬಿಳಿಗಿರಿರಂಗನ ಬೆಟ್ಟ ಪ್ರದೇಶಕ್ಕೆ ಬಂದದ್ದು ೧೯೭೯ರಲ್ಲಿ, ಆದರೆ ವಿ.ಜಿ.ಕೆ.ಕೆ. ಸಂಘಗಳ ನೋಂದಣಿ ಕಾಯಿದೆಯ ಪ್ರಕಾರ ನೋಂದಣಿಯಾದದ್ದು ೧೯೮೧ರಲ್ಲಿ. ಸುದರ್ಶನ್‌ ಪ್ರಧಾನ ಕಾರ್ಯದರ್ಶಿ, ಕೊನೂರೇಗೌಡಾ ಎಂಬ ಸೋಲಿಗರ ವ್ಯಕ್ತಿ ಅಧ್ಯಕ್ಷ. ೧೯೭೯ -೮೧ರ ನಡುವಿನ ಮೂರು ವರ್ಷಗಳ ಅವಧಿ ಸುದರ್ಶನ್‌ರ ಪಾಲಿಗೆ ಬಹಳ ಬಿರುಸಿನ ಚಟುವಟಿಕೆಯ ಅವಧಿ. ಅದು ಅತ್ಯಂತ ಪ್ರಮುಖವೂ, ದುಸ್ತರವೂ ಆದ ಸನ್ನಿವೇಶ. ಬುಡಕಟ್ಟಿನವರ ಜೊತೆ ಸ್ನೇಹ ಸಂಪರ್ಕ ಬೆಳೆಸಿ ಅವರಿಂದ ಸ್ವೀಕಾರವಾಗಬೇಕು. ಬಹಳ ನಾಚಿಕೆ ಹಾಗೂ ಜಿಂಜರಿಕೆ ಸ್ವಭಾವದ ಸೋಲಿಗ ಜನರು ಅಪರಿಚಿತರೊಡನೆ ಸುಲಭವಾಗಿ ಬೆರೆಯುವ ಪರಿಪಾಠವಿಲ್ಲದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು.

ಡಾ. ಸುದರ್ಶನ್‌ ಆರಂಭಿಸಬೇಕೆಂದಿದ್ದ ಆರೋಗ್ಯ ಚಿಕಿತ್ಸಾ ಕೆಲಸ ಬುಡಕಟ್ಟು ಜನರಿಗೆ ಆಕರ್ಷಕವಾಗಿರಲಿಲ್ಲ. ಏಕೆಂದರೆ ಅವರು ತಮ್ಮದೇ ಆದ ಚಿಕಿತ್ಸಾ ಕ್ರಮವನ್ನು ಅನಿಸರಿಸುವವರು. ಏಕಾಕಕಿ ಅವನು ಅಲೋಪತಿ ಪದ್ಧತಿಯನ್ನು ಒಪ್ಪುವವರಾಗಿರಲಿಲ್ಲ. ತಲೆತಲಾಂತರದಿಂದ ಅವರು ಗಿಡಮೂಲಿಕೆ ಔಷಧಿಗೆ ಒಗ್ಗಿದ್ದವರು. ಹಾವುಕಡಿತದಿಂದ ಒಬ್ಬ ಸೋಲಿಗನನ್ನು ಬದುಕಿಸಿದ ಸಂದರ್ಭದಿಂದ ಸುದರ್ಶನ್‌ರ ಪ್ರಯತ್ನ ಯಶಸ್ವಿಯಾಯಿತು; ವಾಸ್ತವವಾಗಿ ಹಾವು ಕಚ್ಚಿದ ಜಾಗದಿಂದ ವಿಷವನ್ನು ಹೀರಿ ಉಗಿದು ತೋರಿಸಿದರು; ದಂಡು ಹುಳದ ಬಾಧೆಯಿಂದ ಬಳಲುತ್ತಿದ್ದ ರೋಗಿಯ ಕಾಯಿಲೆಯನ್ನು ಗುಣಪಡಿಸಿದರು; ತರುವಾಯ ವೈದ್ಯರಿಗೆ ಸೋಲಿಗರು ದಕ್ಕಿದರು, ಬಾಲಕಿಯದು ಇತಿಹಾಸ.

ತಾಲೂಕು ಕೇಂದ್ರವಾದ ಯಳಂದೂರಿನಲ್ಲಿ ಡಾ|| ಸುದರ್ಶನ್‌ರವರು ತಾತ್ಕಾಲಿಕವಾಗಿ ಹಾಕಿಕೊಂಡಿದ ಗುಡಿಸಲಿನ ಔಷಧಾಲಯದಲ್ಲಿ ತಮ್ಮ ವೈದ್ಯ ಕಸುಬಿಗೆ ಅಗತ್ಯವಾದಂಥ ಯಾವ ಸವಲತ್ತೂ ಅಲ್ಲಿ ಇರಲಿಲ್ಲ. ತಮ್ಮ ಸೇವೆಯನ್ನು ಸೋಲಿಗರ ಆರೋಗ್ಯವಲ್ಲದೆ ಇತರ ವಲಯಗಳಿಗೂ ವಿಸ್ತರಿಸಬೇಕೆಂಬ ಅವರ ಕನಸು ಕೂಡ ಇದ್ದಿತು. ಆ ಘಟ್ಟದಲ್ಲಿ ಅವರ ಆತ್ಮೀಯ ಸ್ನೇಹಿತರು, ಪರಿಚಿತರು ಅವರ ಸಹಾಯಕ್ಕೆ ಧಾವಿಸಿ ಬಂದರು. ಅವರ ಜೀವನ ನಿರ್ವಹಣೆಗೆ ಅವರ ಸ್ನೇಹಿತ ಜಿ. ಎಸ್‌. ಜಯದೇವ ಎಂಬುವವರು ನಿಯತವಾಗಿ ಕಳುಹಿಸುತ್ತಿದ್ದಂಥ ದೇಣಿಗೆ ತುಂಬಾ ಸಹಾಯಕ್ಕೆ ಬಂದಿತು. ಜಯದೇವ ಅವರು ಪ್ರಸ್ತುತ ತಬ್ಬಲಿ ಮಕ್ಕಳ ಶಿಕ್ಷಣಕ್ಕಾಗಿ ಚಾಮರಾಜನಗರದಲ್ಲಿ “ದೀನ ಬಂಧು” ಎಂಬ ಒಂದು ಸಂಸ್ಥೆಯನ್ನು ಸ್ಥಾಪಿಸಿ ನಡೆಸುತ್ತಿದ್ದಾರೆ. ಆಗ ಚಾಮರಾಜನಗರದ ಜೆ. ಎಸ್‌. ಎಸ್‌. ವಿದ್ಯಾಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಂಥ ಜಯದೇವ ಅವರು ಡಾ. ಸುದರ್ಶನ್‌ಅವರ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದರ ಜೊತೆಗೆ ಇತರರೂ ಸ್ವಪ್ರೇರಣೆಯಿಂದ ಸೇವೆಯಲ್ಲಿ ತೊಡಗಿದರು. ಹೀಗೆ ಒಂದು ಉದ್ದೇಶಕ್ಕೆ ಸಮರ್ಪಿಸಿಕೊಂಡ ಗೆಳೆಯರ ಗುಂಪೊಂದು ಬೆಂಬಲ ನೀಡಲಾಗಿ ವಿ.ಜಿ.ಕೆ.ಕೆ. ದೃಢವಾಗಿ ಸ್ಥಾಪನೆಗೊಂಡು ಆರೋಗ್ಯ, ಶಿಕ್ಷಣ ಹಾಗೂ ಸಮುದಾಯದ ಕೆಲಸಗಳಿಗೆ ತನ್ನ ಸೇವೆಯನ್ನು ವಿಸ್ತರಿಸಲು ಸಾಧ್ಯವಾಯಿತು. ಬುಡಕಟ್ಟು ಜನರ ಅಭಿವೃದ್ಧಿ ಕಾರ್ಯ ಅತ್ಯಂತ ಪ್ರಮುಖವಾದುದೆಂದು ಮನಗಾಣಲಾಯಿತು. ಈ ದಿಶೆಯಲ್ಲಿ ಮೊದಲ ಹೆಜ್ಜೆಯಾಗಿ ಯಳಂದೂರಿನ ತಮ್ಮ ಗುಡಿಸಿಲಿನಲ್ಲಿ ವಯಸ್ಕ ಸೋಲಿಗರಿಗೆ ಸಂಜೆ ತರಗತಿಗಳನ್ನು ನಡೆಸುವ ಮೂಲಕ ಅನೌಪಚಾರಿಕ ಶಿಕ್ಷಣ ನೀಡಲಾಯಿತು. ಅಲ್ಲಿಯತನಕ ಯಾವೊಬ್ಬ ಸೋಲಿಗನೂ ಶಾಲೆಯ ಮುಖವನ್ನೇ ಕಂಡಿರಲಿಲ್ಲ.

ಬುಡಕಟ್ಟು ಜನರ ಅಭಿವೃದ್ಧಿಗಾಗಿ ಇವರು ಕೈಗೊಂಡ ಪ್ರಯತ್ನದಿಂದ ಸ್ಫೂರ್ತಿಗೊಂಡ ಅವರ ಸ್ನೇಹಿತರು ಡಾ. ಸುದರ್ಶನ್‌ನರಿಗೆ ಜೊತೆಯಾಗಿ ಕೆಲಸ ಮಾಡಲು ನಿರ್ಧರಿಸಿದರಲ್ಲದೆ, ಇನ್ನು ಮುಂದೆ ಬಿಳಿಗಿರಿರಂಗನ ಬೆಟ್ಟವನ್ನೇ ತಮ್ಮ ಸೇವಾಕೇಂದ್ರವನ್ನಾಗಿಸಿಕೊಂಡರು. ಸುತ್ತಮುತ್ತಲ ಗ್ರಾಮ ಹಾಗೂ ಪಟ್ಟಣದ ಜನರು ನಿರಂತರವಾಗಿ ಸೋಲಿಗರನ್ನು ಶೋಷಣೆ ಮಾಡುತ್ತಾ ಬಂದಿದ್ದರು. ಹಾಗೆಯೇ ಅರಣ್ಯದ ಗುತ್ತಿಗೆದಾರರು, ಅರಣ್ಯ ಇಲಾಖೆಯ ಅಧಿಕಾರಿಗಳು ಇವರನ್ನು ವಿಧವಿಧವಾಗಿ ಹಿಂಸಿಸತೊಡಗಿದರು. ವಿ.ಜಿ.ಕೆ.ಕೆ.ಯ ಒಂದು ಪ್ರಮುಖವಾದ ಉದ್ದೇಶವೆಂದರೆ ಅವರ ಉಸಿರು ಕಟ್ಟಿಸುವ ನತದೃಟ್ಟ ಸ್ಥಾನದಿಂದ ಉದ್ಧರಿಸುವುದೇ ಆಗಿತ್ತು.

ಈ ಹಲವು ವರ್ಷಗಳಲ್ಲಿ ವಿ.ಜಿ.ಕೆ.ಕೆ. ಸೋಲಿಗರ ಅಗತ್ಯಗಳನ್ನು ಪೂರೈಸುವಂಥ ಹಲವು ವಲಯಗಳಿಗೆ ವಿಸ್ತರಿಕೊಂಡಿದೆ. ಸೇವಾ ವಲಯದ ಸಂಕ್ಷಿಪ್ತ ಚರಿತ್ರೆ ಈ ಮುಂದೆ ಸೂಚಿಸಿರುವಂತಿದೆ:

. ವಿ.ಜಿ.ಕೆ.ಕೆ. ಆರೋಗ್ಯ ಚಿಕಿತ್ಸಾ ಕಾರ್ಯಕ್ರಮವನ್ನು ಮುಂದುವರಿಸಿದೆ. ಹತ್ತು ಹಾಸಿಗೆಯ ಸರ್ವಸರಂಜಾಮಿನ ಒಂದು ಆಸ್ಪತ್ರೆಯಿದೆ; ಹೊರ ರೋಗಿ ಚಿಕಿತ್ಸಾಲಯ ಮತ್ತು ಇಡೀ ವಲಯಕ್ಕೆ ಒದಗುವಂಥ ಪ್ರಾಥಮಿಕ ಆಸ್ಪತ್ರೆಯಲ್ಲಿ ಒಂದು ಪ್ರಯೋಗಾಲಯವಿದೆ. ಈಗ ಸಂಚಾರೀ ವೈದ್ಯಕೀಯ ಸೇವೆಗಳೂ ಸಹ ಲಭ್ಯವಿವೆ. ಯಳಂದರೂ, ಚಾಮರಾಜನಗರ, ಕೊಳ್ಳೇಗಾಲ ತಾಲೂಕುಗಳ ಹಾಗೂ ನಂಜನಗೂಡು ತಾಲೂಕಿಗೂ ವಿಸ್ತರಿಸಿದಂಥ ಸಂಚಾರೀ ಸೇವೆ ದೂರ ದೂರದಲ್ಲಿ ನೆಲೆಸಿರುವ ಬುಡಕಟ್ಟು ನಿವಾಸಿಹಳಿಗೆ ಸಹಾಯಕವಾಗಿವೆ.

. ಉರಿವುತ, ಧನುರ್ವಾಯು, ಪೋಲೊಯೋ ಮತ್ತು ಕ್ಷಯರೋಗಗಳು ಮಕ್ಕಳಿಗೆ ಬಾರದಂತೆ ತಡೆಗಟ್ಟಲು ಚುಚುಮದ್ದು ಹಾಕುವ ವ್ಯವಸ್ಥೆಯು ಸಮುದಾಯ ಆರೋಗ್ಯ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಿದೆ.

  1. i) ಗ್ರಾಮ ಆರೋಗ್ಯ ಕಾರ್ಯಕರ್ತರು ಗ್ರಾಮಗಳಲ್ಲಿ ಕೆಲಸ ಮಾಡಲು ಪ್ರಾಥಮಿಕ ಆಸ್ಪತ್ರೆಯಲ್ಲಿ ತರಬೇತು ನೀಡಲಾಗುವುದು. ಆರೋಗ್ಯ ಶಿಕ್ಷಣ ಹಾಗೂ ಪ್ರಥಮ ಚಿಕಿತ್ಸೆಯನ್ನು ಹೇಳಿಕೊಡುವುದರ ಮೂಲಕ ಸಮುದಾಯ ಆರೋಗ್ಯ ಸಮಸ್ಯೆಗಳ ಪರಿಹಾರ ಹುಡುಕುವುದು ಸಾಧ್ಯ.
  2. ii) ಪಾರಂಪರಿಕವಾದ ಗಿಡಮೂಲಿಕಾ ಔಷಧಿಗಳ ಉಪಯೋಗ ಈಹ ಹೆಚ್ಚು ಹೆಚ್ಚು ಗಮನಕ್ಕೆ ಬರಿತ್ತಿದೆ. ಹೀಗಾಗಿ ವಿ.ಜಿ.ಕೆ.ಕೆ. ಈಗ ಒಂದು ಗಿಡಮೂಲಿಕಾ ತೋಟವನ್ನು ವೈಜ್ಞಾನಿಕ ಅಧ್ಯಯನ ದೃಷ್ಟಿಯಿಂದ ಕಾಪಾಡುತ್ತಿದೆ. ಗ್ರಾಮ ಆರೋಗ್ಯ ಕಾರ್ಯಕರ್ತರು ಹಾಗೂ ದಾಯಿಗಳು ಚಿಕಿತ್ಸೆ ನೀಡುವುದಕ್ಕೂ ಇದು ಸಹಾಯವಾಗುವುದು. ಗ್ರಾಮಗಳ ದಾಯಿಗಳಿಗೂ ತರಬೇತು ನೀಡಿ ನೈರ್ಮಲ್ಯ ಕಾಪಾಡಲು ವಿಶೇಷವಾಗಿ ಪ್ರಸೂತಿ ನಂತರದ ಶುಚಿತ್ವ ನೋಡಿಕೊಳ್ಳಲು ತರಬೇತು ನೀಡಲಾಗುವುದು.

iii) ವೈದ್ಯರು, ಗ್ರಾಮ ಆರೋಗ್ಯ ಕಾರ್ಯಕರ್ತರು, ತರಬೇತು ಪಡೆದ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಸೋಲಿಗ ಸಮುದಾಯದವರಿಗೆ ಸಾಮಾನ್ಯ ಆರೋಗ್ಯ ಶಿಕ್ಷಣವನ್ನು ನೀಡುವರು.

  1. iv) ಯಳಂದರೂ ತಾಲೂಕಿನಲ್ಲಿ ಕುಷ್ಠರೋಗ ನಿವಾರಣಾ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ. ಸರ್ವೇಕ್ಷಣ ಚಿಕಿತ್ಸೆ ಹಾಗೂ ಪುನರ್ವಸತಿ ಇವು ಈ ಕಾರ್ಯಕ್ರಮದ ಪ್ರಮುಖ ಅಂಗಗಳಾಗಿವೆ.
  2. v) ಎಂಸಿಎಚ್‌ಕಾರ್ಯಕ್ರಮವು ಗರ್ಭೀಣಿಯರು ಹಾಗೂ ಬಾಣಂತಿಯರ ಅಪೌಷ್ಠಿಕತೆಯನ್ನು ನಿವಾರಿಸುವ ಕಾರ್ಯಕ್ರಮವಾಗಿದೆ. ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಕೂಡ ಕಾರ್ಯಕ್ರಮ ಅನ್ವಯವಾಗಿ ಅವರಿಗೂ ಪೌಷ್ಠಿಕ ಹಾಗೂ ಸಮತೂಕದ ಆಹಾರವನ್ನು ನೀಡಲಾಗುವುದು.

. ಶಿಕ್ಷಣ : ಇದು ಅತ್ಯಂತ ಪ್ರಮುಖ ಕಾರ್ಯಕ್ರಮ. ಬುಡಕಟ್ಟಿನವರ ಪರಂಪರೆ, ಸಂಸ್ಕೃತಿ, ಜಾನಪದ ಇತ್ಯಾದಿ ಅಂಗಗಳಿಗೆ ಊನ ಬಾರದಂತೆ ತುಂಬಾ ಎಚ್ಚರಿಕೆಯಿಂದ ಈ ಕಾರ್ಯಕ್ರಮವನ್ನು ಆಳವಡಿಸಲಾಗಿದೆ. ಮುಕ್ತ ವಾತಾವರಣದಲ್ಲಿ ಅನೌಪಚಾರಿಕ ಬೋಧನೆಯಿಂದ ಪ್ರಾರಂಬಿಸಿ ಔಪಚಾರಿಕ ಶಾಲಾ ಪಠ್ಯಕ್ರಮವನ್ನು ಅಳವಡಿಸಲಾಗಿದೆ. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಸೋಲಿಗ ದನಿವಾರ್ತಾ ಪತ್ರ ಪಾಕ್ಷಿಕಯಾಗಿ ಹೊರಬರುತ್ತಿದ್ದು ಸೋಲಿಗರ ಜ್ಞಾನಭಿವೃದ್ಧಿಗೆ ಸಹಾಯವಾಗಿದೆ.

. ಉದ್ಯೋಗ ತರಬೇತಿ ಹಾಗೂ ಗುಡಿ ಕೈಗಾರಿಕೆಗಳನ್ನು ಲಭ್ಯಗೊಳಿಸಲಾಗಿದೆ. ನೇಯ್ಗೆ, ಹಗ್ಗ ಹೊಸೆಯುವುದು, ಹೊಲಿಗೆ, ಕಸೂತಿ, ಕರಕುಶಲ ವಸ್ತುಗಳ ತಯಾರಿಕೆ, ಮರಗೆಲಸ, ಅಗರಬತ್ತಿ ತಯಾರಿಕೆ, ಜೇನು ಸಾಕಣೆ ಹಾಗೂ ಮುದ್ರಣ ಕಾರ್ಯ -ಇತ್ಯಾದಿ ಗುಡಿ ಕೈಗಾರಿಕೆಗಳಲ್ಲಿ ಗಂಡಸರು, ಹೆಂಗಸರು ಹಾಗೂ ಶಾಲೆ ಬಿಟ್ಟ ಮಕ್ಕಳಿಗೆ ತರಬೇತು ನೀಡಲಾಗುವುದು, ಕಚ್ಚಾ ಪದಾರ್ಥಗಳನ್ನು ತರುವ ಹಾಗೂ ಪದಾರ್ಥಗಳನ್ನು ತಯಾರಿಸಿ ಮಾರುವ ಜವಾದ್ಬಾರಿ ಬುಡಕಟ್ಟುನವರೇ ಆಗಿರುತ್ತದೆ. ಹಾಗಾಗಿ ಗುಡಿ ಕೈಗಾರಿಕಾ ವಿಭಾಗ ಸ್ವಾವಲಂಬಿಯಾಗಿದೆ.

. ಸಮುದಾಯ ಸಂಘಟನೆ : ೧೬,೦೦೦ ಜನರನ್ನೊಳಗೊಂಡ ಮೂರು ತಾಲೂಕುಗಳನ್ನು ವ್ಯಾಪಿಸಿರುವಂಥ ಬುಡಕಟ್ಟು ಸಂಘಟನೆಗಳು ಹೊರಹೊಮ್ಮಿರುವುದು ಒಂದು ಮೈಲಿಗಲ್ಲು. ವಿಶೇಷವಾಗಿ ಎಳೆಯ ತಲೆಮಾರಿನವರಲ್ಲಿ ಧೈರ್ಯ, ಸಾಮರ್ಥ್ಯ ಹಾಗೂ ಐಕ್ಯತೆಯನ್ನು ಉಂಟು ಮಾಡಿರುವ ನಾಯಕತ್ವದ ತರಬೇತಿ ಬಹಳ ಮುಖ್ಯವಾಗಿದೆ. ಸೋಲಿಗ ಅಭಿವೃದ್ಧಿ ಸಂಘ ಹಾಗೂ ಸೋಲಿಗ ಅಭಿವೃದ್ಧಿ ಮಹಾ ಸಂಘ ಸ್ಥಾಪನೆಯಾಗಿರುವುದರಿಂದ ಅರಣ್ಯ ಇಲಾಖೆಯವರು, ಬೂ ಮಾಲೀಕರು ಹಾಗೂ ಗುತ್ತಿಗೆದಾರರು ಬುಡಕಟ್ಟು ಜನರನ್ನು ಶೋಷಣೆ ಮಾಡುವುದಕ್ಕೆ ಪ್ರತಿರೋಧ ಒಡ್ಡಿದಂತಾಗಿದೆ.

. ಕೃಷಿ ಆಶ್ರಯ ಹಾಗೂ ಸಹಕಾರ ಸಂಘಗಳು : ಅರಣ್ಯ ಇಲಾಖೆಯವರು ನಿಷೇಧಿಸಿರುವ ಕಮರಿ ಬೇಸಾಯಕ್ಕೆ ಬದಲಾಗಿ ಉತ್ತಮವಾದ ಬೀಜ ಹಾಗೂ ಸುಧಾರಿತ ಕೃಷಿಯನ್ನು ಅಳವಡಿಕೊಳ್ಳಲು ವಿ.ಜಿ.ಕೆ.ಕೆ. ಪ್ರೋತ್ಸಾಹ ನೀಡಿದೆ. ವಿ.ಜಿ.ಕೆ.ಕೆ. ಪ್ರಯತ್ನದಿಂದ ಅರಣ್ಯ ಇಲಾಖೆ ಹಾಗೂ ಇನ್ನಿತರ ಸರ್ಕಾರಿ ಇಲಾಖೆಗಳ ಸಹಾಯದಿಂದ ಸೋಲಿಗರಿಗೆ ಕಡಿಮೆ ವೆಚ್ಚದ ಉತ್ತಮ ಮನೆಗಳನ್ನು ನಿರ್ಮಿಸುವುದು ಸಾಧ್ಯಾವಾಗಿದೆ.

ಬುಡಕಟ್ಟು ಸಹಕಾರ ಸಂಸ್ಥೆ ಕೂಡ ಅಸ್ತಿತ್ವಕ್ಕೆ ಬಂದಿದೆ. ಜೇನುತುಪ್ಪ, ಆಣಬೆ, ನೆಲ್ಲಿಕಾಯಿ ಮುಂತಾದವುಗಳನ್ನು ಸಂಗ್ರಹಿಸುವ ಬುಡಕಟ್ಟು ಜನರು ಬುಡಕಟ್ಟು ವಿವಿದ್ಧೋದ್ದೇಶ ಸಹಕಾರ ಸಂಘಕ್ಕೆ ದುಬಾರಿಯಲ್ಲದ ಬೆಲೆಗೆ ಮಾರುವರು; ಹಾಗಾಗಿ ಖಾಸಗಿ ಗುತ್ತಿಗೆದಾರರ ಶೋಷಣೆ ತಪ್ಪಿದಂತಾಗುವುದು.

ಸಮಗ್ರ ಬುಡಕಟ್ಟು ಅಭಿವೃದ್ಧಿಗಾಗಿ ವಿ.ಜಿ.ಕೆ.ಕೆ ಹಾಕಿಕೊಂಡ ಮೊದಲ ಪ್ರಯುಖವಾದ ಉದ್ದೇಶವೆಂದರೆ ಮೊದಲೆಯದಾಗಿ ಐಕ್ಯತೆಯಿಂದ ಕೂಡಿದ ಸ್ವಾವಲಂಬಿ, ಪ್ರಗತಿಪರ ಸೋಲಿಗ ಸಮುದಾಯದ ನಿರ್ಮಾಣ, ಈಗಾಗಲೇ ಜಾರಿಗೆ ಬಂದಿರುವ ಅನೇಕ ಕಾರ್ಯಕ್ರಮಗಳ ಮೂಲಕ ಈ ಉದ್ದೇಶ ಸ್ಪಲ್ಪಮಟ್ಟಿಗೆ ಈಡೇರಿರುವುದನ್ನು ಕಾಣಬಹುದು. ಎರಡನೆಯದಾಗಿ, ಶಿಕ್ಷಣ, ತರಬೇತಿ ಹಾಗೂ ಪ್ರೇರಣೆಯ ಮೂಲಕ ಸೋಲಿಗರು ಸ್ವತಃ ತಾವೇ ಸ್ವಾವಲಂಬಿಗಳಾಗುವುದರ ಮೂಲಕ ಅಭಿವೃದ್ಧಿ ಹೊಂದುವುದು. ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡರೂ ಬದಲಾಗುತ್ತಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ದಿಶೆಯಲ್ಲಿ ತಮ್ಮ ಒಳಗಿರುವ ಸಾಮಾರ್ಥ್ಯವನ್ನು ಉಪಯೋಗಿಸಿಕೊಳ್ಳುವಂತೆ ಮಾಡುವುದು. ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣವನ್ನು ನೀಡುವಲ್ಲಿ ಎದುರಾಗುವ ಸಂಕೀರ್ಣವಾದ ಪ್ರಕ್ರಿಯೆಯಿಂದ ಈ ಉದ್ದೇಶದ ರೂಪುರೇಷೆ ತಿಳಿಯುವುದು. ಕಡೆಯದಾಗಿ, ಸೋಲಿಗ ಅಭಿವೃದ್ಧಿ ಸಂಘ ಮುಂತಾದ ಜನ ಸಂಘಟನೆಗಳು ತಲೆಯೆತ್ತಿರುವುದರಿಂದ ಕ್ಷೇಮಾಭಿವೃದ್ಧಿ, ನ್ಯಾಯ ಹಾಗೂ ಮೂಲಭೂತ ಹಕ್ಕುಗಳ ವಿಷಯವಾಗಿ ತಮ್ಮ ಹಕ್ಕು ಪ್ರತಿಪಾದಿಸಬಹುದಾಗಿದೆ. ಪೋಡು ಸಂಘ, ತಾಲೂಕಾ ಸಂಘಗಳು ಮಹಾಸಂಘದಲ್ಲಿ ವಿಲೀನವಾಗುವ ಪ್ರಕ್ರಿಯೆಯಿಂದ ಜನರಲ್ಲಿ ಅರಿವು ಮೂಡಿರುವುದನ್ನು ಕಾಣಬಹುದು. ಬೇರೆ ಬೇರೆ ಹಂತಗಳಲ್ಲಿ ಬುಡಕಟ್ಟು ನಾಯಕತ್ವ ಬೆಳವಣಿಗೆಗೆ ಈ ಸಂಘಟನೆಗಳು ಪ್ರೋತ್ಸಾಹ ನೀಡುತ್ತವೆ.

ಸೋಲಿಗ ಬುಡಕಟ್ಟಿನವರು ಕಾಡಿನ ಬದುಕಿನ ಒಂದು ಭಾಗವಾಗಿದ್ದಾರೆ. ಅವರ ಬದುಕು ಮತ್ತು ಮುಂದುವರಿಕೆ ನಿಸರ್ಗದೊಡನೆ ಬೆರೆತುಹೋಗಿದೆ. ಈ ಕ್ರಮವನ್ನು ತಪ್ಪಿದರೆ ಈ ಸಮುದಾಯಕ್ಕೆ ಕಂಟಕ ಎಂಬುದು ವಿ.ಜಿ.ಕೆ.ಕೆ. ಯ ಅಚಲವಾದ ನಂಬಿಕೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ಸ್ಥಾಪಿತವಾಗಿರುವ ವಿ.ಜಿ.ಕೆ.ಕೆ. ಪ್ರಸ್ತುತ ಯಳಂದೂರು, ಚಾಮರಾಜನಗರ,ಕೊಳ್ಳೇಗಾಲ ತಾಲೂಕುಗಳು, ಮಲೆ ಮಹದೇಶ್ವರನ ಬೆಟ್ಟ, ತಮಿಳುನಾಡಿನ ಸತ್ಯಮಂಗಲ ತಾಲ್ಲೂಕನ್ನೂ ಒಳಗೊಂಡಂತೆ ೬೦ ಕಿ. ಮೀ. ವ್ಯಾಪ್ತಿಯನ್ನು ತಲುಪಿದೆ ಹಾಗೂ ಸುಮಾರು ೨೦,೦೦೦ಬುಡಕಟ್ಟು ಜನರಿಗೆ ಸೇವೆ ಒದಗಿಸುತ್ತಿದೆ.

ಈ ಮೇಲೆ ಕಾಣಿಸಿದಂತೆ ವಿ.ಜಿ.ಕೆ.ಕೆ. ಒಂದು ನೋಂದಾಯಿತ ಸಂಘ. ಒಬ್ಬರು ಮಹಿಳೆಯೂ ಸೇರಿದಂತೆ ಏಳು ಜನ ಸದಸ್ಯರ ಒಂದು ಆಡಳಿತ ಮಂಡಳಿ ಇದೆ. ಏಳು ಮಂದಿಯಲ್ಲಿ ಐದು ಜನ ಬುಡಕಟ್ಟಿನವರೇ ಆಗಿದ್ದಾರೆ. ಜೊತೆಗೆ ೧೮ ಸದಸ್ಯರ ಒಂದು ಮಹಾ ಮಂಡಳಿಯೂ ಇದೆ.

ಡಾ. ಸುದರ್ಶನ್‌ಒಂದು ಸಮಾಜ ಸೇವೆಯಾಗಿ ಈ ಯೋಜನೆಯನ್ನು ಕೈಕೊಂಡರು. ಆರಂಭದಲ್ಲಿ ಆರೋಗ್ಯ/ ವೈದ್ಯಕೀಯ ಸೇವೆಯನ್ನು ನೀಡುವುದಕ್ಕೆ ಸೀಮಿತವಾಗಿತ್ತಾದರೂ ಕ್ರಮೇಣ ಪೋಡುಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಕುರಿತು ವಿಚಾರಿಸುವುದು ಮತ್ತು ಅವರಿಗೆ ಶೈಕ್ಷಣಿಕ ಸೌಲಭ್ಯಗಳನ್ನು ನೀಡುವುದು ಮೊದಲಾಯಿತು.

ವಿ.ಜಿ.ಕೆ.ಕೆ. ಮೂರು ಪ್ಲಾಟುಗಳಲ್ಲಿ ೨೪ ಎಕರೆ ಜಮೀನನ್ನು ಹೊಂದಿದೆ; ಈ ಜಮೀನನ್ನು ಬುಡಕಟ್ಟೇತರರಿಂದ ಕೊಂಡುಕೊಳ್ಳಲಾಗಿದೆ. ಸೋಲಿಗರ ಮಧ್ಯೆ ವಿ.ಜಿ.ಕೆ.ಕೆ. ಕೆಲಸ ಮಾಡಿರುವ ಪರಿಣಾಮವಾಗಿ ಸೋಲಿಗರ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮಿಕೆ ಕಂಡಿದೆ. ರಾಜಕೀಯ ಪ್ರಜ್ಞೆ ಮೂಡಿದೆ, ಅವರಲ್ಲಿ ನಾಯಕರು ಹೊರಹೊಮ್ಮಿದ್ದಾರೆ, ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಪ್ರಜ್ಞೆ ಮೂಡಿದೆ. ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ ಅರಣ್ಯ ಗುತ್ತಿಗೆದಾರರು ಸೋಲಿಗರಿಗೆ ಉಪಟಳ ಕೊಡುವುದಿಲ್ಲ. ವ್ಯಾಪಾರದವರ ಕಾಟವೂ ಕಡಿಮೆಯೇ.ಈಗ ಜಮೀನು ಪರಭಾರೆಯಾಗುವುದೂ ನಿಂತಿದೆ.

ಸೋಲಿಗರು ಸ್ವಾವಲಂಬನೆಯನ್ನು ಸಾಧಿಸಿದ ನಂತರ ವಿ.ಜಿ.ಕೆ.ಕೆ. ಅಲ್ಲಿಂದ ನಿರ್ಗಮಿಸುವ ಸಂಕಲ್ಪ ಮಾಡಿದೆ. ಸಂಸ್ಥೆ ನಿರ್ಗಮಿಸುವ ಕ್ರಮ ಕ್ರಮೇಣವಾಗಿದ್ದು, ಚೆನ್ನಾಗಿ ಯೋಜಿತವಾಗಬೇಕಾಗುತ್ತದೆ. ಗುಡಿ ಕೈಗಾರಿಕೆ ಮತ್ತು ಔದ್ಯೋಗಿಕ ಕೋರ್ಸುಗಳ ವಿಸ್ತರಣೆ ಮಾಡಿ ಹೊರಗಿನ ಸಹಾಯವನ್ನು ಅವಲಂಬಿಸದ ರೀತಿ ಮಾಡಬೇಕಾಗುತ್ತದೆ. ಹಾಗೆಯೇ ಪದವಿ ಪೂರ್ವ ಪಠ್ಯದ ಜೊತೆಗೆ ಅರಣ್ಯ ಶಾಸ್ತ್ರ ವಿಷಯಗಳನ್ನು ಸೇರಿಸಬೇಕು. ಆಡಳಿತ ಮಂಡಳಿಯಲ್ಲಿ ಅಂತಿಮವಾಗಿ ಬುಡಕಟ್ಟು ಸದ್ಯರು ಮಾತ್ರ ಇರುವಂತಾಗಿ, ತಮ್ಮ ಜನರಿಗೆ ತಾವೇ ಮಾರ್ಗದರ್ಶನ ಮಾಡಿ ತಮ್ಮ ಜನರ ಇಚ್ಛೆಗನುಗುಣವಾಗಿ ಮುಂದಿನ ಕಾರ್ಯಯೋಜನೆಯನ್ನು ಕೈಗೊಳ್ಳುವಂತಾಗಬೇಕು. ಸಂಕ್ಷಪ್ತವಾಗಿ ಇದು ವಿ.ಜಿ.ಕೆ.ಕೆ. ಯ ಗುರಿಯಾಗಿದೆ.

೧೯೯೪-೯೫ರ ಅಯುವ್ಯಯದ ಪ್ರಕಾರ ವಿ.ಜಿ.ಕೆ.ಕೆ. ಈ ಕೆಳಗಿನ ಮೂಲಗಳಿಂದ ಹಣಾಕಾಸಿನ ಸಹಾಯವನ್ನು ಪಡೆಯುತ್ತಿದೆ; ಅಪರೂಪಕ್ಕೊಮ್ಮೆ ಹಿತೈಷಿಗಳಿಂದ ಕೊಡುಗೆಯನ್ನು ಸ್ವೀಕರಿಸಬಹುದು.

೧೯೯೪೯೫
I. ಬಂಡವಾಳ ರೂ.
. ಎಜೆ, ಪಶ್ವಿಮ ಜರ್ಮನಿ (ಕಟ್ಟಡ ನಿರ್ಮಾಣಕ್ಕಾಗಿ) ೧೦, ೪೮,೫೮೨/-
. ಎಫ್‌ಆರ್‌ಎಲ್‌ಎಚ್‌ಟಿ (ನರ್ಸರಿ ಕಟ್ಟಡ)  ೦೫.೫೫,೦೦೦/-
. ಸ್ಥಳೀಯ ವೈಯಕ್ತಿಕ ಕೊಡುಗೆ (ಭೂಮಿ ಮತ್ತು ಕಟ್ಟಡ
II ಆವರ್ತನ  
. ಭಾರತ ಸರ್ಕಾರ, ಲೋಕ ಕಲ್ಯಾಣ ಸಚಿವಾಲಯ (ಶಾಲೆ, ವಿದ್ಯಾರ್ಥಿನಿಲಯ ಹಾಗೂ ಆಸ್ಪತ್ರೆ) ೧೩, ೫೬, ೦೮೬/-
. ಕ್ರಿಶ್ಚಿಯನ್‌ಚಿಲ್ಡ್ರನ್‌ಫಂಡ್‌(ಪ್ರಾಯೋಜಿತ ಕಾರ್ಯಕ್ರಮ) ೧೯,೭೧, ೮೩೦/-
. ಜಿಲ್ಲಾ ಪರಿಷತ್‌(ಡಿಐಸಿ ತರಬೇತಿ ಕಾರ್ಯ) (ಔಷಧಿಗಳು) ೦೦,೬೮, ೭೫೦/-
. ವಿದೇಶೀ ಧನಸಹಾಯ -ಸಂಚಾರಿ ವೈದ್ಯಕೀಯ (ಸಮುದಾಯ ಸಂಘಟನಾ ಉದ್ದೇಶ) ೦೪, ೩೧,೦೦೦/-
ಒಟ್ಟು ೬೦,೪೯,೭೨೫/

ತಮ್ಮ ತಾರುಣ್ಯದಲ್ಲಿ ಡಾ. ಸುದರ್ಶನ್‌ಗೆ ಈ ಸಂಸ್ಥೆಯ ಗುರುತರವಾದ ಹೊಣೆ ಮತ್ತು ಸಂಸ್ಥೆಯನ್ನು ಬೆಳೆಸುವ ಕಾರ್ಯ ಶ್ರಮದಾಯಕವಾಗಿರಬೇಕು; ಮೈಸೂರು ಜಿಲ್ಲೆಯ ದೂರದ ತುದಿಯೊಂದರಲ್ಲಿ, ಗುಡ್ಡಗಾಡು ಹಾಗೂ ದಟ್ಟಕಾಡಿನ ಪ್ರದೇಶವನ್ನು ಆರಿಸಿಕೊಂಡು ಇಷ್ಟು ಸಾಧಿಸಿರುವುದು ಅವರಿಗೆ ಗಣನೀಯ ಪ್ರಮಾಣದಲ್ಲಿ ತೃಪ್ತಿ ತಂದಿರಲು ಸಾಕು. ಜನತೆ, ಸಮಾಜ, ಭಾರತ ಸರ್ಕಾರ ಹಾಗೂ ವಿದೇಶಿ ಸರ್ಕಾರಗಳು ಅವರ ಕೊಡುಗೆಯನ್ನು ಗಮನಿಸಿ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಬೇರೆ ಯಾರಾದರೂ ಆಗಿದ್ದರೆ ಈ ತರಹದ ಗೌರವದಿಂದ ಬೀಗಿ ಹೋಗುತ್ತಿದ್ದರು; ಆದರೆ ಡಾ. ಸುದರ್ಶನ್‌ಪ್ರಶಸ್ತಿಗಳನ್ನು ಪಕ್ಕಕ್ಕಿಟ್ಟು ಇನ್ನು ಹೆಚ್ಚಿನ ರೀತಿಯಲ್ಲಿ ಸೇವಾ ಮನೋಭಾವದಿಂದ ಕ್ರಿಯಾಶೀಲರಾಗಿದ್ದಾರೆ. ೧೯೯೫ರಲ್ಲಿ ಡಾ. ಸುದರ್ಶನ್‌ನೊಬಲ್‌ಪ್ರಶಸ್ತಿಗೆ ಸಮನಾದ “ದ ರೈಟ್‌ಲೈವ್‌ಲಿಹುಡ್‌” ಪ್ರಶಸ್ತಿಯನ್ನು ಪಡೆದಿರುವುದು ದೇಶದಲ್ಲಿರುವ ಇತರ ಎನ್.ಜಿ.ಓ.ಗಳ ಕಣ್ಣು ತೆರೆಸಬೇಕಾಗಿದೆ. ಸರಳರೂ, ಸೋಗಿಲ್ಲದವರೂ ಆದ ವಿ.ಜಿ.ಕೆ.ಕೆ. ಯ ಪ್ರಧಾನ ಕಾರ್ಯದರ್ಶಿ ವಾಸ್ತವವಾಗಿ ಬಹಳ ಎತ್ತರದ ವ್ಯಕ್ತಿ, ಬದುಕಿನಲ್ಲಿ ಅವರು ಮಾಡಿರುವ ಎಲ್ಲ ತ್ಯಾಗಗಳಿಗೆ ಮಾನಕೋಟಿಗೆ ಅವರು ಸಲ್ಲಿಸಿರುವ ನಿಷ್ಕಾಮ ಸೇವೆ ಕಳಶಪ್ರಾಯವಾಗಿ ಕಾಣಿಸುತ್ತದೆ.

ಮುಂದೆ IV ಮತ್ತು V ನೇ ಅಧ್ಯಾಯಗಳಲ್ಲಿ ಎಸ್.ವಿ.ವೈ.ಎಂ. ಮತ್ತು ಡೀಡ್‌ಸಂಶೆಗಳ ಕಾರ್ಯವಿಧಾನವನ್ನು ತಿಳಿಸಲಾಗಿದೆ. ಹಾಗೂ ಆ ನಂತರ ಬುಡಕಟ್ಟು ಫಲಾನುಭವಿಗಳ ಮೌಲ್ಯಮಾಪನವನ್ನು ನೀಡಲಾಗಿದೆ.

* * *