ಈ ಕೃತಿಯ ‘ಸ್ವಾತಂತ್ರ್ಯದೇವಿ’, ‘ಭರತನಗರಿ’ಯ ಸ್ಥಿತಿಯ ಸಂಕೇತವಾಗಿದ್ದಾಳೆ. ಗೂಂಡಾಗಳು, ಪೋಲೀಸರು, ಬಲಿಷ್ಠರು ಆಕೆಯನ್ನು ಮಾನಸಿಕ ಅಸ್ವಸ್ಥಳನ್ನಾಗಿ ಮಾಡುವುದು, ಸ್ವಾತಂತ್ರ್ಯದ ಹಗರಣವಾಗುವುದು, ಆಳುವ ವ್ಯಕ್ತಿಯನ್ನು ನಾಯಿಯಂತೆ ಕಾಣುವುದು, ತೋರಿಕೆಯ ಜಾತ್ಯಾತೀತತೆ, ಧಾರ್ಮಿಕ ದೌರ್ಜನ್ಯ, ದೇವಾಲಯಗಳ ಮೋಸ, ಗೂಂಡಾಗಿರಿ, ಮಾನವೀಯತೆಯನ್ನು ಮುರಿದು ನಾಯಕನಾಜ್ಞೆಯಂಥೆ ರಕ್ಕಸ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಪೋಲಿಸರ ನಿಷ್ಠೆ, ಜನರ ದಮನ, ಪ್ರಾಮಾಣಿಕತೆಯ ಅಭಾವ, ಇತ್ಯಾದಿ ಅಂಶಗಳನ್ನೆಲ್ಲ ಒಟ್ಟೊಟ್ಟಿಗೆ ಭಾಷೆ ಮತ್ತು ಸನ್ನಿವೇಶಗಳಲ್ಲಿ ಬರಗೂರರು ಸ್ವಾರಸ್ಯವಾಗಿ ವಿವರಿಸಿದ್ದಾರೆ. ಸತ್ಯವನ್ನು ಹುಡುಕುವ ಕಣ್ಣುಗಳನ್ನು ಕುರುಡಾಗಿಸುವ ಕಾನೂನುಗಳ ಅಟ್ಟಹಾಸ ಮತ್ತು ಪ್ರಜಾಪ್ರಭುತ್ವ ರಾಷ್ಟ್ರದ ಮಾತುಗಳನ್ನು ಕಿತ್ತುಕೊಂಢು ಬಾಯಿಗೆ ಬಟ್ಟೆ ತುರುಕುವ ದುರಂತ ದಮನ ನೀತಿಯನ್ನು ಮೊನಚಾಗಿ ವಿಡಂಬಿಸಿದ್ದಾರೆ. ಜನರ ಅಭಿರುಚಿಗಳನ್ನು ಕಂಡುಹಿಡಿದು ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ನಮ್ಮ ಜನ ನಂಬುತ್ತ ಬಂದಿರುವ ಮೌಲ್ಯಗಳನ್ನು ಬಳಸಿಕೊಂಡು ಅವುಗಳಲ್ಲಿರುವ ವಿಪರ್ಯಾಸಗಳನ್ನು, ಹಳಸಲು ವಿಷಯಗಳನ್ನು, ವಿರೋಧಾಭಾಸಗಳನ್ನು ಎತ್ತಿಕೊಂಡು ವಾಸ್ತವವನ್ನು ಬಿಡಿಸುವ ಪ್ರಯತ್ನದಲ್ಲೇ ಬರಗೂರರು ಹೆಚ್ಚು ತೊಡಗಿ ಸಾಂಸ್ಕೃತಿಕ ಶೋಧ ನಡೆಸುತ್ತಾರೆ. ಗದ್ಯದಲ್ಲಿ ಹೇಳಲಾಗದ್ದನ್ನು ಪದ್ಯದಲ್ಲಿ ಕಾವ್ಯಾತ್ಮಕವಾಗಿ ಹೇಳುವ ಜನರನ್ನು ಮುಟ್ಟುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಹೀಗಾಗಿ ಭರತನಗರಿಯಲ್ಲಿ ಹಾಡುಗಳ ಬಳಕೆಯೂ ಇದೆ. ಅಧ್ಯಾಯಗಳಲ್ಲಿ ವಿಶಿಷ್ಟ ವಿಂಗಡಣೆ, ವಸ್ತು ಮತ್ತು ಪರಿಕಲ್ಪನೆಗಳಿಗೂ ಪಾತ್ರದ ಸ್ವರೂಪ, ಪೂರ್ಣಪ್ರಮಾಣದ ವ್ಯಂಗ್ಯ, ಇವುಗಳ ಜೊತೆಗೆ ಹಾಡುಗಳ ಬಳಕೆಯೂ ಆಗಿ ಇದೊಂದು ಹೊಸ ರೀತಿಯ ಕಾದಂಬರಿಯಾಗಿದೆ. ‘ಭರತನಗರಿಯ ತುಂಬ ದಾರಿದ್ರ್ಯವೇ ತಾಂಡವವಾಡುತ್ತಿರುವಾಗ ಈ ನಗರಿಯ ನಾಯಕವರೇಣ್ಯರ ಮನಸುಗಳೆಲ್ಲ ಮಲಿನವಾಗಿ ಬೀದಿ ಬೀದಿಯಲ್ಲಿ ಭ್ರಷ್ಟಗೆ ಬಾಯ್ತೆರೆದು ನಿಂತಿರುವಾಗ ನಗರಿಗೀತೆ ಹಾಡುವುದಕ್ಕೆ ಅರ್ಥವಾದರೂ ಎಲ್ಲಿದೆ? ಎನ್ನಿಸಿ ಭರತನಗರಿಯ ಭವ್ಯತೆಯನ್ನು ಸ್ತುತಿಸುವುದೇ ಸುಳ್ಳಿಗೆ ಸಿಂಹಾಸನ ಹಾಕಿದಂತೆ’ ಎಂದು ಭಾವಿಸುವ ಇಲ್ಲಿಯ ಯುವಕ ಅದರ ಹಾಡುವಿಕೆಯಲ್ಲಿ ನಿರಾಶೆ, ಬೇಸರ ತಾಳಿ ಕೊನೆಗೆ ಪ್ರತಿಭಟಿಸುತ್ತಾನೆ. ಅದರ ಲಯಕ್ಕನುಗುಣವಾಗಿ ಬೇರೊಂದು ಗೀತೆಯನ್ನು ರಚಿಸಿ ಹಾಡುತ್ತಾನೆ. ಯುವಕನ ಮಾತುಗಳಲ್ಲಿ ಉದ್ದಕ್ಕೂ ಸತ್ಯದ ಅರಿವನ್ನು ಕಾಣುತ್ತೇವೆ. ಈ ಸತ್ಯಾನ್ವೇಷಣೆಯಲ್ಲಿ ತೊಡಗುವ ಯುವಕ ತಾನು ಬರೆದದ್ದನ್ನು ಅದೇ ರೀತಿ ಹಾಡಿದಾಗ ಪೋಲೀಸರು ಆತನನ್ನು ಅವನ ಒಡನಾಡಿಗಳನ್ನು ಸಾಯಿಸುತ್ತಾರೆ. ಮಾರನೆಯ ದಿನ ಈ ಘಟನೆಯನ್ನು ನಾಯಕ ‘ಗೋಡೆ ಹಾರುವಾಗ ನೆಲಕ್ಕಪ್ಪಳಿಸಿ ಸತ್ತರೆಂದು’ ಸಾರಿ ಸರ್ಕಾರದ ಶೋಕವನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿಯ ನಾಯಕಿ ಕ್ಷುದ್ರ ರಾಜಕಾರಣದ ಪ್ರತಿನಿಧಿಯಾದಂತೆ, ಯುವಕ ಎಚ್ಚೆತ್ತ ಜನರ ಪ್ರತಿನಿಧಿಯಾಗುತ್ತಾನೆ.

ಇನ್ನು ‘ಭರತನಗರಿ’ಯ ಶಬ್ಧಚಿತ್ರಗಳಂತೂ ತುಂಬಾ ಸೊಗಸಾಗಿವೆ. “ಈ ದೇವಸ್ಥಾನ ಕಟ್ಟಿಸಿದ ಮೇಲೆ ಇದರ ಮಹಿಮೆಯ ಫಲವಾಗಿ ಅನೇಕ ಹೊಸ ಹಾಡುಗಳೂ ಹೊಸ ಆಚರಣೆಗಳೂ ಹುಟ್ಟಿವೆ. ನಮ್ಮ ಹಳ್ಳಿಗಳಲ್ಲಿ ಬೆತ್ತಲೆಸೇವೆ ಅಂತ್ಲೇ ಒಂದು ಆಚರಣೆಯಿದೆ. ಈ ಹೊಸ ದೇವಾಲಯ ಆದ ಮೇಲೆ ಬಹಿರಂಗ ಬೆತ್ತಲೆಸೇವೆ ನಿಲ್ಲಿಸಿ, ಈಗ ಮಾಡ್ತಾ ಇದಾರಲ್ಲ ಆ ಆಚರಣೆ ಅದೇ ಬೆತ್ತಲೆಸೇವೆ ಅದನ್ನು ಮಾಡ್ತಿದ್ದಾರೆ. ಅವರು ಹಾಡು ಕೇಳಿ ಪೋಷಣೆ ಕೂಗುವುದು ಸರ್ಕಾರದ ಪರವಾಗಿ ಪೋಲೀಸರೂ ಕ್ರಿಯಾತ್ಮಕವಾಗಿ ಭಾಗವಹಿಸುವು – ಇದು ‘ಬೆತ್ತಲೆಸೇವೆ’ ಅನ್ನೋ ಆಚರಣೆಯ ವೈಶಿಷ್ಟ್ಯ. ಪೋಲೀಸರ ಬದಲು ಕೆಲವು ಸಾರಿ ನಮ್ಮ ಯುವರಾಜನ ನೇತೃತ್ವದ ಸಮಾಜ ಸೇವಕರು ಭಾಗವಹಿಸುವುದುಂಟು. ಆಗ ಇನ್ನೂ ಚೆನ್ನಾಗಿರುತ್ತೆ! ಬಹಳ ಮಜವಾಗಿರುತ್ತೆ! ಇದು ನಮ್ಮ ಸಂಸ್ಕೃತಿಯ ಒಂದು ವಿಶೇಷ ಪದ್ಧತಿ!”(ಪುಟ.೬೫). ಹೀಗೆ ವ್ಯಂಗ್ಯ ಮಾಡುವ ಈ ಕೃತಿ ರಾಜಕಾರಣಿಗಳ ಮಠಾಧಿಪತಿಗಳ ಬಂಡವಾಳಶಾಹಿಗಳ ಆಳುವ ವರ್ಗಗಳ ಹಿಡಿತದಲ್ಲಿರುವ ಎಲ್ಲಾ ಶಕ್ತಿಗಳ ಕ್ರೌರ್ಯ ಮತ್ತು ದಮನಗಳನ್ನು ವಿಡಂಬಿಸುವಲ್ಲಿ ಯಶಸ್ಸು ಪಡೆಯುತ್ತದೆ.

ಆರ್.ವಿ.ಭಂಡಾರಿ ಅವರು ಹೇಳುವಂತೆ “ಲೇಖಕ ಅರಿವಿಲ್ಲದ ಸಮಾಜಕ್ಕೆ ಅದರ ಕ್ರಾಂತಶಕ್ತಿಯನ್ನು ಸಾರಿ ಹೇಳುವ ಅವಶ್ಯಕತೆ ಇದೆ.. ಹಾಗೆಯೇ ಪ್ರಗತಿಯನ್ನು ಅಥವಾ ಚರಿತ್ರೆಯ ಸಮಾಜವಾದಿ ಚಲನೆಯನ್ನು ತಡೆಹಿಡಿಯಲು ಆಗಲಾರದು ಎಂದು ಶೋಷಕರಿಗೂ ಅದನ್ನು ಬೆಚ್ಚಿಬೀಳಿಸುವಂತೆ ಹೇಳಬೇಕಾಗಿದೆ. ಇದು ಮನವೊಲಿಸುವ ಕ್ರಿಯೆಯಲ್ಲ. ಎಚ್ಚರಿಕೆಯನ್ನು ಈ ರೀತಿಯ ಶಕ್ತಿ ತನ್ನ ಮಾದರಿಯನ್ನು ನಿರ್ಮಿಸಿಕೊಳ್ಳುತ್ತದೆ. ಇಂಥ ಮಾದರಿಗೆ ನಿತ್ಯ ವಿವರ ಮುಖ್ಯವಾಗುವುದಿಲ್ಲ. ನಿತ್ಯವಿವರಗಳ ಆಯ್ಕೆ ಮುಖ್ಯವಾಗುತ್ತದೆ. ಅದರಲ್ಲಿ ರಾಜಕೀಯ ಪ್ರಜ್ಞೆ ಮುಖ್ಯವಾಗಿರುತ್ತದೆ. ರಾಜಕೀಯ ವೈಚಾರಿಕತೆಯೊಂದು ಆಕೃತಿಯೊಳಗೆ ಮೈದಾಳುತ್ತದೆ.”[1]

ಬರಗೂರರ ‘ಒಂದು ಊರಿನ ಕತೆ’ ಇದಕ್ಕೊಂದು ಸ್ಪಷ್ಟ ಉದಾಹರಣೆ. ೧೯೪೭ರಲ್ಲಿ ಹಳ್ಳಿಯಲ್ಲಿ ಸಮಾಜಕೇಂದ್ರ ಕಟ್ಟಡವೊಂದು ನಿರ್ಮಾಣವಾಗುತ್ತದೆ. ಊರಿನ ಗೌಡಪಟೇಲರನ್ನು ಪ್ರಶ್ನಿಸಬಹುದೆಂಬ ತಿಳಿವಳಿಕೆ ಇಲ್ಲದಿದ್ದ ಕಾಲ ಅದು. ಯಜಮಾನರ ಮನೆಗಳಲ್ಲಿ ನಡೆಯುತ್ತಿದ್ದ ಪಂಚಾಯಿತಿ ಸಭೆಗಳು ಸಮಾಜ ಕೇಂದ್ರ ಕಟ್ಟಡಕ್ಕೆ ವರ್ಗಾಯಿಸಲ್ಪಡುತ್ತವೆ. ಇಂಥ ಸನ್ನವೇಶದಲ್ಲಿ ರಾಮು ಪ್ರತಿಭಟನೆಯ ಶಕ್ತಿಯಾಗಿ ಎದುರಾಗುತ್ತಾನೆ. ಬಡತನದ ಮೂಲದಿಂದ ಬಂದವನಾದರೂ ಇವನನ್ನು ದತ್ತು ತೆಗೆದುಕೊಂಡ ಭರಮಪ್ಪನಿಗೆ ಜಮೀನು ಬರುತ್ತದೆ. ಭರಮಪ್ಪನಿಂದಾಗಿ ರಾಮ ವಿದ್ಯಾಭ್ಯಾಸ ಮಾಡುತ್ತಾನೆ. ನಗರ ಸಂಸ್ಕೃತಿಯ ಅನುಭವ ಪಡೆಯುತ್ತಾನೆ. ಹಾಗಾಗಿ ಊರಿನಲ್ಲಿರುವ ‘ಬಸವೇಶ್ವರ ಟಿ ಕಾಫಿ ಕ್ಲಬ್‌’ನಲ್ಲಿ ಹೊರಗಡೆ ಕುಳಿತು ಅಸ್ಪೃಶ್ಯರಿಗಾಗಿಯೇ ಇಟ್ಟಿರುವ ಗರಟೆಯಲ್ಲಿ ಕಾಫಿ ಕುಡಿಯಲು ನಿರಾಕರಿಸುತ್ತಾನೆ. ಲೋಟಕ್ಕಾಗಿ ಜಗಳ ಮಾಡುತ್ತಾನೆ. ಇಲ್ಲಿ ‘ಗಳಾಸಿ’ನಲ್ಲಿ ಊಳಿಗಮಾನ್ಯ ಸಂಸ್ಕೃತಿಯ ‘ಜಾತಿ’ ಹೆಪ್ಪುಗಟ್ಟಿರುವುದನ್ನು ಅರ್ಥೈಸಿಕೊಳ್ಳುತ್ತಾನೆ. ಪಂಚಾಯಿತಿ ಸಭೆಯಲ್ಲಿ ಸಿಗರೇಟು ಹಚ್ಚುವ ಕ್ರಿಯೆ ಸ್ವಾತಂತ್ರ್ಯದ ಸಂಕೇತವಾಗುತ್ತದೆ. ಕಾದಂಬರಿಯ ಸಮಸ್ಯೆ ಇರುವುದು ರಾಮು ಮತ್ತು ಗೌರಿಯ ನಡುವಣ ಅತ್ಯಾಚಾರ ತೀರುಸುವುದರಲ್ಲಿ. ಈ ಸಮಸ್ಯೆ ಇಲ್ಲಿ ಅಮಖ್ಯವಾಗಿ ‘ಸಮಾಜ ಚಲನಶಕ್ತಿಯ ನಿರ್ಣಯ ಈ ನ್ಯಾಯ ಪಂಚಾಯತದ್ದಾಗಿ ಬಿಡುವ ವ್ಯಂಗ್ಯ ಇಲ್ಲಿಯದು.’ “ರಾಮು – ಗೌರಿಯರ ಕಾಮಸಂಬಂಧ, ರಾಮು – ಪುಟ್ಟಿಯರ ಪ್ರೇಮ ಸಂಬಂಧ ಇಲ್ಲಿ ವರ್ಗಶಕ್ತಿಯ ಕೈ ಸೇರುತ್ತದೆ. ಕಾಮ – ಪ್ರೇಮ ಸಂಬಂಧ, ಮದುವೆ ಸಂಬಂಧದಂತ ಒಂದು ಅತ್ಯಂತ ಮಹತ್ವದ ಸಾಂಸ್ಕೃತಿಕ ಸಂಬಂಧ ನಿರ್ಧಾರವಾಗುವುದು ಕೂಡ ರಾಜಕೀಯ ಅಧಿಕಾರ ಶಕ್ತಿಯಲ್ಲಿ. ವರ್ಗ ಸಮಾಜ ಹೀಗೆ ಇಂಥ ಸಾಂಸ್ಕೃತಿಕ ಒಳಜಗತ್ತಿನ ಮೇಲೆ ಆಳಿ ಇಡುವ ಮತ್ತು ಅದನ್ನು ಧ್ವಂಸ ಮಾಡುವ ಕ್ರಿಯೆಗಳನ್ನು ಕಾದಂಬರಿ ಅನಾವರಣಗೊಳಿಸುತ್ತದೆ. ಇಷ್ಟಾಗಿಯೂ ರಾಮುವಿನ ಸ್ಫೋಟಕೆ ಶಕ್ತಿಯೇ ಚರಿತ್ರೆಯ ಚಲನಶಕ್ತಿಯಾಗಬೇಕಾದ ಮುಖ್ಯಶಕ್ತಿಯಾಗುತ್ತದೆ.”[2]

ಬಂಡಾಯದ ಬರಹಗಾರರು ಸೈದ್ದಾಂತಿಕತೆಯಲ್ಲಷ್ಟೇ ಅಲ್ಲದೆ ಸಾಹಿತ್ಯಕ ಆಕೃತಿಗಳಲ್ಲೂ ಸಹ ಪ್ರಭುತ್ವಗಳಿಗೆ ಸವಾಲೆಸೆದಿದ್ದಾರೆ. ಬರಗೂರರ ‘ಶಬರಿ’ ಕಾದಂಬರಿ ಸ್ಪಷ್ಟ ಉದಾಹರಣೆ. ಬುಡಕಟ್ಟಿನ ಬವಣೆಯ ಬದುಕಿನ ಹಿನ್ನೆಲೆಯಲ್ಲಿ ಸಾಗುವ ‘ಶಬರಿ’ ಕಾದಂಬರಿಯಲ್ಲಿ ‘ಪದ್ಧತಿ’ ಸತ್ಯಾಸತ್ಯದ ಶೋಧವೇ ಮುಖ್ಯವಾಗುತ್ತದೆ. ‘ಮದುವೆಯಾದ ಬುಡಕಟ್ಟಿನ ಹೆಣ್ಣು ತನ್ನ ಮೊದಲ ರಾತ್ರಿಯನ್ನು ದೇವಾಲಯದಲ್ಲಿ ಕಳೆಯಬೇಕು. ಅಲ್ಲಿ ‘ಗರ್ಭಗುಡಿಯಿಂದ ಬರುವ ದೇವರಿಗೆ ತನ್ನನ್ನು ಒಪ್ಪಿಸಿಕೊಳ್ಳಬೇಕು. ಮೊದಲ ರಾತ್ರಿಯನ್ನು ದೇವರೊಂದಿಗೆ ಕಳೆದ ಮೇಲೆ ಗಂಡನೊಂದಿಗೆ ಸಂಸಾರ ಇದು ಹಿಂದಿನಿಂದ ನಡೆದುಕೊಂಡು ಬಂದ ನಂಬಿಕೆ.’ ದೇವಾಲಯಕ್ಕೆ ಹೋಗಿಬಂದ ಹೆಣ್ಣುಗಳೆಲ್ಲ ‘ಗರ್ಭಗುಡಿಯಿಂದ ದೇವರು ಬಂದಂತಾಯ್ತು ತನ್ನೊಂದಿಗೆ ಮಲಗಿ ಸುಖ ಕೊಟ್ಟದ್ದಾಯ್ತು ದೇವರಕೃಪೆ ತನ್ನ ಮೇಲೆ ಬಿತ್ತು ಎಂದೇ ಹೇಳುತ್ತಿದ್ದರು. ಹಿಂದಿನ ರಾಜವಂಶದ ಈಗಿನ ಕುಡಿ ಎಂದು ಹೇಳಿಕೊಳ್ಳುವ ನರಸಿಂಹರಾಯಪ್ಪ ಜೋಯಿಸರ ಸಮೇತ ಒಂದು ಹೆಣ್ಣಿಗೆ ಬಾಗಿನ ಕೊಡುತ್ತಾನೆ. ಇದನ್ನು ಬುಡಕಟ್ಟಿನ ಜನರು ತಮಗೆ ಸಲ್ಲುವ ಗೌರವವೆಂದೇ ಭಾವಿಸಿಕೊಳ್ಳುತ್ತಾರೆ” (ಪುಟ. ೨೨). ಶಬರಿ ಪಾತ್ರದ ಸುತ್ತ ಹೆಣೆದುಕೊಂಡಿರುವ ಈ ಕಾದಂಬರಿಯಲ್ಲಿ ಈ ಪದ್ಧತಿಯನ್ನು ತನ್ನ ಮದುವೆಯ ಸಂದರ್ಭದಲ್ಲಿ ವಿರೋಧಿಸಲು ಚಂದ್ರ ಸೂರ್ಯನ ನೆರವನ್ನು ಕೋರುತ್ತಾನೆ. ಚಂದ್ರ ನಗರ ಸುತ್ತಿದವನು, ಮೂಢನಂಭಿಕೆಯ ವಿರೋಧಿ. ಶಬರಿ ಬುಡಕಟ್ಟಿನ ಮೂಲದವಳು. ಗ್ರಾಮೀಣ ಭೂಮಾಲೀಕರ ಹಿಡಿತದಲ್ಲಿರುವ ಬುಡಕಟ್ಟಿನವರನ್ನು ಜಾಗೃತ ಗೊಳಿಸುವ ಸಲುವಾಗಿ ಅಕ್ಷರ ಕ್ರಾಂತಿಯ ಮೂಲಕ ಎಚ್ಚರಿಸುವ ಸಲುವಾಗಿ ಸೂರ್ಯ ಕಾಣಿಸಿಕೊಳ್ಳುತ್ತಾನೆ. ಈ ಕ್ರಿಯೆಯಲ್ಲಿ ಯಶಸ್ವಿಯಾಗುತ್ತಾರೆ. ನರಸಿಂಹರಾಯಪ್ಪ, ರಾಮ ಜೋಯಿಸ್‌ ಇವರು ಒಂದು ಕಡೆ ಇದ್ದರೆ, ಶಬರಿಯನ್ನೊಳಗೊಂಡ ಬುಡಕಟ್ಟಿನವರು ಇನ್ನೊಂದು ಕಡೆ. ಈ ಎರಡೂ ಬಣಗಳ ನಡುವೆ ಜರುಗುವ ಸಂಘರ್ಷವೇ ಕಾದಂಬರಿಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಭೂಮಾಲೀಕರು ಬುಡಕಟ್ಟಿನವರನ್ನು ತಮ್ಮ ಅಧೀನ ಮಾಡಿಕೊಳ್ಳಬಯಸುತ್ತಿರುವಾಗಲೇ ಚಂದ್ರ, ಸೂರ್ಯ, ಮತ್ತವನ ಗೆಳೆಯ ನವಾಬ – ಇವರ ಪ್ರಯತ್ನಗಳಿಂದಾಗಿ ಬಲವಾದ ಪ್ರತಿರೋಧ ಉಂಟಾಗುವ ಬೆಳವಣಿಗೆಳು ಕಾಣಿಸುತ್ತವೆ. ಸೂರ್ಯನ ಮಾತುಗಳಲ್ಲಿ ಸೈದ್ಧಾಂತಿಕ ಸ್ಪಷ್ಟತೆಯನ್ನು (೯೫ – ೯೬). ನವಾಬ ಮತ್ತು ಸೂರ್ಯರ ನಡುವೆ ಬದಲಾವಣೆ ಮತ್ತು ಭ್ರಮೆಯ ನಡುವಿನ ವ್ಯತ್ಯಾಸ ತಿಳಿಯುವ ಕುತೂಹಲ ಕಾಣಿಸಿಕೊಳ್ಳುವುದರೊಂದಿಗೆ ಇಬ್ಬರ ಮಾತು ತಾತ್ವಿಕ ಚರ್ಚೆಯ ಸ್ವರೂಪ ಪಡೆದುಕೊಳ್ಳುತ್ತದೆ (ಪುಟ. ೧೧೪).

“ನೋಡು ಶಬರಿ ನೀವು ಪ್ರಪಂಚದ ಇದ್ಯಾವುದೋ ಮೂಲೇಲಿ ವಾಸಮಾಡ್ತ ಇದೀರಿ. ಆದ್ರೆ ನಿಮ್‌ ಬಾಳುವೆ ಮೇಲೆ ಈ ದೇಶದೋರಷ್ಟೇ ಅಲ್ಲ ಬೇರೆ ದೇಶದವರೂ ಪರಿಣಾಮ ಉಂಟುಮಾಡುತ್ತಾರೆ. ನಮ್ಮ ಸರಕಾರಕ್ಕೆ ಈ ದೇಶದಲ್ಲಿರೊ ಶ್ರೀಮಂತರಿಗೆ ಸಹಾಯ ಮಾಡ್ತಾರೆ ಆ ದೇಶದವರು. ಇಲ್ಲೆಲ್ಲ ಬಂಡವಾಳ ಹಾಕ್ತೀವಿ ಅಂತ ಹಣ ಸುರೀತಾರೆ ಸರ್ಕಾರ ತಾವು ಹೇಳೋ ಹಾಗೆ ಕೇಳ್ಬೇಕು ಹಾಗ್‌ ಮಾಡ್ಕೋತಾರೆ ಇನ್ನು ಇಲ್ಲಿದ್ದಾರಲ್ಲ ಈ ಒಡೆಯರು ಜೋಯಿಸ್ರು – ಇವ್ರು ತಂತಮ್ಮಾ ಸ್ವಾರ್ಥ ನೋಡ್ಕೋತ್ತಾರೆ. ಸಂಪತ್ತು ಎಲ್ಲಾ ಅವ್ರಾ ಹತ್ರಾನೆ ಇರ್ಬೇಕು. ನೀವೇಲ್ಲ ಹೀಗೆ ಕಷ್ಟದಲ್ಲೇ ಭೂಮಿ ಬುದ್ಧಿ ಎರಡೂ ಅವ್ರಿಗೆ ಬಲ ನೀಡುತ್ತೆ. ಅವರು ನಿಮ್ಮ ಮೇಲೆ ಸವಾರಿ ಮಾಡ್ತಾರೆ” – ಹೀಗೆ ಸೂರ್ಯನ ಉತ್ಕಟ ಮಾತುಗಳಿಂದ ದುಡಿಯುವ, ದುಡಿಸಿಕೊಳ್ಳುವ ವರ್ಗದ ಆಶಯಗಳು ಬಹಿರಂಗೊಳ್ಳುತ್ತವೆ. ಅದೇ ಸಂದರ್ಭದಲ್ಲಿ ರಾಮಾಯಣದ ಶಬರಿಯ ಕಾಲಕ್ಕೂ ಬುಡಕಟ್ಟು ಸಮುದಾಯದ ಶಬರಿಯ ಕಾಲಕ್ಕೂ ಇರುವ ವ್ಯತ್ಯಾಸಗಳು ಅನಾವರಣಗೊಳ್ಳುತ್ತವೆ. ಕಾಲದ ಸ್ಥಿತ್ಯಂತರದಲ್ಲಿ ಭೂಮಿ – ಬುದ್ಧಿ ಯಾರೊಬ್ಬರ ಸ್ವತ್ತೂ ಅಲ್ಲ ಎಂಬ ತಿಳುವಳಿಕೆ ಮೂಡುತ್ತದೆ. ‘ಉಳುವವನೆ ಹೊಲದೊಡೆಯ’ ಎಂಬ ಮಾತಿಗೆ ಬೆಲೆಬಂದಿದೆ ಎನ್ನುತ್ತಿರುವಾಗಲೇ ‘ದುಡಿಯುವವರೇ ಒಡೆಯರು’ ಎನ್ನುವಂತಾಗಬೇಕು ಎನ್ನುವ ಶಬರಿ ಸ್ತ್ರೀಯರನ್ನೂ ಒಳಗೊಂಡಂತೆ ಎಲ್ಲ ಶ್ರಮಿಕರ ಪರವಾಗಿ ಆಲೋಚಿಸುವ ನೆಲೆಯನ್ನು ರೂಪಿಸುತ್ತಾಳೆ. ಹಾಗಾಗಿ ರಾಮಾಯಣದ ಶಬರಿ ಪುರಾಣವಾದರೆ ಬುಡಕಟ್ಟಿನ ಈ ಶಬರಿ ಚರಿತ್ರೆಯಾಗುತ್ತಾಳೆ. ಚರಿತ್ರೆಯೊಳಗೊಂದು ಪುರಾಣ ಸೇರಿರುವುದು ವಿಚಿತ್ರವಾದರೂ ಗಂಭೀರ ತಿಳಿವಳಿಕೆಗೆ ಆಸ್ಪದವಾಗುವ ಸಂಗತಿ. ಹುಚ್ಚೀರನ ಮೂಲಕ ಸತ್ಯದ ಸ್ಫೋಟವಾಗುತ್ತಿದ್ದಂತೆ (ಪುಟ.೧೭೮), ಜಾಗತೀಕರಣ, ಅಂತರ ರಾಷ್ಟ್ರೀಯ ಭಯೋತ್ಪಾದಕತೆಯ ಬಿನ್‌ ಲಾಡೆನ್‌, ಅಮೇರಿಕಾದ ರಕ್ತ ಪಿಪಾಸುತನ, ಭೂಮಿಹಗರಣ, ಕೊಳ್ಳುವ ಬಿಳಿಯರ ಹಗರಣ (ಪುಟ.೨೦೩) ಮುಂತಾದ ವಿವರಗಳಿಂದಲೂ ವರ್ತಮಾನದ ಸ್ಥಿತಿಗೆ ಲೇಖಕರು ರೂಪಕಗಳ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಶಬರಿಯಂತೆ ಸೂರ್ಯ ಮತ್ತು ಚಂದ್ರನ ಪಾತ್ರಗಳು ರೂಪಕಗಳಾಗಿ ಕಂಗೊಳಿಸಿವೆ.

ನವಾಬ ಮತ್ತು ಜೋಯಿಸರ ತರ್ಕದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದುರ್ಬಳಕೆಯ ಎಚ್ಚರಗಳಿವೆ. ನವಾಬನ ಮಾತುಗಳು ಹೀಗಿವೆ: ‘ಧರ್ಮದ ವಿಷಯ ತೆಗೆದು ವಿನಾಕಾರಣ ತನ್ನನ್ನು ಜನರಿಂದ ದೂರ ಮಾಡುವ ಅವರ ಪ್ರಯತ್ನ ಹೇಸಿಗೆ ಎನಿಸಿತು. ಇಲ್ಲೇ ಈ ನೆಲದಲ್ಲೇ ಹುಟ್ಟಿ ಬೆಳೆದವನನ್ನು ಪರಕೀಯ ಮಾಡುವ ಪ್ರಯತ್ನ. ಧರ್ಮದ ಹೆಸರಲ್ಲಿ ಅಧರ್ಮದ ಕೆಲಸ. ಹಿಂದುವಾಗಲೀ, ಮುಸ್ಲಿಮನಾಗಲಿ, ಕ್ರೈಸ್ತನಾಗಲಿ ಧರ್ಮವನ್ನು ಅಧರ್ಮದ ಕೆಲಸಗಳಿಗೆ ಬಳಸಿಕೊಳ್ಳುವುದು ಆತ್ಮವಂಚನೆ, ಜನವಂಚನೆ, ತಾನು ಎಂದು ಧರ್ಮಪ್ರಚಾರ ಮಾಡಲಿಲ್ಲ. ಹುಟ್ಟೇ ನನಗೆ ಪರಕೀಯತೆಯ ಪಟ್ಟಕೊಡಬೇಕ? ಹುಟ್ಟಿನ ಕಾರಣದಿಂದ ಕೋಟ್ಯಾಂತರ ಜನಕ್ಕೆ ಅಸ್ಪೃಶ್ಯತೆಯ ವಿಷಗಾಳಿ ಉಣಿಸಿದ ವ್ಯವಸ್ಥೆ ಪರಕೀಯಗೊಳಿಸಿದ ವ್ಯವಸ್ಥೆ. ಅದೇ ಹುಟ್ಟಿನ ಕಾರಣಕ್ಕೆ ಅನ್ಯಧರ್ಮೀಯನೆಂದು ತನ್ನನ್ನು ಅನಾಥಗೊಳಿಸುವ ಹುನ್ನಾರ, ಕಿಡಿಗೇಡಿಗಳು ಎಲ್ಲ ಕಡೆ ಇರುತ್ತಾರೆ. ಹಾಗೆಂದು ಯಾವುದೇ ಒಂದು ಜನಾಂಗ, ಒಂದು ಧರ್ಮವನ್ನು ಇಡಿಯಾಗಿ ದ್ವೇಷಿಸುವುದೆ? ಎಲ್ಲ ಜನರೂ ನರಸಿಂಹ ರಾಯಪ್ಪನಂತಲ್ಲ. ಎಲ್ಲ ಜೋಯಿಸರೂ ಈ ಊರ ಜೋಯಿಸರಂತಲ್ಲ ಎಂಬುದೇ ಈ ದೇಶದ ಪುಣ್ಯ.” ಹೀಗೆ ಅಂತರ್ಮುಖಿಯಾಗಿದ್ದ ನವಾಬ ಸೂರ್ಯನಿದ್ದಿದ್ದರೆ ಆತನ ಬಳಿ ಭಾವನೆಗಳನ್ನು ಹಂಚಿಕೊಳ್ಳಬಹುದಿತ್ತೆಂದು ಬಯಸುತ್ತಾನೆ.

“ಮುಸ್ಲಿಮರಿಗೆ ಬಿನ್‌ ಲಾಡೆನ್‌ ಬೇರೆ. ಪೈಗಂಬರ್ ಬೇರೆ ಎಂದು ಪರಸ್ಪರ ಚರ್ಚಿಸಬಹುದಿತ್ತು. ಹಿಂದೂಗಳಿಗೆ ಗಾಂಧಿ ಬೇರೆ ಗೋಡ್ಸೆ ಬೇರೆ ಎಂದು ವಿಚಾರ ವಿನಿಮಯ ಮಾಡಿಕೊಳ್ಳಬಹುದಿತ್ತು. ಗಾಂಧಿಯನ್ನು ಕೊಂದದ್ದು ಸರಿ ಎಂದು ಬಿನ್‌ ಲಾಡೆನ್‌ ಮಾಡಿದ್ದೆಲ್ಲ ಸೂಕ್ತವೆಂದು ಅಮೆರಿಕಾದ ಯುದ್ಧ ಪಿಪಾಸುತನ ಒಳಿತೆಂದು ವಾದಿಸುವವರು ಯಾವ ಧರ್ಮದವರಾಗಲು ಸಾಧ್ಯ? ಈ ಎಲ್ಲ ವಾದ ಪ್ರತಿವಾದಗಳ ಮಧ್ಯೆ ‘ಮನುಷ್ಯನೇ ಪರಕೀಯ ಮನಸ್ಸೊಂದು ಯಾತನಾ ಶಿಬಿರ” (ಪುಟ.೨೩೪). ಹೀಗೆ ಕಲಾತ್ಮಕತೆಯನ್ನು ಉಳಿಸಿಕೊಂಡು ವಿಚಾರ ಪ್ರಧಾನಾಗುವ ಈ ಕಾದಂಬರಿಯಲ್ಲಿ ಶಬರಿ ಪಾತ್ರ ಹೊಸ ಆಯಾಮ ತಲುಪುವ ಹಂತದಲ್ಲಿ ಅಕ್ಕಮಹಾದೇವಿಯ ವಚನಗಳನ್ನು ಬಳಸಿ ಅರ್ಥ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.

“ಅನಕ್ಷರಸ್ಥ ಮುಗ್ಧ ದಲಿತ ಬಡಜನತೆಯನ್ನು ಶ್ರೀಮಂತರು ಪುರೋಹಿತಶಾಹಿ ಮೇಲುವರ್ಗದವರು ಅಧಿಕಾರ ಗರ್ವಿತ ಪಟ್ಟಭದ್ರರು ಹೇಗೆ ನಿರಂತರವಾಗಿ ಶೋಷಿಸುತ್ತ ಅವರ ಬದುಕನ್ನು ನರಕಗೊಳಿಸುತ್ತಿದ್ದಾರೆ ಎನ್ನುವ ಹೃದಯ ವಿದ್ರಾವಕ ಚಿತ್ರವನ್ನು ‘ಹಸಿಮಾಂಸ ಮತ್ತು ಹದ್ದುಗಳು’ ಮೂಲಕ ಗೀತಾನಾಗಭೂಷಣ ಅವರು ಅತ್ಯಂತ ಪರಿಣಾಮಕಾರಿಯಾಗಿ ಕಂಡಿರಿಸಿದ್ದಾರೆ. ಇಲ್ಲಿನ ಕೆಳವರ್ಗದವರ ದಾರುಣ ಜೀವನ ಲೋಕ, ಅದನ್ನು ಸಹಜ ರೀತಿಯಲ್ಲಿ ಗುಲಬರ್ಗಾ ಪ್ರಾಂತದ ಆಡುನುಡಿಯಲ್ಲಿ ಬಿಚ್ಚಟ್ಟಿರುವ ಬಗೆ ಶಕ್ತವತ್ತಾಗಿದೆ. ಲೇಖಕಿಯ ಮನಸ್ಸಿನ ನೋವು, ಪ್ರತಿಭಟನಾ ಮನೋ ಧರ್ಮ, ಸಹಜ ಪರಿವರ್ತನೆಯನ್ನು ಬಯಸುವೆಲ್ಲರ ಮನಸ್ಸನ್ನು ತಟ್ಟುತ್ತದೆ.” (ಎಚ್‌.ಜೆ.ಲಕ್ಕಪ್ಪಗೌಡ). ಪೋಲೀಸ್‌ ಸ್ಟೇಷನ್‌, ಸೆರೆಮನೆ, ಸ್ತ್ರೀನಿಕೇತನ ಒಂದರಿಂದ ಇನ್ನೊಂದಕ್ಕೆ ಮತ್ತೊಂದಕ್ಕೆ ಪ್ರಪಾತಗಳಿಗೆ ಬದುಕು ಲಚ್ಚಿಯನ್ನು ರಬ್ಬರ್ ಚೆಂಡಿನಂತೆ ಎಸೆಯ ತೊಡಗುತ್ತದೆ. ಹಳ್ಳಿಯ ಅಮಾಯಕ ಮುಗ್ಧ ಹುಡುಗಿ ಲಚ್ಚಿಯ ಮೇಲೆ ನಡೆದ ಕ್ರೌರ್ಯದ ಅಟ್ಟಹಾಸವನ್ನು ಕಾದಂಬರಿ ಚಿತ್ರಿಸಿದೆ. ಕಾಸಿನಾತ, ಕುಲಕರ್ಣಿ, ಪೋಲೀಸರು, ಸ್ತ್ರೀನಿಕೇತನದಲ್ಲಿದ್ದಾಗ ಸಂಪರ್ಕಕ್ಕೆ ಬಂದ ಹಲವರು ಗಂಡನಾದ ಬಸ್ಸೆಣ್ಣ – ಎಲ್ಲ ಗಂಡಸರ ಬಗೆಗೂ ತಿರಸ್ಕಾರ ಹೇಸಿಗೆ ಜಿಗುಪ್ಸೆ ಮೂಡಿ ಪ್ರಪಾತದಲ್ಲಿ ನೂಕಿದ ಗಂಡು ಗಳಿವು ಎಂಬ ತಾತ್ಸಾರ ಆಕೆಯಲ್ಲಿ(ಲಚ್ಚಿ) ಮೂಡುತ್ತದೆ. ಆಕೆಗೊಂದು ಗಂಡು ಮಗು ಹುಟ್ಟಿದಾಗ ಮುಂದಿನ ದಿನಗಳಲ್ಲಿ ಬೆಳೆದು ದೊಡ್ಡವನಾದಾಗ ಹೆಣ್ಣುಗಳನ್ನು ಶೋಷಿಸು ವವನೇ ಆಗುತ್ತಾನೆಂದು ಅವನನ್ನು ಕೊಂದು ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾಳೆ. ಸ್ತ್ರೀನಿಕೇತನದ ಉದ್ದೇಶ ಆಶಯಗಳಿಗೆ ವಿರುದ್ಧವಾದ ವಾತಾವರಣವನ್ನು ಲಚ್ಚಿ ಪ್ರವೇಶಿಸಿದಾಗ ಸಾಂತ್ವನದ ಕರುಣೆಯ ಮಮತೆಯ ಮಾತುಗಳು ಯಾರಿಂದಲೂ ದೊರಕುವುದು ಅಸಾಧ್ಯವಾದಾಗ ಅಲ್ಲಿಯ ಪರಿಸರವೇ ಭಯಾನಕವೆನಿಸುತ್ತದೆ. ಸ್ತ್ರೀ ನಿಕೇತನದ ಮೇಲ್ವಿಚಾರಿಕೆಯೇ ಭಯಹುಟ್ಟಿಸುವವಳಾಗಿ ಕಾಣಿಸುತ್ತಾಳೆ: ‘ಅವಳ ಇಂಗ್ಲಿಷ್‌ ಬೆರೆತ ಪಿಸಿಪಿಸಿ ಮಾತುಗಳು, ಹದ್ದಿನ ಕಣ್ಣಿನ ತೀಕ್ಷ್ಣ ನೋಟ, ಬಾಬ್‌ ಮಾಡಿದ ಕೂದಲು, ತುಂಬಿದ ಬಣ್ಣ, ಮೈಕಾಣುವ ಪಾರದರ್ಶಕ ಉಡುಪುಗಳೆಲ್ಲವೂ ಲಚ್ಚಿಗೆ ಹೆದರಿಕೆ ಹುಟ್ಟಿಸುತ್ತಿದ್ದವು.’ ಕಾದಂಬರಿಕಾರ್ತಿ ಮೇಲ್ವಿಚಾರಕಿಯನ್ನು ವರ್ಣಿಸಿರುವ ಮಾತುಗಳಲ್ಲಿಯೇ ಆಧುನಿಕ ಪ್ರಭಾವ ಅದರಿಂದುಂಟಾಗುವ ಭಯದ ಚಿತ್ರವಿದೆ: “ಸ್ತ್ರೀನಿಕೇತನದ ಸೂಪರಿಂಟೆಂಡೆಂಟ್‌ ಬಿಳಿಮೈಯ ಚಂಚಲ ಕಣ್ಣುಗಳ ಕಾನ್ವೆಂಟ್‌ನಲ್ಲಿಯೇ ಓದಿದ ಸ್ತ್ರೀನಿಕೇತನದ ಮಹಿಳೆಯರೊಂದಿಗೂ” ಸಹ ಇಂಗ್ಲೀಷಿನಲ್ಲಿಯೇ ಮಾತನಾಡುತ್ತ ಜೋರು ಮಾಡುವ ಭಾರತೀಯ ಹೆಣ್ಣು ವಿದೇಶಿ ಸಂಸ್ಕೃತಿ ಸಂಸ್ಕಾರದಲ್ಲಿ ಅಡಿಯಿಂದ ಮುಡಿಯವರೆಗೂ ನೆನೆದು ನಿಂತ ಸ್ವದೇಶಿ ಹೆಂಗಸು” (ಪು.೬೦).

ಇಂಗ್ಲಿಷ್‌ ಪ್ರವೇಶದಿಂದಾಗಿ ಆಗುವ ಸಾಂಸ್ಕೃತಿಕ ಅನಾಹುತಗಳನ್ನು ಕುಂ.ವೀರಭದ್ರಪ್ಪನವರ ‘ಯಾಪಿಲು’ ಕಾದಂಬರಿ ಸಮರ್ಥವಾಗಿ ನಿರೂಪಿಸುತ್ತದೆ. ಇಂಗ್ಲಿಷ್‌ನ APPLE ಯಾಪಿಲ್ಲು ಆಗಿದೆ. ಸರಿಯಾಗಿ ಮಲಮೂತ್ರ ಮಾಡಲು ಬರದೇ ಇದ್ದರೂ ನಾಡಬಾಂಬುಗಳನ್ನು ಮಾಡಬಲ್ಲವರು’ ಎಂದು ನಿರೂಪಕ ವ್ಯಕ್ತಗೊಳಿಸುವ ಜನ ಸಮುದಾಯ ವಾಸಿಸುತ್ತಿರುವ ವಾಗಿಲಿ ಎಂಬ ಹಳ್ಳಿಗೆ ಇಂಗ್ಲಿಷ್‌ ಪ್ರವೇಶಿಸುತ್ತದೆ. ಹೆಲ್ತ್ ವರ್ಕರ್ ಇಮಾಮು ಸದಾ ಇಂಗ್ಲಿಷ್‌ ಮಾತಾಡುತ್ತಾ ಹೆಲ್ತ್ ಚೆಕಪ್‌ ಮಾಡುವ ನೆಪದಲ್ಲಿ ಆಗಾಗ್ಗೆ ಸ್ಕೂಲಿಗೂ ಬಂದು ಹೋಗುತ್ತ ‘ಈ ಕಂಟ್ರೀನ ಟಾಪ್‌ ಲೆವೆಲ್ಲಿಗೆ ಒಯ್ಯೊ ಸ್ಟ್ರೆಂಗ್ತು ಓನ್ಲಿ ಇಂಗ್ಲಿಷ್‌ ಲಾಂಗ್‌ವೇಜಿಗೆ ಮಾತ್ರ ಐತೆ ನೋಡ್ರಿ’ ಎಂದು ತೀರ್ಪು ನೀಡುತ್ತಾನೆ. ಹೆಸರಿಲ್ಲದವರಿಗೆ ‘ರಿಕೆಟು’ ‘ಬೆರಿಬೆರಿ’ ಎಂಬ ರೋಗಗಳ ಹೆಸರುಗಳನ್ನ ಇಡುತ್ತಾನೆ. ಆತನ ಹಾಗೂ ಆತನ ಪ್ರಭಾವದ ಬಗ್ಗೆ ಸದಾಸುದ್ದಿ. ಇಂಗ್ಲಿಷ್‌ ಭಾಷೆಯ ಮಹತ್ವ ಅದನ್ನು ಕಲಿತದ್ದರಿಂದ ಆಗುವ ಬದಲಾವಣೆ ಇವೆಲ್ಲ ಕಾದಂಬರಿಯಲ್ಲಿ ಮಹತ್ವ ಪಡೆಯುತ್ತವೆ. ‘ನಾವು ಗೋರುಮೆಂಟು ಸ್ಕೂಲಿಗೆ ವೋಗಲ್ಲ, ಕಾರುಮೆಂಟಿಗೋಗುತೀವಿ’ ಎನ್ನುವ ರಂಪಾಟಗಳು ಶುರುವಾಗುತ್ತವೆ. ‘ವಾಟರಿಗೋಗಣ ಬರ್ತಿಯೇನೆ’,‘ಲೆಟರಿನ್ನಿಗೆ ಹೋಗಿಬರ್ತಿನಂತಲೋ’, ನಮ್ಮಜುಬೆಂಡು ಇನ್ನೂ ಫೀಲ್ಡಿನಿಂದ ಬಂದಿಲ್ಲ’, ‘ಆಗ್ಲೆ ಸನ್ನು ಮುಳುಗಿದೆ’ ಇತ್ಯಾದಿಯಾಗಿ ಸಾಮಾನ್ಯ ಹೆಂಗಸರು ಮಾತಾಡಿಕೊಳ್ಳುವ ವಾತಾವರಣ ನಿರ್ಮಾಣವಾಗಿ ಬಿಡುತ್ತದೆ.

ಈ ಕಾದಂಬರಿಯ ಕೇಂದ್ರ ಪಾತ್ರವಾಗಿರುವ ಹುಡುಗಿಗೆ ಇಂಗ್ಲಿಷ್‌ ವ್ಯಾಮೋಹ. ಅಲ್ಲಿಗೆ ಕಾನ್ವೆಂಟ್‌ ಸ್ಕೂಲ್‌ ಬಂದ ಮೇಲಂತೂ ಇಡೀ ಹಳ್ಳಿಯಲ್ಲಿ ಇಂಗ್ಲಿಷ್‌ ರೋಗವೇ ಆವರಿಸಿ ಆ ಹುಡುಗಿಯನ್ನು ಯಾಂಜೆಲ್ಲು ಎಂದೇ ಕರೆಯತೊಡಗುತ್ತಾರೆ. ಭಾರತಿ ಎಂಬ ಹೆಸರನ್ನು ಆಕೆಗಿಟ್ಟಿರುತ್ತಾರೆ. ಭಾರತಿಯೂ ಅಲ್ಲದ ಏಂಜೆಲ್ಲೂ ಅಲ್ಲದ ಆ ಹುಡುಗಿಗೆ ಯಾಪಿಲ್ಲ ತಿನ್ನಲು ಬಯಸಿ ಮೈತುಂಬಾ ಬಾಸುಂಡೆ ತಿನ್ನುತ್ತಾಳೆ. ರಾಜೇಂದ್ರ ಚೆನ್ನಿ ಅಭಿಪ್ರಾಯ ಪಡುವಂತೆ “ಕನಿಷ್ಠ ಪಕ್ಷ ಮನುಷ್ಯನಂತೆ ಬದುಕುವ ಸವಲತ್ತುಗಳನ್ನು ಪಡೆಯದವರು ಕೂಡ ತಮಗೆ ನಿಲುಕದ ವಸ್ತುವಿಗೆ ಆಸೆಪಟ್ಟಂತೆ ಬಡತನ, ಜಾತಿ ಇದಾವುದೂ ಬದಲಾಗದೆ ಇಂಗ್ಲಿಷ್‌ ಮಾತ್ರ ವಾಗಿಲಿಗೆ ಬರುವುದನ್ನು ಬಿಟ್ಟರೆ ನಾವು ಇರುವುದಕ್ಕೂ ಬಯಸುವುದಕ್ಕೂ ಮಧ್ಯೆ ಇರುವ ಕಂದರವನ್ನು – ಇವೆಲ್ಲವನ್ನು ಯಾಪಿಲ್ಲು ಸೂಚಿಸುತ್ತದೆ.”[3]

ಪರಂಪರಾಗತ ಜೀವನಾನುಭವಗಳನ್ನು ಗರ್ಭೀಕರಿಸಿಕೊಂಡೇ ಬಂದಿರುವ ಈ ಹಿನ್ನೆಲೆಯಲ್ಲಿ ‘ಆಧುನೀಕರಣದ ಪ್ಯಾಕೇಜ್‌ ಆಗಿರುವ ಇಂಗ್ಲಿಷ್‌ ಎನ್ನುವುದು ಪ್ರವೇಶ ಮಾಡಿದರೆ ಏನಾಗುತ್ತದೆ? ಅದರಲ್ಲೂ ಈ ಹೊಸ ಪ್ರಸ್ಥಾನದ ಪ್ರಯೋಗದ ಕೇಂದ್ರವು ದಲಿತ ಹೆಣ್ಣು ಮಗುವಾದಾಗ ಏನಾಗುತ್ತದೆ. ಈ ಪ್ರಶ್ನೆಗಳನ್ನು ಕಾದಂಬರಿಯ ಮಾಧ್ಯಮದಲ್ಲಿ ಕೇಳಬಹುದೆಂದು ನಮ್ಮ ಬರಹಗಾರರು ಅಂದು ಕೊಳ್ಳುವುದೇ ಇಲ್ಲ. ಹೀಗಾಗಿ ನಮ್ಮ ಕಣ್ಣೆದುರಿಗೇ ನಡೆಯುತ್ತಿರುವ ಚರಿತ್ರೆಯ ಬಹುದೊಡ್ಡ ಪಲ್ಲಟದ ಬಗ್ಗೆ ಬರೆಯುವವರೇ ಕಡಿಮೆಯಾಗಿದ್ದಾರೆ.”[4] ಭಾಷೆಯ ವ್ಯಾಮೋಹ ಕೇವಲ ಸ್ಥಳೀಯ ಫ್ಯಾಷನ್ನಷ್ಟೇ ಅಲ್ಲ ಅದೊಂದು ಸಮೂಹ ಸನ್ನಿಯಂತೆ ಹರಡಿ ಸರ್ಕಾರಿ ಕನ್ನಡ ಶಾಲೆಯನ್ನು ನಿರ್ನಾಮ ಮಾಡುವ ಪ್ರವೃತ್ತಿಯಾಗಿಯೂ ಇಂಗ್ಲಿಷ್‌ ವ್ಯಾಮೋಹ ಗೋಚರವಾಗಿ ಬಿಡುತ್ತದೆ. ಜಾಗತೀಕರಣದ ಪ್ರಭಾವದಿಂದಾಗಿ ಗ್ರಾಮಗಳ ಸ್ಥಿತ್ಯಂತರವನ್ನು ಇದು ಸೂಚಿಸಬಲ್ಲದು. ‘ಸಾಂಸ್ಕೃತಿಕ ಅನಾಹುತಗಳ ಕಾಮಿಕ್‌ ಕಥಾನಕ’ವಾಗಿ ಕಾಣಿಸುವ ‘ಯಾಪಿಲು’ ಈ ದೃಷ್ಟಿಯಿಂದಲೂ ಮಹತ್ವ ಪೂರ್ಣವಾದ ಕಾದಂಬರಿ ಎನಿಸಿಬಿಡುತ್ತದೆ.

ಪರಂಪರೆ ಹಾಗೂ ಆಧುನಿಕತೆಯ ಮುಖಾಮುಖಿಯನ್ನು ಕುಂ.ವೀರಭದ್ರಪ್ಪನವರ ‘ಶಾಮಣ’ನಲ್ಲಿ ಗುರುತಿಸಬಹುದು. ಸಂಪ್ರದಾಯ ಬದ್ಧವಾದ ವೈದಿಕ ಕುಟುಂಬವೊಂದರ ಮೂರು ತಲೆಮಾರುಗಳ ಚಿತ್ರ ನೀಡುವ ಕಾದಂಬರಿ ಇದು. ಇದರ ಕೇಂದ್ರ ಪಾತ್ರವಾದ ಶಾಮಣ್ಣ ವೇದಾಂತಶಿಖಾಮಣಿ, ಪರಮೇಶ್ವರ ಶಾಸ್ತ್ರಿಗಳ ಮೊಮ್ಮಗ. ಘಂಟಾ ಶಾಮಶಾಸ್ತ್ರಿಗಳ ಮರಿಮಗ. ತಂದೆ ಅಶ್ವತ್ಥನಾರಾಯಣ. ತನ್ನ ಪರಂಪರೆಗೆ ವಿರುದ್ಧವಾದ ರೀತಿಯಲ್ಲಿ ಬದುಕು ನಡೆಸಿದವ, ಸೈನ್ಯಕ್ಕೆ ಸೇರಿ ಯುದ್ಧದಲ್ಲಿ ಗಾಯಗೊಂಡು ಮನೆಗೆ ಬಂದ ಮೇಲೆ ಮಗ ಶಾಮಣ್ಣನನ್ನು ನಾಗರೀಕ ಪ್ರಪಂಚದ ರೀತಿಯಲ್ಲಿ ಬೆಳೆಸಲು ತೊಡಗುತ್ತಾನೆ. ಆದರೆ ವೈದಿಕ ಪರಂಪರೆಯ ರೀತಿಯಲ್ಲೇ ಶಾಮಣ್ಣ ಮುಂದುವರಿಯಬೇಕೆಂಬ ಆಸೆ ತಾತನದಾಗಿರುತ್ತದೆ. “ಈ ರೀತಿ ಪರಂಪರೆ ಮತ್ತು ಆಧುನಿಕತೆಗಳ ಘರ್ಷಣೆಯಲ್ಲಿ ಬೆಳೆಯುವ ಶಾಮಣ್ಣ ಸ್ವಾತಂತತ್ತರ ಭಾರತೀಯ ಸಮಾಜದ ಪ್ರತೀಕವಾಗಿ ‘ಕ್ರಾಪಿನೊಳಗೆ ಜುಟ್ಟು ಮರೆಮಾಡಿ ಕೊಂಡಿರುತ್ತಿದ್ದ.’ ಬೆಳೆದಂತೆ ತನ್ನ ಮನೆತನದ ಕರ್ಮಠ ಪರಂಪರೆಯನ್ನು ತಿರಸ್ಕರಿಸಿ ಶಾಮಾಶಾಸ್ತ್ರಿಯಾಗಲು ಒಪ್ಪದ ಶಾಮಣ್ಣ ಬ್ಯಾಂಕ್‌ನಲ್ಲಿ ನೌಕರನಾಗಿ ಉದ್ದೇಶಪೂರ್ವಕವಾಗಿ ಕುಡಿತ, ಜೂಜು, ಪರಸ್ತ್ರೀ ಸಂಗ – ಇತ್ಯಾದಿ ಅಕಾರ್ಯಗಳನ್ನು ಕೈಗೊಳ್ಳುತ್ತಾನೆ. ಪ್ರತಿಭಟನೆಯೇ ಉಸಿರಾಗಿರುವ ಶಾಮಣ್ಣ ಅನೇಕ ವ್ಯಾಧಿಗಳಿಗೆ ತುತ್ತಾಗಿ ಕೊನೆಗೆ ತನ್ನ ಪ್ರೇಯಸಿಯಾಗಿದ್ದ ವೇಶ್ಯೆಯ ಮನೆಯಲ್ಲಿ ಸಾಯುತ್ತಾನೆ. ಅವನ ಇಬ್ಬರು ಮಕ್ಕಳು ಸಂಪೂರ್ಣವಾಗಿ ಪಾಶ್ಚಾತ್ಯ ಜೀವನ ಶೈಲಿಯನ್ನು ರೂಢಿಸಿಕೊಳ್ಳುತ್ತಾರೆ.”[5]

ಹೆಣ್ಣನ್ನು ಊಳಿಗಮಾಣ್ಯ ವ್ಯವಸ್ಥೆ ತನ್ನ ಅಧೀನ ಮಾಡಿಕೊಂಡಿರುವ ಚಿತ್ರವನ್ನು ಕುಂ. ವೀರಭದ್ರಪ್ಪನವರು ‘ಕಪ್ಪು’ ಕಾದಂಬರಿಯಲ್ಲಿ ನೀಡಿದ್ದಾರೆ. ಬದುಕಿನ ಅವಶ್ಯ ಕತೆಯನ್ನೇ ಮೂಲಭೂತವಾಗಿ ಪ್ರಶ್ನಿಸುವ ಹಂದರ ಈ ಕಾದಂಬರಿಯದು. “ಬನದ ಹುಣ್ಣಿಮೆಯಾದ ಮೂರನೆಯ ದಿನ ಮಾರಮ್ಮನ ಗುಡಿಯಲ್ಲಿ ಊರಿನ ದೈವಸ್ತರ ಮತ್ತು ಬಸವಿಯರ ಸಮಕ್ಷಮ ಮುತ್ತು ಕಟ್ಟಿಸಿಕೊಂಡ ಮ್ಯಾಲೆ ಆ ಹೆಣ್ಣು ಉಡಕ್ಕಿ ಹಾಕಿಸಿಕೊಳ್ಳಲು ಗೌಡರ ಮನೆಗೆ ಬರಬೇಕು. ಅದೂ ರಾತ್ರಿಯಲ್ಲಿ ಆಕಾಶದಲ್ಲಿ ಚೆನ್ನಮ್ಮನ ದಂಡೆ ಪಶ್ಚಿಮಕ್ಕೆ ಸಂದಿರುತ್ತದೆ. ಆಗ ಗೌಡ ವರಾಂಡದಲ್ಲಿ ಮೀಸಲು ಮುರಿಯುವನು. ಇದಾದನಂತರ ಗೌಡನ ಆಳಲುಗಳಾದ ಪರುಸ ಸರಬ, ರಾಮ – ಇಂಥೋರು ಅನುಕ್ರಮವಾಗಿ ಹೆಣ್ಣನ್ನ ಭೋಗಿಸಿ ಮೆತ್ತಗೆ ಮಾಡಿ ಖಾಯಂ ಬಸವಿಯನ್ನಾಗಿ ಮಾಡುವರು. ಈ ಸಂಪ್ರದಾಯ ಕರಿಗೌಡನ ತಾತ ಮುತ್ತಾತಂದಿರ ಕಾಲದಿಂದಲೂ ಬಂದಿದೆ” (ಪುಟ.೧೨). ಕೈಗೆ ಬಂದ ಸುಂದರ ಹೆಣ್ಣು ಮಕ್ಕಳನ್ನು ದೇವರಿಗೆ ಮೀಸಲು ಬಿಡೋ ಸಂಪ್ರದಾಯ ಮಾಸೂರಿನ ಇತಿಹಾಸದುದ್ದಕ್ಕೂ ಬಂದಿರುವುದು ಸಾಮಾನ್ಯ ಸಂಗತಿ. ಗೌಡ ಭರಮಜ್ಜನ ಮಗಳನ್ನು ನೋಡಿದ ನಂತರವೇ ಪೂಜಾರಿ ಎಲ್ಲಪ್ಪನಿಗೆ ಕನಸು ಬೀಳುವುದು. ‘ಎಲ್ಲಪ್ಪನ ಕನಸಿನಾಗ ಅಮ್ಮ ಏನು ಯೇಳ್ತಾಳೋ ಎಲ್ಲೂ ಅದರಂಗ ನಡ್ಕೋಬೇಕು; ತಲೆತಲಾಂತರದಿಂದ ಬಂದಿರೋ ಆಚಾರವ ಮುರಿಯೋಕಾಗ್ತದ’ ಎಂಬ ಪ್ರಶ್ನೆಯಲ್ಲಿಯೇ ಭರಮಜ್ಜನ ಮಗಳನ್ನು ದೇವ್ರಿಗೆ ಬಿಡಲೇಬೇಕೆಂಬ ಒತ್ತಾಸೆಗಳೇ ಅತಿಯಾಗಿವೆ. ಕಾದಂಬರಿಯ ಮುಖ್ಯ ಸಮಸ್ಯೆ ಏರಿಳಿತವಿಲ್ಲದ್ದು, ಕರಿಗೌಡನ ತೀರ್ಮಾನದಿಂದ ತನ್ನ ಸ್ಥಿರತೆಯನ್ನು ಕಳೆದುಕೊಳ್ಳುತ್ತದೆ. ಗೌಡನನ್ನು ಎದುರಿಸುವುದಕ್ಕೆ ಬದಲಾಗಿ ಪಲಾಯನಗೊಳ್ಳಲು ತವಕಿಸುತ್ತದೆ. ಪಟ್ಟಭದ್ರರೊಂದಿಗೆ ಎದುರಾಗುವುದಕ್ಕಿಂತ ಪ್ರತ್ಯೇಕಗೊಳ್ಳುವುದೇ ಉತ್ತಮವೆಂದು ಭಾವಿಸಿದವನು ಭರಮಜ್ಜ. ಆದರೆ ಅದರಲ್ಲೂ ಯಶಸ್ಸು ಕಾಣದೆ ಕರಿಗೌಡನಷ್ಟೇ ಅಪಾಯ ಕಾರಿಯಾದ ಸಣ್ರುದ್ರನ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಕರೀಗೌಡನ ವರ್ತನೆಗಿಂತಲೂ ಬಾಸೂರಿನ ಸಣ್ರುದ್ರ ಅಪಾಯಕಾರಿ. ಕರಿಗೌಡನನ್ನು ವಿರೋಧಿಸುವ ಗೌರಿ ಮದುವೆಯ ಆಸೆಯಿಂಧ ಸಣ್ರುದ್ರನನ್ನ ನಂಬಿಬಿಡುತ್ತಾಳೆ. ಕಾಲಕ್ರಮದಲ್ಲಿ ಇಬ್ಬರ ಗುಣಗಳಲ್ಲಿ ವ್ಯತ್ಯಾಸ ವಿಲ್ಲದ್ದನ್ನು ಕಂಡುಕೊಳ್ಳುತ್ತಾಳೆ. ಮಾಸೂರು ಮತ್ತು ಬಾಸೂರಿನ ಎರಡು ಗುಂಪುಗಳ ಘರ್ಷಣೆಯಲ್ಲಿ ಭರಮಜ್ಜನ ಕುಟುಂಭ ಶೋಷಣೆಗೊಳಗಾಗುತ್ತದೆ.

ಬಂಡಾಯದ ಮತ್ತೊಂದು ಆಯಾಮವೆಂದರೆ ಮುಸ್ಲಿಂಲೋಕದ ಮೌನ ಒಡೆದು ಬಹಿರಂಗಗೊಂಡದ್ದು. ಬೊಳುವಾರು ಮಹಮದ್‌ಕುಂಞ, ಮಹಮದ್‌ ಕಟ್ಟಾಡಿ, ಬಾನುಮುಷ್ತಾಕ್‌, ಸಾರಾಅಬೂಬಕ್ಕರ್ ಮುಂತಾದವರು ಧರ್ಮದ ಹೆಸರಿನಲ್ಲಿ ಪ್ರತಿಗಾಮಿಗಳು ನಡೆಸುವ ಶೋಷನೆಯನ್ನು ಬಯಲು ಮಾಡಿದ್ದರೆ ಧರ್ಮದ ಹೆಸರಿನಲ್ಲಿ ನಡೆಯುವ ಹೆಣ್ಣಿನ ಶೋಷಣೆಯನ್ನು ಕುರಿತು ಸಾಋಆ ಅಬೂಬಕ್ಕರ್ ‘ಚಂದ್ರಗಿರಿಯ ತೀರದಲ್ಲಿ’ ಚಿತ್ರಿಸಿದ್ದಾರೆ. ಮೌನದ ಪಾತ್ರಗಳಿಗೆ ಧ್ವನಿಯಾಗುವುದರ ಜೊತೆಗೆ ಮುಸ್ಲಿಂ ಸಮುದಾಯದಲ್ಲಿ ಬೇರುಬಿಟ್ಟಿರುವ ಕಂದಾಚಾರ, ಮೂಢನಂಬಿಕೆ, ಸಣ್ಣತನ – ಮಾನವೀಯತೆ, ತ್ಯಾಗ ಇವೆಲ್ಲವನ್ನು ಅನಾವರಣಗೊಳಿಸಿದ್ದಾರೆ. ಮನಬಂದಂತೆಲ್ಲ ತಲಾಖ್‌ ಕೊಡುವುದು, ಅಂಥದ್ದಕ್ಕೆ ಕಾರಣಕೊಡದಿರುವುದು, ಮರುಮದುವೆಗೆ ಸಿದ್ಧವಾಗುವುದು, ಹೆಣ್ಣಿಗೆ ಜೀವನಾಂಶ ಕೊಡಲು ಒಪ್ಪದಿರುವುದು – ಇಂಥ ಸಮಸ್ಯೆಗಳ ಸೂಕ್ಷ್ಮಗಳಿಗೆ ಅಬೂಬಕ್ಕರ್ ಪ್ರತಿಕ್ರಿಯಿಸಿರುವ ರೀತಿ ಅದ್ಭುತವಾದುದು. ಊರಿನ ಘಟನಾವಳಿಗಳಿಗೆಲ್ಲ ಚಂದ್ರಗಿರಿ ನದಿ ಸಾಕ್ಷಿಯಾಗಿಬಿಡುವ ಈ ಕಾದಂಬರಿಯಲ್ಲಿ ಮುಖ್ಯ ಪಾತ್ರ ನಾದಿರಾ. ಈಕೆ ತಂದೆ ಮತ್ತು ಗಂಡ – ಇಬ್ಬರು ಪ್ರತಿಷ್ಠೆಯವರು. ಇಂಥ ಪ್ರತಿಷ್ಠೆಗಳ ನಡುವೆ ನಲುಗುವ ಪಾತ್ರವೇ ನಾದಿರಾ. ಭಾರತೀಯ ಪರಂಪರೆ ಸಂಬಂಧಗಳ ಬಗ್ಗೆ ಬೋಳೆ ಬಿಡುವುದನ್ನು ಒರೆಗೆ ಹಚ್ಚುವ ಹಾಗೆ ಇಲ್ಲಿ ತಂದೆ – ಮಗಳು – ಅಳಿಯ ಸಂಬಂಧಗಳು ಬರುತ್ತವೆ. ಮಕ್ಕಳ ಸುಖ ಸಂತೋಷಕ್ಕಾಗಿ ಹಂಬಲಿಸಬೇಕಾದ ತಂದೆ – ತಾಯಿ – ತಮ್ಮ ಪ್ರತಿಷ್ಠೆಗಾಗಿ ಮಕ್ಕಳನ್ನು ಬಳಸಿಕೊಳ್ಳುವುದು ಎಂಥಾ ಪರಂಪರೆ? ಈ ಕಾದಂಬರಿಯಲ್ಲಿ ಬರುವ ನಾದಿರಾಳ ತಂದೆ, ಮಗಳಿಗೆ ಗೊತ್ತಿಲ್ಲದ ಹಾಗೆ ಅಳಿಯ ತಲಾಕ್‌ ಕೊಡುವ ಹಾಗೆ ಮಾಡುತ್ತಾನೆ. ಇಲ್ಲಿ ಖಾನ್‌ ಒಬ್ಬ ತಂದೆಗಿಂತ ಸ್ವಾರ್ಥಿ ಗಂಡಸಾಗುತ್ತಾನೆ. ಹೆತ್ತ ಮಗುವನ್ನು ನಾದಿರಾಳಿಂದ ಗಂಡನಾದವನು ಕದ್ದೊಯ್ಯುತ್ತಾನೆ. ಗಂಡ ಹೆಂಡತಿಯಾದವಳನ್ನು ಕರೆದುಕೊಂಡು ಹೋಗುವುದಿಲ್ಲ. ತಂದೆಯಾದವನು ಕಳಿಸುವುದಿಲ್ಲ. ನಾದಿರಾ ಯಾಂತ್ರಿಕವಾಗಿ ಬದುಕು ಸಾಗಿಸುತ್ತಾಳೆ ವಿನಃ ತಂದೆ – ಗಂಡನನ್ನು ಪ್ರಶ್ನಿಸುವ ಮನೋಬಲ ಬೆಳೆಸಿಕೊಳ್ಳುವುದಿಲ್ಲ. ಖಾನ್‌ರು ಬೇರೆ ಮದುವೆಯ ವಿಷಯ ಮಾತನಾಡಿದಾಗ ನಾದಿರಾ ಪ್ರತಿಭಟಿಸುತ್ತಾಳೆ. ಈ ಪ್ರತಿಭಟನೆ ಅಸಹಾಯಕತೆಯಿಂದ ಹೊರಹೊಮ್ಮಿದ್ದು: “ನೀವು ನನಗೆ ಒಂದು ಮದುವೆ ಮಾಡಿಸಿದ್ದು ಸಾಕು ನೀವೇನಾದರೂ ನನಗೆ ಇನ್ನೊಂದು ಮದುವೆ ಮಾಡಲು ಪ್ರಯತ್ನಿಸಿದರೆ ನಾನು ಚಂದ್ರಗಿರಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತೇನೆ. ವ್ಯವಸ್ಥೆಯ ಸುಳಿಯಲ್ಲಿ ಸಿಕ್ಕಹೆಣ್ಣುಗಳು ಕೊನೆಗೆ ಬಿಡುಗಡೆಗೊಳ್ಳುವುದು ಸಾವಿನ ಸನ್ನಿಧಾನದಲ್ಲಿಯೇ”[6]

ಪುರುಷೋತ್ತಮ ಬಿಳಿಮಲೆ ಹೇಳುವಂಥೆ “ಕಥಾನಾಯಕಿ ನಾದಿರಾಳನ್ನು ಚಂದ್ರಗಿರಿ ನದಿ ಕೊಚ್ಚಿಕೊಂಡು ಹೋಗುವ ಸಾಂಕೇತಿಕ ಘಟನೆಯ ಆಳದಲ್ಲಿ ಸಾರಾ ಅವರು ಪ್ರಕಟಪಡಿಸಿದ ಮಾನವೀಯತೆಯು ತುಂಬಾ ಅರ್ಥಪೂರ್ಣವಾದುದು. ಕುರಾನನ್ನು ತಪ್ಪಾಗಿ ಅರ್ಥೈಸಿಕೊಂಡ ಮೂರ್ಖರ ವಿರುದ್ಧ ವೈಚಾರಿಕ ಸಮರ ಸಾರಿದ ಲೇಖಕರಿಗೆ ಚಾರಿತ್ರಿಕ ಮಹತ್ವವನ್ನು ಪ್ರಸ್ತಾಪಿಸುತ್ತದೆ”[7] ರಶೀದ್‌ ನಾದಿರಾಳನ್ನು ವಿವಾಹವಾದಾಗ ೧೪ ವರ್ಷ ತುಂಬಿರಲಿಲ್ಲ. ಮದುವೆಗೆ ಮೊದಲು ರಶೀದ್‌ ನಾದಿರಾಳನ್ನು ನೋಡಿರಲಿಲ್ಲ. ಅವನ ತಾಯಿ ಅಮೀನ ನೋಡಿದ್ದಳು. ಮುಸ್ಲಿಂರಲ್ಲಿ ಮದುವೆಗೆ ಮೊದಲು ಹೆಣ್ಣನ್ನು ನೋಡುವುದು ನಿಷಿದ್ಧ. ಆಧುನಿಕತೆಯ ಪರಿಣಾಮವಾಗಿ ಜೊತೆಗೆ ಹುಡುಗನ ಸಂಬಂಧಿಕರು ಸ್ತ್ರೀಯರು ಭಾವೀ ವಧುವನ್ನು ನೋಡುವ ಪದ್ಧತಿ ಪ್ರಾರಂಭವಾಗಿತ್ತು. “ನೋಡು, ರಶೀದ್‌, ರಶೀದ್‌ ನಾದಿರಾ ಅವರದು ಅನುರೂಪ ದಾಂಪತ್ಯ. ನಾದಿರಾಗೆ ಓದು ಬರಹ ಕಲಿಸುವಾಸೆ ಸಿನಿಮಾ ತೋರಿಸುವ ಬಯಕೆ. ಕಾಲಕ್ರಮದಲ್ಲಿ ಅಳಿಯ ಮತ್ತು ಮಾವನ ಸಂಘರ್ಷದಲ್ಲಿ ನಾದಿರಾ ಶೋಷಣೆ ನಡೆಯುತ್ತಿರುವಾಗ ಓದುಬರಹ ಕಲಿತಿದ್ದರೆ ಅಕ್ಷರಗಳ ಮೂಲಕ ಸಂವಹನ ಸಾಧ್ಯವಾಗುತ್ತಿತ್ತು” ಎಂಬ ಭಾವ ಪ್ರಕಟವಾಗುತ್ತದೆ.

ಸಾರಾ ಅವರ ‘ವಜ್ರಗಳು’ ಕಾದಂಬರಿಯಲ್ಲೂ ತಲಾಖ್‌ ಸಮಸ್ಯೆ ಇದೆ. ಎರಡನೇ ಮದುವೆಯಾಗಿ ಗಂಡ ಪುನಃ ತಲಾಖ್‌ ಕೊಡುವುದು. ಹೆಣ್ಣು ತನ್ನ ಮಗುವನ್ನು ಕಳೆದುಕೊಳ್ಳುವುದು ಕೊನೆಗೆ ದಿಕ್ಕೇ ಇಲ್ಲದ ಮಗುವನ್ನು ತಂದು ಸಾಕುವ ಭೀಕರ ಸನ್ನಿವೇಶಗಳನ್ನು ಈ ಕಾದಂಬರಿಯಲ್ಲಿ ಸಾರಾ ಅಭಿವ್ಯಕ್ತಿಸುತ್ತಾರೆ. ಹೀಗೆ ಮುಸ್ಲಿಂ ಸಮುದಾಯದ ಭೀಕರತೆಗಳನ್ನು ಆಕ್ರೋಶವಿಲ್ಲದ ಬರವಣಿಗೆಯಲ್ಲಿ ಹೊರಹಾಕುತ್ತಾರೆ. ನಫೀಸಾಳ ಪಾತ್ರ ನಾದಿರ ಮತ್ತು ನಸೀಮಾಳ (ಸಹನಾ ಕಾದಂಬರಿ) ಪಾತ್ರಗುಣವನ್ನೇ ಬಹುಮಟ್ಟಿಗೆ ವ್ಯಕ್ತಗೊಳಿಸುತ್ತದೆ. ‘ಆಕೆ ಭೋಗ ಸಾಮಾಗ್ರಿಯಾಗುವ ಬಗ್ಗೆ ಲೇಖಕಿಗೆ ತೀವ್ರವಾದ ಜಿಗುಪ್ಸೆ ಇದೆ. ಆದರೆ ಮುಸ್ಲಿಂ ಸಮಾಜದ ಸಮುದಾಯಗಳು ದುರ್ಭ್ಯೇದ್ಯವಾದ ವಜ್ರದಂತೆ ಗಟ್ಟಿಯಾಗಿದ್ದು ಮಹಿಳೆಯನ್ನು ತೀವ್ರವಾಗಿ ಹಿಂಸಿಸುತ್ತವೆ. ಹೀಗೆ ಸಾರಾ ಅವರು ತಮ್ಮ ಮೂರು ಕಾದಂಬರಿಗಳಲ್ಲಿಯೂ ಸ್ತ್ರೀ ಪರವಾದ ದೃಷ್ಟಿಕೋನವನ್ನು ’ನಿಖರವಾಗಿ ತೋರಿಸಿದ್ದಾರೆ’.

ಸಮರ್ಥನಿಯವೆನ್ನಬಹುದಾದ ಕಾದಂಬರಿ ಚರಿತ್ರೆಯನ್ನು ಜೀರ್ಣಿಸಿಕೊಂಡು ತನ್ನ ಅಂತರಾಳದ ಇಂಗಿತಗಳನ್ನು ಉದ್ದೇಶಿಸುವಂತಿರಬೇಕು. ಸೈಕಲ್‌ ಸವಾರಿ, ಬೀಶುವ ಕಲ್ಲು, ಡಾಂಬರು, ಅಂಚೆಕಛೇರಿ, ಹೋಟೆಲ್‌ ನಿರ್ಮಾಣ, ಆಂಗ್ಲ ಶಿಕ್ಷಣ ಇವೆಲ್ಲ ನಮ್ಮ ಗ್ರಾಮ ಸಮುದಾಯಗಳ ಪರಿವರ್ತನೆಯ ಸಂಕೇತಗಳು. ಬದಲಾವಣೆಗೆ ಕಾರಣವಾದ ಈ ಸಂಕೇತಗಳನ್ನು ಕೇವಲ ವಾಸ್ತವದ ನೆಲೆಯಲ್ಲಿ ನಿರೂಪಿಸಲು ಪ್ರಯತ್ನಿಸದೆ ಚರಿತ್ರೆಯೊಂದಿಗೆ ಮುಖಾಮುಖಿಯಾಗಿಸಲು ತೊಡಗಿದಾಗ ಕಾದಂಬರಿ ಕಾರನ ಜಾಣ್ಮೆ ಎದ್ದು ಕಾಣುತ್ತದೆ. ಈ ಬಗೆಯ ಬೌದ್ಧಿಕ ಕೌಶಲಕ್ಕೆ ಕಾರಣವಾಗುವ ಬಿಳುಮನೆ ರಾಮದಾಸರ ‘ಕರಾವಳಿ ಹುಡುಗಿ’ ಕಾದಂಬರಿಯ ಶೋಧವೇ ಅತ್ಯಂತ ಗಂಭೀರವಾದುದು. ಮನುಷ್ಯನ ಜೀವನವನ್ನು ನಿಯಂತ್ರಿಸುವ ಶಕ್ತಿಗಳು ಎಂಥವು ಎಂಭ ಪ್ರಶ್ನೆಯಲ್ಲಿ ಕೇಂದ್ರೀಕೃತಗೊಂಡು ಸಮಾಜದ ವಾಸ್ತವ ಶಕ್ತಿಗಳತ್ತ ಕಾದಂಬರಿಯ ಮನಸ್ಸು ಹರಿದಾಡುತ್ತದೆ. ಕುವೆಂಪು ’ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಗೋಚರವಾಗುವ ಮೇಗರವಳ್ಳಿಯೇ ಈ ಕಾದಂಬರಿಯ ಕೇಂದ್ರ ಪ್ರಜ್ಞೆಯೂ ಆಗಿದೆ. ದಲಿತವರ್ಗದ ಅಕ್ಕು ಹೋಟೆಲ್‌ ಇಡುವ ಅಂದಾಜಿನ ಮೇಲೆ ಈ ಹಳ್ಳಿಗೆ ಕಾಲಿರಿಸುತ್ತಾಳೆ. ಕುಲಕಸುಬನ್ನು ಬಿಟ್ಟು ಬೇರೊಂದು ಉದ್ಯೋಗಕ್ಕೆ ತೊಡಗುವ ತಳಸಮುದಾಯದ ಹೆಣ್ಣಿನ ಪ್ರಯತ್ನದ ಬಗೆಗಿನ ಕುತೂಹಲ, ಆಶ್ಚರ್ಯ, ಅಸಹಕಾರ, ಪ್ರತಿಭಟನೆ, ವ್ಯಂಗ್ಯ – ವಿಡಂಬನೆಗಳೇ ಕಾದಂಬರಿಯ ಕ್ರಿಯಾಶೀಲತೆಗೆ ಕಾರಣವಾಗಿವೆ. ಪಾರಂಪರಿಕ ಹಾದಿಯನ್ನು ಬಿಟ್ಟು ಹೊಸ ಕಸುಬಿಗೆ ಹಾತೊರೆಯುವ ಅಕ್ಕುವಿನ ಉತ್ಸಾಃವೇ ಕಾದಂಬರಿಯ ಉಸಿರು. ಹೊಸಬದುಕಿನ ಶೋಧನೆಯಲ್ಲಿ ಧುಮುಕುವ ಅಕ್ಕುವಿನ ಸಂಚಲನ ಕಾಮತ, ವೆಂಕಣ್ಣನಂಥವರ ತಳಮಳಕ್ಕೆ ಕಾರಣವಾಗುತ್ತದೆ. ಹೋಟೆಲ್‌ ಇಡುವ ಅಕ್ಕುವಿನ ಅಲೋಚನೆ, ಚರ್ಚೆ ಈ ಬಗೆಗಿನ ವಾದ – ವಿವಾದ, ಪಂಚಾಯ್ತಿದಾರರ ಧೋರಣೆಯಂತೆ ಹೊಸ ಉದ್ಯೋಗಕ್ಕೆ ದೊರೆತ ಭರವಸೆ, ಅನಂತರ ಲಭ್ಯವಾಗುವ ಸಾಮಾನುಗಳು, ಇವುಗಳ ನೆಪದಲ್ಲಿ ಜರುಗುವ ರಾಜಕೀಯ, ಈ ಹಿನ್ನೆಲೆಯಲ್ಲಿ ಜನ್ಮತಾಳುವ ಅಕ್ಕುವಿನ ಬಗೆಗಿನ ಅಪಪ್ರಚಾರ, ಅದನ್ನು ಎದುರಿಸುವ ಆಕೆಯ ದಿಟ್ಟತನ ಇವೆಲ್ಲವನ್ನು ಕಾದಂಬರಿ ಮನಮುಟ್ಟುವಂತೆ ನಿರೂಪಿಸುತ್ತದೆ. ಆ ಮೂಲಕ ಸ್ತ್ರೀಯ ಸಬಲೀಕರಣವನ್ನು ಸಮರ್ಥೀಸುವ ಏರ್ಪಾಟುಗಳನ್ನು ಮಾಡುತ್ತದೆ. ತಿಂಡಿ – ಕಾಫಿ, ಮೀನು ಮಾರಾಟದಂತಹ ವ್ಯಾಪಾರದ ಆರ್ಥಿಕತೆಯ ಏರುಪೇರುಗಳ ಅಭಿವ್ಯಕ್ತಿಯ ಸಂಗಡವೇ ದುರ್ಬಲ ವರ್ಗಗಳ ಅಲಕ್ಷಿತ ನೆಲೆಗಳ ಸಂಘಟನೆಗೆ ಜಾಗೃತಿಗೆ ಕಾರಣರಾದವರ ವೈಚಾರಿಕ ಧಾರೆಯೂ ಪ್ರವಹಿಸುವುದರಿಂದ ಕಾದಂಬರಿಗೆ ಚರ್ಚೆಯ ಸ್ವರೂಪದ ವಿಶಿಷ್ಟ ವಿನ್ಯಾಸವೊಂದು ಲಭ್ಯವಾದಂತಿದೆ.

[1] ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, ಪು. ೧೯೮.

[2] ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಮತ್ತು ಪ್ರಭುತ್ವ, ಪು. ೨೦೦.

[3] ರಾಜೇಂದ್ರ ಚೆನ್ನಿ, ಅಮೂರ್ತತೆ ಮತ್ತು ಪರಿಸರ, ಪು.೧೭೫.

[4] ರಾಜೇಂದ್ರ ಚೆನ್ನಿ, ಅಮೂರ್ತತೆ ಮತ್ತು ಪರಿಸರ, ಪು.೧೭೨.

[5] ಸಿ.ಎನ್‌. ರಾಮಚಂದ್ರನ್‌, ಪರಂಪರೆ ಮತ್ತು ಪ್ರತಿರೋಧ, ಪು. ೧೬೦-೧೬೧.

[6] ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಸ್ವರೂಪ, ಪು. ೨೮೫.

[7] ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಸ್ವರೂಪ, ಪು. ೨೮೫.