ಸಂಘಟನೆ : ಚಿಕಿತ್ಸಾ ಅರೋಗ್ಯ ಸೇವೆಯ ಉದ್ದೇಶದಿಂದ ವಿ.ಜಿ.ಕೆ.ಕೆ. ಪ್ರಾರಂಭವಾದದ್ದು ಸೇವಾ ಮನೋಭಾವದ ಒಬ್ಬ ವ್ಯಕ್ತಿಯಿಂದ ಬಿಳಿಗಿರಿರಂಗನ ಬೆಟ್ಟ ಪ್ರದೇಶದ ಸೋಲಿಗರ ಅರೋಗ್ಯ ಸ್ಥಿತಿ ಉತ್ತಮಪಡಿಸಲು ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಸೋಲಿಗರ ಸಮಗ್ರ ಅಭಿವೃದ್ಧಿ ಸಾಧಿಸಲು ಅನೇಕ ಚಟುವಟಿಕೆಗಳಿಗೆ ವ್ಯಾಪಿಸಿತು. ಎರಡನೆಯ ಅಧ್ಯಾಯದಲ್ಲಿ ಈಗಾಗಲೇ ತಿಳಿಸಿರುವಂತೆ ಬೆಟ್ಟದ ಮೇಲೆ ಕಾರ್ಯಪ್ರವೃತ್ತವಾಗಿರುವ ಆಸ್ಪತ್ರೆಯಲ್ಲಿ ಅನೇಕ ವ್ಯಕೀಯ/ ಅರೋಗ್ಯ ಸೇವೆಗಳು ಲಭ್ಯವಿವೆ. ಈ ಕ್ಷೇತ್ರದಲ್ಲಿ ಶಿಕ್ಷಣ, ಸಮುದಾಯ ಸಂಘಟನೆ, ರಾಜಕೀಯ ಪ್ರಜ್ಞೆ, ನಾಯಕತ್ವ ಅಭಿವೃದ್ಧಿ ಹಾಗೂ ಅನೇಕ ತರಹದ ಆರ್ಥಿಕ ಚಟುಚಟಿಕೆಗಳು ಎಡೆಬಿಡದಂತೆ ನಡೆಯುತ್ತಿವೆ.

ಮಕ್ಕಳಿಗೆ ಪೌಷ್ಠಿಕತೆಯನ್ನು ಒದಗಿಸಲು ಕಾಫಿ ಬೆಳೆ, ಬಾಳೆ ಹಾಗೂ ಕೋಳಿ ಸಾಕಣೆ ಸಾಗಿದೆ. ಈ ಪ್ರದೇಶದಲ್ಲಿ ಶಾಲೆ ಮತ್ತು ವಸತಿ ವಿದ್ಯಾರ್ಥಿನಿಲಯ ಒಂದು ವಿನೂತನ ಏರ್ಪಾಟಾಗಿದೆ. ಸೋಲಿಗರ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ದೂರದ ಕೊಡಗು ಇತ್ಯಾದಿ ಸ್ಥಳಗಳಿಂದು ಮಕ್ಕಳು ಬರುವುದರಿಂದ ಅವರಲ್ಲಿ ಸೋದರತ್ವದ ಭಾವನೆ ಬೆಳೆಯುವುದಕ್ಕೆ ಸಹಾಯವಾಗುವುದು. ಸಹಕಾರ ಆರ್ಥಿಕ ಪ್ರಯತ್ನಗಳಿಗೆ LAMP ಸಹಕಾರ ಸಂಘ ಒತ್ತಾಸೆ ನೀಡುತ್ತದೆ. ಗುಡಿ ಕೈಗಾರಿಕೆ ಘಟಕ ಬುಡಕಟ್ಟಿನವರ ಆರ್ಥಿಕ ಅಧಾರವನ್ನು ಸದೃಢಗೊಳಿಸುತ್ತದೆ. ಸ್ವಲ್ಪ ಪ್ರಮಾಣದಲ್ಲಿಯೇ ಆಗಲಿ ಕೃಷಿಗೆ ಭೂಮಿ, ಆಶ್ರಯಕ್ಕೆ ಮನೆಇರುವುದರಿಂದ, ಇವರ ಬದುಕಿಗೆ ಒಂದು ಗುರಿ ಹಾಗೂ ಭದ್ರತೆಯನ್ನು ಒದಗಿಸಿವೆ.

“ಸೋಲಿಗ ಅಭಿವೃದ್ಧಿ ಸಂಘ” ಅಸ್ತಿತ್ವಕ್ಕೆ ಬಂದಿರುವುದರಿಂದ ಸೋಲಿಗರೇ ಅಲ್ಲಿ ನಾಯಕತ್ವವನ್ನು ವಹಿಸಿ ತಮ್ಮ ಜನರ ಆಗತ್ಯತೆಗಳು ಹಾಗೂ ಸಮಸ್ಯೆಗಳತ್ತ ಗಮನ ಸೆಳೆದು ನ್ಯಾಯ ಕೇಳಲು ಅನುಕೂಲವಾಗುವುದು. ವಿ.ಜಿ.ಕೆ.ಕೆ. ಯ ಮೂಲಕ ಬೇರೆ ಬೇರೆ ಯೋಜನೆಗಳು ಕಾರ್ಯ ರೂಪಕೆ ಬಂದಿದ್ದು ಸೋಲಿಗರ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಗಳು ನಡೆದಿವೆ.

ಬೆಟ್ಟದ ಮೇಲೆ ಹಲವು ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿದ್ದು ೧೯೭೯ ರಿಂದ ಒಬ್ಬ ವ್ಯಕ್ತಿಯ ನಿಸ್ವಾರ್ಥ ಸೇವೆಯ ಫಲವಾಗಿ ಸಂಭವಿಸಿರುವ ಒಳ್ಳೆಯ ಕೆಲಸಗಳ ದರ್ಶನವಾಗುತ್ತದೆ. ಡಾ. ಸುದರ್ಶನ್‌ಅವರ ಹಲವು ಮಂದಿ ಹಿತೈಷಿಗಳು ಹಾಗೂ ಮಿತ್ರರು ಅಪರೂಪಕ್ಕೊಮ್ಮೆ ಧನ ಸಹಾಯ ಮಾಡಿಯೋ ಅಥವಾ ಅವರ ಯೋಜನೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕವಾಗಿಯೇ ಸಹಾನುಭೂತಿ ವ್ಯಕ್ತಪಡಿಸಿರುವರಾದರೂ ಸುದರ್ಶನರ ನಿಸ್ವಾರ್ಥ ದುಡಿಮೆಗೆ ಯಾವುದೂ ಸರಿಸಾಟಿಯಾಗಲಾರದು. ಶಾಲೆ, ಕಛೇರಿ ಹಾಗೂ ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಉಪಯೋಗಕ್ಕಾಗಿ ಅನೇಕ ಹೊಸ ಕಟ್ಟಡಗಳು ತಲೆಯೆತ್ತಿವೆ. ವಿ.ಜಿ.ಕೆ.ಕೆ. ತೋರಿಸಿರುವ ಮಾರ್ಗದಲ್ಲಿ ರಾಷ್ಟ್ರದ ಇತರ ಸ್ವಯಂ ಸೇವಾ ಸಂಸ್ಥೆಗಳು ದುಡಿಯುವುದಾರೆ ಅದ್ಭುತವನ್ನು ಸಾಧಿಸಬಹುದು. ಇದಕ್ಕೆ ಅತ್ಯಗತ್ಯವಾಗಿ ಬೇಕಾದದ್ದೆಂದರೆ ಸಕಾರತ್ಮಾಕ ರಾಜಕೀಯ ಇಚ್ಛಾಶಕ್ತಿಯೇ ಹೊರತು ರಾಜಕೀಯ ಹಸ್ತಕ್ಷೇಪವಲ್ಲ.

ಬುಡಕಟ್ಟು ಫಲಾನುಭವಿಗಳು

ಬುಡಕಟ್ಟು ಅಭಿವೃದ್ದಿಯಲ್ಲಿ ಎನ್.ಜಿ.ಓ.ಗಳ ಪಾತ್ರವನ್ನು ಅದ್ಯಯನ ಮಾಡಿ ಮೌಲ್ಯಮಾಪನ ಮಾಡಲು ವೈಯಕ್ತಿಕವಾಗಿ ಹಾಗೂ ಬಿದಿಬಿಡಿಯಾಗಿ ಬೇರೆ ಬೇರೆ ಮಾರ್ಗಗಳನ್ನು ಅನುಸರಿಸಬಹುದು. ಸಂಶೋಧಕರೇ ಭಾಗವಹಿಸಿ ವೀಕ್ಷಿಸುವುದು ಒಂದು ವಿಧಾನ ಎನ್.ಜಿ.ಓ.ಗಳು ಹಾಗೂ ಬುಡಕಟ್ಟು ಜನರ ಸಂಪರ್ಕವಿರುವ ಕಡೆ ದತ್ತಾಂಶಗಳನ್ನು ಪಡೆಯುವ ಕಾರ್ಯ ಸಮಯ ಬೇಡುವಂಥದು, ಜೊತೆಗೆ ಇದಕ್ಕೆ ತುಂಬಾ ಹಣದ ಅವಶ್ಯಕತೆ ಬೀಳುತ್ತದೆ. ಸಾಮಾನ್ಯವಾಗಿ ಮಾನವ ಶಾಸ್ತ್ರಜ್ಞರು ಅನುಸರಿಸುವಂಥ ವಿಧಾನವಿದು; ಈ ವಿಧಾನದ ಮೂಲಕ ನಮಗೆ ಸಾರ್ವತ್ರೀಕರಿಸಲು ಅನುಕೂಲವಾಗುವಂಥ ಮಾಹಿತಿ ಲಭ್ಯವಾಗಬಹುದು. ಅಗದೇ ಇರಬಹುದು.

ಇನ್ನೊಂದು ವಿಧಾನವೆಂದರೆ, ಕ್ಷೇತ್ರ, ಜನರ ಹಾಗೂ ಚಟುವಟಿಕೆಗಳ ಸರ್ವೇಕ್ಷಣ ನಡೆಸುವಂಥದ್ದು. ಇದಕ್ಕೆ ಅಕ್ಷರಸ್ಥರಾದ ಉತ್ತರ ಹೇಳುವವರ ಅಗತ್ಯ ಬೀಳುತ್ತದೆ. ಸರ್ವೇಕ್ಷಣ ವಿಧಾನಕ್ಕೆ ತನ್ನದೇ ಆದ ಮಿತಿಯಿದೆ.

ಶ್ರೇಣಿಕೃತವಾದ ಅಥವಾ ಸರಳವಾದ ಯಾದ್ವಚ್ಛಿಕ ಪ್ರಶ್ನೆಗಳ ತಂತ್ರವನ್ನು ಅಳವಡಿಸಿ ಉತ್ತರ ಪಡೆಯುವ ವಿಧಾನವೂ ಇದೆ. ಪ್ರಸ್ತುತ ಅಧ್ಯಯನದಲ್ಲಿ ಈ ವಿಧಾನವನ್ನು ಅನುಸರಿಸಲಾಗಿದೆ. ಎನ್.ಜಿ.ಓ. ಗಳಿಂದ ಸಂಗ್ರಹಿಸಿರುವ ಮಾಹಿತಿಯು ವ್ಯಕ್ತಿನಿಷ್ಠ ಕಾರಣಗಳಿಂದಾಗಿ ಫಲಿತಾಂಶ ಬೇರೆ ತರಹ ಗೋಚರಿಸುವಂತೆ ಮಾಡಬಹುದು. ಈ ಮಿತಿಯನ್ನು ಸರಿಪಡಿಸುವ ದೃಷ್ಟಿಯಿಂದ ಎನ್.ಜಿ.ಓ.ಗಳ ಚಟುವಟಿಕೆಗಳಿಂದ ಫಲವನ್ನು ಕಂಡಿರುವ ಜನರಿಂದಲೇ ನೇರವಾಗಿ ಸಂಗ್ರಹಿಸುವುದು ಅತಿ ಮುಖ್ಯವಾಗುತ್ತದೆಯೇ ಹೊರತು ಕೇವಲ ಪರ್ಯಾಯವಾದುದಾಗುವುದಿಲ್ಲ. ಬೇರೆ ಬೇರೆ ಸರ್ಕಾರಿ ಇಲಾಖೆಯವರು ಕೂಡ ಎನ್.ಜಿ.ಓ.ಗಳು ಹಾಗೂ ಫಲಾನುಭವಿಗಳ ಜೊತೆಗೆ ಸಂಪರ್ಕ ವಿರಿಸಿಕೊಂಡಿರುತ್ತಾರೆ. ಹೀಗೆ ಬುಡಕಟ್ಟು ಅಭಿವೃದ್ಧಿ ಕಾರ್ಯ ಯೋಜನೆಗಳಲ್ಲಿ ತೊಡಗಿರುವ ಸರ್ಕಾರಿ ಇಲಾಖೆಗಳು ಹಾಗೂ ಅಧಿಕಾರಿಗಳು ಸಹ ಮುಖ್ಯವಾದ ಮಾಹಿತಿ ನೀಡುವರು.

ಅಂತಿಮವಾಗಿ, ಆಧುನಿಕ ಕಾಲದಲ್ಲಿ, ಯಾವೊಂದು ಗುಂಪೂ ಸಹ ಬಹಳ ಕಾಲ ತನ್ನಷ್ಟಕ್ಕೆ ತಾನು ಸಂಪರ್ಕವಿಲ್ಲದೆ ಇರಲಾರದು. ಬುಡಕಟ್ಟು ಜನರು ಕಾಡು ಹಾಗೂ ಗುಡ್ಡ ಪ್ರದೇಶದಲ್ಲಿ ವಾಸವಾಗಿರುವಾಗಲೂ ಸಹ ಅನೇಕ ರೀತಿಯಲ್ಲಿ ಬುಡಕಟ್ಟೇತರ ಜನರೊಡನೆ ಸಂಪರ್ಕಕ್ಕೆ ಬರುವರು. ಸಣ್ಣ ವ್ಯಾಪರಸ್ಥರಿಂದ ಉಪ್ಪು, ಸಾಬೂನು, ಬೆಂಕಿಕಡ್ಡಿಯಂಥ ಪದಾರ್ಥಗಳನ್ನು ಕೊಳ್ಳಲು ಬುಡಕಟ್ಟಿನವರು ಬರುವುದುಂಟು. ಟೀ ಕುಡಿಯುವ ಅಭ್ಯಾಸ ವ್ಯಾಪಕವಾಗಿರುವುದರಿಂದ ಟೀ ಮಾರುವವರ ಬಳಿ ಅವರು ಬರುವುದೂ ಸಾಮಾನ್ಯವಾಗಿದೆ. ಈ ಕಾರಣದಿಂದ ಬುಡಕಟ್ಟಿನವರು ಮತ್ತು ಅಲ್ಲದವರ ನಡುವೆ ಹೆಚ್ಚಿನ ರೀತಿಯ ಸಂಪರ್ಕ ಈಗ ನಡೆದಿರುವುದನ್ನು ಗಮನಿಸಬಹುದಾಗಿದೆ. ಹಾಗಾಗಿ ಎನ್.ಜಿ.ಓ. ಗಳು ಬುಡಕಟ್ಟು ಅಭಿವೃದ್ಧಿಯಲ್ಲಿ ಯಾವ ರೀತಿ ಪಾತ್ರ ವಹಿಸುತ್ತಿರುವರೆಂಬುದನ್ನು ತಿಳಿಯಲು ಸುತ್ತಲಮುತ್ತಲ ಬುಡಕಟ್ಟೇತರ ಗ್ರಾಮಸ್ಥರನ್ನು ಮಾತನಾಡಿಸುವುದು. ಲಾಭಕರ.

ಪ್ರಸ್ತುತ ಅಧ್ಯಯನದಲ್ಲಿ ಯಾದ್ವಚ್ಛಿಕ ಮಾದರಿ ವಿಧಾನವನ್ನು ಅನುಸರಿಸಲಾಗಿದೆ. ನೇರವಾಗಿ ಎನ್.ಜಿ.ಓ. ಗಳಿಂದಲೇ ಮಾಹಿತಿಯನ್ನು ಪಡೆಯುವುದರ ಜೊತೆಗೆ ಒಂದೇ ಎನ್.ಜಿ.ಓ. ಗಮನದಲ್ಲಿ ಬರುವ ದೂರದೂರಿನಲ್ಲಿ ಚೆದುರಿಹೋಗಿರುವ ಕೆಲವು ಬುಡಕಟ್ಟು ಗುಂಪಿನವರನ್ನು ಸಂದರ್ಶಿಸಲಾಯಿತು. ವಿ.ಜಿ.ಕೆ.ಕೆ. ಸಂಬಂಧಿಸಿ ಹೇಳುವುದಾರೆ ಮೂರು ತಾಲೂಕುಗಳಲ್ಲಿ ಹರಡಿಕೊಂಡಿರುವ ಒಂದೇ ಬುಡಕಟ್ಟು ಸೇರುತ್ತದೆ- ಬಿಳಿಗಿರಿರಂಗನ ಬೆಟ್ಟಕ್ಕೆ ಸೇರಿದ ಬುಡಕಟ್ಟಿನವರನ್ನೇ ಪ್ರಧಾನವಾಗಿ ಗಮನಿಸಲಾಗಿದೆಯಾದರೂ ಡೀಡ್‌ಸಂಸ್ಥೆ ಹುಣಸೂರು ತಾಲೂಕನ್ನು ಮಾತ್ರ ಒಳಗೊಳ್ಳುತ್ತದೆ. ಆದರೆ ಫಲಾನುಭವಿಗಳು ಆಗಿರುವಂಥ ನಾಲ್ಕು ಬುಡಕಟ್ಟುಗಳು ಇದಕ್ಕೆ ಸೇರುತ್ತವೆ. ಏಸ್‌. ವಿ. ವೈ. ಎಂ. ಸಂಸ್ಥೆಯು ಒಳಗೊಳ್ಳುವ ವಲಯ ಮಾತ್ರ ವಿಚಿತ್ರವಾದುದಾಗಿದೆ. ಇದೇ ಬುಡಕಟ್ಟು ಗುಂಪುಗಳ ಯೋಗಕ್ಷೇಮವನ್ನು ಇನ್ನೂ ಮೂರು-ನಾಲ್ಕು ಸ್ವಯಂ ಸೇವಾ ಸಂಸ್ಥೆಗಳು ನೋಡಿಕೊಳ್ಳುತ್ತಿವೆ. ಇಲ್ಲಿಯೂ ಸಹ ನಾಲ್ಕು ಬೇರೆ ಬೇರೆ ಬುಡಕಟ್ಟು ಗುಂಪಿನವರು ಫಲಾನುಭವಿಗಳಾಗಿದ್ದಾರೆ. ಒಂದೇ ಒಂದು ಎನ್.ಜಿ.ಓ. ದಿಂದ ಫಲವನ್ನು ಅನುಭವಿಸಿರುವಂಥ ಬುಡಕಟ್ಟು ಇಲ್ಲವೆಂದೇ ಹೇಳಬೇಕು. ಅನೇಕ ಫಲಾನುಭವಿಗಳು ತಾವು ಎರಡು, ಮೂರು ಅಥವಾ ನಾಲ್ಕು ಸಂಸ್ಥೆಗಳಿಂದಲೂ ಸಹಾಯ ಪಡೆದಿರುವುದಾಗಿ ಹೇಳಿಕೊಂಡಿರುವ ಸಂದರ್ಭವುಂಟು. ಎನ್.ಜಿ.ಓ. ಗಳು ಒಂದೇ ಗುಂಪಿಗೆ ಸೇವೆ ಸಲ್ಲಿಸಿರುವ ಅಥವಾ ಎಲ್ಲಾ ಒಂದೇ ತೆರನಾದ ಚಟುವಟಿಕೆ ಕೈಕೊಂಡಿರುವ ಸಂದರ್ಭಗಳೂ ಕೂಡ ಹಲವಿದೆ.

ಹೆಚ್.ಡಿ. ಕೋಟೆ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವಂಥ ಎನ್.ಜಿ.ಓ.ಗಳಲ್ಲಿ ಯಾವುದೇ ರೀತಿಯ ಸಂಯೋಜನೆ, ಚಟುವಟಿಕೆಗಳಲ್ಲಿ ಸಾಂಗತ್ಯ ಇರುವಂತೆ ನನಗೆ ತೋರುವುದಿಲ್ಲ. ಇದರಿಂದ ಎನ್.ಜಿ.ಓ.ಗಳಲ್ಲಿ ಹಾಗೂ ಫಲಾನುಭವಿಗಳಲ್ಲಿ ಇಬ್ಬರಲ್ಲೂ ಗೊಂದಲ, ಪೈಪೋಟಿ ಹಾಗೂ ಸಂಘರ್ಷ ಉಂಟಾದರೆ ಆಶ್ಚರ್ಯವಿಲ್ಲ. ಮುಂದೆ ಎಸ್.ವಿ.ವೈ.ಎಮ್‌ನ ಫಲಾನುಭವಿಗಳ ಅಭಿಪ್ರಾಯವನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಇದರ ಮೇಲೆ ಹೆಚ್ಚಿನ ಬೆಳಕು ಚೆಲ್ಲಲು ಪ್ರಯತ್ನಿಸಲಾಗುವುದು.

ವಿ.ಜಿ.ಕೆ.ಕೆ. ಒಳಗೊಂಡಿರುವ ಬುಡಕಟ್ಟು ಫಲಾನುಭವಿಗಳ ಅಭಿಪ್ರಾಯಗಳನ್ನು ವಿಶ್ಲೇಷಿಸುವುದು ಸೂಕ್ತ. ಈಗಾಗಲೇ ತಿಳಿಸಿರುವಂತೆ ವಿ.ಜಿ.ಕೆ.ಕೆ. ಮೈಸೂರು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕೆಲವು ಕಾಲದಿಂದ ಕೆಲಸ ಮಾಡುತ್ತಿದೆ. ಹಾಗಾಗಿ ಈ ಅಧ್ಯಯನದಲ್ಲಿ ಕೊಳ್ಳೇಗಾಲ, ಚಾಮರಾಜನಗರ ಹಾಗೂ ಯಳಂದೂರು ತಾಲೂಕುಗಳನ್ನು ಒಳಗೊಳ್ಳಲಾಗಿದೆ. ಇತ್ತೀಚೆಗೆ ವಿ.ಜಿ.ಕೆ.ಕೆ. ನಂಜನಗೂಡು ತಾಲ್ಲೂಕನ್ನೂ ಸೇರ್ಪಡೆ ಮಾಡಿಕೊಂಡಿದೆ. ಆದರೆ ಪ್ರಸ್ತುತ ಅಧ್ಯಯನ ಅದನ್ನು ಒಳಗೊಂಡಿಲ್ಲ. ಒಟ್ಟು ೨೪೯ ಮಂದಿ -ಎಲ್ಲರೂ ಸೋಲಿಗರೇ -ಬುಡಕಟ್ಟು ಫಲಾನುಭವಿಗಳನ್ನು ಪರಿಗಣಿಸಲಾಗಿದೆ. ಅವರು ಈ ಕೆಳಕಂಡಂತೆ ಚದುರಿದ್ದಾರೆ.

ತಾಲ್ಲೂಕು ಗ್ರಾಮ/ವಲಯ ಕುಟುಂಬಗಳ ಸಂಖ್ಯೆ
ಕೊಳ್ಳೆಗಾಲ ಕೋಣನಕೆರೆ ೨೫ (ಬಯಲು ಪ್ರದೇಶ)
ಚಾಮರಾಜನರ ಕನ್ನೇರ ಕಾಲೋನಿ ೩೫
ಕ್ಯಾತೆ ದೇವರಗುಡಿ ೧೩
ದೊಡ್ಡಸಂಪಿಗೆ ೦೧ ಬಿಳಿಗಿರಿರಂಗನ ಬೆಟ್ಟದಲ್ಲಿ
ಯಳಂದೂರು ಹೊಸಪೋಡು ೨೧
ಮುಟ್ಟದ ಗದ್ದೆ  ೧೯
ಸೀಗೆ ಬೆಟ್ಟ ೧೫
ಬಂಗ್ಲೆ ಪೋಡು ೨೦
ಪುರಾಣಿ ಪೋಡು ೫೮
ಯರಕನಗದ್ದೆ ಕಾಲೋನಿ ೨೨
ಯರಕನಗದ್ದೆ ಪೋಡು ೨೦

ಒಟ್ಟು

೧೧ ೨೪೯

ಕಾಡಿನ ಪ್ರದೇಶಕ್ಕೆ ಸಮೀಪದಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿರುವ ೧೭೬ ಸೋಲಿಗರನ್ನು ಅಧ್ಯಯನ ಮಾಡಲಾಗಿದೆ. ಮಾದರಿಯ ಸುಮಾರು ೧/೩ ಭಾಗದಷ್ಟಿರುವ ೯೩ ಬುಡಕಟ್ಟಿನವರು ಗ್ರಾಮಗಳ ಸಮೀಪ ಬದುಕುತಿದ್ದಾರೆ. ಈ ಸಮೂಹವು ಹೆಚ್ಚು ಹೆಚ್ಚು ಪ್ರಜ್ಞೆ ಹೊಂದಿದ್ದು ಜನರು, ನಾಯಕರು, ಮುಖಂಡರನ್ನು ಒದಗಿಸಿದೆ ಎನ್ನಬಹುದು.

ಈ ಮುಂದಿನ ಪುಟಗಳಲ್ಲಿ ಬುಡಕಟ್ಟು ಫಲಾನುಭವಿಗಳ ಅಭಿಪ್ರಾಯವನ್ನು ವಿಶ್ಲೇಷಿಸಲಾಗಿದೆ. ತನ್ನ ಸೇವೆಗಳ ಮೂಲಕ ಯಾವ ಪ್ರಮಾಣದಲ್ಲಿ ವಿ.ಜಿ.ಕೆ.ಕೆ. ಸೋಲಿಗರ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗಿದೆ ಎಂಬುದನ್ನು ಇದರ ಸಹಾಯದಿಂದ ತಿಳಿಯಬಹುದಾಗಿದೆ. ಅವರ ಮೌಲ್ಯಮಾಪನ ವಿ.ಜಿ.ಕೆ.ಕೆ. ಯ ಸಫಲತೆ ಅಥವಾ ಅದರ ವಿಫಲತೆಯ ಬಗ್ಗೆ ತಿಳಿಸುವುದು. ಇದರ ನಂತರ ಸರ್ಕಾರಿ ಅಧಿಕಾರಿಗಳು -ಅರಣ್ಯ ಇಲಾಖೆಯ ಪ್ರತಿಕ್ರಿಯೆಯೂ ಸೇರಿದಂತೆ- ಏನು ಅಭಿಪ್ರಾಯ ಪಟ್ಟಿದ್ದಾರೆ ಎಂಬುದನ್ನು ಪರಿಗಣಿಸಲಾಗುವುದು. ಅಂತಿಮವಾಗಿ, ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲೂಕುಗಳ ಬುಡಕಟ್ಟೇತರ ಗ್ರಾಮದ ನಿವಾಸಿಗಳ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುವುದು. ಸರ್ಕಾರಿ ಇಲಾಖೆಗಳು ಬುಡಕಟ್ಟು ಜನರಿಗೆ ಕೊಡಮಾಡಿರುವ ಒಂದಿಷ್ಟು ಭೂಮಿ ಮತ್ತಿತರ ಸಣ್ಣ ಪುಟ್ಟ ಆರ್ಥಿಕ ಸಹಾಯವೇ ನೆರೆಹೊರೆಯ ಬುಡಕಟ್ಟೇತರ ಗ್ರಾಮಸ್ಥರ ಕಣ್ಣಿಗೆ ದೊಡ್ಡದಾಗಿ ಕಾಣುವ ಸಂಭವವೇ ಹೆಚ್ಚು. ೧೯೮೬ ಡಿಸೆಂಬರ್‌ಡಾ. ಸುದರ್ಶನ್‌ಚಾಮರಾಜನಗರದ ತಾಲ್ಲೂಕು ಕಛೇರಿಯ ಮುಂದೆ ಧರಣಿ ಕುಳಿತು ಬುಡಕಟ್ಟಿನವರಿಗೆ ಅವರ ಭೂಮಿಯನ್ನು ಮರುಪೂರೈಸುವಂತೆ ಒತ್ತಾಯಿಸಿದ ಘಟನೆಯಿಂದ ಇದು ಸಾಬೀತಾಗುತ್ತದೆ. ಬುಡಕಟ್ಟಿನವರಿಗೆ ಇದ್ದ ಖಾತೆಯನ್ನು ಸಮೀಪದ ಜಮೀನಿನ ದೊಡ್ಡ ರೈತರ ಹೆಸರಿಗೆ ವರ್ಗಾಯಿಸಿದ್ದರು. ಡಾ. ಸುದರ್ಶನ್‌ರನ್ನು ದಸ್ತಗಿರಿ ಮಾಡಿ ಮೈಸೂರು ಸೆರೆಮನೆಗೆ ಕಳುಹಿಸಿದರು. ಆದರೆ ಮೂರು ತಾಲ್ಲೂಕುಗಳ ಸೋಲಿಗರ ಹೆಂಗಸರು, ಗಂಡಸರು ಮತ್ತು ಮಕ್ಕಳಾದಿಯಾಗಿ ಎಲ್ಲರೂ ಚಾಮರಾಜನಗರದ ಪೋಲಿಸರು ಡೆಪ್ಯುಟಿ ಸೂಪರಿಂಟೆಂಡೆಂಟರ ಕಛೇರಿಯ ಬಳಿ ಬಂದು ಘೇರಾಯಿಸಿದರು. ಇದರಿಂದ ಡಾ. ಸುದರ್ಶನ್‌ರವರನ್ನು ಈ ತಾಲ್ಲೂಕಿನ ಸೋಲಿಗರು ತಮ್ಮ ರಕ್ಷಕರೆಂದು ಬಗೆದಿರುವುದು ಅತ್ಯಂತ ಸ್ಪಷ್ಟವಾಗುತ್ತದೆ.

ಹಿಂದೆ ಆಗುತ್ತಿದ್ದಂತ ಈಗ ಬುಡಕಟ್ಟು ಜನರನ್ನು ಸರ್ಕಾರ ಹತ್ತಿಕ್ಕುವುದು ಸಾಧ್ಯವಾಗದ ಮಾತು. ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳ ಬೆಂಬಲವಿರುವ ಗ್ರಾಮೀಣ ಪ್ರದೇಶದ ಪ್ರಭಾವಿ ರೈತರನ್ನು ಮಣಿಸುವಂಥ ಸಂಗತಿ ಅಷ್ಟು ಸುಲಭವಾದುದಲ್ಲ. ಇಂಥದರಲ್ಲಿ ಈ ಸಮರದಲ್ಲಿ ವಿಜಯ ಸಾಧಿಸಿದುದಕ್ಕೆ ವಿ.ಜಿ.ಕೆ.ಕೆ. ಹಾಗೂ ಬಿಳಿಗಿರಿರಂಗನ ಬೆಟ್ಟದ ಸೋಲಿಗರು- ಈರ್ವರೂ ಅಭಿನಂದನಾರ್ಹರಾಗಿದ್ದಾರೆ. ಹಾಗಂದ ಮಾತ್ರಕ್ಕೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಬುಡಕಟ್ಟು ಜನರಿಗೆ ವಿರೋಧವೆಂತಾಗಲಿ ಅಥವಾ ಬುಡಕಟ್ಟೇತರ ಗ್ರಾಮಸ್ಥರು ಬುಡಕಟ್ಟಿನವರ ಜಮೀನು ಕಬಳಿಸಲು ಸದಾ ಹವಣಿಸುತ್ತಾ ಅವರ ಸಂವಿಧಾನಿಕ ಸವಲತ್ತುಗಳಿಗೆ ಕಂಟಕಪ್ರಾಯರಾಗಿದ್ದಾರೆ ಎಂದಾಗಲಿ ಆರ್ಥವಿಲ್ಲ.

ವಿ.ಜಿ.ಕೆ.ಕೆ.ಯ ಬಗ್ಗೆ ಸೋಲಿಗರು ಏನು ಅಭಿಪ್ರಾಯ ಹೊಂದಿದ್ಡಾರೆ ಎಂಬುದನ್ನು ಮೊದಲು ತಿಳಿಯೋಣ. ಮೂರು ತಾಲೂಕುಗಳಲ್ಲಿ ಹನ್ನೊಂದು ಪೋಡುಗಳಲ್ಲಿ ಚೆದುರಿ ಹೋಗಿರುವಂಥ ೨೪೯ ಸೋಲಿಗರನ್ನು ಸಂದರ್ಶಿಸಲಾಯಿತು. ಬೇರೆ ಬೇರೆ ತಾಲೂಕುಗಳಲ್ಲಿ ಸೋಲಿಗರು ಈ ರೀತಿ ಹಂಚಿಕೆಯಾಗಿದ್ದಾರೆ:

ತಾಲೂಕು ಸಂಖ್ಯೆ
ಯಳಂದೂರು ೧೭೬
ಚಾಮರಾಜನಗರ ೦೪೮
ಕೊಳ್ಳೇಗಾಲ ೦೨೫
ಒಟ್ಟು ೨೪೯

೧೭೬ರಲ್ಲಿ ೧೭೪ ಮಂದಿ ಕಳೆದ ಹತ್ತು ವರ್ಷಗಳಿಗೂ ಮೇಲ್ಪಟ್ಟು ಯಳಂದೂರು ತಾಲೂಕಿನ ಪೋಡುಗಳಲ್ಲಿ ವಾಸವಾಗಿದ್ದಾರೆ. ಅದೇ ತರಹ ಕೊಳ್ಳೆಗಾಲ ಪ್ರದೇಶದ ೨೫ ಮಂದಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅಲ್ಲಿ ವಾಸವಾಗಿದ್ದಾರೆ. ಹೆಚ್ಚು ಕಾಲ ಅವರು ಒಂದು ಕಡೆ ವಾಸವಾಗಿರುವುದರಿಂದ ಎನ್‌ಜಿಓಗಳು, ಸರ್ಕಾರಿ ಸಂಸ್ಥೆಗಳು ಹಾಗೂ ನೆರೆಹೊರೆಯ ಗ್ರಾಮದವರು ವಹಿಸಿರುವ ಪಾತ್ರದ ಬಗ್ಗೆ ಅವರ ಮೂಲಕ ತಿಳಿಯಲು ಅನುಕೂಲವಾಗುವುದು. ೧೬೬, ೪೦ ಮತ್ತು ೨೩ ಮಂದಿ ಕ್ರಮವಾಗಿ ಯಳಂದೂರು, ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲ್ಲೂಕಿನವರಾಗಿದ್ದಾರೆ. ೧೦, ೮ ಮತ್ತು ೨- ಒಟ್ಟು ೨೦-ಕುಟುಂಬಗಳು ವಲಸೆ ಬಂದವರಾಗಿದ್ದಾರೆ; ಆದರೆ ಅವರು ೧೦ ವರ್ಷಗಳಿಗೂ ಮೇಲ್ಪಟ್ಟು ಒಂದು ಜಾಗದಲ್ಲಿ ನೆಲೆಸಿದವರಾಗಿದ್ದಾರೆ. ಇದರಿಂದ ತಿಳಿಯುವುದೇನೆಂದರೆ ಅವರಿಗೆಲ್ಲ ವಿ.ಜಿ.ಕೆ.ಕೆ.ಯ ಅಸ್ತಿತ್ವ ಹಾಗೂ ಕಾರ್ಯಶೀಲತೆಯ ಪರಿಚಯವಿದೆ.

ಸಾಮಾನ್ಯವಾಗಿ ಬುಡಕಟ್ಟಿನವರ ಕುಟುಂಬಗಳಲ್ಲಿ ಮದುವೆಯಾದ ಕೂಡಲೇ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಪ್ರತ್ಯೇಕವಾಗಿ ತಮ್ಮ ಸಂಸಾರಗಳನ್ನು ಹೂಡುವುದರಿಂದ ಕುಟುಂಬಗಳು ಚೊಕ್ಕದಾಗಿರುತ್ತವೆ. ಆದಾಗ್ಯೂ ಪ್ರಸ್ತುತ ಅಧ್ಯಯನದ ಸಂದರ್ಭದಲ್ಲಿ ಕುಟುಂಬದಲ್ಲಿ ೨ ರಿಂದ ೭ ಮಂದಿಯವರೆಗೆ ಕಂಡುಬಂದರು. ಈ ಮುಂದಿನ ಪಟ್ಟಿಯಲ್ಲಿ ಕುಟುಂಬಗಳ ಸದ್ಯರ ವಿವರಣೆಯನ್ನು ನೀಡಲಾಗಿದೆ.

ಸದಸ್ಯರ ಸಂಖ್ಯೆ ಚಾಮರಾಜನಗರ ಕೊಳ್ಳೇಗಾಲ ಯಳಂದೂರು ಒಟ್ಟು
೦೩ ೦೧ ೦೧೬ ೦೨೦
೦೪ ೦೩ ೦೨೫ ೦೩೨
೧೧ ೦೯ ೦೪೪ ೦೬೪
೧೩ ೦೩ ೦೪೩ ೦೫೯
೦೬ ೦೫ ೦೨೮ ೦೩೯
೧೦ ೦೨ ೦೧೧ ೦೨೩
೦೧ ೦೧ ೦೦೩ ೦೦೫
೯ ಮತ್ತು ಹೆಚ್ಚು ೦೦೧ ೦೦೬ ೦೭
ಒಟ್ಟು ೪೮ ೨೫ ೧೭೬ ೨೪೯

ಈ ಪಟ್ಟಿಯಿಂದ ಬುಡಕಟ್ಟು ಜನರು ಕುಟುಂಬಗಳನ್ನು ಇಷ್ಟ ಪಡುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಚಾಮರಾಜನಗರದಲ್ಲಿ ೪೮ರಲ್ಲಿ ೩೧ ಮಂದಿ ೨ ರಿಂದ ೫ ಮಂದಿಯನ್ನೊಳಗೊಂಡ ಕುಟುಂಬದವರು; ಹಾಗೆಯೇ ಕೊಳ್ಳೆಗಾಲದಲ್ಲಿ ೨೫ ರಲ್ಲಿ ೧೬ ಮಂದಿ ಹಾಗೂ ಕೊಳ್ಳೇಗಾಲದಲ್ಲಿ ೧೭೬ಕ್ಕೆ ೧೨೮ ಮಂದಿ ಆ ರೀತಿ ಬಂದವರಾಗಿದ್ದಾರೆ. ಮದುವೆಯಾದವರ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಂಡು ನಾವು ಹೋಲಿಕೆ ಮಾಡುವುದಾರೆ ಇನ್ನೂ ಕುತೂಹಲಕಾರಿಯಾಗಿರುತ್ತದೆ.

ಚಾಮರಾಜನಗರದಲ್ಲಿ ೩೭ ಕುಟುಂಬಗಳಲ್ಲಿ ಇಬ್ಬರು ದಂಪತಿಗಳಿದ್ದಾರೆ. ೪೪ ಕುಟುಂಬಗಳಲ್ಲಿ ಮದುವೆಯಾಗದವರು ಸಾಂದ್ರವಾಗಿದ್ದಾರೆ. ಕೊಳ್ಳೆಗಾಲದಲ್ಲಿ ೨೫ ಕುಟುಂಬಗಳಲ್ಲಿ ಇಬ್ಬರು ದಂಪತಿಗಳಿದ್ದಾರೆ. ಉಳಿದ ೨೦ ಕುಟುಂಬಗಳಲ್ಲಿ ಅವಿವಾಹಿತರು ಅಧಿಕವಾಗಿದ್ದಾರೆ. ಯಳಂದೂರು ಪ್ರದೇಶದಲ್ಲಿ ೧೭೬ ಕುಟುಂಬಗಳಲ್ಲಿ ೧೪೭ ಕುಟುಂಬಗಳು ಕೇವಲ ೨ ದಂಪತಿಗಳನ್ನು ಒಳಗೊಂಡಿದ್ದರೆ ೧೫೬ ಕುಟುಂಬಗಳಲ್ಲಿ ೧ ರಿಂದ ೫ ಮಂದಿ ಅವಿವಾಹಿತ ವ್ಯಕ್ತಿಗಳಿದ್ದಾರೆ.

ಬಹು ಕೂತೂಹಲಕಾರಿಯಾದ ಸಂಗತಿಯೆಂದರೆ, ವಿವಾಹ ವಿಚ್ಛೇದನ, ಬಿಟ್ಟುಬಿಡುವುದು ಅಥವಾ ಬೇರೆಯಾಗುವ ಒಂದೇ ಒಂದು ಉದಾಹರಣೆಯೂ ಕಾಣಸಿಗಲಿಲ್ಲ, ಜೊತೆಗೆ ವಿಧವೆಯರು ಹಾಗೂ ವಿಧುರರ ಸಂಖ್ಯೆಯೂ ಕೂಡ ತೀರ ಗೌಣವಾಗಿ ಕಂಡಿತು.

ವಯಸ್ಸಿನ ಗುಂಪುಗಳ ವಿಶ್ಲೇಷಣೆಯನ್ನು ಕೂಡ ಮಾಡಲಾಗಿದೆ. ಮಾಹಿತಿ ಒದಗಿಸಿರುವವರ ಬಳಿ ವಯಸ್ಸಿನ ದಾಖಲು ಇಲ್ಲದಿರುವುದರಿಂದ ಅವರು ಹೇಳುವುದು ಕೇವಲ ಅಂದಾಜು ಆಗಿರುವ ಸಂಭವವೇ ಹೆಚ್ಚು, ಕೆಲವು ವೇಳೆ ತಪಸೀಲುದಾರರು ಮುಖ ನೋಡಿ ವ್ಯಕ್ತಿಗಳ ವಯಸ್ಸನ್ನು ಅಂದಾಜು ಮಾಡುವ ಪರಿಪಾಠವೂ ಉಂಟು. ಇದರ ಪ್ರಕಾರ ಚಾಮರಾಜನಗರ ತಾಲೂಕಿನಲ್ಲಿ ೫-೧೦ ವಯೋಮಾನದ ಮಕ್ಕಳು ಅಧಿಕ ಸಂಖ್ಯೆಯಲ್ಲಿರುವುದು ಕಂಡು ಬಂದಿದೆ. ೪೮ರಲ್ಲಿ ೪೭ ಕುಟುಂಬಗಳು ಈ ವಯೋಮಾನದ ಮಕ್ಕಳನ್ನು ಹೊಂದಿದ್ದರೆ, ೨೦-೩೦, ೩೦-೪೦ ವಯೋಮಾನದ ಗುಂಪುಗಳು ಕ್ರಮವಾಗಿ ೨೬ ಮತ್ತು ೩೨ ಕುಟುಂಬಗಳನ್ನು ಪ್ರತಿನಿಧಿಸುತ್ತವೆ. ಇವೆರಡು ಗುಂಪುಗಳಲ್ಲಿಯೇ ಅಧಿಕ ಸಂಖ್ಯೆಯಲ್ಲಿ ವಿವಾಹಿತರಿರುವುದೂ ಕೂಡ. ಕೊಳ್ಳೇಗಾಲ ತಾಲೂಕಿನಲ್ಲಿ ೫-೧೦ ಹಾಗೂ ೧೦-೨೦ ರ್ವರ್ಷದವರು ಕ್ರಮವಾಗಿ ೧೧೧ ಮತ್ತು ೧೦೫ ಕುಟುಂಬಗಳಲ್ಲಿ ಕಂಡುಬಂದರು. ೨೦-೩೦, ೩೦-೪೦ ರ್ವರ್ಷದವರು ಕ್ರಮವಾಗಿ ೧೧೩ ಮತ್ತು ೧೦೦ ಕುಟುಂಬಗಳಲ್ಲಿ ಕಂಡುಬಂದರು. ೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಚಾಮರಾಜನಗರ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕುಗಳಲ್ಲಿ ಕ್ರಮವಾಗಿ ೨೨, ೭ ಮತು ೬೦ ಕುಟುಂಬಗಳಲ್ಲಿ ಕಂಡುಬರುತ್ತಾರೆ. ೫೦-೬೦ ಹಾಗೂ ೬೦ ವರ್ಷಕ್ಕಿಂತ ಮೇಲ್ಪಟ್ಟವರು ಚಾಮರಾಜನಗರ ಕೊಳ್ಳೇಗಾಲ ಹಾಗೂ ಪ್ರದೇಶಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಕಂಡುಬಂದರು. ಆರಂಭದಲ್ಲೇ ಸೂಚಿಸಿದಂತೆ ಈ ಗುಂಪೀಕರಣ ಸಂಭಾವ್ಯತೆಯನ್ನು ಸೂಚಿಸುತ್ತದೆ. ಮದ್ಯಮ ಹಂತದಲ್ಲಿ ಸಮರ್ಥರೂ, ದೃಢಕಾಯರೂ ಆದಂಥ ಗುಂಪುಗಳನ್ನು ಗುರಿತಿಸಬಹುದಾಗಿದೆ. ಬುಡಕಟ್ಟಿನವರಲ್ಲಿ ಗೃಹಕೃತ್ಯವನ್ನು ಮಹಿಳೆಯರು ಹಾಗೂ ಪುರುಷರು ಒಟ್ಟಾಗಿ ನಿರ್ವಹಿಸುವುದರಿಂದ ಅವರು ದೃಢಕಾರಾಗಿರುವುದು ಸಹಜವೇ ಆಗಿದೆ.

ಈ ಅಧ್ಯಯನದಲ್ಲಿ ಒಳಗೊಂಡ ಮಾದರಿಯಲ್ಲಿ ಒಟ್ಟು ೬೦೫ ಮಂದಿ ಪುರುಷರೂ, ೫೯೩ ಮಹಿಳೆಯರೂ ಇದ್ದಾರೆ. ಲಿಂಗವನ್ನಾಧರಿಸಿ ಹಾಗೂ ತಾಲೂಕುವಾರು ಸಂಖ್ಯೆಯನ್ನು ನೀಡುವುದಾದರೆ, ಚಾಮರಾಜನಗರದಲ್ಲಿ ೧೨೫ ಪುರುಷರು, ೧೧೫ ಸ್ತ್ರೀಯರಿದ್ದಾರೆ, ಕೊಳ್ಳೇಗಾಲದಲ್ಲಿ ೬೨ ಮಂದಿ ಪುರುಷರು ಹಾಗೂ ೬೯ ಮಂದಿ ಮಹಿಳೆಯರು, ಯಳಂದೂರಿನಲ್ಲಿ ಇವರ ಸಂಖ್ಯೆ ಕ್ರಮವಾಗಿ ೪೧೮ ಮತ್ತು ೪೦೯ ಆಗಿದೆ.

ವಿ.ಜಿ.ಕೆ.ಕೆ. ಯಾವ ರೀತಿ ಸೇವೆಗಳನ್ನು ಮಾಡಿದೆ ಎಂಬ ಪ್ರಶ್ನೆಗೆ ಚಾಮರಾಜನಗರದಿಂದ ಉತ್ತರಿಸಿರುವ ೪೮ ಮಂದಿಯೂ ಸಹ ಸಂಸ್ಥೆಯಿಂದ ಶೈಕ್ಷಣಿಕ, ವೈದ್ಯಕೀಯ/ ಅರೋಗ್ಯ, ಆರ್ಥಿಕ ಹಾಗೂ ಬುಡಕಟ್ಟು ಅರಿವಿನ ಚಟುವಟಿಕೆಗಳ ಸಂಬಂಧ ಸೇವೆಯನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ಕೊಳ್ಳೇಗಾಲದ ೧೬ ಬುಡಕಟ್ಟು ಕುಟುಂಬಗಳು ಆರ್ಥಿಕ, ವೈದ್ಯಕೀಯ/ ಅರೋಗ್ಯ, ಹಾಗೂ ಸಾಮನ್ಯ ಅರಿವು ಪಡೆದಿರುವುದಾಗಿ ತಿಳಿಸಿವೆ. ಇನ್ನೂ ಎರಡು ಕುಟುಂಬಗಳು ಶಿಕ್ಷಣ, ವೈದ್ಯಕೀಯ/ ಅರೋಗ್ಯ, ಸಹಾಯವನ್ನು ಪಡೆದಿವೆ. ಯಳಂದೂರು ಪ್ರದೇಶದಲ್ಲಿ ೧೨೧ ಕುಟುಂಬಗಳು ನಾಲ್ಕೂ ರೀತಿಯ ಸೇವೆಯನ್ನು ಪಡೆದಿದ್ದರೆ, ೫೨ ಕುಟುಂಬಗಳು ಶಿಕ್ಷಣ, ವೈದ್ಯಕೀಯ/ ಅರೋಗ್ಯ, ಹಾಗೂ ಅರಿವನ್ನು ಪಡೆದಿವೆ. ಉಳಿದ ೩ ಕುಟುಂಬಗಳಿಗೂ ಶಿಕ್ಷಣ, ವೈದ್ಯಕೀಯ/ ಅರೋಗ್ಯ, ಸಹಾಯ ದೊರಕಿದೆ. ಸೇವೆಯ ಗುಣಮಟ್ಟದ ಬಗ್ಗೆ ಚಾಮರಾಜನಗರ ಹಾಗೂ ಯಳಂದೂರಿನ ನೂರಕ್ಕೆ ನೂರು ಸೋಲಿಗರು ಸಕಾರತ್ಮಕವಾಗಿ ಹೇಳಿದರೆ, ಕೊಳ್ಳೇಗಾಲದವರಲ್ಲಿ ೧/೪ ಭಾಗದ ಜನ ಮಾತ್ರ ಆ ಅಭಿಪ್ರಾಯವನ್ನು ಹೊಂದಿದವರಾಗಿದ್ದಾರೆ.

ಚಾಮರಾಜನಗರ ಮತ್ತು ಯಳಂದೂರಿನವರ ಪ್ರತಿಕ್ರಿಯೆ ನೂರಕ್ಕೆ ನೂರರಷ್ಟಿದೆ. ಎನ್‌ಜಿಓಗಳ ಬುಡಕಟ್ಟು ಜನರ ಸೇವೆಯ ನಿಸ್ವಾರ್ಥತೆಯ ಬಗ್ಗೆ ಕೊಳ್ಳೇಗಾಲದವರಲ್ಲಿ ೩/೪ ಭಾಗದವರು ಒಪ್ಪಿಗೆ ನೀಡಿದರೆ ೭ ಜನರು ನಕರಾತ್ಮಕವಾಗಿ ಹೇಳಿದ್ದಾರೆ.

ನಾಲ್ಕೂ ತಾಲ್ಲೂಕುಗಳ ಸೋಲಿಗ ಪ್ರತಿಕ್ರಿಯಕಾರರು ಔಪಚಾರಿಕ ಶಿಕ್ಷಣ, ವೃತ್ತಿ ತರಬೇತಿ, ನೇಯ್ಗೆ, ಸಣ್ಣ ಕೈಗಾರಿಕೆ, ಕುಶಲ ಹಾಗೂ ಅರೆಕುಶಲ ಕಸುಬುಗಳು, ಕಲೆ, ಕರಕೌಶಲ್ಯ ಮತ್ತಿತ್ಯಾದಿ ಆರ್ಥಿಕ ಚಟುವಟಿಕೆಗಳ ಸಂಬಂಧ ಬುಡಕಟ್ಟು ಕುಟುಂಬಗಳಿಗೆ ವಿ.ಜಿ.ಕೆ.ಕೆ. ಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ. ಎಲ್ಲಾ ಯೋಜನೆಗಳಲ್ಲಿ ಗರಿಷ್ಠ ಫಲಾನುಭವಿಗಳು ಯಳಂದೂರು ತಾಲ್ಲೂಕಿನವರಾಗಿದ್ದಾರೆ.

ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಅಥವಾ ಎನ್‌.ಜಿ.ಓ.ಗಳ ಬಳಿ ಹೋಗುವುದು ಸುಲಭವೇ ಎಂದು ಕೇಳಲಾದ ಪ್ರಶ್ನೆಗೆ ೩೭ ಮಂದಿ ಚಾಮರಾಜನಗರದ ಪ್ರತಿಕ್ರಿಯಕಾರರು ಎನ್‌.ಜಿ.ಓ.ಗಳನ್ನು ಸಮೀಪಿಸುವುದು ಸುಲಭವೆಂದು ಹೇಳಿದರೆ ಕೊಳ್ಳೇಗಾಲದ ೧೩ ಮಂದಿ ಎನ್‌.ಜಿ.ಓ.ಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ; ಯಳಂದೂರಿನ ೧೫೫ ಮಂದಿ ಎನ್‌.ಜಿ.ಓ.ಗಳ ಪರವಾಗಿ ಉತ್ತರ ನೀಡಿದ್ದಾರೆ.

ವಿ.ಜಿ.ಕೆ.ಕೆ. ಕಾರ್ಯಪ್ರವೃತಾವಾಗಿರುವ ಪ್ರದೇಶದಲ್ಲಿ ೫೦ ಬುಡಕಟ್ಟೇತರ ಗ್ರಾಮಗಳವರ ಪೈಕಿ ೨೯ ಗ್ರಾಮಸ್ಥರು ಎನ್.ಜಿ.ಓ.ಗಳ ಸ್ವಯಂ ಸೇವಾ ಕಾರ್ಯಕರ್ತರೆಂದು ಒಪ್ಪಿಕೊಂಡರೆ ೨೧ ಮಂದಿ ಅಲ್ಲವೆಂದು ಹೇಳಿದ್ದಾರೆ. ಅದೇ ರೀತಿ ೨೦ ಗ್ರಾಮಸ್ಥರು ಎನ್‌.ಜಿ.ಓ.ಗಳು ಹಾಗೂ ಸರ್ಕಾರ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ೨೮ ಮಂದಿ ಮಾತ್ರ ಇದನ್ನು ಅಲ್ಲಗಳೆದು ಬುಡಕಟ್ಟು ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಹರಿಸಲು ಎನ್‌.ಜಿ.ಓ.ಗಳು ಹಾಗೂ ಸರ್ಕಾರಿ ಇಲಾಖೆಗಳು ಸಂಯೋಜಿತ ರೀತಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಇದೇ ತರಹ ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು -ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿ- ಸರ್ಕಾರದ ಏಜೆನ್ಸಿಗಳ ಜೊತೆ, ಎನ್‌.ಜಿ.ಓ.ಗಳು ಹೇಗೆ ಕೆಲಸ ಮಾಡುತ್ತಿವೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಚಾಮರಾಜನಗರದಲ್ಲಿ ೧೬ ಮಂದಿಯ ಪೈಕಿ ೧೫ ಜನ, ಕೊಳ್ಳೇಗಾಲದಲ್ಲಿ ೧೫ರ ಪೈಕಿ ೧೩ ಹಾಗೂ ಯಳಂದೂರಿನಲ್ಲಿ ೧೯ರ ಪೈಕಿ ೧೮ ಮಂದಿ ವಿ.ಜಿ.ಕೆ.ಕೆ. ಸಂಪೂರ್ಣವಾಗಿ ಬುಡಕಟ್ಟು ಜನರ ಅಭಿವೃದ್ಧಿಗೆ ತೊಡಗಿಸಿಕೊಂಡಿರುವ ಸಮಾಜ ಸೇವಕರ ಒಂದು ಬದ್ಧತೆಯಿಂದ ಕೂಡಿದ ತಂಡವಾಗಿದೆಯೆಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಎನ್‌.ಜಿ.ಓ.ಗಳು ಜನರನ್ನು ಒಡೆದು ಬುಡಕಟ್ಟಿನವರನ್ನು ಶೋಷಣೆ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರವೇ ಬಂದಿದೆ ೬ ಮಂದಿ ಮಾತ್ರ ತಮಗೆ ತಿಳಿಯದು ಎಂದು ತಿಳಿಸಿದ್ದಾರೆ; ಉಳಿದಂತೆ ಬಾಕಿಯವರೆಲ್ಲರೂ ಎನ್‌.ಜಿ.ಓ.ಗಳು ಜನರನ್ನು ಒಡೆಯುವ ಅಥವಾ ಬುಡಕಟ್ಟಿನವರನ್ನು ಶೋಷಣೆ ಮಾಡುವ ಕಾರ್ಯದಲ್ಲಿ ನಿರತರಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನು ಎನ್‌.ಜಿ.ಓ.ಗಳು ಹಾದಿ ತಪ್ಪಿಸಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೂ ಕೂಡ ಅದೇ ತರಹ ಉತ್ತರ ಬಂದಿದೆ. ೫೦ ಮಂದಿ ಪೈಕಿ ೪೦ ಜನ ಸರ್ಕಾರಿ ಅಧಿಕಾರಿಗಳು ಬುಡಕಟ್ಟು ವಿಷಯಗಳಿಗೆ ಸಂಬಂಧಿಸಿದಂತೆ ಎನ್‌.ಜಿ.ಓ.ಗಳು ಸರ್ಕಾರಿ ಅಧಿಕಾರಿಗಳ ಹಾದಿ ತಪ್ಪಿಸುವುದಿಲ್ಲವೆಂದೇ ಹೇಳಿದ್ದಾರೆ. ಅಂತಿಮವಾಗಿ, ನಕಾರಾತ್ಮಕವಾದ ವರ್ತನೆಯ ಬಗ್ಗೆ ಕೇಳಲಾದ ಪ್ರಶ್ನೆಗಳು ಸರ್ಕಾರಿ-ವಿರೋಧಿ ಹಾಗೂ ಹಣಕಾಸಿನ ದುರುಪಯೋಗಕ್ಕೆ ಸಂಬಂಧಿಸಿದ್ದು ೪೭ ಮಂದಿ ‘ನಮಗೆ ಗೊತ್ತಿಲ್ಲ’ ಎಂಬ ಉತ್ತರವನ್ನು ನೀಡಿದ್ದಾರೆ.

ವಿ.ಜಿ.ಕೆ.ಕೆ. ಸರ್ಕಾರಿ ಅಧಿಕಾರಿಗಳು, ಅರಣ್ಯ ಇಲಾಖೆಯವರು ಹಾಗೂ ನೆರೆಹೊರೆಯ ಗ್ರಾಮಸ್ಥರ ಜೊತೆ ಸೋಲಿಗರು ಯಾವ ತರಹದ ಸಂಬಂಧ ಹೊಂದಿದ್ದಾರೆ. ಎಂಬ ಪ್ರಶ್ನೆಗೆ ಬಹುತೇಕ ಎಲ್ಲರೂ ಉತ್ತಮವಾದ ಸಂಬಂಧ ಹೊಂದಿರುವುದಾಗಿ ಉತ್ತರಿಸಿದ್ದಾರೆ. ಚಾಮರಾಜನಗರದಲ್ಲಿ ೪೮ಕ್ಕೆ ೪೧, ಕೊಳ್ಳೇಗಾಲದಲ್ಲಿ ೨೫ಕ್ಕೆ ೨೨ ಹಾಗೂ ಯಳಂದೂರಿನಲ್ಲಿ ೧೭೬ಕ್ಕೆ ೧೬೫ಮಂದಿ ಒಳ್ಳೆಯ ಸಂಬಂಧವಿರಿಸಿಕೊಂಡಿದ್ದಾರೆ. ಚಾಮರಾಜನಗರದಲ್ಲಿ ೭ಮಂದಿ, ಯಳಂದೂರಿನಲ್ಲಿ ಇಬ್ಬರು ಮಾತ್ರ ಅರಣ್ಯ ಅಧಿಕಾರಿಗಳ ಜೊತೆ ಸರಿಯಾದ ಸಂಬಂಧ ಹೊಂದಿಲ್ಲ. ಈ ಪ್ರಮಾಣ ಅತ್ಯಂತ ಕಡಿಮೆ ಎಂದು ಯಾರಾದರೂ ಹೇಳಬಹುದು.

ಸರ್ಕಾರಕ್ಕಿಂತ ಬುಡಕಟ್ಟು ಕ್ಷೇಮಾಭಿವೃದ್ಧಿಗೆ ಸ್ವಯಂ ಸೇವಾ ಸಂಸ್ಥೆಗಳೇ ಹೆಚ್ಚು ಸೂಕ್ತವೆಂದು ಬುಡಕಟ್ಟಿನವರು ಒಕ್ಕೊರಲಿನಲ್ಲಿ ಹೇಳುತ್ತಾರೆ. ಬುಡಕಟ್ಟು ಅಭಿವೃದ್ಧಿಯಲ್ಲಿ ವಿ.ಜಿ.ಕೆ.ಕೆ. ವಹಿಸಿರುವ ಪಾತ್ರದ ಬಗ್ಗೆ ಚಾಮರಾಜನಗರದಲ್ಲಿ ೪೭, ಕೊಳ್ಳೇಗಾಲದಲ್ಲಿ ೧೩ ಹಾಗೂ ಯಳಂದೂರಿನ ೧೭೩ ಕುಟುಂಬಗಳು, ಮುಕ್ತಕಂಠದಿಂದ ಪ್ರಶಂಸಿಸುತ್ತವೆ. ವಿ.ಜಿ.ಕೆ.ಕೆ. ಯ ಚಟುವಟಿಕೆಯಿಂದ ಬುಡಕಟ್ಟು ಜೀವನಶೈಲಿಯ ಮೇಲೇನಾದರೂ ಪರಿಣಾಮವಾಗಿದೆಯೇ? ಉತ್ತರ ಶಿಕ್ಷಣ, ಅರ್ಥಿಕ ಚಟುವಟಿಕೆ, ವೈದ್ಯಕೀಯ / ಅರೋಗ್ಯ, ಸೇವೆಗಳು, ರಾಜಕೀಯ, ಸಾಮಾಜಿಕ ಮತ್ತು ಸಾಮಾನ್ಯ ತಿಳುವಳಿಕೆಯನ್ನೆಲ್ಲ ಒಳಗೊಂಡಿದೆ. ಯಳಂದೂರು ಮತ್ತು ಚಾಮರಾಜನಗರ ತಾಲ್ಲೂಕುಗಳು ಗರಿಷ್ಠ ಪ್ರಮಾಣದ ಲಾಭವನ್ನು ಪಡೆದಿದೆ. ಕೊಳ್ಳೇಗಾಲ ಪ್ರದೇಶವು ಶಿಕ್ಷಣ, ವೈದ್ಯಕೀಯ / ಅರೋಗ್ಯ, ಸೇವೆಗಳನ್ನು ಮಾತ್ರ ಸ್ವೀಕರಿಸಿದೆ.

* * *