ಗೌರೀಪುರವು ಚಿಕ್ಕಹಳ್ಳಿ; ವಿಜಯನಗರದ ರಾಮ ರಾಜನಿಂದ ನಮ್ಮ ಮನೆತನಕ್ಕೆ ಜಹಾಗೀರಿಯಾಗಿ ಸಿಕ್ಕ ಊರು. ಚಿಕ್ಕ ಹಳ್ಳಿಯಾದರೂ ಜನವಸತಿ ಹೆಚ್ಚು. ಊರ ಮುಂದೆ ಒಂದು ಕೆರೆ. ಊರಲ್ಲಿ ಕರಣಿಕರ ಮನೆಯೊಂದು. ಕರಣಿಕರ ಮಗಳಾದ ನಿರ್ಭಾಗೈಯನ್ನು ಅರಿಯದವರೆ ಇಲ್ಲ. ಬಟಗಿರುವ ಮುಖ, ನಿಡಿದಾದ ಮೂಗು, ಅರಳಿದ ಕಮಲದಂತಹ ಕಣ್ಣು, ತಿಳಿಗಪ್ಪಿನ ಮೈಬಣ್ಣ, ಕಪ್ಪಿದ್ದರೂ ಮುಖಕ್ಕೆ ಕಳೆ ಬಹಳ, ಯಾರಾದರೂ ನೋಡಿದವರು ಸೌಂದರ್ಯಶಾಲಿನಿ ಎಂದೇ ಹೇಳಬಹುದು. ಏನೀದ್ದರೇನು! ಎಲ್ಲವೂ ಕಾಡಿನ ಬೆಳದಿಂಗಳು. ಬಾಲ್ಯದಲ್ಲಿಯೇ ವಿತಂತು! ಸಾಲದುದಕ್ಕೆ ಮಲತಾಯಿಯ ಮಮತೆ; ಯಾವಾಗಲೂ ಗಂಭೀರತೆಯಿಂದಲೆ ಇರುವಳು. ಎಲ್ಲರ ಜೊತೆಗೂ ಸೌಜನ್ಯದಿಂದಲೆ ಮಾತನಾಡುವಳು, ತನಗೆ ಕೇಡನ್ನೆಣಸಿದವರಿಗೂ ಕೇಡು ಬಯಸಳು. ತಕ್ಕಮಟ್ಟಿಗೆ ಓದುಬರೆಹ ಬಲ್ಲವಳು; ಹೃದಯವು ಹಸನಾದದ್ದು, ನಡತೆ ನಿರ್ಮಲ. ತಾನಾಯಿತು, ತನ್ನ ಮನೆಗೆ ಲಸವಾಯಿತು. ಹೋದರೆ ನೆರೆಮನೆಯ ಮಾಧವನ ಮನೆಗೆ. ಇಲ್ಲವೆ ಕೆರೆಯ ಕಟ್ಟೆಯ ಮೇಲಿದ್ದ ಬಕುಲದ ಗಿಡಕ್ಕೆ. ಹೇಗಿದ್ದರೇನು! ಮನೆಯಲ್ಲಿ ತಾಯಿಯ ಪ್ರೇಮಾದರದ ನುಡಿಗಳು ಯಾವಾಗಲೂ ನಡೆದೆ ಇರುವವು. ಒಂದು ದಿನವಾದರೂ ತಪ್ಪುತ್ತಿರಲಿಲ್ಲ. ಕೆಲಸ ಬೊಗಸೆಗಳನ್ನು ಎಷ್ಟು ಮಾಡಿದ್ದರೂ ‘ನಮ್ಮವ್ವಾ ನಾನೇ ದುಡಿಯಬೇಕು, ಉಂಣುವವರಿಗೇನು ಬೇನೆ! ದುಡಿದು ದುಃಖಪಟ್ಟರೂ ಒಂದು ಕೆಲಸಕ್ಕಾದರೂ ನೆರವಿಗೆ ಬರುವುದಿಲ್ಲ. ಇವಳಿಗೇನು ಬೇನೆಯೇ? ಹದಿಮೂರು ವರ್ಷದ ಮಿಂಡೆ, ನನಗಂತೂ ಸಾಕು ಸಾಕಾಗಿ ಹೋಯಿತು. ಮಾಧವನ ಮನೆಗೆ ಹೋದಳೆಂದರೆ ಬರಲಿಕ್ಕೇ ಅರಿಯಳು. ಅದೇನು ಮಾತೋ! ಮಹಾರಾಯರೇ, ನಿವೇನೊ ನಿಮ್ಮ ಮಗಳೇನೋ’ ಎಂಬ ಅಕ್ಕಸದ ನುಡಿಗಳು ತಂದೆಯ ಮುಂದೆ ಯಾವಾಗಲೂ ನಡೆದೇ ಇರುವವು. ಮತ್ತೇನು ಸುದೈವದ ದಿನವಿದ್ದರೆ ಒಂದೆರಡು ಬೈಗಳು ಮಾತ್ರ, ದುರ್ದೈವದ ದಿನವಿದ್ದರೆ ನಾಲ್ಕಾರು ಏಟು. ಇದಾವುದಕ್ಕೂ ನಿರ್ಭಾಗೈ ಸೊಪ್ಪು ಹಾಕುತ್ತಿರಲಿಲ್ಲ. ಸಮದುಃಖ ಸುಖಂ ಧೀರಂ ಸೋಮೃತತ್ಪಾಯ ಕಲ್ಪತೆ’ ಎಂಬ ಗೀತೆಯ ಶ್ಲೋಕವನ್ನು ಗುಣಗುಣಿಸುತ್ತ ಸಮಾಧಾನದಿಂದಲೇ ಇರುವಳು.

ನಿರ್ಭಾಗ್ಯೆಯನ್ನು ಎಲ್ಲರೂ ‘ನಿರ್ಭಾಗ್ಯೆ’ ಎಂದೇ ಕರೆಯುವರು. ಆದರೆ ಅವಳ ನಿಜವಾದ ಹೆಸರು ಶಾಂತೆಯೆಂದು. ಮಾಧು ಸುಶೀಲೆ(ಮಾಧವನ ಹೆಂಡತಿ) ರಾಮು (ಮಾಧವನ ತಮ್ಮ) ಇವರನ್ನುಳಿದು ಮತ್ತಾರೂ ಶಾಂತೆಯನ್ನು ಕರೆಯುತ್ತಿರಲಿಲ್ಲ. ಮಾಧು ಸರಳ ಸ್ವಭಾವದವನು. ದೀನರನ್ನು ಕಂಡರೆ ಅದೆಷ್ಟೊ ಕಳವಳ ಪಡುವನು. ಸುಶೀಲೆಯಾದರೂ ಅವನಿಗೆ ತಕ್ಕ ಹೆಂಡತಿ. ಅವಳೂ ಸುಸ್ವಭಾವದವಳು. ನಿರ್ಭಾಗ್ಯೆಯನ್ನು ಕಂಡರೆ ಕನಿಕರ ಪಡುವಳು. ಮಾಧು ಶಾಂತೆಗೆ ಸಂಸ್ಕೃತವನ್ನು ಕಲಿಸುತ್ತಿದ್ದನು. ದೇಶದ ಬಗ್ಗೆ ಸಮಾಜದ ಬಗ್ಗೆ ಆಗಾಗ ಮಾತಾಡುತ್ತ ಕುಳಿತರೆ ಅವರಿಬ್ಬರು ಜಗತ್ತನ್ನೇ ಮರೆತು ಬಿಡುತ್ತಿದ್ದರು. ಇಷ್ಟಾದರೂ ಸುಶೀಲೆಯು ಒಂದು ದಿನವಾದರೂ ಸಿಟ್ಟು ಸಿಡುಕುಗಳನ್ನು ಮಾಡುತ್ತಿರಲಿಲ್ಲ. ಮಾಧವನಿಗಿಂತಲೂ ಹೆಚ್ಚಾಗಿ ತಾನೂ ಪ್ರೀತಿಸುತ್ತಿದ್ದಳು. ಮಾಧುವಿಗೆ ಜಗದ್ವಿಖ್ಯಾತ ರವೀಂದ್ರರ ಆಶ್ರಯ ಶಾಂತಿನಿಕೇತನಕ್ಕೆ ಹೀಗಬೇಕೆಂಬ ಹಂಬಲವು ದಿನ ದಿನಕ್ಕೆ ಹೆಚ್ಚಾಗಲುತೊಡಗಿತು. ಸುಶೀಲೆಗೂ ಚಿತ್ರ ಕಲೆಯ ಹುಚ್ಚು ಬಹಳ. ತಾನೂ ಬರುವೆನೆಂದು ಹಟ ಹಿಡಿದಳು. “ಅಕ್ಕಾ! ಅವನೊಬ್ಬನೆ ಹೋಗಲಿ ಬಿಡೆ, ನೀನಿಲ್ಲಿಯೇ ಇರು, ನೀವಿಬ್ಬರೂ ಹೋದರೆ ನನಗಾರು?” ಎಂದು ಶಾಂತೆ ಕಂಬನಿಗರೆಯುತ್ತ ನುಡಿದಳು. ಶಾಂತೆ ಕಣ್ಣೀರಿಡುವುದನ್ನು ನೋಡಿ ಸುಶೀಲೆಯ ಹೊಟ್ಟೆಯಲ್ಲಿ ಕಳವಳವುಂಟಾಯಿತು. ‘ಶಾಂತಾ! ಅಳಬೇಡ ನೋಡು ನನಗೆ ಚಿತ್ರಕಲೆಯ ಹುಚ್ಚು ಬಹಳ, ನನ್ನೊಬ್ಬಳನ್ನೆ ಕಳಿಸೆಂದರೆ ಕಳಿಸುವರೇ ಇವರು? ಹೇಗಾದರೂ ಇವರು ಜೊತೆಗಿರುವರು. ಒಂದೆರಡು ವರ್ಷಗಳಲ್ಲಿಯೇ ತಿರುಗಿ ಬರುವೆವು. ರಾಮು ಸೀತೆ ಇರುವರಲ್ಲ. ಮನೆಗೆ ಬರುತ್ತಾ ಇರು ನಿನಗೇನಾದರು ಬೇಕಾದರೆ ರಾಮೂಗೆ ಕೇಳು, ಅವನು ಕೊಡುತ್ತಾನೆ” ಎಂದು ಹೇಳಿ ಹೊರಡುವ ಸಿದ್ಧತೆಯಲ್ಲಿ ತೊಡಗಿದಳು. ಮಾಧುವು ಹೋಗುವ ಮುಂದೆ ನಿರ್ಭಾಗ್ಯೆಯನ್ನು ಕರೆದು ಹೇಳಿದ. ‘ಶಾಂತಾ! ಯಾವಾಗಲೂ ಅಳುತ್ತಾ ಕೂಡ್ರಬೇಡ, ತಿಳಿಯಿತೇನು? ಯಾರೂ ಏನೆಂದರೂ ಮನಸ್ಸಿಗೆ ಹಚ್ಚಿಕೊಳ್ಳಬೇಡ. ಈಕೆಯೂ ಬರುವೆನೆಂದು ಗಡ ಹಿಡಿದಿರುವಳು. ಕರೆದುಕೊಂಡು ಹೋಗುತ್ತೇನೆ. ಓಲೆಗೆ ಉತ್ತರವನ್ನು ಬರೆಯುತ್ತಿರು” ಎಂದು ನುಡಿದವನೇ ತಮ್ಮನ ಕಡೆಗೆ ಹೊರಳಿ ‘ರಾಮೂ ಶಾಂತೆಯನ್ನು ನಮ್ಮ ಮನೆಗೆ ಬಂದಾಗಲೆಲ್ಲ ಆದರಿಸುತ್ತಿರು, ಏನಾದರೂ ಬೇಡಿದರೆ ಕೊಡುತ್ತಿರು. ಜುಗುಪ್ಸೆ ತೋರಿಸಬೇಡ! ಪಾಪ! ಅನಾಥೆಯವಳು!! ಹೋಗಿ ಬರುತ್ತೇವೆ. ರಾಮೂ ಶಾಂತಾ ಜೋಕೆ’ ಎಂದು ಮತ್ತೊಮ್ಮೆ ಹೇಳಿದನು. ಮಾಧವ ಸುಶೀಲೆ ಶಾಂತಿನಿಕೇತನ ಹೊರಟುಹೋದರು.

ಆಯಿತು, ನಿರ್ಭಾಗ್ಯೆಯು ಇಂದಿಗೆ ನಿಜವಾಗಿಯೇ ನಿರ್ಭಾಗ್ಯೆಯು, ತಮ್ಮ ಜೀವಕ್ಕಿಂತಲೂ ಹೆಚ್ಚೆಂದು ತಿಳಿದು ಪ್ರೀತಿಸುತ್ತಿದ್ದ ಮಾಧವ ಸುಶೀಲೆಯರೇನೊ ಹೊರಟು ಹೋದರು. ರಾಮೂ ಕೆಲಸದವನು. ಒಂದು ದಿವಸ ಊರಲ್ಲಿ ಇದ್ದರೆ ನಾಲ್ಕು ದಿವಸ ಊರಲ್ಲಿರುತ್ತಿದ್ದಿಲ್ಲ. ಮನೆತನಕ ಹೋದರೆ ಮಾತನಾಡಿಸುವವರು ಯಾರು? ಸೀತೆ ಸಿಡುಕು ಸ್ವಭಾವದವಳು. ನಿರ್ಭಾಗೈಯನ್ನು ಕಂಡರಂತೂ ಅವಳು ಬೆಂಕಿಯನ್ನು ಕಂಡಂತೆ ಮಾಡುವಳು; ಆದೇಕೊ ಅವಳಿಗೆ ಈಕೆಯನ್ನು ಕಂಡರೆ ಹಿಡಿಸಲಾರದಷ್ಟು ಸಿಟ್ಟು. ಮಲತಾಯಿಗೂ ಸೀತೆಗೂ ತವರೂರಿನ ಸಂಬಂಧ. ಆಕೆಯೇನಾದರೂ ಇಲ್ಲದುದೊಂದು ಹೇಳುತ್ತಿರುವಳಾದೀತೇನು!” ಎಂಬ ಸಂಶಯವು! ‘ಯಾರೇನು ಹೇಳುವುದು, ನಾನೇ ದುರ್ದೈವಿ, ಯಾರಿಗಂದೇನು ಫಲ’ ಎಂಬ ಕಲ್ಪನೆಯು ಮತ್ತೊಮ್ಮೆ. ಮನದಳಲನ್ನು ತೋಡಿಕೊಳ್ಳುವುದಾರಮುಂದೆ? ಮನೆಯ ಸ್ಥಿತಿಯಂತೂ ಗೊತ್ತಿದೆ. ನೆರೆಹೊರೆಯವರ ಮುಂದೆ ಹೇಳಿದರೆ ಕೂಡಲೆ ಅವರ ಮನೆಗೆ ತಂತಿಯ ವರ್ತಮಾನ ಬಂದಂತೆ ಸುದ್ಧಿ ಬರುತ್ತಿದ್ದಿತು. ರಾಮೂನ ಮುಂದೆ ಹೇಳಬೇಕೆಂದರೆ ಊರಲ್ಲಿರುವುದಿಲ್ಲ. ಸೀತೆಯಂತೂ ಆಕೆಯ ಜೊತೆಗೆ ಮಾತನ್ನೇ ಆಡುತ್ತಿದ್ದಿಲ್ಲ. ಕೆರೆಯಕಟ್ಟೆ, ಬಕುಲದಗಿಡ, ಗಿಡದಲ್ಲಿದ್ದ ಕೋತಿ-ಕೋಡಿಗ ಮೃಗಪಕ್ಷಿಗಳೇ ಆಕೆಯ ಸರ್ವಬಂಧುಬಳಗವು. ಮಡುವಾಗಿ ನಿಂತುಕೊಂಡಿದ್ದ ತಿಳಿಗಂಗೆಯೆ ತಾಯಿ. ಮನೆಗೆಲಸ ಮುಗಿಯುತ್ತಲೆ ಕೆರೆಯ ಹಾದಿ. ತಾಯಿ ಕೆರೆಯ ಗಂಗಮ್ಮನ ಮುಂದಿಷ್ಟು ಮೂಕಮಾತಿನಿಂದ ಮನದಳುವನ್ನು ತೋಡಿಕೊಳ್ಳುವುದು, ಆನಂತರದ ಮತ್ತೆ ಮನೆಗೆದ್ದು ಬರುವುದು. ಬರುತ್ತಲೆ ತನ್ನುದ್ದ ಕೆಲಸವು. ಅದಲ್ಲದೆ ಅಳತೆಗೆಟ್ಟ ಬೈಗಳಿಗಂತು ಕೊರತೆಯೇ ಇಲ್ಲ. ಯಾವುದನ್ನಾದರೂ ತಾಳಿಕೊಂಡಿರುವುದೇ ನಿರ್ಭಾಗ್ಯಳ ಸ್ವಭಾವ ಧರ್ಮವು. ಇಂದು ಶುಕ್ರವಾರ, ಮಧ್ಯಾಹ್ನ ಮೂರು ಗಂಟೆಯಾಗಿರಬಹುದು, ಮನೆಗೆಲಸವನ್ನು ಮುಗಿದಿದ್ದಿತು. ರಾಮೂನೂ ಎಲ್ಲಿಂದಲೊ ಬಂದನು. ಕಾರ್ಮೋಡದಲ್ಲಿ ಮಿಂಚು ಮೂಡಿದಂತೆ ನಿರ್ಭಾಗ್ಯೆಗೆ ದುಃಖದಲ್ಲಿಯೆ ಕೊಂಚ ಆನಂದ. ಆಗವಳು ಅಳುತಳುತಲೆ “ರಾಮು! ಮಾಧೂ ಸುಶೀಲೆಯರದೇನಾದರೂ ಓಲೆಬಂದಿರುವುದೇ?” ಎಂದು ಕೇಳಿದಳು “ನಿನ್ನೆಯೇ ಬಂದಿರುವುದು. ಚೆನ್ನಾಗಿದ್ದಾರಂತೆ. ನಿನಗೆ ಕಾಗದ ಬರೆಯುವುದಕ್ಕೆ ಹೇಳಿದ್ದಾರೆ. ಬರೆಯ ಕೊಡುತ್ತೀಯಾ?” ಎಂದು ಕೇಳಿದನು. ಆಕೆಯು ಏನೇನೂ ತನ್ನ ಮನಸ್ಥಿತಿಯು ಬರೆದು ಅಂಚೆಗೆ ಹಾಕೆಂದು ಕೊಟ್ಟುಬಿಟ್ಟಳು. ತಾಯಿಯು ಎಲ್ಲಿದ್ದಳೊ ಏನೋ! ಧಾವಿಸಿ ಬಂದು “ಅದೇನೆ?” ಎಂದು ಕೇಳಿದಳು. “ಏನೂ ಇಲ್ಲ; ಸುಶೀಲೆಯ ಓಲೆಗೆ ಉತ್ತರ ಬರೆದೆ” ಎಂದಳು. ಚೆನ್ನಾಯಿತು. ಏನು ಅವಳು ಸುಶೀಲೆಯೋ ದುಃಶೀಲೆಯೋ! ಅವಳ ಸಂಗತಿಯನ್ನು ಹಿಡಿದರೆ ಖಂಡಿತವಾಗಿಯೇ ನೀನು ಕೆಡುತ್ತೀ. ತಾನೂ ಸದ್ಗುಣಿ, ನಿನಗೂ ಸದ್ಗುಣವನ್ನು ಕಲಿಸುವಳು, ಏನೂ ಚಿಂತೆಯಿಲ್ಲ. ಹಾಲಿನಂತಹ ಕುಲಕ್ಕೆ ಕಲಂಕ ತಂದಿರುವೆ. ಯಾಕಾಗಲೊಲ್ಲದವ್ವಾ ನಾನೇನು ನಿನಗೆ ಹೇಳಲಿಕ್ಕೆ ನಿನ್ನ ತಾಯಿಯೇ?” ಎಂದು ರಾಮೂನ ಕಡೆಗೆ ಹೊರಳಿ “ರಾಮೂ ನೀನಿನ್ನು ನಮ್ಮ ಮನೆಗೆ ಬರಬೇಡ ತಿಳಿಯಿತೆ?” ಎಂದಳು.

ನಿರ್ಭಾಗ್ಯೆಗೆ ದಿಕ್ಕೇ ತೋಚದಂತಾಯಿತು. “ತನ್ನದೇನೋ ನಡೆದೇ ಇದೆ. ತನ್ನ ಸಲುವಾಗಿ ರಾಮೂಗೆಷ್ಟು ತಾಪವು!” ಎಂದು ದಿನಕ್ಕಿಂತಲೂ ಇಮ್ಮಡಿಯಾಗಿ ಅತ್ತಳು. ರಾಮೂ ಧೈರ್ಯದಿಂದಲೇ ‘ಶಾಂತಾ ಅಳಬೇಡ, ಅವರು ಬೇಡವೆಂದರೆ ನಾನೇನು ಬಿಡುವುದಿಲ್ಲ. ಬಿಡುವು ದೊರೆತಾಗೆಲ್ಲ ಬರುತ್ತೇನೆ. ‘ ಎಂದು ಧೈರ್ಯ ಹೇಳಿ ಹೋಗುವ ಮುಂದೆ ವೈಶಾಖ ಪೌರ್ಣಿಮೆಯ ‘ಜಯ ಕರ್ನಾಟಕ’ವನ್ನು ಕೊಟ್ಟನು. ಮರುದಿವಸ ಶನಿವಾರ; ತಾಯಿಯು ಗುಡಿಗೆ ಹೋಗಿದ್ದಳು. ಮನೆಯಲ್ಲಿ ಒಬ್ಬಳೇ ಇದ್ದುದರಿಂದ ಜಯಕರ್ನಾಟಕವನ್ನು ಹಿಡಿದುಕೊಂಡು “ದೇವತಾ ಪ್ರಥಿವಿ” ಎಂಬ ಹಾಡನ್ನು ನೋಡಿ, ಕವಿಯ ಪ್ರತಿಭಾಚಾತುರ್ಯವನ್ನೂ ಅವರ ಭಾವನಾಲಹರಿಯನ್ನೂ ಕಂಡು, ನಗುತೊಮ್ಮೆ ಅಳುತೊಮ್ಮೆ ಹಾಡುತ್ತ ಕುಳಿತಿದ್ದಳು. ತಾಯಿಯು ಗುಡಿಯಿಂದ ಬಂದವಳೆ ಹಸಿದ ಹುಲಿಯಂತೆ ಗದ್ದರಿಸಿದಳು. ಮುನ್ನೋಡಿ ಓದುತ್ತ ಕುಳಿತ ನಿರ್ಭಾಗೈಯು ಬೆಚ್ಚಿಬಿದ್ದಳು. ತಿರುಗಿ ನೋಡಿದಳು. ಆ ರೌದ್ರಾವೇಶ ಆ ವೀರಭದ್ರನ ಅವತಾರವನ್ನು ನೆನೆದರೆ ಈಗಲೂ ಮೈಮೇಲೆ ಮುಳ್ಳೇಳುತ್ತವೆ. ‘ಏನೇ, ಗಂಡುಬೀರಿ, ಮನೆಗೆಲಸಗಳನ್ನು ಬಿಟ್ಟು ಓದುತ್ತ ಕುಳಿತಿರುವೆಯಾ? ಹೆಂಗಸು ಓದಿ ಕೆಟ್ಟಳಂತೆ! ಓದುವುದಾದರೂ ಏನದು? ಅದನ್ನು ಕೊಟ್ಟವರಾರು? ರಾಮೂ ಏನು? ಸೀತೆ ಅರಿಯದ ಹುಡುಗಿ, ಪಾಪ! ಅವಳ ಸಂಸಾರಗೇಡು ಮಾಡಬೇಕೆಂದು ಬಗೆದಿರುವೆಯೇನು? ಗೈಯಾಳಿ!’ ಎಂದು ಥಡಥಡ ಬೈಯತೊಡಗಿದಳು. ನಿರ್ಭಾಗ್ಯೆ ಅಳುತ್ತಲೆ ತಾಲುವಿಕೆಗಿಂತಧಿಕ ತಪವು ಇಲ್ಲ’ ಎಂಬ ಶ್ರೀಪಾದರಾಯರ ಪಲ್ಲವಿಯನ್ನು ಮನದೆದುರು ತಂದುಕೊಡು, ಮತ್ತೆ ಕೆಲಸಕ್ಕೆ ನಡೆದಳು.

ತಾಳುವಿಕೆಗೂ ಮಿತಿಯುಂಟು. ನಿರ್ಭಾಗ್ಯೆಯು ತಾಳುವುದಾದರು ಎಷ್ಟು! ತಾಯಿಯ ಕೋಪ, ಮನದ ತಾಪ, ಹೊರಗೆಲ್ಲಿಯೂ ಹೋಗಕೂಡದೆಂಬ ತಂದೆಯವರ ಕಠಿನವಾದ ಕಟ್ಟು. ಇವೆಲ್ಲವುಗಳಿಂದ ಹೂವಿನಂತಹ ಹೃದಯಕ್ಕೆ ಬರೆಕೊಟ್ಟಂತಾಗಿ ಹೋಯಿತು. ಮಾಧು ಸುಶೀಲೆಯರು ಶಾಂತಿನಿಕೇತನಕ್ಕೆ ಹೋಗಿ ಇಂದಿಗೆ ಎರಡು ವರ್ಷಗಳಾದುವು. ಮರಳಿ ಬರುವ ಸುದ್ಧಿಯೇ ಇಲ್ಲ. ರಾಮೂನ ಜೊತೆಗೂ ಮಾತಾಡಕೂಡದು, ಕೆರೆಯ ಕಟ್ಟೆಗೂ ಹೋಗಕೂಡದು. ಇಂದು ಸಂಕ್ರಾತಿಯ ಹಬ್ಬ ಜನರೆಲ್ಲರೂ ಹಬ್ಬದೂಟವನ್ನುಂಡು ಉಬ್ಬಿನಿಂದ ಎಳ್ಳು ಸಕ್ಕರೆಯನ್ನು ತೆಗೆದುಕೊಂಡು ತಮ್ಮ ಬಂಧು ಬಾಂಧವರಿಗೆ ಕೊಡಬೇಕೆಂದು ಸಂಭ್ರಮದಿಂದ ನಡೆದಿದ್ದರು. ನಿರ್ಭಾಗ್ಯೆಯು ‘ತಾನಾರಿಗೆ ಕೊಡುವುದು’ ಎಂದು ಕೊಂಡಳು. “ಅದೇಕೆ!ನಿನಗಿಲ್ಲವೇ ಹೋಗಿ ಕೊಡಬೇಕವರಿಗೆ” ಎಂದಿತಾ ಮನವು. ಮನಸ್ಸು ಬಯಸುತ್ತಲೆ ಕೈಯಲ್ಲಿಯೇ ತುಸು ಎಳ್ಳುಸಕ್ಕರೆಯನ್ನು ತಕ್ಕೊಂಡು ಹೊರಹೊರಟಳು. ಯಾರು ಏನೆನ್ನುವರೋ ಎಂಬ ಭಯವಂತು ಇದ್ದೇ ಇದ್ದಿತು. ಹಾಗೆಯೇ ಹೋಗಿ ಬಾಗಿಲ ಮುಂದೆ ನಿಂತು “ರಾಮಂಣಾ”ಎಂದು ಕೂಗಿದಳು. ಉತ್ತರವಿಲ್ಲ. ಒಳಗೆ ಹೋಗಿ ನಡುಗುವ ಧ್ವನಿಯಿಂದ “ಸೀತಾ! ರಾಮೂ ಮನೆಯಲ್ಲಿ ಇಲ್ಲವೇನೆ?” ಎಂದು ಕೇಳುವಷ್ಟರಲ್ಲಿಯೇ ಹುಲಿಯನ್ನು ನಾಚಿಸುವ ಗುಡುಗಿನ ಧ್ವನಿಯಿಂದ “ಅದೇತಕ್ಕೇ?ಅವರೇತಕ್ಕೆಬೇಕು? ಸಾಕಾಗಿಲ್ಲವೇನು ಇಷ್ಟು ದಿನದವರೆಗೆ ದುಡ್ಡೆಳೆದುಕೊಂಡದ್ದು! ಮತ್ತೇನು ಬೇಕಾಗಿದೆ ಈ ದಿವಸ? ಸೀರೆಯೆ? ಕುಪ್ಪುಸವೆ? ರೊಕ್ಕವೇ? ಬೇಕಾಗಿರುವುದಾದರೂ ಏನು? ನನಗೆ ಅದು ಬೇಕು. ನನಗೆ ಇದು ಬೇಕು ಎಂದು ಬೇಡಲಿಕ್ಕೆ ನಾಚಿಕೆಯಾದರೂ ಹೇಗೆ ಬರುವುದಿಲ್ಲವೋ? ಆಪ್ತರೇ, ಇಷ್ಟರೇ, ಏನೇನೂ ಅಲ್ಲದವರಿಗೆ ಬೇಡಲಿಕ್ಕೆ ಬಾಯಿಯಾದರೂ ಹೇಗೆ ಏಳುವದೊ ತಿಳಿಯದಾಗಿದೆ. ಹೇಳಿ ಕೇಳಿ ನಿರ್ಭಾಗ್ಯೆ ನೀನು, ನಮ್ಮ ಮನೆಗಿನ್ನು ಬರಬೇಡ! ಬಂದರೆ ನಿಮ್ಮ ತಂದೆತಾಯಿಗಳಿಗೆ ಹೇಳಿ ನಿನ್ನ ಪಾರುಪತ್ಯ ಮಾಡಿಸುತ್ತೇನೆ” ಎಂದು ಏನೇನೊ ಬೊಗಳಿದಳು. ಉರಿಯುವ ನೋವಿಗೆ ಉಪ್ಪನ್ನು ತೊಡೆದಂತಾಯಿತು. ಮಾಡುವುದೇನು? ಕೆರೆಯಕಟ್ಟೆಗೆ ಹೋಗಿ ಕುಳಿತುಕೊಂಡು ಅತ್ತಳು. ದುಃಖದ ವೇಗವು ನಸು ಕಡಿಮೆ ಆಗಲು ಮೇಲಕ್ಕೆ ಮೋರೆ ಎತ್ತಿ ನೋಡುತ್ತಾಳೆ. ತಾಸು ರಾತ್ರಿ ಆಗಿದ್ದಿತು ತಾಯಿ ಏನೆನ್ನುವಳೊ, ಎಂಬ ಲಗು ಬಗೆಯಿಂದ ಮನೆಗೆ ಬಂದಳು. ತಾಯಿ ಹೊರಬಾಗಿಲಲ್ಲಿಯೆ ನಿಂತುಕೊಂಡು ಇವಳನ್ನೆ ಎದುರು ನೋಡುತ್ತಿದ್ದಳು. ಬರುತ್ತಲೆ ‘ಬಂದೆಯಾ? ಇಂದೆಯೇ ಬಂದೆ! ಇದೆ ದೊಡ ಪುಣ್ಯವು. ಬೆಂದ ಮನೆ ತಿರುಗುವುದಾಯಿತೆ? ಎಲ್ಲಿ ರಾಮೂಗೆ ಎಳ್ಳು ಕೊಡದಿದ್ದರೆ ಜಗತ್ತು ಮುಳುಗುತ್ತಿತ್ತೇನು? ನಾಚಿಕೆಗೇಡಿ! ಸುಟ್ಟು ಮೋರೆಯನ್ನು ಮಂದಿಗೆ ತೋರಿಸಲಿಕ್ಕೆ ಮನವಾದರು ಹೇಗೆ ಒಪ್ಪುವುದು! ಅವರು ಬರಲಿ ನಿಲ್ಲು ಹೇಳುತ್ತೇನೆ. ಬಂದೆ ಏತಕ್ಕೆ? ಹೋಗು ಸುಡುಗಾಡಿಗೆ! ತಂಣಗಾಡುವುದು” ಎಂದು ಥಡಥಡ ಆಡಿಬಿಟ್ಟಳು.

ನಿರ್ಭಾಗ್ಯೆಯು “ನಾನಿನ್ನು ಸುಡುಗಾಡಿಗೇ ಹೋಗಬೇಕು” ಎಂದು ತನ್ನಷ್ಟಕ್ಕೆ ತಾನು ಮನದಲ್ಲಿ ಎಂದುಕೊಂಡು ಹೊರಟುಬಿಟ್ಟಳು. “ಎಲ್ಲಿಗೆ ಹೋದಳೊ! ಎಂದು ಹುಡುಕುವರಾದರೂ ಯಾರೂ? ಹೋಗುವುದಾದರೂ ಎಲ್ಲಿಗೆ? ಜೀವವೆ ಬೇಡವೆನಿಸುತ್ತಲಿದೆ, ನನ್ನಿಂದ ಜಗತ್ತಿನಲ್ಲಿ ಆಗಬೇಕಾದದ್ದಾದರೂ ಏನಿದೆ?” ಎಂದು ಧನಿಸುತ್ತ ತನ್ನ ಸರ್ವಸೌಖ್ಯಸ್ಥಾನವಾದ ಕೆರೆಯಕಟ್ಟೆಯ ಕಡೆಗೆ ನಡೆದಳು. ಎಲ್ಲಿಗೂ ಹೋಗದೆ ತಾಯಿ ಗಂಗಮ್ಮನ ಮಡಿಲಲ್ಲಿ ಮಲಗಿಬಿಟ್ಟರಾಯಿತೆಂಬ ಹಿರಿದಾಸೆಯೊಂದು ಅವಳನ್ನು ಅತ್ತ ಕಡೆಗೆ ಕರೆದು ಎಳೆದುಕೊಂಡು ನಡೆಯಿತು. ಮೂರು ತಾಸು ರಾತ್ರಿಯಾಯಿತು. ಜಗವೆಲ್ಲ ನಿಃಶಬ್ದವಾಗಿ ಶಾಂತತೆಯಿಂದ ತುಂಬಿ ತುಳುಕುತ್ತಿದ್ದಿತು. ನೊಂದ ಮನದಿಂದ ನಿಟ್ಟುಸಿರಿಡುತ್ತ ನಿರ್ಭಾಗ್ಯೆಯೊಬ್ಬಳೆ. ಕೆರೆಯ ಮೇಲೆ ರಾಮೂನನ್ನು ಇನ್ನೊಮ್ಮೆ ನೋಡಬೇಕೆಂದು ಕಾಲಕಳೆದಂತೆ, ಆ ಕುತೂಹಲವು ಆ ಆಶೆಯು ಕುಗ್ಗಿತು. ಯಾವುದರ ಮೇಲೆಯೂ ಆಶೆಯು ಇಲ್ಲ. ನನ್ನ ಹೃದಯ ದೇವತೆಗೆ, ತಾಯಿಗೆ ನಮಸ್ಕರಿಸಿ, ಸುತ್ತಲೂ ನೋಡಿದಳು. ರಾಮೂ ಎಲ್ಲಿಂದ ಬಂದನೋ ದೇವರೇ ಬಲ್ಲ. “ಶಾಂತಾ! ಹತ್ತು ಘಂಟೆ ರಾತ್ರಿ ಆಯಿತು ಮನೆಗೆ ಹೋಗುವುದಿಲ್ಲವೆ? ಇಂಥ ರಾತ್ರಿಯಲ್ಲಿ ಒಬ್ಬಳೇ ಒಬ್ಬಳು. ಅದೇನು ಮಾಡುತ್ತಿರುವೆ?” ಎಂದನು. ತಿರುಗಿ ನೋಡಿದಳು. “ರಾಮೂ ಎಲ್ಲಿಂದ ಬಂದೆ? ನಾನು ಇದುವರೆಗೆ ನಿನ್ನ ಕೊನೆಯ ಅಪ್ಪಣೆಯನ್ನು ತೆಗೆದುಕೊಳ್ಳಬೇಕೆಂದು ಹಂಬಲಿಸುತ್ತಿದ್ದೆ. ಸಮಯಕ್ಕೆ ಬಂದೆ. ಚೆನ್ನಾಯಿತ ಎಂದಳು. ಅದೇಕೆ ಶಾಂತಾ ಕಡೆಯ ಅಪ್ಪಣೆಯೇಕೆ? ಮನೆಗೆ ಬರುವುದಿಲ್ಲವೆ?” ಎಂದನು. ನಿರ್ಭಾಗ್ಯೆಗೆ ಕುತ್ತಿಗೆ ಶಿರ ಬಿಗಿದುಬಂದಿತು. ಮಾತೇ ಹೊರಡಲಿಲ್ಲ. ಕಣ್ಣೊರಸುತ್ತಲೆ ಹೇಳಿದಳು. “ಇಲ್ಲ ನಾನಿನ್ನು ಮನೆಗೆ ಬರುವುದಿಲ್ಲ.”

ರಾಮೂ: “ಮತ್ತೆಲ್ಲಿಗೆ ಹೋಗುವೆ?”

ಶಾಂತಾ: “ಎಲ್ಲಿಯೇನು ಮನಬಂದಲ್ಲಿಗೆ?”

ರಾಮೂ: “ನಮ್ಮ ಮನೆಗೆ ಬರುತ್ತೀಯಾ? ಅಲ್ಲಿಯೇ ಇರುವೆಯಂತೆ.” ಅವರ ಮನೆಯೆಂದ ಕೊಡಲೆ ಆಕೆಯ ದುಃಖವು ಇಮ್ಮಡಿಸಿತು.

ಶಾಂತಾ: “ಇಲ್ಲಪ್ಪಾ!ಎಲ್ಲಿಗೂ ಬರುವುದಿಲ್ಲ. ಇಲ್ಲಿರುವ ಗಂಗಮ್ಮ ಕೈಮಾಡಿ ಕರೆಯುತ್ತಿರುವಳು ಅವಳ ಬಳಿಗೆ ಹೋಗುವೆನು. “

ರಾಮೂ:”ಇದೇನು ಶಾಂತಾ! ಹೀಗೇಕೆ ಹುಚ್ಚಿಯಂತೆ ಮಾಡುತ್ತಿ? ಯಾರು ಏನಾದರೂ ಅಂದರೇನು ನಿಮ್ಮ ಮನೆಯಲ್ಲಿ?”

ಶಾಂತಾ: “ಇಲ್ಲ! ಯಾರೂ ಏನೂ ಅಂದಿರುವುದಿಲ್ಲ ನನಗೇ ಜೀವ ಬೇಡವೆನಿಸಿರುವುದು.”

ರಾಮೂ: “ನಮ್ಮ ಮನೆಗಾದರೂ ಬಾ! ಅಲ್ಲಿಯೇ ಇರುವೆಯಂತೆ.” ಶಾಂತೆಗೆ ಅಳುವ ತಡೆಯುವುದು ಕಷ್ಟವಾಯಿತು. ಅಳುತಳುತಲೆ ನುಡಿದಳು.

ಶಾಂತಾ: “ರಾಮೂ ನಾನು ನಿನಗೆ ಏನಾದರೂ ಬೇಡುವೆನೆ? ನಿಜವಾಗಿ ಹೇಳು! ಇಂದು ನಿಮ್ಮ ಮನೆಗೆ ಎಳ್ಳು ಕೊಡಲಿಕ್ಕೆ ಬಂದಾಗ ನೀನು ಮನೆಯಲ್ಲಿರಲಿಲ್ಲ. ಸೀತೆ ಏನೇನೊ ಅಂದಳು. ಸಾಕಪ್ಪಾ ಸಾಲು! ನನಗಿನ್ನು ಜಗತ್ತೇ ಸಾಕು! ನಾನು ಇದುವರೆಗೂ ಜಗತ್ತೆಂದರೆ ಒಂದು ಆಕಳು, ಎಂದು ತಿಳಿದಿದ್ದೆನು. ಆದರೆ ಇಂದಿನ ಸಂಗತಿಯನ್ನೆಲ್ಲ ನೆನೆದುಕೊಂಡರೆ, ಅದು ಆಕಳಲ್ಲ ಆಕಳ ಸೋಗನ್ನು ಹಾಕಿಕೊಂಡ ಹುಲಿ; ಎಂದು ಸ್ಪಷ್ಟವಾಗಿ ಕಂಡುಬರುತ್ತದೆ. ಹೋಗಿಬರುತ್ತೇನೆ. ಮಾಧವ ಸುಶೀಲೆಯರಿಗೆ ನಾನು ಕೇಳಿದೆನೆಂದು ಹೇಳು. ನಿಮ್ಮ ಮೂವರ ಉಪಕಾರವನ್ನು ಮುಂದಿನ ಜನ್ಮಕ್ಕೆ ತೀರಿಸುವೆನು.”

ರಾಮೂ ದಂಗು ಬಡೆದು ನಿಂತ. ಮೈಮೇಲೆ ಸ್ಮೃತಿಯೆ ಇಲ್ಲ. ಈ ವೇಳೆಯನ್ನು ಸಾಧಿಸಿ ನಿರ್ಭಾಗ್ಯಳು ಕೆರೆಯಲ್ಲಿ ಧುಮುಕಿದಳು. ಗಂಗಮ್ಮನು ಮಾತ್ರ ಅವಳನ್ನು ಪ್ರೇಮಾದರದಿಂದ ಬರಮಾಡಿಕೊಂಡನು. ನಿಶ್ಚಬ್ಧವಾದ ರಾತ್ರಿಯಲ್ಲಿ “ಧಡಂ” ಎಂಬ ಶಬ್ದವನ್ನು ಕೇಳಿ ರಾಮೂನು ಎಚ್ಚತ್ತು ನೋಡಲು ಅಲ್ಲೇನಿದೆ! ಧಡಂ ಎಂಬ ಪ್ರತಿಧ್ವನಿಯು. ಅದರೊಡನೆ “ಜಗತ್ತೆಂದರೆ ಆಕಳ ಸೋಗನ್ನು ಹಾಕಿದ ಹುಲಿಯೇ” ಎಂಬ ರಾಮೂನ ಖೇದದ ಉದ್ಗಾರವು ಬೆರೆತುಬಿಟ್ಟಿತು.


* ಉತ್ತರ ಕರ್ನಾಟಕದ ಹೆಣ್ಣುಮಗಳೊಬ್ಬಾಕೆ ಬರೆದುದು. ಪ್ರೋತ್ಸಾಹಕ್ಕಾಗಿ ಇದ್ದಂತೆಯೆ ಮುದ್ರಿಸಿಬಿಟ್ಟಿದೆ. ಸಂಪಾದಕರು

– ಪದ್ಮಾವತಿ, ಬಾಗಲಕೋಟೆ,
ಜಯಕರ್ನಾಟಕ, ಸಂ. ೧೦, ಸಂ. ೨, ೧೯೩೨