ಪ್ರವೇಶ

ಸ್ವಾತಂತ್ರ್ಯ ಪೂರ್ವದಲ್ಲಿ ಕಥಾ ಸಾಹಿತ್ಯಕ್ಕೆ ಬದಲಾಗುತ್ತಿದ್ದ ಸಾಮಾಜಿಕ ಸಂಗತಿಗಳೇ ಮುಖ್ಯ ಕಾರಣವಾಗಿದ್ದವು. ಆಗಿನ ಕಾಲದ ಸಾಮಾಜಿಕ ಸುಧಾರಣೆಯ ಅಂಶಗಳನ್ನ ಕೆರೂರು ವಾಸುದೇವಾಚಾರ್, ಎಂ.ಎನ್‌. ಕಾಮತ್‌, ಎಸ್‌.ಜಿ. ಶಾಸ್ತ್ರಿ, ಪಂಜೆ ಮಂಗೇಶರಾಯ – ಮುಂತಾದವರು ತಮ್ಮ ಕತೆಗಳಲ್ಲಿ ತರುವುದರ ಮೂಲಕ ಮಾನವೀಯತೆ ಮತ್ತು ಆದರ್ಶದ ಮಾರ್ಗವನ್ನ ಸಣ್ಣ ಕತೆ ಅನುಸರಿಸಲು ಅನುವಾದರು. ಮಾಸ್ತಿ, ಕುವೆಂಪು, ಬೇಂದ್ರೆ, ರಂ.ಶ್ರೀ ಮುಗಳಿ, ಎಂ.ಪಿ.ಎಲ್‌. ಶಾಸ್ತ್ರಿ ಮುಂತಾದವರು ಆ ಆಶಯಗಳ ಅಭಿವ್ಯಕ್ತಿಗೆ ಬೆಂಬಲವಾದರು. ಮಾಸ್ತಿಯವರು ತಮ್ಮ ಕಥನ ನಿರೂಪಣೆಯಲ್ಲಿ ಹಲವು ಮಾದರಿಗಳನ್ನು ನೀಡಿ ಸಣ್ಣಕತೆಗಳ ಜನಕರೆಂಬ ಖ್ಯಾತಿಗೆ ಕಾರಣರಾದರು. ಕರುಣೆ, ಮಾನವೀಯತೆ ಸಂಸ್ಕೃತಿ ಹಿರಿಮೆ ಇತ್ಯಾದಿಗಳನ್ನೆಲ್ಲ ಕತೆಗಳಲ್ಲಿ ಚಿತ್ರಿಸಿ ಹೊಸ ಹೊಸ ಜೀವನ ಶೋಧದ ವಿನ್ಯಾಸವನ್ನು ತೆರೆದರು. ಇವರ ನಡುವೆ ಕುವೆಂಪು, ಕಾರಂತರು ಸಮಕಾಲೀನ ಇತಿಹಾಸಕ್ಕೆ ಕೈಹಾಕಿ ಆಧುನಿಕವಾಗಿ ಚಿಂತಿಸಿದ್ದರ ಪರಿಣಾಮವಾಗಿ ಇವರ ಬರಹಗಳು ವೈಚಾರಿಕ ಸ್ವರೂಪವನ್ನು ಪಡೆದುಕೊಂಡವು. ಇವರ ನಂತರ ನಿಜವಾದ ಪ್ರಭಾವವಿದ್ದ ಲೇಖಕರೆಂದರೆ ಪ್ರಗತಿಶೀಲರೇ ಆಗಿದ್ದರು. ನವೋದಯದವರಿಗಿಂತ ಎಷ್ಟೋ ಸಮಸ್ಯೆಗಳನ್ನು ಡೀಲ್‌ ಮಾಡಿದವರಾಗಿದ್ದರು. ಅವರ ಮುಂದೆ ಸಾಕಷ್ಟು ಸಾಮಾಜಿಕ ಸಮಸ್ಯೆಗಳು ಇದ್ದವಾದರೂ ಬರವಣಿಗೆಯಲ್ಲಿ ಅವೆಲ್ಲ ದುರ್ಬಲ ಸ್ವರೂಪವನ್ನ ಹೊಂದಬೇಕಾಯಿತು. ಬರವಣಿಗೆಯ ಹರಹು ಅತಿಯಾಗಿ ಹೊರಗಿನ ಸಿದ್ಧಾಂತದ ಪ್ರಭಾವದಿಂಧಾಗಿ ಕಲೆಗಾರಿಕೆ ಕಡಿಮೆಯಾಯಿತು. ಅನಕೃ, ನಿರಂಜನ, ಚದುರಂಗ, ಬಸವರಾಜ ಕಟ್ಟೀಮನಿ – ಮುಂತಾದವರಲ್ಲಿ ಬರವಣಿಗೆಯಲ್ಲದೆ ಹೋರಾಟ ಮನೋಭಾವವೂ ಅತಿಯಾಗಿತ್ತು. ಬರವಣಿಗೆಯಲ್ಲೇ ಬದುಕು ನಡೆಸಿದ ಇವರು ಐಡಿಯಲಜಿಯ ಪಾವಿತ್ರ್ಯಕ್ಕೆ ಕುಂದು ಬಾರದಂಥೆ ನೋಡಿಕೊಂಡರು. ಕಲೆಗಾರಿಕೆಯ ಬಗೆಗೆ ಯೋಚಿಸುತ್ತ ಕಾಲಹರಣ ಮಾಡದೆ ಬೂಟ್‌ಪಾಲಿಷ್‌ (ಕಟ್ಟಿಮನಿ), ಕೊನೇಗಿರಾಕಿ (ನಿರಂಜನ), ವೋಚಿ (ಭಾರತೀಪ್ರಿಯ) ನಾನು ಕೊಂದಹುಡುಗಿ (ಆನಂದ), ‘ಸತ್ಯಮೇವಜಯತ’ (ಬಾಗಲೋಡಿ ದೇವರಾಯ) ದನಿಯರ ಸತ್ಯನಾರಾಯಣ (ಕೊರಡ್ಕಲ್‌ ಶ್ರೀನಿವಾಸರಾವ್‌) ನಾಲ್ಕು ಮೊಳಭೂಮಿ (ಚದುರಂಗ) – ಮುಂತಾದ ಕತೆಗಳನ್ನು ನೀಡಿದರು. ಬರವಣಿಗೆಯ ವ್ಯಾಪಕತೆಯಲ್ಲಿ ಈಗಿನ ನಮ್ಮ ಎಲ್ಲ ಅವಶ್ಯಕತೆ ಪೂರ್ವ ಪೀಠಿಕೆಗಳಿಗೆ ರಂಗವನ್ನು ಸಜ್ಜುಗೊಳಿಸಿದರು.

ಕೈಯ್ಯೂರಿನ ರೈತ ಹೋರಾಟವನ್ನು ಕುರಿತ ನಿರಂಜನರ ‘ಚಿರಸ್ಮರಣೆ’ ಇಂದಿನ ರೈತ ಹೋರಾಟಗಳಿಗೆ ನಾಂದಿಯಾಯಿತು. ಕುವೆಂಪು ಅವರ ನಾಯಿ – ಗುತ್ತಿ ಪಾತ್ರಗಳು ದಲಿತ ಸಂವೇದನೆಯವಾದರೆ ಶಿವರಾಮಕಾರಂತರ ಚೋಮನದುಡಿಯ ಚೋಮ ಉಳುವವನೇ ಹೊಲದೊಡೆಯ ಎಂಬತತ್ವದ ಮುಖಂಡನಾದ. ರಾಜರತ್ನಂ ಕಾವ್ಯ ನಾಯಕರಾದ ನಾಗ ಮತ್ತು ರತ್ನ ದಲಿತ ಬಂಡಾಯದ ಮುಖಂಡರಾಗಿ ಕಾಣಿಸಿದರು. ಇಂಥದ್ದರ ನಡುವೆಯೂ ಗೊರೂರು ರಾಮಸ್ವಾಮಿ ಅಯ್ಯಂಗಾ‌ರ್ ಗ್ರಾಮೀಣ ಬದುಕಿನ ಸುಖಸಂತಸಗಳನ್ನ ನಮ್ಮೂರಿನ ರಸಿಕರು, ಮೆರವಣಿಗೆ, ಬೆಸ್ತರ ಕರಿಯ, ಹೇಮಾವತಿ ತೀರದಲ್ಲಿ ಮುಂತಾದ ಕಾದಂಬರಿಗಳಲ್ಲಿ ಚಿತ್ರಿಸಿ ನಮ್ಮ ಬದುಕಿನ ಗ್ರಾಮೀಣ ಮಾದರಿಯೊಂದನ್ನ ಮುಂದಿಟ್ಟರು. ಜಾನಪದ ಅಧ್ಯಯನ ಸಾಹಿತ್ಯದ ಅಧ್ಯಯನವಾಗುತ್ತಿದ್ದ ಅದೇ ದಿನಗಳಲ್ಲಿ (೧೯೩೬) ಅರ್ಚಕ ರಂಗಸ್ವಾಮಿ ಅವರು ‘ಹುಟ್ಟಿದಹಳಿ’ ಎಂಬ ಕೃತಿಯನ್ನು ರಚಿಸಿದರು. ‘ಸಾಹಿತ್ಯದ ಜೊತೆಗೆ ನಮ್ಮ ಗ್ರಾಮೀಣ ಶಿಶುವೊಂದಿದೆ ಅದನ್ನ ತಿಳಿದುಕೊಳ್ಳಬೇಕಾದುದಿದೆ, ಅದನ್ನ ಜೋಪಾನ ಮಾಡಿ’ ಎಂದು ಅದರಲ್ಲಿ ಬರೆದರು. ತಮ್ಮ ಊರಿನಲ್ಲಿ ನಡೆಯುವ ಜಗಳ, ಕೃಷಿ ಚಟುವಟಿಕೆ, ಇತ್ಯಾದಿಗಳನ್ನೆಲ್ಲ ಪರಿಚಯಿಸಿದರು. ಹೀಗಾಗಿ ಇವತ್ತಿನ ಎಲ್ಲ ಸೃಜನಶೀಲ ಬರವಣಿಗೆಯ ಮೂಲ ಪೀಠಿಕೆ ನಮ್ಮ ಹಿಂದಿನವರಲ್ಲಿ ಕಂಡುಬಂದಿತ್ತು. ಜಾನಪದ ಮತ್ತು ಸೃಜನಶೀಲತೆ ಬೇರೆ ಬೇರೆಯಲ್ಲ. ಈ ಭಾವನೆಯೂ ಆ ಕಾಲದ ಕೊಡುಗೆಯೆಂದೇ ಭಾವಿಸಬೇಕಾಗುತ್ತದೆ.

ಪ್ರಗತಿಶೀಲರಲ್ಲಿ ಎಲ್ಲರೂ ಗದ್ಯ ಲೇಖಕರೆಂದೇ ಹೆಸರಾಗಿದ್ದರು. ಅವರ ಮುಂದಿದ ಸಮಸ್ಯೆಗಳು ಹಲವಾರು. ಹಾಗಾಗಿ ಪ್ರಗತಿಶೀಲರಿಗೆ ಕಾವ್ಯ ಸಮರ್ಥ ಮಾದ್ಯಮವೆಂದು ಅನಿಸಲಿಲ್ಲ. ರಮ್ಯ ಬರಹ ಯಾವತ್ತು ಸಮಸ್ಯೆಗಳನ್ನು ನಿರೂಪಿಸಲು ಸಮರ್ಥ ವಾಹಕ ಎನಿಸುವುದಿಲ್ಲ. ಹಾಗಾಗಿ ಅವರಿಗೆ ಗದ್ಯ ಅನಿವಾರ್ಯವಾಯಿತು. ನವ್ಯರಲ್ಲಿ ಅಡಿಗರನ್ನು ಬಿಟ್ಟರೆ ಬಹುಪಾಲು ಎಲ್ಲರೂ ಗದ್ಯಲೇಖಕರೇ. ಅವರ ಮುಂದೆ ಆಧುನಿಕ ಸಮಸ್ಯೆಗಳಿದ್ದುವು. ಹಾಗಾಗಿ ಕಾವ್ಯ ಬರೆಯುವುದಕ್ಕಿಂತ ಹೆಚ್ಚು ಗದ್ಯ ಬರೆದರು. ನಿರುದ್ಯೋಗ ಸಮಸ್ಯೆ, ವಿದೇಶ ಪ್ರಯಾಣ, ವಿದ್ಯೆಯ ಆರಂಭದ ಸಮಸ್ಯೆಗಳು, ಇಲ್ಲಿಯ ರಾಜಕಾರಣ ಹುಟ್ಟು ಹಾಕಿದ್ದರ ಸಮಸ್ಯೆಗಳು ಜೊತೆಗೆ ಬದುಕಿನ ಬಗೆಗಿನ ನಾನಾ ರೀತಿಯ ಅನುಮಾನಗಳು ಇತ್ಯಾದಿಗಳೆಲ್ಲ ಶುರುವಾಗಿದ್ದವು. ದಲಿತರು ಓದಬಹುದೇ! ಪಾರಂಪರಿಕ ವೃತ್ತಿಯನ್ನು ಬಿಡಬಹುದೇ, ಆಚರಣೆಗಳನ್ನು ಅನುಸರಿಸಬಹುದೇ ಬೇಡವೇ ಎಂಬ ಅನುಮಾನಗಳು ಕಾಡಿಸುತ್ತಿದ್ದವು. ಇವನ್ನ ನಿರೂಪಿಸುವುದಕ್ಕಾಗಿಯೇ ಸೃಷ್ಟಿಗೊಂಡ ಕಥಾಸಾಹಿತ್ಯ, ನವ್ಯದ ಸಂದರ್ಭದಲ್ಲಿ ತುಂಬ ಗಟ್ಟಿಯಾಯಿತು. ಶೂದ್ರರು, ದಲಿತರು ಓದಿದ್ದು ಆಕಸ್ಮಿಕವಾದರೂ ಅವರಿಗೆ ಆ ನಂತರದ ಬದುಕೇನು ಎಂಬಂತಾಯಿತು. ಉದ್ಯೋಗ, ಜಾತಿ ಮತ್ತಿತರ ವೈಯಕ್ತಿಕ ಸಮ್ಯೆಗಳು ಎದುರಾದವು. ಹೀಗಾಗಿ ನವೋದಯದವರ ಮುಂದಿದ್ದ ಸಮಸ್ಯೆಗಳು ಪ್ರಗತಿಶೀಲರ ಮುಂದಿದ್ದ ಸಮಸ್ಯೆಗಳು ಬೇರೆ ಬೇರೆ ಎನಿಸಿದವು. ಆಗ ಪಾಶ್ಚಾತ್ಯ ಶಿಕ್ಷಣ ಸಂಪರ್ಕದಿಂದಾಗಿ ನಮ್ಮ ಬರವಣಿಗೆಯ ಸ್ವರೂಪ ಹೇಗಿರಬೇಕೆಂಬ ತಿಳುವಳಿಕೆಯೂ ಬಂದಿತು.

ಕನ್ನಡದಲ್ಲಿ ನವ್ಯ ಪಂಥ ಬಂದದ್ದು ಪದ್ಯದ ಹಿನ್ನೆಲೆಯಿಂದಾದರೂ ಗದ್ಯದಲ್ಲಿ ಅದರ ಬೆಳೆ ಜಾಸ್ತಿಯಾಯಿತು. ಗದ್ಯದ ಮಾದರಿಗಳನ್ನ ಜನಪ್ರಿಯಗೊಳಿಸಿದರು. ಭಾಷೆಯ ಬಳಕೆ ಕಡಿಮೆ ಹೆಚ್ಚು ಅರ್ಥವನ್ನು ಹೊರಡಿಸಿದರು. ಅಗ್ರಹಾರದ ಸಮಸ್ಯೆಗಳನ್ನು ನಗರದ ಯಾಂತ್ರಿಕತೆಯನ್ನ ಸಮರ್ಥವಾಗಿ ಆ ಸಂದರ್ಭದ ಕಥೆ – ಕಾದಂಬರಿಗಳು ಹೊರಹಾಕಿದವು. ಅನಂತಮೂರ್ತಿ ಅವರ ಸಂಸ್ಕಾರ, ಭಾರತೀಪುರ, ಗಿರಿಯವರ ಗತಿಸ್ಥಿತಿ, ಆಲನಹಳ್ಳಿಯವರ ಕಾಡು – ಮುಂತಾದವನ್ನ ಈ ಸಂದರ್ಭದಲ್ಲಿ ಹೆಸರಿಸಬಹುದು. ವ್ಯಕ್ತಿಯ ಬಡತನ, ಅನಾಥಸ್ಥಿತಿ ಜೀವನದ ಯಾಂತ್ರಿಕತೆ ಮುಂಬೈನಂಥ ನಗರಗಳಲ್ಲಿ ಹೆಚ್ಚು ವ್ಯಾಪಕವಾಗಿ ಕಾಣಿಸುವ ಅನುಭವಗಳು, ಈ ಅನುಭವಗಳನ್ನು ಶಾಂತಿನಾಥ ದೇಸಾಯಿಯವರು ‘ಮುಕ್ತಿ’ ‘ವಿಕ್ಷೇಪ’ ಕಾದಂಬರಿಗಳಲ್ಲಿ ಚಿತ್ರಿಸಿದರು. ಛಲ, ಪಯಣ, ಸೆರೆ – ಮುಂತಾದವು ಚಿತ್ತಾಳರ ಪ್ರಬುದ್ಧ ಆಸಕ್ತಿಗಳಿಗೆ ಸಾಕ್ಷಿಯಾದ ಕತೆಗಳು. ಇವುಗಳ ಮೂಲಕ ಕನ್ನಡ ಸಣ್ಣಕತೆಗೆ ಹೊಸ ಸ್ವರೂಪವೇ ಬಂದಂತಾಯಿತು. ಲಂಕೇಶರಂತೂ ಕನ್ನಡ ಸಣ್ಣಕತೆಗೆ ಭಾವಗೀತೆಯ ತೀವ್ರತೆಯನ್ನ ತಂದುಕೊಟ್ಟರು. ರಾಘವೇಂಧ್ರ ಖಾಸನೀಸ ಟಿ.ಜಿ. ರಾಘವ, ಸದಾಶಿವ ಹೀಗೆ ಎಲ್ಲ ನವ್ಯರೂ ವ್ಯಕ್ತಿಯನ್ನೂ ವ್ಯಕ್ತಿ ಪ್ರಜ್ಞೆಯನ್ನು ಮುಖ್ಯ ಮಾಡಿಕೊಂಡು ಆತ್ಮಶೋಧನೆಯಲ್ಲಿ ತೊಡಗಿದರು. ಮಾನವ ಸಂಬಂಧದ ನಾನಾ ಸಾಧ್ಯತೆ ಮತ್ತು ಸ್ತರಗಳ ಶೋಧನೆಯಲ್ಲಿ ತೊಡಗಿದರು.

ತೇಜಸ್ವಿಯವರಂತೂ ಮನುಷ್ಯನ ‘ಸ್ವರೂಪ’ದ ಪದರು ಪದರುಗಳನ್ನೇ ಚಿತ್ರಿಸುತ್ತ ಹೋದರು. ಆದರೂ ಮನುಷ್ಯ ಏನು ಅನ್ನುವುದು ಅರ್ಥವಾಗಲಿಲ್ಲ. ಅವನ ವ್ಯಕ್ತಿತ್ವ ನಿಗೂಢವಾಗಿಯೇ ಉಳಿಯಿತು. ‘ಮನುಷ್ಯನ ಗುಟ್ಟಿನಗಂಟು ಒಡೆದು ನೋಡುವ ಧೈರ್ಯ ಯಾರಿಗುಂಟು’ ಆದರೂ ತೇಜಸ್ವಿಯಂಥ ಲೇಖಕರು ಒಡೆದು ನೋಡುವುದನ್ನು ಪ್ರಯತ್ನಿಸುತ್ತಲೆ, ಇದ್ದರು. ನವ್ಯ ಸಂದರ್ಭದ ಅವರ ಕಥಾಸಾಹಿತ್ಯದಲ್ಲಿ ಇಂಥದ್ದೇ ಪ್ರಯತ್ನ ಸಾಗಿದೆ. ಇವರ ಪಾತ್ರಗಳು ಪಾಪಪ್ರಜ್ಞೆಯಿಂದಾಗಲಿ ಪರಕೀಯ ಪ್ರಜ್ಞೆಯಿಂದಾಗಲಿ ಬಳಲುವುದಕ್ಕಿಂತ ನಿಗೂಢವಾಗಿಯೇ ಉಳಿಯುತ್ತಾರೆ.

ನವೋದಯ ತಲೆಮಾರಿನ ಮಾರ್ಗದರ್ಶನ ತೇಜಸ್ವಿಯವರಿಗೆ ಆದರ್ಶವಾಗಿತ್ತು. ಶಿಕ್ಷಣ ಪಡೆದ ಮೂರನೇ ತಲೆಮಾರಿನ ಬದುಕಿನ ಕಠೋರವನ್ನು ನವ್ಯಲೇಖಕರಿಗಿಂತ ತೇಜಸ್ವಿ ಚೆನ್ನಾಗಿ ಅರಿತಿದ್ದರು. ಹಾಗಾಗಿ ನವೋದಯ, ನವ್ಯ ಮತ್ತು ದಲಿತ ಬಂಡಾಯದ ಕೊಂಡಿಯಾಗಿ ತೇಜಸ್ವಿ ಕಾಣಿಸಿಕೊಂಡರು. ನವ್ಯದವರ ನಡುವೆ ಮರೆತುಹೋಗಿದ್ದ ಪರಿಸರ ಪ್ರಜ್ಞೆಯನ್ನು ತೇಜಸ್ವಿ ಹೇಳಿಕೊಟ್ಟರು. ನಗರಮುಖಿಯಾಗಿದ್ದ ನವ್ಯವನ್ನು ಗ್ರಾಮಮುಖಿಯನ್ನಾಗಿ ಮಾಡಿದರು. ‘ನನ್ನ ವೃತ್ತಿ ವ್ಯವಸಾಯವೇ ಹೊರತು ಬರವಣಿಗೆಯಲ’ಎಂದು ಹೇಳುತ್ತಲೇ ಸಾಕಷ್ಟು ಬರವಣಿಗೆ ಮಾಡಿದರು. ಕೃಷಿ, ವಿಜ್ಞಾನ, ಫೋಟೋಗ್ರಫಿ, ಕಂಪ್ಯೂಟರ್ – ಈ ಎಲ್ಲದರ ಬಗೆಗೂ ಅವರಿಗೆ ತಿಳುವಳಿಕೆ ಇತ್ತು. ಅವರ ಬರಹಗಳಲ್ಲಿ ಇವೆಲ್ಲದರ ಜ್ಞಾನವನ್ನು ತುಂಬಿ ಕೊಟ್ಟರು. ಅವರ ಕರ್ವಾಲೋ ಕಾದಂಬರಿಯಲ್ಲಿ ಬರುವ ಮಂದಣ್ಣ ನಮ್ಮ ನಿಜವಾದ ನಾಯಕ, ಶುದ್ಧ ಗ್ರಾಮೀಣ ಪ್ರತಿಭೆ. ಜೇನು, ಜೇನುಹುಳ, ಜೇನುತುಪ್ಪ ಮತ್ತು ಹಾರುವ ಓತಿಯ ಬಗ್ಗೆ ಖಚಿತ ಮಾಹಿತಿ ನೀಡುವ ವ್ಯಕ್ತಿ. ಆದ್ದರಿಂದಲೇ ನವ್ಯರಿಗೆ ಇಲ್ಲದ ಬಹುರೂಪತೆ ತೇಜಸ್ವಿಯವರ ಬರಹಗಳಿಗೆ ಇದೆ ಅಂತ ಅನಿಸುವುದು. ನಂತರದವರ ಕಥಾ ಸಾಹಿತ್ಯವಂತೂ ಹೊಸ ಅಲೆಯನ್ನುಂಟು ಮಾಡಿತು. ದಲಿತ, ಮುಸ್ಲಿಂ, ಸ್ತ್ರೀ, ಶೂದ್ರ ಸಂವೇದನೆಗಳು ಕನ್ನಡ ಕಥಾಲೋಕದಲ್ಲಿ ಪ್ರವೇಶ ಪಡೆದವು. “ದೇಶೀವಾದ, ವಸಾಹತುಶಾಹಿ, ರಾಜಕೀಯ ಪ್ರಜ್ಞೆ, ಸ್ವಾತಂತ್ರ್ಯ ಸಂಗ್ರಾಮ, ಔದ್ಯೋಗೀಕರಣ, ನಗರೀಕರಣ, ವ್ಯಕ್ತಿ ಸ್ವಾತಂತ್ರ್ಯ, ತುರ್ತುಪರಿಸ್ಥಿತಿ, ಮಂದಿರ ಮಸೀದಿ, ಸಾಮಾಜಿಕ ನ್ಯಾಯ – ಈ ಎಲ್ಲವುಗಳಿಗೂ ತೀವ್ರವಾಗಿ, ಸ್ಪಂದಿಸುತ್ತಲೇ ಬಂದಿರುವುದನ್ನು ಗಮನಿಸಬಹುದು. ಹಸಿವು, ದುಃಖ ದುಮ್ಮಾನ’ ಶೋಷಣೆ ಕಥೆಯ ವಸ್ತುವಾದವು. ದಲಿತರ ಮೇಲಿನ ಕ್ರೌರ್ಯ, ಹಲ್ಲೆ, ಅವಮಾನದ ಪ್ರಸಂಗಗಳು ಕಥೆಯ ಒಳಪ್ರವೇಶ ಪಡೆದವು. ದೇವನೂರು, ಚನ್ನಣ್ಣ ವಾಲೀಕರ, ಬರಗೂರು, ಮೊಗಳ್ಳಿ ಗಣೇಶ್‌, ಮನಜ, ಮಾಲಗತ್ತಿ, ಈರಣ್ಣ ಕೋಸಗಿ, ಜನಾರ್ದನ ಎರ್ಪಕಟ್ಟಿ, ಬಿಟಿ.ಜಾಹ್ನವಿ, ಕೃಷ್ಣನಾಯಕ, ಶಾಂತಾನಾಯಕ, ಸಣ್ಣರಾಮ, ಬಸವಲಿಂಗಯ್ಯ, ಬಾನಂದೂರು ಕೆಂಪಯ್ಯ, ಮೋಹನ ನಾಗಮ್ಮನವರ್, ಎಸ್‌.ಆರ್. ಗುರುನಾಥ, ರಾಮಕೃಷ್ಣಗುಂಡಿ, ಲಕ್ಷ್ಮಣ್‌, ಸುಬ್ಬುಹೊಲೆಯಾರ್, ಸೋಮಣ್ಣ ಹೊಂಗಳ್ಳಿ, ವೀರಯ್ಯ ಕಾಡುಕೊತ್ತನಳ್ಳಿ, ಬಸವರಾಜ ಕುಕ್ಕರಳ್ಳಿ, ಚಂದ್ರಕಾಂತವಡ್ಡು, ಭದ್ರಯ್ಯ ತಿಮ್ಮಸಂದ್ರ, ಮೂಡ್ನಾಕೂಡು ಚಿನ್ನಸ್ವಾಮಿ ಮುಂತಾದವರು ತಮ್ಮ ಜೀವನಾನುಭವಗಳನ್ನು ದಲಿತ ಬದುಕಿನ ಸಾಂಸ್ಕೃತಿಕ ಚಹರೆಗಳನ್ನು ಕಥಾ ಹಂದರದಲ್ಲಿ ನೀಡುವಲ್ಲಿ ಸಫಲರಾಗಿದ್ದಾರೆ. ದಲಿತ ಸಂವೇದನೆ ಕಥಾ ಸಾಹಿತ್ಯದಲ್ಲಿ ಸ್ಪಷ್ಟರೂಪ ಪಡೆಯುವಲ್ಲಿ ಕಾರಣರೂ ಆಗಿದ್ದಾರೆ. ಅದೇ ಸಂದರ್ಭದಲ್ಲಿ ದಲಿತರೇ ಬರೆದ ದಲಿತ ಅಭಿವ್ಯಕ್ತಿ ಕ್ರಮವನ್ನು ಅಧ್ಯಯನ ಮಾಡುವುದಕ್ಕೂ ಇದು ಸಕಾಲವಾಗಿರುವುದನ್ನು ಮರೆಯುವಂಥಿಲ್ಲ. ಯಾಕೆಂದರೆ ಅಸ್ಪೃಶ್ಯತೆಯ ಅನುಭವಗಳು, ಅತ್ಯಾಧುನಿಕತೆಯ ಭರಾಟೆಯಲ್ಲಿ ನಾಶವಾಗುತ್ತಿರುವ ತಮ್ಮ ಸಂಸ್ಕೃತಿಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳು, ದಲಿತ ಬದುಕಿನ ಆಚರಣೆ, ಸಂಪ್ರದಾಯಗಳು – ಹೀಗೆ ಈ ಎಲ್ಲ ವೈವಿಧ್ಯತೆಗಳು ದಲಿತ ಲೇಖಕಂ ಸೃಜನ ಶೀಲತೆಯಲ್ಲಿ ಅರಳಿರುವುದನ್ನೂ ಗಮನಿಸಬಹುದು.

ಒಂದೊಂದು ಕಾಲಘಟ್ಟದಲ್ಲೂ ಕಥಾ ಸಾಹಿತ್ಯ ಬಿಟ್ಟುಕೊಟ್ಟ ಧೋರಣೆಗಳು ವಿಶಿಷ್ಟ ಬಗೆಯವು. ದಲಿತ ಬಂಡಾಯದ ಸಂದರ್ಭದಲ್ಲೂ ಕಾದಂಬರಿ ಪ್ರಕಾರ ಗ್ರಾಮಾಂತರ ನೆಲೆಗಳ ದಲಿತ ಕುಟುಂಬಗಳ ಸಮಸ್ಯೆಗಳನ್ನು, ಅವರ ಸಾಂಸ್ಕೃತಿಕ ಸಂಪನ್ನತೆಯನ್ನ, ಸ್ಥಿತ್ಯಂತರಗೊಳ್ಳುತ್ತ ಇರುವ ಮೌಲ್ಯಗಳೊಂದಿಗಿನ ಹೋರಾಟವನ್ನು, ತಮ್ಮ ಸಮಸ್ಯೆಗಳ ಬಗೆಗಿನ ತಿಳುವಳಿಕೆಗಳನ್ನ ನಿರೂಪಿಸುವಲ್ಲಿ ಗಮನಾರ್ಹ ಪಾತ್ರವಹಿಸಿತು. ಮೀಸಲಾತಿ, ರಾಜಕೀಯ ಪ್ರಜ್ಞೆ, ಆರ್ಥಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ – ಇತ್ಯಾದಿಗಳ ಬಗೆಗೂ ಅವು ಚರ್ಚಿಸದೇ ಬಿಡಲಿಲ್ಲ. ವಿಪುಲ ಸಂಖ್ಯೆಯಲ್ಲಿ ಹೊರಬೀಳುತ್ತಿರುವ ಕಾದಂಬರಿಗಳ ರಚನಾ ಸ್ವರೂಪಕ್ಕಿಂತ ಭಿನ್ನವಾದ ದೇವನೂರರ ‘ಕುಸುಮಾಬಾಲೆ’ಯಂತಹ ರಚನೆಗಳು ಕಂಗೊಳಿಸಿದವು. ದಲಿತ ಹೆಣ್ಣು ಬಂಗಾರವ್ವನ ಹೆಣದ ಕಾರ್ಯವನ್ನು ಕೇಂದ್ರವಾಗಿಸಿಕೊಂಡು ಅದರ ಮೂಲಕ ದಲಿತ ಸಮಾಜದ ಸ್ಥಿತಿಗತಿಯನ್ನ ವಿವರಿಸುವ ಪ್ರಯತ್ನವೇ ಮಾಲಗತ್ತಿಯವರ ‘ಕಾರ್ಯ’ ಕಾದಂಬರಿಯ ಉದ್ದೇಶವಾಯಿತು. ತಳಸಮಾಜದ ಆಚರಣೆಯ ಇಂಗಿತಗಳನ್ನು ಒರೆಗೆ ಹಚ್ಚುವ ಈ ಕಾದಂಬರಿಯಲ್ಲಿ ‘ಸಂಪ್ರದಾಯ’ ವೆಂಬುದು ಆ ಸಂಸ್ಕೃತಿಯಲ್ಲಿ ಎಷ್ಟರಮಟ್ಟಿಗೆ ಕ್ರೂರವಾಗಬಹುದೆಂಬುದನ್ನು ಚಿತ್ರಿಸಿದ ಮಾಲಗತ್ತಿ, ದೇವನೂರು, ಮನಜಗಿಂತ ಭಿನ್ನವಾದ ವಿನ್ಯಾಸವನ್ನು ‘ಕಾರ್ಯ’ದಲ್ಲಿ ಮೂಡಿಸಿದರು. ಮುಳ್ಳೂರು ನಾಗರಾಜರ ‘ಮರಣ ಮಂಡಲ ಮಧ್ಯದೊಳಗ’ ‘ದಂಡ ಕಾರಣ್ಯ’, ಚನ್ನಣ್ಣ ವಾಲೀಕಾರರ ಬೆಳ್ಯ, ಹುಲಿಗೆಮ್ಮ, ಕೋಟೆಬಾಗಿಲು, ಒಂದು ಹೆಣ್ಣಿನ ಒಳಜಗತ್ತು, ಶಿವರುದ್ರಕಲ್ಲೋಳ್ಕರ್ ಅವರ ‘ಹೊಲಗೇರಿಯ ರಾಜಕುಮಾರ’ ಬಿ.ಟಿ. ಲಲಿತಾ ನಾಯಕರ ‘ನೆಲೆಬೆಲ’, ‘ಗತಿ’ ಮುಂತಾದವುಗಳನ್ನು ಇಲ್ಲಿ ಸ್ಮರಿಸಬಹುದು.

ಆಧುನಿಕತೆ

‘ಆಧುನಿಕತೆ’ ಎನ್ನುವಂಥದ್ದು ಸಮಾಜವನ್ನು ಕುರಿತೇ ಹೇಳಬಹುದಾದ ಸಂಗತಿ. ಸಮಾಜ ಚಲನಶೀಲವಾದುದರಿಂದ ಹಳೆಯದನ್ನೇ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುವುದೇ ಇಲ್ಲ. ನಮ್ಮ ಜೀವನ ವಿಧಾನ ಬದಲಾವಣೆ ಆದಂತೆಲ್ಲ ನಮಗರಿವಿಲ್ಲದ ಹಾಗೆ ಆಧುನಿಕತೆ ಬದುಕಿನಲ್ಲಿ ಪ್ರವೇಶಿಸುವಂತಾಗುತ್ತದೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಗೆ ಒಳಗಾಗುವುದರ ಮೂಲಕ ಅಧುನಿಕತೆಯನ್ನು ಅನುಭವಿಸಿರುತ್ತಾನೆ. ಹಾಗಾಗಿ ಆ ಜನಮಾನಸದ ಪ್ರತಿನಿಧಿಯಾದ ಸಾಹಿತಿ ಅದನ್ನು ತನ್ನ ಬರವಣಿಗೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಾನೆ. ಭಾಷೆಯ ಬದಲಾವಣೆ, ಹೊಸ ಹೊಸ ಸಂಶೋಧನಾ ಮಾರ್ಗಗಳು, ಸಮಾಜ ಸುಧಾರಣಾ ಸಂಗತಿಗಳು, ಚಿಂತನಧಾರೆಗಳು – ಇವೆಲ್ಲ ನಮ್ಮ ಬದುಕನ್ನು ಸ್ಥಿತ್ಯಂತರಗೊಳಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ಮನುಷ್ಯ ಒಲ್ಲದ್ದನ್ನು ನಿರಾಕರಿಸುತ್ತಾ, ಒಪ್ಪಿಕೊಂಡಿದ್ದನ್ನು ಸ್ವೀಕರಿಸುತ್ತಾ ಜೀವಿಸುತ್ತಾನೆ. ಹಾಗಾಗಿ ನಾವು ಇಡೀ ವ್ಯವಸ್ಥೆ ಯನ್ನು ಈ ಪರಿಪ್ರೇಕ್ಷದಲ್ಲಿರಿಸಿಯೇ ನೋಡಬೇಕಾಗುತ್ತದೆ. ಸಾಹಿತ್ಯ ಪ್ರವೃತ್ತಿಗಳು ಬದಲಾವಣೆಯಾದಾಗಲೂ ಇಂಥ ವ್ಯತ್ಯಾಸಗಳನ್ನು ಗುರುತಿಸುತ್ತಲೇ ಬಂದಿದ್ದೇವೆ. ನವೋದಯ, ನವ್ಯ ಮೂಲತಃ ಭಾಷೆ ತಂತ್ರ ಪ್ರತಿಮೆ ಪ್ರತೀಕಗಳಿಗೆ ಸಂಬಂಧಿಸಿದ ವಿಚಾರಗಳಿಗೆ ಆಸಕ್ತಿ ತೋರಿದವು. ಬಂಡಾಯವಾದರೋ ಅದೊಂದು ಮನೋಧರ್ಮ. ಆ ಮನೋಧರ್ಮದ ಹಿನ್ನೆಲೆಯಲ್ಲೇ ಬಂಡಾಯ ಕಾದಂಬರಿಗಳನ್ನು ಪರಿಶೀಲಿಸಬೇಕಾಗುತ್ತದೆ.

ಪ್ರಗತಿಶೀಲ ಪಂಥದ ಧ್ಯೇಯ ಧೋರಣೆಗಳಲ್ಲಿ ಬಂಡಾಯದ ಕೆಲವು ಅಂಶಗಳಿದ್ದು ಅದಕ್ಕಾಗಿ ಬಂಡಾಯದವರು ಪುನಶ್ಚೇತನಗೊಳಿಸಿದ್ದುಂಟು. ಪ್ರಗತಿಶೀಲರ ಮುಂದುವರಿಕೆಯ ಗಟ್ಟಿತನದ ನೆಲೆಗಟ್ಟನ್ನು ಕಂಡುಕೊಂಡು ಹೊಸ ಸಮಾಜವನ್ನು ಕಟ್ಟಿಕೊಂಡು ಆರೋಗ್ಯಕರವಾದ ಮನಸ್ಸುಗಳು ಈ ಸಾಹಿತ್ಯದಲ್ಲಿ ಅಭಿ‌ವ್ಯಕ್ತವಾದವಲ್ಲದೆ ಕ್ರಿಯಾಭಿಮುಖವಾದವು. ಮೊದಮೊದಲು ಕಾಣಿಸಿಕೊಂಡ ಬರಹಗಳು ಆವೇಶ – ಆಕ್ರೋಶದಿಂದ ಕೂಡಿದವೆಂದು ಹೇಳಲಾಯಿತಾದರೂ ಅದಿಲ್ಲದೆಯೂ ಬಂಡಾಯ ಮನೋಧರ್ಮವನ್ನು ವ್ಯಕ್ತಗೊಳಿಸಬಹುದು ಎಂಬುದನ್ನು ಅರಿತವರು ಸಹಜವಾದ ಮಾರ್ಗವನ್ನು ಕಂಡು ಕೊಂಡದ್ದೂ ಉಂಟು. ಬರಹಕ್ಕಿಂತ ಬದುಕು ದೊಡ್ಡದು ಎಂಬ ಸತ್ಯವನ್ನು ಕಂಡುಕೊಂಡ ದಲಿತ ಬಂಡಾಯದವರು ಬರಹ ಮತ್ತು ಬದುಕನ್ನು ಒಟ್ಟೊಟ್ಟಿಗೆ ರೂಪಿಸುವಂತಹ ಕಾರ್ಯದಲ್ಲಿ ಸಕ್ರಿಯರಾದರು. ಹಾಗಾಗಿ ಅವರ ಸೃಷ್ಟಿ ಕ್ರಿಯೆಯೇ ಒಂದು ಹೊಸ ಪ್ರಯೋಗವೆನಿಸಿತು. ಜನಸಾಮಾನ್ಯರ ವೇದನೆಗಳನ್ನು ಸಂವೇದನೆ ಗೊಳಿಸುವಂತಹ ಕಾರ್ಯ ಬಂಡಾಯದವರ ಮುಖ್ಯ ಗುರಿಯಾಯಿತು. ದಲಿತರು, ಮುಸ್ಲಿಮರು, ಸ್ತ್ರೀಯರು, ಶೂದ್ರರು, ಮುಂತಾದ ವರ್ಗದ ಜನ ಪಾಲ್ಗೊಳ್ಳುವುದರ ಮೂಲಕ ಈ ಸಾಹಿತ್ಯದ ಸತ್ವ ಹೆಚ್ಚಿತು. ಇತರರಿಂದ ತಮಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ಹಕ್ಕೊತ್ತಾಯದ ಸ್ವರೂಪದ ದನಿಗಳು ಕೇಳಿಬಂದವು. ಶಿಕ್ಷಣ ಇವರಿಗೆ ಕೇವಲ ಅಕ್ಷರ ಜ್ಞಾನವಾಗಿ ಕಾಣಿಸಲಿಲ್ಲ. ನಮ್ಮ ಅಂತರಂಗದ ಆಲೋಚನೆಗಳನ್ನು ಹೊರಹಾಕುವುದಕ್ಕೆ ಸಹಜ ಮಾರ್ಗವಾಗಿ ಗೋಚರವಾಯಿತು. ನೊಂದವರಿಗೆ ಇದನ್ನ ಮನವರಿಕೆ ಮಾಡಿಕೊಡುತ್ತಲೇ ಹೊಸ ಸಮಾಜದ ರಚನೆಗೆ ಅವರನ್ನ ಸಿದ್ಧಗೊಳಿಸುವುದು ಬರಹಗಾರರ ಮುಖ್ಯ ಆಶಯವಾಯಿತು. ಬಹಳಷ್ಟು ಮಂದಿಯಲ್ಲಿ ಬಂಡಾಯವೆಂದರೆ ಹಿಂಸೆ ಎಂಬ ಭಾವನೆ ಇದೆ; ಅದು ತಪ್ಪು ಕಲ್ಪನೆ. ಎಲ್ಲರ ಹಾಗೆ ಇವರೂ ಸಹ ತಮಗೆ ದಕ್ಕಬೇಕಾದುದನ್ನು ಹಕ್ಕಿನ ಮೂಲಕ ಪಡೆಯಲು ಯತ್ನಿಸುತ್ತಾರೆ. ದಕ್ಕಬೇಕಾದುದನ್ನು ಹಕ್ಕಿನ ಮೂಲಕ ಪಡೆದುಕೊಳ್ಳುವಂತಹ ವ್ಯವಸ್ಥೆಗೆ ಜನರನ್ನು ಸಜ್ಜುಗೊಳಿಸುವಂಥದ್ದು ಬಂಡಾಯ. ಇದೇ ಆ ಸಂದರ್ಭದ ‘ವೈಚಾರಿಕತೆ’. ಎಂಬುದು ಮೆದುಳಿನ ಕ್ರಿಯೆ ಯಾದರೆ ಬಂಡಾಯ ಕರುಳಿನ ಕ್ರಿಯೆಯಾಗಿದೆ. ಬಲವಂತವಾಗಿ ಹೇರಿದ್ದನ್ನು ಕಿತ್ತೊಗೆಯುವ ಪ್ರಕ್ರಿಯೆಯಲ್ಲಿ ಬಂಡಾಯದ ಸೃಜನಶೀಲತೆ ಸ್ಫೋಟಗೊಂಡಿತು. ಕರುಳಿನ ಕ್ರಿಯೆ ಹಾಗೂ ಮೆದುಳಿನ ಕ್ರಿಯೆಯೇ ಬಂಡಾಯ ಕಾದಂಬರಿಗಳ ಮುಖ್ಯ ಅಂತಃಸತ್ವ ವಾಯಿತು. ಇದೇ ಒಂದು ಬಗೆಯ ‘ಆಧುನಿಕತೆ’. ಇದು ನಮ್ಮ ಬದುಕಿನಲ್ಲಿ ಬಹುಮುಖಿಯಾಗಿ ಒಳಸೇರುವಂಥದ್ದು.

“ಕನ್ನಡದಲ್ಲಿ ‘ಆಧುನಿಕತೆ’ ಎಂಬ ಶಬ್ದವನ್ನು ನಗರಕ್ಕೆ ಸಂಬಂಧಿಸಿದುದು, ಗ್ರಾಮೀಣವಲ್ಲದ್ದು, ಇತ್ತೀಚಿನದು, ವಿದ್ಯಾವಂತರ – ಶಿಷ್ಟರ ಜಗತ್ತಿನದು, ವೈಚಾರಿಕವಾದುದು, ಪ್ರಗತಿಪರವಾದುದು, ವೈಜ್ಞಾನಿಕವಾದುದು ಇತ್ಯಾದಿ ಅರ್ಥಗಳಲ್ಲಿ ಬಳಸಲಾಗುತ್ತಿದೆ. ಹಾಗೆ ಕಂಡರೆ ಈ ಎಲ್ಲ ಅರ್ಥಗಳೂ” ಪರಸ್ಪರ ಸಂಬಂಧವುಳ್ಳವೇ ಆಗಿವೆ. ಹಾಗೂ ಎಲ್ಲ ಅರ್ಥಗಳನ್ನೊಳಗೊಂಡ ಇಡೀ ಆಧುನಿಕತೆಯ ಪರಿಕಲ್ಪನೆಯೇ ವಸಾಹತೀಕರಣ, ಕೈಗಾರಿಕೀಕರಣ, ನಗರೀಕರಣಗಳ ಜೊತೆಯಲ್ಲಿ ನಮ್ಮ ಅನುಭವವಾಗಿರುವಂಥದ್ದಾಗಿದೆ. ಮೊದಲನೆಯದಾಗಿ ಆಧುನಿಕತೆಯ ವಿಜ್ಞಾನ ಮತ್ತು ಕೈಗಾರಿಕೆಗಳು ನಮ್ಮ ಭೋಗಕ್ಕಾಗಿ ಒದಗಿಸಿದ ಸರಕುಗಳ ಮೂಲಕ ಬಂದಿದ್ದು, ವ್ಯಕ್ತಿಯ ಬದುಕುವ ವಿಧಾನದಲ್ಲಿ ಹೊರರೂಪೀ ಮಾರ್ಪಾಟುಗಳನ್ನು ತಂದಿತು. ಎರಡನೆಯದಾಗಿ ಸಾರ್ವಜನಿಕ ಜಾಗಗಳ ರೂಪದಲ್ಲಿ ಬಂದು ನಿಜವಾಗಿ ತಳಮಳವುಂಟು ಮಾಡಿತು. ಹಾಗೂ ನಮ್ಮ ಆಲೋಚನಾ ವಿಧಾನದಲ್ಲಿ ನಿರ್ಣಾಯಕವಾದ ಮಾರ್ಪಾಟು ತಂದಿತು. ಶಿಕ್ಷಣ ಮತ್ತು ವೈಚಾರಿಕತೆಗಳ ರೂಪದಲ್ಲಿ ಬಂದಂಥ ಆಧುನಿಕತೆಯು ಅಂತಿಮವಾಗಿ ಮಾಡಿದ ಚಾಲನೆ ಇನ್ನೂ ಹೆಚ್ಚಿನದು. ಹೀಗೆ ಆಧುನಿಕತೆಯು ಅಂದರೆ ಪಶ್ಚಿಮದ ಸಂಸ್ಕೃತಿಯು ಹೊರಗೂ ಒಳಗೂ ಭೌತಿಕವಾಗಿಯೂ ಮಾನಸಿಕವಾಗಿಯೂ ಒಂದೇ ಏಟಿಗೆ ಆಕ್ರಮಿಸಿತು”.[1]

ಬಂಡಾಯ ಕಾದಂಬರಿಗಳು

ಈ ಹಿನ್ನೆಲೆಯಲ್ಲಿ ಆಧುನಿಕತೆಯ ಪರಿಶೋಧಕ್ಕಾಗಿ ಇಲ್ಲಿ ಬಂಡಾಯದ ಪ್ರಾತಿನಿಧಿಕವೆನ್ನಬಹುದಾದ ಬರಗೂರು ರಾಮಚಂದ್ರಪ್ಪನವರ ಒಂದು ಊರಿನ ಕತೆ, ಬೆಂಕಿ, ಸಂಗಪ್ಪನ ಸಾಹಸಗಳು ಹಾಗು ಶಬರಿ. ಕುಂ.ವೀರಭದ್ರಪ್ಪನವರ ಕಪ್ಪು, ಯಾಪಿಲ್ಲು, ಶಾಮಣ್ಣ, ಬಿಳುಮನೆ ರಾಮದಾಸರ ‘ಕರಾವಳಿ ಹುಡುಗಿ’, ಗೀತಾನಾಗಭೂಷಣರ ‘ಹಸಿಮಾಂಸ ಮತ್ತು ಹದ್ದುಗಳು’, ಸಾರಾ ಅಬೂಬಕ್ಕರ್ ಅವರ ‘ಚಂದ್ರಗಿರಿಯ ತೀರದಲಿ’. ನಾಗವೇಣಿಯವರ ‘ಗಾಂಧಿ ಬಂದ’, ಕಾ.ತ. ಚಿಕ್ಕಣ್ಣ ಅವರ ‘ಮುಂಜಾವು’ ಕಾದಂಬರಿಗಳನ್ನು ಅವಲೋಕನಕ್ಕೆ ಬಳಸಿಕೊಳ್ಳಲಾಗಿದೆ.

ಬರಗೂರು ರಾಮಚಂದ್ರಪ್ಪನವರ ಕಾದಂಬರಿಗಳ ವಸ್ತು ಸ್ವಾತಂತ್ರ್ಯಾನಂತರದ ಗ್ರಾಮೀಣ ಪರಿಸರದ್ದು. ಈ ಸನ್ನಿವೇಶದಲ್ಲಿ ಭಾರತದಲ್ಲಿ ಗೋಚರವಾದ ಬೃಹದ್‌ ಕೈಗಾರಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಉಂಟು ಮಾಡಿದ ಪ್ರಭಾವ ತಲ್ಲಣಗಳು ಊಳಿಗಮಾನ್ಯ ವ್ಯವಸ್ಥೆ ಅದನ್ನು ಬಳಸಿಕೊಂಡ ಸ್ಥಿತಿಗತಿ – ಈ ಬದಲಾವಣೆಗಳನ್ನು ಬರಗೂರರ ಕಾದಂಬರಿಗಳು ಗ್ರಹಿಸುತ್ತ ಬಂದಿವೆ. “ಪ್ರಗತಿಯ ನಡೆಯನ್ನ ಬಿಗಿಹಿಡಿದಿರುವ ಶಕ್ತಿಗಳು, ಹಲವು ಜಾತಿ ಮತ್ತು ಆಧ್ಯಾತ್ಮಿಕತೆ, ಆದರ್ಶ ಅದರ ಬೆನ್ನು ಹಿಡಿದರುವ ಮೌಢ್ಯ ಮುಖ್ಯವಾದುದು. ಅದರೆ ಇವೆಲ್ಲವುಗಳು ಅಡಿಯಲ್ಲಿರುವ ಚಾಲಕಶಕ್ತಿಯೆಂದರೆ ಜಮೀನ್ದಾರಿಕೆ. ಜಮೀನುನ್ದಾರಿ ಸಡಿಲವಾಗುತ್ತಿರುವ ಅಥವಾ ಕುಸಿಯುತ್ತಿರುವ ತಳಮಳ ಒಂದು ಕಡೆ. ಇದರ ಮ್ಲಾನಚಿತ್ರದ ಎದುರು ಹೊಸಶಕ್ತಿ ಎದ್ದು ಬರುವ ಬಿರುಸು ಮತ್ತೊಂದು ಕಡೆ. ಆದರೆ ಈ ಹೊಸಶಕ್ತಿ ಇನ್ನೂ ಪ್ರಬಲವಾಗಬೇಕಾದುದು. ಅದಕ್ಕೆ ಈಗಿಂದೀಗಲೇ ಹಳೆಯ ವ್ಯವಸ್ಥೆಯನ್ನು ಮೀರುವ ತಾಕತ್ತು ಬಂದಿಲ್ಲ. ಇಂದಿನ ಪ್ರಜಾಪ್ರಭುತ್ವ ಈ ಪ್ರಗತಿಪರಶಕ್ತಿಗೆ ವಿರುದ್ಧವಾಗೇ ಇದೆ. ಅಂದರೆ ಅವರ ಕಾದಂಬರಿಗಳು ಈ ಪ್ರತಿಗಾಮಿ ಮತ್ತು ಸಮಾಜವಾದಿ ಪ್ರಗತಿಪರ ಶಕ್ತಿಗಳ ಸಂಘರ್ಷದ ಮೂಲ ಮಾದರಿಯನ್ನು ಸೆರೆಹಿಡಿಯ ಬಯಸುತ್ತವೆ. ಈ ವ್ಯವಸ್ಥೆಯ ಎದುರು ದಿಟ್ಟತನದಿಂದ ಎದ್ದು ನಿಲ್ಲಬೇಕಾದುದು ದಲಿತಶಕ್ತಿ ಎಂಬುದನ್ನು ಗುರುತಿಸುತ್ತವೆ. ಅದು ಒಂದು ಬಗೆಯಲ್ಲಿ ವರ್ಣ ಹೋರಾಟವೂ ವರ್ಗ ಹೋರಾಟವೂ ಅಂತರ್ಗತವಾಗಿ ನಡೆಯುವ ಸನ್ನಿವೇಶ”.[2] ಸ್ತ್ರೀ ಸ್ವಾತಂತ್ರ್ಯ ವರ್ಗ ಹೋರಾಟದ ಒಂದು ಭಾಗವೇ ಆಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬರಗೂರರ ‘ಬೆಂಕಿ’ ಕಾದಂಬರಿ. ಯಾವುದೇ ರಾಜಿಗೆ ಒಗ್ಗದ ಬರಗೂರರ ವ್ಯಕ್ತಿತ್ವವೇ ಅವರ ಕಾದಂಬರಿಗಳ ಪಾತ್ರಗಳಲ್ಲೂ ಹರಿದುಬಂದಿರುವುದನ್ನು ಅವರ ಕೆಲವು ಕೃತಿಗಳಲ್ಲಾದರೂ ಕಾಣಬಹುದು. ಸಾಮಾಜಿಕ ಪ್ರಜ್ಞೆಯ ಪ್ರಖರತೆ ಅವರ ಕೃತಿಗಳ ಪ್ರಮುಖ ಲಕ್ಷಣ. ‘ಬೆಂಕಿ’ ಕಾದಂಬರಿಯ ಕಥೆಯೂ ಈ ವಿವರಗಳಿಗೆ ಹೊರತಾದುದಲ್ಲ.

ಈ ಕಾದಂಬರಿಯ ಲಕ್ಷ್ಮಿಯ ಬದುಕಿನಲ್ಲಿ ಎದುರಾಗುವ ಅಡ್ಡಿ ಆತಂಕಗಳು ಆತ್ಮೀಯರಾಗಿಯೇ ಆಕೆಯನ್ನು ಹತ್ತಿರ ಮಾಡಿಕೊಳ್ಳುವ ಪ್ರಯತ್ನ ಅವರಿಂದ ಲಕ್ಷ್ಮಿಯ ಮನಸ್ಸಿನ ಮೇಲುಂಟಾಗುವ ಕೆಟ್ಟಪರಿಣಾಮ ಇತ್ಯಾದಿ ಒಂದು ಸಂಸಾರದ ಮೂಲಕ ಇಡೀ ಸಮಾಜದ ಬಹುಮುಖಗಳನ್ನು ಬರಗೂ”ರರು ಸಹಜವಾಗಿ ಬಿಡಿಸಿದ್ದಾರೆ. ಕೆಂಚಣ್ಣ ಮತ್ತು ಗಂಗಣ್ಣನ ತಂಗಿಯ ಅನೈತಿಕ ಸಂಬಂಧ, ಅದು ಗಂಗಣ್ಣನ ಮನಸ್ಸಿನ ಮೇಲಾಗುವ ಆಘಾತ, ಲಕ್ಷ್ಮಿಗೆ ಇಷ್ಟವಿಲ್ಲದಿದ್ದರೂ ನಪುಂಸಕ ನರಸಿಂಹನೊಂದಿಗೆ ಮದುವೆ ನಡೆಯುವುದು, ತನ್ನ ಕಾಮತೃಪ್ತಿಗಾಗಿ ಸೀನಪ್ಪ ಲಕ್ಷ್ಮಿಯನ್ನು ನಪುಂಸಕನೊಬ್ಬನಿಗೆ ಮದುವೆ ಮಾಡಿಸುವುದು ಇವರೆಲ್ಲರ ಬಗೆಗೆ ಜನರ ಪ್ರತಿಕ್ರಿಯೆ, ಲಕ್ಷ್ಮಿಯ ಹೃದಯವನ್ನು ಕಲಕುವ ಇವೆಲ್ಲದರ ವ್ಯಥೆಯ ಕತೆಯನ್ನು ಬರಗೂರರು ನೈಜವಾಗಿ ಚಿತ್ರಿಸಿದ್ದಾರೆ. ನರಸಿಂಹನ ನಪುಂಸಕತ್ವದ ನಿವಾರಣೆಗಾಗಿ ಗಂಡಹೆಂಡಿರನ್ನು ಪುಣ್ಯಕ್ಷೇತ್ರಗಳಿಗೆ ಕರೆದೊಯ್ಯುವುದರ ಮೂಲಕ ಸೀನಪ್ಪ ಲಕ್ಷ್ಮಿಯ ಆತ್ಮೀಯನಾಗುವುದು. ಇದಕ್ಕಾಗಿ ಖರ್ಚು ಮಾಡಿದ ಹಣವನ್ನು ಆಕೆಯ ಕೂಲಿಯಲ್ಲಿ ಹಿಡಿದುಕೊಳ್ಳುವುದು. ನಾಮಕಾವಸ್ಥೆಗಾಗಿ ಆಕೆಗೆ ಯಜಮಾಣಿಕೆ ಪಟ್ಟಕಟ್ಟುವುದು ಇವೆಲ್ಲ ಯಾವುದೇ ಸಮಾಜದಲ್ಲಿ ಇದ್ದಿರಬಹುದಾದ ಅಥವಾ ನಡೆಯಬಹುದಾದ ನಂಬಿಕೆ, ಆಚರಣೆ, ಸಂಚು, ಕ್ರೌರ್ಯ, ದಬ್ಬಾಳಿಕೆ, ಶೋಷಣೆಗಳಾದರೂ ಇವೆಲ್ಲ ಲಕ್ಷ್ಮಿಯ ವೈಯಕ್ತಿಕ ನೆಲೆಯಲ್ಲಿ ಪ್ರಾರಂಭಗೊಂಡು ಸಾಮೂಹಿಕ ಸ್ವರೂಪವನ್ನು ಪಡೆಯುವಲ್ಲಿ ಕಾದಂಬರಿಗೆ ಕಲಾತ್ಮಕ ರೂಪ ಸಿದ್ಧಿಸುತ್ತದೆ.

ಪುಣ್ಯಕ್ಷೇತ್ರಗಳಿಗೆ ಹೋಗುವಂಥ ಸಂಪ್ರದಾಯವನ್ನು ಪ್ರಚೋದಿಸುವವನು ಸೀನಪ್ಪನಾದರೆ ಇದರ ವಿರೋಧಿಯಾಗಿ ಪ್ರತಿಭಟಿಸುವವನು ರಂಗಸ್ವಾಮಿ. ಸೀನಪ್ಪನ ಸಂಚುಗಳ ವಿರುದ್ಧ ಈತ ಸೆಡ್ಡು ಹೊಡೆಯುತ್ತಾನೆ. ಪ್ರತಿಭಟಿಸದೆ ನೋವನ್ನು ನುಂಗಿಕೊಂಡೇ ವಾಸ್ತವಸ್ಥಿತಿಯ ಅರಿವಿಗಾಗಿ ಲಕ್ಷ್ಮಿ ಸಹನೆ ತೋರುವವಳಾಗಿ ಕಂಡುಬರುತ್ತಾಳೆ. ಇದರ ಪರಿಣಾಮವಾಗಿ ಆತನ ಮಾತುಗಳಿಗೆಲ್ಲ ತಡವಾಗಿ ಒಪ್ಪಿಗೆ ಸೂಚಿಸುತ್ತಾಳೆ. ನಪುಂಸಕತ್ವದ ನಿವಾರಣೆಗಾಗಿ ಸನ್ಯಾಸಿಗಳ ದರ್ಶನ ಮಾಡಿಸುವಾಗ, ಸನ್ಯಾಸಿ ಮತ್ತು ಲಕ್ಷ್ಮಿಯ ಮೊದಲ ಭೇಟಿಯಲ್ಲಿ ಮತೀಯ ಮೌಲ್ಯಗಳನ್ನು ಕಾದಂಬರಿಕಾರರು ವ್ಯಂಗ್ಯವಾಗಿ ವಿಡಂಬಿಸಿದ್ದಾರೆ. ಲಕ್ಷ್ಮಿಯನ್ನು ಸುತ್ತುವ ಸೀನಪ್ಪ ಮತ್ತು ಊರಿನ ಕೆಲವರ ಹೀನ ಮುಖಗಳನ್ನು ಬರಗೂರು ಯಾವುದೇ ಬಣ್ಣ ಲೇಪಿಸದೆ ಚಿತ್ರಿಸಿದ್ದಾರೆ. ಹೀಗೆ ನಾಯಕಿಯ ವೈಯಕ್ತಿಕ ನೆಲೆಯಲ್ಲಿ ಪ್ರಾರಂಭವಾದ ಸಮಸ್ಯೆ ಆಕೆಯ ಗಂಡನ ನಪುಂಸಕತ್ವದ ನಿವಾರಣೆಗಾಗಿ ನಡೆಯುವ ಆಚರಣೆ, ಉತ್ಸವಾರಾಧನೆ – ಸ್ವಾಮಿಯ ದರ್ಶನ ಇವೆಲ್ಲದರಲ್ಲಿ ಸಮಾಜದ ತೊಡಗುವಿಕೆ ಇದ್ದು ಸಾಮೂಹಿಕ ಸ್ವರೂಪ ಪಡೆಯುತ್ತದೆ. “ಲಕ್ಷ್ಮಿ ತಲೆ ಎತ್ತಿದಳು. ಎಲ್ಲರನ್ನೂ ಒಂದು ಸಾರಿ ದಿಟ್ಟಿಸಿದಳು. ಅಲ್ಲಿದ್ದವರಿಗೆ ಅವಳನ್ನು ಎದುರಿಸೋ ಧೈರ್ಯವಾಗಲಿಲ್ಲ. ಸೀನಪ್ಪ ಎದೆಗುಂದಿ ನಿಂತಿದ್ದ. ಯಾಕೆಂದರೆ ಅವಳಲ್ಲಿ ಭಗ್ಗನೆ ಬೆಂಕಿ ಹತ್ತಿತ್ತು. ಕೆನ್ನ ಮೇಲೆ ಹನಿ ಇದ್ದರೂ ಕಣ್ಣುಗಳು ಕೆಂಡದುಂಡೆಗಳಂತೆ ಕಂಡವು” – ಈ ಮಾತುಗಳು ನರಸಿಂಹನ ಬದುಕಿಗೆ ಬರೆಬಿದ್ದ ನಂತರ ಲಕ್ಷ್ಮಿಯಲ್ಲಾದ ತಳಮಳ, ಚಿಂತೆ, ಆಕ್ರೋಶ – ಇವೆಲ್ಲದರ ಸ್ಫೋಟವೆಂಬಂತೆ ವ್ಯಕ್ತಪಟ್ಟಿವೆ. ಆಚರಣೆಯ ನೆಪದಲ್ಲಿ ಹಸಿವು ತಾಳಲಾರದೆ ನರಸಿಂಹ ಸತ್ತದ್ದಕ್ಕೆ ಸ್ವಾಮಿಗಳು ಲಕ್ಷ್ಮಿಗೆ ಹೆದರಿ ಪಲಾಯನ ಸೂತ್ರ ಹಿಡಿಯುವುದು, ಮೇಲ್ನೋಟಕ್ಕೆ ನರಸಿಂಹನ ಒಳಿತಿಗಾಗಿ ಓಡಾಡುವ ಸೋಗು ಹಾಕಿದ್ದ ಸೀನಪ್ಪನೂ ಲಕ್ಷ್ಮಿಯ ಸ್ಥಿತಿಯನ್ನು ಎದುರಿಸಲಾಗದೆ ನಿಧಾನಗತಿಗೆ ಬರುವುದು. ಸಂಪ್ರದಾಯಗಳ ವಿರುದ್ಧ ಪ್ರತಿಭಟಿಸಿಯೂ ಕೊನೆಯಲ್ಲಿ ಅಸಹಾಯಕನಾಗುವ ರಂಗಸ್ವಾಮಿ ಸ್ಥಿತಿ – ಅಂತ್ಯದವರೆಗೂ ಎಲ್ಲವನ್ನೂ ಸಹಿಸಿಕೊಂಡು ಗಂಡನನ್ನು ಕಳೆದುಕೊಂಡ ಲಕ್ಷ್ಮಿಯ ಅಸ್ತವ್ಯಸ್ತ ಬದುಕು, ಸಂಪ್ರದಾಯ, ಆಚರಣೆಗಳ ಹೆಸರಿನಲ್ಲಿ ದೊಡ್ಡವರು ಮಾಡುವ ‘ಸಣ್ಣತನ’ ಇವೆಲ್ಲವೂ ಕಾದಂಬರಿಯಲ್ಲಿ ಪರಿಣಾಮಕಾರಿಯಾದ ಸ್ವರೂಪ ತಳೆದಿವೆ.

ಕೆಲವು ಕ್ರಾಂತಿಕಾರಿ ಲೇಖಕರ ಕಾದಂಬರಿಗಳ ಪಾತ್ರಗಳು ಇದ್ದಕ್ಕಿದ್ದಂತೆಯೇ ಕ್ರಾಂತಿ ಮಾಡಲು ಹೋಗಿ ವಿಫಲವಾಗುವುದನ್ನು ಕಾಣುತ್ತೇವೆ. ಆದರೆ, ಜನಪರ ಹೋರಾಟಗಳಲ್ಲಿ ಕಾಳಜಿಯುಳ್ಳ ಬರಗೂರರ ಈ ಸನ್ನಿವೇಶಗಳ ಕಟುವಾಸ್ತವ ದೌರ್ಜನ್ಯಗಳಿಗೆ ಒಳಗಾಗಿ ಅದರಿಂದ ಪಾಠ ಕಲಿತು, ಅನುಭವದ ಅಡಿಪಾಯದ ಮೇಲೆ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವ ಕ್ರಮಬದ್ಧವಾದ ಬೆಳವಣಿಗೆ ಕಂಡುಬರುತ್ತದೆ.

‘ಭರತನಗರಿ’ ಅವರ ಸೃಜನಶೀಲತೆಯ ಬೆಳವಣಿಗೆಗೆ ಮತ್ತೊಂದು ಸಾಕ್ಷಿ. ಹದಗೆಟಟ ಪರಿಸ್ಥಿತಿಯ ಭ್ರಷ್ಟ ರಾಜಕಾರಣದ ಅನೇಕ ಮಜಲುಗಳ ವಿಡಂಬನೆ ಕೃತಿಯ ವಸ್ತು. ವ್ಯಂಗ್ಯ ಇಲ್ಲಿಯ ಬರಹಗಳ ಸ್ಥಾಯಿ. ಬರಗೂರರು ತಮ್ಮ ಇದುವರೆಗಿನ ಕೃತಿಗಳಲ್ಲಿ ಓದುಗನಿಗೂ ಕೃತಿಕಾರನಿಗೂ ಸಂಬಂಧ ಕಲ್ಪಿಸುವ ಪ್ರಯತ್ನದಲ್ಲಿ ತೊಡಗಿದ್ದುದು ನಿಜ. ಆದರೆ ಈ ಪ್ರಯತ್ನದ ಮುಂದುವರಿಕೆ ಮತ್ತು ಸಫಲತೆ ‘ಭರತನಗರಿ’ಯಲ್ಲಿ ನಡೆದಿದೆ. ಓದುಗನೊಂದಿಗೆ ಸಂಬಂಧ ಸ್ಥಾಪಿಸುವ ಮುತುವರ್ಜಿಯನ್ನು ಈ ಕೃತಿ ಸಮರ್ಥವಾಗಿ ಮಾಡುತ್ತದೆ. ಇಲ್ಲಿ ಬಳಕೆಯಾಗಿರುವ ವಸ್ತು, ತಂತ್ರ, ವಿನ್ಯಾಸ – ಇವೆಲ್ಲ ಅದಕ್ಕೆ ಸಾಕ್ಷಿಯಾಗಿವೆ. ಭರತನಗರಿ ಕಾದಂಬರಿ ಎನಿಸಿದರೂ ಇದುವರೆಗಿನ ಕಾದಂಬರಿಗಳಲ್ಲಿರುವ ಸಾಂಪ್ರದಾಯಿಕ ಸ್ವರೂಪ ಇದಕ್ಕಿಲ್ಲ. “ಸಿದ್ಧ ಕಾದಂಬರಿ ರೂಪವನ್ನು ಸೀಳಿಕೊಂಡು ಹೊಸ ಆಕಾರ ತಾಳುವ ಈ ಅಭಿವ್ಯಕ್ತ ವಿಧಾನ ‘ಸಂಗಪ್ಪನ ಸಾಹಸಗಳು’ ಎಂಬ ಕಾದಂಬರಿಯಲ್ಲಿ ಪ್ರಾರಂಭವಾಗಿ ‘ಭರತನಗರಿ’ಯಲ್ಲಿ ಮತ್ತಷ್ಟು ಖಚಿತವಾಗಿ ಕಾಣಿಸಿಕೊಂಡಿದೆ” ಎಂಬ ಅವರ ಮಾತು ನಿಜ.

‘ಭರತನಗರಿ’ ತಂತ್ರದ ದೃಷ್ಟಿಯಿಂದಲೂ ಕನ್ನಡಕ್ಕೆ ಹೊಚ್ಚ ಹೊಸ ಕಾದಂಬರಿ. ಇದರಲ್ಲಿರುವ ಪ್ರತಿಯೊಂದು ಅಧ್ಯಾಯಕ್ಕೂ ಪ್ರತ್ಯೇಕ ಅಸ್ತಿತ್ವವಿದೆ. ಅಂತೆಯೇ ಪ್ರತಿಯೊಂದಕ್ಕೂ ಸಂಬಂಧವಿದೆ. ಸ್ವಾತಂತ್ರ್ಯ, ಸಂವಿಧಾನ, ಚುನಾವಣೆ ಮುಂತಾದ ಪರಿಕಲ್ಪನೆಗಳೆಲ್ಲ ವ್ಯಕ್ತಿಪಾತ್ರಗಳೆಂಬಂತೆ ರೂಪುಗೊಂಡಿರುವುದು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೊಸ ತಂತ್ರವಾಗಿದೆ. ಇಲ್ಲಿ ಇವೆಲ್ಲವೂ ಮಾತನಾಡುತ್ತವೆ, ನಡೆಯುತ್ತವೆ, ಕ್ರಿಯೆಗಿಳಿಯುತ್ತವೆ. ಈ ರೀತಿ ಬರಗೂರರು ಏಕಕಾಲದಲ್ಲಿ ಫ್ಯಾಂಟಿಸಿ ಮತ್ತು ಸಾಮಾಜಿಕ ವಾಸ್ತವಗಳನ್ನು ಹಿಡಿದಿಡುವತ್ತ ಹೊಸ ತಂತ್ರವನ್ನೇ ಶೋಧಿಸಿದಂತಾಗಿದೆ.

ಸ್ವಾತಂತ್ರ್ಯದೇವಿಯ ಸಿಂಹಾಸನಾರೋಹಣ, ಸಂವಿಧಾನಶಿವ, ಸಂವಿಧಾನಶಾಹಿ, ಯುವರಾಜ ಪಟ್ಟಾಭಿಷೇಕಂ, ಚುನಾವಣೇಶ್ವರ, ಬೆತ್ತಸೇವೆ, ಗುಂಡುಸೇವೆ, ನಗರಿ ಗೀತೆ – ಇಂಥ ಆಕರ್ಷಕ ಅಧ್ಯಾಯಗಳು ಈ ಪುಸ್ತಕದಲ್ಲಿವೆ. ಒಂದೊಂದು ಭಾಗವೂ ಒಂದೊಂದು ವಾಕ್ಯವೂ ಕ್ಷುದ್ರ ರಾಜಕಾರಣದ ಹಲವಾರು ಮುಖಗಳನ್ನು ವ್ಯಂಗ್ಯದ ಮೂಲಕ ನಮ್ಮ ಮುಂದಿಡುತ್ತದೆ. ಸ್ವಾತಂತ್ರ್ಯಾನಂತರದ ನಮ್ಮ ದೇಶದ ಬಗೆಗೆ ಜನತೆ ಕಂಡ ಕನಸುಗಳು ನನಸಾಗದೆ ಭ್ರಮನಿರಸನಗಳಾಗಿರುವುದುಂಟು. ಸ್ವಾತಂತ್ರ್ಯ ಲಭಿಸಿ, ಹಲವು ವರ್ಷಗಳಾಗಿದ್ದರೂ ಪ್ರತಿಷ್ಠಿತರು, ರಾಜಕಾರಣಿಗಳು ಓಬಿರಾಯನ ಕಾಲದ ಮನಸ್ಸನ್ನು ಬದಲಾಯಿಸಿಕೊಂಡಿಲ್ಲ. ಹೊಸ ಹೊಸ ಆಲೋಚನೆ ಅಭಿರುಚಿಗಳನ್ನು ಮೂಡಿಸಿಕೊಂಡಿಲ್ಲ. ಇದಕ್ಕೆ ಹಲವಾರು ಪುರಾವೆಗಳು ಈ ಕೃತಿಯಲ್ಲಿ ಕಂಡುಬರುತ್ತವೆ. ‘ಪವಿತ್ರನಾಡು’, ‘ಪುಣ್ಯಭೂಮಿ’ ಎಂದು ಪುರೋಹಿತಶಾಹಿಯಿಂದ ಪರಾಕು ಹೇಳಿಸಿಕೊಂಡಿರುವ ಈ ಇಂಡಿಯಾದ ಜನಸಂದಣಿ ಮುಕ್ತಕಂಠದಿಂದ ಸಮ್ಮತಿ ಸೂಚಿಸಿರುವ ರಾಜಕೀಯ ಭ್ರಷ್ಟತೆ ಮತ್ತು ಇಡೀ ಜನತೆ ಮೂಕರಾಗಿ ನಿರಂತರವಾಗಿ ಅನುಭವಿಸುವ ಎಲ್ಲ ರೀತಿಯ ಯಾತನೆಗಳನ್ನು ಬರಗೂರರು ವಿಷಾದ ಬೆರೆತ ವ್ಯಂಗ್ಯ ವಿಡಂಬನೆಗಳಿಂದ ಬರೆದಿದ್ದಾರೆ..ಹೀಗೆ ಬರೆಯುವಾಗ ಇವತ್ತು ಬದುಕಿರುವ ವ್ಯಕ್ತಿಗಳೂ ಪಾತ್ರಗಳಾಗಿ ಬರುತ್ತಾರೆ. ಅವರ ವ್ಯಕ್ತಿತ್ವದ ಪ್ರಧಾನ ಲಕ್ಷಣಗಳು ಈ ಪಾತ್ರಗಳ ಮೂಲಕ ಪ್ರಕಟವಾಗುತ್ತವೆ..ಟಾಟಾ ಬಿರ್ಲಾಗಳು ಇಲ್ಲಿ ತಾತಯ್ಯ, ಬೀರಯ್ಯ ಆಗುತ್ತಾರೆ. ನಮ್ಮ ಅನೇಕ ಹಿರಿಯ ರಾಜಕಾರಣಿಗಳು ಮಾರ್ಜಿಭಾಯಿ, ಜಗ್ಗೂರಾವ್‌, ವಾಜಪೇಯಿಬಿಹಾರಿ, ಅದ್ವಾನಕೇಸರಿ, ಸಿಂಹಚರಣ್‌, ಶೇಖರಚಂದ್ರ – ಮುಂತಾದ ಹೆಸರುಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಭರತ ನಗರಿ’ಯ ನಾಯಕ ಇಂದಿರಾಗಾಂಧಿಯ ರಾಜಕೀಯ ವ್ಯಕ್ತಿತ್ವವನ್ನು ಒಳಗೊಂಡಂತೆ ಕಂಡರೆ ‘ಯುವರಾಜ’ ಸಂಜಯ ಗಾಂಧಿಯೋ, ರಾಜೀವ ಗಾಂಧಿಯೋ ಆಗಬಹುದು. ಇಷ್ಟಾದರೂ ವ್ಯಕ್ತಿಯ ಮಟ್ಟಕ್ಕೆ ನಿಲ್ಲದೆ ಒಂದು ಸೃಜನಶೀಲ ರಾಜಕೀಯ ವ್ಯಾಖ್ಯಾನವಾಗುವುದು ಮತ್ತು ಅನುಭವ ಕೊಡುವುದು ಈ ಕೃತಿಯ ಹೆಗ್ಗಳಿಕೆ. ಇಲ್ಲಿ ಬಳಸಿರುವ ಈ ತಂತ್ರವೂ ಹೊಸದು.

[1] ರಹಮತ್‌ ತರೀಕೆರೆ, ಪ್ರತಿಸಂಸ್ಕೃತಿ, ಪು.೪೭.

[2] ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, ಪು. ೨