ಹನ್ನೊಂದನೆಯ ಪರಿಚ್ಛೇದ

ಸರಸೆಯು ದಿನೇ ದಿನೇ ಕ್ಷೀಣವಾಗುತ್ತಾ ಬಂದಳು. ವೈದ್ಯರು ಮೀನೆಣ್ಣೆಯನ್ನು ಕೊಡಬೇಕೆಂದು ಹೇಳಿದರು. ಅವಳಿಗದನ್ನು ತೆಗೆದುಕೊಳ್ಳುವುದೆಂದರೆ ಅಸಹ್ಯ. ‘ಅದು ಕೆಟ್ಟವಾಸನೆ, ಆ ಹಾಳು ಔಷಧ ನನಗೆ ಬೇಡ” ಎನ್ನುವಳು. ಉಪೇಂದ್ರನು ಸ್ವತಃ ಬಂದು “ಕಂದ! ನಿನಗೊಳ್ಳೆಯದಾಗುವುದು. ನನ್ನ ಸರಸೆಗೆ ಬೇಗ ವಾಸಿಯಾಗುವುದಕ್ಕೆ ಕೊಟ್ಟಿರುವರಯ್ಯಾ” ಎಂದು ನಾನಾವಿಧವಾಗಿ ಒತ್ತಾಯಮಾಡಿ ಕುಡಿಸುವನು. ಸರಸೆಗೆ ತಂದೆಯೆಂದರೆ ಪ್ರಾಣ. ಅವನ ಮನಸ್ಸಿಗೆ ನೋವಾಗುವುದೆಂಬ ಭಯದಿಂದ ತೆಗೆದುಕೊಳ್ಳುತ್ತಿದ್ದಳು. ಶಾಲಿನಿಯು ಹಗಲು ರಾತ್ರಿಯೆನ್ನದೆ ಮಗುವಿನ ಬಳಿಯಲ್ಲಿಯೇ ಇದ್ದು ಆದರಿಸ ತೊಡಗಿದಳು. ತನ್ನ ದೇಹಸ್ಥಿತಿಯನ್ನು ಲಕ್ಷಿಸದೆ ಕೆಲಸ ಮಾಡುವುದನ್ನು ನೋಡಿ ಎಲ್ಲರೂ ಆಶ್ಚರ್ಯಪಡುತ್ತಿದ್ದರು. ಮಕ್ಕಳ ವಿಷಯದಲ್ಲಿ ಹೆಚ್ಚಾದ ಅನುಭವವಿದ್ದುದರಿಂದ ಹೀಗೆಂದು ತಿಳಿದರು. ಆದರೆ ಯಾರ ಆದರೋಪಚಾರದಿಂದಲೂ ಫಲವಾದಂತೆ ತೋರಲಿಲ್ಲ. ಕೆಮ್ಮು ಹೆಚ್ಚಾಯಿತು.

ಔಷಧಾಲಯವು ಉಪೇಂದ್ರನ ಕಾರಖಾನೆಯ ಬಳಿಯಲ್ಲಿಯೇ ಇದ್ದಿತು. ಅವನು ಸರಸೆಯನ್ನು ತನ್ನ ಕೋಣೆಗೆ ಕರೆದುಕೊಂಡ ಹೋಗಿ ವೈದ್ಯರನ್ನು ಅಲ್ಲಿಯೇ ಬಂದು ನೋಡುವಂತೆ ಹೇಳಿ ಕಳುಹಿದನು. ಶಾಲಿನಿಯು ಅವಳೊಂದಿಗೆ ಹೋಗಿದ್ದಳು. ಬಹಳ ಹೊತ್ತಿನ ಮೇಲೆ ವೈದ್ಯರು ಬಂದು ಮಗುವನ್ನು ಪರೀಕ್ಷಿಸತೊಡಗಿದರು. ಉದ್ದವಾದ ನಳಿಗೆಯನ್ನು ಕಿವಿಯಲ್ಲಿಟ್ಟುಕೊಂಡು ಎದೆಯನ್ನೂ, ಬೆನ್ನನ್ನೂ ಪರೀಕ್ಷಿಸಿದರು. ಅನಂತರ ಉಪೇಂದ್ರನ ಕಡೆಗೆ ತಿರುಗಿ “ಮೊದಲಿನ ಔಷಧವನ್ನು ಸರಿಯಾಗಿ ಕೊಡುತ್ತಾ ಬನ್ನಿ. ವಾಸಿಯಾಗುವುದು” ಎಂದರು. ಅವನು ವೈದ್ಯರನ್ನು ಕೋಣೆಯ ಒಂದು ಪಾರ್ಶ್ವಕ್ಕೆ ಕರೆದುಕೊಂಡು ಹೋದನು. ಆಯಾಸದಿಂದ ನಿದ್ರೆ ಹೋಗುತ್ತಿದ್ದ ಮಗುವನ್ನು ಅಲ್ಲಿಯೇ ಸೋಪಾನದ ಮೇಲೆ ಮಲಗಿಸಿ ಶಾಲಿನಿಯು ಅವನನ್ನು ಹಿಂಬಾಲಿಸಿದಳು.

ಉ: ಮಹಾಶಯ, ದಯವಿಟ್ಟು ನಿಜವಾದ ಸ್ಥಿತಿಯನ್ನು ಹೇಳಬೇಕು. ನನ್ನಲ್ಲಿ ಮರೆಮಾಚಬೇಡಿ.

ವೈ: ಇನ್ನು ಮರೆಮಾಚಿ ಪ್ರಯೋಜನವೇನು?

ಉ: (ಹತಾಶನಾಗಿ) ಹೇಗಾದರೂ ಬದುಕಿಸಲಾರಿರಾ? ಸ್ವಲ್ಪವೂ ಆಶೆಯಿಲ್ಲವೆ?

ವೈ: ಇಲ್ಲದ ನಂಬುಗೆಯನ್ನು ಕೊಡಲು ನನಗಿಷ್ಟವಿಲ್ಲ. ನೀವೇ ಧನ್ಯರು. ಇಂತಹ ಮಗುವಿನ ಸಾವಿನಿಂದ ಕೊರಗಲು ಅದರ ತಾಯಿಯಿಲ್ಲ.

ಶಾಲಿನಿಯ ಮುಖವು ಇದ್ದುದಕ್ಕಿದ್ದ ಹಾಗೆಯೇ ಬಿಳ್ಪೇರಿತು. ಅವಳು ನಿಲ್ಲಲಾರದೆ ಅಲ್ಲಿಯೇ ಕುಳಿತಳು. ಮುಖಾವರಣವು ಸಡಲಿಹೋಯ್ತು. ಅವಳ ಮುಖವನ್ನು ನೋಡಿ ಉಪೇಂ‌ದ್ರನಿಗೆ ಭಯವಾಯ್ತು. ಕೂಡ್ಲೆ ಏನೆಂದು ವಿಚಾರಿಸಲು ಹೋದನು. ಶಾಲಿನಿಯು ಚೇತರಿಸಿಕೊಂಡು ಆವರಣವನ್ನು ಎಳೆದುಕೊಂಡು ‘ನನಗೇನೂ’ ಇಲ್ಲ. ಮಗುವನ್ನು ತಾಯಿಯಂತೆ ಪ್ರೀತಿಸುವುದರಿಂದ ಇದನ್ನು ಕೇಳಿ ಸಹಿಸಲಾರದೆ ಹಾಗಾಯ್ತು’ ಎಂದು ಹೇಳಿದಳು. ಉಪೇಂ‌ದ್ರನು ಹಿಂದಿರುಗಿ ಬಂದನು.

ಉ: ಹವಾ ಬದಲಾಯಿಸುವುದರಿಂದ ಪ್ರಯೋಜನವಾಗಲಾರದೆ?

ವೈ: ಏನೂ ಪ್ರಯೋಜನವಾಗದು. ಸ್ವಲ್ಪ ಕಾಲ ತಳ್ಳಿದಂತಾಗುವುದು.

ಉ: ಇನ್ನೆಷ್ಟು ದಿನಗಳಾಗಬಹುದು?

ವೈ: ಹೇಳಲಾಗುವುದಿಲ್ಲ. ನಾಳೆಯೇ ಆಗಬಹುದು. ಇನ್ನುಂದು ತಿಂಗಳಾಗಬಹುದು.

ಉ :  ಏನು ಆಹಾರವನ್ನು ಕೊಡಬೇಕು.

ವೈ: ಯಾವ ವಿಚಾರದಲ್ಲಿಯೂ ತೊಂದರೆ ಕೊಡಬೇಡಿ, ಅವಳಿಗೆ ಹೇಗೆ ಇಷ್ಟವೋ ಹಾಗೆ ಮಾಡಿ.

ವೈದ್ಯನು ಇಬ್ಬರಿಗೂ ವಂದಿಸಿ ಹೊರಟನು. ಉಪೇಂದ್ರನು ಅವನೊಡನೆಯೇ ಗಾಡಿಯವರೆವಿಗೂ ಬಂದು ಎರಡು ಕೈಗಳಿಂದಲೂ ಅವನ ಕೈಯನ್ನು ಹಿಡಿದುಕೊಂಡು “ಮಹಾಶಯ! ಹೇಗಾದರೂ ನನ್ನ ಕೂಸಿನ ಜೀವವನ್ನು ಉಳಿಸಿಕೊಡಲಾರಿರಾ?” ಎಂದು ಅತಿ ದೀನಸ್ವರದಿಂದ ಕೇಳಿದನು.

ವೈದ್ಯನು “ಪರಮಾತ್ಮನು ತನ್ನ ಸನ್ನಿಧಿಗೆ ಎಳೆದುಕೊಳ್ಳುವ ಜೀವವನ್ನು ತಡೆದು ನಿಲ್ಲಿಸಲು ನಾವು ಮನುಷ್ಯ ಮಾತ್ರರೇ ಅಲ್ಲವೆ? ಅವನು ಮಾಡುವ ಒಂದೊಂದು ಕಾರ್ಯದಲ್ಲಿಯೂ ಒಳ್ಳೇ ಉದ್ದೇಶವಿದ್ದೇ ಇರುತ್ತದೆ. ಎಲ್ಲವಕ್ಕೂ ಸಿದ್ಧರಾಗಿರುವುದೇ ನಮ್ಮ ಕರ್ತವ್ಯ” ಹೀಗೆಂದು ಹೇಳಿ ಹೊರಟುಹೋದನು. ಉಪೇಂದ್ರನು ಅನುಭವಿಸುತ್ತಿದ್ದ ಯಾತನೆಯನ್ನು ಅವನ ಮುಖಭಾವವೇ ಹೇಳುತ್ತಿದ್ದಿತು. ಅವನು ಮೆಲ್ಲನೆ ಒಳಗೆ ಬಂದು ಮಗುವನ್ನು ಕರೆದುಕೊಂಡು ಹೋಗುವಂತೆ ಶಾಲಿನಿಗೆ ಹೇಳಿದನು.

ತಾವು ಅಪ್ಪಣೆಯನ್ನಿತ್ತರೆ ನಾನು ಕರೆದುಕೊಂಡು ಹೋಗುತ್ತೇನೆ.

ಉ: ಬೇಡ ಶಾಲಿನಿ. ಎಂತೂ ಅವಳು ಸಾಯುವಳು; ಇರುವಷ್ಟು ದಿನವು ನನ್ನ ಕಣ್ಣೆದುರಿಗೆ ಇರಲಿ!

ಸರಸೆಯ ಮುಖವನ್ನು ಒಂದೇ ಸಮನೆ ನೋಡುತ್ತಿದ್ದು ನಿಟ್ಟುಸಿರು ಬಿಟ್ಟು ತನ್ನ ಕಾರ್ಯಕ್ಕೆ ತೆರಳಿದನು. ಶಾಲಿನಿಯು ದುಃಖದ ವೇಗವನ್ನು ತಡಿಯಲಾರದೆ ಹೋದಳು. ಮಗುವು ಸಾಯುವುದೆಂದು ಕೇಳಿ ಯಾವ ತಾಯಿ ತಾನೇ ಸಹಿಸಿಬಲ್ಲಳು? ಅವಳು ಸರಸೆಯ ಮಗ್ಗಲಲ್ಲಿಯೇ ಕುಳಿತು ಕಣ್ಣೀರು ಸುರಿಸತೊಡಗಿದಳು.

ಶಾಲಿನಿ: ಹೀಗೆಯೇ ನೀನು ಕೈಗೊಂಡ ಕಾರ್ಯವನ್ನು ನೆರವೇರಿಸುವುದು? ಏಳು, ತಾಳ್ಮೆಯನ್ನು ತಂದುಕೊ, ಇಲ್ಲವಾದರೆ ನಿನ್ನ ಮುದ್ದು ಮಗಳ ಜೀವವು ಈ ಪಾಪಮಯವಾದ ಪ್ರಪಂಚವನ್ನು ತ್ಯಜಿಸುವಾಗಲೂ ದುಃಖಪಡುವುದು.

ಹನ್ನೆರಡನೆಯ ಪರಿಚ್ಛೇದ

ಸರಸೆಯ ರೋಗವು ಪ್ರಬಲವಾಯ್ತು. ಈ ದುಸ್ಸಹವಾದ ಪ್ರಪಂಚದಿಂದ ಬಿಡುಗಡೆ ಹೊಂದಲು ಬಹಳ ವಿಳಂಬವಿರಲಿಲ್ಲ. ಬಾಲಕಿಯ ಮುಖಭಾವವು ಶಾಂತಚಿತ್ತದಿಂದ ಆ ಸಮಯವನ್ನೇ ಇದಿರುನೋಡುತ್ತಿದ್ದಿತು. ಈ ಸುಖಮಯವೆನಿಸಿಕೊಂಡಿರುವ ಜೀವವನ್ನು ತೊರೆದು, ತಿಳಿಯದ ಪ್ರದೇಶದಲ್ಲಿ ಕಾಲಿಡುವಾಗಲೂ ಸಂತೋಷದಿಂದ ಹೋಗುವಂತೆ ಅನಾದಿದೇವನು ಉತ್ಸಾಹಕೊಡುವನು. ಪರಮಾತ್ಮ! ಸಾಯುತ್ತಿರುವ ಮಕ್ಕಳಲ್ಲಿ ನಿನ್ನ ಕರುಣೆಯು ಆಪಾರವಾದುದು!

ಶಾಲಿನಿಯು ಶಯ್ಯೆಯ ಪಕ್ಕದಲ್ಲಿಯೇ ಕುಳಿತಿದ್ದಳು. ಈಗ ಸರಸೆಯ ಮುಖದಲ್ಲಿ ರೋಗದ ಕಳೆಯಿರಲಿಲ್ಲ. ಕಣ್ಣುಗಳು ಕಾಂತಿಯುಕ್ತವಾಗಿದ್ದುವು. ಕೃಷಿಸಿ ಹೋಗಿದ್ದ ಕೈಗಳೆರಡನ್ನೂ ಹಾಸಿಗೆಯಿಂದಾಚೆಗೆ ಹಾಕಿದ್ದಳು.

ಸರಸ : ಶಾಲಿನಿ, ನಾನು ಬಹಳ ಕಾಲ ಕಾಯಬೇಕಾಗಿಲ್ಲ ಅಲ್ಲವೆ?

ಶಾ: ಮಗು, ಏತಕ್ಕೆ?

ಸ: ತಂದೆ, ತಾಯಿ ಇವರೆಲ್ಲಾ ಬರುವುದಕ್ಕೆ ಆ ಕ್ಷಣ ಅವಳ ದಗ್ಧ ಹೃದಯಲ್ಲಿ ಹೊಟ್ಟೆಕಿಚ್ಚಿನ ಜ್ವಾಲೆಯು ಎದ್ದಿತು. ಹಾಗಾದರೆ ತಾನು ಅವಳಿಗೆ ಏನು ಆಗಬೇಕಾಗಿರಲಿಲ್ಲವೆ?

ಶಾ: ಸರಸ, ನಾನು ನಿನ್ನಬಳಿ ಇರಬೇಕೆಂಬ ಮನಸ್ಸು ನಿನಗಿಲ್ಲವೇ?

: ಓಹೋ! ಇದೆ ಆದರೆ ಸ್ವರ್ಗವೆನ್ನುತ್ತಾರಲ್ಲಾ, ಅಲ್ಲಿ ಸಂಬಂಧಿಕರ ಹೊರ್ತು ಬೇರೆಯವರ ಗುರ್ತು ಸಿಗುವುದೆ?

ಶಾ: ಮಗು, ಆ ಅನಂತಧಾಮದಲ್ಲಿ ಸಂಬಂಧಿಕರು ಇತರರೆಂಬ ಭೇದವಿಲ್ಲ. ಎಲ್ಲರೂ ಒಂದೆ.

ಸ: ಅಲ್ಲಿ ಹೂವು, ಹಣ್ಣು ಎಲ್ಲಾ ಇರುತ್ತೆ. ನನ್ನನ್ನು ಕರೆದುಕೊಂಡು ಹೋಗಲು ದೇವರೇ ಬರುವವನಲ್ಲವೆ?

ಶಾಲಿನಿಯು ಉತ್ತರವನ್ನೀಯಲಿಲ್ಲ?

ಸ: ಹೌದು, ಆಗ ನಾನು ಖಾಯಿಲೆಯಿಲ್ಲದೆ ಸುಖವಾಗಿರುವೆನು.

ಶಾ: ಹೌದು ಕಂದಾ! ನಿಜ. ಆ ಕಾಲವು ನನಗೂ ಬೇಗ ಬಂದರೆ!

ಸಂ: ಶಾಲಿನಿ! ತಾಯಿ, ಅಂದರೆ ನನ್ನ ತಾಯಿಯು ಅಲ್ಲಿರುವಳೆ?

ಶಾ: ಹೌದು ಮಗು, ನಿನಗಾಗಿ ಕಾದಿರುವಳು!

ಸ: ಆದರೆ ನನ್ನನ್ನು ಗುರ್ತಿಸುವುದು ಹೇಗೆ? ಹೇಗಿದ್ದಳೆಂಬುದೇ ಮರಿಯುತ್ತಾ ಬಂದಿದೆ. ಶಾಲಿನಿಯು ಬಗ್ಗಿ ಅವಳ ಕೈಮೇಲೆ ಮುಖವನ್ನಿಟ್ಟಳು. ಅಶ್ರುವು ಧಾರಾಕಾರವಾಗಿ ಸುರಿಯಲಾರಂಭವಾಯ್ತು. “ಸರಸ! ನೀನು ತಿಳಿಯಬಲ್ಲೆ, ಅವಳು ನಿನ್ನನ್ನು ಮರೆತಿಲ್ಲ!”

ಸ: ಹೌದು, ಅವಳಷ್ಟು ಒಳ್ಳೆಯವಳಾಗಿರಲಿಲ್ಲವಂತೆ, ಸ್ವರ್ಗದಲ್ಲಿಯೇ ಇರುವಳೆಂದು ಹೇಗೆ ಗೊತ್ತು?

ಶಾ: ಅವಳು ತನ್ನ ತಪ್ಪಿಗಾಗಿ ದೇವರನ್ನು ಕ್ಷಮೆ ಬೇಡಿರುವಳು. ನಿನಗಾಗಿ ನಿನ್ನ ತಂದೆಗಾಗಿ, ಅವಳ ಹೃದಯವು ಒಡೆದು ಹೋಯ್ತು! ಈ ಸಮಯದಲ್ಲಿ ಉಪೇಂದ್ರನು ಒಳಗೆ ಬಂದನು. ಶಾಲಿನಿಯು ಅಳುತ್ತಿದ್ದುದನ್ನು ನೋಡಿ, ಅವಳನ್ನು ಮೆಲ್ಲಗೆ ಹೊರಗೆ ಕರೆದು “ಶಾಲಿನಿ! ಕೆಮ್ಮು ಹೆಚ್ಚಾಗಿರುವುದೆ?” ಎಂದು ಕೇಳಿದನು.

ಶಾ: ಹೌದು, ಕಾಲವು ಸಮೀಪಿಸುವಂತೆ ತೋರುವುದು. ಉಪೇಂದ್ರನು ತಲೆಯ ಮೇಲೆ ಶಿಡ್ಲು ಬಡಿದಂತಾಯ್ತು. ಅವನು ಗದ್ದಲವಿಲ್ಲದೆ ಒಳಗೆ ಹೋಗಿ ಪಕ್ಕದಲ್ಲಿ ಕುಳಿತನು. ಸರಸೆಯು ಇದ್ದುದಕ್ಕಿದ್ದ ಹಾಗೆಯೇ “ಬಂದೆ! ಬಂದೆ!” ಎಂದರಚಿದಳು. ಅವಳ ಮೈಯನ್ನು ಆದರದಿಂದ ಸವರುತ್ತಾ “ತಾಯಿ, ನಿನ್ನನ್ನಾರು ಕರೆದರಮ್ಮಾ?” ಎಂದು ಕೇಳಿದನು. ತಂದೆಯ ಸ್ವರವನ್ನು ಕೇಳಿ ಎಚ್ಚತ್ತು “ನೀನೆಲ್ಲಿ ಹೋಗಿದ್ದಿ?” ಎಂದು ಕೇಳಿದಳು. ಪುನಃ ಹಾಗೆಯೇ ನಿದ್ರಿತಳಾದಳು. ಉಪೇಂದ್ರನೆದ್ದು ದೂರದಲ್ಲಿದ್ದ ಸಣ್ಣ ದೀಪವನ್ನು ತಂದು ಅವಳ ಮುಖದ ಬಳಿ ಹಿಡಿದನು.

ಸ: “ಬೇಡ ಬೇಡಪ್ಪಾ! ಎಂದು ಕೈಯಿಂದ ಕಣ್ಣು ಮರೆ ಮಾಡಿದಳು.

ಉ: ಮುದ್ದು ಕಂದಾ! ನನ್ನ ಸರಸ! ಒಂದು ಘಳಿಗೆ ಮಾತ್ರ ನಿನ್ನ ಮುಖವನ್ನು ನೋಡುವೆನು ತಾಯಿ.

ಹೇಳಿದಂತೆ ಒಂದು ಘಳಿಗೆ ಮಾತ್ರ ಒಂದೇ ಸಮನೆ ತನ್ನ ಪ್ರೀಯ ಕುವರಿಯ ಮುಖವನ್ನು ನೋಡುತ್ತಿದ್ದು, ದೀಪವನ್ನು ದೂರದಲ್ಲಿಟ್ಟು ಬಂದು ಕುಳಿತನು.

ಸ: ಶಾಲಿನಿ, ನನಗೆ ನೀರಡಿಕೆ. ಸ್ವಲ್ಪ ನೀರು ಕೊಡು.

ಉ: ಸರಸ! ಶಾಲಿನಿಯು ಹಗಳಿರಳೂ ನಿನಗಾಗಿ ಬೇಸರವಿಲ್ಲದೆ ಕೆಲಸ ಮಾಡುತ್ತಿರುವಳು. ಅವಳ ಋಣವನ್ನು ನಾನೆಂದಿಗೂ ತೀರಿಸಲಾರೆ.

ತಾನೇ ಹಾಲನ್ನು ಸ್ವಲ್ಪಸ್ವಲ್ಪವಾಗಿ ಕುಡಿಸತೊಡಗಿದನು. ಎರಡು ಚಂಚದಷ್ಟು ಕುಡಿದು ಸಾಕೆಂದಳು. ಹೊರಳುವುದು ಹೆಚ್ಚಾಯ್ತು. ಒಂದು ಬಾರಿ “ಅಯ್ಯೋ!” ಎಂದು ಕೂಗಿದಳು. ಉಪೇಂದ್ರನ ಎದೆಯೊಡೆಯಿತು. ಅವಳನ್ನು ಮೆಲ್ಲಗೆ ತೊಡೆಯ ಮೇಲೆ ಮಲಗಿಸಿಕೊಂಡನು. ಕಣ್ಣೀರಿನ ಎರಡುತೊಟ್ಟು ಅವಳ ಕೈಮೇಲೆ ಬಿದ್ದಿತು. ಅಪ್ಪಾ! ಅಳಬೇಡ, ಅಳಬೇಡ” ಎಂದು ಅವಳ ಕೈಹಿಡಿದುಕೊಂಡು ಮುದ್ದಿಟ್ಟಳು. ಅವನು ಅವಳನ್ನು ಘಟ್ಟಿಯಾಗಿ ತಬ್ಬಿಕೊಂಡನು. ಹಾಗೆಯೇ ಸ್ವಲ್ಪ ನಿದ್ದೆ ಹೋದಳು. ಉಪೇಂದ್ರನವಳನ್ನು ಮಲಗಿಸಿ ತೋಟದ ಕಡೆಗೆ ಹೋದನು.

ಮೂಲೆಯಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದ ಶಾಲಿನಿಯು ಈಗ ಮಗುವಿನ ಬಳಿ ಬಂದಳು. ಶ್ವಾಸವೆಳೆಯುವ ಧ್ವನಿಯು ಕೇಳುತ್ತಿದ್ದಿತು. ಮೆಲ್ಲನೆ “ಸರಸ” ಎಂದು ಕರೆದಳು. ಸರಸೆಯು ಅರೆಬಾಡಿದ ಕಮಲದಂತೆ ಕಣ್ಣು ತೆರೆದಳು. ಸ್ವಲ್ಪ ಹೊತ್ತಿನ ಮೇಲೆ ಪುನಃ ಕರೆದಳು. ತೆರೆದಿದ್ದ ಕಣ್ಣುಗಳು ಹಾಗೆಯೇ ಇದ್ದುವು. ಎಲ್ಲವೂ ನಿಶ್ಯಬ್ದ. ಕೃಷಾಸಮುದ್ರನು ಈ ದುರ್ಧರವಾದ ಪಾಪಮಯವಾದ ಪ್ರಪಂಚದಿಂದ ಸರಸೆಯನ್ನು ಮುಕ್ತಳನ್ನಾಗಿ ಮಾಡಿದ್ದನು! ಶಾಲಿನಿಯು ಇನ್ನು ಇಲ್ಲಿ ಕುಳಿತಿರಲಾರದೆ ಹೋದಳು. ಹುಚ್ಚಿಯಂತೆ ತನ್ನ ಕೋಣೆಗೆ ಹೋಗಿ ತಲೆ ತಲೆ ಚೆಚ್ಚಿಕೊಂಡು ಅಳಲಾರಂಭಿಸಿದಳು. ಅಳು ತಾಯಿ! ಹ್ಯಾಗಾದರೂ ನಿನ್ನ ಅಪಾರವಾದ ದುಃಖ ಶಾಂತವಾಗಲಿ!

ಇತ್ತ ಉಪೇಂದ್ರನು ಬಂದು ಹೊರಗೆ ನಿಂತಿದ್ದ ರಾಧೆಯನ್ನು ನೋಡಿದನು. ತಂದೆಯ ಮೇಲೆ ಪ್ರಪಂಚವೇ ಕಳಚಿ ಬಿದ್ದಂತಾಯಿತು. ಒಳಗೆ ಹೋಗಿ ಬಾಗಿಲನ್ನು ಹಾಕಿಕೊಂಡು ಮಂಚದ ಬಳಿ ಹೋದನು. ಅರೆತೆರೆದ ಕಣ್ಣುಗಳು ಮುಗುಳ್ನಗೆಯಿಂದೊಡಗೂಡಿದ ಮುದ್ದುಮುಖ, ಮುಂಗುರುಳು ದಿಂಬಿನ ಮೇಲೆ ಸುತ್ತಲೂ ಚದರಿದ್ದಿತು. ಉಪೇಂದ್ರನು ಬದುಕಿರುವಳೇನೋ ಎಂದು ಭ್ರಾಂತನಾಗಿ ಮುಖವನ್ನು ಮುದ್ದಿಟ್ಟನು. ದೇಹವು ಮಂಜಿನಗಡ್ಡೆಯಂತೆ ಕೊರೆಯುತ್ತಿದ್ದಿತು. “ನನ್ನ ಸರಸ” ಎಂದು ಕೂಗುತ್ತ ಶವದ ಬಳಿಯಲ್ಲಿ ಬಿದ್ದಿದ್ದನು.

ಬಹಳ ಹೊತ್ತಿನ ಮೇಲೆ ಎಚ್ಚತ್ತು ಬಾಲಚಂದ್ರನಂತಿದ್ದ ಆ ಮುಖವನ್ನು ಪುನಃ ಮುದ್ದಿಟ್ಟನು, “ನನ್ನನ್ನು ಪರದೇಶಿಯನ್ನಾಗಿ ಮಾಡಿ ಎಲ್ಲಿಗೆ ಹೋದೆ? ಆತುರದಿಂದ ನನಗಾಗಿ ಇನ್ನಾರು ಕಾಯುವರು ತಾಯಿ! ದೇವರೆ! ನನ್ನ ಹೊಟ್ಟೆಯುರಿಸುವುದಕ್ಕಾಗಿ ಇಂತಹ ಕಂದನನ್ನು ಕೊಟ್ಟೆಯ? ನಾನೆಂತಹ ಪಾಪಿ! ನನ್ನ ಪ್ರಾಣದಂತಿದ್ದ ಈ ರತ್ನವನ್ನು ಕಳೆದುಕೊಂಡು ಇನ್ನು ಹೇಗೆ ಜೀವಿಸಲಿ? ಪರಮಾತ್ಮ! ದುಃಖನಿಯಾದ ಇವಳ ತಾಯಿಗೆ ನಿನ್ನ ಪದತಲದಲ್ಲಿ ಆಶ್ರಯವನ್ನಿತ್ತಂತೆ ನನ್ನ ಈ ಕೂಸಿಗೂ ಆಶ್ರಯವನ್ನು ಕೊಡು! ಪಾಪಿಯಾದ ನನ್ನನ್ನು ಬೇಗನೆ ಮುಕ್ತನನ್ನಾಗಿ ಮಾಡು. ನನಗಿನ್ನೀ ಪ್ರಪಂಚವು ಸಾಕು!” ಎಂದು ಪುನಃ ಮೂರ್ಛಿತನಾಗಿ ಸರಸೆಯ ಬಳಿಯಲ್ಲಿಯೇ ಬಿದ್ದನು.

ಹದಿಮೂರನೆಯ ಪರಿಚ್ಛೇದ

ಕಳೆದು ಹೋದ ಕಾಲವು ಹಿಂದಿರುಗುವುದಿಲ್ಲ. ಕಳೆದು ಹೋಗುತ್ತಿರುವ ಕಾಲವು ಯಾರಿಗಾಗಿಯೂ ನಿಲ್ಲುವುದಿಲ್ಲ. ದಿನಗಳ ಮೇಲೆ ದಿನಗಳು ಕಳೆದು ಹೋದವು. ಕಾರ್ಮುಗಿಲಿನಿಂದ ದಿನಕರನು ಮುಚ್ಚಲ್ಪಟ್ಟರೂ ದಿನವು ಕಳೆಯದೆ ನಿಲ್ಲುವುದಿಲ್ಲ. ಹಾಗೆಯೇ ದುಃಸಹವಾದ ಯಾತನೆಗಳಿಂದ ಹೃದಯವು ಭೇದಿಸಲ್ಪಟ್ಟರೂ ಜೀವವೂ ಬೇರೆ ಹೋಗುವುದಿಲ್ಲ. ದುಃಖದಲ್ಲಿಯೇ ದಿನಗಳನ್ನು ಕಳೆವುದು. ಹಾಗೆಯೇ ಶಾಲಿನಿಯೂ ಕೆಲವು ದಿನಗಳನ್ನು ಕಳೆದಳು.

ಯಾರಿಗಾಗಿ ಎಲ್ಲ ದುಃಖವನ್ನು ಪ್ರತಿಯಿಲ್ಲದೆ ಸಹಿಸಿಕೊಂಡಿದ್ದಳೋ ಆ ಮುದ್ದು ಕುವರಿಯು ತನ್ನನ್ನು ಪರದೇಶಿಯನ್ನಾಗಿ ಮಾಡಿ ಹದಿನೈದು ದಿನಗಳಾಗಿದ್ದವು. ಕೊರಗಿ ಕೊರಗಿ ಕೃತಳಾಗಿದ್ದಳು. ಜೀವವೇ ಅಸಹ್ಯಕರವಾಗಿದ್ದಿತು. ಇನ್ನಾರಿಗಾಗಿ ಜೀವಿಸಬೇಕು? ವ್ಯಸನದಲ್ಲಿ ಮುಳುಗಿದ್ದ ಉಪೇಂದ್ರನ ಬಳಿಗೆ ಹೋಗಿ ಸಮಾಧಾನಪಡಿಸುವ ಪುಣ್ಯವನ್ನು ತಾನೇ ಕಾಲಿಂದೊದ್ದಿದ್ದಳು. ಚಂಪೆಯು ಎಂದಿನಂತೆ ಸುಖಸಂತೋಷದಲ್ಲಿ ಮುಳುಗಿದ್ದಳು. ಶೈವಲೆಯ ಮಗುವು ಸತ್ತರೆ ಅವಳಿಗೇನು? ಚಂಪೆಯು ಎಂದಿನಂತೆ ಸುಖಸಂತೋಷದಲ್ಲಿ ಮುಳುಗಿದ್ದಳು. ಶೈವಲೆಯ ಮಗುವು ಸತ್ತರೆ ಅವಳಿಗೇನು? ಚಂಪೆಗೆ ಸ್ವಲ್ಪ ಆಲಸ್ಯವಾದರೆ ಉಪೇಂದ್ರನಿಗೆ ಸಮಾಧಾನವೇ ಇರುತ್ತಿರಲಿಲ್ಲ. ಒಂದಾನೊಂದು ಕಾಲದಲ್ಲಿ ಶೈವಲೆಗಾಗಿ ಹೀಗೆಯೇ ಕಾತರಗೊಳ್ಳುತ್ತಿದ್ದರು. ಚಂಪೆಯು ಪ್ರತಿದಿನವೂ ಅವನಿಗಾಗಿ ಕಾದಿರುವಳು. ಅವನು ಬಂದೊಡನೆಯೆ ಅವಳನ್ನು ಆದರಿಸಿ ಜಯಂತಿಯನ್ನು ಎತ್ತಿಕೊಂಡು ಮುದ್ದಾಡುವನು. ಹಿಂದೆ ತನ್ನನ್ನೂ ಹೀಗೆಯೇ ಆದರಿಸಿ ತನ್ನ ಮಗುವಾದ ಸರಸೆಯನ್ನು ಮುದ್ದಾಡುತ್ತಿದ್ದನು. ಶಾಲಿನಿಗೆ ಇವೆಲ್ಲವೂ ಒಂದೊಂದಾಗಿ ಜ್ಞಾಪಕ ಬರತೊಡಗಿತು. ಇದರಿಂದ ಬಹಳ ದೇಹಶಕ್ತಿಯು ಕುಗ್ಗಿತು. ಪ್ರತಿರಾತ್ರಿಯೂ ಜ್ವರ, ಒಣಕೆಮ್ಮು ಮುಂತಾದ ಕ್ಷಯರೋಗದ ಲಕ್ಷಣಗಳು ಕಂಡುಬಂದುವು. ಇನ್ನು ಹೆಚ್ಚು ಸಹಿಸಲಾರದೆ ಹೋದಳು. ಆ ಮನೆಯನ್ನು ಬಿಟ್ಟು ಬೇರೆ ಎಲ್ಲಿಯಾದರೂ ಹೊರಟುಹೋಗುವುದೇ ಉತ್ತಮವಾದುದೆಂದು ದೃಢಮಾಡಿಕೊಂಡು ಆಗಲೇ ಆ ವಿಷಯವಾಗಿ ಉಪೇಂದ್ರನೊಡನೆ ಮಾತನಾಡಲು ಹೊರಟಳು. ಅವನೊಬ್ಬನೇ ತನ್ನ ಕೋಣೆಯಲ್ಲಿ ಕುಳಿತಿದ್ದನು. ಶಾಲಿನಿಯು ಬಂದುದನ್ನು ನೋಡಿ ಒಳಗೆ ಬರುವಂತೆ ಹೇಳಿದನು.

ಶಾಲಿನಿ: ತಮಗೆ ಸಮಯವಿದ್ದರೆ ಒಂದು ವಿಷಯವಾಗಿ ಮಾತನಾಡಬೇಕೆಂದು ಬಂದೆ.

ಉ: ಬೇಕಾದಷ್ಟು ಸಮಯವಿದೆ ಶಾಲಿನಿ, ಕುಳಿತುಕೊ, ಆನಂತರ ಮಾತನಾಡಬಹುದು. ಶಾಲಿನಿಯು ಕುಳಿತುಕೊಂಡಳು.

ಉ:ವಿಷಯವೇನು?

ಶಾ: ಈಗ್ಗೆ ಕೆಲವು ದಿವಸಗಳಿಂದ ನನ್ನ ಶಕ್ತಿಯು ಕುಂದುತ್ತಿರುವುದು. ಅಲ್ಲದೆ ನಾನಿಲ್ಲಿಗೆ ಬಂದ ಕೆಲಸವು ಮುಗಿದಂತಾಯಿತು. ಆದುದರಿಂದ ತಾವು ದಯವಿಟ್ಟು ಅಪ್ಪಣೆಯನ್ನಿತ್ತರೆ ಇಂದೇ ಹೊರಡಬೇಕೆಂದಿರುವೆನು.

ಉ:ಶಾಲಿನಿ, ನಿನ್ನ ಋಣವನ್ನು, ನಾನೆಂದಿಗೂ ತೀರಿಸಲಾರೆ. ನಿನಗೆ ಕೆಲಸವಿಲ್ಲದಿದ್ದರೂ ಚಿಂತೆಯಿಲ್ಲ. ನೀನು ಹೋಗಲಾಗದು.

ಶಾ: ಪ್ರಭು!ನಿಮ್ಮ ಉಪಕಾರಕ್ಕೆ ನಾನು ಅತ್ಯಂತ ಕೃತಜ್ಞಳಾಗಿದ್ದೇನೆ. ಅಂತೂ ನಾನಿಲ್ಲಿಂದ ಹೊರಡಬೇಕಾದುದು ಅವಶ್ಯಕವಾಗಿದೆ.

ಉ: ಶಾಲಿನಿ! ಹಾಗಾದರೆ ನಾನಡ್ಡಿ ಮಾಡುವುದಿಲ್ಲ. ಆದರೆ ನೀನೀಗ ಪ್ರಯಾಣ ಮಾಡುವ ಸ್ಥಿತಿಯಲ್ಲಿಲ್ಲ. ವೈದ್ಯರನ್ನು ಕರೆಯಿಸುವೆನು. ಅವನಿಂದ ಔಷಧವನ್ನು ತೆಗೆದುಕೊಂಡು ಗುಣಹೊಂದಿದ ಬಳಿಕ ಎಲ್ಲಿ ಬೇಕಾದರೂ ಹೋಗಬಹುದು.

ಶಾ:ನನಗೆ ಸ್ವಲ್ಪ ಅಶಕ್ತಿಯೇ ವಿನಾ ಇನ್ನೇನೂ ಇಲ್ಲ. ಕಾರ್ಯವಿರುವುದರಿಂದ ಇಂದೇ ಹೊರಡಬೇಕಾಗಿದೆ.

ಉಪೇಂದ್ರನು ಗತ್ಯಂತರವಿಲ್ಲದೆ ಮನನೊಂದು ಅಪ್ಪಣೆಯನ್ನಿತ್ತನು. ಶಾಲಿನಿಯು ಅಂದೇ ರಾತ್ರಿ ಹೊರಟು ಪಾರ್ವತೀಪುರವನ್ನು ಸೇರಿದಳು. ಕೆಲವು ದಿನಗಳಲ್ಲಿಯೇ ಹಣವೆಲ್ಲವೂ ವೆಚ್ಚವಾಗಿ ಹೋಯಿತು. ಕೆಡೆಗೆ ಭಿಕ್ಷೆ ಬೇಡಿಕೊಂಡು ಬೀದಿ ಬೀದಿಯಲ್ಲಿ ಅಲಿಯುವ ಸ್ಥಿತಿ ಬಂದಿತು. ಕಡೆಗೆ ಯಾರೋ, ಕಲ್ಯಾಣಪುರದಲ್ಲಿ ಸ್ತ್ರೀಯರಿಗಾಗಿ ಒಂದು ಅನಾಥಾಲಯವಿರುವುದೆಂದೂ ಅಲ್ಲಿ ಪುಣ್ಯವತಿಯಾದ ಶಾಂತಿಯೆಂಬೊಬ್ಬಳು ಅಧಿಕಾರಿಯಾಗಿರುವುದರಿಂದ ಎಲ್ಲರೂ ಅದನ್ನು “ಶಾಂತಿನಿಕೇತನ”ವೆಂದು ಕರಿಯುವರೆಂದೂ, ಅಲ್ಲಿಗೆ ಹೋದರೆ ಆಕೆಯು ಸುಖವಾಗಿ ನೋಡಿಕೊಳ್ಳುವಳೆಂದೂ ಹೇಳಿದರು. ಶಾಂತಿಯ ಹೆಸರನ್ನು ಕೇಳಿದೊಡನೆಯೇ ಒಮ್ಮೆ ಶಾಲಿನಿಯು ರೋಮಾಂಚಿತಳಾದಳು. ಕಷ್ಟಕಾಲವಾದುದರಿಂದ ಲಜ್ಜೆಯನ್ನು ತೊರೆದು ಅಂದೇ ಅತಿಕಷ್ಟದಿಂದ ಕಲ್ಯಾಣಪುರವನ್ನು ಸೇರಿ ಶಾಂತಿನಿಕೇತನವನ್ನುಹುಡುಕಿಕೊಂಡು ಹೊರಟಳು.

ಹದಿನಾಲ್ಕನೆಯ ಪರಿಚ್ಛೇದ

ಮಧ್ಯಾನ್ನ ಸುಮಾರು ಹನ್ನೆರಡು ಘಂಟೆಯ ಸಮಯ, ಜನ ಸಂಚಾರವಿರಲಿಲ್ಲ. ಕಲ್ಯಾಪುರದಲ್ಲಿ ರಾಜಬೀದಿಯಲ್ಲಿ ಒಂದು ಮರದಡಿಯಲ್ಲಿ ಒಬ್ಬ ಬಡಭಿಕ್ಷುಕುನು ನರಳುತ್ತಾ ಬಿದ್ದಿದ್ದನು. ಶ್ವಾಸವೆಳೆಯುತ್ತಿದ್ದಿತು. ನೀರಿಲ್ಲದೆ ಬಾಯಿ ಒಣಗಿ ಕೈಕಾಲುಗಳನ್ನು ಮುದುಡುತ್ತಿದ್ದನು. ಶಾಂತಿನಿಕೇತನವನ್ನು ಹುಡುಕಿಕೊಂಡು ಹೋಗುತ್ತಿದ್ದ ಶಾಲಿನಿಯು ಇವನನ್ನು ನೋಡಿ ಮರುಕುಗೊಂಡಳು. ಸಮೀಪದಲ್ಲಿಯೇ ಇದ್ದ ನಲ್ಲಿಯಿಂದ ನೀರನ್ನು ತಂದು ಸ್ವಲ್ಪ ಸ್ವಲ್ಪವಾಗಿ ಕುಡಿಸಿದಳು. ಭಿಕ್ಷುಕನು ಸ್ವಲ್ಪ ಚೇತರಿಸಿಕೊಂಡನು. ಶಾಲಿನಿಗೆ ಇವನನ್ನೆಲ್ಲಿಯೋ ನೋಡಿದ್ದಂತೆ ಬೋಧೆಯಾಯಿತು. ಆದರೆ ಇಂತಹವನೇ ಎಂದು ತಿಳಿಯಲಿಲ್ಲ. ಭಿಕ್ಷುಕನು ಶಾಲಿನಿಯನ್ನೇ ನೋಡುತ್ತಿದ್ದು ಕಡೆಗೆ ದೀನಸ್ವರದಲ್ಲಿ “ಶೈವಲೆ” ಎಂದು ಕರೆದನು. ಶೈವಲೆಯು ಒಂದೇ ಸಮನೆ ನೋಡಿ ಸ್ವಲ್ಪ ಹಿಂದಕ್ಕೆ ಸರಿದಳು. ಮುಖವು ಕೆಂಪೇರಿ ಮೈಯ್ಯೆಲ್ಲಾ ಬೆವರತೊಡಗಿತು. ಗೋಪಾಲ! ಎಂದಳು.

ಗೋ: ಹೌದು ಶೈವಲೆ, ನಿನಗೆನ್ನ ಗುರ್ತು ಸಿಗಲಿಲ್ಲವೇ?

ಶೈ: ನೀಚ! ನಿನ್ನ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವಾಯಿತು.

ಗೋ: ಉಭಯತಃ! ಶೈವಲೆ! ಇಬ್ಬರೂ ಪಾಪಿಷ್ಟರೂ ಇಬ್ಬರೂ ಭಿಕ್ಷುಕರು!ಆಹ! ಎಂತಹ ಸೊಗಸು!

ಶೈ: ಪಾಪಿ! ನಿನಗಿನ್ನೂ ಪಶ್ಚಾತ್ತಾಪವಾಗುವುದಿಲ್ಲವೆ? ನನ್ನನ್ನೂ ಬೀದಿಗೆಳೆದು, ನೀನೂ ಹಾಳಾದೆ. ಭಿಕ್ಷೆ ಬೇಡುವ ಸ್ಥಿತಿಗೆ ಬಂದೆ. ಈಗಲೂ, ಸಾಯುತ್ತಿರುವ ಸಮಯದಲ್ಲಿಯೂ ದೇವರಲ್ಲಿ ಕ್ಷಮೆಯಲ್ಲಿ ಬೇಡುವುದಿಲ್ಲವೆ?

ಗೋ: (ಕಠೋರವಾಗಿ ನಕ್ಕು)ದೇವರಿರುವನೆಂಬ ನಂಬುಗೆಯೇ ನನಗಿಲ್ಲ. ಹಿಂದೆಂದೂ ನಾನವನನ್ನು ಸ್ಮರಿಸಿಲ್ಲ. ಈಗಲೂ ಸ್ಮರಿಸುವಂತಿಲ್ಲ! ಅಯ್ಯೋ!

ಶ್ವಾಸವೆಳೆವುದು ಹೆಚ್ಚಾಯಿತು. ಸ್ವಲ್ಪ ಹೊತ್ತಿನಲ್ಲಿಯೇ ಆ ಪಾಪಮಯವಾದ ಜೀವವು ಕೊನೆಗಂಡಿತು. ಶೈವಲೆಯು ಮನಸ್ಸಿನಲ್ಲಿಯೇ “ಪರಮಾತ್ಮ ! ನನ್ನ ಶತ್ರುವಿನ ಜೀವವನ್ನಂತೂ ನನ್ನ ಕಣ್ಣೆದುರಿಗೇ ಈ ಸ್ಥಿತಿಯಲ್ಲಿ ಕೊನೆಗಾಣಿಸಿದಿ. ಇನ್ನು ನನಗಾಗಿ ಎಂತಹ ಮರಣವನ್ನಿಟ್ಟಿರುವೆ!” ಎಂದಂದುಕೊಂಡು ನಡುಗಿದಳು. ಒಂದು ಸಾರಿ ತನ್ನ ಪಾಡಿಗೆ ತಾನು ಹೋಗಬೇಕೆಂದು ಯೋಚಿಸಿದಳು; ಕಡೆಗೆ ಯಾರಾದರೂ ಬರುವವರೆಗೆ ಶವವನ್ನು ಬಿಟ್ಟುಹೋಗುವುದು ಸರಿಯಲ್ಲವೆಂದು ಅಲ್ಲಿಯೇ ನಿಂತಳು.

ದೈವಸಂಘಟನೆಯು ವಿಚಿತ್ರವಾದುದು. ಏನೋ ಕಾರ್ಯ ನಿಮಿತ್ತವಾಗಿ ಹೋಗಿದ್ದ ಶಾಂತಿಯು ಅದೇ ಮಾರ್ಗವಾಗಿಯೇ ಬಂದಳು. ಒಂದು ಶವವೂ, ಅದರ ಬಳಿಯಲ್ಲಿಯೇ ಒಬ್ಬ ಸ್ತ್ರೀಯೂ ಇರುವುದನ್ನು ನೋಡಿ, ನಿಂತು ಏನೆಂದು ವಿಚಾರಿಸಿದಳು.

ಶಾಲಿನಿಯು, ಅದು ಯಾರೋ ತನಗೆ ತಿಳಿಯದೆಂದೂ ಸಾಯುವ ಸಮಯದಲ್ಲಿ ತಾನು ಬಂದಳೆಂದೂ ಹೇಳಿದಳು. ಶಾಂತಿಯು ಅವಳ ವಿಚಾರವಾಗಿ ಕೇಳಿದುದಕ್ಕೆ ತಾನು ಒಬ್ಬ ಅನಾಥಳೆಂದೂ, ಶಾಂತಿನಿಕೇತನವನ್ನು ಹುಡುಕಿಕೊಂಡು ಬಂದಳೆಂದೂ ತಿಳಿಸಿದಳು. ಶಾಂತಿಯು ತನ್ನ ಸೇವಕರ ಮೂಲಕ ಶವ ಸಂಸ್ಕಾರಕ್ಕೆ ತನ್ನ ಏರ್ಪಾಡು ಮಾಡಿ ಶಾಲಿನಿಯನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋದಳು.

ಶಾಲಿನಿಗೆ ನಿಕೇತನದಲ್ಲಿ ಯಾವ ವಿಧವಾದ ಕಷ್ಟವಿಲ್ಲದಿದ್ದರೂ ರೋಗವು ಪ್ರಬಲಿಸಿ ಹಾಸಿಗೆಯನ್ನು ಹಿಡಿದಳು. ವೈದ್ಯರ ಓಡಾಟವು ಹೆಚ್ಚಾಯಿತು. ಶಾಂತಿಯು ಸ್ವಲ್ಪವೂ ಬೇಸರವಿಲ್ಲದೆ ಉಪಚರಿಸುತ್ತಿದ್ದಳು. ಆದರೆ ಮನೋರೋಗವಿದ್ದಲ್ಲಿ ಔಷಧವೂ, ಉಪಚಾರವೂ ಉಪಯೋಗಕ್ಕೆ ಬರುವುದಿಲ್ಲ. ಪ್ರತಿಯಾಗಿ ಇನ್ನೂ ಬೇಸರವನ್ನು ಹೆಚ್ಚಿಸುವುದು. ಇಂದು ಶಾಲಿನಿಗೆ ಜ್ವರವು ಹೆಚ್ಚಾಗಿತ್ತು. ಶಾಂತಿಯು ಕಾತರಳಾಗ ವೈದ್ಯನನ್ನೇ ಇದಿರು ನೋಡುತ್ತಿದ್ದಳು. ವೈದ್ಯನು ಬಂದು ಶೈವಲೆಯು ನಾಡಿಹಿಡಿದು ಪರೀಕ್ಷಿಸಿ, ಹೊರಗೆ ಬಂದು ಶಾಂತಿಯನ್ನು ಕುರಿತು, “ತಾಯಿ, ಇನ್ನು ಔಷಧಿಯಿಂದ ಪ್ರಯೋಜನವಿಲ್ಲ. ಒಂದು ದಿನ ಬದುಕಿದರೆ ಹೆಚ್ಚಾಯಿತು. ಆದರೆ ಉಸಿರಿರುವವರೆಗೂ ಬದುಕಿಸುವ ಪ್ರಯತ್ನಪಡುವುದು ನಮ್ಮ ಕರ್ತವ್ಯ. ಔಷಧಿಯನ್ನು ಕಳಿಸುವೆನು” ಎಂದು ಹೇಳಿ ಹೊರಟುಹೋದನು.

ಶಾಂತಿಯು ಹತಾಶಳಾಗಿ ಶಾಲಿನಿಯ ಬಳಿಗೆ ಹೋದಳು. ಶಾಲಿನಿಯು “ತಾಯಿ, ನಿನ್ನೊಡನೆ ಏಕಾಂತವಾಗಿ ಕೆಲವು ವಿಷಯವನ್ನು ಹೇಳಬೇಕೆಂದಿದ್ದೇನೆ” ಎಂದಳು. ಅನಂತರ ಕಣ್ಣೀರು ಸುರಿಸುತ್ತಾ ತನ್ನ ಚರಿತ್ರೆಯನ್ನೆಲ್ಲಾ ಹೇಳಿದಳು. ಅನಂತರ ಶಾಂತಿಯನ್ನು ಕ್ಷಮೆ ಬೇಡಿದಳು. ಅವಳು ಸರಳವಾದ ಪ್ರೇಮದಿಂದ ಸಮಾಧಾನಪಡಿಸಿ, ಶೈವಲೆ! ಕ್ಷಮಿಸುವುದಕ್ಕೆ ನಾನು ಅರ್ಹಳಲ್ಲ. ನಮ್ಮೆಲ್ಲರಿಗೂ ಒಡೆಯನಾದ ಆ ಜಗದೀಶ್ವರನನ್ನು ಕ್ಷಮೆಬೇಡು, ಈಗಲಾದರೂ ನನ್ನ ವಿಷಯದಲ್ಲಿ ನಿನಗೆ ಅನುಮಾನವಿಲ್ಲವೆಂದು ಕೇಳಿ ಸುಖಿಯಾದೆನು. ಇನ್ನು ನಿನ್ನ ಕಾಲವು ಸಮೀಪಿಸುತ್ತಿರುವದೆಂಬ ವಿಷಯವನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. ನಿನಗೇನಾದರೂ ಅಪೇಕ್ಷೆಯಿದ್ದರೆ ತಿಳಿಸು. ನನ್ನ ಕೈಲಾದಮಟ್ಟಿಗೆ ಪೂರ್ತಿಗೊಳಿಸುವೆನು.

ಶೈ: ನನಗಿನ್ನಾದ ಆಪೇಕ್ಷೆಯೂ ಇಲ್ಲ. ನನ್ನ ಸ್ವಾಮಿಯನ್ನೊಂದು ಬಾರಿ ಕರೆಯಿಸು. ಶಾಂತಿಯು ಕೂಡ್ಲೆ ಉಪೇಂದ್ರನಿಗೊಂದು ಪತ್ರವನ್ನು ಈ ರೀತಿ ಬರೆದಳು.

ಶ್ರೀ ಶಾಂತಿ ನಿಕೇತನ
ಪ್ರೀತಿಯ ಭ್ರಾತೃ,

ನಿಮ್ಮ ಮನೆಯಲ್ಲಿದ್ದ ‘ಶಾಲಿನಿ’ಯೆಂಬ ದಾಸಿಯು ಇಲ್ಲಿಗೆ ಕೆಲವು ದಿನಗಳ ಹಿಂದೆ ಬಂದಳು. ಆಗಲೇ ಜ್ವರವು ಬರುತ್ತಿದ್ದಿತು. ಈಗ ಜ್ವರವು ಹೆಚ್ಚಾಗಿ ಅಂತ್ಯಕಾಲವು ಸಮೀಪಸುತ್ತಿರುವುದು. ನಿಮ್ಮನ್ನು ಆಪೇಕ್ಷಿಸುತ್ತಾಳೆ. ದಯೆವಿಟ್ಟು ತತ್‌ಕ್ಷಣವೇ ಹೊರಟುಬರುವುದು.

ಇತಿ,
ನಿಮ್ಮ ಚಿರಹಿತೈಷಿಣಿಯಾದ ಹೋದರಿ
ಶಾಂತಿ

ಮರುದಿನವೇ ಉಪೇಂದ್ರನು ಹೊರಟು ಬಂದು ಶಾಲಿನಿಯನ್ನು ನೋಡಲು ಹೋದನು. ಶಾಲಿನಿಯು ನಿಶ್ಯಬ್ಧವಾಗಿ ಮಲಗಿದ್ದಳು. ಅವನು ಮಂಚದ ಸಮೀಪಕ್ಕೆ ಹೋಗಿ ‘ಶಾಲಿನಿ’ ಎಂದು ಮೃದುವಾಗಿ ಕರೆದನು. ತಿರುಗಿ ನೋಡದಳು. ಈಗ ಮುಖಾವರಣವಿರಲಿಲ್ಲ. ಉಪೇಂದ್ರನು ಸ್ವಲ್ಪ ಚಕಿತನಾಗಿ ‘ಶೈವಲೆ!’ ಎಂದನು.

ಶೈ : ಸ್ವಾಮಿ!

ಉಪೇಂದ್ರನು ಹೃದಯವು ನಡುಗಿತು. ಇಬ್ಬರು ಪತ್ನಿಯರು. ಈ ವಿಷಯವು ಅವನ ನಿರ್ದೋಷವಾದ ಮನಸ್ಸನ್ನು ಮೊದಲು ಚುಚ್ಚಿತು.

ಉ: ಶೈವಲೆ, ನೀನಲ್ಲಿಗೆ ಹೇಗೆ ಬಂದೆ?

ಶೈ: ನನ್ನ ಮಗುವು ಸಾಯುವಂತಿರುವುದೆಂದು ಕೇಳಿ ಮನಸ್ಸು ಹೇಗೆ ಬಿಗಿ ಹಿಡಿಯಲಿ? ಉಪೇಂದ್ರನ ಮನಸ್ಸು ಕರಗಿತು. ಅವಳ ಕೈಗಳನ್ನು ಹಿಡಿದುಕೊಂಡನು. ಆದರೆ ಕೂಡ್ಲೆ ಹಿಂದಕ್ಕೆ ಸರಿದನು. ಅದೇಕೆ? ಚಂಪೆಯ ನೆನಪಾಯ್ತೆ? ಇದ್ದರೂ ಇರಬಹುದು. ಅವನು ಕಠೋರಸ್ವರದಲ್ಲಿ “ನೀನು ಮಾಡಿದುದು ತಪ್ಪು” ಎಂದನು.

ಶೈ: ಪ್ರಭು! ಮನ್ನಿಸು, ಹೊಟ್ಟೆಯುರಿಯನ್ನು ಸಹಿಸಲಾರದೆ ಹೋದೆನು. ಹಿಂದೆ ನಡೆದುದೆಲ್ಲಾ ಸ್ವಪ್ನವಾಯ್ತು. ನಾನು ಮೊದಲಿನ ಅದೇ ಸರಳಹೃದಯದ ಶೈವಲೆಯಾಗಿದ್ದರೆ ನೀನದನ್ನು ಅಪೇಕ್ಷಿಸುವುದಿಲ್ಲವೆ?

ಉ: ನಿನಗಾಗಿ ಅಪೇಕ್ಷಿಸುವೆನು.

ಶೈ: ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಈ ಪಾಪಮಯವಾದ ಜೀವನವು ಕೊನೆಗಾಣುವುದು! ನನ್ನ ತಪ್ಪಿಗಾಗಿ ಬಹಳ ಅನುಭವಿಸಿದೆನು. ಈಗಲಾದರೂ ಒಂದು ಹಿತಕರವಾದ ಮಾತನ್ನಾಡುವುದಿಲ್ಲವೆ? ಮನೆಯನ್ನು ಬಿಟ್ಟ ಮರುಕ್ಷಣವೇ ನನ್ನ ಹೃದಯವು ಒಡೆದುಹೋಯ್ತು!

ಉ: (ಬೆವರುತ್ತಿದ್ದ ಅವಳ ಹಣೆಯನ್ನು ಒರಸುತ್ತಾ ಇನ್ನೊಂದು ಕೈಯಲ್ಲಿ ಅವಳ ಕೈಯ್ಯನ್ನು ಹಿಡಿದುಕೊಂಡು)ಶೈವಲೆ! ಅದರೊಡನೆ ನನ್ನ ಹೃದಯವನ್ನು ಭೇದಿಸಿದೆ! ದೇವತಾಸಮಾನಳಾದ ಶಾಂತಿಯ ವಿಷಯದಲ್ಲಿಯೂ ಅನುಮಾನ ಪಟ್ಟಿ ಈಗ ಕಷ್ಟಕಾಲದಲ್ಲಿ ನಿನ್ನನ್ನಾರು ಸಲಹಿದರು?

ಶೈ: ಪ್ರಭು!ಅದನ್ನೆಲ್ಲಾ ನೆನಪಿಗೆ ತರದಿರು. ನೀನು ಸದ್ಗುಣಿ, ಉದಾರಿ ನನ್ನನ್ನು ಕ್ಷಮಿಸಲಾರೆಯಾ?

ಶೈವಲೆಯ ಶ್ವಾಸವು ಎಳೆಯುತ್ತಿದ್ದಿತು. ಮಾತೇ ಕೇಳಿಸದಂತಾಯ್ತು. ಉಪೇಂದ್ರನು ಬಳಿಯಲ್ಲಿಯೇ ಕುಳಿತಿದ್ದನು. ಎಷ್ಟಾದರೂ ಒಂದು ಕಾಲದಲ್ಲಿ ತನ್ನ ಪವಿತ್ರವಾದ ಪ್ರೇಮಕ್ಕೆ ಪಾತ್ರಳಾಗಿದ್ದ ಧರ್ಮಪತ್ನಿಯಲ್ಲವೇ?

ಉ: ಶೈವಲೆ! ನಿನ್ನನ್ನು ಪೂರ್ಣವಾಗಿಯೂ ಕ್ಷಮಿಸಿರುವೆನು. ಈಗ ನಾನು ನಿನ್ನನ್ನು ಕ್ಷಮಿಸುತ್ತಿರುವಂತೆ ನಾನು ಸಾಯುವ ಕಾಲದಲ್ಲಿ ಪರಮಾತ್ಮನು ನನ್ನನ್ನು ಕ್ಷಮಿಸಲಿ!

ಶೈ: ಇನ್ನು ನನ್ನ ಕಾಲವು ಆಯ್ತು. ಆ ಅನಂತಧಾಮದಲ್ಲಿ ನಾವೆಲ್ಲರೂ ಸೇರುವೆವು!

ಉ: ಅಹುದು ಶೈವಲೆ! ಸೇರುವೆವು.

ಶೈವಲೆಯ ಕಣ್ಣುಗಳಲ್ಲಿ ನೀರು ತುಂಬಿತು. ಉಪೇಂದ್ರನು ಕಣ್ಣಿನಿಂದಲೂ ನೀರು ತೊಟ್ಟಿತು. ಅವನು “ಶೈವಲೆ!” ಎಂದು ಕರೆದನು. ಅವಳು ಮೆಲ್ಲನೆ “ಕ್ಷಮಿಸು” ಎಂದು ಹೇಳುತ್ತಾ ಕಣ್ಣು ಮುಚ್ಚಿದಳು. ಇಹಪ್ರಪಂಚದಲ್ಲಿ ಅವಳ ಲೀಲೆಯು ಕೊನೆಗೊಂಡಿತು!

ಬಹಳ ಹೊತ್ತಿನವರೆಗೂ ಉಪೇಂದ್ರನೂ ಹಾಗೆಯೇ ಕುಳಿತಿದ್ದನು. ಅನಂತರ ಎದ್ದು ಮಂಜುಗಡ್ಡೆಯಂತೆ ಕೊರೆಯುತ್ತಿದ್ದ ಅವಳ ಹಣೆಯ ಮೇಲೆ ಕೈಯನ್ನಿಟ್ಟುಕೊಂಡು ಏನನ್ನೋ ಯೋಚಿಸುತ್ತಾ ಆಯ್ದು ನಿಮಿಷಗಳವರೆವಿಗೂ ನಿಂತಿದ್ದನು. ಕಡೆಗೆ ಒಂದೇ ಸಮನೆ ಅವಳ ಮುಖವನ್ನು ಸ್ವಲ್ಪ ಹೊತ್ತು ನೋಡಿ ನಿಟ್ಟುಸಿರುಬಿಟ್ಟು ನಿಶ್ಯಬ್ಧವಾಗಿ ಕೋಣೆಯಿಂದ ಹೊರೆಗೆ ಬಂದನು.

ಹದಿನೈದನೆಯ ಪರಿಚ್ಛೇದ

ಉಪೇಂದ್ರನು ಕಲ್ಯಾಣಪುರದಿಂದ ಹಿಂದಕ್ಕೆ ಬಂದನು. ಮುಖವು ಬಾಡಿ ಆಲಸ್ಯವಾಗಿದ್ದಂತೆ ತೋರಿತು. ಹಣೆಯ ಮೇಲೆ ಕೈಯಿಟ್ಟುಕೊಂಡು, ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತಿದ್ದನು. ಚಂಪೆಯು ಬಳಿಯಲ್ಲಿಯೇ ನಿಂತಿದ್ದಳು.

ಚಂಪೆ : ನಿಮಗಾಲಸ್ಯವಾಗಿದೆಯೇ?

ಉ: ಪ್ರಯಾಣದ ದೆಸೆಯಿಂದ ಸ್ವಲ್ಪ ಆಲಸ್ಯವಾಗಿದೆ. ಚಂಪಾ! ನಾನು ಕಲ್ಯಾಣಪುರಕ್ಕೆ ಹೋಗಿದ್ದ ನಿಮಿತ್ತವೇನೆಂದು ನಿನಗೆ ಗೊತ್ತೆ?

ಚ: ಅಹುದು, ಶಾಲಿನಿಯನ್ನು ನೋಡುವುದಕ್ಕೆ.

ಉ: ಸರಿಯೇ, ಆದರೆ ಅವಳು ಶಾಲಿನಿಯಲ್ಲ. ನನ್ನ ಮೊದಲಿನ ಪತ್ನಿಯಾದ ಶೈವಲೆ! ಚಂಪೆಯ ಮುಖವು ಬಿಳ್ಪೇರಿತು. ಮುಖವನ್ನು ತಿರುಗಿಸಿ ಕೊಂಡಳು. ಉಪೇಂದ್ರನಿದಾವುದನ್ನೂ ನೋಡಲಿಲ್ಲ. ಮುಂದೆ ಹೇಳತೊಡಗಿದನು. ಮಕ್ಕಳನ್ನು ಬಿಟ್ಟಿರಲಾರದೆ ಇಲ್ಲಿಗೆ ದಾಸಿಯಾಗಿ ಬಂದಳಂತೆ! ದುಃಖದಿಂದ ಕೃಶವಾಗಿದ್ದುದರಿಂದಲೂ ಮುಖಾವರಣವನ್ನು ಹಾಕುತ್ತಿದ್ದುದರಿಂದಲೂ ಗುರ್ತು ಸಿಗದಂತೆ ಇದ್ದಳು. ಈಗ ನೆನೆಸಿಕೊಂಡರೆ ಆಶ್ಚರ್ಯವಾಗುವುದಲ್ಲವೆ? ಆವ ಉತ್ತರವೂ ಬಾರದಿರುವುದನ್ನು ನೋಡಿ ಉಪೇಂದ್ರನು ತಲೆಯೆತ್ತಿ ನೋಡಿದನು. ಚಂಪೆಯು ಮುಖವನ್ನು ತಿರುಗಿಸಿಕೊಂಡಿದ್ದಳು. ಏನೋ ದಾರುಣವಾದ ಯಾತನೆಯನ್ನುನುಭವಿಸುತ್ತಿದ್ದಂತೆ ತೋರಿತು.

ಉ :  ಇದೇನು ಚಂಪಾ?

: ಇದರಿಂದ ನನ್ನ ಮೇಲೆ ನಿಮ್ಮ ಪ್ರೇಮವು ಕಡಿಮೆಯಾಯ್ತೆ?

ಉ : ಕೇಳು, ನಮ್ಮಿಬ್ಬರಲ್ಲಿ ಯಾವ ವಿಧವಾದ ತಲೆಯೂ ಅಡ್ಡವಿರಬಾರದೆಂದು ಇದನ್ನೆಲ್ಲಾ ಹೇಳಿದೆನು. ಅಲ್ಲದಿದ್ದರೆ ನಿನ್ನೊಡನೆ ಅವಳ ವಿಚಾರವಾಗಿ ಯಾವಾಗಲೂ ಮಾತನಾಡುತ್ತಿರಲಿಲ್ಲ. ಹೀಗಿರುವಲ್ಲಿ ನೀನು ಅನುಮಾನಪಡುವುದು ನ್ಯಾಯವೆ? ಚಂಪೆ! ನನ್ನ ವಿಷಯದಲ್ಲಿ ನಿನಗಿನ್ನು ಉತ್ತಮ ಅಭಿಪ್ರಾಯವಿದೆಯೆಂದು ತಿಳಿದಿದ್ದೆನು.

ಚ: ಕ್ಷಮಿಸಿ, ಅವಳು ಬಂದ ದಿನ ನೀವು “ಅದೇ ಸ್ವರ ಅದೇ ರೂಪ” ಎಂದು ಅನುಮಾನ ಮಾಡಿದಿರಿ. ಈಗ ಅರ್ಥವಾಯ್ತು!

ಉ : ಈ ಪ್ರಪಂಚವು ಅತ್ಯಂತ ಹೇಯವಾದುದು. ನ್ಯಾಯವಾಗಿ ನಡಿಯುವವರಿಗೆ ಇದು ಸ್ಥಳವಲ್ಲ. ನನ್ನ ಕಷ್ಟಗಳನ್ನೆಲ್ಲಾ ಸಹಿಸಿಕೊಂಡು ಹಗಲೂ ರಾತ್ರಿ ದುಡಿಯುತ್ತಿರುವುದಕ್ಕೆ ಇದು ಪ್ರತಿಫಲ!

ಚಂಪೆಯು ತನ್ನ ತಪ್ಪಿಗಾಗಿ ವ್ಯಥೆಗೊಂಡಳು. ಅಂದಿನಿಂದ ಶೈವಲೆಯ ಮಾತನ್ನು ಇಬ್ಬರೂ ಎಂದು ಎತ್ತಲಿಲ್ಲ. ಕೆಲವು ದಿವಸಗಳಲ್ಲಿಯೇ ಎಂದಿನಂತೆ ಸಂಸಾರವು ನಡಿಯಲಾರಂಭವಾಯ್ತು.

* * *

ಇತ್ತ ಶಾಂತಿಯು ಅನಾಥಾಲಯವನ್ನು ಎಂದಿನಂತೆ ನಡಿಸುತ್ತಿದ್ದಳು. ಆದರೆ ಇಂತಹ ಪುಣ್ಯವತಿಯನ್ನು ಬಹಳಕಾಲ ಈ ಪಾಪಮಯವಾದ ಪ್ರಪಂಚದಲ್ಲಿ ಬಿಡಲು ಪರಮಾತ್ಮನು ಒಪ್ಪಲಿಲ್ಲ. ಸಂಧ್ಯಾಕಾಲ, ಶಾಂತಿನಿಕೇತನದಲ್ಲಿ ತನ್ನಿಂದ ಪಾಲಿತರಾದ ಅನಾಥ ಬಾಲೆಯರಿಂದ ಶಾಂತಿಯು ಸುತ್ತುವರಿಯಲ್ಪಟ್ಟದ್ದಳು. ಎಲ್ಲರೂ ಅವಳಿಗೆ ಸದ್ಗತಿಯನ್ನೀಯುವಂತೆ ದೇವರನ್ನು ಪ್ರಾರ್ಥಿಸುತ್ತಿದ್ದರು. ಸೂರ್ಯನು ಅಸ್ತಂಗತನಾದನು. ಇತ್ತ ಶಾಂತಿನಿಕೇತನದ ದಿನಮಣಿಯಂತಿದ್ದ ಶಾಂತಿಯ ಜೀವವು ಶಾಂತವಾಗಿ ಅಸ್ತಂಗತವಾಯ್ತು!

ಓಂ ಶಾಂತಿಃ ಶಾಂತಿಃ ಶಾಂತಿಃ

 

– ಕುಮಾರಿ ರತ್ನಮ್ಮಾ ಬಿ. ಎ. ಕ್ಲಾಸ್,
ಜಯಕರ್ನಾಟಕ, ಸಂಪುಟ ೨, ಸಂಚಿಕೆ ೯, ಬೆಂಗಳೂರು, ೧೯೩೧