ಕುವೆಂಪು, ಕಡಿದಾಳ ಮಂಜಪ್ಪ, ಶಾಂತವೇರಿ ಗೋಪಾಲಗೌಡ ಮುಂತಾದವರು ಸಮಾಜ ಸುಧಾರಣಾ ಸಂಗತಿಗಳನ್ನು ಸ್ಮರಿಸುತ್ತ ಮುಖ್ಯ ಆಶಯದ ಸಮರ್ಥನೆಗೆ ಬಳಸಿಕೊಳ್ಳುವ ವೈಚಾರಿಕ ನೆಲೆಗಟ್ಟಿನತ್ತ ಹೆಜ್ಜೆ ಇಡುತ್ತದೆ. ಮುನ್ನುಡಿಯಲ್ಲಿ ಎಚ್.ದಂಡಪ್ಪನವರು ಹೇಳುವಂತೆ ‘ಸಾಮಾಜಿಕ ಚಲನೆಗಳ ವಿಶ್ಲೇಷಣೆಯಲ್ಲಿ ಇಂದು ‘ಜಾತಿ’ಯು ಅನಿವಾರ್ಯ ಕಲ್ಪನೆಯಾಗಿ ಉಳಿದುಕೊಂಡಿದೆ’. ಅಕ್ಕುವಿನ ವ್ಯಕ್ತಿತ್ವ ವಿಕಾಸದ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಗುರುತಿಸಬಹುದು. ಕಾದಂಬರಿಯಲ್ಲಿ ಆಕೆ ಎದುರಿಸುತ್ತಿರುವ ಪ್ರಮುಖವಾದದ್ದು ‘ಜಾತಿ’ ಸಮಸ್ಯೆಯೇ ಆಗಿದೆ. ಸಂಪ್ರದಾಯಕ್ಕೆ ಹೊರತಾದ ಕಸುಬಿನ ಭಾಗವಾಗಿ ರೂಪುಗೊಳ್ಳುವ ಅಕ್ಕು ಮತ್ತು ಕಿಟ್ಟಪ್ಪಗೌಡ, ಕುಬೇರ ಮತ್ತು ವಾಸಂತಿ – ಇವರ ವಿವಾಹ ಸಂಬಂಧಗಳಿಗೆ ಎದುರಾಗುವ ವಿರೋಧ ಭಾರತೀಯ ಸಮಾಜದಲ್ಲಿ ಅನುಲೋಮ, ಪ್ರತಿಲೋಮ ಸಂಬಂಧಗಳಿಗೆ ಎದುರಾದ ಪ್ರತಿರೋಧಗಳನ್ನು ಪರಾಮರ್ಶಿಸುವಂತಿದೆ. ಅಲ್ಲದೆ ವರ್ತಮಾನದ ಬದುಕಿನಲ್ಲೂ ಚರಿತರೆಯ ಗತಿಗಳನ್ನು ಗಮನಿಸುವಂತೆ ಮಾಡುವ ನಿರೂಪಣಾ ಕ್ರಮದಲ್ಲಿ ಕಾದಂಬರಿ ತೆಗೆದುಕೊಳ್ಳುವ ನಿರ್ಧಾರಗಳು ಹೊಸ ಹಾದಿಯನ್ನು ಹುಡುಕಬಯಸುತ್ತವೆ. ಕುಬೇರ ವಾಸಂತಿಯರ ಪ್ರತಿಲೋಮ ಸಂಬಂಧದ ಸಲುವಾಗಿ ಸ್ಫೋಟಗೊಂಡ ಪ್ರಶ್ನೆಗಳಿಗೆ ಉತ್ತರಿಸುವ ಚನ್ನಯ್ಯಗೌಡರ ತೀರ್ಮಾನದಲ್ಲಿ ಜಾತ್ಯಾತೀತ ಪರಿಕಲ್ಪನೆಯ ಒಳಹುಗಳಿವೆ. “ಹಳೇ ತೀರ್ಮಾನಕ್ಕೆ ನಾವು ಬದ್ಧರಾಗಬೇಕಾ? ಕಾಲ ಬದಲಾದಂತೆ ಕಾನೂನು ಬದಲಾಗಬೇಕಲ್ಲವಾ? ಸಮುದಾಯದ ಹಿತ ನಾವು ನೋಡಬೇಡವಾ? ನಮ್ಮ ಅನುಭವವನ್ನು ವಿಸ್ತರಿಸಿಕೊಳ್ಳಬೇಡವಾ? ದಂಡಹಾಕುವ ಪದ್ಧತಿ ಮುಂದುವರಿಸಿದರೆ ತರುಣರು ದಂಡಕೊಟ್ಟರಾಯಿತು ಎಂದು ಇದೇ ಕಸುಬು ಮಾಡಿದರೆ? ಅದರ ಬದಲಿಗೆ ನೀನು ತಪ್ಪು ಮಾಡಿದಿಯಾ, ಆದ್ದರಿಂದ ನೀನು ಅವಳನ್ನು ಕಟ್‌ಗೊಳ್ಳಬೇಕು ಅನ್ನುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡೋಣ. ಅದರಿಂದ ಜಾತಿಪದ್ಧತಿ ಕೊಂಚ ಸುಧಾರಿಸಬಹುದು.”

ಮಲೆನಾಡಿನ ಪರಿಸರದ ಚಿಂತನಶೀಲರ ಪ್ರಭಾವಕ್ಕೆ ಒಳಗಾದ ಚಿನ್ನಪ್ಪಗೌಡ ಮತ್ತು ಪಟೇಲರು ಪ್ರಭುತ್ವದ ನೆಲೆಯುಳ್ಳವರಾದರೂ ಆರೋಗ್ಯಕಾರೀ ಸ್ಥಿತ್ಯಂತರಗಳತ್ತ ಮುಖ ಮಾಡಿದವರಾಗಿ ಕಾಣಿಸುತ್ತಾರೆ. ಅಕ್ಕು ಮತ್ತು ಕಿಟ್ಟಪ್ಪಗೌಡರ ವಿವಾಹ ಸಂಬಂಧಕ್ಕೆ ವಿರೋಧ ಸೂಚಿಸುವವರ (ಶಿವಪ್ಪಗೌಡ, ಅಣ್ಣಪ್ಪಹೆಗಡೆ) ನಡುವೆ ಆದರ್ಶ ವ್ಯಕ್ತಿಗಳಾಗಿ ಕಾಣುತ್ತಾರೆ. ಇತಿಹಾಸದಲ್ಲಿ ನಡೆದುಹೋಗಿರುವ ಅಂತರ್ಜಾತಿ ವಿವಾಹ ಸಂಬಂಧಗಳನ್ನು ನೆನಪಿಸುತ್ತ ಅಕ್ಕುವಿನ ವಿವಾಹ ಸಂಬಂಧವನ್ನು ಸಮರ್ಥಿಸುವಾಗ ಮಾದರಿಯಾದ ವ್ಯಕ್ತಿತ್ವಕ್ಕೆ ಕಾರಣರಾಗುತ್ತಾರೆ. ‘ಒಬ್ಬಳು ಹೆಣ್ಣು ಮಗಳು ಹೋಟ್ಲು ಇಡತಾಳೆ ಅಂದರೆ ಸಂತೋಷಪಡಬೇಕು’ ಎನ್ನುವ ಚಿನ್ನಪ್ಪಗೌಡರ ಮಾತು ಬದುಕಿನ ಹೊಸಹಾದಿ ತುಳಿಯುವ ಸ್ತ್ರೀಯೊಬ್ಬಳ ಸ್ವಾತಂತ್ರ್ಯದ ಅನಿವಾರ್ಯತೆಯನ್ನು ಎತ್ತಿಹಿಡಿಯುವಂತಿದೆ. ‘ನಾವು ಒಬ್ಬರೆ ಬದುಕಬೇಕು ಅಂತ ಚಿಂತೆ ಮಾಡಬೇಡಿ ಬೇರೆಯವರು ಬದುಕಬೇಕು ಅಂತ ಚಿಂತೆ ಮಾಡಿ. ಆಗ ದೇವರ ಪೂಜೆ ಮಾಡೋದರಲ್ಲಿ ಸಾರ್ಥಕ ಇದೆ’ ಎನ್ನುವ ಗೌಡರ ಮಾತು ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತದೆ. ಕಾದಂಬರಿಯ ಮುಖ್ಯ ನಿಲುವು ಇರೋದೇ ಇಂಥ ನೆಲೆ – ಇದಕ್ಕೆ ಮುಖಾಮುಖಿ ಯಾಗುತ್ತ ಹೊಸ ಹೊಸ ಆವಿಷ್ಕಾರಗಳಿಗೆ ತರೆದುಕೊಳ್ಳಬೇಕೆಂಬ ಮುಕ್ತಮನಸ್ಸಿನ ನೆಲೆಗಳು ಕಾದಂಬರಿಯ ಸ್ವರೂಪವಾಗಿದ್ದು ಈ ಚೌಕಟ್ಟಿನಲ್ಲಿ ಅಕ್ಕು, ಸೋಮ ಅಂತಹವರ ತಳಸಂಸ್ಕೃತಿಯ ಬದುಕು ಸ್ವಾಭಿಮಾನದಿಂದ ತಲೆಎತ್ತುವ ಕ್ರಮಗಳ ಬಗೆಗೆ ಕಾದಂಬರಿಯ ಕಾಳಜಿ ಕೇಂದ್ರಿಕೃತವಾಗಿದೆ.

‘ಹೊಸಮನೆ ಗೌಡರು ಅಂಗಡಿ ಇಟ್ಟಿಲ್ವ? ಗದ್ದೆ ತ್ವಾಟ ನಂಬಿಕೊಂಡು ಅವರು ಕೂತಿದಾರಾ? ಹೆಗಡೇರು ರೈಸ್‌ಮಿಲ್‌ ಇಟ್ಟಿಲ್ವಾ? ಬೇರೆ ಬೇರೆ ಉದ್ಯೋಗ ಮಾಡಕು? ಅಕ್ಕುವಿನ ಈ ಮಾತುಗಳಲ್ಲಿ ಬದಲಾವಣೆಯ ಬಯಕೆಗಳಿವೆ. ಕೆಳವರ್ಗದವರ ಬದುಕಿನ ಮೇಲ್ಮುಖ ಚಲನೆಯ ಇಂಗಿತಗಳಿವೆ. ಹೀಗೆ ಸಾಮಾಜಿಕ ಶ್ರೇಣೀಕರಣದ ಪಲ್ಲಟಗಳ ಬಗೆಗೂ ಈ ಪಾತ್ರ ದನಿ ಎತ್ತುತ್ತದೆ. “ಅಕ್ಕು ತನ್ನ ಮಿತಿ ಸಾಧ್ಯತೆಗಳ ನಡುವೆ ಜೀವನವನ್ನು ರೂಪಿಸಿಕೊಳ್ಳುವ ಕ್ರಮ ಕುತೂಹಲಕಾರಿಯಾದುದು. ಕುವೆಂಪು ಅವರ ನಂಥರದ ಮಲೆನಾಡಿನ ಬದುಕಿನ ಸ್ಥಿತ್ಯಂತರಗಳ ಕಥನ ಇದಾಗಿದ್ದು ಭಾಷೆಯ ವೈವಿಧ್ಯ, ಪ್ರಗತಿಪರವಾದ ಬದಲಾವಣೆಗಳನ್ನು ಕುರಿತ ಒಲವು ಮುಂತಾದ ಸಂಗತಿಗಳಲ್ಲಿ ಕುವೆಂಪು ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದ್ದಾರೆ” (ಮುನ್ನುಡಿ). ಹೋಟೆಲ್‌ ಆರಂಭವಾಗುವ ವಿಷಯದ ಚರ್ಚೆಯೇ ಸಾಕಷ್ಟು ಪುಟಗಳನ್ನು ಆವರಿಸಿದೆ. ಸುಮಾರು ೧೪೦ ಪುಟಗಳ ನಂತರವೇ ಹೊಸ ಉದ್ಯೋಗ ಜಾರಿಗೆ ಬರುವುದು. ನಿಧಾನಗತಿಯ ಬೆಳವಣಿಗೆ ಕೊಂಚ ಅತಿಯಾಯಿತೆನಿಸಿದರೂ ಮೇಲಿಂದ ಮೇಲೆ ಬರುವ ಅದೇ ಸಂಗತಿಗಳು ಬೇಸರಕ್ಕೆ ಕಾರಣವಾಗುತ್ತವೆ. ಅಂತ್ಯದಲ್ಲಿ ಕಾದಂಬರಿ ತೆಗೆದುಕೊಳ್ಳುವ ತಿರುವಿನಿಂದ ಓದುಗರ ಗಂಭೀರ ಕುತೂಹಲಕ್ಕೂ ಕಾರಣವಾಗುತ್ತದೆ. ತಿಂಡಿಯ ಪರಿಭಾಷೆ, ವ್ಯಾಪಾರಿ, ಜಾನಪದ, ಪಂಚಾಯ್ತಿದಾರರ ಧೋರಣೆ ಹೊಸತಲೆಮಾರಿನ ಚಿಂತನೆ ಇವೆಲ್ಲ ಹೊಸ ಶೋಧನೆಯತ್ತ ದಾರಿಮಾಡಿಕೊಡುತ್ತವೆ. ಸಂಭಾಷಣಾ ರೀತಿಯ ಅತಿಗಿಂತ ನಿರೂಪಣೆಯ ಕಡೆಗೆ ಇನ್ನು ವಿಶೇಷ ಗಮನಹರಿಸಿದ್ದರೆ ಕಾದಂಬರಿಯ ಕಲಾತ್ಮಕತೆಗೆ ಮಹತ್ವ ಬರುತ್ತಿತ್ತು. ಆದರೂ ಇವತ್ತಿನ ಕನ್ನಡ ಕಾದಂಬರಿಯ ಮೇಲಿನ ಆಧುನಿಕತೆಯ ಚರ್ಚೆಯ ಸಂದರ್ಭದಲ್ಲಿ ಬಿಳುಮನೆ ರಾಮದಾಸರ ‘ಕರಾವಳಿ ಹುಡುಗಿ’ ಕಾದಂಬರಿಗೆ ಹೆಚ್ಚಿನ ಮಾನ್ಯತೆ ಇದೆ.

ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೂರುಬಾರಿ ಬಂದುಹೋದ ಗಾಂಧಿಯ ಬಗೆಗೆ ಹಾಗೂ ಅವರ ಮುಂದಾಳತ್ವದಲ್ಲಿ ಜರುಗುತ್ತಿದ್ದ ಚಳುವಳಿಗೆ ಸಾಮಾನ್ಯ ಜನತೆ ಪ್ರತಿಕ್ರಿಯಿಸಿದ ರೀತಿಯನ್ನು ಎಚ್‌. ನಾಗವೇಣಿಯವರ ‘ಗಾಂಧಿ ಬಂದ’ ಅರ್ಥಪೂರ್ಣವಾಗಿ ನಿರೂಪಿಸಿದೆ. ಗಾಂಧಿ ಆಶಯವನ್ನು ಹೊಂದಿದ್ದ ಕಾರ್ನಾಡ್‌ ಸದಾಶಿವರಾವ್‌, ಕುದ್ಮಲ್‌ ರಂಗರಾವ್‌ ಇವರುಗಳ ಸಂಗತಿಯನ್ನು ಇದು ಒಳಗೊಂಡಿದೆ. ಮೊದಲಬಾರಿಗೆ ಗಾಂಧಿ ಕನ್ನಡ ಜಿಲ್ಲೆಗೆ ಬರುವ ಸುದ್ದಿ ಹಬ್ಬುತ್ತಿದ್ದಂತೆಯೇ ಊರಿಗೆ ಊರೇ ಕುತೂಹಲಿಯಾಗುತ್ತದೆ. ‘ಗಾಂಧಿಯವರು ಪರಂಗಿ ಯನ್ನು ಓಡಿಸಲು ಪಡುವ ನಾಯಿಪಾಡನ್ನು ಕಾರ್ನಾಡ್‌ ಸದಾಶಿವರಾಯರು ಅದೆಷ್ಟು ಬಾರಿ ಮಾರಪ್ಪನಿಗೆ ಹೇಳಿದ್ದಿದೆ. “ಕಾದಂಬರಿಯ ಮತ್ತೊಂದು ಆಶಯವೆಂದರೆ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಊಳಿಗಮಾನ್ಯ ಪದ್ಧತಿ ಮತ್ತು ಪುರುಷ ಕೇಂದ್ರಿತ ಸಾಮಾಜಿಕ ವ್ಯವಸ್ಥೆ ಇವುಗಳಲ್ಲಿ ನರಳುತ್ತಿದ್ದ ಜೀತದಾಳುಗಳ ಮತ್ತು ಸ್ತ್ರೀಯರ ಪ್ರತಿಭಟೆನಯನ್ನು ದಾಖಲಿಸುವುದು ಎಂದರೆ, ಪರಕೀಯ ಪ್ರಭುತ್ವದ ವಿರುದ್ಧ ನಡೆಯುತ್ತಿದ್ದ ದೇಶವ್ಯಾಪಿ ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ ಸಕ್ರಿಯ ಪ್ರಭುತ್ವದಿಂದ ಮುಕ್ತಿ ಪಡೆಯಲು ಹೋರಾಡುತ್ತಿದ್ದ/ಹೋರಾಡಲು ಸಾಧ್ಯವಾಗದಿದ್ದ ಇತರ ಸ್ಥಳೀಯ ಸಮೂಹಗಳ ಚಿತ್ರಣ. ಇಂತಹ ಎರಡೂ ಬಗೆಯ ಆಂತರಿಕ ಮತ್ತು ಬಾಹ್ಯ ಸಂಘರ್ಷಗಳನ್ನು ದಾಖಲಿಸುವ ಲೇಖಕಿ ಆರಿಸಿಕೊಂಡಿರುವ ಕಥೆಯ ಚೌಕಟ್ಟು ಮಾತ್ರ ನಿರಾಶಾದಾಯಕವಾದ ವಿಧವಾವಿವಾಹ. ಪಟೇಲ ಸೀನಪ್ಪಯ್ಯ ಹೆಬ್ಬಾರರ ಮಗಳು ದ್ರೌಪದಿ ಹದಿನೆಂಟರ ಹರೆಯದಲ್ಲಿಯೇ ವಿಧವೆಯಾಗುತ್ತಾಳೆ. ಬಾಲ್ಯದಿಂದಲೇ ತನ್ನ ಒಡನಾಡಿಯಾಗಿದ್ದ ಬ್ಯಾರಿ ಯುವಕ ಅದ್ರಾಮನನ್ನು ಪ್ರೀತಿಸ ತೊಡಗುತ್ತಾಳೆ. ಎರಡೂ ಕಡೆಯ ಧಾರ್ಮಿಕ ಮುಖಂಡರ ತೀವ್ರ ವಿರೋಧದ ನಡುವೆ ಇವರಿಬ್ಬರ ಮದುವೆಯಾಗುತ್ತದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ತನ್ನನ್ನು ತೊಡಗಿಸಿಕೊಂಡ ಅದ್ರಾಮ ಒಂದು ಸಂದರ್ಭದಲ್ಲಿ ಪೋಲೀಸರ ಲಾಠಿಯೇಟಿಗೆ ಗುರಿಯಾಗಿ ಸಾಯುತ್ತಾನೆ, ದ್ರೌಪದಿ ಮತ್ತೊಮ್ಮೆ ವಿಧವೆಯಾಗುತ್ತಾಳೆ. ಕಥೆಯ ಸಾರಾಂಶದಿಂದಲೇ ಸ್ಪಷ್ಟವಾಗುವಂತೆ ಈ ಕಾದಂಬರಿಯೂ ಕನ್ನಡದ ಅತಿಮುಖ್ಯ ಧಾರೆಯಾದ ಸುಧಾರಣವಾದೀ ಕಾದಂಬರಿಯ ವರ್ಗಕ್ಕೆ ಸೇರುತ್ತದೆ. ಕನ್ನಡದ ಮೊದಲ ಕಾದಂಬರಿ ‘ಇಂದಿರಾಬಾಯಿ’ ತನ್ನ ವಿಧವಾವಿವಾಹ, ಸ್ತ್ರೀ ಶಿಕ್ಷಣ ಆಧುನಿಕ ಚಿಂತನೆ[1] ಇತ್ಯಾದಿ ಪ್ರಗತಿಪರ ಕಾಳಜಿ ಗಳಿಂದ ಸುಧಾರಣವಾದಿ ಕಾದಂಬರಿಯ ಪರಂಪರೆಯನ್ನು ನಿರ್ಮಿಸಿತು.” ಅದು ಪ್ರಕಟಗೊಂಡ ಮೂರು ವರ್ಷಗಳ ನಂತರ ‘ಗಾಂಧಿ ಬಂದ’ ಕಾದಂಬರಿ ಬಂದಿದೆ.

ಮಾನವೀಯತೆ ಇಲ್ಲದ ಧರ್ಮಶಾಸ್ತ್ರವನ್ನು ಧಿಕ್ಕರಿಸುವ ಮನಸ್ಥಿತಿ ದ್ರೌಪದಿಯದು. ಅದ್ರಾಮನ ಬಗೆಗೆ ಒಲವು. “ದ್ರೌಪದಿಯ ಕೊರಡಾಗಿರುವ ವ್ಯಕ್ತಿತ್ವ ಮುರಿದು ಬೀಳುತ್ತಿರುವ ಹೆಣ್ತನವನ್ನು ಜೋಪಾನವಾಗಿ ಎತ್ತಿಹಿಡಿದು ಅದಕ್ಕೆ ಇನ್ನಿಲ್ಲದಷ್ಟು ಜೀವಂತಿಕೆ ದೃಢತೆ ಬಲನೀಡಿ ಮತ್ತೆ ಚಿಗುರಿಸಬೇಕೆನ್ನುವ ಹಠದಿಂದ ಅದ್ರಾಮ ಸನಾತನ ಪರಂಪರೆಯ ಮೌಲ್ಯಗಳಲ್ಲಿರುವ ಮೌಢ್ಯತೆಯನ್ನು ಕುಟಿಲತೆಯನ್ನು ರಾಕ್ಷಸೀ ಗುಣವನ್ನು ಒಂದೊಂದಾಗಿಯೇ ಬಾಳೆದಿಂಡಿನ ಪದರ ಕಳಚಿದಂತೆ ಪದರ ಪದರವಾಗಿ ಕಳಚಿಟ್ಟು ಆಕೆಯ ಮನಕ್ಕೊಪ್ಪುವಂತೆ ವಿಶ್ಲೇಷಿಸುತ್ತ ಧರ್ಮದ ಒಟ್ಟಾರೆ ಒಳತಿರುಳೇನೆಂಬುದನ್ನು ಆಕೆ ಎದುರು ತೆರೆದಿಡಲು ಪ್ರಯತ್ನಿಸಿದ್ದ” (ಪುಟ.೪೫). ಮನುಷ್ಯರೆಂದರೆ ಎಲ್ಲರೂ ಒಂದೇ ಎಂಬ ಧೋರಣೆಯನ್ನು ಎತ್ತಿ ಹಿಡಿಯುವ ಕಾದಂಬರಿಯಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯವಿದೆ. “ಶೂದ್ರರ ಹಾರೈಕೆ ಬ್ರಾಹ್ಮಣರ ಅಸಹನೆ, ಅದ್ರಾಮನ ಸಂಭ್ರಮದ ನಡುವೆಯೇ ದ್ರೌಪದಿಯ ಬಸಿರು ಬಲಿಯಿತು ಗಂಡುಮಗುವಾಯಿತು, ಭರತಕುಮಾರನೆಂದು ನಾಮಕರಣವಾಗುತ್ತದೆ” (ಪುಟ.೩೨೨). ಗಾಂಧಿ ಬಂದಾಗ ದೇಶಪ್ರೇಮಿ ಅದ್ರಾಮನ ಬಗ್ಗೆ ವಿಧವೆ ಬಗ್ಗೆ ಗಾಂಧಿ ಗಮನ ಸೆಳೆಯುತ್ತಾರೆ. “ಗಾಂಧಿಯವರು ಇನ್ನೊಂದು ಕ್ಷಣವೂ ತಡಮಾಡದೆ ದ್ರೌಪದಿ ಬಳಿ ಧಾವಿಸಿದೊಡನೆ ಆಕೆ ಮಗನ ಸಮೇತ ಗಾಂಧಿಯ ಕಾಲಿಗೆರಗಿದಳು. ಈ ದೃಶ್ಯವನ್ನು ಕಂಡ ಜನಸ್ತೋಮ ಭಾವುಕರಾಗಿ ಅದ್ರಾಮನಿಗಾಗಿಯೇ ಏನೋ ತಾವು ಒಂದಷ್ಟು ಕಣ್ಣೀರ ಮುತ್ತುಗಳನ್ನು ಉರುಳಿಸಿದರು. ದಾರುವೂ ಅದೇ ಸಂದರ್ಭವೆಂದು ತಾನೂ ಗಾಂಧಿಯವರ ಕಾಲಿಗೆರಗಿದಳು” (ಪುಟ.೩೫೬). ಇವೆಲ್ಲ ಮನಕರಗಿಸುವ ದೃಶ್ಯಗಳು.

ಗಾಂಧಿ ಅನುಯಾಯಿ ಕಾರ್ನಾಡರಿಗೆ “ಧಾರುಣ ವೈಧವ್ಯದ ವ್ಯಥೆಯಲ್ಲಿ ಬೇಯುತ್ತಿರುವ ಮಹಿಳೆಗೆ ಬದುಕು ನೀಡುವುದೇ ನಿಜವಾದ ಮಾನವತೆ” ಎನಿಸಿದರೆ ಅನ್ಯಧರ್ಮದವರೊಂದಿಗೆ ವಿವಾಹ ಸಂಬಂಧ ಮಾಡಿದ್ದರಿಂದ ಬೇಸರಿಸಿಕೊಂಡ ಬ್ರಾಹ್ಮಣರು ಮಾಡಿದ ಉಪಾಯದಲ್ಲಿ ಮಡಿವಂತಿಕೆಯ ಮನಸ್ಸು ಕೆಲಸಮಾಡಿದೆ. “ಕೇವಲ ಬ್ರಾಹ್ಮಣ ಕುಲಕ್ಕೆ ಮಾತ್ರವೇ ಮೀಸಲಾಗಿರಬೇಕಾದ ಆ ಹೆಸರು ಇದೀಗ ಆ ಕೀಳು ಜಾತಿಯ ಮುಸಲ್ಮಾನನ ಜತೆಗಿರುವ ಆಕೆಗೆ ಸಲ್ಲುವಂತಾದ್ದೇ? ಇಲ್ಲ. ಇಂದಿನಿಂದಲೇ ಆಕೆಯ ಹೆಸರನ್ನು ಬದಲಿಸತಕ್ಕದ್ದು! ಬ್ರಾಹ್ಮಣರ ಬಾಯಲ್ಲಿ ಅಂದಿನಿಂದಲೇ ಆಕೆ ‘ದೋಪುಬ್ಯಾರ್ದಿ’ಯಾದಳು ಊರಿನ ಶೂದ್ರ ಮಕ್ಕಳಿಗೆ ಈ ಹೊಸ ನಾಮಕರಣವಂತೂ ಬಲು ಇಷ್ಟವಾಯಿತು”(ಪುಟ.೩೦೭). ಅಂತೂ ದ್ರೌಪದಿ ದೋಪುಬಾರ್ದಿಯಾಗುತ್ತಾಳೆ.

ಈ ಹಿನ್ನೆಲೆಯಲ್ಲಿ ಗಾಂಧಿ ಬಗೆಗಿನ ಆಕ್ರೋಶವೂ ಕಾದಂಬರಿಯಲ್ಲಿ ವ್ಯಕ್ತವಾಗದಿರದು: “ಇದೆಲ್ಲ ಗಾಂಧಿಯವರ ಕಾರುಬಾರು. ಮುಂಡೆಗಳಿಗೆ ಮದುವೆ ಮಾಡಿಸುವ ಉದು, ಮನ್ಸಮಾದಿಗರಿಗೆ ದೇವರ ಕೋಣೇಯಲ್ಲಿ ಮಣೆ ಇಕ್ಕುವುದು, ಕೈಯಲ್ಲಿರುವ ಜಪಮಣಿ ಕಿತ್ತು ಕೈಗೆ ತಕಲಿ ತುರುಕಿಸುವುದು?” – ಹೀಗೆ ವ್ಯಕ್ತವಾಗುವ ಹೆಬ್ಬಾರರ ಮಾತುಗಳಲ್ಲಿ ಆ ಧ್ವನಿ ಇದೆ. ಬರೀ ಉಪ್ಪಿಗಾಗಿ ತನ್ನ ಮಗ ಜೈಲಲ್ಲಿ ಭತ್ತಕುಟ್ಟಬೇಕಾಗುವುದಲ್ಲ ಎಂದು ಸೂರಕ್ಕನೂ ಗಾಂಧಿ ಸಂತಾನಕ್ಕೆಲ್ಲ ಶಪಿಸುತ್ತಾಳೆ (ಪುಟ. ೩೧೮). ಗಾಂಧಿ ಮುಖ್ಯವೋ ಗಂಡ ಮುಖ್ಯವೋ ಎಂಬ ಪ್ರಶ್ನೆ ಒಡ್ಡುತ್ತಲೇ ವೈಯಕ್ತಿಕ ವಿಷಯಗಳಿಗಿಂತ ದೇಶ ಮುಖ್ಯ ಅದರಲ್ಲೂ ಮನುಷ್ಯ ಸೆಕ್ಯುಲರ್ ಆಗಿರಬೇಕು ಎಂಬುದನ್ನು ಕಾದಂಬರಿ ಪ್ರತಿಪಾದಿಸುತ್ತದೆ. ಹಾಗಾಗಿ ಸಮಕಾಲೀನ ದ್ರೌಪದಿ – ಅದ್ರಾಮರ ಬದುಕು ಕೃತಿಯ ಕೇಂದ್ರವಾಗಿದ್ದರೂ ತುಳುನಾಡಿನ ಸಮಗ್ರ ಸಂಸ್ಕೃತಿಯನ್ನು ವ್ಯಾಪಕರೀತಿಯಲ್ಲಿ ಅಂತರ್ಗತವಾಗಿಸಿಕೊಂಡಿದೆ.

ಹಾಗಾಗಿ ಸಮಕಾಲೀನ ಸಂಸ್ಕೃತಿಯ ವಿವರಗಳು ಧಾರಾಳವಾಗಿ ಸನ್ನಿವೇಶಗಳ ಜೊತೆಯಲ್ಲಿ ಜೊತೆಗೂಡಿ ಬಂದಿವೆ. ದ್ರೌಪದಿ – ಅದ್ರಾಮರ ಮುಖ್ಯ ಕತೆಯ ಜೊತೆಯಲ್ಲಿಯೇ ನಿರೂಪಿತಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ‘ಗುತ್ತಿನಮನೆ’ ಯವರ ಹಾಗೂ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದವರ ಬದುಕು (ಶೂದ್ರರ/ಅಸ್ಪೃಶ್ಯರ) ಕುತೂಹಲಕಾರಿಯಾದುದು. ಪಾಂಡುಶೆಟ್ಟಿ, ಮೊಸುಡಿಗುತ್ತಿನ ತೌಡಶೆಟ್ಟಿ – ಇವರುಗಳು ಗುತ್ತಿನ ಮನೆಯವರ ವೈಭವದ ಬದುಕಿನ ಪ್ರತಿನಿಧಿಗಳೆಂಬಂತೆ ಗೋಚರವಾದರೆ ಕೊರಗತ ಐತು, ಅಂತಪ್ಪಪೂಜಾರಿ, ಅಂಗರಮೂಲ್ಯ, ಕೂಸಮೊಯಿಲಿ, ದೊಂಬಪೂಜಾರಿ ಮುಂತಾದವರು ಅನ್ಯಾಯಕ್ಕೊಳಗಾದವರನ್ನು ಪ್ರತಿನಿಧಿಸುತ್ತಾರೆ. ಗುತ್ತಿನ ಮನೆಯವರ ಶೋಷಣೆಗೆ ಒಳಗಾಗುವವರು ಈ ಸಮೂಹವೇ ಆಗಿದೆ. ಆಸ್ತಿ ಇಲ್ಲದವರ ಬದುಕನ್ನು ಸೂಕ್ಷ್ಮವಾಗಿ ಹಿಡಿದಿಡುವ ಈ ಕಾದಂಬರಿಯಲ್ಲಿ ಗಾಂಧಿ ಬರುತ್ತಿರುವ ಸೂಚನೆಯನ್ನು ದ್ರೌಪದಿ, ಅಂತಪ್ಪ, ಕೂಸಮೊಯಿಲಿ ಅವರಿಗೆ ತಿಳಿಸಿದಾಗ ಅವರ ಪ್ರತಿಕ್ರಿಯೆ ಹೀಗಿದೆ: “ಗಾಂಧಿಯವರು ಪರಂಗಿಯವರನ್ನು ಓಡಿಸಿದರೆ ನಮಗೆಂತಲಾಭ? ನಾವೇನಾದರೂ ನಿಮ್ಮ ಗದ್ದೆಯಲ್ಲಿ ದುಡಿಯುವುದು ತಪ್ಪುತಾ….? ಅವರಿದ್ರೂ ದುಡಿಯೋದೇ ಇವರಿದ್ರೂ ದುಡಿಯೋದೇ” (ಪುಟ.೧೬೩) ಗಾಂಧಿ ಮತ್ತು ಅವರ ಶಿಷ್ಯಂದಿರಾದ ಕಾರ್ನಾಡ್‌ ಸದಾಶಿವರಾವ್‌, ಮಾರಪ್ಪ ಇವರುಗಳ ದೆಸೆಯಿಂದ ಈ ಶೂದ್ರ ಜನಾಂಗದ ಬದುಕಿನಲ್ಲಿ ಆಶಾಕಿರಣ ಮೂಡುತ್ತದೆಂಬ ಸೂಚನೆಯನ್ನು ಕಾದಂಬರಿ ನೀಡುತ್ತದೆ.

“ಗಾಂಧಿ ಈ ಶೂದ್ರ ಜನಾಂಗದ ಬದುಕಿನಲ್ಲಿ ದಾಖಲಾದ ಬಗೆ ಬಾಯಿ ಕಳೆದುಕೊಂಡೇ ಬದುಕುತ್ತಿದ್ದ ಇವರಿಗೆ ಮಾತಾಡಲು ಹಚ್ಚಿದ ಪ್ರಸಂಗಗಳನ್ನು ಕಾದಂಬರಿ ತಣ್ಣಗೆ ತೆರೆದಿಡುತ್ತದೆ. ಅಬ್ಬೆ ಆವೇಶಗಳ ಹಂಗಿಗೊಳಗಾಗದೆ ಆಡಂಬರ ಅಟ್ಟಹಾಸಗಳ ಮರ್ಜಿಕಾಯದೆ ಅನುಭವಗಳನ್ನು ತಣ್ಣಗೆ ಹರವುದರಲ್ಲಿಯೇ ಕೃತಿಯ ವೈಶಿಷ್ಟ್ಯ ಅಡಗಿದೆ” (ಗೀತಾನಾಗಭೂಷಣ). ಗಾಂಧಿ, ಸ್ವಾತಂತ್ರ್ಯ – ಈ ಹಿನ್ನೆಲೆಯಲ್ಲಿ ಬಂದ ಪರಿವರ್ತನೆಗಳನ್ನು ‘ಗಾಂಧಿ ಬಂದ’ ಕಾದಂಬರಿ ಹಿಡಿದಿಡುತ್ತದೆ. ಗಾಂಧಿವಾದದ ಸಮಸ್ಯೆ, ಸಾಮಾಜಿಕ ಸಮಸ್ಯೆ – ಈ ಎರಡರ ಮುಖಾಮುಖಿ ಇದರಲ್ಲಿದೆ. ಗಾಂಧಿವಾದದ ಧೋರಣೆಗಳು ಗೊತ್ತಾಗದಂತೆಯೇ ನುಸುಳಿಕೊಂಡು ಬರುತ್ತವೆ. ಹಾಗೆ ಬರುವ ಮೂಲಕ ಗಾಂಧಿ ಎಷ್ಟರ ಮಟ್ಟಿಗೆ ಪ್ರಸ್ತುತರು ಎಂಬುದರತ್ತ ಓದುಗರು ಗಂಭೀರವಾಗಿ ಆಲೋಚಿಸುವಂತೆ ಮಾಡಿಬಿಡುತ್ತದೆ.

ಕೈಗಾರಿಕೀಕರಣದಿಂದಾಗಿ ನಮ್ಮ ಹಳ್ಳಿಗಳ ಅನೇಕ ಕೈ ಕಸುಬುಗಳು ನಶಿಸುತ್ತಾ ಬಂದವು. ಅಗಸ, ಅಕ್ಕಸಾಲಿ, ಚಮ್ಮಾರ, ಕಮ್ಮಾರ, ಕುಂಬಾರ ಮುಂತಾದ ಕಸುಬುದಾರರು ಕೆಟ್ಟು ಪಟ್ಟಣ ಸೇರುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಒಂದೊಂದು ಸ್ವಾವಲಂಬಿ ಘಟಕಗಳಾಗಿದ್ದು ಹಳ್ಳಿಗಳು ಈಗ ನಗರಗಳ ಕೃಪಾಪೋಷಣೆಗೆ ಕೈಯೊಡ್ಡಿ ನಿಲ್ಲುವ ದೈನೇಸಿ ಸ್ಥಿತಿಗೆ ನೂಕಲ್ಪಟ್ಟಿವೆ. ಗ್ರಾಮಾಂತರ ಕಸುಬುಗಳು ಕ್ರಮ ಕ್ರಮವಾಗಿ ಹೇಗೆ ಕೈಗಾರಿಕೀಕರಣಕ್ಕೆ ಒಳಗಾದವು ಎಂಬುದನ್ನೂ ಮತ್ತು ಅದರ ಸಾಧಕ ಬಾಧಕಗಳನ್ನೂ ಕಾ.ತ. ಚಿಕ್ಕಣ್ಣನವರ ‘ಮುಂಜಾವು’ ಪ್ರತಿಬಿಂಬಿಸುತ್ತದೆ. ಆಧುನಿಕ ಯಂತ್ರ ಕೈಗಾರಿಕೋತ್ಪನ್ನ ವಸ್ತುಗಳ ಎದುರು ಗೃಹ ಕೈಗಾರಿಕಾ ವಸ್ತುಗಳು ಪೈಪೋಟಿಗೆ ನಿಂತು ಬದುಕಲು ಸಾಧ್ಯವಿಲ್ಲ; ಇದು ಸ್ವಾಭಾವಿಕವೇ. ಆದರೆ ಈವರೆಗೆ ತಮ್ಮ ಕಸುಬುಗಳನ್ನು ನೆಚ್ಚಿಕೊಂಡು ಉಪಜೀವನ ಮಾಡುತ್ತ ಮಾನವಂತರಾಗಿ ಬದುಕುತ್ತಿದ್ದ ಕಸಬದಾರರು, ಕೇಳುವವರಿಲ್ಲದೆ ಅಲಕ್ಷ್ಯಕ್ಕೀಡಾಗಿ ಮಾನನಷ್ಟಕ್ಕೊಳಗಾದರು. ಗ್ರಾಮೀಣ ಜಗತ್ತಿನಲ್ಲಿ ಅವರಿಗೆ ಮೊದಲಿದ್ದ ಸ್ಥಾನ – ಮಾನ ಕುಸಿದು, ಆರ್ಥಿಕ ದಿವಾಳಿತನದೊಂದಿಗೆ ಅವಮರ್ಯಾದೆಗೂ ಗುರಿಯಾದರು. ಈ ಸ್ಥಿತ್ಯಂತರ ಸ್ಥಿತಿಯಲ್ಲಿ ಕೊಪಗಳಿ ಎಂಬ ಊರಿನ ಕಸ್ತೂರಿ ಎಂಬ ಕುಂಬಾರ ಮತ್ತು ಅವನ ಮಗ ತಿಮ್ಮಾಜಿ ಆ ಊರಿನಲ್ಲಿ ಅನುಭವಿಸಿದ ಅಸಹಾಯಕ ಪರಿಸ್ಥಿತಿ ಮತ್ತು ಮಾನವಂತಿಕೆಯ ನಷ್ಟ ಇದನ್ನು ಕುರಿತು ಮುಂಜಾವು ಹೇಳಹೊರಟಿದೆ”[2]

ಈ ಕಾದಂಬರಿಯ ವಸ್ತು ನವ್ಯೋತ್ತದ್ದು. ಕಸ್ತೂರಿ ಎನ್ನುವ ಬಡಕುಂಬಾರನೊಬ್ಬನ ಕಥೆ. ಹಳ್ಳಿಯ ಪ್ರತಿಷ್ಠಿತರ ಜೊತೆಯಲ್ಲಿ ಶ್ರಮವಹಿಸಿ ಬದುಕಿದ ಕಥೆ. ಆತನ ಮಗ ತಿಮ್ಮಾಜಿ ಹೊಸ ಜನಾಂಗದ ವ್ಯಕ್ತಿ. ಈ ಕೃತಿಗೆ ಮುನ್ನುಡಿಯನ್ನು ಬರೆದಿರುವ ಡಿ.ಆರ್. ನಾಗರಾಜ್‌ ಹೇಳುವಂತೆ “ಹಿಂದಿನ ತಲೆಮಾರಿನ ಸಾಹಿತ್ಯಕ್ಕೆ ಬಡವರಲ್ಲಿ ಕಸ್ತೂರಿ ಮಾತ್ರಗೊತ್ತಿತ್ತು. ಆತನ ತಾಳ್ಮೆ, ಜೀವನ ಪ್ರೀತಿ, ಮುಗ್ಧತೆ ಮಾತ್ರ ಗೊತ್ತಿತ್ತು. ಈ ತಲೆಮಾರಿನ ಸಾಹಿತ್ಯಕ್ಕೆ ತಿಮ್ಮಾಜಿ ಸಿಟ್ಟು, ದಂಗೆ ಏಳುವ ಧೈರ್ಯ ಮಾತ್ರ ಗೊತ್ತು. ಆದರೆ ಚಿಕ್ಕಣ್ಣ ಈ ಎರಡು ತಲೆಮಾರಿನ ಇಬ್ಬರು ವ್ಯಕ್ತಿಗಳ ಕಥೆ ಹೇಳುವಲ್ಲಿ ಅಪಾರ ಕಲಾತ್ಮಕ ಜಾಣತನ ತೋರಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದಟ್ಟ ಮಾನವ ಪ್ರೀತಿಯಿಂದ ಕಥೆ ಹೇಳಿದ್ದಾರೆ. ಆದ್ದರಿಂದ, ತಿಮ್ಮಾಜಿಯ ಬಗ್ಗೆ ಪ್ರೀತಿಯಿದ್ದೂ ಕಥೆ ಕಸ್ತೂರಿಯ ಕಡೆಗೇ ವಾಲಿದೆ” (ಪುಟ.IV).

ಇವತ್ತಿನ ಬಂಡವಾಳಶಾಹಿ ಯುಗದಲ್ಲಿ ಕಸ್ತೂರಿಯ ಕುಂಬಾರಿಕೆ ಅರ್ಥಕಳೆದುಕೊಳ್ಳುತ್ತಿದೆ..ವೃತ್ತಿ ಪ್ರಧಾನವಾದ ಕುಂಬಾರಿಕೆಯಂಥ ಕಸುಬುಗಳು ಮತ್ತು ಈ ಕಲೆಗೆ ಸಂಬಂಧಿಸಿದ ಬುದ್ಧಿವಂತಿಕೆ ಇವೆಲ್ಲ ಪ್ರಸ್ತುತ ದಿನಗಳಲ್ಲಿ ಮೌಲ್ಯವನ್ನು ಕಳೆದುಕೊಳ್ಳುವಂತಾಗಿದೆ. ಇದು ಹಳ್ಳಿಯ ಕುಶಲಕರ್ಮಿಗಳ ಬದುಕಿನ ದುರಂತವಾಗಿ ಕಾಣಿಸುತ್ತದೆ. ಜಾಗತೀಕರಣದ ಸಂದರ್ಭದಲ್ಲಿ ಕಸ್ತೂರಿಯ ಕುಂಬಾರಿಕೆಯ ಕಥೆ ದುರಂತ ಕಥೆಯಾಗಿ ಕಾಣಿಸುತ್ತದೆ. ಕಾದಂಬರಿಯ ಕಡೆಯಲಿ ಮಡಿಕೆ ಗಡಿಗೆಗಳನ್ನು ಹಳ್ಳಿಯ ಪ್ರತಿಷ್ಠಿತ ಪುಂಡರು ನುಚ್ಚುನೂರು ಮಾಡುತ್ತಾರೆ. ಕಾದಂಬರಿ ಇದನ್ನು ಸಾಕಷ್ಟು ಸಂಯಮದಿಂದ ಹೇಳಲು ಪ್ರಯತ್ನಿಸಿ ಯಶಸ್ವಿಯಾಗಿರುವ ಕಾರಣ ದುರಂತವನ್ನು ಭೀಕರವೆನ್ನಿಸದ ರೀತಿಯಲ್ಲಿ ಹೇಳಬಲ್ಲ ಕಥಾನಕದ ರೂಪ ಎದ್ದು ಕಾಣುತ್ತದೆ.

“ತಿಮ್ಮಾಜಿ ಕಾಲು ಮುರಿದುಕೊಂಡು ಪೇಟೆಯಲ್ಲಿದ್ದಾಗ, ಹೊಟ್ಟೆಪಾಡಿಗಾಗಿ ಒಬ್ಬ ಲಾರಿ ಮಾಲೀಕನ ಬಳಿ ಕಾವಲುಗಾರನಾಗಬೇಕಾಯಿತು. ಆದರೆ ಹೋಗಿಬರುವ ಲಾರಿಗಳ ಲೆಕ್ಕ ಇಡಲು ತಿಳಿಯದೆ ಆತ ಬೈಸಿಕೊಂಡ. ಆಗ ಛಲಗಾರನಾದ ಆ ಹುಡುಗ ಲಾರಿ ಡ್ರೈವರ್ ಒಬ್ಬನಿಂದ ಓದಲು ಬರೆಯಲು ಕಲಿತು ತನ್ನ ಹೊಟ್ಟೆಪಾಡಿನ ಕಾವಲು ಕೆಲಸವನ್ನು ಉಳಿಸಿಕೊಂಡ. ಈ ಅಕ್ಷರವಿದ್ಯೆ ತಿಮ್ಮಾಜಿಯ ಕೈಗೆ ಒಂದು ಹೊಸ ಅಸ್ತ್ರವೇ ಸಿಕ್ಕಂತಾಯಿತು. ಅವನ ಕಣ್ಣುಗಳು ತಿಳುವಳಿಕೆಯಿಂದ ಹೊಳಪಾದವು. ಬದುಕು ಒಡ್ಡಿದ ಸವಾಲು ತಿಮ್ಮಾಜಿಗೆ ಅಕ್ಷರ ವಿದ್ಯೆಯನ್ನು ಪಡೆಯಲು ಪ್ರಚೋದನೆ ನೀಡಿತು. ‘ನಾಕಕುಸರ ಕಲಿಸೋ’! ಅಪ್ಪನ ಕನಸು ನನಸು ಮಾಡಿದ. ಮೇಲಿನ ಕೆಲವು ಅನ್ವೇಷಣೆಗಳನ್ನು ವಿಶ್ಲೇಷಿಸಿದಾಗ, ಬಡವರ ಬದುಕಿನ ಮುಖ್ಯಾನುಭವವಿರುವುದು ಅವರ ಗೋಳಿನಲ್ಲಲ್ಲ. ಆ ಗೋಳನ್ನು ಮೀರುವ ಅವರ ಕ್ರಿಯಾಶೀಲತೆಯಲ್ಲಿ – ಎಂಬ ಮಾತು ಸ್ಪಷ್ಟವಾಗುತ್ತದೆ. ಮುಂಜಾವು ಕಾದಂಬರಿಯ ಉದ್ದಕ್ಕೂ ಹೀಗೆ ಹೋರಾಡಲು ಬದುಕನ್ನು ಬದುಕಿನ ಇನ್ನೂ ಅನೇಕ ಜೀವಿಗಳುಂಟು” (ಸಾಹಿತ್ಯ ಪರಿಸರ). ಕಾದಂಬರಿಯಲ್ಲಿ ವೃತ್ತಿಯನ್ನು ಆಧುನೀಕರಣಗೊಳಿಸುವುದರ ಮೂಲಕ ತಿಮ್ಮಾಜಿ ಸಾಮಾಜಿಕ ಸಂಘರ್ಷಕ್ಕೆ ನಿಲ್ಲಬೇಕಾಗುತ್ತದೆ. ಬಾಳಾಚಾರಿ ಸಂಘರ್ಷವನ್ನು ಎದುರಿಸಿ ಬದುಕಿದರೆ ತಿಮ್ಮಾಜಿ ಎದುರಿಸಲಾಗದೆ ಊರುಬಿಡುತ್ತಾನೆ.

ಕಾರ್ಯಕಾರಣ ಸಂಬಂಧಗಳನ್ನು ಅನ್ವೇಷಿಸುತ್ತ ತರ್ಕಬದ್ಧವಾಗಿ ಆಲೋಚಿಸುತ್ತ ಸೃಜನಶೀಲರಾಗುವುದನ್ನ – ಆಗುತ್ತಿರುವುದನ್ನ ನಿಜ ಬದುಕಿನಲ್ಲೂ ಕಾಣುತ್ತಿದ್ದೇವೆ. ಬದುಕಿನ ಪ್ರತಿಬಿಂಬವಾಗಿರುವ ಸಾಹಿತ್ಯದಲ್ಲೂ ಅದರ ಅಭಿವ್ಯಕ್ತಿ ಇದ್ದೇ ಇರುತ್ತದೆ. ಮನುಷ್ಯನಿಗೆ ತರ್ಕಬದ್ಧವಾಗಿ ಚಿಂತಿಸುವ ಶಕ್ತಿ ಮುಖ್ಯ. ಈಗ ಯಾವುದೇ ಸಂಗತಿ ಯನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವ ವಾತಾವರಣವೇ ಇಲ್ಲ. ಎಲ್ಲವನ್ನು ವಿಚಾರ ಮಾಡಿಯೇ ಸ್ವೀಕರಿಸಲಾಗುತ್ತದೆ. ಹಾಗಾಗಿ ವೈಚಾರಿಕತೆ ಎನ್ನುವುದು ಆಧುನಿಕತೆಯ ಪ್ರಮುಖ ಲಕ್ಷಣ. ಆದ್ದರಿಂದ ಪ್ರಭುಶಂಕರ ಅವರು ಹೇಳುವ ಈ ಅಭಿಪ್ರಾಯಗಳು ಸಮಂಜಸವೆನಿಸುತ್ತದೆ.”[3] “ಜೀವನದ ವಿಷಯದಲ್ಲಿ ಭೌತಿಕ ಘಟನೆಗಳ ವಿಷಯದಲ್ಲಿ ವಿಜ್ಞಾನವು ನೀಡಿರುವ ತೀರ್ಮಾನಗಳನ್ನು ಸ್ವೀಕರಿಸುವುದು ಕ್ಷೇಮ.”

“ವರ್ಗ ವರ್ಣ ಜಾತಿಗಳ ನಾಶ. ಇವುಗಳಿಂದ ಈ ದೇಶಕ್ಕೆ ಆಗಿರುವ ಹಾನಿಗೆ ಮಿತಿಯೇ ಇಲ್ಲ. ಇದನ್ನು ಒಪ್ಪಿ ಸ್ವೀಕರಿಸದಿದ್ದರೆ ಆಧುನಿಕತನ ಪ್ರವೇಶವಿಲ್ಲ.”

“ಯಾವುದೇ ವಿಧವಾದ ಮೂಢನಂಬಿಕೆಗಳಿಗೂ ಆಸ್ಪದ ಕೊಡದೆ ಇರುವುದು.”

“ಸಮಾಜದ ಎಲ್ಲ ಸ್ತರಗಳಲ್ಲೂ ಅತ್ಯುನ್ನತ ಪದವಿಯಲ್ಲಿರುವುದರಿಂದ ಹಿಡಿದು ಮೋಚಿ ಬೆಸ್ತನವರೆಗೂ ಪರಿಚಯ ಪಡೆದಿರುವುದು.”

ಈ ಆಶಯಗಳನ್ನು ಬಂಡಾಯದ ಲೇಖಕರು ಮೈಗೂಡಿಸಿಕೊಂಡಿರುವ ರೀತಿಯನ್ನ ಅವರ ಕಾದಂಬರಿಗಳು ನಿರೂಪಿಸುತ್ತವೆ. ದಲಿತ ಬಂಡಾಯ ಚಳುವಳಿಯ ಫಲವಾಗಿ ವಿವಿಧ ವರ್ಗದ ಬರಹಗಾರರು ತಮ್ಮ ಪರಿಸರದ / ಸಮುದಾಯದ ಭಾವನೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಅಭಿವ್ಯಕ್ತಿಸಲು ಸಾಧ್ಯವಾಯಿತು. ಆಡು ಭಾಷೆಯ ಪ್ರಯೋಗದಿಂದಾಗಿಯೂ ಅದ್ಭುತ ಪರಿಣಾಮ ಉಂಟಾಯಿತು. ಭಾಷೆಯಲ್ಲಿ ಆಧುನಿಕತೆಯಿಂದಾಗಿಯೂ ತಮ್ಮಿಂದ ರೂಪುಗೊಂಡ ಕೃತಿಗಳಿಗೆ ಮತ್ತಷ್ಟು ಮೌಲಿಕತೆ ಸಾಧ್ಯವಾಯಿತು.

ಇತ್ತೀಚಿನ ವಿನ್ಯಾಸಗಳು

ಉಸಿರುಗಟ್ಟಿಸುವ ತಾಣಗಳಿಂದ ಬಂದ ಬರಹಗಾರರಿಗೆ ತನ್ನೆಲ್ಲ ಅನುಭವ ವೈಚಿತ್ರ್ಯಗಳನ್ನ ತೆರೆದಿಡುವುದಕ್ಕೆ ಕಾದಂಬರಿ ಸಮರ್ಥ ಮಾಧ್ಯಮವಾಯಿತು. ಸಮಕಾಲೀನ ಕನ್ನಡ ಸಾಹಿತ್ಯ ಕೂಡ ತನ್ನ ಅನುಭವದ ಹೊಸ ಹೊಸ ಬಾಗಿಲುಗಳನ್ನ ತೆರೆದು ಕೊಂಡಂತೆ ವೈವಿಧ್ಯತೆ ಮತ್ತು ಸಮೃದ್ಧಿಗಳನ್ನು ಕಾಣಿಸಿರುವುದು. ಈ ಪ್ರಕಾರದಲ್ಲಿಯೇ. ಸಾಮಾಜಿಕ ಅರಿವು ಹೊಸ ಹೊಸ ಅಭಿವ್ಯಕ್ತಿ ಕ್ರಮ ಮೌಲ್ಯಪ್ರತಿಪಾದನೆ ಇವೆಲ್ಲ ಮುಪ್ಪುರಿಗೊಂಡು ಈ ಪ್ರಕಾರ ಗಟ್ಟಿಯಾಯಿತು. ಆದರೆ ಈಗಿನ ಕಾದಂಬರಿಗಳ ರಚನಾಕ್ರಮ ೭೦ರ ದಶಕದ ವಾತಾವರಣಕ್ಕಿಂತ ಭಿನ್ನವಾದುದು. ವಿಭಕ್ತ ಕುಟುಂಬಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಅಂತರಂಗದ ಸಮಸ್ಯೆಗಳು ಕಥನಕ್ಕೆ ಪ್ರಧಾನವಾಗುವುದಕ್ಕಿಂತ ಆಧುನಿಕ ತಂತ್ರಜ್ಞಾನದ ಜೊತೆ ಜೊತೆಯಲ್ಲಿ ವೈಯಕ್ತಿಕ ಸಮಸ್ಯೆಗಳನ್ನು ಸಾಂಗತ್ಯಗೊಳಿಸುವ ಯತ್ನಗಳೇ ಹೆಚ್ಚುತ್ತಿವೆ. ಬೇರೆ ಬೇರೆ ಜ್ಞಾನ ಶಾಖೆಗಳೊಂದಿಗೆ ಸಾಹಿತ್ಯ ಸಂಗತಿಗಳು ಸಂಬಂಧ ಹೊಂದಿದ್ದು ಹೊಸರೂಪ ಪಡೆಯುವ ಪ್ರಯತ್ನದಲ್ಲೂ ಇವೆ. ಪರಂಪರೆ, ಇತಿಹಾಸ, ಜನಾಂಗ – ಇತ್ಯಾದಿಗಳೊಂದಿಗೆ ಸಾಮಾಜಿಕ ಸಮಸ್ಯೆಗಳನ್ನು ತೆಕ್ಕೆಗೊಳಿಸಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ವಿದೇಶಗಳಲ್ಲಿ ನೆಲೆಸಿದ ಕನ್ನಡಿಗರು ಅಲ್ಲಿಯ ಸಮಸ್ಯೆಗಳನ್ನು ಕನ್ನಡ ನೆಲದ ಹಿನ್ನೆಲೆಯಲ್ಲಿ ಬರೆಯುವುದೂ ಹೆಚ್ಚಾಗಿದೆ. ಗಿರಿಯವರ ‘ಗತಿಸ್ಥಿತಿ’ಯ ನಂತರ ಯಥೇಚ್ಛವಾಗಿ ಇಂಥ ಬರಹಗಳು ಗೋಚರವಾದವು. ಹೀಗಾಗಿ ಸ್ಥಳೀಯ ವಿದ್ಯಮಾನಗಳನ್ನು ಜಾಗತೀಕರಣ, ಯಾಂತ್ರೀಕರಣ, ಆರ್ಥಿಕ ಉದಾರೀಕರಣಗಳ ಹಿನ್ನೆಲೆಯಲ್ಲಿ ನೋಡುವುದೂ ಮುಖ್ಯವಾಗುತ್ತಿರುವಾಗ ದಲಿತರ ಕಥನಗಳು ವಿವಿಧ ವಿನ್ಯಾಸಗಳನ್ನು ಹೊಂದುತ್ತಿವೆ. ಯಾರೂ ತಮ್ಮ ರಚನೆಗಳಲ್ಲಿ ಆರ್ಥಿಕ ಸಮಸ್ಯೆಯನ್ನ ಮುಂದು ಮಾಡದಿದ್ದರೂ ಸಮಸ್ಯೆಗಳು ಮಾತ್ರ ಅನಂತವಾಗಿವೆ ಎಂಬುದನ್ನು ಒಪ್ಪಿಕೊಂಡಿರುವಂತಿದೆ. ಆದ್ದರಿಂದ ಈಗಿನ ಕಾದಂಬರಿಗಳಲ್ಲಿ ಯಾವ ಸಿದ್ಧ ಮಾದರಿಗಳೂ ಇಲ್ಲದಿರುವುದು ಆಶ್ಚರ್ಯದ ಸಂಗತಿಯಾಗಿದೆ. ಪ್ರಾದೇಶಿಕವೆನ್ನಬಹುದಾದ ಕಾದಂಬರಿಗಳೂ ಕಡಿಮೆಯಾಗುತ್ತಿದ್ದು ಆಧುನಿಕ ತಂತ್ರಜ್ಞಾನದ ಜೊತೆಯಲ್ಲಿ ನೆನಪುಗಳನ್ನು ಬಿಚ್ಚಿಡುವ ಕೆಲಸ ಮಾತ್ರವೇ ನಡೆಯುತ್ತಿದೆ. ಮಲೆನಾಡಿನ ಬದುಕನ್ನ ಶೂದ್ರನೆಲೆಗಳ ಪರಿವರ್ತನಶೀಲತೆಯನ್ನ ಕುವೆಂಪು, ತೇಜಸ್ವಿಯವರಿಗಿಂತ ಭಿನ್ನ ನೆಲೆಯಲ್ಲಿ ನೋಡಿದ ಪ್ರಾಮಾಣಿಕ ಪ್ರಯತ್ನವಾಗಿ ಲಕ್ಷ್ಮಣಕೊಡಸೆ ಅವರ ‘ಭೂಮಿಹುಣ್ಣಿಮೆ’ ‘ಪಯಣ’ ಕಾದಂಬರಿಗಳು ಕಂಡುಬಂದವು. ಕುಲವೃತ್ತಿಯ ಭಾಗವಾಗಿ ಬಂದ ಆಚರಣೆಗಳನ್ನು ನೆನಪಿಗೆ ತರುತ್ತಲೇ ಸಮದ್ಧ ಬದುಕಿನ ಗರ್ಭದಿಂದಲೇ ವಿಘಟಿತಗೊಳ್ಳುತ್ತಿರುವ ಕೌಟುಂಬಿಕ ಸ್ಥಿತಿಯತ್ತ ಗಮನಹರಿಸಿದವು. ಕಾಲಕ್ರಮದಲ್ಲಿ ಕುಟುಂಬಗಳಲ್ಲಾದ ವಿಘಟನೆಯನ್ನ, ಆಧುನಿಕ ಶಿಕ್ಷಣದ ಪರಿಣಾಮದಿಂದಾಗ ಬದುಕಿನ ಪಲ್ಲಟಗಳನ್ನೂ ಕೊಡಸೆ ಅವರ‍ ಆಕರ್ಷಕ ಶೈಲಿ ತಮ್ಮ ಕಾದಂಬರಿಗಳನ್ನು ಯಶಸ್ವಿಯಾಗಿಸಿದೆ.

ಹಳೆಯ ಬದುಕಿನ ಕ್ರಮ ಮತ್ತು ನೆನಪುಗಳನ್ನು ಆಧುನಿಕವಾಗಿ ಕಟ್ಟಿಕೊಡುವ ಕೆಲಸವೂ ನಡೆಯಿತು. ನವೋದಯವೂ ಅಲ್ಲದ ನವ್ಯವೂ ಅಲ್ಲದ ದಲಿತ ಬಂಡಾಯವೂ ಅಲ್ಲದ ನೆಲೆಯಲ್ಲಿ ಕಾದಂಬರಿಯ ರಚನಾಕ್ರಮ ಸಿದ್ಧಗೊಂಡಿತು. ರಾಘವೇಂದ್ರ ಪಾಟೀಲರ ‘ತೇರು’, ಚಂದ್ರಶೇಖರ ಕಂಬಾರರ ‘ಶಿಖರ ಸೂರ್ಯ’, ಕು.ವೀರಭದ್ರಪ್ಪನವರ ‘ಅರಮನೆ’, ಶ್ರೀನಿವಾಸವೈದ್ಯ ಅವರ ‘ಹಳ್ಳ ಬಂತು ಹಳ್ಳ’ ಮುಂತಾದವುಗಳನ್ನ ಹೆಸರಿಸಬಹುದು. ತೇರಿನ ಮತ್ತು ರಕ್ತತಿಲಕದ ಸಂಗತಿಗಳು ಗೊಂದಲಿಗರ ಗಾಯನ ಪರಂಪರೆಯ ಮೂಲಕ ರಾಘವೇಂದ್ರ ಪಾಟೀಲರ ‘ತೇರು ಕಾದಂಬರಿಯ ಕಥನ ಹರಿದುಬರುತ್ತದೆ. ನಾಲ್ಕು ತಲೆಮಾರಿನ ಕಥೆಯನ್ನ ಒಳಗೊಂಡಿರುವ ಈ ಕಥನವನ್ನು ಆಧುನಿಕ ಪುರಾಣವೆನ್ನಲಾಯಿತು. ಕಂಬಾರರ ‘ಶಿಖರ ಸೂರ್ಯ’ದಲ್ಲಿ ಎಚ್‌.ಎಸ್‌. ಶಿವಪ್ರಕಾಶ್‌ ಹೇಳುವಂತೆ ಕಥೆ, ಪುರಾಣ, ಹಾಡು, ಕುಣಿತ, ಕವಿತೆ, ಗಾದೆ, ಒಗಟು, ಯುದ್ಧ ಕಲೆ ಎಲ್ಲಕ್ಕೂ ಇಲ್ಲಿ ಜಾಗ ಉಂಟು. ಆದಿಮ ಕತೆಗಳು ಬ್ರಹ್ಮಾಂಡ ಕಲ್ಪನೆಯ ರಚನೆಯ ಒಳಗೆ ಇಂದಿನ ದಂದುಗಗನ್ನ ಕವಿ ಕಂಬಾರರು ಹೊಂದಿಸಿರುವ ರೀತಿ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಮಲ್ಲಿಕಾರ್ಜುನ ಹಿರೇಮಠರ ‘ಹವನ ಕಾದಂಬರಿಯ ಘಟನೆಗಳು ನಡೆಯುವುದು ಒಂದು ಲಂಬಾಣಿ ತಾಂಡದಲ್ಲಿ. ಆ ಸಮುದಾಯದ ಬದುಕಿನ ಪರಂಪರೆ ಅದು ಕ್ರಮೇಣ ಪಲ್ಲಟಗೊಂಡ ಪ್ರಕ್ರಿಯೆಯನ್ನು ದಾಖಲಿಸುವುದೇ ಇದರ ಮುಖ್ಯ ಉದ್ದೇಶ. ನನ್ನ ಜನರು ಎಂಬರ್ಥದ ಶಾಂತನಾಯಕ ಶಿರಗಾನಹಳ್ಳಿಯವರ ‘ಗೋ‌ರ್ ಮಾಟಿ’ಯೂ ಲಂಬಾಣಿ ಸಮುದಾಯದ ವಿವರಗಳನ್ನ ಒಳಗೊಂಡದ್ದೇ ಆಗಿದೆ. ವಿದ್ಯಾಭ್ಯಾಸದ ಹಂಬಲ ಉದ್ಯೋಗದ ಹುಡುಕಾಟ ಹಾಗೂ ಗ್ರಾಮೀಣ ಜೀವನದಲ್ಲಿ ರೈತಾಪಿಯಾಗಿ ನೆಲೆಯೂರುವ ಪ್ರಯತ್ನಗಳ ಜೊತೆ ಸಮುದಾಯದೊಳಗೇ ಇರುವ ಬಿರುಕುಗಳು ಅಡ್ಡ ಪ್ರವೃತ್ತಿಗಳ ಈ ಕಾದಂಬರಿಯ ವಸ್ತು ಇದು ಲಂಬಾಣಿ ಸಮುದಾಯದ ಸ್ಥಿತ್ಯಂತರಗಳ ಸಾಮಾಜಿಕ ದಾಖಲೆ ಎಂಬಂತೆಯೂ ಗಮನಾರ್ಹವಾಗಿದೆ. ಸಮಾಜದ ವಿವಿಧ ಸಮುದಾಯಗಳ ಒಳಕುದಿಯನ್ನು ಬದಲಾವಣೆಗಳೂ ಆವರಿಸುತ್ತಿರುವ ಪರಿಯನ್ನು ನಮ್ಮೆದುರಿಗಿಡುವ ಇಂತಹ ಬರೆಹಗಳು ಒಟ್ಟಾರೆ ನಮ್ಮ ಸಾಹಿತ್ಯ ಸತ್ವಕ್ಕೆ ಮತ್ತಷ್ಟು ಜೀವ ತುಂಬುತ್ತವೆ. ಕಾದಂಬರಿಯಲ್ಲಿ ಬಳಕೆಯಾಗಿರುವ ದಾವಣಗೆರೆ ಸೀಮೆಯ ತಾಂಡಾಗಳ ಆಡುಭಾಷೆ ಹಾಗೂ ನಿರೂಪಣಾಶೈಲಿ ಕೃತಿಗೆ ಶಕ್ತಿ ತುಂಬುವ ಅಂಶಗಳಾಗಿವೆ (ಬಂಜಗೆರೆ).

ತಳಸಮುದಾಯದ್ದೇ ಆಗಿದ್ದರೂ ಇದಕ್ಕಿಂತಲೂ ಭಿನ್ನಧೋರಣೆಯ ಕನ್ನಡ ಕಾದಂಬರಿ ಲೋಕಕ್ಕೆ ವಿಶಿಷ್ಟವೆನಿಸುವ ರಚನೆಯೆಂದರೆ ಮೊಗಳ್ಳಿ ಗಣೇಶರ ‘ಅನಾದಿ’. ಯಾಕೆಂದರೆ ಇಲ್ಲಿಯ ‘ಅನಾದಿ’ ಊರು ಸ್ವಚ್ಛ ಮಾಡುವವನು. ಊರಗೌಡನ ಜೊತೆ ಹೋಗಿ ಜಾತಿಮೀರಿ ಸಂಬಂಧ ಬೆಳೆಸುವವನು. ಅನಾಥನೂ ಸಚ್ಚಾರಿತ್ರ್ಯವುಳ್ಳವನೂ ಆದ ಈತ ಅರಿಯದೆಯೇ ಉಚ್ಚ ವರ್ಗದವಳ ಸಹವಾಸ ಮಾಡುತ್ತಾನೆ. ಅವಳೂ ಇವನನ್ನು ಬಯಸುತ್ತಾಳೆ.. ಸಂಬಂಧಗಳ ಬೆಸುಗೆಯಲ್ಲಿ ಎಲ್ಲೂ ಸಂಘರ್ಷ ಕಾಣಿಸುವುದಿಲ್ಲ. ಈ ಭೂಮಿಗೆ ಅವನೇ ಮೂಲಪುರುಷ ಎಂಬ ಭಾವನೆ ಇದ್ದು ಆತನನ್ನ ಮಾತೃವಿನ ರೂಪದಲ್ಲಿ ನೋಡುವುದೇ ಕಾದಂಬರಿಯ ವಿಶೇಷ. ಶಿಷ್ಟ ಸಂಸ್ಕೃತಿ ಹೆಣ್ಣಿನಲ್ಲಿ ಮಾತ್ರವೇ ಮಾತೃಮೂಲವನ್ನು ಅರಗಿಸಿದರೆ ಮೊಗಳ್ಳಿ ಪುರುಷನಲ್ಲಿಯೂ ಮಾತೃ ನೆಲೆಯನ್ನ ಗುರುತಿಸಿರುವುದು ಮಹತ್ವದ ಸಂಗತಿ.

ನಿರಂತರವಾಗಿ ರಂಗಭೂಮಿಯೊಂದಿಗೆ ಗುರುತಿಸಿಕೊಂಡು ಬಂದ ಪ್ರಸನ್ನರ ‘ಬಾಲಗೋಪಾಲ’ವಂತೂ ರಂಗಭೂಮಿ, ಓದು ಬರಹ, ಸಂಚಲನ – ಈ ಎಲ್ಲದರ ಮಿಶ್ರಣದಂತಿದೆ. ಕೌಟುಂಬಿಕ ನೆಲೆಯಿಂದ (ವೆಂಕಟಕೃಷ್ಣರಾಯ) ಆರಂಭಗೊಳ್ಳುವ ಕಾದಂಬರಿಯ ಹಲವಾರು ಸಂಗತಿಗಳ ಸಾಂಗತ್ಯದಿಂದಾಗಿ ಅತ್ಯಾಧುನಿಕವೆನಿಸುತ್ತದೆ. ಕಲೆ ಮತ್ತು ಸಮಾಜ – ಇವೆರಡರ ಸಮಸ್ಯೆಯನ್ನ ಒಳಗೊಂಡ ಕಾದಂಬರಿಗಳಿಗೆ ಹಲವಾರು ಸವಾಲುಗಳಿವೆ. ಇಂಥದ್ದರಲ್ಲಿ ಇವತ್ತಿನ ಸಿದ್ಧರಚನೆಯನ್ನ ಮೀರುವುದೂ ಒಂದು ಸೃಜನಶೀಲ ಸಾಹಸವೇ. ಅಂತಹ ಕೆಲಸವನ್ನು ಪ್ರಸನ್ನ ಇದರಲ್ಲಿ ಮಾಡಿದ್ದಾರೆ.

ಜನಪದ ಕಥನದ ಮಾದರಿಯಲ್ಲಿ ಆರಂಭಗೊಂಡಿರುವ ನಾರಾಯಣ ಮಾಳ್ಕೋಡರ ಕಾದಂಬರಿ ‘ಜಾಲ’ದಲ್ಲಿ ಕಥನಕ್ಕಿಂತ ಘಟನೆಗಳೇ ಪ್ರಾಧಾನ್ಯ ಪಡೆದಿವೆ. ಅಶಾಂತಿ, ಆಕ್ರಮಣ, ಕ್ರೌರ್ಯ, ಸ್ವಾರ್ಥಪರತೆಯ ಸನ್ನಿವೇಶದಲ್ಲಿ ಮನುಷ್ಯನ ಬೃಹತ್‌ ಸಮಸ್ಯೆಯಾದ ಸಂಶಯವನ್ನೇ ಮುಖ್ಯವಾಗಿಸಿಕೊಂಡ ಈ ಕಾದಂಬರಿಯಲ್ಲಿ ಮನುಷ್ಯನ ಸ್ವಾರ್ಥ ಪರತೆಯ ಜಾಲದಲ್ಲಿ ಸಿಲುಕಿಕೊಳ್ಳುತ್ತಿರುವ ಸಂದರ್ಭದ ಅಪಾಯಗಳನ್ನ ಕಲಾತ್ಮಕಗೊಳಿಸುವುದೇ ಮಾಳ್ಕೋಡರ ಉದ್ದೇವಾಗಿದೆ. ಜನಹಿತ ಬಯಸುವ ಪ್ರಭುತ್ವ ಸ್ಥಾಪನೆಯಾಗಬೇಕು ಆಗ ಮಾತ್ರ ಬದುಕು ಹಸನಾಗ ಬಲ್ಲದೆಂಬುದನ್ನು ಇದು ಎತ್ತಿಹಿಡಿಯುತ್ತದೆ. ಕಾಲಹರಣಕ್ಕಾಗಿ, ಹಾಸ್ಯ ವಿನೋದಕ್ಕಾಗಿ ರೂಪುಗೊಳ್ಳುತ್ತಿದ್ದ ಕಾದಂಬರಿ ಟ್ರೆಂಡ್‌ಗೆ ಪ್ರತಿಕ್ರಿಯೆ ಎಂಬಂತೆ ಗಂಭೀರ ಚಿಂತನೆಯ ಕಥನಗಳು ಇಂದು ಅನಿವಾರ್ಯ ಎಂಬುದನ್ನು ‘ಜಾಲ’ದಂತಹ ಕಾದಂಬರಿಗಳು ಪ್ರತಿಪಾದಿಸುತ್ತವೆ.

ಶೋಷಿತ ಸಮಾಜದ ಒಳಸ್ತರಗಳ ವ್ಯಾಖ್ಯಾನವನ್ನ ವೈಚಾರಿಕ ನೆಲೆಯಲ್ಲಿ ನೀಡುತ್ತಾ ಚರಿತ್ರೆ ನಿರ್ಲಕ್ಷಿಸಿದ್ದ ಅಸ್ಪೃಶ್ಯ ಸಮುದಾಯದ ಬದುಕನ್ನು ಸಮರ್ಥವಾಗಿ ಪ್ರತಿಮಿಸುವ ‘ಸೂರಪ್ಪ’ ಅವಲೋಕಿಸಬೇಕಾದ ಕೃತಿ. ಚರಿತ್ರೆಯ ಬೇರುಗಳನ್ನ ತಡಕುವ ಮ.ನ.ಜವರಯ್ಯ ಅವರ ಸಂಶೋಧನ ಸಾಹಸ ಮತ್ತು ಅದನ್ನು ಆಪ್ತ ಓದಿಗೆ ದಕ್ಕಿಸುವ ಕಥನ ಕೌಶಲ ನಿಜಕ್ಕೂ ಮೆಚ್ಚುವಂಥದ್ದು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೂರು ಬಾರಿ ಬಂದು ಹೋದ ಗಾಂಧಿಯ ಬಗೆಗೆ ಹಾಗೂ ಅವರ ಮುಂದಾಳತ್ವದಲ್ಲಿ ಜರುಗುತ್ತಿದ್ದ ಚಳುವಳಿಗೆ ಸಾಮಾನ್ಯ ಜನತೆ ಪ್ರತಿಕ್ರಿಯಿಸಿದ ರೀತಿಯನ್ನು ಎಚ್‌.ನಾಗವೇಣಿ ಅವರ ‘ಗಾಂಧಿ ಬಂದ’ ಕಾದಂಬರಿ ನಿರೂಪಿಸಿದೆ. ಕನ್ನಡದ ಮೊದಲ ಕಾದಂಬರಿ ಇಂದಿರಾಬಾಯಿ ತನ್ನ ವಿಧವಾ ವಿವಾಹ, ಸ್ತ್ರೀ ಶಿಕ್ಷಣ ಆಧುನಿಕ ಚಿಂತನೆ ಮುಂತಾದ ಪ್ರಗತಿಪರ ಚಿಂತನೆಯ ಕಾರಣದಿಂದ ಕಾದಂಬರಿ ಕ್ಷೇತ್ರದಲ್ಲಿ ಸುಧಾರಣಾವಾದಿ ಪರಂಪರೆಯನ್ನು ಹುಟ್ಟುಹಾಕಿತು. ಆವರ್ಗಕ್ಕೆ ಸೇರುವ ಕಾದಂಬರಿ ಇದು. ಈ ಕಾದಂಬರಿ ಆಂತರಿಕ ಮತ್ತು ಬಾಹ್ಯ ಸಂಘರ್ಷಗಳನ್ನು ದಾಖಲಿಸುತ್ತಲೇ ಗಾಂಧಿ ಮತ್ತು ಸ್ವಾತಂತ್ರ್ಯ ಇವುಗಳ ಹಿನ್ನೆಲೆಯಲ್ಲಿ ಹಲವಾರು ಪರಿವರ್ತನೆಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ. ಗಾಂಧಿವಾದದ ಧೋರಣೆಗಳು ಗೊತ್ತಾಗದಂತೆಯೇ ನುಸುಳಿ ಕೊಂಡು ಬರುತ್ತವೆ. ಹಾಗೆ ಬರುವುದರ ಮೂಲಕ ಗಾಂಧಿ ಎಷ್ಟರಮಟ್ಟಗೆ ಪ್ರಸ್ತುತರು ಎಂಬುದರತ್ತ ಆಲೋಚಿಸುವಂತೆಯೂ ಮಾಡುತ್ತದೆ.

ಸ್ಥಳೀಯ ಚರಿತ್ರೆಯ ವಿವರಗಳನ್ನು ಸೃಜನಶೀಲವಾಗಿಸುವ ಕೆಲಸವನ್ನ ಬಹಳ ಹಿಂದೆಯೇ ತ.ರಾ.ಸು. ಮೊದಲಾದವರು ಮಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಚಿತ್ರದುರ್ಗದ ನಾಯಕರ ಚಿರತ್ರೆಗೆ ಕೀರ್ತ ಬರಲು ಕಾರಣರಾದವರು ತ.ರಾ.ಸು. ಕಸ್ತೂರಿ ಕಂಕಣ, ಕಂಬನಿಯ ಕುಯಿಲು, ರಾಜ್ಯದಾಹ, ಹೊಸಹಗಲು, ರಕ್ತರಾತ್ರಿ, ದುರ್ಗಾಸ್ತಮಾನ – ಮುಂತಾದ ಕಾದಂಬರಿಗಳ ಮೂಲಕ ದುರ್ಗದ ಇತಿಹಾಸವನ್ನ ಕಟ್ಟಿಕೊಟ್ಟರು. ಅವರ ತರುವಾಯ ದುರ್ಗದ ಇತಿಹಾಸವನ್ನು ಸಮಕಾಲೀನ ನೆಲೆಯಲ್ಲಿ ಕಟ್ಟಿಕೊಡುವ ಕೆಲಸವನ್ನ ಇಲ್ಲಿಯ ಬರಹಗಾರರು ಮಾಡುತ್ತಿದ್ದಾರೆ. ಬಿ.ಎಲ್‌. ವೇಣು ಅವರು ಗಂಡುಗಲಿ ಮದಕರಿನಾಯಕ, ರಾಜಾಬಿಚ್ಚುಗತ್ತಿ ಬರಮಣ್ಣ ನಾಯಕ, ಹೆಬ್ಬುಲಿ ಹಿರೇಮದಕರಿ ನಾಯಕ, ವೀರವನಿತೆ ಒನಕೆ ಓಬವ್ವ ಮುಂತಾದ ಕಾದಂಬರಿಗಳ ಮೂಲಕ ಸ್ಥಳೀಯ ಇತಿಹಾಸವನ್ನು ಸಮಕಾಲೀನಗೊಳಿಸಿದರು. ಹಾಗೆಯೇ ಟಿ.ಗಿರಿಜಾ, ಹರ್ತಿಕೋಟೆ ವೀರ ನಾಯಕರು, ಐತಿಹಾಸಿಕ ಕಾದಂಬರಿಗಳ ರಚನೆಯಲ್ಲಿ ಕಾರ್ಯೋನ್ಮುಖರಾದರು.

೨೦೦೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಶ್ರೀನಿವಾಸ ವೈದ್ಯ ಅವರ “ಹಳ್ಳ ಬಂತು ಹಳ್ಳ” ನರಗುಂದ ನವಲಗುಂದ ತಾಲ್ಲೂಕುಗಳ ಹಳೆಯ ತಲೆಮಾರಿನ ವೈದಿಕ ಕುಟುಂಬದ ನೋವು ನಲಿವುಗಳನ್ನ ಒಳಗೊಂಡ ಕಾದಂಬರಿ. ಸಣ್ಣ ಹಳ್ಳಿಯೊಂದರ ಸಾಮಾಜಿಕ ಬದುಕಿನ ಒಂದುನೂರು ವರ್ಷಗಳ ೧೮೪೭ರಿಂದ ೧೯೪೭ರವರೆಗಿನ ಐತಿಹಾಸಿಕ ಚಿತ್ರಗಳನ್ನ ಒಳಗೊಂಡಿರುವುದು ವಿಶೇಷ. ಸಂಪ್ರದಾಯದೊಳಗಿರುವ ಸಮಸ್ಯೆಯನ್ನ ಮತ್ತು ಸಂಪ್ರದಾಯವೇ ಒಂದು ಸಮಸ್ಯೆಯಾಗುವ ಪ್ರಕ್ರಿಯೆಯನ್ನ ಚಿತ್ರಿಸುವಲ್ಲಿ ಈ ಕಾದಂಬರಿಯ ಮಹತ್ವವಿದೆ. ಖ್ಯಾತ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪನವರು ಇತ್ತೀಚಿಗೆ ‘ಆವರಣ’‘ಕವಲು’ ಕಾದಂಬರಿಗಳನ್ನ ಹೊರತಂದು ಪರ – ವಿರುದ್ಧದ ಚರ್ಚೆಗೆ ಗ್ರಾಸವಾದದ್ದುಂಟು. ಸದ್ಯದ ಜ್ವಲಂತ ಸಮಸ್ಯೆಯ ಪ್ರಾತಿನಿಧಿಕ ರೂಪವಾಗಿ ಇವು ಕಾಣಿಸಿದವು. ಭೈರಪ್ಪನವರ ಬಹುತೇಕ ಕಾದಂಬರಿಗಳು ಉದ್ದಕ್ಕೂ ಪರ – ವಿರುದ್ಧದ ಚರ್ಚೆಗೆ ಒಳಪಡುತ್ತಲೇ ಬಂದಿರುವುದು ಒಂದು ವಿಶೇಷವಾದ ಸಂಗತಿ.

ಕೆ.ಆರ್. ಚಂದ್ರಶೇಖರರ ‘ಬಿಸಿಲುಗುದುರೆಯ ನೇರಿ ಬದುಕಿನ ಸವಾರಿ’, ಕ್ಷೀರಸಾಗರ ಅವರ ‘ಜೇನು ಆಕಾಶದ ಅರಮನೆಯೊ’, ಮೊಗಸಾಲೆ ಅವರ ‘ಉಲ್ಲಂಘನೆ’, ವೈ.ಕೆ. ಸಂಧ್ಯಾಶರ್ಮರ ‘ಅಗ್ನಿಚುಂಬನ’, ಶಶಿಧರ ವಿಶ್ವಾಮಿತ್ರರ ‘ಮುಸ್ಸಂಜೆ’, ಜೋಗಿ ಅವರ ‘ಯಾಮಿನಿ’, ‘ಹಿಟ್‌ವಿಕೆಟ್‌’ ಮುಂತಾದ ಕಾದಂಬರಿಗಳು ತನ್ನದೇ ಆದ ಪ್ರಯತ್ನದಲ್ಲಿ ಸಾಗಿರುವುದನ್ನ ಗಮನಿಸಬಹುದು. ವೇಗದ ಬದುಕಿನಲ್ಲಿ ಓದಿಗೆ ಸಮಯ ಸಿಗುವುದೇ ಕಷ್ಟ. ಆದ್ದರಿಮದ ಸೆಮಿಸ್ಟರ್ ಪದ್ಧತಿ, ಪತ್ರಿಕೆಗಳು ಮತ್ತು ಓದುಗರ ಇಂಗಿತಗಳನ್ನು ಅರಿತವರು ಬಹುದೀರ್ಘವಲ್ಲದ ಕಾದಂಬರಿ ರಚನೆಯತ್ತ ಗಮನ ಹರಿಸಿರುವುದನ್ನು ಇತ್ತೀಚಿನ ರಚನೆಗಳಲ್ಲಿ ಗುರುತಿಸಬಹುದು.

[1] ಸಿ.ಎನ್‌. ರಾಮಚಂದ್ರನ್‌, ಪರಂಪರೆ ಮತ್ತು ಪ್ರತಿರೋಧ, ಪು. ೧೬೬.

[2] ಶಿವರಾಮಯ್ಯ, ಸಾಹಿತ್ಯ ಪರಿಸರ, ಪು.೧ಟ೦೯.

[3] ಪ್ರಭುಶಂಕರ, ಸಾಹಿತ್ಯ ಮತ್ತು ಆಧುನಿಕತೆ, ಪು. ೫೨.