ಮೊಟ್ಟಮೊದಲನೆ ಬಾರಿ ಸೂರ್ಯೋದಯವ ಕಂಡು
ಮೂಕನಾದವ ನೀನು.
ಮೊದಲ ಕೋಗಿಲೆಯ ಸುಸ್ವರವನಾಲಿಸುತ
ರೋಮಾಂಚಗೊಂಡವ ನೀನು.

ಮೊಟ್ಟಮೊದಲನೆ ಬಾರಿ ಚೆಲುವಿಗೆದೆಯನು ಬೆಸೆದು
ರಸವನುಂಡವ ನೀನು.
ನೀನಂದು ಹೊಂದಿಸಿದ ಮಧುರ ಸಂಬಂಧವೇ
ಉಳಿದೆಲ್ಲ ಕವಿಗಳಿಗು ಕಾಮಧೇನು.

ಮೊಟ್ಟಮೊದಲನೆ ಬಾರಿ ಹೆಳವ ಭಾಷೆಗೆ ಗರುಡಗರಿ ಮೂಡಿಸಿದ
ಮೋಡಿಕಾರ.
ತನ್ನ ಪಾತ್ರವನು ತಾನೇ ನಿರ್ಮಿಸುತ ಹರಿದ
ಮುಂಗಾರಿನ ಮಹಾಪೂರ.

ನೀನಾರೊ ನಿನ್ನ ಹೆಸರೇನೊ ; ವಾಲ್ಮೀಕಿಗೂ ಮೊದಲ
ಆದಿ ಕವಿ ನೀನು.
ಕತ್ತಲಿನ ಹಾಳೆಯಲಿ ದೀಪಾವಳಿಯ ಕೃತಿ ಬರೆದು
ಕರಗಿ ಹೋದವ ನೀನು.