ಪ್ರಸ್ತುತ ಅಧ್ಯಯನವು ‘ಶಿಕ್ಷಣದ ಮೂಲಕ ಅಭಿವೃದ್ದಿ’ ಮೂರನೇ ಸ್ವಯಂ ಸೇವಾ ಸಂಸ್ಥೆಯನ್ನು ಒಳಗೊಂಡಿದೆ. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಡೀಡ್‌ಸಂಸ್ಥೆ ಮೈಸೂರು- ಮಂಗಳೂರು ರಸ್ತೆಯಲ್ಲಿ ೪೦ ಕಿ. ಮೀ. ದೂರದಲ್ಲಿದೆ. ಸಂಘಗಳ ನೋಂದಣಿ ಕಾಯಿದೆಯನ್ವಯ ಈ ಸಂಸ್ಥೆ ೧೮೯೦ರ ಸೆಪ್ಟಂಬರ್‌೧ನೇ ತಾರೀಖು ನೋಂದಾವಣೆಯಾಗಿದೆ.

ಈ ಸಂಸ್ಥೆಯ ಸ್ಥಾಪಕರು ಮಂಗಳೂರಿಗೆ ಸೇರಿದ ವೈದ್ಯಕೀಯ ಪದವೀಧರ ಜೆರ್ರಿ ಪಾಯ್ಸ್ ಎಂಬುವರು. ಶ್ರೀಮತಿ ಪಾಯ್ಸ್ ಕೂಡ ವೈದ್ಯಕೀಯ ಪದವೀಧರೆಯಾಗಿದ್ದು ಇವರು ಕೇರಳಕ್ಕೆ ಸೇರಿದವರಾಗಿದ್ದಾರೆ. ಆರಂಭದಲ್ಲಿ ಜೆರ್ರಿ ಪಾಯ್ಸ್ ಅವರು ಕಲ್ಕತಾದಲ್ಲಿರುವ “ಎಲ್ಲರ ಸಹೋದರರು” ಎಂಬ ಸಂಸ್ಥೆಯಲ್ಲಿದ್ದರು. ಕಲ್ಕತ್ತೆಯಿಂದ ಪಾಯ್ಸ್ ದಂಪತಿಗಳು ಬಿಹಾರಕ್ಕೆ ಸ್ಥಳಾಂತರಿಸಿದರು. ಬಿಹಾರದಲ್ಲಿ ಅನೇಕ ಕೇರಳದ ಕ್ರಿಶ್ಚಿಯನ್‌ ಸಂಘಟನೆಗಳು ಕೆಲಸ ಮಾಡುತ್ತಿವೆ. ಹತ್ತು ವರ್ಷಗಳ ಕಾಲ ಬಿಹಾರದಲ್ಲಿ ಕೆಲಸ ಮಾಡಿದ ಬಳಿಕ ಅವರಿಗೆ ದಕ್ಷಿಣ ಭಾರತಕ್ಕೆ ಸ್ಥಳಾಂತರಿಸಬೇಕೆಂಬ ಮನಸ್ಸಾಯಿತು.

ಸೂಕ್ತವಾದ ಸ್ಥಳದ ಹುಡುಕಾಟದಲ್ಲಿ ತಮ್ಮ ಸೇವೆಗೆ ಸೂಕ್ತವಾದ ಜನಸುಮುದಾಯ ಯಾವುದು ಎಂಬ ಅನ್ವೇಷಣೆಯಲ್ಲಿರುವಾಗ ತಾಲ್ಲೂಕು ಮುಖ್ಯ ಕೇಂದ್ರವಾಗಿದ್ದು ವಾಸಿಸಲು ತಕ್ಕಮಟ್ಟಿನ ಅನುಕೂಲತೆಗಳಿಂದ್ದಂಥ ಹುಣಸೂರು ಅವರ ಗಮನ ಸೆಳೆಯಿತು. ಸಮೀಪದಲ್ಲೇ ಬುಡಕಟ್ಟು ಪ್ರದೇಶವಿದ್ದುದ್ದರಿಂದ ಅವರಿಗೆ ಹೆಚ್ಚಿನ ರೀತಿಯ ತೊಂದರೆ ಕೊಡದ ರೀತಿಯಲ್ಲಿ ಅವರ ನಡುವೆ ಕೆಲಸ ಮಾಡಬಹುದೆಂದು ತೋರಿತು. ಪಾಯ್ಸ್ ಸ್ವಲ್ಪ ವರ್ಷಗಳ ಕಾಲ ಸ್ವಯಂ ಸೇವೆಯ ಅನುಭವ ಪಡೆದಿದ್ದರು. ಕಲ್ಕತ್ತೆಯ ಅವರ ವಾಸ ಹಾಗೂ ‘ಎಲ್ಲರ ಸಹೋದರರು’ ಎಂಬ ಸಂಸ್ಥೆಯಲ್ಲಿ ಅವರು ದುಡಿದದ್ದು – ಇದೆಲ್ಲ ಆರಂಭದಲ್ಲಿ ಅವರಿಗೆ ಅವಕಾಶ ಮತ್ತು ಅನುಭವವನ್ನು ನೀಡಿತು. ತರುವಾಯ ಬಿಹಾರದ ಬಡವರು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಕೆಲಸ ಮಾಡಿದುದು ಹೆಚ್ಚಿನ ಅನುಭವಕ್ಕೆ ನಾಂದಿಯಾಯಿತು. ತಮ್ಮ ತೌರೂರಿಗೆ ಸಮೀಪದಲ್ಲಿ ಕೆಲಸ ಮಾಡಬೇಕೆಂಬ ಅವಕಾಶಕ್ಕಾಗಿ ಅವರು ಅನ್ವೇಷಣೆ ನಡೆಸಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅವರ ಗಮನ ಸೆಳೆಯಿತು ಮತ್ತು ಬೇರೆ ಬೇರೆ ಬುಡಕಟ್ಟು ಗುಂಪುಗಳು ವಾಸವಾಗಿದ್ದ ಹುಣಸೂರು ಸೇವೆಯ ಕ್ಷೇತ್ರವಾಯಿತು.

ಹುಣಸೂರು ಪ್ರದೇಶದಲ್ಲಿ ಹೆಚ್ಚಾಗಿ ನಮಗೆ ಕಾಡು ಕುರುಬರು ಹಾಗೂ ಜೇನು ಕುರುಬರು ಕಾಣಸಿಗುತ್ತಾರೆ. ಹಕ್ಕಿಪಿಕ್ಕಿಯವರೂ ಸೇರಿದಂತೆ ಸ್ವಲ್ಪ ಬೆಟ್ಟ ಕುರುಬರು, ಸೋಲಿಗರು ಹಾಗೂ ಯರವರು ಇದ್ದಾರೆ; ಯರವರು ಮತ್ತು ಸೋಲಿಗರು ಬೆಂಗಳೂರು ಜಿಲ್ಲೆಯ ಇರುಳಿಗರನ್ನು ಹೋಲುವಂಥವರು. ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಾಂಗದವರು ಅರೆ- ಅಲೆಮಾರಿಗಳಾದ್ದರಿಂದ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗುತ್ತಿರುತ್ತಾರೆ; ಕೆಲವು ವೇಳೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವ ಉದಾಹರಣೆಯೂ ಇದೆ. ಕೇರಳ- ಕರ್ನಾಟಕ – ತಮಿಳುನಾಡಿನ ಮಟ್ಟಿಗೆ ಇದು ಸ್ಪಷ್ಟವಾಗಿ ಕಾಣುತ್ತದೆ. ಏಕೆಂದರೆ, ಮೂರೂ ರಾಜ್ಯಗಳ ಗಡಿ ಜಿಲ್ಲೆಗಳು ಪರಸ್ಪರ ಅಂಟಿಕೊಂಡಿವೆ.

ಡೀಡ್‌ಸಂಸ್ಥೆ ೧ ಎಕರೆ ೧೦ ಗುಂಟೆಯಷ್ಟು ಸ್ಥಿರಾಸ್ತಿಯನ್ನು ಹೊಂದಿದ್ದು ಈಗಾಗಲೇ ಈ ನಿವೇಶನದಲ್ಲಿ ಒಂದು ಕಟ್ಟಡವನ್ನೂ ನಿರ್ಮಿಸಲಾಗಿದೆ. ಈ ಕಟ್ಟಡವು ಕಛೇರಿ, ಸೆಮಿನಾರು/ ಸಭೆ ನಡೆಸುವಂಥ ಒಂದು ಸಭಾಂಗಣ ಮತ್ತು ಕೆಲವು ಕೊಠಡಿಗಳನ್ನೂ ಒಳಗೊಂಡಿದೆ. ನಿರ್ದೇಶಕರ ಮಂಡಳಿಯಲ್ಲಿ ೧೨ ಮಂದಿ ಸದಸ್ಯರಿದ್ದಾರೆ. ೧೨ ಮಂದಿಯ ಪೈಕಿ ೫ ಜನ ಶಿಕ್ಷಣ ಹಾಗೂ ಆಡಳಿತ ಇಲಾಖೆಯವರಾಗಿದ್ದು ವರ್ಗಾವಾಗುತ್ತಿದ್ದಂತೆ ಬದಲಾಗುತ್ತಿರುತ್ತಾರೆ. ಉಳಿದ ೭ ಮಂದಿ ಸದಸ್ಯರ ಪೈಕಿ ಇಬ್ಬರು ಮಾತ್ರ ಜೇನು ಕುರುಬರಿಗೆ ಸೇರಿದವರು, ಅದರಲ್ಲೊಬ್ಬರು ಮಹಿಳೆ, ಇನ್ನು ಉಳಿದ ಇಬ್ಬರು ಕೊಡಗಿನವರು ಮತ್ತುಳಿದ ಮೂವರು ಡೀಡ್‌ಸಂಸ್ಥೆಗೆ ಸೇರಿದವರಾಗಿದ್ದಾರೆ. ವಿ.ಜಿ.ಕೆ.ಕೆ. ಸಂಸ್ಥೆಯಲ್ಲಾದರೆ ಒಬ್ಬರು ಸದಸ್ಯರನ್ನುಳಿದು ಮಿಕ್ಕಂತೆ ಎಲ್ಲರೂ ಬುಡಕಟ್ಟು ಜನಾಂಗದವರೇ ಆಗಿದ್ದಾರೆ, ಒಬ್ಬರು ಮಹಿಳಾ ಸದಸ್ಯರು.

ವಿ.ಜಿ.ಕೆ.ಕೆ. ವಿವೇಕ ಮತ್ತು ಡೀಡ್‌ಈ ಮೂರೂ ಸಂಸ್ಥೆಗಳು ವೈದ್ಯರಿಂದ ಸ್ಥಾಪಿಸಲ್ಪಟ್ಟವಾಗಿವೆ. ಮೊದಲೆರಡು ಸಂಸ್ಥೆಗಳು ವೈದ್ಯಕೀಯ/ ಆರೋಗ್ಯ ಸೇವೆಗಳನ್ನು ಪ್ರಮುಖವಾಗಿ ಹೊಂದಿವೆಯಾದರೆ ಡೀಡ್‌ಸಂಸ್ಥೆ ಇದನ್ನು ತನ್ನ ಕಾರ್ಯಕ್ಷೇತ್ರಕ್ಕೆ ತೆಗೆದುಕೊಂಡೇ ಇಲ್ಲ.

ಡಾ. ಜೆರ್ರಿ ಪಾಯ್ಸ್ ೧೯೯೦ರಲ್ಲಿ ಡೀಡ್‌ಸಂಸ್ಥೆಯನ್ನು ಬಿಟ್ಟು ಆಕ್ಸ್‌ಫಾಮ್‌ನಲ್ಲಿ ಕೆಲಸ ಮುಂದುವರಿಸಿದ್ದಾರೆ; ಆದರೆ ಸದರಿ ಸಂಸ್ಥೆಯ ನಿರ್ದೆಶಕರ ಮಂಡಳಿಯಲ್ಲಿ ಸದಸ್ಯರಾಗಿ ಮುಂದುವರಿದಿದ್ದಾರೆ. ಪ್ರಸ್ತುತ ನಂಜುಂಡಯ್ಯ ಎನ್ನುವವರು ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಡಾ. ಜೆರ್ರಿ ಪಾಯ್ಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಂಜುಂಡಯ್ಯ ಬಹಳ ಕ್ರಿಯಾಶೀಲ ಕಾರ್ಯಕರ್ತರಾಗಿದ್ದರು. ಈಗ ನಂಜುಂಡಯ್ಯ ಡೀಡ್‌ಅಧ್ಯಕ್ಷರಾಗಿರುವುದರ ಜೊತೆಗೆ ಹೆಚ್‌.ಡಿ.ಕೋಟೆ ಪ್ರದೇಶದ ಮತ್ತೊಂದು ಸ್ವಯಂ ಸೇವಾಸಂಸ್ಥೆಯಾದ ಫೆಡಿನಾ ವಿಕಾಸ್‌ನ ಸಂಯೋಜನಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ. ಎಸ್‌. ಶ್ರೀಕಾಂತ್‌ರವರು ಡೀಡ್‌ನ ಕಾರ್ಯದರ್ಶಿ ಮತ್ತು ಇದರ ಜೊತೆಗೆ ಸಂಸ್ಥೆಯ ಸಂಯೋಜನಾಧಿಕಾರಿಯಾಗಿಯೂ ಆಗಿದ್ದಾರೆ, ತರಬೇತು ಹೊಂದಿದ ಸಮಾಜ ಕಾರ್ಯಕರ್ತರಾಗಿರುವ ಶ್ರೀಕಾಂತ್‌ಸಂಬಂಧಿಸಿದ ವಲಯದಲ್ಲಿ ಶೈಕ್ಷಣಿಕ ಪದವಿ ಗಳಿಸಿ, ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಫ್ಯಾಕ್ಟರಿಯೊಂದರಲ್ಲಿ ಕೈ ತುಂಬಾ ಸಂಬಳ ಬರುವ ಕೆಲಸದಲ್ಲಿದ್ದಂಥ ಶ್ರೀಕಾಂತ್‌ಡಾ. ಜೆರ್ರಿ ಪಾಯ್ಸ್ರೊಡನೆ ಕೆಲಸ ಮಾಡಲು ಆ ಉದ್ಯೋಗವನ್ನು ಬಿಟ್ಟರು. ಗಿರಣಿಯ ಕೆಲಸದಿಂದ ಕೈತುಂಬ ಹಣ ಸಂಪಾದಿಸಬಹುದಿತ್ತು. ಆದರೆ ವೃತ್ತಿ ಮತ್ತು ಜೀವನದಲ್ಲಿ ಸಂತೃಪ್ತಿ ಎಂಬುದು ಮಾತ್ರ ದೊರಕುತ್ತಿರಲಿಲ್ಲ ಎನ್ನುತ್ತಾರೆ ಶ್ರೀಕಾಂತ್‌. ಡೀಡ್‌ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ತೃಪ್ತಿ ಹಾಗೂ ಮಾನಸಿಕ ಶಾಂತಿಯನ್ನು ಪಡೆದಿರುವ ಇವರು ಆ ಸಂತೃಪ್ತಿಯನ್ನು ಅವರ ಮುಖ ಮೇಲೂ ಪ್ರತಿಫಲಿಸುತ್ತಾರೆ. ಪ್ರಸ್ತುತ ಅನೇಕ ಚಟುವಟಿಕೆಗಳು ಡೀಡ್‌ನ ವತಿಯಿಂದ ನಡೆಯುತ್ತಿದ್ದು ಎಲ್ಲ ಕಾರ್ಯಕ್ರಮಗಳ ರೂವಾರಿಯಾಗಿ ಶ್ರೀಕಾಂತ್‌ಬಿಡುವಿಲ್ಲದೆ ದುಡಿಯುತ್ತಿದ್ದಾರೆ.

ಬುಡಕಟ್ಟು ಜನರ ಅಭಿವೃದ್ಧಿಗೆ ದುಡಿಯುವುದರಿಂದ ಖಂಡಿತಾ ತನಗೆ ತೃಪ್ತಿ ಸಿಗುತ್ತದೆ ಎಂಬ ಪ್ರೇರಣೆಯಿಂದಲೇ ಶ್ರೀಕಾಂತ್‌ಈ ಕೇತ್ರವನ್ನು ಆರಿಸಿಕೊಂಡಿದ್ದಾರೆ. ಸಮಾಜ ಸೇವೆಯ ಜೊತೆಗೆ “ಬಡವರಲ್ಲಿ ಬಡವರಾದ” ಮಂದಿಯಲ್ಲಿ ಅರಿವು ಮೂಡಿಸಬೇಕೆಂಬ ಕಾಳಜಿಯೂ ಶ್ರೀಕಾಂತ್‌ಅವರದಾಗಿತ್ತು. ಸಾಕಷ್ಟು ಪ್ರಮಾಣದಲ್ಲಿ ಈ ಗುರಿಯನ್ನು ಅವರು ಸಾಧಿಸಿದ್ದಾರೆ. ಆರಂಭದಲ್ಲಿ ಸ್ವಯಂ ಸೇವಾ ಕಾರ್ಯಕರ್ತರ ಜೊತೆ ಮಿಳಿತವಾಗಲು ಜನರು ಎಚ್ಚರ ವಹಿಸುತ್ತಿದ್ದುದುಂಟು. ಪ್ರಸ್ತುತ ಡೀಡ್‌ಸಂಸ್ಥೆಯವರು ಸಂಪೂರ್ಣ ನಿಸ್ವಾರ್ಥ ಸೇವೆಯಿಂದ ದುಡಿಯುವುದನ್ನು ಕಂಡು ಬುಡಕಟ್ಟು ಜನರು ಅವರಲ್ಲಿ ಪೂರ್ಣ ವಿಶ್ವಾಸವನ್ನು ಪ್ರಕಟಿಸುತ್ತಿದ್ದಾರೆ. ಬುಡಕಟ್ಟಿನವರ ಗಮನವನ್ನು ಬೇರೆಡೆಗೆ ಸೆಳೆಯುಂಥ ಟೀಕೆ ಟಿಪ್ಪಣಿಗಳಿಂದ ಅಷ್ಟು ಪ್ರಯೋಜನವಾಗುತ್ತಿಲ್ಲ.

ಬುಡಕಟ್ಟು ಸಮುದಾಯವನ್ನು ಡೀಡ್‌ಸಂಸ್ಥೆ ಪ್ರವೇಶಿಸಿದುದು ಶಿಕ್ಷಣದ ಮೂಲಕ, ಇದು ಈಗಲೂ ಮುಂದುವರಿಯುತ್ತಿದೆ. ಬುಡಕಟ್ಟಿನವರು ಎದುರಿಸುವ ಸಮಸ್ಯೆಗಳನ್ನು ಅರಿತುಕೊಳ್ಲುವುದರ ಮೂಲಕ ಸ್ವಯಂ ಸೇವಾ ಕಾರ್ಯಕರ್ತರು ಸಂಬಂಧಗಳನ್ನು ಗಟ್ಟಿಗೊಳಿಸಿದರು. ಬುಡಕಟ್ಟಿನವರ ಹಾಡಿಗಳಿಗೆ ಹೋಗಿ ಕಾರ್ಯಕರ್ತರು ಜನರನ್ನು ಸಣ್ಣ ಗುಂಪುಗಳಲ್ಲಿ ದೊಡ್ಡ ಗುಂಪುಗಳಲ್ಲಿ ಸಂಪರ್ಕಿಸಿ ತಮ್ಮ ಉದ್ದೇಶಗಳನ್ನು ಅವರಿಗೆ ವಿವರಿಸಿ ಹೇಳಿ ಬುಡಕಟ್ಟಿನವರು ತಮ್ಮ ಹಿತೈಷಿಗಳೆಂದು ಸ್ವೀಕರಿಸುವ ಹಾಗೆ ಮನವೊಲಿಸಿದರು. ಡೀಡ್‌ಸಂಸ್ಥೆ ಬುಡಕಟ್ಟಿನವರಿಗೆ ಸಂವಿಧಾನಿಕ ಸವಲತುಗಳ ಬಗ್ಗೆ ಮನವರಿಕೆ ಮಾಡಿರುವುದರ ಜೊತೆಗೆ ಸರ್ಕಾರಿ ಅಧಿಕಾರಿಗಳು ಇದು ಸಫಲವಾಗಳು ಯಾವ ರೀತಿ ಪಾತ್ರ ವಹಿಸುತ್ತಾರೆ ಎಂಬುದನ್ನು ತಿಳಿಸಿರುತ್ತಾರೆ.

ಹಾಡಿಗಳಲ್ಲಿ ತಾತ್ಕಾಲಿಕ ಶಾಲೆಗಳನ್ನು ತೆರೆದು ವಯಸ್ಕ ಶಿಕ್ಷಣವನ್ನು ಸಂಸ್ಥೆ ಪ್ರಾರಂಭದಲ್ಲಿ ನಡೆಸಿತು. ತರುವಾಯ ಜೀತಪದ್ಧತಿಯ ವಿಷಯವನ್ನು ಕೈಗೆತ್ತಿಕೊಂಡಿತು. ನಂತರ ಕೃಷಿ ಭೂಮಿಗೆ ಸಂಬಂಧಿಸಿದ ಸಂಗತಿಗಳನ್ನು ಚರ್ಚಿಸಲು ಶುರು ಮಾಡಿತು. ಬುಡಕಟ್ಟು ಬದುಕಿಗೆ ಪ್ರಮುಖವಾಗಿದ್ದಂಥ ವಿಷಯಗಳ ಮೇಲೆ ಗಮನ ಹರಿಸಲು ಅನುಕೂಲವಾಗುವಂತೆ ಗುಂಪು ಸಂಘಟನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಬುಡಕಟ್ಟು ಅಭಿವೃದ್ಧಿಗೆ ನಿಗಧಿಗೊಳಿಸಲಾಗಿದ್ದಂಥ (ಸಂವಿಧಾನಿಕ) ಸವಲತ್ತುಗಳನ್ನು ದಕ್ಕಿಸುವುದು ಅಂತಿಮವಾದ ಗುರಿಯಾಯಿತು. ಒಗ್ಗಟ್ಟಿನ ಪ್ರಯತ್ನದಿಂದ ಮಾತ್ರ ಈ ಗುರಿ ಸಾಧಿತವಾಗುವುದೆಂದು ಮನವರಿಕೆಯಾಯಿತು.

ಬೇರೆ ಬೇರೆ ಹಾಡಿಗಳಲ್ಲಿ ವಿಚಾರ ಸಂಕಿರಣ, ಉಪನ್ಯಾಸ, ಸಭೆ-ಇತ್ಯಾದಿಗಳನ್ನು ಏರ್ಪಡಿಸಿ ಜನರಲ್ಲಿ ರಾಜಕೀಯ ಅರಿವು ಮೂಡಿಸುವ ಪ್ರಕ್ರಿಯೆ ಕಳೆದ ೪ ವರ್ಷಗಳಿಂದ ಪ್ರಾರಂಭವಾಗಿದೆ. ರಾಜಕೀಯ ಶಿಕ್ಷಣ ಬಹು ಮುಖ್ಯವಾದ ಒಂದು ಸಿದ್ಧತೆ. ರಾಜಕೀಯ ಪ್ರಜ್ಞೆಯಿದ್ದ ಪಕ್ಷದಲ್ಲಿ ಹಕ್ಕುಗಳು ನ್ಯಾಯ, ಸಾಮಾಜಿಕ ಕ್ಷೇಮ-ಇತ್ಯಾದಿಗಳ ವಿಷಯದಲ್ಲಿ ಅರಿವು ಮೂಡಿ ಬುಡಕಟ್ಟಿನವರು ತಮ್ಮ ಮೇಲಿನ ದಬ್ಬಾಳಿಕೆ ಹಾಗೂ ದೌರ್ಜನ್ಯದ ವಿರುದ್ಧ ನಿಲ್ಲುವರು.

ಸಂಘಟನೆಯು ಬುಡಕಟ್ಟು ಭಾಷೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಕಡೆಯೂ ಕೂಡ ಗಮನ ಕೊಡುತ್ತಿದೆ. ಬುಡಕಟ್ಟು ಉಪ ಭಾಷೆ ಜೇನು ನುಡಿ ಮತ್ತದರ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಾಮಾಜಿಕ ನಾಯಕತ್ವ ಬೆಳವಣಿಗೆಯ ಒಂದು ಪ್ರಮುಖವಾದ ಅಂಗವಾಗಿದ್ದು ಅದರ ಮೂಲಕ ಜನರು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಂಡು ಅಭಿವೃದ್ಧಿ ಹೊಂದಬಹುದಾಗಿದೆ. ಅನೇಕ ಸಲ ಬೇರೆ ಬೇರೆ ಸಂಗತಿಗಳನ್ನು ಕುರಿತು ಕವನ ರಚಿಸಿ ಶಾಲಾ ಮಕ್ಕಳಿಂದ ಹಾಡಿಸಲಾಗುತ್ತಿದೆ. ಈ ವಿಧಾನದಿಂದ ಎಷ್ಟು ಪರಿಣಾಮಕಾರಿಯಾದ ಬದಲಾವಣೆಯಾಗಿದೆಯೆಂದರೆ ವಿರೋಧಿಗಳಂತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳೂ ಕೂಡ ಪರಿವರ್ತನೆಗೊಂಡ ಉದಾಹರಣೆ ಇದೆ. ಡೀಡ್‌ತಿಂಗಳಿಗೆ ಎರಡು ಬಾರಿಯಂತೆ ಕನ್ನಡ ಭಾಷೆಯಲ್ಲಿ “ಹಂಬಲ” ಎಂಬ ವಾರ್ತಾಪತ್ರವನ್ನು ಹೊರತರುತ್ತಿದೆ. ಇದು ಖಾಸಗಿ ಪ್ರಸಾರಕ್ಕೆ ಮೀಸಲಾಗಿದ್ದು ಜ್ಞಾನ ಪ್ರಸಾರದ ಪರಿಣಾಮಕಾರಿ ಮಾಧ್ಯಮವಾಗಿ ವಿಕಾಸ ಹೊಂದಿದೆ.

ಸದರಿ ಸಂಸ್ಥೆಯ ಪ್ರಕಟಿತ ಗುರಿಯೆಂದರೆ ಶಿಕ್ಷಣದ ಮೂಲಕ ಅಭಿವೃದ್ಧಿಯನ್ನು ಸಾಧಿಸುವುದು. ಹಾಗಾಗಿ ಆರಂಭದಿಂದಲೂ ಡೀಡ್‌ಸಂಸ್ಥೆ ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣದ ಮೇಲೆ ನಿರಂತರವಾಗಿ ತನ್ನ ಗಮನವನ್ನು ಕೇಂದ್ರೀಕರಿಸುತ್ತಾ ಬಂದಿದೆ. ಶಿಶುವಿಹಾರ ಹಾಗೂ ಹಾಡಿಗಳಲ್ಲಿ ನಡೆಸುತ್ತಿರುವಂಥ ಶಾಲಾ ಕಾರ್ಯಕ್ರಮ ಶಿಕ್ಷಣದ ಉದ್ದೇಶವನ್ನು ಇನ್ನಷ್ಟು ಮುಂದುವರಿಸಿವೆ. ೧೯೮೯ರಿಂದ ವಾರ್ಷಿಕವಾಗಿ ಬುಡಕಟ್ಟಿನ ಮಕ್ಕಳ ಶಿಶುವಿಹಾರ ಕಾರ್ಯಕ್ರಮಗಳಿಗಾಗಿ ಕೇಂದ್ರ ಸಮಾಜ ಕಲ್ಯಾಣ ಮಂಡಳಿ ೧.೭೫ ಲಕ್ಷ ರೂಪಾಯಿಗಳನ್ನು ನೀಡುತ್ತಾ ಬಂದಿದೆ. ಹಾಡಿನಲ್ಲಿ ನಡೆಸುವ ಶಾಲೆ ಸಮುದಾಯದ ಆಸ್ತಿಯಾದರೆ, ಇರುವ ೨೦ ಮಂದಿ ಉಪಾಧ್ಯಾಯರಲ್ಲಿ ೧೮ ಮಂದಿ ಬುಡಕಟ್ಟಿನವರೇ ಆಗಿದ್ದು ಶಿಕ್ಷಣ ವಲಯದಲ್ಲಿ ಕೈಕೊಂಡಿರುವ ಪ್ರಗತಿಪರ ಹೆಜ್ಜೆಗೆ ಸಾಕ್ಷಿಯಾಗಿದೆ ಡೀಡ್‌ಸಂಸ್ಥೆ ಪ್ರಾರಂಭಿಸಿರುವ ಯೋಜನೆಗಳಿಂದ ೬೦೦೦ ಮಂದಿ ಬುಡಕಟ್ಟಿನವರು, ಉಪಯೋಗ ಪಡೆದುಕೊಳ್ಳುತ್ತಾರೆ.

ಪ್ರಧಾನವಾಗಿ ಡೀಡ್‌ಎರಡು ಮೂಲಗಳಿಂದ ಹಣ ಸಹಾಯ ಪಡೆಯುತ್ತದೆ ಭಾರತ ಮೂಲ; ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಶಿಶು ವಿಹಾರಗಳನ್ನು ನಡೆಸಲು ಸಹಾಯ ಮಾಡುತ್ತದೆ. ವಿದೇಶಿ ಮೂಲ; ಸಿ.ಎಫ್.ಸಿ. ಎಫ್. ಎಂಬ ಫ್ರೆಂಚ್‌ಮೂಲದ ಸಂಸ್ಥೆ ಯುರೋಪಿಯನ್‌ಸಮುದಾಯದೊಡನೆ ಸಂಬಂಧ ಹೊಂದಿದೆ. ಡೀಡ್‌ಸಂಸ್ಥೆ ೧೯೮೨- ೯೪ರ ಅವಧಿಯಲ್ಲಿ ವಾರ್ಷಿಕವಾಗಿ ೧.೫೦ ಲಕ್ಷದಿಂದ ಹಿಡಿದು ೬.೦೦ ಲಕ್ಷದವರೆಗೂ ಸಹಾಯ ಧನವನ್ನು ಪಡೆದಿದೆ. ಪ್ರತಿ ೫ ವರ್ಷಗಳಿಗೊಮ್ಮೆ ೨೦,೦೦೦/- ಹೆಚ್ಚಳಕ್ಕೆ ಅವಕಾಶವಿದೆ. ೧೯೯೫ ರಲ್ಲಿ ಧನಸಹಾಯ ನಿಂತುಹೋದಾಗ ಸಹಜವಾಗಿಯೇ ಶ್ರೀಕಾಂತ್‌ಪರ್ಯಾಯ ಮೂಲವನ್ನು ಹುಡಕಬೇಕಾದ ಒತ್ತಡಕ್ಕೆ ಒಳಗಾದರು. ಫ್ರಾನ್ಸ್‌ನಿಂದ ಪಡೆದಂಥ ಧನಸಹಾಯವನ್ನು ಪ್ರಮುಖವಾಗಿ ಸಮುದಾಯ ಸಂಘಟನೆ, ನಾಯಕತ್ವ ನಿರ್ಮಾಣ, ಸೃಜನಾತ್ಮಕ ಅರಿವು ಮೂಡಿಸುವಿಕೆ, ಕೃಷಿ ಹಾಗೂ ಶಿಕ್ಷಣಕ್ಕೆ ವಿನಿಯೋಗಿಸಲಾಯಿತು. ಇತರ ಮೂಲಗಳಿಂದ ಪಡೆದ ಧನ ಸಹಾಯ ತೀರಾ ಗೌಣವಾದುದು.

ಪಡೆದ ಧನಸಹಾಯದಿಂದ ಖಂಡಿತವಾಗಿ ಸಂಸ್ಥೆಯು ಬುಡಕಟ್ಟು ಅಭಿವೃದ್ಧಿ ಕಾರ್ಯವನ್ನು ನಡೆಸಿದೆ. ಪ್ರಮುಖವಾದ ಯೋಜನೆಗಳೇಂದರೆ () ಕೃಷಿ, ಹಣ್ಣಿನ ಮರಗಳನ್ನು ಬೆಳೆಸುವುದು -ಗೃಹಕೃತ್ಯಕ್ಕೆ ಸೌದೆ ಹಾಗೂ ದನಗಳಿಗೆ ಮೇವು () ನಾಯಕತ್ವ ತರಬೇತು ಹಾಗೂ ನಿರ್ವಹಣೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನೊಳಗೊಂಡಂತೆ () ಬುಡಕಟ್ಟು ಜನರು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ತಮ್ಮ ಹಕ್ಕನ್ನು ಒತ್ತಾಯಿಸುವುದಕ್ಕೆ ಅನುಕೂಲವಾಗುವಂತೆ ತರಬೇತು ನೀಡುವುದು. () ಅಂತಿಮವಾಗಿ ಪ್ರಚಲಿತವಿರುವ ಬುಡಕಟ್ಟು ನ್ಯಾಯ ವಿಧಾನವನ್ನು ಸದೃಢಗೊಳಿಸಿ ವೇಗವಾಗಿ ತಕರಾರುಗಳನ್ನು, ವಿವಾದಗಳನ್ನು ಇತ್ಯರ್ಥಪಡಿಸುವಂಥದ್ದು- ದೇಶದಲ್ಲಿರುವ ಔಪಚಾರಿಕವಾದ ನ್ಯಾಯಪದ್ಧತಿಯನ್ನು ಬಿಟ್ಟು.

ಈ ಪ್ರದೇಶದಲ್ಲಿ ಡೀಡ್‌ಸಂಸ್ಥೆಯವರು ಬುಡಕಟ್ಟಿನವರಿಗೆ ಮಾಡಿರುವ ಸೇವೆಯನ್ನು ರಾಜಕಾರಣಿಗಳಾಗಲಿ, ಸ್ವಹಿತಾಸಕ್ತಿ ಹೊಂದಿದವರಾಗಲಿ ಬಹಿರಂಗವಾಗಿ ತಿರಸ್ಕರಿಸಲು ಸಾಧ್ಯವೇ ಇಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಡೀಡ್‌ ಸಂಸ್ಥೆಯ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದಾಗಿ ತಿಳಿದುಬಂದಿದೆ. ಸಂಸ್ಥೆಯು ಒಳಗೊಳ್ಳುವ ಕ್ಷೇತ್ರವು ಹುಣಸೂರಿಗೆ ಮಾತ್ರ ಸೀಮಿತವಾಗಿದ್ದು ಇದರಡಿಯಲ್ಲಿ ಜೇನು ಕುರುಬ, ಬೆಟ್ಟ ಕುರುಬ, ಯರವ ಮತ್ತು ಸೋಲಿಗರು ಬರುತ್ತಾರೆ. ಆದರೆ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಬೇರೆ ಯಾವುದೇ ಎನ್.ಜಿ.ಓ. ಕರ್ನಾಟಕದ ಯಾವುದೇ ಭಾಗದಲ್ಲಿ ಚರ್ಚೆ, ಸಂಕೀರಣ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಡೀಡ್‌ ಸಂಸ್ಥೆ ಅಲ್ಲಿಗೆ ಹೋಗಿ ಭಾಗವಹಿಸಲು ಸಿದ್ಧವಿದೆ. ಹೊರಗಿನವರು, ಸರ್ಕಾರಿ ಅಧಿಕಾರಿಗಳು ಹಾಗೂ ನೆರೆಹೊರೆಯ ಗ್ರಾಮಸ್ಥರೊಡನೆ ಸಂಪರ್ಕ ಸಾಕ್ಷರತಾ ಮಿಷನ್ನಿನ ಕೆಲಸದಿಂದಾಗಿ ಹೆಚ್ಚಾಗಿದೆ. ಡೀಡ್‌ ಯಾವುದೇ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿಲ್ಲ. ಆದರೆ ಪ್ರಚಲಿತವಿರುವ ನಾಟಿ ಔಷಧಿ ಮುಂದುವರಿದಿದೆ. ಬಹುಶಃ ಅದು ಹೆಚ್ಚು ಗುಣಕಾರಿಯಾಗಿದ್ದಿರಲೂಬಹುದು. ಬುಡಕಟ್ಟು ಜನರ ಆರೋಗ್ಯ ಕೂಡಾ ಸುಧಾರಿಸಿದೆ.

ಈ ಸಂಘಟನೆಯ ಸ್ಥಾನಮಾನ ಮತ್ತು ಘನತೆ ನಿಜವಾಗಿ ಗಮನಾರ್ಹವಾದುದಾಗಿದೆ. ಬುಡಕಟ್ಟು ಜನರ ಸಮಸ್ಯೆಗಳನ್ನು ಕರಗತ ಮಾಡಿಕೊಂಡಿರುವ ಸಂಸ್ಥೆಗಳಲ್ಲಿ ಡೀಡ್‌ಮುಂಚೂಣಿಯಲ್ಲಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಬುಡಕಟ್ಟು ಜನರ ಸೇವೆಯಲ್ಲಿ ಡೀಡ್‌ಈಗಾಗಲೇ ೧೫ ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಸಂಘಟನೆಯು ತಾನು ಸಾಧಿಸಬೇಕೆಂದು ಹೊರಟ ಬಹುತೇಕ ಉದ್ದೇಶಗಳನ್ನು ಈಡೇರಿಸಿದೆ. ಒಂದು ಪ್ರಮುಖವಾದ ಗುರಿಯೆಂದರೆ ಬುಡಕಟ್ಟು ಜನರನ್ನು ಸಂಘಟಿಸಿ ಅವರು ತಮ್ಮ ಹಕ್ಕುಗಳನ್ನು ಕೇಳಲು ಪ್ರೇರೇಪಿಸುವುದು. ನಂತರ ಬುಡಕಟ್ಟು ಆರ್ಥಿಕ ಚಟುವಟಿಕೆಯನ್ನು ಆಹಾರ ಸಂಗ್ರಹಣೆಯಿಂದ ಆಹಾರ ಉತ್ಪತ್ತಿಯ ಕಡೆಗೆ ಒಯ್ಯುವಂಥದ್ದು, ಹಾಗೆಯೇ ಬುಡಕಟ್ಟಿನವರಿಗೆ ಶಿಕ್ಷಣ ನೀಡಿ ಮುಖ್ಯ ವಾಹಿನಿಯ ಸಾಂಸ್ಕಿತಿಕ ಅನನ್ಯತೆ ಹಾಗೂ ಪರಂಪರೆಯನ್ನು ಅವರು ಅರಿಯುವಂತೆ ಮಾಡುವುದು. ಇದರ ಜೊತೆಗೆ ಅನೇಕ ಸರ್ಕಾರಿ ಇಲಾಖೆಗಳು, ಬುಡಕಟ್ಟೇತರ ಸಮುದಾಯಗಳು ಮತ್ತು ಇತರ ಸ್ವಯಂ ಸೇವಾ ಸಂಸ್ಥೆಗಳೊಡನೆ ಹೊಂದಾಣಿಕೆ ಸಾಧಿಸುವಂತೆ ಮಾಡುವುದಲ್ಲದೆ ಶಿಕ್ಷಣದ ಮೌಲ್ಯ ಹಾಗೂ ಸ್ವಯಂಸ್ಥಾಪಿತ ಪರಿಸರದ ಮಹತ್ವವನ್ನು ತಿಳಿಸುವುದು ಗುರಿಯಾಗಿತ್ತು.

ಆದ್ದರಿಂದ ಸಾಮಾಜಿಕ-ಸಾಂಸ್ಕೃತಿಕ ನಾಯಕತ್ವದ ಹೊರಹೊಮ್ಮುವಿಕೆಕಾಗಿ, ತರುವಾಯ ಸ್ವಯಂಘೋಷಿತ ಆರ್ಥಿಕ ಚಟುವಟಿಕೆಗಳೀಗಾಗಿ ಜಮೀನು ಹಾಗೂ ಕೃಷಿ ಆಧಾರಿತ ಚಟುವಟಿಕೆಗಳನ್ನು ನಡೆಸಲು ಡೀಡ್‌ಮುಂದಾಯಿತು. ಇದನ್ನು ಸಾಧ್ಯಗೊಳಿಸಲು ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣವನ್ನು ನೀಡಲಾಯಿತು. ಮುಖ್ಯ ವಾಹಿನಿಯೊಡನೆ ಸ್ಪರ್ಧಿಸಲು ಹೊಸ ಸಾಧ್ಯತೆಯನ್ನು ತೆರೆಯುವ ದೃಷ್ಟಿ ಹೊಂದಲಾಗಿತ್ತು. ಮೂಲ ಬುಡಕಟ್ಟು ಹಾಗೂ ಸಾಂಸ್ಕೃತಿಕ ಅನನ್ಯತೆ ಹಾಗೂ ಪರಂಪರೆಗಳನ್ನು ಉಳಿಸಿಕೊಂಡು ಸ್ವಾಭಿಮಾನ ಹಾಗೂ ಘನತೆಯನ್ನು ಪ್ರೋತ್ಸಾಹಿಸುವುದು, ಅಂತಿಮವಾಗಿ ಒಗ್ಗಟ್ಟಿನ ಪ್ರಯತ್ನದ ಮೂಲಕ ಪ್ರಗತಿ ಸಾಧಿಸುವುದು ಮುಖ್ಯ ಗುರಿ.

ಮೊದಲ ೧೫ ವರ್ಷಗಳಲ್ಲಿ ಡೀಡ್‌ ಸಂಸ್ಥೆ ತಾನು ಇದುವರೆಗೆ ಸಾಧಿಸಿರುವ ಕಾರ್ಯಕ್ರಮಗಳಿಗೆ ಹೆಚ್ಚಿನ ಬೆಂಬಲವಾಗಿ ಇನ್ನೂ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇನ್ನು ಮುಂದೆ ಕಾಡುಕುರುಬ ಜನಸಮುದಾಯದ ಜೊತೆ ಕೆಲಸ ಮಾಡಿ ಈ ಮುಂದಿನ ಉದ್ದೇಶಗಳನ್ನು ಈಡೇರಿಸುವ ಸಂಕಲ್ಪ ಮಾಡಿದೆ.

ಸ್ವಯಂ ಚೈತನ್ಯ ನೀಡುವ ಕೃಷಿ ಕಾರ್ಯಕ್ರಮಗಳ ಮೂಲಕ ಕೃಷಿ ಅಭಿವೃದ್ಧಿ, ಮಣ್ಣು ಮತ್ತು ಜಲ ಸಂವರ್ಧನೆ, ಇದರ ಜೊತೆಗೆ ಎಲ್ಲ ಹಾಡಿಗಳಲ್ಲಿ ಮರ ಬೆಳೆಸುವ ಕಾರ್ಯಕ್ರಮ, ಭೂಮಿ ಮತ್ತು ಇತರ ಅರ್ಥಿಕ ಕಾರ್ಯಕ್ರಮದ ಜೊತೆಗೆ ಸ್ವಯಂ ಉದ್ಯೋಗಕ್ಕೆ ಮಾದರಿಯನ್ನು ಕಲ್ಪಿಸುವುದು. ಎರಡನೆಯದಾಗಿ, ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿಯನ್ನು ಸದೃಢಗೊಳಿಸುವುದು, ಬುಡಕಟ್ಟು ನಾಯಕತ್ವದ ಮೂಲಕ ಕುಡಿತ ಹಾಗೂ ಜೂಜಿನಂಥ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸುವ ವಿಧಾನಗಳನ್ನು ಆವಿಷ್ಕರಿಸುವುದು, ಪ್ರಚಲಿತ ಕಾರ್ಯಕ್ರಮಗಳನ್ನು ಇನ್ನು ಮುಂದಿನ ೫-೬ ವರ್ಷಗಳವರೆಗೆ ಮುಂದುವರೆಸಿ ಸದೃಢಗೊಳಿಸುವುದು ಕೂಡ ಸೇರಿದೆ.

ಜಂಟಿ ಅರಣ್ಯ ನಿರ್ವಹಣೆ ಯೋಜನೆ ಡೀಡ್‌ಸಂಸ್ಥೆಯ ಮುಂದಿನ ಕಾರ್ಯ ಯೋಜನೆಯಲ್ಲಿದೆ. ಅರಣ್ಯ ಕಾನೂನುಗಳಲ್ಲಿ ಬುಡಕಟ್ಟು ಹಕ್ಕುಗಳನ್ನು ಸೇರಿಸುವುದು, ಬುಡಕಟ್ಟು ಸಮುದಾಯ ನಿಯಮಗಳನ್ನು ಆವಿಷ್ಕರಿಸಿ ಬುಡಕಟ್ಟು ಅಕಾಡೆಮಿಯನ್ನು ಸ್ಥಾಪಿಸುವುದು ಹಾಗೂ ಬುಡಕಟ್ಟು ದಶಕವನ್ನು ಆಚರಿಸುವುದು, ಬುಡಕಟ್ಟು ಮೀಸಲಾತಿ ಹಾಗೂ ಪುನರ್ವಸತಿ, ರಾಷ್ಟ್ರೀಯ ಉದ್ಯಾನ ಪ್ರದೆಶಗಳಿಂದ ಬುಡಕಟ್ಟಿನವರ ಸ್ಥಳಾಂತರವನ್ನು ಎದುರಿಸುವುದು ಹಾಗೂ ಕರ್ನಾಟಕದ ಬುಡಕಟ್ಟು ಜನರಿಗೆ ೫ನೇಪರಿಚ್ಛೇದವನ್ನು ಒದಗಿಸುವುದು- ಇದೆಲ್ಲ ಡೀಡ್‌ಸಂಸ್ಥೆಯ ಮುಂದಿನ ಹಂತದ ಕಾರ್ಯಕ್ರಮಗಳಾಗಿವೆ.

೧೯೮೦ ದಶಕದ ಆರಂಭದಲ್ಲಿ ಡೀಡ್‌ಸಂಸ್ಥೆಯು ಕೈಕೊಂಡ ಕಾರ್ಯಕ್ರಮದ ಫಲವಾಗಿ ಬುಡಕಟ್ಟು ಕೃಷಿಕರ ಸಂಘ (ಬಿ.ಕೆ.ಎಸ್‌) ಹಾಗೂ ವನವಾಸಿ ಮಹಿಳಾ ಸಂಘ (ವಿ.ಎಂ.ಎಸ್‌) ಎಂಬ ಎರಡು ಜನಸಂಘಟನೆಗಳು ಒಟ್ಟಾಗಿ ಈವತ್ತು ಬುಡಕಟ್ಟು ಸಮುದಾಯದ ಸಾಮಾಜಿಕ – ರಾಕಕೀಯ ಹಾಗೂ ಆರ್ಥಿಕ ಪ್ರಗತಿಯನ್ನು ನೋಡಿಕೊಳ್ಳುತ್ತಿವೆ. ಈಗ ಪ್ರಚಲಿತವಿರುವ ಪ್ರಗತಿ ಪ್ರಕ್ರಿಯೆಗಳಿಗೆ ಒತ್ತಾಸೆಯಾಗಿ ಒತ್ತಾಸೆಯಾಗಿ ವಯಸ್ಕರ ಶಿಕ್ಷಣ ಸಮಿತಿ, ಪಾರಂಪರಿಕ ಮುಖಂಡರ ಸಮಿತಿ, ಬುಡಕಟ್ಟು ಸಾಂಸ್ಕೃತಿಕ ವೇದಿಕೆ, ಬುಡಕಟ್ಟು ವಿದ್ಯಾರ್ಥಿಗಳ ವೇದಿಕೆ, ಬುಡಕಟ್ಟು ಪರಿಸರ ಸಮಿತಿ ಹಾಗೂ ಬುಡಕಟ್ಟು ಸಂಪನ್ಮೂಲ ಗುಂಪು ಇತ್ಯಾದಿ ಹಲವು ಕ್ರಿಯಾಸಮಿತಿಗಳು ಆಸ್ತಿತ್ವದಲ್ಲಿವೆ.

ಪುನರ್ವಸತಿ, ಸ್ಥಳಾಂತರ, ಮೀಸಲಾತಿ, ಮತದಾರರ ಶಿಕ್ಷಣ, ಸಾಕ್ಷರತೆ, ಕುಡಿತದ ಚಟ, ಭೂರಹಿತರಿಗೆ ಭೂಮಿ, ಒತ್ತುವರಿ, ಬುಡಕಟ್ಟಿನವರ ಮೇಲಿನ ದೌರ್ಜನ್ಯ- ಇವಕ್ಕೆಲ್ಲ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಿ.ಕೆ.ಎಸ್‌. ಹಾಗೂ ವಿ. ಎಂ. ಎಸ್‌. ತುಂಬಾ ಚಟುವಟಿಕೆಯಿಂದಿವೆ. ಇದರ ಜೊತೆಗೆ, ಪಂಚಾಯಿತಿ ಸದಸ್ಯರ ತರಬೇತು, ಬುಡಕಟ್ಟು ಕ್ರಿಯಾಶೀಲರ ಪುನರ್ಮನನ, ಜಾಥಾಗಳು, ಗುಂಪು ಸಂಪರ್ಕ ಕಾರ್ಯಕ್ರಮ, ಜಿಲ್ಲಾ ಆಡಳಿತದೊಡನೆ ಸಚಿವರ ಭೇಟಿ- ಇತ್ಯಾದಿ ಕಾರ್ಯಕ್ರಮಗಳನ್ನೆಲ್ಲ ಡೀಡ್‌ನಡೆಸಿದೆ.

ಬೇರೆ ಬೇರೆ ಸ್ಥಳಗಳಲ್ಲಿ ಜಿಲ್ಲಾ ಬುಡಕಟ್ಟು ಹಿರಿಯರ ಸಭೆ ಮತ್ತು ಬುಡಕಟ್ಟು ರಂಗವೇದಿಕೆ ಕೂಡ ಕಾರ್ಯಪ್ರವೃತ್ತವಾಗಿವೆ. ಪಾರಂಪರಿಕ ಜ್ಞಾನ, ವೈಯಕ್ತಿಕ ವಿವೇಚನೆ, ದೇಶಿಯ ಜ್ಞಾನ, ನಿಸರ್ಗದ ಸಾಮೀಪ್ಯ, ವಿವಾದ ಇತ್ಯರ್ಥ, ವಿವಾಹ ಹಾಗೂ ಕುಟುಂಬದ ಸಮಸ್ಯೆಗಳ ಪರಿಹಾರ, ಆಹಾರ ಕ್ರಮ ಹಾಗೂ ಹಂಚಿಕೊಳ್ಳುವುದು, ಸಮುದಾಯ ಮಾಲೀಕತ್ವ -ಇವು ಬುಡಕಟ್ಟು ಬದುಕಿನ ಪ್ರಮುಖವಾದಂಥ ಅಂಶಗಳು. ಹಿರಿಯರಾದವರು ಎಳೆಯ ತಲೆಮಾರಿನವರಿಗೆ ಈ ಮೌಲ್ಯಗಳನ್ನು ಹೇಳಿಕೊಡಬೇಕಾಗಿದೆ. ಬುಡಕಟ್ಟೇತರ ಸಮಾಜವು ಸುತ್ತವರಿದಿದ್ದರೂ ಮೂಲತಃ ಬುಡಕಟ್ಟು ಸಮಾಜ ಹಾಗೂ ಸಂಸ್ಕೃತಿಯ ರೀತಿ ರಿವಾಜುಗಳನ್ನು ಅವರು ಬಿಡದಂತ ಎಚ್ಚರಿಕೆ ವಹಿಸಬೇಕಾಗಿದೆ. ಪರಿಸರ ಸಮಿತಿ ರಚನೆಯಾಗಿದ್ದು ಇದು ಬುಡಕಟ್ಟಿನ ಗಿಡಮೂಲಿಕಾ ಔಷಧಿ ತಯಾರಕರನ್ನು ಒಳಗೊಂಡಿದೆ.

ರಾಜ್ಯಮಟ್ಟದ ಎನ್.ಜಿ.ಓ.ಗಳ ಜಾಲವನ್ನು ಫೆವಾರ್ಡ್‌ಪ್ರತಿನಿಧಿಸುತ್ತದೆ. ಮೈತ್ರಿ ಎಂಬುದು ಜಿಲ್ಲಾಮಟ್ಟದ ಒಕ್ಕೂಟ; ತಾಲೂಕು ಮಟ್ಟದ ಜಾಲವೂ ಕೂಡ ಇದೆ. ಜೆ.ಎಫ್..ಪಿ. ಎಂ. ಹಾಗೂ ಅರಣ್ಯ ಮಸೂದೆಗೆ ಸಂಬಂಧಿಸಿದ ಕೆಲಸವನ್ನು ಫೆವಾರ್ಡ್‌ನೋಡಿಕೊಳ್ಳುತ್ತದೆ. ಟಿ. ಜೆ. ಎ. ಅಥವಾ ಟ್ರೈಬಲ್‌ಜಾಯಿಂಟ್‌ಆಕ್ಷನ್‌ಕಮಿಟಿ (ಬುಡಕಟ್ಟು ಜಂಟಿ ಕ್ರಿಯಾ ಸಮಿತಿ) ಕರ್ನಾಟಕದ ಬುಡಕಟ್ಟು ಎನ್.ಜಿ.ಓ.ಗಳ ಜಾಲವಾಗಿದೆ. ಪುನರ್ವಸತಿ, ಸ್ಥಳಾಂತರ, ಮೀಸಲಾತಿ, ಬುಡಕಟ್ಟು ಸಮುದಾಯ ಕಾನೂನು, ಬುಡಕಟ್ಟು ಸ್ವಾಯತ್ತತೆ, ಅರಣ್ಯ ಹಕ್ಕುಗಳು, ಜೈವಿಕ ವೈವಿಧ್ಯ, ರಕ್ಷಿತ ಪ್ರದೇಶ, ಬುಡಕಟ್ಟು ಸಂಸ್ಕೃತಿ ಹಾಗೂ ಶಿಕ್ಷಣ -ಇವೆಲ್ಲವೂ ಟಿ.ಜೆ. ಎ. ದ ಒತ್ತಾಸೆಯ ಮೂಲಕ ಸಮೂಹಿಕವಾಗಿ ಸಾಧಿತವಾಗಿವೆ.

ಡೀಡ್‌ಸಂಸ್ಥೆಯು ನಿರಾತಂಕವಾಗಿ ಕೆಲಸ ಮಾಡಲು ಅಡ್ಡಿಪಡಿಸಿದ ಎರಡು ಮುಳ್ಳುಗಳೆಂದರೆ ಸಣ್ಣ ವ್ಯಾಪಾರಿಗಳು ಹಾಗೂ ಸಾರಾಯಿ ಮಾರಾಟಗಾರರು. ಪರವಾನಗಿ ಪಡೆದ ಸಾರಾಯಿ ಮಾರಾಟಗಾರರು ಬುಡಕಟ್ಟು ಪ್ರದೇಶದಲ್ಲಿ ಬಹಳ ತೊಂದರೆ ಕೊಟ್ಟಿದ್ದಾರೆ. ಈಗ ಬುಡಕಟ್ಟು ಮಹಿಳೆಯರು ಹಾಗೂ ಮಕ್ಕಳು ಕುಡಿತದ ಕೇಡಿನ ವಿರುದ್ಧ ಕಿಡಿಕಿಡಿಯಾಗಿದ್ದಾರೆ. ಹಾಡಿಗಳನ್ನು ಸಾರಾಯಿ ಹಾಗೂ ಸಾರಾಯಿ ಮಾರಾಟಗಾರರಿಂದ ಮುಕ್ತವಾಗಿಸಬೇಕೆಂದು ಅವರು ಸರ್ಕಾರವನ್ನು ಆಗ್ರಹಪಡಿಸಿದ್ದಾರೆ. ಎಷ್ಟರ ಮಟ್ಟಿಗೆ ಇವರ ಬೇಡಿಕೆಯನ್ನು ಈಡೇರಿಸಬಹುದು; ಪಾನ ನಿಷೇಧ ತರುವ ಮಟ್ಟಕ್ಕೂ ಹೋಗಬಹುದೆ? ಎಂಬಿತ್ಯಾದಿ ಹಲವು ಪ್ರಶ್ನೆಗಳಿಗೆ ಇಷ್ಟರಲ್ಲೇ ಉತ್ತರ ನೀಡಬೇಕಾಗುತ್ತದೆ. ವಿ.ಜಿ.ಕೆ.ಕೆ.ಯ ಪ್ರಧಾನ ಕಾರ್ಯದರ್ಶಿಯಾದ ಡಾ. ಸುದರ್ಶನ್‌ಕೂಡ ಪಾನನಿಷೇಧಕ್ಕೆ ಕರೆಕೊಟ್ಟರು. ಚಾರಿತ್ರಿಕವಾಗಿ ಗಮನಿಸಿದರೆ ಇದು ಹೇಳೀದಷ್ಟು ಸುಲಭವಲ್ಲ. ಋತುಮಾನಗಳಲ್ಲಿ ಇಲ್ಲಿನ ಜನರು ಉದ್ಯೋಗಕ್ಕಾಗಿ ಕೊಡಗಿಗೆ ಹೋಗುವುದರಿಂದ ಅಲ್ಲಿ “ನಾಗರಿಕ”ರ ಸಂಪರ್ಕದಿಂದ ಕುಡಿತ ಅಭ್ಯಾಸ ಮಾಡಿಕೊಳ್ಳುತ್ತಾರೆ; ಹಾಗಾಗಿ ಸಂಪೂರ್ಣ ಪಾನನಿಷೇಧ ಸಾಧ್ಯವಿಲ್ಲದ ಮಾತಾಗುತ್ತದೆ. ಬುಡಕಟ್ಟಿನ ಜನರು ಸ್ವಾಭಿಮಾನಗಳಾಗಿರುವುದರಿಂದ ಯಾವುದೇ ನಿಯಮ ಬಲವಂತವಾಗಿ ಹೇರಿದರೆ ಅದನ್ನವರು ಸಹಜವಾಗಿಯೇ ಪ್ರತಿರೋಧಿಸಬಹುದು. ಉತ್ತಮವಾದ ಮಾರ್ಗವೆಂದರೆ, ಮಹಿಳೆಯರು ಹಾಗೂ ಮಕ್ಕಳನ್ನೊಳಗೊಂಡು ಬುಡಕಟ್ಟು ಮುಖಂಡರುಗಳು, ವಿಶೇಷವಾಗಿ ಯಜಮಾನರುಗಳನ್ನು ಸೇರಿಸಿ ಅವರ ಮೂಲಕ ಹಾಡಿಗಳು ಕುಡಿತದಿಂದ ಮುಕ್ತವಾಗುವಂತೆ ನಯವಾಗಿ ಕೇಳುವುದು, ಪುಸಲಾಯಿಸುವುದು, ದಂಡ ವಿಧಿಸುವ ಪಾರಂಪರಿಕ ಮಾರ್ಗವನ್ನನುಸರಿಸುವದೇ ಕ್ಷೇಮಕರ. ಕುಡಿತದಿಂದ ಇಡೀ ಕುಟುಂಬವೇ ಹಾನಿಗೊಳಗಾಗುತ್ತದೆ. ಚಿಕ್ಕ ವಯಸ್ಸಿನವರ ಮೇಲೆ ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಸರ್ಕಾರಕ್ಕೆ ಪಾನ ನಿಷೇಧ ತರಲು ಆಗುವುದಿಲ್ಲ. ಬುಡಕಟ್ಟು ಜನರು ಅರ್ಜಿಸಿದ ಅಭಿವೃದ್ಧಿಯ ಫಲಗಳನ್ನು ರಕ್ಷಿಸಲು ಸ್ವಯಂಸೇವಾ ಕ್ರಿಯೆಯೇ ನಮಗಿರುವ ಪರ್ಯಾಯವೆಂದು ತೋರುತ್ತದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿಗೆ ಡೀಡ್‌ಸ್ವಯಂ ಸೇವಾ ಸಂಸ್ಥೆಯ ಪಾತ್ರ ಸೀಮಿತವಾಗಿದೆ. ಕಾಡು ಕುರುಬರಿಗೆ, ಉಪ ಗುಂಪುಗಳಾದ ಜೇನು ಕುರುಬ ಹಾಗೂ ಬೆಟ್ಟ ಕುರುಬರಿಗೆ ಗಣನೀಯವಾದ ಸೇವೆ ಸಲ್ಲಿಸಿದೆ. ಯರವರು ಕೊಡಗು ಜಿಲ್ಲೆಯಲ್ಲಿ ಸಾಂದ್ರವಾಗಿದ್ದಾರೆ. ಹುಣಸೂರು ತಾಲ್ಲೂಕು ಕೊಡಗಿಗೆ ಸಮೀಪವಾಗಿರುವುದರಿಂದ ಬುಡಕಟ್ಟಿನವರು ಚಲನೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಸೋಲಿಗರು ಸಾಮಾನ್ಯವಾಗಿ ಯಳಂದೂರು, ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಹೆಚ್ಚು ಇದ್ದಾರೆ. ಈಗ ಬುಡಕಟ್ಟು ಮಕ್ಕಳಿಗೆ ಶಿಕ್ಷಣ ಕೊಡಲು ಅನೇಕ ಸ್ವಯಂಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಜೊತೆಗೆ ಶಾಲೆಗಳಿರುವ ಕಡೆಯಲ್ಲಿ ವಿದ್ಯಾರ್ಥಿನಿಲಯಗಳ ಸೌಲಭ್ಯವನ್ನು ಒದಗಿಸಲಾಗಿದೆ. ಇದರಿಂದಾಗಿ ಬೇರೆ ಬೇರೆ ಊರುಗಳ ಬುಡಕಟ್ಟು ಮಕ್ಕಳು ಶಾಲೆ ಹಾಗೂ ವಿದ್ಯಾರ್ಥಿನಿಲಯಗಳಿರುವ ಕಡೆ ಬಂದು ಸೇರಲು ಸಹಾಯಕವಾಗಿದೆ. ಹಾಗಾಗಿ, ಯರವ ವಿದ್ಯಾರ್ಥಿಗಳು ವಿ.ಜಿ.ಕೆ.ಕೆ. ಶಾಲೆಗೆ ಸೇರಿದ್ದಾರೆ. ಹಾಗೇಯೇ ಸ್ವಲ್ಪ ಜನ ಸೋಲಿಗ ಮಕ್ಕಳು ಹುಣಸೂರಿಗೆ ವಲಸೆ ಹೋಗಿ ಅಲ್ಲಿ ಡೀಡ್‌ಸಂಸ್ಥೆ ನೀಡುತ್ತಿರುವ ಶೈಕ್ಷಣಿಕ ಸೌಲಭ್ಯವನ್ನು ಬಳಸಿಕೊಳ್ಳುತ್ತಿರಬಹುದು. ಸಮುದಾಯ ಸಂಘಟನೆಯಿಂದ ತನ್ನ ಚಟುವಟಿಕೆಯನ್ನು ಆರಂಭಿಸಿದ ಡೀಡ್‌ಸಂಸ್ಥೆ ಹೆಚ್ಚು ಮಂದಿ ಕಾಡು ಕುರುಬರಿರುವಂಥ ಒಂದು ತಾಲ್ಲೂಕಿಗೆ ಸೀಮಿತಗೊಳಿಸಿಕೊಂಡಿತು. ಕ್ಷೇತ್ರ ಚಿಕ್ಕದಾಗಿದ್ದು ಜನಸಂಖ್ಯೆಯೂ ಕಡಿಮೆ ಇರುವುದರಿಂದ ಸಂಘಟನೆಯು ಶಿಕ್ಷಣದ ಮೇಲೆ ಒತ್ತುಕೊಡಲು ಸಾಧ್ಯವಾಗಿದೆ; ಕಾಡು ಕುರುಬರು ಹೆಚ್ಚು ಹೊರಗಿನದಕ್ಕೆ ಒಡ್ಡಿಕೊಳ್ಳುವುದು ಸಾಧ್ಯವಾಗಿದೆ. ಈ ವಲಯದ ಬುಡಕಟ್ಟಿನವರು ಇತರ ಭಾಗಗಳ ಜನರಂತೆ ಪ್ರತ್ಯೇಕಗೊಂಡವರಲ್ಲ. ಹಾಗಾಗಿ ಶಿಕ್ಷಣದ ಫಲ ಸಾಮಾಜಿಕ ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಜ್ಞಾನವನ್ನು ಪಡೆಯುವಂತೆ ಪ್ರೇರೇಪಿಸುತ್ತದೆ. ಈವತ್ತು ಕೃಷಿಗೆ ಸಂಬಂಧಿಸಿದಂಥ ಅನೇಕ ಆರ್ಥಿಕ ಚಟುವಟಿಕೆಗಳನ್ನು ಅದು ಒಳಗೊಂಡಿದೆ. ಸುಮಾರು ೫೫೦ ಜನ ಬುಡಕಟ್ಟು ಭೂಮಿ ಫಲಾನುಭವಿಗಳು ೨ ರಿಂದ ೪ ಎಕರೆ ಕೃಷಿಭೂಮಿಯನ್ನು ಹೊಂದಿದವರಾಗಿದ್ದಾರೆ. ಸುಮಾರು ೧೨೦೦ ಕುಟುಂಬಗಳು ಬೇರೆ ಬೇರೆ ತರಹದ ಆರ್ಥಿಕ ಲಾಭಗಳನ್ನು ಪಡೆದಿದ್ದು ಜನರ ಒಟ್ಟು ಆರ್ಥಿಕ ಸುಧಾರಣೆಗೆ ಕಾರಣವಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಶಿಶುವಿಹಾರ ಕಾರ್ಯಕ್ರಮ ಉತ್ತಮವಾಗಿದೆ; ಜೊತೆಗೆ ಸುಮಾರು ೯೦೦ ಮಕ್ಕಳು ಶಿಕ್ಷಣದ ಲಾಭವನ್ನು ಪಡೆಯುತ್ತಿದ್ದಾರೆ. ಇದರ ಜೊತೆಗೆ ಸಾಕ್ಷರತಾ ಮಿಷನ್‌ಕೂಡ ಅನಕ್ಷರಸ್ಥ ವಯಸ್ಕರನ್ನು ತಲುಪುತ್ತಾ ಅವರು ಸಾಕ್ಷರರಾಗಲು ಪ್ರೇರೇಪಿಸುತ್ತಿದೆ. ಆರೋಗ್ಯ, ಹೊರಗಿನ ಪ್ರಪಂಚ ಜೊತೆ ಸಂಪರ್ಕ, ಲೋಕದ ಬಗ್ಗೆ ಅರಿವು – ಇದೆಲ್ಲ ಶಿಕ್ಷಣ ಹಾಗೂ ಆರ್ಥಿಕ ಉತ್ತಮಿಕೆಯಿಂದ ಸಾಧ್ಯವಾಗಿದೆ. ಹೆಚ್ಚುತ್ತಿರುವ ರಾಜಕೀಯ ಪ್ರಜ್ಞೆ ಹಾಗೂ ಸಂಘಟನೆಯಿಂದಾಗಿ ಕಾಡು ಕುರುಬ ಬುಡಕಟ್ಟು ಜನರ ನಡುವೆಯೇ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ. ಡೀಡ್‌ಸಂಸ್ಥೆಯ ನಿಜವಾದ ಕೊಡುಗೆಯೆಂದರೆ ಯಾರೇ ಆಗಲಿ – ರಾಜಕಾರಣಿಗಳೂ ಸೇರಿದಂತೆ – ಬಹಿರಂಗವಾಗಿ ಬುಡಕಟ್ಟಿನವರನ್ನು ತಿರಸ್ಕರಿಸುವುದು ಇಂದು ಸುಲಭವಲ್ಲ. ಕಂದಾಯ ಇಲಾಖೆಯವರು ಸದರಿ ಸಂಘಟನೆಯ ಮತ್ತು ಕಾರ್ಯಕರ್ತರನ್ನು ಮುಕ್ತಕಂಠದಿಂದ ಹೊಗಳುತ್ತಾರೆ. ಬೇರೆ ಬೇರೆ ಅಗತ್ಯಗಳಿಗಾಗಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಸಂಸ್ಥೆಗಳಿಂದ ಜಾತಿ ಪ್ರಮಾಣ ಪತ್ರ ಬೇಕಾದಾಗ ಅವರು ಸಂಘಟನೆಯಿಂದ ಅನುಮೋದನೆಯನ್ನು ಪಡೆಯಬೇಕಾಗಿದೆ. ಇದರಿಂದ ಸಂಘಟನೆಯು ಗಳಿಸಿರುವ ವಿಶ್ವಾಸಾರ್ಹತೆ, ಜನರ ನಂಬಿಕೆ ತಿಳಿಯುತ್ತದೆ. ಹಿಂದುಳಿದ ವರ್ಗಗಳು, ದುರ್ಬಲ ಹಾಗೂ ಬಡಜನರ ವಿಷಯವಾಗಿ ವಿಶೇಷ ಗಮನ ಹಾಗೂ ಸೌವಲತ್ತುಗಳನ್ನು ಒದಗಿಸಿದ ದಿವಂಗತ ಶ್ರೀ ಡಿ. ದೇವರಾಜ ಅರಸುರವರಂಥ ಮುಖ್ಯಮಂತ್ರಿಯನ್ನು ಕೊಟ್ಟಿರುವ ಹುಣಸೂರು ತಾಲ್ಲೂಕು ಬುಡಕಟ್ಟಿನ ಜನರ ಅಭಿವೃದ್ಧಿಯ ವಿಷಯದಲ್ಲಿ ಡೀಡ್‌ಸಂಸ್ಥೆಗೂ ಪರೋಕ್ಷವಾಗಿ ಸಹಾಯ ಮಾಡಿದೆ.

ಬುಡಕಟ್ಟು ಫಲಾನುಭವಿಗಳಿಂದ ಸಂಘಟನೆಯ ಚಟುವಟಿಕೆಗಳ ಮೌಲ್ಯಮಾಪನವನ್ನು ತಿಳಿಯುವುದು ಸೂಕ್ತ. ಡೀಡ್‌ಕ್ಷೇತ್ರದ ಮಾದರಿಗಾಗಿ ಒಟ್ಟು ೨೧೦ ಬುಡಕಟ್ಟು ಕುಟುಂಬಗಳನ್ನು ಪರಿಗಣಿಸಲಾಗಿದೆ. ಅದರಲ್ಲಿ ೧೫೦ ಜೇನುಕುರುಬರ ಕುಟುಂಬಗಳು, ೫ ಬೆಟ್ಟ ಕುರುಬರದು, ೩೩ ಸೋಲಿಗರದು ಹಾಗೂ ೨೨ ಯರವರದು. ಮಾದರಿ ಕುಟುಂಬಗಳು ೧೦ ಹಾಡಿಗಳಲ್ಲಿ ವಿಸ್ತರಿಸಿದ್ದು ಈ ಕೆಳಕಂಡಂತಿವೆ.

ಹಾಡಿಗಳು ಕುಟುಂಬಗಳು
ಭಾರತವಾಡಿ ೦೨೨
ಬಿಲ್ಲೆನ ಹೊಸಳ್ಳಿ ೦೩೫
ಹೆಮ್ಮಿಗೆ ಕಾಲೋನಿ ೦೩೪
ಕಪ್ಪನ್‌ಕಟ್ಟೆ ೦೦೫
ಕೆರೆ ಹಾಡಿ ೦೦೭
ಕೊಳವಿಗೆ ೦೩೦
ನೇರಳೆಕುಪ್ಪೆ ಕಾಲೋನಿ-ಎ ೦೦೭
ನೇರಳೆಕುಪ್ಪೆ ಕಾಲೋನಿ-ಬಿ ೦೧೯
ಸೆಟ್ಟಳ್ಳಿ ೦೨೫
ವೀರನಹೊಸಳ್ಳಿ ೦೨೬
ಒಟ್ಟು ೨೧೦

ಹತ್ತು ವರ್ಷಗಳಿಗೂ ಹೆಚ್ಚು ಅವಧಿಯಿಂದ ೨೦೩ ಕುಟುಂಬಗಳು ವಾಸವಾಗಿವೆ. ಉಳಿದ ೭ ಕುಟುಂಬಗಳಿಗೆ ೧ ರಿಂದ ೧೦ ವರ್ಷದ ಗಡುವು ಇದೆ. ೧೭೩ ಕುಟುಂಬಗಳು ಇಲ್ಲಿರುವಂತೆ, ಉಳಿದ ೩೭ ಕುಟುಂಬಗಳು ನೆರಹೊರೆಯ ಜಿಲ್ಲೆಗಳಿಂದ ಇಲ್ಲಿಗೆ ವಲಸೆ ಬಂದಿರುವವರು. ೧೩೯ ಕುಟುಂಬಗಳಲ್ಲಿ ೨-೫ ಜನ ಸದಸ್ಯರಿದ್ದಾರೆ, ೬೬ ಕುಟುಂಬಗಳಲ್ಲಿ ೬-೮ ಮಂದಿ ಇದ್ದಾರೆ. ಕೇವಲ ೫ ಕುಟುಂಬಗಳಲ್ಲಿ ೯ ಅಥವಾ ಅದಕ್ಕಿಂತ ಹೆಚ್ಚು ಮಂದಿ ಇದ್ದಾರೆ.

೧೫೮ ಕುಟುಂಬಗಳಲ್ಲಿ ಇಬ್ಬರು ದಂಪತಿಗಳಿದ್ದರೆ ೧೮೬ ಕುಟುಂಬಗಳಲ್ಲಿ ಅವಿವಾಹಿತರ ಸಂಖ್ಯೆ ೧ ರಿಂದ ೬ ವರೆಗೆ ಇದೆ. ವಿಧುರರಿಗಿಂತ ವಿಧವೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ; ೩೫ ಕುಟುಂಬಗಳಲ್ಲಿ ೯ ಜನ ವಿಧುರರು ಹಾಗೂ ೪೦ ಮಂದಿ ವಿಧವೆಯರು. ಈ ಗುಂಪಿನಲ್ಲಿ ಒಬ್ಬ ವಿವಾಹ ವಿಚ್ಛೇದನ ಮಾಡಿದ ವ್ಯಕ್ತಿ ಇರುವುದು ವಿಶೇಷ.

೫-೧೦ ಹಾಗೂ ೧೦-೨೦ ವಯೋಮಾನದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ೫-೧೦ ವರ್ಷದವರು ೧೮೬ ಕುಟುಂಬಗಳಲ್ಲಿದ್ದಾರೆ. ೧-೪ ಸದಸ್ಯರಿರುವಂಥ ೧೦-೨೦ ವರ್ಷದವರು ೧೨೦ ಕುಟುಂಬಗಳಲ್ಲಿದ್ದಾರೆ. ಅದೇ ಪ್ರಕಾರ, ೨೦-೩೦ ಹಾಗೂ ೩೦-೪೦ ವರ್ಷದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊದಲನೆಯ ಗುಂಪಿನಲ್ಲಿ ೧-೪ ಮಂದಿ ಇರುವ ೧೨೪ ಕುಟುಂಬಗಳಿದ್ದರೆ ಎರಡನೇ ಗುಂಪಿನಲ್ಲಿ ೧೦೭ ಕುಟುಂಬಗಳಿವೆ. ಉಳಿದ ೩ ವಯೋಮಾನ ಗುಂಪುಗಳಾದ ೪೦-೫೦,೫೦-೬೦, ೬೦ ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಕ್ರಮವಾಗಿ ೯೦, ೫೪ ಹಾಗೂ ೪೭ ಕುಟುಂಬಗಳಲ್ಲಿದ್ದಾರೆ. ಮಾದರಿ ಕುಟುಂಬಗಳಲ್ಲಿ ೫೨೭ ಜನ ಗಂಡಸರೂ ೪೯೨ ಮಂದಿ ಹೆಂಗಸರೂ ಇದ್ದಾರೆ. ಹೆಚ್.ಡಿ. ಕೋಟೆ ಹಾಗೂ ಕೊಳ್ಳೇಗಾಲ ತಾಲ್ಲೂಕುಗಳನ್ನು ಹೊರತುಪಡಿಸಿದರೆ ಇತರೆಡೆಗಳಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಹೆಚ್ಚಿದೆ.

ಶಿಕ್ಷಣ, ವೈದ್ಯಕೀಯ/ಆರೋಗ್ಯ, ಆರ್ಥಿಕ ಉತ್ತಮಿಕೆ ಹಾಗೂ ರಾಜಕೀಯ ಅರಿವಿನ ವಿಷಯದಲ್ಲಿ ಡೀಡ್‌ನ ಪಾತ್ರವೇನು ಎಂಬುದಕ್ಕೆ ಬುಡಕಟ್ಟಿನವರು ಹೆಚ್ಚು ಸಕಾರಾತ್ಮಕವಾಗಿದ್ದಾರೆ. ಒಟ್ಟು ನಕಾರಾತ್ಮಕ ಉತ್ತರ ನೀಡಿರುವ ಕುಟುಂಬಗಳು ೧೦ ಮಾತ್ರ ಉಳಿದ ೨೦೦ ಕುಟುಂಬಗಳು ಸಂಘಟನೆಯ ಸೇವೆಯನ್ನು ಉಪಯೋಗಿಸಿಕೊಂಡಿವೆ. ವೈದ್ಯಕೀಯ/ಆರೋಗ್ಯ, ಸೇವೆಯನ್ನು ಕೇವಲ ೬ ಕುಟುಂಬಗಳು ಉಪಯೋಗಿಸಿಕೊಂಡಿವೆ. ೧೮೭ ಕುಟುಂಬಗಳು ಸೇವೆಗಳ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿವೆ.

ಬುಡಕಟ್ಟು ಅಭಿವೃದ್ಧಿಯ ಬಗ್ಗೆ ಎನ್.ಜಿ.ಓ. ನ ಆಸಕ್ತಿಯ ಬಗ್ಗೆ ೧೭೭ ಕುಟುಂಬಗಳು ‘ಹೌದು’ ಎಂದಿವೆ; ೩೧ ಕುಟುಂಬಗಳು ‘ಇಲ್ಲ’ ಎಂದರೆ, ೨ ಕುಟುಂಬಗಳು ‘ಗೊತ್ತಿಲ್ಲ’ ಎಂದಿವೆ.

ಡೀಡ್‌ಸಂಸ್ಥೆ ಸಲ್ಲಿಸಿರುವ ಸೇವೆಯಲ್ಲಿ ಅತಿ ಹೆಚ್ಚಿನ ಪ್ರಮಣಾದ ಫಲಾನುಭವಿಗಳು ಶಿಕ್ಷಣ ರಂಗದಲ್ಲಿರುವುದಾಗಿ ತಿಳಿಸಿದ್ದಾರೆ. ೧೫೮ ಕುಟುಂಬಗಳು ಶಿಕ್ಷಣದ ಲಾಭ ಪಡೆದಿವೆ. ವೃತ್ತಿ ತರಬೇತಿ, ನೇಯ್ಗೆ, ಕೈಗಾರಿಕೆ, ಕೌಶಲ್ಯ/ ಅರೆ ಕೌಶಲ್ಯ ಕಸುಬುಗಳು ಕಲೆ ಹಾಗೂ ಕರಕುಶಲತೆ – ಈ ಕ್ಷೇತ್ರಗಳಲ್ಲಿ ಲಾಭ ಪಡೆದುಕೊಂಡಿರುವ ಕುಟುಂಬಗಳು ಪ್ರತಿ ವರ್ಗದಲ್ಲಿ ೫೦ಕ್ಕಿಂತ ಕಡಿಮೆ ಇವೆ.

ಎನ್.ಜಿ.ಓ. ಗಳು ಹಾಗೂ ಸರ್ಕಾರ -ಇವೆವರಡರ ಕಾರ್ಯವಿಧಾನದಲ್ಲಿ ವ್ಯತ್ಯಾಸವಿದೆಯೇ ಎಂದು ಕೇಳಾಲಾದ ಪ್ರಶ್ನೆಗೆ ೧೪೭ ಕುಟುಂಬಗಳು ಸರ್ಕಾರವನ್ನು ಸಮೀಪಿಸುವುದಕ್ಕಿಂತ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಕೆಲಸ ಮಾಡುವುದು ಹೆಚ್ಚು ಸೂಕ್ತವೆಂದು ಅಭಿಪ್ರಾಯಪಟ್ಟಿವೆ.೧೧ ಕುಟುಂಬಗಳು ಸರ್ಕಾರ ಹಾಗೂ ಎನ್.ಜಿ.ಓ. ಗಳೆರಡನ್ನೂ ಅನುಮೋದಿಸಿವೆ. ಉಳಿದ ೧೬ ಕುಟುಂಬಗಳು ನಕಾರಾತ್ಮಕ ಉತ್ತರ ನೀಡಿವೆ.

ಬುಡಕಟ್ಟೇತರ ಗ್ರಾಮಸ್ಥರು ಸ್ವಯಂ ಸೇವಾ ಸಂಸ್ಥೆಗಳು ವಹಿಸಿರುವ ಪಾತ್ರದ ಬಗ್ಗೆ ಆಸಕ್ತಿದಾಯಕವಾದ ಉತ್ತರ ನೀಡಿವೆ. ನೇರವಾಗಿ ಸ್ವಯಂ ಸೇವಾ ಸಂಸ್ಥೆಗಳ ಸಂಪರ್ಕಕ್ಕೆ ಅವರು ಬರದಿದ್ದರೂ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ಒಂದು ಕಲ್ಪನೆ ಇರುತ್ತದೆ. ಹುಣಸೂರು ತಾಲ್ಲೂಕಿನಲ್ಲಿ ಡೀಡ್‌ಸಾಕ್ಷರತಾ ಮಿಷನ್‌ನಲ್ಲಿ ಕಾರ್ಯಪ್ರವೃತವಾಗಿದ್ದು ಬುಡಕಟ್ಟಿನವರ ಜೊತೆ ನೆರೆಹೊರೆಯ ಗ್ರಾಮಸ್ಥರನ್ನೂ ಸೇರಿಸಿಕೊಳ್ಳಲಾಗುತ್ತದೆ. ೫೦ರಲ್ಲಿ ೪೫ ಮಂದಿ ಎನ್.ಜಿ.ಓ. ಗಳು ಸ್ವಯಂ ಸೇವಾ ಕಾರ್ಯಕರ್ತರಲ್ಲವೆಂದು ಹೇಳಿದ್ದಾರೆ. ೨೧ ಕುಟುಂಬಗಳು ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಪರಸ್ಪರ ವಿರೋಧವಾಗಿ ಕೆಲಸ ಮಾಡುತ್ತಿಲ್ಲವೆಂದು ತಿಳಿಸಿದರೆ, ೨೩ ಕುಟುಂಬಗಳು ನಮಗೆ ಹೊತ್ತಿಲ್ಲವೆಂದು ತಿಳಿಸಿವೆ. ಉಳಿದ ೬ ಕುಟುಂಬಗಳು ಮಾತ್ರ ಸಕಾರಾತ್ಮಕವಾಗಿ ಹೇಳಿವೆ.

ಸರ್ಕಾರಿ ಅಧಿಕಾರಿಗಳ ಅಭಿಪ್ರಾಯವೂ ಕೂಡ ಧನಾತ್ಮಕವಾಗಿಯೇ ಇದೆ ಬುಡಕಟ್ಟಿನವರ ಸಮಸ್ಯೆಗಳನ್ನು ಎನ್.ಜಿ.ಓ. ಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಬಳಿಗೆ ತೆಗೆದುಕೊಂಡು ಹೋದಾಗ ಅಧಿಕಾರಿಗಳು ಎನ್.ಜಿ.ಓ. ಗಳು ಒಟ್ಟಿಗೆ ಕೆಲಸ ಮಾಡಬೇಕಾಗಿ ಬರುತ್ತದೆ. ೨೬ರಲ್ಲಿ ೨೩ ಮಂದಿ ಸರ್ಕಾರಿ ಅಧಿಕಾರಿಗಳು ಬುಡಕಟ್ಟಿನವರ ಕಲ್ಯಾಣದ ವಿಷಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆಂದು ಅಭಿಪ್ರಾಯಪಟ್ಟಿದ್ದಾರೆ. ೨೬ರಲ್ಲಿ ೨೦ ಮಂದಿ ಅಧಿಕಾರಿಗಳು ಎನ್.ಜಿ.ಓ. ಗಳು ಒಡೆದು ಶೋಷಣೆ ಮಾಡುವರೆ ಎಂಬ ಪ್ರಶ್ನೆಗೆ ‘ಇಲ್ಲ’ ಎಂದೇ ಉತ್ತರಿಸಿದ್ದಾರೆ. ಎನ್.ಜಿ.ಓ. ಗಳು ಸರ್ಕಾರಿ ಅಧಿಕಾರಿಗಳ ಹಾದಿ ತಪ್ಪಿಸುತ್ತವೆಯೇ ಎಂದು ಕೇಳಲಾದ ಪ್ರಶ್ನೆಗೆ ೨೪ ಮಂದಿ ಅಧಿಕಾರಿಗಳು ಇಲ್ಲ ಎಂದಿದ್ದಾರೆ. ಅಂತಿಮವಾಗಿ ಎನ್.ಜಿ.ಓ. ಗಳು ಭ್ರಷ್ಟಾಚಾರಿಗಳು, ಸ್ವಾರ್ಥಿಗಳು-ಇತ್ಯಾದಿ ನಕಾರಾತ್ಮಕ ಚಹರೆಯ ಬಗ್ಗೆ ಕೇಳಿದಾಗ ೨೩ ಮಂದಿ ಅಧಿಕಾರಿಗಳು ನಮಗೆ ತಿಳಿಯದೆಂದು ಉತ್ತರಿಸಿದ್ದಾರೆ.

೨೧೦ರಲ್ಲಿ ೧೭೩ ಮಂದಿ ಬುಡಕಟ್ಟು ಫಲಾನುಭವಿಗಳು ತಾವು ಎನ್.ಜಿ.ಓ. ಗಳು ಸರ್ಕಾರಿ ಅಧಿಕಾರಿಗಳು, ಅರಣ್ಯಾಧಿಕಾರಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರೊಡನೆ ಉತ್ತಮ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ. ಆದಾಗ್ಯೂ ಸುಮಾರು ೭೦ ಜನ ಫಲಾನುಭವಿಗಳು ತಾವು ಅರಣ್ಯ ಇಲಾಖೆಯ ಅಧಿಕಾರಿಗಳೊಡನೆ ಉತ್ತಮ ಸಂಬಂಧ ಹೊಂದಿಲ್ಲವೆಂದು ತಿಳಿಸಿದ್ದಾರೆ. ಅದೇ ತರಹ ೧೭೬ ಮಂದಿ ಸರ್ಕಾರಕ್ಕಿಂತ ಬುಡಕಟ್ಟು ಜನರ ಅಭಿವೃದ್ಧಿಗೆ ಎನ್.ಜಿ.ಓ. ಗಳೇ ಹೆಚ್ಚು ಸೂಕ್ತವೆಂದು ಹೇಳಿದ್ದಾರೆ. ಬುಡಕಟ್ಟು ಜನರ ಜೀವನ ವಿಧಾನವನ್ನು ಎನ್.ಜಿ.ಓ.ಗಳ ಚಟುವಟಿಕೆಗಳು ಹೇಗೆ ಪ್ರಭಾವಿಸಿದೆ ಎಂಬ ಪ್ರಶ್ನೆಗೆ ಫಲಾನುಭವಿಗಳು ಶಿಕ್ಷಣ, ಸಾಮಾಜಿಕ, ರಾಜಕೀಯ ಹಾಗೂ ಸಾಮಾನ್ಯ ಅರಿವು ಹಾಗೂ ಅರ್ಥಿಕ ಲಾಭಗಳಾಗಿವೆಯೆಂದು ತಿಳಿಸಿದ್ದಾರೆ.

* * *