ವಿ.ಜಿ.ಕೆ.ಕೆ., ಎಸ್‌.ವಿ.ವೈ.ಎಂ. ಹಾಗೂ ಡೀಡ್‌ನಂಥ ಸಂಸ್ಥೆಗಳು ತಾವು ಹಾಕಿಕೊಂಡ ಗುರಿಯನ್ನು ಸಾಧಿಸುವಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿವೆ ಎಂಬುದನ್ನು ಗಮನಿಸುವಾಗ ಅವುಗಳಲ್ಲಿ ಕೆಲವು ಹೋಲಿಕೆಗಳನ್ನು, ಅನೇಕ ವ್ಯತ್ಯಾಸಗಳನ್ನು ನಾವು ಕಾಣಬಹುದಾಗಿದೆ. ಆ ಮೂರು ಸಂಸ್ಥೆಗಳು ಸಮಾನವಾಗಿ ಇಟ್ಟುಕೊಂಡ ಉದ್ದೇಶ ಮಾತ್ರ ಬುಡಕಟ್ಟು ಅಭಿವೃದ್ಧಿಯೇ.

ಮೂರು ಸ್ವಯಂ ಸೇವಾ ಸಂಸ್ಥೆಗಳು ಒಂದೇ ಜಿಲ್ಲೆಯಲ್ಲಿವೆ ಹಾಗೂ ಜಿಲ್ಲಾಮಟ್ಟದಲ್ಲಿ ಅವು ವ್ಯವಹರಿಸಬೇಕಾದ ಆಡಳಿತಾತ್ಮಕ ಯಂತ್ರವೂ ಕೂಡ ಒಂದೇ ಆಗಿದೆ. ಅಕ್ಕಪಕ್ಕದ ತಾಲ್ಲೂಕುಗಳಲ್ಲಿ ಸಂಸ್ಥೆಗಳು ಕೆಲಸ ಮಾಡುತ್ತಿರುವುದರಿಂದ ಸಮಸ್ಯೆಗಳ ರೀತಿ ಹಾಗೂ ವೈವಿಧ್ಯತೆಯಲ್ಲಿ ಏಕತೆ ಕಂಡುಬರುತ್ತದೆ. ಇವು ತಕ್ಕಮಟ್ಟಿಗೆ ಮೀಸಲು ಅರಣ್ಯ ಪ್ರದೇಶಕ್ಕೆ ಹತ್ತಿರವೇ ಇವೆ. ಹಾಗಾಗಿ ಅರಣ್ಯ ಇಲಾಖೆಯ ನಿರೀಕ್ಷಣೆಯೊಳಗೇ ಬರುತ್ತವೆ. ಆದಾಗ್ಯೂ ಕೆಲವರು ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಕಳ್ಳ ಸಾಗಣೆಯಲ್ಲಿ ನಿರತವಾಗಿವೆ ಎಂದು ಆಪಾದನೆ ಮಾಡಿವೆ. ಅದು ಕ್ಷೇತ್ರದ ಈ ಸ್ವಯಂ ಸೇವಾ ಸಂಸ್ಥೆಗಳ ಬಗ್ಗೆ ಅಲ್ಲದಿರಬಹುದು.

ಸ್ವಯಂ ಸೇವಾ ಸಂಸ್ಥೆಗಳು ಬೇರೆ ಬೇರೆ ಮಾರ್ಗವನ್ನನುಸರಿಸುತ್ತಿವೆಯಾದರೂ ಅಂತಿಮವಾಗಿ ಬುಡಕಟ್ಟು ಜನರ ಸರ್ವಾಂಗೀಣ ಅಭಿವೃದ್ಧಿ ಸಾಧನೆಯೇ ಅವುಗಳ ಗುರಿಯಾಗಿದೆ.

ಈಗಾಗಲೇ ಸೂಚಿಸಿರುವಂತೆ, ಮೂರು ಸಂಸ್ಥೆಗಳು ವೈದ್ಯರಿಂದ ಪ್ರಾರಂಭಿಸಲ್ಪಟ್ಟಿವೆ. ಬಾಲ್ಯದಲ್ಲಿ ದುರಂತದ ಅನುಭವವನ್ನು ಹೊಂದಿದ ಸುದರ್ಶನ್‌ರು ಮಾನವ ದುಃಖ ನಿವಾರಣೆಗಾಗಿ ಒಬ್ಬ ವೈದ್ಯನಾಗಬೇಕೆಂದು ಸಂಕಲ್ಪ ಮಾಡಿದರು. ಅವರು ರಾಮಕೃಷ್ಣಾಶ್ರಮ ಹಾಗೂ ಸ್ವಾಮಿ ವಿವೇಕಾನಂದರ ಆದರ್ಶಗಳು ಅವರ ಸಂಕಲ್ಪವನ್ನು ಸದೃಢಗೊಳಿಸಿದವು. ತಮ್ಮ ಕಣ್ಮುಂದೆ ಇಟ್ಟುಕೊಂಡ ಗುರಿ ಇದೇ ಆಯಿತು; ಇದರ ಸಾಧನೆಗಾಗಿ ಬೇರೆ ಬೇರೆ ಸ್ಥಳಗಳನ್ನೆಲ್ಲ ಸುತ್ತಿ ಬಂದ ಅವರು ಕಡೆಗೆ ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆಗೊಂಡರು. ಚಿಕಿತ್ಸಾ ಆರೋಗ್ಯ ಸೇವೆಗಳ ಮೂಲಕ ಅವರು ಪ್ರವೇಶಿಸಿದರು. ಈ ಸೇವೆಗಳು ಇಂದಿಗೂ ಮುಂದುವರಿದಿವೆ. ಆದರೆ ಇತರ ಹಲವು ಚಟುವಟಿಕೆಗಳು ರೂಪು ತಾಳಿವೆ.

ತಕ್ಕಷ್ಟು ಮಟ್ಟಿಗೆ ಆಧುನಿಕ ಸಲಕರಣೆಗಳನ್ನೊಳಗೊಂಡ ಒಂದು ಆಸ್ಪತ್ರೆ ಇದೆ; ತರಬೇತು ಹೊಂದಿದ ಆರೋಗ್ಯ ಕಾರ್ಯಕರ್ತರಿದ್ದಾರೆ, ವಿಶೇಷವಾಗಿ ಯಳಂದೂರು ತಾಲ್ಲೂಕಿನಲ್ಲಿ ಕುಷ್ಠರೋಗ ಪತ್ತೆ ಮಾಡಿ ಚಿಕಿತ್ಸೆ ಮಾಡುವ ಹೊಣೆಯನ್ನು ಹೊತ್ತರು. ಈ ತಾಲ್ಲೂಕಿನಲ್ಲಿ ಸಾಮಾನ್ಯ ಜನತೆಯಲ್ಲಿ ಕುಷ್ಠರೋಗ ಕಾಣಿಸಿಕೊಳ್ಳುವುದು ಹೆಚ್ಚಾಗಿರುವುದರಿಂದ ಭಾರತ ಸರ್ಕಾರದ ನೆರವಿನೊಂದಿಗೆ ವಿ. ಜಿ.ಕೆ.ಕೆ. ಆದರ ನಿವಾರಣಾ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಕ್ರಮೇಣ ಒಂದು ಸಮಗ್ರ ವಿಧಾನವನ್ನು ವಿನ್ಯಾಸಗೊಳಿಸಲಾಗಿದೆ. ಬುಡಕಟ್ಟಿನ ಯಾವುದಾದರೊಂದು ಅಂಶವನ್ನು ಸದೃಢಗೊಳಿಸಲು ಸಹಾಯವಾಗುವುದು. ಸೋಲಿಗರನ್ನು ಸಮಾನ್ಯವಾಗಿ ಕಾಡುವ ಸಿಕ್ಕಲ್‌ಸೆಲ್‌ಅನಿಮಿಯಾ ರೋಗದಿಂದ ಉಂಟಾಗುವ ರಕ್ತಹೀನತೆಯನ್ನು ಪತ್ತೆ ಹಚ್ಚಲಾಗಿದೆ. ಹುಟ್ಟಿನಿಂದಲೇ ರವಾನೆಯಾಗುವ ಈ ರೋಗವನ್ನು ಅಧ್ಯಯನ ಮಾಡಲಾಗಿದ್ದು, ವೈದ್ಯಕೀಯವಾಗಿ ವಿಶ್ಲೇಷಣೆ ಮಾಡಿ ಉಪಚರಿಸಲಾಗಿದೆ. ವಿ. ಜಿ.ಕೆ.ಕೆ. ಯ ವೈದ್ಯಕೀಯ ಚಟುವಟಿಕೆಗಳಿಲ್ಲದಿದ್ದರೆ ಈ ರೋಗ ಬೆಳಕಿಗೆ ಬರುತ್ತಿರಲಿಲ್ಲ ಹಾಗೂ ಅನೇಕ ಜನ ಇದಕ್ಕೆ ಬಲಿಯಾಗುತ್ತಿದ್ದರು ಡಾ. ಸುದರ್ಶನ್‌ರು ಈ ರೋಗವನ್ನು ಪತ್ತೆ ಮಾಡುವುದಕ್ಕೆ ಮೊದಲೇ ಇದರ ಗುರುತು ಇತ್ತೆಂದು ಹೇಳಿದರೂ ಸುದರ್ಶನ್‌ಇದನ್ನು ಬೆಳಕಿಗೆ ತಂದರೆಂದು ಒಪ್ಪಿಕೊಳ್ಳುತ್ತಾರೆ. ಹಾವು ಕಡಿತದಿಂದ ಜನರನ್ನು ಉಳಿಸುವುದಕ್ಕಿಂತಲೂ ಇದು ಹೆಚ್ಚಿನ ಕೊಡುಗೆಯೆಂದು ಹೇಳಲಾಗಿದೆ. ಗ್ರಾಮಗಳಲ್ಲಿ ಪಾರಂಪರಿಕವಾದ ವಿಧಾನದಿಂದ ಹಾವು ಕಡಿತಕ್ಕೆ ಪರಿಹಾರವನ್ನು ಕಂಡುಹಿಡಿದಿದ್ದಾರೆ. ಬುಡಕಟ್ಟಿನವರಿಗೂ ಈ ವಿಧಾನ ಪರಿಚಯವಿರಬೇಕು. ಆದರೆ ಮೇಲೆ ಹೆಸರಿಸಿದ ರಕ್ತಹೀನತೆಯಂಥ ಕಾಯಿಲೆಯನ್ನು ಅದಕ್ಕೆ ಕಾರಣಗಳು ಮತ್ತು ಪರಿಣಾಮಗಳ ಬಗೆಗೆ ಚೆನ್ನಾಗಿ ತಿಳಿಯದೆ ವಾಸಿ ಮಾಡಲಾಗದು.

ಅನೇಕ ವೈದ್ಯರು, ವಿಶೇಷವಾಗಿ ತರಬೇತು ಹೊಂದುತ್ತಿರುವರು ವಿ. ಜಿ.ಕೆ.ಕೆ.ಗೆ ಭೇಟಿ ನೀಡುತ್ತಾರೆ. ಈ ಕ್ರಮದಿಂದ ಬುಡಕಟ್ಟಿನವರ ವಿಶ್ವಾಸವನ್ನು ಗಳಿಸುತ್ತಾರೆ. ಹೆಚ್ಚುವರಿಯಾಗಿ ಸಂಘಟನೆಗೆ ಸಹಾಯ ಹಸ್ತ ಚಾಚುತ್ತಾರೆ. ದಂತರಕ್ಷಣೆಗೂ ಕೂಡ ವಿ. ಜಿ.ಕೆ.ಕೆ.ಯಲ್ಲಿ ಅನುಕೂಲ ಮಾಡಲಾಗಿದೆ. ವಿದ್ಯಾರ್ಹತೆಯುಳ್ಳ ದಂತವೈದ್ಯರು ಬಂದು ಬಿಳಿಗಿರಿರಂಗನ ಬೆಟ್ಟದಲ್ಲಿ ಪುಕ್ಕಟೆಯಾಗಿ ಸೇವೆ ಸಲ್ಲಿಸುತ್ತಾರೆ. ವಿ. ಜಿ.ಕೆ.ಕೆ. ಅಗತ್ಯವಾದ ತಾಂತ್ರಿಕ ಉಪಕರಣಗಳನ್ನು ಒದಗಿಸುತ್ತದೆ.

ಒಬ್ಬ ಯುವ ಅಲೋಪತಿಕ್‌ವೈದ್ಯರಾಗಿ ಸುದರ್ಶನ್‌ರು ಬುಡಕಟ್ಟು ನಂಬಿಕೆಗಳು ಹಾಗೂ ಆಚರಣೆಗಳ ಬಗ್ಗೆ ಹಳಹಳಿಕೆ ಹೊಂದಿದ್ದರು. ಆದರೆ ವರ್ಷಗಳು ಉರುಳಿದಂತೆ ಮಾಗಿರುವ ವೈದ್ಯರು ಸೋಲಿಗರು ಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ಔಷಧಿ ವಿಧಾನಗಳ ಬಗ್ಗೆ ಹೆಚ್ಚು ಆಸ್ಥೆ ತೋರಿಸುತ್ತಿದ್ದಾರೆ. ಕುಕ್ಕರುಗಾಲಲ್ಲಿ ಕುಳಿತುಕೊಂಡು ಗರ್ಭಿಣಿ ಹೆಂಗಸರು ಪ್ರಸವ ಮಾಡುವ ಕ್ರಮವನ್ನು ಸೋಲಿಗ ಮಹಿಳೆಯರು ಲಾಗಾಯ್ತಿನಿಂದ ಅನುಸರಿಸಿಕೊಂಡು ಬಂದಿದ್ದರು. ತುಂಬಾ ಕಠಿಣವಾದ ಪ್ರಸಂಗಗಳನ್ನೂ ಅವರು ಯಶಸ್ವಿಯಾಗಿ ನೆರವೇರಿಸಿದ್ದರು. ಆಧುನಿಕ ಅಸ್ಪತ್ರೆಗಳಲ್ಲಿ ಗರ್ಭಿಣಿ ಹೆಂಗಸರನ್ನು ಮೇಜಿನ ಮೇಲೆ ಉದ್ದಕ್ಕೆ ಮಲಗಿಸುವುದು ರೂಢಿ. ಡಾ. ಸುದರ್ಶನ್‌ರ ಪ್ರಕಾರ ಈ ಭಂಗಿ ಮಹಿಳೆಯನ್ನು ನೋಡಿಕೊಳ್ಳುತ್ತಿರುವ ವೈದ್ಯರು ಹಾಗೂ ಸೂಲಗಿತ್ತಿಯರ ಅನುಕೂಲಕ್ಕೆ ಮಾತ್ರ.

ವಿ.ಜಿ.ಕೆ.ಕೆ. ಈಗ ಒಂದು ಗಿಡಮೂಲಿಕಾ ತೋಟವನ್ನು ಬೆಳೆಸುತ್ತಿದೆ. ಸೋಲಿಗರು ಪಾರಂಪರಿಕವಾಗಿ ಅನೇಕ ಸಂದರ್ಭಗಳಲ್ಲಿ ಗಿಡಮೂಲ್ಲಿಕೆಗಳನ್ನು ಉಪಯೋಗಿಸುತ್ತಾ ಬಂದವರು. ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತಲ ಪ್ರದೇಶದಲ್ಲಿ ಹೊಸದಾಗಿ ಪತ್ತೆಹಚ್ಚಲಾಗಿದೆ; ಅನೇಕ ಗಿಡಮೂಲಿಕೆಗಳು ವಿಪರೀತ ಚಟುವಟಿಕೆಗಳ ಫಲವಾಗಿ ನಾಶವಾಗಿಹೋಗಿವೆ. ವಿ. ಜಿ.ಕೆ.ಕೆ. ಲಭ್ಯವಿರುವ ಗಿಡಮೂಲಿಕೆಗಳನ್ನು ಹೊಸದಾಗಿ ದಕ್ಕಿಸುವ ಪ್ರಯತ್ನ ಮಾಡಿರುವುದು ಅತ್ಯಂತ ಶ್ಲಾಘ್ಯವಾಗಿದೆ. ದೇಶಿಯ ಔಷಧಿ ವಿಧಾನಕ್ಕೆ ಇದು ಉತ್ತಮವಾದ ಸೇರ್ಪಡೆಯಾಗಿದೆ.

ಬುಡಕಟ್ಟು ಮಕ್ಕಳು ನಿಸರ್ಗದ ನಡುವೆಯೇ ಬೆಳೆಯುವುದರಿಂದ ಶಬ್ಧಮಾತ್ರದಿಂದಲೇ ಪ್ರಾಣಿ ಪಕ್ಷಿಗಳನ್ನು ಪತ್ತೆ ಹಚ್ಚುವಲ್ಲಿ, ಮರಗಿಡಗಳನ್ನು ಗುರುತುಹಿಡಿಯುವುದರಲ್ಲಿ ನಿಪುಣರಾಗುತ್ತಾರೆ; ಮಾಮೂಲಿ ಪಟ್ಟಣ/ಗ್ರಾಮದ ಮಕ್ಕಳಿಗೆ ಇದು ಸಾದ್ಯವಾಗುವುದಿಲ್ಲ. ಔಪಚಾರಿಕ ಶಿಕ್ಷಣಕ್ಕೆ ಮಕ್ಕಳನ್ನು ಒಳಗು ಮಾಡುವ ಅನೌಪಚಾರಿಕ ಕ್ರಮ ಹಾಗೂ ವಿನ್ಯಾಸವಿಲ್ಲದಂಥ ಓದಿನ ವಿಧಾನಕ್ಕೆ ತರಲಾಯಿತು. ಸ್ವಲ್ಪಮಟ್ಟಿನ ಓದು, ಬರಹ, ಗಣಿತ- ಇದರ ಜೊತೆಗೆ ನೈರ್ಮಲ್ಯ, ಪೌಷ್ಠಿಕತೆ, ಬುಡಕಟ್ಟು ಕುಶಲತೆಯನ್ನು ಉಪಯೋಗಿಸುವಂಥ ಸಂಘಟಿತ ಆಟೋಟಗಳನ್ನು (ವ್ಯಾಸಂಗ) ಪಠ್ಯಕ್ರಮದಲ್ಲಿ ಸೇರಿಸಲಾಯಿತು. ವಿ.ಜಿ.ಕೆ.ಕೆ.ಯಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ಬೋಧಿಸುವಾಗ ಪರಿಸರ ಅಧ್ಯಯನವು ಸಹಜವಾಗಿಯೇ ಬುಡಕಟ್ಟು ಸಂಪ್ರದಾಯ, ಆಚರಣೆ, ಗಿಡಮರಗಳು, ಪ್ರಾಣಿಪಕ್ಷಿಗಳು, ಪಾರಂಪರಿಕವಾಗಿ ಉಪಯೋಗಿಸುವಂಥ ಗಿಡಮೂಲಿಕೆಗಳು, ಜಾನಪದ ಹಾಡುಗಳು ಹಾಗೂ ಕಾಲದಿಂದ ಕಾಲಕ್ಕೆ ಪ್ರಸ್ತುತಗೊಳಿಸುವಂಥ ಬುಡಕಟ್ಟು ಸಂಸ್ಕೃತಿಯನ್ನು ತಿಳಿಸಿಕೊಡಲಾಯಿತು. ಈ ಆರಂಭಿಕ ಹಂತಗಳನ್ನೆಲ್ಲ ದಾಟಿದ ಮೇಲೆ ಸಂರಚಿತ ಪಠ್ಯಕ್ರಮವನ್ನು ಅನುಸರಿಸಲಾಗುವುದು. ಹಾಗಾಗಿ ಶಾಲಾ ಶಿಕ್ಷಣದಿಂದ ಅನೇಕ ಬಾಲಕ ಬಾಲಕಿಯರು ಅನುಕೂಲ ಪಡೆದುಕೊಂಡು ವಿದ್ಯಾವಂತರಾಗಿದ್ದಾರೆ. ಸೋಲಿಗರಿಗೆ ಪದವಿ ಹಂತದವರೆಗೆ ಔಪಚಾರಿಕ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಈಗ ಜ್ಯೂನಿಯರ್‌ಕಾಲೇಜು ಹಾಗೂ ಪದವಿ ಕಾಲೇಜನ್ನು ತೆರೆಯುವ ಸಿದ್ಧತೆ ನಡೆದಿದೆ.

ಬುಡಕಟ್ಟು ಜನರು ಅಭಿವೃದ್ಧಿ ಸಂಘಗಳನ್ನು ರಚಿಸಿರುವುದು ಸಂಘಟನೆಯ ಪ್ರಧಾನವಾದ ಸಾಧನೆಗಳಲ್ಲೊಂದು ಎಂದು ಹೇಳಬೇಕು. ಬುಡಕಟ್ಟು ಪ್ರಜ್ಞೆ ಮೂಡಿಸುವಲ್ಲಿ ಇದು ಪ್ರಾಯೋಗಿಕವಾದ ತರಬೇತು; ತನ್ನೂಲಕವಾಗಿ ಬುಡಕಟ್ಟು ನಾಯಕರು ಹೊರಹೊಮ್ಮಿದ್ದು ಇವರು ಸಾಮಾಜಿಕ ನುಆಯವನ್ನು ಕೇಳುವುದರ ಜೊತೆಗೆ ಸರ್ಕಾರವು ತನ್ನ ಸಂವೈಧಾನಿಕ ಜವಾಬ್ದಾರಿಯನ್ನು ನಿರ್ವಹಿಸುತಿದೆಯೇ ಎಂಬುದರ ಕುರಿತು ನಿಗಾ ಇಡುವಷ್ಟು ಪ್ರಜ್ಞಾವಂತರಾಗಿದ್ದಾರೆ. ಮಹಾಸಂಘದಲ್ಲಿ ಎಲ್ಲ ಸೋಲಿಗರು ಒಳಗೊಳ್ಳುತ್ತಾರೆ. ಜನತಂತ್ರ ವ್ಯವಸ್ಥೆಯ ಆಧಾರದ ಮೇಲೆ ಅವರೆಲ್ಲ ಒಗ್ಗಾಟ್ಟಾಗುವುದಕ್ಕೆ ಈ ಕ್ರಮ ಅನೂಕೂಲ ಕಲ್ಪಿಸಿಕೊಟ್ಟಿದೆ. ಸೋಲಿಗರ ಹಿತಾಸಕ್ತಿಗೆ ಧಕ್ಕೆ ಬಂದಾಗ ಅಂಥ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಸುದ್ದಿ ಪತ್ರಿಕೆಗಳಿಗೆ ಬರೆದು ಸ್ಪಷ್ಟಪಡಿಸುವಷ್ಟು ಮುಖಂಡರು ಪ್ರಜ್ಞಾವಂತರಾಗಿದ್ದಾರೆ. ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳನ್ನು ಸಹ ಭೇಟಿ ಮಾಡುತ್ತಾರೆ.

ಒಂದು ಎದ್ದು ಕಾಣುವ ಕೊರತೆ ಎಂದರೆ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಮುಖಂಡರು ಹಾಗೂ ಸ್ವಯಂ ಸೇವಕರು ಇಲ್ಲದಿರುವುದು. ಪ್ರಾಯಶಃ ವಿ. ಜಿ.ಕೆ.ಕೆ. ಯ ರಚನೆಗೇ ಇದು ಸಂಬಂಧಿಸಿದ್ದು ಅಪ್ರಜ್ಞಾವಂತಪೂರ್ವಕವಾಗಿ ಪುರುಷಕೇಂದ್ರಿತ ವ್ಯವಸ್ಥೆಯಾಗಿ ಮಾರ್ಪಾಟಾಗಿದ್ದರೂ ಆಗಿರಬಹುದು; ಸೋಲಿಗರಲ್ಲಿ ಸಹ ಪುರುಷ ಯಜಮಾನ್ಯ ಸಮಾನ್ಯವಾಗಿದೆ. ಹಿಂದೂ ವ್ಯವಸ್ಥೆಯಲ್ಲಿ ಸಮಾನಾಂತರವಾಗಿರುವಂತೆ ಪುರುಷರು ಹೆಚ್ಚು ಉನ್ನತವಾದ ಅಧಿಕಾರ ಸ್ಥಾನಗಳನ್ನು ಹೊಂದಿರುತ್ತಾರೆ. ಕೌಟುಂಬಿಕವಾದ ಹಾಗೂ ಆರ್ಥಿಕವಾದ ಜವಾಬ್ಧಾರಿಯನ್ನು ಹೆಣ್ಣುಮಕ್ಕಳು ಹೊರವಾಗಲೂ ಮನೆಯ ಪುರುಷ ಮುಖಂಡನಿಗೆ ಎರಡನೆಯ ಸ್ಥಾನದಲ್ಲಿರುವಂತೆ ಗಂಡ- ತಂದೆ ಎಂಬ ಪುರುಷ ರೂಪ ಮಹಿಳೆಯರು ಮುಖಂಡರಾಗಿ ಹೊರಹೊಮ್ಮಲು ಅಡ್ದಿಯುಂಟುಮಾಡುತ್ತದೆ. ಡಾ. ಸುದರ್ಶನ್‌ರು ರಾಮಕೃಷ್ಣಾಶ್ರಮದ ಪ್ರಭಾವಾವವುಳ್ಳವರಾಗಿರುವುದೂ ಸಹ ಒಂದು ಕಾರಣವಾಗಿರಬಹುದು.

ಸ್ವಾಮಿ ವಿವೇಕಾನಂದ ಯೂತ್ಮೂವ್ಮೆಂಟ್‌(ವಿವೇಕ)

ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಿಂದ ಹೆಚ್.ಡಿ. ಕೋಟೆ ತಾಲ್ಲೂಕಿನ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟಿನ ಕಡೆ (ಎಸ್‌.ವಿ.ವೈ.ಎಂ) ಹೆಜ್ಜೆ ಇಟ್ಟರೆ ಎಸ್.ವಿ.ವೈ.ಎಂ.ನಲ್ಲಿ ಅಂಥ ಗಮನ ಸೆಳೆಯುವುದೇನೂ ಕಾಣುವುದಿಲ್ಲ ೧೯೮೪ರಲ್ಲಿ ೬ ಜನ ಮೈಸೂರು ವೈದಕೀಯ ಕಾಲೇಜಿನ ವಿದ್ಯಾರ್ಥಿಗಳು “ವಿವೇಕ”ವನ್ನು ನೋಂದಾಯಿಸಿದರು; ವೈದಕೀಯ ವೃತ್ತಿಯನ್ನು ಆವರಿಸಿದ್ದ ಹೃದಯಹೀನತೆಯಿಂದ ಬೇಸತ್ತು ಅರ್ಥಪೂರ್ಣ ಮಾರ್ಗವೊಂದರ ಹುಡುಕಾಟದಲ್ಲಿ ಅವರು ಈ ಹಾದಿತುಳಿದರೆಂದು ಹೇಳಲಾಗುತ್ತಿದೆ.

ಈವತ್ತು ಅದರ ಅಧ್ಯಕ್ಷರಾದ ಡಾ. x ರವರನ್ನು ಬಿಟ್ಟರೆ ಉಳಿದ ಐದು ಮಂದಿಯ ಸುಳಿವಿಲ್ಲ; ಅವರ ಹೆಸರುಗಳೂ ಪತ್ತೆಯಿಲ್ಲ. ಹತ್ತು ವರ್ಷದಷ್ಟು ಹಳೆಯದಾದ ಒಂದು ಎನ್‌ಜಿಓ ೬ ಮಂದಿ ಯುವಕರಿಂದ ಪ್ರಾರಂಭವಾದದ್ದು ಬಹಳ ಸಾಧನೆ ಮಾಡಿ ಚಟುವಟಿಕೆಗಳಿಂದ ಬಿರಿಸಿನಿಂದಿರಬೇಕಾಗಿತ್ತು. ಬರೇ ಹೆಸರಿಗೆ ಮಾತ್ರ ಇದು “ಯುವಕ ಚಳವಳಿ” ಯಾಗಿದೆಯೇ ವಿನಃ ಯುವಕ ಸಂಘಟನೆಯೊಂದು ಕೆಲಸ ಮಾಡುತ್ತಿರುವುದಕ್ಕೆ ಯಾವುದೇ ಸೂಚನೆ ಇಲ್ಲ. ಯುವಕ ಚಳವಳಿಯೆಂದರೆ ಸಂಘಟನೆಯನ್ನು ಆರಂಬಿಸಿದ ೬ ಮಂದಿ ವೈದ್ಯ ವಿದ್ಯಾರ್ಥಿಗಳು ಆವಾಗ ತರುಣರಾಗಿದ್ದುದರಿಂದ ಆ ಹೆಸರು ಬಂದಿರಬಹುದೆ?

ಸ್ವಾಮಿ ವಿವೇಕಾನಂದ ಹೆಸರನ್ನೇಕೆ ಇಡಲಾಗಿದೆ ಎಂದು ಚೋದ್ಯವಾಗುತ್ತದೆ ಈ ಸ್ಥಾಪಕ ಪಿತೃಗಳ ಪೈಕಿ ಎಷ್ಟು ಮಂದಿ ಮೈಸೂರಿನ ರಾಮಕೃಷ್ಣ ಆಶ್ರಮದೊಡನೆ ಸಂಪರ್ಕ ಹೊಂದಿದ್ದರು ಹಾಗೂ ಯಾವಾಗ, ಎಲ್ಲಿ ಎಷ್ಟು ಕಾಲ ಸ್ವಾಮಿ ವಿವೇಕಾನಂದ ಬೋಧನೆಯಿಂದ ಇವರು ಪ್ರಭಾವಿತರಾಗಿದ್ದರು? ಇಂಥ ಪ್ರಶ್ನೆಗಳು ಕೇವಲ ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಆದರೆ “ವಿವೇಕವು” ಇಲ್ಲಿಯತನಕ ಯಾವ ಚಳವಳುಯನ್ನೂ ನಡೆಸಿಲ್ಲ; ಇನ್ನು ಬುಡಕಟ್ಟು ಯುವಕರನ್ನು ಒಳಗೊಳ್ಳುವಂಥ ಮಾತು ದೂರವೇ ಉಳಿಯಿತು.

ಸಮಕಾಲೀನ ಭಾರತದಲ್ಲಿ ರಾಜಕೀಯ ನಾಯಕರು ಅಥವಾ ಧಾರ್ಮಿಕ ನಾಯಕರ ಹೆಸರುಗಳನ್ನು ಸಂಘಟನೆಗಳಿಗೆ ಇಟ್ಟುಕೊಳ್ಳುವುದು. ಒಂದು ಆಕರ್ಷಣೆಯಾಗಿದೆ. ಈ ಹುಚ್ಚು ಇಡೀ ದೇಶವನ್ನೇ ವ್ಯಾಪಿಸಿದೆ. ಹಳೆ ಪಟ್ಟಣಗಳು ಹಾಗೂ ಬೀದಿಗಳ ಹೆಸರುಗಳನ್ನು ಬದಲಾಯಿಸಿ ಹೊಸದಾಗಿ ನಾಮಕರಣ ಮಾಡಲಾಗುತ್ತಿದೆ. ದೇಶದ ಉದ್ದಗಲಕ್ಕೂ ಎಲ್ಲದಕ್ಕೂ ಗಾಂಧಿ, ನೆಹರು ಎಂಬ ಹೆರ್ಸರುಗಳನ್ನು ಇಡಲಾಗುತ್ತಿದೆ. ಅಂಬೇಡ್ಕರ್‌ರವರ ಹೆಸರು ಕೂಡ ಇದೇ ತರಹ ಎಳೆಯಲ್ಪಟ್ಟಿದೆ. ಈ ಹೆಸರುಗಳು ಇಷ್ಟು ಅಗ್ಗವಾದರೆ ದೊಡ್ಡ ವ್ಯಕ್ತಿಗಳಿಗೆ ನಾವು ಯಾವ ಗೌರವ ತೋರಿಸುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ. ಜನಮೆಚ್ಚುಗೆ ತಂತ್ರಕ್ಕೂ ಒಂದು ಎಲ್ಲೆ ಇರಬೇಕು. ಸಿಕ್ಕಿದ್ದಕ್ಕೆಲ್ಲಾ ದೊಡ್ಡ ವ್ಯಕ್ತಿಯ ಹೆಸರಿಡುವ ಜಾಡ್ಯ ಖಂಡಿತವಾಗಿ ರಾಷ್ಟ್ರಪ್ರೇಮದ ಸಂಕೇತವಲ್ಲ. ವಾಸ್ತವವಾಗಿ ಅವರಿಗೆ ತೋರುವ ಅಗೌರವವಾಗಬಹುದು.

ಆರು ಜನ ವೈದ್ಯರ ತಂಡವವೊಂದು ೧೯೮೫ರಲ್ಲಿ ನಂಜನಗೂಡು ತಾಲ್ಲೂಕಿನ ತುಮ್‌ನೇರಳೆಯಲ್ಲಿ ಒಂದು ಚಿಕಿತ್ಸಾಲಯವನ್ನು ತೆರೆಯಲು ಪ್ರಯತ್ನಿಸಿತು; ಆದರೆ ಆಗ ಅಸ್ತಿತ್ವದಲ್ಲಿದ್ದಂಥ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ರೋಗಿಗಳನ್ನು ವರ್ಗಾಯಿಸುವುದರ ಮೂಲಕ ತನ್ನ ಕೈತೊಳೆದುಕೊಂಡಿತು. ಆ ಬಳಿಕ ೧೯೮೭ರಲ್ಲಿ ಬ್ರಹ್ಮಗಿರಿ ಬುಡಕಟ್ಟು ಕಾಲೋನಿಯಲ್ಲಿ ಮತ್ತೆ ತನ್ನ ಅದೃಷ್ಟ ಪರೀಕ್ಷಿಸಿತು. ೧೯೮೮ರ ಫೆಬ್ರವರಿಯಲ್ಲಿ ಅರೋಗ್ಯಕೇಂದ್ರವೂ ಅಧಿಕೃತವಾಗಿ ಉದ್ಭಾಟನೆಯಾಯಿತು. ಆದಾಗ್ಯೂ ೧೯೮೮ರ ಅಕ್ಟೋಬರ್‌ಹಾಗೂ ೧೯೯೦ ನವೆಂಬರ್‌ಅವಧಿಯಲ್ಲಿ ಕೆಂಚನಹಳ್ಳಿಗೆ ದೃಶ್ಯ ಬದಲಾವಣೆಯಾಗಿ “ಶಂಕರ ಸಮುದಾಯ ಆರೋಗ್ಯ ಕೇಂದ್ರ” ಸ್ಥಾಪನೆಯಾಗುತ್ತದೆ.

ಹಾಗಾಗಿ ೧೯೮೪ ರಿಂದ ೧೯೯೦ರವರೆಗೆ ಮಾಡಿಕೊಂಡಂಥ ತಾತ್ಕಲಿಕ ಏರ್ಪಾಟಿನ ಫಲವಾಗಿ ಈ ತಂಡವು ತುಮ್‌ನೇರಳೆಯಿಂದ ಬ್ರಹ್ಮಗಿರಿಗೆ, ಅಲ್ಲಿಂದ ಕೆಂಚನಳ್ಳಿಗೆ ಓಡಾಡುವಂಥ ಪ್ರಮೇಯ ಒದಗಿತು. ೧೯೮೯ ರಿಂದ ೧೯೯೦ ರಲ್ಲಿ ಶೈಕ್ಷಣಿಕ ಮಾರ್ಗದ ಅನ್ವೇಷಣೆಯಲ್ಲಿ ವಿವೇಕ ಇದ್ದೇ ಇತ್ತು. “ವಿವೇಕ ಟ್ರೈಬಲ್‌ಸೆಂಟರ್‌ಫಾರ್‌ಲರ್ನಿಂಗ್‌” ಎಂಬ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಅವರ ಕನಸು ನನಸಾಯಿತು.

ಯಾವುದೇ ಒಂದು ಕ್ಷೇತ್ರದಲ್ಲಿ ತಾವು ಹಾಕಿಕೊಂಡ ಗುರಿಯನ್ನು ಸಾಧಿಸುವುದಕ್ಕೆ ಮೊದಲೇ ಇನ್ನೊಂದು ವಲಯಕ್ಕೆ ಜಿಗಿಯುವಂಥ ಮನೋಭಾವವನ್ನು ವಿವೇಕ ಪ್ರದರ್ಶೀಸಿರುವುದನ್ನು ನಾವು ಕಾಣುತ್ತೇವೆ. ಇವರು ಹೇಳಿಕೊಳ್ಳುವ ಸೇವೆಗಳಲ್ಲಿ ಆರೋಗ್ಯ ಕೇಂದ್ರವಾಗಲಿ, ಬುಡಕಟ್ಟು ಶಾಲೆಯಾಗಲಿ ಇಲ್ಲ. ವಾರ್ಷಿಕವಾಗಿ ಹಾವು ಕಡಿತದಿಂದ ಅವರು ಸುಮಾರು ೬೦-೭೦ ಮಂದಿಯನ್ನು ಉಳಿಸುತ್ತಾರೆಂದು ಕೇಳಿದ್ದೇನೆ. ಈಗಾಗಲೇ ಹೇಳಿರುವಂತೆ, ಹಾವು ಕಡಿತದಿಂದ ಜನರನ್ನು ರಕ್ಷಿಸುವಂಥ ವಿಧಾನವನ್ನು ಗ್ರಾಮೀಣರು ಬಹಳ ಹಿಂದಿನಿಂದಲೂ ಪಾರಂಪರಿಕವಾಗಿ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ವೈದ್ಯರ ತಂಡವೊಂದು ಜನರನ್ನು ಹಾವು ಕಡಿತದಿಂದ ಪಾರು ಮಾಡುವ ಕಾಯಕದ ಬಗ್ಗೆ ಗಂಭೀರವಾದ ಗುಮಾನಿ ಉಂಟಾಗುವುದು ಸಹಜ.

ಈ ಪ್ರದೇಶದಲ್ಲಿ ಕಾರ್ಯನಿರತವಾಗಿರುವ ಇತರ ಸ್ವಸೇಸಂಗಳೂ ಸಹ ಆರೋಗ್ಯ ಕಾರ್ಯಕ್ರಮವನ್ನು ಹಾಕಿಕೊಂಡಿರಬಹುದು. ಮೈರಾಡ ಇದರಲ್ಲಿ ಒಂದು ಎಂದು ತೋರಿಸುತ್ತದೆ. ಹೀಗಿರುವಾಗ ೧೯೯೦ರ ನವೆಂಬರ್‌ಹಿಂದೆಯೇ ಎಸ್.ವಿ.ವೈ.ಎಂ.೫೦,೦೦೦ ಜನರ ಅರೋಗ್ಯ ನೋಡಿಕೊಳ್ಳುವ -ಅದರಲ್ಲಿ ೫೦೦೦ ಮಂದಿ ಬುಡಕಟ್ಟಿನವರ -ಹೊಣೆ ಹೊತ್ತಿದ್ದರೆಂದು ನಿಜಕೂ ಒಂದು ರೋಚಕ ಕಥೆಯೇ. ೧೯೮೪ ರಿಂದ ೧೯೮೮ರವರೆಗೆ ವಿವೇಕದ ಸಂಘಟಕರು ಊರಿಂದ ಊರಿಗೆ ಜಿಗಿದಾಡುತ್ತಿದ್ದುದು ಜಗಜ್ಜಾಹಿರಾಗಿದ್ದಿತು. ೧೯೯೦ರಲ್ಲಿ ಶಂಕರ ಕಮ್ಯೂನಿಟಿ ಹೆಲ್ತ್‌ಸೆಂಟರ್‌(“ಶಂಕರ ಸಮುದಾಯ ಆರೋಗ್ಯ ಕೇಂದ್ರ”) ಸ್ಥಾಪನೆಯಾದ ಬಳಿಕ ಕೊಂಚ ದೃಢತೆ ಬಂದಿತ್ತೆನ್ನಬೇಕು. ಇದಾದ ಬಳಿಕ ಔಪಚಾರಿಕ ಶಿಕ್ಷಣವೆಂಬ ಇನ್ನೊಂದು ವರಸೆ ಶುರುವಾಯಿತು. ೧೯೯೧ ಜನವರಿಯಲ್ಲಿ “ವಿವೇಕ ಟ್ರೈಬಲ್ ಸೆಂಟರ್‌ಫಾರ್‌ಲರ್ನಿಂಗ್‌” ಕಾರ್ಯರಂಭ ಮಾಡಿತು. ಯಾವುದೇ ತರಹದ ಯೋಜನೆ ಹಾಗೂ ಕ್ರಿಯಾವಿಧಾನವಿಲ್ಲದೆ ಒಂದಾದ ಮೇಲೊಂದರಂತೆ ಹೀಗೆ ಅನೇಕ ಸೇವೆಗಳನ್ನು ಹಮ್ಮಿಕೊಳ್ಳಲು ಸಾಧ್ಯವೆ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವಿದೆ.

ಅಧ್ಯಕ್ಷರು ಮೇಲಿಂದ ಮೇಲೆ ಪ್ರವಾಸ ಹೋಗುವ ಕಾರಣ ಮುಖ್ಯ ಕೇಂದ್ರದಲ್ಲಿ ಅವರು ಇರುವುದೇ ಕಡಿಮೆ; ಇನ್ನು ಆರೋಗ್ಯ ಕೇಂದ್ರದಲ್ಲಿ ಯಾವ ವೈದ್ಯರೂ ಇರುವುದಿಲ್ಲ. ಹಾಗೆಯೇ, ಶಾಲೆಯಲ್ಲಿ ಎಷ್ಟು ಮಂದಿ ಉಪಾಧ್ಯಾಯರು ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕೂಡ ಮಾಹಿತಿಯಿಲ್ಲ.

‘ವಿವೇಕ’ದ ಎದ್ದು ಕಾಣುವ ಲಕ್ಷಣವೆಂದರೆ, ಮೈಸೂರು, ಬೆಂಗಳೂರುಗಳಲ್ಲಿರುವ ಬಹುತೇಕ ಮಂದಿ ಸಲಹೆಗಾರರನ್ನು ಹೊಂದಿರುವುದಾಗಿ ಹೇಳಿಕೊಳ್ಳತ್ತದೆ. ಉಳಿದೆರಡು ಸಂಸ್ಥೆಗಳು ಈ ಮಾದರಿಯನ್ನನುಸರಿಸಿಲ್ಲ. ಆ ಎರಡು ಸ್ವಯಂ ಸೇವಾ ಸಂಸ್ಥೆಗಳು ಆಡಳಿತ ಮಂಡಳಿ ಹಾಗೂ ಸಾಮಾನ್ಯ ಮಂಡಳಿಗಳನ್ನು ಹೊಂದಿದ್ದು ಅವುಗಳಲ್ಲಿರುವವರು ಬುಡಕಟ್ಟಿನವರು, ಅಧಿಕಾರಿಗಳು ಹಾಗೂ ಸಂಘಟನೆಯ ಪ್ರತಿನಿಧಿಗಳು ಸದಸ್ಯರಾಗಿದ್ದಾರೆ. ‘ವಿವೇಕ’ದಲ್ಲಿ ಈ ಯಾವ ಮಾದರಿಯೂ ಕಣ್ಣಿಗೆ ಬೀಳುವುದಿಲ್ಲ. ಬುಡಕಟ್ಟು ಸದಸ್ಯರಿಗೆ ಇಲ್ಲಿ ಸ್ಥಾನವೇ ಇಲ್ಲ. ಬುಡಕಟ್ಟು ಅಭಿವೃದ್ಧಿಗೆ ನಿಜವಾದ ಕಾಲ್ತೊಡಕು ಇದು. ನಾಯಕತ್ವದ ಬೆಳವಣಿಗೆಯಲ್ಲಿ ಇದು ನಿಜವಾದಂಥ ಅಡ್ಡಿಯಾಗಿರುವುದು. ಹಾಗಾಗಿ ಬುಡಕಟ್ಟಿನವರು ಸ್ವಾವಲಂಬಿಗಳಾಗುವ ಮಾರ್ಗದಲ್ಲಿ ಯಾವುದೇ ತರಹದ ಸಹಾಯ ಸಿಕ್ಕದೇ ಸ್ವಯಂ ಸೇವಾ ಸಂಸ್ಥೆ ಬರೇ ಬಾಯಿ ಮಾತಿನಲ್ಲಿ ತನ್ನ ಸಾಧನೆ ಬಗ್ಗೆ ಹೇಳಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ.

ಡೀಡ್‌(DEED)

ಹೆಚ್.ಡಿ. ಕೋಟೆಯಿಂದ ಹುಣಸೂರು ತಾಲ್ಲೂಕಿನ ಕಡೆ ನಡೆದು ಹೂಣಸುರು ಪಟ್ಟಣಕ್ಕೆ ನಾವು ಬಂದರೆ ಚಿಕ್ಕ ಹೂಣಸೂರಿನಲ್ಲಿ ಹೆಚ್.ಡಿ. ಕೋಟೆ ಕಡೆಗೆ ಹೋಗುವ ರಸ್ತೆಯಲ್ಲಿರುವಂಥ ಪಟ್ಟಣದ ಬಡಾವಣೆಯಲ್ಲಿ ಡೀಡ್‌ಕಛೇರಿ ಇರುವುದನ್ನು ಕಣಬಹುದು. ಮುಖ್ಯ ಕಛೇರಿಯಲಿದ್ದರೆ ಈಗಿನ ಸಂಯೋಜನಾಧಿಕಾರಿಯಾದ ಶ್ರೀಕಂತ್‌ಅವರು ನಮಗೆ ಸಿಗುತ್ತಾರೆ. ಇಲ್ಲದೆ ಹೋದರೆ ಅವರು ಹಾಡಿಗಳಲ್ಲಿ ಬುಡಕಟ್ಟು ಜನರ ಬಳಿ ಇರುತ್ತಾರೆ- ಚರ್ಚೆ, ಉಪನ್ಯಾಸ, ಬುಡಕಟ್ಟು ಜನರ ಸಂಘಟನೆ – ಈ ಕಾಯಕದಲ್ಲಿರುತ್ತಾರೆ.

ತಿಂಗಳ ಮೊದಲ ವಾರದಲ್ಲಿ ಶಿಶುವಿಹಾರ ಹಾಗೂ ಶಾಲೆಯ ಉಪಾದ್ಯಾಯರು ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಕೇಂದ್ರ ಕಛೇರಿಗೆ ಬರುತ್ತಾರೆ; ಶ್ರೀಕಾಂತ್‌ಅವರಿಗೆ ಖಂಡಿತಾ ಸಿಕ್ಕುತ್ತಾರೆ. ಸಾಮಾನ್ಯವಾಗಿ ಅವರು ಬುಡಕಟ್ಟು ಜನರಲ್ಲಿ ರಾಜಕೀಯ ಅರಿವು ಮೂಡಿಸಲು ಸದಾ ಅವರ ನಡುವೆ ಚರ್ಚೆಯಲ್ಲಿರುತ್ತಾರೆ.

ಡೀಡ್‌ನ ಸ್ಥಾಪಕರು ಮಂಗಳೂರಿನವರಾದ ಡಾ. ಜೆರ್ರಿ ಪಾಯ್ಸ್ ಎಂಬುವವರು; ಕಲ್ಕತ್ತಾ ಮತ್ತು ಬಿಹಾರದಲ್ಲಿ ಅವರಿಗೆ ಸಮಾಜ ಸೇವೆ ಮಡಿ ರೂಢಿಯಲ್ಲಿತ್ತು. ತಮ್ಮ ತೌರಿಗೆ ಸಮೀಪ ಬರಬೇಕೆಂಬ ಸನ್ನಾಹದಲ್ಲಿ ಅವರು ಇದ್ದಾಗ ಅವರ ಕಣ್ಣಿಗೆ ಬಿದ್ದದ್ದು ಹುಣಸೂರು ಪ್ರದೇಶ. ೧೯೮೦ರ ಸೆಪ್ಟೆಂಬರ್‌ನಲ್ಲಿ ಡೀಡ್‌ಸಂಸ್ಥೆ ಅಸ್ತಿತ್ವಕ್ಕೆ ಬಂತು; ೧೯೯೦ರಲ್ಲಿ ಡಾ. ಜೆರ್ರಿ ಪಾಯ್ಸ್ ಸಂಸ್ಥೆಯ ಜವಾಬ್ದಾರಿಯನ್ನು ಶ್ರೀಕಾಂತರಿಗೆ ವಹಿಸಿಕೊಟ್ಟರು.

ಡಾ. ಜೆರ್ರಿ ಪಾಯ್ಸ್ ಡೀಡ್‌ಅನ್ನು ಬಿಟ್ಟಿದ್ದೇಕೆ ಎಂಬುದು ನಿಗೂಢ. ಹೆಚ್ಚೆಂದರೆ ನಾನು ಆ ಕುರಿತು ಊಹೆ ಮಾಡಬಲ್ಲೆ. ಅಷ್ಟು ಕಾಲ ಸಮಾಜ ಸೇವಾ ಕ್ಷೇತ್ರದಲ್ಲಿದ್ದುದ್ದರಿಂದ ಪ್ರಾಯಶಃ ಪಾಯ್ಸ್ ಬದಲಾವಣೆ ಬಯಸಿದರು ಅಥವಾ ಆಕ್ಸಫಾಮ್‌ನಲ್ಲಿ ಕೆಲಸ ಮಾಡುವ ಅವಕಾಶ ದೊರೆತದ್ದು ಹೆಚ್ಚು ಆಕರ್ಷಣೀಯವಾಗಿ ಕಂಡಿರಬೇಕು. ಜೊತೆಗೆ ಸಮಾಜ ಕಾರ್ಯಕರ್ತನೊಬ್ಬ ಪ್ರೇರಕನಾಗಿರಬೇಕು ಎಂಬ ತತ್ವದಿಂದ ಅವರು ಪ್ರಭಾವಿತರಾಗಿರಬೇಕು. ಜನರಲ್ಲಿ ಒಮ್ಮೆ ಅರಿವು ಮೂಡಿಸಿದ ಬಳಿಕ ತಮ್ಮ ಅಭಿವೃದ್ಧಿಗಾಗಿ ಬದಲಾವಣೆ ತರಬೇಕಾದವರು ಅವರೇ ಎಂಬುದು ಈ ತತ್ವಕ್ಕೆ ಆಧಾರ. ಕ್ರಿಯೆಗಾಗಿ ಜನರನ್ನು ಸಿದ್ಧಗೊಳಿಸಲು ಹತ್ತು ವರ್ಷದ ಅವಧಿ ಸಾಕು; ತದನಂತರ ಸಂಘಟನೆಯನ್ನು ನಡೆಸಿಕೊಂಡು ಹೋಗಲು ಇಚ್ಛೆ ಇರುವವರಿಗೆ ವಹಿಸುವುದು ಸೂಕ್ತ.

ಕೆಲವು ವೇಳೆ ಸ್ಥಾಪಿತ ಹಿತಾಸಕ್ತಿಗಳು ಸ್ವಯಂ ಸೇವಾ ಕಾರ್ಯಕರ್ತರು ಹಾಗೂ ಸಂಘಟನೆಗಳ ವಿರುದ್ಧ ಗುಮಾನಿ ಹರಡುವುದು ವಾಡಿಕೆ. ಚಾರಿತ್ರ್ಯವಧೆಯಿಂದ ಹಣ ದುರುಪಯೋಗದ ಆಪಾದನೆಯನ್ನು ಮಾಡಬಹುದು. ಕ್ರಿಶ್ಚಿಯನ್‌ಸಂಘಟನೆಗಳಾದರೆ ಬುಡಕಟ್ಟಿನವರು ಹಾಗೂ ಪರಿಶಿಷ್ಟ ಜಾತಿಯನ್ನು ಅವರು ಮಂತಾಂತರ ಮಾಡುತ್ತಾರೆ ಎನ್ನುವ ಗುಲ್ಲೆಬ್ಬಿಸಬಹುದು. ಇದೆಲ್ಲ ಸಂಬಾವ್ಯವಿರುವ ಊಹೆಗಳು. ಡಾ. ಜೆರ್ರಿ ಪಾಯ್ಸ್ ಎಕೆ ಬಿಟ್ಟರು ಎಂಬುದು ನಿಖರವಾಗಿ ತಿಳಿಯದು; ಆದರೆ ಇಂದಿಗೂ ಕೂಡ ಅವರು ನಿರ್ದೇಶಕ ಮಂಡಳಿಯ ಸದಸ್ಯರಾಗಿ ಮುಂದುವರೆದಿದ್ದಾರೆ. ಡೀಡ್‌ಚಟುವಟಿಕೆಗಳಲ್ಲಿ ಅವರಿಗೆ ಆಸಕ್ತಿ ಇರುವುದು ಅವರು ನಿರ್ದೇಶಕ ಮಂಡಳಿಯ ಸದಸ್ಯರಾಗಿರುವುದರಿಂದಲೇ ತಿಳಿಯುತ್ತದೆ.

ಡಾ. ಪಾಯ್ಸ್ ಅವರು ಆ ವೇಳೆಗಾಗಲೇ ೩೦ ವರ್ಷ ಸಾಮಾಜಿಕ ಸ್ವಯಂ ಸೇವೆ ಸಲ್ಲಿಸಿದ್ದುದರಿಂದ ಇಷ್ಟು ಸಾಕು ಎನಿಸಿರಬೇಕು. ಶ್ರೀಕಾಂತ್‌ಹೇಳುವ ಪ್ರಕಾರ “ನನಗೆ ಸಂಬಳ ಪಡೆಯುವುದೆಂದರೆ ಹೇಸಿಗೆ” ಎನ್ನುತ್ತಿದ್ದರಂತೆ. ಆ ಮೊದಲು ಅವರ ಶ್ರೀಮತಿ ಫ್ರಾನ್ಸ್‌ನಲ್ಲಿದ್ದರು. ಅವರ ಸಂಬಂಧಿಕರು ಅಪರೂಪಕ್ಕೊಮ್ಮೆ ಬಂದಾಗ ಅವರ ‘ವಸತಿ ಇತ್ಯಾದಿ’ ಗಳಿಗೆ ಕಿರಿಕಿರಿಯುಂಟಾಗುತ್ತಿತ್ತು. ಶ್ರೀಕಾಂತ್‌ಕೂಡ ಜವಾಬ್ದಾರಿ ಹೊರಲು ಉತ್ಸುಕರಾಗಿದ್ದರು.

ಬಹುತೇಕ ಜೇನು ಕುರುಬರು ಹಾಡಿಯಲ್ಲೇ ಬದುಕುತ್ತಿದ್ದಾರಾದರೂ ಅವರು ಪ್ರತ್ಯೇಕವಲ್ಲ. ಪದಾರ್ಥಗಳನ್ನು ಮಾರುವುದಕ್ಕೋ ಅಥವಾ ಕೊಳ್ಳುವುದಕ್ಕೋ ಅವರು ಹುಣಸೂರಿನ ವಾರದ ಸಂತೆಗೆ ಬರುವುದುಂಟು. ಕಾಫಿ ಬಿಡಿಸುವ ಕಾಲದಲ್ಲಿ ಕೆಲಸಕ್ಕಾಗಿ ಅವರು ಕೊಡಗಿಗೆ ಹೊರಡುತ್ತಾರೆ. ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ; ಹಾಗೆಯೇ ರಸ್ತೆ ನಿರ್ಮಾಣದಲ್ಲಿ, ದುರಸ್ತಿ ಕಾರ್ಯದಲ್ಲಿ ಲೋಕೋಪಯೋಗಿ ಇಲಾಖೆಗೆ ದುಡಿಯುತ್ತಾರೆ. ಹೀಗೆ ಅವರು ತಮ್ಮ ವರಮಾನಕ್ಕೆ ಹೆಚ್ಚುವರಿ ಕಂಡುಕೊಳ್ಳುತ್ತಾರೆ. ಈ ತರಹದ ಸಂಪರ್ಕಗಳಿಂದ ಹಾಡಿಗಳಲ್ಲಿ ಸಮಸ್ಯೆಗಳು ತಲೆದೋರಿರುವುದೂ ಉಂಟು.

ಅವರು ಕೆಲವರು ಕುಡಿಯುವುದನ್ನು ಕಲಿತಿದ್ದಾರೆ. ಕುಡಿತ ಹೆಚ್ಚಾಗುತ್ತಿದ್ದು ಹಾಡಿಗಳ ಅಕ್ಕಪಕ್ಕ ಪರವಾನಗಿ ಪಡೆದ ವ್ಯಾಪಾರಿಗಳು ಸಾರಾಯಿ ಅಂಗಡಿಗಳನ್ನು ತೆರೆದಿದ್ದಾರೆ. ಕಳ್ಳಭಟ್ಟಿ ಕೂಡ ಬೇರೆ ಬೇರೆ ಮೂಲಗಳೀಂದ ದೊರೆಯುತ್ತದೆ. ಇದರಿಂದ ಡೀಡ್‌ಪ್ರದೇಶದಲ್ಲಿ ಹಿಂಸೆಗೆ ಇತ್ತೀಚೆಗೆ ದಾರಿಯಾಗಿದೆ. ಬುಡಕಟ್ಟಿನವರಲ್ಲಿ ಸಾಮಾನ್ಯವಾಗಿ ಗಂಡಸರು ಕುಡಿತದ ಚಟಕ್ಕೆ ಬಿದ್ದು ಕೈಗೆ ಏನು ಸಿಕ್ಕಿದರೂ, ಭೂಮಿಯೂ ಸೇರಿದಂತೆ ಗಿರವಿ ಇಟ್ಟುಬಿಡುತ್ತಾರೆ.ಹಾಗಾಗಿ ಕುಟುಂಬದಲ್ಲಿ ಶಾಂತಿ, ಸಮಾಧಾನ ಇಲ್ಲವಾಗುತ್ತದೆ.

ಹಿಂಸೆ ತಲೆಯೆತ್ತಿ ಬುಡಕಟ್ಟಿಗೆ ಸೇರದ ಸಾರಾಯಿ ಗುತ್ತಿಗೆದಾರನೊಬ್ಬ ಸಣ್ಣಪುಟ್ಟ ಮದ್ಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಹಾಡಿಗಳ ಮೇಲೆ ದಾಳಿ ನಡೆಸಿ ಬಿಗುವಿನ ವಾತಾವರಣವನ್ನು ನಿರ್ಮಿಸಿದ್ದ. ಈಗ ಹಾಡಿಯ ಸಮೀಪ ಪರವಾನಗಿ ಪಡೆದ ಸಾರಾಯಿ ಅಂಗಡಿಗಳು ತೆಲೆಯೆತ್ತದಂತೆ ತಡೆಯಲು ಬುಡಕಟ್ಟು ಮಹಿಳೆಯರು ಮತ್ತು ಮಕ್ಕಳು ಸಂಘಟಿತರಾಗಿದ್ದಾರೆ. ಈ ತರಹ ಪ್ರತಿಕ್ರಿಯೆ ತೋರಿದವರಲ್ಲಿ ಡೀಡ್‌ಪ್ರದೇಶವೇ ಮೊದಲಲ್ಲ. ಇತರ ಸ್ಥಳಗಳೀಂದಲೂ ಈ ತರಹದ ಹಲವು ವರದಿಗಳು ನಮಗೆ ಬರುತ್ತವೆ. ಆಂಧ್ರ ಪ್ರದೇಶ ಹಾಗೂ ಒರಿಸ್ಸಾಗಳಾಲ್ಲಿಯೂ ಬುಡಕಟ್ಟು ಚಳುವಳಿಗಾರರು ಪ್ರತಿಭಟಿಸಿ ಹಗಲು ದರೋಡೆ ಮಾಡಿ ಬುಡಕಟ್ಟಿನವರ ಶೋಷಣೆ ಮಾಡುವ ಮದ್ಯದ ದೊರೆಗಳಿಗೆ ಮುಖಭಂಗ ಮಾಡಿರುವ ಪ್ರಸಂಗಗಳು ಗಮನಕ್ಕೆ ಬಂದಿವೆ. ಸಂಪೂರ್ಣ ಪಾನನೀಷೇಧ ಸಾಧ್ಯವಿಲ್ಲವಾದರೂ ಕುಡಿತದ ಹಾನಿಯಿಂದ ಬುಡಕಟ್ಟು ಸಂಸಾರಗಳು ಹಾಳಾಗುವುದನ್ನು ಗಣನೀಯ ಪ್ರಮಾಣದಲ್ಲಿ ತಡೆಗಟ್ಟಬಹುದು.

ವಾಸ್ತವಾಗಿ ಈ ಪ್ರದೇಶದಲ್ಲಿ ಭೂಮಿ ಸ್ವಾಧೀನ ನಿರಂತರ ಸಮಸ್ಯೆಯಾಗಿ ತೋರುತ್ತದೆ. ೧೯೬೦-೭೦ ದಶಕದಲ್ಲಿ ಈ ಸಮಸ್ಯೆ ಉಲ್ಬಣಾವಸ್ಥೆ ತಲಪಿತ್ತು. ಬುಡಕಟ್ಟು ಜನರ ಜಮೀನಿನ ಮೇಲೆ ಇತರ ಗ್ರಾಮಸ್ಥರು ಒಂದು ಆಸೆಗಣ್ಣು ಇಟ್ಟೇ ಇದ್ದರು. ಬುಡಕಟ್ಟೇತರ ಜಮೀನು ಮಾಲೀಕರು ಸಾಮಾನ್ಯವಾಗಿ ತಮ್ಮ ಭೂಮಿಯನ್ನು ಹೆಚ್ಚಿಸಿಕೊಳ್ಳಲು ಅಕ್ಕಪಕ್ಕ ನೋಡುತ್ತಿರುತ್ತಾರೆ. ಅವರಲ್ಲಿ ಸ್ಪಲ್ಪ ಮುನ್ನುಗ್ಗುವ ಪ್ರವೃತ್ತಿಯ ಪ್ರಭಾವಿಗಳು ಬುಡಕಟ್ಟಿನವರ ಜಮೀನನ್ನು ಸ್ಪಲ್ಪ ಹಣ ಕೊಟ್ಟು ಲಪಟಾಯಿಸುವುದು.ರೂಢಿ; ದಾಖಲುಗಳಲ್ಲಿ ಮಾತ್ರ ಹೆಚ್ಚು ಹಣ ನೀಡಿರುವುದಾಗಿ ತೋರಿಸುತ್ತಾರೆ. ಒಂದು ಸಾರಿ ಬುಡಕಟ್ಟಿನವರು ಋಣಕ್ಕೆ ಒಳಗಾದರೆ ಮತ್ತೆ ಅವರು ತೆಗೆದುಕೊಂಡ ಸಾಲ ತೀರಿಸಿ ತಮ್ಮ ಜಮೀನನ್ನು ಬಿಡಿಸಿಕೊಳ್ಳುವ ಮಾತು ದೂರವೇ ಉಳಿಯುತ್ತದೆ. ಡೀಡ್‌ಈ ಪ್ರದೇಶಕ್ಕೆ ಕಾಲಿಡುವುದಕ್ಕೆ ಮೊದಲು ಬಲವಂತವಾಗಿ ದುಡಿಮೆಯನ್ನು ಈ ಜನರಿಂದ ಅಕ್ಕಪಕ್ಕದ ಗ್ರಾಮದವರು ಪಡೆದಿರುವುದು ಸ್ಪಷ್ಟವಾಗಿದೆ.

ಸ್ವಯಂ ಸೇವಾ ಸಂಸ್ಥೆಗಳು ಇಲ್ಲಿಗೆ ಬರುವುದಕ್ಕೆ ಮೊದಲು ಅನೇಕ ಬುಡಕಟ್ಟಿನ ಜನರು ತಮ್ಮ ಜಮೀನಿನಲ್ಲೇ ಕೂಲಿಗಳಾಗಿ ದುಡಿದಿರುವ ಸಂಗತಿ ವರದಿಯಾಗಿದೆ. ಕಂದಾಯ ಅಧಿಕಾರಿಗಳ ಸಹಾಯದಿಂದ ಮಾಲೀಕತ್ವದ ದಾಖಲುಗಳನ್ನೇ ಬದಲಾಯಿಸುವ ಪ್ರಕ್ರಿಯೆ ನಿರಾತಂಕವಾಗಿ ನಡೆದಿದೆ. ಇಂಥ ವಂಚನೆ ನಡೆದಿರುವ ಪ್ರಸಂಗಗಳಲ್ಲಿ ಇಂತಿಷ್ಟು ಗಡುವಿನ ಒಳಗೆ ಬುಡಕಟ್ಟಿನವರಿಂದ ಲಪಟಾಯಿಸಿರುವ ಜಮೀನನ್ನು ಹಿಂತಿರುಗಿಸಬೇಕೆಂದು ಕಾನೂನು ಮಾಡಲು ಕರ್ನಾಟಕ ಸರ್ಕಾರದ ಮೇಲೆ ಒತ್ತಡ ತರಲಾಯಿತು. ಏನೇ ಆದರೂ ಗ್ರಾಮದ ಮಟ್ಟದಲ್ಲಿ ಕಾನೂನನ್ನು ತಿರುಚಿ ಅದು ಅನ್ವಯವಾಗದ ಹಾಗೆ ಮಾಡಬಹುದು. ಡೀಡ್‌ಸಂಸ್ಥೆಯ ಮಧ್ಯ ಪ್ರವೇಶದಿಂದಾಗಿ ಬುಡಕಟ್ಟು ಮಾಲೀಕರಿಗೆ ಅವರ ಜಮೀನು ಸೇರುವಂತಾಯಿತು.

ಮೈಸೂರು ಜಿಲ್ಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ಈ ಮೇಲಿನ ಮೂರು ಸ್ವಯಂ ಸೇವಾ ಸಂಸ್ಥೆಗಳ ವಿಶ್ಲೇಷಣೆ ಮಾಡುವುದರಿಂದ ಕೆಲವು ಸಾಮಾನ್ಯ ತೀರ್ಮಾನಗಳನ್ನು ನೀಡಬಹುದಾಗಿದೆ. ಡೀಡ್‌ಶಿಕ್ಷಣ ಹಾಗೂ ಸಮುದಾಯ ಸಂಘಟನೆಯ ಮೂಲಕ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸಿದೆ; ಸಾಕಷ್ಟು ಯಶಸ್ಸನ್ನೂ ಗಳಿಸದೆ. ಶಿಕ್ಷಣದ ಮೂಲಕ ಜ್ಞಾನ ಸಂಪಾದನೆ, ತನ್ಮೂಲಕ ಅರಿವು ಮತ್ತು ಪ್ರಜ್ಞೆ ಮೂಡಿಸುವುದು ಇದರ ಗುರಿ. ಹುಣಸೂರು ತಾಲ್ಲೂಕಿನ ಬುಡಕಟ್ಟಿನ ಜನರು ಹೆಚ್ಚು ರಾಜಕೀಯ ಪ್ರಜ್ಞೆಯುಳ್ಳವರಾಗಿದ್ದು, ಹಕ್ಕು ಕೇಳುವವರಾಗಿದ್ದಾರೆ. ಹಾಗಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ, ನಾಯಕತ್ವ ಹಾಗೂ ಧಾರ್ಮಿಕ ವಿಚಾರಗಳಲ್ಲಿ ನಂಬಿಕೆ, ಸಂಪ್ರದಾಯ, ಆಚರಣೆಗಳಲ್ಲಿ-ಬುಡಕಟ್ಟು ಸಂಸ್ಕೃತಿಯೂ ಸೇರಿದಂತೆ – ಹಲವು ವಿಷಯಗಳಲ್ಲಿ ಪ್ರಜ್ಞೀಕರಣದ ಪ್ರಕ್ರಿಯೆ ಪರಾರಂಭವಾಗಿರುವುದು ಸ್ಪಷ್ಟ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪ್ರದೇಶದಿಂದ ಬುಡಕಟ್ಟು ಜನರನ್ನು ಸಾರಾಸಗಟು ಹೊರಗೆ ಹಾಕುವ ಸರ್ಕಾರದ ಯತ್ನ ಸುಲಭವಾಗಿ ಈಡೇರದು. ಏಕೆಂದರೆ ಬುಡಕಟ್ಟಿನವರ ವಿಷಯಕ್ಕೆ ಸಂಬಂಧಿಸಿದಂತೆ ಈ ಮುಂಚೆ ಸರ್ಕಾರದವರು ಏನೇನೂ ಕಾರ್ಯಯೋಜನೆ ಹಾಕಿಕೊಂಡಿಲ್ಲ. ಹಾಗಾಗಿ ಈಗ ಹೊಸದಾಗಿ ಸರ್ಕಾರದವರು ಭರವಸೆ ನೀಡಿದರೆ ಬುಡಕಟ್ಟಿನವರು ಅದನ್ನು ನಂಬಲು ತಯಾರಿಲ್ಲ. ಡೀಡ್‌ಸಂಸ್ಥೆ ಬುಡಕಟ್ಟು ಜನರ ಅಭಿವೃದ್ಧಿ ವಿಷಯದಲ್ಲಿ ತೆಗೆದುಕೊಂಡಿರುವ ಕ್ರಮಗಳಲ್ಲಿ ಎದ್ದು ಕಾಣುವ ಒಂದು ಲೋಪವೆಂದರೆ, ವೈದ್ಯಕೀಯ/ಆರೋಗ್ಯ ಕಾರ್ಯಕ್ರಮದ ಕೊರತೆ. ಈ ನಿಟ್ಟಿನಲ್ಲಿ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಹೆಚ್ಚು ಚರ್ಚಿಸುವುದು ಸಾಧ್ಯವಾಗದು.

ಇದಕ್ಕೆ ವ್ಯತಿರಿಕ್ತವಾಗಿ ವಿ.ಜಿ.ಕೆ.ಕೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಚಿಕಿತ್ಸಾ ಆರೋಗ್ಯ ಕಾರ್ಯಕ್ರಮದ ಮೂಲಕ ಪ್ರವೇಶ ಪಡೆಯಿತು. ಸಂಸ್ಥೆ ಈಗ ಮೂರು ತಾಲ್ಲೂಕುಗಳನ್ನೊಳಗೊಂಡಿದ್ದು ಸಮುದಾಯ ಕೇಂದ್ರಿತವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಿಕ್ಷಣರಂಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಗಣನೀಯ ಸಂಖ್ಯೆ ವಿದ್ಯಾರ್ಥಿಗಳನ್ನು – ದೂರದ ಕೊಡಗು ಸೇರಿದಂತೆ – ಆಕರ್ಷಿಸಿದೆ. ಪ್ರಸ್ತುತ ಸೋಲಿಗ ಅಭಿವೃದ್ಧಿ ಸಂಘಗಳು ಅನ್ಯಾಯ, ದೌರ್ಜನ್ಯಗಳ ವಿರುದ್ಧ ತಮ್ಮ ಅಭಿಪ್ರಾಯ ಹೇಳುವ, ಪ್ರತಿಭಟಿಸುವ ಶಕ್ತಿಯನ್ನು ಪಡೆದುಕೊಂಡಿವೆ.

ಕಂಚಿ ಕಾಮಕೋಟಿ ಗುರುಗಳು, ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಮೈಸುರಿನ ರಾಮಕೃಷ್ಣಾಶ್ರಮದ ಆಶೀರ್ವಾದವಿದ್ದರೂ ಸಹ “ವಿವೇಕ” ಕಾಲೆಳೆಯುತ್ತಿದೆ. ಈ ಸಂಘಟನೆಯಲ್ಲಿ ಮಾನವ ಅಂಶ ಇಲ್ಲವೇ ಇಲ್ಲ ಎನ್ನುವಂತಿಲ್ಲದಿದ್ದರೂ ಅದರ ಪ್ರಮಾಣ ತೀರಾ ಕಡಿಮೆ. ಹಾಗಾಗಿ ಅದು ಈಗ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದೆ. ಮೂರು ಧಾರ್ಮಿಕ ಕೇಂದ್ರಗಳ ಕೃಪಾಕಟಾಕ್ಷವನ್ನು ಹೊಂದಿದ್ದು, ಆರು ಮಂದಿ ತರುಣ ವೈದ್ಯರ ಸಹಕಾರವಿದ್ದ ಸದರಿ ಸಂಸ್ಥೆ ಇಷ್ಟು ವೇಳೆಗೆ ಉಳಿದೆರಡು ಸಂಸ್ಥೆಗಳಿಗಿಂತ ಹೆಚ್ಚು ವೇಗವಾಗಿ ಬೆಳೆಯಬೇಕಾಗಿತ್ತು. ಹಾಗಾಗಿಲ್ಲದಿರುವುದಕ್ಕೆ ಬಹಳ ಶೀಘ್ರವಾಗಿ ಆರೋಗ್ಯ ಸೇವೆಯಿಂದ ಶಿಕ್ಷಣರಂಗಕ್ಕೆ ತನ್ನ ಗಮನವನ್ನು ಪಲ್ಲಟಗೊಳಿಸಿಕೊಂಡದ್ದು ಮುಖ್ಯ ಕಾರಣವಾಗಿದೆ ಎನ್ನಬೇಕಾಗುತ್ತದೆ. ಸಮುದಾಯ ಪ್ರಜ್ಞೀಕರಣದ ಕಡೆ ಸಂಸ್ಥೆ ಇನ್ನೂ ಗಮನ ಹರಿಸಿಲ್ಲ. ‘ವಿವೇಕ’ ಇಷ್ಟರಲ್ಲೇ ಹೊಸ ಮಜಲನ್ನು ಮುಟ್ಟಿಬಿಡುತ್ತದೆ ಎಂಬ ಭರವಸೆಯಿಲ್ಲ. ಉಳಿದೆರಡು ಸ್ವಯಂ ಸೇವಾ ಸಂಸ್ಥೆಗಳ ಜೊತೆ ಇನ್ನು ಹೋಲಿಸಲೂ ಸಾಧ್ಯವಿಲ್ಲ; ಏಕೆಂದರೆ ಅನುಭವವನ್ನು ಹಂಚಿಕೊಳ್ಳುವ ಸಾಧ್ಯತೆಯೂ ಇಲ್ಲ.

ಮೂರು ಸ್ವಯಂ ಸೇವಾ ಸಂಸ್ಥೆಗಳ ವಿಶ್ಲೇಷಣೆಯಿಂದ ಅವರ ಯೋಜನೆಗಳ ರೂಪುರೇಷೆಯ ಬಗ್ಗೆ ತಿಳಿದುಬರುವುದು. ಡೀಡ್‌ಹಾಗೂ ವಿ.ಜಿ.ಕೆ.ಕೆ. ಅತ್ಯಂತ ಹಿಂದುಳಿದ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಸ್ವಪ್ರೇರಿತ ಸೇವೆಯನ್ನು ಮುಂದುವರಿಸುತ್ತಿವೆ. ಈ ಗುಂಪುಗಳಿಗೆ ಸರ್ಕಾರದಿಂದ ಸಂವೈಧಾನಿಕವಾದ ಹೊಣೆಗಾರಿಕೆ ಇದೆ ಎನ್ನವುದೇನೋ ನಿಜ. ಆದರೆ ಇಷ್ಟು ಸಮಯದ ತನಕ ಈ ಜನಸಮುದಾಯಕ್ಕೆ ಸೇವೆ ತಲುಪಿಸುವಲ್ಲಿ ಸರ್ಕಾರಿ ಯಂತ್ರ ಸಫಲವಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಬುಡಕಟ್ಟು ಜನರನ್ನು ಹೆದರಿಸಿ ಬೆದರಿಸಿ, ಅವರಿಗೆ ಕಿರುಕುಳ ಕೊಟ್ಟು ಅರಣ್ಯ ಪ್ರದೇಶಗಳಿಗೆ ಅವರು ಹೋಗದ ಹಾಗೆ ಹಾಗೂ ಅರಣ್ಯ ಉತ್ಪನ್ನಗಳನ್ನು ಮುಟ್ಟದ ಹಾಗೆ ನಿಯಮಗಳನ್ನು ರೂಪಿಸುವಲ್ಲಿ ನಿರತವಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಅನ್ಯಾಯ, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತಗಳಂಥ ಹಲವು ಅನಿಷ್ಟಗಳ ವಿರುದ್ಧ ಹೋರಾಡುತ್ತ ಅತ್ಯಂತ ತಾಳ್ಮೆಯಿಂದ, ತ್ಯಾಗಮನೋಭಾವರಿಂದ ದುಡಿದರೆ ಮಾತ್ರ ಬುಡಕಟ್ಟು ಜನರಲ್ಲಿ ಧೈರ್ಯ, ಸ್ಥೈರ್ಯ ಹಾಗೂ ಸ್ವಾಭಿಮಾನವನ್ನು ತುಂಬಲು ಸಾಧ್ಯವಾಗುತ್ತದೆ. ಡೀಡ್‌ಮತ್ತು ವಿ.ಜಿ.ಕೆ.ಕೆ. ಸಂಸ್ಥೆಗಳ ಪ್ರಯತ್ನವನ್ನು ಎಲ್ಲರೂ ಮುಕ್ತಕಂಠದಿಂದ ಹೊಗಳಬೇಕಾಗಿದೆ; ವಿಶೇಷವಾಗಿ, ಬುಡಕಟ್ಟು ಜನರ ಕ್ಷೇಮಾಭಿವೃದ್ಧಿಯನ್ನು ನೋಡಿಕೊಳ್ಳಬೇಕಾಗಿರುವಂಥ ಸರ್ಕಾರಿ ಇಲಾಖೆಗಳು ಆ ಕೆಲಸವನ್ನು ಮಾಡಬೇಕು. ಏಕೆಂದರೆ ಈ ಎರಡು ಸ್ವಯಂ ಸೇವಾ ಸಂಸ್ಥೆಗಳು ಯಾವುದೇ ಬಗೆಯ ಪ್ರತಿಫಲವನ್ನೂ ಅಪೇಕ್ಷಿಸದೆ ಸರ್ಕಾರದ ಹೊಣೆಗಾರಿಕೆಯ ಸ್ಪಲ್ಪ ಭಾಗವನ್ನು ಹೊತ್ತುಕೊಂಡಿವೆ. ಕೇವಲ ಕಾಯಕದ ಪ್ರೀತಿಯೇ ಇಲ್ಲಿ ಸ್ಪೂರ್ತಿಯಾಗಿ ಕೆಲಸ ಮಾಡಿದೆ. ಹಾಗಾಗಿ ಸಮಾಜಕ್ಕೆ ಅವರು ಮಾಡುತ್ತಿರುವಂಥ ನಿಸ್ವಾರ್ಥ ಸೇವೆಯನ್ನು ನೆನೆದು ಅದಕ್ಕೆ ಎಲ್ಲ ರೀತಿಯ ನೈತಿಕ ಹಾಗೂ ವಸ್ತುರೂಪದ ಸಹಾಯ -ಬೆಂಬಲವನ್ನೂ ನೀಡಬೇಕಾಗಿದೆ.

‘ವಿವೇಕ’ ಸಾಧನೆ ಅಥವಾ ಕೊಡುಗೆಯ ಬಗ್ಗೆ ನನಗೆ ಅಷ್ಟಾಗಿ ತಿಳಿಯದು. ಮಾನವ ತಿಳುವಳಿಕೆಯ ಕೊರತೆಯಿದ್ದ ಹಾಗೆ ಅನ್ನಿಸುತ್ತದೆ. ಮಾನವೀಯ ಮೌಲ್ಯಗಳು ಹಾಗೂ ಘನತೆಗೆ ಇಲ್ಲಿ ಬೆಲೆಯಿಲ್ಲ. ದೇಶದಾದ್ಯಂತ ಇಂಥ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಕಂಡು ಬರುತ್ತವೆ. ಕಾಲ ಕಳೆಯುತ್ತು ಇದ್ದ ಹಾಗೆ ಜನರೇ ಇಂಥವನ್ನು ತಿರಸ್ಕರಿಸುತ್ತಾರೆ. ಕೇವಲ ತೋರಿಕೆಯ ಕರುಣೆ ಅಥವಾ ದಾನವನ್ನು ನಾವು ಪರಿಹರಿಸುವುದಕ್ಕಿಂತ ಅಂತಃಕರಣ ಮುಖ್ಯವಾಗುತ್ತದೆ.

ಎನ್.ಜಿ.ಓ.ಗಳ ಮುಂದುವರಿಕೆ ಮತ್ತು ಚಟುವಟಿಕೆಗಳಿಗೆ ಯಾವ ಅಡ್ಡಿಯೂ ಇಲ್ಲ; ಮುಖ್ಯ ಸಂಗತಿಯೆಂದರೆ ಇಂಥ ಸಂಸ್ಥೆಗಳು ವಿಪರೀತವಾಗಿ ಹೆಚ್ಚಬಾರದು. ಕೆಲವು ಯಶಸ್ವಿ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರಕ್ಕೆ ಭುಜಕ್ಕೆ ಭುಜ ಕೊಟ್ಟು ತಾವು ನಿಲ್ಲಬಲ್ಲವೆಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ. ಹಾಗೆ ನಿಲ್ಲುವುದು ಸರ್ಕಾರದ ವಿರುದ್ಧ ಕತ್ತಿ ಮಸೆಯುವುದಕ್ಕಲ್ಲ. ಆದರೆ ಬಡವರು, ನಿರ್ಗತಿಕರು ಹಾಗೂ ಇದುವರೆಗೆ ತಿರಸ್ಕೃತರೂ, ಶೋಷಿತರೂ ಆದಂತಹ ಜನಸಮುದಾಯದ ನಡುವೆ ಅಭಿವೃದ್ಧಿ ಕೆಲಸವನ್ನು ನಡೆಸಲು. ಸರ್ಕಾರದ ಕೆಲಸಗಳಿಗೆ ಇವು ಖಂಡಿತಾ ಪರ್ಯಾಯವಲ್ಲ; ಇವುಗಳೇನಿದ್ದರೂ ಸರ್ಕಾರದ ಕೆಲಸಗಳಿಗೆ ಪೂರಕವಾಗಿ ದುಡಿಯುವಂಥವು.

ಈಗಂತೂ ದೇಶದಾದ್ಯಂತ ಎಲ್ಲ ತರಹದ ಸ್ವಯಂ ಸೇವಾ ಸಂಸ್ಥೆಗಳು ಕಾರುಪ್ರವೃತ್ತವಾಗಿವೆ. ೧೯೮೦ರ ದಶಕದಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ವಕ್ತಾರರನ್ನಾಗಿ ಬಳಸಿಕೊಂಡು ನಿಯಂತ್ರಣದಲ್ಲಿಟ್ಟುಕೊಳ್ಳಲು ಸರ್ಕಾರ ಪ್ರಯತ್ನಿಸಿದಾಗ ಈ ಸಂಸ್ಥೆಗಳಲ್ಲಿರುವ ಪರಸ್ಪರ ಪೈಪೋಟಿ, ಸಹಮತದ ಕೊರತೆ- ಇತ್ಯಾದಿಯೆಲ್ಲ ಬೆಳಕಿಗೆ ಬಂದಿತು. ಸ್ವಯಂ ಸೇವಾ ಸಂಸ್ಥೆಗಳಿಗೆ ‘ನೀತಿ ಸಂಹಿತೆ’ ಯೊಂದನ್ನು ಅಳವಡಿಸುವ ಪ್ರಯತ್ನಗಳು ನಡೆದು ಇದು ಹಲವರಿಗೆ ಹಿಡಿಸಲಿಲ್ಲ. ಹಾಗಾಗಿ, ಈ ಚಲನೆಯನ್ನು ಬಹಳಷ್ಟು ಮಂದಿ ತಡೆದರಲ್ಲದೆ ಇದು ಸ್ವಯಂ ಸೇವಾ ನಿಯಮಕ್ಕೇ ವಿರೋಧವೆಂದು ತೀರ್ಮಾನಿಸಿದರು.

ಈ ಒಳಜಗಳ ಹಾಗೂ ವೈಮನಸ್ಯ ಸ್ಪಲ್ಪ ಪ್ರಮಾಣದಲ್ಲಿ ಒಳಗೊಳಗೇ ಮುಂದುವರಿದಿರುವುದಾರೂ ಇದರ ಬಗ್ಗೆ ಹೆಚ್ಚು ವಿವರವಾಗಿ ಪ್ರವೇಶ ಮಾಡಲು ನನಗೆ ಇಚ್ಛೆಯಿಲ್ಲ. ಸರ್ಕಾರಿ ಇಲಾಖೆಗಳಿಗೆ ಸ್ವತಂತ್ರವಾದ ಪರ್ಯಾಯವಾಗಿ ಸ್ವಯಂ ಸೇವಾ ಸಂಸ್ಥೆಗಳು ಹೊರಹೊಮ್ಮಲಿಲ್ಲವೆಂಬುದನ್ನು ಪರಿಒಗಣಿಸುವುದು ಸೂಕ್ತ. ಬಡವರು ಹಾಗೂ ನಿರ್ಗತಿಕರಿಗೆ ಸೇವೆಯನ್ನು ತಲುಪಿಸುವಲ್ಲಿ ಅಧಿಕಾರಿಶಾಹಿ ವಿಫಲವಾಗಿದೆ ಎನ್ನುವುದು ಸ್ಪಷ್ಟ ಇದನ್ನು ತಾವು ಯಶಸ್ವಿಯಾಗಿ ಮಾಡಬಲ್ಲೆವು ಎಂಬುದನ್ನು ಸ್ವಯಂ ಸೇವಾ ಸಂಸ್ಥೆಗಳು ಮಾಡಿ ತೋರಿಸಿವೆ.

ಹೀಗಿರುವಲ್ಲಿ ಪರಸ್ಪರ ನಡುವೆ ಸ್ಪರ್ಧೆ, ಪೈಪೋಟಿ, ಮನಸ್ತಾಪ, ತಪ್ಪು ಕಲ್ಪನೆ- ಇದ್ಯಾವುದೂ ಇರಬೇಕಾದ ಆಗತ್ಯವಿಲ್ಲ. ಸ್ವಯಂ ಸೇವಾ ಸಂಸ್ಥೆಗಳು ಸ್ವಪ್ರೇರಣೆಯಿಂದ ದುಡಿಯುವುದಾಗಿದ್ದು ಅವರ ಸ್ವಯಂ ಸೇವಾ ಪ್ರಯತ್ನಗಳಿಗೆ ಧನಸಹಾಯ ನೀಡಲಾಗುತ್ತಿದೆ; ಹಾಗಾಗಿ ಹೊಣೆಗಾರಿಕೆ ಮತ್ತು ಪಾರಾದರ್ಶಕತೆಗಳನ್ನು ಅವುಗಳಿಂದ ನಿರೀಕ್ಷಿಸಲಾಗುತ್ತದೆ ಸ್ವಯಂ ಸೇವಾ ಸಂಸ್ಥೆಗಳ ಕೆಲಸದ ನಿಯಮಿತವಾದ ಮೌಲ್ಯಮಾಪನವು ಆ ಸಂಸ್ಥೆಗಳಿಗೆ ಮುಂದುವರಿದ ಧನಸಹಾಯ ಮಾಡಲು ಅಧಾರವಾಗಿರಬೇಕು. ಈ ಮೌಲ್ಯಮಾಪನ ಕೆಲಸವನ್ನು ಸರ್ಕಾರದ ಇಲಾಖೆಗಳು ಹಾಗೂ ನಿರೀಕ್ಷಕರಿಗೆ ವಹಿಸುವ ಬದಲು ಮನಸ್ಸಿರುವ ವಿಶ್ವವಿದ್ಯಾನಿಲಯದ ಇಲಾಖೆಗಳಿಗೆ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ವಹಿಸುವುದು ಸೂಕ್ತ.

ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಜನರು ಸರ್ಕಾರಿ ಉದ್ಯೋಗಗಿಗಳಲ್ಲ. ಹಾಗಾಗಿ ‘ನೀತಿ ಸಂಹಿತೆ’ ಯನ್ನು ವಿಧಿಸುವುದು ತಪ್ಪು ಅಷ್ಟೇ ಅಲ್ಲ. ಅದು ಕಾನೂನು ಬಾಹಿರ ಕೂಡ. ಸರ್ಕಾರಿ ಮೂಲಗಳಿಂದ ಬರುವಂಥ ಧನ ಸಹಾಯದ ಬಗ್ಗೆ ಉತ್ತರಿಸುವ ಹೊಣೆ ಆಯಾ ಸ್ವಯಂ ಸೇವಾ ಸಂಸ್ಥೆಗಳದ್ದು; ಹಾಗಾಗಿ ಆ ಸಂಸ್ಥೆಗಳು ನಿಜವಾಗಿ ಕೆಲಸ ಮಾಡದೆ ಬರೇ ಕಾಗದದ ಮೇಲೆ ಏನೇನಾಗಿದೆ ಎಂದು ಸುಳ್ಳು ತೋರಿಸುವುದಕ್ಕಾಗುವುದಿಲ್ಲ. ಇದಕ್ಕೆ ಹೊಂದಿಕೊಳ್ಳದ ಸ್ವಯಂ ಸೇವಾ ಸಂಸ್ಥೆಗಳನ್ನು ರದ್ದುಪಡಿಸಬಹುದು; ಧನ ಸಹಾಯ ನಿಲ್ಲಿಸಬಹುದು ಇಲ್ಲವೇ ನೋಂದಣಿಯನ್ನು ರದ್ದುಮಾಡಬಹುದು ಸರ್ಕಾರಕ್ಕೆ ಇದನ್ನು ಮಾಡಲು ಸಾಧ್ಯವೆ? ತಲೆದೋರುವ ಅನೇಕ ಒತ್ತಡಗಳನ್ನು ತಡೆದುಕೊಳ್ಳಲು ಅದಕ್ಕೆ ಸಾಧ್ಯವೆ? ಮುಖ್ಯವಾಗಿ, ಸಂಸ್ಥೆಯೊಂದು ತನ್ನ ಅಸ್ತಿತ್ವದ ಕಾಲದಲ್ಲಿ ಬೆಳೆಸಿಕೊಂಡಿರಬಹುದಾದ ರಾಜಕೀಯ ಸಂಪರ್ಕದಿಂದ ಒದಗಿ ಬರುವ ಒತ್ತಡವನ್ನು ತಡೆಕೊಳ್ಳಲು ಸಾಧ್ಯವೆ?

ಕಠಿಣವಾಗಿರದಿದ್ದರೆ ಈ ದೇಶದಲ್ಲಿ ಏನನ್ನೂ ಸಾಧಿಸಲು ಬರುವುದಿಲ್ಲ. ದೇಶವನ್ನು ಇನ್ನೊಂದು ದುರಂತದಿಂದ ಪಾರುಮಾಡಲು ಸರ್ಕಾರ ಕ್ರಿಯೆಗಿಳಿಸಲು ಇದು ಸಕಾಲ. ಒಂದಕ್ಕಿಂತ ಹೆಚ್ಚು ಸಂಸ್ಥೆಗಳು ಒಂದೇ ಪ್ರದೇಶದಲ್ಲಿ ಕೆಲಸ ಮಾಡುವಂಥ ಸಂದರ್ಭದಲ್ಲಿ ಕ್ಷೇತ್ರವನ್ನು ಗುರುತು ಮಾಡದಿದ್ದರೂ ಸೇವೆಗಳನ್ನು ಗುರುತು ಮಾಡುವುದು ಒಳ್ಳೆಯದು ಹೆಚ್.ಡಿ. ಕೋಟೆ ಪ್ರದೇಶದಲ್ಲಾಗುತ್ತಿರುವಂತೆ ೨, ೩, ೪ ಮೂಲಗಳಿಂದ ಸೇವೆಯನ್ನು ಪಡೆಯುವಂತಾದರೆ ಮೊದಲೇ ಸಂಪನ್ಮೂಲದ ಕೊರತೆಯಿರುವಾಗ ಶ್ರಮ ಮತ್ತು ಸಮಯ, ಎರಡೂ ಹಾನಿಯಾಗುವ ಸಂಭವವಿರುತ್ತದೆ.ಜೊತೆಗೆ ಸಂಸ್ಥೆಗಳ ನಡುವೆ ಅನಾರೋಗ್ಯಕರವಾದ ಸ್ಪರ್ಧೆ ನಿರ್ಮಾಣವಾಗುತ್ತದೆ. ಕಾಲದಿಂದ ಕಾಲಕ್ಕೆ ಈ ತರಹದ ಹಾಗೂ ಇನ್ನಿತರ ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಂಡುಹಿಡಿಯಬೇಕು. ಆಗಲೇ ರಾಷ್ಟ್ರವು ಸ್ವಯಂ ಸೇವಾ ಸಂಸ್ಥೆಗಳ ಚಟುಚಟಿಕೆಗಳೀಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ.

* * *