ಎಸ್‌.ವಿ.ವೈ.ಎಂ. ಅಥವಾ ಹ್ರಸ್ವವಾಗಿ ವಿವೇಕ ಕೇಂದ್ರವು ಆರಿಸಿಕೊಂಡ ಮೂರು ಸ್ವಯಂ ಸೇವಾಸಂಸ್ಥೆಗಳಲ್ಲಿ ಒಂದು. ಸಂಘಟನೆ ಮತ್ತು ಅದರ ಚಟುವಟಿಕೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಇದು ಅತ್ಯಂತ ನಿರಾಶದಾಯಕವಾದ ಎನ್.ಜಿ.ಓ. ಆಗಿದೆ. ವಿ.ಜಿ.ಕೆ.ಕೆ. ಮತ್ತು ಡೀಡ್‌ಸಂಸ್ಥೆಗಳು ಎಲ್ಲ ರೀತಿಯ ಸಹಕಾರ ನೀಡಿದರೆ ಎಸ್‌.ವಿ.ವೈ.ಎಂ.ಗೆ ಸಂಬಂಧಿಸಿದ ಅನುಭವ ನಿರಾಶಾದಾಯಕವಾಗಿದೆ.

ಈ ಯೋಜನೆಯ ನಿರ್ದೇಶಕರಾಗಿ ಈ ಸಂಸ್ಥೆಯೊಡನೆ ಮೈತ್ರಿಯಿಂದ ಸಹಕಾರ ಪಡೆಯಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ಸಫಲವಾಗಲಿಲ್ಲ. ೧೯೯೪ರ ಡಿಸೆಂಬರ್‌ನಷ್ಟು ಹಿಂದೆಯೇ ಈ ಸಂಸ್ಥೆಗೆ ಖುದ್ದು ಭೇಟಿ ನೀಡಿ ಡಾ. xರನ್ನು ಭೇಟಿಯಾದೆ; ಆತನೇ ಇದರ ಅಧ್ಯಕ್ಷರು. ಈ ಕಾರ್ಯಕ್ರಮದ ಬಗ್ಗೆ ವಿಶದವಾಗಿ ಅವರಿಗೆ ತಿಳಿಸಿ, ಅವರ ಸಂಸ್ಥೆಗೆ ವಸ್ತುರೂಪದ ದೇಣಿಗೆಯನ್ನು ನೀಡಿದೆ, ಆದಾಗ್ಯೂ ಬಂದಂಥ ಪ್ರತಿಕ್ರಿಯೆ ತಣ್ಣಗಿತ್ತು ಹಾಗೂ ಲೆಕ್ಕಾಚಾರದ್ದಾಗಿತ್ತು.

ಮೊದಮೊದಲು ೧೯೯೫ರ ಜನವರಿ ಮೂರನೇ ವಾರದಲ್ಲಿ ನಮ್ಮ ಸಂಶೋಧನಾ ತಂಡ ಬರಬಹುದೆಂದು ಆತ ಒಪ್ಪಿಗೆ ನೀಡಿದ್ದರು; ಆದರೆ ಗೊತ್ತಾದ ದಿನ ನಮ್ಮ ತಂಡ ಅಲ್ಲಿಗೆ ಹೋದಾಗ ಮಾರನೇ ದಿನವೇ ತಂಡದವರನ್ನು ವಾಪಸ್ಸು ಕಳಿಸಲು ತುರಾತುರಿ ತೋರಿದರು. ಆಡಳಿತ ನೋಡಿಕೊಳ್ಳುವ ಮಹಿಳೆ ದೂರವಾಣಿಯ ಮೂಲಕ ಈ ರೀತಿ ತಂಡವನ್ನು ವಾಪಸ್ಸು ಕಳುಹಿಸುತ್ತಿದ್ದೇವೆ ಎಂದು ತಿಳಿಸಿದಾಗ ನಾನು ಡಾ. xರ ಜೊತೆ ಮಾತನಾಡುವ ತನಕ ಹಾಗೆ ಮಾಡಬಾರದೆಂದು ನಾನು ಆಕೆಯನ್ನು ಪರಿಪರಿಯಾಗಿ ಕೇಳಿಕೊಂಡೆ. ಅನೇಕ ಬಾರಿ ನಾನು ಪ್ರಯತ್ನಿಸಿದ ನಂತರ ಆತನ ಸಂಪರ್ಕ ನನಗೆ ಸಿಕ್ಕಿದಾಗ, ಆ ವ್ಯಕ್ತಿಯ ಪ್ರತಿಕ್ರಿಯೆ ಬಹಳ ನಿರಾಶಾದಾಯಕವಾಗಿತ್ತು. ಬಹಳ ಪ್ರಯಾಸದಿಂದ ಆ ವ್ಯಕ್ತಿ ನಮ್ಮ ಸಂಶೋಧಕರು ಬುಡಕಟ್ಟು ಫಲಾನುಭವಿಗಳಿಂದ ಮಾಹಿತಿ ಸಂಗ್ರಹಿಸಲು ಒಂದು ವಾರದವರೆಗೆ ಉಳಿಯಬಹುದೆಂದು ಒಪ್ಪಿಗೆ ನೀಡಿದರು.

ನಮ್ಮ ಸಿಬ್ಬಂದಿಯ ಸದರಿ ಸಂಸ್ಥೆಯ ಒಡನಾಟದ ಅನುಭವವನ್ನು ನಾನು ಇಲ್ಲಿ ದಾಖಲಿಸಲು ಇಚ್ಚಿಸುವುದಿಲ್ಲ; ಕಾರಣ ಅದು ಅಷ್ಟು ಹಿತಕಾರಿಯಾಗಿಲ್ಲ. ನಮ್ಮ ಸಿಬ್ಬಂದಿ ಒಂದು ವಾರದ ನಂತರ ವಾಪಸ್ಸಾದರು, ಆದರೆ ಸುಮಾರ ೪೦ ಮಂದಿಯನ್ನು ಮಾತ್ರ ಅವರಿಗೆ ಸಂದರ್ಶಿಸುವುದಕ್ಕಾಗಿತ್ತು. ಅದಾದ ನಂತರ ಡಾ. xರನ್ನು ದೂರವಾಣಿಯ ಮೂಲಕ ಸಂಪರ್ಕಿಸಲು ಹಲವು ಸಲ ಪ್ರಯತ್ನಿಸಿದೆ. ನನ್ನದು ನಿಜವಾಗಿ ವ್ಯರ್ಥ ಪ್ರಯತ್ನವಾಗಿತ್ತು.

ಸಮಯ ಕಳೆಯುತ್ತಿದ್ದುದರಿಂದ ಡೀಡ್‌ಪ್ರದೇಶದ ಕಡೆ ನಮ್ಮವರನ್ನು ಹಚ್ಚಲು ನಿರ್ಧರಿಸಿದೆ. ನನ್ನ ಮುಂಚಿನ ಸಹೋದ್ಯೋಗಿಯೊಬ್ಬರು ನಮ್ಮ ಸಿಬ್ಬಂದಿಯನ್ನು ಹುಣಸೂರಿಗೆ ಜೊತೆಯಲ್ಲಿ ಕರೆದುಕೊಂಡು ಹೋದರು; ಡೀಡ್‌ಕಛೇರಿ ಇರುವುದು ಅಲ್ಲೆ. ಸಂಯೋಜಕರಾದ ಶ್ರೀ ಶ್ರೀಕಾಂತರನ್ನು ಭೇಟಿಯಾದಾಗ ಯಾವುದೇ ತಕರಾರಿಲ್ಲದೆ ಅವರು ನಮ್ಮವರಿಗೆ ಎಲ್ಲ ತರಹದ ಸಹಾಯ, ಸಹಕಾರವನ್ನು ನೀಡಿದರು. ಬುಡಕಟ್ಟು ಫಲಾನುಭವಿಗಳಿಂದ, ಬುಡಕಟ್ಟೇತರ ಗ್ರಾಮಸ್ಥರಿಂದ, ಸರ್ಕಾರಿ ಅಧಿಕಾರಿಗಳಿಂದ ಹಾಗೂ ಅರಣ್ಯ ಇಲಾಖೆಯವರಿಂದ ನಮ್ಮ ಸಂಶೋಧಕರು ಮಾಹಿತಿಯನ್ನು ಸಂಗ್ರಹಿಸಿದರು.

ಸಂಯೋಜಕರ ಸಂದರ್ಶನವನ್ನು ನಿರ್ದೇಶಕಿಯಾದ ನಾನೇ ಮಾಡುವುದೆಂದು ತೀರ್ಮಾನಿಸಿದ್ದೆ. ೧೯೯೫ರ ಮಾರ್ಚ್‌ಏಪ್ರಿಲ್‌ನ ಕಾಲ; ಮೊದಲೇ ದೂರವಾಣಿಯ ಮೂಲಕ ಸಂಭಾಷಣೆ ನಡೆಸಿದ್ದೆನಾಗಿ ಶ್ರೀಕಾಂತರನ್ನು ಭೇಟಿಯಾದೆ. ಶ್ರೀಕಾಂತರಿಂದ ಮಾಹಿತಿ ಸಂಗ್ರಹಿಸುವ ಕೆಲಸ ಬಹು ಉತ್ತೇಜನಕಾರಿಯಾದ ಅನುಭವವಾಗಿತ್ತು; ಅವರು ಮಂಗಳೂರಿನ ರೋಶ್ನಿ ನಿಲಯದಿಂದ ಸಮಾಜ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಾಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲು ಅದು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿತ್ತಷ್ಟೆ. ಆ ಸಂಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ನಾನು ಯಾವುದೇ ಸಂದರ್ಭದಲ್ಲಿ ಶ್ರೀಕಾಂತರನ್ನು ನೋಡಲು ಹೋಗಬಹುದಾಗಿತ್ತು.

ಡೀಡ್‌ಕ್ಷೇತ್ರದಲ್ಲಿ ನಾವು ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿರುವಾಗಲೇ ಡಾ. xರನ್ನ ಸಂಪರ್ಕಿಸಿ ಮನದಟ್ಟು ಮಾಡಲು ಪ್ರಯತ್ನಿಸುತ್ತಿದ್ದೆ. ಆದರೆ ಏನೂ ಫಲಕಾರಿಯಾಗಲಿಲ್ಲ. ಹಾಗಾಗಿ ಡೀಡ್‌ನ ಕೆಲಸ ಮುಗಿದ ಬಳಿಕ ನಮ್ಮ ಸಿಬ್ಬಂದಿಯನ್ನು ವಿ.ಜಿ.ಕೆ.ಕೆ.ಗೆ ಹಚ್ಚಿದೆ. ಆ ಸಂದರ್ಭದಲ್ಲಿ ಡಾ. ಸುದರ್ಶನ್‌ವಿದೇಶದಲ್ಲಿದ್ದರು; ಆದರೆ ಅವರ ಸಿಬ್ಬಂದಿ ವರ್ಗದ ಶ್ರೀ ಸೋಮಸುಂದರಮ್‌ಮತ್ತಿತರರು ನಮ್ಮ ಸಂಶೋಧಕರಿಗೆ ಸಹಾಯ ಮಾಡುತ್ತಾ ಅನೇಕ ಪೋಡುಗಳಲ್ಲಿ ಚೆದುರಿಹೋಗಿರುವ ಬುಡಕಟ್ಟಿನವರನ್ನು ಭೇಟಿ ಮಾಡುವ ವಿಧಾನವನ್ನು ಹೇಳಿಕೊಟ್ಟರು. ನಿರ್ದೇಶಕಿಯಾಗಿ ಪ್ರಧಾನ ಕಾರ್ಯದರ್ಶಿಯವರನ್ನು ಸಂದರ್ಶಿಸುವ ಕಾರ್ಯವನ್ನು ನನಗೇ ಇರಿಸಿಕೊಂಡಿದ್ದೆ. ಡಾ. ಸುದರ್ಶನ್‌ರವರು ಅಮೆರಿಕಾದಿಂದ ವಾಪಾಸ್ಸಾದಾಗ, ೧೯೯೫ರ ಮೇ ತಿಂಗಳಲ್ಲಿ ಸಂದರ್ಶನ ಸಾಧ್ಯವಾಯಿತು. ಸುದರ್ಶನ್‌ನಮ್ಮನ್ನು ಎಷ್ಟು ಚೆನ್ನಾಗಿ ನಡೆಸಿಕೊಂಡರೆಂದರೆ ಅವರು ತಮ್ಮ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳುವುದರ ಜೊತೆಗೆ, ಲಭ್ಯವಾಗಿದ್ದ ಎಲ್ಲ ಬರಹವನ್ನು ನಮಗೆ ನೀಡಿದರು ಹಾಗೂ ವಾರ್ಷಿಕ ವರದಿಯ ಒಂದು ಪ್ರತಿಯನ್ನೂ ಕೊಟ್ಟರು. ಮುಂದೆ ಸ್ಪಷ್ಟೀಕರಣವೇನಾದರೂ ಬೇಕಾದರೆ ನಾವು ಅವಶ್ಯವಾಗಿ ಅವರನ್ನು ಭೇಟಿಯಾಗುವ ಅವಕಾಶವೂ ಇತ್ತು.

ಎಸ್‌.ವಿ.ವೈ.ಎಮ್‌. ಸಂಘಟನೆಯ ವಿಷಯದಲ್ಲಿ ನಾವೇನು ಮಾಡಬೇಕೆಂದು ನನಗೆ ತೋಚದಾಯಿತು. ಹೆಚ್‌.ಡಿ. ಕೋಟೆ ಪ್ರದೇಶದಲ್ಲಿ ಅನೇಕ ಎನ್‌.ಜಿ.ಓ.ಗಳು ಕೆಲಸ ಮಾಡುತ್ತಿರುವ ಸಂಗತಿ ಈ ವೇಳೆಗಾಗಲೇ ನಮಗೆ ಖಚಿತವಾಗಿತ್ತು ಮತ್ತು ಯಾವುದೇ ಒಂದು ಎನ್‌.ಜಿ.ಓ.ಗೆ ಇದೇ ಸ್ಥಳವೆಂದು ನಿಗದಿಯಾಗಿ ಕೂಡ ಇರಲಿಲ್ಲ. ಈ ಲೋಪವನ್ನು ಲಾಭಕ್ಕೆ ತಿರುಗಿಸಿಕೊಂಡು ಬುಡಕಟ್ಟು ಫಲಾನುಭವಿಗಳು, ಬುಡಕಟ್ಟೇತರ ಗ್ರಾಮಸ್ಥರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆಯಲು ನಾನು ಮುಂದಾದೆ. ಈ ವೇಳೆಗಾಗಲೇ ನಮ್ಮ ಸಂಶೋಧನಾ ತಂಡವೂ ಸಾಕಷ್ಟು ಅನುಭವ ಪಡೆದಿದ್ದುದರಿಂದ ಯಾವುದೇ ತೊಂದರೆಯಿಲ್ಲದೆ ಎಸ್‌.ವಿ.ವೈ.ಎಂ.ನ ಸಹಾವಿಲ್ಲದೆಯೇ ಮಾಹಿತಿ ಸಂಗ್ರಹಿಸಲು ಮುಂದಾಯಿತು. ಆದರೆ ಆ ಸಂಘಟನೆಗೆ ಸಂಬಂಧಿಸಿದಂಥ ವಿವರವನ್ನು ಸಂಗ್ರಹಿಸುವುದು ಸಾಹಸ ಕಾರ್ಯವಾಯಿತು. ನಿದೇರ್ಶಕರಿಗೆ ಡಾ. xರ ಭೇಟಿ ಸಾಧ್ಯವಾಗಲೇ ಇಲ್ಲ. ಕಾಗದಗಳಿಗೆ ಉತ್ತರಿಸುವುದಾಗಲಿ, ದೇಣಿಗೆಯನ್ನು ಸ್ವೀಕರಿಸಿದ್ದಕ್ಕೆ ಉತ್ತರಿಸುವ ಪರಿಪಾಠವನ್ನೂ ಆತ ಇಟ್ಟುಕೊಂಡಿರಲಿಲ್ಲ.

ನನ್ನ ಮುಂಚಿನ ಸಹೋದ್ಯೋಗಿಗಳಿಬ್ಬರ ಜೊತೆ ನಾನು ಈ ಸಮಸ್ಯೆಯನ್ನು ಕುರಿತು ಚರ್ಚಿಸುವಾಗ ಅವರು ಡಾ. xರವರ ಆಪ್ತ ಸ್ನೇಹಿತರೆಂದು ತಿಳಿದು ಎಲ್ಲೋ ಒಂದು ಆಶಾಕಿರಣ ಹೊಳೆದ ಹಾಗಾಯಿತು. ಸಂಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಅವರು ಮುಂದಾದರು. ಅವರು ಈ ಕಾರ್ಯವನ್ನು ಕೈಕೊಂಡು ಮುಗಿಸುವ ಹೊತ್ತಿಗೆ ಸಾಕಷ್ಟು ಶ್ರಮ ಹಾಗೂ ಸಮಯ ವ್ಯಯವಾಯಿತು. ಒಂದು ಸಂಜೆ ಅವರು ಕೆಂಚನಹಳ್ಳಿಗೆ ಹೋಗಿ ಪ್ರಶ್ನಾವಳಿಗಳನ್ನೆಲ್ಲ ಭರ್ತಿ ಮಾಡಿ ಕೆಲವು ದಿನಗಳ ಬಳಿಕ ಅದನ್ನು ನನಗೆ ಹಿಂತಿರುಗಿಸಿದರು; ಉಳಿದ ದಾಖಲುಗಳನ್ನು ರಾಮಕೃಷ್ಣಾಶ್ರಮಕ್ಕೆ ತಲುಪಿಸುವುದಾಗಿಯೂ ತಿಳಿಸಿದರು. ಅವರು ನಿಗದಿಪಡಿಸಿದ್ದ ದಿನಾಂಕ ಅಕ್ಟೋಬರ್‌೩ನೇ ತಾರೀಖು. ನಾನು ಆ ದಿನದವರೆಗೂ ಅವರಿಗೆ ನೆನಪು ಮಾಡುತ್ತಲೇ ಇದ್ದೆ; ಆದರೆ ಸಾಮಗ್ರಿಯ ಸುಳಿವೇ ಇಲ್ಲ. ದಾಖಲು ಬಂದಿರುವುದಾಗಿಯೂ ಆದರೆ ಯಾವ ಕಾರಣದಿಂದಲೋ ಅದನ್ನು ಪಡೆಯಲಾಗುತ್ತಿಲ್ಲವೆಂದು ಅವರು ಹೇಳುತ್ತಲೇ ಇದ್ದರು. ಸಂದರ್ಶನದ ಸಮಯದಲ್ಲಿ ಅವರು ಮಾಡಿದ್ದರೆನ್ನಲಾದ ಹೆಚ್ಚುವರಿ ಟಿಪ್ಪಣಿಗಳನ್ನು ಸಹ ನನಗೆ ಅವರು ತಲುಪಿಸದಾದರು.

ಈ ಹಿನ್ನಲೆಯ ನಂತರ ಪ್ರಶ್ನಾವಳಿಯಲ್ಲಿ ಸಂಘಟನೆಯ ಬಗ್ಗೆ ನಮೂದಾಗಿರುವ ಮಾಹಿತಿಯನ್ನು ತಿಳಿಸುತ್ತೇನೆ; ಬುಡಕಟ್ಟು ಫಲಾನುಭವಿಗಳ ಅನುಭವವದ ವಿಶ್ಲೇಷಣೆಯಿಂದ ಈ ಸಂಘಟನೆಯ ಚರಿತ್ರೆ ಹಾಗೂ ಕೆಲಸದ ಬಗ್ಗೆ ತಿಳಿದುಬರುವುದು. ವಾಸ್ತವಾಂಶಗಳೇ ಎಲ್ಲವನ್ನು ತಿಳಿಸುತ್ತವೆ.

ಎಸ್‌.ವಿ.ವೈ.ಎಂ. ಸಂಸ್ಥೆಯವರನ್ನು ಒಪ್ಪಿಸಲಾಗದೆ ನಾನು ಪರಾಭವಗೊಂಡೆ ಎಂದು ಹೇಳಲಾರೆ. ಈ ವಿಷಯವಾಗಿ ಅವರು ತೋರಿದ ಅಸಹಕಾರ ಮಾತ್ರ ನನಗೆ ಇಂದಿಗೂ ಅರ್ಥವಾಗಿಲ್ಲ. ನನ್ನ ಪೂರ್ವದ ಸಹೋದ್ಯೋಗಿಗಳ ಪ್ರತಿಕ್ರಿಯೆ ಮತ್ತು ವಾದ ನನ್ನನ್ನು ದಂಗು ಬಡಿಸಿದೆ. ಈ ಸಂಘಟನೆಗೆ ಕುರೂಪದ ಮುಖವೊಂದು ಇಲ್ಲದಿದ್ದರೆ ಮಾಹಿತಿ ನೀಡದೆ ನನ್ನ ಸಹೋದ್ಯೋಗಿಗಳು ಆ ರೀತಿ ಕಾಲ ನೂಕುತ್ತಿರಲಿಲ್ಲ.

ಒಂದು ಸಂಶೋಧನಾ ಘಟಕದ ವಿಷಯದಲ್ಲಿ ಇಷ್ಟು ಕೆಟ್ಟದಾಗಿ ವರ್ತಿಸುವ ಸ್ವಯಂ ಸೇವಾ ಸಂಸ್ಥೆ ತಾನು ಸೇವೆ ಮಾಡುತ್ತೇನೆಂದು ಹೇಳಿಕೊಳ್ಳುವ ಅನಕ್ಷರಸ್ಥರಾದ ಏನೂ ಅರಿಯದ ಬುಡಕಟ್ಟು ಜನರನ್ನು ಇನ್ನಾವ ರೀತಿ ಕಾಣುವುದಿಲ್ಲ? ವಿಷಯಾಂತರ ಮಾಡುವ ಬದಲು ಒಂದು ಸಂಗತಿ ಹೇಳಿ ಮುಕ್ತಾಯ ಮಾಡುವೆ; ಅದೆಂದರೆ ನಮ್ಮ ದೇಶದಲ್ಲಿ ಎಲ್ಲ ತರಹದ ಎನ್‌.ಜಿ.ಓ.ಗಳು ಇವೆ. ಲಭ್ಯಗೊಳಿಸಿದ ಹಣಕಾಸಿನ ಸಹಾಯ ಲೆಕ್ಕಕ್ಕೆ ಇರುವುದಿಲ್ಲ; ಹಾಗಾಗಿ ಸದರಿ ಸಂಘಟನೆಯು ನಮಗೆ ತೋರಿದ ವರ್ತನೆ ಸಹಜವಾಗಿಯೇ ಆಗಿದೆ. ಆದರೆ ನನಗೆ ವಿಷಾದವಿಲ್ಲ; ನಾನು ಇದರಿಂದ ಅಧೀರಳೂ ಆಗಿಲ್ಲ. ಪ್ರಾಯಶಃ ಇದು ಭಾರತದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಂದು ಹಂತ ಎಂದು ತಿಳಿಯಬೇಕೆಂದು ತೋರುತ್ತದೆ!

ಭಾರತ ಸರ್ಕಾರದ ಗೃಹಖಾತೆ ಸಚಿವಾಲಯದಲ್ಲಿ ಎಫ್‌.ಸಿ.ಆರ್.ಎ. ೧೯೭೬, ಸಂಖ್ಯೆ ೦೯೪೫೯೦೧೦೨, ಇದರಡಿಯಲ್ಲಿ ವಿವೇಕ ಒಂದು ಸಂಘವಾಗಿ ಡಾ. x ಅವರು ಅಧ್ಯಕ್ಷರಾಗಿ ನೊಂದಾವಣೆಯಾಗಿದೆ. ಆತ್ಮ ಸಾಫಲ್ಯ ಹಾಗೂ ಸಮಾಜ ಸೇವೆಯಲ್ಲಿ ಇದಕ್ಕೆ ಸ್ಪೂರ್ತಿ.

ಕಾಡು ಕುರುಬ, ಜೇನು ಕುರಬ, ಯರವ, ಪಣಿಯ ಮತ್ತು ಬೇಡರು ಇರುವ ಹೆಚ್‌.ಡಿ. ಕೋಟೆ ತಾಲೂಕಿನ ಕೆಂಚನಹಳ್ಳಿಯನ್ನು ಆಯ್ದಕೊಳ್ಳುವುದಕ್ಕೆ ಕಾರಣವೆಂದರೆ, ಇಲ್ಲಿನ ಜನಗಳು ಅತ್ಯಂತ ಅಂಚಿಗೆ ತಳ್ಳಲ್ಪಟ್ಟವರು ಹಾಗೂ ಎರಡು ಬಾರಿ ಸ್ಥಳಾಂತರಗೊಂಡು ಪುನರ್ವಸತಿ ಪಡೆದಿರುವವರಾಗಿದ್ದಾರೆ.

ಬುಡಕಟ್ಟಿನವರ ಮೊದಲ ಪ್ರತಿಕ್ರಿಯೆಯ ಬಗ್ಗೆ ಕೇಳಿದರೆ ಡಾ. x ಹೇಳುತ್ತಾರೆ: “ಮೊದಲು ಈ ಜನರು ‘ಸಂಶಯದಿಂದ’ ಹೆಚ್ಚು ‘ಎಚ್ಚರಿಕೆ’ಯಿಂದ ಇದ್ದರು. ‘ಯಾರಿಂದೇನಾಗಬೇಕು’ ಎಂಬ ಧೋರಣೆ ಕೂಡ ಇತ್ತು. ಪ್ರಾಯಶಃ ಈಗಲೂ ಕೂಡ ಅದೇ ತರಹದ ಧೋರಣೆ ಮುಂದುವರಿದಿರಬಹುದು”.

ಆರಂಭದಲ್ಲಿ ಈ ಸಂಘಟನೆ ವೈದ್ಯಕೀಯ/ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ತರುವಾಯ ತನ್ನ ಸೇವೆಯನ್ನು ವಿಸ್ತರಿಸಿಕೊಂಡು ಶಿಕ್ಷಣ, ಸಾಮಾಜಿಕ ಸಮಷ್ಟೀಕರಣ, ಆರ್ಥಿಕ ಚಟುವಟಿಕೆಗಳು (ಭೂಮಿ ಮತ್ತು ಭೂಮಿಯೇತರ ಆಧಾರ) ಪರಿಸರವನ್ನು ಒಳಗೊಂಡುದಾಗಿ ಸಂಘಟನೆ ಹೇಳಿಕೊಳ್ಳುತ್ತದೆ. ಈ ಸಂಘಟನೆಯ ಕೆಲಸದಿಂದ ಹತ್ತಿರ ಹತ್ತಿರ ೧೩,೫೦೦ ಮಂದಿ (೧೫೦೦ ಮಕ್ಕಳು, ೬೦೦೦ ಗಂಡಸರು, ೬೦೦೦ ಮಹಿಳೆಯರು) ಲಾಭ ಪಡೆದಿರುವುದಾಗಿಯೂ ತಿಳಿಸುತ್ತದೆ.

ಈ ಸಂಘಟನೆ ನಿವೇಶನ, ಕಟ್ಟಡ, ಎಲ್ಲ ಸೇರಿದಂತೆ ಎಷ್ಟು ಚರಾಸ್ತಿಯನ್ನು ಹೊಂದಿದೆಯೆಂದು ಸ್ಪಷ್ಟವಾಗಿ ತಿಳಿಯುವುದಿಲ್ಲ; ಆದರೆ ಇದರಲ್ಲಿ ಸ್ವಲ್ಪ ಭಾಗ ಕೊಂಡುಕೊಂಡದ್ದು, ಇನ್ನು ಸ್ವಲ್ಪ ಭಾಗ ಸರ್ಕಾರ ಮಂಜೂರು ಮಾಡಿದ್ದು ಮತ್ತು ಉಳಿದ ಭಾಗವನ್ನು ಖಾಸಗಿಯವರು ದೇಣಿಗೆಯಾಗಿ ನೀಡಿದ್ದೆಂದು ಹೇಳಲಾಗುತ್ತದೆ.

ಸಮಗ್ರ ಸಮುದಾಯ ಅಭಿವೃದ್ಧಿಗಾಗಿ ನೋರಾಡ್‌ದಿಂದ ಈ ಸಂಘಟನೆ ೧೯೯೨-೯೩ ಹಾಗೂ ೧೯೯೩-೯೪ರಲ್ಲಿ ಕ್ರಮವಾಗಿ ೪.೯೮ ಲಕ್ಷ ಹಾಗೂ ೭.೨೭ ಲಕ್ಷ ರೂಪಾಯಿಗಳನ್ನು ಸ್ವೀಕರಿಸಿರುತ್ತದೆ. ಶಾಲೆ ಮತ್ತು ಆಸ್ಪತ್ರೆಗಾಗಿ ಭಾರತ ಸರ್ಕಾರವು ೧೯೯೪-೯೫ರ ಸಾಲಿಗೆ ೮.೫ ಲಕ್ಷ ರೂಪಾಯಿಗಳನ್ನು ನೀಡಿದೆ.

ಈಗ ಸಂಘಟನೆಯ ಹೆಚ್ಚು ಶಾಲಾ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸುತ್ತಿರುವದಾಗಿ ಕೇಳಿದ್ದೇನೆ. ನಾನು ಸಂಘಟನೆಗೆ ಭೇಟಿ ಕೊಟ್ಟಿದ್ದಾಗ ಇದ್ದಂಥ ಒಬ್ಬರು ಇಬ್ಬರು ವೈದ್ಯರೂ ಕೂಡ ಈಗ ಅಲ್ಲಿಂದ ನಡೆದಿದ್ದು ಆರೋಗ್ಯ ಸೇವೆ ಸಂಪೂರ್ಣವಾಗಿ ಸ್ಥಗಿತವಾಗಿರಬೇಕು.

ತಳಮಟ್ಟದ ವಾಸ್ತವವು ಬದಲಾಗಿರುವುದರಿಂದ ಸರ್ಕಾರದಿಂದ ಪ್ರಾಯೋಜಿತವಾಗಿರುವ ಅನೇಕ ಸರ್ಕಾರಿ ಯೋಜನೆಗಳು ಅಪ್ರಸ್ತುತವಾಗಿರುವುದಾಗಿ ತಿಳಿದುಬಂದಿದೆ. ಅವುಗಳಲ್ಲನೇಕವು ‘ದಂತ ಗೋಪುರ’ದಲ್ಲಿ ಸೃಷ್ಟಿಯಾದವಾದ್ದರಿಂದ ಸಮುದಾಯ ಭಾಗವಹಿಸುವಿಕೆ ಅವಕ್ಕೆ ಬೇಕಾಗಿರುವುದಿಲ್ಲ.

ಸಂಘಟನೆಯ ಕೆಲಸದ ನಿಮಿತ್ತ ಬುಡಕಟ್ಟು ಜನರು ಅನೇಕ ವಿಧಗಳಲ್ಲಿ ಪ್ರಯೋಜನ ಪಡೆದಿದ್ದಾರೆಂದು ಹೇಳಿಕೊಳ್ಳಲಾಗುತ್ತದೆ; ಉದಾಹರಣೆ, ಆರ್ಥಿಕತೆ, ಆರೋಗ್ಯ, ಪ್ರಾಪಂಚಿಕ ಅರಿವು, ಹೊರಗಿನ ಸಂಪರ್ಕ, ರಾಜಕೀಯ ಪ್ರಜ್ಞೆ ಹಾಗೂ ನಾಯಕತ್ವದ ನಿರ್ಮಾಣ- ಈ ಎಲ್ಲ ಕ್ಷೇತ್ರಗಳಲ್ಲಿ ಲಾಭವಾಗಿರುವುದಾಗಿ ತಿಳಿಸಲಾಗಿದೆ. ಕೇವಲ ಬುಡಕಟ್ಟು ಫಲಾನುಭವಿಗಳು ಮಾತ್ರ ಇದರ ಸತ್ಯಾಸತ್ಯತೆಯನ್ನು ಹೇಳಬಲ್ಲವಾಗಿದ್ದಾರೆ.

ಈ ಚಟುವಟಿಕೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳ ಪ್ರತಿಕ್ರಿಯೆಯು ಮೆಚ್ಚುಗೆಯಿಂದ, ಅನುಮಾನಕ್ಕೆ ತಿರುಗಿ ಮುಂದೆ ತಿರಸ್ಕಾರವಾಗಿ ಪರಿವರ್ತಿತವಾಗಿದೆಯಂತೆ. ಇದರಲ್ಲಿ ಒಂದಂಶ ನಿಜವಾಗಿರಬಹುದು ಅಥವಾ ಮೂರೂ ಅಂಶಗಳ ಮಿಶ್ರ ಪ್ರತಿಕ್ರಿಯೆಯೂ ಆಗಿರಬಹುದು.

ತಮ್ಮ ವಾಣಿಜ್ಜೀಯ ಆಸಕ್ತಿಗೆ ಸಂಘಟನೆಯ ಚಟುವಟಿಕೆಯಿಂದ ಧಕ್ಕೆ ಒದಗಿರುವುದರಿಂದ ಸ್ಥಾಪಿತ ಹಿತಾಸಕ್ತಿಗಳು ನಕಾರಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುವುದನ್ನೂ ಊಹಿಸಕೊಳ್ಳಬಹುದು.

ಕಡೆಯದಾಗಿ ಸಂಘಟನೆಯೇ ತನ್ನ ಸಾಧನೆಯ ಬಗ್ಗೆ ಒಂದು ಮಾಹಿತಿಯನ್ನು ನೀಡಿದ್ದು ಅದು ಈ ರೀತಿ ಇದೆ:

. ಶೈಕ್ಷಣಿಕ ಕಾರ್ಯಕ್ರಮವನ್ನು ಪ್ರೇರೇಪಿಸಿ ಕಾಯ್ದುಕೊಳ್ಳುವುದು.
. ಸ್ವಸಹಾಯ ಮಹಿಳಾ ಗುಂಪುಗಳು.
. ಬುಡಕಟ್ಟು ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿ ಅವರ ಗುಂಪನ್ನು ರಚಿಸುವುದು ಹಾಗೂ ಬುಡಕಟ್ಟು ಅಭಿವೃದ್ಧಿ ವಿಷಯಗಳ ಕುರಿತು ಅವರಲ್ಲಿ ಪ್ರಜ್ಞೆಮೂಡಿಸುವುದು.
. ಸರ್ಕಾರಿ ಯಂತ್ರವನ್ನು ಗರಿಷ್ಠ ಪ್ರಮಾಣದಲ್ಲಿ ಒಳಗೊಳ್ಳುವುದು.

ಈ ಮೇಲಿನ ಸಾಧನೆಗಳು ಇನ್ನೂ ಹೇಳಿಕೆ ಮಟ್ಟದಲ್ಲೇ ಉಳಿದಿದ್ದು ಕಾರ್ಯರೂಪಕ್ಕೆ ಬಂದಿವೆಯೇ ಎಂದು ತಿಳಿಯುವ ಉಪಾಯವಿಲ್ಲ. ಇತರ ಸ್ವಯಂಸೇವಾ ಸಂಸ್ಥೆಗಳೂ ಸಹ ಈ ಕ್ಷೇತ್ರದಲ್ಲಿ, ಕೆಲಸ ಮಾಡುತ್ತಿರುವುದರಿಂದ ಯೋಜನೆಗಳು ಹಾಗೂ ಧನಸಹಾಯದ ವಿಷಯದಲ್ಲಿ ಮೇಲು ಸೇತುವೆಯಾಗುವ ಸಂಭವವನ್ನೂ ತಳ್ಳಿಹಾಕಲಾಗದು. ಇದನ್ನು ಕೇವಲ ಸೂಚಸಬಲ್ಲೆನೇ ಹೊರತು ವಿವರವಾಗಿ ಮುಂದುವರಿಯಲಾರೆ. ಎನ್‌.ಜಿ.ಓ. ಚಟುವಟಿಕೆಗಳ ಯಶಸ್ಸಿಗೆ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಬಹಳ ಮುಖ್ಯ. ಇವು ಇಲ್ಲದ ಕಡೆ ನಾವು ಕಕ್ಕಾಬಿಕ್ಕಿಯಾಗುತ್ತೇವೆ.

ಈಗಾಗಲೇ ತಿಳಿಸಿದಂತೆ ವಿವೇಕ ಪ್ರಾರಂಭವಾದದ್ದು ೧೯೮೪ನೇ ಇಸವಿಯಲ್ಲಿ. ಈ ಕ್ಷೇತ್ರದಲ್ಲಿ ಸದರಿ ಸಂಘಟನೆ ಅದಕ್ಕೂ ಮೊದಲು ಕೆಲಸ ಮಾಡುತ್ತಿತ್ತೇ ಮತ್ತು ಎಷ್ಟು ಮಂದಿ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದರು, ಇತ್ಯಾದಿ ವಿವರಗಳು ಲಭ್ಯವಿಲ್ಲ. ಲಭ್ಯವಿರುವ ಒಂದು ಕರಪತ್ರದಲ್ಲಿ ‘೧೯೮೪ರ ಡಿಸೆಂಬರ್‌೧ರಲ್ಲಿ ಪ್ರಾರಂಭ, ೧೯೯೧ರ ಜನವರಿಯಲ್ಲಿ ಕೊನೆ’ ಎಂಬ ಗಮನ ಸೆಳೆಯುವ ‘ನುಡಿಗಟ್ಟು’ಗಳನ್ನು ಬಿಟ್ಟರೆ ಬೇರೆ ಏನೂ ದೊರಕದು. ಮೈಸೂರು ವೈದ್ಯಕೀಯ ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳು (ಅವರ ಹೆಸರಿಲ್ಲ) ಒಂದು ಸಂಘಟನೆಯನ್ನು ಆರಂಭಿಸಲು ಮುಂದಾದರು; “ಬಡರೋಗಿಗಳಿಗೆ ಔಷಧಿಯನ್ನು ವ್ಯವಸ್ಥೆಗೊಳಿಸಿ, ನೋವಿನಲ್ಲಿರುವವರನ್ನು ಭೇಟಿ ಮಾಡಿ ಕೊಂಚ ಅವರಿಗೆ ಹುರುಪು ತುಂಬುವುದು’, ಇಷ್ಟೇ ಯೋಜನೆ, ವೈದ್ಯಕೀಯ ವೃತ್ತಿಯಲ್ಲಿ ತಾಂಡವವಾಡುತ್ತಿದ್ದಂಥ ತಿರಸ್ಕಾರ ಭಾವನೆಯಿಂದ ಅವರು ರೋಸಿಹೋಗಿದ್ದರು”.

ಆಸ್ಪತ್ರೆಯನ್ನು ಸ್ಥಾಪಿಸಿರುವಂಥ ಕೆಂಚನಹಳ್ಳಿಗೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಡಾ.xರೂ ಸೇರಿದಂತೆ ಇದ್ದವರು ಇಬ್ಬರೇ ವೈದ್ಯರು, ರೋಗಿಗಳು ಇರಲೇ ಇಲ್ಲ. ಇನ್ನೊಬ್ಬ ಸ್ನೇಹಿತ ಆಮೆರಿಕಾದಲ್ಲಿ ವೈದ್ಯಕೀಯ ಕಲಿಯುತ್ತಿದ್ದಂಥ ವಿದ್ಯಾರ್ಥಿ; ಪ್ರಾಯಶಃ ರಜಕ್ಕೆ ಬಂದಿದ್ದವನಾಗಿದ್ದ. ರಜ ಮುಗಿದ ಕೂಡಲೇ ಅವನು ವಾಪಾಸ್ಸು ಅಮೆರಿಕ್ಕಕ್ಕೆ ಹೋದ; ನಿವಾಸಿ ವೈದ್ಯರು ಜಾಗ ಖಾಲಿ ಮಾಡಿದರು. ಈಗ ಕೆಂಚನಹಳ್ಳಿ ಕೇಂದ್ರದಲ್ಲಿ ಏನಾದರೂ ವೈದ್ಯಕೀಯ/ ಆರೋಗ್ಯ ಸೇವೆಯೇನಾದರೂ ಲಭ್ಯವಿದ್ದರೆ ಅದು ದೊರಕುತ್ತಿರುವುದು ಕೇವಲ ಡಾ. xರ ಮುಖಾಂತರ ಮಾತ್ರ. ೧೯೮೮ರ ವೇಳೆಗೆ ಆಸ್ಪತ್ರೆಯನ್ನು :ಶಂಕರ ಸಮುದಾಯ ಆರೋಗ್ಯ ಕೇಂದ್ರ” ಎಂಬುದಾಗಿ ಮರುನಾಮಕರಣ ಮಾಡಲಾಯಿತು; ಕಂಚಿ ಕಾಮಕೋಟಿ ಪೀಠದವರು ಧನಸಹಾಯ ಮಾಡಿದ ಕಾರಣ. ಇದಕ್ಕೆ ಮೊದಲು ಸಂಘಟನೆ ನಂಜನನಗೂಡು ತಾಲ್ಲೂಕಿನ ತುಮ್‌ನೇರಳೆ ಗ್ರಾಮದಲ್ಲಿ ಪ್ರಯತ್ನಪಟ್ಟಿತು, ತದನಂತರ ಬ್ರಹ್ಮಗಿರಿ ಬುಡಕಟ್ಟು ಕಾಲೋನಿಯಲ್ಲಿ ಪ್ರಯತ್ನಿಸಿತು. ಆದರೆ ಅಲ್ಲಿನ ಜನರ ತಣ್ಣನೆಯ ಪ್ರತಿಕ್ರಿಯೆಯಿಂದ ಹೆಚ್ಚು ಉತ್ತೇಜನ ದೊರೆಯಲಿಲ್ಲ. ಆದಾಗ್ಯೂ, ಪ್ರಯತ್ನ ಮುಂದುವರಿಸಿ ಅಂತಿಮವಾಗಿ ಒಂದು ಆರೋಗ್ಯ ಕೇಂದ್ರವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಯಿತು.

ಸಂಘಟನೆಯ ೫೦೦೦ ಮಂದಿ ಬುಡಕಟ್ಟಿನವರೂ ಸೇರಿದಂತೆ ೫೦೦೦೦ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವುದಾಗಿ ಹೇಳಿಕೊಂಡಿದೆ. ‘ಆರೋಗ್ಯ ಮತ್ತು ನೈರ್ಮಲ್ಯವನ್ನು ಜನರ ಬಾಗಿಲಿಗೇ ತೆಗೆದುಕೊಂಡು ಹೋಗುವುದರಿಂದ’ ಸಂಚಾರಿ ಆರೋಗ್ಯ ಘಟಕ ಒಂದು ಆಸ್ತಿಯಾಗಿದೆ. ‘ದಿನದ ಇಪ್ಪತ್ನಾಲ್ಕು ಗಂಟೆ ತುರ್ತು ವೈದ್ಯಕೀಯ ಸೇವಾ ಸೌಕರ್ಯ, ಒಂದು X -ರೇ ಘಟಕ ಹಾಗೂ ಸುಸಜ್ಜಿತವಾದ ಪ್ರಯೋಗಾಲಯ’, ಇವೆಲ್ಲ ಇವೆ.

‘ಚುಚ್ಚುಮದ್ದಿನ ಪ್ರಮುಖ ಕೇಂದ್ರವಾಗಿರುವುದರಿಂದ ಜೊತೆಗೆ ಆರೋಗ್ಯ ಕಾರ್ಯಕರ್ತರಿಗೆ ತರಬೇತು ನೀಡುತ್ತದೆ’.

ಈ ತರಹದ ಸೇವೆಗಳನ್ನು ನೀಡುತ್ತಿರುವುದಾಗಿ ಹೇಳಿಕೊಳ್ಳುವ ಸಂಘಟನೆಯ ಹೇಳಿಕೆಗಳು ನಿಜವಾಗಿದ್ದ ಪಕ್ಷದಲ್ಲಿ ಅದರ ಕೆಲಸ ಕಾರ್ಯಗಳು ಇನ್ನೂ ಹೆಚ್ಚು ಪಾರದರ್ಶಕವಾಗಿರುತ್ತಾ ಜನರಿಂದ ಕಿಕ್ಕಿರಿಯಬೇಕಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಇದಾವುದೂ ನನ್ನ ಕಣ್ಣಿಗೆ ಬೀಳಲಿಲ್ಲ ಹಾಗೂ ಅವರೂ ಕೂಡ ನನಗೆ ವಿವರಿಸಲಿಲ್ಲ. ಹಾಗಾಗಿ, ಈ ಹೇಳಿಕೆಗಳನ್ನು ಬರಿ ಟೊಳ್ಳು ಎಂದು ಸಾರಾಸಗಟಾಗಿ ತಳ್ಳಿಹಾಕದೆ, ಪೂರ್ತಿ ವಿಶ್ವಾಸವಿಡದೆ ಸ್ವೀಕರಿಸುವೆ.

ಬುಡಕಟ್ಟಿನವರು ಹೊಂದಿರುವ ಅಭಿಪ್ರಾಯ ಖಚಿತವಾಗಿದೆ. ಅವರ ಪ್ರಕಾರ ನನ್ನ ಸಹೋದ್ಯೋಗಿಗಳೊಂದಿಗೆ ಡಾ. ಕಾಲ್ನಡಿಗೆಯಲ್ಲಿ ಯೋಗಕ್ಷೇಮ ವಿಚಾರಿಸಲು ತಿರುಗುತ್ತಿದ್ದಾಗ ಒಳ್ಳೆ ಸೇವೆ ನೀಡುತ್ತಿದ್ದರು; ಈಗ ಜೀಪು ಬಂದು, ಸರ್ರನೆ ತಮ್ಮ ಮುಂದೆ ಹಾದು ಹೋಗುತ್ತಾರೆ ಎಂದು ತಿಳಿಸುತ್ತಾರೆ. ಆರೋಗ್ಯ ಕೇಂದ್ರಕ್ಕೆ ಹೋದಾಗ ವೈದ್ಯರು ಕೊಡುವ ಗುಳಿಗೆಗಳನ್ನು ಹಾದಿಬದಿಯ ಪೊದೆಗೆ ಒಗೆದು ತಮ್ಮ ಮಾಮೂಲಿ ಗಿಡಮೂಲಿಕೆ ಔಷಧಿಗಳನ್ನೇ ಉಪಯೋಗಿಸುವುದಾಗಿ ಹೇಳುತ್ತಾರೆ.

ಆರೋಗ್ಯದ ಜೊತೆಗೆ ಔಪಚಾರಿಕ ಶಿಕ್ಷಣವೂ ಬುಡಕಟ್ಟಿನವರಿಗೆ ಬೇಕು ಎಂದು ೧೯೮೯ರ ಜುಲೈ ವೇಳೆಗೆ ಸಂಘಟನೆ ತಿಳಿಯುತ್ತದೆ. “ದ ವಿವೇಖ ಟ್ರೈಬಲ್‌ಸೆಂಟರ್‌ಫಾರ್‌ಲರ್ನಿಂಗ್‌” ಎಂಬ ಶಾಲೆ ಅಸ್ತಿತ್ವಕ್ಕೆ ಬಂತು. ವಿದೇಶೀ ಧನಸಹಾಯ ಅಮೆರಿಕ ಮತ್ತು ಜಪಾನ್‌ನಿಂದ ಬಂದರೆ; ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಡ್ಯಾನಿಡಾ ಮತ್ತು ಮೈರಾಡಾ ಸಂಸ್ಥೆಗಳು, ಕೆನರಾ ಬ್ಯಾಂಕ್‌ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಆಗತ್ಯವಾದ ಹಣಕಾಸಿನ ಸಹಾಯ ಮಾಡಿದ್ದಾರೆ. ಮೊದಮೊದಲು ದನದ ಕೊಟ್ಟಿಗೆಯಲ್ಲಿ ಪ್ರಾರಂಭವಾದ ಶಾಲೆ ಹೊಸಹಳ್ಳಿಯ ಸಮೀಪ ಈಗ ಒಂದು ವಸತಿಶಾಲೆಯಾಗಿ ತಲೆಯೆತ್ತಿದೆ. ೧೯೯೧ ನೇ ಜನವರಿಯ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಸ್ಥೆಗೆ ಒಟ್ಟು ೨೩ ಲಕ್ಷ ರೂಪಾಯಿಗಳ ನೆರವನ್ನು ನೀಡಿವೆ.

೧೯೯೪ರ ಡಿಸೆಂಬರ್‌ನಲ್ಲಿ ೧ ರಿಂದ ೫ನೇ ತರಗತಿವರೆಗಿನ ಮಕ್ಕಳು ಕಲಿಯುತ್ತಿದ್ದುದರಿಂದ ಶಾಲಾ ಕ್ಷೇತ್ರವು ಚಟುವಟಿಕೆಯಿಂದ ಕೂಡಿತ್ತು. ಬಾಲಕರು ಮತ್ತು ಬಾಲಕಿಯರ ಪ್ರತ್ಯೇಕವಾದ ಡಾರ್ಮಿಟರಿ ವಸತಿಯಿತ್ತು.

ಮೈರಾಡಾ ಮತ್ತು ಫೆಡಿನಾ -ವಿಕಾಸದಂಥ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತ ಬಂದಿವೆ. ಈ ಸಂಸ್ಥೆಗಳ ಸೇವೆ ಸುದೀರ್ಘವಾದುದು. ಬ್ರಹ್ಮಗಿರಿ ಕಾಲೋನಿಯ ಬುಡಕಟ್ಟಿನವರ ಶಾಲಾ ರಚನೆ ಮತ್ತು ಆರ್ಥಿಕ ಚಟುವಟಿಕೆಗಳು ಮೈರಾಡ ಸಂಘಟನೆಯಿಂದಲೇ ಹೊರಹೊಮ್ಮಿದ್ದು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಏಕಕಾಲದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಯಾವ ಸಂಸ್ಥೆ ಯಾವ ಗುಂಪಿಗೆ ಬಗೆಯಾದ ಸೇವೆ ಮಾಡುತ್ತಿದೆಯೆಂದು ತಿಳಿಯುವುದು ಕಷ್ಟವಾಗಿದೆ. ಯಾವುದೋ ಒಂದು ನಿಗದಿಯಾದ ಸಂಸ್ಥೆ ಇಂಥ ಬುಡಕಟ್ಟಿನನರ ಕ್ಷೇಮಪಾಲನೆಯಲ್ಲಿದೆ ಎಂದು ಹೇಳುವ ಹಾಗಿಲ್ಲ. ಎಲ್ಲ ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ಧನಸಹಾಯ ಮತ್ತು ಸೇವೆ ಪುನರಾವರ್ತನೆಯಾಗುತ್ತಿವೆ.

ಬುಡಕಟ್ಟಿನವರಿಗೆ ವಿವೇಕ ಸಂಸ್ಥೆ ಪರಿಸರ ಕುರಿತು ಶಿಕ್ಷಣ ನೀಡುತ್ತಿದೆ ಎಂದು ಹೇಳಿದರೆ ವಿಚಿತ್ರವೆನಿಸುತ್ತದೆ. ಬುಡಕಟ್ಟಿನವರು ಮರ ಕಡಿದು, ಕಾಡನ್ನು ಹಾಳು ಮಾಡಿ ಪರಿಸರಕ್ಕೆ ಕಂಟಕ ತರುವ ಕೆಲಸವನ್ನೆಂದೂ ಮಾಡುವುದಿಲ್ಲ. ನಿಸರ್ಗದೊಡನೆ ಅತ್ಯಂತ ಸೌಹಾರ್ದತೆಯಿಂದ ಅವರು ಬಾಳಿರುವವರು. ಬುಡಕಟ್ಟಿಗೆ ಸೇರದ ಇತರರು ಮಾತ್ರ ಪರಿಸರದ ಏರುಪೇರಿಗೆ ಕಾರಣವಾಗಿರುವವರು. ಮರ ಕಡಿಯುವ, ಅರಣನಾಶ ಮಾಡುವ, ಬೇಟೆಯಾಡುವ -ಹಲವು ವಿಧಗಳಲ್ಲಿ ಅವರು ಪರಿಸರ ನಾಶಕ್ಕೆ ಕಾರಣರಾಗಿದ್ದಾರೆ.

ವಿ.ಜಿ.ಕೆ.ಕೆ. ಮತ್ತು ಡೀಡ್‌ಸಂಸ್ಥೆಗಳಂತಲ್ಲದೆ ಈ ಸಂಸ್ಥೆಯು ಒಂದು ಸಲಹಾ ಮಂಡಳಿಯನ್ನೂ ಹೊಂದಿದೆ; ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮೀಜಿಯವರು ಅದರ ನೇತಾರರು. ಬೆಂಗಳೂರಿನ ಐ. ಐ. ಎಮ್‌. ನಿಂದ ಒಬ್ಬರು ಹಣಕಾಸಿನ ಸಲಹೆಗಾರರಿದ್ದಾರೆ; ಇದರ ಜೊತೆಗೆ ಇನ್ನಿಬ್ಬರು ಹೆಚ್ಚುವರಿ ಸಲಹೆಗಾರರಿದ್ದಾರೆ, ಒಬ್ಬ ನಿವೃತ್ತ ಮುಖ್ಯ ನ್ಯಾಯಧೀಶರು, ಮತ್ತೊಬ್ಬರು ಉದ್ಯಮಪತಿ- ಇಬ್ಬರೂ ಬೆಂಗಳೂರು ನಿವಾಸಿಗಳೇ. ಇದರಿಂದ ಏನು ತಿಳಿಯುವುದೆಂದರೆ, ಸ್ಥಳೀಯರು, ಬುಡಕಟ್ಟಿನವರು ಮತ್ತು ಇತ್ಯಾದಿಗಳು ಈ ಸಂಘಟನೆಯ ಸಮೀಪ ಸುಳಿಯುವಂತೆಯೇ ಇಲ್ಲ. ಹಾಗಾಗಿ ಸ್ಥಳೀಯರಲ್ಲಿ ನಾಯಕತ್ವ ಬೆಳೆಯುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬೇಕು. ಸಂಘಟನೆ ತನ್ನ ಮುಖನೇರಕ್ಕೆ ವಿನ್ಯಾಸ ರಚಿಸುತ್ತದೆಯೇ ಹೊರತು ಬುಡಕಟ್ಟು ಜನರ ಅಗತ್ಯಗಳ ಆಧಾರದ ಮೇಲೆ ಅಲ್ಲ. ಸಂಘಟನೆಯ ಕಾರ್ಯವಿಧಾನ ತೃಪ್ತಿಕರವಾಗಿಲ್ಲ. ಸಂಘಟನೆ ಪ್ರಾರಂಭವಾದಾಗ ಬುಡಕಟ್ಟು ಜನಹೇಗಿದ್ದರೋ ಅದೇ ಅವಸ್ಥೆಯಲ್ಲಿ ಅವರು ಉಳಿಯುವಂತಾದರೆ ಆಶ್ಚರ್ಯವಲ್ಲ. ಹೆಚ್ಚೆಂದರೆ ಬುಡಕಟ್ಟು ಜನ ‘ನಾಗರೀಕ’ ರೆನಿಸಿಕೊಂಡವರು ಪ್ರದರ್ಶಿಸುವ ತೋರಿಕೆ ರೀತಿಯನ್ನು ಅನುಕರಿಸಬಹುದು, ಅಷ್ಟೆ,

ಅನೇಕ ವೈದ್ಯರು ಸ್ವಯಂ ಸೇವಾ ಸಂಸ್ಥೆಗಳು ನಡೆಸಲು ಮುಂದಾಗುವ ಪರಿಪಾಠವನ್ನು ಇನ್ನೊಬ್ಬ ಸ್ವಯಂ ಸೇವಾ ಆರೋಗ್ಯ ಸಮುದಾಯ ಸಂಘಟನೆ ನಡೆಸುತ್ತಿರುವ ವೈದ್ಯರೇ ನನ್ನ ಗಮನಕ್ಕೆ ತಂದರು. ಅವರ ಪ್ರಕಾರ “ಮದ್ರಾಸ್‌, ಬೆಂಗಳೂರು ಹಾಗೂ ಮೈಸೂರು” ಪ್ರಾಂತ್ಯದಲ್ಲಿ ತುಂಬಾ ಜನ ವೈದ್ಯಕೀಯ ಪದವಿಧರರು ಸ್ವಯಂ ಸೇವಾ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ಕಡಿಮೆಯಾಗಿರುವುದು, ವಿಪರೀತ ಸಂಖ್ಯೆಯಲ್ಲಿ ವೈದ್ಯಕೀಯ ಪದವಿಧರರು ನಿರ್ಮಾಣವಾಗಿರುತ್ತಿರುವುದು, ಉದ್ಯೋಗಾವಕಾಶದ ಕೊರತೆ ಜೊತೆಗೆ ಉದ್ಯೋಗ ಪಡೆಯಲಾಗದ ಪದವಿಧರರು ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣವಿರಬಹುದೆಂದು ಗೊತ್ತಾಗುತ್ತದೆ. ಇಂಥವರ ಗುಂಪಿಗೆ ಸೇರದೆ ಬುಡಕಟ್ಟಿನವರ ಬಗ್ಗೆ ನಿಜವಾದ ಆಸಕ್ತಿಯನ್ನು ಹೊಂದಿ ಅವರ ಸಮಸ್ಯೆಗಳಬಗ್ಗೆ ತುಡಿಯುವವರೆಂದರೆ ಅಲ್ಲೊಬ್ಬರು ಜೆರ್ರಿ ಪಾಯ್ಸ್, ಇಲ್ಲೊಬ್ಬರು ಸುದರ್ಶನ್‌ಹೀಗೆ ಬೆರಳೆಣಿಕೆಯಷ್ಟೂ ಮುಂದಿ ಮಾತ್ರ. ಅವರ ವ್ಯವಹಾರದ ತೆರೆದ ಪುಸ್ತಕವಿದ್ದ ಹಾಗೆ; ಅಲ್ಲಿ ರಹಸ್ಯವೇನೂ ಇಲ್ಲ. ಇಂಥ ಸಂಘಟನೆಗಳ ನೇರವಾದ ನಡತೆಯೇ ವಿವೇಕದಂಥ ಸಂಸ್ಥೆಯಿಂದ ಉತ್ತಮವಾದ ಸ್ಥಾನದಲ್ಲಿ ಅವುಗಳನ್ನು ಇಟ್ಟಿರುವುದು.

ಈ ಎನ್‌.ಜಿ.ಓ.ಗಳ ಬಗ್ಗೆ ಬುಡಕಟ್ಟು ಜನರು ಏನು ಅಭಿಪ್ರಾಯ ಪಡುತ್ತಾರೆ ನೋಡೋಣ. ಹೆಚ್.ಡಿ. ಕೋಟೆ ತಾಲೂಕಿನಲ್ಲಿ ಅಧ್ಯಯನವು ಒಳಗೊಂಡಿರುವ ೨೦೭ ಮಂದಿ ಬುಡಕಟ್ಟು ಫಲಾನುಭವಿಗಳ ಪೈಕಿ ೧೩೫ ಜನ ಸ್ಥಳೀಯರು ಮತ್ತು ೭೨ ಮಂದಿ ವಲಸೆ ಬಂದವರು. ಇವರ ಪೈಕಿ ೫೧ ಜನ ಜೇನುಕುರುಬರು, ೯೯ ಜನ ಬೆಟ್ಟ ಕುರುಬರು, ೫೦ ಮಂದಿ ಯರವರು ಮತ್ತು ೭ ಜನ ಸೋಲಿಗರು. ಯರವರು ಮತ್ತು ಸೋಲಿಗರು ಅಕ್ಕಪಕ್ಕದ ತಾಲ್ಲೂಕುಗಳಿಂದ ಹೆಚ್.ಡಿ. ಕೋಟೆಗೆ ಬಂದು ನೆಲೆಸಿರಬಹುದು. ಸುಮಾರು ೧೯೬ ಬುಡಕಟ್ಟು ಕುಟುಂಬಗಳು ಈ ಪ್ರದೇಶದಲ್ಲಿ ೧೦ ವರ್ಷಗಳಿಂದ ವಾಸವಾಗಿವೆ. ಹೆಚ್.ಡಿ. ಕೋಟೆ ತಾಲೂಕಿನ ಈ ಮುಂದೆ ಸೂಚಿಸಿರುವ ಗ್ರಾಮಗಳಿಂದ ಅಧ್ಯಯನಕ್ಕೆ ಮಾದರಿಯನ್ನು ತೆಗೆದುಕೊಳ್ಳಲಾಗಿದೆ.

ಸ್ಥಳ ಸಂಖ್ಯೆ
೦೧. ಬ್ರಹ್ಮಗಿರಿ ೧೯
೦೨. ಬೀಡಿಮುಂಟೆ ೦೬
೦೩. ದೇವನ ಹಾಡಿ ೦೬
೦೪. ದೊಣ್ಣೆಮಾದನ ಹಾಡಿ ೦೭
೦೫. ಎಲಚಿಕಟ್ಟೆ ೦೬
೦೬. ಹೊಸಹಳ್ಳಿ ೧೫
೦೭. ಜಾಗನ ಕೋಟೆ ೩೬
೦೮. ಕೆಂಪನಹಾಡಿ ೨೯
೦೯. ಮಲದ ಹಾಡಿ ೨೭
೧೦. ಎನ್‌. ಬೇಗೂರು ೩೨
೧೧. ರಾಜಾಪುರ ೦೩
೧೨. ಶಿಲೆ ಮಾಸ್ತೆ ಹಾಡಿ ೦೨
೧೩. ಉದ್ಬೂರು ೧೮
೧೪. ಯಡಿಯಾಲ ೦೧
ಒಟ್ಟು ೨೦೭

ಹೆಚ್ಚಿನ ವಿವರಗಳನ್ನು ನೀಡುವುದಕ್ಕೆ ಮೊದಲು ಈ ೨೦೭ ಬುಡಕಟ್ಟು ಫಲಾನುಭವಿ ಕುಟುಂಬಗಳು ೪ ಎನ್.ಜಿ.ಓ.ಗಳ ಸೇವಾ ತೆಕ್ಕೆ ಹೇಗೆ ಬಂದವು ಎಂಬುದನ್ನು ತಿಳಿಯುವುದು ಉಚಿತ. ಕೇವಲ ೪೬ ಕುಟುಂಬಗಳು ಮಾತ್ರ ತಾವು ಒಂದೇ ಒಂದು ಸ್ವಯಂ ಸೇವಾ ಸಂಸ್ಥೆಯಿಂದ ಸೇವೆ ಪಡೆಯುತ್ತಿರುವುದಾಗಿ ಹೇಳಿಕೊಂಡಿವೆ. ಹಾಗಾಗಿ ಈ ವಿವರಗಳನ್ನು ಮುಂದಿನ ಪಟ್ಟಿಯಲ್ಲಿ ನೀಡಿದೆ.

ಬುಡಕಟ್ಟು ಫಲಾನುಭವಿಗಳು ವಿವಿಧ ಎನ್.ಜಿ.ಓ. ಸೇವೆಗಳು

ಸಂಸ್ಥೆಯ ಹೆಸರು
.

...

..

..
ಪ್ರತಿಕ್ರಿಯೆ
ಇಲ್ಲ
ಗೊತ್ತಿಲ್ಲ ಒಟ್ಟು
ಅ) ವಿವೇಕ ೨೩ ೪೯ ೪೨ ೧೩ ೧೦ ೧೩೯
ಆ) ಮೈರಾಡ ೧೩ ಆ.ಇ.೯ ೦೨೨
ಇ) ಫೆದಿನಾ ವಿಕಾಸ ೦೯ ಎ.ಸಿ.೨೭ ೦೩೬
ಈ) ಬಿ. ಎ. ಐ.ಎಫ್. ೧ಅಆಈ ೦೭ ಇಈ ೦೧೦
ಒಟ್ಟು ೪೬ ೮೫ ೪೯ ೧೩ ೧೦ ೨೦೭

ಈ ತರಹ ಬಿಡಿಸಿ ತೋರಿಸುವಷ್ಟು ಪರಿಸ್ಥಿತಿ ಸರಳವಾಗಿಲ್ಲ. ವಾಸ್ತವವಾಗಿ ಅನೇಕ ಕುಟುಂಬಗಳು ಒಂದಕ್ಕಿಂತ ಹೆಚ್ಚು ಎನ್.ಜಿ.ಓ. ಗಳಿಂದ ಸಹಾಯ ಪಡೆಯುತ್ತಿವೆ. ಪ್ರತಿ ಎನ್.ಜಿ.ಓ. ಕೆಳಗೆ ಫಲಾನುಭವಿಗಳನ್ನು ಕೂಡಿಸುವುದರಿಂದ ಫಲಾನುಭವಿಗಳ ಬೇರೆ ಬೇರೆ ಸಂಯೋಜನೆಯ ಸಂಖ್ಯೆ ಅಧಿಕವಾಗುವುದು. ಒಟ್ಟು ಕುಟುಂಬಗಳ ಸಂಖ್ಯೆ ಹೆಚ್ಚಾಗುವುದಿಲ್ಲ. ಒಟ್ಟು ಫಲಾನುಭವಿಗಳ ಸಂಖ್ಯೆ ಬದಲಾಗುವುದಿಲ್ಲ. ಹಾಗಾಗಿ ಒಟ್ಟು ಕುಟುಂಬಗಳನ್ನು ಲೆಕ್ಕ ಹಾಕಲಾಗುತ್ತದೆ. ಒಟ್ಟು ಫಲಾನುಭವಿ ಕುಟುಂಬಗಳು ಈ ಕೆಳಕಂಡಂತಿರುತ್ತವೆ:

ವಿವೇಕ ೧೬೧
ಮೈರಾದಾ ೧೩೩
ಫೆಡಿನಾ ೧೦೨
ಬೈಫ್ ೨೩
ಒಟ್ಟು ೪೧೯

ಒಟ್ಟು ೧೬೧ ಬುಡಕಟ್ಟು ಕುಟುಂಬಗಳು ೪೧೯ ಸೌಲಭ್ಯಗಳನ್ನು ಸ್ವೀಕರಿಸುತ್ತಿವೆ. ೪೬ ಕುಟುಂಬಗಳು ಏಕ ಮೂಲದಿಂದ ಪ್ರಯೋಜನ ಪಡೆಯುತ್ತಿವೆಯಾದರೆ ೧೬೧ ಕುಟುಂಬಗಳು ಅಂದಾಜು ೨.೫ ಪಟ್ಟು ಹೆಚ್ಚುವರಿ ಸೇವೆಯನ್ನು ಪಡೆಯುತ್ತಿವೆ. ಯಾವ ವಲಯದಲ್ಲಿ ಇವಕ್ಕೆ ಈ ರೀತಿ ತಲುಪುತ್ತಿದೆ ಎನ್ನುವುದು ಮಾತ್ರ ಸ್ಪಷ್ಟವಾಗುವುದಿಲ್ಲ. ತೀರ್ಮಾನದಲ್ಲಿ, ವಿವಿಧ ಸಂಘಟನೆಗಳು ಯೋಜನೆಗಳು ಹೆಚ್ಚು ಫಲಪ್ರದವಾಗದಂತೆ ಮಾಡಿವೆ ಎಂದಷ್ಟೇ ಹೇಳಬಹುದು.

ಹೆಚ್.ಡಿ. ಕೋಟೆ ಪ್ರದೇಶದ ಮಾದರಿಯ ವಯೋಮಾನ ಸಂಯೋಜನೆಯನ್ನು ಗಮನಿಸಿದರೆ ೨೦-೩೦ ವರ್ಷದ ಸದಸ್ಯರನ್ನೊಳಗೊಂಡ ಕುಟುಂಬಗಳೇ ಹೆಚ್ಚಿರುವಂತಿದೆ. ೧೩೬ ಕುಟುಂಬಗಳಿಗೆ ವಿಸ್ತರಿಸಿದೆ; ೧೦-೨೦ ವರ್ಷದವರು ೧೩೨ ಕುಟುಂಬಗಳಲ್ಲಿ ಹಾಗೂ ೩೦-೪೦ ವರ್ಷದವರು ೧೦೭ ಕುಟುಂಬಗಳಲ್ಲಿದ್ದಾರೆ. ೧೦೫ ಕುಟುಂಬಗಳಲ್ಲಿ ೫-೧೦ ವರ್ಷದವರು ಕಂಡುಬರುತ್ತಾರೆ. ಉಳಿದಂತೆ ೪೦-೫೦ ವರ್ಷದವರು ೯೧ ಕುಟುಂಬಗಳಲ್ಲಿ, ೫ ವರ್ಷಕ್ಕಿಂತ ಕಡಿಮೆ ವಯೋಮಾನದವರು ೭೬ ಕುಟುಂಬಗಳಲ್ಲಿ, ೫೦-೬೦ ವರ್ಷದವರು ೫೪ ಕುಟುಂಬಗಳಲ್ಲಿ, ೬೦ ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು ೫೬ ಕುಟುಂಬಗಳಲ್ಲಿ ಕಂಡುಬರುತ್ತಾರೆ.

ವಿವಾಹಿತರು ಹೆಚ್ಚಿನ ಸಂಖ್ಯೆಯಲ್ಲಿ ೧೫೦ ಕುಟುಂಬಗಳಲ್ಲಿ ಕಂಡು ಬಂದರೆ ೨೩ ಕುಟುಂಬಗಳಲ್ಲಿ ಇಬ್ಬರು ದಂಪತಿಗಳು ಹಾಗೂ ನಾಲ್ಕು ದಂಪತಿಗಳು ಇದ್ದಾರೆ. ಉಳಿದವರು ಗೌಣ. ಅದೇ ಪ್ರಕಾರ ೧೮೮ ಕುಟುಂಬಗಳಲ್ಲಿ ಅವಿವಾಹಿತರು ಹೆಚ್ಚಿಗೆ ಇದ್ದಾರೆ. ಒಬ್ಬರಿಂದ ಐದು ಮಂದಿಯವರೆಗೆ ಇವರ ಸಂಖ್ಯೆ ವ್ಯತ್ಯಾಸವಾಗುತ್ತದೆ. ೩೮ ಕುಟುಂಬಗಳಲ್ಲಿ ೩೯ ಮಂದಿ ವಿಧವೆಯರಿದ್ದರೆ ೨೩ ಕುಟುಂಬಗಳಲ್ಲಿ ೨೪ ಮಂದಿ ವಿಧುರರಿದ್ದಾರೆ. ವಿವಾಹ ವಿಚ್ಛೇದನ ಮಾಡಿದವರು ಇಲ್ಲ. ಹೆಂಗಸರ ಸಂಖ್ಯೆ ಗಂಡಸರ ಸಂಖ್ಯೆಗಿಂತ ಸ್ಪಲ್ಪ ಹೆಚಾಗಿದೆ; ೪೭೮ ಮಂದಿ ಗಂಡಸರಿಗೆ ೫೦೯ ಜನ ಹೆಂಗಸರಿದ್ದಾರೆ.

ಸೇವೆಗಳ ವೈವಿಧ್ಯತೆ ಹಾಗೂ ಗುಣಮಟ್ಟದ ವಿಚಾರದಲ್ಲಿ ಬಂದಿರುವಂಥ ಪ್ರತ್ರಿಕ್ರಿಯೆ ಬಹಳ ಸಕಾರಾತ್ಮಕವಾಗಿಯೇ ಇದೆ. ೧೭೯ ಜನ ಬುಡಕಟ್ಟು ಜನರು ಎನ್.ಜಿ.ಓ.ಗಳ ಸೇವೆಯಿಂದ ತೃಪ್ತರಾಗಿದ್ದಾರೆ. ಆರ್ಥಿಕ ಸವಲತ್ತುಗಳು ಹಾಗೂ ರಾಜಕೀಯ ಅರಿವು ಗಣನೀಯ ಪ್ರಮಾಣದಲ್ಲಿರದಿದ್ದರೂ, ವೈದ್ಯಕೀಯ / ಆರೋಗ್ಯ ಹಾಗೂ ಶೈಕ್ಷಣಿಕ ಸವಲತ್ತುಗಳು ಸಾಕಷ್ಟಿವೆ. ೧೪೦ ಕುಟುಂಬಗಳು ಶೈಕ್ಷಣಿಕ ಸವಲತ್ತುಗಳು ಸ್ವೀಕರಿಸಿದ್ದರೆ, ೧೪೫ ಕುಟುಂಬಗಳು ವೈದ್ಯಕೀಯ / ಆರೋಗ್ಯ ಅನುಕೂಲಗಳನ್ನು ಪಡೆದಿವೆ; ಇನ್ನು ೧೩ ಕುಟುಂಬಗಳು ‘ತಿಳಿಯದು’ ಎಂಬ ಗುಂಪಿಗೆ ಸೇರಿದುವಾಗಿವೆ. ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಇದು ಕೇವಲ ‘ವಿವೇಕ’ ದಿಂದ ಮಾತ್ರ ಆಗಿದೆ ಎನ್ನುವ ಹಾಗಿಲ್ಲ. ಏಕೆಂದರೆ ‘ವಿವೇಕ’ ದ ಅಡಿಯಲ್ಲಿ ಇದುವರೆಗೆ ಇರುವುದು ೬ ತರಗತಿಗಳಷ್ಟೇ. ಬಹಳ ವರ್ಷಗಳಿಂದ ಈ ಪ್ರದೇಶದಲ್ಲಿ ಕಾರ್ಯಶೀಲವಾಗಿರುವ ಮೈರಾಡಾ ಹಾಗೂ ಫೆಡಿನಾ ವಿಕಾಸ ಸಂಸ್ಥೆಗಳೂ ಕೂಡ ಶಿಕ್ಷಣ ಕ್ಷೇತ್ರದ ಸಾಧನೆಗೆ ಪಾತ್ರವಾಗುತ್ತದೆ, ವೃತ್ತಿ ತರಬೇತಿ, ನೇಯ್ಗೆ, ಕೈಗಾರಿಕೆ, ಕೌಶಲ್ಯ ಹಾಗೂ ಆರೆ- ಕೌಶಲ್ಯದ ಉದ್ಯೋಗಗಳು, ಕಲೆ ಹಾಗೂ ಕುಶಲ ಕಲೆಯ ವಿಷಯದಲ್ಲಿ ಬಂದಿರುವ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿಲ್ಲ. ಇದುವರೆಗೆ ವೃತ್ತಿ ತರಬೇತಿ ಪಡೆದಿರುವಂಥ ೨೭ ಕುಟುಂಬಗಳಲ್ಲಿ ನೇಯ್ಗೆಯಲ್ಲಿ ೩೦ ಕುಟುಂಬಗಳು, ಕೈಗಾರಿಕೆಯಲ್ಲಿ ೨ ಕುಟುಂಬಗಳು ತರಬೇತಿ ಹೊಂದಿವೆ. ಉಳಿದ ಎರಡು ವಿಭಾಗಗಳಲ್ಲಿ ಯಾರೂ ತರಬೇತು ಹೊಂದಿಲ್ಲ.

ಬುಡಕಟ್ಟು ಅಭಿವೃದ್ಧಿಯ ವಿಷಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಆಸಕ್ತಿ ಹೊಂದಿರುವವೆಂದು ೧೨೭ ಬುಡಕಟ್ಟು ಕುಟುಂಬಗಳು ಸಕರಾತ್ಮಕವಾಗಿ ತಿಳಿಸಿವೆ. ಉಳಿದ ೮೦ ಕುಟುಂಬಗಳಲ್ಲಿ ೭೬ ಸ್ಪಷ್ಟವಾಗಿ ಇಲ್ಲ ಎಂದಿವೆ, ೪ ಕುಟುಂಬಗಳು ಗೊತ್ತಿಲ್ಲ ಎಂದು ತಿಳಿಸಿವೆ.

ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಏನಾದರೂ ವ್ಯತ್ಯಾಸವಾಗಿದೆಯೇ ಎಂದು ಕೆಳಲಾದ ಪ್ರಶ್ನೆಗೆ ೧೨೪ ಕುಟುಂಬಗಳು ‘ವ್ಯತ್ಯಾಸವಿದೆ’ ಎಂತಲೂ ೪೬ ಕುಟುಂಬಗಳು ‘ಇಲ್ಲ’ ಎಂತಲೂ ತಿಳಿಸಿವೆ; ೨೭ ಬುಡಕಟ್ಟು ಕುಟುಂಬಗಳು ಎನ್.ಜಿ.ಓ. ಗಳು ಮತ್ತು ಸರ್ಕಾರವನ್ನು ಸಹ -ಕೆಲಸಗಾರರೆಂದು ವರ್ಗಿಕರಿಸಿವೆ.

ಎನ್.ಜಿ.ಓ. ಗಳು, ಸರ್ಕಾರಿ ಆಧಿಕಾರಿಗಳು, ಅರಣ್ಯ ಇಲಾಖೆಯವರು ಹಾಗೂ ಸುತ್ತಮುತ್ತಲ ಗ್ರಾಮದವರೊಡನೆ ಬುಡಕಟ್ಟಿನವರ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ ೭೦ ಕುಟುಂಬಗಳು ಅರಣ್ಯ ಇಲಾಖೆಯವರೊಡನೆ ಬುಡಕಟ್ಟಿನವರ ಸಂಬಂಧ ಸರಿಯಿಲ್ಲವೆಂದರು, ೧೬೭ ಕುಟುಂಬಗಳು ಎನ್.ಜಿ.ಓ. ಗಳೊಡನೆ ಸಂಬಂಧ ಚೆನ್ನಾಗಿದೆ ಎಂದು ತಿಳಿಸಿದರೆ ೨೯ ಕುಟುಂಬಗಳು ಮಾತ್ರ ನೆರೆಹೊರೆ ಗ್ರಾಮದವರ ಸಂಬಂಧದ ಬಗ್ಗೆ ಹೇಳಿದ್ದಾರೆ.

ಸುಮಾರು ೮೧ ಕುಟುಂಬಗಳು ಬುಡಕಟ್ಟು ಕ್ಷೇಮಾಭಿವೃದ್ಧಿಗೆ ದುಡಿಯಲು ಎನ್.ಜಿ.ಓ. ಗಳು, ಬಹಳ ಸೂಕ್ತವೆಂದು ತಿಳಿಸಿದ್ದಾರೆ. ೭೭ ಕುಟುಂಬದವರ ದೃಷ್ಟಿಯಲ್ಲಿ ಸರ್ಕಾರವೇ ಮೇಲೆ ಎಂದಾಗಿದೆ; ೩೮ ಕುಟುಂಬಗಳು ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು -ಎರಡೂ ಸೂಕ್ತವೆಂದು ತಿಳಿಸಿದ್ದಾರೆ.

ಶಿಕ್ಷಣ ವೈದ್ಯಕೀಯ/ ಆರೋಗ್ಯ ಪಾಲನೆ, ಆರ್ಥಿಕ ಉತ್ತಮಿಕೆ, ಸಾಮಾನ್ಯ ತಿಳಿವಳಿಕೆಯ ವಿಷಯದಲ್ಲಿ ಬುಡಕಟ್ಟಿನವರ ಜೀವನ ಕ್ರಮ ಬದಲಾಗಿದೆಯೆಂದು ೯೨, ೮೯, ೭೩, ೨೨ ಕುಟುಂಬಗಳು ಅಭಿಪ್ರಾಯಪಟ್ಟಿವೆ,

೪೮ ನೆರೆಹೊರೆ ಗ್ರಾಮದವರ ಪೈಕಿ ೨೭ ಮಂದಿ ಎನ್.ಜಿ.ಓ. ಗಳು ಸ್ವಯಂ ಸೇವಾ ಕಾರ್ಯಕರ್ತರಲ್ಲವೆಂದರೆ ೨೧ ಕುಟುಂಬಗಳು ಅವರು ಸ್ವಯಂ ಸೇವಾ ಕಾರ್ಯಕರ್ತರೆಂದು ಒಪ್ಪಿಕೊಂಡಿದ್ದಾರೆ. ೪೮ ಕುಟುಂಬಗಳ ಪೈಕಿ ೩೫ ಕುಟುಂಬಗಳು ಸರ್ಕಾರ ಹಾಗೂ ಎನ್.ಜಿ.ಓ. ಗಳು, ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರೆ ಉಳಿದ ೧೯ ಕುಟುಂಬಗಳು ಇದನ್ನು ನಿರಾಕರಿಸಿವೆ.

ಬುಡಕಟ್ಟು ಕ್ಷೇಮಾಭಿವೃದ್ಧಿಯಲ್ಲಿ ಎನ್.ಜಿ.ಓ.ಗಳ ಪಾತ್ರವೇನು ಎಂಬುದಕ್ಕೆ ಉಳಿದೆರಡು ಸಂಘಟನೆಗಳ ಪ್ರತಿಕ್ರಿಯೆಯನ್ನೇ ಸರ್ಕಾರಿ ಅಧಿಕಾರಿಗಳು ಪ್ರತಿಫಲಿಸಿದ್ದಾರೆ. ೨೭ ರಲ್ಲಿ ೨೪ ಮಂದಿ ಸರ್ಕಾರಿ ಅಧಿಕಾರಿಗಳು ಬುಡಕಟ್ಟು ಕ್ಷೇಮಾಭಿವೃದ್ಧಿಯಲ್ಲಿ ಎನ್.ಜಿ.ಓ.ಗಳು ಸರ್ಕಾರದಷ್ಟೇ ಬದ್ಧತೆ ಹೊಂದಿವೆ ಎಂದು ತಿಳಿಸಿದ್ದಾರೆ. ಹಾಗೆಯೇ ೨೭ ರಲ್ಲಿ ೨೦ ಮಂದಿ ಎನ್.ಜಿ.ಓ.ಗಳು ಅತ್ಯಂತ ನಿಸ್ವಾರ್ಥವಾದ ಸಮಾಜ ಸೇವಕರೆಂದು ಒಪ್ಪಿಕೊಂಡಿದ್ದಾರೆ. ಜನರನ್ನು ಒಡೆದು ಬುಡಕಟ್ಟಿನವರ ಶೋಷಣೆಯಲ್ಲಿ ಎನ್.ಜಿ.ಓ.ಗಳು ತೊಡಗಿದ್ದಾರೆ ಎಂಬ ಪ್ರಶ್ನೆಗೆ ೨೩ ಅಧಿಕಾರಿಗಳು ‘ಇಲ್ಲ’ ಎಂದಿದ್ದಾರೆ; ಅದೇ ತರಹ ೨೪ ಅಧಿಕಾರಿಗಳು ಜನರನ್ನು ಎನ್.ಜಿ.ಓ. ಗಳು ತಪ್ಪು ಹಾದಿಗೆಳೆಯುವುದಿಲ್ಲವೆಂದು ತಿಳಿಸಿದ್ದಾರೆ. ಭ್ರಷ್ಟಾಚಾರ, ಸ್ವಾರ್ಥ ಇತ್ಯಾದಿಗಳನ್ನು ಕುರಿತಂತೆ ಕೇಳಲಾದ ಪ್ರಶ್ನೆಗೆ ೨೫ ಮಂದಿ ‘ಗೊತ್ತಿಲ್ಲ’ ವೆಂದು ತಿಳಿಸಿದ್ದಾರೆ. ಎಲ್ಲ ಸಂಘಟನೆಗಳ ಬಗೆಗೂ ಇದೇ ತರಹ ಉತ್ತರ ಬಂದಿದೆ.

* * *